pk : ನಾವು ನೋಡುವುದೆಲ್ಲ ಕೇವಲ ದೃಷ್ಟಿಕೋನಗಳನ್ನು ಮಾತ್ರ, ಸತ್ಯವನ್ನಲ್ಲ


– ಬಿ. ಶ್ರೀಪಾದ ಭಟ್


ಇತ್ತೀಚೆಗೆ ಬಿಡುಗಡೆಗೊಂಡ ಅಮೀರ್ ಖಾನ್ ನಟಿಸಿದ ‘ಪಿಕೆ’ ಎನ್ನುವ ಹಿಂದಿ ಸಿನಿಮಾ ನೋಡಿದಾಗ ಕೆಲವರು ಹೇಳಿದ ಹಾಗೆ ಅದು ಒಂದು ರೀತಿ ದೂರದರ್ಶನದಲ್ಲಿ ಅಮೀರ್ ಖಾನ್ ನಿರ್ಮಿಸಿ, ಪ್ರಸ್ತುತಪಡಿಸಿದ ’ಸತ್ಯಮೇವ ಜಯತೆ’ ಧಾರವಾಹಿಯ ಮುಂದುವರೆದ ಭಾಗದಂತೆಯೇ ಇದೆ. ಸತ್ಯಮೇವ ಜಯತೆ ಸರಣಿಯಲ್ಲಿ ತುಂಬಾ ಕುತೂಹಲದಿಂದ, ಕಣ್ಣರಳಿಸಿ ನೊಂದವರ ಮಾತುಗಳನ್ನು ಕೇಳುತ್ತ ಸ್ವತಃ ತಾನು ನೋವನ್ನು ಅನುಭವಿಸುವ ಅಮೀರ್ ಖಾನ್ ಅಲ್ಲಿ ವಾಸ್ತವ ಮತ್ತು ಭ್ರಮೆಗಳ ನಡುವೆ ಜಿಗಿದಾಡುತ್ತ ಸಮಯ ಸಿಕ್ಕಾಗಲೆಲ್ಲ ಭರಪೂರು ಉಪದೇಶಗಳನ್ನು ನೀಡುತ್ತಿರುತ್ತಾನೆ. ಅದೇ ಮಾದರಿಯಲ್ಲಿ ‘ಪಿಕೆ’ ಸಿನಿಮಾದಲ್ಲಿಯೂ ಸಹ ಉಪದೇಶಗಳ ಒಂದು ಪ್ರವಾಹವೇ ಹರಿದಿದೆ. ‘ಪಿಕೆ’ ಸಿನಿಮಾದಲ್ಲಿಯೂ ವ್ಯಕ್ತಿತ್ವ ಮತ್ತು ವ್ಯಕ್ತಿ ಎಂದು ಎರಡನ್ನು pk_aamir-khanವಿಭಜಿಸುತ್ತಾ, ಕೂಡಿಸುತ್ತಾ ಜಿಗಿದಾಡುವ ಅಮೀರ್ ಖಾನ್ ಪ್ರತಿ ದೃಶ್ಯಗಳಲ್ಲಿಯೂ ರಾಜಕಪೂರ್‌ನಂತೆ ಭ್ರಮೆಗಳ ಬಣ್ಣಗಳನ್ನು ತೇಲಿ ಬಿಡುತ್ತಲೇ ಇರುತ್ತಾನೆ. ಆ ಬಣ್ಣಗಳಿಗೆ ನಿರ್ದಿಷ್ಟ ಚೌಕಟ್ಟುಗಳನ್ನು ನಿರ್ಮಿಸಲು, ವೈಚಾರಿಕತೆಯ ಲೇಪನವನ್ನು ನೀಡಲು ನಿರ್ದೇಶಕ ರಾಜಕುಮಾರ್ ಹಿರಾನಿ ನಾಯಕಿ ಅನುಷ್ಕ ಶರ್ಮಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾನೆ. ಪ್ರೇಕ್ಷಕರೂ ಆ ಬಣ್ಣಗಳನ್ನು, ವೈಚಾರಿಕತೆಯ ಲೇಪನವನ್ನೂ ಆನಂದಿಸಿದ್ದಾರೆ.

’ಸತ್ಯಮೇವ ಜಯತೆ’ಯನ್ನು ನಿರ್ಮಿಸುವಾಗ ಅದು ತನ್ನ ಆಕ್ಟಿವಿಸಂನ ಭಾಗವೆಂದೇ ಅಮೀರ್ ಖಾನ್ ಕರೆದುಕೊಂಡಿದ್ದ. ಜನ ಅದನ್ನು ಅನುಮೋದಿಸಿದರು. ಅದು ತುಂಬಾ ಜನಪ್ರಿಯವೂ ಆಯಿತು. ಅಲ್ಲಿ ಅಮೀರ್ ಖಾನ್ ಭಾವುಕತೆಯಿಂದ ಪ್ರಸ್ತುತಪಡಿಸಿದ ಶತಮಾನಗಳಿಂದ ಚಾಲ್ತಿಯಲ್ಲಿದ್ದ ವ್ಯವಸ್ಥೆಯ ಕ್ರೌರ್ಯಕ್ಕೆ ಇಂಡಿಯಾದ ಮಧ್ಯಮವರ್ಗ ಸಹ ಅದು ಇದುವರೆಗೂ ತಮಗೆ ಗೊತ್ತೇ ಇರಲಿಲ್ಲವೆನ್ನುವಂತೆ, ಇದೇ ಮೊದಲ ಬಾರಿಗೆ ಅಮೀರ್ ಖಾನ್‌ನ ಮೂಲಕ ತಮಗೆ ದರ್ಶನವಾಗಿದೆಯೇನೋ ಎನ್ನುವಷ್ಟು ಬಾವುಕತೆಯಿಂದ ಸಮನಾಗಿ ಕಣ್ಣೀರಿಟ್ಟರು. ಸದ್ಯದ ಸಂದರ್ಭದಲ್ಲಿ ತನ್ನನ್ನು ಇಂಡಿಯಾದ Method Actor ಎಂದೇ ಬಿಂಬಿಸಿಕೊಳ್ಳುತ್ತಿರುವ ಅಮೀರ್ ವಾಸ್ತವದಲ್ಲೂ ಅದಕ್ಕೆ ಹತ್ತಿರವಿರುವಂತಹ pk-posterಪಾತ್ರಗಳನ್ನೂ ಆಯ್ದುಕೊಳ್ಳುತ್ತಿದ್ದಾನೆ. ಆದರೆ ಆ Method Actor ಆಯ್ಕೆಯನ್ನು ನಿಭಾಯಿಸಿಲಾಗದಂತೆ ತಡೆಯೊಡ್ಡುವ ಅನೇಕ ಜನಪ್ರಿಯವಾದ ಮಿತಿಗಳಲ್ಲಿ ಸಹ ಅಮೀರ್ ಬಂಧಿಯಾಗಿದ್ದಾನೆ. ಆದರೆ ಮತ್ತೊಂದೆಡೆ ಕಮಲ್ ಹಾಸನ್ ‘ಅನ್ಬೆ ಶಿವಂ, ವಿರುಮಾಂಡಿ’ ತರಹದ ಸಿನಿಮಾಗಳ ಮೂಲಕ ಇಲ್ಲಿನ ಕಮರ್ಷಿಯಲ್ ಮಿತಿಗಳನ್ನೂ ಮೀರುತ್ತ Method Actor ನ ಮಾದರಿಗೆ ಇಂಡಿಯಾದ ಮಟ್ಟದಲ್ಲಿ ಹೊಸ ರೂಪವನ್ನು ತಂದುಕೊಟ್ಟಿದ್ದಾನೆ. ಪಂಕಜ್ ಕಪೂರ್, ನಾಸಿರುದ್ದೀನ್ ಶಾ, ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ದಕಿ ಯಂತಹ ನಟರು ಇಂದು Method Actor ನ ಅತ್ಯುತ್ತಮವಾದ, ಪ್ರತಿಭಾವಂತ ಉದಾಹರಣೆಯಾಗಿದ್ದಾರೆ. ಇವರಿಗೆ ಸಾಧ್ಯವಾಗಿದ್ದು ಅಮೀರ್ ಖಾನ್‌ಗೆ ಸಾಧ್ಯವಾಗುತ್ತಿಲ್ಲ.

ನಿರ್ದೇಶಕ ರಾಜಕುಮಾರ್ ಹಿರಾನಿ ಪ್ರಸ್ತುತ ಸಂದರ್ಭದಲ್ಲಿ ತಾನು ಇಂಡಿಯಾದ ಯಶಸ್ವೀ Show Man ಎಂದು ಈ ‘ಪಿಕೆ’ ಸಿನಿಮಾದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಒಬ್ಬ ಯಶಸ್ವಿ Show Manಗೆ ಅತ್ಯವಶ್ಯಕವಾದ ಕತೆ ಹೇಳುವ ನೈಪುಣ್ಯತೆಯನ್ನು ಸಮರ್ಥವಾಗಿ ಮೈಗೂಡಿಸಿಕೊಂಡಿರುವ ಹಿರಾನಿ ಅದನ್ನು ಪ್ರೇಕ್ಷಕರು ತಲೆದೂಗುವಂತೆ ಫ್ರೇಮಿನಿಂದ ಫ್ರೇಮಿಗೆ ಕಟ್ಟುತ್ತಾ ಹೋಗುತ್ತಾನೆ. ಈತನ ಕಾಗಕ್ಕ, ಗುಬ್ಬಕ್ಕ ಕತೆಗಳನ್ನು ಸಿನಿಮಾದ ರೀಲುಗಳಲ್ಲಿ ಅಡಗಿಸಿಟ್ಟು ಅದಕ್ಕೆ ಬಣ್ಣಗಳನ್ನು ತುಂಬುತ್ತಾ ಪರದೆಯ ಮೇಲೆ ಹೊರ ಬಿಡುವಾಗ ಪ್ರೇಕ್ಷಕನೂ ಸಹ ಆ ಬಣ್ಣಗಳಲ್ಲಿ ಕಳೆದು ಹೋಗುವಂತಹ ಚಿತ್ರಕತೆಯನ್ನು ಹೆಣೆಯುವ ಹಿರಾನಿ, ಪ್ರತಿ ಸಿನಿಮಾದಲ್ಲೂ ಅದಕ್ಕೆ ವೈಚಾರಿಕತೆಯ, ನೈತಿಕತೆಯ, ಆದರ್ಶದ ಸ್ಲೋಗನ್‌ಗಳ ಹೊದಿಕೆಯನ್ನು ಸುತ್ತುತ್ತಾನೆ. ಹಿರಾನಿಯ ಈ ನೈತಿಕತೆಯ ಪಾಠಗಳು ಚಿಂತನೆಗೆ ಹಚ್ಚುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರೇಕ್ಷಕನನ್ನು ಮತ್ತಷ್ಟು ಉಲ್ಲಾಸಗೊಳಿಸುತ್ತವೆ. ಆತನಿಗೆ ಸಿನಿಮಾ ಭಾಷೆಯ ಮೇಲಿರುವ ಹಿಡಿತ ನಿಜಕ್ಕೂ ಬೆರಗುಗೊಳಿಸುತ್ತದೆ. ಆದರೆ ‘ಈ ನರಕ ಯಾತನೆಗೆ ಕೊನೆ ಎಂದು?’ ಎನ್ನುವ ಪ್ರಶ್ನೆಗಳನ್ನು ಹಿರಾನಿಯ ಪಾತ್ರಗಳೂ ಕೇಳುವುದಿಲ್ಲ. ಪ್ರೇಕ್ಷಕರೂ ಬಯಸುವುದಿಲ್ಲ. ಏಕೆಂದರೆ ಇಲ್ಲಿನ ಎಲ್ಲಾ ಭ್ರಷ್ಟತೆ, ಕ್ರೌರ್ಯಗಳ ನಿರೂಪಣೆಯು ಪ್ರೇಕ್ಷಕನಲ್ಲಿ ತಲ್ಲಣಗೊಳಿಸುವುದರ ಬದಲು, ನೋವನ್ನು ಉಂಟು ಮಾಡುವುದರ ಬದಲು ಅರೆ ಅದನ್ನೆಲ್ಲ ಎಷ್ಟು ಚೆಂದ ತೋರಿಸಿದ್ದಾನೆ ಈ ಹಿರಾನಿ ಎಂದು ಪ್ರೇಕ್ಷಕ ತಲೆದೂಗುವಂತೆ ಮಾಡುವದರಲ್ಲಿಯೇ rajkumar-hiraniಹಿರಾನಿಯ ನೈಪುಣ್ಯತೆ ಕರಗಿ ಹೋಗುವುದರಿಂದ ಮತ್ತು ಈ ಎಲ್ಲಾ ಪ್ರಶ್ನೆಗಳನ್ನೇ ಅನೇಕ ಬಾರಿ ಅಸಂಬದ್ಧ, ನೀವು ಸಿನಿಮಾ ನೋಡಲು ಬಂದಿದ್ದೀರಿ ಅದನ್ನು ಮಾಡಿ ಎಂದೇ ತಾಕೀತು ಮಾಡುವಂತಿರುತ್ತದೆ.

ಆದರೆ ಹಿರಾನಿ ತನ್ನ ಮೊದಲ ಸಿನಿಮಾ ‘ಮುನ್ನಾ ಭಾಯಿ ಎಂಬಿಬಿಎಸ್’ ಅನ್ನು ನಿದೇಶಿಸಿದಾಗ ಅಲ್ಲಿ ಕತೆಯ ಮೂಲಕ ಸಂದೇಶವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದ. ಆ ಸಿನಿಮಾದಲ್ಲಿ ಮಗುವಿನ ಮುಗ್ಧತೆ, ಅಂಬೆಗಾಲಿನ ಪ್ರಾಮಾಣಿಕ ನಡಿಗೆ ಪ್ರತಿ ಪ್ರೇಮಿನಲ್ಲಿ ನಮ್ಮನ್ನು ತಟ್ಟುತ್ತಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಅಲ್ಲಿ ಕತೆ ಹೇಳುತ್ತಲೇ ನ್ಶೆತಿಕತೆ, ಆದರ್ಶದ ಸಂದೇಶಗಳು ಪ್ರೇಕ್ಷಕನಿಗೆ ರವಾನೆ ಆಗುತ್ತಿದ್ದವು. ಈ ಸಂದೇಶಗಳು ತೀರಾ ಸರಳೀಕೃತ ರೂಪದಲ್ಲಿದ್ದರೂ ಸಹ ಅದರ ಪ್ರಮಾಣಿಕತೆಯಿಂದಾಗಿಯೇ ನಮ್ಮನ್ನೆಲ್ಲಾ ಗೆದ್ದುಬಿಟ್ಟಿತ್ತು. ಆದರೆ ನಂತರ ’ಲಗೇ ರಹೋ ಮುನ್ನಾಭಾಯ”, ಮತ್ತು ’ತ್ರೀ ಈಡಿಯಟ್ಸ್’ ನ ಅಭೂತಪೂರ್ವ ಯಶಸ್ಸಿನ ನಂತರ ಹಿರಾನಿಯ ಆ ಮುಗ್ಧತೆ ಮತ್ತು ಪ್ರೇಕ್ಷಕನ್ನು ತಟ್ಟುವ ಗುಣಗಳು ಈ ಪಿಕೆ ಸಿನಿಮಾದಲ್ಲಿ ಕಣ್ಮರೆಯಾಗಿ ಬೋಧನೆಯ ಸ್ವರೂಪ ಪಡೆದುಕೊಂಡಿವೆ ಮತ್ತು ಅದನ್ನು ಬೋಧಿಸುತ್ತಿರುವವರು ಪ್ರತಿ ನಾಯಕರಾದ, ನಮ್ಮ ನಡುವಿನ, ಪಕ್ಕದ ಮನೆಯ ಹುಡುಗರಾದ ಮುನ್ನಾಭಾಯಿ, ಸರ್ಕಿಟ್‌ಗಳಲ್ಲ, ಬದಲಾಗಿ ರ್‍ಯಾಂಚೋ, ಪಿಕೆ ಗಳಂತಹ ತಂತ್ರಜ್ಞಾನ ಪ್ರವೀಣರು, ಛಾಂಪಿಯನ್ನರು, ಯಾವುದೇ ಐಬಿಲ್ಲದ, ಕಲ್ಮಶಗಳಿಲ್ಲದ ಪರಿಪೂರ್ಣ ನಾಯಕರು. ಚಿತ್ರದಿಂದ ಚಿತ್ರಕ್ಕೆ ಬಲಗೊಳ್ಳುತ್ತ ಸಾಗಿದ ನಿರ್ದೆಶಕ ಹಿರಾನಿ ಆತ್ಮ ವಿಶ್ವಾಸವನ್ನು ಗಳಸಿಕೊಳ್ಳುತ್ತಾ, ಹೊಸ ನಿರ್ದೇಶನದ ಪಿಕೆ ಸಿನಿಮಾದಲ್ಲಿ ಸಂದೇಶಗಳೇ ಇಡೀ ಸಿನಿಮಾವನ್ನು ವ್ಯಾಪಿಸಿಕೊಂಡು ಪ್ರೇಕ್ಷಕ ’ಕತೆ ಎಲ್ಲಿದೆ?’ ಎಂದು ಪ್ರಶ್ನಿಸಿದಾಗ ನಿರ್ದೇಶಕ ಹಿರಾನಿ ’ನೀನೆ ನನ್ನ ಆ ಸಂದೇಶಗಳಲ್ಲಿ ಕತೆಯನ್ನು ಹುಡುಕಿಕೋ’ ಎಂದು ಉತ್ತರಿಸುತ್ತಾನೆ. ಆದರೆ ಅಲ್ಲಿ ಕತೆಯ ಹೊಳಹೂ ಸಹ ಸಿಗುವುದಿಲ್ಲ. ಮುನ್ನಾಭಾಯಿಯ ’ಒಮ್ಮೆ ನನ್ನನ್ನು ಅಪ್ಪಿಕೋ’ ಎನ್ನುವ ಮುಗ್ಧ ಸಂದೇಶ ತಂದುಕೊಟ್ಟ ಹುಮ್ಮಸ್ಸು, ಉತ್ಸಾಹ ಈ ಪಿಕೆಯ ’ರಾಂಗ್ ನಂಬರ್’ ಸಂದೇಶಕ್ಕೆ ಬಂದು ತಲುಪುವಷ್ಟರಲ್ಲಿ ಕಣ್ಮರೆಯಾಗುತ್ತವೆ.

ಹೀಗಾಗಿ ಪಿಕೆ ಸಿನಿಮಾದಲ್ಲಿ ಆದರ್ಶಗಳ ಸಂದೇಶಗಳಿವೆ, ಧಾರ್ಮಿಕ ಮೌಢ್ಯ, ಮೂಲಭೂತವಾದದ ವಿರುದ್ಧ ಪ್ರತಿಭಟನೆ ಇದೆ. pk-aamir-khan-anushka-sharmaಆಶಯಗಳ ಮಟ್ಟಿಗೆ ಈ ಸಿನಿಮಾ ನಿಜಕ್ಕೂ ಅತ್ಯುತ್ತಮ ಸಿನಿಮಾ. ಆದರೆ ಆ ಆಶಯಗಳು ಅದನ್ನು ಪ್ರೇಕ್ಷಕರಿಗೆ ರವಾನಿಸುವ ಸಂದರ್ಭದಲ್ಲಿ ಹೊಸ ಒಳನೋಟಗಳೊಂದಿಗೆ, ಮತ್ತಷ್ಟು ಆಳವಾದ ಪ್ರಶ್ನೆಗಳೊಂದಿಗೆ ಮೂಡಿ ಬರಲು ನಿರಾಕರಿಸುತ್ತವೆ. ಪಾತ್ರಗಳ ನಡುವೆ ಅತ್ಯಗತ್ಯವಾದ ಪರಸ್ಪರ ಪೂರಕವಾದ ಕೆಮಿಸ್ಟ್ರಿ ಕಣ್ಮರೆಯಾಗಿದೆ. ಹೀಗಾಗಿ ಪ್ರತಿಯೊಂದು ಪಾತ್ರವೂ ಕ್ಯಾಮಾರಾ ಕಡೆಗೆ ಮುಖ ಮಾಡಿ ನಿರ್ದೇಶಕ ಹಿರಾನಿಯ ಸಂದೇಶಗಳನ್ನು ಪ್ರೇಕ್ಷಕನಿಗೆ ಗಿಣಿಪಾಠದಂತೆ ಒಪ್ಪಿಸುತ್ತಿರುತ್ತವೆ ಅಷ್ಟೆ. ಯಾವುದೇ ಪಾತ್ರಗಳಲ್ಲಿಯೂ ಸಂಕೀರ್ಣತೆ ಕಂಡು ಬರುವುದಿಲ್ಲ. ಜಾನೇ ಭೀ ದೋ ಯಾರೋ ದಂತಹ ಅತ್ಯುತ್ತಮ ಹಾಸ್ಯ ಸಿನಿಮಾದ ಪಾತ್ರಗಳ ಸಂಕೀರ್ಣತೆಯು ಪ್ರೇಕ್ಷಕನಿಗೂ ಆಳವಾಗಿ ಮುಟ್ಟುತ್ತದೆ ಮತ್ತು ತಾನು ಹೇಳಬೇಕಾದದ್ದನ್ನು ಕೊಂಚವೂ ಅಳುಕಿಲ್ಲದೆ ನಿರೂಪಿಸುತ್ತಾ ಹೋಗುತ್ತದೆ. ಅದು ನಿಜದ ಯಶಸ್ಸು. ಕನಿಷ್ಠ ‘ಓಹ್ ಮೈ ಗಾಡ್’ ಸಿನಿಮಾದ ತಾಜಾತನವೂ ಇಲ್ಲಿ ಕಾಣಿಸುತ್ತಿಲ್ಲ. ಅಂದರೆ ನಿರ್ದೇಶಕ ಹಿರಾನಿ ತಾನು ಸ್ವತಃ ಅರಗಿಸಿಕೊಳ್ಳುವುದಕ್ಕೂ ಆಗದಷ್ಟು ಆಹಾರವನ್ನು ಅಗಿಯುತ್ತಿದ್ದಾನೆ. ಅಂದರೆ Art for the sale of art ನ ತತ್ವದಂತೆಯೇ ಪಿಕೆಯಲ್ಲಿ Messages for the sake of messages ತರಹ ತತ್ವಗಳು ರವಾನೆಯಾಗುತ್ತಿವೆ. ಈ ಸಿನಿಮಾದ ಕ್ಲೈಮಾಕ್ಸ್ ದೃಶ್ಯದಲ್ಲಿ ಡೋಂಗಿ ಬಾಬಾ ‘ತಪಸ್ವಿ’ ಮತ್ತು ‘ಪಿಕೆ’ ನಡುವಿನ ಚರ್ಚೆ ಮತ್ತು ಸಂವಾದದ ಆಶಯಗಳು ತುಂಬಾ ಮಾನವೀಯವಾಗಿದೆ. ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸುವ ಆ ಆಶಯಗಳು ಇಂದಿನ ಧಾರ್ಮಿಕ ಫೆನಟಿಸಂಗೆ ತಕ್ಕ ಉತ್ತರವಾಗಿದೆ. munna-bhai-mbbsಇದನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯಬೇಕಿದ್ದ ನಿರ್ದೇಶಕ ಹಿರಾನಿ ಆ ಇಡೀ ದೃಶ್ಯವನ್ನು ಹೈಸ್ಕೂಲ್‌ನ ಡಿಬೇಟ್ ಮಟ್ಟಕ್ಕೆ ಇಳಿಸಿದ್ದಾನೆ. ಕಡೆಗೆ ಅದು ವೀರ-ಜಾರ ಸಿನಿಮಾದ ಮಾದರಿಯಲ್ಲಿ ಅನುಷ್ಕ ಶರ್ಮ ಮತ್ತು ಅವಳ ಪಾಕಿಸ್ತಾನ ಪ್ರೇಮಿಯನ್ನು ಒಂದುಗೂಡಿಸುಲ್ಲಿಗೆ ಪರ್ಯಾವಸಾನಗೊಳ್ಳುತ್ತದೆ.

ಆದರೆ ಒಂದು ಸದುದ್ದೇಶದ, ಸೂಕ್ಷ್ಮತೆಯ, ಮೌಢ್ಯವನ್ನು ನೇರವಾಗಿ ಟೀಕಿಸುವ, ಜನಪರ ಆಶಯಗಳನ್ನುಳ್ಳ ಪಿಕೆ ಸಿನಿಮಾವನ್ನು ನೋಡಲು ಈ ಎಲ್ಲಾ ಪ್ರಶ್ನೆಗಳು ಬೇಕೆ ಸ್ವಾಮಿ ಎಂದು ಕೇಳಿದರೆ ಉತ್ತರವೂ ಇಲ್ಲ. ಏಕೆಂದರೆ ಆ ಪ್ರಶ್ನೆ ತುಂಬಾ ವಾಸ್ತವ. ಆದರೆ ಪಿಕೆ ನೋಡಿದ ನಂತರ ಮತ್ತೊಮ್ಮೆ ಗರಂ ಹವಾ, ರಾಮ್ ಕೆ ನಾಮ್, ತಣ್ಣೀರ್ ತಣ್ಣೀರ್, ಸದ್ಗತಿಯಂತಹ ಸಿನಿಮಾಗಳನ್ನು ಐದನೇ ಬಾರಿ, ಹತ್ತನೇ ಬಾರಿ ನೋಡಲು ಮನಸ್ಸು ತಹತಹಿಸುತ್ತದೆ. ಇದು ಸಹ ಅಷ್ಟೇ ಸತ್ಯ. ಆದರೆ ಸಿನಿಮಾ ಬಿಡುಗಡೆಯಾದ ಮೂರೇ ವಾರಗಳಲ್ಲಿ 300 ಕೋಟಿಗೂ ಮೇಲ್ಪಟ್ಟು ಗಳಿಸಿರುವುದೇ ಇದನ್ನೂ ಪ್ರೇಕ್ಷಕ ಸ್ವೀಕರಿಸಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ಅಷ್ಟೇಕೆ ನಿರ್ಮಾಪಕರು ಈ ಸಿನಿಮಾವನ್ನು ಮತೀಯವಾದಿ ನಾಯಕ ಎಲ್.ಕೆ. ಅದ್ವಾನಿ, ಭ್ರಷ್ಟ, ಮತೀಯವಾದಿ, ಡೋಂಗಿ ಬಾಬಾ ಶ್ರೀ ಶ್ರೀ ರವಿಶಂಕರ್‌ಗೆ ಅರ್ಪಿಸಿದ್ದಾನೆ, ಇದಕ್ಕೇನು ಮಾಡುವುದು ಎಂದಾಗ ಇಂತಹ ಕ್ಷುಲ್ಲಕ ಸಂಗತಿಗಳನ್ನು ಎತ್ತಬೇಡಿ, ಸಿನಿಮಾದ ಸಂದೇಶಗಳನ್ನು ಗಮನಿಸಿ ಎಂದು ಹೇಳಿದರೆ ????

ಹೀಗಾಗಿಯೇ ಇಂದು ಹಿಂದಿ ಸಿನಿಮಾರಂಗದಲ್ಲಿ ಒಂದು ತುದಿಯಲ್ಲಿ ಸಲ್ಮಾನ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್‌ರಂತಹ ನಟರು ಮತ್ತು ಬಹುಪಾಲು ಹಿಂದಿ ನಿರ್ದೇಶಕರು ಅತ್ಯಂತ ಕಳಪೆ, ಮೂರನೆ ದರ್ಜೆಯ ಸಿನಿಮಾಗಳನ್ನು ನೀಡುತ್ತಿರುವುದರ ಫಲವಾಗಿ ಮತ್ತೊಂದು ತುದಿಯಲ್ಲಿ ಈ ಹಿರಾನಿ ಮತ್ತು PK_poster_burning_Jammuಅಮೀರ್ ಖಾನ್ ಜೋಡಿ ನಿರ್ಮಿಸುತ್ತಿರುವ ಸಿನಿಮಾಗಳು ನಿಜಕ್ಕೂ something better ಎನ್ನುಂತೆ ರೂಪಿತಗೊಂಡಿರುವುದೂ ನಿಜ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆರೆಸ್ಸಸ್ ಸರ್ಕಾರ ಕಳೆದ ಆರು ತಿಂಗಳಿಂದ ಸಮಾಜದಲ್ಲಿ ಹಿಂದೂಯಿಸಂನ ಫೆನಟಿಸಂ ಅನ್ನು ನಿರಂತರವಾಗಿ ಹುಟ್ಟು ಹಾಕುತ್ತಿದೆ, ಮೂಲಭೂತವಾದ ಮತ್ತು ಕೋಮುವಾದದ ಸ್ವರೂಪಗಳು ಹೆಡೆ ಎತ್ತುತ್ತಿವೆ. ಮತ್ತು ಈ ‘ಪಿಕೆ’ ಸಿನಿಮಾದ ವಿರುದ್ಧ ಮತೀಯವಾದಿ ಹಿಂದೂ ಸಂಘಟನೆಗಳು ಪ್ರತಿಭಟಿಸಿ ಹಿಂಸಾತ್ಮಕವಾಗಿ ವರ್ತಿಸುತ್ತಿವೆ. ಈ ಕಾರಣಗಳಿಂದಾಗಿಯೇ ಹಿರಾನಿ-ಅಮೀರ್ ಖಾನ್ ಜೋಡಿಯ ‘ಪಿಕೆ’ ಸಿನಿಮಾಗೆ ಒಂದು ಬಗೆಯ ಸೆಕ್ಯುಲರ್ ಅಯಾಮವೇ ದೊರಕಿಬಿಟ್ಟಿದೆ. ಇಂದು ಮೂಢ ನಂಬಿಕೆಗಳ ವಿರುದ್ಧದ ಹೋರಾಟಕ್ಕೆ ಶ್ರೇಷ್ಠವಾದ ಸಂಕೇತ ಈ ಪಿಕೆ ಸಿನಿಮಾ ಎನ್ನುವುದೇ ನಿಜವಾದಲ್ಲಿ, ಪ್ರಜ್ಞಾವಂತರು, ಪ್ರಗತಿಪರರು, ಜಾತ್ಯಾತೀತರು ತಮ್ಮ ಹೊಣೆಯನ್ನು ನಿಭಾಯಿಸಲು ಸೋತು ಅ ಹೊಣೆಗಾರಿಕೆಯನ್ನು ಈ ‘ಪಿಕೆ’ ಎನ್ನುವ ಅಮಾಯಕ, ಮುಗ್ಧ, ಸರಳ ಸಿನಿಮಾದ ಹೆಗಲಿಗೆ ವರ್ಗಾಯಿಸಿದ್ದೇವೆ ಅಷ್ಟೆ. ಮತ್ತೇನಿಲ್ಲ.

3 comments

  1. ಪ್ರಿಯ ಶ್ರೀಪಾದ ಭಟ್, ಭಯೋತ್ಪಾದಕ ಸಂಘಟನೆಗಳ ಹಣದಿಂದ ನಿರ್ಮಾಣಗೊಂಡ ಸಿನೆಮಾ ಎಂಬ ಅಪಖ್ಯಾತಿ ಈ ಸಿನೆಮಾಗಿದೆ. ಅಷ್ಟೇ ಅಲ್ಲ ಕಪ್ಪು ಹಣವನ್ನು ಬಿಳಿ ಮಾಡುವ ಉದ್ದೇಶದಿಂದ ಈ ಸಿನೆಮಾವನ್ನು ಖಾಲಿ ಖಾಲಿ ಥೀಯೆಟರ್ಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂಬ ಆಪಾದನೆಯೂ ಇದೆ. ಇದು ಸತ್ಯವೇ ಆಗಿದ್ದರೆ ಆಮೀರ್ ಖಾನ್ ಅವರನ್ನು ನೀವು ಇದೇ ವೇದಿಕೆಯ ಮೇಲೆ ತರಾಟೆಗೆ ತೆಗೆದುಕೊಳ್ಳಬೇಕಾಗಿಬರುತ್ತದೆ.

  2. ಶ್ರೀಪಾದ್ ಭಟ್ ಅವರು ತುಂಬಾ ಚೆನ್ನಾಗಿ ೪ ಸಿನೆಮಾದ ವಿಮರ್ಶೆ ಮಾಡಿದ್ದಾರೆ ,ಮತ್ತು ಸಿನಿಮಾ ಮಾದ್ಯಮದ ಮೇಲಿನ ತಮ್ಮ ನಾಲೆಜ್ ನ್ನು ದ್ರಢ ಪಡೆಸಿದ್ದಾರೆ ಮುನ್ನ್ನಾ ಭಾಯಿ-೨, ಮತ್ತು ೩ ಈಡಿಯಟ್ಸ್ ಕಮರ್ಷಿಯಲ್ ಸಿನೆಮಾವಾದರೂ ಅದರಲ್ಲಿ ಒಂದು ತರಹದ ಸಂವೇದನಾಶೀಲ ಮತ್ತು ಸಮಾಜಕ್ಕೆ ಒಂದು ಮೆಸೇಜ್ ಕೊಡುವ ತವಕತೆಯಿತ್ತು . ಆದರೆ ಪಿಕೆಯನ್ನು ಮೆಚ್ಚಲು ಅಥವಾ ವಿರೋದಿಸಲು ಯಾವುದೇ ಕಾರಣ ನನಗೆ ತೋಚುತ್ತಿಲ್ಲ . ಇದು ಒಂದು ಸಾಧಾರಣ ಚಿತ್ರ ,ಮೂಡನಂಬಿಕಿಯ ವಿರುದ್ದ ಇದಕ್ಕಿಂತ ಪವೆರಫುಲ್ ಖಂಡನೆ ‘ಓ ಮೈ ಗಾಡ್ ‘ಚಿತ್ರದಲ್ಲಿತ್ತು . ಪಿಕೆ ಯಾವ ಏಂಗಲ್ ನಲ್ಲಿ ನೋಡಿದರೂ ಒಂದು ಅತೀ ಸಾದಾರಣ ಚಿತ್ರವೇ ! ವಿದು ವಿನೋದ್ ಚೋಪ್ರಾ ಭಯೋತ್ಪದಕರ ಬೆಂಬಲದಿಂದ ಇದನ್ನು ನಿರ್ಮಿಸಿದ್ದಾರೆ ಎಂದು ಶ್ರೀ ಕ್ರಾಂತಿಕೇಸ್ವರರವರ ಸಂಶಯವನ್ನು ಸರಕಾರ ಗಂಭಿರವಾಗಿ ಪರಿಗಣಿಸಿ ತನಿಖೆ ನಡೆಸಬೇಕು!

    1. ಸಲಾಂ ಬಾವ ಅವರೇ, ಪಿ ಕೆ ಸಿನೆಮಾಗೆ ಯಾರು ಹಣ ಹೂಡಿದ್ದಾರೆ ಅಂತ ತನಿಖೆ ಮಾಡಿದರೆ ಸತ್ಯ ತಿಳಿದು ಬರುತ್ತದೆ. ಸುಬ್ರಹ್ಮಣ್ಯ ಸ್ವಾಮಿ ಅವರು ಈ ಬಗ್ಗೆ ಕಾರ್ಯೋನ್ಮುಖರಾಗಿದ್ದಾರೆ:

      “ARY which financed the Aamir Khan promotional of PK in Dubai was founded by a Karachi based Pakistani named Abdul Razak Yakub. ARY thrown out of London Bullion Market and from UK in 2006 for money laundering drug trafficking and terror financing. A complaint will go soon to initiate action under PMLA on Aamir Khan & co for laundering terrorist finance.”

Leave a Reply

Your email address will not be published.