ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ: ರೈತರಿಗೆ ನೇಣಿನ ಕುಣಿಕೆ – ಸರ್ವಾಧಿಕಾರಿ ಆಡಳಿತ ಅಂದ್ರೆ ಇದಲ್ಲದೆ ಮತ್ತೇನು..?

– ಸದಾನಂದ ಲಕ್ಷ್ಮೀಪುರ

ರೈತರ ಸರಣಿ ಆತ್ಮಹತ್ಯೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಮಹಾರಾಷ್ಟ್ರ ವಿದರ್ಭ ಪ್ರದೇಶದ ಅಕೋಲ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಸಂಜಯ್ ಧೋತ್ರೆ ಮೊನ್ನೆ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿದ್ದರು. ಅವರು ಹೇಳಿದ್ದು ರೈತರು ತಮ್ಮ ಸಾಮರ್ಥ್ಯದಿಂದ ಕೃಷಿ farmers-suicideಮಾಡಲಾಗದಿದ್ದರೆ, ಸಾಯಲಿ ಬಿಡಿ. ಹಾಗೆ ಹೇಳಿದ್ದು ರೈತರ ಕಾರ್ಯಕ್ರಮವೊಂದರಲ್ಲಿ. ಸಭೆಯಲ್ಲಿ ಹಾಜರಿದ್ದ ಕಂದಾಯ ಸಚಿವ ಏಕನಾಥ್ ಖಡ್ಸೆ ತನ್ನ ಪಕ್ಷದ ಸಂಸದನ ಮಾತಿಗೆ ಸಮ್ಮತಿ ಸೂಚಿಸುವ ಧಾಟಿಯಲ್ಲಿ ತಲೆದೂಗಿದ್ದರು.

ಅದೇ ಹೊತ್ತಿಗೆ ಕೇಂದ್ರ ಸರಕಾರದ ಕ್ಯಾಬಿನೆಟ್ 2013 ರ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತೀರ್ಮಾನಿಸಿತು. ಕ್ಯಾಬಿನೆಟ್ ತೀರ್ಮಾನದಂತೆ, ರಕ್ಷಣಾ, ಇಂಧನ, ಗ್ರಾಮೀಣ ವಸತಿ, ಕೈಗಾರಿಕಾ ಕಾರಿಡಾರ್ ಒಳಗೊಂಡಂತೆ ಕೆಲ ವಲಯಗಳಲ್ಲಿನ ಹೂಡಿಕೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮಾಲೀಕರ/ರೈತರ ಸಮ್ಮತಿ ಕೇಳುವ ಅಗತ್ಯವಿಲ್ಲ. ಅಷ್ಟೇ ಅಲ್ಲ ಅಂತಹ ಯೋಜನೆಯಿಂದ ಆಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯವೂ ಇಲ್ಲ. ಮತ್ತಷ್ಟು ನೇರ ಮಾತುಗಳಲ್ಲಿ ಹೇಳುವುದಾದರೆ, ರೈತ ತನ್ನ ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಂಡು, ಯಾವಾಗ ಯಾವ ಯೋಜನೆಗೆ ತನ್ನ ಭೂಮಿ ಸ್ವಾಧೀನ ಆಗುತ್ತದೆಯೋ ಎಂದು ಆತಂಕದಲ್ಲಿರಬೇಕಾಗುತ್ತದೆ. ಭಾರತದ ಅತಿ ದೊಡ್ಡ ದುಡಿವ ವರ್ಗವಾದ ರೈತರ ಹಿತಕ್ಕೆ ಧಕ್ಕೆ ತರುವಂತಹ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಸುಗ್ರೀವಾಜ್ಞೆ ಮೂಲಕ ತರುವ ಕ್ರಮವೇ ಆಡಳಿತದಲ್ಲಿರುವವರ ದುರುದ್ದೇಶವನ್ನು ಸೂಚಿಸುತ್ತದೆ. ತೀರಾ ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆ ಮೂಲಕ ಕಾನೂನನ್ನು ಜಾರಿಗೆ ತರಲು ಅವಕಾಶ ಇದೆ. ಆದರೆ, ಇಂತಹ ರೈತವಿರೋಧಿ ಕಾನೂನನ್ನು ಜಾರಿಗೆ ತರುವಲ್ಲಿ ಸರಕಾರ ತೋರಿಸುತ್ತಿರುವ ತುರ್ತು ಆತಂಕಕಾರಿ.

ಇಂತಹದೊಂದು ಕಾನೂನು ಜಾರಿಗೆ ಬಂದನಂತರದ ಪರಿಣಾಮಗಳನ್ನು ಎಂಥಹವರೂ, ಸರಳ ಬುದ್ಧಿಮತ್ತೆಯಿಂದ ಊಹಿಸಬಲ್ಲರು.farmer-land-acquisition ಬ್ರಿಟಿಷರ ಆಡಳಿತ ಅವಧಿಯಲ್ಲಿ ಸ್ಥಳೀಯರ ಮಾತಿಗೆ ಬೆಲೆ ಇರಲಿಲ್ಲ ಹಾಗೂ ಯೋಜನೆಗಳಿಗೆ ಅಗತ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಮಾಲೀಕರ, ಅನುಭವಿಸುತ್ತಿರುವವರ ಸಮ್ಮತಿ ಕೇಳುವ ಪರಿಪಾಠ ಇರಲಿಲ್ಲ. ಈಗ ಮತ್ತದೇ ಪರಿಸ್ಥಿತಿ ಮರುಕಳಿಸುತ್ತಿದೆ ಅಂದರೆ, ಮತ್ತೆ ದಾಸ್ಯದೆಡೆಗೆ.

ಸದ್ಯ ಜಾರಿಯಲ್ಲಿರುವ ಕಾನೂನನ್ನು ದುರುಪಯೋಗ ಮಾಡಿಕೊಂಡು ತಮ್ಮ ರಾಜಕೀಯ ಕಾರಣಗಳಿಗಾಗಿ ಹಲವು ಬಡವರ ಭೂಮಿಯನ್ನು ಬಲಾಢ್ಯರು ವಿವಿಧ ಯೋಜನೆ ಹೆಸರಿನಲ್ಲಿ ವಶ ಪಡಿಸಿಕೊಂಡು ಸಾಕಷ್ಟು ಕಷ್ಟ ಕೊಟ್ಟಿದ್ದಾರೆ. ಹೊಳೆನರಸೀಪುರ ಎಂಬ ಊರಿನೊಂದಿಗೆ ಸಂಪರ್ಕ ಇಟ್ಟಕೊಂಡ ಯಾರಿಗೇ ಆಗಲಿ, ಸೂರನಹಳ್ಳಿಯ ಬಗ್ಗೆ ಗೊತ್ತಿರುತ್ತದೆ. ಹೊಳೆನರಸೀಪುರದಿಂದ ಕೂಗಳತೆ ದೂರದಲ್ಲಿ ಇರುವ ಹಳ್ಳಿ ಸೂರನಹಳ್ಳಿ. ಫಲವತ್ತಾದ ಜಮೀನು. ಹೇಮಾವತಿ ನೀರಿನ ಅನುಕೂಲ ಇರುವುದರಿಂದ ರೈತರು ಭತ್ತ ಬೆಳೆಯುವರು. ಇಂತಹ ಫಲವತ್ತಾದ ಜಮೀನಿನ ಪೈಕಿ 88 ಎಕರೆ ಪ್ರದೇಶವನ್ನು 1997 ರಲ್ಲಿ ಅಂದಿನ ಜನತಾದಳ ಸರಕಾರ ಆಶ್ರಯ ಮನೆಗಳಿಗೆಂದು ಪುರಸಭೆ ರೂಪಿಸಿದ್ದ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿತು. ಅಂದಿನಿಂದ ಇದುವರೆವಿಗೂ ರೈತರು ತಮ್ಮ ಭೂಮಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಹೊಳೆನರಸೀಪುರ ಪಟ್ಟಣದಲ್ಲಿ ಇದೇ ಯೋಜನೆಗೆ ಸೂಕ್ತವಾದ ಜಮೀನು ಲಭ್ಯವಿತ್ತು, ಆದರೂ ಅಲ್ಲಿಯ ಶಾಸಕರಿಗೆ ಸೂರನಹಳ್ಳಿಯ ಜಮೀನೇ ಆಗಬೇಕು.

ರೈತರು ನ್ಯಾಯಾಲಯದ ಮೊರೆ ಹೋದರು. ಪುರಸಭೆ ಮೇಲ್ಮನವಿ ಸಲ್ಲಿಸಲು ಆರ್ಥಿಕವಾಗಿ ಶಕ್ತಿ ಹೊಂದಿತ್ತು. ಆದರೆ ರೈತರ ಪಾಡೇನು? ಎಸ್.ಎಂ.ಕೃಷ್ಣ ಸರಕಾರ ಆಡಳಿತಕ್ಕೆ ಬಂದಾಗ ಪುರಸಭೆಯಲ್ಲಿ ಕಾಂಗ್ರೆಸ್ ನ ಆಡಳಿತವಿತ್ತು. ಅವರು ಯೋಜನೆಯನ್ನು ಕೈ ಬಿಡುವ ನಿರ್ಣಯ ಕೈಗೊಂಡರು. ಆ ನಿರ್ಣಯದ ಆಧಾರದ ಮೇಲೆ ಸರಕಾರ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿತು (ಡಿನೋಟಿಫಿಕೇಶನ್). ಆ ಹೊತ್ತಿಗೆ ರೈತರು ನಿಟ್ಟುಸಿರು ಬಿಟ್ಟರು. guj-agricultureಆದರೆ, ಅಲ್ಲಿಗೆ ಮುಗಿಯಲಿಲ್ಲ. ನಂತರ ಜೆಡಿಎಸ್-ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಆಡಳಿತದ ಅವಧಿಗಳಲ್ಲಿ ಪುರಸಭೆಯ ನಿರ್ಧಾರಗಳು ಬದಲಾದವು. ಡಿನೋಟಿಫಿಕೇಶನ್ ವಿರುದ್ಧ ಪುರಸಭೆ ಕಾನೂನು ಸಮರ ಸಾರಿತು.

ರೈತರು ತಾಂತ್ರಿಕವಾಗಿ ದಾಖಲೆಗಳಲ್ಲಿ ತಮ್ಮ ಭೂಮಿಯ ಮೇಲಿನ ಮಾಲೀಕತ್ವ ಕಳೆದುಕೊಂಡಿದ್ದರೂ, ಭೂಮಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಅವರೇ ಕೃಷಿ ಮುಂದುವರಿಸಿದ್ದರು. ಆದರೆ, ದಾಖಲೆಗಳ ಪ್ರಕಾರ ಹಕ್ಕುದಾರರಲ್ಲದ ಕಾರಣ ಜಮೀನಿನ ಆಧಾರದ ಮೇಲೆ ಸಾಲ ಪಡೆಯುವುದಾಗಲಿ, ಮಾರಾಟ ಮಾಡಿ ಮನೆಯಲ್ಲಿ ಆಗಬೇಕಿರುವ ಮದುವೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಹಣ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ಸಲ್ಲಿಸುವಾಗ, ಜಮೀನು ಪುರಸಭೆಯ ಸ್ವಾಧೀನದಲ್ಲಿದೆ ಎಂದು ತಪ್ಪು ವರದಿ ಕೊಟ್ಟರು. ಇಷ್ಟೆಲ್ಲಾ ತೊಡಕುಗಳ ಹೊರತಾಗಿಯೂ ರೈತರು ಹೋರಾಡುತ್ತಲೇ ಬಂದರು. ನ್ಯಾಯಾಲಯ ಕಳೆದ ವರ್ಷ ಹೊರಡಿಸಿದ ತನ್ನ ಅಂತಿಮ ಆದೇಶದಲ್ಲಿ ಜಮೀನಿನ ಖಾತೆಯನ್ನು ರೈತರಿಗೆ ವರ್ಗಾಯಿಸಬೇಕೆಂದು ಆದೇಶ ನೀಡಿತು. ಆದರೂ ಸ್ಥಳೀಯ ಅಧಿಕಾರಿಗಳು ಆದೇಶವನ್ನು ಜಾರಿಗೆ ತರಲು ಹಿಂದೇಟು ಹಾಕಿದರು. ಹಗಲು-ರಾತ್ರಿ ಪ್ರತಿಭಟನೆ ನಡೆಸಿ ಖಾತೆಗಳನ್ನು ವರ್ಗ ಮಾಡಿಸಿಕೊಳ್ಳುವಲ್ಲಿ ರೈತರು ಯಶಸ್ವಿಯಾದರು. ಈ ಹದಿನೇಳು ವರ್ಷಗಳಲ್ಲಿ ಅನೇಕ ರೈತರು ಅಸುನೀಗಿದ್ದಾರೆ. ಹಲವು ಮನೆಗಳಲ್ಲಿ ಮದುವೆಗಳು ಮುಂದೆ ಹೋಗಿವೆ. ಮನೆ ಕಟ್ಟಬೇಕೆಂದುಕೊಂಡವರು ಈ ಕಾರಣಕ್ಕಾಗಿ ಸುಮ್ಮನಾಗಿದ್ದಾರೆ. ಅವರ ಪಾಲಿಗೆ ಹದಿನೇಳು ವರ್ಷಗಳು ಕರಾಳ ದಿನಗಳು!

ಇಷ್ಟಕ್ಕೆಲ್ಲಾ ಕಾರಣ ಸೂರನಹಳ್ಳಿಯ ಜನ ಸಾರಸಗಟಾಗಿ ಒಂದು ಪಕ್ಷಕ್ಕೆ ಮತಹಾಕುತ್ತಾ ಬಂದಿದ್ದಾರೆ. ಅವರಿಗೆ ಪಾಠ ಕಲಿಸಬೇಕು. ಹೀಗೆ ಪಾಠ ಕಲಿಸಲು ಹೊರಟವರು ಯಾರೆಂದು ಹೊಳೆನರಸೀಪುರ ಮಹಿಮೆ ಗೊತ್ತಿರುವ ಯಾರಿಗೇ ಆಗಲಿ ಊಹಿಸುವುದು ಕಷ್ಟ ಅಲ್ಲ. farmer-land-acquisition-2ಇಲ್ಲಿ ಆ ವ್ಯಕ್ತಿ ಮತ್ತು ಅವರ ಪಕ್ಷ ಮುಖ್ಯವಲ್ಲ. ಒಂದು ಉದಾಹರಣೆಯಾಗಿ ಮಾತ್ರ ಈ ಘಟನೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದ ನೂರಾರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಅನೇಕ ಘಟನೆಗಳು ಇದ್ದೇ ಇರುತ್ತವೆ. ಇಲ್ಲಿ ರಾಜಕೀಯ ದುರುದ್ದೇಶದ ಕಾರಣಕ್ಕೆ ರೈತರಿಗೆ ಹಿಂಸೆ ಕೊಡಲು ಪ್ರಯತ್ನಿಸಿದ ನಾಯಕರ ಪಕ್ಷಕ್ಕೆ ಸೇರಿದವರೇ ಮತ್ತೊಂದೆಡೆ ನೊಂದವರಾಗಿರಬಹುದು.

ಒಟ್ಟಿನಲ್ಲಿ ಅನೇಕ ಕಡೆ ಇಂತಹವರಿದ್ದಾರೆ. ಸದ್ಯ ಜಾರಿಯಲ್ಲಿರುವ ಕಾನೂನಿನಡಿಯಲ್ಲಿಯೇ ರೈತರಿಗೆ ಇಷ್ಟೆಲ್ಲಾ ಕಷ್ಟ ಕೊಡುವ ಇವರು, ಮುಂದೆ ರೈತರ ಸಮ್ಮತಿಯ ಅಗತ್ಯವೇ ಇಲ್ಲ ಎನ್ನುವ ಕಾನೂನು ಜಾರಿಯಾದರೆ ಏನೆಲ್ಲಾ ಮಾಡಬಹುದು? ತಮಗೆ ಆಗದವರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲೆಂದೇ ಹಲವು ಯೋಜನೆಗಳನ್ನು ರೂಪಿಸಬಹುದು. ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕೆಂದೇನೂ ಇಲ್ಲ. ಸಂಬಂಧಪಟ್ಟವರಿಗೆ ಕಷ್ಟ ಕೊಟ್ಟರೆ ಸಾಕು, ಉದ್ದೇಶ ಈಡೇರಿದಂತೆ. ಅಂದಹಾಗೆ ಹೊಳೆನರಸೀಪುರದಲ್ಲಿ ಕಳೆದ 17 ವರ್ಷದಿಂದ ಆಶ್ರಯ ಯೋಜನೆ ಜಾರಿಯಾಗಲೇ ಇಲ್ಲ! ಸೂರು ಇಲ್ಲದವರಿಗೆ ನೆಲೆ ಒದಗಿಸುವುದೇ ಮುಖ್ಯ ಉದ್ದೇಶವಾಗಿದ್ದರೆ, ಅಧಿಕಾರದಲ್ಲಿರುವವರು ಎಲ್ಲಿಯಾದರೂ ಯೋಜನೆಯನ್ನು ಪೂರ್ಣಗೊಳಿಸಬೇಕಿತ್ತು. repeal-land-acquisitionಆದರೆ, ಅವರ ಗುರಿ ಸೂರು ಇಲ್ಲದವರಿಗೆ ಮನೆ ಕೊಡಿಸುವುದಾಗಿರಲಿಲ್ಲ, ಬದಲಿಗೆ ಸೂರನಹಳ್ಳಿಯವರಿಗೆ ಪಾಠ ಕಲಿಸುವುದು!

ಆದರೆ ಇಂತಹ ಜನವಿರೋಧಿ ಕಾನೂನಿಗಾಗಿ ಸುಗ್ರೀವಾಜ್ಞೆ ರೂಪುಗೊಳ್ಳುತ್ತಿದ್ದರೆ, ನಮ್ಮ ಮಾಧ್ಯಮಗಳು (ಎಲ್ಲವೂ ಅಲ್ಲ) ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳುವುದೇ ಇಲ್ಲ. ಬದಲಿಗೆ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ ಇಂತಹ ಕ್ರಮಗಳು ಅಗತ್ಯ ಎಂಬ ಧಾಟಿಯಲ್ಲಿ ವರದಿ ಒಪ್ಪಿಸಿ ಸುಮ್ಮನಾಗುತ್ತವೆ. ಹೇಗೂ ಪ್ರತಿದಿನದ ಸಂಜೆಯ ಪಾನೆಲ್ ಚರ್ಚೆಗಳಿಗೆ ಬೇಕಾದಷ್ಟು ವಿಚಾರಗಳು ಇದ್ದೇ ಇವೆಯಲ್ಲ. ರೈತರ ದನಿ ಕೇಳುವವರಾರು? ಅಚ್ಚೇ ದಿನಗಳೆಂದರೆ ಇವೇ ನೋಡಿ. ಹೂಡಿಕೆ ಮಾಡಲು ಬರುವವರಿಗೆ ಅಚ್ಚೇ ದಿನ.

ಉಳುವವನೇ ಒಡೆಯ ಎಂಬ ಕಾನೂನು ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಜಾರಿಯಾದ ಕಾರಣ ಸಾವಿರಾರು ಕುಟುಂಬಗಳು ಜಮೀನು ಹೊಂದುವಂತಾಯ್ತು. ಆದರೆ ಈಗ ಬಂಡವಾಳ ಹೂಡಿಕೆ ಮಾಡುವವರೇ ಒಡೆಯರು! ಹಿಂದೂ ಧರ್ಮ ಉಳಿಸುವ ಮಹತ್ಕಾರ್ಯಕ್ಕಾಗಿ ಎಲ್ಲಾ ಕಡೆ ಸಭೆ ನಡೆಸುವ ಮಹಾಶಯರೇ, ನಿಮ್ಮ ಲೆಕ್ಕಾಚಾರದ ಪ್ರಕಾರವೇ ಹೋದರೂ, ಈ ನೆಲದ ಅತಿಹೆಚ್ಚು ರೈತರು ಹಿಂದೂಗಳು. ಅವರ ಬಗ್ಗೆ ಒಂದಿಷ್ಟು ಯೋಚಿಸಿ.

6 thoughts on “ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ: ರೈತರಿಗೆ ನೇಣಿನ ಕುಣಿಕೆ – ಸರ್ವಾಧಿಕಾರಿ ಆಡಳಿತ ಅಂದ್ರೆ ಇದಲ್ಲದೆ ಮತ್ತೇನು..?

  1. Salam Bava

    A Very good and timely article,ಮೀಡಿಯಾ ಮತ್ತು ನಮೋ ಭಕ್ತರು, Modiji ಅವರು ಪ್ರಧಾನಿಯಾದರೆ ಭಾರತದ ದಿಕ್ಕೇ ಬದಲಾಗುತ್ತದೆ ಎಂದು ಜನರಲ್ಲಿ ಹುಸಿ ಭಾವನೆಯನ್ನು ತುಂಬಿಸಿದ್ದ ಇವರು ಈಗ ಆಗಿದ್ದಾದರೂ ಏನು ಎಂಬುದರ ಬಗ್ಗೆ ತಿಳಿದಿದ್ದಾರೆಯೇ…?
    ಮೋದಿ ಸರಕಾರ ಉಭಯ ಸದನದಲ್ಲಿ ಚರ್ಚಿಸದೆ ಭೂ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಹೊರತರುವ ಅತ್ಯಂತ ನೀಚ ಬುದ್ದಿಯನ್ನು ಪ್ರದರ್ಶಿಸಿದೆ..ಹಿಂದಿನ ಸರಕಾರ ಯೋಜನೆಗಳಿಗೆ ಕೃಷಿ ಭೂಮಿ ಸ್ವಾಧೀನಪಡಿಸಬೇಕಾದರೆ ಕಠಿಣ ನಿಯಮಗಳನ್ನು ರೂಪಿಸಿತ್ತು ,ಆದರೆ ಅಭಿವೃದ್ದಿಯ ಹರಿಕಾರ(?) ಮೋದಿಜಿ ಇವೆಲ್ಲವುಗಳನ್ನು ಗಾಳಿಗೆ ತೂರಿ,ರೈತರ ಭೂ ಸ್ವಾಧೀನ ಪಡಿಸಲು ನಿಯಮಗಳನ್ನು ಅತ್ಯಂತ ಸುಲಭಗೊಳಿಸಿದೆ,ಈ ಮೂಲಕ ರೈತರ ಧ್ವನಿಯನ್ನು ಅಡಗಿಸಿ,ತನ್ನದು ಕಾರ್ಪರೇಟ್ ಪರ ಎಂದು ಘಂಟಾಘೋಷ ತಿಳಿಯ ಪಡಿಸಿದ್ದಾರೆ..
    ಬಿಜೆಪಿಯ ಪೋಷಕ ಸಂಘಟನೆ ಆರೆಸ್ಸೆಸ್ ಸೇರಿದಂತೆ ಮೋದಿ ಭಕ್ತರು ಇದರ ಗಂಭೀರತೆಯನ್ನು ಅರಿಯದೆಯೋ ಅಥವ ಅರಿತು ಸುಮ್ಮನಾಗಿರೋದು ದೇಶಕ್ಕೆ ಮಾಡುವ ದ್ರೋಹವಾಗಿದೆ…ದೇಶ ವಿರೋಧಿ ಧೋರಣೆಗಳ ವಿರುದ್ದ ಪ್ರತಿಪಕ್ಷಗಳು-ದೇಶದ ಶೋಷಿತ ಶಕ್ತಿಗಳು-ರೈತರು ಮುಂದಾಗಬೇಕಾದ ತುರ್ತು ಅಗತ್ಯವಿದೆ .
    ನ್ನೆ NDTV ಯಲ್ಲಿ ಒಂದು Talk show ದಲ್ಲಿ ತೋರಿಸಿದ ಹಾಗೆ ಮೋದಿಜಿಯವರು ಇನ್ನು ೫ ವರ್ಷ ತಮ್ಮ ಅವಧಿ ಪೂರ್ತಿ ಗೊಳಿಸುವದೊರಲ್ಗೆ ಇಂಡಿಯಾ ಒಂದು ವೆಲ್ಫೇರ್ ಸ್ಟೇಟ್ ನಿಂದ ಕೇವಲ ಕಾರ್ಪೊರೇಟ್ ಸ್ಟೇಟ್ ಆಗಿ ಮಾರುವ ಸಾದ್ಯತೆ ತುಂಬಾ ಹೆಚ್ಚಿದೆ . ಲಾಂಗ್ ಲೈವ್ ಇಂಡಿಯಾ .

    Reply
  2. Anonymous

    ಯಾವಾಗಳು ಇಂದಿರಾಗಾಂಧಿ ಅವರ emergency ಬಗ್ಗೆ ಮಾತನಾಡುವ ಇವರು ಇವತ್ತು ಬರೀ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರುತ್ತಿದ್ದಾರೆ . ಇದು ಒಂದತರ emergency ಅಲ್ಲವೇ ?

    Reply
  3. Reader

    ಸಮಯೋಚಿತ ಉತ್ತಮ ಬರಹ, ಬಿಜೆಪಿ ಸ೦ಸದ ಹಾಗೆ ಹೇಳಿದರಲ್ಲಿ ಅಚ್ಚರಿಪಡಬೇಕಿಲ್ಲ, ಏಕೆ೦ದ್ರೆ ಗೋ ಮಾತೆಯ ರಕ್ಷಣೆ, ನೈತಿಕ ಪೋಲಿಸ್,, ಏಕ ಸಿವಿಲ್ ಕೋಡ್, ಪಠ್ಯ ಪುಸ್ತಕ ಬದಲಾವಣೆ, ಘರ್ ವಾಪಸಿ, ಬಹು ಲಾವೊ ಬೇಟಿ ಬಚಾವೊ ಮು೦ತಾದ ಅಸ೦ಬದ್ಧ ಕಾರ್ಯಕ್ರಮಗಳ ಜಾರಿಗೆ ಸರಕಾರ ಮತ್ತು ಪರಿವಾರ ಆಸಕ್ತವಾಗಿದೆಯೇ ಹೊರತು ಈ ನಾಡಿನ ಬೆನ್ನೆಲುಬಾದ ರೈತನ ಬದುಕಿನ ಕುರಿತು ಅಧ್ಯಯನ ನಡೆಸಿದ೦ತೆ ಕಾಣುತ್ತಿಲ್ಲ. ಆದ್ದರಿ೦ದಲೇ ಪ್ರತಿಯೊಬ್ಬ ರೈತನು ಆತ್ಮಹತ್ಯೆ ಮಾಡುವಾಗಲೂ ಸರಕಾರದ ಆಲೋಚನೆಯ ಸರಹದ್ದಿನಲ್ಲಿ ಈ ವಿಷಯ ನಗನ್ಯವಾಗಿದೆ, ಹಾಗಾಗಿ ಬ೦ಡವಾಳ ಶಾಹಿಗಳ ಮಟ್ಟಿಗೆ ನಿಜವಾಗಿಯೂ ಅಚ್ಚೇ ದಿನ್ ಮತ್ತು ಬಡ ರೈತರ ಮಟ್ಟಿಗೆ ಬೂರಾ ದಿನ್

    Reply
  4. M A Sriranga

    ಸಲಾಂ ಬಾವಾ ಅವರಿಗೆ—ಸುಗ್ರೀವಾಜ್ಞೆಯ ಅವಧಿ ಕೇವಲ ಆರು ತಿಂಗಳು ಮಾತ್ರ. ಅಷ್ಟರೊಳಗೆ ಉಭಯ ಸದನಗಳಲ್ಲಿ ಆ ವಿಧೇಯಕವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು. ಆಗ ಆ ಆಜ್ಞೆಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಸಾಧಕ ಬಾಧಕಗಳ ಬಗ್ಗೆ ಗಮನಹರಿಸಿ, ಕೆಲವೊಂದು ಬದಲಾವಣೆಗಳೂ ನಡೆಯುತ್ತದೆ. ಹೀಗಾಗಿ ರೈತರಾಗಲೀ, ಜನಸಾಮಾನ್ಯರಾಗಲೀ,ಪರಿಸರವಾದಿಗಳಾಗಲೀ ಆತಂಕ ಪಡಬೇಕಾದ ಅಗತ್ಯವಿಲ್ಲ.

    Reply
  5. Salam Bava

    ಶ್ರೀರಂಗ ಅವರೇ ,ಅದರ ಅರಿವು ನನಗಿದೆ . ಆದರೆ ಇಷ್ಟು ತರಾತುರಿಯಲ್ಲಿ ಸುಗ್ರಿವಾಜ್ಞೆಯ ಮೂಲಕ ವಿದೇಯಕ ತಂದು ಜ್ಯಾರಿ ಮಾಡುವ ಅಗತ್ಯವೇನಿತ್ತು . ಇದು ಅದಾನಿಯಂತಹ ಭಂಡವಾಳಶಾಹಿಗಳ ತುರ್ತು ಅಗತ್ಯ ಪೂರೈಸಲು ಜ್ಯಾರಿ ಮಾಡಿದ್ದೇ ? ರಾಜ್ಯಸಬೆಯಲ್ಲಿ ವಿದೇಯಕವನ್ನು ಮಂಡಿಸಿದರೆ ಸರ್ಕಾರಕ್ಕೆ ಸೋಲುವ ಭೀತಿಯಿತ್ತು . ಇನ್ನು ಆರು ತಿಂಗಳೊಳಗೆ ಅವರು ಈ ತಿದ್ದುಪಡಿಯನ್ನು ಸಂಸತ್ತಿನ ಜಂಟಿ ಅದಿವೇಶನ ಕರೆದು ಮಂಡಿಸುತ್ತಾರೆ,ಮತ್ತು ಅತೀ ಹೆಚ್ಹಿನ ಬಹುಮತದಿಂದ ಅದು ಪಾಸಾಗುತ್ತದೆ,ಸರಕಾರಕ್ಕೆ ಜಂಟಿಯಾಗಿ ಸುಲಭ ಬಹುಮತ ಲಭ್ಯವಿದೆ . . ಇದೆಲ್ಲಾ ಪ್ರಿಪ್ಲಾನ್ಡ್ .-

    Reply

Leave a Reply

Your email address will not be published. Required fields are marked *