ಜನನುಡಿಯಲ್ಲಿ ದಿನೇಶ್ ಅಮಿನ್ ಮಟ್ಟು ಮತ್ತು ಡಿ.ಉಮಾಪತಿ

ಮಂಗಳೂರು – 14-12-14:

ಬಹುಸಂಖ್ಯಾತ ಹಿಂದೂಗಳ ಕೋಮುವಾದ ಹಾಗೂ ಅಲ್ಪಸಂಖ್ಯಾತರ ಕೋಮುವಾದಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಭಾನುವಾರ ಅಭಿಪ್ರಾಯಪಟ್ಟರು. ಅವರು ಮಂಗಳೂರಿನಲ್ಲಿ ನಡೆದ ಜನನುಡಿ ಸಮಾವೇಶದಲ್ಲಿ ಮಾತನಾಡಿದರು.

ಹಿಂದೂಗಳ ಕೋಮುವಾದ ತಾವು ಬಹುಸಂಖ್ಯಾತರು ಎಂಬ ಅಹಂಕಾರದಿಂದ ಹುಟ್ಟಿದ್ದು. ಅದರ ದುರುದ್ದೇಶ ಅಲ್ಟಸಂಖ್ಯಾತ ಸಮುದಾಗಳ ಮೇಲೆ ದಾಳಿ ಮಾಡಿ ಅವರನ್ನು ಮಟ್ಟಹಾಕುವುದು. ಆದರೆ ಅಲ್ಪಸಂಖ್ಯಾತರ ಕೋಮುವಾದ ಅಭದ್ರತೆ, ಆತಂಕ ಹಾಗೂ ಅಸಹಾಯಕತೆಗಳಿಂದ ಹುಟ್ಟಿದ್ದು. ತಮ್ಮ ಭದ್ರತೆಗಾಗಿ ಅವರು ಸಂಘಟಿತರಾಗುತ್ತಾರೆ. ಅಂತಹವರಲ್ಲಿ ಕೆಲವರು ಹಿಂಸಾಚಾರದಲ್ಲಿ ತೊಡಗಿರಬಹುದು ಅಷ್ಟೆ. ಹಾಗಾಗಿ ಬಹುಸಂಖ್ಯಾತರ ಕೋಮುವಾದ ಹಾಗೂ ಅಲ್ಟಸಂಖ್ಯಾತರ ಕೋಮುವಾದ ಒಂದೇ ಅಲ್ಲ.

ಆದರೆ ಈ ಎರಡನ್ನೂ ಒಂದೇ ರೀತಿಯಲ್ಲಿ ತಿರಸ್ಕರಿಸಬೇಕು ಎನ್ನುವುದು ಕೆಲವರ ಅಭಿಪ್ರಾಯ. “ನಾನು ಮುಸ್ಲಿಂ ಲೇಖಕಿಯರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಇಂದಿಗೂ ನಾನು ಸಮರ್ಥಿಸಿಕೊಳ್ಳುತ್ತೇನೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಬುರ್ಖಾ ತೊಟ್ಟ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಸಂಘಟಕರನ್ನು ಕೇಳಿದೆ. ಮೊದಲೆಲ್ಲಾ ಮಹಿಳೆಯರು ಸಭಾ ಭವನದ ಮೇಲ್ಭಾಗದಲ್ಲಿ ಕುಳಿತಿರುತ್ತಿದ್ದರು. ಅವರು ಇತರರಿಗೆ ಕಾಣದಂತೆ ಪರದೆ ಹಾಕಲಾಗುತ್ತಿತ್ತು. ಆದರೆ ಈಗೀಗ ಅವರು ಸಭೆಯ ಮುಂದೆ ಕುಳಿತುಕೊಳ್ಳುತ್ತಾರೆ. ಅದು ಒಂದು ಬದಲವಾಣೆ. ಅಷ್ಟೇ ಅಲ್ಲ ಅಲ್ಲಿ ಭಾಗವಹಿಸಿದ್ದ ಮಹಿಳೆಯರ ಪೈಕಿ ಒಬ್ಬರು ನನ್ನಂತಹವನ ಬಗ್ಗೆ ಒಂದು ಕವನವನ್ನು ಬರೆದು ಸಭಿಕರ ಮುಂದೆ ಓದಿದರು. “ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೂ, ನುಡಿಸಿರಿಯಂತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೂ ವ್ಯತ್ಯಾಸಗಳಿವೆ. ನುಡಿಸಿರಿಗೆ ಬರುವವರಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ವಿಶ್ವ ಹಿಂದೂ ಪರಿಷತ್ ನ ಕಾರ್ಯಕ್ರಮದಲ್ಲಿ ಮಾತನಾಡಿ ಅವರನ್ನು ಪರಿವರ್ತಿಸುತ್ತೇವೆ ಎನ್ನುವುದು ಆಗದ ಮಾತು ಎಂದರು.dinesh-amin-umapathi

ಜನನುಡಿ ಸಂಘಟನೆ ಬಗ್ಗೆ ಮಾತನಾಡಿ ಕಾರ್ಯಕ್ರಮ ಆಯೋಜಕರು ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡಬೇಕು ಎಂದರು. ‘ಎರಡು ಬಾರಿ ಆಹ್ವಾನ ತಿರಸ್ಕರಿಸಿದ ಮೇಲೂ, ಮೂರನೇ ಬಾರಿಗೂ ನುಡಿಸಿರಿ ಆಯೋಜಕರು ನನ್ನಂತಹವನನ್ನು ಆಹ್ವಾನಿಸುವ ಪ್ರಯತ್ನ ಮಾಡುತ್ತಾರೆ. ಅವರು ಪ್ರತಿವರ್ಷ ಒಂದ್ಹತ್ತು ಜನರಿಗೆ ಗಾಳ ಹಾಕುತ್ತಾರೆ. ಅವರಲ್ಲಿ ಐದು ಜನ ಸಿಕ್ಕರೂ ಸಾಕು. ಆದರೆ ಜನನುಡಿಯ ಸಂಘಟಕರು ಕೋಮು ಸೌಹಾರ್ದ ವೇದಿಕೆಯವರು ಪಿ.ಎಫ್.ಐ ಜೊತೆ ಗುರುತಿಸಿಕೊಂಡಿದ್ದಾರೆ. ಅವರಿಗೆ ಪ್ರವೇಶ ಇಲ್ಲ ಘೋಷಿಸಿ ದೂರ ಇಡುತ್ತಾರೆ. ಅದು ಸರಿಯಲ್ಲ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಎಲ್ಲರನ್ನೂ ಒಳಗೊಳ್ಳಬೇಕಾದ ಅಗತ್ಯವಿದೆ” ಎಂದರು.

ವಿಜಯ ಕರ್ನಾಟಕ ದೆಹಲಿ ವರದಿಗಾರ ಡಿ.ಉಮಾಪತಿ ತಮ್ಮ ತಣ್ಣನೆಯ, ಮೊನಚಾದ ಮಾತುಗಳಲ್ಲಿ ಮೋದಿ ನೇತೃತ್ವದ ಸರಕಾರ ದೆಹಲಿಯಲ್ಲಿ ಆಡಳಿತಕ್ಕೆ ಬಂದಾಗಿನಿಂದ ಎದುರಿಸುತ್ತಿರುವ ತಲ್ಲಣಗಳನ್ನು ಬಿಚ್ಚಿಟ್ಟರು. ಕೆಂಪು ಕೋಟೆಯಲ್ಲಿ ನಿಂತು ಹತ್ತು ವರ್ಷಗಳ ಕಾಲ ಕೋಮುವಾದಕ್ಕೆ ರಜೆ ಘೋಷಿಸುವ “ಸಾಹೇಬ್ರು”, ತಮ್ಮದೇ ಪಕ್ಷದ ಇತರ ನಾಯಕರು ಕೋಮುಗಲಭೆಗಳನ್ನು ಪ್ರಚೋದಿಸುವ ಹೇಳಿಕೆ ಕೊಟ್ಟಾಗ ಟೀಕಿಸುವುದಿಲ್ಲ. ದೇಶದ ಎಲ್ಲ ಆಗು-ಹೋಗುಗಳಿಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸುವ ಅವರು ತಮ್ಮ ನಾಯಕರ ಹೇಳಿಕೆಗಳ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ‘ಸಾಹೇಬರು’ ಜಶೋದಾ ಬೆನ್ ಗೆ ವಿಚ್ಛೇದನ ನೀಡಿಲ್ಲ. ಆ ಮಹಿಳೆ ತನಗೆ ಒಂದೇ ಒಂದು ದೂರವಾಣಿ ಕರೆ ಮಾಡಿದರೂ ಸಾಕು, ಅವರೊಂದಿಗೆ ಹೋಗಿ ಇರಲು ಸಿದ್ಧ ಎಂದು ಹಾತೊರೆಯುವ ಆ ಹೆಣ್ಣಿಗೆ ಯಾವುದೇ ಬೆಲೆ ಇಲ್ಲ. “ದೂರವಾಣಿ ಕರೆ ಬೇಡ ಬಿಡಿ. ಒಂದೇ ಒಂದು ಟ್ವೀಟ್ ಗೂ ಆಕೆ ಅರ್ಹಳಲ್ಲವೇ?” ಎಂದು ಪ್ರಶ್ನಿಸಿದರು.

‘ಸಾಹೇಬರು” ಇಂದು ತಮ್ಮ ಮನ್ ಕೀ ಬಾತ್ ನ ಮೂರನೇ ಕಂತಿನ ಭಾಷಣವನ್ನು ಆಕಾಶವಾಣಿಯಲ್ಲಿ ಮಾಡಿದರು. ಅವರ ಭಾಷಣವನ್ನು 45 ನಿಮಿಷಗಳ ಕಾಲ ಎಲ್ಲಾ ಸುದ್ದಿವಾಹಿನಿಗಳೂ ಕಮರ್ಷಿಯಲ್ ಬ್ರೇಕ್ ಇಲ್ಲದೆ ಪ್ರಸಾರ ಮಾಡಿದವು. ವಿಚಿತ್ರವೆಂದರೆ, ಆಕಾಶವಾಣಿಯಲ್ಲಿ ಪ್ರಸಾರವಾದ ಭಾಷಣಕ್ಕೆಯಾವ ದೃಶ್ಯಗಳಿರಲಿಲ್ಲ (visuals). ಮಾಧ್ಯಮ ಕ್ಷೇತ್ರದಲ್ಲಿರುವವರಿಗೆಲ್ಲಾ ಗೊತ್ತಿರುವ ಸಂಗತಿ ಎಂದರೆ, ಟಿವಿ ಸುದ್ದಿ ಚಾನೆಲ್ ಗಳು ವಿಶುಯಲ್ಸ್ ಇಲ್ಲದೆ ಯಾವುದೇ ಸುದ್ದಿ ಪ್ರಸಾರ ಮಾಡುವುದಿಲ್ಲ. ವಿಶುಯಲ್ಸ್ ಇಲ್ಲದ ಕಾರಣಕ್ಕೆ ಅನೇಕ ಸುದ್ದಿಗಳನ್ನೂ ಕಿಲ್ ಮಾಡಿರುವ ಉದಾಹರಣೆಗಳಿವೆ. “ಆದರೆ ಕಮರ್ಷಿಯಲ್ ಬ್ರೇಕ್ ಇಲ್ಲದೆ 45 ನಿಮಿಷ ಯಾವುದೇ ವಿಶುಯಲ್ಸ್ ಇಲ್ಲದೆ ಸುದ್ದಿ ಮಾಡಿದ್ದು ಅಪರೂಪ. ಹೀಗೆ ಸುದ್ದಿ ಮಾಡಲು ಸುದ್ದಿವಾಹಿನಿಗಳಿಗೆ ಎಲ್ಲಿಂದಲಾದರೂ ಹಣ ಬಂದಿರಬೇಕು ಎನ್ನುವುದು ನನ್ನ ಅನುಮಾನ. ಇದು ನಿಜವೂ ಇರಬಹುದು, ಅಲ್ಲದಿರಬಹುದು ಎಂದರು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನು ಜೈಲನ್ನಾಗಿ ಪರಿವರ್ತಿಸಿದರು. ಅದು ನಿಜವೂ ಕೂಡ. ದೆಹಲಿಯಲ್ಲಿ ಪತ್ರಕರ್ತನಾಗಿರುವ ನನಗೆ ಮುಂದಿನ ದಿನಗಳಲ್ಲಿ ದೇಶ ಮತ್ತೆ ಅಂತಹದೇ ಪರಿಸ್ಥಿತಿ ಎದುರಿಸಬಹುದು ಎನ್ನುವುದು ನನ್ನ ಅನುಮಾನ. “ಇಂದಿರಾಗಾಂಧಿ ಕಾಲದಲ್ಲಿದ್ದ ತುರ್ತು ಪರಿಸ್ಥಿತಿಗೂ ಈಗ ನಾನು ಆತಂಕದಿಂದ ಎದುರು ನೋಡುತ್ತಿರುವ ತುರ್ತು ಪರಿಸ್ಥಿತಿಗೂ ವ್ಯತ್ಯಾಸಗಳಿರುತ್ತವೆ. ಅಂದು ದೇಶ ಜೈಲಾಗಿತ್ತು. ಜೈಲಿನ ಬಾಗಿಲುಗಳ ಕೀಲಿ ಜೈಲರ್ ಗಳ ಜೇಬಿನಲ್ಲಿತ್ತು. ಆದರೆ ಇಂದು ಅಂತಹ ಪರಿಸ್ಥಿತಿ ಎದುರಾದರೆ, ಜೈಲಿನ ಕೀಲಿ ಜೈಲರ್ ಕೈಯಲ್ಲಿರುವುದಿಲ್ಲ. ನಮ್ಮ ಮಧ್ಯೆಯೇ ಇರುವ ಧರ್ಮ ರಕ್ಷಕರ ಜೇಬಿನಲ್ಲಿರುತ್ತದೆ ಎನ್ನುವುದೇ ನನ್ನ ಆತಂಕ” ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಲ್. ಹನುಮಂತಯ್ಯ ಹಾಜರಿದ್ದರು.

ಫೋಟೋ ಕೃಪೆ: ಐವಾನ್ ಡಿಸಿಲ್ವಾ.

 

19 thoughts on “ಜನನುಡಿಯಲ್ಲಿ ದಿನೇಶ್ ಅಮಿನ್ ಮಟ್ಟು ಮತ್ತು ಡಿ.ಉಮಾಪತಿ

  1. Nagshetty Shetkar

    “ಬಹುಸಂಖ್ಯಾತ ಹಿಂದೂಗಳ ಕೋಮುವಾದ ಹಾಗೂ ಅಲ್ಪಸಂಖ್ಯಾತರ ಕೋಮುವಾದಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಸಾಧ್ಯವಿಲ್ಲ”.

    ಕೊಮುವಾದವು ತಕ್ಕಡಿಯಲ್ಲಿ ಇತ್ತು ತೂಗುವಂತ ವಿಷಯವಲ್ಲ. ಅದು ತಕ್ಕಡಿಯನ್ನೇ ಸುತ್ತು ಬೂದಿ ಮಾಡುತ್ತದೆ. ಅಮೀನ್ ಮಟ್ಟು ಅವರೇ, ನೀವು ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುತ್ತಿದ್ದೀರಿ. ಅಲ್ಪಸಂಖ್ಯಾತರ ಕಲ್ಯಾಣ ಆಗತಕ್ಕದ್ದು. ಆದರೆ ಅಲ್ಪಸಂಖ್ಯಾತರ ಕೋಮುವಾದವನ್ನು ಸಿಂಪತಿಯಿಂದ ನೋಡುವುದು ತಪ್ಪು. ಕೋಮುವಾದಿಗಳು ಮೂಲಭೂತವಾಗಿ ಒಂದೇ. ಅವರಿಗೆ ಮತಧರ್ಮಗಳು ತಮ್ಮ ಉದ್ದಿಶ್ಯ ಸಾಧನೆಗೆ ಮಾರ್ಗಗಳಷ್ಟೇ. ಬಹುಸಂಖ್ಯಾತರಿಗೂ ಅಲ್ಪಸಂಖ್ಯಾತರಿಗೂ ಕೋಮುವಾದವನ್ನು ಎದುರಿಸಲು ಇರುವುದು ಒಂದೇ ಮಾರ್ಗ – ಸೆಕ್ಯೂಲರ್ ತತ್ವಗಳನ್ನು ಒಪ್ಪಿಕೊಂಡು ಅದರ ಪ್ರಕಾರ ತಮ್ಮ ಮತವನ್ನು ಚಲಾಯಿಸುವುದು.

    Reply
    1. Sharada halli

      ನಾಗಶೆಟ್ಟರೆ ನೀವು ಹೀಗೆ ಬರೆಯುತ್ತೀರಾ? ಇದೇನ್ರಿ, ಮೋದೀಜಿ ಅಧಿಕಾರಕ್ಕೆ ಬಂದ ಕೂಡಲೇ ನೀವೂ ನಿಮ್ಮ ವರಸೆ ಎಲ್ಲಾ ಬುದ್ದಿಜೀವಿಗಳಂತೆ ಬದಲಾಯಿಸಿಕೊಂಡಿರೋ??? ಹೀಗೇಕೆ???

      Reply
      1. Nagshetty Shetkar

        ಶಾರದಾ ಅವರೇ, ನನ್ನ ಧೋರಣೆ ಮೊದಲಿನಿಂದಲೂ ಇದೇ ಆಗಿದೆ. ಅಲ್ಪಸಂಖ್ಯಾತರು ಒಂದಾನೊಂದು ಕಾಲದಲ್ಲಿ ದಲಿತರು ಹಾಗೂ ಹಿಂದುಳಿದ ಜಾತಿಗೆ ಸೇರಿದ ಶೋಷಿತ ಜನರು. ಅವರು ಶ್ರೇಣೀಕೃತ ಹಿಂದೂ ಸಮಾಜದ ಬರ್ಬರತೆಯಿಂದ ಮುಕ್ತಿ ಪಡೆಯಲು ಮತಾಂತರವಾದವರು. ಇಂದಿಗೂ ಅವರಲ್ಲಿ ಬಹುವಾಸಿ ಜನ ಹೀನಾಯ ಸ್ಥಿತಿಯಲ್ಲಿದ್ದಾರೆ. ಆದುದರಿಂದ ಅಲ್ಪಸಂಖ್ಯಾತರ ಕಲ್ಯಾಣ ಆಗತಕ್ಕದ್ದು. ಮತ್ತು ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಯೋಜನೆಗಳನ್ನು ಜಾರಿಗೆ ತರತಕ್ಕದ್ದು. ಮುಸಲ್ಮಾನ ಸಮಾಜದ ಅಸಲಿ ಸಮಸ್ಯೆಗಳನ್ನು ಆ ಸಮಾಜದ ಪ್ರಜ್ಞಾವಂತರ ಜೊತೆಗೂಡಿ ಪರಿಹರಿಸತಕ್ಕದ್ದು. ಮುಸಲಮಾನ ಸಮಾಜದಲ್ಲಿ ಬದಲಾವಣೆಗಳ ಅಗತ್ಯ ಖಂಡಿತ ಇದೆ. ಇದನ್ನು ಆ ಸಮಾಜದ ಬಹುತೇಕರು ಒಪ್ಪಿಕೊಳ್ಳುತ್ತಾರೆ. ಆದರೆ ನೀವುಗಳು ಒಂದಿಡೀ ಸಮಾಜವನ್ನೇ ಅಪರಾಧಿಯ ಸ್ಥಾನದಲ್ಲಿಟ್ಟು ಮಾತನಾಡುವುದನ್ನು ನಿಲ್ಲಿಸಿ. ಸುಧಾರಣೆಯ ನೆಪದಲ್ಲಿ ಆ ಸಮಾಜದ ಮೇಲೆ ವಿಪರೀತ ಒತ್ತಡ ಹಾಕುವ ನಂಜಿನ ಬುದ್ಧಿ ತ್ಯಜಿಸಿ. ನಾನು ನಿಮ್ಮನ್ನು ಕೇಳಿಕೊಳ್ಳುವುದು ಇಷ್ಟೇ!

        Reply
        1. Salam Bava

          ನಾವು ಸಾವಿರ ವಾಕ್ಯಗಳಿಂದ ಅಭಿವ್ಯಕ್ತ ಪಡಿಸಲಾಗದನ್ನು ,ಸಾದಿಸಲಾಗದ್ದನ್ನು ತಾವು ಕೆಲವೇ ವಾಕ್ಯಗಳ ಮೂಲಕ ಸಾದಿಸಿದ್ದೀರಿ !ಇದು ಎಲ್ಲಾ ನನ್ನಂಥ ಜನಸಾಮಾನ್ಯ ಭಾರತೀಯ ಮುಸಲ್ಮಾನನ ಹ್ರದಯದ ನುಡಿ !ಅದಕ್ಕೆ ಒಂದು ಸಿರಿಯನ್ನು ತಾವು ಕೊಟ್ಟಿದ್ದೀರಿ ,ಹಾಗೆ ಅದು ಒಂದು ನಮ್ಮೆಲ್ಲರ “ಜನ ನುಡಿ “

          Reply
  2. raghavendra1980

    ಇದೇ ಲಾಜಿಕ್ಕಿನ ಮೇಲೆ ಪಾಕಿಸ್ಥಾನದಲ್ಲಿ ಹಿಂದೂಗಳು ಕೋಮುವಾದ ಮಾಡಿದ್ರೆ ಅದು ನ್ಯಾಯಯುತವೇ!?

    ಅಷ್ಟು ದೂರ ಯಾಕೆ ಹೋಗೋಣ, ನಮ್ಮದೇ ಕಾಶ್ಮೀರದಲ್ಲಿ ಮುಸ್ಲಿಇಮರು ಅಲ್ಪಸಂಖ್ಯಾತರಲ್ಲವೇ. ಹಾಗಾದರೆ, ಅಲ್ಲಿ ನಡೆಯುತ್ತಿರುವ ಕೋಮುವಾದ ಅಹಂಕಾರದ್ದೇ ಅಥವಾ ಅಭದ್ರತೆ, ಆತಂಕ ಹಾಗೂ ಅಸಹಾಯಕತೆಗಳಿಂದ ಹುಟ್ಟಿದ್ದೇ!?

    ಇಂತಹ ಮಂದಬುದ್ಧಿಗಳನ್ನು ಸಲಹೆಗಾರರನ್ನಾಗಿ ಪಡೆದ ನನ್ನ ರಾಜ್ಯದ ಮುಖ್ಯಮಂತ್ರಿ ಮತ್ತು ಈ ಮಣ್ಣು ಇಬ್ಬರೂ ಪಾವನರು 🙂

    Reply
  3. ಅನಿತಾ

    ದಿನೇಶ್ ಅಮಿನ್ ಮಟ್ಟು ರಂತವರ ಬೇಜವಾಬ್ದಾರಿ ಹೇಳಿಕೆಗಳಿಂದ ಹಿಂದೂ ಮೂಲಭೂತವಾದ ಮುಸ್ಲಿಂ ಮೂಲಭೂತವಾದ ಎರಡೂ ಉತ್ತೇಜಿತವಾಗುತ್ತವೆ. ‘ಬುದ್ದಿಜೀವಿಗಳ ಪಕ್ಷಪಾತ ನೀತಿ’ ಹಿಂದೂ ಜನಸಾಮಾನ್ಯರನ್ನೂ ಹಿಂದೂ ಮೂಲಭೂತವಾದದತ್ತ ಸೆಳೆಯಬಹುದು. ‘ನೋಡಿ ಬುದ್ಧಿಜೀವಿಗಳ ತಾರತಮ್ಯ’ ಎಂದು ಹಿಂದೂವಾದಿಗಳು ಬೊಟ್ಟುಮಾಡಿ ತೋರಿಸುತ್ತಾರೆ. ಅದೇ ವೇಳೆ ಮುಸ್ಲಿಂ ಮೂಲಭೂತವಾದ ‘ಬುದ್ಧಿಜೀವಿ ಚಿಂತಕರೆಲ್ಲ ತಮ್ಮ ಪರವಾಗಿದ್ದಾರೆ’ ಎಂದು ಭಾವಿಸಿ ಇನ್ನಷ್ಟು ಉತ್ತೇಜನದಿಂದ ಮೂಲಭುತವಾದಿ ಚಟುವಟಿಕೆಗಳಲ್ಲಿ ತೊಡಗಬಹುದು. ಮುಸ್ಲಿಂ ಜನಸಾಮಾನ್ಯರು ‘ಓಹೋ ನಮ್ಮ ಮೂಲಭೂತವಾದ ಅಪರಾಧವಲ್ಲ’ ಎಂದು ಅದರತ್ತ ಆಕರ್ಷಿತರಾಗಬಹುದು. ಹಿಂದೂ ಮೂಲಭೂತವಾದ ಮುಸ್ಲಿಂ ಮೂಲಭೂತವಾದ ಎರಡನ್ನೂ ಸಮಾನವಾಗಿ ವಿರೋಧಿಸದಿದ್ದರೆ ಅದರ ಫಲವನ್ನು ಕೆಲವೇ ವರ್ಷಗಳಲ್ಲಿ ದೇಶ ಕಾಣಲಿದೆ. ಮುಸ್ಲಿಮರು ಅಲ್ಪಸಂಖ್ಯಾತರೆಂದು ಮುಸ್ಲಿಂ ಮೂಲಭೂತವಾದದ ಬಲವನ್ನು ಕೀಳಂದಾಜಿಸಲಾಗದು. ಯಾಕೆಂದರೆ ಆಯುಧಬಲ, ಧನಬಲ, ಸಂಘಟನಾಬಲ, ವಿದೇಶಿ ನೆರವು ಮುಸ್ಲಿಂ ಮೂಲಭೂತವಾದಕ್ಕೆ ಹೆಚ್ಚು.

    Reply
  4. Fayaz

    ದಿನೇಶ್ ಅಮೀನರದ್ದು ಜವಾಬ್ದಾರಿಯುತ ಹೇಳಿಕೆ . ಅವರು ತಾವು ನಂಬಿದ ಸತ್ಯದೊಂದಿಗೆ ದ್ರಡವಾಗಿ ನಿಂತ್ತಿದ್ದಾರೆ ,ಅಂತ ಹೇಳಿಕೆ ಕೊಡುವ ದ್ಯೆರ್ಯ ಅವರಂಥ ನ್ಯೇತಿಕ ಶಕ್ತಿ ಇರುವವರಿಗೆ ಮಾತ್ರಾ ಸಾದ್ಯ ,ಬಹುಸಂಖ್ಯಾತರ ಕೋಮುವಾದ ಅತ್ಯಂತ ಅಪಾಯಕಾರಿ ,ಅದು ತುಂಬಾ ಬಲಶಾಲಿ ,ಅಹಂಕಾರಿ ಮತ್ತು ವಿರೋದ ನಗಣ್ಯವಾದುದರಿಇಂದ ಎಡೆ ತಡೆಯಿಲ್ಲದೆ ದೌರ್ಜನ್ಯ ಎಸಗುತ್ತದೆ .ಇನ್ನು ಅಲ್ಪ ಸಂಖ್ಯಾತ ಕೋಮುವಾದ ವನ್ನು ಹತ್ತಿಕ್ಕಲು ಅತೀ ಸುಲಬ ,ಅದು ಸದ್ದು ಮಾತ್ರಾ ಮಾಡುತ್ತದೆ ಹೊರತು ಅದರ ರಿಸಲ್ಟ್ ಯಾವಗಲೂ ತೀರಾ ಕನಿಷ್ಠ . ಇಂದು ಭಾರತದ ಜ್ಯಿಲುಗಳಲ್ಲಿ ಸಾವಿರಾರು ನಿರಪರಾದಿ ಮುಸಲ್ಮಾನ ಯುವಕರು ವಿಚಾರಣೆಯಿಲ್ಲದೆ ವರ್ಷ ಗಟ್ಟಲೆ ಕೊಳೆ ಯುತ್ತಾ ಇರುವುದು ಇದರ ಒಂದು ಉದಾಹರಣೆ

    Reply
    1. Nagshetty Shetkar

      ಅಮೀನ ಮಟ್ಟು ಅವರ ನೈತಿಕ ಶಕ್ತಿ ಬಗ್ಗೆ ನನಗೆ ಅನುಮಾನವಿಲ್ಲ, ಸಾಮಾಜಿಕ ನ್ಯಾಯದ ಬಗ್ಗೆ ಅವರಿಗಿರುವ ಕಳಕಳಿ ಬಗ್ಗೆ ಅಭಿಮಾನವಿದೆ. ಆದರೆ ಅವರು ಕೋಮುವಾದದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕೋಮುವಾದ ಬಹುಸಂಖ್ಯಾತರ ಕೋಮುವಾದ ಅಂತ ಕೂದಲು ಸೀಳುವ ತರ್ಕ ಮಾಡಿದ್ದು ನನಗೆ ಸರಿ ಕಾಣಲಿಲ್ಲ. ಅಮೀನ ಮಟ್ಟು ಅವರ ತರ್ಕ ಅವರ ಉದ್ದೇಶವನ್ನು ಮೀರಿದ ಪರಿಣಾಮವನ್ನು ಉಂಟು ಮಾಡುತ್ತದೆ – ಹಿಂದುತ್ವವಾದಿಗಳಿಗೆ ಅಲ್ಪಸಂಖ್ಯಾತರ ಮೇಲೆ ದ್ವೇಷ ಕಾರಲು ಹಾಗೂ ಸರಕಾರದ ಮೂಲಕ ಒತ್ತಡ ಹೇರಲು ಮತ್ತೊಂದು ಅವಕಾಶ ಮಾಡಿಕೊಟ್ಟ ಹಾಗಾಗುತ್ತದೆ. ಕೋಮುವಾದವು ಸೆಕ್ಯೂಲರ್ ಪ್ರಜಾಸತ್ತಾತ್ಮಕ ಭಾರತದ ಪರಿಕಲ್ಪನೆಗೆ ಮಾರಕವಾಗಿದೆ. ಕೋಮುವಾದವು ಮೂಲಭೂತವಾಗಿ ಜನದ್ರೋಹಿ ಹಾಗೂ ಜೀವವಿರೋಧಿಯಾದಂಥದ್ದು. ಆದುದರಿಂದ ಕೋಮುವಾದವನ್ನು ಬೆಳೆಸುವ ಉತ್ತೇಜಿಸುವ ಬೆಂಬಲಿಸುವ ಕೆಲಸವನ್ನು ಪ್ರಗತಿಪರ ಶಕ್ತಿಗಳು ಮಾಡಕೂಡದು. ನಾನು ಈ ಹಿಂದೆಯೇ ಹೇಳಿದ್ದೇನೆ ಮುಸಲ್ಮಾನ ಸಮಾಜದ ಕಲ್ಯಾಣ ಆಗತಕ್ಕದ್ದು. ಆದರೆ ಕೋಮುವಾದವು ಮುಸಲ್ಮಾನ ಸಮಾಜದ ಸಮಸ್ಯೆಗಳಿಗೆ ಪರಿಹಾರ ಮಾರ್ಗವಲ್ಲ. ಸರಕಾರದ ಪ್ರಗತಿಪರ ಯೋಜನೆಗಳ ಮೂಲಕ ಹಾಗೂ ಸಂವೇದನಾಶೀಲ ಮುಸಲ್ಮಾನ ಪ್ರಜ್ಞಾವಂತರ ಪ್ರಯತ್ನದ ಮೂಲಕ ಮುಸಲ್ಮಾನ ಸಮಾಜದ ಅಸಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಅಮೀನ ಮಟ್ಟು ಅವರ ತರಹ ಉತ್ತಮ ಸ್ಥಾನದಲ್ಲಿರುವ ಪ್ರಭಾವಶಾಲಿ ಪ್ರಗತಿಪರರು ಕೋಮುವಾದವನ್ನು ಸಮರ್ಥಿಸಿ ಮಾತನಾಡುವ ಬದಲು ಸಿ ಎಂ ಸಿದ್ದರಾಮಯ್ಯನವರ ಗಮನವನ್ನು ಮುಸಲ್ಮಾನ ಸಮಾಜದ ಸಮಸ್ಯೆಗಳ ಕಡೆಗೆ ಸೆಳೆದು ಅವರ ಆಡಳಿತಾವಧಿಯಲ್ಲಿ ಕೆಲವಾದರೂ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಮಾಡತಕ್ಕದ್ದು. ಅಮೀನ ಮಟ್ಟು ಅವರ ಜಾಗದಲ್ಲಿ ನಮ್ಮ ದರ್ಗಾ ಸರ್ ಅವರು ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದರೆ ಈ ಕೆಲಸವನ್ನು ಮೊದಲು ಮಾಡುತ್ತಿದ್ದರು.

      Reply
      1. Fayaz

        With due respect – Nagshetty Shetkar ರಿಗೆ ಅವರ ಸಿಟ್ಟನ್ನು ,ತಲ್ಲಣವನ್ನು ವ್ಯಕ್ತ ಪಡಿಸುವ ಪೂರಾ ಸ್ವಾತಂತ್ರವಿದೆ ,ಅದ್ದರೆ ಯಾರನ್ನೂ ವ್ಯೆಯುಕ್ಥಿಕವಾಗಿ ಅವಹೇಳನ ಮಾಡುವ ಹಕ್ಕಿಲ್ಲ (.”ಅಮೀನ ಮಟ್ಟು ಅವರಿಗೆ ತಾತ್ಕಾಲಿಕವಾಗಿ ಬುದ್ಧಿ ಭ್ರಮಣೆ ಆಗಿ ಅಲ್ಪಸಂಖ್ಯಾತರ ಮೂಲಭೂತವಾದವನ್ನು ಸಮರ್ಥಿಸಿಕೊಂಡರೋ ಏನೋ.”) ತಮ್ಮ ದಿಟ್ಟ ಮತ್ತು ಪಕ್ಷಪಾತರಹಿತ ನಿಲುವುಗಳಿಂದ ಗೌರವಿಸಲ್ಪಡುವ ತಾವು ಇಂಥಾ ವಾಕ್ಯ ಹೇಗೆ ಬರಿದಿರೆಂದು ಸಂಶಯ !ಅದೂ ನಾಡೆಲ್ಲಾ ಗೌರವಿಸುವ ,ತಮ್ಮ ಜನಪರ ನಿಲುವುಗಳಿಂದ ಅರಿಯಲ್ಪಡುವ ದಿನೇಶ್ ರವರ ಬಗ್ಗೆ
        “ಅಮೀನ್ ಮಟ್ಟುರವರು ಎರಡೂ ಬಗೆಯ ಕೋಮುವಾದವನ್ನು ಬಣ್ಣಿಸಿದ್ದಾರೆ. ಜೊತೆಗೆ ಅದರ ಮೂಲವನ್ನು, ಆಳವನ್ನು ವಿವರಿಸಿದ್ದಾರೆ. ಆದರೆ ಒಳಿತು ಕೆಡುಕಿನ ತೀರ್ಮಾನ ಕೊಟ್ಟಿಲ್ಲ. ” ಇದು ಓರ್ವರು ಮಾಡಿದ ಕಮೆಂಟು ,ಇದು ಇಲ್ಲಿಗೆ ಅತ್ಯಂತಸಮಂಜಸ ಕೂಡ !
        ಇನ್ನು ಓರ್ವ ಕಟ್ಟರ್ ಹಿಂದೂ ಕೋಮುವಾದಿ ಯಂತು ನಿಮ್ಮ ಕಮೆಂಟನ್ನು ತಮ್ಮ ಬಣ್ಣಕ್ಕೆ ಬೇಕಾದಂತೆ ತಿರುಗಿಸುವ ಪ್ರಯತ್ನದಲ್ಲಿದಾರೆ . ನಿಮ್ಮಂತೆ (ನಾಗಶೆಟ್ಟಿ ಯವರಂತೆ ) ಇನ್ನೋರ್ವ,ಎಡ ನಿಲುವಿನ , ಜನಪರ ಕಮೆಂಟಿ ಗರಾದ ಸಲಾಂ ಬಾವ ರನ್ನು ನಿಮ್ಮ ಈ ಕಮೆಂಟಿನ ಆಸರೆ ಪಡೆದು ಮಸ್ಲಿಂ ಮೂಲಭೂತವಾದಿ ಎಂದು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ – (“ಸಲಾಂ ಬಾವ ರಂಥ ಮೂಲಭೂತವಾದಿಗಳನ್ನು ಸಮರ್ಥಿಸುತ್ತೀರಲ್ಲಾ?)
        !ವರ್ತಮಾನದ ಸಂಪಾದಕರು ಎಲ್ಲ್ಲಾನಿಲುವಿನವರಿಗೂ ತಮ್ಮ ಬ್ಲಾಗಿನಲ್ಲಿ ವೇದಿಕೆ ಕೊಟ್ಟಿದ್ದಾರೆ ,ಇನ್ನು ಅಮೀನರ ಹೇಳಿಕೆಯನ್ನು ಪ್ರಕಟಿಸಿದ್ದು ಯಾವ ತಪ್ಪು ?

        Reply
        1. Nagshetty Shetkar

          ಫಯಾಜ್ ಭಾಯ್, ನಿಮ್ಮ ಕಳಕಳಿಗಳಿಗೆ ಧನ್ಯವಾದಗಳು. ಅಮೀನ ಮಟ್ಟು ಅವರ ಬಗ್ಗೆ ವೈಯಕ್ತಿಕವಾಗಿ ಬಹಳ ಗೌರವವಿದೆ. ಅವರನ್ನು ಅವಹೇಳನ ಮಾಡುವ ಉದ್ದೇಶ ನನಗಿಲ್ಲ. ನಾನು ಅವರ ಬಗ್ಗೆ ಹೇಳಿದುದರಲ್ಲಿ ತಪ್ಪೇನೂ ನನಗೆ ಕಾಣಿಸುತ್ತಿಲ್ಲ. ತಾತ್ಕಾಲಿಕ ಬುದ್ಧಿಭ್ರಮಣೆ ಎಲ್ಲರಿಗೂ ಆಗುವಂಥದ್ದು, ಅದರಲ್ಲಿ ಅವಹೇಳನಕಾರಿಯಾದದ್ದು ಏನೂ ಇಲ್ಲ. ಜನನುಡಿಯಂತಹ ಮುಖ್ಯ ವೇದಿಕೆಯ ಮೇಲೆ ಕುಳಿತು ನೆರೆದ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಕೆಲವೊಮ್ಮೆ ತಾತ್ಕಾಲಿಕ ಬುದ್ಧಿಭ್ರಮಣೆ ಆಗುತ್ತದೆ. ನಾವು ಹೇಳಬೇಕೆಂದು ಹೊರಟಿದ್ದು ಮತ್ತೇನೋ ಆಗಿ ಹೇಳಲ್ಪಡುತ್ತದೆ. ಇದೆಲ್ಲ ಭಾಷಣ ಕೊಡುವವರಿಗೆ ಚೆನ್ನಾಗಿ ಅನುಭವಕ್ಕೆ ಬಂದಂತಹ ಸಂಗತಿಗಳು. ಅದನ್ನೇ ನಾನು ಹೇಳಿದ್ದೇನೆ. ಆದರೆ ನನ್ನ ಮಾತುಗಳಿಂದ ನಿಮಗೆ ಬೇಸರವಾಗಿದ್ದರೆ ನಿಮ್ಮ ಕ್ಷಮೆ ಕೇಳುತ್ತೇನೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿಲ್ಲ. ನಾನೊಬ್ಬ ಶರಣ, ವಚನಕಾರರ ಹಾದಿಯಲ್ಲಿ ಮೌಲ್ಯಯುತ ಜೀವನ ನಡೆಸುತ್ತಿರುವ ಸಾಧಾರಣ ವ್ಯಕ್ತಿ.

          ಬಾವ ಅವರು ನನಗೆ ಪರಿಚಯದವರಲ್ಲ. ಅವರ ಕಾಮೆಂಟುಗಳ ಮೂಲಕ ಮಾತ್ರ ಅವರನ್ನು ಬಲ್ಲೆ. ಅವರೆಂದೂ ನನಗೆ ಒಬ್ಬ ಮೂಲಭೂತವಾದಿ ಅಂತ ಅನ್ನಿಸಿಲ್ಲ. ಅವರೊಳಗಿರುವ ಸಂವೇದನಾಶೀಲ ವ್ಯಕ್ತಿತ್ವವನ್ನು ಇಲ್ಲಿ ಕೆಲವರು ಪದೇ ಪದೇ ಅನುಮಾನಿಸಿ ಅವಮಾನಿಸಿ ನೋಯಿಸುತ್ತಿದ್ದಾರೆ. ಇದು ತಪ್ಪು.

          ಅಮೀನ ಮಟ್ಟು ಅವರು ಮುಸ್ಲಿಂ ಸಮಾಜದ ಅಸಲಿ ಸಮಸ್ಯೆಗಳ ಬಗ್ಗೆ ಒಂದೆರಡು ಮಾತನ್ನಾಡಿ, ಆ ಸಮಸ್ಯೆಗಳನ್ನು ಸಿ ಎಂ ಸಾಹೇಬರ ಗಮನಕ್ಕೆ ತರುತ್ತೇನೆ ಅಂತ ಜನನುಡಿಯಲ್ಲಿ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಆಗ ಅವರ ಆ ಮಾತುಗಳನ್ನು ವರ್ತಮಾನದಲ್ಲಿ ಪ್ರಕಟಿಸಿ ಒಂದು ಮೌಲ್ಯಯುತ ಚರ್ಚೆ ಮಾಡಿಸಬಹುದಿತ್ತು. ಆದರೆ ಅಮೀನ ಮಟ್ಟು ಅವರ ಕೂದಲು ಸೀಳುವ ತರ್ಕವನ್ನೇ ಮುಖ್ಯವಾಗಿಸಿ ಜನನುಡಿಯ ವರದಿ ಕೊಟ್ಟಿದ್ದು ಪ್ರಮಾದವಾಯಿತು. ಮುಸ್ಲಿಂ ಸಮುದಾಯದ ಅಸಲಿ ಸಮಸ್ಯೆಗಳ ಚರ್ಚೆಯ ಬದಲು ನೀನು ಕೋಮುವಾದಿ ಅಲ್ಲ ನೀನು ಕೋಮುವಾದಿ ಮಟ್ಟದ ಬಾಲಿಶ ಜಗಳ ಇಲ್ಲಿ ನಡೆಯುತ್ತಿದೆ. ಅಲ್ಲವೇ?

          Reply
          1. Fayaz

            Very well said Sir,I appreciate your concern & commitment towards the human values.I have high regards to vachana sahitya and gone through many articles written by Ramzan Dargah.It is fine with me!

  5. fayazubar

    ಅಮೀನ್ ಮಟ್ಟುರವರು ಎರಡೂ ಬಗೆಯ ಕೋಮುವಾದವನ್ನು ಬಣ್ಣಿಸಿದ್ದಾರೆ. ಜೊತೆಗೆ ಅದರ ಮೂಲವನ್ನು, ಆಳವನ್ನು ವಿವರಿಸಿದ್ದಾರೆ. ಆದರೆ ಒಳಿತು ಕೆಡುಕಿನ ತೀರ್ಮಾನ ಕೊಟ್ಟಿಲ್ಲ. ಕೆಲವರು ಮಟ್ಟು ರವರು ತೀರ್ಪು ನೀಡಿದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದಂತೆ ಭಾಸವಾಗುತಿದೆ. ಈ ರೀತಿಯ ಗೊಂದಲಕ್ಕೆ ನಮ್ಮೊಳಗಿನ ಸುಪ್ತ ಕೋಮುವಾದವೇ ಕಾರಣ ಅಥವಾ ಪೂರ್ವಾಗ್ರಹಪೀಡಿತ ಜಾತ್ಯಾತೀತತೆ ಕೂಡಾ ಕಾರಣವಾಗಿರಬಹುದು. ಇಂತಹ ಗೊಂದಲದ ಜಾತ್ಯಾತೀತತೆಯಿಂದ ಇಂದು ಮೋದಿಯ ಪೊರಕೆಯಡಿ ಇರುವ ಕಸಕಡ್ಡಿಗಳನ್ನು ಗುರುತಿಸುವಲ್ಲಿ ಸಾಮಾನ್ಯ ಜನರು ವಿಫಲರಾಗುತಿದ್ದಾರೆ.

    Reply
  6. ak kukkaje

    ಅಮೀನ್ ಮಟ್ಟು ರವರು ತನ್ನ ವಿಶ್ಲೇಷಣೆಗೆ ತೋಚಿದ ವಿಚಾರಗಳನ್ನು ಯಾವುದೇ ಅಳುಕಿಲ್ಲದೆ ದಿಟ್ಟತನದಿಂದ ಹೇಳುವ ನೇರ ನಡೆ ನುಡಿಯ ವ್ಯಕ್ತಿತ್ವದವರು ಆದ್ದರಿಂದ ಅವರು ಮುಸ್ಲಿಮರಿಗೆ ಸಹ್ಯವಾಗದ ಆ ಸಮುದಾಯದ ಬಗ್ಗೆ ಕಟಿಣ ವಿಚಾರ ಮಂಡಿಸಿದಾಗ ಬೇಶ್ ಎಂತಲೂ ಮುಸ್ಲಿಮರ ಪರ ಎಂದು ತೋರುವ ಅಥವಾ ಮೃದು ಧೋರಣೆ ಎಂದು ಭಾಸವಾಗುವುದನ್ನು ಬೂಸು ಎಂತಲೂ ಪ್ರತಿಕ್ರಿಯಿಸುವುದಕ್ಕಿಂತ ಯಾರನ್ನೂ ಮೆಚ್ಚಿಸಳಲ್ಲದ ರಾಜಕೀಯರಹಿತವಾದ ಅವರ ವಿಮರ್ಶೆಯ ವಾಸ್ತವಿಕತೆಯನ್ನು ಮನನ ಮಾಡುವ ಮತ್ತು ಅಭಿಪ್ರಾಯಕ್ಕೆ ಮನ್ನಣೆ ನೀಡುವ ಹೃದಯ ನಮ್ಮಲ್ಲಿರಬೇಕು. ಅದೇನಿದ್ದರೂ ಅಲ್ಪ ಸಂಖ್ಯಾತ ಕೋಮುವಾದ ಮತ್ತು ಬಹು ಸಂಖ್ಯಾತ ಕೋಮುವಾದ ಎಂಬ ವರ್ಗೀಕರಣದ ಬದಲು ಈ ಕೋಮುವಾದ ಹೇಗೆ ಮತ್ತು ಯಾಕಾಗಿ ಅಸ್ತಿತ್ವ ಪಡೆಯಿತು ಎಂದು ಅದರ ಮೂಲವನ್ನರಿತು ಎಲ್ಲಾ ವಿಧದ ಕೊಮುವಾದವನ್ನೂ ನಿರ್ಮೂಲನಗೈದು ಸೌಹಾರ್ದದ ಭಾರತೀಯ ಸಮಾಜ ನಿರ್ಮಾಣದ ಬಗ್ಗೆ ಚಿಂತಿಸುವುದು ಇಂದಿನ ಅನಿವಾರ್ಯತೆಯಾಗಿದೆ ಈ ನಿಟ್ಟಿನಲ್ಲಿ ಪರಾಮರ್ಶಿಸುವಾಗ ಇಲ್ಲಿನ ಬಹುಸಂಖ್ಯಾತ ಕೊಮುವಾದವು ನಿಜವಾಗಿ ಬಹುಸಂಖ್ಯಾತರ ಕೋಮುವಾದ ಆಗಿರದೆ ಇದರ ನಿಯಂತ್ರಣವನ್ನು ಹೊಂದಿರುವುದು ಇಲ್ಲಿನ ಅಲ್ಪಸಂಖ್ಯಾತ ಸವರ್ಣೀಯ ಅಥವಾ ಹಿಂದೂ ಮೇಲ್ವರ್ಗದ ಮಂದಿಗಳು ಎನ್ನುವ ವಾಸ್ತವ ಅರಿಯಲು ಕಷ್ಟವಾಗಲಾರದು.ಮೇಲ್ನೋಟಕ್ಕೆ ಹಿಂದುಳಿದ ವರ್ಗದ ಜನಗಳು ಮುಸ್ಲಿಮರಿಗೆದುರಾಗಿ ಅಖಾಢದಲ್ಲಿದ್ದರೂ “ಇವರು ಅಮಾಯಕರು” ಮತ್ತು ಇವರಿಗೆ (ಎಲ್ಲ ಹಿಂದುಳಿದ ವರ್ಗದ ಜನರಿಗೆ) ಸಾರಾಸಗಟಾಗಿ ಹಿಂದೂ ಎಂಬ ಮುದ್ರೆ ಒತ್ತಿದ ಈ ದೇಶದ ಅಲ್ಪಸಂಖ್ಯಾತ ಸವರ್ಣೀಯ ಪ್ರಭುಗಳು ಈ ಬಡ ಕಾರ್ಮಿಕ ವರ್ಗದ ಜನರನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಕೋಮುವಾದ ಅಮಲನ್ನು ನೀಡಿ ಗಲಭೆಗಳಿಗೆ ಬೇಕಾದ ಕಾರ್ಮಿಕರನ್ನಾಗಿಸಿದರು.ಯಾಕೆಂದರೆ ಇವೆಲ್ಲವೂ ತಮ್ಮ ಅಧಿಕಾರ,ಅಂತಸ್ತುಗಳ ಅಸ್ತಿತ್ವ ಕಾಪಾಡಲು ಬೇಕಾದ ಕುತಂತ್ರವಾಗಿದೆ.ಅಲ್ಲವದಲ್ಲಿ ಈ ಹಿಂದುಳಿದ ಮಂದಿಗಳು ತಮ್ಮ ನ್ಯಾಯಕ್ಕಾಗಿ ಮೀಸಲಾತಿಗಾಗಿ ತಮಗೆ ಸಲ್ಲಬೇಕಾದ ಸಾಮಾಜಿಕ ಸವಲತ್ತು ಜನಸಂಖ್ಯಾನುಪಾತ ಪ್ರಾತಿನಿಧ್ಯ ಇತ್ಯಾದಿಗಳಿಗೆ ಬೇಕಾಗಿ ಅದನ್ನು ಕಸಿದಿರುವ ಮೇಲ್ವರ್ಗದ ಜನಗಳಿಗೆದುರಾಗಿ ಹೋರಾಟ ನಡೆಸಬಹುದು ಎಂಬ ಭಯ ಮತ್ತು ಅಭದ್ರತೆಯಿಂದ ಈ ದೇಶದ ನಿಜವಾದ ಅಲ್ಪಸಂಖ್ಯಾತರಾದ ಸವರ್ಣೀಯ ಬ್ರಾಹ್ಮಣ ವರ್ಗವು ಮಾಡಿದ ಜಾಣ ಯೋಜನೆಯೇ ಈ (ಮುಸ್ಲಿಂ ಕ್ರೈಸ್ತರಲ್ಲದ ಜನಗಳನ್ನು ಹಿಂದೂ ಎಂದು ನಂಬಿಸಿ, ಮುಸ್ಲಿಂ ಕ್ರೈಸ್ತರನ್ನು ಅಲ್ಪಸಂಖ್ಯಾತರೆಂದು ಬಿಂಬಿಸಿ ಅವರಿಗೆದುರಾಗಿ ಎತ್ತಿ ಕಟ್ಟುವ) ಕೋಮುವಾದ.
    ಒಂದು ರೀತಿಯಲ್ಲಿ ಎರಡೂ ಕೊಮುವಾದವು ಅಭದ್ರತೆಯ ಕಾರಣಕ್ಕಾಗಿಯೇ ಹುಟ್ಟಿಕೊಂಡಿವೆ. ಅಂದರೆ ಬಹುಸಂಖ್ಯಾತ ಎನ್ನಲಾಗುವ ಮತೀಯವಾದವು ಅಲ್ಪಸಂಖ್ಯಾತ ಸವರ್ಣೀಯರ ಅಸ್ತಿತ್ವ ಮತ್ತು ಅಂತಸ್ತನ್ನು ಕಾಪಾಡುವ ಭಯ ಅಭದ್ರತೆಯಿಂದಾಗಿ ಕುತಂತ್ರ ಯೋಜನೆಯ ಮೂಲಕವಾದರೆ ಅದರ ಭಯದ ನೆರಳಲ್ಲಿ ಬದುಕಬೇಕಾದ ಭಯದಲ್ಲಿ ಇಲ್ಲಿನ ಮುಸ್ಲಿಂ ಯುವಕರು ಅದನ್ನು ಎದುರಿಸಲು ಸನ್ನದ್ದರಾಗುವ ಮೂಲಕ ಈ ಹೊಂಡಕ್ಕೆ ಬಿದ್ದು ಬಲಿಯಾಗಬೇಕಾಯಿತು ಇಲ್ಲಿ ನಿಜಕ್ಕೂ ಸವರ್ಣೀಯಶಾಹಿತ್ವವನ್ನು ಕಾಪಾಡುವ ಕಾರ್ಯಯೋಜನೆಯ ಆರ್ಎಸ್ಎಸ್ ನ ನರಿಬುದ್ದಿಯ ಬಲಿಪಶುಗಳೇ ಮುಸ್ಲಿಂ ಸಮುದಾಯ ಕೆಲವೊಮ್ಮೆ ಅಗತ್ಯಾನುಸಾರ ಕ್ರೈಸ್ತ ಸಮುದಾಯ ಅಷ್ಟೇ ಆಗಿದೆ.ಇದೆ ಈ ಕೋಮುವಾದ ಅಸ್ತಿತ್ವದ ಮೂಲ ಇನ್ನು ಈ ವಿಮರ್ಶೆಗೆ ಪುನರ್ವಿಮರ್ಶೆ ಇದ್ದಲ್ಲಿ ಖಂಡಿತಾ ಚರ್ಚೆ ಮುಂದುವರಿಸೋಣ. ಅಂತೆಯೇ ಇದುವರೆಗೆ ಇಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಹತರಾದವರು ಮುಸ್ಲಿಮರು ಮತ್ತು ಹಿಂದುಳಿದ ವರ್ಗದವರೇ ವಿನಃ ಎಂದೆಂದೂ ಸವರ್ಣೀಯ ಮಂದಿಗಳ ಅನುಪಾತ ತೀರ ಬಹಳಷ್ಟು ಕಡಿಮೆ ಅಪ್ಪಿ ತಪ್ಪಿ ಒಂದೆರಡು ಉದಾಹರಣೆ ಸಿಗುವುದು ದುರ್ಲಭ ಆದರೆ ಇದರ ಪೂರ್ಣ ನಿಯಂತ್ರಣ ಇವರ ಕೈಯಲ್ಲೇ ಇತ್ತು ತಮ್ಮವರನ್ನು ನೆಮ್ಮದಿಯಲ್ಲಿರಿಸಿ ಹಿಂದುಳಿದ ಜನ ಮತ್ತು ಬಹುತೇಕ ಅದೇ ಹಿಂದುಳಿದ ಮೂಲದ ಮುಸ್ಲಿಮರನ್ನು ಕಚ್ಹಾಡಿಸಿದರು…..ಆದರೆ ಇಲ್ಲಿ ಸಮಸ್ಯೆಯ ಆಳವನ್ನು ಚಿಂತಿಸಲಾಗದ ಅಮಾಯಕ ಹಿಂದುಳಿದ ಹಿಂದೂ ಮಂದಿಗಳಂತೆ ಈ ಕುತಂತ್ರವನ್ನರಿಯದೆ ಅವರನ್ನು ಎದುರಿಸುವ ಮುಸ್ಲಿಂ ಯುವಕರೂ ಅಮಾಯಕ ಬಲಿಪಶುಗಳೇ ಆಗಿವೆ.ಸಹಜವಾಗಿಯೇ ಹೊಡೆಯಲು ಬಂದ ಕೈಗೆ ಪ್ರತಿಯೇಟು ನೀಡಿದರೆ ವಿನಃ ಹೊಡೆಯಲು ಆಜ್ಞಾಪಿಸಿದ ತಲೆಯನ್ನು ಅರ್ಥೈಸದಾದರು.

    Reply
    1. J P

      Nimma niluvu sariyaagide. Koomuvaada Yaava Deshadallu bahusankyatharaddalla. Adu alphasankhyatharadde. Adhikarada kendradalli iruvudu yaavaagalu Alpasankhyathare. Avaru Fieldige hoogalla aste. Bisilu benkiyalli katthi, donne hidiyalu oratu kaigale beku. Adre soft kaigalu facebooku, twitternalli benkikaddi supply maadtha irthave aste. You are right. Adakke KUVEMPU Gundannu modalu ninna thalege hodeduko andaddu.

      Reply
  7. nudi

    ಛೇ,,,, ಅಲ್ಪಸಂಖ್ಯಾತನಿರಲಿ ಬಹುಸಂಖ್ಯಾತನಿರಲಿ ಕೋಮುವಾದದ ಕರಿನೆರಳನ್ನ ಹೀಗೂ ನೋಡುವುದೆ..? ಲುಷುನ್ ಎಂಬ ಮಹಾಶಯನ ಕತೆಯೊಂದರಲ್ಲಿ ಪಾತ್ರವೊಂದು ಪ್ರಾಯಕ್ಕೆ ಬಂದುದರ ಸಂಕೇತವಾಗಿ ಇಲಿಯನ್ನು ಕೊಲ್ಲುತ್ತದೆ. ಅಷ್ಟೆ ಏಕೆ ಭಾರತದ ಸಂಸ್ಕೃತಿಯಲ್ಲಿ ಮದುವೆಗೆ ಸಿದ್ಧವಾಗಿರುವ ಜೋಡಿಗೆ ಮೆಹೆಂದಿ ಹಚ್ಚುತ್ತಾರೆ. ಮತ್ತು ಹಳದಿ ನೀರು ಹಾಕುತ್ತಾರೆ. ಅಲ್ಲಿ ಕೂಡ ಹೆಣ್ಣು-ಗಂಡೆಂಬ ಭೇದವಿಲ್ಲ. ಅಲ್ಪಸಂಖ್ಯಾತನಿರಲಿ ಬಹುಸಂಖ್ಯಾತನಿರಲಿ, ಹೆಣ್ಣಿರಲಿ ಗಂಡಿರಲಿ ಸಮಾಜದ ಏಕತೆಯೊಳಗಿನ ಅನೇಕತೆಯನ್ನ ಹುಸಿಗೊಳಿಸಲು ಬೇಯುತ್ತಿರುವ ಕೋಮುವಾದ ಒಂದೆ ಮುಖದ್ದಾಗಿದೆ

    Reply
  8. ಓದುಗ

    ಮಟ್ಟುರವರು ಎಲ್ಲೂ ಕೋಮುವಾದವನ್ನು ಸಮರ್ಥಿಸಿಕೊಂಡಿಲ್ಲ. ಅಥವಾ ಅಲ್ಪಸಂಖ್ಯಾತರ ಕೋಮುವಾದವನ್ನು ಉಪೇಕ್ಷಿಸಬಹುದೆಂದಾಗಲಿ ಹೇಳಿಲ್ಲ. ನೈಜ ಹಾಗೂ ಗಂಭೀರ ಸಾಮಾಜಿಕ ಪ್ರಾಮಾಣಿಕತೆ ಇರುವ ಒಬ್ಬ ವ್ಯಕ್ತಿಯಿಂದಲೇ ಇಂತಹ ವಿಶ್ಲೇಷಣೆ ಹಾಗೂ ಅದರ ಅಭಿವ್ಯಕ್ತಿ ಸಾಧ್ಯ. ಮುಸ್ಲಿಮ್ ಸಮುದಾಯವನ್ನು ಹತ್ತಿರದಿಂದ ನೋಡಿರುವ ಅನುಭವದಾಧರದಲ್ಲಿ ಹೇಳುವುದಾದರೆ ಮುಸ್ಲಿಮರಲ್ಲೂ ಕೋಮುವಾದ ಹಿಂದಿನಿಂದಲೂ ಇದೆ, ಆದರೆ ಅದು ಯಾವತ್ತು ಸಾರ್ವಕಾಲಿಕವಾಗಿರಲಿಲ್ಲ ಅಥವಾ ಸಂಘಟಿತವಾಗಿರಲಿಲ್ಲ. ಮುಸ್ಲಿಮರಲ್ಲಿ, ಯುವಕರಲ್ಲಿ, ವಿಶೇಷವಾಗಿ ಕರಾವಳಿಯಲ್ಲಿ, ಕೋಮುವಾದವು ಸೈದ್ದಾಂತಿಕವಾಗಿ ಬೆಳೆಯುತ್ತಿರುವುದು ಹಿಂದೂ ಕೋಮುವಾದದ ಪ್ರತಿಯಾಗಿ ಎಂಬುವುದು ಯಾರನ್ನು ( ಕೇಸರಿ/ಹಸಿರು ಕಾಮಾಲೆ ರೋಗಿಗಳನ್ನು ಹೊರತುಪಡಿಸಿ) ಕೇಳಿದರೂ ತಿಳಿಯುವ ವಿಚಾರ.

    ಆ ಕೋಮುವಾದಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಮಟ್ಟುರವರ ವಿಶ್ಲೇಷಣೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಯಾವುದೇ ರೋಗವಿರಲಿ, ಅದಕ್ಕೆ ಕಾರಣವನ್ನು ಕಂಡುಹಿಡಿಯುವುದು (diagnosis) ಬಹಳ ಮುಖ್ಯ. ತಲೆ ಒಳಗಿನಿಂದ ನೋಯುತ್ತಿದ್ದರೆ ಅದಕ್ಕೆ ಮದ್ದು ಬೇರೆ, ಹೊರಗಿನಿಂದ ನೋಯುತ್ತಿದ್ದರೆ ಅದಕ್ಕೆ ಚಿಕಿತ್ಸೆಯೇ ಬೇರೆಯಾಗಿರುತ್ತದೆ. ಅದೇ ರೀತಿ ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂ ಬಾಂಧವರಲ್ಲಿ ಕೋಮುವಾದವನ್ನು ತುಂಬಲಾಗುತ್ತಿದೆ, ಆದರೆ ಮುಸ್ಲಿಮ್ ಬಾಂಧವರಲ್ಲಿ ಕೋಮುವಾದವನ್ನು ತುಂಬಲಾಗುತ್ತಿರುವುದು ಕೇವಲ ಒಂದೇ ವಿಚಾರದನ್ವಯ, ಅದು- ಹಿಂದೂ ಕೋಮುವಾದ.

    ಉತ್ತಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ವ್ಯತ್ಯಾಸವನ್ನು ಗಮನಿಸುವುದು ಬಹಳಾ ಮುಖ್ಯ. ಚರ್ಚೆ ಮಾಡಲಿಕ್ಕೋ, ನಮ್ಮ ನಮ್ಮ egoವನ್ನು ಸಂತೃಪ್ತಿಪಡಿಸಿಕೊಳ್ಳಲಿಕ್ಕೋ, ನಮ್ಮ ನಮ್ಮ ರಾಜಕೀಯ ವಿಚಾರಧಾರೆಗಳನ್ನು ಎತ್ತಿಹಿಡಿಯಲಿಕ್ಕೋ, ನಾವು ಮಟ್ಟುರವರನ್ನು ಒಪ್ಪಿಕೊಳ್ಳದೇ ಇರಬಹುದು. ಆದರೆ ಪೂರ್ವಾಗ್ರಹ ಪೀಡಿತರಾಗದೇ ಏಕಾಂತದಲ್ಲಿ ಈ ಸಮಾಜದ ಹಿತೈಷಿಯಾಗಿ ಅವಲೋಕಿಸೋಣ, ಮಟ್ಟುರವರ ಮಾತುಗಳಲ್ಲಿರುವ ನೈಜತೆ, ಕಾಳಜಿ ಹಾಗೂ ಪ್ರಾಮಾಣಿಕತೆ ಕಂಡೇ ಕಾಣುತ್ತದೆ.

    Reply
    1. Nagshetty Shetkar

      ಅಮೀನ್ ಮಟ್ಟು ಅವರ ಕೂದಲು ಸೀಳುವ ತರ್ಕದ ಬಗ್ಗೆ ನಿಮ್ಮ ವಿಶ್ಲೇಷಣೆ ಕೂಡ ಕೂದಲು ಸೀಳುವ ಹಾದಿಯಲ್ಲೇ ಸಾಗಿದೆ! ಇದೆಲ್ಲ ಬೇಕೇ? ಅದೂ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದ ಬುಗಿಲೆದ್ದು ಎಳೆಯ ಜೀವಗಳನ್ನೇ ನುಮ್ಗಿರುವಂತಹ ಈ ಸಂದರ್ಭದಲ್ಲಿ? ನೀವೆಲ್ಲ ಏಕೆ “ಕೋಮುವಾದವು ಸೆಕ್ಯೂಲರ್ ಪ್ರಜಾಸತ್ತಾತ್ಮಕ ಭಾರತದ ಪರಿಕಲ್ಪನೆಗೆ ಮಾರಕವಾಗಿದೆ; ಕೋಮುವಾದವು ಮೂಲಭೂತವಾಗಿ ಜನದ್ರೋಹಿ ಹಾಗೂ ಜೀವವಿರೋಧಿಯಾದಂಥದ್ದು; ಆದುದರಿಂದ ಕೋಮುವಾದವನ್ನು ಬೆಳೆಸುವ ಉತ್ತೇಜಿಸುವ ಬೆಂಬಲಿಸುವ ಕೆಲಸವನ್ನು ಪ್ರಗತಿಪರ ಶಕ್ತಿಗಳು ಮಾಡಕೂಡದು” ಎಂಬ ಸತ್ಯವನ್ನು ಒಪ್ಪುವುದಿಲ್ಲ? ನಾಡಿನ ಪ್ರಜ್ಞಾವಂತ ಯುವಜನತೆಯಾದ ನಿಮ್ಮಲ್ಲೇ ಕೋಮುವಾದದ ಅಪಾಯದ ಬಗ್ಗೆ ಏಕಮತವಿಲ್ಲ! ಇನ್ನು ನಿಮ್ಮಿಂದ ಕೋಮುವಾದಕ್ಕೆ ಮದ್ದನ್ನು ನಿರೀಕ್ಷಿಸಲು ಸಾಧ್ಯವೇ? ಕೋಮುವಾದದ ಬಗ್ಗೆ ಮೃದು ಒಲವು ಇರುವ ನಿಮ್ಮಂತಹವರನ್ನೇ ಕೋಮುವಾದಿಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವುದು. ನಾವೆಲ್ಲರೂ ಸೇರಿ ಎಲ್ಲಾ ಬಗೆಯ ಕೋಮುವಾದಗಳನ್ನೂ ಧೃಢವಾಗಿ ಪ್ರತಿರೋಧಿಸದಿದ್ದರೆ ಕೋಮುವಾದದ ಬೆಂಕಿ ಈ ನಾಡನ್ನೇ ಸುಟ್ಟು ಭಸ್ಮ ಮಾಡುತ್ತದೆ. ಸುಡುವ ಬೆಂಕಿಯು ಮತ/ಧರ್ಮದ ಆಧಾರದ ಮೇಲೆ ರಿಯಾಯತಿ ಕೊಡುವುದಿಲ್ಲ. ಇನ್ನಾದರೂ ಬದಲಾಗಿ.

      Reply

Leave a Reply

Your email address will not be published. Required fields are marked *