ಉಗ್ರರಿಗೆ ಬಲಿಯಾದ ಮಕ್ಕಳಿಗೊಂದು ನಿಜವಾದ ಸಂತಾಪ!


– ಪ್ರಶಾಂತ್ ಹುಲ್ಕೋಡು


‘ಭಯವನ್ನು ಉತ್ಪಾದಿಸುವುದೇ ಭಯೋತ್ಪಾದನೆ’ ಎಂಬ ಪರಿಭಾಷೆ ಬದಲಾಗುತ್ತಿರುವ ಸಂದರ್ಭವಿದು. ಮೊನ್ನೆ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯ ಮುದ್ದು peshawar-terrorists-attack-classroomಕಂದಮ್ಮಗಳ ಮೇಲೆ ಗುಂಡು ಮತ್ತು ಬಾಂಬ್ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ತಾಲಿಬಾನ್ ಸಂಘಟನೆ (ಟಿಟಿಪಿ), ಜನರ ಭಾವನೆ ಜತೆ ಆಟ ಆಡುವ ವಿಕೃತ ರೂಪವನ್ನು ಪ್ರದರ್ಶಿಸಿದೆ. ಈ ದಾಳಿ ಜನರ ಮನಸ್ಸಿನಲ್ಲಿ ಮೂಡಿಸಿದ ಅಸಹನೆಯ ಪ್ರಮಾಣ ದೊಡ್ಡದಿದೆ. ಎಲ್ಲರ ಹೃದಯಗಳನ್ನೂ ಒಂದು ಕ್ಷಣ ತಬ್ಬಿಬ್ಬುಗೊಳಿಸಿದ್ದು 132 ಮಕ್ಕಳ ಸಾವು ಮತ್ತು ಸೈನಿಕ ಶಾಲೆಯ ಆವರಣದಲ್ಲಿ ನಡೆದ ರಕ್ತಪಾತ. ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂಬ ಮಾತುಗಳು ಈ ದಾಳಿಯ ನಂತರ ಹೆಚ್ಚು ಪ್ರಸ್ತುತತೆ ಪಡೆದುಕೊಂಡವು. ಸಾಮಾಜಿಕ ಜಾಲತಾಣದ ಕನ್ನಡ ಸಮುದಾಯ ಘಟನೆಗೆ ಸ್ಪಂದಿಸಿದ ರೀತಿ ಗಮನಿಸುವ ಹಾಗಿತ್ತು. ಮಾನ್ವಿಯ ಮಜೀಬ್‍ ಎಂಬುವವರು ಪೇಶಾವರದ ಸೈನಿಕ ಶಾಲೆಯ ದಾಳಿ ನಂತರ ಬರೆದ ‘ಫೇಸ್‍ಬುಕ್‍ ಬರಹ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಧರ್ಮದ ನೆಲೆಯನ್ನು ಮೀರಿ ಮಾನವರಾಗೋಣ ಎಂಬ ಸಂದೇಶ’ ಆ ಪೈಶಾಚಿಕ ದಾಳಿಯಲ್ಲಿ ಮಡಿದ ಮಕ್ಕಳಿಗೆ ಸಲ್ಲಿಸಿದ ಸಂತಾಪದ ಅಭಿವ್ಯಕ್ತಿಯಾಗಿತ್ತು.

ಪೇಶಾವರದ ಸೈನಿಕ ಶಾಲೆಯ ಒಳಗೆ ದಾಳಿ ನಡೆಯುತ್ತಿದ್ದ ವೇಳೆಗೆ ಜಾಗತಿಕ ಮಾಧ್ಯಮಗಳು ಹಾಗೂ ನಮ್ಮ ರಾಷ್ಟ್ರೀಯ ಸುದ್ದಿವಾಹಿನಿಗಳು ಪದೇ ಪದೇ ಟಿಟಿಪಿಯ ಟ್ವೀಟ್‍ಗಳನ್ನು ಪ್ರಸ್ತಾಪಿಸುವ ಕೆಲಸವನ್ನು ಮಾಡುತ್ತಿದ್ದವು. ಇದು 2013ರ ಸೆಪ್ಟೆಂಬರ್‍ನಲ್ಲಿ ಕೀನ್ಯಾ ರಾಜಧಾನಿ ನೈರೋಭಿಯಲ್ಲಿ ನಡೆದ ಮಾಲ್‍ ಮೇಲಿನ ಭಯೋತ್ಪಾದನಾ ದಾಳಿಯನ್ನು ನೆನಪಿಸುತ್ತಿತ್ತು. ಅಂದು ಅಲ್ಲಿನ ವೆಸ್ಟ್‍ಗೇಟ್‍ ಮಾಲ್‍ಗೆ ಅಲ್‍-ಶಬಾಬ್‍ ಎಂಬ ಉಗ್ರ ಸಂಘಟನೆಯ ಕಾರ್ಯಕರ್ತರು ನುಗ್ಗಿದ್ದರು. ಮೂರು ದಿನಗಳ ಕಾಲ ನಡೆದ ಈ ಕಾರ್ಯಾಚರಣೆ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿತ್ತು. ಮಾಲ್‍ ಮುಂಭಾಗದಲ್ಲಿ ನೂರಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ಕ್ಯಾಮೆರಾಗಳಿದ್ದವು. ವಿಶೇಷ ಎಂದರೆ, ಕೀನ್ಯಾ ಮಿಲಿಟರಿ ತನ್ನ ಕಾರ್ಯಾಚರಣೆ ಮುಗಿಸುವ peshawar-terror-attack1ವೇಳೆಗೆ ಅಲ್‍- ಶಬಾಬ್‍ ದಾಳಿ ನಡೆಸಿದ ಉದ್ದೇಶದ ಕುರಿತು ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿತ್ತು. ಅದಕ್ಕೆ ಕಾರಣವಾಗಿದ್ದು, ಅಲ್‍-ಶಬಾಬ್‍ನ ಟ್ವಿಟರ್‍ ಅಕೌಂಟ್‍. ಒಂದು ಕಡೆ ದಾಳಿ ನಡೆಯುತ್ತಿದ್ದರೆ, ಅಲ್‍-ಶಬಾಬ್‍ ದಾಳಿಯ ಕ್ಷಣಕ್ಷಣದ ಅಪ್‍ಡೇಟ್‍ನ್ನು ಟ್ವಿಟರ್‍ನಲ್ಲಿ ನೀಡುತ್ತಿತ್ತು. ಅನಿವಾರ್ಯವಾಗಿ ಮಾಧ್ಯಮಗಳು ಇದನ್ನು ಸುದ್ದಿಯ ರೂಪದಲ್ಲಿ ಭಿತ್ತರಿಸುತ್ತ ಹೋದವು. ದಾಳಿ ಮುಗಿಯುವ ವೇಳೆಗೆ ಅಲ್‍-ಶಬಾಬ್‍, ಕೇವಲ ಬಂದೂಕಿನ ದಾಳಿ ಮಾತ್ರವಲ್ಲ, ಮಾಹಿತಿ ಯುದ್ಧದಲ್ಲೂ ಕೀನ್ಯಾ ಸರಕಾರವನ್ನು ಮಣಿಸಿತ್ತು. ಅದು ಭಯೋತ್ಪಾದಕ ಸಂಘಟನೆಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವ ಪರಿಗೆ ಸಾಕ್ಷಿಯಾಯಿತು.

ಮೊನ್ನೆ, ಪೇಶಾವರದ ಸೈನಿಕ ಶಾಲೆ ಮೇಲಿನ ದಾಳಿಯಲ್ಲೂ ಇದು ಪುನಾರಾವರ್ತೆಯಾಯಿತು. ಒಂದು ಕಡೆದ ಮಕ್ಕಳಿಗೆ ಗುಂಡಿಕ್ಕಿವ ಕೆಲಸ ನಡೆಯುತ್ತಿದ್ದರೆ, ತೆಹ್ರಿಕ್‍-ಇ-ತಾಲಿಬಾನ್‍ ಪಾಕಿಸ್ತಾನ್‍ (ಟಿಟಿಪಿ) ತನ್ನ ಟ್ವಿಟರ್‍ ಖಾತೆಯಲ್ಲಿ ದಾಳಿಯ ಕುರಿತು ಮಾಹಿತಿ ನೀಡುತ್ತಿತ್ತು. ಇದನ್ನು ಮಾಧ್ಯಮಗಳು ಪಾಕಿಸ್ತಾನದ ಜನಪ್ರತಿನಿಧಿಗಳಿಗೆ, ಮಿಲಿಟರಿ ಅಧಿಕಾರಿಗಳಿಗೆ ಪ್ರಶ್ನೆಯ ರೂಪದಲ್ಲಿ ತಲುಪಿಸುವ ಕೆಲಸ ಮಾಡಿದವು. ಇವತ್ತು ಭಯೋತ್ಪಾದಕ ಸಂಘಟನೆಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಂಡಿದ್ದನ್ನು ಇಲ್ಲಿ ಗಮನಿಸಬೇಕಿದೆ. ಕೇವಲ ದಾಳಿ ನಡೆಸುವುದು, ಒಂದಷ್ಟು ಜನರನ್ನು ಬಲಿ ತೆಗೆದುಕೊಂಡು ಮತ್ತೆ ಹಿನ್ನೆಲೆಗೆ ಸರಿಯುತ್ತಿದ್ದ ಕಾಲ ಇವತ್ತು ಬದಲಾಗಿದೆ. ದಾಳಿಯ ಜತೆಗೆ ತಮ್ಮ ಉದ್ದೇಶವನ್ನೂ ಅವು ಮುನ್ನಲೆಗೆ ತರಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿವೆ. ಕೇವಲ ಶಸಸ್ತ್ರ ಯುದ್ಧ ಮಾತ್ರವಲ್ಲ, ಮಾಹಿತಿಯ ಯುದ್ಧಕ್ಕೂ ಅವು ನೀಡುತ್ತಿರುವ ಪ್ರಾಶಸ್ತ್ಯಕ್ಕೆ ಇತ್ತೀಚೆಗೆ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ.

ಲಂಡನ್‍ ಮೂಲಕ ಟೆಲಿಗ್ರಾಫ್‍ ಪತ್ರಿಕೆ ಭಯೋತ್ಪಾದಕ ಸಂಘಟನೆಗಳು ಯೂಟ್ಯೂಬ್, ಟ್ವಿಟರ್, ಫೇಸ್‍ಬುಕ್‍, ಇನ್ಟಾಗ್ರಾಮ್‍ನಂತಹ ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುತ್ತಿರುವ ಕುರಿತು ವಿಶ್ಲೇಷಣಾತ್ಮಕ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, “ಸುಮಾರು 7 ಲಕ್ಷ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಸಿದ್ಧಾಂತಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಐಸಿಸ್‍ನಂತಹ ಉಗ್ರ ಸಂಘಟನೆ ಕಳೆದ ವರ್ಷ ಉತ್ತರ ಇರಾಕ್‍ನ ನಗರವೊಂದರ ಮೇಲಿನ ದಾಳಿ ಸಮಯದಲ್ಲಿ ಒಂದೇ ದಿನ ಸುಮಾರು 40 ಸಾವಿರ ಟ್ವೀಟ್‍ಗಳನ್ನು ಮಾಡಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಪೂರಕವಾಗಿವೆ ಎಂಬ ಕಾರಣಕ್ಕೆ ಸುಮಾರು ಒಂದು ಸಾವಿರ ಖಾತೆಗಳನ್ನು ಟ್ವಿಟರ್‍ ಮುಚ್ಚಿದೆ.’’ ಕೀನ್ಯಾದ ಮಾಲ್‍ ಮೇಲಿನ ದಾಳಿಗೆ ಎರಡು ದಿನ ಮುಂಚೆ ಅಷ್ಟೆ ಅಲ್‍-ಶಬಾಬ್‍ ಹೊಸ ಟ್ವಿಟರ್‍ ಖಾತೆಯನ್ನು ತೆರೆಯಿತು. ಅದನ್ನು ಮಾಧ್ಯಮಗಳಿಗೆ ತಲುಪಿಸುವ ಕೆಲಸವನ್ನೂ ಮಾಡಿತ್ತು. ದಾಳಿ ಆರಂಭಿಸುತ್ತಿದ್ದಂತೆ ಹೊಸ ಖಾತೆಯಲ್ಲಿ ಮಾಹಿತಿ peshawar-terror-attack2ನೀಡುವ ಮೂಲಕ ಕೀನ್ಯಾ ಸರಕಾರದ ಅಧಿಕೃತ ಹೇಳಿಕೆಗಳನ್ನೂ ಮೀರಿ ತನ್ನ ನಿಲುವನ್ನು ಜಗತ್ತಿಗೆ ಸಾರಿ ಹೇಳಿತು. ಇವತ್ತು ಇರಾಕ್‍, ಮಧ್ಯಪ್ರಾಚ್ಯ ದೇಶಗಳಲ್ಲಿ ಭಯೋತ್ಪಾದಕ ದಾಳಿಯ ದೃಶ್ಯಗಳನ್ನು ಯೂ-ಟ್ಯೂಬ್‍ಗೆ ಅಪ್‍ಲೋಡ್‍ ಮಾಡಲಾಗುತ್ತಿದೆ. ಇದನ್ನು ಮುಖ್ಯವಾಹಿನಿಯ ಮಾಧ್ಯಮಗಳು ಜಗತ್ತಿಗೆ ಭಿತ್ತರಿಸುವ ಅನಿವಾರ್ಯ ಕರ್ಮಕ್ಕೆ ಸಿಲುಕಿವೆ.

ಇತ್ತೀಚಿಗೆ ಬೆಂಗಳೂರಿನಿಂದ ‘ಐಸಿಸ್‍ ಪರ ಪ್ರಚಾರ’ ಮಾಡುವ ಟ್ವಿಟರ್‍ ಖಾತೆಯೊಂದು ಚಟುವಟಿಕೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಲಂಡನ್‍ ಮೂಲಕ ಚಾನಲ್‍ 4 ಭಿತ್ತರಿಸಿತ್ತು. ಇಲ್ಲಿ ಐಸಿಸ್‍ ಪರ ಪ್ರಚಾರವೇ ಹೊರತು ಐಸಿಸ್‍ನ ಅಧಿಕೃತ ಖಾತೆ ಅಲ್ಲ ಎಂಬುದನ್ನು ಗಮನಿಸಬೇಕಿದೆ. ಸುದ್ದಿ ಭಿತ್ತರಗೊಂಡ ಬೆನ್ನಿಗೇ ಬೆಂಗಳೂರು ಪೊಲೀಸರು ಪಶ್ಚಿಮ ಬಂಗಾಳ ಮೂಲದ ಮೆಹದಿ ಮಸ್ರೂರ್ ಬಿಸ್ವಾಸ್‍ ಎಂಬ ಯುವಕನನ್ನು ಬಂಧಿಸಿದ್ದರು. ಮೆಹದಿಯ ಬಂಧನ ಮತ್ತು ಅದರ ವಿವರಗಳು ಈ ಭಯೋತ್ಪಾದಕ ಚಟುವಟಿಗೆಳ ಮಾಹಿತಿ ಯುದ್ಧದ ಕುರಿತು ಹೊಸ ಆಯಾಮವನ್ನು ನೀಡುತ್ತವೆ. ಚಾನಲ್‍ 4 ನಲ್ಲಿ ಭಿತ್ತರಗೊಂಡ ಸುದ್ಧಿಯನ್ನು ಆಧಾರವಾಗಿ ಇಟ್ಟುಕೊಂಡು ಹೇಳುವುದಾದರೆ, ಸುದ್ದಿವಾಹಿನಿ ‘ಶಮಿ ವಿಟ್ನೆಸ್‍’ ಎಂಬ ಹೆಸರಿನಲ್ಲಿ ಮುಸ್ಲಿಂ ಧಾರ್ಮಿಕತೆಯ ಕುರಿತು ಟ್ವೀಟ್‍ಗಳು ಹರಿದಾಡುತ್ತಿರುವುದನ್ನು ಗಮನಿಸಿದೆ. ಅದಕ್ಕೆ ಟಿಪ್‍ ಸಿಕ್ಕಿರುವುದು ಈ ಕುರಿತು ಅಧ್ಯಯನ ನಡೆಸುತ್ತಿರುವ ಲಂಡನ್‍ನ ಕಿಂಗ್ಸ್‍ ಯೂನಿವರ್ಸಿಟಿಯಿಂದ ಅನ್ನಿಸುತ್ತದೆ. ಈ ಖಾತೆಯ ಮಾಹಿತಿಯಿಂದ ಪ್ರೇರಣೆಗೊಂಡ ಲಂಡನ್‍ ಮೂಲದ ಯುವಕನೊಬ್ಬ ಐಸಿಸ್‍ ಸೇರಿ ಹತನಾದ ಕುರಿತು ಮಾಹಿತಿ ಕಲೆ ಹಾಕಿದೆ. ನಂತರ ‘ಶಮಿ ವಿಟ್ನೆಸ್‍’ ಖಾತೆಯ ಮೂಲವನ್ನು ಹುಡುಕಿದೆ. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮೆಹದಿಯನ್ನು ಅದು ಸಂಪರ್ಕಿಸಿದೆ. ಈ ಸಮಯದಲ್ಲಿ ಮೆಹದಿ ಜತೆ ದೂರವಾಣಿಯಲ್ಲಿ ಮಾತನಾಡಿರುವ ಸುದ್ದಿ ವಾಹಿನಿ ಆತನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೆಲವು ಪ್ರಶ‍್ನೆಗಳನ್ನು ಹಾಕಿದೆ. ವಾಹಿನಿಗೆ ದೂರವಾಣಿ ಮೂಲಕ ಮೆಹದಿ ನಡೆಸಿದ ಮಾತುಕತೆ ಹೀಗಿದೆ:

ಮೆಹದಿ: ನನಗೆ ಅವಕಾಶ ಇದ್ದಿದ್ದರೆ ಎಲ್ಲವನ್ನೂ ಬಿಟ್ಟು ಅವರ (ಐಸಿಸ್‍) ಜತೆ ಸೇರಿಕೊಳ್ಳುತ್ತಿದ್ದೆ ಅನ್ನಿಸುತ್ತದೆ.
ಚಾನಲ್‍ 4: ನಿನ್ನನ್ನು ತಡೆದಿದ್ದು ಏನು?
ಮೆಹದಿ: ಕುಟುಂಬಕ್ಕೆ ನನ್ನ ಅಗತ್ಯವಿದೆ. ನನ್ನ ತಂದೆ ತಾಯಿ ನನ್ನ ಮೇಲೆ ಅವಲಂಬಿತರಾಗಿದ್ದಾರೆ.
ಚಾನಲ್‍ 4: ಅಂದ್ರೆ, ನಿನಗೆ ಅವಕಾಶ ಇದ್ದಿದ್ದರೆ ನೀನು ಐಸಿಸ್‍ ಸೇರಿಕೊಳ್ಳುತ್ತಿದ್ದೆ ಅಲ್ವಾ?
ಮೆಹದಿ: ಬಹುಶಃ…
ಚಾನಲ್‍ 4: ಹಾಗಾದ್ರೆ, ಐಸಿಸ್‍ನ ಮೆಥೆಡ್ಸ್‍ಗಳ ಬಗ್ಗೆ ನಿನಗೆ ಒಪ್ಪಿಗೆ ಇದೆ?
ಮೆಹದಿ: ನಾಟ್‍ ಆಲ್‍ ಮೆಥೆಡ್ಸ್‍…ನೋ…ಬಟ್‍ ಮೋಸ್ಟ್ಲಿ…
ಚಾನಲ್‍ 4: ಯಾವ ಮೆಥೆಡ್ಸ್‍…ಕೊಲ್ಲುವುದು, ತಲೆ ಕಡಿವುಯುದು…?
ಮೆಹದಿ: ತಲೆ ಕಡಿಯುವ ಕುರಿತು ಕುರಾನ್‍ ಮತ್ತು ಹಾದಿಥ್‍ನಲ್ಲೂ ಉಲ್ಲೇಖ ಇದೆ. ನನಗನ್ನಿಸುತ್ತದೆ ನಿಜವಾದ ಮುಸ್ಲಿಂ ಸಕಾರಣಕ್ಕೆ ತಲೆ ಕಡಿಯುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿರಲು ಸಾಧ್ಯವಿಲ್ಲ.
ಚಾನಲ್‍ 4: ನೀನು ಪ್ರಾಮಾಣಿಕ ಮುಸ್ಲಿಂ…?
ಮೆಹದಿ: ಪ್ರಯತ್ನ ಪಡುತ್ತಿದ್ದೇನೆ…ನಾನು ಇರಬಹುದಾ ಅಂಥ ಖಾತ್ರಿ ಇಲ್ಲ…
(ಚಾನಲ್‍ 4 ಕಾಮೆಂಟರಿ: ಈತ ಲಂಡನ್‍ ಮೂಲದ ಜಿಹಾದಿಗಳ ಜತೆ ಸಂಪರ್ಕದಲ್ಲಿ ಇದ್ದಾನೆ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ, ಅವರು ಐಸಿಸ್‍ ಸೇರಲು ಪ್ರೇರೇಪಣೆ ನನ್ನಿಂದ ಸಿಗುತ್ತಿದೆ ಎಂಬುದನ್ನು ನಿರಾಕರಿಸುತ್ತಾನೆ.)
ಮೆಹದಿ: ಯಾರೋ ನನ್ನನ್ನು ಫಾಲೋ (ಟ್ವಿಟರ್‍ನಲ್ಲಿ) ಮಾಡುತ್ತಾರೆ ಎಂಬ ಕಾರಣಕ್ಕೆ ನಾನು ಅವರು ಐಸಿಸ್‍ ಕಡೆ ಹೋಗುತ್ತಿರುವುದಕ್ಕೆ ಹೊಣೆಯಾಗುವುದಿಲ್ಲ. ಜನರು ಯಾಕೆ “radicalized” ಆಗುತ್ತಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳಿವೆ.

ಚಾನಲ್‍ 4 ನಲ್ಲಿ ಈ ಸುದ್ದಿ ಭಿತ್ತರಗೊಳ್ಳುತ್ತಿದ್ದಂತೆ ನಮ್ಮ ಮಾಧ್ಯಮಗಳು ಐಸಿಸ್‍ ಖಾತೆ ಬೆಂಗಳೂರಿನ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ ಎಂಬಂತೆ ಸುದ್ದಿಯನ್ನು ಭಿತ್ತರಿಸಿದವು. ಬೆಂಗಳೂರು ಉಗ್ರರ ಮುಂದಿನ ಗುರಿ ಎಂದು ಜನ ಮನಸ್ಸಿನಲ್ಲಿ ಭಯ ಮೂಡಿಸುವ ಕೆಲಸ ನಡೆಯಿತು. ಇರಾಕ್‍ನಲ್ಲಿ ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಇವತ್ತು ಬಡಿದಾಡುತ್ತಿರುವ ಐಸಿಸ್‍ ಎಂಬ ಸಂಘಟನೆಗೆ ಅನಾವಶ್ಯಕವಾಗಿ ಪ್ರಾಮುಖ್ಯತೆ ನೀಡಿದವು. ಮೆಹದಿ ಬಂಧನ ನಂತರ ಆತ ಬೆಂಗಳೂರಿನಲ್ಲಿ ನೆಲೆಸಿದ್ದ ಮನೆಗೆ ತೆರಳಿದ್ದ ನನ್ನ ಪತ್ರಕರ್ತ ಮಿತ್ರರೊಬ್ಬರು ಆತನ ಮನಸ್ಥಿತಿಯನ್ನು ಹೀಗೆ ಊಹಿಸಿದ್ದರು. “ಬಹುಶಃ ಆತ ಟೆಕ್‍ಸ್ಸೇವಿಯಾಗಿದ್ದ ಅನ್ನಿಸುತ್ತದೆ. ಸುತ್ತಮುತ್ತಲಿನವರ ಪ್ರಕಾರ ಆತ ಧರ್ಮದ ಕುರಿತು ಹೆಚ್ಚು ಓದುತ್ತಿದ್ದ. ಯಾವುದೇ ಸಮಸ್ಯೆ ಎಂದರೂ, ಅದಕ್ಕೆ ಖುರಾನ್‍ನಲ್ಲಿ ಪರಿಹಾರ ಇದೆ ಎನ್ನುತ್ತಿದ್ದ. ಆತನ ಟ್ವಿಟರ್‍ ಖಾತೆಯಲ್ಲೂ ಇದೇ ಬರೆಯುತ್ತಿದ್ದ. ತಾತ್ವಿಕವಾಗಿ ಆತ ಐಸಿಸ್‍ನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದ್ದ. ಆದರೆ, ಆತ ತನ್ನನ್ನು ತಾನು ನಿಗೂಢವಾಗಿ ಇಟ್ಟುಕೊಳ್ಳುವ ಪ್ರಯತ್ನವನ್ನು ಮಾಡಿದಂತೆ ಕಾಣುತ್ತಿಲ್ಲ,’’ ಎಂಬುದು ಅವರು ಗಮನಿಸಿದ ಅಂಶಗಳು. ಮೆಹದಿಗೆ ನಿಜವಾಗಿಯೂ ಐಸಿಸ್‍ ಜತೆ ಸಂಪರ್ಕ ಇತ್ತಾ? Peshawar_school_injuredKidಆತನ ಮನಸ್ಥಿತಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಇತ್ತಾ? ಇದನ್ನು ಹೇಗೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಆತ ತಪ್ಪು ಮಾಡಿದ್ದರೆ ಶಿಕ್ಷಿಸಲು ಕಾನೂನು ಇದೆ. ಆದರೆ, ನಾವು ಗಮನಿಸಬೇಕಿರುವುದು ಮೆಹದಿ ಮತ್ತು ಆತ ಪ್ರತಿನಿಧಿಸುವ ವಿಚಾರಗಳ ಮೂಲ ಉದ್ದೇಶವೇ ಮಾಹಿತಿ ಪ್ರಸಾರ ಮಾಡುವುದು. ಹೆಚ್ಚು ಹೆಚ್ಚು ಜನರಿಗೆ ತನ್ನ ಅಸ್ಥಿತ್ವವನ್ನು ಸಾರುವುದು. ಮೆಹದಿ ಘಟನೆಯನ್ನು ಸುದ್ದಿ ಮಾಡುವ ಭರಾಟೆಯಲ್ಲಿ ಮಾಧ್ಯಮಗಳೂ ಕೂಡ ಪರೋಕ್ಷವಾಗಿ ಇದೇ ಕೆಲಸ ಮಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಕೊನೆಯದಾಗಿ ಇನ್ನೊಂದು ವಿಚಾರ ಇದೆ. ಅದು ಭಯೋತ್ಪಾದಕ ಚಟುವಟಿಕೆಗಳ ಕುರಿತು ಕಾನೂನು ಕ್ರಮಗಳ ಕುರಿತಾಗಿದ್ದು. ಕೀನ್ಯಾ ಮಾಲ್‍ ದಾಳಿಯ ನಂತರ ಅಲ್ಲಿನ ಪಾರ್ಲಿಮೆಂಟರಿ ಸಮಿತಿ ನೀಡಿದ ವರದಿಯ ಕುರಿತು ವ್ಯಾಪಕ ಟೀಕೆಗಳು ಬಂದಿದ್ದವು. ಇವತ್ತಿಗೂ ಆ ದಾಳಿಯ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಎಷ್ಟು ಜನ ಉಗ್ರರು ದಾಳಿ ನಡೆಸಿದ್ದರು? ಅವರ ತಪ್ಪಿಸಿಕೊಂಡು ಹೋದರಾ ಅಥವಾ ಎಲ್ಲರೂ ಹತರಾದರಾ ಎಂಬ ಕುರಿತೇ ಗೊಂದಲಗಳಿವೆ. ಕೆಲವು ದಿನಗಳ ಹಿಂದೆ ಅದೇ ನೈರೋಭಿಯ ವಿಮಾನ ನಿಲ್ದಾಣದಿಂದ ಹಾರಿದ್ದ ಅಲ್‍-ಶಬಾಬ್‍ನ ಮೂವರು ಉಗ್ರರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಯಿತು. ಅಷ್ಟರ ಮಟ್ಟಿಗೆ ಅಲ್ಲಿನ ಸರಕಾರ ಭಯೋತ್ಪಾದಕರ ವಿರುದ್ಧದ ಸಮರದಲ್ಲಿ ಎಲ್ಲಾ ಆಯಾಮಗಳಲ್ಲೂ ಹಿನ್ನಡೆ ಅನುಭವಿಸುತ್ತಿದೆ. ನಮ್ಮಲ್ಲೂ ಚಿನ್ನಸ್ವಾಮಿ ಬಾಂಬ್‍ ಸ್ಫೋಟ ಪ್ರಕರಣ, ಸರಣಿ ಸ್ಫೋಟ ಪ್ರಕರಣಗಳು ಏನಾಗಿವೆ ಎಂಬ ಕುರಿತು ಮಾಹಿತಿ ಇಲ್ಲ. ಪೊಲೀಸರು ಸಲ್ಲಿರುವ ಸಾವಿರಾರು ಪುಟಗಳ ದೋಷಾರೋಪ ಪಟ್ಟಿ ತನಿಖೆಯನ್ನು ನಿಧಾನಗತಿಯಲ್ಲಿ ಇಟ್ಟಿದೆಯಾದರೂ, ಇವತ್ತಿಗೂ ಯಾವಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ. ಹೀಗಿರುವಾಗಲೇ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಯುದ್ಧಕ್ಕೆ ಅಣಿಯಾಗಿವೆ. ತಂತ್ರಜ್ಞಾನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ನಮ್ಮ ತನಿಖಾ ಸಂಸ್ಥೆಗಳು, ಸರಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಭಯೋತ್ಪಾದಕ ಚಟುವಟಿಕೆಗಳ ಕಡಿವಾಣಕ್ಕೆ ಸಮಗ್ರವಾದ ಯೋಜನೆಗೆ ಆಲೋಚನೆ ಮಾಡಬೇಕಿದೆ. ಬದಲಾದ ಕಾಲಕ್ಕೆ ತಕ್ಕಂತೆ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇವತ್ತಿನ ಅಗತ್ಯ ಮತ್ತು ಅನಿವಾರ್ಯತೆ. ಆಗ ಮಾತ್ರವೇ ಉಗ್ರರ ಪೈಶಾಚಿಕ ಕೃತ್ಯಗಳಿಗೆ ಬಲಿಯಾಗುವ ಮುಗ್ಧ ಮನಸ್ಸುಗಳಿಗೆ ನಿಜವಾದ ಸಂತಾಪ ಸಲ್ಲಿಸಿದಂತೆ ಆಗುತ್ತದೆ.

One thought on “ಉಗ್ರರಿಗೆ ಬಲಿಯಾದ ಮಕ್ಕಳಿಗೊಂದು ನಿಜವಾದ ಸಂತಾಪ!

  1. ಹೆಸರಲ್ಲೇನಿದೆ?

    ಹೆಸರಿಗೆ ಉಗ್ರರಿಗೆ ಬಲಿಯಾದ ಮಕ್ಕಳಿಗೊಂದು ‘ನಿಜವಾದ ಸಂತಾಪ’ ಓದುತ್ತಾ ಹೋದಂತೆ ಮಸ್ರೂರ್ ಮೆಹದಿ ಯ ಮನಃಸ್ಥಿತಿಯ ಬಗ್ಗೆ ಒಂದು ಹುಸಿವಿಶ್ಲೇಷಣೆ, ಮತ್ತು ‘ಆತ ISIS ಪರವಾಗಿ ಸಹಾನುಭೂತಿ ಉಳ್ಳವನೇ ಹೊರತು ಅದರ ಸದಸ್ಯನಲ್ಲ!’ ಎನ್ನುವ ನವಿರಾದ ಸಲಹೆ..ಹೌದು ಸರ್ ನಿಮ್ಮ ಹಾಗೆ ಉಗ್ರರಿಗೆ ಬಲಿಯಾದ ಶಾಲಾ ಮಕ್ಕಳಿಗೆ ‘ನಿಜವಾಗಿ’ ಸಂತಾಪ ವ್ಯಕ್ತಪಡಿಸಲು ನನಗೆ ಸಾಧ್ಯವಿಲ್ಲ. ಅಲ್ಲ ರೀ.. ಶಾಲೆಗೆ ಹೋಗುವ ಮಕ್ಕಳು ಯಾರಾದರೇನು, ಅವರು ಒಬ್ಬ ತಂದೆ-ತಾಯಿಯ ಮಕ್ಕಳೆ ತಾನೆ! ಅಂಥ ನಿರಾಯುಧ ನಿಸ್ಸಹಾಯಕ ಮಕ್ಕಳನ್ನು ಗುಂಡಿನ ಮಳೆಗರೆದು ಕೊಂದ ಪಾತಕಿಗಳನ್ನು ಖಂಡಿಸಿ ಲೇಖನ ಬರೆಯುವುದರ ಬದಲು ಇದೆಂಥ ಹಗ್ಗ ಹೊಸೆಯುವ ಆಟ ನಿಮ್ಮದು! ಧಿಕ್ಕಾರವಿರಲಿ ನಿಮಗೆ..

    Reply

Leave a Reply

Your email address will not be published. Required fields are marked *