ಘರ್ ವಾಪಸಿ, ಮತಾಂತರ ಮತ್ತು ಪಂಪ

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ನಮ್ಮ ಪಾರ್ಲಿಮೆಂಟ್ ಹೌಸ್ ನಲ್ಲಿ ಈಗ ಮತಾಂತರದ ಬಹುದೊಡ್ಡ ಗದ್ದಲ ನಡೆಯುತ್ತಿದೆ. ಇದು ಹೊಸತೇನೂ ಅಲ್ಲ. ಆದರೆ ಮತಾಂತರವನ್ನು ‘ಸತ್ಯದ ಮೇಲಿನ ಹಲ್ಲೆ’ ಎನ್ನುತ್ತಿದ್ದವರು ಅದನ್ನೇ ಮಾಡಿ ಅದಕ್ಕೆ ಹೊಸಹೆಸರು ಕೊಟ್ಟಿದ್ದಾರೆ. ಮತಾಂತರ ನಿಲ್ಲಿಸಿ ಅನ್ನುತ್ತಲೇ ಹೊರಗಿನವರನ್ನು ಒಳಕರೆಯುವ ghar vapsi‘ಘರ್ ವಾಪಸಿ’ಯ ಬಾಗಿಲು ತೆಗೆಯಿರಿ ಅನ್ನುತ್ತಿದ್ದಾರೆ. ವಾಪಾಸಾತಿ ಅಂದರೆ ಹೊರಹೋದವರು ಮನೆಗೆ ಮರಳುವುದು. ಕೇಳುವುದಕ್ಕೆ ಹಿತವೇ. ಆದರೆ ಜಾತಿ ಇಲ್ಲದ ಧರ್ಮದಿಂದ ಜಾತಿ ಇರುವ ಸಮಾಜಕ್ಕೆ ವಾಪಾಸಾಗುವುದೆಂದರೆ ಮನೆಯಿಂದ ಮನೆಗಳಿಗೆ ಬಂದಂತೆ. ಈ ಮನೆಗಳೋ ಒಂದರಿಂದ ಇನ್ನೊಂದಕ್ಕೆ ಗಾಳಿಬೆಳಕನ್ನೇ ಬಿಟ್ಟುಕೊಡದವುಗಳು! ಅಂಬೇಡ್ಕರ್ ಎಂದಂತೆ ಮೆಟ್ಟಿಲುಗಳೇ ಇಲ್ಲದ ಮಹಡಿಯ ಗೂಡುಗಳು. ಇಲ್ಲಿ ವಾಪಾಸಾಗುವುದು ಎಂದರೆ ಎಲ್ಲಿಗೆ? ಬರುವವರಿಗೆಲ್ಲಾ ಇರುವ ಅವರವರ ಮನೆ ಯಾವುದು? ವಾಪಾಸಾಗುವ ಘರ್ ಗಲ್ಲಿಯಲ್ಲಿದೆಯೋ? ಗಟಾರದಲ್ಲಿದೆಯೋ? ಹಳ್ಳಿಯಲ್ಲಿದೆಯೋ? ಹಾರೋಗೇರಿಯಲ್ಲಿದೆಯೋ? ಖಚಿತವಿಲ್ಲ. ಸೋಜಿಗ ಎಂದರೆ ಈ ವಾಪಾಸಾದವರೆಂದು ಹೇಳಲಾದವರೂ ಧರ್ಮದ ಹುಡುಕಾಟಕ್ಕೆ ಬಿದ್ದವರಲ್ಲ. ಬದುಕೇ ಹುಡುಕಾಟವಾದ ಬಡತನದ ಹಾದಿಯವರು. ಜುಟ್ಟಿಗಿಂತ ಹೊಟ್ಟೆ, ಧರ್ಮಕ್ಕಿಂತ ದರ್ದು ದೊಡ್ಡದಾಗಿ ಬಿಸಿಲುಬೆಂಕಿಗೆ ಮೈಸುಟ್ಟುಕೊಂಡವರು. ಮರುಕರೆದುಕೊಂಡವರು ಇವರನ್ನು ಎಲ್ಲಿ ತಂದು ನಿಲ್ಲಿಸಿದರೋ ಕಾಣೆ? ಆದರೆ ಕರೆತಂದ ಕ್ರಿಯಾವಿಧಿಗಳೆಲ್ಲವೂ ಸಮುದಾಯವೊಂದರ ಆಚರಣಾವಿಧಿಯ ರೂಪದಲ್ಲೇ ನಡೆದಿವೆ. ಹಾಗಿದ್ದರೆ ಆ ಚಿಂದಿ ಆಯುತ್ತಾ ಚಿಂದಿಯಾದವರನ್ನು ಈ ವಿಧಿಕ್ರಿಯೆಯ ವಾರಸುದಾರರು ತಮ್ಮೊಳಗೆ ತಂದುಕೊಂಡರೇ? ಕನಕನನ್ನೇ ಹೊರಗಿಕ್ಕಿದವರು ಈ ತಿರುಕರನ್ನು ಒಳಬಿಟ್ಟುಕೊಂಡರೇ? ಈ ದೇಶದ ಚರಿತ್ರೆ ಓದಿದ ಯಾರೊಬ್ಬರಿಗೂ ಈ ಭರವಸೆ ಇರದು. ಆದರೆ ಜಾತಿ ವರ್ತುಲದಿಂದ ದಾಟುವ ಮತಾಂತರವನ್ನು ನಿಷೇಧಿಸುವ ಕೂಗಿನ ಒಟ್ಟೊಟ್ಟಿಗೇ ಜಾತಿಕೂಪಕ್ಕೆ ಸೆಳೆಯುವ ಹಿಂಚಲನೆಯ ವಾಪಾಸಾತಿಯ ಸದ್ದೂ ಮೊಳಗುತ್ತಲೇ ಬಂದಿರುವುದಂತೂ ಸುಳ್ಳಲ್ಲ.

ಕನ್ನಡದ ಸಾಂಸ್ಕೃತಿಕ ಜಗತ್ತು ಮತಾಂತರ ಮತ್ತು ಘರ್ ವಾಪಸಿಯ ಈ ಎರಡೂ ಮಾದರಿಗಳನ್ನು ಒಡನಾಡಿದೆ. ಮಧ್ಯಯುಗದ ಶರಣರಚಳವಳಿ ಮೂರ್ತವಾದುದೇ ಮತಾಂತರದಲ್ಲಿ. ಕುಲನಾಮಕಳೆಯದೆ ಕುಲದ ಅವಹೇಳನವಳಿದು ದೇಹವನ್ನು ದೇಗುಲವಾಗಿಸಿದ ಈ ಚಳವಳಿ, ತಳಮೂಲದ ಪತಿತರಿಗೆ ಬಿಡುಗಡೆಯ ಭಾಗ್ಯವಾಗಿಯೇ ಒದಗಿಬಂದು, ಸಾಮೂಹಿಕ ಸಂಚಲನೆಗೆ ಕಾರಣವಾಯಿತು ಎಂಬ ವಾದವಿದೆ. ಇನ್ನು ಕವಿಗಳಾದ ಹರಿಹರ, ರಾಘವಾಂಕ, ರತ್ನಾಕರರ್ಣಿ, ಚಾಮರಸರೇ ಮುಂತಾದವರು ಈ ಬಗೆಯ ನಿರ್ಗಮನ-ಆಗಮನದ ಸರಣಿಯನ್ನೇ ತುಳಿದು ಧರ್ಮ, ಮತಗಳ ಒಳಹೊರಗನ್ನು ಹುಡುಕಾಡಿದರು ಎನ್ನಲಾಗಿದೆ. ಗುರು-ಶಿಷ್ಯಪರಂಪರೆಯ ನಡೆಕಾರರು, ಶಮಣಧಾರೆಯ ಸಿದ್ಧಪಂಥಗಳು ತಮ್ಮ ಆಧ್ಯಾತ್ಮಿಕ ಹುಡುಕಾಟಕ್ಕೆ ಬೇಕಾದ ಬಿಡುಗಡೆಗಾಗಿ ಇಂದಿಗೂ ಜಾತಿ, ಹುಟ್ಟುಗಳ ಕ್ಲೇಷವನ್ನೇ ಸದ್ದಿಲ್ಲದೆ ದಾಟುತ್ತಿವೆ. ಹೀಗೆ ತತ್ವದ ಹುಡುಕಾಟ, ಭರವಸೆಯ ಹುಡುಕಾಟಗಳೆರಡೂ ದಾಟುತ್ತಿರುವುದು ಜಾತಿಬೇಲಿಯನ್ನೇ. ಬದುಕಿರುವ ತನಕ ಬಿಡುಗಡೆಯಿಲ್ಲದ ಜಾತಿಯನ್ನು ಕೊಡವಿ ನಿರಾಳವಾಗುವುದೇ ಈ ದಾಟುವಿಕೆಗಳ ಹೂರಣವೂ ಆಗಿದೆ. ಕನ್ನಡಸಾಹಿತ್ಯದ ಲಿಖಿತಪರಂಪರೆಯ ಆರಂಭ ಬಿಂದುವಿನಲ್ಲೂ ಇಂಥದ್ದೇ ಮತಾಂತರವೊಂದಿದೆ. ಪಂಪನಿಗೆ ಸಂಬಂಧಿಸಿದ ಈ ಕಥೆಯಲ್ಲಿ ಜಾತಿಶ್ರೇಣಿಯ ಮೇಲ್ತುದಿಯ ಬ್ರಾಹ್ಮಣನಿಗೂ ಜಾತಿಯ ದಾಟುವಿಕೆಯೇ ಬಿಡುಗಡೆಯಾಗಿ ಕಂಡಿದೆ! ಆದರೆ ಕನ್ನಡದ ಸಾಂಸ್ಕೃತಿಕ ಜಗತ್ತು ಕೇವಲ ದಾಟುವುದಕ್ಕಷ್ಟೇ ಸಾಕ್ಷಿಯಾಗಿಲ್ಲ. ಮರುಹೊಂದಾಣಿಕೆಯ ಘರ್ ವಾಪಸಿಯ ಕಸರತ್ತನ್ನೂ ನಡೆಸಿದೆ. ಮನುಷ್ಯರಿಗಷ್ಟೇ ಸೀಮಿತವಾಗದೆ, ಮರುಹೊಂದಾಣಿಕೆಯ ಈ ಕಡಾಯಿಯಲ್ಲಿ ಅದು ದೇವರುಗಳನ್ನೂ ಹಾಕಿ ತಿರುವಿ ರೂಪಾಂತರಿಸಿದೆ. ರಂಗನೋ, ವಿಠ್ಠಲನೋ ಹರಿಯ ಕವಲಾದುದು; ಕಲ್ಕುಡ, ಜುಮಾದಿಗೋ ಹೊಸಹೆಸರು ದಕ್ಕಿದುದು ಈ ವರಸೆಗಳಲ್ಲೇ. ಅಂತೆಯೇ ಪಂಪನ ತಂದೆಯ ಮತಾಂತರವನ್ನು ಕನ್ನಡಜಗತ್ತು ಅಲ್ಲಿಗೇ ಕೈಬಿಟ್ಟಿಲ್ಲ. ಮರಳಿ ಮೂಲಕ್ಕೆ ಎಳೆದುಕಟ್ಟುವ ಯತ್ನವನ್ನೂ ಮಾಡಿದೆ. ಈ ಹಿನ್ನೆಲೆಯಲ್ಲಿ ಮತಾಂತರವನ್ನು ಕುರಿತ ಆದಿಕವಿಯ ನಿಲುವು ಹಾಗೂ ಕನ್ನಡದ ಕೆಲವು ಪ್ರಾತಿನಿಧಿಕ ಓದುಗಳಲ್ಲಿನ ಸೂಕ್ಷ್ಮವಾದ ಮರುಹೊಂದಾಣಿಕೆಯ ಕಸರತ್ತುಗಳನ್ನು ಒಟ್ಟೊಟ್ಟಿಗಿಟ್ಟು, ಮತಾಂತರ ಮತ್ತು ಘರ್ ವಾಪಸಿಯ ಸಾಂಸ್ಕೃತಿಕ ಜಗತ್ತಿನ ಸತ್ಯವೊಂದನ್ನು ವಿವರಿಸಿಕೊಳ್ಳುವ ಉದ್ದೇಶವಿಲ್ಲಿದೆ.

ಪಂಪನ ಕನ್ನಡದ ನಂಟು

ಪಂಪನ ಸ್ವಂತ ಬದುಕಿನ ಕೆಲವು ಮಾಹಿತಿಗಳನ್ನು ಆತನ ಕಾವ್ಯಗಳೇ ಹೇಳಿವೆ. ‘ಆದಿಪುರಾಣ’ದಲ್ಲಿ ಆತನ ರೂಪ, ಸ್ವಭಾವಗಳಿದ್ದರೆ, ‘ವಿಕ್ರಮಾರ್ಜುನ ವಿಜಯ’ದಲ್ಲಿ ವಂಶಾವಳಿ ವಿವರಗಳಿವೆ. ಪಂಪಭಾರತದ ಆರಂಭದಲ್ಲಿ ವೇಮುಲವಾಡದ ಚಾಲುಕ್ಯದೊರೆ ಅರಿಕೇಸರಿಯ ವಂಶಾವಳಿ ಇದೆ. ಕೊನೆಯಲ್ಲಿ ಕವಿಯ ಕುಲಪರಂಪರೆಯ ಉಲ್ಲೇಖವಿದೆ. ಕಾವ್ಯದ ಕೊನೆಗೆ ಸ್ವವಿಚಾರ ಪ್ರಸ್ತಾಪವು ಸಂಪ್ರದಾಯವಲ್ಲವೆಂಬ ಹಿನ್ನೆಲೆಯಲ್ಲಿ ಇದನ್ನು ಪಂಪನೇ ಹೇಳಿದನೆಂದು ನಂಬಲಾಗದು ಎನ್ನುವ ಅಭಿಪ್ರಾಯವೂ ಇದೆ. ಅದಕ್ಕೆ ಆಶ್ರಯದಾತನದನ್ನು ಮೊದಲು ಹೇಳಿ ತನ್ನದನ್ನು ಕೊನೆಯಲ್ಲಿ ಹೇಳುವ ಕ್ರಮವನ್ನು ಪಂಪ ಅನುಸರಿಸಿರಬಹುದೆಂಬ ಸಮಜಾಯಿಷಿಯೂ ಇದೆ. ಭಿನ್ನಾಭಿಪ್ರಾಯಗಳ ನಡುವೆಯೂ ಇದನ್ನು ಪಂಪನೇ ಹೇಳಿದನೆಂದು ಒಪ್ಪಿದರೆ, ಪರಂಪರೆಯಿಂದ ಆತನ ಹಿರಿಯರು ನೆಲೆಸಿದ್ದುದು ವೆಂಗಿಮಂಡಲದ ವೆಂಗಿಪಳುವಲ್ಲಿ. ಈ ವೆಂಗಿಮಂಡಲವು ಕೃಷ್ಣಾ ಗೋದಾವರೀ ನದಿಗಳ ನಡುವೆ ಪೂರ್ವಸಮುದ್ರದ ಕರೆಯ(ಕಿನಾರೆ) ತನಕ ಇದ್ದ ವಿಸ್ತಾರವಾದ ನಾಡು. ಇವೊತ್ತಿನ ಆಂಧ್ರಪ್ರದೇಶದ ಭಾಗ. ಆದರೂ ಕರ್ನಾಟಕದ ಚರಿತ್ರೆಯಲ್ಲಿ ಹೆಸರಾದ ಕನ್ನಡದ ಅನೇಕ ಹೆಮ್ಮೆಯ ಮನೆತನಗಳು ಇಲ್ಲಿ ನೆಲೆಸಿದ್ದವು. ಇದರ ಜೊತೆಗೆ ಪಂಪನ ತಾಯಿ ಬೆಳ್ವೊಲದ ಅಣ್ಣಿಗೇರಿಯ ಜೋಯಿಸಸಿಂಘನ ಮೊಮ್ಮಗಳು ಎಂಬ ಉಲ್ಲೇಖವೂ ಪಂಪನ ತಮ್ಮ ಜಿನವಲ್ಲಭನ ಕುರ್ಕ್ಯಾಲ ಶಾಸನದಲ್ಲಿದೆ. ಹೀಗಾಗಿ ವೆಂಗಿಮಂಡಲದ ವೆಂಗಿಪಳುವಿನಲ್ಲಿಯೇ ಪಂಪ ಹುಟ್ಟಿ ಬೆಳೆದನೇ ಎಂಬುದು ನಿಶ್ಚಯವಿಲ್ಲ. ಆದರೆ ಪಂಪನ ತಂದೆಯ ವಂಶದವರು ಇದ್ದ ಪರಿಸರ ಹಾಗೂ ಪಂಪ ಆಸ್ಥಾನಕವಿಯಾಗಿದ್ದ ನಾಡುಗಳು ಇಂದಿನ ಕನ್ನಡ ಸೀಮೆಗಳಲ್ಲ. ಕನ್ನಡ ಪ್ರದೇಶಕ್ಕೆ ಹೊರತಾದುವುಗಳು. ಇಲ್ಲಿದ್ದೂ ಬರೆದ ಆತನ ಎರಡೂ ಕಾವ್ಯಗಳು ಕನ್ನಡದ ಕಣ್ಣುಗಳಂತೆಯೇ ಇವೆ ಎಂಬುದು ನಿರ್ವಿವಾದ. ಹಾಗಾಗಿ ಕನ್ನಡಕುಟುಂಬಿಯಾದ ಪಂಪ ಬದುಕಿದ ನಾಡು ಕನ್ನಡನೆಲ ಹೌದೋ ಅಲ್ಲವೋ ಎಂಬ ಈ ಮಣ್ಣುಪರೀಕ್ಷೆಯ ಅಗತ್ಯವಂತೂ ಖಂಡಿತಾ ಇಲ್ಲ.

ಪಂಪನ ವಂಶ ಮತ್ತು ಮತಾಂತರ

ಭಾಷಿಕ ನೆಲೆಯಲ್ಲಿ ಕನ್ನಡಕುಟುಂಬಿಯಾಗುವ ಪಂಪ ‘ಮನುಷ್ಯಜಾತಿ ತಾನೊಂದೆವಲಂ’ ಎಂದ ವಿಶ್ವಕುಟುಂಬಿಯೂ ಹೌದು. ಆದರೆ ಪಂಪನನ್ನು ಹೀಗೆ ವಿಶಾಲವಾಗಿ ಓದಿಕೊಳ್ಳುವ ಮುಕ್ತತೆಯೇ ಕನ್ನಡದ ಓದಿನಲ್ಲಿ ತುಂಬಿದೆ ಎನ್ನಲಾಗದು. ಅದು ಮತ, ಜಾತಿಯ ಗುರುತುಹಚ್ಚಿಯೂ ಆತನ ಸತ್ವದ ನೆಲೆಯನ್ನು ವಿವರಿಸಿಕೊಂಡಿದೆ.pampa ಶ್ರದ್ಧೆಯ ನೆಲೆಯಲ್ಲಿ ಪಂಪನನ್ನು ಜೈನನಲ್ಲ ಎನ್ನಲಾಗದು. ಆತನೂ ತನ್ನನ್ನು ಜೈನನೆಂದೇ ಕರೆದುಕೊಂಡಿದ್ದಾನೆ. ಜಿನಸ್ತುತಿಯಿಂದ ಸಿಕ್ಕುವ ಬಿಡುಗಡೆಗೆ ಪ್ರಶಸ್ತಿ, ಸಮ್ಮಾನಗಳು ಸಮನಲ್ಲವೆಂದಿದ್ದಾನೆ. ಕನ್ನಡದಲ್ಲಿ ಮೊದಲ ಜಿನಪುರಾಣವನ್ನು ಬರೆದಿಟ್ಟು ಹೋಗಿದ್ದಾನೆ. ಆದರೆ ‘ವಿಕ್ರಮಾರ್ಜುನ ವಿಜಯ’ದ ಕೊನೆಯ ಕೆಲವು ಪದ್ಯಗಳ ಆಧಾರದಲ್ಲಿ ಪುನಾರಚಿಸಲಾದ ಆತನ ವಂಶಾವಳಿ ಬೇರೆಯದೇ ಕಥೆ ಹೇಳುತ್ತದೆ. ಇಲ್ಲಿರುವ ಹಿರೀಕರ ಮಾಹಿತಿ, ಪಂಪನಿಂದ ಹಿಂದಿನ ಮೂರನೆಯ ತಲೆಮಾರಿನ ಮಾಧವಸೋಮಯಾಜಿ ಎಂಬ ವೈದಿಕನವರೆಗೆ ಹೋಗಿ ನಿಂತಿದೆ. ಕಮ್ಮೆಕುಲದ ಈ ಬ್ರಾಹ್ಮಣ ಹೋಮ, ಹವನಗಳನ್ನು ಮಾಡಿ ‘ಸರ್ವಕೃತುಯಾಜಿ’ ಎನಿಸಿದಾತ. ಈತನಿಂದ ಹರಿದುಬಂದ ವಂಶನಕ್ಷೆಯಂತೆ ಇವನ ಮಗ ಅಭಿಮಾನಚಂದ್ರ. ಅಭಿಮಾನಚಂದ್ರನ ಮಗ ಕೋಮರಯ್ಯ. ಈ ಕೋಮರಯ್ಯನ ಮಗನೇ ಪಂಪನ ತಂದೆ ಭೀಮಪಯ್ಯ (ಅಭಿರಾಮದೇವರಾಯ). ‘ಜಾತಿಯೊಳೆಲ್ಲಂ ಉತ್ತಮದ ಜಾತಿಯ ವಿಪ್ರ'(ಬ್ರಾಹ್ಮಣ)ನಾಗಿದ್ದೂ, ಜಿನೇಂದ್ರ ಧರ್ಮಮೆ ವಲಂ ದೊರೆಧರ್ಮದೊಳೆಂದು ನಂಬಿ ತಜ್ಜಾತಿಯನ್ ಉತ್ತರೋತ್ತರಮೆ ಮಾಡಿದಾತ! ಜೈನಧರ್ಮಕ್ಕೆ ಮತಾಂತರವಾದಾತ. ಹೀಗೆ ಈ ವಂಶಾವಳಿ ಕಥನವು ಸೋಮಯಾಜಿಯ ಕಡುವೈದಿಕ ಕ್ರಿಯಾಚರಣೆ ಹಾಗೂ ಅದರಿಂದ ಬಿಡಿಸಿಕೊಂಡು ಜಿನಧರ್ಮಕ್ಕೆ ‘ಮತಾಂತರವಾದ’ ಗೌರವಾನ್ವಿತ ಭೀಮಪಯ್ಯನ ದಾಟುವಿಕೆ ಎರಡನ್ನೂ ಹೊಂದಿದೆ. ಅದು ಕನ್ನಡದ ಆದಿಕವಿಯನ್ನೇ ಮತಾಂತರದ ಜೊತೆಗೆ ಬೆಸೆದಿದೆ. ಮತಾಂತರವೆಂಬ ದಾಟುವಿಕೆಯನ್ನು ವ್ಯಕ್ತಿಯ ವಿವೇಕವಾಗಿ ನೋಡಿದೆ. ಆ ಕುರಿತು ಯಾವ ಬಗೆಯ ನೋವು, ಹಳಹಳಿಕೆಯಿಲ್ಲದ ಮೆಚ್ಚುಗೆ ತೋರಿದೆ. ಹಿರೀಕನಾದ ಮಾಧವಸೋಮಯಾಜಿ ಹೋಮದ ಹೊಗೆಯಿಂದ ತನ್ನ ಯಶಸ್ಸೆಂಬ ಬಳ್ಳಿಯನ್ನೇ ಕರಿದು ಮಾಡಿಕೊಂಡನಲ್ಲಾ ಎಂದು ಸಂಕಟಪಟ್ಟಿದೆ. ಆ ತಪ್ಪುಮಾಡದೆ, ಮತಾಂತರದ ಮೂಲಕ ತನ್ನ ಜಾತಿಗೆ ಮತ್ತಷ್ಟು ಪರಿಪೂರ್ಣತೆ ತಂದುಕೊಂಡ ತಂದೆಯ ಬಗೆಗೆ ಅಭಿಮಾನಪಟ್ಟಿದೆ. ಹೀಗೆ ಕವಿಯಾಗಿ ಲೌಕಿಕ-ಆಗಮಿಕಗಳನ್ನು ಕೃತಿಯ ಮೂಲಕ ಬೆಳಗಿದ ತನ್ನಂತೆಯೇ, ಮತಾಂತರವನ್ನು ಕೃತಿಗಿಳಿಸುವ ಮೂಲಕ ತಂದೆಯೂ ತನ್ನ ಜಾತಿಯನ್ನೂ ಉತ್ತರೋತ್ತರವಾಗಿ ಬೆಳಗಿಕೊಂಡ ಎಂಬ ಅಭಿಪ್ರಾಯವೇ ಪಂಪನಲ್ಲಿ ಇರುವಂತಿದೆ. ತಂದೆಯ ಬ್ರಾಹ್ಮಣ್ಯ ನಿರಾಕರಣೆ ಅಥವಾ ಬ್ರಾಹ್ಮಣ್ಯದ ಬಿಡುಗಡೆ, ಆತನಿಗೆ ಜಾತಿವ್ಯವಸ್ಥೆಯಿಂದ ಜಾತಿಯಿಲ್ಲದ ಧರ್ಮವ್ಯವಸ್ಥೆಗೆ ದಾಟಿದ ಮುಂಚಲನೆಯಾಗಿ ಕಂಡಿದೆ. ‘ಸತ್ಯದ ಮೇಲಿನ ಹಲ್ಲೆ’ ಅಥವಾ ವಿದ್ರೋಹಿ ಕೇಡಾಗಿ ಅಲ್ಲ. ಮತಾಂತರವನ್ನು ಕುರಿತ ಪಂಪನ ಈ ಅಭಿಮಾನದ ಜೊತೆಗೆ ಕನ್ನಡದ ಲಿಖಿತಸಾಹಿತ್ಯವೂ ಚಿಗುರೊಡೆದಿದೆಯಾಗಿ, ಕನ್ನಡಸಾಹಿತ್ಯಚರಿತ್ರೆಯ ಬೀಜವೇ ಉಲ್ಲಂಘನೆಯಲ್ಲಿದೆ, ಮತಾಂತರವೇ ಅದಕ್ಕೆ ಹೊಸಪ್ರತಿಭೆಯ ಹೊಸನೀರು ದಕ್ಕುವಂತೆ ಮಾಡಿದೆ ಎನ್ನಬೇಕು. ಹೀಗೆ ಈ ಕವಿಚರಿತೆ ಒಂದು ಕಡೆಯಿಂದ ಕನ್ನಡಸಾಹಿತ್ಯದ ಮೊದಲ ಬೆಳಸನ್ನೇ ಮತಾಂತರದ ಬೆಳಸಾಗಿ ಘೋಷಿಸುತ್ತದೆ. ಮತ್ತೊಂದೆಡೆಯಿಂದ ವರ್ತಮಾನದ ‘ಮತಾಂತರ ಸಂಕಥನ’ದ ಜಳ್ಳು-ಕಾಳುಗಳನ್ನೂ ಎದುರಿಗಿಡುತ್ತಿದೆ.

ಒತ್ತಾಯದ ಮರುವಲಸೆ

ಮತಾಂತರವಾದವನು ಪಂಪನಲ್ಲ ಪಂಪನ ತಂದೆ ಎನ್ನುವ ಬಗೆಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ಈ ಮತಾಂತರವನ್ನು ಪಂಪನ ದಾಟುವಿಕೆಯಾಗಿ ಕನ್ನಡದ ಓದು ಸ್ವೀಕರಿಸಿದೆ ಎಂದೇನಲ್ಲ. ಯಾಕೆಂದರೆ ಅಲ್ಲಿ ಮತಾಂತರದ ಸ್ವರೂಪ ಚರ್ಚೆಗಿಂತ ಮತಾಂತರಪೂರ್ವದ ಅವಸ್ಥೆಯೊಂದಿಗೆ ಕವಿ ಉಳಿಸಿಕೊಂಡ ನಂಟಿನ ಪ್ರತಿಪಾದನೆಗೇ ಒತ್ತು ಸಿಕ್ಕಿದೆ. ವೆಂಗಿಮಂಡಲದ ಸೋಮಯಾಜಿಯನ್ನು ಕುರಿತ ಮಾಹಿತಿಗಳಿಗೆ ಅವಧಾರಣೆ ಸಿಕ್ಕಿದೆ. ಜಿನವಲ್ಲಭನ ಬಗೆಗೆ ಅಸಮಾಧಾನವೂ, ಪಂಪನ ಕುರಿತ ಮೆಚ್ಚುಗೆಯೂ ವ್ಯಕ್ತವಾಗಿದೆ. ಜೈನಪಂಪನದಲ್ಲದ ವೈದಿಕಪಂಪನ ಚಹರೆಯನ್ನೇ ಹುಡುಕಿ ಗುಡ್ಡೆಹಾಕುವ ಯತ್ನವಿದೆ. ಅದರ ಭಾಗವಾಗಿಯೇ ಕೆಲವು ಓದುಗಳು ಜೈನನಾಗುವ ಮುನ್ನಿನ ಸಂಸ್ಕಾರಗಳ ಉಳಿಕೆಯಲ್ಲಿಯೇ ಪಂಪನ ಶ್ರೇಷ್ಠತೆ ಇದೆ ಎಂದು ವಾದಿಸುತ್ತವೆ. ಆತನಲ್ಲಿದ್ದ ವೈದಿಕಸತ್ವದಿಂದಲೇ ಇಂತಹ ಕಾವ್ಯಸೃಷ್ಟಿಯ ಸಾಧನೆ ಸಾಧ್ಯವಾಯಿತು ಎನ್ನುತ್ತವೆ. ಹೀಗೆ ಅವು ಪಂಪನನ್ನು ಜೈನನಲ್ಲ ಎನ್ನದೆ, ಆತನ ಕಾವ್ಯವಸ್ತು ಮತ್ತದರ ನಿರ್ವಹಣೆಯಲ್ಲಿ ಮತಾಂತರದಾಚೆಗಿನ ವೈದಿಕದ ನೆರಳನ್ನೇ ಬೇಟೆಯಾಡುತ್ತವೆ. ಇದಕ್ಕೆ ಪೂರಕವಾಗಿ ಮತಾಂತರವನ್ನು ‘ಸಂಕರ’ವೆನ್ನುವ ವಾದವೂ, ಪಂಪನಲ್ಲಿ ವೈದಿಕ-ಜೈನ ಎರಡೂ ಬೆರೆತಿದೆ ಎನ್ನುವ ಮೂಲಕ ವೈದಿಕದ ಕಿಲುಬಿನಿಂದಲೇ ಆತ ಕವಿಯಾದ ಎನ್ನುವುದನ್ನೇ ಸಮರ್ಥಿಸುತ್ತದೆ. ಹೀಗೆ ಈ ಕವಿಸತ್ವದ ಮೂಲಶೋಧವು ಪಂಪನನ್ನು ಬ್ರಾಹ್ಮಣ್ಯದಲ್ಲೇ ಮರುಹೊಂದಾಣಿಕೆ ಮಾಡಿ, ಆತನ ಕಾವ್ಯಪ್ರತಿಭೆಯನ್ನು ಮತಾಂತರಕ್ಕೆ ಮೊದಲಿನ ಸಂಸ್ಕಾರದ ಮುಂದುವರಿದ ಹರಿವೆಂದೇ ದೃಢೀಕರಿಸಲೆತ್ನಿಸುತ್ತದೆ. ಇದಕ್ಕೆ ವಿರುದ್ಧವಾಗಿ ಮತಾಂತರಗೊಂಡು ಬಿಡುಗಡೆಗೊಂಡುದರಿಂದಲೇ ಪಂಪ ಅಗ್ರಹಾರದ ಗೊಡ್ಡು ಪಂಡಿತನಾಗುವುದರಿಂದ ತಪ್ಪಿಸಿಕೊಂಡು ಕವಿಯಾದ, ಹೊಸಹರಿವು ಕಂಡುಕೊಂಡ ಎಂಬ ಇನ್ನೊಂದು ವಾದವೂ ಇದೆ. ಮತಾಂತರವನ್ನು ನೆವಮಾಡಿಕೊಂಡ ಪಂಪಸತ್ವದ ಕುರಿತ ಚರ್ಚೆಗಳು ಹೀಗೆ ನಡೆದಿದ್ದರೂ, ಬಹುಮಟ್ಟಿನ ಪಂಪಪರಿಚಯ ಪಠ್ಯಗಳು ಮಾತ್ರ ಆತನಲ್ಲಿ ವೈದಿಕಸತ್ವವನ್ನೇ ನೆನಪಿಸಿವೆ. ‘ಮನುಷ್ಯಜಾತಿ ತಾನೊಂದೆವಲಂ’ ಎಂದು ವಿಶ್ವಸಹೋದರತೆ ಸಾರಿದವನು ಎನ್ನುತ್ತಲೇ, ‘ಜೈನೀಯತೆಯೊಳಗೂ ವೈದಿಕಸತ್ವ’ ಉಳಿಸಿಕೊಂಡವನೆಂದು ಜಾತಿಯೊಳಗೇ ಕಟ್ಟಿವೆ. ಹೀಗೆ ಮನುಷ್ಯರೆಲ್ಲಾ ಒಂದೇ ಎಂದು ಜಾತಿಜಡವನ್ನು ದಾಟಿ ಧರ್ಮದ ಪ್ರವಾಹ ಒಪ್ಪಿದ ಮನುಕುಲದ ಮಿತ್ರನನ್ನು ಅಗ್ರಹಾರದ ಕಲ್ಲಾಗಿಸಲು ನಡೆಸಿದ ಈ ನಿರಂತರ ಯತ್ನವೂ ಒಂದರ್ಥದಲ್ಲಿ ಸಾಂಸ್ಕೃತಿಕ ಪ್ರತಿನಿಧೀಕರಣದ ಮರುಹೊಂದಾಣಿಕೆಯ ಘರ್ ವಾಪಸಿಯೇ ಆಗಿದೆ.

ಆದರೆ ಈ ತೆರನಾದ ಸಾಂಸ್ಕೃತಿಕ ಐಕಾನ್ ಗಳ ಘರ್ ವಾಪಸಿಗೂ, ಇಂದು ಸುದ್ದಿಯಲ್ಲಿರುವ ಘರ್ ವಾಪಸಿಗೂ ಸ್ವರೂಪ ಮತ್ತು ಉದ್ದೇಶದಲ್ಲಿ ಮೂಲಭೂತ ವ್ಯತ್ಯಾಸವೊಂದಿದೆ. ಅದೇನೆಂದರೆ ಸಾಂಸ್ಕೃತಿಕ ಪ್ರತಿನಿಧೀಕರಣದ ಘರ್ ವಾಪಸಿಯಲ್ಲಿ ನಿಶ್ಚಿತತೆ ಪಾರದರ್ಶಕತೆ ಇದೆ. ಅಂದರೆ ಪಂಪನಂತಹ ಸಾಂಸ್ಕೃತಿಕ ಪ್ರತಿನಿಧಿಗಳನ್ನು RSS-mohanbhagwatಎಲ್ಲಿಗೆ ಕರೆತರಬೇಕು ಎನ್ನುವಾಗ ಮತ, ಧರ್ಮದ ಅಮೂರ್ತತೆಗಿಂತ ನಿರ್ದಿಷ್ಟವಾದ ಘರ್/ಜಾತಿಯ ಖಚಿತ ವಿಳಾಸವಿರುತ್ತದೆ. ಪಂಪನಲ್ಲಿ ಇನ್ನೂ ಉಳಿದುಕೊಂಡ ಬ್ರಾಹ್ಮಣ್ಯವನ್ನೇ ಹುಡುಕಿ ಡಿಎನ್ಎ ಪರೀಕ್ಷೆಯನ್ನೂ ಮುಗಿಸುವ ಈ ಖಚಿತ ಕಾರ್ಯತಂತ್ರದಲ್ಲಿ ಇಂದು ಕಲ್ಪಿಸಲಾಗುತ್ತಿರುವ ವಿಶಾಲವಾದ ಮತಾವರಣದ ಅಮೂರ್ತತೆ ಇಲ್ಲ. ಆತ ಯಾರು ಎನ್ನುವ ಹಕ್ಕುಪ್ರತಿಪಾದನೆಯೇ ಇದೆ. ಆದರೆ ಅಧಿಕಾರ ರಾಜಕಾರಣದ ಶಕ್ತಿಗಾಗಿ ಕಾಲಾಳುಗಳು ಖಾಲಿಯಾಗದಂತೆ ಕಾಯುವ ಘರ್ ವಾಪಸಿಯಲ್ಲಿ ಖಚಿತತೆಯೇನೋ ಇದೆ. ಆದರೆ ಅದು ಪಾರದರ್ಶಕವಾಗಿ ಪ್ರಕಟವಾಗುವುದಿಲ್ಲ. ಅದರ ಕಾರ್ಯತಂತ್ರಗಳಲ್ಲಿಯೂ ವೈವಿಧ್ಯವಿದೆ. ತಳಜಾತಿಗಳು ಬೌದ್ಧ ಮತ್ತಿತರ ಅನ್ಯಮತಗಳ ಕಡೆಗೆ ದೊಡ್ಡಸಂಖ್ಯೆಯಲ್ಲಿ ಆಕರ್ಷಿತರಾಗಿ ತಮ್ಮ ಬಿಡುಗಡೆಯ ಹಕ್ಕು ಸಾಧಿಸುತ್ತಿರುವ ಘಳಿಗೆಯಲ್ಲೇ, ಇರುವ ಕಾಲಾಳುಗಳನ್ನು ಉಳಿಸಿಕೊಳ್ಳಲು ಅದು ದಲಿತಕೇರಿಗೆ ದೀಕ್ಷೆ, ವನವಾಸಿ ಚಳವಳಿ, ದೈವಾಂತರ, ಜೀರ್ಣೋದ್ಧಾರಗಳ ಪ್ಯಾಕೇಜ್ ಗಳನ್ನು ಒಯ್ಯುತ್ತದೆ. ಇನ್ನೊಂದೆಡೆ ಬಿಸಿಲಲ್ಲಿ ಬಿದ್ದ ತಿರುಕರನ್ನು ಹುಡುಕಿ ಘರ್ ವಾಪಸಿ ಮಾಡುತ್ತಿರುವುದಾಗಿ ಘೋಷಿಸುತ್ತದೆ. ಆದರೆ ಹೀಗೆ ಕಾಯಲ್ಪಟ್ಟವರು ಮತ್ತು ಒಳಕರೆದವರನ್ನು ಎಲ್ಲಿ ತುಂಬಿಕೊಳ್ಳುವುದೆಂಬ ಪ್ರಶ್ನೆಯನ್ನಂತೂ ಮೌನವಾಗಿಯೇ ಅದು ಕೊಂದು ಮಲಗಿಸುತ್ತದೆ. ಅವರು ಊರೊಳಗೆ ಬರುತ್ತಾರೆ. ಮನೆ ಕತ್ತಲಲ್ಲಿರುತ್ತದೆ!

ಗಮನಿಸಬೇಕಾದ ಸಂಗತಿಯೆಂದರೆ ಈ ಊರು, ಮನೆಗಳ ಒಳಭೇದವನ್ನು ನಿಭಾಯಿಸುವುದು ಹೇಗೆಂಬ ತೊಡಕು ಹೊರಗಿದ್ದು ನೋಡುವವರಿಗಷ್ಟೇ. ಆದರೆ ಬೆಂಕಿಯೆದುರು ತಣ್ಣೀರು ಕುಡಿಸಿ ಒಳಕರೆದ ಭರವಸೆ ಬಿತ್ತುವವರಿಗೆ ಇದು ಯಾವ ಕಾಲದಲ್ಲೂ ಸಮಸ್ಯೆಯಾಗಿಲ್ಲ. ಯಾಕೆಂದರೆ ಈ ಮರುಮತಾಂತರದ ಕಡಾಯಿಯೊಳಗೆ ಅವರು ರಂಗನನ್ನೋ, ವಿಠ್ಠೋಭನನ್ನೋ, ಜಗನ್ನಾಥನನ್ನೋ ಹಾಕಿ ತಿರುವಿದಂತೆಯೇ, ಕರಾವಳಿಯ ಕಲ್ಕುಡ ಜುಮಾದಿ ಕೊರಗಜ್ಜರನ್ನೂ ಎಳೆದು ಮಗುಚಿಹಾಕಿದ್ದಾರೆ. ಅಷ್ಟೇ ಅಲ್ಲ, ವರ್ತುಲಕ್ಕೆ ಸೆಳೆದುಕೊಂಡ ಜುಮಾದಿ ಕಲ್ಕುಡರಿಗೆ, ರಂಗ ವಿಠ್ಠೋಭರ ಕಕ್ಷೆಗಿಂತ ಬೇರೆಯದಾದ ಸುತ್ತೋಣವನ್ನೂ ತೋರಿಕೊಟ್ಟಿದ್ದಾರೆ. ಅವು ಹಾಗೆಯೇ ಸುತ್ತಿಕೊಂಡು ಕಲಶ, ಕಾಯಕಗಳ ಪಾನಕ ಕುಡಿಯುತ್ತಿವೆ. ಹಾಗಾಗಿ ವಾಪಾಸಾತಿಯ ಈ ನಮೂನೆಗಳಲ್ಲಿ ಪಂಪನನ್ನೋ, ಕನಕನನ್ನೋ, ಚಿಂದಿ ಆಯುವ ತಿರುಕರನ್ನೋ ಯಾವ್ಯಾವ ಲಕೋಟೆಯಯಲ್ಲಿಟ್ಟು ಮೊಹರು ಒತ್ತುವುದೆಂಬ ಕುರಿತು ಅಲ್ಲಿ ಗೊಂದಲವಿಲ್ಲ. ಲಕೋಟೆ ಬೇರಾದರೇನು? ಅಂಚೆ ಕಛೇರಿ ಒಂದೇ ಎನ್ನುವ ಸಮಾಧಾನ ಬಿತ್ತಲೆಂದೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತೆಂಬ ಬೇರೆ ಬೇರೆ ಬೋಧನೆಯ ಕೋಣೆಗಳೂ ಅಲ್ಲಿವೆ. ಬ್ರಹ್ಮ ಸತ್ಯಂ ಜಗನ್ ಮಿಥ್ಯಂ………? ಇನ್ನು ಚಿಂತಿಸುವುದಕ್ಕೇನಿದೆ?

One thought on “ಘರ್ ವಾಪಸಿ, ಮತಾಂತರ ಮತ್ತು ಪಂಪ

  1. ಅಭಿನವ ಚನ್ನಬಸವಣ್ಣ

    ಅತ್ಯುತ್ತಮ ಲೇಖನ. ಬಲಪಂಥೀಯರ ಹುನ್ನಾರವನ್ನು ನಗ್ನಗೊಳಿಸಿ ಅಸಲಿ ಮಾನವೀಯತೆಯನ್ನು ಮೆರೆದಿದೆ. ಲೇಖಕರಿಗೆ ಅಭಿನಂದನೆಗಳು.

    Reply

Leave a Reply to ಅಭಿನವ ಚನ್ನಬಸವಣ್ಣ Cancel reply

Your email address will not be published. Required fields are marked *