ನೆಲದ ಭಾಷೆ ಮತ್ತು ಕಲಿಕೆಯ ಮಾಧ್ಯಮ

– ಪ್ರಸಾದ್ ರಕ್ಷಿದಿ

ಭಾರತದ ಸರ್ವೋಚ್ಛ ನ್ಯಾಯಾಲಯ ‘ಮಕ್ಕಳಿಗೆ ಯಾವ ಭಾಷಾ ಮಾಧ್ಯಮದಲ್ಲಿ ವಿದ್ಯೆ ನೀಡಬೇಕೆನ್ನುವುದನ್ನು ನಿರ್ಧರಿಸುವ ಹಕ್ಕು ಪೋಷಕರದ್ದು’ ಎಂದು ತೀರ್ಪು ನೀಡಿದೆ. ಈ ತೀರ್ಪು ಭಾರತದ ಸಂವಿಧಾನದ ಅಡಿಯಲ್ಲಿ ಮಾತ್ರವಲ್ಲ ಯಾವುದೇ ಪ್ರಜಾಪ್ರಭುತ್ವ ದೇಶದ ನ್ಯಾಯಾಲಯ ನೀಡಬಹುದಾದ, ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಹಜವಾದ ತೀರ್ಪಿನಂತೇ ಇದೆ. Supreme Courtಆದರೆ ಇದರ ಸಾಧಕ ಭಾಧಕಗಳ ಚರ್ಚೆಯಾಗಬೇಕಾಗಿರುವುದು, ಭಾರತದಂತಹ ಬಹುಭಾಷಾ, ಬಹುಜಾತೀಯ ಮತ್ತು ಬಹು ಸಂಸ್ಕೃತಿಯ ಸಮಾಜದ ಹಿನ್ನೆಲೆಯಲ್ಲಿ.

ಇಲ್ಲಿ ಕನ್ನಡದ ಸಂದರ್ಭವನ್ನು ಮಾತ್ರ ಪರಿಗಣಿಸಿ ಈವಿಚಾರಗಳನ್ನು ಹೇಳುತ್ತಿದ್ದೇನಾದರೂ ಹಿಂದಿ ಭಾಷೆಯನ್ನಾಡುವ ಪ್ರದೇಶಗಳನ್ನುಳಿದು ಬೇರೆ ಎಲ್ಲಾ ಪ್ರಾದೇಶಿಕ ಭಾಷೆಗಳ ಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಹಿಂದಿ ಭಾಷೆಯು ಕೇಂದ್ರ ಸರ್ಕಾರದಿಂದ ವಿಶೇಷ ಪೋಷಣೆಯನ್ನು ಪಡೆಯುತ್ತಿದ್ದರೂ ಸಹ ಕಲಿಕಾ ಮಾಧ್ಯಮದ ವಿಚಾರಕ್ಕೆ ಬಂದಾಗ ಇಂಗ್ಲಿಷ್‌ನೊಂದಿಗೆ ಅವರಿಗೂ ಸಮಸ್ಯೆಗಳಿವೆ.

ಸಾಮಾನ್ಯವಾಗಿ ನಾವು ಮಾತನಾಡುವಾಗ, ನಮ್ಮ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸಲು, ಸಹಜವಾಗಿ ಯೋಚಿಸಲು, ಪ್ರಪಂಚದ ಎಲ್ಲ ಅನುಭವಗಳನ್ನು ಮತ್ತು ಅದರ ಮೂಲಕ ದೊರೆಯುವ ಜ್ಞಾನವನ್ನು ಸ್ವೀಕರಿಸಿ ಗ್ರಹಿಸಲು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳುತ್ತಲೇ ಇರುತ್ತೇವೆ. ಇದಕ್ಕೊಂದು ತಮಾಷೆಯ ಉದಾಹರಣೆಯನ್ನು ನೀಡುತ್ತೇನೆ. ಸುಮಾರು ಮೂವತ್ತು ವರ್ಷಗಳಕಾಲ ಆಸ್ಟೇಲಿಯಾದಲ್ಲಿ ವಿಜ್ಞಾನಿಯಾಗಿದ್ದು ಇದೀಗ ವಾಪಸ್ ಬಂದು ಹಳ್ಳಿಯಲ್ಲಿ ನೆಲೆಸಿದವರೊಬ್ಬರು ಇತ್ತೀಚೆಗೆ ಪರಿಚಯವಾದರು. ಅವರು ಆಸ್ಟೇಲಿಯಾದಲ್ಲಿನ ಅನುಭವಗಳ ಬಗ್ಗೆ ಮಾತನಾನಾಡುತ್ತ ಒಂದು ವಿಚಾರವನ್ನು ಹೇಳಿದರು. Kavi_kannadaಅವರು ಅಲ್ಲಿದ್ದಾಗ ಯಾರಿಗಾದರೂ ಬಯ್ಯುತ್ತಿದ್ದರೆ ಮಾತು ತನ್ನಷ್ಟಕ್ಕೆ ಕನ್ನಡ ಭಾಷೆಗೆ ಹೊರಳುತ್ತಿತ್ತಂತೆ!. ಅಂದರೆ ನಾವು ಕಲಿತ ಭಾಷೆಯಲ್ಲಿ ಪೂರ್ಣ ಅಭಿವ್ಯಕ್ತಿ ಕಷ್ಟ ಎನ್ನುವುದನ್ನವರು ಪರೋಕ್ಷವಾಗಿ ತಿಳಿಸಿದರು. ಆದರೆ ನಾವು ವ್ಯಾವಹಾರಿಕ ಜಗತ್ತಿಗೆ ಬಂದಾಗ ಇಂಗ್ಲಿಷ್ ಭಾಷೆಯೇ ನಮ್ಮ ಆದ್ಯತೆಯಾಗಿಬಿಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ.

ಮಾತೃಭಾಷೆ ಎನ್ನುವ ಪದವೇ ಸ್ವಲ್ಪ ಗೊಂದಲವುಂಟುಮಾಡುವಂಥದ್ದು ಕರ್ನಾಟಕದಲ್ಲೇ, ತುಳು, ಕೊಡವ, ಮುಂತಾದ ಪ್ರಾದೇಶಿಕ ಭಾಷೆಗಳಿದ್ದ ಹಾಗೆ ಬಂಜಾರ, ಅರೆಗನ್ನಡ, ಹೈಗ, ಬೋವಿ, ಬ್ಯಾರಿ ಮುಂತಾದ ಜನಾಂಗೀಯ ಭಾಷೆಗಳಿವೆ. ತಮಿಳು, ತೆಲುಗು, ಉರ್ದು, ಕೊಂಕಣಿ. ಮಲೆಯಾಳಂ, ಭಾಷಿಕರಿದ್ದಾರೆ. ನಾವು ಮನೆಯಲ್ಲಿ ಆಡುವ ಮಾತನ್ನು ಮಾತೃಭಾಷೆ ಎಂದುಕೊಂಡರೆ, ಮಧ್ಯ ಕರ್ನಾಟಕದ ಅಚ್ಚಕನ್ನಡದ ನೆಲದಲ್ಲೂ ನಾವು ಹೊರಗೆ ಮಾತನಾಡುವ ಕನ್ನಡಕ್ಕೂ ಮನೆ ಮಾತಿಗೂ ತುಂಬ ವ್ಯತ್ಯಾಸಗಳಿವೆ. ಇವರೆಲ್ಲರಿಗೂ ತಮ್ಮ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಕ್ಕು ಸಂವಿಧಾನಾತ್ಮಕವಾಗಿ, ಇದೀಗ ನ್ಯಾಯಾಲಯದ ಮೂಲಕ ದೊರೆತಿದೆ. ಈಗ ಅಧಿಕೃತವಲ್ಲದ ಭಾಷೆಗಳವರೂ ತಮ್ಮ ಭಾಷೆಗಳನ್ನು ಅಧಿಕೃತಗೊಳಿಸಿ ಶಿಕ್ಷಣ ಸೌಲಭ್ಯವನ್ನು ಕೊಡಿ ಎಂದು ಕೇಳಬಹುದು. ಆದ್ದರಿಂದ ಮಾತೃಭಾಷೆಯೆಂಬ ಸುಂದರವಾದ ಪದವನ್ನು ಪಕ್ಕಕ್ಕಿಟ್ಟು, ಪರಿಸರದ ಭಾಷೆ ಅಥವಾ ಆ ರಾಜ್ಯದಲ್ಲಿ ಅಧಿಕೃತವಾಗಿ ಆಡಳಿತ- ವ್ಯವಹಾರಗಳಲ್ಲಿರುವ ಪ್ರಾದೇಶಿಕ ಭಾಷೆ ಎಂಬ ಪದವನ್ನು ಬಳಸಿದರೆ ಸ್ವಲ್ಪಮಟ್ಟಿನ ಖಚಿತತೆ ಬಂದೀತು.

ಈಗ ನಮ್ಮ ಪ್ರಾದೇಶಿಕ ಭಾಷೆಗಳಿಗೆ ನ್ಯಾಯಾಲಯದ ತೀರ್ಪಿನಿಂದ ಬಂದ ಕುತ್ತಿನ ಬಗ್ಗೆ ಚರ್ಚಿಸುವ ಮೊದಲು ಎರಡು ಉದಾಹರಣೆಗಳನ್ನು ಕೊಡುತ್ತೇನೆ.

ಕೆಲವು ವರ್ಷಗಳ ಹಿಂದೆ ನಮ್ಮೂರು ಸಕಲೇಶಪುರದಲ್ಲಿ ಒಬ್ಬರು ಶಿಕ್ಷಣಾಧಿಕಾರಿಗಳಿದ್ದರು. kannada-schoolತುಂಬ ದಕ್ಷರೆಂದೂ ಸಜ್ಜನರೆಂದೂ ಹೆಸರಾದವರು. ಆ ಕಾಲದಲ್ಲೇ ಸಕಲೇಶಪುರದಲ್ಲಿ ಎರಡು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿದ್ದವು. ಸರ್ಕಾರಿ ಪ್ರೌಡಶಾಲೆಯಲ್ಲೂ ಇಂಗ್ಲಿಷ್ ಮಾಧ್ಯಮ ಇತ್ತು. ಸಕಲೇಶಪುರದ ಬೇರೆಲ್ಲ ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದರು. ಆದರೆ ಈ ಶಿಕ್ಷಣಾಧಿಕಾರಿಯವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದರು. ಯಾರೋ ಈಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಅವರೆಂದರು, “ನಾನೇ ಶಿಕ್ಷಣಾಧಿಕಾರಿಯಾಗಿ ನನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲೆ? ನನ್ನ ಮಕ್ಕಳು ಕನ್ನಡಲ್ಲೇ ಕಲಿತು ಒಳ್ಳೆಯವರಾಗಿ ಬಾಳಿದರೆ ಸಾಕು.” ಈ ಮಾತು ಇಂದಿಗೆ ಸ್ವಲ್ಪ ಅಪ್ರಸ್ತುತವೆನಿಸಿಕೊಳ್ಳುವ ಆದರ್ಶದ ಸ್ಥಿತಿಯೆನಿಸಿದರೂ ಇಂಥವರು ಈಗಲೂ ಇದ್ದಾರೆ. ಆದರೆ ಇಂತಹ ಉದಾಹರಣೆಯನ್ನು ಸಾರ್ವತ್ರಿಕವಾಗಿ ನಾವು ಕಾಣಲು ಸಾಧ್ಯವಿಲ್ಲ.

ಎರಡನೆಯದು; ಇತ್ತೀಚೆಗೆ ಸಕಲೇಶಪುರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅಂದಿನ ಗೋಷ್ಟಿಯೊಂದರಲ್ಲಿ ಬ್ಯಾಂಕಿನ ಅಧಿಕಾರಿಯೊಬ್ಬರು ಮಾತನಾಡುತ್ತಾ “ನಾವು ಕನ್ನಡ ಉಳಿಯಬೇಕೆನ್ನುತ್ತೇವೆ, ಆದರೆ ಉಳಿಸುವ ಪ್ರಯತ್ನವಾಗಿ ನಮ್ಮಲ್ಲಿ ಈಗ ಇರುವ ಸೌಲಭ್ಯಗಳನ್ನೂ ಬಳಸಿಕೊಳ್ಳದಿದ್ದರೆ ಹೇಗೆ?” ಎಂದು ಹೇಳಿ “ಈಗ ಎಲ್ಲ ಎ.ಟಿ.ಎಂ.ಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದರೆ ಅದನ್ನು ಬಳಸುವವರ ತೀರ ಕಡಿಮೆ (ಗ್ರಾಹಕ ಯಾವ ಭಾಷೆಯನ್ನು ಬಳಸುತ್ತಾನೆಂಬ ಅಂಕಿ ಅಂಶವೂ ಎ.ಟಿ.ಎಂ. ಮೂಲಕವೇ ಬ್ಯಾಂಕಿಗೆ ತಿಳಿಯುತ್ತದೆ) ಕನ್ನಡ ಭಾಷಾ ಸೌಲಭ್ಯವನ್ನು ಬಳಸುವವರ ಸಂಖ್ಯೆ ಹೆಚ್ಚಾದರೆ ಇತರ ವ್ಯವಹಾರಗಳಿಗೂ ಕನ್ನಡ ಭಾಷಾ ಸೌಲಭ್ಯ ಕಲ್ಪಿಸುವುದು ಬ್ಯಾಂಕುಗಳಿಗೆ ಅನಿವಾkannada_Kuvempuರ್ಯವಾಗುತ್ತದೆ. ಅದಕ್ಕಾಗಿ ಕನ್ನಡ ತಂತ್ರಾಂಶಗಳ ನಿರ್ಮಾಣ ಮಾಡಬೇಕಾಗುತ್ತದೆ. ಕನ್ನಡ ಉದ್ಯೋಗಗಳು ಹೆಚ್ಚುತ್ತವೆ” ಎಂದರು. ಖಂಡಿತವಾಗಿಯೂ ಇದು ಅತ್ಯಂತ ಪ್ರಾಕ್ಟಿಕಲ್ ಆದಂತಹ ಆದರ್ಶ. ಸಾರ್ವತ್ರಿಕವಾಗಿ ನಾವು ಮಾಡಬಹುದಾದದ್ದು.

ಆದರೆ ಇಂಗ್ಲಿಷ್‌ ಜ್ಞಾನ ಅಷ್ಟಾಗಿ ಇಲ್ಲದೆ ಇರುವವರೂ ಸಹ ಹೆಚ್ಚಾಗಿ ಎ.ಟಿ.ಎಂ.ಗಳಲ್ಲಿ. ಬ್ಯಾಂಕಿನ ಇತರ ವ್ಯವಹಾರಗಳಲ್ಲಿ ಇಂಗ್ಲಿಷನ್ನೇ ಬಳಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವರಲ್ಲಿ ಅನೇಕರು (ತೀರ ಕಡಿಮೆ ಶಾಲಾವಿದ್ಯಾಭ್ಯಾಸ ಇರುವವರು) ಇಂಗ್ಲಿಷ್ ಬಳಸದಿದ್ದರೆ ಇತರರು ತಮ್ಮನ್ನು ಕೀಳಾಗಿ ಕಾಣುತ್ತಾರೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಇಂಗ್ಲಿಷ್ ಸುಲಭವೆಂದೋ ಇಲ್ಲವೇ ಆ ಮೂಲಕ ನಾವು ಇಂಗ್ಲಿಷ್ ಕಲಿಯುತ್ತಿದ್ದೇವೆಂದೋ ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಎಷ್ಟೋ ಕಡೆಗಳಲ್ಲಿ ಸರಿಯಾದ ತಂತ್ರಾಂಶ ಮತ್ತು ಭಾಷೆ ಬಳಕೆಯಾಗದೆ ಕನ್ನಡದ ವಿವರಣೆಗಳೇ ಗೊಂದಲಮಯವಾಗಿವೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಮಾನ, ಪ್ರಾದೇಶಿಕ ಭಾಷೆಗಳು ಮತ್ತು ಜನಸಾಮಾನ್ಯರ ನಡವಳಿಕೆಗಳ ಬಗ್ಗೆ ಯೋಚಿಸೋಣ.

ಎಲ್ಲ ಜನರೂ ಸಾಮಾನ್ಯರೇ. ಆದರೆ ಕಲಿತ ವಿದ್ಯೆ-ಸಂಸ್ಕಾರಗಳಿಂದ, ಜೀವನಾನುಭವದಿಂದ ಅಸಾಮಾನ್ಯರಾಗಿ ಬೆಳೆಯುತ್ತಾರೆ. ಅಂತಹವರಲ್ಲಿ ಅನೇಕ ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು, ಜನಪರ ಹೋರಾಟಗಾರರೂ ಇರುತ್ತಾರೆ. ಇವರಲ್ಲಿ ತಮಗೆ ಮಾತ್ರವಲ್ಲ ಸಮಾಜಕ್ಕೆ ಯಾವುದು ಒಳಿತು ಎನ್ನುವುದರ ಬಗ್ಗೆ ತಮ್ಮದೇ ಆದ ಖಚಿತ ನಿಲುವು- ಅಭಿಪ್ರಾಯಗಳಿವೆ. ಹಾಗೆಯೇ ಜನಸಾಮಾನ್ಯರು ಎನಿಸಿಕೊಂಡವರಲ್ಲೂ ಹೆಚ್ಚಿನವರು ಸಜ್ಜನರೂ ತಮ್ಮ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಪ್ರೀತಿಗಳನ್ನಿಟ್ಟುಕೊಂಡವರೂ ಇದ್ದಾರೆ. ಆದರೆ ಇದರೊಂದಿಗೆ ಇವರಿಗೆ ಬದುಕು ಕಲಿಸಿಕೊಟ್ಟಂತಹ ವಿವೇಕವಿದೆ. ಪ್ರತಿಕ್ಷಣವೂ ಬದುಕಿನ ಹೋರಾಟವಿದೆ. ಇಂದು ನಾಳೆಯ ಕನಸುಗಳಿವೆ ಒಂದುಕಾಲದಲ್ಲಿ ಕನಸು ಕಾಣಲೂ ಸಾಧ್ಯವಿಲ್ಲದಿದ್ದ ಜನಾಂಗಗಳು ಇಂದು ಕನಸು ಕಾಣುವ ಮಟ್ಟಿಗಾದರೂ ಬೆಳೆದಿವೆ. ಇವೆಲ್ಲದರ ನಡುವೆ ಹಗಲುಗನಸನ್ನು ಮಾರುವ ಮಾಧ್ಯಮಗಳಿವೆ.

ಇದಕ್ಕೆ ಎರಡು ಉದಾಹರಣೆಗಳನ್ನು ನೀಡುತ್ತೇನೆ. ನಮ್ಮೂರಿನಲ್ಲಿ ಗಾರೆಕೆಲಸ ಮಾಡುತ್ತಿದ್ದವರ ಮಗನೊಬ್ಬ ಮುಂಬೈಗೆ ಹೋದ ಅಲ್ಲಿ ಅಡಿಗೆ ಕೆಲಸ ಕಲಿತು ವೆಸ್ಟ್ ಇಂಡೀಸ್‌ನ ಹಡಗೊಂದರಲ್ಲಿ ಕೆಲಸಕ್ಕೆ ಸೇರಿದ. ಅಲ್ಲೀಗ ಮುಖ್ಯ ಬಾಣಸಿಗನಾಗಿದ್ದಾನೆ. government_schoolಆಗಾಗ ಊರಿಗೂ ಬರುತ್ತಾನೆ. ಇಲ್ಲಿ ಒಳ್ಳೆಯ ಮನೆಯೊಂದನ್ನು ಕಟ್ಟಿಸಿದ್ದಾನೆ. ಆತನ ಸಂಸಾರವೂ ಇಲ್ಲೇ ನೆಲೆಸಿದೆ. ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯತ್ತಿದ್ದಾರೆ. ಹಲವಾರು ದೇಶ ಸುತ್ತಿರುವ ಈತ ಬಂದಾಗಲೆಲ್ಲ ಊರಿನ ಮಕ್ಕಳಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿ ಎಂದು ಸಲಹೆ ನೀಡುತ್ತಾನೆ. ಅವನ ಅನುಭವ ಸುಳ್ಳಲ್ಲ.

ನಮ್ಮ ತಾಲ್ಲೂಕಿನ ಹುಡುಗಿಯೊಬ್ಬಳು ಕಷ್ಟದಿಂದ ಕನ್ನಡ ಶಾಲೆಯಲ್ಲಿ ಕಲಿತು ಮುಂದೆ ಎಂ.ಎಸ್‌ಸಿ ಓದಿ ಇಲ್ಲೇ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಳು. ಇದೀಗ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಬೆಂಗಳೂರಿನ ಯಾವ ಕಾಲೇಜಿನಲ್ಲೂ ಅವಳಿಗೆ ಕೆಲಸ ಸಿಗಲಿಲ್ಲ. ಕಾರಣ ಸಂದರ್ಶನಕ್ಕೆ ಹೋದಲ್ಲೆಲ್ಲ “ನೀನು ಪಾಠವೇನೋ ಮಾಡುತ್ತೀಯಾ, ಆದರೆ ಮಾತನಾಡುವಾಗ ನಿನ್ನ ಇಂಗ್ಲಿಷ್ ಸರಿಯಾಗಿಲ್ಲ” ಎನ್ನುತ್ತಿದ್ದರಂತೆ. ಈಗ ಇಂಗ್ಲಿಷ್ ಕ್ಲಾಸಿಗೆ ಸೇರಿದ್ದಾಳೆ ಮತ್ತು ಊರಿಗೆ ಬಂದಾಗಲೆಲ್ಲ ಬೇರೆಯವರಿಗೆ ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೇ ಕಳುಹಿಸಿ ಎನ್ನುತ್ತಾಳೆ.

ಪ್ರಾದೇಶಿಕ ಭಾಷೆಗಳು ಇದುವರೆಗೂ ಉಳಿದು ಬಂದಿರುವುದು ಹಳ್ಳಿಗಳಲ್ಲಿ ಅದೂ ಸ್ಥಿತಿವಂತರಲ್ಲದ ಕೆಳವರ್ಗದ ಜನರಿಂದ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರೂ ಅವರ ಮಕ್ಕಳೇ. (ಗ್ರಾಮೀಣ ಪ್ರದೇಶದ ಮೇಲ್ವರ್ಗದ-ಶ್ರೀಮಂತರ ಮನೆಗಳಲ್ಲಿ ಈಗಾಗಲೇ ಇಂಗ್ಲಿಷ್ ಆಡುಭಾಷೆಯಾಗಿಯೇ ಪ್ರವೇಶಿಸಿದೆ.) ಪ್ರಪಂಚದ ಅನೇಕ ಮುಂದುವರೆದ ದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಲ್ಲ. ಹಾಗೇ ಹಲವು ದೇಶಗಳಲ್ಲಿ ಇಂಗ್ಲಿಷ್ ಇಲ್ಲವೇ ಇಲ್ಲ ಎಂದು ಯಾರೆಷ್ಟೇ ಹೇಳಿದರೂ ಸಾಮಾನ್ಯರಿಗೆ ಇಂಗ್ಲಿಷ್ ಇಂದು ಪ್ರಪಂಚದ ಹೆಬ್ಬಾಗಿಲಾಗಿಯೇ ಕಾಣುತ್ತಿದೆ. ಮತ್ತು ಆ ಮೂಲಕ ಒಳ್ಳೆಯ ಉದ್ಯೋಗಾವಕಾಶ ಮತ್ತು ಬದುಕಿನ ಕನಸನ್ನು ಕಾಣುತ್ತಿದ್ದಾರೆ. ಇಂಗ್ಲಿಷ್ ಕಲಿಯದಿದ್ದರೆ ನಾವು ಎರಡನೆ ದರ್ಜೆ ಪ್ರಜೆಗಳಾಗಿಯೇ ಉಳಿದುಬಿಡುತ್ತೇವೆನ್ನುವ ಭಯವೂ ಕೆಳವರ್ಗದ ಜನರಲ್ಲಿ ವ್ಯಾಪಕವಾಗಿದೆ.

ಆದರೆ ನಾವು ಅಸಾಮಾನ್ಯರೆಂದು ಹೇಳುವ ಅನೇಕರಲ್ಲೂ ಈ ರೀತಿಯ ಭಾವನೆ ಮತ್ತು ಸಾಮಾನ್ಯನ ಕನಸುಗಳಿವೆ. ಅವರಲ್ಲಿ ನೆಲ-ಜಲ-ಭಾಷೆಗಳಿಗೆ ಸಂಬಂಧಪಟ್ಟಂತೆ ಖಚಿತ ನಿಲುವು, ಸಿದ್ಧಾಂತ ಏನೇ ಇದ್ದರೂ ಸ್ವಂತದ ವಿಷಯಕ್ಕೆ ಬಂದಾಗ ಸಾಮಾನ್ಯನ ವಿವೇಕದ ಕಡೆಗೆ ವಾಲುತ್ತಾರೆ ಮತ್ತು ಪರಿಸ್ಥಿತಿಯೊಡನೆ ರಾಜಿ ಮಾಡಿಕೊಳ್ಳುತ್ತಾರೆ. ಆದ್ದರಿಂದಲೇ ನಾವು ಅನೇಕ ಬಾರಿ ’ಈ ಬುದ್ಧಿವಂತರು- ಹೋರಾಟಗಾರರು ನಮ್ಮ ಮಕ್ಕಳಿಗೆ ಮಾತ್ರ ಕನ್ನಡ ಶಾಲೆಯ ಉಪದೇಶಮಾಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಿದ್ದಾರೆ’ ಎಂಬ ದೂರು ಕೇಳಿಬರುತ್ತದೆ

ಈ ಎಲ್ಲ ಕಾರಣಗಳಿಂದಾಗಿ ಇಂದು ನಗರ- ಹಳ್ಳಿ ಎರಡೂ ಕಡೆಗಳಲ್ಲೂ ನಾನಾ ರೀತಿಯ ಇಂಗ್ಲಿಷ್ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಇವುಗಳ ಗುಣಮಟ್ಟದಲ್ಲಿ ಕೂಡಾ ಅಪಾರ ವೆತ್ಯಾಸಗಳಿವೆ. ಆದರೂ ಜನ ತಮ್ಮ ಅನುಕೂಲಕ್ಕೆ ತಕ್ಕಂತ ಇಂಗ್ಲಿಷ್ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ಹಳೆಯ ತಾರತಮ್ಯದ ಸಮಾಜವೇ ಹೊಸ ವೇಷದಲ್ಲಿ ಮುಂದುವರಿಯುತ್ತಿದೆ.

ಇವುಗಳ ಮಧ್ಯೆ ಕನ್ನಡವೇ ಅಥವಾ ಮಾತೃಭಾಷೆಯೇ ಎಂಬ ವಿವಾದ ಹುಟ್ಟಿಕೊಂಡಿದೆ. ಭಾಷಾ ಅಲ್ಪಸಂಖ್ಯಾತರ ಹೆಸರಿರಲಿ ಇನ್ನೇನೇ ಇರಲಿ, ಎಲ್ಲ ಶಾಲೆಗಳಲ್ಲೂ ಭಾರತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವುದು ಇಂಗ್ಲಿಷ್ ಭಾಷೆಯೇ. ಅನೇಕ ಉರ್ದು ಶಾಲೆಗಳೂ ಸಹ ಸರ್ಕಾರಿ ಕನ್ನಡ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿವೆ.

ನನಗೆ ಪರಿಚಯದರೊಬ್ಬರ ಮಗ ಇತ್ತೀಚೆಗೆ ಚೆನ್ನೈನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ. private-schoolಅತ್ಯಲ್ಪ ಕಾಲದಲ್ಲೇ ಭಡ್ತಿಯನ್ನೂ ಪಡೆದ. ಅವನ ಮೇಲಧಿಕಾರಿಯೊಬ್ಬರು (ಅವರು ತಮಿಳರು) ಅವನನ್ನು ಕರೆದು ’ನಿನ್ನ ಬಗ್ಗೆ ನನಗೆ ತುಂಬಾಹೆಮ್ಮೆ, ನೀನು ಇಲ್ಲಿ ಎಲ್ಲರೊಡನೆ ಬೆರೆತು ಖುಷಿಯಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಇಲ್ಲಿನ ಭಾಷೆ ನಿನಗೆ ಅರ್ಥವಾಗಬೇಕು, ಜೋಕುಗಳಿಗೆ ನಗಬೇಕು, ಇತರರು ನಿನ್ನ ಬಗ್ಗೆ ಆಡಿದ ಮಾತು ನಿನಗೆ ತಿಳಿಯಬೇಕು, ಆದ್ದರಿಂದ ನೀನು ತಮಿಳು ಕಲಿಯಬೇಕು. ಇಂದಿನಿಂದ ನಾನು ನಿನ್ನೊಡನೆ ತಮಿಳಿನಲ್ಲಿ ಮಾತ್ರ ಮಾತನಾಡುತ್ತೇನೆ’ ಎಂದು ಹೇಳಿ ಅದರಂತೆ ನಡೆದು, ಮೂರು ತಿಂಗಳಲ್ಲಿ ಆತ ತಮಿಳಿನಲ್ಲಿ ಮಾತನಾಡುವಂತೆ ಮಾಡಿದ್ದಾರೆ.

ಎಲ್ಲಿ ನಮ್ಮ ದಿನ ನಿತ್ಯದ ಬದುಕಿಗೆ ಯಾವ ಭಾಷೆ ಅನಿವಾರ್ಯವೋ ಆ ಭಾಷೆಯನ್ನು ಜನರು ಸ್ವೀಕರಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ. ಇತ್ತೀಚೆಗೆ ಕಾಫಿ ತೋಟಗಳಿಗೆ ಕೆಲಸಕ್ಕಾಗಿ ಬರುತ್ತಿರುವ ಅಸ್ಸಾಮಿಗಳೆಂದುಕೊಳ್ಳುತ್ತಿರುವ ಕೃಷಿ ಕಾರ್ಮಿಕರು, ಬಂದು ವರ್ಷವಾಗುವಷ್ಟರಲ್ಲೇ ಇವರಲ್ಲಿ ಸಾಕಷ್ಟು ಮಂದಿ ಕನ್ನಡದಲ್ಲಿ ವ್ಯವಹರಿಸುವಷ್ಟು ಕಲಿತಿದ್ದಾರೆ. ಬ್ಯಾಂಕುಗಳಲ್ಲಿರುವ ಉತ್ತರ ಬಾರತೀಯರೂ ಇಲ್ಲಿ ಬಂದು ಸಾಕಷ್ಟು ಕನ್ನಡ ಕಲಿತಿದ್ದಾರೆ. ಆದರೆ ತಲೆಮಾರುಗಳಿಂದ ಇಲ್ಲೇ ನೆಲಸಿದ್ದ ತಮಿಳು ಕಾರ್ಮಿಕರು ಇತ್ತೀಚೆಗಷ್ಟೇ ಕನ್ನಡ ಮಾತನಾಡುತ್ತಿದ್ದಾರೆ. ಈ ಬದಲಾವಣೆಗೆ ತಮಿಳರಲ್ಲ, ಕೆಲಮಟ್ಟಿಗೆ ಬದಲಾದ ಕನ್ನಡಿಗರ ಮನೋಭಾವವೂ ಕಾರಣ. ಆದರೆ ಈ ಮೇಲಿನ ಎರಡು ಸಂದರ್ಭದ ನಡವಳಿಕೆಗಳಿಂದ ಇಂಗ್ಲಿಷಿನ ವಿರುದ್ಧ ತಮಿಳಿಗಾಗಲೀ ಕನ್ನಡಕ್ಕಾಗಲೀ ಬಹಳ ದೊಡ್ಡ ಲಾಭವೇನೂ ಆಗಲಾರದು.

ಎಲ್ಲಿಯವರೆಗೆ ಯಾವುದೇ ಭಾಷೆ ಜನಪದರ ಅನ್ನ ಮತ್ತು ಅಭಿವ್ಯಕ್ತಿ ಎರಡರ ಭಾಷೆಯೂ ಆದಾಗ ಮಾತ್ರ ಅದು ಉಳಿದು ಬೆಳೆಯಬಲ್ಲದು. ಅನೇಕ ವರ್ಷಗಳ ಹಿಂದೆಯೇ ಲಂಕೇಶರು “ಆಧುನಿಕ ಸಮಸ್ಯೆಗಳನ್ನು, ಪ್ರಜ್ಞೆಯನ್ನು ಹೇಳಲಾಗದಿದ್ದರೆ ಕನ್ನಡ ಕೂಡಾ ಬೇಡವಾಗುತ್ತದೆ” ಎಂದದ್ದು ಈ ಅರ್ಥದಲ್ಲಿಯೇ.

ಈ ಎಲ್ಲ ವಿಚಾರಗಳನ್ನೂ ಗಮನಿಸಿ ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕಾದ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವಾಗಲೀ ಕನ್ನಡ ಸಾಹಿತ್ಯ ಪರಿಷತ್ತಾಗಲೀ ಏನು ಮಾಡಬಹುದೆಂಬ ವಿಚಾರಕ್ಕೆ ಬರೋಣ. ಯಾವುದೇ ಸರ್ಕಾರವಾಗಲೀ ಜನರಿಂದ ಬಲವಾದ ಒತ್ತಡ ಬಾರದೆ ಯಾವ ಕೆಲಸವನ್ನೂ ಮಾಡಲಾರದು. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಅನಿವಾರ್ಯವಾದ್ದರಿಂದ ಮತ್ತು ಆಕಾರಣಕ್ಕಾಗಿಯೇ ಹೆಚ್ಚಿನ ಎಲ್ಲಾ ರಾಜಕಾರಣಿಗಳೂ ಎಲ್ಲವನ್ನೂ ಓಟಿನ ಸಂಖ್ಯೆಗಳಾಗಿ ನೋಡುವುದರಿಂದ ಬಲವಾದ ಚಳುವಳಿಯ ರೂಪದ ಸಂಘಟನೆಗಳ ಮೂಲಕ- ಆಂದೋಲನಗಳ ಮೂಲಕ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಮಾಡಬೇಕಾಗಿದೆ.

ಆದರೆ ಆ ರೀತಿಯ ಸಂಚಲನವನ್ನು ಉಂಟುಮಾಡಬಲ್ಲ ವ್ಯಕ್ತಿಗಳ ಬಗೆಗೇ ಜನ devanurಇಂದು ನಂಬಿಕೆ ಕಳೆದುಕೊಂಡಿದ್ದಾರೆ. ದೇವನೂರು ಮಹಾದೇವರಂತೆ, ಸುಂದರಲಾಲ್ ಬಹುಗುಣರಂತೆ, ಆದಷ್ಟೂ ನಡೆ-ನುಡಿಗೆ ಹತ್ತಿರವಾಗಿ ಬದುಕುತ್ತಿರುವವರು ಅನೇಕರು ಇಂದೂ ಇದ್ದಾರೆ. ಆದರೆ ವೈಯಕ್ತಿಕ ಪ್ರಯತ್ನಗಳು ಒಂದು ರೀತಿಯ ಸರ್ವಾಧಿಕಾರಿ ನಡೆಯತ್ತ ಚಲಿಸಬಲ್ಲುದೆಂಬ ಅರಿವೇ ಇಂದು ದೇವನೂರು ಮಹಾದೇವರಂತವರನ್ನು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗೆ, ಒಂದು ರೀತಿಯ ‘ಶಾಕ್ ಟ್ರೀಟ್‌ಮೆಂಟ್’ ನೀಡುವುದಕ್ಕೆ ಪ್ರೇರೇಪಿಸಿರಬೇಕು. ಆ ಕಾರಣಕ್ಕಾಗಿಯೇ ಅವರು “ಕನ್ನಡ ಸಾಹಿತ್ಯ ಪರಿಷತ್ತು ಪೊರೆ ಕಳಚಿ ನಿಲ್ಲಲಿ, ನಾನೂ ನಿಮ್ಮೊಡನಿರುವೆ” ಎಂದಿದ್ದಾರೆ ಎನಿಸುತ್ತದೆ.

ಇದನ್ನೇ ಇನ್ನೊಂದು ರೀತಿಯಲಿ ಹೇಳುವುದಾದರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದದ್ದೇ “ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ” ಎಂಬ ಘೋಷವಾಕ್ಯದೊಡನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಥಿಕ ರಚನೆಯೂ ಅದಕ್ಕೆ ಅನುಗುಣವಾಗಿ ಪ್ರಜಾಸತ್ತಾತ್ಮಕವಾಗಿ ಇದೆ. ಆದರೆ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿರುವ “ಸಾಹಿತ್ಯ” ಎಂಬುದನ್ನು ವಾಙ್ಮಯ ಸಾಹಿತ್ಯ ಎಂಬುದಕ್ಕೆ ಸೀಮಿತಗೊಳಿಸಿಕೊಂಡದ್ದರಿಂದಲೇ, ಇಂದು ಅನೇಕ ಗೊಂದಲಗಳಿಗೆ ಕಾರಣವಾಗಿದೆ ಎನಿಸುತ್ತದೆ. ಸಾಹಿತ್ಯ ಅಕಾಡೆಮಿ ಮಾಡಬಲ್ಲಂತ ಅನೇಕ ಕೆಲಸಗಳನ್ನು ಮಾಡುತ್ತ ನಿಜವಾದ ಕನ್ನಡದ ಕೆಲಸವನ್ನು ಮಾಡಬೇಕಿದ್ದ ಸಂಸ್ಥೆ ಭಾವನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡಿದೆ. ಇದರಿಂದಲೇ ವಿಜ್ಞಾನ ಪರಿಷತ್ತು, ರಂಗಭೂಮಿ ಪರಿಷತ್ತು ಇತ್ಯಾದಿ ಹೆಸರುಗಳೂ ಇತ್ತೀಚೆಗೆ ಕೇಳಿಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಈಗಲಾದರೂ ತನ್ನ ಮೂಲ ಉದ್ದೇಶಕ್ಕೆ ಮರಳಿ ಕನ್ನಡದ ಸಮಗ್ರತೆಯನ್ನು ಕನ್ನಡ ನೆಲದ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಸಂಸ್ಥೆಯಾಗಬೇಕಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ ಅದರ ಸಾಂಸ್ಥಿಕ ನಿಯಮದಂತೆ, kannada-sahithya-sammelanaಕನ್ನಡ ಬಲ್ಲ ಅಂದರೆ ಕನ್ನಡದಲ್ಲಿ ಮಾತಾಡಬಲ್ಲ, ವ್ಯವಹರಿಸಬಲ್ಲ ಯಾರು ಬೇಕಾದರೂ ಅದರ ಸದಸ್ಯರಾಗಬಹುದು. ಅಂದರೆ ಇದು ಕೇವಲ ಸಾಹಿತಿಗಳ, ಕಲಾವಿದರ ಸಂಸ್ಥೆ ಅಲ್ಲ, ಸಮಸ್ತ ಕನ್ನಡಿಗರ ಸಂಸ್ಥೆ. (ಮನೆಮಾತು ಬೇರೆ ಯಾವುದಿದ್ದರೂ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಯಾವ ಅಡ್ಡಿಯೂ ಇಲ್ಲ, ಸಾವಿರಾರು ಜನರು ಸದಸ್ಯರಾಗಿ ಇದ್ದಾರೆ) ಇದರ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಘಟಕಗಳ ಅಧ್ಯಕ್ಷರು ನೇರವಾಗಿ ಜನರಿಂದ ಚುನಾಯಿತರಾಗಿರುತ್ತಾರೆ. ಒಂದುವೇಳೆ ಕನ್ನಡದ ನೆಲದ ಶೇ. ೪೦ ರಷ್ಟು ಜನ ಇದರ ಸದಸ್ಯರಾಗಿದ್ದರೆ ಹಾಗೂ ಇದರ ಚುನಾಯಿತ ಪದಾಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡುವಷ್ಟು ಮತ್ತು ಅದನ್ನು ಅನುಷ್ಟಾನಗೊಳಿಸುವಂತೆ ಒತ್ತಡ ತರುವಷ್ಟು ಶಕ್ತರಾದರೆ ಏನಾದರೂ ಕೆಲಸ ಆಗಬಹುದು. ಸಮಾನ ಶಿಕ್ಷಣ ವ್ಯವಸ್ಥೆಯ ಜೊತೆಗೆ, ಕನ್ನಡ ಭಾಷೆಯ ಮೂಲಕವೇ ಉದ್ಯೋಗ ಸೃಷ್ಟಿ ಮಾಡಬಲ್ಲಂತ ವಾತಾವರಣ ನಿರ್ಮಾಣವಾದರೆ ಆಗ ಕನ್ನಡ ಜನರಿಗೆ ಅಗತ್ಯದ ಭಾಷೆಯಾಗುತ್ತದೆ, ಅನಿವಾರ್ಯವಾಗುತ್ತದೆ.

ಈಗ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ (ಪ್ರಾದೇಶಿಕ ಭಾಷೆಗಳ) ಸಾಂಸ್ಕೃತಿಕ ಲೋಕ ಮಾತ್ರ ಕನ್ನಡವನ್ನೇ (ಪ್ರಾದೇಶಿಕ ಭಾಷೆಗಳನ್ನೇ) ಹಿಡಿದುಕೊಂಡಿದೆ. (ಇಲ್ಲೂ ಕೂಡಾ ಕೆಲವು ಪ್ರಾದೇಶಿಕ ಭಾಷೆಗಳ ಮೇಲೆ, ರಾಷ್ರ್ಟೀಯತೆ- ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿಯ ಹೇರಿಕೆಯೂ ನಡೆಯುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ರಾಷ್ಟ್ರೀಯ ನಾಟಕ ಶಾಲೆಗೆ ಪ್ರವೇಶ ಪಡೆಯಲು ಹಿಂದಿಜ್ಞಾನವನ್ನು ಕಡ್ಡಾಯಗೊಳಿಸಿರುವುದು). ಇದಕ್ಕೆ ಕಾರಣ ನಮ್ಮ ಅದು ನಮ್ಮ ಅಭಿವ್ಯಕ್ತಿಯ ಅತ್ಯಂತ ಸಹಜ ಸಾಧನವೆಂಬುದಷ್ಟೇ ಅಲ್ಲ, ಅದಕ್ಕೆ ಸಂಬಂಧಪಟ್ಟ ಎಲ್ಲ ಜ್ಞಾನವೂ ಆ ಭಾಷೆಗಳಲ್ಲಿರುವದು.

ಇದರೊಂದಿಗೆ ನಮ್ಮ ಕೃಷಿ ಮತ್ತು ಇನ್ನೂ ಉಳಿದಿರುವ ಕೃಷಿಸಂಬಂಧಿ ಕಸುಬುಗಳಾದ ಕಮ್ಮಾರಿಕೆ, ಬಡಗಿ, ಇತ್ಯಾದಿಗಳು, ಮತ್ತು ನೇಕಾರಿಕೆ, ಕುಂಭಕಲೆ, ಶಿಲ್ಪಕಲೆ, ಮುಂತಾದ ನಮ್ಮ ಅನೇಕ ಪಾರಂಪರಿಕ ವಿದ್ಯೆಗಳು. ನಾಟಿ ಮತ್ತು ಆಯುರ್ವೇದ ವೈದ್ಯ ಪದ್ಧತಿಗಳು. ಇವುಗಳ ಜ್ಞಾನವೆಲ್ಲ ಹೆಚ್ಚಾಗಿ ಅವರವರ ಮನೆಮಾತು ಮತ್ತು ಪರಿಸರದ ಭಾಷೆಗಳಲ್ಲಿ ಇದೆ. ಅವರ ಪಾರಂಪರಿಕ ಜ್ಞಾನದ ಭಾಷೆಯ ಮೂಲಕ ಈ ವಿದ್ಯೆಯನ್ನವರು ಮುಂದಿನ ಪೀಳಿಗೆಗೆ ದಾಟಿಸುತ್ತಾ ಬಂದಿದ್ದಾರೆ. ಅವರು ಅದರ ಮೂಲಕವೇ ಅನ್ನ ಗಳಿಸುತ್ತ ವ್ಯವಹಾರಕ್ಕೆ ತಕ್ಕಷ್ಟು ರಾಜ್ಯ ಭಾಷೆಯ ಜ್ಞಾನವನ್ನು ಪಡೆದಿದ್ದಾರೆ. ಆದ್ದರಿಂದ ನಮ್ಮ ಯಾವುದೇ ಪ್ರಾದೇಶಿಕ ಭಾಷೆಯೂ ಜನರಿಗೆ ಬದುಕಿಗೆ ನೆಮ್ಮದಿ ತರುವಷ್ಟು ಶಕ್ತವಾಗುವಂತೆ ಮಾಡುತ್ತಲೇ ವ್ಯವಹಾರ ಸಂಪರ್ಕಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನೋ ಇನ್ನಾವುದೇ ಭಾಷೆಯನ್ನು ಚೆನ್ನಾಗಿ ಕಲಿಯುವದು ಕಷ್ಟವಲ್ಲ. ಅದಕ್ಕಾಗಿ ಆ ಭಾಷೆಯ ಮಾಧ್ಯಮದಲ್ಲೇ ಕಲಿಯುವ ಅಗತ್ಯವೂ ಇಲ್ಲ. ಈ ವಿಚಾರ ಜನರಿಗೆ ಮನದಟ್ಟಾಗುವಂತಹ, ಅದರಲ್ಲಿ ನಂಬಿಕೆ ಬರುವಂತಹ ಕೆಲಸವನ್ನು ವ್ಯಾಪಕವಾಗಿ ಮಾಡದೆ, ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹೇಳುತ್ತ-ಚರ್ಚಿಸುತ್ತಾ ಕುಳಿತರೆ ಪ್ರಯೋಜನವಾಗಲಾರದು.

ಇದರಿಂದಲೇ ನಮ್ಮ ಬದುಕಿನ ಎಲ್ಲಾ ವಿಭಾಗಗಳ ಅಂದರೆ ಸಾಹಿತ್ಯ ಕಲೆಗಳ ಜೊತೆಯಲ್ಲಿ ವಿಜ್ಞಾನ, ಗಣಿತ, ಲೆಕ್ಕ ಪತ್ರಗಳ ವ್ಯವಹಾರಗಳು, ತಂತ್ರಜ್ಞಾನ, ಕೃಷಿ, ವೈದ್ಯಕೀಯ ಸಂಬಂಧಿತ ಎಲ್ಲ ತಿಳುವಳಿಕೆಯನ್ನು ಕನ್ನಡದಲ್ಲಿ ದೊರಕಿಸಿಕೊಡುವ ಕೆಲಸವನ್ನು ಸಾಹಿತ್ಯ ಪರಿಷತ್ತು ಸರ್ಕಾರದ ಮೂಲಕ ಮಾಡಿಸುವ ಕೆಲಸಕ್ಕೆ ತೊಡಗಿಕೊಳ್ಳಬೇಕು. ಪರಿಷತ್ತಿಗೆ ಸಮ್ಮೇಳನ, ಜಾತ್ರೆ, ಉತ್ಸವಗಳು, ಗೋಷ್ಟಿಗಳಿಗಿಂತ ಈ ಕೆಲಸಗಳು ಪ್ರಥಮ ಆದ್ಯತೆಯದ್ದಾಗಬೇಕು.

ನಮಗೆ ಇಂಗ್ಲಿಷಿನ ಮೂಲಕ ಮಾತ್ರ ಬರಬಹುದಾದ ಜ್ಞಾನದಲ್ಲಿ ಸಾಕಷ್ಟನ್ನು ಕೇವಲ ಪ್ರಾದೇಶಿಕ ಭಾಷೆಗೆ ತರ್ಜುಮೆ ಮತ್ತು ಡಬ್ಬಿಂಗ್ ಮೂಲಕ ಪಡೆಯಬಹುದಾಗಿದೆ. ಟಿ.ವಿ. ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ವಿಷಾದದ ಸಂಗತಿಯೆಂದರೆ ಕೃಷಿಯಲ್ಲಿ ನಮ್ಮ ಪಾರಂಪರಿಕ ಮತ್ತು ಆಧುನಿಕ ಜ್ಞಾನಗಳೆರಡೂ ಸಾಕಷ್ಟಿದ್ದರೂ ಕೃಷಿ ವಿದ್ಯಾಲಯಗಳೂ ಇಂಗ್ಲಿಷಿನಲ್ಲಿ ಬೋಧಿಸುತ್ತಿರುವುದು.

ಇಂಗ್ಲಿಷಿನ ಅಥವಾ ಇನ್ನಾವುದೇ ಭಾಷೆಯನ್ನು ಅಗತ್ಯವಿದ್ದಷ್ಟು ಕಲಿಯತ್ತಲೇ ಕನ್ನಡವನ್ನು ನಮ್ಮ ಸಹಜ ಅಭಿವ್ಯಕ್ತಿ ಮತ್ತು ಅನ್ನಗಳಿಕೆಯ ಭಾಷೆಯನ್ನಾಗಿಸಿ, ಅದರಿಂದ ಬರುವ ಜ್ಞಾನದಮೂಲಕ ಕಟ್ಟದಬಹುದಾದ ಬದುಕಿನ ವೈವಿದ್ಯಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡಲು. ಅದಕ್ಕಾಗಿ ನ್ಯಾಯಾಲಯದ ಯಾವುದೇ ಆದೇಶಕ್ಕೆ ವಿರುದ್ಧವಾಗದಂತೆ ಕಾರ್ಯಕ್ರಮ ರೂಪಿಸಲು ಪ್ರಜಾಪ್ರಭುತ್ವದಲ್ಲಿ ಯಾವುದೇ ಚುನಾಯಿತ ಸರ್ಕಾರಕ್ಕೆ ಸಾಧ್ಯವಿದೆ. ಸರ್ಕಾರವನ್ನು ಎಚ್ಚರಿಸುವ, ತಿದ್ದುವ, ಜನರತ್ತ ನೋಡುವಂತೆ ಮಾಡುವ ಕೆಲಸವನ್ನು, ಕನ್ನಡ ಸಾಹಿತ್ಯ ಪರಿಷತ್ತಾಗಲೀ ಇನ್ನಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ಮಾಡಲಿ ಅದರೊಂದಿಗೆ ಸೇರಿ ಕೆಲಸ ಮಾಡತೊಡಗುವುದನ್ನು ಬಿಟ್ಟು ದೇವನೂರರ ಸಾತ್ವಿಕ ಸಿಟ್ಟಿಗಾಗಲೀ, ನಮ್ಮಂತವರ ತುಡಿತಕ್ಕಾಗಲೀ ಸಧ್ಯಕ್ಕೆ ಅನ್ಯಮಾರ್ಗವಿಲ್ಲವೆನಿಸುತ್ತದೆ.

One thought on “ನೆಲದ ಭಾಷೆ ಮತ್ತು ಕಲಿಕೆಯ ಮಾಧ್ಯಮ

  1. Ananda Prasad

    ಶಿಕ್ಷಣ ಮಾಧ್ಯಮ ಕುರಿತ ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಭಾರತದಲ್ಲಿ ಶಿಕ್ಷಣದ ಕ್ಷೇತ್ರದಲ್ಲಿ ಅಸಮಾನತೆಯ ಕಂದರಗಳು ತೀವ್ರವಾಗಿ ಹೆಚ್ಚಲಿವೆ. ಬಡವರ ಭಾರತ ಹಾಗೂ ಶ್ರೀಮಂತರ ಭಾರತದ ನಡುವಣ ಅಂತರ ಇನ್ನಷ್ಟು ಹೆಚ್ಚಾಗಲಿದೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಪೆಟ್ಟು ಬೀಳುವುದು ಬಡವರ ಮೇಲೆಯೇ. ರಾಜ್ಯಭಾಷಾ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವುದರಿಂದ ಬಡವರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರುವ ಸಂಭವ ಇನ್ನು ಮುಂದೆ ಹೆಚ್ಚಲಿದೆ. ಇದೆಲ್ಲ ನ್ಯಾಯಾಂಗಕ್ಕೆ, ಅಧಿಕಾರಸ್ಥರಿಗೆ ಅರ್ಥವೇ ಆಗುವುದಿಲ್ಲ ಏಕೆಂದರೆ ಅವರಿಗೆ ಬರುವ ಯಥೇಚ್ಛ ಸಂಬಳ ಬರುತ್ತಲೇ ಇರುತ್ತದೆ. ಖಾಸಗಿ ಶಾಲೆಗಳು ಬಡವರನ್ನು ಹುರಿದು ಮುಕ್ಕುವುದು ಇನ್ನು ಮುಂದೆ ಹೆಚ್ಚಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಬಡವರ ಮಕ್ಕಳಿಗೆ ಇನ್ನು ಮುಂದೆ ಶಿಕ್ಷಣ ಮರೀಚಿಕೆಯಾಗುವ ಸಂಭವ ಹೆಚ್ಚಲಿದೆ.

    ಚಾರ್ಲ್ಸ್ ಡಾರ್ವಿನ್ ಹೇಳಿದ “ಬಲಶಾಲಿ ಉಳಿದು ಬೆಳೆಯುತ್ತಾನೆ” (survival of the fittest) ಎಂಬುದು ಶಾಲಾಕಾಲೇಜುಗಳ ಹಾಗೂ ಶಿಕ್ಷಣದ ಖಾಸಗೀಕರಣದಿಂದಾಗಿ “ಉಳ್ಳವರು ಉಳಿದು ಬೆಳೆಯುತ್ತಾರೆ” ಎಂಬುದು ನಿಜವಾಗುತ್ತಿದೆ. ತನ್ಮೂಲಕ ಭಾರತದ ಸಮಾಜವು ಮೃಗೀಯ ನ್ಯಾಯವಾದ ಬಲಶಾಲಿಗಳು ಉಳಿದು ಬೆಳೆಯುವ ಅನಾಗರಿಕತೆಯ ಕಡೆಗೆ ವಾಲುತ್ತಿದೆ. ಇಂಥ ದೇಶದಲ್ಲಿ ಜೀವಿಸುತ್ತಿರುವ ನಾವು ನಾಗರಿಕರೆಂದು ಹೇಳಿಕೊಳ್ಳಲು ಅಯೋಗ್ಯರೆಂಬುದರಲ್ಲಿ ಸಂದೇಹವಿಲ್ಲ.

    Reply

Leave a Reply

Your email address will not be published. Required fields are marked *