Monthly Archives: December 2014

ಲೈಂಗಿಕ ಶಿಕ್ಷಣ ಎಂಬ ವ್ಯಂಗ್ಯ ನಾಟಕ

ಭಾರತೀ ದೇವಿ. ಪಿ

ಒಂದೆಡೆ ಅತ್ಯಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಯೇ ಎಲ್ಲ ಕಡೆಗಳಲ್ಲೂ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಕೊಡುವುದರ ಬಗ್ಗೆ ಮಾತಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಬಿರುಸಿನಿಂದ ನಡೆಯುತ್ತಿವೆ. ಅನೇಕ ಸಂಘ ಸಂಸ್ಥೆಗಳು, ಇಲಾಖೆಗಳು ಈ ಹೊಣೆಯನ್ನು ಮುತುವರ್ಜಿಯಿಂದ ವಹಿಸಿಕೊಂಡು ಶಾಲಾ ಕಾಲೇಜುಗಳನ್ನು ಅರಸಿಕೊಂಡು ತಿರುಗಾಡುತ್ತಿವೆ. ಆದರೆ ಈ ಬಗೆಯ ಕಾರ್ಯಕ್ರಮಗಳ ಪೈಕಿ ಬಹುಪಾಲು ನಡೆಯುತ್ತಿರುವ ರೀತಿ ನೋಡಿದರೆ ನಗಬೇಕೋ ಅಳಬೇಕೋ ತಿಳಿಯದಂತಾಗಿದೆ.

ಇವು ಹೆಣ್ಣುಮಕ್ಕಳು ಯಾವ ಬಗೆಯ ಬಟ್ಟೆ ಹಾಕಿಕೊಳ್ಳಬೇಕು, sex-education-1ಎದುರಿಗೆ ಯಾರಾದರೂ ಬಂದಾಗ ಎಷ್ಟು ಸೆಂಟಿಮೀಟರ್ ನಗಬಹುದು, ಸಭ್ಯವರ್ತನೆ ಇವುಗಳ ಬಗ್ಗೆ ಉಪದೇಶ ನೀಡುವ ಅಧಿಕಾರಯುತ ಧ್ವನಿಯಲ್ಲಿ ಆರಂಭವಾಗುತ್ತವೆ. ಮೊದಲೇ ‘ಕಡುಪಾಪಂಗೈದು ಪೆಣ್ಣಾಗಿ ಸಂಭವಿಸಿ ಒಡಲಂ ಪೊರೆವುದೆದೆನ್ನೊಳಪರಾಧಮುಂಟು’ ಎಂದು ಕುಗ್ಗಿರುವ ಹಳ್ಳಿಯ ಹೆಣ್ಣು ಮಕ್ಕಳು ಇನ್ನಷ್ಟು ಮುದುರಿಕೊಂಡು ಕೂರುತ್ತಾರೆ. ನಿಮ್ಮ ಅಣ್ಣ, ತಮ್ಮ, ತಂದೆ, ಮಾವಂದಿರೇ ನಿಮ್ಮ ಮೇಲೆ ಅತ್ಯಾಚಾರವೆಸಗಬಹುದು ಹುಷಾರ್ ಎಂಬ ಬೆದರಿಕೆಯನ್ನೂ ನೀಡಲಾಗುತ್ತದೆ. ಮೊದಲೇ ಒಂದು ಪೆನ್ನು ತರಲೂ ಒಬ್ಬರೇ ಅಂಗಡಿಗೆ ಹೋಗುವ ಧೈರ್ಯ ತೋರದ ಈ ಹುಡುಗಿಯರು ಒಬ್ಬರೇ ಹೋದರೆ ಒಂದು ಕಷ್ಟ, ಜೊತೆಗೆ ಯಾರನ್ನಾದರೂ ಕರೆದುಕೊಂಡು ಹೋದರೆ ಇನ್ನೊಂದು ಕಷ್ಟ ಎಂದು ಗೊಂದಲಕ್ಕೊಳಗಾಗುತ್ತಾರೆ. ಒಬ್ಬೊಬ್ಬರೇ ಓಡಾಡುವಾಗ ಜಾಗ್ರತೆ ಎಂದಾಗ ಹಾಗಾದರೆ ಏನಪ್ಪಾ ಮಾಡುವುದು ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ನಮ್ಮ ವಿದ್ಯಾರ್ಥಿನಿಯರ ಮುಗ್ಧ ಮುಖವನ್ನು ಬಾಡಿಸಿರುವುದು ನಿತ್ಯ ಗಮನಕ್ಕೆ ಬರುತ್ತದೆ.

ಈ ಇಡೀ ಕಾರ್ಯಕ್ರಮ ನಡೆಯುತ್ತಿರುವಾಗ ಹುಡುಗಿಯರ ಪಕ್ಕದಲ್ಲೇ ಕುಳಿತ ಗಂಡು ಮಕ್ಕಳಿಗೆ ಇನ್ನೊಂದು ಬಗೆಯ ಮುಜುಗರ. ಅವರನ್ನು ಅಪರಾಧಿಗಳೆಂಬಂತೆ ಕಟಕಟೆಯಲ್ಲಿ ನಿಲ್ಲಿಸಿ ಮಾತಾಡುವ ರೀತಿಯಿಂದ ಅವರ ಸೂಕ್ಷ್ಮ ಮನಸ್ಸೂ ನೋಯುತ್ತದೆ. ನಾಳೆ ಬೆಳಗಾದೊಡನೆ ಈ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗಲು ನಿಂತಿರುವ ಬಲಿಪಶುಗಳೆಂದೂ ಈ ಗಂಡು ಮಕ್ಕಳು ಅವರ ಮೇಲೆ ಹಾರಲು ಸಿದ್ಧರಾಗಿರುವ ಮೃಗಗಳೆಂಬ ರೀತಿಯಲ್ಲಿ ಮಾತನಾಡುವ ಈ ಬಗೆಯ ಅರಿವು ಕಾರ್ಯಕ್ರಮ ಇದುವರೆಗೂ ನಮ್ಮಲ್ಲಿ ಬೆಳೆದುಬಂದ ಸೆಕ್ಸಿಸ್ಟ್ ಅಪ್ರೋಚ್ ಅನ್ನೇ ಗಟ್ಟಿಗೊಳಿಸುವಂತಿರುವುದು ವಿಪರ್ಯಾಸ.

ಇಡೀ ಕಾರ್ಯಕ್ರಮವೇ ಅತ್ಯಾಚಾರಕ್ಕೆ ಮೂಲ rape-illustrationಕಾರಣ ಹೆಣ್ಣುಮಕ್ಕಳು ಗಂಡಸರೆದುರಿಗೆ ಬಿಂಕದಿಂದ ಕುಣಿಯಲು ಹೋಗಿ ಅವರಿಗೆ ನೀಡುವ ಪ್ರಚೋದನೆ ಎಂಬಲ್ಲಿಗೆ ಬಂದು ನಿಲ್ಲುತ್ತದೆ.

ದೆಹಲಿಯಲ್ಲಿ ಪಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ಬಂದ ಪ್ರತಿಕ್ರಿಯೆಗಳನ್ನು ಗಮನಿಸಬೇಕು. ಅನೇಕ ಜನ ರಾತ್ರಿ ಅಷ್ಟು ಹೊತ್ತಿಗೆ ಅವಳು ತಿರುಗಾಡುವ ಅಗತ್ಯವೇನಿತ್ತು? ಎನ್ನುವ ಮೂಲಕ ಹೊತ್ತಾದ ಮೇಲೆ ಬೇಕಾದಂತೆ ತಿರುಗಾಡುವ ಮಹಿಳೆ ಅತ್ಯಾಚಾರಕ್ಕೊಳಗಾಗುವುದು ತೀರಾ ಸಹಜ, ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅದು ಎನ್ನುವ ಧ್ವನಿಯಲ್ಲಿ ಮಾತಾಡುತ್ತಿದ್ದರು. ಇನ್ನೊಂದು ಸಂಘಟನೆಯ ಮುಖ್ಯಸ್ಥರು ಮಹಿಳೆಯರು ಹೊರಗೆ ದುಡಿಯಲು ಹೋಗದೇ ಗೃಹಕೃತ್ಯದಲ್ಲಿ ತೊಡಗುವುದೇ ಭಾರತೀಯ ಸಂಸ್ಕೃತಿ ಶೋಭೆ ಎಂದರು.

ಇವರೆಲ್ಲ ಹೀಗೆ ಹೇಳುವುದರ ಮೂಲಕ ಸಾರ್ವಜನಿಕ ಸ್ಪೇಸ್ ಗಳಿಗೆ ಮಹಿಳೆಯರು ಬರದಂತೆ ಸೂಕ್ಷ್ಮ ನಿರ್ಬಂಧ ಹೇರುತ್ತಿದ್ದಾರೆ ಎಂಬುದನ್ನು ಮನಗಾಣಬೇಕು. ಒಂದು ಹೋಟೆಲ್, ಕಾಫಿ ಶಾಪ್, ಸಿನೆಮಾ ಥಿಯೇಟರ್, ಹರಟೆ ಹೊಡೆಯುವ ಜಾಗಗಳು , ದುಡಿಯುವ ತಾಣಗಳು ಮಹಿಳೆ ತನ್ನ ಮೇಲೆ ಆಪತ್ತನ್ನು ಎಳೆದುಕೊಳ್ಳುವ ಜಾಗಗಳು ಎಂದು ಬಿಂಬಿತವಾದಾಗ ಮನೆಯ ಗೋಡೆಗಳ ಆವರಣವೇ ಆಕೆಗೆ ಸುರಕ್ಷಿತ ಎಂಬ ಪರೋಕ್ಷ ಅಭಿಪ್ರಾಯ ಇಲ್ಲಿ ವ್ಯಕ್ತವಾಗುತ್ತದೆ. ಆದರೆ ಮನೆಯೊಳಗಣ ದೌರ್ಜನ್ಯಕ್ಕೆ ಮದ್ದು ಏನು ಎಂಬ ಪ್ರಶ್ನೆಗೆ ಇವರು ಮೌನ ತಾಳುತ್ತಾರೆ. ಅದೇ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಬರುವವರು ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಗೆ ವಿಚಲಿತರಾಗದಂತೆ ಧೈರ್ಯ ತುಂಬುವ ಬದಲು ಬದುಕಿನ ಪ್ರತಿಕ್ಷಣವೂ ಬೆದರುವಂತೆ ಮಾಡುತ್ತಾರೆ.

ಇದರ ಇನ್ನೊಂದು ಆಯಾಮ ಏನೆಂದರೆ ಹೆಣ್ಣುಮಕ್ಕಳಿಗೆ ಕರಾಟೆ, ಅತ್ಯಾಚಾರಿಯನ್ನು ಹಿಮ್ಮೆಟ್ಟಿಸುವುದು ಹೇಗೆ ಎಂದು ತರಬೇತಿ ನೀಡುವುದು. ಆತ್ಮರಕ್ಷಣೆಗಾಗಿ ಇವುಗಳನ್ನು ಕಲಿಯುವುದು ಒಳ್ಳೆಯದೇ. ಆದರೆ ಈ ಅಗ್ರೆಸಿವ್ ಅಪ್ರೋಚ್ ಮೂಲ ಸಮಸ್ಯೆಗಳನ್ನು ಅಡ್ರೆಸ್ ಮಾಡುವುದೇ ಇಲ್ಲ. ಹೊಡೆಯಿರಿ, ಬಡಿಯಿರಿ ಎನ್ನುವುದು ಆರಂಭದಲ್ಲಿ ಆತ್ಮರಕ್ಷಣೆಗೆ ಸರಿ, ಆದರೆ ಅದು ಮೇರೆ ಮೀರಿ ಸ್ವಹಿತಸಾಧನೆಗೆ ಬಳಕೆಯಾಗುವುದನ್ನೂ ತಡೆಯಲಾಗದು. ಇತ್ತೀಚೆಗೆ ರೊಹ್ಟಾಕ್ ಸೋದರಿಯರು ಹುಡುಗರಿಗೆ ಚಚ್ಚಿದ ಪ್ರಕರಣ ಇದಕ್ಕೆ ಹಿಡಿದ ಕನ್ನಡಿ. ಇನ್ನೊಂದು ದೃಷ್ಟಿಯಲ್ಲಿ ನೋಡಿದಾಗ ಇಲ್ಲೂ ಹೇಳಲಾಗುವ ವಿಚಾರ ಎಂದರೆ, ಅತ್ಯಾಚಾರಕ್ಕೆ ಒಳಗಾಗುವ ಪ್ರಸಂಗ ಸಹಜ, ನೀವು ನಿಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಕಲಿಯಬೇಕು ಎನ್ನುವುದಷ್ಟೆ.

ಜೊತೆಗೆ ಇವರು ‘ಅತ್ಯಾಚಾರಕ್ಕೆ ಒಳಗಾದಿರೆಂದರೆ ನಿಮ್ಮ ಬದುಕೇ ಹಾಳಾದಂತೆ, ಇದರಿಂದ ನೀವು ಜೀವನವಿಡೀ ಕಣ್ಣೀರು ಹಾಕುತ್ತಾ ಇರಬೇಕಾಗುತ್ತದೆ. sex-education-3ಇಂಥದ್ದನ್ನು ದೂರವಿರಿಸುವುದು ನಿಮ್ಮ ಕೈಯಲ್ಲಿದೆ’ ಎನ್ನುವ ಭರತವಾಕ್ಯದೊಂದಿಗೆ ಕಾರ್ಯಕ್ರಮ ಮುಗಿಸುತ್ತಾರೆ.

ನಿಜವಾಗಿ ನಡೆಯಬೇಕಾಗಿರುವುದು ‘ಯಾರೋ ಒಬ್ಬ ಅವನ ದೌರ್ಬಲ್ಯದಿಂದ ಅತ್ಯಾಚಾರವೆಸಗಿದರೆ ಅದಕ್ಕಾಗಿ ನೀವು ಕೊರಗುವ ಅಗತ್ಯವಿಲ್ಲ, ಅಲ್ಲಿಗೇ ನಿಮ್ಮ ಬದುಕು ಮುಗಿಯುವುದಿಲ್ಲ’ ಎಂಬ ಧೈರ್ಯ ತುಂಬುವ ಕೆಲಸ. ಅತ್ಯಾಚಾರ ಒಂದು ದೌರ್ಜನ್ಯದ ಪ್ರಕರಣ. ಮಾನಹಾನಿಯಾಗುವುದು ಅಥವಾ ಆಗಬೇಕಿರುವುದು ದೌರ್ಜನ್ಯ ನಡೆಸುವವರದ್ದು, ದೌರ್ಜನ್ಯಕ್ಕೆ ಒಳಗಾಗುವರದ್ದಲ್ಲ. ನಮ್ಮ ವ್ಯವಸ್ಥೆ ಅತ್ಯಾಚಾರಕ್ಕೆ ಒಳಗಾದವರನ್ನೇ ಕಳಂಕಿತರೆಂಬಂತೆ ಚಿತ್ರಿಸಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಕನ್ನಡದ ಅನೇಕ ಚಿತ್ರಗಳಲ್ಲಿ ನೀವು ನೋಡಿರಬಹುದು, ನಡುಬೀದಿಯಲ್ಲಿ ಬಲವಂತವಾಗಿ ಹುಡುಗಿಯೊಬ್ಬಳಿಗೆ ವಿಲನ್ ಒಬ್ಬ ಮುತ್ತು ಕೊಟ್ಟ ನಂತರದ ದೃಶ್ಯದಲ್ಲಿ ಆ ಹುಡುಗಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಆಕೆ ತನಗೇನೋ ಆಗಿದೆ ಎಂದು ಕೊರಗುವುದನ್ನು ಬಿಟ್ಟು ದೌರ್ಜನ್ಯ ಎಸಗಿದ ವ್ಯಕ್ತಿಗೆ ಶಿಕ್ಷೆಯಾಗುವಂತೆ ಧೈರ್ಯದಿಂದ ದೂರು ನೀಡಬೇಕು. ನಮ್ಮ ಸಮಾಜ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ನೋಡುವ ದೃಷ್ಟಿಕೋನವೇ ಬದಲಾಗಬೇಕು.

ನಮ್ಮ ಸಾರ್ವಜನಿಕ ಸ್ಥಳಗಳಿಗೆ ಮಹಿಳೆಯರಿಗೆ ನಿರ್ಬಂಧ ಹೇರಿ ಅತ್ಯಾಚಾರ ತಡೆಗಟ್ಟುವ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ರಕ್ಷಣೆ ದೊರೆಯುವಂತೆ ಮಾಡಬೇಕಾಗಿದೆ. sex-education-2ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ದೇಹದ ಬದಲಾವಣೆಗಳ ಬಗೆಗೆ ಸರಿಯಾಗಿ ತಿಳಿಯುವ ಅವಕಾಶ ಇಲ್ಲದ ಮಕ್ಕಳು ಮೊಬೈಲ್, ಇಂಟರ್ ನೆಟ್ ಗಳಿಂದ ವಿಕೃತದಾರಿಯಲ್ಲಿ ಅದನ್ನು ಅರಿಯುವ ಮೊದಲು ಅವರೊಂದಿಗೆ ಹಿರಿಯರು ಮುಕ್ತವಾಗಿ ಮಾತಾಡಬೇಕಿದೆ. ಗಂಡು ಹೆಣ್ಣಿನ ಸಹಜ ಸಂಬಂಧದ ಬಗ್ಗೆ ಸಮಾಜದಲ್ಲಿ ಆರೋಗ್ಯಕರ ನಿಲುವು ಮೂಡಿಸಬೇಕಾಗಿದೆ.

ಹೆಣ್ಣು ಕೇವಲ ದೇಹ ಅಲ್ಲ, ಅವಳೊಬ್ಬ ವ್ಯಕ್ತಿ ಎನ್ನುವ ಪರಿಕಲ್ಪನೆ ನಮ್ಮ ಸಂಸ್ಕೃತಿಯ ಭಾಗ ಆಗಿಲ್ಲ ಎಂಬುದೇ ಸಮಸ್ಯೆಯ ಮೂಲ. ಹೆಣ್ಣನ್ನು ಎರಡನೆ ದರ್ಜೆ ಪ್ರಜೆಯಾಗಿ ನೋಡುವ ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತಂದರೆ ಆಗುವ ಅಪಾಯಗಳ ದೃಷ್ಟಾಂತ ನಮ್ಮ ಮುಂದಿದೆ. ಹೀಗಾಗಿ ಸಂಸ್ಕೃತಿ ರಕ್ಷಕರು ಮತ್ತು ಲೈಂಗಿಕ ಶಿಕ್ಷಣ ನೀಡಲು ಹೊರಟ ಸ್ವಘೋಷಿತ ಪರಿಣತರು ಒಂದು ಕ್ಷಣ ಯೋಚಿಸಿ ಮುಂದುವರಿಯದಿದ್ದರೆ ಯಾವ ಮನೋಭಾವ ಇಂದು ಹುಡುಗರನ್ನು ಅತ್ಯಾಚಾರಿಗಳನ್ನಾಗಿಸುತ್ತಿದೆಯೋ ಅದೇ ಮನಸ್ಥಿತಿಯನ್ನು ಪೋಷಿಸುವ ಕೆಲಸವನ್ನೇ ಮಾಡಿದಂತಾಗುತ್ತದೆ.

 

“ಜನ ನುಡಿ – 2014” – ಮಂಗಳೂರಿನಲ್ಲಿ ಇದೇ ಶನಿವಾರ – ಭಾನುವಾರ…

ಸ್ನೇಹಿತರೇ,

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ “ಜನ ನುಡಿ” ಎಂಬ ಕಾರ್ಯಕ್ರಮ ನಡೆದಿದ್ದು, ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಅದರ ಅಗತ್ಯದ ಬಗ್ಗೆ ತಮಗೆಲ್ಲ ತಿಳಿದಿದೆ ಎಂದು ಭಾವಿಸುತ್ತೇನೆ. (ಇಲ್ಲವಾದಲ್ಲಿ ನೀವು “ಜನ ನುಡಿ” ಪದವನ್ನು ನಮ್ಮ ಸರ್ಚ್ ಬಾಕ್ಸ್‌ನಲ್ಲಿ ಹಾಕಿ ಹುಡುಕಿದರೆ ಸಿಗುತ್ತದೆ. ಕಳೆದ ಬಾರಿಯ ಜನ ನುಡಿಯ ಕಾರ್ಯಕ್ರಮದ ಆಯೋಜನೆಯ ಹಿನ್ನೆಲೆಯಲ್ಲಿ ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.)

ಈಗ ಜನ ನುಡಿಯ ಎರಡನೇ ವರ್ಷದ ಕಾರ್ಯಕ್ರಮವನ್ನು ಇದೇ ಶನಿವಾರ ಮತ್ತು ಭಾನುವಾರ (ಡಿಸೆಂಬರ್ 13-14, 2014) ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ಕಾರ್ಯಕ್ರಮದ ಪೂರ್ಣ ವಿವರಗಳ ಆಹ್ವಾನ ಪತ್ರವನ್ನು ಕೆಳಗೆ ಲಗತ್ತಿಸಲಾಗಿದೆ.

ನಮಸ್ಕಾರ,
ರವಿ,
ವರ್ತಮಾನ.ಕಾಮ್

jananudi-2014-1
jananudi-2014-2
jananudi-2014-3
jananudi-2014-4

ಭೂಪಾಲ್ ದುರಂತಗಳು, ಸಾವಿರಾರು ಹೆಣಗಳು – Make in India


– ಬಿ. ಶ್ರೀಪಾದ ಭಟ್


ಮೀಥೈಲ್ ಐಸೋ ಸೈನೇಟ್ (MIC) ಎನ್ನುವ ಪದ ಕಿವಿಗೆ ಬಿದ್ದರೆ ಭೂಪಾಲ್‌ನ ನಾಗರಿಕರು ಇಂದಿಗೂ ಬೆಚ್ಚಿ ಬೀಳುತ್ತಾರೆ. ಅದು 1984ರ ಡಿಸೆಂಬರ್ ತಿಂಗಳ ಚಳಿಗಾಲದ ರಾತ್ರಿ. ಆ ರಾತ್ರಿಯ ಚಳಿಗಾಳಿಯ ತೀವ್ರತೆ, ಅದರಿಂದುಂಟಾದ ನಡುಕ ಮುಂದಿನ ಕೆಲವೇ ಗಂಟೆಗಳಲ್ಲಿ ಸುಮಾರು 25000 ಜನರ ಭಯಾನಕ ಸಾಮೂಹಿಕ ಕಗ್ಗೊಲೆಗೆ ಮುನ್ನುಡಿಯಂತಿತ್ತೇನೋ. ಡಿಸೆಂಬರ್ 2-3, 1984 ರ ರಾತ್ರಿ 12.30ಕ್ಕೆ ಭೂಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ (UCC) ಎನ್ನುವ ವಿದೇಶಿ ಕಂಪನಿಯ ಕಾರ್ಖಾನೆಯಿಂದ ಈ MIC ಎನ್ನುವ ರಾಸಾಯನಿಕ ವಿಷಾನಿಲ ಸೋರಿಕೆಗೊಂಡು ಸುಮಾರು 9 ಕಿ.ಮೀ.ನಷ್ಟು ದೂರ ಪಸರಿಸತೊಡಗಿತು.ಈ ಕಾರ್ಖಾನೆಯ ಸುತ್ತ ಸ್ಲಂ ಕಾಲೋನಿಗಳಿದ್ದವು. ಮರುದಿನ ಬೆಳಗಿನ ಹೊತ್ತಿಗೆ ಇಡೀ ಭೂಪಾಲ್ ನಗರ ಸಾವಿನ ನೃತ್ಯಕ್ಕೆ ಸಾಕ್ಷಿಯಾಯಿತು. ಈ ಸಾವಿನ ನೃತ್ಯ ನೇರವಾಗಿ ಪ್ರವೇಶಿಸಿದ್ದು Bhopal-Gas-Tragedy-TIMEಕಾರ್ಖಾನೆಯ ಸುತ್ತಲಿದ್ದ ಸ್ಲಂ ಕಾಲೋನಿಗಳನ್ನು. ಕೆಲವೇ ಗಂಟೆಗಳಲ್ಲಿ ಈ MIC ವಿಷಾನಿಲ ಮಕ್ಕಳು, ಮಹಿಳೆಯರನ್ನೊಳಗೊಂಡಂತೆ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು. ಇಡೀ ಕಾಲೋನಿ ಕೆಮ್ಮು, ಆಕ್ರಂದನ, ವಾಂತಿಯಿಂದ ನಲುಗಿಹೋಯ್ತು. ಭೂಪಾಲ್‌ನ ಆಸ್ಪತ್ರೆಗಳಲ್ಲಿ ಈ MIC ರಾಸಾಯನಿಕ ವಿಷಾನಿಲದಿಂದುಟಾದ ಭೀಕರತೆಯನ್ನು ಗುಣಪಡಿಸುವ ಮದ್ದಿನ ವಿವರಗಳು ಗೊತ್ತಿರಲಿಲ್ಲ. ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದಲೂ ಯಾವುದೇ ವೈಜ್ಞಾನಿಕ ವಿವರಗಳು ದೊರಕಲಿಲ್ಲ. ಇದರ ಪರಿಣಾಮವೇನಾಯ್ತೆಂದರೆ ಈ ದುರ್ಘಟನೆ ನಡೆದು ಎರಡು ದಿನಗಳವರೆಗೂ ಅಲ್ಲಿನ ಆಸ್ಪತ್ರೆಗಳಲ್ಲಿ ಸೂಕ್ತ ಔಷದೋಪಚಾರಗಳ ಕೊರತೆಯಿಂದಾಗಿಯೇ ಸಾವಿರಾರು ಜನ ಸಾವಿಗೀಡಾಗುತ್ತಲೇ ಇದ್ದರು. ಇನ್ನೊಂದು ಅಘಾತಕಾರಿ ಸಂಗತಿಯೆಂದರೆ ಈ MIC ವಿಷಾನಿಲದ ಜೊತೆಗೆ ಹೈಡ್ರೋಜನ್ ಸೈನೈಡ್, ನೈಟ್ರೋಜನ್ ಆಕ್ಸೈಡ್‌ಗಳಂತಹ ರಾಸಾಯನಿಕ ವಿಷಾನಿಲಗಳೂ ಸೇರಿಕೊಂಡಿದ್ದವೆಂದು ಅನೇಕ ದಿನಗಳ ನಂತರ ಗೊತ್ತಾಗಿದ್ದು. ಇದರ ಪರಿಣಾಮವಾಗಿ ಈ ದುರ್ಘಟನೆ ನಡೆದು ಒಂದು ವಾರದ ನಂತರವೂ ಸಾವಿನ ವಾಸನೆ ಭೂಪಾಲ್ ನಗರವನ್ನು ನುಂಗುತ್ತಲೇ ಇತ್ತು. ಇನ್ನೂ ಹಸಿಹಸಿಯಾಗಿ ಹೆಣಗಳು ಬೀಳುತ್ತಲೇ ಇದ್ದವು.

ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಸುಮಾರು 5000 ಜನರು ಸಾವಿಗೀಡಾಗಿದ್ದರೆ ವಾಸ್ತವದಲ್ಲಿ 25000 ಕ್ಕೂ ಮೇಲ್ಪಟ್ಟು ಜನ ಸತ್ತಿದ್ದಾರೆಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದರು. ಪತ್ರಿಕಾ ವರದಿಯು ಸಹ ಇದೇ ಅಂಕಿಯನ್ನು ಕೊಟ್ಟಿದೆ. ಆ ದಿನದಂದು ಈ ಘಟನೆಗೆ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬ 30 ವರ್ಷಗಳ ನಂತರ ಮೊನ್ನೆ ಹೇಳುತ್ತಿದ್ದ: “ಅಂದು ರಾತ್ರಿಯಾಗಿತ್ತು. Bhopal-Gas-Tragedy-1ಇಡೀ ಸ್ಲಂನ ಜನರು ದಿಕ್ಕಾಪಾಲಾಗಿ ಕಿರುಚುತ್ತ ಓಡತೊಡಗಿದರು.ಆದರೆ ಎಂತಹ ದುರಂತವೆಂದರೆ ಅವರು ಭಯದಲ್ಲಿ ತಮಗರಿವಿಲ್ಲದೇ ಆ ಕತ್ತಲಿನಲ್ಲಿ ಈ MIC ವಿಷಾನಿಲ ತೇಲಿ ಬರುತ್ತಿದ್ದ ದಿಕ್ಕಿನೆಡೆಗೆ ಧಾವಿಸುತ್ತಿದ್ದರು. ತಾವಾಗಿಯೇ ಆ ಸಾವಿಗೆ ಆಹುತಿಯಾಗಿ ಹೋದ್ರು. ಸುಮಾರು 500000 ಜನ ಕಣ್ಣು, ಧ್ವನಿ, ಕೈಕಾಲುಗಳನ್ನು ಕಳೆದುಕೊಂಡರು.”

ಕಾರ್ಖಾನೆಯೊಳಗಡೆ ಸುರಕ್ಷತೆಯ ವೈಫಲ್ಯವೇ ಇಡೀ ದುರ್ಘಟನೆಗೆ ಮೂಲಭೂತ ಕಾರಣ. ಈ ಬಗೆಯ ವಿಷಾನಿಲವನ್ನು ಉತ್ಪಾದಿಸುವ ಯೂನಿಯನ್ ಕಾರ್ಬೈಡ್ ಎನ್ನುವ ವಿದೇಶಿ ರಾಸಾಯನಿಕ ಕಾರ್ಖಾನೆಯನ್ನು 1969 ರಲ್ಲಿ ಪರಿಸರ ಮತ್ತು ಸುರಕ್ಷತೆಗೆ ಸಂಬಂಧಪಟ್ಟಂತಹ ಎಲ್ಲ ನಿಯಮಾವಳಿಗಳನ್ನು ಉಲ್ಲಂಘಿಸಿ ನಗರ ಪ್ರದೇಶದ ವ್ಯಾಪ್ತಿಗೆ ಬರುವಂತಹ ಪ್ರದೇಶದಲ್ಲಿಯೇ ಸ್ಥಾಪನೆಗೆ ಅನುಮತಿ ನೀಡಲಾಯಿತು. (ವ್ಯಂಗವೆಂದರೆ ಈ ಕಾರ್ಖಾನೆಯ ಬಳಿಯಲ್ಲಿಯೇ ಡಿ.ಐ.ಜಿ. ಬಂಗಲೆಯಿದೆ)

ಆರಂಭದಲ್ಲಿ Pesticide Sevin ಎನ್ನುವ ರಸಗೊಬ್ಬರಕ್ಕೆ ಸಂಬಂಧಿತ ರಾಸಾಯನಿಕವನ್ನು ತಯಾರಿಸುತ್ತೇವೆಂದು ಪ್ರಾರಂಭವಾದ ಈ ಯೂನಿಯನ್ ಕಾರ್ಬೈಡ್ ಕಂಪನಿ 1979ರಲ್ಲಿ ಇದಕ್ಕೆ ಪೂರಕವಾಗಿ ಈ MIC ವಿಷಾನಿಲ ತಯಾರಿಕೆಯ ಎರಡು ಘಟಕಗಳನ್ನು ಪ್ರಾರಂಭಿಸಿತು. ಇದಕ್ಕೆ ಅನುಮತಿ ಕೊಟ್ಟವರಾರು ಎಂದು ಇಂದಿಗೂ ನಿಗೂಢವಾಗಿ ಉಳಿದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸ್ಥಾಪಿತಗೊಂಡ ಕೇವಲ ಮೂರು ವರ್ಷಗಳ ನಂತರ 1982ರಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಸುಮಾರು ಅವಘಡಗಳು ಜರುಗಿದವು. ಕಾರ್ಖಾನೆಯ ಕಾರ್ಮಿಕನೊಬ್ಬ ಈ MIC ವಿಷಾನಿಲದ ಫಲವಾಗಿ ಸ್ಥಳದಲ್ಲೇ ಮೃತ ಪಟ್ಟರೆ ಎಲೆಕ್ಟ್ರಿಕ್ ಇಂಜಿನಿಯರ್ ಇದೇ ಸುರಕ್ಷತೆಯ ವಿಫಲತೆಯ ಪರಿಣಾಮವಾಗಿ ಕಣ್ಣುಗಳನ್ನು ಕಳೆದುಕೊಂಡ. 1982 ರ ಜನವರಿಯಿಂದ 1982 ರ ಫೆಬ್ರವರಿಯ ಒಂದು ತಿಂಗಳ ಅವಧಿಯಲ್ಲಿ ಅನಿಲ ಸೋರಿಕೆಯ ಪರಿಣಾಮವಾಗಿ ಸುಮಾರು 36 ನೌಕರರು ಅಸ್ವಸ್ಥರಾಗಿ ಅಸ್ಪತ್ರೆಗೆ ಸೇರಿಕೊಳ್ಳಬೇಕಾಯಿತು. ಅಲ್ಲಿನ ನೌಕರರರಿಗೆ ಸುರಕ್ಷತೆಯ ಮುಖವಾಡವನ್ನು ಸಹ ಕೊಟ್ಟಿರಲಿಲ್ಲ ಎನ್ನುವುದು ಆಗಲೇ ಗೊತ್ತಾಗಿದ್ದು. 1983-1984ರ ಅವಧಿಯಲ್ಲಿ ಸುಮಾರಿ ಬಾರಿ ಅನಿಲ ಸೋರಿಕೆ ಘಟನೆಗಳು ಜರುಗಿದವು. ಇಡೀ ಕಾರ್ಖಾನೆಯೇ ಸುರಕ್ಷತೆಯ ಸಂಪೂರ್ಣ ವೈಫಲ್ಯದಿಂದಾಗಿ ಸಿಡಿಮುದ್ದಿನ ಮೇಲೆ ಮಲಗಿದಂತಿತ್ತು ಎಂದು ಸ್ಥಳೀಯರು ಇಂದಿಗೂ ನಡಗುವ ಧ್ವನಿಯಲ್ಲಿ ಹೇಳುತ್ತಾರೆ.

ನವೆಂಬರ್ 1984ರ ವೇಳೆಗೆ ಇಡೀ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಎಲ್ಲಾ ಸುರಕ್ಷೆ ಸಂಬಂಧಿತ ವ್ಯವಸ್ಥೆಗಳು ಕೆಟ್ಟು ಹೋಗಿದ್ದವು. Bhopal-Gas-Tragedy-3ಪೈಪ್ ಲೈನ್‌ಗಳು, ವಾಲ್ವ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಲ್ಲಿನ ಮಾಜಿ ನೌಕರರೊಬ್ಬರನ್ನು ಸಂದರ್ಶನ ಮಾಡಿದಾಗ ಅವರು ಮಾತನಾಡುತ್ತಾ ಹೇಳುತ್ತಿದ್ದರು “1984ರ ಆ ದಿನಗಳಲ್ಲಿ ಯಾವುದೇ ಅಡಚಣೆಗಳಿಲ್ಲದೆ ಕೇವಲ ಉತ್ಪಾದನೆಯೊಂದೇ ನಮ್ಮ ಮುಂದಿರುವ ಟಾರ್ಗೆಟ್ ಆಗಿತ್ತು. ಯಾವುದೇ ಬೆಲೆ ತೆತ್ತಾದರೂ ಸರಿಯೇ ಘಟಕವನ್ನು ಒಂದು ಕ್ಷಣಕ್ಕೂ ಸ್ಥಗಿತಗೊಳಿಸಬಾರದೆಂದು ವಿದೇಶದಲ್ಲಿರುವ ಅದರ ಮಾಲೀಕರು ನಿರ್ದೇಶಿಸಿದ್ದಾರೆಂದು ನಮ್ಮ ವ್ಯವಸ್ಥಾಪಕರು ಹೇಳುತ್ತಿದ್ದರು. ಇದರ ಪರಿಣಾಮವಾಗಿ ಸುರಕ್ಷತೆಗಾಗಿ ಯಾವುದೇ ಸಮಯವನ್ನು ಸಹ ಮೀಸಲಿಡದೇ ಹೋದದ್ದು ಈ ದುರ್ಘಟನೆಗೆ ಕಾರಣ. ಮತ್ತೊಂದು ಮುಖ್ಯ ಸಂಗತಿಯೆಂದರೆ ಟ್ಯಾಂಕ್ 610 ಸುಮಾರು 50 ಟನ್‌ನಷ್ಟು MIC ವಿಷಾನಿಲವನ್ನು ಅಡಗಿಸಿಕೊಂಡಿತ್ತು. ಇದು ಸುರಕ್ಷತೆಯ ಎಲ್ಲಾ ನಿಯಮಗಳಿಗೆ ವಿರುದ್ಧವಾಗಿತ್ತು. ಇದನ್ನು ಪ್ರಶ್ನಿಸಿದಾಗ ಹೊಸ ಟ್ಯಾಂಕ್ ಖರೀದಿಗೆ ಆರ್ಥಿಕ ಸೌಲಭ್ಯದ ಕೊರತೆ ಇದೆಯೆಂದೇ ನಮ್ಮನ್ನು ದಬಾಯಿಸಿದ್ದರು. ಎಲ್ಲಾ ಪೈಪ್ ಲೈನ್‌ಗಳು ತುಕ್ಕು ಹಿಡಿದುಹೋಗಿದ್ದವು. ಆ ದುರ್ದಿನದಂದು ಅನಿಲ ಸೋರಿಕೆಯಾದಾಗ ಉಷ್ಣತೆಯ ತಾಪಮಾನ ಸುಮಾರು 200 ಸೆಂಟಿಗ್ರೇಡ್ ಅನ್ನು ದಾಟಿತ್ತು (ವೈಜ್ಞಾನಿಕವಾಗಿ ಇಡೀ ಪ್ರದೇಶವು -20 ಸೆಂಟಿಗ್ರೇಡ್ ತಾಪಮಾನದಲ್ಲಿರಬೇಕು). ಟ್ಯಾಂಕ್ 610 ನಲ್ಲಿದ್ದ ಹೆಚ್ಚುವರಿಯಾದ ಅನಿಲವು ವಾತಾವರಣದ ಈ ಒತ್ತಡದ ಫಲವಾಗಿ ಅದರಿಂದಲೂ ಅನಿಲ ಸೋರಿಕೆ ಪ್ರಾರಂಭವಾಯಿತು. ಈ ಬಗೆಯ ಸಂಪೂರ್ಣ ಸುರಕ್ಷತೆ ವೈಫಲ್ಯಕ್ಕೆ ಕಾರಣರಾದ ಯೂನಿಯನ್ ಕಾರ್ಬೈಡ್‌ನ ವಿದೇಶಿ ಮಾಲೀಕರೇ ಇದಕ್ಕೆ ನೇರ ಹೊಣೆಗಾರರು.”

ಈ ದುರ್ಘಟನೆಯ ನಡೆದ ನಂತರ ಡಿಸೆಂಬರ್4, 1984ರಂದು ಭಾರತಕ್ಕೆ ಆಗಮಿಸಿದ ಯೂನಿಯನ್ ಕಾರ್ಬೈಡ್‌ನ ಮಾಲೀಕ ಅಂಡರಸನ್‌ನನ್ನು ಭಾರತ ಸರ್ಕಾರವು ಗೃಹ ಬಂಧನದಲ್ಲಿರಿಸಿತು. ಆದರೆ ಅಮೇರಿಕಾದ ಒತ್ತಡಕ್ಕೆ ಮಣಿದು ಡಿಸೆಂಬರ್ 7, 1984ರಂದು ನರಹಂತಕನೆಂದು ಬಣ್ಣಿಸಲ್ಪಡುವ ಈ ಅಂಡರ್‌ಸನ್‌ನನ್ನು ಮಧ್ಯಪ್ರದೇಶದ ಆಗಿನ ಮುಖ್ಯ ಮಂತ್ರಿ ಅರ್ಜುನ್ ಸಿಂಗ್ ವಿಶೇಷ ವಿಮಾನದಲ್ಲಿ ಭಾರತದಿಂದ ಅಮೇರಿಕಾಗೆ ಕಳುಹಿಸಿಕೊಟ್ಟರು. ಅಂದು ಇಲ್ಲಿಂದ ಪರಾರಿಯಾದ ಈ ಅಂಡರ್‌ಸನ್ ಮರಳಿ ಭಾರತಕ್ಕೆ ವಿಚಾರಣೆಗೆ ಬರಲೇ ಇಲ್ಲ. ಆತನನ್ನು ‘ಪಲಾಯನಗೊಂಡ ಅಪರಾಧಿ’ ಎಂದು ನಮ್ಮ ನ್ಯಾಯಾಲಯಗಳು ತೀರ್ಪನ್ನಿತ್ತರು. 1992ರಲ್ಲಿ ಭೂಪಾಲ್‌ನ ಮುಖ್ಯ ಮಾಜಿಸ್ಟ್ರೇಟ್ ಅಂಡರ್‌ಸನ್‌ನ್ನು ಒಬ್ಬ Fugitive ಎಂದೇ ತೀರ್ಪಿತ್ತರು. ಅಮೇರಿಕಾ ಇದಕ್ಕೆ ಮನ್ನಣೆ ನೀಡಲೇ ಇಲ್ಲ. ಮೂವತ್ತು ವರ್ಷಗಳ ನಂತರ ಈ ಅಂಡರ್‌ಸನ್ ಮೊನ್ನೆ ಸೆಪ್ಟೆಂಬರ್ 2014 ರಲ್ಲಿ ತೀರಿಕೊಂಡ. Bhopal-Union_Carbide_Memorialಹೌದು ಯಾವುದೇ ಶಿಕ್ಷೆಯನ್ನು ಅನುಭವಿಸಲೇ ಇಲ್ಲ.

ಇನ್ನು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಭಾರತೀಯ 10 ನೌಕರರನ್ನು (ಪ್ರಮುಖರೆಂದರೆ ಕೇಶುಭ್ ಮಹೇಂದ್ರ – ಛೇರ್ಮನ್, ವಿಪಿ.ಗೋಖಲೆ – ವ್ಯವಸ್ಥಾಪಕ ನಿರ್ದೇಶಕ, ಕಾಮ್ದರ್ – ಉಪಾಧ್ಯಕ್ಷ, ಮುಕುಂದ್, ಚೌಧುರಿ – ವ್ಯವಸ್ಥಾಪಕರು, ಇಂದು ಇವರೆಲ್ಲ 70ರ ಆಸುಪಾಸಿನಲ್ಲಿದ್ದಾರೆ) ನಿರ್ಲಕ್ಷ್ಯದ ಆರೋಪದ ಮೇಲೆ 2 ವರ್ಷಗಳ ಸಾದಾ ಜೈಲು ಶಿಕ್ಷೆ ಎಂದು ನಿರ್ಣಯ ನೀಡಲಾಯಿತು. ಕೆಲವೇ ತಿಂಗಳುಗಳ ನಂತರ ಅವರೆಲ್ಲಾ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೌದು ಯಾವುದೇ ಶಿಕ್ಷೆಯನ್ನು ಅನುಭವಿಸದೆ.

ಇನ್ನು ಬದುಕುಳಿದ ಲಕ್ಷಾಂತರ ಸಂತ್ರಸ್ಥರಿಗೆ ಈ ನೆಲದ ಅಭೂತಪೂರ್ವ ಗುಣದಂತೆಯೇ ನ್ಯಾಯಯುತವಾದ ಪರಿಹಾರದ ಮೊತ್ತ ಇಂದಿಗೂ ಮೂವತ್ತು ವರ್ಷಗಳ ನಂತರವೂ ಸಂದಾಯವಾಗಿಲ್ಲ. ಈ ಭೂಪಾಲ್ ಅನಿಲ ದುರಂತದ 30ನೇ ವರ್ಷದಲ್ಲಿ ಭೂಪಾಲ್‌ಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಈ ನಿರಾಶ್ರಿತರನ್ನು ಭೇಟಿಯಾದಾಗ ಅವರೆಲ್ಲ ಸೋತು ಹೋಗಿದ್ದು ನಮ್ಮ ಮುಖಕ್ಕೆ ರಾಚುತ್ತಿತ್ತು. ಇಲ್ಲಿನ ಕಾನೂನು, ರಾಜಕೀಯದ ಭ್ರಷ್ಟತೆ, ವೈಫಲ್ಯಗಳಿಂದಾಗಿ ಸಂಪೂರ್ಣ ಕುಗ್ಗಿ ಹೋಗಿರುವ ಈ ಸಂತ್ರಸ್ಥರನ್ನು ಈ 30 ವರ್ಷಗಳ ಕಾಲಘಟ್ಟ ಹೆಚ್ಚೂ ಕಡಿಮೆ ಜೀವಂತಶವಗಳನ್ನಾಗಿಸಿದೆ. “ಕಾಲ ಮತ್ತು ಪ್ರವಾಹ ಯಾರನ್ನು ಕಾಯುವುದಿಲ್ಲ” ಎನ್ನುವ ಮಾತು ಇವರ ಪಾಲಿಗೆ ದಿನನಿತ್ಯದ ವಾಸ್ತವವಾಗಿರುವುದು ನಮ್ಮಲ್ಲಿ ತಲ್ಲಣವನ್ನುಂಟು ಮಾಡಿತು.

ಏಕೆಂದರೆ ಕಾಲ ಎಲ್ಲವನ್ನೂ ಉಪಶಮನ ಮಾಡುತ್ತದೆ ಎನ್ನುವುದು ಭೂಪಾಲ್ ಸಂತ್ರಸ್ಥರ ಪಾಲಿಗೆ ಸುಳ್ಳಾಗಿ, bhopal_Film_Posterನ್ಯಾಯಕ್ಕಾಗಿ ಕನಸು ಕಾಣುತ್ತಾ ಜೀವನ ಸಾಗುತ್ತಿದೆ ಎನ್ನುವುದು ಮಾತ್ರ ನಿಜವಾಗಿ, ನಾಗರಿಕತೆಯ ಮುಖ್ಯ ಗುಣಲಕ್ಷಣಗಳಾದ ಆಳವಾದ ಸಂವೇದನೆ, ನಿಸ್ವಾರ್ಥ, ಕನಿಷ್ಠ ಕ್ಷುದ್ರತೆ, ಗರಿಷ್ಠ ಸಮತೋಲನ ಎಲ್ಲವೂ ಕಣ್ಮರೆಯಾಗಿದ್ದು ಮಾತ್ರ ಅಂದು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸುತ್ತಲಿನ ಸ್ಲಂಗಳಲ್ಲಿ ಬಹಿರಂಗವಾಗಿ ಗೋಚರಿಸುತ್ತಿತ್ತು.

ಈ ಭೂಪಾಲ್ ಅನಿಲ ದುರಂತದ ಕುರಿತಾಗಿ “Bhopal: A Prayer for Rain” ಎನ್ನುವ ಇಂಗ್ಲೀಷ್-ಹಿಂದಿ ಭಾಷೆಯ ಚಲನಚಿತ್ರ ಡಿಸೆಂಬರ್ 5, 2014 ರಂದು ಬಿಡುಗಡೆಗೊಂಡಿದೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ. ಇಲ್ಲಿ ಅಂಡರ್‌ಸನ್‌ನನ್ನು ಮಾನವೀಯ ನೆಲೆಯಿಂದ ಚಿತ್ರಿಸಿರುವುದು ಈ ಸಿನಿಮಾದ ಒಂದು ದೌರ್ಬಲ್ಯ. ಇದನ್ನು ಹೊರತು ಪಡಿಸಿದರೆ ಇದು ನಮ್ಮನ್ನು ಸಂಪೂರ್ಣ ಅಲ್ಲಾಡಿಸಿಬಿಡುತ್ತದೆ. ಒಂದು ಮಾನವೀಯ ಸಿನಿಮಾ.

ಉಪಸಂಹಾರ : ಈ ಭೂಪಾಲ್ ಅನಿಲ ದುರಂತ ಒಳಗೊಂಡಂತೆ ಇನ್ನು ಅನೇಕ ದುರ್ಘಟನೆಗಳು ಇಲ್ಲಿ ಜರುಗಿದ್ದರೂ ಈ ಬೇಜವಬ್ದಾರಿ ಪ್ರಧಾನ ಮಂತ್ರಿ ಮೋದಿ ಘೋಷಿಸಿದ ’ಕೈಗಾರಿಕಾ ಸುಧಾರಣಾ ನೀತಿ’ಯ ಪಾಲಿಸಿಗಳು ಸಂಪೂರ್ಣವಾಗಿ ಕಾರ್ಪೋರೇಟ್ ಪರವಾಗಿವೆ. ಇದನ್ನು ವಿವರವಾಗಿ ಚರ್ಚಿಸಲು ಇಲ್ಲಿ ಸಾಧ್ಯವಿಲ್ಲ. ಈ ಹೊಸ ಕೈಗಾರಿಕ ನೀತಿಯ ಒಂದು ಪ್ರಮುಖ ಅಂಶವೆಂದರೆ ಇನ್ನು ಮುಂದೆ ಕೈಗಾರಿಕೆಗಳನ್ನು ಸ್ಥಾಪಿಸಲು ಅದರ ಮಾಲೀಕರು ಈಗ ಜಾರಿಯಲ್ಲಿರುವ ಪದ್ಧತಿಯಂತೆ ಪರಿಸರ ಇಲಾಖೆ, Inspectors of Factories Act ಇಲಾಖೆ, make-in-indiaವಾಯುಮಾಲಿನ್ಯ ನಿಯಂತ್ರಣ ಮಂಡಳಿಗಳಂತಹ ಪ್ರಮುಖ ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆಯುವ ಅಗತ್ಯವೇ ಇಲ್ಲ. ಈ ಮಾಲೀಕರು ಸುರಕ್ಷತೆ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ Self Certificate ಗಳನ್ನು ಸಲ್ಲಿಸಿದರೆ ಅಷ್ಟೇ ಸಾಕು. ಅದರ ಆಧಾರದ ಮೇಲೆ ಅವರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಮತಿ ದೊರಕುತ್ತದೆ. ಇದು ಈ ಮೋದಿ ಎನ್ನುವ ಅಪ್ರಬುದ್ಧ ಪ್ರಧಾನ ಮಂತ್ರಿಯ ಕೈಗಾರಿಕಾ ನೀತಿ!!! ನಮ್ಮ ಕಣ್ಣ ಮುಂದೆಯೇ ಈ ಎಲ್ಲಾ ಇಲಾಖೆಗಳ ನಿರ್ಬಂಧಗಳ ಅಡಿಯಲ್ಲಿಯೇ, ಕಾನೂನು ಕಟ್ಟಳೆಗಳ ಸಮ್ಮುಖದಲ್ಲಿಯೇ ಭೂಪಾಲ್ ಅನಿಲ ದುರಂತ ಸಂಭವಿಸಿದೆ. ಇನ್ನು ಇವೆಲ್ಲದರ ಅವಶ್ಯಕತೆ ಇಲ್ಲವೆಂದರೆ?? ಸಾವಿರಾರು ಭೂಪಾಲ್ ದುರಂತಗಳು ನಮ್ಮನ್ನು ನಿರೀಕ್ಷಿಸುತ್ತಿವೆ ಅಷ್ಟೆ. ಆದರೆ ಇಲ್ಲಿನ ನೀರು, ಗಿಡ ಮರಗಳು, ಪ್ರಾಣಿಗಳು, ಗೃಹ ಕೈಗಾರಿಕೆಗಳು, ಕೃಷಿ ಮಂತಾದವುಗಳ ಕುರಿತಾಗಿ ಪ್ರಾಥಮಿಕ ತಿಳುವಳಿಕೆ ಇಲ್ಲದ ಈ ನರೇಂದ್ರ ಮೋದಿಯ ಈ ದುರಹಂಕಾರದ ಅತ್ಮಹತ್ಯಾತ್ಮಕ ನೀತಿಗಳು ದೇಶವನ್ನು ಕೊಂಡೊಯ್ಯುವ ದಿಕ್ಕನ್ನು ನಾವೀಗಲೇ ಊಹಿಸಬಹುದು. ಮತ್ತು ಈ ಎಲ್ಲ ನೀತಿಗಳು “Make in India” ಎನ್ನುವ ಸ್ಲೋಗನ್‌ನ ಅಡಿಯಲ್ಲಿಯೇ ಜಾರಿಗೊಳ್ಳುತ್ತವೆ. ಹಾಗಿದ್ದರೆ ಸಾವಿರಾರು ಹೆಣಗಳು, ಭೂಪಾಲ್ ದುರಂತಗಳು ಸಹ ಇನ್ನು ಮುಂದೆ “Make in India” ಎನ್ನುವ ಸರ್ಕಾರಿ ಅಧಿನಿಯಮದ ಅಡಿಯಲ್ಲಿ ಸಂಭವಿಸುತ್ತಿರುತ್ತವೆ ಕಾಲಕಾಲಕ್ಕೆ.

ಭೋಪಾಲ್ ದುರಂತಕ್ಕೆ ಕಾರಣವಾದ ಭಾರತ ಸರ್ಕಾರದ ಏಳು ನಿರ್ಧಾರಗಳು

ಮೂಲ: ರವಿ ಕಿರಣ್ ಮತ್ತು ಸಮಂತ್ ಜಿಲ್ಲಾ
ಕನ್ನಡಕ್ಕೆ: ಜೆ.ವಿ.ಕಾರ್ಲೊ

ಇಂದಿಗೆ ಮುವ್ವತ್ತು ವರ್ಷಗಳ ಹಿಂದೆ ಭೋಪಾಲಿನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ರವರ ಮಿಥಾಯಿಲ್ ಐಸೋಸಯನೈಟ್ (MIC) ರಸಾಯನಿಕದ ತೊಟ್ಟಿಯೊಳಗೆ ಆಕಸ್ಮಿಕವಾಗಿ ನೀರು ನುಗ್ಗಿತು. ಆ ಹೊತ್ತಿಗೆ ಅದರಲ್ಲಿ 42 ಟನ್ನುಗಳಷ್ಟು MIC ದಾಸ್ತಾನಿತ್ತು. MIC ರಸಾಯನಿಕವು ಅತ್ಯಂತ ವಿಷಕಾರಿಯಾಗಿದ್ದು ಕನಿಷ್ಠ ಕುದಿಯುವ ಬಿಂದು ಹೊಂದಿರುವಂತಾಗಿರುತ್ತದೆ. ಇದನ್ನು ಸ್ಟೇನ್‌ಲೆಸ್ ಸ್ಟೀಲ್ ಅಥವಾ ಗಾಜಿನ ತೊಟ್ಟಿಗಳಲ್ಲಿ ಮಾತ್ರ ಶೇಖರಿಸಿಡಬಹುದಾಗಿದ್ದು ನೀರಿನ ಸಂಪರ್ಕ ಹೊಂದುತ್ತಿದ್ದಂತೆ MIC ಉಗ್ರವಾಗಿ ಪ್ರತಿಕ್ರಿಯಿಸಿ Bhopal-Gas-Tragedy-TIMEವಿಷಕಾರಕ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಅಂದು ಇದೇ ವಿದ್ಯಮಾನ ಭೋಪಾಲಿನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಜರುಗಿ 2500 ಕ್ಕಿಂತ ಹೆಚ್ಚು ಜನರು ಸತ್ತು  ಅದು ಜಗತ್ತಿನ ಅತ್ಯಂತ ಭೀಕರ ರಸಾಯನಿಕ ದುರಂತವೆನಿಸಿಕೊಂಡಿತು.

“ಮೊದಲು ಸುರಕ್ಷತೆ” ಎಂಬ ಧ್ಯೇಯ ಘೋಷಣೆ ಹೊತ್ತ ಅಮೆರಿಕಾದ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ಇಷ್ಟೊಂದು ಬೇಜವಬ್ದಾರಿಯಾಗಿರಲು ಏನು ಕಾರಣವಿದ್ದೀತು? ಇಂತದೊಂದು ದುರ್ಘಟನೆ ಈವರೆಗೆ ಅದರ ವರ್ಜೀನಿಯಾದ (ಅಮೆರಿಕ) ಘಟಕದಲ್ಲಿ ಯಾಕೆ ಜರುಗಿರಲಿಲ್ಲ? ಭೋಪಾಲ್ ಕಾರ್ಖಾನೆಯ ಪಡಿಯಚ್ಚಿನಂತಿರುವ ಅಮೆರಿಕಾದ ಘಟಕಕ್ಕೆ ತರಬೇತಿಗೆಂದು ಹೋಗಿದ್ದ ಭಾರತೀಯ ಇಂಜಿನಿಯರ್ ಕಮಲ್ ಪಾರಿಖ್ ಅಲ್ಲಿಯ ಸಿಬ್ಬಂದಿಯ ಶ್ರದ್ಧೆ, ಸುರಕ್ಷತೆಯ ಬಗ್ಗೆ ಅವರ ಗೀಳು ಅನಿಸುವಷ್ಟು ಅತೀವ ಕಾಳಜಿ ಕಂಡು ವಿಸ್ಮಯಪಡುತ್ತಾರೆ. ಅವರು ಹೇಳುತ್ತಾರೆ:
“ಅಮೆರಿಕನರೊಟ್ಟಿಗೆ ಕೆಲಸ ಮಾಡುವುದೇ ಒಂದು ಹಿತಕರವಾದ ಅನುಭವ. ಅವರು ಎಷ್ಟೊಂದು ವೃತ್ತಿಪರರು ಮತ್ತು ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳಿಗೂ ಎಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆಂದರೆ ನಾವು ಭಾರತೀಯರು ‘ಚಲ್ತಾ ಹೈ’ ಎನ್ನುವ ಮನೋಭಾವದವರು. ಅವರಿಗೆ ತೃಪ್ತಿಯಾಗಲಿಲ್ಲವೆಂದರೆ ಮುಂದಿನ ಹಂತಕ್ಕೆ ಹೋಗಲು ಬಿಡುವುದೇ ಇಲ್ಲ. ನಾವು ಎಷ್ಟೋ ವಾರಗಳು ಕ್ಷುಲ್ಲಕವೆಂದು ತೋರುವ ಸಂಗತಿಗಳ ಪರಿಣಾಮಗಳನ್ನು ವಿವಿಧ ಕೋನಗಳಲ್ಲಿ ಅಭ್ಯಸಿಸುತ್ತಿದ್ದೆವು.” (ದೊಮಿನಿಕ್ ಲೆಪಿಯೆರೆ ಮತ್ತು ಜಾವಿಯೆರ್ ಮೊರೊ ಇವರ “ಫೈವ್ ಪಾಸ್ಟ್ ಮಿಡ್‌ನೈಟ್ ಇನ್ ಭೋಪಾಲ್” ನಿಂದ)

ಇಂಥಾದೊಂದು ದುರ್ಘಟನೆ ನಡೆಯಲು ಕಾರಣವಾದ ಯೂನಿಯನ್ ಕಾರ್ಬೈಡ್ ಮೇಲೆ ಎಲ್ಲರ ಆಕ್ರೋಶ ತಿರುಗಿದ್ದು ಸಹಜವಾಗಿತ್ತಾದರೂ ನಮ್ಮ ಕೇಂದ್ರ ಸರ್ಕಾರದ ಪಾತ್ರ, ದಶಕಗಳಿಂದ ಅದು ಪಾಲಿಸಿಕೊಂಡು ಬಂದಿದ್ದ ಸೈದ್ಧಾಂತಿಕ ನೀತಿಗಳು ಯಾರ ಪರಾಮರ್ಶೆಗೆ ಒಳಪಡದಿದ್ದದ್ದು ದುರ್ದೈವವೆನ್ನಬೇಕು.

ಯೂನಿಯನ್ ಕಾರ್ಬೈಡ್ 1934 ರಿಂದಲೇ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಮೊದಮೊದಲು ಅದು ಟಾರ್ಚುಗಳ ಬ್ಯಾಟರಿಗಳನ್ನು ಅಮದು ಮಾಡಿ ಭಾರತದಲ್ಲಿ ಮಾರುತ್ತಿತ್ತು. ಕ್ರಮೇಣ ಇಲ್ಲೇ ಬ್ಯಾಟರಿಗಳನ್ನು ತಯಾರಿಸಿ “ಎವರೆಡಿ” ಬ್ರ್ಯಾಂಡಿನಡಿ ಮನೆಮಾತಾಗಿತ್ತು. ಇಂತ ಯೂನಿಯನ್ ಕಾರ್ಬೈಡ್ ತನ್ನ ಕ್ಷೇತ್ರವಲ್ಲದ ವಿಷಕಾರಕ ರಸಾಯನಿಗಳನ್ನು ತಯಾರಿಸುವ ಉಸಾಬರಿಗೇಕೆ ಕೈ ಹಚ್ಚಿತು? ಇದಕ್ಕೆ ವಿವಿಧ ಹಂತಗಳಲ್ಲಿ ಕೆಟ್ಟ ಔಧ್ಯಮಿಕ ನಿರ್ಧಾರಗಳಲ್ಲದೆ, ಸರ್ಕಾರದ ಸರಣಿ ನೀತಿಗಳಿಂದಾಗಿ, ನಷ್ಟದ ಬಾಬತ್ತಿನ, ಕೊನೆಗೆ ಅತ್ಯಂತ ಜನ ಸಾಂಧ್ರತೆಯುಳ್ಳ ನಗರ ಪ್ರದೇಶದಲ್ಲಿ ಜನರ ಮಾರಣಹೋಮಕ್ಕೆ ಕಾರಣವಾಯ್ತು.

1. ಸರ್ಕಾರದ ಔಧ್ಯಮಿಕ ನೀತಿ

1947 ರಲ್ಲಿ ಭಾರತದ ಸ್ವಾತಂತ್ರದೊಂದಿಗೆ ಔಧ್ಯಮಿಕ ಮತ್ತು ವಾಣಿಜ್ಯ ಪರಿಸರವೂ ಬದಲಾಯಿತು. ಪ್ರಧಾನ ಮಂತ್ರಿಗಳೂ ಮತ್ತು ಯೋಜನಾ ಆಯೋಗದ ಅಧ್ಯಕರೂBhopal-Gas-Tragedy-3 ಆದ ಜವಹರಲಾಲ್ ನೆಹರುರವರು ಮಂಡಿಸಿದ 1948 ಮತ್ತು 1956ರ ಕೈಗಾರಿಕಾ ನೀತಿ ಸಮಾಜವಾದಿ ಸ್ವರೂಪದ್ದಾಗಿತ್ತು. ಖಾಸಗಿರಂಗದ ಜತೆ ಜತೆಯಲ್ಲೇ ಸಾರ್ವಜನಿಕರಂಗವನ್ನು ಉತ್ತೇಜಿಸುವ ಮಧ್ಯಮ ಮಾರ್ಗದ ನೀತಿ. ಖಾಸಗಿ ಕ್ಷೇತ್ರದಲ್ಲಿ ಸರ್ಕಾರದ ಯಜಮಾನಿಕೆ.

ಇದರ ಜೊತೆಗೆ ಕಾಂಗ್ರೆಸ್ ಸರ್ಕಾರ ಗಾಂಧೀಜಿಯವರ ಸ್ವದೇಶಿ ಸಿದ್ಧಾಂತದಿಂದ ಪ್ರೇರಣೆಗೊಂಡು ವಿದೇಶಿ ಬಂಡವಾಳ ಹೂಡಿಕೆಯನ್ನು ದಮನಿಸಿ ದೇಶೀ ಜ್ಞಾನವು ಪಕ್ವವಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸದೆಯೇ ಉನ್ನತ ಮಟ್ಟದ ‘ತಂತ್ರಜ್ಞಾನ ವರ್ಗಾವಣೆ’ (Technology Transfer) ಕ್ಕೆ ಒತ್ತು ಕೊಟ್ಟಿತು.

ತಂತ್ರಜ್ಞಾನವು ಸ್ಥಳೀಯವಾಗಿ ಲಭ್ಯವಿದ್ದಲ್ಲಿ, (ಗುಣಮಟ್ಟದಲ್ಲಿ ರಾಜಿಯಾದರೂ ಕೂಡ) ಅದನ್ನೇ ಉಪಯೋಗಿಸಬೇಕು. ಒಮ್ಮೆ ಅಮದಾದ ತಂತ್ರಜ್ಞಾನ ಅದು ಭಾರತದೇ ತಂತ್ರಜ್ಞಾನ. ಐದು ವರ್ಷಗಳ ನಂತರ ಅದಕ್ಕೆ ಪಾವತಿಸಬೇಕಾದ ಅಗತ್ಯವಿಲ್ಲ.- ಇದು 1948 ರ ಕೈಗಾರಿಕಾ ನೀತಿಯಾಗಿತ್ತು.

1956 ರ ಕೈಗಾರಿಕಾ ನೀತಿಯನ್ವಯ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ತನ್ನ ಪಾಲಿನ ಶೇಕಡ 40 ಪಾಲನ್ನು ಮಾರಬೇಕಾಯಿತು. ಇದನ್ನು ಭಾರತ ಸರ್ಕಾರವೇ ತನ್ನ ಉದ್ದಿಮೆಗಳು ಮತ್ತು ಬ್ಯಾಂಕುಗಳ ಮುಖಾಂತರ ಕೊಂಡುಕೊಂಡಿತು. ಅಲ್ಲಿಂದ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (UCIL) ಆಯಿತು.

2. ಆಹಾರ ಧಾನ್ಯಗಳ ಕೊರತೆ

1957 ರಲ್ಲಿ ಸತತ ಮೂರು ವರ್ಷಗಳ ಸಂಶೋಧನೆಯಿಂದ ಯೂನಿಯನ್ ಕಾರ್ಬೈಡ್ (ಅಮೆರಿಕ) SEVIN (ಕಾರ್ಬಾರಿಲ್ ಎಂಬ ಬ್ರ್ಯಾಂಡ್ ಹೆಸರಿನ) ಕೀಟನಾಶಕವನ್ನು ಕಂಡು ಹಿಡಿಯಿತು. ಅಲ್ಲಿವರೆಗೆ ಸಾರ್ವತ್ರಿಕವಾಗಿ ಪ್ರಚಲಿತವಿದ್ದ ಡಿ.ಡಿ.ಟಿ., ಎಂಬ ಕೀಟನಾಶಕವು ಮನುಷ್ಯರಿಗೆ ಮಾರಕವೆಂದು ಪರಿಗಣಿಸಲ್ಪಟ್ಟಿತ್ತು. SEVIN ಅತ್ಯಂತ ನಿರಪಾಯಕಾರಿ Bhopal-Gas-Tragedy-2ಎಂದು ತೋರಿಸಲು ಯೂನಿಯನ್ ಕಾರ್ಬೈಡ್ ವಿಜ್ಞಾನಿಗಳು ಅದರ ಹರಳುಗಳನ್ನು ತಿನ್ನುವ ಚಿತ್ರಗಳು ಎಲ್ಲೆಡೆ ಪ್ರಕಟವಾದವು.

MIC ಯು SEVIN ತಯಾರಿಕೆಯ ಒಂದು ಪ್ರಮುಖ ಘಟಕ. ಅಂಥಾ ಪ್ರಬಲ ವಿಷಕಾರಕ ವಸ್ತುವಿನಿಂದ ನಿರಪಾಯಕಾರಿಯಾದ ವಸ್ತುವನ್ನು ತಯಾರಿಸಲು ಶಕ್ತನಾದ ಮಾನವ ಬುದ್ಧಿಮತ್ತೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಎನ್ನಬೇಕು. 1961 ರಲ್ಲಿ ಇಜಿಪ್ಟಿನ ಹತ್ತಿ ಬೆಳೆಯನ್ನು ಸಂರಕ್ಷಿಸಿ ಮಹಾನ್ ಆರ್ಥಿಕ ದುರಂತವನ್ನು ತಪ್ಪಿಸಿದ SEVIN ಒಮ್ಮೆಲೆ ಜಗದ್ವಿಖ್ಯಾತವಾಯಿತು.

60 ರ ದಶಕದಲ್ಲಿ ಭಾರತವು ಎಷ್ಟೊಂದು ಭೀಕರವಾಗಿ ಆಹಾರ ಧಾನ್ಯಗಳ ಕೊರತೆಯನ್ನು ಅನುಭವಿಸಿತೆಂದರೆ, ಆಗಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಜನರಿಗೆ ವಾರಕ್ಕೊಮ್ಮೆ ಉಪವಾಸಮಾಡಲು ಕರೆ ಕೊಡಬೇಕಾಯ್ತು. ಅಮೆರಿಕವು, ರೆಡ್‌ಕ್ರಾಸ್ ಸಂಸ್ಥೆಯ ಮುಖಾಂತರ PL 480 ರ ಅಡಿಯಲ್ಲಿ, ಹಸಿರು ಕ್ರಾಂತಿಯಯಿಂದ ಸ್ವಾವಲಂಬನೆ ಸಾಧಿಸಲು ಭಾರತಕ್ಕೆ 870 ಮೆಟ್ರಿಕ್ ಟನ್ನ್ ಗಳಷ್ಟು SEVIN ಕೀಟನಾಶಕವನ್ನು ಕಳುಹಿಸಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು UCIL ಕೃಶಿ ಕ್ಷೇತ್ರಕ್ಕೆ ಕಾಲಿಟ್ಟಿತು. ಇದಕ್ಕೆ ಬೇಕಾದ ಪರವಾನಿಗೆಗಳನ್ನು ಪಡೆದುಕೊಂಡು ಮೊದಮೊದಲು ಕಚ್ಛಾ SEVIN ನನ್ನು ಅಮದು ಮಾಡಿ ಅದಕ್ಕೆ ಸ್ಥಳೀಯವಾಗಿ ಲಭ್ಯವಿದ್ದ ಜಡ ಮಾಧ್ಯಮಗಳನ್ನು ಬೆರೆಸಿ ಸಂಸ್ಕರಿಸಿ ಮಾರತೊಡಗಿತು.

3. ವಿದೇಶಿ ವಿನಿಮಯದ ಬಿಕ್ಕಟ್ಟು

SEVIN ನ್ನು ಅಮದು ಮಾಡಿಕೊಳ್ಳಲು UCIL ಮಾತೃ ಸಂಸ್ಥೆಗೆ ಡಾಲರುಗಳಲ್ಲಿ ಹಣ ಸಂದಾಯ ಮಾಡಬೇಕಾಗಿತ್ತು. ಆ ಸಮಯದಲ್ಲಿ ಭಾರತ ವಿದೇಶಿ ವಿನಿಮಯದ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಅಲ್ಲದೆ, ಭಾರತದ ರಕ್ಷಣಾತ್ಮಕ ಕೈಗಾರಿಕ ನೀತಿಗೆ ವ್ಯತಿರಿಕ್ತವಾಗಿ UCIL, SEVIN ನನ್ನು ಅಮದು ಮಾಡಿಕೊಳ್ಳುತ್ತಿರುವುದು ಸರ್ಕಾರದ ಕಣ್ಣು ಕೆಂಪಗೆ ಮಾಡಿತ್ತು. ಅದನ್ನು ಸ್ಥಳೀಯವಾಗಿಯೇ ತಯಾರಿಸಲು ಸರ್ಕಾರ UCIL ಮೇಲೆ ಒತ್ತಡ ಹೇರತೊಡಗಿತು.

ಭಾರತಕ್ಕೆ ಡಾಲರುಗಳ ಕೊರತೆ ಹೊಸ ವಿದ್ಯಮಾನವಾಗಲಿ, ವಿವರಿಸಲು ಅಸಾಧ್ಯವಾದುದಾಗಲೀ ಆಗಿರಲಿಲ್ಲ. ಇದು ಭಾರತ ಸರ್ಕಾರವು ಸ್ವಾತಂತ್ರ ಸಿಕ್ಕ ದಿನಗಳಿಂದಲೇ Bhopal-Gas-Tragedy-1ಪಾಲಿಸಿಕೊಂಡು ಬಂದಿದ್ದ ದೋಷಪೂರಿತ ಆರ್ಥಿಕ ನೀತಿಯ ಪರಿಣಾಮವಾಗಿತ್ತು. ಬೆಲೆ ನಿಗದಿಗಳಂತ ವಿಚಾರ ಸರ್ಕಾರದ ವಿವೇಚನೆಗೆ ಒಳಪಟ್ಟ ವಿಚಾರವೆಂದು ಅದು ಭಾವಿಸಿತ್ತು. ಹಾಗೆಯೇ ಡಾಲರಿಗೆ ಎದುರಾಗಿ ರುಪಾಯಿ ಮೌಲ್ಯವನ್ನು ಕೃತಕವಾಗಿ ಏರಿಸಿ ವಿದೇಶಿ ವಿನಿಮಯದ ಕೊರತೆಯನ್ನು ಸೃಷ್ಟಿಸಿತ್ತು.

ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ಇತೆರ 38 ದೇಶಗಳಲ್ಲಿ ವ್ಯವಹರಿಸುತ್ತಿದ್ದರೂ ಅಮೆರಿಕಾದ ಹೊರಗೆ ಭೋಪಾಲಿನಲ್ಲಿ ಮಾತ್ರ ಅದು SEVIN ನನ್ನು ಉತ್ಪಾದಿಸುತ್ತಿತ್ತು. ಭಾರತದ ಕೈಗಾರಿಕಾ ನೀತಿ, ಮತ್ತು ವಿವೇಚನಾ ಕೊರತೆಯಿಂದಲ್ಲದೆ ಇಂತ ವಿಷಕಾರಕ ಘಟಕವನ್ನು ಇಲ್ಲಿ ಸ್ಥಾಪಿಸುವ ಅಗತ್ಯಗಳೇ ಇರಲಿಲ್ಲ. ಯಾವ ಬುದ್ಧಿವಂತ ದೇಶ ಕೂಡ ಇಂತ ಕೈಗಾರಿಕೆಗಳನ್ನು ತನ್ನ ನೆಲದಲ್ಲಿ ಸ್ಥಾಪಿಸಲು ಇಚ್ಛಿಸಲಾರದು.

4. ಉತ್ಪಾದನೆಯಲ್ಲಿ ಸರ್ಕಾರಿ ನಿಯಂತ್ರಣ

ಯೋಜನಾ ಆಯೋಗವು ಸಿದ್ಧಪಡಿಸಿದ ಬೇಡಿಕೆಯ ಅಂದಾಜಿನಂತೆ UCIL 500 ಮೆಟ್ರಿಕ್ ಟನ್ನ್ SEVIN ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿತು.

ಸರ್ಕಾರವು ಪರವಾನಿಗೆಯ ಜೊತೆಗೆ ಅನೇಕ ಶರತ್ತುಗಳನ್ನೂ ವಿಧಿಸಿತು. SEVIN ಉತ್ಪಾದಿಸಲು ?-ನಾಫ್ತಾಲ್ ಜೊತೆಗೆ MIC ಯೂ ಅಗತ್ಯವಿದ್ದು, ಇವೆರಡು ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಬೇಕಾಗಿತ್ತು.

ಯೂನಿಯನ್ ಕಾರ್ಬೈಡ್‌ಗೆ ಭಾರತದಲ್ಲಿ α-ನಾಫ್ತಾಲ್ ಘಟಕ ಸ್ಥಾಪಿಸುವ ಇಚ್ಛೆ ಇರಲಿಲ್ಲ. ಇದು SEVIN ಉತ್ಪಾದನೆಯಲ್ಲಿ ಬಿಟ್ಟರೆ ಬೇರಾವುದರಲ್ಲೂ ಉಪಯೋಗವಿರಲಿಲ್ಲ. SEVIN ಈಗಾಗಲೇ ಹನ್ನೆರಡು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದು ಕೀಟಗಳು ಪ್ರತಿರೋಧವನ್ನು ಬೆಳೆಸಿಕೊಂಡಿದ್ದವು. ಯೂನಿಯನ್ ಕಾರ್ಬೈಡ್ ಮತ್ತೊಂದು ಕೀಟನಾಶಕದ ತಯಾರಿಯಲ್ಲಿತ್ತು. ಅವರಿಗೆ ನಾಫ್ತಾಲಿನ ಅಗತ್ಯವಿರಲಿಲ್ಲ. UCIL ಗೆ ಅಗ್ಗವಾಗಿ α-ನಾಫ್ತಾಲ್ ಅಮದು ಮಾಡಿಕೊಳ್ಳುತ್ತಿರಬೇಕಾದರೆ ಅದನ್ನು ಉತ್ಪಾದಿಸುವ ಅಗತ್ಯ ಕಾಣುತ್ತಿರಲಿಲ್ಲ.

ಆದರೆ ಭಾರತ ಸರ್ಕಾರದ ಪ್ರಭುಗಳ, ಸರ್ಕಾರಿ ಬಾಬುಗಳ ತೀರ್ಮಾನ ಇಂತ ಲೆಕ್ಕಾಚಾರಗಳಿಗೆ ಹೊರತಾಗಿತ್ತು.

5. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಮತ್ತು ಭಾರತೀಕರಣ

ಕೈಗಾರಿಕರಂಗದಲ್ಲಿ ಭಾರತೀಕರಣವನ್ನು ಹೆಚ್ಚೆಚ್ಚು ಉತ್ತೇಜಿಸಲು ಶ್ರೀಮತಿ ಇಂದಿರಾ ಗಾಂಧಿಯವರು 1974 ರಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (FERA) ನ್ನು ತಂದರು. Bhopal-Gas-Tragedy-6ಇದರ ಪರಿಣಾಮ ಭಾರತದಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿ ತಂತ್ರಜ್ಞರ ಮೇಲೂ ಬೀರಿತು. ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳವನ್ನು 60% ರಿಂದ 50.9 % ಇಳಿಸಬೇಕಾಯಿತು. ಬಹಳಷ್ಟು ವಿದೇಶಿ ಕಂಪೆನಿಗಳು ಭಾರತದಿಂದ ಕಾಲ್ತೆಗೆದವು. 40% ಕಂಪೆನಿಗಳು 1973-1980 ರ ಮಧ್ಯೆ ಭಾರತವನ್ನು ತೊರೆದವು. ಇವುಗಳಲ್ಲಿ IBM ಮತ್ತು ಕೋಕಾಕೋಲ ಪ್ರಮುಖವಾದವು. ಇವುಗಳ ಮೇಲೆ ತಮ್ಮ ಉತ್ಪಾದನಾ ಗುಟ್ಟನ್ನೂ ಹಂಚಿಕೊಳ್ಳುವಂತೆ ಒತ್ತಡವನ್ನು ಹೇರಲಾಗಿತ್ತು. ಈಗ ಕಾಲ ಬದಲಾಗಿದೆ. ವಿದೇಶಿ ಹೂಡಿಕೆಯನ್ನು ಅರಸುತ್ತಾ ನಮ್ಮ ಹೊಸ ಪ್ರಧಾನಿಗಳು ದೇಶ ದೇಶಗಳನ್ನು ಸುತ್ತುತ್ತಿದ್ದಾರೆ!

UCIL ಗೆ ಹೊಸ ಕಾರ್ಖಾನೆಯ ವಿನ್ಯಾಸವನ್ನು UCC ಯಿಂದ ಅಮದು ಮಾಡಿಕೊಳ್ಳಲು ಅನುಮತಿಯನ್ನು ಕೊಟ್ಟರೂ ಅದನ್ನು ಸ್ಥಳೀಯವಾಗಿ ನಿರ್ಮಿಸುವಂತೆ ನೋಡಿಕೊಳ್ಳಲಾಯಿತು. UCC ಯನ್ನು ಆದಷ್ಟು ದೂರಕ್ಕೇ ನಿಲ್ಲಿಸಲಾಯಿತು. ಈ ಕಾರಣಕ್ಕಾಗಿ UCC ತನ್ನ ವಿನ್ಯಾಸ ವರ್ಗಾವಣೆ ಒಪ್ಪಂದದಲ್ಲಿ, ಯಾವುದೇ ದುರ್ಘಟನೆಗಳಿಗೆ ತಾನು ಹೊಣೆಯಲ್ಲ ಎಂಬ ಕಲಮನ್ನು ಸೇರಿಸಿ ಕಾನೂನಾತ್ಮಕ ಜವಬ್ದಾರಿಯಿಂದ ಕಳಚಿಕೊಂಡಿತು. ಒಂದು ವೇಳೆ ಭೋಪಾಲ್ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗೆ ಒಡಂಬಡಿಕೆ ಜರುಗದಿದ್ದ ಪಕ್ಷದಲ್ಲಿ ಖಂಡಿತವಾಗಿಯೂ UCC ಒಂದು ನಯಾಪೈಸೆ ಪರಿಹಾರವನ್ನು ಕೊಡದೇ ಪಾರಾಗುತ್ತಿತ್ತು.

6. ಆಟದ ನಿಯಮಗಳಲ್ಲಿ ಹಟಾತ್ತ್ ಬದಲಾವಣೆ

70 ರ ದಶಕದಲ್ಲಿ ಭಾರತ ಸರ್ಕಾರವು ಎರಡನೇ ದರ್ಜೆಯ ಕೀಟ ನಾಶಕಗಳನ್ನು ತಯಾರಿಸುವ ಉತ್ಪಾದಕರನ್ನು ಉತ್ತೇಜಿಸಿ ಪ್ರೋತ್ಸಾಹಿಸತೊಡಗಿತು. ಇವು SEVIN ನ ಅರ್ಧ ಬೆಲೆಗೆ ಮಾರಾಟವಾಗುತ್ತಿದ್ದವಷ್ಟೇ ಅಲ್ಲದೆ ಸರ್ಕಾರದ ಸಬ್ಸಿಡಿಯನ್ನೂ ಪಡೆಯುತ್ತಿದ್ದವು. ಇದರಿಂದಾಗಿ SEVIN ನ ಉತ್ಪಾದನೆ 1000 ಮೆ.ಟ., ಗೆ ಕುಸಿಯಿತು. ಯೋಜನಾ ಆಯೋಗದBhopal-Gas-Tragedy-5 ಅಂದಾಜಿನಂತೆ ಅದರ ಬೇಡಿಕೆ ಅದರ 5 ರಷ್ಟಾಗಬೇಕಿತ್ತು!

7. ರಾಜಕೀಯ ಕಾರಣಗಳು

SEVIN ಉತ್ಪಾದನಾ ಘಟಕಕ್ಕೆ ಅನುಮತಿಯನ್ನಿತ್ತಾಗ ಅದರ ಸುತ್ತಮುತ್ತ ಯಾವುದೇ ವಸತಿ ಪ್ರದೇಶಗಳಿರಲಿಲ್ಲ. ನಗರ ಬೆಳೆದಂತೆ ಕಾರ್ಖಾನೆಯ ಸುತ್ತ ವಸತಿ ಪ್ರದೇಶವೂ ಹಬ್ಬಿತು. UCIL ನ ವಿರೋಧದ ನಡುವೆಯೂ ಸ್ಥಳೀಯ ಆಡಳಿತ ಪಕ್ಷಗಳು ವೋಟಿಗಾಗಿ ಸ್ಲಂ ನಿವಾಸಿಗಳಿಗೆ ಖಾತೆಗಳನ್ನು ಮಾಡಿಕೊಟ್ಟವು.

ಇದಕ್ಕಿನ್ನ ನಾಚಿಕೆಗೆಟ್ಟ ವಿಷಯವೆಂದರೆ 1985 ರ ಭೋಪಾಲ್ ಅನಿಲ ಸೋರಿಕೆ ದುರಂತ ಕಾಯ್ದೆಯ ರಚನೆ ಮತ್ತು UCIL ನಲ್ಲಿ 25% ಬಂಡವಾಳ ಹೊಂದಿದ್ದು ಅದರ ಆಡಳಿತ ಮಂಡಳಿಯಲ್ಲಿದ್ದ ಸರ್ಕಾರಕ್ಕೇ UCC ಮೇಲೆ ಸಂತ್ರಸ್ತರ ಪರವಾಗಿ ದಾವೆ ಹೂಡುವ ಅಧಿಕಾರ ವಹಿಸಿಕೊಟ್ಟಿದ್ದು! ನ್ಯಾಯಲಯದ ಹೊರಗಿನ ಒಪ್ಪಂದದಂತೆ UCC ಸಂತ್ರಸ್ತರಿಗೆ 750 ಕೋಟಿ ರುಪಾಯಿಗಳನ್ನು ಕೊಡಲು ಒಪ್ಪಿಕೊಂಡಿತಾದರೂ ಸರ್ಕಾರ ಯಾವುದೇ ನೈತಿಕ, ಆರ್ಥಿಕ ಜವಬ್ದಾರಿಗಳಿಂದ ನುಣುಚಿಕೊಂಡಿತು.

ಕೇಂದ್ರಿಕೃತ ಯೋಜನೆಗಳ ವೈಫಲ್ಯಕ್ಕೆ ಭೋಪಾಲ್ ಕಾರ್ಖಾನೆ ಒಂದು ಜ್ವಲಂತ ಉಧಾಹರಣೆಯಾಗಿದೆ. ಇಂತ ವ್ಯವಸ್ಥೆಗಳಲ್ಲಿ ಸರ್ಕಾರಗಳಿಗೆ ಯಾವುದೇ ಜವಾಬ್ದಾರಿಗಳಿರುವುದಿಲ್ಲ. ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರುಕಟ್ಟೆ ಶಿಸ್ತಿನ ನಿಯಂತ್ರಣವಿರುವುದಿಲ್ಲ.

ಭೋಪಾಲ್ ರಸಾಯನಿಕ ಘಟಕವು ಯಾವತ್ತಿಗೂ ಲಾಭಕರವಾಗಿರಲಿಲ್ಲ. 1948 ರಲ್ಲೇ 4 ಮಿಲಿಯನ್ ಡಾಲರುಗಳಷ್ಟು ನಷ್ಟವನ್ನು ಹೊಂದಿ ಅದರ ಬಹಳಷ್ಟು ನಿಪುಣ ಕೆಲಸಗಾರರು ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗಿದ್ದರು. UCIL ಮತ್ತು UCC ಮಧ್ಯೆ ಕೊಂಡಿಯಾಗಿದ್ದವನೆಂದರೆ ವಾರೆನ್ ವೂಮರ್. ಇವನು ಒಬ್ಬ ದಕ್ಷ ಇಂಜಿನಿಯರನಾಗಿದ್ದು ಬಹಳಷ್ಟು ಭಾರತದ ಇಂಜಿನಿಯರುಗಳಿಗೆ UCC ಯ ವರ್ಜೀನಿಯ ಕಾರ್ಖಾನೆಯಲ್ಲಿ ತರಬೇತಿ ನೀಡಿದ್ದ. ಇವನು ಭೋಪಾಲ್ ಘಟಕ ಪ್ರಾರಂಭವಾದ 1980 ನೇ ವರ್ಷದಿಂದ 1982 ರ ವರೆಗೆ UCIL ನಲ್ಲಿ ನಿರ್ವಾಹಕನಾಗಿದ್ದ. 1982 ರಲ್ಲಿ ವಿದೇಶಿ ವಿನಿಮಯ ಕಾಯ್ದೆಯ ಭಾರತೀಕರಣ ನೀತಿಯಂತೆ ವಾರೆನ್ ವೂಮರ್ ಅಮೆರಿಕಾಕ್ಕೆ ವಾಪಸ್ಸು ಹೋಗಬೇಕಾಯಿತು. ಇದರ ಬಳಿಕ ಈ ಘಟಕವನ್ನು ನಡೆಸಲು UCIL ಉತ್ಸಾಹ ಕಳೆದುಕೊಂಡಿತು. ಅದನ್ನು ಮುಚ್ಚಲು ಅದು ಯೋಚಿಸಿತ್ತು.

ವರ್ಜೀನಿಯ ಕಾರ್ಖಾನೆಯ ಮೂಲ ನಕ್ಷೆಯನ್ನು ಯಥಾವತ್ತಾಗಿ ಪಾಲಿಸದೆ ಹೆಚ್ಚುವರಿ ಉಧ್ಯೋಗಗಳನ್ನು ಸೃಷ್ಟಿಸಲು ಹೋಗಿ ಆನೇಕ ಸ್ವಯಂಚಾಲಿತ ವಿಧಾನಗಳನ್ನು ಕೈಬಿಟ್ಟು ಮಾನವ ಪ್ರಮಾದಗಳನ್ನು ಹೆಚ್ಚಿಸುವಂತ ವಿನ್ಯಾಸಗಳಿಗೆ ಅನುವು ಮಾಡಿಕೊಡಲಾಯಿತು. ಅಲ್ಲದೆ ಆದಷ್ಟು ಬೇಗ UCC ಸಹಯೋಗವನ್ನು ಕಡಿತಗೊಳಿಸಲು ಸ್ಥಳೀಯ ಘಟಕಕ್ಕೆ ಒತ್ತಡ ಹೇರಲಾಯಿತು. ಕೊನೆಗೆ ಇದನ್ನು ಜನವರಿ 1985 ರ ವರೆಗೆ ವಿಸ್ತರಿಸಲಾಯಿತು. 1984 ರ ಡಿಸೆಂಬರಿನಲ್ಲಿ ದುರಂತ ಜರುಗಿತು.

ಇದಾದ ನಂತರ ದೇಶದಲ್ಲಿ ಕೈಗಾರಿಕಾ ಸುರಕ್ಷತೆ ಮಾನದಂಡಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಆದರೆ ಥಾಮಸ್ ಸೊವೆಲ್ಲ್ ಕೇಳುವಂತೆ ಮೂಲಭೂತ ಪ್ರಶ್ನೆ ‘ಯಾವುದು ಅತ್ಯಂತ ಸುರಕ್ಷತಾ ವಿಧಾನ’ವೆಂಬುದಲ್ಲ, ಆದರೆ ಅದನ್ನು ನಿರ್ಧರಿಸುವವರು ಯಾರೆಂಬುದು. ಅದು ತಾಂತ್ರಿಕವಾಗಿ ಅನಕ್ಷರಸ್ತರಾದ ಬ್ಯೂರಾಕ್ರಟ್‌ಗಳು ಮತ್ತು ರಾಜಕಾರಣಿಗಳು ನಡೆಸುವ ಸರ್ಕಾರಗಳೇ? ಈ ಸರ್ಕಾರಗಳು ಕೆಟ್ಟದಾಗಿ ನಿರ್ಮಿಸಿ, ಅದಕ್ಕಿನ್ನ ಕೆಟ್ಟದಾಗಿ ನಿರ್ವಹಿಸುತ್ತಿರುವ ರಸ್ತೆಗಳಿಂದ ದಿನನಿತ್ಯ ನೂರಾರು ಜನರನ್ನು ಕೊಲ್ಲುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ನಿಯಂತ್ರಿತ ಅರ್ಥ ವ್ಯವಸ್ಥೆಯನ್ನು ನಡೆಸುತ್ತಿರುವ ನಮ್ಮ ಸರ್ಕಾರಕ್ಕೆ ಯಾವುದು ಸುರಕ್ಷಿತವೆಂಬ ಜ್ಞಾನವೇ ಇಲ್ಲ. ಆದರೂ ಜನರನ್ನು ಕತ್ತಲೆಯಲ್ಲಿಟ್ಟು ಈ ರಾಜಕಾರಣಿಗಳು ಮತ್ತು ಬ್ಯೂರಾಕ್ರಟ್‌ಗಳು ಕೈಗಾರಿಕೋಧ್ಯಮದ ಪ್ರತಿ ಹಂತವನ್ನೂ ನಿಯಂತ್ರಿಸುತ್ತಿದ್ದಾರೆ. ದಿನೇ ದಿನೇ ಬದಲಾಗುತ್ತಿರುವ ಔಧ್ಯಮಿಕ ವಾತಾವರಣದಲ್ಲಿ ಮಾರುಕಟ್ಟೆಯನ್ನು ಕದಡುತ್ತಿರುವ ತನ್ನ ನೀತಿಗಳ ಪರಿಣಾಮಗಳನ್ನು ಸರ್ಕಾರವೆಂಬುದು ಖಂಡಿತವಾಗಿಯೂ ಊಹಿಸಲಾರದು.

ಅನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುರಕ್ಷತೆಯು ಉಧ್ಯಮದ ಜವಾಬ್ದಾರಿಯಾಗಿರುತ್ತದೆ. ಇದಕ್ಕೆಂದೇ ಪರಿಣಿತವಾದ ಒಂದು ಮೂರನೇ ವ್ಯವಸ್ಥೆ ಸುರಕ್ಷತೆಯನ್ನು Bhopal-Gas-Tragedy-4ಪರೀಕ್ಷಿಸಿ, ಮಾನದಂಡಗಳನ್ನು ನಿರ್ಧರಿಸಿ ಉಧ್ಯಮಕ್ಕೆ ಸರ್ಟಿಫಿಕೆಟ್ ಕೊಡುತ್ತದೆ. ಈ ವ್ಯವಸ್ಥೆ ಕೂಡ ಈಗಿನ ಸರ್ಕಾರಿ ವ್ಯವಸ್ಥೆಯಂತೆ ಭ್ರಷ್ಟಗೊಳ್ಳುವ ಸಾಧ್ಯತೆಯಿದ್ದರೂ, ಹೆಚ್ಚು ಕಾಲ ಉಳಿಯುವುದಿಲ್ಲ. ಮಾರುಕಟ್ಟೆ ಅದನ್ನು ಹೊರದೂಡುತ್ತದೆ. ರಾಜಕಾರಣಿಗೆ ಲಂಚ ಕೊಟ್ಟರೆ ಅವನ ಜವಬ್ದಾರಿ ತನ್ನನ್ನು ಆರಿಸಿದ ಜನರಿಗೆ ಮಾತ್ರ ಸೀಮಿತವಾಗಿರುತ್ತದೆ. ಅವನು ಅದೇ ಲಂಚದಿಂದ ಮತ್ತೆ ಆರಿಸಿ ಬರುತ್ತಾನೆ.

ಅಸುರಕ್ಷಿತ ಉಧ್ಯಮಗಳು ಯಾವತ್ತೂ ಲಾಭಕರವಲ್ಲ. ಉಸಿರು ಗಟ್ಟಿಸುವ ಭೋಪಾಲ್ ಘಟಕದ ವಾತಾವರಣವನ್ನು ತೊರೆದು ಹೋದ ಆನೇಕ ತಾಂತ್ರಿಕ ಸಿಬ್ಬಂಧಿಯಂತೆ ಅಸುರಕ್ಷಿತ ಉಧ್ಯಮಗಳು ತಮ್ಮ ನಿಷ್ಣಾತ ಸಿಬ್ಬಂದಿಗಳನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗುವುದಿಲ್ಲ. ಕಾನೂನು ಸಮರಗಳು, ಪರಿಹಾರ ಪ್ಯಾಕೇಜುಗಳು ಉಧ್ಯಮದ ಧೃತಿಗೆಡಿಸಬಲ್ಲವು. ಅಸುರಕ್ಷಿತ ಉಧ್ಯಮಗಳು ಯಾವತ್ತಿಗೂ ಸುರಕ್ಷಿತವಾಗಲಾರವು.

ದಶಕಗಳಿಂದ ಭಾರತೀಕರಣ, ಕೈಗಾರಿಕಾ ರಕ್ಷಣೆಯಿಂದಾಗಿ ಕಳಪೆ ವಸ್ತುಗಳಿಂದ ಗ್ರಾಹಕರಿಗೆ ವಂಚಿಸಿ ಕಳಪೆ ಉದ್ದಿಮೆದಾರರನ್ನು ಪೋಷಿಸಿಕೊಂಡು ಬರಲಾಗಿದೆ. ನಿಪುಣ ಸ್ಥಳೀಯ ಕೆಲಸಗಾರರು ಲಭ್ಯವಿದ್ದರೆ ವಿದೇಶಿ ಹೂಡಿಕೆದಾರರಿಗೆ ಲಾಭಕರ. ಅಂತ ನೈಪುಣ್ಯತೆ ಇಲ್ಲಿಯವರಿಗೆ ಇರದಿದ್ದರೂ ಅವರಿಗೆ ತರಬೇತಿ ನೀಡಿ ತಯಾರುಮಾಡುವುದು ಕೂಡ ಅವರ ಹಿತಾಸಕ್ತಿಗನುಗುಣವಾಗಿರುತ್ತದೆ. ಇದಕ್ಕೆ ನಿರ್ಬಂಧಗಳನ್ನು ಹೇರುವುದು ದೂರದೃಷ್ಟಿಯಲ್ಲ. ಶಿಕ್ಷಣದಂತೆ ಉಧ್ಯಮದಲ್ಲೂ ಕೂಡ ಉತ್ಕೃಷ್ಟತೆ ಸ್ಪರ್ಧೆಯಿಂದ ಮಾತ್ರ ಸಾಧ್ಯ.

ವಿಚಾರಗಳಿಗೆ ಜೀವ ಕೊಟ್ಟಾಗ ಅವು ವಿಶೇಷ ಘಟನೆಗಳಾಗುತ್ತವೆ. ಅವು ತಮ್ಮಷ್ಟಕ್ಕೇ ಜೀವತಳೆಯುವುದಿಲ್ಲ. ಸಾಮಾನ್ಯವಾಗಿ ನಾವು ಕಾಣುವುದು ನಾವು ನೋಡಿದ, ಕೇಳಿದ ವಿಚಾರಗಳಿಗಷ್ಟೇ ಸೀಮಿತವಾಗಿರುತ್ತದೆ. ಘಟನೆಗಳ ಹಿಂದಿರುವ ವಿಚಾರಗಳನ್ನು ಕೆದಕಲು ನಾವು ಹೋಗುವುದಿಲ್ಲ. ಒಂದು ಅಮೂರ್ತ ವಿಚಾರ ಮನುಷ್ಯನಿಗೊಂದು ರೋಬೋಟನ್ನು ನಿರ್ಮಿಸಲು ಪ್ರೇರೇಪಿಸಿ ಅದನ್ನು ಧೂಮಕೇತುವಿನ ಮೇಲೆ ಇಳಿಸಲೂ ಅಥವಾ ದುರಂತಕ್ಕೆ ಕಾರಣವಾಗಲೂ ಶಕ್ತವಾಗಿರುತ್ತದೆ

ಇಂತಾದೊಂದು ವಿಚಾರ ಇಲ್ಲಿದೆ.
‘.. ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಿದಾಗ ನಮ್ಮ ದೇಶದಲ್ಲೇ ತಯಾರಾದ ಎರಡನೇ ದರ್ಜೆ ವಸ್ತು, ಅಮದು ಮಾಡಿಕೊಳ್ಳುವ ಮೊದಲನೇ ದರ್ಜೆಯ ವಸ್ತುವಿಗಿಂತ ಮಿಗಿಲು.’ ಜವಹರ್‌ಲಾಲ್ ನೆಹರು (1950 ರ ಒಂದು ಭಾಷಣದಿಂದ)

ಇಂತ ಸಿದ್ಧಾಂತದ ಕುರುಡು ಪಾಲನೆ ಭೋಪಾಲ್ ದುರಂತದ ಬಹುಪಾಲು ಜವಬ್ದಾರಿಯನ್ನು ಹೊರಬೇಕಾಗುತ್ತದೆ.

[“Moneylife” news magazine ಇವರ online news letter ನಿಂದ. (3/12/14) ‘7 ways the government played a role in the Bhopal disaster’ ಇದರ ಅನುವಾದ. ಮೂಲ ಲೇಖಕರು: Ravi Kiran / Shamanth Jilla.]

ನ್ಯಾ.ಕೃಷ್ಣ ಅಯ್ಯರ್ ನಿಧನ: ಅವರಿಂದ ಕಲಿಯಬೇಕಾದ ಪಾಠಗಳು

– ಶಿವರಾಮ್ ಕೆಳಗೋಟೆ

ಇಂದಿರಾ ಗಾಂಧಿ ಸಂಸತ್ತಿಗೆ ಆಯ್ಕೆಯಾದುದನ್ನು ಅಲಹಾಬಾದ್ ನ್ಯಾಯಾಲಯ ಅನೂರ್ಜಿತಗೊಳಿಸಿದ ನಂತರ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ನಿರೀಕ್ಷೆಯಂತೆ ಇಂದಿರಾ ಗಾಂಧಿ ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದರು. ಅವರ ಅರ್ಜಿ ರಜಾ ಕಾಲದ ನ್ಯಾಯಾಧೀಶರಾದ ವಿ.ಆರ್.ಕೃಷ್ಣ ಅಯ್ಯರ್ ಅವರ ಮುಂದೆ ವಿಚಾರಣೆಗೆ ಬರುವುದಿತ್ತು. ಅದನ್ನು ಅರಿತ ಅಂದಿನ ಕಾನೂನು ಮಂತ್ರಿ ಹೆಚ್.ಆರ್.ಗೋಖಲೆ ಅಯ್ಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಾನು ನಿಮ್ಮನ್ನು ಭೇಟಿ ಮಾಡಲು ಬರಬಹುದೇ ಎಂದು ಕೇಳುತ್ತಾರೆ. ಅವರ ಭೇಟಿಯ ಉದ್ದೇಶದ ಬಗ್ಗೆ ಗುಮಾನಿ ಇದ್ದ ಅಯ್ಯರ್ ಅವರು “ನೀವು ಅಲಹಾಬಾದ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿದ್ದರೆ ನೇರವಾಗಿ ಸುಪ್ರಿಂ ಕೋರ್ಟ್ ಗೆ ಹೋಗಿ. ನನ್ನ ಮನೆಗೆ ಬರುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.

ನ್ಯಾಯಾಂಗ ಅಕಾಡೆಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಗೋಖಲೆಯವರೊಂದಿಗೆ ಅಯ್ಯರ್ ಅವರಿಗೆ ಆತ್ಮೀಯತೆ ಇತ್ತು. krishna-iyerಅದೇ ಆತ್ಮೀಯತೆ ಹಿನ್ನೆಲೆಯಲ್ಲಿ ಮನೆಯಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದಿರಬಹುದು. ಆದರೆ ಅಯ್ಯರ್ ಅಂತಹ ಪ್ರಯತ್ನಕ್ಕೆ ಸೊಪ್ಪು ಹಾಕಲಿಲ್ಲ. ನಂತರದ ಎರಡು ದಿನಗಳಲ್ಲಿ ಅರ್ಜಿ ವಿಚಾರಣೆಗೆ ಬಂತು. ಅಯ್ಯರ್ ಅವರು ನೀಡಿದ ತೀರ್ಪು ಇತಿಹಾಸ ಸೃಷ್ಟಿಸಿತು. ಅದೇ ತೀರ್ಪಿನಿಂದ ಕ್ರುದ್ಧರಾದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವ ನಿರ್ಧಾರ ಕೈಗೊಂಡರು ಎಂದು ವಿಶ್ಲೇಷಿಸುವವರಿದ್ದಾರೆ.

ನೂರು ವರ್ಷಗಳ ಕಾಲ ಬದುಕಿ ಅಯ್ಯರ್ ನಿನ್ನೆ ಮೌನವಾಗಿದ್ದಾರೆ. ನ್ಯಾಯಾಧೀಶರಾಗಿ ನಿವೃತ್ತಿಯಾದ ನಂತರವೂ ಸಮಕಾಲೀನ ಆಗುಹೋಗುಗಳಿಗೆ, ಅದರಲ್ಲೂ ಮುಖ್ಯವಾಗಿ ನ್ಯಾಯಾಲಯ ವ್ಯವಸ್ಥೆಯ ಬಗ್ಗೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬಂದವರು. ಸಾಮಾನ್ಯ ಜನತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಳ್ಳುವಂತಹ ಘಟನೆಗಳು ಆಗಾಗ ನಡೆಯುತ್ತಿರುವ ಈ ಹೊತ್ತಿನಲ್ಲಿ ಅಯ್ಯರ್ ಇನ್ನಿಲ್ಲ. ಬಲಾಢ್ಯರಿಂದ ಅನ್ಯಾಯಕ್ಕೆ ಒಳಗಾದ ಮಹಿಳೆ ಕೊಟ್ಟ ದೂರನ್ನು ‘ಮುಚ್ಚಿದ ಲಕೋಟೆಯಲ್ಲಿಡಿ’ ಎಂದು ಆದೇಶಿಸುವ, ಬೆಂಗಳೂರಿನಲ್ಲಿ ದುಬಾರಿ ಬೆಲೆಯ ನಿವೇಶನದ ಆಸೆಗೆ ನ್ಯಾಯ ಬಲಿಕೊಡುವ ನ್ಯಾಯಾಧೀಶರುಗಳು, ಒಮ್ಮೆ ಅಯ್ಯರ್ ಜೀವನಗಾಥೆಯನ್ನು ಓದಬೇಕು. ಆಗಲಾದರೂ ಅವರಿಗೆ ತಾವು ಕುಳಿತಿರುವ ಸ್ಥಾನದ ಮಹತ್ವ ಅರ್ಥವಾದೀತು!

ಕೃಷ್ಣ ಅಯ್ಯರ್ ತಂದೆ ವಕೀಲರು. ಇವರೂ ವಕೀಲಿ ವೃತ್ತಿ ಆರಂಭಿಸಿದರು. ವೃತ್ತಿಯ ಆರಂಭದ ದಿನಗಳಲ್ಲಿಯೇ ಕೂಲಿ ಕಾರ್ಮಿಕರ ಕೇಸುಗಳ ವಕೀಲರಾಗಿ ಜನಪ್ರಿಯರಾದರು. ಬಡವರ ಬಗ್ಗೆ ಕಾಳಜಿ, ಶೋಷಿತರಿಗೆ ನ್ಯಾಯ ಕೊಡಿಸುವ ವೃತ್ತಿ ಪರತೆ ಅವರಿಗೆ ಜನಮನ್ನಣೆ ತಂದು ಕೊಟ್ಟಿತು. ಅದೇ ಕಾರಣಕ್ಕೆ ಅವರು ಜನಪ್ರತಿನಿಧಿಯಾಗಿ ಮದ್ರಾಸ್ ಪ್ರಾಂತ್ಯಕ್ಕೆ ಆಯ್ಕೆಯಾದರು. ನಂತರ ಇ.ಎಂ.ಎಸ್. ನಂಬೂದರಿಪಾದ್ ನೇತೃತ್ವದ ಕಮುನಿಸ್ಟ್ ಪಕ್ಷದ ಸರಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಗಳಾದ ಗೃಹ, ನೀರಾವರಿ ಹಾಗೂ ವಿದ್ಯುತ್ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಂಪುಟದಲ್ಲಿ ಸಚಿವರಾಗಿ ಭೂಸುಧಾರಣೆ ಕಾಯಿದೆ ತಂದು ಅದನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಇವರ ಶ್ರಮ ದೊಡ್ಡದು. ನಂತರ ನ್ಯಾಯಾಧೀಶರಾದರು. ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಸ್ಮರಣೀಯ ಕೆಲಸ ಮಾಡಿದರು.

ಕಾನೂನು ವಿದ್ಯಾರ್ಥಿಗಳು ತಮ್ಮ ವ್ಯಾಸಾಂಗದ ಕಾಲದಲ್ಲಿ, ಪ್ರಾಕ್ಟೀಸ್ ಕಾಲದಲ್ಲಿ ಆಗಾಗ ನೆನಪಿಸಿಕೊಳ್ಳುವ ಕೆಲವೇ ಕೆಲವು ಪ್ರಮುಖ ನ್ಯಾಯಾಧೀಶರುಗಳಲ್ಲಿ ಅವರು ಪ್ರಮುಖರು. ಅವರ ಜೀವನ ಸಾವಿರಾರು ಯುವ ವಕೀಲರಿಗೆ ಸ್ಪೂರ್ತಿ. ಅವರ ಬದುಕು ಕಲಿಸುವ ಪಾಠದಿಂದ ನೋವುಂಡ ಸಮುದಾಯಗಳಿಗೆ ವಕೀಲ ಸಮುದಾಯ ನ್ಯಾಯ ಕೊಡಿಸುವ ಕೆಲಸ ಮಾಡಿದರೆ ಅವರ ಜೀವನಾವಧಿಯ ಉದ್ದೇಶ ಸಾರ್ಥಕವಾದೀತು.