Daily Archives: December 17, 2014

ಅಭದ್ರತೆಯಿಂದ ಸೃಷ್ಟಿಯಾದ ಮುಸ್ಲಿಮ್ ಪ್ರತಿರೋಧ ಹಾಗೂ ಮುಸ್ಲಿಮ್ ಮೂಲಭೂತವಾದ


-ಇರ್ಷಾದ್ ಉಪ್ಪಿನಂಗಡಿ


 

ಮಂಗಳೂರಿನಲ್ಲಿ ಅಭಿಮತ ಸಂಘಟನೆಯ ವತಿಯಿಂದ ನಡೆದ ಜನನುಡಿ ಸಾಹಿತ್ಯ ಸಮಾವೇಶದಲ್ಲಿ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು “ಸಮಕಾಲಿನ ಸವಾಲುಗಳು ಹಾಗೂ ಐಕ್ಯತೆಯ ಅಗತ್ಯತೆ” ವಿಚಾರಗೋಷ್ಠಿಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ “ಬಹುಸಂಖ್ಯಾತರೆಂಬ ಅಹಮ್ಮಿನಿಂದ ಹಿಂದೂ ಕೋಮುವಾದ ಸೃಷ್ಟಿಯಾದರೆ ಮುಸ್ಲಿಮ್ dinesh-amin-umapathiಕೋಮುವಾದ ಅಭದ್ರತೆಯಿಂದ ಸೃಷ್ಟಿಯಾಗಿದೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ದಿನೇಶ್ ಅಮೀನ್ ಮಟ್ಟು ಅವರ ಈ ಅಭಿಪ್ರಾಯವನ್ನು ಕರಾವಳಿ ಭಾಗದ ಒಬ್ಬ ಮುಸಲ್ಮಾನನಾಗಿ, ಸಂಘಪರಿವಾರದ ಮಿತಿಮೀರಿದ ಕೋಮುವಾದಿಗಳಿಂದ ಕರಾವಳಿ ಭಾಗದ ಮುಸ್ಲಿಮರು ಎದುರಿಸಿದ ಹಾಗೂ ಎದುರಿಸುತ್ತಿರುವ ಅನ್ಯಾಯ, ಆತಂಕ, ಅಪಾಯದ ತಕ್ಕಮಟ್ಟಿನ ಅರಿವಿದ್ದುಕೊಂಡು ಹೇಳೋದಾದರೆ ದಿನೇಶ್ ಅಮೀನ್ ಮಟ್ಟು ಅವರ ಮಾತನ್ನು ಒಂದು ದೃಷ್ಟಿಕೋನದಲ್ಲಿ ನಾನು ಒಪ್ಪಿಕೊಳ್ಳುತ್ತೇನೆ. ಬಹುಸಂಖ್ಯಾತ ಸಂಘಪರಿವಾರದ ವ್ಯವಸ್ಥಿತ ಷಡ್ಯಂತರದ ಭಾಗವಾಗಿ ನಡೆದ ಬಾಬರೀ ಮಸೀದಿ ಧ್ವಂಸದ ನಂತರದ ದಿನಗಳಲ್ಲಿ ದೇಶದ ಅಲ್ಪಸಂಖ್ಯಾತರಾಗಿರುವ ಮುಸ್ಲಿಮ್ ಸಮುದಾಯದಲ್ಲಿ ಅಭದ್ರತಾ ಭಾವನೆ ಹೆಚ್ಚಾಗತೊಡಗಿದ್ದಂತೂ ನಿಜ. ಇದರ ನಂತರ 2002 ರಲ್ಲಿ ಗುಜರಾತ್ ಗಲಭೆಯಲ್ಲಿ ನಡೆದ ನರ ಹತ್ಯೆ, ಮುಸ್ಲಿಮರ ಮಾರಣ ಹೋಮ ದೇಶದ ಮುಸ್ಲಿಮ್ ಸಮಾಜವನ್ನು ಮತ್ತಷ್ಟು ಅಭದ್ರತೆ, ಆಂತಕಕ್ಕೆ ದೂಡಲು ಕಾರಣವಾಯಿತು.

ನಾನು ವಿದ್ಯಾರ್ಥಿಯಾಗಿದ್ದಾಗ ನಾನು ಸೇರಿದಂತೆ ನಮ್ಮ ಮುಸ್ಲಿಮ್ ಗೆಳೆಯರು ಕಾಲೇಜು ಕ್ಯಾಂಪಸ್ ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಭಯದಿಂದಲೇ ನಡೆದಾಡುತ್ತಿದ್ದೆವು. ಕೈಗೆ ಕೆಂಪು ನೂಲು ಕಟ್ಟಿ ಹಣೆಗೆ ಉದ್ದನೆಯ ನಾಮ ಹಾಕಿದವರನ್ನು ಕಂಡರೆ ನಮಗೆ ಭಯ ಆಗುತ್ತಿತ್ತು. ಆ ಸಂದರ್ಭಗಳಲ್ಲಿ ನಾವು ಮುಸ್ಲಿಮರಲ್ಲೂ ತಮ್ಮ ಆತ್ಮರಕ್ಷಣೆಗಾಗಿ ಯಾವುದಾದರೂ ಸಂಘಟನೆ ಬರಲಿ ಎಂದು ಮಾತನಾಡುಕೊಳ್ಳುತ್ತಿದ್ದೆವು. inidan-muslim-womanಇದು ನಾನೂ ಒಳಗೊಂಡತೆ ಕರಾವಳಿ ಭಾಗದ ಸಾಕಷ್ಟು ಯುವ ಮನಸ್ಸುಗಳ ನಿರೀಕ್ಷೆಯಾಗಿತ್ತು. ಈ ಆತಂಕದ ನಡುವೆಯೂ ಕರಾವಳಿ ಭಾಗದ ಬಹುತೇಕ ಯುವಕರು ಕೋಮುವಾದಿಗಳಾಗಿರಲಿಲ್ಲ. ಧಾರ್ಮಿಕತೆಯೂ ಈ ಯುವಕರಲ್ಲಿ ಇರಲಿಲ್ಲ. ಇವರೆಲ್ಲಾ ಮಸೀದಿಯ ಕಡೆ ಮುಖಮಾಡುತಿರುತ್ತಿದ್ದುದೇ ಅಪರೂಪಕ್ಕೊಮ್ಮೆ. ಸುಮಾರು ಹತ್ತು ವರ್ಷಗಳ ಹಿಂದೆ ಮಸೀದಿಗೆ ಪ್ರತಿನಿತ್ಯ ಆಜಾನ್ ಕರೆ ಆಗುವಾಗ ಯಾರಾದರೂ ಯುವಕ ಮಸೀದಿಗೆ ನಮಾಜ್ ಮಾಡಲೆಂದು ಹೋಗುತ್ತಿದ್ದರೆ ಆತನನ್ನು ಆತನ ಇತರ ಸ್ನೇಹಿತರು ಗೇಲಿ ಮಾಡುತ್ತಿದ್ದದ್ದನ್ನೂ ನಾನು ಕಣ್ಣಾರೆ ಕಂಡಿದ್ದೆ. ಆದರೆ ಬರಬರುತ್ತಾ ಈ ಚಿತ್ರಣ ಬದಲಾಗತೊಡಗಿದ್ದನ್ನು ಸೂಕ್ಷವಾಗಿ ಗಮನಿಸುತ್ತಾ ಹೋದಾಗ, ಮಸೀದಿಗೆ ಹೋಗುತ್ತಿರುವ ಆ ಯುವಕನನ್ನು ತಮಾಷೆ ಮಾಡುತ್ತಿದ್ದ ಆತನ ಮುಸ್ಲಿಮ್ ಸ್ನೇಹಿತರು ಪ್ರತಿನಿತ್ಯ ಬೆಳಿಗ್ಗೆ 5 ಘಂಟೆಗೆ ಎದ್ದು ಮಸೀದಿಯ ಮುಂಜಾನೆಯ ನಮಾಜ್‌ಗೆ ಸರದಿಯ ಮುಂದಿನ ಸಾಲಲ್ಲಿ ನಿಂತು ನಮಾಜ್ ಮಾಡತೊಡಗಿದರು. ದೇವರು, ಧರ್ಮ, ಆಚಾರ ವಿಚಾರ, ಮುಸ್ಲಿಮ್ ಸಮುದಾಯದ ಪರಿಸ್ಥಿತಿ ಇಂಥಹಾ ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳತೊಡಗಿದರು. ಯಾವತ್ತೂ ಗೆಳೆಯರು ಸೇರಿಕೊಂಡು ಇನ್ನಿತರ ವಿಚಾರಗಳ ಕುರಿತಾಗಿ ಹರಟೆ ಹೊಡೆಯುತ್ತಿದ್ದರೆ ನಂತರದ ದಿನಗಳಲ್ಲಿ ಅಲ್ಲಿ ಅನ್ಯಾಯಕ್ಕೆ ಪ್ರತಿಯಾಗಿ ಪ್ರತಿಕಾರ, ಅದಕ್ಕಾಗಿ ತಮ್ಮಲ್ಲಿ ಆಗಬೇಕಾದ ಧಾರ್ಮಿಕ ಬದಲಾವಣೆ ಈ ವಿಚಾರಗಳ ಕುರಿತಾಗಿ ಮಾತನಾಡಗೊಡಗಿದರು. ಇಂಥಹಾ ಬದಲಾವಣೆ ಕಾರಣ ಏನೆಂದು ಆತನಲ್ಲಿ ಕೇಳಿದರೆ ಆತನ ಈ ಬದಲಾವಣೆಗೆ ಕಾರಣ ಹಿಂದೂ ಕೋಮುವಾದದ ಹೊಡೆತ. ಸಂಘಪರಿವಾರದ ಆತಂಕ, ಭಯ. ಅಲ್ಪಸಂಖ್ಯಾತನಾಗಿ ತನ್ನ ಮೇಲೆ ಒಂದಲ್ಲಾ ಒಂದು ಕಾರಣದಿಂದ ನನ್ನ ಮೇಲೆ ಸಂಘಪರಿವಾರದಿಂದ ಅನ್ಯಾಯದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ದೌರ್ಜನ್ಯವಾಗಬಹುದು ಎಂಬ ಆತಂಕ ಹಾಗೂ ಅಭದ್ರತೆಯ ಭಾವನೆ. ಪರಿಣಾಮ ಇದು ಸಿಮಿ , ಕೆ.ಎಫ್.ಡಿ ಅಥವಾ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಂತಹಾ ಮುಸ್ಲಿಮ್ ಪ್ರತಿರೋಧಿ ಮೂಲಭೂತವಾದಿ ಗುಂಪುಗಳ ಹುಟ್ಟಿಗೆ ಕಾರಣವಾಗಿರುವುದು ಗಮನಾರ್ಹ ಅಂಶ.

ಇಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಹೇಳಿದಂತೆ ಅಭದ್ರತೆ ಮುಸ್ಲಿಮ್ ಸಮಾಜದಲ್ಲಿ ಮೂಲಭೂತವಾದದ ಹುಟ್ಟಿಗೆ ಕಾರಣವಾಯಿತು ನಿಜ. ಆದರೆ ಭಾರತದಲ್ಲಿ ಮುಸ್ಲಿಮ್ ಸಮಾಜದಲ್ಲಿರುವ ಅಭದ್ರತೆ ಕೇವಲ ಪ್ರತಿರೋಧದ ಮೂಲಭೂತವಾದದ ಹುಟ್ಟಿಗೆ ಕಾರಣವಾಯಿತೇ ಹೊರತು ಮುಸ್ಲಿಮ್ ಸಮಾಜದಲ್ಲಿರುವ ಅಘೋಷಿತ ಮೂಲಭೂತವಾದದ ಹುಟ್ಟಿಗೆ ಕಾರಣವಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವುದು jamat-mangaloreಕ್ರಿಯೆಗೆ ಪ್ರತಿಕೃಯೆ ಕೊಡುವಂತಹಾ ಮೂಲಭೂತವಾದಿಗಳಿಗಿಂತ ಅಪಾಯಕಾರಿಯಾಗಿರುವುದು ನೂತನವಾದಿಗಳ ರೂಪದಲ್ಲಿ ಮುಸ್ಲಿಮ್ ಸಮಾಜದಲ್ಲಿ ಪರಿಪೂರ್ಣ ಇಸ್ಲಾಮ್ ಜಾರಿಗೆ ತರಲು ಕೆಲಸ ಮಾಡುತ್ತಿರುವಂತಹಾ ಮೂಲಭೂತವಾದ. ಭಾರತದಲ್ಲಿ ಸಂಘಪರಿವಾರ ಇಲ್ಲಿಯ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಸುವಂತಹಾ ದಾಳಿಯನ್ನು ಎದುರಿಸಲು ಹುಟ್ಟಿದಂತಹಾ ಸಂಘಟನೆಗಳ ಪ್ರತಿರೋಧದ ಮನಸ್ಥಿತಿಗಿಂತ ಅಪಾಯಕಾರಿಯಾಗಿರುವುದು ಪೂರ್ಣ ಇಸ್ಲಾಮ್ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿರುವ, ಶರಿಯಾ ಕಾನೂನು ಪ್ರಪಂಚದಾಧ್ಯಂತ ಜಾರಿಯಾಗಬೇಕೆಂದು ಬಯಸುವ ಅಂತರಾಷ್ಷ್ರೀಯ ಮಟ್ಟದಲ್ಲಿ ಮುಸ್ಲಿಮ್ ಸಹೋದರತ್ವಕ್ಕೆ ಒತ್ತು ನೀಡುವ ವಹಾಬಿಸಂ, ಜಮಾತೇ ಇಸ್ಲಾಮೀ, ಅಹ್ಲೇ ಹದೀಸ್, ತಬ್ಲೀಗ್ ಜಮಾತ್ ನಂತಹಾ ಮೂಲಭೂತವಾದಿ ಮನಸ್ಥಿತಿ.

1950 ರಲ್ಲಿ ಹುಟ್ಟಿದ ಮೌದೂದಿ ಚಿಂತನೆಯ ಜಮಾತೇ ಇಸ್ಲಾಮಿ ಚಳುವಳಿಯನ್ನು ಸುಮಾರು ಹದಿನೈದು ವರ್ಷಗಳ ವರ್ಷಗಳ ಹಿಂದಿನ ವರೆಗೂ ಮುಸ್ಲಿಮ್ ಸಮಾಜ ಒಪ್ಪಿಕೊಂಡಿರಲಿಲ್ಲ. ಮುಸ್ಲಿಮ್ ಸಮಾಜದ ಜನರು ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದ ಧಾರ್ಮಿಕ ಆಚರಣೆಯಲ್ಲಿ ಪ್ರಾದೇಶಿಕ ಸಂಸ್ಕೃತಿಯ ಮಿಲನವಿತ್ತು. ಇಸ್ಲಾಮ್ ಹಾಗೂ ಇತರ ಧರ್ಮಗಳ ನಡುವಿನ ಸೌಹಾರ್ದದ ಕೊಂಡಿಯಂತಿದ್ದ ದರ್ಗಾ ಸಂಸ್ಕೃತಿಯ ಪರ ಒಲವು ಮುಸ್ಲಿಮ್ ಸಮಾಜದಲ್ಲಿ ಹೇರಳವಾಗಿತ್ತು. ತಮ್ಮದೇ ಆದ ರೀತಿಯಲ್ಲಿ ಅವರು ಧರ್ಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಮುಸ್ಲಿಮ್ ಸಮಾಜದಲ್ಲಿ ಬೇರೂರಲು ಪ್ರಯತ್ನಿಸುತ್ತಿದ್ದ ಜಮಾತೇ ಇಸ್ಲಾಮೀ ಮೂಲಭೂತವಾದಿಗಳು ಮುಸ್ಲಿಮ್ ಸಮಾಜಕ್ಕೆ ಅಸ್ಪೃಶ್ಯರಂತಿದ್ದರು. ಯಾಕೆಂದರೆ ಜಮಾತ್ ದರ್ಗಾಸಂಸ್ಕೃತಿಯನ್ನು ಒಪ್ಪುತ್ತಿರಲಿಲ್ಲ. ಕಾರಣ ಅದು ಪರಿಪೂರ್ಣ ಇಸ್ಲಾಮ್ ಮಾದರಿ ಅಲ್ಲ ಎಂಬ ವಾದವನ್ನು ಮಾಡುತ್ತಿದ್ದರು. ಹಿಂದೂ-ಮುಸ್ಲಿಮ್ ಜೊತೆಗೂಡುವಿಕೆಗೆ ಕಾರಣವಾದ ದರ್ಗಾ ಸಂಸ್ಕೃತಿಯ ಸೌಹಾರ್ದತೆ ನಿಜವಾದ ಸೌಹಾರ್ದತೆ ಅಲ್ಲ ಎಂಬುವುದಾಗಿದೆ ಜಮಾತ್ ವಾದ. ಭಾರತೀಯ ಮುಸ್ಲಿಮರು ಅನುಸರಿಸುತ್ತಾ ಬಂದಿರುವ ಧಾರ್ಮಿಕತೆಯನ್ನು ಜಮಾತ್ ಒಪ್ಪುತ್ತಿರಲಿಲ್ಲ. ಅದಕ್ಕೆ ಬದಲಾಗಿ ಮೌದೂದಿ ಸಿದ್ದಾಂತದ ಇಸ್ಲಾಮ್ ಮಾತ್ರ ನಿಜವಾದ ಇಸ್ಲಾಮ್ ಎಂಬ ವಾದ ಇವರದ್ದಾಗಿತ್ತು. ಇವರು ಶರೀಯಾ ಕಾನೂನೇ ಎಲ್ಲದಕ್ಕೂ ಪರಿಹಾರ ಎನ್ನುವವರು. ಪ್ರಪಂಚದಲ್ಲಿ ಸಂಪೂರ್ಣ ಪರಿಪೂರ್ಣ ಇಸ್ಲಾಮ್ ಧರ್ಮ ನೆಲೆಗೊಳ್ಳಬೇಕು ಎಂದು ಬಯಸುವವರು. ಸಂಘಪರಿವಾರ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಾ ಬಂದಂತಹಾ ಸಂಧರ್ಭದಲ್ಲೂ ಅದಕ್ಕೆ ಪ್ರತಿರೋಧದ ಬದಲಾಗಿ ಸಂಘಪರಿವಾರದ ಜನರಿಗೆ ಇಸ್ಲಾಮ್ ಭೋಧನೆ ಮಾಡಿ ಅವರನ್ನು ಮುಸ್ಲಿಮ್ ಆಗಿ jamatಪರಿವರ್ತನೆ ಮಾಡಬೇಕು ಎಂಬ ವಾದವನ್ನು ಮಂಡಿಸುವವರು. ಈ ರೀತಿಯ ಮೂಲಭೂತವಾದಿ ಹಿನ್ನೆಲೆ ಹೊಂದಿರುವ ಜಮಾತೇ ಇಸ್ಲಾಮೀ ಯಂತಹಾ ಸಂಘಟನೆ ಸಂಘಪರಿವಾರ ಸಾಮಾನ್ಯ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಿದಾಗ ಅವರ ಪರವಾಗಿ ನಿಲ್ಲುತ್ತಿರಲಿಲ್ಲ. ಜೊತೆಗೆ ಇಂಥಹಾ ಸಂದರ್ಭದಲ್ಲಿ ಅಸಂಘಟಿತ ಮುಸ್ಲಿಮರು ತೋರಿಸುತ್ತಿದ್ದ ಪ್ರತಿರೋಧವನ್ನೂ ಒಪ್ಪುತ್ತಿರಲಿಲ್ಲ. ಬದಲಾಗಿ ಸಂಘಪರಿವಾರದ ದೌರ್ಜನ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸುವುದರ ಬದಲಾಗಿ ಮುಸ್ಲಿಮರು ಧಾರ್ಮಿಕವಾಗಿ ಪೂರ್ಣ ಪ್ರಮಾಣದ ಇಸ್ಲಾಮ್ ಒಪ್ಪಿಕೊಳ್ಳಬೇಕು ಎಂಬ ನಿಲುವನ್ನು ಹೊಂದಿದೆ.

ಇವರ ಕಾರ್ಯಕ್ರಮಗಳಿಗೆ ಪ್ರಖರ ಹಿಂದುತ್ವವಾದಿಗಳನ್ನೂ ಆಹ್ವಾನಿಸುತ್ತಾರೆ. ಪೇಜಾವರ ಸ್ವಾಮಿಯಂತಹಾ ಬ್ರಾಹ್ಮಣ್ಯತೆಯ ಪ್ರತಿಪಾದಕರನ್ನೂ ಆಹ್ವಾನಿಸುತ್ತಾರೆ. ದೇವರು, ಧರ್ಮದಲ್ಲಿ ಹೆಚ್ಚಾಗಿ ನಂಬಿಕೆ ಇಡದಂತಹಾ, ಹಿಂದುತ್ವ ವಿಚಾರಧಾರೆಗಳಿಗೆ ವಿರೋಧಿಯಾಗಿರುವಂತಹಾ ಪ್ರಗತಿಪರ ಚಿಂತಕರನ್ನೂ ಹಾಗೂ ಇನ್ನಿತರ ಎಡಪಂಥೀಯ ಚಿಂತಕರನ್ನೂ ಆಹ್ವಾನಿಸುತ್ತಾರೆ. ಇವರ ಈ ಆಹ್ವಾನದ ಹಿಂದಿನ ಉದ್ದೇಶ ಒಂದು ತಮ್ಮ ಮೌದೂದಿ ಸಿದ್ದಾಂತದ ಪ್ರಚಾರವಾದರೆ ಇನ್ನೊಂದೆಡೆಯಲ್ಲಿ ತಮ್ಮ ಮೂಲ ಸಿದ್ದಾಂತವನ್ನು ಮರೆಮಾಚುವುದಾಗಿದೆ. ಸ್ವತಹಃ ಶರಿಯಾ ಆಧಾರಿತ ಇಸ್ಲಾಮ್ ರಾಷ್ಟ್ರ ನಿರ್ಮಾಣದ ಒಳ ಅಜೆಂಡಾವನ್ನು ಮರೆಮಾಚಿ ಹಿಂದುತ್ವವಾದಿಗಳ ದಾಳಿಗೆ ಪ್ರತಿರೋಧಿಯಾಗಿ ಹುಟ್ಟಿಕೊಂಡಿರುವ ಮುಸ್ಲಿಮ್ ಸಂಘಟನೆಗಳನ್ನು ಮೂಲಭೂತವಾದಿ ಸಂಘಟನೆಗಳಂತ್ತೆ ಚಿತ್ರಿಸಿ devanurತಾನು ಮುಸ್ಲಿಮ್ ಸಮಾಜದ ಸಾಮಾಜಿಕ ಪರಿವರ್ತನೆಗೆ ಹುಟ್ಟಿಕೊಂಡ ಸಂಘಟನೆ ಎಂದು ಬಿಂಬಿಸಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದೆ. ಈ ಒಳಮರ್ಮವನ್ನು ಅರಿತ ಹಿರಿಯ ಸಾಹಿತಿ ದೇವನೂರು ಮಹಾದೇವ ’ಜಮಾತ್ ಮುಸ್ಲಿಮರ ಆರ್.ಎಸ್.ಎಸ್’ ಎಂದು ಕರೆದಿದ್ದರು. ಆರ್.ಎಸ್.ಎಸ್ ಸಂಘಟನೆ ಹೇಗೆ ಹಿಂದುತ್ವದ ಹೆಸರಲ್ಲಿ ಮನುಸ್ಮೃತಿ ಆಧಾರಿತ ಬ್ರಾಹ್ಮಣ್ಯ ಸಮಾಜವನ್ನು ಕಟ್ಟ ಹೊರಟಿದೆಯೋ ಅದೇ ರೀತಿಯಲ್ಲಿ ಜಮಾತ್ ನಂತಹಾ ಮೂಲಭೂತವಾದಿಗಳು ಮಾಡಹೊರಟಿರುವುದು ಅದನ್ನೇ. ಅದಕ್ಕಾಗಿ ಬಾಂಗ್ಲಾ ಮಾದರಿಯಲ್ಲಿ ಅಗತ್ಯ ಸಂಧರ್ಭದಲ್ಲಿ ಶಶ್ತ್ರಾಸ್ತವನ್ನೂ ಬಳಸಿಕೊಂಡು ತನ್ನ ಉದ್ದೇಶ ಈಡೇರಿಸುತ್ತದೆ ಎಂಬುವುದೇ ಅಪಾಯಕಾರಿ.

ಇದೇ ಮಾದರಿಯಲ್ಲಿ ಅಹ್ಲೇ ಅದೀಸ್, ಸಲಫೀ, ತಬ್ಲೀಗ್ ಜಮಾತ್ ನಂತಹಾ ಮೂಲಭೂತವಾದಿಗಳು ಕೆಲಸ ಮಾಡುತ್ತಿದ್ದಾರೆ. ನಾನು ಈ ಹಿಂದೆ ಬೆಂಗಳೂರಿನಲ್ಲಿದ್ದ ಸಂದರ್ಭದಲ್ಲಿ ನನ್ನ ಸ್ನೇಹಿತರಾದ ಸಲಫಿ ಮಿತ್ರರ ವರ್ತನೆಯನ್ನು ಗಮನಿಸುತ್ತಿದ್ದಾಗ ಅಲ್ಲಿ ನನಗೆ ಮತ್ತೊಂದು ಮೂಲಭೂತವಾದದ ಅರಿವಾಯಿತು. ಕರಾವಳಿಯ ಕೋಮುಗಲಭೆಗಳ ಕುರಿತಾಗಿ ನಾವು ಚರ್ಚೆ ಮಾಡುತ್ತಿದ್ದಾಗ ಅವರೆಲ್ಲಾ ಇಲ್ಲಿ ಹುಟ್ಟಿಕೊಂಡಿರುವ ಮುಸ್ಲಿಮ್ ಪ್ರತಿರೋಧವನ್ನು ಖಂಡಾತುಂಡವಾಗಿ ವಿರೋಧಿಸುತ್ತಿದ್ದರು. ಈ ರೀತಿಯ ಪ್ರತಿರೋಧವೇ ಪ್ರಪಂಚಕ್ಕೆ ಇಸ್ಲಾಮ್ ಪ್ರಚಾರಕ್ಕೆ ತಡೆಯೆಂಬುವುದು ಅವರ ವಾದವಾಗಿತ್ತು. ಆದರೆ ಇವರೂ ಪೂರ್ಣ ಪ್ರಮಾಣದ ಇಸ್ಲಾಮ್ ಜಾರಿಗೆ ಬರಬೇಕು ಎಂಬ ನಿಲುವುಳ್ಳವರಾಗಿದ್ದರು. ಪ್ರತಿಯೊಬ್ಬ ಮುಸ್ಲಿಮನಲ್ಲಿ jamate-mangaloreಅವರ ನಿಲುವಿನ ವಹಾಬಿ ಇಸ್ಲಾಮಿನ ಪ್ರತಿರೂಪ ಕಾಣಬೇಕೆಂದು ಬಯಸುವವರಾಗಿದ್ದರು. ತಮ್ಮ ಮುಂದೆ ಮಾತನಾಡಲು ಸಿಕ್ಕ ಹಿಂದೂ ಅಥವಾ ಇತರ ಧರ್ಮೀಯರಿಗೆ ಅಬ್ಬಬ್ಬಾ ಎನ್ನುವಷ್ಟು ವಹಾಬಿಸಂ ಪ್ರಭಾವಿತ ಇಸ್ಲಾಮ್ ಧರ್ಮದ ಕುರಿತಾಗಿ ಭೋಧನೆ ಮಾಡಿ ಅವರ ಮನಪರಿವರ್ತನೆ ಮಾಡಲು ಪ್ರಯತ್ನಿಸುವ ಇವರು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ತಮ್ಮ ತಮ್ಮ ಕಚೇರಿಗಳಲ್ಲಿ ನೀಡುತ್ತಿದ್ದ ಸಿಹಿತಿಂಡಿ ಪೊಟ್ಟಣಗಳನ್ನೂ ಸ್ವೀಕಾರ ಮಾಡುತ್ತಿರಲಿಲ್ಲ. ಕಾರಣ ಮೂರ್ತಿ ಪೂಜಾ ಆರಾಧಕರ ಹಬ್ಬಗಳಿಗೆ ಶುಭಾಶಯವನ್ನು ಕೋರುವುದು ಹಬ್ಬದ ಉಡುಗೊರೆಗಳನ್ನು ಪಡೆದುಕೊಳ್ಳುವುದು ಶಿರ್ಕ್ (ಅಧಾರ್ಮಿಕ) ಎಂಬ ಕಾರಣಕ್ಕಾಗಿ. ಇಷ್ಟೇ ಅಲ್ಲ ಈ ಮೂಲಭೂತವಾದಿಗಳು ದರ್ಗಾ ಸಂಸ್ಕತಿಯನ್ನು ಕಟುವಾಗಿ ವಿರೋಧಿಸುತ್ತಾರೆ. ಕಾರಣ ಅಲ್ಲಿ ಧಾರ್ಮಿಕ ಆಚರಣೆಯಲ್ಲಿ ಎಲ್ಲಾ ಧರ್ಮಗಳ ಸಹಭಾಗಿತ್ವ ಇದೆ ಹಾಗೂ ಇತರ ಧರ್ಮಗಳ ಧಾರ್ಮಿಕ ಆಚರಣೆಯ ಪ್ರಭಾವವಿದೆ ಎಂಬುವುದಕ್ಕಾಗಿ. ಈ ಕಾರಣದಿಂದಲೇ ಬಾಬಾ ಬುಡನ್ ಗಿರಿ ವಿವಾದದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ನಿಲುವಿಗೆ ಸಲಫಿವಾದಿಗಳ ಬೆಂಬಲವಾಗಿತ್ತು. ಈ ಮೂಲಭೂತವಾದಿಗಳ ಅನುಯಾಯಿಗಳ ಕೆಲವೊಂದು ನಿಲುವುಗಳನ್ನು ನೋಡಿದರೆ ನಿಮಗೂ ಆಶ್ವರ್ಯವಾಗಬಹುದು. ಸಾಮಾನ್ಯ ಮುಸ್ಲಿಮರನ್ನು ಇಸ್ಲಾಮ್ ಅನುಯಾಯಿಗಳು ಎಂದು ಈ ಮೂಲಭೂತವಾದಿಗಳು ಒಪ್ಪುವುದಿಲ್ಲ. ಇವರ ಪ್ರಕಾರ ಸಾಮಾನ್ಯ ರೀತಿಯಲ್ಲಿ ಧರ್ಮಾಚರಣೆ ಮಾಡುವ ಮುಸ್ಲಿಮರು ಕಾಫಿರ್ ಗಳೆಂದು ಅವರನ್ನು ಮರಳಿ ಪೂರ್ಣ ಇಸ್ಲಾಮ್ ಗೆ ಕರೆತರಬೇಕೆಂಬ ವಾದವನ್ನು ಮಾಡುತ್ತಾರೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಸಲಫಿ ಮುಖಂಡರೊಬ್ಬರು ಸಲಫಿ ವಿಚಾರಗಳ ಕುರಿತಾದ ಚರ್ಚೆಯ ಸಂದರ್ಭದಲ್ಲಿ ತನ್ನ ಹೆತ್ತವರನ್ನೇ ’ಕಾಫಿರ್ ಆಗಿ ಮೃತಪಟ್ಟರು’ ಎಂದು ಅಭಿಪ್ರಾಯಪಟ್ಟಿದ್ದರು. ಯಾಕೆಂದರೆ ಅವರು ಸಾಯುವ ಮೊದಲು ಪೂರ್ಣ ಇಸ್ಲಾಮ್ ಅಡಿಸ್ಥಾನದಲ್ಲಿ ಧರ್ಮಾಚರಣೆ ಮಾಡಿಲ್ಲ ಎಂಬ ಕಾರಣಕ್ಕಾಗಿ. ಇದರ ಜೊತೆಗೆ ಸಲಫಿ ವಾದಿಗಳು ಅಂತರಾಷ್ಟ್ರೀಯ ಮುಸ್ಲಿಮ್ ಸಹೋದರತೆಯಲ್ಲಿ ಒಲವನ್ನು ಹೊಂದಿದವರು ಬಹುತ್ವದ ಪ್ರತೀಕವಾಗಿರುವ ದರ್ಗಾಗಳನ್ನು ಒಡೆದು ಹಾಕಬೇಕೆಂದೂ ಹೇಳುವ ಇವರು ಸೂಫಿ ಚಿಂತನೆಯ ಕಟುವಿರೋಧಿಗಳು. PFI-eventಈ ಮೂಲಭೂತವಾದಿಗಳ ಆಗಮನದ ನಂತರವೇ ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾ ಧರಿಸುವ ಮಾದರಿಯಲ್ಲಿ ಇನ್ನಷ್ಟು ಬಿಗಿ ಬದಲಾವಣೆಗಳು ಬಂದವು. ಮನೆಗಳಲ್ಲಿ ಟಿವಿ ನೋಡುವುದು ಕೂಡಾ ಧರ್ಮವಿರೋಧಿ ಎಂಬ ವಾದವನ್ನು ಮಂಡಿಸುವ ಸಲಫೀ ಅನುಯಾಯಿಗಳಿದ್ದಾರೆ. ಇವರಂತೆಯೇ ತಬ್ಲೀಗ್ ಜಮಾತ್ ವಹಾಬಿ ಚಳುವಳಿಗಳ ಜೊತೆಗೆ ಗುರುತಿಸಿಕೊಂಡಿರುವ ಇನ್ನಿತರ ಮೂಲಭೂತವಾದಿಗಳು ಹೆಡೆಯೆತ್ತದೆ ಮಲಗಿರುವ ಹಾವುಗಳು. ತಮ್ಮನ್ನು ನೂತನವಾದಿಗಳು, ಆಧುನಿಕವಾದಿಗಳಂತೆ ಬಿಂಬಿಸುತ್ತಾ ಸಮಾಜದಲ್ಲಿ ಸೌಮ್ಯವಾದಿಗಳಂತೆ, ಮುಸ್ಲಿಮ್ ಸಮಾಜದ ಸುಧಾರಕರೆಂದು ಬಿಂಬಿತರಾಗುತ್ತಿದ್ದಾರೆ. ಈ ಪೂರ್ಣ ಪ್ರಮಾಣದ ಇಸ್ಲಾಮ್ ವಹಾಬಿಸಂ ಇಸ್ಲಾಮ್ ಸಮಾಜದೊಳಗಡೆ ನುಸುಳಿಸಿದ ನಂತರವೇ ಇಸ್ಲಾಮ್ ರಾಷ್ಷ್ರಗಳಲ್ಲಿ ಅಂತರಾಷ್ಷ್ರೀಯ ಸಹೋದರತ್ವ ಅಂಜೆಡಾವನ್ನು ಹೊಂದಿರುವ ಇಸ್ಲಾಮಿಕ್ ಭಯೋತ್ಪಾದನೆ ಹುಟ್ಟಿಗೆ ಕಾರಣವಾಯಿತು.

ಬಹುಸಂಖ್ಯಾತ ಕೋಮುವಾದದ ದಾಳಿಯ ವಿರುದ್ಧ ಸಂಘಟಿತವಾದಂತಹಾ ಭಾರತೀಯ ಅಲ್ಪಸಂಖ್ಯಾತರ ಪ್ರತಿರೋಧ, ಇಸ್ರೇಲಿ ದೌರ್ಜನ್ಯದ ವಿರುದ್ಧ ನಡೆಯುತ್ತಿರುವ ಹಮಾಸ್ ಹೋರಾಟ, ಅಮೇರಿಕಾ ಸಾಮ್ರಾಜ್ಯಶಾಹಿಗಳ ಯುದ್ದ ನೀತಿಯ ವಿರುದ್ಧದ ಇರಾಕಿನ ಕೆಲ ಗುಂಪುಗಳ ಪ್ರತಿರೋಧಕ್ಕೂ, ಪಾಕಿಸ್ಥಾನ, ಬಾಂಗ್ಲಾದೇಶ, ಸಿರಿಯಾ ಸೇರಿದಂತೆ ಕೆಲವೊಂದು ಮುಸ್ಲಿಮ್ ರಾಷ್ಷ್ರಗಳಲ್ಲಿ ಶರಿಯಾ ಆಧಾರಿತ ರಾಷ್ಟ್ರ ನಿರ್ಮಾಣ ಆಗಬೇಕು, ದೇಶದ ಆಡಳಿತ ಧಾರ್ಮಿಕತೆಯ ನೆಲೆಗಟ್ಟಿನಲ್ಲೇ ಇರಬೇಕು ಎಂದು ಶಶ್ತ್ರಾಸ್ತ್ರ ಎತ್ತಿ ರಕ್ತ ಹರಿಸುವ ಮೂತಭೂತವಾದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಈ ರೀತಿಯ ಮೂಲಭೂತವಾದ ಪಾಕಿಸ್ತಾನದಂತಹಾ ಮುಸ್ಲಿಮ್ ರಾಷ್ಷ್ರದಲ್ಲಿ ಕಂದಮ್ಮಗಳನ್ನು ಕೊಂದು ರಕ್ತದೋಕುಳಿ ಹರಿಸಿದ ತಾಲಿಬಾನ್ ಭಯೋತ್ಪಾದಕರನ್ನು ಹುಟ್ಟುಹಾಕುತ್ತದೆ. ಈ ಮೂಲಭೂತವಾದ ಅಭದ್ರತೆಯಿಂದ ಸೃಷ್ಟಿಯಾದುದಲ್ಲ. ಬದಲಾಗಿ ಜನಸಾಮಾನ್ಯರನ್ನು Hindu Samajotsavಅಭದ್ರತೆಯತ್ತ ದೂಡುತ್ತಿದೆ. ಇನ್ನೂಂದು ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ಸಂಘಪರಿವಾರದ ಪ್ರತಿರೋಧಕ್ಕಾಗಿ ಹುಟ್ಟಿಕೊಂಡಿರುವ ಸಂಘಟನೆಗಳಲ್ಲೂ ಈ ರೀತಿಯ ವಹಾಬಿ, ಜಮಾತ್, ಅಹ್ಲೇ ಹದೀಸ್ ಸಿದ್ದಾಂತವಾದಿಗಳ ಮೂಲಭೂತವಾದ ನುಸುಳಿಕೊಂಡು ಅಲ್ಲೂ ಪ್ರತಿರೋಧದ ಸ್ವರೂಪಗಳಲ್ಲಿ ಬದಲಾವಣೆಯಾಗುತ್ತಿರುವುದನ್ನು ನಾವು ಅಂದಾಜಿಸಬಹುದಾಗಿದೆ. ಇದು ಮತ್ತಷ್ಟು ಅಪಾಯಕಾರಿ. ಭಾರತದಲ್ಲಿ ಅಭದ್ರತೆಯಿಂದ ಹುಟ್ಟಿದ ಪ್ರತಿರೋಧಿ ಮೂಲಭೂತವಾದ ಸ್ವರೂಪದಲ್ಲೂ ಬದಲಾವಣೆಯಾಗುತ್ತಿದೆ. ಸಂಘಪರಿವಾರಕ್ಕೆ ಪ್ರತಿರೋಧಿಯಾಗಿ ಹುಟ್ಟಿದ ಮೂಲಭೂತವಾದಿ ಸಂಘಟನೆ ಎನ್.ಡಿ.ಎಫ್ ಸೇರಿದವರು ಎನ್ನಲಾದ ಕಾರ್ಯಕರ್ತರು ಕೇರಳದಲ್ಲಿ ಅಧ್ಯಾಪಕನೊಬ್ಬ ಪ್ರವಾದಿ ಮುಹಮ್ಮದ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕಾಗಿ ಕೈ ಕಡಿಯುತ್ತಾರೆ (ಇದು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ನೈಜ್ಯ ಆಶಯಕ್ಕೆ ವಿರೋಧವಾದ ಕ್ರಿಯೆ.) ಹೆಣ್ಮಕ್ಕಳ ಬುರ್ಖಾ ವಿಚಾರ ಬಂದಾಗಲೂ ಈ ಮನಸ್ಥಿತಿಯ ಜನರು ಪ್ರತಿಕ್ರಿಯಿಸುವ ರೀತಿ ಅಷ್ಟೇ ತೀವ್ರವಾಗಿರುತ್ತದೆ. ಇನ್ನು ಮುಸ್ಲಿಮ್ ಪ್ರಗತಿಪರ ಚಿಂತನೆಯ ಸಾಹಿತಿಗಳಾದ ತಸ್ಲೀಮಾ ನಸ್ರೀನಾ, ಸಾರಾ ಅಬೂಬಕ್ಕರ್, ಬೊಳುವಾರು ರಂತವರನ್ನು ಇಸ್ಲಾಮ್ ವಿರೋಧಿಗಳಂತ್ತೆ ಸಮುದಾಯದೊಳಗೆ ಚಿತ್ರಿಸುತ್ತಿರುವರು ಇದೇ ಮನಸ್ಥಿತಿಯ ಮೂಲಭೂತವಾದಿಗಳು.

ಸಂಘಪರಿವಾರಕ್ಕೆ ಪ್ರತಿರೋಧ ವ್ಯಕ್ತಪಡಿಸುವುದರ ಜೊತೆಗೆ ಧರ್ಮಾಂಧತೆ ಕೂಡಾ ಈ ಮೂಲಭೂತವಾದಿಗಳಲ್ಲಿ ತೀವ್ರಗೊಳ್ಳುತ್ತಿರುವುದಕ್ಕೆ ಅಭದ್ರತೆ ಕಾರಣವಲ್ಲ ಎಂಬುವುದಂತೂ ಸ್ಪಷ್ಟ. ಈ ನಿಟ್ಟಿನಲ್ಲಿ ಮುಸ್ಲಿಮ್ ಮೂಲಭೂತವಾದವನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ನಮ್ಮ ಮುಂದಿದೆ.

ಒಟ್ಟಿನಲ್ಲಿ ಭಾರತದಲ್ಲಿ ಜನಸಾಮಾನ್ಯರು ನಂಬಿಕೆ ಇಟ್ಟುಕೊಂಡಿರುವ ಇಸ್ಲಾಮ್ ಧರ್ಮ ಯಾವತ್ತೂ ಧರ್ಮಾಂಧತೆಯ ಹಾದಿಯನ್ನು ತುಳಿದಿಲ್ಲ. ತನ್ನ ಧರ್ಮವನ್ನು ಅನುಸರಿಸುವುದರ ಜೊತೆಗೆ ಇತರ ಧರ್ಮದ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದೆ. ಇಂಥಹಾ ಸಂಧರ್ಭದಲ್ಲಿ ಸಂಘಪರಿವಾರದ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಅಟ್ಟಹಾಸವನ್ನು ಭಾರತೀಯ ಮುಸ್ಲಿಮರು ಹಾಗೂ ಇಲ್ಲಿಯ ಜ್ಯಾತ್ಯತೀತ ಶಕ್ತಿಗಳು ಒಟ್ಟಾಗಿ ಜ್ಯಾತ್ಯತೀತ ರೀತಿಯಲ್ಲಿ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಸಮಾಜ ಹಾಗೂ ಇತರ ಸಮಾಜದ ಪ್ರಗತಿಪರರು ಹಿಂದೂ ಕೋಮುವಾದವನ್ನು ಖಂಡಿಸುವುದರ ಜೊತೆಗೆ ಇಸ್ಲಾಮ್ ಸಮಾಜದೊಳಗೆ ಪರಿಪೂರ್ಣ ಇಸ್ಲಾಮ್ ಹೆಸರಲ್ಲಿ ನುಸುಳುತ್ತಿರುವ ಮೂಲಭೂತವಾದ ವಿರುದ್ಧ ಧ್ವನಿ ಎತ್ತಲೇಬೇಕಾಗ ಅಗತ್ಯ ಇದೆ.