ದೇವನೂರ ಮಹಾದೇವರಿಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ

-ದೇವನೂರ ಮಹಾದೇವ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೀತಿಯ ಶ್ರೀ ಪುಂಡಲೀಕ ಹಾಲಂಬಿಯವರಿಗೆ ವಂದನೆಗಳು.

ಭಾರತದ ಸಂವಿಧಾನವು ಅಂಗೀಕರಿಸಲ್ಪಟ್ಟ ೨೨ ದೇಶೀ ಭಾಷೆಗಳು ಹಾಗೂ ದೇಶದಾದ್ಯಂತ ಇರುವ ಅನೇಕಾನೇಕ ಅಲ್ಪಸಂಖ್ಯಾತ ಭಾಷೆಗಳು ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕಾಲು ಕತ್ತರಿಸಿಕೊಂಡು ಚಲನೆ ಇಲ್ಲದ ಸ್ಥಿತಿಗೆ ತಲುಪಿರುವ ಈ ಸಂದರ್ಭದಲ್ಲಿ ಏನು ಹೇಳುವುದು? ಹೇಗೆ ಹೇಳುವುದು?

ಯಾಕೆಂದರೆ ಸುಪ್ರೀಂಕೋರ್ಟ್‌ನಲ್ಲಿ ಭಾಷಾಮಾಧ್ಯಮದ ವಾದ-ವಿವಾದ ನಡೆಯುತ್ತಿದ್ದಾಗ ನ್ಯಾಯಾಧೀಶರೊಬ್ಬರು “ಡೆಲ್ಲಿಗೆ ಬಂದಿದ್ದ ಜಪಾನ್ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಇಂಗ್ಲಿಷ್‌ನಲ್ಲಿ ಮಾತಾಡಿದರು, ಅವರು ಇಂಗ್ಲಿಷ್‌ನಲ್ಲಿ ಮಾತಾಡದೇ ಹೋಗಿದ್ದರೆ ಯಾರಿಗೂ ತಿಳಿಯುತ್ತಿರಲಿಲ್ಲ, ಭಾಷೆಯ ಕುರಿತು ಮಡಿವಂತಿಕೆ ಹೊಂದಿದ್ದ ಚೈನಾದೇಶವೂ ಈಗೀಗ ಇಂಗ್ಲಿಷ್‌ನ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ” ಎಂದದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಬಹಳ ಹಿಂದೆ ಕನ್ನಡಿಗರೊಬ್ಬರು ಇಂಗ್ಲೆಂಡ್‌ಗೆ ಹೋಗಿ ಬಂದು ‘ಅಬ್ಬಬ್ಬಾ ಇಂಗ್ಲೆಂಡ್‌ನಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಕೂಡ ಇಂಗ್ಲಿಷ್‌ನಲ್ಲಿ ಮಾತಾಡ್ತಾರೆ’ ಅಂದಿದ್ದ ಆ ಮುಗ್ಧತೆಯಂತೆಯೇ ಇದೂ ಕಾಣಿಸುತ್ತದೆ. ಇದರ ಬದಲು ಆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ‘ತಾನು ಭಾರತದ ಸರ್ವೋಚ್ಛ ನ್ಯಾಯಾಧೀಶ, ಅವರೂ ಜಪಾನ್‌ನ ಸರ್ವೋಚ್ಛ ನ್ಯಾಯಾಧೀಶರು, ಈಗ ತಮ್ಮ ಮುಂದೆ ಪ್ರಾಥಮಿಕ ಶಿಕ್ಷಣ ಮಾಧ್ಯಮ ವಿಚಾರ ಚರ್ಚೆಗೆ ಬಂದಿದೆ. ಜಪಾನ್‌ನಲ್ಲಿ ಹೇಗಿರಬಹುದು?’ ಎಂಬ ಕೂತೂಹಲಕ್ಕಾದರೂ ಚರ್ಚಿಸಿದ್ದರೆ. ಆಗ ಜಪಾನ್‌ನಲ್ಲಿರುವುದು ಜಪಾನಿ ಭಾಷಾ ಶಿಕ್ಷಣ ಮಾಧ್ಯಮ ಎಂಬುದಾದರೂ ತಿಳಿದುಬರುತ್ತಿತ್ತು. ಜಗತ್ತಿನ ಯಾವುದೇ ಭಾಷೆಯ ಶ್ರೇಷ್ಠ ಕೃತಿಯು ಪ್ರಕಟವಾದ ಒಂದು ವಾರದೊಳಗೆ ಅದು ಜಪಾನಿ ಭಾಷೆಗೆ ಅನುವಾದಗೊಂಡು ಪ್ರಕಟಗೊಳ್ಳುವ ವಿದ್ಯಮಾನವೂ ತಿಳಿದುಬರುತ್ತಿತ್ತು. ಹಾಗೇ ಚೈನಾದಲ್ಲೂ ಶಿಕ್ಷಣ ಮಾಧ್ಯಮವು ಚೈನೀಸ್ ಭಾಷೆಯಲ್ಲಿ ಇದ್ದು ಚೈನಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಭಾಷೆಯಾಗಿ ಇಂಗ್ಲಿಷ್, ಸ್ಪಾನಿಷ್ ಹೀಗೆ ಮಾರ್ಕೆಟ್‌ನ ಪ್ರಮುಖ ಭಾಷೆಗಳನ್ನೆಲ್ಲಾ ಕಲಿಸಲು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿರುವುದು ಗೋಚರಿಸುತ್ತಿತ್ತು. ಹೀಗೇ ದಕ್ಷಿಣ ಕೊರಿಯಾ, ಥೈಲಾಂಡ್, ಸ್ಕಾಂಡಿನೇವಿಯನ್ ದೇಶಗಳು, ಜಿ-೮ ದೇಶಗಳು ಹೀಗೆ ಸ್ವತಂತ್ರವಾಗಿರುವ ದೇಶಗಳಲ್ಲೆಲ್ಲಾ ಅವರವರ ಮಾತೃಭಾಷೆಯ ಶಿಕ್ಷಣ ಮಾಧ್ಯಮ ಸಹಜ ಆಯ್ಕೆಯಾಗಿದೆ. ಇಸ್ರೇಲ್‌ನಲ್ಲೂ ಯಹೂದಿಗಳ ಹೀಬ್ರೂ ಮಾತೃಭಾಷೆಯೇ ಶಿಕ್ಷಣಮಾಧ್ಯಮ. ಉನ್ನತ ಶಿಕ್ಷಣದಲ್ಲಿ ಕೆಲವು ಕಡೆ ಅಲ್ಪಸ್ವಲ್ಪ ಬದಲಾವಣೆ ಇರಬಹುದಷ್ಟೇ. ಅಷ್ಟೇಕೆ, ಮಲೇಷಿಯಾದ ರಾಷ್ಟ್ರೀಯ ಶಾಲೆಗಳಲ್ಲಿ ’ಬಹಾಸ ಮಲೇಷಿಯಾ’ ಮತ್ತು ಸ್ಥಳೀಯ ಶಾಲೆಗಳಲ್ಲಿ ಚೈನೀಸ್ ಮತ್ತು ತಮಿಳು ಭಾಷಾಮಾಧ್ಯಮದಲ್ಲಿ ಗಣಿತ ಮತ್ತು ವಿಜ್ಞಾನಗಳನ್ನು ಬೋಧಿಸಲಾಗುತ್ತಿದೆ. ಇಲ್ಲಿ ಭಾರತದಲ್ಲಿ ತಮಿಳರು ’ತಮಿಳ್ ತಮಿಳ್’ ಎಂದು ಎದೆಚಚ್ಚಿಕೊಂಡು ತಮಿಳು ಪದ ಉಚ್ಛಾರಣೆ ಮಾಡುವುದರಲ್ಲೇ ಸಂತೋಷಪಡುತ್ತಿದ್ದಾರೆ. ತಮಿಳು ಶಿಕ್ಷಣ ಮಾಧ್ಯಮವಾಗಿ ಬೆಳೆದಿದ್ದರೆ ಆ ನೆರಳಲ್ಲಿ ನಾವೂ ಬೆಳೆಯಬಹುದಿತ್ತು.

ಒಟ್ಟಿನಲ್ಲಿ ಯಾವ ಸ್ವತಂತ್ರ ದೇಶವೂ ತನ್ನ ಮಾತೃಭಾಷೆಗಳನ್ನು ಕೊಂದು ಪರಭಾಷೆಯನ್ನು ಸ್ವೀಕರಿಸಿಲ್ಲ. ತಮ್ಮ ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮ ಕೇಂದ್ರ ಮಾಡಿಕೊಂಡು ಪರಭಾಷೆಯನ್ನು ಒಂದು ಭಾಷೆಯಾಗಿ ಒಳಗೊಂಡು ಒಟ್ಟಾಗಿ ಜೊತೆಗೂಡಿ ಬೆಳೆಯುವ ಪ್ರಕ್ರಿಯೆ ಜಗತ್ತಿನಾದ್ಯಂತ ಜರುಗುತ್ತಿದೆ.

ಹಾಗಾದರೆ ಭಾರತಕ್ಕೇನಾಗಿದೆ? ನಾವು ಗುಲಾಮಗಿರಿಯಿಂದ ಭೌತಿಕವಾಗಿ ಬಿಡುಗಡೆ ಹೊಂದಿದ್ದರೂ ಮಾನಸಿಕ ಗುಲಾಮಗಿರಿ ಸೋಂಕು ಇನ್ನೂ ಗುಣವಾಗಿಲ್ಲವೇನೋ. devanurಇಂದು ಈ ಜಗತ್ತಿನ ಓಟ ಅಂದರೆ ಅಭಿವೃದ್ಧಿ ಮತ್ತು ಸ್ಪರ್ಧೆ – ಈ ದೃಷ್ಟಿಯಲ್ಲಿ ನೋಡಿದರೂ ಈ ಓಟದಲ್ಲಿ ದಾಪುಗಾಲು ಹಾಕುತ್ತಿರುವ ಚೈನಾ, ಜಪಾನ್, ಕೊರಿಯಾ, ಥಾಯ್‌ಲೆಂಡ್ ದೇಶಗಳಲ್ಲಿ ಸಮಾನ ಮತ್ತು ಮಾತೃಭಾಷಾ ಶಿಕ್ಷಣ ಮಾಧ್ಯಮ ಇರುವುದಕ್ಕೂ ಅವುಗಳ ಅಭಿವೃದ್ಧಿ ಮತ್ತು ಸ್ಪರ್ಧೆ ಓಟಕ್ಕೂ ಸಂಬಂಧವಿರಬೇಕೇನೋ ಅನ್ನಿಸುತ್ತದೆ. ಯಾಕೆಂದರೆ ಮಾತೃಭಾಷಾ ಸಮಾನ ಶಿಕ್ಷಣದಲ್ಲಿ ಇಡೀ ಸಮುದಾಯದೊಳಗಿಂದ ಎಲ್ಲೆಲ್ಲಿಂದಲೋ ಯಾರ್‍ಯಾರೋ ಪ್ರತಿಭಾವಂತರು ಕುಶಲಿಗಳು ಹುಟ್ಟಿಕೊಂಡು ದೇಶದ ಸಂಪತ್ತಾಗುತ್ತಾರೆ. ಮನೆಮನೆಯಲ್ಲೂ ಜ್ಞಾನಾಧಾರಿತ ಕೌಶಲ್ಯ ಉಳ್ಳವರ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ಇಂಥವು ಯಾಕೆ ನಮ್ಮ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಕಾಣುತ್ತಿಲ್ಲ? ಇದು ದೇಶಕೋಶ ತಿರುಗುವ ಐಟಿಬಿಟಿ ಮಂದಿಗಾದರೂ ಅವರ ಲಾಭದ ದೃಷ್ಟಿಯಿಂದಲಾದರೂ ಯಾಕೆ ಕಾಣಲಿಲ್ಲ? ಇದು ಚಿದಂಬರ ರಹಸ್ಯವೇನೂ ಅಲ್ಲ. ಭಾರತವು ಹಿಂದೆ ಶೂದ್ರ ಸಮುದಾಯಕ್ಕೆ ಶಿಕ್ಷಣವನ್ನೇ ಕೊಡಬಾರದು ಎಂಬ ನಿರಾಕರಣೆಯನ್ನು ಮೀರಿ ಈಗ ಎಲ್ಲರಿಗೂ ಶಿಕ್ಷಣ ಎಂಬ ಮಾತನ್ನೇನೋ ಹೇಳುತ್ತಿದೆ. ಆದರೆ ಶಿಕ್ಷಣದೊಳಗೇ ತಾರತಮ್ಯದ ಜಾತಿ-ವರ್ಗ ರೋಗದ ಪಂಚವರ್ಣ ಪದ್ಧತಿ ಅಳವಡಿಸಿಕೊಂಡಿದೆ, ಚಾತುರ್ವರ್ಣದ ಸ್ವಭಾವವಾದ ಪ್ರತ್ಯೇಕತೆ, ತಾರತಮ್ಯ ಉಳಿಸಿಕೊಂಡಿದೆ. ೧೯೬೩-೬೪ ರ ಕೊಠಾರಿ ಶಿಕ್ಷಣ ಆಯೋಗವು ಹೇಳಿದ್ದ “ಸಮಾನ ಶಿಕ್ಷಣ ಅನುಷ್ಠಾನ ಮಾಡದಿದ್ದರೆ ಶಿಕ್ಷಣವೇ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಹೆಚ್ಚಿಸಿ ಮತ್ತಷ್ಟು ಕಂದರ ಉಂಟುಮಾಡುತ್ತದೆ” ಎಂಬ ಮಾತು ನಮ್ಮೆದುರು ಇದ್ದೂ ಕೂಡಾ ಭಾರತ ಪಂಚವರ್ಣ ಶಿಕ್ಷಣವನ್ನು ನೀಡುತ್ತಿರುವುದು ಏನನ್ನು ಹೇಳುತ್ತದೆ? ಬಹುಶಃ ಭಾರತಕ್ಕೆ ತಾರತಮ್ಯ ಪ್ರತ್ಯೇಕತೆ ಮೇಲುಕೀಳು ಇಲ್ಲದಿದ್ದರೆ ನಿದ್ದೆ ಬರುವುದಿಲ್ಲವೇನೋ. ಒಂದು ಕಡೆ ಗುಲಾಮಗಿರಿಯ ಸೋಂಕು, ಇನ್ನೊಂದು ಕಡೆ ವರ್ಗ-ಜಾತಿಯ ಸೋಂಕು, ಇದು- ಕಾರ್‍ಯಾಂಗ, ರಾಜ್ಯಾಂಗ, ನ್ಯಾಯಾಂಗ ಅಂತ ಏನೇನು ಇದೆಯೋ ಅಲ್ಲೆಲ್ಲಾ ಈ ಅಂಟುರೋಗ ಅಂಟಿರಬೇಕು.

ಹಾಗಾಗೇ ಭಾರತದಲ್ಲಿ ಇಂದು ’ಪಂಕ್ತಿಭೇದ ಶಿಕ್ಷಣಪದ್ಧತಿ’ ನಮ್ಮ ಮುಂದಿದೆ. ಜಾತಿ ತಾರತಮ್ಯದ ಭಾರತದಲ್ಲಿ ಎಳೆಯ ಮಕ್ಕಳ ಮನಸ್ಸು ಆಕಾರ ಪಡೆಯುವಾಗಲಿನ ಪ್ರಾಥಮಿಕ ಶಿಕ್ಷಣದಲ್ಲಿ ನಮ್ಮ ಎಲ್ಲಾ ಜಾತಿ ಜನಾಂಗ ಧರ್ಮ ವರ್ಗಗಳ ಎಳೆಯರು ಜೊತೆಗೂಡಿ ಒಡನಾಡುವುದೇ ಭಾರತಕ್ಕೆ ಬಲುದೊಡ್ಡ ಶಿಕ್ಷಣ ಎಂಬುದನ್ನು ಮನಗಾಣದೆ ಸೋಲುತ್ತಿದ್ದೇವೆ. ನೆರೆಹೊರೆ ಸಮಾನ ಮಾತೃಭಾಷಾ ಮಾಧ್ಯಮ ಶಿಕ್ಷಣ ಪದ್ಧತಿ ಪ್ರಾಥಮಿಕದಲ್ಲಿಲ್ಲದ ಕಾರಣವಾಗಿ – ಸರ್ಕಾರಿ ಶಾಲೆಗಳ ಗುಣಮಟ್ಟ ದಿನದಿನಾ ಕುಸಿಯುತ್ತಿದೆ. ಕಾರಣವನ್ನು ಬೇರೆಲ್ಲೋ ಹುಡುಕುತ್ತಿದ್ದೇವೆ. ನೆರೆಹೊರೆಯ ಸಮಾನ ಶಿಕ್ಷಣ ಪದ್ಧತಿ ಅನುಷ್ಠಾನಗೊಂಡರೆ ಆ ಶಾಲೆಗೆ ಹೇಳುವವರು ಕೇಳುವವರು ಸುತ್ತಲೂ ಹುಟ್ಟಿಕೊಂಡು ಆ ಕಳಪೆ ಶಾಲೆಯೂ ತಂತಾನೆ ಉನ್ನತೀಕರಣಗೊಳ್ಳುತ್ತದೆ. ಕಳಪೆ ಶಾಲಾ ಉನ್ನತೀಕರಣಕ್ಕೆ ಯಾವ ತರಬೇತಿ ಅನುಕೂಲಗಳೂ ಬೇಕಾಗಿಲ್ಲ. ಇಂಥ ಪ್ರಾಥಮಿಕ ಶಿಕ್ಷಣದಲ್ಲಿ, ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆಯನ್ನು ಅಳವಡಿಸಿಕೊಂಡರೆ ಅದಷ್ಟೇ ಸಾಕು. ಯಾಕೆಂದರೆ ಈ ಅರೆಮನಸ್ಸಿನ ಅಸಮಾನ ಶಿಕ್ಷಣದಿಂದಾಗಿ ಹಳ್ಳಿ ಮಕ್ಕಳು, ಗಲ್ಲಿ ಮಕ್ಕಳು, ತಳಸಮುದಾಯಗಳ ಮಕ್ಕಳು ಶಿಕ್ಷಣದಿಂದಲೇ ಉದುರಿ ಬೀಳುತ್ತಿದ್ದಾರೆ. ಹಾಗಾಗಿ ಈ ಶಿಕ್ಷಣ ಪದ್ಧತಿಯು ’ಒಳಗೊಂಡು ಹೊರಹಾಕುವಿಕೆ’ಯ (Inclusive Exclusion) ಜಾತಿ-ವರ್ಗ ಸೋಂಕಿನ ಶಿಕ್ಷಣ ಪದ್ಧತಿಯಾಗಿಬಿಟ್ಟಿದೆ. ಇದು ಸೌಲಭ್ಯವಂಚಿತ ಮಕ್ಕಳು ಶಿಕ್ಷಣದಲ್ಲಿ ಮುಂದೆ ದಾಟದಂತೆ ಉದುರಿಸುತ್ತಿದೆ. ಈ ಫಿಲ್ಟರ್ ಕೆಲಸದಲ್ಲಿ ಇಂಗ್ಲಿಷ್ ಒಂದು ದೊಡ್ಡ ಫಿಲ್ಟರ್ ಆಗಿ ಭಾಗಿಯಾಗಿದೆ.

ಈಗ ನ್ಯಾಯದ ಕಡೆ ನೋಡಿದರೂ ಆಸೆ ಭರವಸೆಗಳು ಕ್ಷೀಣವಾಗಿವೆ. ಪ್ರಾಥಮಿಕ ಶಿಕ್ಷಣ ಮಾಧ್ಯಮದ ತೀರ್ಪು ನೀಡುತ್ತ ನಮ್ಮ ಸರ್ವೋಚ್ಛ ನ್ಯಾಯಾಲಯವು ‘ಅಭಿವ್ಯಕ್ತಿ ಸ್ವಾತಂತ್ರ್ಯವು ಮಾತಿನ ಮಾಧ್ಯಮದ ಆಯ್ಕೆಯನ್ನು ಒಳಗೊಂಡಿರುತ್ತದೆ ಹಾಗೂ ತರಗತಿಗಳು ಅಭಿವ್ಯಕ್ತಿಯ ಜಾಗಗಳಾಗಿರುತ್ತವೆ ಎಂದಿದೆ. ಮೂಲಭೂತ ಹಕ್ಕನ್ನು ಕಿತ್ತುಹೋಗುವಷ್ಟು ಹಿಗ್ಗಾಮುಗ್ಗಾ ಎಳೆದುಬಿಟ್ಟಿದೆ ಹಾಗೂ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ಗೆರೆಯನ್ನು ಮಸುಕಾಗಿಸಿದೆ. ತಮಾಷೆ ನೋಡಿ-ಶಿಷ್ಟವಾಗಿ ಕಲಿಯುವ ಮುನ್ನ, ಮಗು ತಾನು ಹುಟ್ಟಿದ ಪರಿಸರದೊಳಗಿಂದ ಒಡಮೂಡಿಸಿಕೊಂಡ ಭಾಷೆಯೇ ಮಾತೃಭಾಷೆ- ಎಂಬ ಪ್ರಾಥಮಿಕ ಭಾಷಾ ಜ್ಞಾನಕ್ಕೆ ನಮ್ಮ ನ್ಯಾಯಾಲಯ ಕತ್ತು ಹಿಸುಕಿದಂತಿದೆ. ಶಿಕ್ಷಣ ಮಾಧ್ಯಮದ ಆಯ್ಕೆ ಮಗುವಿಗೆ ಆ ಮಗುವಿನ ಪರವಾಗಿ ಪೋಷಕರಿಗೆ ಸೇರಿದೆ ಅನ್ನುತ್ತದೆ. ಆಯ್ಕೆ ಪ್ರಶ್ನೆ ಬರುವುದು ಯಾವಾಗ? ಎರಡು ಮೂರು ಇದ್ದಾಗ ಮಾತ್ರ. ಒಂದೇ ಇದ್ದಾಗ ಆಯ್ಕೆ ಎಲ್ಲಿ ಬರುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೂ ಇರುವುದನ್ನು ಅಭಿವ್ಯಕ್ತಿಗೊಳಿಸುವುದು ತಾನೇ? ಇದೂ ಇರಲಿ – ಗೊತ್ತಿಲ್ಲದಿರುವುದರಿಂದ ಗೊತ್ತಿಲ್ಲದ ಕಡೆಗೆ ಕ್ರಮಿಸುವುದು- ಇದು ಶಿಕ್ಷಣದ ಪ್ರಾಥಮಿಕ ತಿಳಿವಳಿಕೆ. ಇದನ್ನಾದರೂ ನಮ್ಮ ನ್ಯಾಯಾಲಯ ಲಕ್ಷಿಸಬೇಕಾಗಿತ್ತು. ಹಾಗೆಯೇ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಮುಂಬರುವ ಅಪಾಯವನ್ನೂ ಮನಗಂಡು ಅಂದರೆ ರಾಜ್ಯಭಾಷೆಗಳು ಪಾಳೆಗಾರರಂತೆ ವರ್ತಿಸುತ್ತಾ ಆಯಾ ರಾಜ್ಯದೊಳಗೆ ಬರುವ ಹತ್ತಾರು ಮಾತೃಭಾಷೆ (ಉದಾ: ಕರ್ನಾಟಕದಲ್ಲಿ ತುಳು, ಉರ್ದು, ಕೊಂಕಣಿ, ಮರಾಠಿ, ತಮಿಳು, ತೆಲುಗು, ಕೊಡವ ಇತ್ಯಾದಿ)ಗಳನ್ನು ಕತ್ತು ಹಿಸುಕಿ ಬಿಡುತ್ತವೆ ಎಂಬ ಆತಂಕದಿಂದ ಅಲ್ಪಸಂಖ್ಯಾತ ಭಾಷೆಗಳ ರಕ್ಷಣೆಗೆ ಕತ್ತಿಯಂತೆ ಕೊಟ್ಟ ವಿಧಿಗಳನ್ನು ಬಳಸಿಯೇ ಆ ಅಲ್ಪಸಂಖ್ಯಾತ ಭಾಷೆಗಳನ್ನೂ ಜೊತೆಗೇ ಎಲ್ಲಾ ದೇಶಿ ಭಾಷೆಗಳನ್ನು ಕೊಲ್ಲಲು ಬಳಸಿದಂತಾಗಿಬಿಟ್ಟಿದೆ! ಉಳಿಗಾಲವಿಲ್ಲ.

ಹೀಗಿರುವಾಗ ನಾವು ಯಾವ ಕಡೆ ನೋಡಬೇಕು? ಈಗ ಪಾರ್ಲಿಮೆಂಟ್‌ಗೇ ಚಾಟಿ ಬೀಸಬೇಕಾಗಿದೆ. ಜನಾಂದೋಲನ, ರಾಜಕೀಯದ ಮೇಲೆ ಒತ್ತಡ ವ್ಯಾಪಕವಾಗಬೇಕಾಗಿದೆ. ಸಾಹಿತ್ಯ ಪರಿಷತ್‌ನಿಂದಲೂ ಈ ನಡೆಯನ್ನೇ ನಿರೀಕ್ಷಿಸುತ್ತೇನೆ. ಪರಿಷತ್ತಿಗೆ ನೂರು ವರ್ಷಗಳ ಹಿರಿಮೆ ಜತೆ ನೂರು ವರ್ಷದ ಜಡ್ಡೂ ಇರಬಹುದು. ಆದರೆ ಜೀವವಿದೆ. ಪೊರೆ ಕಳಚಬೇಕಾಗಿದೆ ಅಷ್ಟೇ. ಆಗ ಮಾತ್ರ – ಗುಣಮುಖವಾಗಿಸಲು ಕರೆಂಟ್ ಷಾಕ್ ಕೊಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ಯವಾಗಬಹುದು.

ಸಾಹಿತ್ಯ ಪರಿಷತ್ ಹೊಸ ಹುಟ್ಟು ಪಡೆದರೆ ಅದಕ್ಕೆ ಪೂರಕ ವಾತಾವರಣ ಈಗ ಕರ್ನಾಟಕ ರಾಜ್ಯದಲ್ಲಿ ಇದೆ. ಯಾಕೆಂದರೆ ನನ್ನಷ್ಟೇ ಅಥವಾ ನಿಮ್ಮಷ್ಟೆ ಮಾತೃಭಾಷೆ ಪ್ರಾಥಮಿಕ ನೆರೆಹೊರೆ ಸಮಾನಶಿಕ್ಷಣದ ಕಳಕಳಿ ಇರುವ ಮುಖ್ಯಮಂತ್ರಿಗಳನ್ನು ಈ ರಾಜ್ಯ ಈಗ ಪಡೆದಿದೆ. ಬಹುಶಃ ಹಿಂದೆ ಇಂಥ ಸಂದರ್ಭ ಇರಲಿಲ್ಲ ಎನ್ನಬಹುದು. ಹಾಗೇ ಮುಂದೆ ಗೊತ್ತಿಲ್ಲ. ಶ್ರೀ ಸಿದ್ದರಾಮಯ್ಯ, ಶ್ರೀ ನಿತೀಶ್‌ಕುಮಾರ್‌ರಂಥ ಮುಖ್ಯಮಂತ್ರಿಗಳು ಮುಖವಾಡ ಇಲ್ಲದವರು, ಹೃತ್ಪೂರ್ವಕತೆ ಇರುವವರು ಜೊತೆಗೆ ಧೈರ್ಯವಂತರೂ ಕೂಡ. ಹಾಗಾಗಿ ಈ ರಾಜಕಾರಣದೊಳಗೂ ಇಂಥವರಿಂದ ಒಂದಿಷ್ಟು ನಿರೀಕ್ಷಿಸಬಹುದು. ಇಂಥವರಿಗೆ ಪಂಕ್ತಿಬೇಧವೂ ಗೊತ್ತು. ನೆರೆಹೊರೆ ಸಮಾನ ಮಾತೃಭಾಷಾ ಪ್ರಾಥಮಿಕ ಶಿಕ್ಷಣವಿಲ್ಲದ ಕಾರಣವಾಗಿ ಹಳ್ಳಿಮಕ್ಕಳು, ಗಲ್ಲಿಮಕ್ಕಳು, ತಳಸಮುದಾಯದ ಮಕ್ಕಳು ಶಿಕ್ಷಣದಿಂದಲೇ ಉದುರಿಹೋಗುತ್ತಿರುವುದೂ ಗೊತ್ತು. ಈ ಸಂದರ್ಭದಲ್ಲಿ ಈಗ ಸಾಹಿತ್ಯ ಪರಿಷತ್ ಧೈರ್ಯ ಮಾಡಿ ಹೊಸ ಹುಟ್ಟು ಪಡೆದು ಸರ್ಕಾರಕ್ಕೆ ಸವಾಲೆಸೆದರೆ ಒಂದಿಷ್ಟು ಬದಲಾವಣೆ ಆಗಲೂಬಹುದು. ಹೊಸ ಸಾಧ್ಯತೆಗಳು ಗೋಚರಿಸಲೂ ಬಹುದು.

ಅದಕ್ಕಾಗಿ, ಸಂವಿಧಾನ ತಿದ್ದುಪಡಿಗೆ ರಾಜಕೀಯ ಒತ್ತಡವನ್ನು ನಿರಂತರವಾಗಿ ಉಂಟು ಮಾಡುತ್ತಾ, ಜೊತೆಗೆ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದಲೇ ಒಂದು ಕಲಿಕೆಯ ಭಾಷೆಯಾಗಿ ಒಪ್ಪಿಕೊಂಡು ಚರ್ಚಿಸಬಹುದಾದ ಒಂದಿಷ್ಟು ವಿಚಾರಗಳನ್ನು ತಮ್ಮ ಮುಂದಿಡುವೆ:

  1. ಭಾರತವನ್ನು ಐಕ್ಯಗೊಳಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ಉನ್ನತಗೊಳಿಸಲು ಪೂರಕವಾದ ನೆರೆಹೊರೆ ಶಿಕ್ಷಣವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಇದಕ್ಕಾಗಿ ಮಕ್ಕಳ ಪ್ರವೇಶಾತಿಯನ್ನು ಆಯಾ ಶಿಕ್ಷಣ ಸಂಸ್ಥೆಗಳಿಗೆ ವಹಿಸಿಕೊಟ್ಟು ದಂಧೆಗೆ ಅವಕಾಶ ನೀಡಬಾರದು. ಬದಲಿಗೆ ಆ ಪ್ರದೇಶದ ಶಿಕ್ಷಣ ಅಧಿಕಾರಿ, ಚುನಾಯಿತ ಪ್ರತಿನಿಧಿ ಹಾಗೂ ಪೋಷಕರ ಸಮಿತಿ ಸಮ್ಮುಖದಲ್ಲಿ – ಲಾಟರಿ ವ್ಯವಸ್ಥೆ ಮೂಲಕ ನಿರ್ಧರಿಸಬೇಕು.
  2. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ ೫೧ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಇರುವಂತೆ ತಿದ್ದುಪಡಿಯಾಗಬೇಕು.
  3. ಖಾಸಗಿ (ಅನುದಾನ ಸಹಿತ-ರಹಿತ) ಶಿಕ್ಷಣ ಸಂಸ್ಥೆಗಳು ಸರ್ಕಾರದ ಏಜೆನ್ಸಿಯಂತೆ ಕಾರ್‍ಯನಿರ್ವಹಿಸುವಂತಹ ಕಾನೂನು ರೂಪಿಸಲು ಒತ್ತಾಯಿಸಬೇಕು.
  4. ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ -ಕಲಂ ೨೯ (ಎಫ್)ನಲ್ಲಿ medium of instructions shall, as for as practicable, be in child`s mother tongue; -ಎಂದಿದೆ. ಇಲ್ಲಿ as for as practicable ಎಂದು ಇರುವುದು ಮಾತೃಭಾಷಾ ಶಿಕ್ಷಣ ಮಾಧ್ಯಮಕ್ಕೆ ತೊಡರುಗಾಲಾಗಿದೆ. ಆದ್ದರಿಂದ as for as practicable ಅನ್ನುವುದನ್ನು ಕಿತ್ತು ಹಾಕಿ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ ಇಪ್ಪತ್ತೆರಡು ಭಾಷೆಗಳಲ್ಲಿ ಯಾವುದಾದರೂ ಎಂದು ಆಯ್ಕೆ ನೀಡುವ ಕಾನೂನು ರೂಪಿಸುವಂತಾಗಲು ನಮ್ಮ ಶಾಸಕಾಂಗವನ್ನು ಒತ್ತಾಯಿಸಬೇಕಾಗಿದೆ.
  5. ಮಕ್ಕಳ ಮನಸ್ಸು ಆಕಾರ ಪಡೆಯುವ ಅಂಗನವಾಡಿಯಿಂದ ಮೂರನೇ ತರಗತಿಯವರೆಗೆ ಆಯಾ ರಾಜ್ಯದ ಮಾತೃಭಾಷೆಗಳಲ್ಲಿ ಅಂದರೆ ಮಗುವಿನೊಳಗೆ ಪರಿಸರದಿಂದ ಒಡಮೂಡಿ ಉಂಟಾದ ಭಾಷೆಗಳಲ್ಲಿ (ಉದಾ : ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭಾಷೆಗಳಾದ ತುಳು, ಕೊಂಕಣಿ, ಮರಾಠೀ, ಉರ್ದು, ತಮಿಳು, ಇತ್ಯಾದಿಗಳೊಡನೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆ ಕನ್ನಡವೂ ಸೇರಿದಂತೆ) ಶಿಕ್ಷಣ ಮಾಧ್ಯಮ; ಮುಂದಿನ ಪ್ರಾಥಮಿಕ ಶಿಕ್ಷಣದಲ್ಲಿ ಅಪೇಕ್ಷೆ ಪಟ್ಟವರಿಗೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆಗಳಲ್ಲಿ ಶಿಕ್ಷಣಮಾಧ್ಯಮವನ್ನು -ಮೊದಲ ಹೆಜ್ಜೆಯಾಗಿ ಜಾರಿಯಾಗಿಸಲು ಒತ್ತಾಯಿಸಬೇಕು.
  6. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಮುಚ್ಚಿರುವ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಹಿಸಿಕೊಡುವುದು ಅಥವಾ ಪರಭಾರೆ ಮಾಡಬಾರದು. ಇನ್ನು ಮುಂದೆ ಖಾಸಗಿ ಶಿಕ್ಷಣಸಂಸ್ಥೆಗಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಅನುಮತಿ ನೀಡದೇ ಸಾರ್ವಜನಿಕ ಶಾಲೆಗಳನ್ನೇ ಹೆಚ್ಚು ಮಾಡಬೇಕು. ಭಾರತದ ಐಕ್ಯತೆಯ ದೃಷ್ಟಿಯಿಂದ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ತಿದ್ದುಪಡಿ ತಂದು ಪ್ರಾಥಮಿಕ ಶಿಕ್ಷಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಕೋಟಾವನ್ನು ಶೇಕಡಾ ೫೦ಕ್ಕೆ ಏರಿಸಿ ಎಲ್ಲಾ ಜಾತಿ, ವರ್ಗ, ಧರ್ಮಗಳ ಮಕ್ಕಳು ಒಡನಾಡುವಂತಾಗಲು ಕಾನೂನು ರೂಪಿಸಲು ಒತ್ತಾಯಿಸಬೇಕು.

ಇಂಥವು. ಇವುಗಳೇ ಅಂಥೇನಲ್ಲ. ಆದರೆ ಮನವಿ ಮಾಡಿದರೆ ತಂತಾನೇ ಯಾವುದೂ ಈಡೇರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಪೊರೆ ಕಳಚಿಕೊಂಡು ಎಲ್ಲರನ್ನು ಒಡಗೂಡಿ ಹೋರಾಡಿದರೆ ಒಂದಿಷ್ಟು ಈಡೇರಬಹುದು. ಹೀಗಿರುವಾಗ ಯಥಾಸ್ಥಿತಿಯಲ್ಲಿ ಯಾಂತ್ರಿಕವಾಗಿ ಜರುಗುತ್ತಿರುವ ಸಮ್ಮೇಳನಗಳಲ್ಲಿ ಭಾಗವಹಿಸುವುದಕ್ಕೆ ನನ್ನ ಮನಸ್ಸು ಹಿಂದೆಗೆಯುತ್ತದೆ. ಪರಿಷತ್ ಪೊರೆ ಕಳಚಿ ನಿಂತರೆ ನಾನೂ ಜೊತೆಗೂಡುತ್ತೇನೆ. ಅಷ್ಟೇ ಅಲ್ಲ ಭಾರತದ ಅನಾಥ ಅಬ್ಬೇಪಾರಿ ದೇಶೀ ಭಾಷೆಗಳ ಪ್ರಜ್ಞಾವಂತರೂ ತಮ್ಮೊಡನೆ ಜೊತೆಗೂಡುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಲು ನಾನು ಸಮ್ಮತಿಸುತ್ತಿಲ್ಲ. ಇದರಿಂದ ಸಾಹಿತ್ಯ ಪರಿಷತ್‌ನ ಒಂದು ಹಲ್ಲಿಗೆ ನೋವು ಮಾಡಿಬಿಟ್ಟಿರುವೆ! ಈ ನೋವಿನ ಕಡೆಗೆ ಪರಿಷತ್‌ನ ಹಾಗೂ ದೇಶಿ ಭಾಷಿಗರ ನಾಲಿಗೆಯು ಆಗಾಗಲಾದರೂ ಹೊರಳುತ್ತಿರಲಿ ಎಂಬ ಆಸೆಯಿಂದ. ಇದರಿಂದಲೂ ಒಂದಿಷ್ಟು ಸಾಧ್ಯತೆಗಳು ಹುಟ್ಟಬಹುದೇನೋ ಎಂಬ ಆಸೆಯಿಂದ.

ದೇವನೂರ ಮಹಾದೇವ
೧೮/೧೨/೨೦೧೪

8 thoughts on “ದೇವನೂರ ಮಹಾದೇವರಿಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ

  1. AHANI

    ಇಂತಹ ದೃಢ ನಿಧಾಱರ ತೆಗೆದುಕೊಳ್ಳಲು ಸಾಧ್ಯವಿರುವುದು ದೇವನೂರರಿಗೆ ಮಾತ್ರ. ಎಲ್ಲಾ ಸಾಹಿತಿಗಳೂ ಸಮ್ಮೇಳನವನ್ನೇ ಬಹಿಷ್ಕರಿಸಿದರೆ ಮಾತ್ರ ಪರಿಷತ್ತು ಆತ್ಮಾವಲೋಕನ ಮಾಡಿಕೊಂಡು ತನ್ನ ಪೊರೆ ಕಳಚಬಹುದೇನೋ! ಆದರೆ ಅಂತಹ ತಾಕತ್ತು ನಮ್ಮ ಸಾಹಿತಿಗಳಿಗಿದೆಯೇ?
    ಅಹನಿ, ಮೈಸೂರು

    Reply
  2. Ananda Prasad

    ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟದ ಗೌರವ ಮತ್ತು ಅದು ನೀಡುವ ಮನ್ನಣೆಯನ್ನು ಒಂದು ಶ್ರೇಷ್ಠ ಜನಪರ ನಿಲುವಿಗಾಗಿ ನಿರಾಕರಿಸಿರುವ ಮತ್ತು ತನ್ನ ನಿಲುವಿಗೆ ಅತ್ಯಂತ ದೃಢವಾಗಿ ಅಂಟಿಕೊಂಡಿರುವ ದೇವನೂರ ಮಹಾದೇವ ಅವರು ಹೆಸರಿಗೆ ತಕ್ಕನಾಗಿಯೇ ಮಹಾದೇವನ ಘನತೆಯಿಂದ ನಡೆದುಕೊಂಡಿದ್ದಾರೆ. ಒಂದೆಡೆ ದೇಶದ ನ್ಯಾಯಾಂಗವೇ ಮುಂದೆ ನಿಂತು ದೇಶಭಾಷೆಗಳ ಹಾಗೂ ದೀನದಲಿತರ ಕತ್ತು ಹಿಸುಕುವ ಹಾಗೂ ಸಮಾಜದಲ್ಲಿ ಅಸಮಾನತೆ ಹೆಚ್ಚಿಸುವ ಘನ ತೀರ್ಪುಗಳನ್ನು ನೀಡುವ ಮೂಲಕ ಮಾನಸಿಕ ಗುಲಾಮಗಿರಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವಾಗ ಇಂಥ ದೃಢ ನಿಲುವು ತೆಗೆದುಕೊಳ್ಳುವ ಧೀಮಂತರ ಅವಶ್ಯಕತೆ ಇದೆ. ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗಗಳು ಜನಪರ ನಿಲುವಿನಿಂದ ಹಿಂದೆ ಸರಿದು ವಿದೇಶಿ ಭಾಷೆಯ ಹಿಂದೆ ಬಿದ್ದಿರುವಾಗ ಹಾಗೂ ವಿಸ್ಮೃತಿಗೆ ಒಳಗಾಗಿರುವಾಗ ಇಡೀ ಸಮಾಜದ ಅಂತಸ್ಸಾಕ್ಷಿಯನ್ನು ಬಡಿದೆಬ್ಬಿಸುವ ಜವಾಬ್ದಾರಿ ಲೇಖಕ, ಸಾಹಿತ್ಯ ವಲಯದ ಮೇಲೆ ಇರುತ್ತದೆ. ಇದನ್ನು ಭಾರತದ ಲೇಖಕ ಹಾಗೂ ಸಾಹಿತ್ಯ ಬಳಗ ಮಾಡಬೇಕಾಗಿದೆ.

    ಕರ್ನಾಟಕದ ಮುಖ್ಯಮಂತ್ರಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಾತೃಭಾಷಾ ಮಾಧ್ಯದ ಶಿಕ್ಷಣ ಸಂಬಂಧ ಸಂವಿಧಾನ ತಿದ್ದುಪಡಿ ತರುವ ಕಾರ್ಯಪ್ರವೃತ್ತರಾಗಬೇಕೆಂದು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಪ್ರಧಾನಮಂತ್ರಿಗಳು ತೆಪ್ಪಗೆ ಕುಳಿತಿರುವುದು ಸಮಂಜಸವಲ್ಲ. ಹಾಗೆ ನೋಡಿದರೆ ದೇಶದ ಸಂಸ್ಕೃತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಂಘ ಪರಿವಾರದ ಗರಡಿಯಲ್ಲಿ ಬೆಳೆದ ಪ್ರಧಾನಿ ಮೋದಿಯವರೇ ಈ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿತ್ತು. ದೇಶಭಾಷೆಗಳ ಬಗ್ಗೆ ಗೌರವ ಬೆಳೆಸುವ ಹಾಗೂ ದೇಶದಲ್ಲಿ ಅಸಮಾನತೆಯನ್ನು ಹೆಚ್ಚಿಸುತ್ತಿರುವ ಇಂಗ್ಲೀಷ್ ಮಾಧ್ಯಮ ಶಿಕ್ಷಣಕ್ಕೆ ಕಡಿವಾಣ ಹಾಕುವ ಶ್ರೇಷ್ಠ ಕೆಲಸವನ್ನು ಪ್ರಧಾನಮಂತ್ರಿಗಳು ಮಾಡಬೇಕಾಗಿರುವುದು ಇಂದಿನ ಅಗತ್ಯ. ಈ ಬಗ್ಗೆ ಸಿದ್ಧರಾಮಯ್ಯನವರಿಗೆ ಇರುವ ಕಾಳಜಿ ನಮ್ಮ ಪ್ರಧಾನಮಂತ್ರಿಗಳಿಗೆ ಇಲ್ಲದೇ ಹೋಯಿತಲ್ಲ ಎಂಬುದು ವಿಷಾದನೀಯ. ಸಂಘ ಪರಿವಾರದಲ್ಲಿ ಬೆಳೆದ ಪ್ರಧಾನಿಗೂ ದೇಶಭಾಷೆಗಳ ಬಗ್ಗೆ ದೃಢ ನಿಲುವು ತಳೆಯುವ ಧೈರ್ಯ ಹಾಗೂ ಕಾಳಜಿ ಇಲ್ಲದಿರುವುದು ಖಂಡನೀಯ.

    Reply
  3. ಮಂಟೇಸ್ವಾಮಿ

    ಈ ವರ್ಷದ ಬಹುದೊಡ್ಡ ಜೋಕ್‌ ಯಾವುದು?
    ನಾನು ಅತ್ಯಂತ ಹೆಚ್ಚು ಮೆಚ್ಚುವ ಸಾಹಿತಿ ದೇವನೂರ ಮಹಾದೇವ ಅವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಲು ನಿರಾಕರಿಸಿರುವ ಬಗ್ಗೆ ಪರ– ವಿರೋಧದ ಚರ್ಚೆ ನಡೆಯುತ್ತಿದೆ. ಇದನ್ನು ಬಂದು ಬದಿಗೆ ಇಡೋಣ.
    ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅದರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಊರಲ್ಲಿ ಹಬ್ಬದ ವೇಳೆ ಒಂದು ಮಾತು ಯಾವಾಗಲೂ ಚಾಲ್ತಿಯಲ್ಲಿರುತ್ತದೆ. ದುಡ್ಡು ಸಿಕ್ಕಿದಾಗ ಹಬ್ಬ ಮಾಡಿದರೆ ಆಯಿತು ಎನ್ನುವುದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರ ನೋವಿನ ಮಾತು. ಕಸಾಪದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕನ್ನಡ ಭಾಷಾ ಮಾಧ್ಯಮವನ್ನು ನೆಪವಾಗಿಟ್ಟುಕೊಂಡು ಕಸಾಪದ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ.
    ರಾಮಮನೋಹರ ಲೋಹಿಯಾ– ‘ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಕಂಡರೂ ಪ್ರತಿಭಟಿಸದೆ ಇರುವ ವ್ಯಕ್ತಿಯೂ ಕೂಡ ತಪ್ಪಿತಸ್ಥ’ ಎಂದು ಹೇಳುತ್ತಾರೆ. ಮೂಲತಃ ದೇವನೂರ ಮಹಾದೇವ ಕೂಡ ಲೋಹಿಯಾವಾದಿಯೇ.
    ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ನಿಂತ ಸಂದರ್ಭವನ್ನು ಈಗ ನೆನಪಿಸಿಕೊಳ್ಳುವ ಅನಿವಾರ್ಯತೆ ಇದೆ.
    ಪ್ರೊ.ಎಂಡಿಎನ್‌ ಅವರ ಕಾರಿನಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಿದಾಗಲೂ ದೇವನೂರ ಅವರು ಸಿದ್ದರಾಮಯ್ಯ ಅವರ ಜತೆಗಿದ್ದರು ಎಂಬುದನ್ನು ಕೇಳಿದ್ದೇನೆ. ತನ್ನ ಗೆಳೆಯನ ಗೆಲುವಿಗೆ ಕಾರು ತಳ್ಳಿರುವ ಹೆಗ್ಗಳಿಕೆಯೂ ದೇವನೂರ ಅವರಿಗಿದೆ. ಈಗ ಗೆಳೆಯನೇ ರಾಜ್ಯದ ಮುಖ್ಯಮಂತ್ರಿ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಜಾರಿಗೊಳಿಸಲು ಸಿದ್ದರಾಮಯ್ಯ ಅವರಿಗೆಯೇ ನೇರವಾಗಿ ಸವಾಲು ಹಾಕಲು ಮಹಾದೇವ ಅವರು ಮುಂದಾಗಬಹುದಲ್ಲವೇ? ಎಂಬ ಸಣ್ಣ ಯೋಚನೆ ನನ್ನಲ್ಲಿ ಕೊರೆಯುತ್ತಿದೆ. ಬಹಿರಂಗವಾಗಿ ತೊಡೆ ತಟ್ಟಿದರೆ ಗೆಳೆತನಕ್ಕೆ ಏನಾದರೂ ಧಕ್ಕೆಯಾಗುತ್ತದೆಯೇ? ಇದರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಹೆಚ್ಚು ಲಾಭ ಅಲ್ಲವೇ?

    Reply
    1. Ananda Prasad

      ದೇವನೂರು ಮಹಾದೇವ ಹಾಗೂ ಸಿದ್ಧರಾಮಯ್ಯ ಗೆಳೆಯರಾದರೂ ಕನ್ನಡ ಮಾಧ್ಯಮ ಶಿಕ್ಷಣ ಜಾರಿಗೊಳಿಸಲು ಸಿದ್ಧರಾಮಯ್ಯ ಅವರು ಸರ್ವಾಧಿಕಾರಿ ಅಲ್ಲ ತಾನೇ? ನಮ್ಮಲ್ಲಿ ನ್ಯಾಯಾಂಗ ಎಂಬುದು ಒಂದು ಇದೆಯಲ್ಲವೇ? ಸರ್ಕಾರವು ಮಾಡುವ ಪ್ರಯತ್ನಗಳನ್ನು ನಿಷ್ಫಲಗೊಳಿಸುತ್ತಿರುವುದು ನ್ಯಾಯಾಂಗ ಎಂಬುದು ಗಮನಾರ್ಹ. ಹೀಗಾಗಿ ಈ ಕುರಿತು ಏನಾದರೂ ಬೆಳವಣಿಗೆ ಆಗಬೇಕಿದ್ದರೆ ಸಂವಿಧಾನ ತಿದ್ದುಪಡಿಯ ಅವಶ್ಯಕತೆ ಇದೆ. ಅದಕ್ಕಾಗಿ ರಾಷ್ಟ್ರೀಯ ಜಾಗೃತಿಯ ಅಗತ್ಯ ಇದೆ. ಇಲ್ಲದಿದ್ದರೆ ಈಗ ಇರುವ ಸಂವಿಧಾನವನ್ನು ಉಲ್ಲೇಖಿಸಿ ನ್ಯಾಯಾಂಗ ಉಳ್ಳವರ ಹಿತ ಕಾಯುವ ಕೆಲಸ ಮಾಡುವುದನ್ನು ತಪ್ಪಿಸಲಾಗದು. ಈ ಹಿನ್ನೆಲೆಯಲ್ಲಿ ನೋಡಿದಾಗ ಸಮಾಜದಲ್ಲಿ ಈ ಕುರಿತು ಒಂದು ಚಿಂತನೆ ಬೆಳೆಯಲು ದೇವನೂರು ಮಹಾದೇವ ಅವರು ಒಂದು ಪ್ರಯತ್ನ ಮಾಡಿದ್ದಾರೆ. ಇದನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ಸಮಾಜದ ಎಲ್ಲ ಪ್ರಜ್ಞಾವಂತರ ಮೇಲೆ ಇದೆ. ಸಮಾಜದಲ್ಲಿ ಇರುವ ಇಂಗ್ಲೀಷ್ ಭಾಷಾ ಮಾಧ್ಯಮದ ಕುರುಡು ನಂಬಿಕೆಯನ್ನು ಹೋಗಲಾಡಿಸಲು ಸಾರ್ವತ್ರಿಕ ಆಂದೋಲನದ ಅವಶ್ಯಕತೆ ಇದೆ. ಅದಕ್ಕೆ ನಮ್ಮ ಸಾಹಿತಿಗಳು ದೇಶವ್ಯಾಪಿಯಾಗಿ ಹೋರಾಟ ನಡೆಸಬೇಕಾಗಿದೆ. ಬರಿಯ ಕನ್ನಡ ಸಾಹಿತಿಗಳಷ್ಟೇ ಇದಕ್ಕೆಹ್ ಹೋರಾಡಿದರೆ ಸಾಕಾಗುವುದಿಲ್ಲ. ದೇಶವ್ಯಾಪಿಯಾಗಿ ಎಲ್ಲ ಭಾಷೆಗಳ ಸಾಹಿತಿಗಳನ್ನೂ ಈ ವಿಷಯವಾಗಿ ರಾಷ್ಟ್ರೀಯ ಜಾಗೃತಿ ಮೂಡಿಸಲು ಒಂದೇ ವೇದಿಕೆಗೆ ತರುವ ಕೆಲಸ ಆಗಬೇಕಿದೆ. ಇಲ್ಲದೆ ಹೋದರೆ ಈ ದಿಶೆಯಲ್ಲಿ ಯಾವುದೇ ಬೆಳವಣಿಗೆ ನಡೆಯುವ ಸಂಭವ ಇಲ್ಲ.

      Reply
      1. Nagshetty Shetkar

        ಸಿ ಎಂ ಸಿದ್ದರಾಮಯ್ಯನವರು ಪ್ರಗತಿಪರ ಆದರ್ಶಗಳಿಗೆ ಪೂರಕವಾಗಿ ಆಡಳಿತ ನಡೆಸಲು ಸಿದ್ಧರಿದ್ದಾರೆ (ಉದಾ: ಮೂಢನಂಬಿಕೆ ನಿಷೇಧ ಮಸೂದೆ, ಮಠಮಾನ್ಯಗಳ ಸರಕಾರೀಕರಣ, ಶಾದಿ ಭಾಗ್ಯ, ಅನ್ನ ಭಾಗ್ಯ). ಆದರೆ ಅವರದೇ ಪಕ್ಷದಲ್ಲಿ ಪುರೋಹಿತಶಾಹಿಯ ನಿಕಟವರ್ತಿಗಳೂ ಬೆಂಬಲಿಗರೂ ಅನೇಕ ಜನರಿದ್ದಾರೆ. ಇವರೆಲ್ಲ ನೆಹರೂ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ಬಾಯಲ್ಲಿ ಹೇಳುತ್ತಾರೆ ಉಡುಪಿ ರಥಬೀದಿಯಲ್ಲಿ ನಡೆಯುತ್ತಾರೆ. ಇಂಥವರಿಂದಲೇ ಸಿದ್ದರಾಮಯ್ಯನವರಿಗೆ ಸಂಕಟ ಉಂಟಾಗಿದೆ. ತಮ್ಮ ಪಕ್ಷದಲ್ಲೇ ಇರುವ ಮನುವಾದಿಗಳು ಸಿದ್ದರಾಮಯ್ಯನವರಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದಾರೆ. ಕನ್ನಡದ ಜನತೆ ಸಿದ್ದರಾಮಯ್ಯನವರಿಗೆ ಪೂರ್ಣ ಬೆಂಬಲ ನೀಡಿದರೆ ಮನುವಾದಿಗಳ ನೀರು ಕಾಯಿಸಬಹುದಾಗಿದೆ.

        Reply
  4. M A Sriranga

    ಮಂಟೇಸ್ವಾಮಿ ಅವರಿಗೆ—ಒಂದು ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ಪ್ರತಿ ವರ್ಷ ಅದೇ ಸರ್ಕಾರ ಕೊಡುವ ಸಬ್ಸಿಡಿಯಿಂದ ತನ್ನ ದಿನ ನಿತ್ಯದ ಖರ್ಚು ವೆಚ್ಚ, ಅಲ್ಲಿ ಕೆಲಸಕ್ಕಿರುವ ನೌಕರರ ಸಂಬಳ ಸಾರಿಗೆ ಇತ್ಯಾದಿಗಳನ್ನು ಜತೆಗೆ ವರ್ಷಕ್ಕೊಮ್ಮೆ ನಡೆಸಬೇಕಾದ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಅನುದಾನ ಪಡೆಯುವ ಕ ಸಾ ಪ ಮಾಡಬೇಕೆಂದು ನಿರೀಕ್ಷಿಸುವುದೇ ತಪ್ಪು. ಇದುವರೆಗೆ ನಡೆದ ಕ ಸಾ ಪ ದ ವಾರ್ಷಿಕ ಸಮ್ಮೇಳನಗಳಲ್ಲಿ ನೂರಾರು ಗೊತ್ತುವಳಿಗಳನ್ನು,ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾಗಿದೆ. ಅದು ಮಾಮೂಲಿನಂತೆ ವಿಧಾನಸೌಧದ ಕಡತಗಳ ನಡುವೆ ಸೇರಿಕೊಂಡು ಗಾಢ ನಿದ್ರೆಯಲ್ಲಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಆರು ದಶಕಗಳಾಗುತ್ತಾ ಬಂತು. ಕರ್ನಾಟಕ ಸರ್ಕಾರ ಕೊನೆಯ ಪಕ್ಷ ಈಗ್ಗೆ ಮೂವತ್ತು ವರ್ಷಗಳ ಹಿಂದೆಯಾದರೂ ಕನ್ನಡ ಭಾಷಾ ಮಾಧ್ಯಮದ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲವೇನೋ? ಈಗ ಕಾಲ ಮಿಂಚಿಹೋಗಿದೆ. ಮಿಂಚಿಹೋದ ಕಾಲದ ಬಗ್ಗೆ ಚಿಂತಿಸಿ ಫಲವಿಲ್ಲ. ಭಾಷೆಯ ವಿಷಯದಲ್ಲಿ ಸ್ವಲ್ಪ ಅತಿ ಎನಿಸಿದರೂ ನಮಗೆ ತಮಿಳುನಾಡು ಮಾದರಿಯಾಗಬೇಕಿತ್ತು. ಆದರೆ ಹಾಗಾಗದೆ ಇರಲು ಕಾರಣ ಇದುವರೆಗೆ ನಮ್ಮನ್ನಾಳಿದ ರಾಜ್ಯ ಸರ್ಕಾರಗಳು ತಮ್ಮ ತಮ್ಮ ರಾಷ್ಟ್ರೀಯ ಪಕ್ಷಗಳ ಒಲವು-ನಿಲುವುಗಳನ್ನು “ಪಕ್ಷ ನಿಷ್ಠೆ”. “ಹೈ ಕಮಾಂಡ್”ಗಳ ಹೆಸರಿನಲ್ಲಿ ಅನುಸರಿಸಬೇಕಾಯ್ತು. ಅವುಗಳ ವಿರುದ್ಧ ಹೋಗಲಾಗದ ರಾಜಕೀಯದ ನಡುವೆ ನಮ್ಮ ಕನ್ನಡ ಸೊರಗುತ್ತಾ ಬಂತು. ಈಗ ಕೊನೆಯ ಪಕ್ಷ ಸರ್ಕಾರದ ಕಛೇರಿಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಮತ್ತು ಅನುದಾನ ಸಹಿತ ಶಾಲೆಗಳಲ್ಲಾದರೂ ನಮ್ಮ ಮಕ್ಕಳ ಕಿವಿಗೆ ಕನ್ನಡದ ಪದಗಳು, ವಾಕ್ಯಗಳು (words, sentences) ಕೇಳಿಸುವಂತೆ ಮಾಡಬೇಕಾಗಿದೆ.ಅದು ರಾಜ್ಯ ಸರ್ಕಾರದಿಂದ ಆಗಬೇಕು. ಕ ಸಾ ಪ ದಿಂದಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಯಾರು ಅಧ್ಯಕ್ಷರಾಗುತ್ತಾರೋ ಅವರಿಂದಲೂ ಅಲ್ಲ. ಇಲ್ಲವಾದರೆ ಅಷ್ಟಿಷ್ಟು ಕನ್ನಡ ಬಲ್ಲ ನಮ್ಮ ಮಕ್ಕಳು ಮತ್ತು ಈಗ ಐವತ್ತು ಅರವತ್ತು ವಯಸ್ಸಿನ ನಾವುಗಳೇ ಕನ್ನಡ ಭಾಷೆ ಅರಿತ ಕೊನೆ ಪೀಳಿಗೆಯಾಗಬಹುದು. ನಮ್ಮ ಮೊಮ್ಮಕ್ಕಳು ಕನ್ನಡ ಎಂದರೆ what is that kannada mom? dad? grand pa? grand ma/.? ಎಂದು ಕೇಳುತ್ತವೆ. .

    Reply
  5. Salam Bava

    ನಾನು ಪ್ರಾಥಮಿಕ ಶಿಕ್ಷಣ ಪಡೆದ(ಕನ್ನಡ ಮೀಡಿಯಂ) ಶಾಲೆಗೆ ನಾನು ಭೇಟಿ ಇತ್ತಾಗ ಅಲ್ಲಿ ಆಶ್ಚರ್ಯ ಕಾದಿತ್ತು . ಮಕ್ಕಳ ದಾಖಲಾತಿಗಾಗಿಗಾಗಿ ಶಿಕ್ಹಕರು ಮನೆ,ಮನೆಗೆ ಅಲೆಯುವ ಪರಿಸ್ಥಿತಿ ,ಅವರು ಹೇಳಿದರು – ಘಟ್ಟದ ಮೇಲಿಂದ ಬಂದ ಕಟ್ಟಡ ಕಾರ್ಮಿಕರ ಮಕ್ಕಳನ್ನು ಪುಸಲಾಯಿಸಿ ಶಾಲೆಗೆ ಸೇರಿಸುತ್ತೇವೆ ,ಇಲ್ಲವಾದರೆ ನಮ್ಮ ನೌಕರಿಯ ಪ್ರಶ್ನೆ . ಕನ್ನಡ ನಾಡಿನಲ್ಲೇ ಕನ್ನಡಕ್ಕೆ ಇಂಥಾ ಶೋಚನೀಯ ಪರಿಸ್ಥಿತಿ ಬಂತು ಅಂತಾದರೆ ಇನ್ನು ಮಂಟೆಸ್ವಾಮಿಯವರು ಹೇಳಿದಂಥಾ ಸ್ಥಿತಿ ಬೇಗನೇ ಬರಬಹುದು . ನನ್ನದೇ ೫ ಹಳ್ಳಿಗಳ ಪರಿಸರದಲ್ಲಿ ೩ ಕನ್ನಡ ಶಾಲೆಗಳು ಮುಚ್ಚಿವೆ . ಎಲ್ಲಾ ಪೋಷಕರು ಬದುಕುವ ಓಟದಲ್ಲಿ ಇಂಗ್ಲಿಷಿನ ಹಿಂದೆ ಬಿದ್ದಿದ್ದಾರೆ . ಎಲ್ಲರ ಮನಪರಿವರ್ತಿಸಿ ಕಡ್ಡಾಯ ಕನ್ನಡ ಸಾದ್ಯವಿಲ್ಲ . ರಾಜಕೀಯ ಇಚ್ಚಾ ಶಕ್ತಿಯಿಂದ ಮಾತ್ರಾ ಅದು ಸಾದ್ಯ. – ಫ್ರಾನ್ಸ್ ,ಜಪಾನ್ ಮತ್ತು ಕೊರಿಯ ಮೊದಲಾದ ಅತ್ಯಂತ ಮುಂದುವರಿದ ರಾಷ್ಟ್ರ ಗಳೇ ಇಂಗ್ಲೀಷ್ಗೆ ಸಾದಾರಣ ಮನ್ನಣೆ ಮಾತ್ರಾ ನೀಡುತ್ತದೆ ,ಆ ತಮ್ಮ ಮಾತ್ರಭಾಷೆಗೆ ಪ್ರಾಶಸ್ತ್ಯ ,ಅದು ಮಾತನಾಡುವುದೇ ಹೆಮ್ಮೆ . ನಮ್ಮ ಈ ಇಂಗ್ಲೀಶ್ ವ್ಯಾಮೋಹ ನಮ್ಮ ಅಸ್ತಿತ್ವಕ್ಕೆ ದಕ್ಕೆ ತರಬಹುದು .ದ್ಯಾವನೂರರು ಸ್ರಸ್ಟಿಸಿದ ಈ ಒಂದು ಸಂಚಲನ ,ಈ ಜನಪರ ಮುಖ್ಯ ಮಂತ್ರಿಗಳ ಅವದಿಯಲ್ಲೇ ಅದರ ಒಂದು ಸ್ವಷ್ಟ ಸ್ವರೂಪ ಪಡೆದು ಕನ್ನಡ ನಮ್ಮ ರಾಜ್ಯ ಭಾಷೆಯಾಗಲಿ ,ಶಿಕ್ಣಣದಲ್ಲಿ ಕನ್ನಡ ಕಡ್ಡಾಯವಾಗಲಿ

    Reply
  6. Salam Bava

    ಇದು ಬೊಳುವಾರರು ತಮ್ಮ ಫೇಸ್ ಬುಕ್ ನಲ್ಲಿ ಬರೆದದ್ದು . ತಿಳಿದವರು ಇದರ ಮೇಲೆ ಒಂದು ಕ್ಕ್ಷಕಿರಣ ಬೀರಾಬೇಕಾಗಿ ಒಂದು ವಿನಂತಿ

    ಕರ್ನಾಟಕದಲ್ಲಿ ಶೇ. ೭೦ ರಷ್ಟಿರುವ ಕನ್ನಡಿಗರ ಮನೆಮಾತಾಗಿರುವ ಕನ್ನಡ ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ’ಮಾತೃಭಾಷೆ’ಯನ್ನಾಗಿ ಕರ್ನಾಟಕ ರಾಜ್ಯಪತ್ರದಲ್ಲಿ [ಗಜೆಟ್] ಇದುವರೆಗೆ ದಾಖಲಿಸಿಲ್ಲ. ಹಾಗೆ ದಾಖಲಿಸಲು ಸಂವಿಧಾನದಲ್ಲಿ ಅವಕಾಶವೂ ಇಲ್ಲ. ಕನ್ನಡ ಭಾಷೆಯನ್ನು ಕರ್ನಾಟಕದ ’ಆಡಳಿತ ಭಾಷೆ’ಯೆಂದ…ು ಅಧಿಕೃತವಾಗಿ ದಾಖಲಿಸಿದ್ದೇ 1963 ರಲ್ಲಿ. ಆದ್ದರಿಂದ, ಕನ್ನಡ ಭಾಷೆಯು 1963 ರ ಬಳಿಕ ಕರ್ನಾಟಕದ ಅಧಿಕೃತ ’ಆಡಳಿತ ಭಾಷೆ’ಯೇ ಹೊರತು ’ಮಾತೃಭಾಷೆ’ಯಲ್ಲ! [ಯಾವ ರೀತಿಯಲ್ಲಿ ಹಿಂದಿ ಭಾಷೆಯು ನಮ್ಮ ರಾಷ್ಟ್ರದ, ರಾಷ್ಟ್ರಭಾಷೆಯಲ್ಲವೋ ಅಂತೆಯೇ ಕನ್ನಡವು ನಮ್ಮ ರಾಜ್ಯದ, ರಾಜ್ಯಭಾಷೆಯೂ ಅಲ್ಲ.] ವಸ್ತು ಸ್ಥಿತಿ ಹೀಗಿರುವುದರಿಂದಲೇ, ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯವನ್ನು ಕಡ್ಡಾಯ ಮಾಡಲು ಅಡ್ಡಿಯಾಗಿರುವ ಇದೇ ’ಮಾತೃಭಾಷೆ’ ಎಂಬೆರಡು ’ಪದ’ಗಳನ್ನು, ಕನ್ನಡೇತರ ಮಾಧ್ಯಮದ ಶಾಲೆಗಳನ್ನು ನಡೆಸುವವರು ತಮ್ಮ ರಕ್ಷಣೆಗೆ ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ!
    ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಬಗ್ಗೆ ವಾದಿಸುವಾಗಲೆಲ್ಲ, ’ಮಕ್ಕಳು ಮಾತೃಭಾಷೆಯಲ್ಲಿ ಕಲಿತರೆ ಮಾತ್ರ ಉದ್ಧಾರವಾಗುತ್ತಾರೆಂದು’ ಶಿಕ್ಷಣ ತಜ್ಹರು ಹೇಳುತ್ತಾರೆ. ಭಾಷಾವಾರು ಪ್ರಾಂತ್ರ್ಯವಾಗುವುದಕ್ಕಿಂತ ಹಿಂದಿನಿಂದಲೂ ಕರ್ನಾಟಕದಲ್ಲಿ ಬದುಕುತ್ತಿರುವ ಶೇ. ೩೦ರಷ್ಟು ಇರುವ ಹಿಂದಿ, ಗುಜರಾಥಿ, ಮರಾಟಿ, ತಮಿಳು, ತೆಲುಗು, ಮಲಯಾಳಂ, ತುಳು, ಕೊಂಕಣಿ, ಬ್ಯಾರಿ, ಕೊಡವ ಇತ್ಯಾದಿ ಮಾತೃ ಭಾಷಿಕರು ಕೂಡಾ ಹೇಳುವುದು ಇದನ್ನೇ; ’ನಮಗೂ ಮಾತೃಭಾಷೆಯಲ್ಲೇ ಕಲಿಯಲು ಅವಕಾಶ ನೀಡಿ’ ಎಂದು! ಈಗೇನು ಮಾಡೋಣ?
    ಆದ್ದರಿಂದ, ಕರ್ನಾಟಕ ಸರಕಾರವು, ಸುಪ್ರೀಮ್ ಕೋರ್ಟಿನಲ್ಲಿರುವ ತನ್ನೆಲ್ಲಾ ಕನ್ನಡ ಮಾಧ್ಯಮಪರ ದಾವಾ ಪತ್ರಗಳಲ್ಲಿ ಈಗಾಗಲೇ ಬಳಸಲಾಗಿರುವ ’ಮಾತೃ’ ಎಂಬ ಪದವನ್ನು, ’ಆಡಳಿತ’ ಎಂಬ ಪದಕ್ಕೆ ಬದಲಾಯಿಸಿಕೊಂಡರೆ ಗೆಲ್ಲಲು ಸ್ವಲ್ಪವಾದರೂ ಅನುಕೂಲವಾಗಬಹುದೇನೋ…? ಗೊತ್ತಿಲ್ಲ. ತಿಳಿದವರು ತಿಳಿಯಹೇಳಬೇಕು.
    -ಬೊಳುವಾರು

    Reply

Leave a Reply

Your email address will not be published. Required fields are marked *