ಜನನುಡಿ 2014 : ಒಂದು ವರದಿ

– ವಸಂತ ಕಡೇಕಾರ್

“ಕೋಮುವಾದಿ ಗಾಢಾಂಧಕಾರದ ಸುರಂಗದ ಕೊನೆಯಲ್ಲೊಂದು ಬೆಳಕಿನ ಕಿಂಡಿ, ಜನನುಡಿ” – ದಿನೇಶ್ ಅಮಿನ್ ಮಟ್ಟು

ಇವು ದಿನೇಶ ಅಮಿನ್ ಮಟ್ಟು ಅವರು ಡಿಸೆಂಬರ್ 13-14ರಂದು ಮಂಗಳೂರಿನಲ್ಲಿ ನಡೆದ ಜನನುಡಿ ಸಮಾವೇಶದ “ಸಮಕಾಲೀನ ಸವಾಲುಗಳು – ಐಕ್ಯತೆಯ ಅಗತ್ಯತೆ’ ಬಗೆಗಿನ ಗೋಷ್ಟಿಯಲ್ಲಿ ಅಧ್ಯಕ್ಷೀಯ ಭಾಷಣದ ಕೊನೆಯಲ್ಲಿ ಆಡಿದ ಮಾತುಗಳು. dinesh-amin-umapathiತಾರ್ಕಿಕವಾಗಿ ತಣ್ಣಗೆ ವಿಚಾರ ಮಂಡಿಸುವ ದಿನೇಶ್ ಇಂತಹ ‘ಅತಿಶಯೋಕ್ತಿ’ಯಂತೆ ಕಾಣುವ ಮಾತುಗಳನ್ನು ಸಾಮಾನ್ಯವಾಗಿ ಆಡುವುದಿಲ್ಲವಲ್ಲ ಎಂದು ಬಹಳ ಜನರಿಗೆ (ಅದರಲ್ಲೂ ಜನನುಡಿ ಸಮಾವೇಶದಲ್ಲಿ ಭಾಗವಹಿಸದೆ ಇದ್ದವರಿಗೆ) ಆಶ್ಚರ್ಯವಾಗಬಹುದು. ಎರಡೂ ದಿನ ಭಾಗವಹಿಸಿದ ಬಹುಪಾಲು ಜನರಿಗೆ ಮಾತ್ರ ಇದು ಎರಡು ದಿನದ ಸಮಾವೇಶದ ‘ಕ್ಲೈಮಾಕ್ಸ್’ ಮತ್ತು ಸಾರಾಂಶವಾಗಿ ಕಂಡಿತು..

ಇದಕ್ಕೆ ಸಮಾವೇಶದ ಹಿಂದಿನ ಕೆಲವು ದಿನಗಳಲ್ಲಿ ಸಂಘ ಗ್ಯಾಂಗ್ ನಮ್ಮೆಲ್ಲರ ಮೇಲೆ ಹರಿಯಬಿಟ್ಟ ಕೋಮುವಾದಿ-ಫ್ಯಾಸಿಸ್ಟ್ ಗಾಢಾಂಧಕಾರ ಸೃಷ್ಟಿಸುವ ಪ್ರಚೋದನಕಾರಿ ಹುನ್ನಾರಗಳೂ (ಭಗವದ್ಗೀತೆ ರಾಷ್ಟ್ರೀಯ ಗ್ರಂಥ, ಘರ್ ವಾಪಸಿ, ಮತಾಂತರ, ಚುನಾವಣಾ ಪ್ರಚಾರದಲ್ಲಿ ರಾಮಜಾದೆ-ಹರಾಮ್ ಜಾದೆ, ರಾಷ್ಟ್ರೀಯ ಪ್ರೊಫೆಸರ್ ಭೈರಪ್ಪ, ಸಂಸ್ಕೃತ ಹೇರಿಕೆ ಇತ್ಯಾದಿ) ಮತ್ತು ಅವುಗಳ ಬಗ್ಗೆ ನಡೆದ ಚರ್ಚೆಗಳೂ ಕಾರಣವಾಗಿರಬಹುದು. ಕಳೆದ ಬಾರಿ ‘ಆಳ್ವಾಸ್ ನುಡಿಸಿರಿ’ಗೆ ಪ್ರತಿಭಟನೆಯಾಗಿ ಜನಪರ ಪರ್ಯಾಯವಾಗಿ ತಳಮಟ್ಟದಿಂದ ಹುಟ್ಟಿಕೊಂಡ ಜನನುಡಿ, ಹಲವು ಇಂತಹ ಪ್ರತಿಭಟನಾ ವೇದಿಕೆಗಳಂತೆ ‘ಒನ್ ಟೈಮ್ ವಂಡರ್’ ಆಗಿಲ್ಲ. ಎರಡನೇ ವರ್ಷಕ್ಕೆ ಇನ್ನೂ ಹೆಚ್ಚಿನ ಬಲ, ಕಸುವು, ಧೃಢತೆ, ಆತ್ಮವಿಶ್ವಾಸ ಮತ್ತು ಐಕ್ಯತೆಯೊಂದಿಗೆ ಕಾಲಿಟ್ಟಿರುವುದು ಇಂತಹ ಉತ್ಸಾಹ ಮತ್ತು ಭರವಸೆಯ ವಾತಾವರಣಕ್ಕೆ ಕಾರಣವಾಗಿರಬೇಕು.

ಎರಡನೇ ಸಮಾವೇಶದ ಮುನ್ನಡೆ

ಪಾಲ್ಗೊಂಡವರ ಸಂಖ್ಯೆ ಸುಮಾರು ಇಮ್ಮಡಿಯಾದ್ದು ಮಾತ್ರವಲ್ಲದೆ ದೊಡ್ಡ ಸಂಖ್ಯೆಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ, jananudi-2014ಎರಡು ದಿನದ ಉದ್ದಕ್ಕೂ ಎಲ್ಲಾ ಗೋಷ್ಟಿಗಳಲ್ಲೂ ಸಭಾಂಗಣ ತುಂಬಿತ್ತಲ್ಲದೆ ನಡೆದ ಬಿಚ್ಚುಮನಸ್ಸಿನ ಪ್ರಬುದ್ಧ ಚರ್ಚೆ – ಈ ಎಲ್ಲವೂ ಸ್ಫೂರ್ತಿದಾಯಕವಾಗಿತ್ತು. ಮುಂದಿನ ವರ್ಷ ಕನಿಷ್ಟ ನಾಲ್ಕು ವಲಯವಾರು ಜನನುಡಿ ಸಮಾವೇಶಗಳನ್ನು ಸಂಘಟಿಸಿ ಇನ್ನಷ್ಟು ಪ್ರಗತಿಪರ ಸಂಘಟನೆಗಳನ್ನು ಒಳಗೊಳ್ಳಬೇಕು, ಇನ್ನಷ್ಟು ಜನರನ್ನು ತಲುಪಬೇಕು ಎಂಬ ಉತ್ಸಾಹ, ದೃಢನಿಶ್ಚಯ ಕಂಡುಬಂತು.

ಜನನುಡಿ-2013ರಲ್ಲೂ ಇದ್ದ ಕರಾವಳಿಯ ತಲ್ಲಣಗಳು, ಕವಿಗೋಷ್ಟಿ ಅಲ್ಲದೆ, ಇನ್ನೂ ಹಲವು ಹೊಸ ವಿಷಯಗಳ ಬಗ್ಗೆ ಗೋಷ್ಟಿಗಳು jananudi-2014-5ಇದ್ದಿದ್ದು ಈ ಬಾರಿಯ ವಿಶೇಷವಾಗಿತ್ತು. “ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ ಸಾಹಿತ್ಯ”, ‘ಶ್ರೇಣೀಕೃತ ಜಾತಿ ವ್ಯವಸ್ಥೆಯ ಹೊಸರೂಪ ಹಾಗೂ ದಲಿತ ಮಹಿಳಾ ಸಂವೇದನೆ’, “ಸಾಮಾಜಿಕ ಜಾಲತಾಣದ ಸವಾಲುಗಳು” ಮತ್ತು “ಸಮಕಾಲೀನ ಸವಾಲುಗಳು-ಐಕ್ಯತೆಯ ಅಗತ್ಯತೆ” ಇಂತಹ ಗೋಷ್ಟಿಗಳಾಗಿದ್ದವು. ಸಮಾರಂಭ, ಸಮಾರೋಪ ಅಲ್ಲದೆ ಮೇಲೆ ಹೇಳಿದ ಗೋಷ್ಟಿಗಳಲ್ಲಿ ಹಲವು ವಿಷಯಗಳ ಬಗ್ಗೆ (ಕೆಲವು ಬಾರಿ ಬಿಸಿ ಬಿಸಿ) ವಾಗ್ವಾದ, ಸಂವಾದ ನಡೆಯಿತು. ದೇಶೀ ಕಪ್ಪು ಹಣ ಹೊರಗೆಳೆಯುವ ಅಗತ್ಯತೆ, ಕಪ್ಪುಹಣ ಚಲಾವಣೆಗೆ ಅದ್ದೂರಿ ಸಾಹಿತ್ಯ ಮೇಳ-ಸಾಂಸ್ಕೃತಿಕ ಜಂಭೂರಿ ಉತ್ಸವಗಳನ್ನು ನಡೆಸುವುದು, ಸಂವಿಧಾನ ಬಿಟ್ಟರೆ ಬೇರೇ ಯಾವುದೇ ರಾಷ್ಟ್ರೀಯ ಗ್ರಂಥ ಆಗುವ ಅಸಾಧ್ಯತೆ, ಪುರೋಹಿತಶಾಹಿಯ ವಿರುದ್ಧ ದನಿಎತ್ತಿದವರ ಕೊಲೆ-ದಮನದ ಚರಿತ್ರೆ, ಇವುಗಳ ಬಗ್ಗೆ ಉದ್ಘಾಟನಾ ಸಮಾರಂಭದಲ್ಲೇ ಚರ್ಚೆ ಆರಂಭವಾಯಿತು.

ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ

“ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ ಸಾಹಿತ್ಯ”, ಗೋಷ್ಟಿಯಲ್ಲಿ ಎರಡು ಭಿನ್ನವಾದ ಅಭಿಪ್ರಾಯಗಳನ್ನು ಮಂಡಿಸಲಾಯಿತು. jananudi-2014-2ಕಾರ್ಪೊರೆಟ್ ಮತ್ತು ಸಾಹಿತ್ಯವನ್ನು ಎದುರುಬದಿರು ಮಾಡುವುದು ಕಷ್ಟ. ಎರಡೂ ನಮ್ಮದಲ್ಲ. ಎಲ್ಲದಕ್ಕೂ ಬೆಲೆ ಕಟ್ಟುವ, ಚರಿತ್ರೆಯನ್ನು ನಮ್ಮಿಂದ ಬೇರ್ಪಡಿಸುವ, ಬಹುತ್ವ ನಾಶ ಮಾಡಿ ಏಕತ್ವ ಸ್ಥಾಪಿಸುವ ಕಾರ್ಪೊರೆಟ್ ಮೌಲ್ಯಗಳನ್ನು ನಿರಾಕರಿಸಿ ಬರಿಯ ಪ್ರತಿಭಟನಾ ನೆಲೆಗಳನ್ನು ಬಿಟ್ಟು ಆತ್ಮಸ್ಥೈರ್ಯದ ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾಯತ್ತ ನೆಲೆಯನ್ನು ಕಂಡುಕೊಳ್ಳುವುದು ಪ್ರತಿಪಾದಿತವಾದ ಒಂದು ಅಭಿಪ್ರಾಯ. ಕಾರ್ಪೊರೆಟ್ ಮತ್ತು ಸಾಹಿತ್ಯ ಎರಡನ್ನು ಸಮಾನವಾಗಿ ಟೀಕಿಸುವುದು ಸರಿಯಲ್ಲ. ಕಾರ್ಪೊರೆಟ್ ಬರಿಯ ಬೆಲೆ ಕಟ್ಟುತ್ತದೆ. ಸಾಹಿತ್ಯ ಮೌಲ್ಯಗಳನ್ನು ಸೃಷ್ಟಿಸುತ್ತದೆ. ಸಾಹಿತ್ಯ ಡಿಕನ್ಸ್ಟ್ರಕ್ಟ್ ಮಾಡುತ್ತದೆ. ಕಾರ್ಪೊರೆಟ್ ರಿಕನ್ಸ್ಟ್ರಕ್ಟ್ ಮಾಡುತ್ತದೆ. ಸಾಹಿತ್ಯ ಸಮುದಾಯದಲ್ಲಿ ನೆಲೆಗೊಂಡ ವಿವೇಕದ ಮಾದರಿಗಳ ಮೌಲ್ಯಮಾಪನ ಮಾಡುತ್ತದೆ. ಕಾರ್ಪೊರೆಟ್ ಅನಿವಾರ್ಯ ಅನಿಷ್ಟ ಎಂಬುದನ್ನು ತಿರಸ್ಕರಿಸಬೇಕು. ಇದು ಪ್ರತಿಪಾದಿತವಾದ ಇನ್ನೊಂದು ಅಭಿಪ್ರಾಯ. ಇವರೆಡರ ಬಗ್ಗೆ ಹಾಗೂ ಸಾಹಿತ್ಯ ಮತ್ತು ಕಾರ್ಪೊರೆಟ್ ಮೌಲ್ಯಗಳೆಂದರೇನು ಎನ್ನುವ ಬಗ್ಗೆ ಸಹ ಸಾಕಷ್ಟು ಚರ್ಚೆ ಆಯಿತು. ಡಾ.ನಟರಾಜ ಬೂದಾಳ್ ಮತ್ತು ಡಾ. ಮಲ್ಲಿಕಾರ್ಜುನ ಮೇಟಿ ಈ ಗೋಷ್ಟಿಯಲ್ಲಿ ವಿಷಯ ಮಂಡನೆ ಮಾಡಿದರು.

ಕರಾವಳಿಯಲ್ಲೇ ಏಕೀ ಉಗ್ರ ಕೋಮುವಾದ?

”ಶ್ರೇಣೀಕೃತ ಜಾತಿ ವ್ಯವಸ್ಥೆಯ ಹೊಸರೂಪ ಹಾಗೂ ದಲಿತ ಮಹಿಳಾ ಸಂವೇದನೆ’ ಅತ್ಯಂತ ಹೆಚ್ಚು ಬಿಸಿ-ಬಿಸಿ ಚರ್ಚೆ ನಡೆದ ಗೋಷ್ಟಿಯಾಗಿತ್ತು.jananudi-2014-6 ಹೈದರಾಬಾದ್ ಮತ್ತು ಕರಾವಳಿ ಕರ್ನಾಟಕ ಎರಡರಲ್ಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರೂ ಕೋಮುವಾದಿ ಹಿಂಸಾಚಾರ-ದಂಗೆಗಳು ಮತ್ತು ಕೋಮುವಾದೀಕರಣದಲ್ಲಿ ಭಾರೀ ವ್ಯತ್ಯಾಸಕ್ಕೆ ಏನು ಕಾರಣವೆನ್ನುವುದು ಚರ್ಚೆಯ ವಿಷಯವಾಗಿತ್ತು. ಅನುಭಾವಿ ಸೂಫಿಸಂ ಮತ್ತು ಅವೈದಿಕ ಪರಂಪರೆಯ ಲಿಂಗಾಯತ ಮಠಗಳ ಪ್ರಾಬಲ್ಯ ಇದಕ್ಕೆ ಕಾರಣವೆಂದು ಒಂದು ವಾದ. ಆದರೆ ಕರಾವಳಿಯಲ್ಲೂ ಅವೈದಿಕ ಪರಂಪರೆಯ ಬುಡಕಟ್ಟು ಸಂಸ್ಕೃತಿ ಇದ್ದು, ಬರೇ ಅದೊಂದೇ ಕೋಮುವಾದದ ದಾಳಿ ತಡೆಯಲಾಗದು ಎನ್ನುವುದು ಇನ್ನೊಂದು ವಾದವಾಗಿತ್ತು. ಕರಾವಳಿಯಲ್ಲಿ ಮುಸ್ಲಿಮರು ಆರ್ಥಿಕವಾಗಿ ಪ್ರಬಲ ಕೋಮು ಆಗಿದ್ದು, ಶಿಕ್ಷಣ, ಬಂಡವಾಳಶಾಹಿ ಬೆಳೆದಿದ್ದು, ಬುಡಕಟ್ಟು ಸಂಸ್ಕೃತಿಯ ಆಚರಣೆಗಳನ್ನು ಪ್ರವೇಶಿಸಿ ವೈದಿಕೀಕರಿಸಿ ಅದನ್ನು ಕೋಮುವಾದಿಕರಣಕ್ಕೆ ಸಾಂಸ್ಕೃತಿಕ ರಾಜಕಾರಣಕ್ಕೆ ಬಳಸಿಕೊಂಡದ್ದು, ಪೇಜಾವರ ಸ್ವಾಮಿಜಿಯಂಥವರ ಬೆಂಬಲದಿಂದ 1960ರ ದಶಕದಲ್ಲೇ ಕೋಮುವಾದಿ ಪ್ರಯೋಗಶಾಲೆಯಾಗಿ ಈ ಪ್ರದೇಶದ ಆಯ್ಕೆ, ಇತ್ಯಾದಿ ಕಾರಣವಾಗಿರಬಹುದು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪರಾಭವ ಗಮನಿಸಿದರೆ ಕೋಮುವಾದೀಕರಣ ಜನಮಾನಸವನ್ನು ಪೂರ್ತಿಯಾಗಿ ಹಿಡಿದಿದೆ ಎಂದೂ ಹೇಳುವಂತಿಲ್ಲ.

ಈಗ ಕೆಂದ್ರ ಸರಕಾರದಲ್ಲಿ ಅಧಿಕಾರ ಹಿಡಿದಿರುವುದು, ವಿಧಾನಸಭೆ-ಲೋಕಸಭೆ ಎರಡರಲ್ಲೂ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿರುವುದು jananudi-2014-7ಕೆಲವು ಲಿಂಗಾಯತ ಮಠಗಳು ವಿಶ್ವ ಹಿಂದೂ ಪರಿಷತ್ತಿಗೆ ಬೆಂಬಲ ನೀಡುತ್ತಿರುವುದನ್ನು ಗಮನಿಸಿದರೆ, ಹೈದರಾಬಾದ್ ಕರ್ನಾಟಕ ಸೇರಿದಂತೆ ಯಾವ ಪ್ರದೇಶವೂ ಕೋಮುವಾದೀಕರಣದ ಅಪಾಯದಿಂದ ಮುಕ್ತವಾಗಿಲ್ಲ. ಧರ್ಮಸ್ಥಳ ಮತ್ತು ಆಳ್ವಾಸ್ ನುಡಿಸಿರಿ ಎರಡಕ್ಕೂ ರಾಜ್ಯದಾದ್ಯಂತದಿಂದ ಜನ-ಧನ ಹರಿದು ಬರುತ್ತಿರುವುದು ಕೋಮುವಾದೀಕರಣದ ಅಪಾಯ ಇಡೀ ರಾಜ್ಯಕ್ಕೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಜಾತಿ ಜತೆ ಸ್ವಲ್ಪ ಮಟ್ಟಿಗೆ ತಳುಕು ಹಾಕಿಕೊಂಡಿದ್ದ ‘ವೃತ್ತಿಕೌಶಲ್ಯ’ವನ್ನೂ ಬಂಡವಾಳಶಾಹಿ ನುಂಗಿ ಹಾಕಿರುವುದು; ಮಹಿಳಾ ವಿಮೋಚನಾ ಚಳುವಳಿ ಮೇಲು ವರ್ಗ-ಜಾತಿ ಮತ್ತು ಕೆಳವರ್ಗ-ಜಾತಿಯ ಮಹಿಳೆಯ ಸಮಸ್ಯೆಗಳ ವ್ಯತ್ಯಾಸ ಗುರುತಿಸದಿರುವುದು: ಜಾತಿ, ಧರ್ಮ, ಲಿಂಗ ಎಂಬ ಮೂರೂ ತಾರತಮ್ಯ ಎದುರಿಸುವುದರಿಂದ ಅತ್ಯಂತ ಹೆಚ್ಚು ದಮನಿತ ದಲಿತ ಮಹಿಳೆಯ ಮೇಲಾಗುವ ಸತತ ಭೀಕರ ದೌರ್ಜನ್ಯಗಳು ನಿರ್ಭಯ ಪ್ರಕರಣದಂತೆ ಪ್ರತಿಸ್ಪಂದನೆ ಪಡೆಯದಿರುವುದು; ಜಾತಿ ತಾರತಮ್ಯ-ಅಸ್ಪೃಶ್ಯತೆಗಳ ಸಾರ ಬದಲಾಗದೆ ರೂಪಗಳು ಮಾತ್ರ ಬದಲಾಗಿರುವುದು;- ಇತ್ಯಾದಿಗಳ ಬಗೆಗೂ ಪ್ರಸ್ತಾಪ ಬಂತು. ದೇವು ಪತ್ತಾರ್ ಮತ್ತು ಗೌರಿ ವಿಷಯ ಮಂಡನೆ ಮಾಡಿದರು. ಡಾ.ಎಚ್.ಎಸ್.ಅನುಪಮ ಅಧ್ಯಕ್ಷತೆ ವಹಿಸಿದ್ದರು.

ಮೊದಲ ದಿನ ಸಂಜೆ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿತ್ತು. ಆ ದಿನಗಳು ಖ್ಯಾತಿಯ ಸಿನಿಮಾ ನಟ ಚೇತನ್ ಅವರ ಅನುಭವಗಳ jananudi-2014-3ಬಗ್ಗೆ ಮಾತನಾಡಿದರು. ಪಿಚ್ಚಳ್ಳಿಯವರು ಅಧ್ಯಕ್ಷೀಯ ಮಾತುಗಳನ್ನು ಹೇಳಿದ್ದಲ್ಲದೆ ತತ್ವಪದಗಳನ್ನೂ ಹಾಡಿದರು. ಆಟ ಮಾಟ ಧಾರವಾಡ ತಂಡ ಗಿರೀಶ್ ಕಾರ್ನಾಡ್ ಅವರ ತಲೆದಂಡ ನಾಟಕ ಪ್ರದರ್ಶಿಸಿತು.

ಸಾಮಾಜಿಕ ಮಾಧ್ಯಮದ ಸವಾಲುಗಳು

ಸಾಮಾಜಿಕ ಮಾಧ್ಯಮ ಜನಪ್ರಿಯವಾಗುತ್ತಿರುವುದು ಮತ್ತು ಅದು ಕೋಮುವಾದಿ ವಿಷ ಹರಡಲು ಪ್ರಗತಿಪರರ ವಿರುದ್ಧ ನಿಂದನೆ, ಭಯೋತ್ಪಾದನೆಗೆ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ , “ಸಾಮಾಜಿಕ ಜಾಲತಾಣದ ಸವಾಲುಗಳು” ಬಗೆಗಿನ ಗೋಷ್ಟಿಯನ್ನೂ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಹಮ್ಮಿಕೊಂಡಿರುವ ಕಾಂಗ್ರೆಸ್-ಮುಕ್ತ ಭಾರತಕ್ಕಾಗಿ ಸಾಮಾಜಿಕ ಮಾಧ್ಯಮ ಯೋಜನೆ ಪ್ರಜಾಪ್ರಭುತ್ವ-ಮುಕ್ತ ಭಾರತದತ್ತ ಹೋಗುವ ಅಪಾಯ; ಪ್ರಗತಿಪರ ಸಂಘಟನೆಗಳು, ಚಳುವಳಿಗಳು ವ್ಯಕ್ತಿಗಳು ಈ ದಾಳಿಯನ್ನು ಸಂಘಟಿತವಾಗಿ ಎದುರಿಸುವ ಮತ್ತು ಸೆಕ್ಯುಲರ್ ಪ್ರಗತಿಪರ ಮೌಲ್ಯಗಳ ಪ್ರಸಾರಕ್ಕೆ ಬಳಸುವ ತುರ್ತು ಅಗತ್ಯತೆ; ‘ಮುಖ್ಯವಾಹಿನಿ’ ಮಾಧ್ಯಮ’ಗಳಲ್ಲಿ ಅಭಿವ್ಯಕ್ತಿ ವಂಚಿತರಿಗೆ ದಲಿತ ಇತ್ಯಾದಿ ಜನವಿಬಾಗಗಳಿಗೆ ಸಾಮಾಜಿಕ ಮಾಧ್ಯಮ ಒದಗಿಸುವ ಅವಕಾಶ; jananudi-2014-9ನೈಜ ಮತ್ತು ಹುಸಿ ಅಂಬೇಡ್ಕರ್ ವಾದಿಗಳನ್ನು ಗುರುತಿಸುವ ಸವಾಲು; ಅಕ್ಷರ-ಬದ್ಧತೆ (ಫೇಸ್ ಬುಕ್ ಕಲಿಗಳು) ಮತ್ತು ಚಳುವಳಿ-ಬದ್ಧತೆ ನಡುವಿನ ಕಂದಕ; ಫೇಸ್-ಬುಕ್ ಅಸ್ಪೃಶ್ಯತೆ; ಫೇಕ್ ಅಕೌಂಟುಗಳ, ಪ್ರೊಮೊಟೆಡ್ ಲೈಕುಗಳ, ‘ಕಲ್ಪಿತ ಜನಪ್ರಿಯತೆ’ಯಿಂದ ನೈಜ ಜನಪ್ರಿಯತೆಯ ಉತ್ಪಾದನೆ; ಅಸಹನೆ, ಹಿರೊಯಿಸಂಗಳನ್ನು ಹಿಗ್ಗಿಸಿ ಪ್ರಜಾಪ್ರಭುತ್ವ ಮತ್ತು ಸಾಂಘಿಕ ಶಕ್ತಿಯನ್ನು ಕುಗ್ಗಿಸುವ ಅಪಾಯ – ಇತ್ಯಾದಿಗಳನ್ನು ವಿಷಯ ಮಂಡನೆ ಮತ್ತು ಚರ್ಚೆ ಒಳಗೊಂಡಿತ್ತು. ಪ್ರಭಾ ಬೆಳವಂಗಲ, ನಾಗರಾಜ್ ಹೆತ್ತೂರ್, ಅರುಣ ಜೋಳದ ಕೂಡ್ಲಿಗಿ ವಿಷಯ ಮಂಡನೆ ಮಾಡಿದರು. ಶಶಿಧರ ಹೆಮ್ಮಾಡಿ ಗೋಷ್ಟಿಯ ನಿರ್ವಹಣೆ ಮಾಡಿದರು.

ಕರಾವಳಿ ತಲ್ಲಣಗಳು

‘ಕರಾವಳಿಯ ತಲ್ಲಣಗಳು’ ಗೋಷ್ಟಿ ಈಗ ಎಲ್ಲರನ್ನೂ ಕಾಡುತ್ತಿರುವ ಕೋಮುವಾದೀಕರಣ ಅಲ್ಲದೆ ಅಭಿವೃದ್ಧಿಯ ಪ್ರಶ್ನೆಗಳನ್ನೂ ಒಳಗೊಂಡಿತ್ತು. ಕರಾವಳಿಯ ಬದುಕಿನ ಆಧಾರವಾಗಿದ್ದ ಕೃಷಿಯ ನಾಶ; (ಅವೈದಿಕ) ದೇವರುಗಳ ‘ಮತಾಂತರ’ (ವೈದಿಕೀಕರಣ); ಪ್ರಮುಖ ಒಬಿಸಿ ಸಮುದಾಯಗಳ ವ್ಯವಸ್ಥಿತ ಕೋಮುವಾಧೀಕರಣ; ಹೊರರಾಜ್ಯ-ಹೊರದೇಶಗಳ ಮೇಲೆ ಆಧಾರಿತ ಆರ್ಥಿಕ; ಹೊರರಾಜ್ಯ-ಹೊರದೇಶಗಳ ಉದ್ಯೋಗ ಮಾರುಕಟ್ಟೆ jananudi-2014-8ಏರುಪೇರು ಆಧಾಗ ಸಹಾಯಕ್ಕೆ ಬಾರದ ಸರಕಾರಗಳು, ಸ್ಥಳೀಯ ಉದ್ಯೋಗ ಸೃಷ್ಟಿಸದ ಕೈಗಾರಿಕೆಗಳು;ಒಂದಕ್ಕೊಂದು ಪೂರಕವಾಗುವ ಎರಡೂ ಮೂಲಭೂತವಾದಗಳ ಅಪಾಯ;ಯಾವುದೇ ನಿಜವಾದ ಪ್ರಶ್ನೆಗಳನ್ನು ಎತ್ತಿಕೊಳ್ಳದೆ ಸಾಂಸ್ಕೃತಿಕ ರಾಜಕಾರಣದಿಂದಲೇ ರಾಜಕೀಯ ಬೆಂಬಲ ಗಳಿಸಿ ಉಳಿಸಿಕೊಳ್ಳುವ ಮತೀಯ ಶಕ್ತಿಗಳು; ನಿಜವಾದ ಪ್ರಶ್ನೆಗಳನ್ನು ಎತ್ತಿಕೊಂಡು ಹೋರಾಟ ಮಾಡಿಯೂ ರಾಜಕೀಯ ಬೆಂಬಲ ಗಳಿಸಿ ಉಳಿಸಿಕೊಳ್ಳುವಲ್ಲಿ ಸೋತಿರುವ ಪ್ರಗತಿಪರ ಶಕ್ತಿಗಳು; ಸೆಕ್ಯುಲರ್ ಸಾಂಸ್ಕೃತಿಕ ರಾಜಕಾರಣ ಮಾಡುವ ಅನಿವಾರ್ಯತೆ; ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಜೋಯ್ಡಾ (ಉತ್ತರ ಕನ್ನಡ)ದ ವಿಶಿಷ್ಟ ಸಮಸ್ಯೆಗಳು ದೂರದ ಬೆಂಗಳೂರಿಗೆ ಕೇಳಿಸದಿರುವುದು; – ಇತ್ಯಾದಿಗಳನ್ನು ವಿಷಯ ಮಂಡನೆ ಮತ್ತು ಚರ್ಚೆ ಒಳಗೊಂಡಿತ್ತು. ಡಾ. ಜಯಪ್ರಕಾಶ ಶೆಟ್ಟಿ, ಸುಬ್ರತೊ ಮಂಡಲ್ ಮತ್ತು ಮುನೀರ್ ಕಾಟಿಪಳ್ಳ ವಿಷಯ ಮಂಡನೆ ಮಾಡಿದರು. ವಿಷ್ಣು ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಜಾಗತೀಕರಣ ಮತ್ತು ಕೋಮುವಾದ ಪ್ರಮುಖ ಸಮಕಾಲೀನ ಸವಾಲು ಎಂದು jananudi-2014-1“ಸಮಕಾಲೀನ ಸವಾಲುಗಳು ಮತ್ತು ಐಕ್ಯತೆಯ ಅಗತ್ಯತೆ’ ಗೋಷ್ಟಿಯಲ್ಲಿ ಗುರುತಿಸಲಾಯಿತು. ಜಾಗತೀಕರಣದ ಸಣ್ಣ ಮತ್ತು ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳು ಕುಂಠಿತವಾಗುತ್ತಿರುವುದು ಅಥವಾ ಮುಚ್ಚಿ ಹೋಗುತ್ತಿರುವುದು, ಅದರಿಂದಾಗಿ ಮೀಸಲಾತಿಯ ಅವಕಾಶಗಳು ಇಲ್ಲವಾಗುತ್ತಿರುವುದು, ಖಾಸಗಿ ಉದ್ಯಮಗಳಲ್ಲಿ ಮೀಸಲಾತಿಯ ನೀತಿಯನ್ನು 200 ಉದ್ಯಮಗಳಲ್ಲಿ 198 ವಿರೋಧಿಸಿರುವುದು, ರಾಜ್ಯ ಸರಕಾರಗಳಿಗೆ ಖಾಸಗಿ ಕಂಪನಿಗಳ ‘ಬೆದರಿಕೆ’, ಬಿಜೆಪಿಯ ಕೋಮುವಾದಿ ಚುನಾವಣಾ ಪ್ರಚಾರ ಬಯಲು ಮಾಡದ ಮಾಧ್ಯಮಗಳು, ಬಿಜೆಪಿಯ ಪಿಆರ್ ಏಜೆನ್ಸಿಗಳಿಗೆ ಶರಣಾದ ಮಾಧ್ಯಮಗಳು, ದೇಶವನ್ನೆಲ್ಲಾ ಜೈಲು ಮಾಡಿದ ತುರ್ತು ಪರಿಸ್ಥಿತಿ ಮರುಕಳಿಸುವ ಮತ್ತು ಈ ಬಾರಿ ಜೈಲಿನ ಕೀಲಿ ಕೈ ಸ್ಥಳೀಯ ಕೋಮುವಾದಿ ಕಟುಕರ ಕೈಲಿ ಇರುವ ಅಪಾಯ – ಇತ್ಯಾದಿಗಳ ಬಗೆಗೆ ಪ್ರಸ್ತಾಪ ಬಂತು. ಡಾ. ಎಲ್.ಹನುಮಂತಯ್ಯಮತ್ತು ಡಿ.ಉಮಾಪತಿ ವಿಷಯ ಮಂಡನೆ ಮಾಡಿದರು. ದಿನೇಶ್ ಅಮಿನ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು.

ನಿಜವಾದ ಶತ್ರುಗಳ ಅನಾವರಣ ಮಾಡುವುದು ಜನನುಡಿಯ ಪ್ರಮುಖ ಕೆಲಸ

ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ದಿನೇಶ್ ಆರ್ಥಿಕ ಉದಾರೀಕರಣ ಮತ್ತು ಕೋಮುವಾದೀಕರಣದ ಬಗ್ಗೆ ಯುವಕರನ್ನು ಎಚ್ಚರಿಸುವುದು ಜನನುಡಿಯ ಪ್ರಮುಖ ಜವಾಬ್ದಾರಿ ಎಂದರು. ಕಳೆದ ಎರಡು ದಶಕಗಳಲ್ಲಿ ಅವರು ಈ ಜಗತ್ತಿಗೆ ಕಣ್ಣು ತೆರೆಯುತ್ತಿದ್ದಂತೆ ನಡೆದ ಈ ಪ್ರಮುಖ ವಿದ್ಯಮಾನಗಳ ಅದರಲ್ಲೂ jananudi-2014-4ರೂಪ ವಿನ್ಯಾಸಗಳಲ್ಲಿ ಬದಲಾಗುತ್ತಿರುವ ಕೋಮುವಾದ ಹಾಕುವ ಹಲವು ವೇಷಗಳ ಮುಖವಾಡಗಳನ್ನು ಬಯಲು ಮಾಡಬೇಕು. ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದ ಅಪಾಯ ಮತ್ತು ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೆಕ್ಯುಲರ್ ಪ್ರಗತಿಪರರು ಸೋತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ಸೆಕ್ಯುಲರ್ ಸಾಂಸ್ಕೃತಿಕ ರಾಜಕಾರಣ ಮಾಡಬೇಕು. ಜನನುಡಿ ಒಂದು ಸೆಕ್ಯುಲರ್ ಮತ್ತು ಪ್ರಗತಿಪರ ಚಳುವಳಿಗಳ ಸಂಘಟನೆಗಳ ವ್ಯಕ್ತಿಗಳ ವೇದಿಕೆ. ಜನರ ನಿಜವಾದ ಶತ್ರುಗಳನ್ನು ಜನತೆಯ ಮುಂದೆಅನಾವರಣ ಮಾಡುವುದು ಜನನುಡಿಯ ಪ್ರಮುಖ ಕೆಲಸವಾಗಬೇಕು. ಇದಕ್ಕಾಗಿ ಇಲ್ಲಿರುವವರೆಲ್ಲ ತಮ್ಮ ಭಿನ್ನಾಭಿಪ್ರಾಯ ಮರೆತು ಐಕ್ಯತೆ ಸಾಧಿಸಬೇಕು. ನಮ್ಮ ದೇಶದ ವರ್ತಮಾನ ಅಧ್ಯಯನ ಮಾಡಬೇಕು. ಅದಕ್ಕಾಗಿ ಗಾಂಧಿ, ಅಂಬೇಡ್ಕರ್, ಲೊಹಿಯಾ, ಮಾರ್ಕ್ಸ್ ಓದಬೇಕು ಎಂದು ಜನನುಡಿಯ ಯುವ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಸಮಾರೋಪದಲ್ಲಿ ಕೆ.ನೀಲಾ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯ ಮಂಡಿಸಿ ಅದನ್ನು ಸರ್ವಾನಮತದಿಂದ ಅಂಗೀಕರಿಸಲಾಯಿತು. ಡಾ. ಜಿ. ರಾಮಕೃಷ್ಣ, ಪ್ರೊ. ಆರ್.ಕೆ.ಹುಡಗಿ ಮತ್ತು ಡಾ. ಮೀನಾಕ್ಷಿ ಬಾಳಿ ಮಾತನಾಡಿದರು.

ಜನನುಡಿ ಎರಡನೇ ಸಮಾವೇಶ ಎಲ್ಲಾ ಅಂಶಗಳಲ್ಲೂ ಪ್ರಗತಿ ಸಾಧಿಸಿದ್ದರೂ, ಕರ್ನಾಟಕವನ್ನು ಬಾಧಿಸುವ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದಿತ್ತು. ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯವನ್ನು ಸರಕಾರಕ್ಕೆ ಕೊಟ್ಟು ಆ ಬಗ್ಗೆ ಫಾಲೋ-ಅಪ್ ಮಾಡಲಾಗುವುದಂತೆ. ಸಮಾವೇಶದ ಮುಂದುವರಿಕೆಯಾಗಿ ಇನ್ನೂಇಂತಹ ಕೆಲವು ನಿರ್ದಿಷ್ಟ ಕಾರ್ಯಾಚರಣೆಗಳ ಕಾರ್ಯಕ್ರಮ ಹಾಕಿಕೊಳ್ಳಬಹುದಿತ್ತು. ಚಳುವಳಿಗಳ ಐಕ್ಯತೆ ಮುಂದಿರುವ ಸವಾಲುಗಳ ಬಗ್ಗೆ ಒತ್ತು ಆ ಬಗೆಗಿನ ಗೋಷ್ಟಿಯಲ್ಲಿ ಸಾಲದಾಯಿತು.

***

ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯದ ಪ್ರಮುಖ ಅಂಶಗಳು:

 • ಕರಾವಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿ ಕೋಮುವಾದಿ ಶಕ್ತಿಗಳಿಗೆ ಬೆಂಬಲವಾಗಿ ನಿಂತವರನ್ನು ಕಡ್ಡಾಯವಾಗಿ ಕರಾವಳಿಯಿಂದ ಹೊರಹಾಕಬೇಕು
 • ಐಕ್ಯತೆ-ಸಾಮರಸ್ಯ ಬೆಸೆಯುವ ಕೆಲಸ ಚಟುವಟಿಕೆಗಳನ್ನು ಸರಕಾರ ವಿವಿಧ ಿಲಾಖೆಗಳ ಮೂಲಕ ಹಮ್ಮಿಕೊಳ್ಳಬೇಕು
 • ‘ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಯುವಜನರ ಮೇಲೆ ದಾಳಿ ನಡೆಸುವ ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು
 • ಕೋಮುವಾದವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕೋಮುವಾದಿ ಹಿನ್ನೆಲೆ ಇರುವ ಸಂಘ ಸಂಸ್ಥೆ, ವ್ಯಕ್ತಿ–ಶಕ್ತಿಗಳು ನಡೆಸುವ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇ ಶಗಳಿಗೆ ಸರ್ಕಾರ ಅನುದಾನ ಕೊಡಬಾರದು ಮತ್ತು ಸರಕಾರದ ಪ್ರತಿನಿಧಿಗಳು ಭಾಗವಹಿಸಬಾರದು
 • ದೇವಮಾನವರು, ಮಠಾಧಿಪತಿಗಳು, ಧರ್ಮಾಧಿಕಾರಿಗಳು ನಡೆಸುವ ಸಾಹಿತ್ಯ ಸಮ್ಮೇಳನ, ಸರ್ವ ಧರ್ಮ ಸಮ್ಮೇಳನ, ಸಮಾಜ ಸೇವಾ ಚಟುವಟಿಕೆಗಳಿಗೆ ಸರ್ಕಾರ ಅನುದಾನ ನೀಡಬಾರದು

***

ಜನನುಡಿ-2014ರಲ್ಲಿ ಕೇಳಿ ಬಂದ ನುಡಿಗಳು

“ಬಡವರ ಬದುಕು ಉರಿಯಲ್ಲಿರುವಾಗ ‘ನುಡಿ’ ಎಂದರೆ ‘ಸಿರಿ’ ಎಂದು ಭಾವಿಸುವುದು ಶೋಷಣೆಯ ಘೋಷಣೆಯಾಗಿದೆ. ಬಂಡವಾಳಶಾಹಿಗಳು ತಮ್ಮ ಅವ್ಯವಹಾರಗಳ ಕಳಂಕ ಮುಚ್ಚಿ ಹಾಕಲು, ರಾಜಕೀಯ ಸ್ಥಾನಮಾನ-ಪ್ರತಿಷ್ಟೆ ಸಾಂಸ್ಥಿಕ ಬಲ ಗಟ್ಟಿಗೊಳಿಸಲು ಸಾಹಿತ್ಯ-ಸಾಂಸ್ಕೃತಿಕ ವಲಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ.” – ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ

***

“ಬಂಡವಾಳಶಾಹಿ ವಸ್ತುಗಳನ್ನು ಮಾತ್ರವಲ್ಲ ವಿಚಾರಗಳನ್ನೂ ಉತ್ಪಾದಿಸುತ್ತದೆ. ಕಾರ್ಪೊರೆಟ್ ವಲಯ ಸಾಹಿತ್ಯ ಮತ್ತು ಶಿಕ್ಷಣವನ್ನು ಹಿಡಿದಿಟ್ಟುಕೊಂಡಿದೆ. ಸಾಹಿತಿಗಳನ್ನು ‘ಮೈಲಿಗೆ’ ಮಾಡಲು ಸಾಹಿತ್ಯ ಉತ್ಸವ ನಡೆಯುತ್ತಿದೆ. ..ಇಸಂ ಚಳುವಳಿ ಬೇಡವೆನ್ನುವರು, ಎಡ-ಬಲ ಎರಡೂ ಅಲ್ಲ, ಮಧ್ಯಮ ಎನ್ನುವವರು ಬಲದ ಬಾಲವೇ ಆಗಿದ್ದಾರೆ.” – ಕೆ.ನೀಲಾ

***

“ಹಸಿವು, ಅಪಮಾನ, ಸಾಮಾಜಿಕ ತಾರತಮ್ಯ ಇರುವಾಗ ನುಡಿ ಸಿರಿ ಹೇಗಾಗುತ್ತದೆ?..1981ರಲ್ಲಿ ಪೇಜಾವರ ಸ್ವಾಮಿ ಮೀನಾಕ್ಷಿಪುರಂನಲ್ಲಿ ಇಸ್ಲಾಮಿಗೆ ಮತಾಂತರವಾದವರನ್ನು ವಾಪಾಸು ಕರೆಸುತ್ತೇನೆಂದು ಹೊರಟಾಗ, ಅವರನ್ನು ‘ಯಾವ ಜಾತಿಗೆ ಸೇರಿಸುತ್ತೀರಿ ? ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ.” -ಮಾವಳ್ಳಿ ಶಂಕರ್

***

“ಕರಾವಳಿಯಲ್ಲಿ ಇಂದು ಉಸಿರುಗಟ್ಟಿಸುವ ವಾತಾವರಣ ಇದೆ. ಇಲ್ಲಿ ಕಂಬಳಕ್ಕೆ ಹೇರಿದ ನಿಷೇಧ ಮಡೆಸ್ನಾನಕ್ಕೆ ಇಲ್ಲ. ಉಳಾಯಿಬೆಟ್ಟುವಿನ ಘಟನೆ ಸಂಬಂಧ ಪತ್ರಿಕೆಯೊಂದು 300 ಮುಸ್ಲಿಮರು ಆಕ್ರಮಣ ಮಾಡಿದರು ಎಂದು ವರದಿ ಮಾಡಿರುವುದು ಪತ್ರಕರ್ತರ ಮನಸ್ಸು ಎಷ್ಟು ಮಲಿನವಾಗಿದೆ ಎಂಬುದನ್ನು ತೋರಿಸುತ್ತದೆ. 60ವರ್ಷಗಳ ಹಿಂದೆ ಇಡೀ ಜಿಲ್ಲೆಯಲ್ಲಿ ನಾನೊಬ್ಬಳೇ ಮುಸ್ಲಿಂ ಹುಡುಗಿ ಶಾಲೆಗೆ ಹೋಗುತ್ತಿದ್ದಾಗ ಆಕ್ಷೇಪಿಸಿದವರಿಗೆ ನನ್ನ ತಂದೆ ದಿಟ್ಟ ಉತ್ತರ ಕೊಟ್ಟಿದ್ದರು. ಇಂದು ಶಾಲೆಗೆ ಹೋಗುವ ಮುಸ್ಲಿಂಹೆಣ್ಣು ಮಕ್ಕಳಿಗೆ ರಕ್ಷಣಾ ಪಡೆ ಬೇಡ. ನಾವಿದ್ದೇವೆ ಎಂದು ತಂದೆ-ತಾಯಿ ಹೇಳಲು ಸಾಧ್ಯವಾಗುತ್ತಿಲ್ಲ. ಇಂದು ಜನ ಹಿಂದೂಗಳಾಗಿ, ಮುಸ್ಲಿಮರಾಗಿ ಬದುಕುತ್ತಿದ್ದಾರೆ. ಮನುಷ್ಯರಾಗಿ ಬದುಕುತ್ತಿಲ್ಲ.” -ಸಾರಾ ಅಬೂಬಕ್ಕರ್

ಚಿತ್ರಕೃಪೆ: ಐವನ್ ಡಿಸಿಲ್ವ

12 thoughts on “ಜನನುಡಿ 2014 : ಒಂದು ವರದಿ

 1. Nagshetty Shetkar

  ಒಂದು ಅನನ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿಪೂರ್ಣ ವರದಿ. ಇಂತಹ ಬರಹಗಳು ವರ್ತಮಾನದ ಸೋಭಗನ್ನೂ ಪ್ರಸ್ತುತತೆಯನ್ನೂ ಹೆಚ್ಚಿಸುತ್ತವೆ. ಲೇಖಕರಿಗೆ ಹಾಗೂ ಸಂಪಾದಕ ರವಿ ಅವರಿಗೆ ಧನ್ಯವಾದಗಳು.

  Reply
  1. Nagshetty Shetkar

   ಮಾನ್ಯ ಸಂಪಾದಕರೆ, ನಿಲುಮೆಯ ಹಲವು ಹತ್ತು ಓದುಗರು ನನ್ನ ಬಹುತೇಕ ಕಮೆಂಟುಗಳನ್ನು ಮೆಚ್ಚಿಕೊಂಡಿದ್ದಾರೆ. ಆದರೆ ನೀವು ಮಾತ್ರ ನನ್ನ ಅಭಿಪ್ರಾಯಗಳನ್ನು ಮಾಡರೇಶನ್ ಮಾಡದೆ ಪ್ರಕಟಿಸುವುದಿಲ್ಲ. ಇದು ನೀವು ನನಗೆ ಮಾಡುತ್ತಿರುವ ಅವಮಾನವಲ್ಲವೇ? ನಿಮ್ಮ ಪೋಲೀಸ್ ಬುದ್ಧಿಯಿಂದ ನಾನು ಬೇಸತ್ತಿದ್ದೇನೆ. ಮಾಡರೇಶನ್ ಮುಂದುವರೆದರೆ ವರ್ತಮಾನ ಓದುದುವುದನ್ನೇ ನಿಲ್ಲಿಸಬೇಕಾಗುತ್ತದೆ. 🙁

   Reply
   1. ಹೆಸರಲ್ಲೇನಿದೆ?

    ನಾಗಶೆಟ್ಟಿ ಶೇತ್ಕರ್ ಅವರೆ, ತಾವು ಇಷ್ಟು ಕೋಪ ಮಾಡಿಕೊಳ್ಳಬೇಡಿ! ತಮ್ಮ ‘ಜ್ಞಾನಪೂರ್ಣ’, ಅದ್ಯಾರೋ ‘ದರ್ಗಾ ಸರ್’ ಅವರ ಬಗ್ಗೆ ‘ಅಸೀಮ ಭಕ್ತಿಯ’ ಪರಾಕಾಷ್ಠೆಯ ಪ್ರದರ್ಶನವಿಲ್ಲದಿದ್ದರೆ ವರ್ತಮಾನ ಜಾಲತಾಣದ ಕಮೆಂಟುಗಳ ವಿಭಾಗ ಬಡವಾಗುತ್ತದೆ.

    Reply
 2. ರಾಧಾ ಮೋಹನ

  ದಯವಿಟ್ಟು ಜನನುಡಿಯಲ್ಲಿ ಭಾಗವಹಿಸಿದ ಪ್ರೇಕ್ಷಕರ ಹೆಸರು ಕೂಡ ಪ್ರಕಟಿಸಿದ್ದರೆ ಯಾರು ನಿಜವಾಗಿ ಪ್ರಗತಿಪರರು, ಜನರ ಬಗ್ಗೆ ಕಾಳಜಿಯುಳ್ಳವರು, ಬುದ್ಧಿವಂತರು ಎಂದು ಗೊತ್ತಾಗುತ್ತಿತ್ತು ( ಪ್ರಕಟಿಸಲು ಕಷ್ಟವಾಗುವಷ್ಟು ಜನ ಅಲ್ಲಿ ಸೇರಿರಲಿಲ್ಲ ಎಂದು ತೋರುತ್ತದೆ.) ಪಾಲ್ಗೊಂಡವರ ಸಂಖ್ಯೆ ಕಳೆದ ವರ್ಷಕ್ಕಿಂತ ಸುಮಾರು ಇಮ್ಮಡಿಯಾಗಿದ್ದರೆ ಕಳೆದ ವರ್ಷ ಕೇವಲ ವೇದಿಕೆಯಲ್ಲಿ ಮಾತ್ರ ಜನ ಇದ್ದರೆಂದು ತೋರುತ್ತದೆ. ಒಂದು ಸಭೆ ಅಥವಾ ವಿಚಾರಗೋಷ್ಠಿ ಎನ್ನಬಹುದಾದ್ದನ್ನು ಸಮಾವೇಶ ಎಂದು ವೈಭವೀಕರಿಸುವ ಆಗತ್ಯವಿದೆಯೆ?

  Reply
 3. Salam Bava

  ಜನ ನುಡಿ ಯ ಸಂಕಿಪ್ತ ವರದಿ ಓದಿ ತುಂಬಾ ಖುಷಿಯಾಯಿತು . ಭಾಗವಹಿಸಲು ತುಂಬಾ ಇಚ್ಚೆ ಇತ್ತು,ಆದ್ರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ .ಕರ್ನಾಟಕದ ಸಾಹಿತ್ಯ ,ಸಾಂಸ್ಕ್ರತಿಕ ರಂಗದ ದಿಗ್ಗಜಗಳು ಮತ್ತು ಸಂವೇದನಾಶೀಲ ಮನಸ್ಸುಗಳು ಸೇರಿ,ಪ್ಯಾಶಿಸ್ಟ್,ಭಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ಹುನ್ನಾರದ ವಿರುದ್ದ ಜನದ್ವನಿಯನ್ನು ಸಂಘಟಿಸುವ ಈ ಕೆಲಸ ದೇಶದ ಮೂಲೆ ,ಮೂಲೆಯಲ್ಲಿ ನಡೆಯಬೇಕು, ಇದು ಒಂದು ಜನಪರ ,ಪ್ರಗತಿಶೀಲ, ಮೂಮೆಂಟ್ ಆಗಿ ಬೆಳೆಯಲಿ ಎಂದು ಹಾರೈಸುವೆ . ಇದರಲ್ಲಿ ಭಾಗವಹಿಸುವ ಸಂಘಟನೆಗಳ ಪರಿದಿಯನ್ನು ಇನ್ನೂ ವಿಸ್ತರಿಸಿ ,ಎಲ್ಲಾ ಸಮಾನ ಮನಸ್ಕರೂ ಒಗ್ಗೂಡಬೇಕೆನ್ದು ನನ್ನ ನಮ್ರ ಅನಿಸಿಕೆ .
  ಕರಾವಳಿಯಲ್ಲಿ ಕೋಮುವಾದದ ತೀವ್ರತೆಯ ಬಗ್ಗೆ – ಅದರ ಕಾರಣ ಮತ್ತು ಅದರ ನಿಯಂತ್ರಣದ ಬಗ್ಗೆ ಅತ್ಯಂಥ ಪರಿಣಾಮಿಕಾರಿ ಚರ್ಚೆ ಮತ್ತು ನಿರ್ಣಯ ಬಹು ಸುತ್ಯಾರ್ಹ . ಬ್ರಾಹ್ಮಣರು ತಮ್ಮ ನಶಿಸುತ್ತಿರುವ ಅಸ್ತಿತ್ವವನ್ನು ಸಮಾಜದಲ್ಲಿ ಸ್ಥಾಪಿಸಲು ಸಡೆಸಿದ ಹುನ್ನಾರ ,ಸಂಘ ಪರಿವಾರದ ಪರದೆಯ ಹಿಂದಿನ ಕೆಲಸ ,ರಾಜಕೀಯ ನೆಲೆಗಟ್ಟನ್ನು ಗಟ್ಟಿ ಪಡಿಸಲು ರಾಜಕೀಯ ಪಕ್ಷಗಳಲ್ಲಿರುವ ಹಿಂದೂ ಮುಸ್ಲಿಂ ಮುಖಂಡರು ನಡೆಸಿದ ಕುತಂತ್ರ ರಾಜಕಾರಣ ,ಶೂದ್ರರು ಹಿಂದುತ್ವ ಶಕ್ತಿಗಳ ಬಲೆಗೆ ಎರವಾದದ್ದು,ಉದಯವಾಣಿಯ ಸತತ ಅಪಪ್ರಚಾರ ಮತ್ತು ಕೋಮು ವಿದ್ವೇಷವನ್ನು ನಿರಂತರವಾಗಿ ಪ್ರಚರಿಸಿದ್ದು,ಪೇಜಾವರ ಮತ್ತು ಕಲ್ಲಡ್ಕದ ಬಲ ಮತ್ತು ಕರಾವಳಿಯಲ್ಲಿ ಕಮ್ಯುನಿಸ್ಟರ ಬಲಕುಂದುವಿಕೆ ಸಹಾ ಕೋಮುವಾದದ ಬೆಳವಣಿಗೆಗೆ ಕಾರಣ .ಇನ್ನೊನ್ದು ಕಡೆಯಲ್ಲಿ ಮುಸ್ಲಿರು ವಿದ್ಯಾಭ್ಯಾಸ ದ ಕಡೆಗೆ ತಡವಾಗಿಯಾದರೂ ತೆರೆದು ಕೊಂಡದ್ದು ,ಆರ್ಥಿಕವಾಗಿ ಸ್ವಲ್ಪ ಬಲಿಷ್ಠ ಗೊಂಡದ್ದು ,ಕೇರಳದ ಮೌಲವಿಗಳ ನಕಾರಾತ್ಮಕ ಪ್ರಭಾವ ,ಕೆಲವು ಮೂರ್ಖ ಮುಸ್ಲಿಮರು ಪ್ರತಿಯೊಂದು ಸಣ್ಣ ವಿಷಯವನ್ನೂ ಧಾರ್ಮಿಕ ಉದ್ರೇಕದಿಂದ ಪ್ರಕ್ಹುಭ್ದಗೊಳಿಸಿದ್ದು,ದೂರದರ್ಶಿ ಮುಖಂಡತ್ವದ ಕೊರತೆ ಮತ್ತು ರಾಷ್ಟ್ರೀಯ ಮುಖ್ಯಧಾರೆಯಲ್ಲಿ ಒಂಧಾಗುವಲ್ಲಿನ ವಿಪಲತೆ ಸಹಾ ಇತರ ಕಾರಣಗಳು .ಇದರ ಹೊಡೆತಾವೆಲ್ಲ ಬಿದ್ದದ್ದು ಬಡವರಿಗೆ ಮತ್ತು ಕೆಳ ಮದ್ಯಮ
  ವರ್ಗದವರಿಗೆ ! ಎಲ್ಲ್ಲಾ ಕೋಮಿನ ಶ್ರೀಮಂತರು ತಮ್ಮ ವ್ಯಾಪಾರ ವಹಿವಾಟಿನಲ್ಲಿ,ಅದರಲ್ಲೂ ಶಿಕ್ಣಣ ವ್ಯಾಪಾರದಲ್ಲಿ ಬಹು ಅನ್ಯೋನತೆಯಿಂದ ತಮ್ಮ ಹಿತಾಶಕ್ತಿಯನ್ನು
  ಕಾಯುತ್ತಾ ಬಂದ್ದಿದ್ದಾರೆ .

  Reply
 4. M A Sriranga

  ದಲಿತ ಕವಿ ಎಂದೇ ಹೆಸರಾದ ಸಿದ್ದಲಿಂಗಯ್ಯನವರು ಈ ಸಲದ ಆಳ್ವಾಸ್ “ನುಡಿಸಿರಿ” ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕ ಸಾ ಪ ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಈಗ ಒಪ್ಪಿದ್ದಾರೆ. ಸಾಹಿತ್ಯದ ಹೆಸರನ್ನು ಮುಂದೆ ತಂದು ಜನಸಮುದಾಯಗಳಲ್ಲಿ ಭಿನ್ನತೆಯನ್ನು ಬಿತ್ತುತ್ತಿರುವವರು ಯಾರು? “ನುಡಿ”ಗಳ ವಕ್ತಾರರೋ ಅಥವಾ “ಸಿರಿವಂತರೋ?” ಒಂದೈದು ವರ್ಷಗಳು ಕಳೆಯಲಿ . ಈ ಸಲದ “ಜನನುಡಿ”ಯ ವೇದಿಕೆ ಮೇಲೆ ಇದ್ದವರಲ್ಲಿ ಮೂರ್ನಾಲಕ್ಕು ಮಂದಿಯಾದರೂ “ಸಿರಿ”ಯಲ್ಲಿ ಅಥವಾ “ಕ ಸಾ ಪ”ದ ವೇದಿಕೆ ಮೇಲೆ ನಗು ಮೊಗದಿಂದ ಕೂತಿರುತ್ತಾರೆ. ನೋಡುತ್ತಿರಿ. ಬೆಂಕಿ ಉಂಡೆ ಆಗಿದ್ದ ಚಂ. ಪಾ. ರ ಉದಾಹರಣೆ ನಮ್ಮ ಮುಂದಿದೆ. “ಕಾಲವನ್ನು ತಡೆಯೋರು ಯಾರೂ ಇಲ್ಲ”. .

  Reply
  1. ರಾಧಾ ಮೋಹನ

   ಜನರಿಗೆ ತಮ್ಮ ವಿಚಾರಗಳನ್ನು ತಲಪಿಸಬೇಕಾದರೆ ಲಕ್ಷಾಂತರ ಜನರು ಸೇರುವ ಕ.ಸಾ.ಪ ಸಮ್ಮೇಳನ ಅಥವಾ ನುಡಿಸಿರಿಯೇ ಸರಿ ಹೊರತು ನಲವತ್ತು ಮಂದಿ (ಅದೂ ಒಂದೇ ಪಂಥಕ್ಕೆ ಸೇರಿದವರು ವಿಚಾರಗಳನ್ನು ಮೊದಲೇ ಅರಿತವರು) ಸೇರುವ ಜನನುಡಿ ಅಲ್ಲ ಎಂಬ ವಿಷಯ ಸಿದ್ದಲಿಂಗಯ್ಯನವರಂತಹ ಪ್ರಗತಿಪರರಿಗೆ ಮನದಟ್ಟಾಗಿದೆ.

   Reply
  2. Nagshetty Shetkar

   ಇಂದಿನ ಸಾಹಿತಿಗಳಲ್ಲಿ ೯೯.೯೯% ಜನ ದಗಲ್ಬಾಜಿಗಳು ಅಂತ ಹಿರಿಯ ಚಿಂತಕ ರಾಜೇಂದ್ರ ಚೆನ್ನಿ ಸರ್ ಅವರು ತಮ್ಮ ಒಂದು ಬರಹದಲ್ಲಿ ಗಮನಿಸಿದ್ದಾರೆ. ಆದುದರಿಂದ ದಳ ಬದಲಾಯಿಸುವ ಸಾಹಿತಿಗಳು ಪ್ರಗತಿಪರರಲ್ಲೂ ಇದ್ದರೆ ಆಶ್ಚರ್ಯವೇನಿಲ್ಲ. ಎಡಪಂಥೀಯ ಚಿಂತನೆಯ ಹೆಸರಿನಲ್ಲಿ ಅನೇಕರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿದ್ದಾರೆ. ಇಂಥವರು ದಳ ಬದಲಾವಣೆ ಮಾಡಿದರೆ ಎಡಪಂಥೀಯ ಚಳುವಳಿ ಇನ್ನಷ್ಟು ಗಟ್ಟಿಯಾಗುತ್ತದೆ, ಕಳೆ ತೆಗೆಯುವ ಕೆಲಸ ಕಡಿಮೆಯಾಗುತ್ತದೆ. ದರ್ಗಾ ಸರ್ ಅವರಂತಹ ನಿಷ್ಟಾವಂತ ಮಾರ್ಕ್ಸ್ ವಾದಿಗಳಿಗೆ ಮನ್ನಣೆ ಪ್ರಾಮುಖ್ಯತೆ ಹೆಚ್ಚಾಗುತ್ತದೆ.

   Reply
 5. Nagshetty Shetkar

  ನುಡಿಸಿರಿಯಲ್ಲಿ ಭಾಗವಹಿಸಲು ಗಣ್ಯರಿಗಷ್ಟೇ ಅಲ್ಲ ಜಾನಸಾಮಾನ್ಯರಿಗೂ ದುಡ್ಡು ಕೊಡಲಾಗುತ್ತದೆ ಅಂತ ಕೇಳಿದ್ದೇನೆ. ಇದು ಸತ್ಯವೇ ಆಗಿದ್ದಲ್ಲಿ, ದುಡ್ಡು ಕೊಟ್ಟು ಪ್ರೇಕ್ಷಕರನ್ನು ಖರೀದಿಸುವ ಕೆಟ್ಟ ಸಂಸ್ಕೃತಿಯನ್ನು ಆಳ್ವಗಳು ರಾಜಕಾರಣದಿಂದ ಸಂಸ್ಕೃತಿಲೋಕಕ್ಕೆ ತಂದಿದ್ದಾರೆ ಎನ್ನಬಹುದು. ಜನನುಡಿಯಲ್ಲಿ ಜನ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದಾರೆ. ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸಿದ್ದಾರೆ. ಅವರ ಬಗ್ಗೆ ಕುಹುಕದ ಮಾತುಗಳನ್ನಾಡುವ ಬದಲು ಜನಜಾಗೃತಿ ಹೆಚ್ಚಿಸುವ ಬಗ್ಗೆ ಸಲಹೆ ನೀಡುವುದು ಉತ್ತಮ. ಅಂದ ಹಾಗೆ ನುಡಿಸಿರಿಗೆ ಮಾಧ್ಯಮಗಳು ಕೊಡುತ್ತಾ ಬಂದಿರುವ ವೈಭವೀಕೃತ ಪ್ರಚಾರಕ್ಕೆ ಹೋಲಿಸಿದರೆ ಜನನುಡಿಗೆ ಸಿಕ್ಕ ಪ್ರಚಾರ ನಗಣ್ಯ.

  Reply
  1. ರಾಧಾ ಮೋಹನ

   ನುಡಿಸಿರಿಗೆ ದುಡ್ಡುಪಡೆದು ಜನಸಾಮಾನ್ಯರು ಹೋಗುತ್ತಾರೆ ಎಂಬ ಆಪಾದನೆ ಕೀಳುಮಟ್ಟದ್ದು ಮಾತ್ರವಲ್ಲ ಜನಸಾಮಾನ್ಯರ ವಿಚಾರಶಕ್ತಿಯನ್ನು ಅವಮಾನಿಸುವಂಥದ್ದು. ನುಡಿಸಿರಿಗೆ ಜನ ಹೋಗುತ್ತಿರುವುದು ಅಲ್ಲಿನ ಕಾರ್ಯಕ್ರಮಗಳ ಗುಣಮಟ್ಟ, ಶಿಸ್ತು, ಅಚ್ಚುಕಟ್ಟುತನ ನೋಡಿ. ಜನನುಡಿಯ ಭಾಷಣಗಳ ಬಗೆಗಿನ ವರದಿ ಓದಿದರೆ ಅಲ್ಲಿ ಒಂದೇ ಬಗೆಯ ವಿಚಾರಗಳನ್ನು ಪ್ರೇಕ್ಷಕರ ತಲೆಗೆ ತುಂಬಿ ಬ್ರೈನ್ ವಾಶ್ ಮಾಡುವ ಪ್ರಯತ್ನವೋ ಎಂದೆನಿಸಿತ್ತದೆ. (ಒಂದು ಆರ್ ಎಸ್ ಎಸ್ ಅಥವಾ ಕಮ್ಯುನಿಷ್ಟ್ ಪಾರ್ಟಿ ಸಭೆಗಳ ಹಾಗೆ) ಆದರೆ ನುಡಿಸಿರಿಯಲ್ಲಿ ಮುಕ್ತ ವಾತಾವರಣ, ಹಲವಾರು ವಿಚಾರಗಳ ಸಂಗಮವಿದ್ದು ಕಟ್ಟಾ ಬಲಪಂಥೀಯನಾಗಿ ಬಂದವನೊಬ್ಬ ಎಡವಿಚಾರಗಳ ಬಗ್ಗೆ ಒಲವು/ ಕುತೂಹಲ ಬೆಳೆಸಿಕೊಳ್ಳಲು ಹಾಗೆಯೇ ಕಟ್ಟಾ ಎಡಪಂಥೀಯನೊಬ್ಬ ತನ್ನ ವಿಚಾರಗಳನ್ನು ಮರುಪರೀಕ್ಷಿಸಿಕೊಳ್ಳಲು ಸಾಧ್ಯತೆಗಳಿವೆ. ಉದಾ ಎಚ್ ಎಸ್ ಶಿವಪ್ರಕಾಶರಂತಹ ಅನುಭಾವಿ ಕವಿಗಳನ್ನೂ ನಟರಾಜ್ ಹುಳಿಯಾರರಂತಹ ಎಡಪಂಥೀಯರನ್ನೂ ಒಂದೇ ವೇದಿಕೆಯಲ್ಲಿ ಕಾಣಲು ನುಡಿಸಿರಿಯಲ್ಲಿ ಸಾಧ್ಯ. ಅನ್ಯಾನ್ಯ ಜ್ಞಾನ, ವಿಚಾರ, ಶಿಸ್ತುಗಳ ಪರಸ್ಪರ ಸಂಗಮ, ಮಂಥನ, ಸಂಘರ್ಷಗಳನ್ನು ನುಡಿಸಿರಿಯಲ್ಲಿ ಕಾಣಲು ಸಾಧ್ಯ.

   Reply
 6. ak kukkaje

  Here one of the gentlemen or Madam (not clearly known) is given the comment as a temptations motive. suppose there is not a huge crowd of the audience. That means what the people are gathered there, number vise or the quantity vise is less but hopefully they all in good quality in their manner and knowledge. so the quantity and quality is not always together.

  Reply
 7. ರಾಧಾ ಮೋಹನ

  ನಲುವತ್ತು ಜನ ಸೇರಿದ ವಿಚಾರಗೋಷ್ಠಿಗೆ ಎಷ್ಟು ಪ್ರಾಧಾನ್ಯ ನೀಡಬೇಕೋ ಅದಕ್ಕಿಂತ ಹೆಚ್ಚಿನ ಪ್ರಚಾರವನ್ನು ಜನನುಡಿಗೆ ಮಾಧ್ಯಮಗಳು ನೀಡಿದ ಕಾರಣ ಯಾರೂ ಬೇಸರಿಸುವ ಅಗತ್ಯವಿಲ್ಲ. ಸಾಹಿತ್ಯ ಸಮ್ಮೇಳನಗಳಲ್ಲೂ ನುಡಿಸಿರಿಯಲ್ಲೂ ಉತ್ಕೃಷ್ಟ ವಿಚಾರಗೋಷ್ಠಿಗಳು ಹಲವಾರಿದ್ದವು, ಇರುತ್ತವೆ. ಇನ್ನು ಜನನುಡಿಯಲ್ಲಿ ಸೇರಿದವರು ಮಾತ್ರ ಜ್ಞಾನವಂತರು ಎಂದರೆ ನುಡಿಸಿರಿ ಅಥವಾ ಸಾಹಿತ್ಯಸಮ್ಮೇಳನಗೆ ಹೋಗುವವರೆಲ್ಲ ದಡ್ಡರೆಂದು ಅರ್ಥವೇ? ಹಾಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದೂ ಸರಿಯೆನಿಸಿದರೆ ಸರಿ. ತುಳುನಾಡಿನ ಜಾನಪದವನ್ನು ಅರಿಯದವರಿಗೆ ‘ಸಿರಿ’ ಎಂದರೆ ಕೇವಲ ಸಂಪತ್ತು ಎಂಬ ಅರ್ಥ ಮಾತ್ರ ಹೊಳೆದೀತು. ‘ಜನನುಡಿ’ ಯಲ್ಲಿ ಜನವಿಲ್ಲ ಜ್ಞಾನ ಮಾತ್ರ ಇರುವುದು ಎಂದಾದರೆ ಹಾಗೇ ಆಗಲಿ.

  Reply

Leave a Reply

Your email address will not be published.