Daily Archives: January 6, 2015

ದೋಣಿ ಧ್ವಂಸ ಪ್ರಕರಣ: ಉತ್ತರ ಇಲ್ಲದ ಪ್ರಶ್ನೆಗಳು…

– ಶಿವರಾಜ್

ನಿಮಗೆ ನೆನಪಿರಬಹುದು. ಅಂದು ಅಕ್ಟೋಬರ್ 27, 2006. ಮೈಸೂರಿನ ಪೊಲೀಸರು ಇಬ್ಬರು ಶಂಕಿತ “ಉಗ್ರರನ್ನು” ನಾಟಕೀಯ ಸನ್ನವೇಶದಲ್ಲಿ ಬಂಧಿಸುತ್ತಾರೆ. ಅವರು ಫಹಾದ್ (24) ಮತ್ತು ಮೊಹಮ್ಮದ್ ಅಲಿ ಹುಸೇನ್ (24). ಬಂಧನ ಆಗುವಾಗ ಗುಂಡಿನ ಚಕಮಕಿ ಆಯಿತು. ಮೈಸೂರಿನ ಜನ ಭಯಭೀತರಾಗಿದ್ದರು. ಅಲ್ ಬದರ್ ಸಂಘಟನೆ ಜೊತೆ ಅವರು ಗುರುತಿಸಿಕೊಂಡಿದ್ದರು, ಕರ್ನಾಟಕದ ಹಲವೆಡೆ ದುಷ್ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದರು ಎಂಬ ವರದಿಗಳು ಅಕ್ಟೋಬರ್ 27 ಹಾಗೂ 28ರ ದಿನಪತ್ರಿಕೆಗಳಲ್ಲಿ ಪ್ರಕಟವಾದವು.

ಈಗ ಎಂಟು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. vikrantakarnataka-nikhil-gowda-Oct2606ಆ ಘಟನೆ ನಡೆದ ಒಂದು ದಿನದ ಹಿಂದೆಯಷ್ಟೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಮಗ ನಿಖಿಲ್ ಗೌಡ ಸುದ್ದಿಯಲ್ಲಿದ್ದರು. ನಿಖಿಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಳಗಿನ ಜಾವ 2 ಗಂಟೆಯಲ್ಲಿ ಚರ್ಚ್ ಸ್ಟ್ರೀಟ್ ಹೊಟೇಲ್ ಒಂದಕ್ಕೆ ಹೋಗಿ ಚಿಕನ್ ಸರ್ವ್ ಮಾಡಿ ಎಂದು ಕೇಳಿದ್ದಾರೆ. ತಿನಿಸುಗಳೆಲ್ಲಾ ಖಾಲಿಯಾಗಿದೆ ಎಂದು ಹೊಟೇಲ್‌ನವರು ಹೇಳಿದ್ದ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಕೆಲ ಗ್ಲಾಸುಗಳು ಪುಡಿಪುಡಿಯಾದವು. ನಂತರ ಇದೇ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾದವು. ಅಕ್ಟೋಬರ್ 26 ರ ಬೆಳಗಿನ ಜಾವ ನಡೆದ ಘಟನೆಯಾದ್ದರಿಂದ, ಅದೇ ದಿನ ಸುದ್ದಿವಾಹಿನಿಗಳಲ್ಲಿ ಮಾತ್ರ ಅದು ಸುದ್ದಿಯಾಯಿತು. ಆಗ ವಾಹಿನಿಗಳು ಈಗಿನಷ್ಟು ಪ್ರಭಾವಿಯಾಗಿರಲಿಲ್ಲ.

ಆದರೆ ಅದೇ ದಿನ ರಾತ್ರಿ 10.30 ರ ಸುಮಾರಿಗೆ ಈ ಎನ್‌ಕೌಂಟರ್ ನಾಟಕ ಮೈಸೂರಿನಲ್ಲಿ ನಡೆಯಿತು. ನಾಟಕ ಏಕೆಂದರೆ, ಅಂದು ಗುಂಡಿನ ಚಕಮಕಿ ಮೂಲಕ ಬಂಧನವಾದ ಆ ಇಬ್ಬರು ಯುವಕರು ಆ ಹೊತ್ತಿಗಾಗಲೇ ಪೊಲೀಸರ ಅನಧಿಕೃತ ಕಸ್ಟಡಿಯಲ್ಲಿ ಇಪ್ಪತ್ತು ದಿನ ಕಳೆದಿದ್ದರು. ಬಂಧನದ ನಾಟಕದ ನಂತರ ಆ ಹುಡುಗರು ಬಾಡಿಗೆಗಿದ್ದ ಮನೆಯ TheHinduMysoreಮಾಲೀಕರೇ “ಅರೇ ಈ ಹುಡುಗ್ರಾ..20 ದಿನದ ಹಿಂದೆನೇ ಪೊಲೀಸರು ಬಂದು ಹಿಡ್ಕೊಂಡು ಹೋಗಿದ್ರು. ಈಗ ಮತ್ತೆ ಎನ್ ಕೌಂಟರ್ ಆಯ್ತಾ..?” ಎಂದು ಮಾಧ್ಯಮದವರ ಮುಂದೆ ಪ್ರಶ್ನೆ ಮಾಡಿದ್ದರು. (http://www.thehindu.com/todays-paper/albadr-terrorist-plot-unearthed/article3066969.ece)

ಇದೇ ಘಟನೆಯ ಹಿನ್ನೆಲೆಯಲ್ಲಿ ಒಂದು ಇಂಟರೆಸ್ಟಿಂಗ್ ಮಾಹಿತಿ ಇದೆ. ಅದೇ ದಿನ ಕೆಲ ಪತ್ರಕರ್ತರಿಗೂ ಮಾಹಿತಿ ಗೊತ್ತಾಗಿದೆ. ಸಿಟಿ ಎಡಿಷನ್‌ಗಾಗಿ ಸಾಧ್ಯವಾದಷ್ಟು ಸುದ್ದಿ ಕಳುಹಿಸಿದ್ದಾರೆ. ಬಹುತೇಕ ಪತ್ರಿಕೆಗಳಲ್ಲಿ ಅದು ಒಂದು ಕಾಲಂನಷ್ಟು ಮಾತ್ರ ವರದಿಯಾಗಿತ್ತು. ಹೆಚ್ಚು ವಿವರವಾಗಿ ಕಳುಹಿಸಲು ಯಾರಿಗೂ ಸಮಯ ಇರಲಿಲ್ಲ ನೋಡಿ. ಘಟನೆ ನಡೆದದ್ದೇ 10.30 ರಾತ್ರಿ ಆದರೆ, ಪತ್ರಕರ್ತರಿಗೆ ತಿಳಿಯಲು ಒಂದು ಗಂಟೆಯಾದರೂ ಬೇಕು. ಆ ನಂತರ ಖಾತ್ರಿ ಪಡಿಸಿಕೊಂಡು, ಕಚೇರಿಗೆ ಸುದ್ದಿ ಮುಟ್ಟಿಸುವಲ್ಲಿ ತುಂಬಾ ತಡವಾಗುತ್ತದೆ. ರಾತ್ರಿಯೆಲ್ಲಾ ಇದೇ ಸುದ್ದಿಯ ಹಿಂದೆ ಬಿದ್ದಿದ್ದ ಪತ್ರಕರ್ತರಿಗೆ outlook-Nov1306-nikhil-gowdaಪೊಲೀಸರು ಪತ್ರಿಕಾಗೋಷ್ಟಿ ನಡೆಸಿ ಅಧಿಕೃತವಾಗಿ ಮಾಹಿತಿ ನೀಡುವ ಹೊತ್ತಿಗೆ ಮಾರನೆಯ ದಿನ (ಅಕ್ಟೋಬರ್ 27) ಬೆಳಗಾಗಿತ್ತು. ಪತ್ರಿಕಾ ಗೋಷ್ಟಿ ಮುಗಿಸಿಕೊಂಡು ಮನೆಗೆ ಹೋದವರಿಗೆ ಅಚ್ಚರಿ ಕಾದಿತ್ತು. ಆ ಹೊತ್ತಿಗೆ ಮನೆಗೆ ಬಂದಿದ್ದ ರಾಜ್ಯ ಮಟ್ಟದ ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಅದೇ ಘಟನೆ ಲೀಡ್ ಸುದ್ದಿಯಾಗಿ ಮುಖಪುಟದಲ್ಲಿ ಸಾಕಷ್ಟು ವಿವರವಾಗಿ ಪ್ರಕಟವಾಗಿತ್ತು!

ಆಗ ಪತ್ರಿಕಾ ವಲಯದಲ್ಲಿ ದಟ್ಟವಾಗಿ ಹರಡಿದ್ದ ಮಾತುಗಳನ್ನು ನಂಬುವುದಾದರೆ, ಅಂದು ರಾತ್ರಿ ನಡೆದ ಘಟನೆ ಬಗ್ಗೆ ಆ ಪತ್ರಿಕೆಯ ಪ್ರತಿಭಾವಂತ ಸಂಪಾದಕರಿಗೆ ಆ ಮೊದಲೇ ಮಾಹಿತಿ ಇತ್ತು. ಮೈಸೂರಿನ ತಮ್ಮ ವರದಿಗಾರರಿಗೆ ಆ ಬಗ್ಗೆ ಮೊದಲೇ ಹೇಳಿ, ಇಂತಹದೊಂದು ಘಟನೆ ನಡೆಯುವುದಿದೆ. ಆ ಬಗ್ಗೆ ನಿಗಾ ಇಡಿ ಎಂದು ಸೂಚಿಸಿದ್ದರು. ಹಾಗೂ ಮುಕ್ಕಾಲು ಪಾಲು ಸುದ್ದಿಯನ್ನು ಅವರೇ ಬೆಂಗಳೂರಿನಲ್ಲಿ ಕೂತು, ಬಹುಶಃ ಘಟನೆ ನಡೆಯುವ ಹೊತ್ತಿಗಾಗಲೇ, ರೆಡಿ ಮಾಡಿದ್ದರು! ನಂತರದ ದಿನಗಳಲ್ಲಿ ಎಲ್ಲಾ ಸುದ್ದಿ ಮಾಧ್ಯಮಗಳು ಆ ಇಬ್ಬರು ಬಂಧನವಾದವರ ಹಿನ್ನೆಲೆ, ದೂರಾಲೋಚನೆಗಳನ್ನು ಹುಡುಕುತ್ತಾ ಹೊರಟರು. ಹೊಟ್ಟೆಗೆ ಕೂಳಿಲ್ಲದೆ, ಚರ್ಚ್ ಸ್ಟ್ರೀಟ್ ನಲ್ಲಿ ಅನ್ನಕ್ಕಾಗಿ ಬಡಿದಾಡಿದವರ ಸುದ್ದಿ ಮೂಲೆ ಸೇರಿತು.

ಇದೇ ಧಾಟಿಯಲ್ಲಿ ಇರುವ ಮತ್ತೊಂದು ಘಟನೆ ನೆನಪಾಗುತ್ತಿದೆ. ಅದು ನಡೆದದ್ದು 1998 ರಲ್ಲಿ.

ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ತನ್ನ ಕಚೇರಿಯಲ್ಲಿ ಯುವತಿಯೊಂದಿಗೆ ಹೊಂದಿದ್ದ ಸಂಬಂಧದ ಕಾರಣ ವಿವಾದಕ್ಕೆ ಸಿಲುಕಿರುತ್ತಾರೆ. ಕಾಂಗ್ರೆಸ್ ಆತನ ತಪ್ಪುಗಳನ್ನು ಸಾರುವ ವರದಿಯೊಂದನ್ನು ಬಿಡುಗಡೆ ಮಾಡುವ ಮುನ್ನಾ ದಿನ (ಡಿಸೆಂಬರ್ 16, 1998), ಬಿಲ್ ಕ್ಲಿಂಟನ್ ಇರಾಕ್ ರಾಷ್ಟ್ರದ ಮೇಲೆ ವಾಯುದಾಳಿಗೆ ಆದೇಶಿಸುತ್ತಾರೆ. ಕಾಂಗ್ರೆಸ್ ನ ರಿಪಬ್ಲಿಕ್ ಪಾರ್ಟಿ ಸದಸ್ಯರು ಆಗ, ಕ್ಲಿಂಟನ್ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ದಾಳಿ ನಡೆಸಿದರು ಎಂದು ಆರೋಪಿಸುತ್ತಾರೆ. ಆ ಹೊತ್ತಿಗೆ ಕ್ಲಿಂಟನ್ ವಿರುದ್ಧ ಇಂಪೀಚ್ಮೆಂಟ್ ಪ್ರಕ್ರಿಯೆ ಆರಂಭವಾಗಿರುತ್ತೆ. (http://www.politico.com/news/stories/1207/7390.html)

ಅಧಿಕಾರದಲ್ಲಿರುವವರು ಮುಜುಗರದ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಆಗಾಗ ಇಂತಹ ಪ್ರಕರಣಗಳನ್ನು ಸೃಷ್ಟಿಸುತ್ತಾರೆ. ಪೊಲೀಸರ ಭಾಷೆಯಲ್ಲಿ ಹೇಳುವುದಾದರೆ, ಇವೆಲ್ಲವೂ ‘ಅಟೆಂಷನ್ ಡೈವರ್ಶನ್ ಪ್ರಕರಣಗಳು” – ಗಮನ ಬೇರೆಡೆಗೆ ಸೆಳೆದು ಕಳುವು, ಮೋಸ ಮಾಡುವ ಕೃತ್ಯಗಳು. ಬ್ಯಾಂಕ್ ನಿಂದ ಹಣವನ್ನು ಆಗಷ್ಟೆ ಬಿಡಿಸಿ ತರುವವರ ಮೈಮೇಲೆ ಏನನ್ನೋ ಎಸೆದು, ಅವರ ಗಮನ ಅತ್ತ ಹೋದಾಗ ಕೈಯಲ್ಲಿದ್ದ ಬ್ಯಾಗನ್ನು ಎತ್ತಿಕೊಂಡ ಪ್ರಕರಣಗಳು ಗೊತ್ತಲ್ಲ. ಈ ಅಧಿಕಾರಸ್ಥರು ಇಂತಹದೇ ಪ್ರಕರಣಗಳನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಮೋಸ ಹೋಗುವವರ ಸಂಖ್ಯೆಯೂ ದೊಡ್ಡದೇ.

ಸದ್ಯ ಒಂದು ವಾರದಿಂದ ನರೇಂದ್ರ ಮೋದಿ ಸರಕಾರ ಅಲ್ಲಲ್ಲಿ ಟೀಕೆಗಳಿಗೆ ಒಳಗಾಗಿದ್ದು ಸುಗ್ರೀವಾಜ್ಞೆ ಮೂಲಕ farmer-land-acquisitionಜಾರಿಗೆ ತರಲು ಉದ್ದೇಶಿಸಿರುವ ಭೂಸ್ವಾಧೀನ ತಿದ್ದುಪಡಿ ಕಾಯಿದೆ ವಿಚಾರವಾಗಿ. ದಿನೇ ದಿನೇ ಜನ, ರಾಜಕೀಯ ಪಕ್ಷಗಳು ಈ ವಿಚಾರದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಸರಕಾರಕ್ಕೆ ರೈತರ ಕಾಳಜಿ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ತೀರಾ ಇಳಿದಿದ್ದರೂ ಅದರ ಲಾಭವನ್ನು ಜನಸಾಮಾನ್ಯರಿಗೆ ನೀಡುತ್ತಿಲ್ಲ. ಬದಲಿಗೆ ಅಬಕಾರಿ ಸುಂಕವನ್ನ ಹೆಚ್ಚಿಸಿ ಮತ್ತಷ್ಟು ಕಡಿಮೆಯಾಗುವುದನ್ನು ತಡೆದಿದ್ದಾರೆ. ಇನ್ನೊಂದು ತಿಂಗಳಲ್ಲಿ ದೆಹಲಿ ಚುನಾವಣೆ ಇದೆ. ಸದ್ಯ ಆಡಳಿತದಲ್ಲಿರುವ ಪಕ್ಷ ತನ್ನ ಇತಿಹಾಸದುದ್ದಕ್ಕೂ ಮತ ಕೇಳುತ್ತಾ ಬಂದಿರುವುದು ಭಾವನೆಗಳನ್ನು ಕೆರಳಿಸಿ, ಹುಸಿ ರಾಷ್ಟ್ರಭಕ್ತಿಯನ್ನು ಪ್ರಚೋದಿಸಿ. ಈ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಲ್ಲಿ ನಡೆದ ದೋಣಿ ಸ್ಫೋಟ ಪ್ರಕರಣವನ್ನು ಹಾಗೂ ಇಂದಿರಾಗಾಂಧಿ ವಿಮಾನ ನಿಲ್ದಾಣದದಲ್ಲಿ ವಿಮಾನ ಅಪಹರಣ ಪ್ರಕರಣದ ಪ್ರಹಸನಗಳನ್ನು ನೋಡಬೇಕಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ ನ ಹಿರಿಯ ಪತ್ರಕರ್ತ ಪ್ರವೀಣ್ ಸ್ವಾಮಿ ಹೊಸ ವರ್ಷ ಆರಂಭದ ಹಿಂದಿನ ದಿನ ನಡೆದ ದೋಣಿ ಸ್ಫೋಟ ಪ್ರಕರಣದ ಬಗೆಗಿನ ವರದಿಯಲ್ಲಿ ದೋಣಿಯಲ್ಲಿ ಸ್ಫೋಟಕಗಳು ಇದ್ದವು ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ಅದರಲ್ಲಿದ್ದವರು ಭಯೋತ್ಪಾದಕರು ಆಗಿರಲಿಕ್ಕಿಲ್ಲ, ಬದಲಿಗೆ ಯಾವುದೋ ಸಾಮಾಗ್ರಿಯನ್ನು ಕದ್ದು ಸಾಗಿಸುತ್ತಿರುವವರು ಇರಬಹುದು ಎಂದಿದ್ದರು. (http://indianexpress.com/article/india/india-others/little-evidence-of-terror-link-may-have-been-petty-smugglers/) ಅಷ್ಟಕ್ಕೆ ಬಿಜೆಪಿ ಕಾರ್ಯಕರ್ತರು IndianExpressJan022015ಸೋಮವಾರ ಪತ್ರಿಕಾ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರವೀಣ್ ಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಅಷ್ಟೇ ಅಲ್ಲ ಸ್ವಾಮಿಯ ಪ್ರತಿಕೃತಿಯನ್ನೂ ದಹಿಸಿದರಂತೆ! ದೋಣಿ ಸ್ಫೋಟದ ಪ್ರಕರಣದ ಬಗ್ಗೆ ಅನೇಕ ಗೊಂದಲಗಳಿವೆ. ರಕ್ಷಣಾ ಇಲಾಖೆ ಆ ಗೊಂದಲಗಳನ್ನು ನಿವಾರಿಸುವ ಹೇಳಿಕೆ ಕೊಡಬೇಕು. ಅದು ಬಿಟ್ಟು ಅದೇ ಪಕ್ಷದ ಕಾರ್ಯಕರ್ತರನ್ನು ವರದಿಗಾರನ ವಿರುದ್ಧ ಪ್ರತಿಭಟನೆ ಮಾಡಿಸಬೇಕೆ?

ಪ್ರವೀಣ್ ಸ್ವಾಮಿ ದೇಶದ ರಕ್ಷಣಾ ಕ್ಷೇತ್ರದ ವರದಿಗಾರರ ಪೈಕಿ ಪ್ರಮುಖ ಹೆಸರು. ಆಯಕಟ್ಟಿನ ತಾಣಗಳಲ್ಲಿರುವ ಅಧಿಕಾರಿಗಳ (ಸುದ್ದಿ ಮೂಲಗಳ) ಸಂಪರ್ಕ ಹೊಂದಿರುವ ಪ್ರತಿಭಾವಂತ ಪತ್ರಕರ್ತ. ಅವರು ತಮ್ಮ ವರದಿಯಲ್ಲಿ ಈ ಘಟನೆ ಬಗ್ಗೆ ಸರಕಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಕೆಲ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಪತ್ರಿಕಾ ಹೇಳಿಕೆ ಪ್ರಕಾರ, ಆ ದೋಣಿಯಲ್ಲಿ ಸ್ಫೋಟಕಗಳು ಇದ್ದ ಕಾರಣ, ಕರಾವಳಿ ಪಡೆ ಅದನ್ನು ಒಂದು ಗಂಟೆ ಕಾಲ ಫಾಲೋ ಮಾಡಿ ತಡೆಯಲು ಪ್ರಯತ್ನಿಸಿ ನಂತರ ದಾಳಿ ನಡೆಸಿ ಉಡಾಯಿಸಿತು. ಪ್ರವೀಣ್ ಸ್ವಾಮಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿರುವ ದೋಣಿಯ ಚಿತ್ರದಲ್ಲಿ ಸ್ಪೋಟಕಗಳು ಕಾಣುತ್ತಿಲ್ಲ. ಒಂದು ಪಕ್ಷ ಅವು ಇದ್ದವು ಎಂದುಕೊಂಡರೂ, ಬೆಂಕಿಗೆ ಆಹುತಿಯಾದಾಗ, ಅವು ಚಿಮ್ಮಿ, ದೋಣಿಯ ಭಾಗಗಳು ತುಂಡು ತುಂಡಾಗಬೇಕಿತ್ತು. ಹಾಗೂ 25 ಮೀಟರ್ ಗಿಂತ ಉದ್ದನೆಯ ದೋಣಿಗಳು 30ಹೆಚ್.ಪಿ ಎಂಜಿನ್ ಗಳಿಂದ ಓಡುತ್ತಿರುತ್ತವೆ. ಅವುಗಳನ್ನು ತಡೆಯಲು ಕರಾವಳಿ ಪಡೆಯ ಅತ್ಯಾಧುನಿಕ ಹಡಗುಗಳು ಒಂದು ಗಂಟೆಗೂ ಹೆಚ್ಚು ಕಾಲ ಅಟ್ಟಿಸಿಕೊಂಡು ಹೋಗಬೇಕಾಯಿತೆ?

ಇದುವರೆಗೂ ಆ ಘಟನೆ ಸಂಭವಿಸಿದ ಸ್ಥಳದಿಂದ ತಾಂತ್ರಿಕ ತಪಾಸಣೆಗಾಗಿ ಯಾವುದೇ ಸ್ಯಾಂಪಲ್ ಗಳನ್ನು ಸಂಗ್ರಹಿಸಿಲ್ಲ. ರಕ್ಷಣಾ ಇಲಾಖೆ ಪ್ರತಿಕೂಲ ಹವಾಮಾನ ಇರುವ ಕಾರಣ ಅದು ಸಾಧ್ಯವಾಗಿಲ್ಲ ಎಂದು ಹೇಳಿಕೆ ನೀಡುತ್ತದೆ. ಆದರೆ, ಹವಾಮಾನ ಇಲಾಖೆ ನಿಯಮಿತವಾಗಿ ತನ್ನ ವೆಬ್ ತಾಣದಲ್ಲಿ ನೀಡುವ ಮಾಹಿತಿ ಪ್ರಕಾರ ಆ ಪ್ರದೇಶದಲ್ಲಿ ಸಾಧಾರಣ ಹವಾಗುಣ ಇದೆ. ಪ್ರತಿಕೂಲ ಸನ್ನಿವೇಶ ಇಲ್ಲ. ಮೇಲಾಗಿ ಗುಜರಾತ್ ನ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಹೋಗುವ ಸಮಯವೇ ಇದು. ಹಾಗಾಗಿ ಪ್ರತಿಕೂಲ ಹವಾಮಾನದ ಪ್ರಶ್ನೆಯೇ ಇಲ್ಲ. ಇಂತಹ ಪ್ರಶ್ನೆಗಳನ್ನು ಸ್ವಾಮಿ ಎತ್ತಿದ್ದಾರೆ. ಹಾಗೂ ಈ ಎಲ್ಲಾ ಕಾರಣಗಳಿಗಾಗಿ ಈ ಪ್ರಕರಣದ ಬಗ್ಗೆ ವಿವರವಾದ ತನಿಖೆಯಾಗಬೇಕೆಂದು ತಮ್ಮ ವರದಿಯಲ್ಲಿ ಒತ್ತಾಯಿಸಿದ್ದಾರೆ. ಉತ್ತರಿಸುವ ಜವಾಬ್ದಾರಿ ಸರಕಾರದ್ದು. ಆದರೆ, ಅವರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಪ್ರವೀಣ್ ಸ್ವಾಮಿ ಬರೆದಿರುವುದು ಸುಳ್ಳೆಂದಾದರೆ, ರಕ್ಷಣಾ ಇಲಾಖೆ ಸಾಬೀತು ಮಾಡಲಿ.

ಈ ಘಟನೆಯ ಹಿನ್ನೆಲೆಯಲ್ಲಿ ಮೇಲಿನ ಕುಮಾರಸ್ವಾಮಿ ಅವಧಿಯ ಪ್ರಕರಣ ಹಾಗೂ ಬಿhotel_empire_nikhil-gowdaಲ್ ಕ್ಲಿಂಟನ್ ನೆನಪಾದರು. ಮೈಸೂರಿನಲ್ಲಿ ಬಂಧನವಾದ ಆ ಉಗ್ರರು ಈಗ ಎಲ್ಲಿದ್ದಾರೆ? ಅವರ ಬಂಧನವಾದ ಎಂಟು ವರ್ಷಗಳ ಮೇಲಾದರೂ, ಅವರ ತಪ್ಪುಗಳು ಸಾಬೀತಾದವಾ? ಶಿಕ್ಷೆಯಾಯಿತಾ? ಗಮನ ಬೇರೆಡೆಗೆ ಸೆಳೆಯಲು ಇರಾಕ್ ಮೇಲೆ ದಾಳಿ ನಡೆಸಿ ಕೆಲವರ ಸಾವಿಗೆ ಕಾರಣರಾದ ಕ್ಲಿಂಟನ್ ಗೆ ಶಿಕ್ಷೆ ಇಲ್ಲವೇ? ದೋಣಿ ಸ್ಫೋಟದಲ್ಲಿ ಸತ್ತವರು ಯಾರು? ಚರ್ಚ್‌ ಸ್ಟ್ರೀಟ್ ನಲ್ಲಿ ಚಿಕನ್ ಕೇಳಿದವರ ವಿರುದ್ಧ ಚಾರ್ಜ್ ಶೀಟ್ ದಾಖಲಾಯಿತೆ? ಹೀಗೆ ನೂರೆಂಟು ಪ್ರಶ್ನೆಗಳು ಏಳುತ್ತವೆ.

ಮೈಮನದ ಹೊಲದಲ್ಲಿ ಸುಳಿದೆಗೆದ ಬನವಾಸಿ….

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಪಂಪಭಾರತದ ಆರಂಭದಲ್ಲಿ ಅರಿಕೇಸರಿಯ ವಂಶಚರಿತ್ರೆಯನ್ನು ಅನುಸರಿಸಿ ದೇಶ ವಿಷಯವೊಂದರ ವರ್ಣನೆಯಿದೆ. ಮೈತುಂಬಿಕೊಂಡ ನೀರಗಾಲುವೆ, ಬೆಳೆದೆರಗಿದ ಕೆಯ್ವೊಲಗಳನ್ನು ಸುತ್ತುವರೆದ ಪೂಗೊಳ, ಮಿಡಿದಡೆ ರಸವೊಸರುವ ಕಬ್ಬಿನಹೊಲ, ಬಿರಿದೊಂದು ಮುಗುಳ pampaಕಂಪಲ್ಲಿಯೇ ದುಂಬಿಗಳ ಮೊಗಕಿಡಿಸುವ ಪರಿಮಳವುಕ್ಕುವ ಹೂವು, ಕೊರತೆಯಿಲ್ಲದ ಮಾವುಮಲ್ಲಿಗೆಗಳಿಂದ ತುಂಬಿ, ‘ಸಂಸಾರಸುಖದಸಾರ ಇನ್ನೇನಿದೆ?’ ಎಂದು ಪ್ರಶ್ನಿಸುವಂತಿರುವ ನಾಡೊಂದರ ಚಿತ್ರವಿದೆ. ಅದನ್ನು ನಾಡ-ಕಾಡ ಬೆಳಸಿನ ಸಮೃದ್ಧ ಕುರುಜಾಂಗಣವೆಂದೂ ಕರೆಯಲಾಗಿದೆ. ರಸದ ತೊರೆಗಳಿಂದಲೂ ಮದಕರಿಗಳೇ ತುಂಬಿದ ವನಗಳಿಂದಲೂ ಕೂಡಿದ ‘ನೆಲದಸಿರಿ’ಯಾಗಿ ಪಂಪ ಮುಂದಿಡುತ್ತಿರುವ ಅರಿಕೇಸರಿಯ ಈ ನಾಡಿಗೆ ಮಹತ್ವವಿದೆ. ಮೊದಲಿಗೆ ಅದು ಆಧುನಿಕ ಅಭಿವೃದ್ಧಿ ಮೀಮಾಂಸೆಗೆ ಬದಲಿಯಾದ ನಿಸರ್ಗಕೇಂದ್ರಿತ ಅಭಿವೃದ್ಧಿ ಮೀಮಾಂಸೆಯನ್ನು ಮುಂದಿಡುತ್ತಿದೆ. ಇಲ್ಲಿ ಸಮೃದ್ಧಿಯ ಮಾನದಂಡಗಳಾಗಿರುವುದು ಅಗಲವಾದ ರಸ್ತೆ, ಎತ್ತರದ ಕಟ್ಟಡಗಳ ಕಾರ್ಪೋರೇಟ್ ನಿರೂಪಣೆಗಳಲ್ಲ. ದೇಗುಲಕಲಶ ಹಾಗೂ ಎತ್ತರದ ಕೋಟೆಕೊತ್ತಲಗಳ ಮೇಲಿನ ಆಕಾಶಕ್ಕೆ ಮುತ್ತಿಕ್ಕುವ ಧರ್ಮ ಮತ್ತು ರಾಜಪ್ರಭುತ್ವದ ಬಾವುಟಗಳ ಸಂಭ್ರಮವೂ ಅಲ್ಲ. ಅದು ಕಾಡು-ನಾಡುಗಳ ಸಹಜ ತುಂಬುವಿಕೆಯ ಸಮೃದ್ಧಿ. ಈ ನೆಲದಸಿರಿ ಪಂಪನ ಅನುಭವಲೋಕದ ಭಾಗವಾಗಿಯೇ ಬಂದಿರಬೇಕು. ಪ್ರಾಯಶಃ ಕೆರೆಕಾಲುವೆ, ಕೆಯ್ವೊಲ, ರಸಗಬ್ಬು, ಮಾವು, ಮಲ್ಲಿಗೆಯಿಂದ ತುಂಬಿ ನಳನಳಿಸುತ್ತಿರುವ ಪಂಪನ ಆ ಕುರುಜಾಂಗಣ, ಆತನೊಳಗಿನ ತೆಂಕನಾಡಿನ ಅವತರಣಿಕೆಯೇ ಇರಬೇಕು. ಅದರದು ಬನವಾಸಿ, ತೆಂಕನಾಡೆಂಬ ನಾಮ ಸಮರ್ಥನೆಯನ್ನು ಪಡೆದಿಲ್ಲ.

ಪಂಪ ಕುರುಜಾಂಗಣದ ಮುಸುಕಲ್ಲಿ ಹೀಗೆ ಕನ್ನಡ ನೆಲವೆಂಬ ದಕ್ಷಿಣ (ತೆಂಕನಾಡ) ವನ್ನು ತಂದಿರಿಸಿ ಹೂಹಾಕಿ ಕೈಮುಗಿದಷ್ಟಕ್ಕೇ ಮುಗಿಸಿದನೇ? ಇಲ್ಲ, ಆತ ತಾನು ಈಸಿದ ‘ವ್ಯಾಸಮುನೀಂದ್ರರುಂಧ್ರ ವಚನಾಮೃತವಾರ್ದಿಯಲ್ಲಿ’ ಬನವಾಸಿಯ ಬಾವುಟವನ್ನೂ ನೆಟ್ಟಗೆ ನೆಟ್ಟಿದ್ದಾನೆ! ಅದಕ್ಕೆಂದೇ ತೀರ್ಥಯಾತ್ರೆಯ ಪಾರಮಾರ್ಥಿಕಕ್ಕೆ ಹೊರಟ ಕಥಾನಾಯಕನನ್ನು ಮೈಸುಖದ ಬನವಾಸಿಯಲ್ಲಿ ಅಲೆದಾಡಿಸಿದ್ದಾನೆ. ತೆಂಕಿನಗಾಳಿ, ಮಲ್ಲಿಗೆಯ ಕಂಪು, ಕೆಂದಲಂಪುಗಳಲ್ಲಿ ತೂಗಿತೊನೆದು ಕೆನೆಗಟ್ಟಿಸಿಕೊಂಡ ತನ್ನ ಬಾಯ್ಮಾತನ್ನು ಆ ವಿಹಾರಿಯ ಬಾಯೊಳಗೆ ತುರುಕಿದ್ದಾನೆ. ‘ತೆಂಕನಾಡ ಮರೆಯಲ್ಕೇಂ ಬನಂ ಬರ್ಕುಮೇ?’ ಎಂದು ತನ್ನನ್ನೇ ತಾನು ಕೇಳಿಕೊಂಡಿದ್ದಾನೆ! ತೀರ್ಥಯಾತ್ರೆಯ ಪುಣ್ಯಸಂಚಯನಕ್ಕೆ ಬಂದವನ ಬಾಯಲ್ಲಿಯೇ ಬನವಾಸಿಯಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟಿದರೂ ಸಾಕೆಂಬ ಲೋಕಾಕರ್ಷಣೆಯ ಮಾತು ಕಟ್ಟಿದ್ದಾನೆ! ಹೀಗೆ ಭಾರತದ ಕಥಾಭಿತ್ತಿಯ ಮೇಲೆ ಬರೆದಿಟ್ಟ ‘ಸಂಸಾರ ಸಾರ ಸರ್ವಸ್ವಫಲ’ದ ಪ್ರತಿರೂಪವಾದ ಪಂಪನ ಈ ಬನವಾಸಿ ಕನ್ನಡದ ಪಾಲಿಗೊಂದು ಅದ್ಭುತವಾದ ನೆನಪಿನಶಾಸನ. ಸಹಸ್ರಮಾನಗಳ ನಂತರವೂ ಈ ಶಾಸನದಲ್ಲಿ ಅರಳಿದ ಕನ್ನಡನೆಲ ನಮ್ಮನ್ನು ಉಲ್ಲ್ಲಾಸಗೊಳಿಸುತ್ತಿದೆ. ನಿಸರ್ಗಕೇಂದ್ರಿತ ಅಭಿವೃದ್ಧಿಯ ನಿರೂಪಣೆಯ ಈ ತೆಂಕನಾಡು ಮೂರ್ತೀಕರಣದ ಗುರುತುಗಳನಳಿದು, ದೇಶ-ರಾಷ್ಟ್ರದ ನಿಲುಗನ್ನಡಿಯನ್ನು ಮೀರಿನಿಲ್ಲುವ ಸಾಂಸ್ಕೃತಿಕ ಮಹತ್ವವನ್ನೂ ಮೆರೆದ ಬೆಲೆಯುಳ್ಳ ದಾಖಲೆಯೇ ಆಗಿದೆ.

‘ನಾವೆಲ್ಲರೂ ಒಂದೇ’ ಎನ್ನುವ ಗುಂಪೊಂದರ ಅಸ್ಮಿತೆ (Identity)ಗೆ ಬೆಸೆದುಕೊಳ್ಳುವ ಮೂಲಭೂತ ಕಲ್ಪನೆಗಳಲ್ಲಿ ನಾಡು ಕೂಡ ಒಂದು. ಮೂಲತಃ ನಾಡು ಹುಟ್ಟುವುದು ನೆನಪಿನಲ್ಲಿ. ಆಯ್ದು ಜೋಡಿಸುವ ನೆನಪುಗಳೇ ಅದರ ಬೆನ್ನೆಲುಬು. ನೆನಪುಗಳ ಮಾದರಿ ಮತ್ತು ಅವುಗಳನ್ನು ಆಯ್ದು ಜೋಡಿಸುವ ಪರಿ ಆ ನಾಡ ಸ್ವರೂಪವನ್ನೂ ನಿರ್ಧರಿಸುತ್ತವೆ. ಎಲ್ಲ ನಾಡುಗಳಿಗಿರುವಂತೆ ಪಂಪನ ತೆಂಕನಾಡಿಗೂ ನೆನಪುಗಳಿವೆ. ಆದರೆ ಈ ನೆನಪುಗಳ ಆಹಾರವಾಗಿ ಮಾನವ ನಿರ್ಮಿತ ಗುರುತುಗಳಿಲ್ಲ. ಮಾನವಮಾತ್ರರ ರಚನೆಗಳಿಲ್ಲ. ಜಡಚರಿತ್ರೆಯ ಹೊರೆಯಿಲ್ಲ. ಯುದ್ಧ ವಿಜಯಗಳ ಹೆಮ್ಮೆ, ಅಪಜಯದ ಕೊರಗುಗಳಿಲ್ಲ. ಎದುರಾಳಿ ಕುರುಹು ಮತ್ತು ಆತಂಕದ ಭಯವಿಲ್ಲ. ಸಹಜ ಅನುಭವಗಳಾಚೆಗೆ ಕಲ್ಪಿತ ಪಠ್ಯಗಳಿಲ್ಲ. ಯಾರ ಅಧಿಕಾರವಿಲ್ಲ. ಆಳಿದವರ ಕುರುಹಿಲ್ಲ. ಧರ್ಮ, ಜಾತಿಯ ಕಾರಣದ ಕಿಲುಬಿಲ್ಲ. ಜೈನಪಂಪನ ಪೂರ್ವಾಶ್ರಮ ಎನ್ನಲಾದ ವೈದಿಕದ ಮಂತ್ರಘೋಷವಿಲ್ಲ. ಬಸದಿ ಚೈತ್ಯಾಲಯಗಳ ಕುರುಹಿಲ್ಲ. ಹೀಗಾಗಿ ಹಿಂದೂ, ಮುಸ್ಲಿಂಯೆಂಬ ಮತರಾಷ್ಟ್ರದ ವಿಂಗಡನೆಗೆ ಒಗ್ಗದ ಅದು ಭಾಷಾರಾಷ್ಟ್ರದ ನಕ್ಷೆಗೂ ಬಗ್ಗದು. ಯಾಕೆಂದರೆ ಅಲ್ಲಿ ಕನ್ನಡಕ್ಕೆ ಕನ್ನಡವಲ್ಲದ ಅನ್ಯದ ನಡುವಿನ ಗೆರೆಯಿಲ್ಲ. ‘ಕನ್ನಡನೆಲ’ ಎಂಬ ಪದವೂ ಇಲ್ಲ. ಹೀಗೆ ಕೇಳಿದ ಅಂತೆ, ಓದಿದ ಕಂತೆಯಲ್ಲದ ಈ ‘ತೆಂಕನಾಡು’ ಕಾರಣಗಳಲ್ಲಿ ಕಾಣಿಸಿಕೊಳ್ಳುವ ಮೆಯ್ಸುಖದ ನಾಡು. ಕವಿರಾಜಮಾರ್ಗಕಾರನ ‘ಭಾವಿಸಿದ ಜನಪದ’ದಂತೆ’, ‘ಎಲ್ಲಾದರೂ ಇದ್ದು ಎಂತಾದರೂ ಇದ್ದು ಕನ್ನಡವಾಗಬಲ್ಲ’ ಕವಿ ಕುವೆಂಪು ಕನ್ನಡದಂತೆ ಈ ಬನವಾಸಿ, ಭೂಪಟವಲ್ಲದ ಭಾವಪಟ. ಗಡಿಗಳನ್ನು ಮೀರಿದ ಈ ನಿರಂಕುಶನಾಡಲ್ಲಿ ದೇಶಭಕ್ತಿ, ರಾಷ್ಟ್ರಭಕ್ತಿಯ ಅಮಲು ಅತಿರೇಕಗಳಿಲ್ಲ. ತ್ಯಾಗಬಲಿದಾನಗಳ ಛಾಯೆಗಳೂ ಇಲ್ಲ.

ರಸಸುಖದ ನೆಲೆಯಾಗಿ ಬನವಾಸಿ

ಅರಸು ಚರಿತ್ರೆಯ ಏರಿಳಿತ, ಧರ್ಮ-ಭಾಷೆಗಳ ಮೈಲಿಗಲ್ಲುಗಳಿರದೆ ಪಂಪಭಾರತದ ಅಲೆಮಾರಿ ಅರ್ಜುನನ ಮನದೊಳಕ್ಕೆ ನೆಲೆನಿಂತ ಪಂಪನ ಆ ಬನವಾಸಿಯ ಮೊದಲನೋಟ ತೆರೆದುಕೊಳ್ಳುವುದೇ ಲೋಕಸುಖದ ಜೊತೆಗೆ,-

ಸೊಗಯಿಸಿ ಬಂದ ಮಾಮರನೆ, ತಳ್ತ ಎಲೆವಳ್ಳಿಯೆ, ಪೂತ ಜಾತಿಸಂ
ಪಗೆಯೆ, ಕುಕಿಲ್ವ ಕೋಗಿಲೆಯೆ, ಪಾಡುವ ತುಂಬಿಯೆ, ನಲ್ಲರ ಒಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ, ನೋಳ್ಪೊಡೆ ಆವ ಬೆ
ಟ್ಟುಗಳೊಳ್ ಆವ ನಂದನವನಂಗಳೊಳಂ ಬನವಾಸಿ ದೇಶದೊಳ್. (ಪಂಭಾ.4-28)

ಪಂಪ ಮಾವುಮಲ್ಲಿಗೆಯ ಕವಿ! ಅವನ ಬನವಾಸಿಯ ಸಮೃದ್ಧಿ ಚಿಗುರೊಡೆದುದೂ ಮಾಮರದ ಮೂಲಕವೇ! ಹೀಗೆ ಚಿಗುರೊಡೆದ Shringaraದೇಶವರ್ಣನೆಯಂತೆ, ಯಾವ ಬೆಟ್ಟಗಳಲ್ಲಾಗಲೀ, ಯಾವ ಉದ್ಯಾನವನದಲ್ಲಾಗಲೀ ನೋಡುವ ಪಕ್ಷದಲ್ಲಿ ಕಾಣುವುದು ಸೊಗಸಾಗಿ ಹೂಹಣ್ಣುಗಳಿಂದ ತುಂಬಿಬಂದ ಮಾಮರಗಳೇ; ದಟ್ಟವಾಗಿ ಸೇರಿಕೊಂಡ ವೀಳ್ಯದ ಎಲೆಬಳ್ಳಿಗಳೇ; ಹೂಬಿಟ್ಟ ಶ್ರೇಷ್ಠಜಾತಿಯ ಸಂಪಗೆಯೇ; ಕೂಗುವ ಕೋಗಿಲೆಗಳೇ; ಝೇಂಕರಿಸುವ ದುಂಬಿಗಳೇ; ಪರಸ್ಪರ ಮುಖಕ್ಕೆ ಮುಖತಾಗಿಸಿ ನಗುಮೊದಲ್ಲಿ ಕೂಡುವ ಪ್ರೇಮಿಗಳೇ! ಇದು ಅರ್ಜುನ ಕಂಡ ಪಂಪನ ಬನವಾಸಿ! ಪ್ರೀತಿ-ಶೃಂಗಾರದ ಉಲ್ಲಾಸದಾಯಕ ಬನವಾಸಿ. ಬೆಟ್ಟ, ಕಾಡುಗಳ ಲೋಕಜೀವಿಗಳಾದ ಕೋಗಿಲೆ, ದುಂಬಿಗಳಂತೆ ಬದುಕಿನ ಬೇಟದಲ್ಲಿ ನಿರತ ಕನ್ನಡಿಗರ ಬನವಾಸಿ! ಕೂಡುವನಲ್ಲರ ಆಡುಂಬೊಲದ ಬನವಾಸಿ!

 ಆದರೆ ವರ್ತಮಾನದ ‘ನೈತಿಕ ಪೋಲಿಸುಗಿರಿ’ (Cultural Policing) ಪ್ರತಿಪಾದಿಸುತ್ತಿರುವ ‘ಭಾರತೀಯ ಸಂಸ್ಕೃತಿ’ಯೊಳಗೆ mangalore_moral1ಪಂಪನ ಬನವಾಸಿಯನ್ನು ಎಲ್ಲಿಡಬೇಕೋ ಹೊಳೆಯುತ್ತಿಲ್ಲ. ಪ್ರೇಮಿಗಳ ದಿನಾಚರಣೆ, ಪ್ರೇಮಿಗಳ ಭೇಟಿಯೇ ಮೊದಲಾದುವುಗಳನ್ನಿಟ್ಟು ಸಂಸ್ಕೃತಿಯ ದೇಸೀ-ಪರದೇಶೀ ಆವೃತ್ತಿಗಳನ್ನು ಕಟ್ಟುತ್ತಿರುವಲ್ಲಿ, ಪಂಪನ ‘ನೆನಪಿನಶಾಸನ’ವನ್ನು ಎಲ್ಲಿ ಹೂತಿಡಬೇಕೋ ತಿಳಿಯುತ್ತಿಲ್ಲ. ಯಾಕೆಂದರೆ ನಮ್ಮದೇ ಪಂಪ ಸಾವಿರವರ್ಷದ ಹಿಂದೆ ಬನವಾಸಿಯ ಯಾವ ಬೆಟ್ಟ, ಉಪವನವನದಲ್ಲೂ ನಲ್ಲರ ಬೇಟ(ಪ್ರಣಯ)ವನ್ನೇ ಕಂಡೆ ಎಂದು ಪ್ರೇಮಶಾಸನ ನೆಟ್ಟ. ಅಷ್ಟೇ ಅಲ್ಲ, ತನ್ನ ಧಾರ್ಮಿಕಕಾವ್ಯ ಆದಿಪುರಾಣದಲ್ಲೂ ಕೌಮುದಿಮಹೋತ್ಸವದ ಬೆಳದಿಂಗಳ ಕೂಟ ಬೆಳಗಿದ. ಆದಿಪುರಾಣದ ಹನ್ನೆರಡನೇ ಆಶ್ವಾಸದಲ್ಲಿ, ಭರತನ ದಿಗ್ವಿಜಯದ ನಡುವೆ ಶರತ್ಕಾಲದ ಬೆಳದಿಂಗಳಲ್ಲಿ ಆಚರಿಸಿದ ಆ ‘ಕೌಮುದೀಮಹೋತ್ಸವ’ದ ವರ್ಣನೆ ಬನವಾಸಿಯನ್ನೂ ಮೀರುತ್ತದೆ. ‘ಕೌಮುದಿ ಮಹೋತ್ಸವ’ ಎಂದರೆ ಕಾಮೋತ್ಸವವೇ. ಅದು ಶರತ್ಕಾಲದ ಬೆಳದಿಂಗಳ ರಾತ್ರಿಯೊಂದರಲ್ಲಿ ಬೇಟಕಾರರು(ಪ್ರಣಯಿಗಳು) ಸಾಮೂಹಿಕವಾಗಿ ಹೇಗೆ ಬೇಕೋ ಹಾಗೆ ಕುಡಿದು, ಕುಪ್ಪಳಿಸಿ, ಮುತ್ತಿಕ್ಕಿ ಕುಣಿದ ‘ನರ್ತಕೀಲೀಲೆ’! ಬನವಾಸಿಯ ಬೆಟ್ಟ ಉಪವನಗಳಂತೂ ಪ್ರೀತಿ, ಉತ್ಸಾಹವೇ ಉಕ್ಕಿಹರಿವ ಮೆಯ್ಸುಖದ ನೆಲೆ. ಒಂದು ‘ವಿಕ್ರಮಾರ್ಜುನ ವಿಜಯ’ ಎಂಬ ಭಾರತದ ಕಥೆಯಲ್ಲಿದೆ, ಇನ್ನೊಂದು ಭರತನಕತೆಯಾದ ಆದಿಪುರಾಣದಲ್ಲಿದೆ. ಹೀಗಾಗಿ ಸಂಸ್ಕೃತಿಯ ಕಲ್ಪಿತ ಸಭ್ಯತೆಯನ್ನು ಮಾತನಾಡುವ ಮುನ್ನ ನಮಗೆ ನಮ್ಮದೇ ಕವಿ ಚಿತ್ರಿಸಿದ, ನಮ್ಮದೇ ಆಗಿದ್ದ ನಾಡು-ನಲಿವುಗಳ ಅರಿವಿರುವುದೊಳಿತು. ಯಾವುದು ಹೊರಗಿಂದ ಬಂತು, ಯಾವುದು ನಮ್ಮಲ್ಲಿಯೇ ಇತ್ತೆಂಬ ಪ್ರಾಮಾಣಿಕ ಆತ್ಮಾವಲೋಕನವಿರುವುದೊಳಿತು.

ಅಂಕುಸವಿಟ್ಟರೂ ನೆನೆವ ಮರಿದುಂಬಿಯ ತವರು

ಹೀಗೆ ರಸಸುಖದ ನೆಲೆಯಾಗಿ ಬನವಾಸಿಯನ್ನು ಚಿತ್ರಿಸುವ ನಡುವೆಯೇ, ಪಂಪ ಸಾರ್ಥಕ ಮನುಷ್ಯರ ಪ್ರಸ್ತಾಪವನ್ನೂ ಮಾಡುತ್ತಾನೆ. ಆತನಿಗೆ ತ್ಯಾಗ-ಭೋಗ-ವಿದ್ಯೆ-ಗಾಯನಗೋಷ್ಠಿ ಹಾಗೂ ಅಲಂಪಿನ ಇಂಪುಗಳಿಗೆ ಆಗರವೆನಿಸಿದ ರಸಿಕರಷ್ಟೇ ಮನುಷ್ಯರು. ಮನುಷ್ಯರಾಗಿ ಹುಟ್ಟುವುದಾದರೆ ಹಾಗೆ ಹುಟ್ಟಬೇಕು. ಹಾಗೆ ಹುಟ್ಟದೆ ಏನೋ ಆಗಿ ಏನು ಪ್ರಯೋಜನ? ಇದು ಪಂಪನ ಕೊರಗು. ಆದರೆ ಆತ ಈ ಕೊರಗಿಗೇ ದಿಕ್ಕೆಟ್ಟು ನಿಂತಿಲ್ಲ. ಸಾರ್ಥಕ ಪರ್ಯಾಯವನ್ನು ಆಯ್ಕೆಮಾಡಿಕೊಳ್ಳುತ್ತಾನೆ. ರಸಿಕರಾದ ಮನುಷ್ಯರಾಗಿ ಹುಟ್ಟಲಾಗದೆ ಹೋದರೆ ಚಿಂತೆಯಿಲ್ಲ, ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ’ ಬನವಾಸಿಯ ಉಪವನಗಳಲ್ಲಿ ಹುಟ್ಟಿ ವಿಹರಿಸಿದರೂ ಸಾಕು. ಪಂಪನ ನಿಶ್ಚಯದ ಮಾತಿದು. ಈ ಸಾರ್ಥಕಬದುಕಿನ ಕನಸು ಹುಡುಕುವುದೂ ರಸಿಕತೆಯ ಮಡುವನ್ನೇ. ಮಾವು-ಕೋಗಿಲೆ, ಮಲ್ಲಿಗೆ-ಮರಿದುಂಬಿಯ ಪ್ರೇಮರಾಗದ ಜೋಡಿತನವನ್ನೆ. ಈ ಕೂಡುರೂಪಕಗಳಲ್ಲೇ ಪಂಪ ಬನವಾಸಿಯನ್ನು ಹಂಬಲಿಸುತ್ತಿರುವ ಕಾರಣವಿದೆ. ಬದುಕಿನ ‘ಸಾರ’ ಯಾವುದು ಎಂಬ ಸೂಚನೆ ಇದೆ. ಹೀಗೆ ಪ್ರೀತಿಯ ಅಂಗಣವಾಗಿ, ಆತನೊಳಗೆ ಗಟ್ಟಿಯಾದ ಅನುಭವವಾಗಿ ಕೂತ ಬನವಾಸಿ ವಾಸವಿರುವಲ್ಲೇ ಒದಗುವ ಯಾವುದಾದರೊಂದು ಲಲಿತಸುಖದ ನೆವದಲ್ಲೇ ನೆನಪಾಗಿ ಎಚ್ಚರಗೊಳ್ಳುವಂಥದ್ದೂ ಆಗಿದೆ. ಹಾಗಾಗಿ ಎಲ್ಲೋ ಇದ್ದಾಗ ಬೀಸುವ ತೆಂಕಣದಗಾಳಿಯ ಸುಖಾನುಭವವೇ ಮುಂತಾಗಿ ಬನವಾಸಿಯನ್ನು ತೆರೆಯುವ ಕೀಲಿಕೈಗಳೂ ಹಲವು,-

ತೆಂಕಣ ಗಾಳಿ ಸೋಂಕಿದೊಡಂ, ಒಳ್ನುಡಿ ಕೇಳ್ದೊಡಂ, ಇಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ, ಬಿರಿದ ಮಲ್ಲಿಗೆ ಕಂಡೊಡಂ, ಆದ ಕೆಂದಲಂ
ಪಂ ಗೆಡೆಗೊಂಡೊಡಂ, ಮಧುಮಹೋತ್ಸವಂ ಆದೊಡಂ, ಏನನೆಂಬೆನ್, ಆರ್
ಅಂಕುಸ ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ, (ಪಂ.ಭಾ 4-30)

(ಎಲ್ಲೇ ಇರಲಿ)ತೆಂಕಣದ ಗಾಳಿ ಸೋಂಕಿದರೂ, ಒಳ್ಳೆಯ ಮಾತು(ನುಡಿ) ಕೇಳಿದರೂ, ಇಂಪುಳ್ಳ ಹಾಡುಗಳು ಕಿವಿಗೆ ಹೊಕ್ಕರೂ(ಕೇಳಿಸಿದರೂ), ಬಿರಿದ ಮಲ್ಲಿಗೆ ಕಂಡರೂ, ಸ್ತ್ರೀಸಂಗದ ಸುಖದೊಂದು ನಿದ್ರೆಯನ್ನು ಸವಿದರೂ, ವಸಂತಕಾಲದ ಉತ್ಸವ ನಡೆದರೂ, ಏನೆನ್ನಲಿ? ಯಾರು ಅಂಕುಶ ಇಟ್ಟು ತಿವಿದು ತಡೆದರೂ ನಿಲ್ಲದೆ ನನ್ನ ಮನಸ್ಸು ವನವಾಸಿ ದೇಶವನ್ನು ನೆನೆದೇ ತೀರುತ್ತದೆ. – ಡಿ.ಎಲ್ ನರಸಿಂಹಾಚಾರ್ ಅವರಂತೂ ಇದನ್ನು ಪಂಪನ ದೇಶಪ್ರೇಮದ ಭಾವಗೀತೆ ಎಂದೇ ಕರೆದಿದ್ದಾರೆ. ಈ ಗಾಳಿ, ಒಳ್ನುಡಿ, ಬಿರಿದಮಲ್ಲಿಗೆ, ಮಧುಮಹೋತ್ಸವಗಳು ಕ್ರಮವಾಗಿ ಚರ್ಮ, ಕಿವಿ, ಮೂಗು ಮತ್ತು ಕಣ್ಣುಗಳೆಂಬ ಇಂದ್ರಿಯ ಸಂಬಂಧಿಗಳು. ಕೆಂದಲಂಪು ಎಂಬುದಾದರೋ ಪಂಚೇಂದ್ರಿಯ ಸುಖದ ಸಮ್ಮಿಲಿತ ಸಂಗತಿ. ಎಲ್ಲವೂ ಇಂದ್ರಿಯಗಳ ಮೂಲಕ ದತ್ತವಾಗುವ ಲೋಕಸುಖಗಳೇ. ಭಾವಸತ್ಯಗಳೇ ತುಂಬಿದ ಈ ದಿಟ ಭಾವಗೀತೆಯಲ್ಲಿ ನಾಡು ನಾದವಾಗಿ, ನೋಟವಾಗಿ, ಪರಿಮಳವಾಗಿ, ಸಂತೋಷದ ಸುರತಸುಖವಾಗುತ್ತದೆ. ಅನುಭವದ ಈ ಪರಿ, ಚರಿತ್ರೆಯ ಗಾಯ ನೆಕ್ಕುತ್ತಾ ವರ್ತಮಾನದ ದ್ವೇಷ ಕೂಡಿಡುತ್ತಾ ಹೋಗುವ ಉಗ್ರರಾಷ್ಟ್ರೀಯತೆಯ ಹತ್ತಿರವೂ ಸುಳಿಯದು. ಇದು ಏರಿದ ಮಲೆ ಸಹ್ಯಾದ್ರಿ, ಕುಡಿದ ನೀರ್ ಕಾವೇರಿಯಾಗಿಸಿ, ಇರುವುದನ್ನೇ ನಾಡಾಗಿ ಸಂಭ್ರಮಿಸಬಲ್ಲ ಸಮೃದ್ಧಿಯ ದೇಶಗೀತೆ.

ಇಂತಹ ಭಾವಗೀತೆಯೊಂದನ್ನು ಕಟ್ಟಿರುವುದಕ್ಕೂ ಆತನಲ್ಲಿ ಸಮರ್ಥನೆ ಇದೆ. ಯಾಕೆಂದರೆ ಬನವಾಸಿಯಾದರೋ, ‘ಅಮೃತವನ್ನೇ ಹಿಯಾಳಿಸುವಂತಿರುವ ರತಿಕ್ರೀಡೆಯ ಇಂಪಿಂದಲೂ, ಬೆಂಬಿಡಿದು ಬರುವ ಸಂಗೀತದಿಂದಲೂ, ವಿದ್ವಾಂಸರ ಮೇಳದಿಂದಲೂ(ಬನವಾಸಿಯು ಬಹಳ ದೊಡ್ಡ ವಿದ್ಯಾಕೇಂದ್ರವಾಗಿತ್ತು), ಚತುರರ ಒಳ್ಳೆಯ ಮಾತುಗಳಿಂದಲೂ, ಶೀತದಿಂದ ತಣ್ಣಗಿರುವ ಹೂಬಳ್ಳಿಗಳ ಜೊಂಪ(ಚಪ್ಪರ)ದಿಂದಲೂ ಕೂಡಿ ಬಯಸಿದ್ದನ್ನು ಕೊಡಬಲ್ಲ ಮೆಯ್ಸುಖದ ನೆಲೆಯೆನಿಸಿತ್ತು ಮನಸೂರೆಗೊಂಡ ತೆಂಕನಾಡ ಮರೆಯಲ್ಕೇಂ ಮನಂ ಬರ್ಕುಮೇ? ಎಂಬ ಪ್ರಶ್ನೆಯಾಗಿತ್ತು. ಹೀಗೆ ಪಂಪನ ತೆಂಕನಾಡು ಒಂದು ಕಡೆಯಿಂದ ಭಾವಿತವಾದ ನಾಡಿನ ರೂಪವಾಗುವ ಜೊತೆಗೆ ಪ್ರೇಮಸುಖದ ನಾಡೆನಿಸಿದೆ. ಅದು ಫಲತುಂಬಿಕೊಂಡ ಮಾವು, ಹೂಬಿಟ್ಟ ಜಾತಿ ಸಂಪಿಗೆ, ಕುಕಿಲ್ವ ಕೋಗಿಲೆ, ಬಿರಿದ ಮಲ್ಲಿಗೆ, ಪಾಡುವ ದುಂಬಿ, ಒಳ್ಮಾತು, ನಗುಮೊಗದಲ್ಲಿ ಮುಖಕ್ಕೆ ಮುಖವಂಟಿಸಿ ಕೂಡುವ ನಲ್ಲರ ಬೇಟ(ಪ್ರಣಯ)ಗಳಿಂದಾಗಿ ಮೆಯ್ಸುಖದ ಗಣಿಯೆನಿಸಿದೆ. ಪಂಪನಾದರೋ ‘ಸಾರಂ ಅನಂಗ ಜಂಗಮ ಲತಾ ಲಲಿತಾಂಗಿಯರಿಂದಂ ಅಲ್ತೆ ಸಂಸಾರಂ’ ಎಂದವನು. ಆತನ ಈ ಹೇಳಿಕೆಗೆ ಪೂರಕವಾಗಿ ಬನವಾಸಿಯೂ ಸಂಸಾರಸುಖದ ನೆಲೆಮನೆಯಂತೆಯೇ ಇದೆ. ಅದು ಆತನ ಅಭಿಮಾನವನ್ನು ಇಮ್ಮಡಿಸಿದೆ. ಈ ಅಭಿಮಾನ ಸಂಸ್ಕೃತಿಯ ಕುರಿತಾದ ಮಡಿವಂತಿಕೆಯ ನಿರ್ವಚನಗಳನ್ನು ಗೇಲಿ ಮಾಡುವಂತಿದೆ. ಹಾಗೆಂದು ಅದು ಅನೈತಿಕವಾದುದಲ್ಲ. ಹಾಗಾಗಿ ಪಂಪನು ಎಲ್ಲಿಯೇ ಹುಟ್ಟಿ ಬೆಳೆದಿರಲಿ, ಬನವಾಸಿಯ ಮಲೆನಾಡಿನಲ್ಲಿ ಅವನ ಜೀವಮಾನದ ಸಾರವತ್ತಾದ ಭಾಗ ಕಳೆದಿರಬೇಕು. ಅಲ್ಲಿಯ ಸೊಗಸು ಅವನ ಮನಸ್ಸನ್ನು ತಿದ್ದಿ ಕವಿತಾಶಕ್ತಿಯನ್ನು ಪುಟಗೊಳಿಸಿರಬೇಕು (ಪಂಪ,ಪು.5) ಎಂಬ ತೀನಂಶ್ರೀ ಅವರ ಮಾತು ಸರಿಯಾಗಿಯೇ ಇದೆ ಎನ್ನಬೇಕು.

ಹೀಗೆ ಕುರುಹಿನ ಹಂಗಿಲ್ಲದ ಅನುಭವಗಳಲ್ಲಿ ಅರಳಿದ ಈ ನಾಡಿಗೆ ಅಪಹರಣದ ಭಯವಿಲ್ಲ,bharath-maata ವಿದ್ರೋಹಿ ಸಂಚುಕೋರರ ಆತಂಕವಿಲ್ಲ. ಇಲ್ಲಿ ಭಜನೆಯ ತಂಡವಿಲ್ಲ. ದೊಣ್ಣೆಹಿಡಿದು ದೇಶಕಾಯುವ ವರಸೆಕಾರರೂ ಇಲ್ಲ. ‘ಯಾರೂ ಮುಖ್ಯರಲ್ಲ ಯಾವುದೂ ಅಮುಖ್ಯವೂ ಅಲ್ಲದ’ ಈ ಪ್ರಭುತ್ವಶೂನ್ಯತೆಯ ನಾಡಿಗೆ ‘ರಾಷ್ಟ್ರೀಯತೆ’ಯ ನಿಲುವಂಗಿಯೂ ಹೊಂದದು. ಏಕೆಂದರೆ ‘ರಾಷ್ಟ್ರೀಯತೆ’ಗೆ ದೇಶದ್ರೋಹಿಗಳ ಸರಕಿಲ್ಲದೆ ದೇಶಪ್ರೇಮದ ಮಾತು ತಿಳಿಯದು. ಗಂಡಾಂತರದ ಕೂಗುಹಾಕಿ ಕಟ್ಟಾಳುಗಳನ್ನು ಕಲೆಹಾಕುವ ಅದಕ್ಕೆ ಅಂಕುಶವಿಟ್ಟರೂ ತಡೆಯದೆ ನೆನೆವ ಮನದಾಳದ ಅರಿವಿರದು. ಅದಕ್ಕೆ ವರ್ತಮಾನದ ಉದ್ರೇಕಕ್ಕಾಗಿ ಗತಚರಿತ್ರೆಯ ದುಃಸ್ವಪ್ನಗಳ ಮಿಠಾಯಿ ಹಂಚುವುದು ಗೊತ್ತು. ಈ ದುಃಸ್ವಪ್ನಗಳ ಮಿಠಾಯಿಯ ಮೇಲೆ ಗತಕಾಲದ ಆತಂಕದ ಅಪರಾಧಿಗಳ ವಿಳಾಸ ಬರೆದಿಡುವದು ಗೊತ್ತು. ಉನ್ಮತ್ತ ಭಾವುಕತೆಯ ಅಮಲಲ್ಲಿ ಪ್ರೀತಿಸಬೇಕಾದ ‘ತನ್ನವರು’ ಮತ್ತು ದ್ವೇಷಿಸಬೇಕಾದ ‘ಪರರರನ್ನು’ ಗೆರೆಕೊರೆದು ವಿಂಗಡಿಸಿ ಗೊತ್ತು. ಜರ್ಮನಿಯ ಹಿಟ್ಲರ್ ನ ‘ನಾಜಿ’ಗಳು, ಇಟೆಲಿಯ ಮುಸೋಲಿನಿಯ ‘ಫ್ಯಾಸಿ’ಗಳು ಹಂಚಿದ್ದು ಈ ಮಿಠಾಯಿಯನ್ನೇ. ಆದರೆ ಈ ಮರೆಯಲಾಗದ ತೆಂಕನಾಡಲ್ಲಿ ಆ ಬಗೆಯ ದುಃಸ್ವಪ್ನಗಳಿಲ್ಲ. ‘ನಾನು’ ಮತ್ತು ‘ಅವರು’ ಎಂಬ ಎದುರಾಳಿಗಳಿಲ್ಲ. ಇಲ್ಲಿ ಗತವೂ ಗತವಲ್ಲ. ದ್ವೇಷದ ತರಬೇತಿಯೂ ಇಲ್ಲ. ಇದು ಮೈಮನದ ಹೊಲದಲ್ಲಿ ಸುಳಿದೆಗೆದು ಅರಳುತ್ತಲೇ ಇರುವ ಸಾವಿಲ್ಲದ ಬನವಾಸಿ.