Daily Archives: December 27, 2014

ಮಕ್ಕಳನ್ನು ಬೆಳೆಸುವುದು ಹೇಗೆ?


– ರೂಪ ಹಾಸನ


ನಾನೊಂದು ಮಗು
ನಾನೊಂದು ಮಗು
ನನ್ನ ಬರವಿಗೆ ಇಡೀ ಜಗತ್ತು ಕಾಯುತ್ತದೆ
ನಾನು ಏನಾಗುತ್ತೇನೆ ಎಂದು
ಇಡೀ ಭೂಮಿ ಕುತೂಹಲದಿಂದ ನೋಡುತ್ತದೆ.
ನಾನು ಏನಾಗಿದ್ದೇನೆ ಏನಾಗುತ್ತೇನೆ
ಎಂಬುದರ ಮೇಲೆ ನಾಗರಿಕತೆಯ ತಕ್ಕಡಿ ನಿಂತಿದೆ

ನಾನೊಂದು ಮಗು
ನನ್ನ ಭವಿಷ್ಯ ನಿಮ್ಮ ಕೈಯಲ್ಲಿದೆ.
ನನ್ನ ಸೋಲು-ಗೆಲುವು
ನಿಮ್ಮಿಂದಲೇ ನಿರ್ಧಾರವಾಗುತ್ತದೆ.

ಎಂದೇ
ನೆಮ್ಮದಿ ನೀಡುವಂಥದನ್ನು ಕೊಡಿ
ಇದು ನನ್ನ ಪ್ರಾರ್ಥನೆ.
ದಯವಿಟ್ಟು ಕಲಿಸಿಕೊಡಿ
ಈ ಜಗತ್ತಿಗೆ ನಾನೊಂದು ವರವಾಗುವಂತೆ.
ಮ್ಯಾಮಿ ಜೆನಿಕೋಲ್

ಬಹುಶಃ ಈ ಪದ್ಯ ನಾವು ಹಿರಿಯರೆಲ್ಲರೂ ಒಮ್ಮೆ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವಂತಿದೆ.child-dreaming ಯಾವುದೇ ದೇಶದ ಅಭಿವೃದ್ಧಿ ಎನ್ನುವಂತದ್ದು ಆ ದೇಶದ ಮಕ್ಕಳನ್ನು ಕೇಂದ್ರೀಕರಿಸಿ ಆಗಬೇಕು ಎನ್ನುವುದು ಒಂದು ಆರೋಗ್ಯಕರ ಸಿದ್ದಾಂತ. ಮಕ್ಕಳು ಪ್ರತಿಕ್ಷಣ ಬೆಳೆಯುವ ಚೈತನ್ಯಶಾಲಿಗಳಾಗಿರುವುದರಿಂದ ಅವರ ಸಮಗ್ರ ಸರ್ವತೋಮುಖ ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಮಗುವನ್ನು ಕೇಂದ್ರದಲ್ಲಿಟ್ಟುಕೊಂಡು ವಿವರಿಸಿಕೊಳ್ಳುತ್ತಾ ಹೋದಾಗ ಮಗುವಿಗೆ ನಿಜವಾಗಿ ಏನು ಬೇಕು? ಅದಕ್ಕೆ ನಾವೇನು ಮಾಡಬೇಕು? ಮಗುವಿನ ಆರೋಗ್ಯಕರ ಬೆಳವಣಿಗೆಗೆ ನಾವೇನು ಮಾಡಬೇಕೆಂಬುದು ಅರಿವಿಗೆ ಬರುತ್ತಾ ಹೋಗುತ್ತದೆ. ಮಗುವೊಂದು ಪ್ರತಿ ಕ್ಷಣ ಹೊಸತಿಗೆ ಅಪ್ಡೇಟ್ ಆಗುತ್ತಿರುತ್ತದೆ. ನಾವು ಅದಕ್ಕೆ ಸ್ಪಂದಿಸದಿದ್ದರೆ ಪ್ರತಿ ಕ್ಷಣ ಔಟ್ಡೇಟೆಡ್ ಆಗುತ್ತಿರುತ್ತೇವೆ. ಇದೇ ನಾವು ಮಗುವನ್ನು ಅರ್ಥಮಾಡಿಕೊಳ್ಳಲು, ಬೆಳೆಸಲು ಇರುವ ನಿಜವಾದ ತಡೆಗೋಡೆ. ಮಗುವನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾ ಹೋದರೆ ಈ ಸಮಸ್ಯೆ ತಾನಾಗಿಯೇ ಪರಿಹಾರವಾಗುತ್ತದೆ.

‘ಮಗುವಿಗೆ ಏನು ತಿಳಿಯುತ್ತದೆ? ಅದು ನಾವು ಹೇಳಿಕೊಟ್ಟ ಹಾಗೆ ಕಲೀತಾ ಹೋಗುತ್ತೆ. ಅದಕ್ಕೆ ತನ್ನದೇ ಆದ ವ್ಯಕ್ತಿತ್ವ ಇರುವುದಿಲ್ಲ’ ಎನ್ನುವುದು ನಮ್ಮ ಸಾಮಾನ್ಯ ಅಭಿಪ್ರಾಯ. ಆದರೆ ಬಹಳ ಸೂಕ್ಷ್ಮವಾಗಿ ಮಗುವೊಂದನ್ನು ಗಮನಿಸುತ್ತಿದ್ದರೆ ಈ ನಮ್ಮ ಅಭಿಪ್ರಾಯ ತಪ್ಪು ಎಂದು ಸಾಬೀತಾಗುತ್ತದೆ. ಮಕ್ಕಳ ಮನಸ್ಸು ಒಂದು ಕಪ್ಪು ಹಲಗೆ ಇದ್ದ ಹಾಗೆ, ಅಲ್ಲಿ ನಾವು ಏನನ್ನ ಬೇಕಾದರೂ ಬರೀಬಹುದು ಎಂದು ನಂಬಿದರೆ ಅದಕ್ಕಿಂತಾ ಪೆದ್ದುತನ ಇನ್ನೊಂದಿಲ್ಲ. ವೈದ್ಯಕೀಯ ಸಂಶೋಧನೆಗಳ ಪ್ರಕಾರ ಪ್ರತಿಯೊಂದು ಮಗುವೂ ಒಂದು ವ್ಯಕ್ತಿ. ಪ್ರತಿಯೊಂದು ಮಗುವಿನಲ್ಲೂ ಇರುವ ಮನಸ್ಸನ್ನು ಗೌರವಿಸಿ ವ್ಯಕ್ತಿ ಎಂದು ನಂಬಲಾಗುತ್ತದೆ.

ಹಸಿವಾದಾಗ ಅಳುವುದನ್ನು, ಹೊಸ ಆಟಿಕೆ ಕೈಗೆ ಸಿಕ್ಕಾಗ ಸಂತಸದಿಂದ ನಗುವುದನ್ನು, ತನ್ನ ತಾಯಿಯನ್ನ ಕಂಡ ತಕ್ಷಣ ಬೇರೆಯವರ ಕೈಯಿಂದ ಜಿಗಿದು ತಾಯಿಯನ್ನು ಅಪ್ಪಿಕೊಳ್ಳುವುದನ್ನು, ತನಗೆ ಬೇಕಾದ ವಸ್ತು ಸಿಗದಿದ್ದಾಗ ಸಿಟ್ಟುಗೊಳ್ಳುವುದನ್ನು, ಮೆರ್ರಿಗೋ ರೌಂಡ್ ತಿರುಗುವುದನ್ನು ನೋಡಿ ಕೈ ಕಾಲು ಬಡಿದು ಆಡುವುದನ್ನು ಮಗುವಿಗೆ ಹುಟ್ಟಿದ ತಕ್ಷಣ ಯಾರು ಕಲಿಸುತ್ತಾರೆ? ಮಗು ದೊಡ್ಡದಾಗುತ್ತಾ ಹೋದ ಹಾಗೆ, ನಾವು ಏನನ್ನೇ ಹೊರಗಿನಿಂದ ಕಲಿಸಿದರೂ, ಅದನ್ನ ಗ್ರಹಿಸುವ ಶಕ್ತಿ, ತಿಳಿದುಕೊಳ್ಳುವ, ಅರ್ಥೈಸಿಕೊಳ್ಳುವ ಮನಸ್ಸು, ಸಾಮರ್ಥ್ಯ ಮಗುವಿನಲ್ಲಿ ಹುಟ್ಟಿನಿಂದಲೇ ಇರುತ್ತದೆ. ತಾನು ಬೆಳೀತಾ ತನ್ನ ಸುತ್ತಲಿನ ಪರಿಸರವನ್ನ ಮಗು ತನ್ನ ದೃಷ್ಟಿಕೋನದಂತೆಯೇ ಅರ್ಥೈಸುತ್ತಾ ಹೋಗುತ್ತದೆ. ಪುಟ್ಟ ಮಗುವಿಗೆ ಸಹ ತನ್ನದೇ ಇಷ್ಟಾನಿಷ್ಟಗಳು, ನಿಲುವುಗಳು, ಸ್ವಭಾವ ಇರುವುದನ್ನು ಗಮನಿಸಬಹುದು. ಕೆಲವು ಮಕ್ಕಳಿಗೆ ಸಿಹಿ ಇಷ್ಟ ಅಂದ್ರೆ ಕೆಲವಕ್ಕೆ ಉಪ್ಪಿನ ಪದಾರ್ಥ ಇಷ್ಟ. ಕೆಲವು ರಾಗಿ ಮಡ್ಡಿಯನ್ನ ಖುಷಿಯಿಂದ ತಿಂದ್ರೆ, ಇನ್ನು ಕೆಲವು ಮುಖ ಸಿಂಡರಿಸುತ್ತವೆ. ಕೆಲವು ಕಂದಮ್ಮಗಳಿಗೆ ಬಿಸಿಬಿಸಿ ನೀರಲ್ಲಿ ಗಂಟೆಗಟ್ಟಲೆ ಸ್ನಾನ ಮಾಡಿಸಿದರೂ ಕಮಕ್- ಕಿಮಕ್ ಎನ್ನುವುದಿಲ್ಲ. ಇನ್ನು ಕೆಲವು ಮಕ್ಕಳು ಸ್ವಲ್ಪ ಬಿಸಿನೀರು ಮೈಮೇಲೆ ಬಿದ್ದಿದ್ದೇ ತಡ, ಏನೋ ಅನಾಹುತವೇ ಆಯ್ತು ಎಂಬಂತೆ ಕಿರಿಚಾಡುತ್ತವೆ. ಹೀಗೆ ಪ್ರತಿಯೊಂದು ಮಗುವೂ ತನ್ನದೇ ಆದ ವಿಶಿಷ್ಟತೆಯಿಂದ ಪ್ರತ್ಯೇಕ ವ್ಯಕ್ತಿನೇ ಆಗಿರುತ್ತದೆ. ಅದನ್ನು ಗುರುತಿಸುವಂತಾ ಗೌರವಿಸುವಂತಾ ಮನೋಭಾವ ನಮ್ಮಲ್ಲಿ ಮೂಡಬೇಕಷ್ಟೇ.

ಪ್ರತಿಯೊಂದು ಮಗುವಿಗೂ ಹಿರಿಯರಂತೆಯೇ, ಅಥವಾ ಅದಕ್ಕಿಂತಾ ಸೂಕ್ಷ್ಮವೂ ಸಂವೇದನಾಶೀಲವು ಆದ ಎಲ್ಲ ಸನ್ನಿವೇಶಗಳಿಗೂSchool_children_line_Cochin_Kerala_India ಸ್ಪಂದಿಸಿ ಮೂಡುವ ಸಂವೇದನೆಗಳಿವೆ. ಅದನ್ನು ನಿರ್ಲಕ್ಷಿಸಿ ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನೆಲ್ಲಾ ಮಗುವಿನ ಮೇಲೆ ಬಲವಂತವಾಗಿ ಹೇರುವುದರಿಂದ ಮಗುವಿನ ಸೂಕ್ಷ್ಮ ಸಂವೇದನೆಗಳು ಘಾಸಿಗೊಂಡು, ದೊಡ್ಡದಾದಂತೆಲ್ಲಾ ಸ್ವತಂತ್ರ ವ್ಯಕ್ತಿತ್ವ ಇಲ್ಲದೇ ಕೀಳರಿಮೆಯಿಂದ, ಮನೋವೇದನೆಯಿಂದ ನರಳುತ್ತವೆ ಎನ್ನುತ್ತಾರೆ ಮಕ್ಕಳ ಮಾನಸಿಕ ತಜ್ಞರು. ಇಂದಿನ ನಮ್ಮ ಮಕ್ಕಳು ಹಿಂದಿನ ಪೀಳಿಗೆಗೆ ಹೋಲಿಸಿದರೆ ಹೆಚ್ಚು ಬುದ್ಧಿವಂತರು, ಪ್ರತಿಭಾವಂತರು. ಆದರೆ ಇಂದಿನ ಶಿಕ್ಷಣದ ಹೆಸರಿನಲ್ಲಿ ಅವರನ್ನು ಹೆಚ್ಚು ನೆನಪಿಟ್ಟುಕೊಳ್ಳುವ, ಮಾಹಿತಿ ಸಂಗ್ರಹಿಸುವ, ತುಂಬಿಟ್ಟಿದ್ದನ್ನು ಹೊರಚೆಲ್ಲುವ ‘ಮಿನಿ ಕಂಪ್ಯೂಟರ್’ ಗಳಾಗಿ ಮಾತ್ರ ತಯಾರಿಸಲಾಗ್ತಾ ಇದೆ. ಅವರಲ್ಲಿರುವ ಸಂಗೀತ, ನೃತ್ಯ, ಕಲೆ, ಕ್ರೀಡೆಯಂತಾ ಪ್ರತಿಭೆಗಳಿಗೆ ಒಂದಿಷ್ಟು ಪ್ರೋತ್ಸಾಹ ದೊರಕಿದರೂ ಅವರ ಜಾಣತನ, ಸೃಜನಶೀಲತೆ, ವೈಚಾರಿಕತೆಗೆ ಮತ್ತಷ್ಟು ಮೆರುಗು ನೀಡುವ ಪ್ರಯತ್ನಗಳು ನಡೆಯುವುದು ಕಡಿಮೆ. ಅವರೊಳಗಿನ ಕುತೂಹಲದ ಪ್ರಶ್ನೆಗಳು ಹೆಚ್ಚಿನ ಬಾರಿ ಹೊರಬರದಂತೆ ನಾವೇ ತಡೆಯೊಡ್ಡುತ್ತೇವೆ. ಚಿಕ್ಕಮಕ್ಕಳಾಗಿದ್ದಾಗಿನ ಅವರ ಕುತೂಹಲವನ್ನು, ಅಪರಿಮಿತ ಪ್ರಶ್ನೆಗಳನ್ನು ಮೆಲ್ಲಗೆ ನಾವೇ ಮುರುಟಿ ಬಿಟ್ಟಿರ್ತೀವಿ. ಮಕ್ಕಳ ದೇಹಕ್ಕೆ ‘ಯೂನಿಫಾರಂ’ ತೊಡಿಸಿ ಏಕರೀತಿ ಕಾಣೋ ಹಾಗೆ ಮಾಡಿದಂತೇನೇ ಅವರ ಮನಸ್ಸು-ಬುದ್ಧಿಯನ್ನೂ ಯೂನಿಫಾರಂ ತೊಡಿಸಿ ಏಕರೀತಿ ಮಾಡುವುದಕ್ಕೆ  ಹೊರಟುಬಿಟ್ಟಿದ್ದೇವೆ ನಾವು.

ಆದರೆ ಪ್ರತಿಯೊಂದು ಮಗುವಿಗೂ ಅದರದ್ದೇ ಮನಸ್ಸಿದೆ, ಭಾವನೆಗಳಿವೆ, ನೋವು-ನಲಿವುಗಳಿವೆ. ಮಗು ತನ್ನ ಸುತ್ತ ಮುತ್ತಲ ಘಟನೆ, ಅನುಭವಗಳನ್ನು ನಮಗಿಂತಲೂ ತೀವ್ರವಾಗಿ ಗಮನಿಸುತ್ತಿರುತ್ತದೆ. ಜೊತೆಗೆ ಅದಕ್ಕೆ ತನ್ನದೇ ಆದ ಅಭಿಪ್ರಾಯವೂ ಇದೆ! ತನ್ನ ಮೇಲಾಗುವ ಒತ್ತಡ, ನೋವು, ಅವಮಾನ, ನಾವು ತೋರುವ ನಿರ್ಲಕ್ಷ್ಯದಿಂದ ಮಗುವಿನ ಮನಸ್ಸು ಮುದುಡಿ ಹೋಗುತ್ತದೆ. ಮತ್ತೆ ಅದನ್ನು ಅರಳಿಸುವುದು ಕಷ್ಟದ ಕೆಲಸ. ಮಗುವಿನ ಬಗ್ಗೆ ಒಂದು ಸಣ್ಣ ಗಮನಿಸುವಿಕೆ ಕೂಡ ಅದಕ್ಕೆ ಖುಷಿ ಕೊಡುತ್ತದೆ. ತನ್ಮೂಲಕ ಅದು ತನ್ನನ್ನೇ ಗೌರವಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಬೆಳಸಿಕೊಳ್ಳುತ್ತದೆ. ಹೀಗಾಗೇ ಮಗುವಿನ ಜೊತೆ ತೊಡಗಿಕೊಳ್ಳುವಾಗ ನಮ್ಮ ಮಾತು, ನಡವಳಿಕೆ ಎಲ್ಲವೂ ಗಾಜಿನ ಜೊತೆಗೆ ವ್ಯವಹರಿಸುವಷ್ಟೇ ಸೂಕ್ಷ್ಮವಾಗಿರಬೇಕು. ಗಾಜಿನ ಮೇಲೆ ನಾವಿಡೋ ಕೈಬೆರಳು ಕೂಡ ಗುರುತಾಗಿ ಉಳಿದುಬಿಡುತ್ತೆ ಅಲ್ಲವೇ?

ಹಿರಿಯರಾದ ನಾವು ಪ್ರತಿಯೊಂದು ಮಗುವೂ ತನ್ನ ಭಾವನೆಗಳಿಂದ ತನ್ನಂತೆ ತಾನೇ ವಿಕಸಿಸಿ, ಅರಳುವುದಕ್ಕೆ, ಪರಿಮಳ ಸೂಸೋದಿಕ್ಕೆ ಬಿಡಬೇಕು. ಅದಕ್ಕೆ ತಕ್ಕ ಪೂರಕ ಪರಿಸರವನ್ನಷ್ಟೇ ನಾವು ಒದಗಿಸಿ ಕೊಡಬೇಕು. ಮಗುವಿನ ಮನಸ್ಸು ವಿಶಾಲ ನದಿಯಂತೆ. ಅದು ತನಗೆ ಬೇಕೆಂದಂತೆ, ಬೇಕಾದ ಕಡೆಗೆ ಹರಿದು ಬೇಕೆನಿಸಿದ್ದನ್ನು ಪಡೆಯಬಲ್ಲದು. ಯಾವುದು ಸರಿಯಾದದ್ದು? ಯಾವುದು ತಪ್ಪು ಅಂತ ಹೇಳಿಕೊಡುವುದಷ್ಟೇ ನಮ್ಮ ಕರ್ತವ್ಯ. ಅದನ್ನು ಪಡೆಯುವ ದಾರಿಗಳನ್ನ ಮಗು ತಾನೇ ತಿಳೀತಾ ಹೋಗುತ್ತೆ. ಹಾಗೇ ಮಗುವನ್ನ ನಮ್ಮ ಮಿತಿಯಲ್ಲಿಯಷ್ಟೇ ಅರ್ಥೈಸಿಕೊಂಡು ಅದಕ್ಕೆ ಸಂಕೋಲೆ ತೊಡಿಸುವ ‘ರಿಂಗ್ ಮಾಸ್ಟರ್’ ಗಳು ನಾವಾಗದಿರಬೇಕಷ್ಟೇ. ಅದನ್ನು ಅದು ಇರುವಂತೆ ಅರಿತುಕೊಳ್ಳುವ ಕಲೆಯೇ ನಾವು ಮಗುವಿನ ಘನತೆಗೆ ಕೊಡುವ ಬೆಲೆ ಎಂದು ನಾನು ಭಾವಿಸುತ್ತೇನೆ.

ಮಕ್ಕಳು ಎಂದರೆ ಅರಳಲು ಕಾದಿರುವ ಮೊಗ್ಗುಗಳು. ಒಂದು ಮೊಗ್ಗು ಪರಿಪೂರ್ಣವಾಗಿ child_colourಅರಳಬೇಕೆಂದರೆ ನಾವು ಆ ಗಿಡಕ್ಕೆ ಸರಿಯಾದ ಗಾಳಿ, ಬೆಳಕು, ನೀರು, ಮಣ್ಣು,  ಪೋಷಕಾಂಶವನ್ನು ಸಮರ್ಪಕವಾಗಿ ಸಮ ಪ್ರಮಾಣದಲ್ಲಿ ಕೊಟ್ಟಿರಬೇಕು. ಒಂದೇ ಒಂದು ಅಂಶ ಕಡಿಮೆಯಾದರೂ ಮಗುವಿನ ವ್ಯಕ್ತಿತ್ವ ಮುಕ್ಕಾಗುತ್ತದೆ. ಹೀಗಾಗೇ ಮಗುವಿಗೆ ನಾವು ರೂಪಿಸಿ ಕೊಡುವ ವಾತಾವರಣ ತುಂಬಾ ಮುಖ್ಯವಾದುದು. ಒಂದು ಗಿಡದಿಂದ ಒಂದು ಮೊಗ್ಗು ಕುಡಿಯೊಡೆದು ಬಂತೆಂದರೆ ಅದು ಸರಿಯಾಗಿ ವಿಕಸಿಸುವವರೆಗೆ ನಮ್ಮ ಜವಾಬ್ದಾರಿಯಿರುತ್ತದೆ. ಹೀಗಾಗೇ ಮಗುವೆಂದರೆ ‘ಟೇಕನ್ ಫಾರ್ ಗ್ರಾಂಟೆಡ್’ ಆಗಬಾರದು. ಅದು ಒಂದು ಬಹು ದೊಡ್ಡ ಜವಾಬ್ದಾರಿಯಾಗಬೇಕು.

‘ನೀವು ನಿಮ್ಮ ಮಕ್ಕಳನ್ನ ಪ್ರೀತಿಸ್ತೀರಾ?’ ಎಂದು ಕೇಳಿದರೆ ಎಲ್ಲ ಪಾಲಕರೂ ಒಕ್ಕೊರಲಿನಿಂದ ಹೌದೆನ್ನುತ್ತಾರೆ. ಹಾಗಾದರೆ ಪ್ರೀತಿ ಎಂದರೇನು? ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ಮಕ್ಕಳಿಗೆ ಪ್ರೀತಿ ಕೊಡೋದು ಅಂದ್ರೆ ಅವರು ಕೇಳಿದ್ದು ಕೊಡಿಸೋದು, ಒಳ್ಳೆ ಶಾಲೆಗೆ ಕಳಿಸೋದು, ಒಳ್ಳೆ ಬಟ್ಟೆ ಕೊಡಿಸೋದು, ಒಳ್ಳೆ ತಿಂಡಿ ಕೊಡಿಸೋದು ಎಂಬಷ್ಟಕ್ಕೆ ಮಾತ್ರ ಇಂದು ನಮ್ಮ ಪ್ರೀತಿ ಸೀಮಿತವಾಗಿದೆ. ಆದರೆ ನಿಜವಾದ ಪ್ರೀತಿ, ಮಕ್ಕಳು ನಮ್ಮಿಂದ ನಿರೀಕ್ಷಿಸುವುದೇನೆಂದರೆ ನಾವು ಅವರಿಗೆ ಕೊಡುವಗಮನ, ಕಾಳಜಿ ಮತ್ತು ಗುಣಾತ್ಮಕ ಸಮಯ.

ಮಹಾಭಾರತದಲ್ಲೊಬ್ಬ ಶಿಶುಪಾಲನೆಂಬ ಉಗ್ರ ಬರುತ್ತಾನೆ. ಅವನ ಕಥೆ ನಮಗೆ ಗೊತ್ತೇ ಇದೆ. ಆದರೆ ಈಗ, ಆಧುನಿಕ ಯುಗದಲ್ಲಿ ನಮ್ಮ ಮಕ್ಕಳ ಪಾಲಿಗೆ ಪಾಲಕರೇ ಉಗ್ರಗಾಮಿಗಳು! ಇದು ನಾನು ಹೇಳುತ್ತಿರುವುದಲ್ಲ ನಮ್ಮ ಮನಃಶಾಸ್ತ್ರಜ್ಞರು ಹೇಳುತ್ತಿರುವುದು. ಮಕ್ಕಳ ಶೇಕಡಾ 90ಕ್ಕೂ ಹೆಚ್ಚಿನ ಸಮಸ್ಯೆಗಳಿಗೆ ಪಾಲಕರೇ ಕಾರಣವೆಂದು ಅವರು ಹೇಳುತ್ತಾರೆ. ಹಾಗೆಂದು ಎಲ್ಲರ ಕುರಿತೂ ಸಾರಾಸಗಟಾಗಿ ಈ ಮಾತನ್ನು ಹೇಳುತ್ತಿಲ್ಲ. ಈ ನಮ್ಮ ಶಿಶುಪಾಲಕರಲ್ಲಿ ಕೆಲವರು ತಮಗೇ ಅರಿವಿಲ್ಲದೇ, ತಮ್ಮ ಮಕ್ಕಳ ಮೇಲೆ ಹೇರುವ ಅತೀ ಒತ್ತಡದಿಂದಾಗಿ ಅವರನ್ನು ಖಿನ್ನತೆಗೆ ನೂಕುವ ಮನೋವ್ಯಾಕುಲಕ್ಕೀಡು ಮಾಡುವ, ಅನಿವಾರ್ಯವಾಗಿ ಮಕ್ಕಳು ಆತ್ಮಹತ್ಯೆಯಂಥಾ ಋಣಾತ್ಮಕ ನಿರ್ಧಾರವನ್ನೂ ಕೈಗೊಳ್ಳುವಂತೆ ಮಾಡುವ ದುಷ್ಟರಾಗಿಬಿಡುತ್ತಾರೆಂಬುದನ್ನು ವಿಷಾದದಿಂದ ಹೇಳಲೇ ಬೇಕಿದೆ.

ತಮ್ಮ ಮಗುವಿನ ಬುದ್ಧಿಮತ್ತೆ, ಸಾಮರ್ಥ್ಯ, ತಿಳಿವಿನ ಮಿತಿಯೊಂದನ್ನೂ ಅರಿಯದೇ ‘ನೀನು ಮೊದಲ ರ‍್ಯಾಂಕ್ ಬರಬೇಕು’ ‘ಇಷ್ಟೇ ಅಂಕ ತೆಗೆದುಕೊಳ್ಳಬೇಕು’ ‘ಇಂತಹದ್ದೇ ಕೋರ್ಸ್ ಓದಬೇಕು’…….ಇತ್ಯಾದಿ ಹೇರುತ್ತಾ ಹೋದಾಗ ಮಕ್ಕಳು ಪಾಲಕರ ಬಯಕೆ ಪೂರೈಸಲು ಹೆಣಗುತ್ತಾ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ. ಹೀಗೆಂದೇ ಇಂದು ಮಕ್ಕಳು ತಮ್ಮ ವಯಸ್ಸು ಹಾಗೂ ಮನಸ್ಸಿನ ಸಹಜತೆ ಕಳೆದುಕೊಂಡು ಕೃತಕವಾಗಿ ಬದುಕುತ್ತಿದ್ದಾರೆ. ಅವರ ಜೀವಂತಿಕೆ ಮತ್ತು ಸೃಜನಶೀಲತೆಗೆ ಒತ್ತು ನೀಡದೇ ನಾವೀಗ ಅವರನ್ನು ಮಾರುಕಟ್ಟೆಯ ಸರಕುಗಳಾಗಿ ಮಾತ್ರ ತಯಾರಿಸುತ್ತಿರುವುದರಿಂದ ಖಿನ್ನತೆಯನ್ನು ಅನುಭವಿಸುತ್ತಾ ತಾವಾಗಲಾರದ್ದನ್ನು ಆಗಲು ಪ್ರಯತ್ನಿಸಿ ಅದು ಸಾಧ್ಯವಿಲ್ಲವೆಂದು ಅರಿವಾದಾಗ ಕೀಳರಿಮೆಯಿಂದ ನೇತ್ಯಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತ ತಲುಪುತ್ತಿದ್ದಾರೆ.

ಇರುವ ಒಂದೋ ಎರಡೋ ಮಕ್ಕಳನ್ನು ಅತೀ ಮುದ್ದಿನಿಂದ ನಾಜೂಕುIndian-Child-Dressed-As-Doctor ಗೊಂಬೆಗಳಾಗಿಸಿ ಬದುಕಿನ ಸಣ್ಣ ಕಷ್ಟವೂ ಅವರಿಗೆ ತಾಕದಂತೆ ಬೆಳೆಸಿ, ಸಮಸ್ಯೆಗಳೆದುರಾದಾಗ ಅದನ್ನು ಎದುರಿಸುವ ಛಲ, ಆತ್ಮವಿಶ್ವಾಸಗಳನ್ನು ಕಲಿಸದ ಪಾಲಕರು ತಾವು ಕಲಿಯಲಾರದ್ದನ್ನೆಲ್ಲಾ ತಮ್ಮ ಮಕ್ಕಳು ಕಲಿಯಬೇಕು, ತಾವು ಸಾಧಿಸಲಾಗದ್ದನ್ನು ತಮ್ಮ ಮಕ್ಕಳು ಸಾಧಿಸಬೇಕೆನ್ನುವ ಮಹದಾಸೆಯಲ್ಲಿ, ತಮ್ಮ ಮಗು ‘ಸೂಪರ್ ಚೈಲ್ಡ್’ ಆಗಿಬಿಡಬೇಕೆಂಬ ಕನಸಿನಲ್ಲಿ ತಮಗರಿವಿಲ್ಲದೇ ಅವರ ಪಾಲಿನ ಉಗ್ರಗಾಮಿಗಳಾಗಿಬಿಡುತ್ತಾರೆ! ಒಮ್ಮೆ ಯೋಚಿಸಿ ನಮ್ಮ ಮಕ್ಕಳನ್ನು ಅವರ ಗುಣ ಸ್ವಭಾವ ಸಾಮರ್ಥ್ಯಕ್ಕನುಗುಣವಾಗಿ ಅವರಿರುವಂತೆ ನಾವು ಬೆಳೆಸುತ್ತಿದ್ದೇವೆಯೇ? ಅದಕ್ಕೆ ಬೇಕಾದಂತಾ ಪೂರಕ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದೇವೆಯೇ?

ಸಮಾಜದ ಅವಶ್ಯಕತೆಗಳು ಬದಲಾದಂತೆ ಅರ್ಥ ಸಂಸ್ಕೃತಿ-ಪ್ರದರ್ಶನ ಸಂಸ್ಕೃತಿಗಳೆಡೆಗಿನ ಸೆಳೆತಗಳು ಹೆಚ್ಚಾದಂತೆ ಅದರ ಒತ್ತಡ ನಮ್ಮ ಮಕ್ಕಳ ಮೇಲೆ ತೀವ್ರವಾಗಿ ಬೀಳುತ್ತಿದೆ. ಅದನ್ನು ಪೂರೈಸಲಾಗದೇ ಮಕ್ಕಳು ಖಿನ್ನತೆಗೊಳಗಾಗುವುದೂ ಸ್ವಾಭಾವಿಕ. ಹೀಗೆಂದೇ ಇಂದು ‘ಉತ್ತಮ ಪಾಲಕತ್ವ’ ಕೂಡ ಯೋಚಿಸಬೇಕಾದ ಮುಖ್ಯ ವಿಷಯಗಳಲ್ಲೊಂದು. ತಮ್ಮದೇ ನೂರೆಂಟು ಸಮಸ್ಯೆಗಳು, ಒತ್ತಡಗಳಲ್ಲಿ ತಮ್ಮ ಪ್ರಪಂಚದ ‘ಬೇಕು’ಗಳ ಪೂರೈಕೆಯಲ್ಲಿ ಮುಳುಗಿ ಹೋಗಿರುವ ಹೆಚ್ಚಿನ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಗುಣಾತ್ಮಕ ಸಮಯವನ್ನು ಕಳೆಯಲು, ಅವರನ್ನು ಅರ್ಥೈಸಿಕೊಳ್ಳಲು, ಅವರ ಬೇಕು-ಬೇಡ ಗಮನಿಸಲು ಸಮಯವಿಲ್ಲ. ಆದರೆ ಸಮಯ ಸಿಕ್ಕಾಗೆಲ್ಲಾ ಅವರ ಮೇಲೆ ಬಲವಂತವಾಗಿ ತಮ್ಮ ಅಭಿಲಾಷೆಗಳನ್ನು ಮಾತ್ರ ನಿರಂತರವಾಗಿ ಹೇರುತ್ತಲೇ ಇರುತ್ತಾರೆ! ಅಲ್ಲವೇ?

ಹೀಗೆಂದೇ ಆಧುನಿಕ ಶಿಶುಪಾಲಕರಿಗೆ ನನ್ನದೊಂದು ಮನವಿ. ಮಕ್ಕಳನ್ನು ಅವರ ಇಚ್ಛೆ ಸಾಮರ್ಥ್ಯಕ್ಕನುಗುಣವಾಗಿ ಸಹಜವಾಗಿ, ಮುಕ್ತವಾಗಿ ಬೆಳೆಸಿ. ಬಂದುದೆಲ್ಲವನ್ನೂ ಆತ್ಮಸ್ಥೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಕಲಿಸಿ. ಅವರ ಇಷ್ಟಾನಿಷ್ಟ, ಗುಣ, ಸ್ವಭಾವ, ಅಭಿರುಚಿಗಳನ್ನು ನಿರಂತರವಾಗಿ ಅಭ್ಯಸಿಸಿ. ವ್ಯಕ್ತಿತ್ವ ದೋಷಗಳನ್ನು ಚಿಕ್ಕಂದಿನಲ್ಲೇ ಪ್ರೀತಿಯಿಂದ ಮುರುಟಿ ಹಾಕಿ. ಎಲ್ಲಕ್ಕಿಂಥಾ ಮುಖ್ಯವಾಗಿ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಅವರಿಗೆ ನಿಮ್ಮ ಹಣಕ್ಕಿಂಥಾ ಅದರ ಮೂಲಕ ನೀವು ಅವರಿಗೆ ಒದಗಿಸುವ ಸುಖದ ಸಾಧನಗಳಿಗಿಂಥಾ ನಿಮ್ಮ  ಪ್ರೀತಿ, ವಾತ್ಸಲ್ಯದ ನಿರೀಕ್ಷೆ ಹೆಚ್ಚಿಗಿರುತ್ತದೆ ಎಂಬುದನ್ನು ಮರೆಯಬೇಡಿ. ಅವರ ಇಚ್ಛೆಗೆ ವಿರುದ್ಧವಾಗಿ ಅವರಿಗೆ ಒತ್ತಡ ಹೇರದೇ, ಅವರ ಅಭಿರುಚಿ-ಆಸೆಗೆ ತಕ್ಕಂತೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆ, ಸಹಕಾರ ನೀಡಿ.

ಮಕ್ಕಳೊಂದಿಗಿನ ಸಂವಾದದ ನನ್ನ ಅನುಭವದಿಂದ ಕಂಡುಕೊಂಡಿರುವುದೆಂದರೆ ಇಂದಿನ ನಮ್ಮ ಮಕ್ಕಳ ಮುಗ್ಧತೆಯನ್ನು ನಮ್ಮ ದೃಶ್ಯ ಮಾಧ್ಯಮಗಳು ಭ್ರಷ್ಟಗೊಳಿಸುತ್ತಾ ಇವೆ. ಅದರಲ್ಲಿ ಬರುವ ಮಾತು, ಕೃತಿ, ಹಾವಭಾವಗಳನ್ನು ಅನುಕರಿಸಲು ಮಕ್ಕಳು ಪ್ರಯತ್ನಿಸ್ತಾ ಇದ್ದಾರೆ. ಕುತೂಹಲದಿಂದ ಪ್ರಯೋಗಿಸಲು ನೋಡುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಸಾಧ್ಯವಿದ್ದಷ್ಟೂ ಟಿವಿಯಿಂದ ದೂರವಿಡುವ ಪ್ರಯತ್ನ ಮಾಡಬೇಕು. ಆ ಸಮಯದಲ್ಲಿ ಅವರನ್ನು ಹಾಡು, ಆಟ, ಗಿಡ ನೆಡುವುದು, ಚಿತ್ರಕಲೆ ಬಿಡಿಸುವುದರಲ್ಲಿ, ಸಣ್ಣಪುಟ್ಟ ಮನೆಗೆಲಸದಲ್ಲಿ ತೊಡಗಿಸಬೇಕು. ನಾವೂ ಅವರೊಂದಿಗೆ ಈ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಿಡುವು ಮಾಡಿಕೊಳ್ಳಬೇಕು. ನಾವು ಮಾತ್ರ ಟಿ.ವಿ ನೋಡ್ತಾ ಮಕ್ಕಳಿಗೆ ಬೇರೇನೋ ಕೆಲಸ ಹೇಳಿದರೆ ಖಂಡಿತಾ ಅವರದನ್ನ ಮಾಡುವುದಿಲ್ಲ. ಒಂದು ಮಾತು ನಾವೆಲ್ಲರೂ ನೆನಪಿಡಬೇಕಾದ್ದು ಮಕ್ಕಳು ನಾವು ಹೇಳಿದ್ದನ್ನ ಕೇಳಿ ಏನನ್ನೂ ಕಲಿಯುವುದಿಲ್ಲ. ಅವರು ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ! ನಮ್ಮ ನಡವಳಿಕೆ, ಸ್ವಭಾವ, ಮಾತು, ಹಾವಭಾವಗಳು ಅವರ ಮೇಲೆ ತೀವ್ರ ಪ್ರಭಾವ ಬೀರುತ್ತಿರುತ್ತವೆ. ಆದ್ದರಿಂದ ನಾವು ಪ್ರತಿಕ್ಷಣ ಎಚ್ಚರಿಕೆಯಿಂದ ಇರಬೇಕು! ನಮ್ಮನ್ನು ನೋಡಿ ಅವರು ಕಲಿಯುತ್ತಿರುತ್ತಾರೆ!

ಪ್ರತಿದಿನ ಮಗು ಮನೆ ಬಿಟ್ಟಾಗಿನಿಂದ, ಶಾಲೆಯಿಂದ ಮನೆಗೆ ಬರುವವರೆಗೆ ಏನೇನಾಯ್ತೆಂದು ಸ್ನೇಹದಿಂದ ವಿಶ್ವಾಸಕ್ಕೆ ತೆಗೆದುಕೊಂಡು ಗೆಳೆಯರಂತೆ ವಿಚಾರಿಸಬೇಕು. ವಿಷಯ ಸಂಗ್ರಹಿಸಬೇಕು. ವಿನಾಕಾರಣ ಪ್ರತಿ ಮಾತಿಗೂ ಬೈಯ್ಯುವುದು, ಗದರುವುದು ಹೊಡೆಯುವುದು ಮಾಡದೇ ಎದುರಿಗೆ ಮಗುವನ್ನು ಕುಳ್ಳಿರಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದರಿಂದ ಮಗುವಿಗೆ ಸ್ನೇಹ ನಂಬಿಕೆ ಬರುತ್ತದೆ. ಆಗವರು ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಮಕ್ಕಳಿಗೆ ಯಾರಿಂದಲಾದರೂ ಏನಾದರೂ ತೊಂದರೆಗಳಾಗುತ್ತಿರುವ ಸುಳಿವು ಸಿಕ್ಕರೆ ತಕ್ಷಣ ಎಚ್ಚೆತ್ತು ಅದರೆಡೆಗೆ ಗಮನ ಹರಿಸಬೇಕು.

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಕರೂ ತೆಗೆದುಕೊಳ್ಳಬೇಕು ಮತ್ತು ಮಕ್ಕಳಿಗೂ ನೀಡಬೇಕು. ಮುಖ್ಯವಾಗಿ ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವ ಆಟೋ, ವ್ಯಾನ್ ಇತ್ಯಾದಿ ವಾಹನ ಚಾಲಕರ/ಮಾಲೀಕರ ಸಂಪೂರ್ಣ ವಿವರಗಳನ್ನು ತಿಳಿದುಕೊಂಡಿರಬೇಕು ಮತ್ತು ಅವರ ದೂರವಾಣಿ ಸಂಖ್ಯೆಗಳನ್ನು ಪಡೆದಿರಬೇಕು. ಅವರ ನಡವಳಿಕೆಯು ಮಗುವಿನ ಜೊತೆಗೆ ಹೇಗಿದೆ ಎನ್ನುವುದನ್ನು ಕುರಿತು ಆಗಾಗ್ಗೆ ವಿಚಾರಿಸುತ್ತಿರಬೇಕು.

ಅಪರಿಚಿತ ವ್ಯಕ್ತಿಗಳಿಂದ ಮಕ್ಕಳು ಆದಷ್ಟೂ ದೂರವಿರುವಂತೆ ಹಾಗೂchild-abuse ಅವರಿಂದ ಯಾವುದೇ ವಸ್ತುಗಳನ್ನು ಸ್ವೀಕರಿಸದಂತೆ ತಿಳಿವಳಿಕೆ ನೀಡಬೇಕು. ಪರಿಚಿತ ವ್ಯಕ್ತಿಗಳೊಂದಿಗೆ ಕೂಡ ಆತ್ಮೀಯತೆಯಿಂದ ಇರುತ್ತಲೇ ಒಂದು ದೂರವನ್ನು ನಿರ್ವಹಿಸುವ ಕಲೆಯನ್ನು ಮಕ್ಕಳಿಗೆ ತಿಳಿಸಿ, ಕಲಿಸಿ ಕೊಡಬೇಕು. ಮಕ್ಕಳಿಗೆ ವೈಯಕ್ತಿಕ ಸುರಕ್ಷತೆ ಮತ್ತು ದೌರ್ಜನ್ಯಗಳ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾದುದು. ಕತ್ತಲೆಯಾಗುವ ಮೊದಲೇ ಆದಷ್ಟೂ ಮಕ್ಕಳು ಮನೆ ಸೇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಯಾವುದೇ ಕಾರಣಕ್ಕಾದರೂ ಅಸಹಜತೆಯಿಂದ ವರ್ತಿಸುತ್ತಿದ್ದರೆ ತಕ್ಷಣ ಅವರೊಂದಿಗೆ ಸಮಾಲೋಚಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಮಕ್ಕಳು, ಮೊಬೈಲ್, ಫೋನ್, ಇಂಟರ್ನೆಟ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಅನಾವಶ್ಯಕವಾಗಿ ಮತ್ತು ಹಿರಿಯರ ಅನುಪಸ್ಥಿತಿಯಲ್ಲಿ ಬಳಸುವುದನ್ನು ತಡೆಯಬೇಕು.

ಲೈಂಗಿಕ ದುರ್ಬಳಕೆ ಅಥವಾ ಶೋಷಣೆಯ ಕುರಿತು ಹೆಚ್ಚಿನಂಶ ಹೆತ್ತವರು ತಮ್ಮ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಲೈಂಗಿಕ ವರ್ತನೆಗಳ ಬಗ್ಗೆ ತಮ್ಮ ಮಕ್ಕಳು ಕೇಳಬಹುದಾದ ಪ್ರಶ್ನೆಗಳಿಗೆ ಏನುತ್ತರಿಸಬೇಕೆಂದು ತಿಳಿಯದೇ ಮುಜುಗರ ಪಡುತ್ತಾರೆ. ಆದರೆ ಇಂದು ಮಕ್ಕಳೊಂದಿಗೆ ಲೈಂಗಿಕ ದುರ್ಬಳಕೆಯ ಬಗ್ಗೆ ಅವಶ್ಯಕವಾಗಿ ಮಾತಾಡಲೇ ಬೇಕಿದೆ. ಇಲ್ಲಿ ಸೆಕ್ಸ್ ಎಂಬುದಕ್ಕೆ ಒತ್ತು ಕೊಡದೇ ಸುರಕ್ಷತೆಯನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಬೇರೆಲ್ಲಾ ಸುರಕ್ಷಿತತೆಯ ಬಗ್ಗೆ ಹೇಳುವಂತೆಯೇ ಸಹಜವಾಗಿ ಅಸಭ್ಯ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತೂ ಮಕ್ಕಳಿಗೆ ಹೇಳಿಕೊಡುವುದು ಅನಿವಾರ್ಯವಾಗಿದೆ. ಶೇಕಡಾ 50ರಷ್ಟು ಮಕ್ಕಳು ತಾವು ಒಂದಲ್ಲಾ ಒಂದು ಬಗೆಯ ಲೈಂಗಿಕ ಕಿರುಕುಳ ಅನುಭವಿಸಿಯೇ ಇರುತ್ತಾರೆ. ಇದರಲ್ಲಿ ಗಂಡು-ಹೆಣ್ಣು ಯಾವ ಬೇಧವೂ ಇಲ್ಲ. ಎರಡೂ ಲಿಂಗದ ಮಕ್ಕಳೂ ಸಮಪ್ರಮಾಣದಲ್ಲಿ ಶೋಷಣೆ ಅನುಭವಿಸುತ್ತಾರೆ. ಹೀಗಾಗಿ ಇಬ್ಬರಿಗೂ ತಿಳಿವಳಿಕೆ ನೀಡಬೇಕು.

ನಾವೆಷ್ಟೇ ಆಧುನಿಕರು, ವಿದ್ಯಾವಂತರು ಎಂದುಕೊಂಡರೂ ಇಂದಿಗೂ ಗಂಡು-ಹೆಣ್ಣುಮಕ್ಕಳನ್ನು ತಾರತಮ್ಯದಿಂದ ನೋಡುವುದು, ನಮಗೇ ಅರಿವಿಲ್ಲದೇ ಅವರಲ್ಲಿ ಗಂಡು ಮಕ್ಕಳಲ್ಲಿ ಶ್ರೇಷ್ಠತೆಯನ್ನ, ಹೆಣ್ಣುಮಕ್ಕಳು ಅವರಿಗಿಂತ ಕಡಿಮೆ ಎನ್ನುವಂತೆಯೇ ಬೆಳೆಸಲಾಗುತ್ತಿದೆ. ನಾವು ಮಕ್ಕಳಿಗೆ ಚಿಕ್ಕಂದಿನಲ್ಲೇ ಈ ಭಾವನೆ ಬರದಂತೆ ಅವರಿಬ್ಬರೂ ಸಮಾನರು, ಸಮಾನವಾಗಿ ಕೆಲಸಗಳನ್ನೂ, ಜವಾಬ್ದಾರಿಗಳನ್ನೂ ಹಂಚಿಕೊಂಡು ಮಾಡಬೇಕೆನ್ನುವುದನ್ನು ಕಲಿಸಬೇಕಾಗುತ್ತದೆ. ಆಗ ಮಾತ್ರ ದೊಡ್ಡವರಾದ ನಂತರ ಈ ಒತ್ತಡದ, ಗಂಡೂ-ಹೆಣ್ಣೂ ಇಬ್ಬರೂ ಹೊರಗೆ ಹೋಗಿ ದುಡಿಯಬೇಕಾಗಿರುವ ಈ ದಿನಗಳಲ್ಲಿ ಸಮಾನತೆಯಿಂದ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ.

 ಮಗು ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತದೆ. ಅದಕ್ಕೆ ಯಾವುದೇ ಕೊಳಕಿನ ಸೊಂಕಿರುವುದಿಲ್ಲ. ಆದರೆ ಬೆಳೆಯುತ್ತಾ ಹೋದಂತೆ ಮಕ್ಕಳಲ್ಲಿ ಜಾತಿ-ಧರ್ಮ, ಗಂಡು-ಹೆಣ್ಣು ತಾರತಮ್ಯ, ಮೇಲು ಕೀಳಿನ ವ್ಯತ್ಯಾಸ, ಸಣ್ಣತನ, ಕೆಟ್ಟ ಭಾವನೆಗಳನ್ನು ನಾವೇ ಬಿತ್ತುತ್ತಾ ಹೋಗುತ್ತೇವೆ. ಆದರೆ ಮಗುವನ್ನು ಅದರ ಎಲ್ಲಾ ಮುಗ್ಧತೆಗಳೊಂದಿಗೆ ಯಾವುದೇ ಕಲ್ಮಷಗಳು ಸೋಕದಂತೆ ಆದರೂ ದುಷ್ಟರಿಂದ ಎಚ್ಚರಿಕೆಯಿಂದಿರುವಂತೆ ಕಲಿಸಬೇಕಿರುವುದೇ ನಿಜವಾದ ಪಾಲಕರ ಕರ್ತವ್ಯ. ಮಕ್ಕಳಿಗೆ ತಾವು ಒಳಗೊಳ್ಳುವ ಅನುಭವ, ಕಷ್ಟಸಹಿಷ್ಣುತೆ, ಕೌಟುಂಬಿಕ ಜವಾಬ್ದಾರಿ, ಸಮಸ್ಯೆಗಳನ್ನು ಎದುರಿಸುವ ಛಲದಿಂದ ದೃಢತೆ ಉಂಟಾಗುತ್ತದೆ. ದಿಟ್ಟತೆ, ಸಹಜತೆ ಮತ್ತು ಮುಕ್ತತೆಗಳು ಅವರ ವ್ಯಕ್ತಿತ್ವದ ಭಾಗವಾಗಿಬಿಡುತ್ತವೆ. ಪ್ರಪಂಚ ಎಷ್ಟೊಂದು ವಿಶಾಲವಾಗಿದೆ, ಬದುಕಿಗೆಷ್ಟೊಂದು ಮಾರ್ಗಗಳಿವೆ, ಎಲ್ಲರೂ ಎಂಥಹುದೇ ನಿಕೃಷ್ಟ ಸಂದರ್ಭದಲ್ಲಿಯೂ ಸ್ವಾಭಿಮಾನದಿಂದ ಬದುಕಲು ನೂರಾರು ದಾರಿಗಳಿವೆ. ಒಂದು ದಾರಿ ಮುಚ್ಚಿತೆಂದರೂ ಕಷ್ಟಪಡಲು ಸಿದ್ಧವಿರುವ ಚೈತನ್ಯಗಳಿಗೆ ಹಲವಾರು ಪರ್ಯಾಯಗಳಿವೆ ಎಂಬುದನ್ನು ಮಕ್ಕಳಿಗೆ ಸುತ್ತಲ ಸಮಾಜದ ಉದಾಹರಣೆಗಳಿಂದ ತೋರಿಸಿಕೊಡುತ್ತಿರಬೇಕು. ಪ್ರತಿ ಮಗುವೂ ಒಂದು ವ್ಯಕ್ತಿ ಅದನ್ನು ನಾವು ಗೌರವಿಸುವ ಮೂಲಕ ಆ ಮಗುವಿನಲ್ಲೂ ಇರುವ ವಿಶೇಷತೆಯನ್ನು ಗುರುತಿಸುವ ಕೆಲಸವನ್ನು ಮಾಡಿದರೆ ಖಂಡಿತಾ ನಮ್ಮ ಮಕ್ಕಳು ಋಣಾತ್ಮಕ ಆಲೋಚನೆಯಿಂದ ಸಮಸ್ಯೆಗಳಾಗದೇ, ಸಮಾಜದ ಧೀಮಂತ ವ್ಯಕ್ತಿಗಳಾಗುತ್ತಾರೆ. ಬನ್ನಿ ನಮ್ಮ ಮಕ್ಕಳನ್ನು ಪ್ರೀತಿಯಿಂದ ಸಹನೆಯಿಂದ ಅವರಿಚ್ಛೆಯಂತೆ ರೂಪಿಸೋಣ.