ನ್ಯಾ.ಕೃಷ್ಣ ಅಯ್ಯರ್ ನಿಧನ: ಅವರಿಂದ ಕಲಿಯಬೇಕಾದ ಪಾಠಗಳು

– ಶಿವರಾಮ್ ಕೆಳಗೋಟೆ

ಇಂದಿರಾ ಗಾಂಧಿ ಸಂಸತ್ತಿಗೆ ಆಯ್ಕೆಯಾದುದನ್ನು ಅಲಹಾಬಾದ್ ನ್ಯಾಯಾಲಯ ಅನೂರ್ಜಿತಗೊಳಿಸಿದ ನಂತರ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ನಿರೀಕ್ಷೆಯಂತೆ ಇಂದಿರಾ ಗಾಂಧಿ ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದರು. ಅವರ ಅರ್ಜಿ ರಜಾ ಕಾಲದ ನ್ಯಾಯಾಧೀಶರಾದ ವಿ.ಆರ್.ಕೃಷ್ಣ ಅಯ್ಯರ್ ಅವರ ಮುಂದೆ ವಿಚಾರಣೆಗೆ ಬರುವುದಿತ್ತು. ಅದನ್ನು ಅರಿತ ಅಂದಿನ ಕಾನೂನು ಮಂತ್ರಿ ಹೆಚ್.ಆರ್.ಗೋಖಲೆ ಅಯ್ಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಾನು ನಿಮ್ಮನ್ನು ಭೇಟಿ ಮಾಡಲು ಬರಬಹುದೇ ಎಂದು ಕೇಳುತ್ತಾರೆ. ಅವರ ಭೇಟಿಯ ಉದ್ದೇಶದ ಬಗ್ಗೆ ಗುಮಾನಿ ಇದ್ದ ಅಯ್ಯರ್ ಅವರು “ನೀವು ಅಲಹಾಬಾದ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿದ್ದರೆ ನೇರವಾಗಿ ಸುಪ್ರಿಂ ಕೋರ್ಟ್ ಗೆ ಹೋಗಿ. ನನ್ನ ಮನೆಗೆ ಬರುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.

ನ್ಯಾಯಾಂಗ ಅಕಾಡೆಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಗೋಖಲೆಯವರೊಂದಿಗೆ ಅಯ್ಯರ್ ಅವರಿಗೆ ಆತ್ಮೀಯತೆ ಇತ್ತು. krishna-iyerಅದೇ ಆತ್ಮೀಯತೆ ಹಿನ್ನೆಲೆಯಲ್ಲಿ ಮನೆಯಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದಿರಬಹುದು. ಆದರೆ ಅಯ್ಯರ್ ಅಂತಹ ಪ್ರಯತ್ನಕ್ಕೆ ಸೊಪ್ಪು ಹಾಕಲಿಲ್ಲ. ನಂತರದ ಎರಡು ದಿನಗಳಲ್ಲಿ ಅರ್ಜಿ ವಿಚಾರಣೆಗೆ ಬಂತು. ಅಯ್ಯರ್ ಅವರು ನೀಡಿದ ತೀರ್ಪು ಇತಿಹಾಸ ಸೃಷ್ಟಿಸಿತು. ಅದೇ ತೀರ್ಪಿನಿಂದ ಕ್ರುದ್ಧರಾದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವ ನಿರ್ಧಾರ ಕೈಗೊಂಡರು ಎಂದು ವಿಶ್ಲೇಷಿಸುವವರಿದ್ದಾರೆ.

ನೂರು ವರ್ಷಗಳ ಕಾಲ ಬದುಕಿ ಅಯ್ಯರ್ ನಿನ್ನೆ ಮೌನವಾಗಿದ್ದಾರೆ. ನ್ಯಾಯಾಧೀಶರಾಗಿ ನಿವೃತ್ತಿಯಾದ ನಂತರವೂ ಸಮಕಾಲೀನ ಆಗುಹೋಗುಗಳಿಗೆ, ಅದರಲ್ಲೂ ಮುಖ್ಯವಾಗಿ ನ್ಯಾಯಾಲಯ ವ್ಯವಸ್ಥೆಯ ಬಗ್ಗೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬಂದವರು. ಸಾಮಾನ್ಯ ಜನತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಳ್ಳುವಂತಹ ಘಟನೆಗಳು ಆಗಾಗ ನಡೆಯುತ್ತಿರುವ ಈ ಹೊತ್ತಿನಲ್ಲಿ ಅಯ್ಯರ್ ಇನ್ನಿಲ್ಲ. ಬಲಾಢ್ಯರಿಂದ ಅನ್ಯಾಯಕ್ಕೆ ಒಳಗಾದ ಮಹಿಳೆ ಕೊಟ್ಟ ದೂರನ್ನು ‘ಮುಚ್ಚಿದ ಲಕೋಟೆಯಲ್ಲಿಡಿ’ ಎಂದು ಆದೇಶಿಸುವ, ಬೆಂಗಳೂರಿನಲ್ಲಿ ದುಬಾರಿ ಬೆಲೆಯ ನಿವೇಶನದ ಆಸೆಗೆ ನ್ಯಾಯ ಬಲಿಕೊಡುವ ನ್ಯಾಯಾಧೀಶರುಗಳು, ಒಮ್ಮೆ ಅಯ್ಯರ್ ಜೀವನಗಾಥೆಯನ್ನು ಓದಬೇಕು. ಆಗಲಾದರೂ ಅವರಿಗೆ ತಾವು ಕುಳಿತಿರುವ ಸ್ಥಾನದ ಮಹತ್ವ ಅರ್ಥವಾದೀತು!

ಕೃಷ್ಣ ಅಯ್ಯರ್ ತಂದೆ ವಕೀಲರು. ಇವರೂ ವಕೀಲಿ ವೃತ್ತಿ ಆರಂಭಿಸಿದರು. ವೃತ್ತಿಯ ಆರಂಭದ ದಿನಗಳಲ್ಲಿಯೇ ಕೂಲಿ ಕಾರ್ಮಿಕರ ಕೇಸುಗಳ ವಕೀಲರಾಗಿ ಜನಪ್ರಿಯರಾದರು. ಬಡವರ ಬಗ್ಗೆ ಕಾಳಜಿ, ಶೋಷಿತರಿಗೆ ನ್ಯಾಯ ಕೊಡಿಸುವ ವೃತ್ತಿ ಪರತೆ ಅವರಿಗೆ ಜನಮನ್ನಣೆ ತಂದು ಕೊಟ್ಟಿತು. ಅದೇ ಕಾರಣಕ್ಕೆ ಅವರು ಜನಪ್ರತಿನಿಧಿಯಾಗಿ ಮದ್ರಾಸ್ ಪ್ರಾಂತ್ಯಕ್ಕೆ ಆಯ್ಕೆಯಾದರು. ನಂತರ ಇ.ಎಂ.ಎಸ್. ನಂಬೂದರಿಪಾದ್ ನೇತೃತ್ವದ ಕಮುನಿಸ್ಟ್ ಪಕ್ಷದ ಸರಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಗಳಾದ ಗೃಹ, ನೀರಾವರಿ ಹಾಗೂ ವಿದ್ಯುತ್ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಂಪುಟದಲ್ಲಿ ಸಚಿವರಾಗಿ ಭೂಸುಧಾರಣೆ ಕಾಯಿದೆ ತಂದು ಅದನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಇವರ ಶ್ರಮ ದೊಡ್ಡದು. ನಂತರ ನ್ಯಾಯಾಧೀಶರಾದರು. ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಸ್ಮರಣೀಯ ಕೆಲಸ ಮಾಡಿದರು.

ಕಾನೂನು ವಿದ್ಯಾರ್ಥಿಗಳು ತಮ್ಮ ವ್ಯಾಸಾಂಗದ ಕಾಲದಲ್ಲಿ, ಪ್ರಾಕ್ಟೀಸ್ ಕಾಲದಲ್ಲಿ ಆಗಾಗ ನೆನಪಿಸಿಕೊಳ್ಳುವ ಕೆಲವೇ ಕೆಲವು ಪ್ರಮುಖ ನ್ಯಾಯಾಧೀಶರುಗಳಲ್ಲಿ ಅವರು ಪ್ರಮುಖರು. ಅವರ ಜೀವನ ಸಾವಿರಾರು ಯುವ ವಕೀಲರಿಗೆ ಸ್ಪೂರ್ತಿ. ಅವರ ಬದುಕು ಕಲಿಸುವ ಪಾಠದಿಂದ ನೋವುಂಡ ಸಮುದಾಯಗಳಿಗೆ ವಕೀಲ ಸಮುದಾಯ ನ್ಯಾಯ ಕೊಡಿಸುವ ಕೆಲಸ ಮಾಡಿದರೆ ಅವರ ಜೀವನಾವಧಿಯ ಉದ್ದೇಶ ಸಾರ್ಥಕವಾದೀತು.

One thought on “ನ್ಯಾ.ಕೃಷ್ಣ ಅಯ್ಯರ್ ನಿಧನ: ಅವರಿಂದ ಕಲಿಯಬೇಕಾದ ಪಾಠಗಳು

  1. Nagshetty Shetkar

    ಜಸ್ಟೀಸ್ ಅಯ್ಯರ್ ಅವರ ಬಗ್ಗೆ ಇಂದು ವಿಜಯವಾಣಿಯಲ್ಲಿ ಕನ್ನಡ ಹಿರಿಯ ಪ್ರಗತಿಪರ ವಿಮರ್ಶಕ ವಿಜೈಶಂಕರ್ ಅವರು ಉತ್ತಮವಾದ ಅಂಕಣಲೇಖನ ಬರೆದಿದ್ದಾರೆ. ಅದನ್ನೂ ನೋಡಿ.

    Reply

Leave a Reply

Your email address will not be published. Required fields are marked *