Daily Archives: December 9, 2014

ಲೈಂಗಿಕ ಶಿಕ್ಷಣ ಎಂಬ ವ್ಯಂಗ್ಯ ನಾಟಕ

ಭಾರತೀ ದೇವಿ. ಪಿ

ಒಂದೆಡೆ ಅತ್ಯಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಯೇ ಎಲ್ಲ ಕಡೆಗಳಲ್ಲೂ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಕೊಡುವುದರ ಬಗ್ಗೆ ಮಾತಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಬಿರುಸಿನಿಂದ ನಡೆಯುತ್ತಿವೆ. ಅನೇಕ ಸಂಘ ಸಂಸ್ಥೆಗಳು, ಇಲಾಖೆಗಳು ಈ ಹೊಣೆಯನ್ನು ಮುತುವರ್ಜಿಯಿಂದ ವಹಿಸಿಕೊಂಡು ಶಾಲಾ ಕಾಲೇಜುಗಳನ್ನು ಅರಸಿಕೊಂಡು ತಿರುಗಾಡುತ್ತಿವೆ. ಆದರೆ ಈ ಬಗೆಯ ಕಾರ್ಯಕ್ರಮಗಳ ಪೈಕಿ ಬಹುಪಾಲು ನಡೆಯುತ್ತಿರುವ ರೀತಿ ನೋಡಿದರೆ ನಗಬೇಕೋ ಅಳಬೇಕೋ ತಿಳಿಯದಂತಾಗಿದೆ.

ಇವು ಹೆಣ್ಣುಮಕ್ಕಳು ಯಾವ ಬಗೆಯ ಬಟ್ಟೆ ಹಾಕಿಕೊಳ್ಳಬೇಕು, sex-education-1ಎದುರಿಗೆ ಯಾರಾದರೂ ಬಂದಾಗ ಎಷ್ಟು ಸೆಂಟಿಮೀಟರ್ ನಗಬಹುದು, ಸಭ್ಯವರ್ತನೆ ಇವುಗಳ ಬಗ್ಗೆ ಉಪದೇಶ ನೀಡುವ ಅಧಿಕಾರಯುತ ಧ್ವನಿಯಲ್ಲಿ ಆರಂಭವಾಗುತ್ತವೆ. ಮೊದಲೇ ‘ಕಡುಪಾಪಂಗೈದು ಪೆಣ್ಣಾಗಿ ಸಂಭವಿಸಿ ಒಡಲಂ ಪೊರೆವುದೆದೆನ್ನೊಳಪರಾಧಮುಂಟು’ ಎಂದು ಕುಗ್ಗಿರುವ ಹಳ್ಳಿಯ ಹೆಣ್ಣು ಮಕ್ಕಳು ಇನ್ನಷ್ಟು ಮುದುರಿಕೊಂಡು ಕೂರುತ್ತಾರೆ. ನಿಮ್ಮ ಅಣ್ಣ, ತಮ್ಮ, ತಂದೆ, ಮಾವಂದಿರೇ ನಿಮ್ಮ ಮೇಲೆ ಅತ್ಯಾಚಾರವೆಸಗಬಹುದು ಹುಷಾರ್ ಎಂಬ ಬೆದರಿಕೆಯನ್ನೂ ನೀಡಲಾಗುತ್ತದೆ. ಮೊದಲೇ ಒಂದು ಪೆನ್ನು ತರಲೂ ಒಬ್ಬರೇ ಅಂಗಡಿಗೆ ಹೋಗುವ ಧೈರ್ಯ ತೋರದ ಈ ಹುಡುಗಿಯರು ಒಬ್ಬರೇ ಹೋದರೆ ಒಂದು ಕಷ್ಟ, ಜೊತೆಗೆ ಯಾರನ್ನಾದರೂ ಕರೆದುಕೊಂಡು ಹೋದರೆ ಇನ್ನೊಂದು ಕಷ್ಟ ಎಂದು ಗೊಂದಲಕ್ಕೊಳಗಾಗುತ್ತಾರೆ. ಒಬ್ಬೊಬ್ಬರೇ ಓಡಾಡುವಾಗ ಜಾಗ್ರತೆ ಎಂದಾಗ ಹಾಗಾದರೆ ಏನಪ್ಪಾ ಮಾಡುವುದು ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ನಮ್ಮ ವಿದ್ಯಾರ್ಥಿನಿಯರ ಮುಗ್ಧ ಮುಖವನ್ನು ಬಾಡಿಸಿರುವುದು ನಿತ್ಯ ಗಮನಕ್ಕೆ ಬರುತ್ತದೆ.

ಈ ಇಡೀ ಕಾರ್ಯಕ್ರಮ ನಡೆಯುತ್ತಿರುವಾಗ ಹುಡುಗಿಯರ ಪಕ್ಕದಲ್ಲೇ ಕುಳಿತ ಗಂಡು ಮಕ್ಕಳಿಗೆ ಇನ್ನೊಂದು ಬಗೆಯ ಮುಜುಗರ. ಅವರನ್ನು ಅಪರಾಧಿಗಳೆಂಬಂತೆ ಕಟಕಟೆಯಲ್ಲಿ ನಿಲ್ಲಿಸಿ ಮಾತಾಡುವ ರೀತಿಯಿಂದ ಅವರ ಸೂಕ್ಷ್ಮ ಮನಸ್ಸೂ ನೋಯುತ್ತದೆ. ನಾಳೆ ಬೆಳಗಾದೊಡನೆ ಈ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗಲು ನಿಂತಿರುವ ಬಲಿಪಶುಗಳೆಂದೂ ಈ ಗಂಡು ಮಕ್ಕಳು ಅವರ ಮೇಲೆ ಹಾರಲು ಸಿದ್ಧರಾಗಿರುವ ಮೃಗಗಳೆಂಬ ರೀತಿಯಲ್ಲಿ ಮಾತನಾಡುವ ಈ ಬಗೆಯ ಅರಿವು ಕಾರ್ಯಕ್ರಮ ಇದುವರೆಗೂ ನಮ್ಮಲ್ಲಿ ಬೆಳೆದುಬಂದ ಸೆಕ್ಸಿಸ್ಟ್ ಅಪ್ರೋಚ್ ಅನ್ನೇ ಗಟ್ಟಿಗೊಳಿಸುವಂತಿರುವುದು ವಿಪರ್ಯಾಸ.

ಇಡೀ ಕಾರ್ಯಕ್ರಮವೇ ಅತ್ಯಾಚಾರಕ್ಕೆ ಮೂಲ rape-illustrationಕಾರಣ ಹೆಣ್ಣುಮಕ್ಕಳು ಗಂಡಸರೆದುರಿಗೆ ಬಿಂಕದಿಂದ ಕುಣಿಯಲು ಹೋಗಿ ಅವರಿಗೆ ನೀಡುವ ಪ್ರಚೋದನೆ ಎಂಬಲ್ಲಿಗೆ ಬಂದು ನಿಲ್ಲುತ್ತದೆ.

ದೆಹಲಿಯಲ್ಲಿ ಪಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ಬಂದ ಪ್ರತಿಕ್ರಿಯೆಗಳನ್ನು ಗಮನಿಸಬೇಕು. ಅನೇಕ ಜನ ರಾತ್ರಿ ಅಷ್ಟು ಹೊತ್ತಿಗೆ ಅವಳು ತಿರುಗಾಡುವ ಅಗತ್ಯವೇನಿತ್ತು? ಎನ್ನುವ ಮೂಲಕ ಹೊತ್ತಾದ ಮೇಲೆ ಬೇಕಾದಂತೆ ತಿರುಗಾಡುವ ಮಹಿಳೆ ಅತ್ಯಾಚಾರಕ್ಕೊಳಗಾಗುವುದು ತೀರಾ ಸಹಜ, ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅದು ಎನ್ನುವ ಧ್ವನಿಯಲ್ಲಿ ಮಾತಾಡುತ್ತಿದ್ದರು. ಇನ್ನೊಂದು ಸಂಘಟನೆಯ ಮುಖ್ಯಸ್ಥರು ಮಹಿಳೆಯರು ಹೊರಗೆ ದುಡಿಯಲು ಹೋಗದೇ ಗೃಹಕೃತ್ಯದಲ್ಲಿ ತೊಡಗುವುದೇ ಭಾರತೀಯ ಸಂಸ್ಕೃತಿ ಶೋಭೆ ಎಂದರು.

ಇವರೆಲ್ಲ ಹೀಗೆ ಹೇಳುವುದರ ಮೂಲಕ ಸಾರ್ವಜನಿಕ ಸ್ಪೇಸ್ ಗಳಿಗೆ ಮಹಿಳೆಯರು ಬರದಂತೆ ಸೂಕ್ಷ್ಮ ನಿರ್ಬಂಧ ಹೇರುತ್ತಿದ್ದಾರೆ ಎಂಬುದನ್ನು ಮನಗಾಣಬೇಕು. ಒಂದು ಹೋಟೆಲ್, ಕಾಫಿ ಶಾಪ್, ಸಿನೆಮಾ ಥಿಯೇಟರ್, ಹರಟೆ ಹೊಡೆಯುವ ಜಾಗಗಳು , ದುಡಿಯುವ ತಾಣಗಳು ಮಹಿಳೆ ತನ್ನ ಮೇಲೆ ಆಪತ್ತನ್ನು ಎಳೆದುಕೊಳ್ಳುವ ಜಾಗಗಳು ಎಂದು ಬಿಂಬಿತವಾದಾಗ ಮನೆಯ ಗೋಡೆಗಳ ಆವರಣವೇ ಆಕೆಗೆ ಸುರಕ್ಷಿತ ಎಂಬ ಪರೋಕ್ಷ ಅಭಿಪ್ರಾಯ ಇಲ್ಲಿ ವ್ಯಕ್ತವಾಗುತ್ತದೆ. ಆದರೆ ಮನೆಯೊಳಗಣ ದೌರ್ಜನ್ಯಕ್ಕೆ ಮದ್ದು ಏನು ಎಂಬ ಪ್ರಶ್ನೆಗೆ ಇವರು ಮೌನ ತಾಳುತ್ತಾರೆ. ಅದೇ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಬರುವವರು ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಗೆ ವಿಚಲಿತರಾಗದಂತೆ ಧೈರ್ಯ ತುಂಬುವ ಬದಲು ಬದುಕಿನ ಪ್ರತಿಕ್ಷಣವೂ ಬೆದರುವಂತೆ ಮಾಡುತ್ತಾರೆ.

ಇದರ ಇನ್ನೊಂದು ಆಯಾಮ ಏನೆಂದರೆ ಹೆಣ್ಣುಮಕ್ಕಳಿಗೆ ಕರಾಟೆ, ಅತ್ಯಾಚಾರಿಯನ್ನು ಹಿಮ್ಮೆಟ್ಟಿಸುವುದು ಹೇಗೆ ಎಂದು ತರಬೇತಿ ನೀಡುವುದು. ಆತ್ಮರಕ್ಷಣೆಗಾಗಿ ಇವುಗಳನ್ನು ಕಲಿಯುವುದು ಒಳ್ಳೆಯದೇ. ಆದರೆ ಈ ಅಗ್ರೆಸಿವ್ ಅಪ್ರೋಚ್ ಮೂಲ ಸಮಸ್ಯೆಗಳನ್ನು ಅಡ್ರೆಸ್ ಮಾಡುವುದೇ ಇಲ್ಲ. ಹೊಡೆಯಿರಿ, ಬಡಿಯಿರಿ ಎನ್ನುವುದು ಆರಂಭದಲ್ಲಿ ಆತ್ಮರಕ್ಷಣೆಗೆ ಸರಿ, ಆದರೆ ಅದು ಮೇರೆ ಮೀರಿ ಸ್ವಹಿತಸಾಧನೆಗೆ ಬಳಕೆಯಾಗುವುದನ್ನೂ ತಡೆಯಲಾಗದು. ಇತ್ತೀಚೆಗೆ ರೊಹ್ಟಾಕ್ ಸೋದರಿಯರು ಹುಡುಗರಿಗೆ ಚಚ್ಚಿದ ಪ್ರಕರಣ ಇದಕ್ಕೆ ಹಿಡಿದ ಕನ್ನಡಿ. ಇನ್ನೊಂದು ದೃಷ್ಟಿಯಲ್ಲಿ ನೋಡಿದಾಗ ಇಲ್ಲೂ ಹೇಳಲಾಗುವ ವಿಚಾರ ಎಂದರೆ, ಅತ್ಯಾಚಾರಕ್ಕೆ ಒಳಗಾಗುವ ಪ್ರಸಂಗ ಸಹಜ, ನೀವು ನಿಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಕಲಿಯಬೇಕು ಎನ್ನುವುದಷ್ಟೆ.

ಜೊತೆಗೆ ಇವರು ‘ಅತ್ಯಾಚಾರಕ್ಕೆ ಒಳಗಾದಿರೆಂದರೆ ನಿಮ್ಮ ಬದುಕೇ ಹಾಳಾದಂತೆ, ಇದರಿಂದ ನೀವು ಜೀವನವಿಡೀ ಕಣ್ಣೀರು ಹಾಕುತ್ತಾ ಇರಬೇಕಾಗುತ್ತದೆ. sex-education-3ಇಂಥದ್ದನ್ನು ದೂರವಿರಿಸುವುದು ನಿಮ್ಮ ಕೈಯಲ್ಲಿದೆ’ ಎನ್ನುವ ಭರತವಾಕ್ಯದೊಂದಿಗೆ ಕಾರ್ಯಕ್ರಮ ಮುಗಿಸುತ್ತಾರೆ.

ನಿಜವಾಗಿ ನಡೆಯಬೇಕಾಗಿರುವುದು ‘ಯಾರೋ ಒಬ್ಬ ಅವನ ದೌರ್ಬಲ್ಯದಿಂದ ಅತ್ಯಾಚಾರವೆಸಗಿದರೆ ಅದಕ್ಕಾಗಿ ನೀವು ಕೊರಗುವ ಅಗತ್ಯವಿಲ್ಲ, ಅಲ್ಲಿಗೇ ನಿಮ್ಮ ಬದುಕು ಮುಗಿಯುವುದಿಲ್ಲ’ ಎಂಬ ಧೈರ್ಯ ತುಂಬುವ ಕೆಲಸ. ಅತ್ಯಾಚಾರ ಒಂದು ದೌರ್ಜನ್ಯದ ಪ್ರಕರಣ. ಮಾನಹಾನಿಯಾಗುವುದು ಅಥವಾ ಆಗಬೇಕಿರುವುದು ದೌರ್ಜನ್ಯ ನಡೆಸುವವರದ್ದು, ದೌರ್ಜನ್ಯಕ್ಕೆ ಒಳಗಾಗುವರದ್ದಲ್ಲ. ನಮ್ಮ ವ್ಯವಸ್ಥೆ ಅತ್ಯಾಚಾರಕ್ಕೆ ಒಳಗಾದವರನ್ನೇ ಕಳಂಕಿತರೆಂಬಂತೆ ಚಿತ್ರಿಸಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಕನ್ನಡದ ಅನೇಕ ಚಿತ್ರಗಳಲ್ಲಿ ನೀವು ನೋಡಿರಬಹುದು, ನಡುಬೀದಿಯಲ್ಲಿ ಬಲವಂತವಾಗಿ ಹುಡುಗಿಯೊಬ್ಬಳಿಗೆ ವಿಲನ್ ಒಬ್ಬ ಮುತ್ತು ಕೊಟ್ಟ ನಂತರದ ದೃಶ್ಯದಲ್ಲಿ ಆ ಹುಡುಗಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಆಕೆ ತನಗೇನೋ ಆಗಿದೆ ಎಂದು ಕೊರಗುವುದನ್ನು ಬಿಟ್ಟು ದೌರ್ಜನ್ಯ ಎಸಗಿದ ವ್ಯಕ್ತಿಗೆ ಶಿಕ್ಷೆಯಾಗುವಂತೆ ಧೈರ್ಯದಿಂದ ದೂರು ನೀಡಬೇಕು. ನಮ್ಮ ಸಮಾಜ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ನೋಡುವ ದೃಷ್ಟಿಕೋನವೇ ಬದಲಾಗಬೇಕು.

ನಮ್ಮ ಸಾರ್ವಜನಿಕ ಸ್ಥಳಗಳಿಗೆ ಮಹಿಳೆಯರಿಗೆ ನಿರ್ಬಂಧ ಹೇರಿ ಅತ್ಯಾಚಾರ ತಡೆಗಟ್ಟುವ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ರಕ್ಷಣೆ ದೊರೆಯುವಂತೆ ಮಾಡಬೇಕಾಗಿದೆ. sex-education-2ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ದೇಹದ ಬದಲಾವಣೆಗಳ ಬಗೆಗೆ ಸರಿಯಾಗಿ ತಿಳಿಯುವ ಅವಕಾಶ ಇಲ್ಲದ ಮಕ್ಕಳು ಮೊಬೈಲ್, ಇಂಟರ್ ನೆಟ್ ಗಳಿಂದ ವಿಕೃತದಾರಿಯಲ್ಲಿ ಅದನ್ನು ಅರಿಯುವ ಮೊದಲು ಅವರೊಂದಿಗೆ ಹಿರಿಯರು ಮುಕ್ತವಾಗಿ ಮಾತಾಡಬೇಕಿದೆ. ಗಂಡು ಹೆಣ್ಣಿನ ಸಹಜ ಸಂಬಂಧದ ಬಗ್ಗೆ ಸಮಾಜದಲ್ಲಿ ಆರೋಗ್ಯಕರ ನಿಲುವು ಮೂಡಿಸಬೇಕಾಗಿದೆ.

ಹೆಣ್ಣು ಕೇವಲ ದೇಹ ಅಲ್ಲ, ಅವಳೊಬ್ಬ ವ್ಯಕ್ತಿ ಎನ್ನುವ ಪರಿಕಲ್ಪನೆ ನಮ್ಮ ಸಂಸ್ಕೃತಿಯ ಭಾಗ ಆಗಿಲ್ಲ ಎಂಬುದೇ ಸಮಸ್ಯೆಯ ಮೂಲ. ಹೆಣ್ಣನ್ನು ಎರಡನೆ ದರ್ಜೆ ಪ್ರಜೆಯಾಗಿ ನೋಡುವ ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತಂದರೆ ಆಗುವ ಅಪಾಯಗಳ ದೃಷ್ಟಾಂತ ನಮ್ಮ ಮುಂದಿದೆ. ಹೀಗಾಗಿ ಸಂಸ್ಕೃತಿ ರಕ್ಷಕರು ಮತ್ತು ಲೈಂಗಿಕ ಶಿಕ್ಷಣ ನೀಡಲು ಹೊರಟ ಸ್ವಘೋಷಿತ ಪರಿಣತರು ಒಂದು ಕ್ಷಣ ಯೋಚಿಸಿ ಮುಂದುವರಿಯದಿದ್ದರೆ ಯಾವ ಮನೋಭಾವ ಇಂದು ಹುಡುಗರನ್ನು ಅತ್ಯಾಚಾರಿಗಳನ್ನಾಗಿಸುತ್ತಿದೆಯೋ ಅದೇ ಮನಸ್ಥಿತಿಯನ್ನು ಪೋಷಿಸುವ ಕೆಲಸವನ್ನೇ ಮಾಡಿದಂತಾಗುತ್ತದೆ.

 

“ಜನ ನುಡಿ – 2014” – ಮಂಗಳೂರಿನಲ್ಲಿ ಇದೇ ಶನಿವಾರ – ಭಾನುವಾರ…

ಸ್ನೇಹಿತರೇ,

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ “ಜನ ನುಡಿ” ಎಂಬ ಕಾರ್ಯಕ್ರಮ ನಡೆದಿದ್ದು, ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಅದರ ಅಗತ್ಯದ ಬಗ್ಗೆ ತಮಗೆಲ್ಲ ತಿಳಿದಿದೆ ಎಂದು ಭಾವಿಸುತ್ತೇನೆ. (ಇಲ್ಲವಾದಲ್ಲಿ ನೀವು “ಜನ ನುಡಿ” ಪದವನ್ನು ನಮ್ಮ ಸರ್ಚ್ ಬಾಕ್ಸ್‌ನಲ್ಲಿ ಹಾಕಿ ಹುಡುಕಿದರೆ ಸಿಗುತ್ತದೆ. ಕಳೆದ ಬಾರಿಯ ಜನ ನುಡಿಯ ಕಾರ್ಯಕ್ರಮದ ಆಯೋಜನೆಯ ಹಿನ್ನೆಲೆಯಲ್ಲಿ ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.)

ಈಗ ಜನ ನುಡಿಯ ಎರಡನೇ ವರ್ಷದ ಕಾರ್ಯಕ್ರಮವನ್ನು ಇದೇ ಶನಿವಾರ ಮತ್ತು ಭಾನುವಾರ (ಡಿಸೆಂಬರ್ 13-14, 2014) ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ಕಾರ್ಯಕ್ರಮದ ಪೂರ್ಣ ವಿವರಗಳ ಆಹ್ವಾನ ಪತ್ರವನ್ನು ಕೆಳಗೆ ಲಗತ್ತಿಸಲಾಗಿದೆ.

ನಮಸ್ಕಾರ,
ರವಿ,
ವರ್ತಮಾನ.ಕಾಮ್

jananudi-2014-1
jananudi-2014-2
jananudi-2014-3
jananudi-2014-4