Daily Archives: January 15, 2015

ಹಿಂದೂಯಿಸಂನ ದೇಹಕ್ಕೆ ಅಭಿವೃದ್ಧಿಯ ತಲೆಯ ಜೋಡಣೆ : ನರೇಂದ್ರ ಮೋದಿಯ ಆಧುನಿಕ ಪ್ಲಾಸ್ಟಿಕ್ ಸರ್ಜರಿ

– ಬಿ.ಶ್ರೀಪಾದ ಭಟ್

ಫ್ಲಾಶ್‌ಬ್ಯಾಕ್ 2013 14

ಆರೆಸಸ್ ಪಕ್ಷದ ಮುಖವಾಣಿ “ತರುಣ್ ಭಾರತ್” ಪತ್ರಿಕೆಯ ಮಾಜಿ ಸಂಪಾದಕ,ಸ್ವಯಂಸೇವಕ ಸುಧೀರ್ ಪಾಠಕ್ ಅವರನ್ನು ಆರೆಸಸ್‌ನ ಪಾತ್ರ ಮತ್ತು ಬಿಜೆಪಿಯೊಂದಿಗಿನ ಅದರ ಭಾಂಧವ್ಯದ ಕುರಿತಾಗಿ ಪ್ರಶ್ನಿಸಿದಾಗ ಅವರು ಹೇಳಿದ್ದು, “ಒಂದು ವೇಳೆ ಮೋದಿ ಗೆದ್ದರೆ ಸಂಘ ಪರಿವಾರಕ್ಕೆ ಸ್ವಲ್ಪ ಅನುಕೂಲವಿದೆ. ಒಂದು ವೇಳೆ ಆತ ಸೋತು ಹೋದರೆ ಅದು ಆತನ ಸೋಲು. ಮೋದಿಗೆ ಮಾತ್ರ ಚುನಾವಣೆಯೇ ಅಂತಿಮ, ಆದರೆ ಆರೆಸಸ್‌ಗೆ ಹಿಂದೂ ರಾಷ್ಟ್ರದ ನಿರ್ಮಾಣದ ಗುರಿಯಲ್ಲಿ ಚುನಾವಣೆಯು ತಮ್ಮ ಚಿಂತನೆಗಳನ್ನು ಹಬ್ಬಿಸಲು ಇರುವಂತಹ ಒಂದು ಸಾಧನವಷ್ಟೇ. ಬಿಜೆಪಿಯ ಆಸ್ತಿತ್ವವೇ ದ್ವಿಸದಸ್ಯ ನೀತಿಯಲ್ಲಿದೆ. ಹಿಂದಿನ ದಿನಗಳಲ್ಲಿ ಪಕ್ಷವು ಆರೆಸಸ್‌ನ ಆದೇಶಗಳಿಗಾಗಿ ಕಾಯುತ್ತಿತ್ತು. ಆಗ ಅಟಲ್‌ಜೀ ಮತ್ತು ಅಡ್ವಾನೀಜಿ ಸಂಘ ಪರಿವಾರಕ್ಕೆ ಸೀನಿಯರ್ ನಾಯಕತ್ವವನ್ನು ಒದಗಿಸಿದ್ದರು. ಆಗ ಪಕ್ಷದ ಕೈ ಮೇಲಾಗಿತ್ತು. ಆದರೆ ಈಗ ಆರೆಸಸ್ ನಾಯಕರು ಮತ್ತು ಬಿಜೆಪಿಯ ನಾಯಕರು ಒಂದೇ ತಲೆಮಾರಿಗೆ ಸೇರಿದವರಾಗಿದ್ದಾರೆ. ಇವರು ಒಂದೇ ಶಾಖೆಗಳಲ್ಲಿ ತರಬೇತಿ ಪಡೆದಿದ್ದಾರೆ. ಇಂದು ಆರೆಸಸ್‌ಗೆ ಮೇಲುಗೈ ಸಾಧಿಸಿದೆ.”

ಮಹಾರಾಷ್ಟ್ರದ ಬೆಜೆಪಿಯ ಅಧ್ಯಕ್ಷರಾದ ದೇವೇಂದ್ರ ಫಡ್ನವೀಸ್ ಅವರು ಮಾತನಾಡುತ್ತ, “ಅಟಲ್‌ಜೀ ಮತ್ತು ಅಡ್ವಾನೀಜೀ ಅವರಿಗೂ ಸಹ ಆರೆಸಸ್‌ನ ಮಾತೇ ಅಂತಿಮವಾಗಿತ್ತು. ಅವರಿಗೆ ಆರೆಸಸ್‌ನ ಉದ್ದೇಶಗಳು ಸಂಪೂರ್ಣವಾಗಿ ಅರ್ಥವಾಗಿದ್ದವು ಮತ್ತು ಅದನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು. ಆರೆಸಸ್‌ನ ಅಗ್ರ ನಾಯಕತ್ವದ ಆದೇಶವನ್ನು ಎಂದಿಗೂ ಕಡೆಗಣಿಸಲಿಲ್ಲ.” ಎಂದು ಹೇಳಿದರು

ದಿ ಹಿಂದೂ, 18ನೇ ಅಕ್ಟೋಬರ್, 2013

***

ನಾಗಪುರದಲ್ಲಿರುವ ಆರೆಸಸ್‌ನ ಹೆಡ್‌ಕ್ವಾಟ್ರಸ್‌ನಲ್ಲಿ ಕುಳಿತು ಬಿಜೆಪಿಯ ಮಾಜಿ ಕಾರ್ಯದರ್ಶಿ ಆರೆಸಸ್ ಸಂಚಾಲಕ ಸದಾನಂದ ಶಿರ್ಡಾಲೆಯವರೊಂದಿಗೆ ಮಾತನಾಡಿಸಿದಾಗ ಅವರು, “ಈಗಿನ ವ್ಯವಸ್ಥೆಯು ಮುಸ್ಲಿಂರನ್ನು ಓಲೈಸುವುದಕ್ಕಾಗಿಯೇ ಇದೆ. ಒಮ್ಮೆ ನರೇಂದ್ರ ಮೋದಿ ಚುನಾಯಿತರಾದ ಮೇಲೆ ನೋಡಿ ಎಲ್ಲವೂ ಬದಲಾಗುತ್ತದೆ. ಉದಾಹರಣೆಗೆ ಗುಜರಾತ್‌ನಲ್ಲಿ ಒಬ್ಬ ಮುಸ್ಲಿಂ ಶಾಸಕನೂ ಇಲ್ಲ. ವ್ಯವಸ್ಥೆ ಇರಬೇಕಾದದ್ದೇ ಹೀಗೆ.” ಎಂದು ಹೇಳಿದರು. ನಾವು ಒಂದುವೇಳೆ ನೀವು ಬಯಸುವ ಈ ವ್ಯವಸ್ಥೆ ಬಂದರೆ ಮುಸ್ಲಿಂರು ಹೇಗೆ ಪ್ರತಿಕ್ರಯಿಸುತ್ತಾರೆ? ಎಂದು ಪ್ರಶ್ನಿಸಿದಾಗ ಈ ಆರೆಸಸ್ ಸಂಚಾಲಕರು, “ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಿಲ್ಲ. ಆದರೆ ಮುಖ್ಯವಾಗಿ ಅವರು ನಮ್ಮ ದೇಶಕ್ಕೆ ನಿಷ್ಠರಾಗಿರಬೇಕೇ ಹೊರತಾಗಿ ಬೇರೆ ದೇಶಕ್ಕಲ್ಲ” ಎಂದು ಉತ್ತರಿಸಿದರು.

ಮೇಲಿನ ಸಂಭಾಷಣೆಯ ಸಾರಾಂಶವೆಂದರೆ ಅಲ್ಪಸಂಖ್ಯಾತರ ಮೂಲಭೂತವಾಗಿ ಈ ದೇಶಕ್ಕೆ ನಿಷ್ಠರಾಗಿಲ್ಲ. ಆರೋಪವೆಂದರೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇವರಿಗೆ ಸರ್ಕಾರವು ಓಲೈಸುತ್ತದೆ. ದೇಶದ ಬಹುಸಂಖ್ಯಾತರಾದ ಹಿಂದೂಗಳು ಇಂದು ಒತ್ತಡದಲ್ಲಿದ್ದಾರೆ. ಬಿಜೆಪಿ, ಆರೆಸಸ್ ಕಾರ್ಯಕರ್ತರು ಸ್ಪಷ್ಟವಾಗಿ ಹೇಳುವುದೇನೆಂದರೆ “ಮೋದಿಯು ಹಿಂದುತ್ವದ ವಿಷಯವನ್ನು ಮಾತನಾಡುತ್ತಾರೋ ಇಲ್ಲವೋ ಅದು ಮುಖ್ಯವಲ್ಲ, ಆದರೆ ಹಿಂದುತ್ವದ ರಾಷ್ಟ್ರದ ಪರಿಕಲ್ಪನೆ ಮಾತ್ರ ಬದಲಾಗದು ಎಂಬುದು ವಾಸ್ತವ.” ಎಂಬತ್ತು ಮತ್ತು ತೊಂಬತ್ರರ ದಶಕಗಳ ಸ್ಲೋಗನ್‌ಗಳಾದ ಸ್ಯೂಡೋ ಸೆಕ್ಯುಲರಿಸಂ, ಮುಸ್ಲಿಂ ಓಲೈಸುವಿಕೆ ಮತ್ತೆ ಹಿಂದಿನಂತೆಯೇ ಚಾಲ್ತಿಗೆ ಬಂದಿವೆ.

ದಿ ಹಿಂದೂ, 18ನೇ ಅಕ್ಟೋಬರ್, 2013

***

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಕಲ್ಪ ದಿನವನ್ನಾಗಿ ಆಚರಿಸುವ ಸಲುವಾಗಿ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಲು ಪ್ರಯತ್ನಿಸಿದ್ದ ಸುಮಾರು 2000 ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು. ಬಂಧಿತರಲ್ಲಿ ಬಿಜೆಪಿ ಪಕ್ಷದ ಸಂಸದ ಯೋಗಿ ಆದಿತ್ಯನಾಥ್ (ಗೋರಖ್‌ಪುರ), ಮಾಜಿ ಸಂಸದ ಸತ್ಯದೇವನಾಥ್, ಮತ್ತು ವಿಎಚ್‌ಪಿಯ ರಾಷ್ಟ್ರೀಯ ಕಾರ್ಯದರ್ಶಿ ಚಂಪತ್ ರಾಯ್, ಅಲ್ಲಿನ ಹನುಮ ದೇವಸ್ಥಾನದ ಮಹಂತ ಬಾಬಾ ರಾಮೇಶ್ ದಾಸ್, ರಾಜ್ಯ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷ ಅಶುತೋಷ್ ಪ್ರಮುಖರು.

ಬಿಜೆಪಿ ಪಕ್ಷವು ತನ್ನ ಮೂಲಭೂತ ಗುರಿಗಳನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದೆ. ಸಂಘ ಪರಿವಾರದ ಕಾರ್ಯಸೂಚಿಗಳಾದ ಕಲಮ್ 370 ಅನ್ನು ರದ್ದುಪಡಿಸುವುದು, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೊಳಿಸುವುದು, ಇವೆಲ್ಲವನ್ನೂ ತಮ್ಮ ಚುನಾವಣಾ ಪ್ರಣಾಳಿಕೆಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಬಿಜೆಪಿ ಸ್ಪಷ್ಟಪಡಿಸಿದೆ. ಬಿಜೆಪಿ ಪಕ್ಷ ರಚಿಸಿರುವ ತನ್ನ ಪ್ರಣಾಳಿಕೆ ಸಮಿತಿಯ ಛೇರ್ಮನ್ ಆಗಿ ನೇಮಕಗೊಂಡ ಮುರುಳೀ ಮನೋಹರ್ ಜೋಷಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ “ನಮ್ಮ ಪಕ್ಷವು ಚುನವಣಾ ಪ್ರಣಾಳಿಕೆಯ ಕರಡು ಪ್ರತಿಯನ್ನು ರಚಿಸಲು ಸಮಾಜದ ಎಲ್ಲಾ ಸ್ತರಗಳಿಂದಲೂ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಇದಕ್ಕಾಗಿ ಬಿಜೆಪಿಎಲೆಕ್ಷನ್‌ಮ್ಯಾನಿಫೆಷ್ಟೋ.ಕಾಮ್ ಎನ್ನುವ ವೆಬ್‌ಸೈಟ್ ಅನ್ನು ಸಹ ಶುರುಮಾಡಲಾಗಿದೆ. ಅಲ್ಲಿ ಆಸಕ್ತಿ ಇರುವಂತಹವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಅನೇಕ ವಿಷಗಳ ಕುರಿತಾಗಿ ಮುಕ್ತವಾಗಿ ಚರ್ಚಿಸಲು ಸಿದ್ಧರಿದ್ದೇವೆ. ಆದರೆ ನಮ್ಮ ಮೂಲಭೂತ ಕಾರ್ಯ ಸೂಚಿಗಳಾದ ಕಲಮ್ 370 ಅನ್ನು ರದ್ದುಪಡಿಸುವುದು, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೊಳಿಸುವುದು, ಇವುಗಳೊಂದಿಗೆ ಮಾತ್ರ ಯಾವುದೇ ರೀತಿಯ ಸಂಧಾನವಿಲ್ಲ. ಅದರಲ್ಲೂ ರಾಮ ಜನ್ಮಭೂಮಿಯ ನಿರ್ಮಾಣ ನಮ್ಮ ಮೊದಲ ಆದ್ಯತೆ.” ಎಂದು ಹೇಳಿದರು.

ದಿ ಹಿಂದೂ, 19ನೇ ಅಕ್ಟೋಬರ್, 2013

***

ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನ ಚುನಾವಣಾ ಭಾಷಣದಲ್ಲಿ ಅಚ್ಚರಿ ಎನ್ನುವಂತೆ ನರೇಂದ್ರ ಮೋದಿಯು ರಾಮಮಂದಿರ ನಿರ್ಮಾಣದ ಕುರಿತಾಗಿ ಮಾತನಾಡದೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕೆ ಮಾತ್ರ ತಮ್ಮ ಭಾಷಣವನ್ನು ಸೀಮಿತಗೊಳಿಸಿದ್ದರು. ಅಭಿವೃದ್ಧಿ ಮಂತ್ರವನ್ನು ಮತ್ತೊಮ್ಮೆ ಜಪಿಸಿದರು. ಆದರೆ ಈ ಸಮಾವೇಶದಲ್ಲಿ ಬಿಜೆಪಿ ಹೇಳಿಕೊಳ್ಳುವಷ್ಟು ಮುಸ್ಲಿಂ ನಾಗರಿಕರ ಸಂಖ್ಯೆ ಇರಲಿಲ್ಲ. ತೀರಾ ಗೌಣವಾಗಿತ್ತು. ಬಿಜೆಪಿ ಪಕ್ಷವು ಸುಮಾರು 5000 ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಈ ಸಮಾವೇಶದಲ್ಲಿ ಭಾಗವಹಿಸಲು ವಿತರಿಸಲಾಗಿತ್ತು ಎಂದು ತಿಳಿಸಿತ್ತು. ಪೋಲಿಸ್ ಅಧಿಕಾರಿಯೊಬ್ಬರ ಪ್ರಕಾರ ಈ ಸಮಾವೇಶಕ್ಕಾಗಿ ಮುಸ್ಲಿಂರನ್ನು ಬಾಡಿಗೆ ಕರೆತಂದಿಲ್ಲವೆಂಬಂತೆ ಅಭಿಪ್ರಾಯ ಮೂಡಿಸಲು ಬಿಜೆಪಿ ಕಾರ್ಯಕರ್ತರು ಬಳಸಿದ, ಹಳೆಯದಾದ ಸ್ಕಲ್ ಟೋಪಿಯನ್ನು ಹಂಚಲು ಆದೇಶಿಸುತ್ತಿದ್ದರು.

ದಿ ಹಿಂದೂ, 20ನೇ ಅಕ್ಟೋಬರ್, 2013

2014ರ ಚುನಾವಣ ಸಂದರ್ಭದಲ್ಲಿ ನರೇಂದ್ರ ಮೋದಿ, ಅಮಿತ ಷಾ, ಸಂಘ ಪರಿವಾರದ ಲುಂಪೆನ್ ಗುಂಪಿನ ಮತೀಯವಾದಿ, ಪ್ರಚೋದನಕಾರಿ ಭಾಷಣಗಳ ಕೆಲವು ಉದಾಹರಣೆಗಳು:

ಎಪ್ರಿಲ್ 2, 2014ರಂದು ಬಿಹಾರದಲ್ಲಿ ಬಾಷಣ ಮಾಡುತ್ತ ನರೇಂದ್ರ ಮೋದಿ “ಈ ದೇಶವು ಗೋವುಗಳನ್ನು ದೇವತೆಯಂತೆ ಪೂಜಿಸುವ ದೇಶ. ಗೋ ಹತ್ಯೆ ಮಾಡುವವರನ್ನು ನೀವು ಹೇಗೆ ಬೆಂಬಲಿಸುತ್ತೀರಿ?” ಎಂದು ಯಾದವರನ್ನು ಉದ್ರೇಕಿಸುತ್ತಾರೆ

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ “ಮಿಯ್ಯಾ ಮುಶ್ರಫ್, ಮೇಡಂ ಮೇರಿ, ಮೈಖೆಲ್ ಲಿಂಗ್ಡೋ” modi_bjp_conclaveಎಂದು ಅತ್ಯಂತ ಸ್ಯಾಡಿಸ್ಟ್ ಮನಸ್ಥಿತಿಯಲ್ಲಿ ಇತರೇ ಧರ್ಮಗಳನ್ನು ಕ್ರೂರವಾಗಿ, ಅಮಾನವೀಯವಾಗಿ ಹಂಗಿಸಿದ್ದ ಈ ಮೋದಿ 2014ರಲ್ಲಿ ಮುಂದುವರೆದು ಧರ್ಮ ನಿರಪೇಕ್ಷತೆಯನ್ನು ಲೇವಡಿ ಮಾಡುತ್ತ “ಬುರ್ಖಾ ಸೆಕ್ಯುಲರಿಸಂ” ಎಂದು ಅಮಾನವೀಯವಾಗಿ ಮಾತನಾಡಿದ್ದರು. ಮತ್ತೊಂದೆಡೆ ಕಾಶ್ಮೀರದಲ್ಲಿ ಭಾಷಣ ಮಾಡುತ್ತ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ಎಕೆ 47, ಎಕೆ ಅಂಟೊನಿ, ಎಕೆ 49 ಎಂದು ವ್ಯಂಗವಾಡಿದ್ದರು

ರಾಹುಲ್ ಗಾಂಧಿಯವರನ್ನು “ಶೆಹಜಾದ” ಎಂದು ಸಂಬೋಧಿಸುವುದು, ಸೋನಿಯಾಗಾಂಧಿಯವರನ್ನು “ಸುಲ್ತಾನ” ಎಂದು ಸಂಬೋಧಿಸುವುದರ ಮೂಲಕ ಒಂದು ಸುಳ್ಳನ್ನು ನೂರು ಸಲ ಹೇಳುವ ಗೋಬೆಲ್ಸ್ ಸಿದ್ಧಾಂತವನ್ನು ಬಳಸಿದ ನರೇಂದ್ರ ಮೋದಿ 2002ರ ಹತ್ಯಾಕಾಂಡದ ನಂತರದಲ್ಲಿ ಸ್ಥಾಪಿಸಲ್ಪಟ್ಟ ಮುಸ್ಲಿಂ ನಿರಾಶ್ರಿತ ಶಿಬಿರಗಳನ್ನು ಉದ್ದೇಶಿಸಿ ’ಆ ಶಿಬಿರಗಳು ಮಕ್ಕಳನ್ನು ಹುಟ್ಟಿಸುವ ಶಿಬಿರಗಳೆಂದು’ ವ್ಯಂಗವಾಡಿದ್ದರು,

ತಾನು ಅಧಿಕಾರಕ್ಕೆ ಬಂದರೆ ಆಕ್ರಮ ವಲಸಿಗರನ್ನು (ಅಂದರೆ ಮುಸ್ಲಿಂರನ್ನು) ದೇಶದಿಂದ ಒದ್ದೋಡಿಸಲಾಗುವುದು ಎಂದು ತಮ್ಮ 2014ರ ಚುನಾವಣ ಭಾಷಣದಲ್ಲಿ ಮೋದಿ ಗುಡುಗಿದ್ದರು. ಬಾಂಗ್ಲಾ ದಿಂದ ಬರುವ ಆಕ್ರಮ ವಲಸಿಗರಲ್ಲಿ ದುರ್ಗಾ ಮಾತೆಯನ್ನು ಪೂಜಿಸುವ ಧರ್ಮದವರನ್ನು (ಹಿಂದೂಗಳನ್ನು) ಮಾತ್ರ ಕರೆದುಕೊಳ್ಳಲಾಗುವುದು, ಮಿಕ್ಕಂತೆ ಅನ್ಯಧರ್ಮೀಯರನ್ನು ಒದ್ದೋಡಿಸಲಾಗುವುದು ಎಂದು ಅಸ್ಸಾಂನ ಚುನಾವಣಾ ಭಾಷಣದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದರು.

ಮತ್ತೊಂದು ಕಡೆ ಇದೇ ಮೋದಿಯು ಎಪ್ರಿಲ್ 2ರಂದು ತಾನು ಪ್ರಧಾನ ಮಂತ್ರಿಯಾದ ನಂತರ “ಪಿಂಕ್ ರೆವಲ್ಯೂಷನ್” (ದನದ ಮಾಂಸದ ರಫ್ತು) ಅನ್ನು ಕೊನೆಗೊಳಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಮತ್ತೊಂದು ಕಡೆ ತಮ್ಮ ಭಾಷಣದಲ್ಲಿ “ಸಬಕಾ (ಸಮಾಜವಾದಿ, ಬಹುಜನ ಪಕ್ಷ, ಕಾಂಗ್ರೆಸ್) ದ ವಿನಾಶ ಶತಸಿದ್ಧ” ಎಂದು ಹೇಳುವ ಮೋದಿ ಮುಂದುವರೆದು “ಕಾಂಗ್ರೆಸ್ ಮುಕ್ತ ಭಾರತ್” ಗಾಗಿ ತನ್ನನ್ನು ಚುನಾಯಿಸಬೇಕೆಂದು ಕೋರಿಕೊಂಡಿದ್ದರು.

ಮತ್ತೊಂದು ಚುನಾವಣಾ ಭಾಷಣದಲ್ಲಿ ಮೋದಿಯು “ಕಷ್ಟದ ಕೆಲಸಗಳನ್ನು ನಿಭಾಯಿಸಲು ದೇವರು ಕೆಲವರನ್ನು ಆರಿಸುತ್ತಾನೆ. ಬಹುಶ ದೇವರು ನನ್ನನ್ನು ಆರಿಸಿರಬಹುದು” ಎಂದು ಹೇಳಿ ಕಟ್ಟಕಡೆಗೆ ದೇವರನ್ನು ಎಳೆದು ತಂದಿದ್ದರು.

ಇದೇ ಮೋದಿ 2014ರ ಚುನಾವಣೆಯ ಸಂದರ್ಭದಲ್ಲಿ ಬಿಹಾರ್‌ನಲ್ಲಿ ಭಾಷಣ ಮಾಡುತ್ತಾ narender_modi_rss“ಹಮ್ ಚುನ್ ಚುನ್ ಕೆ ಸಬಕ್ ಸಿಖಾಯೇಂಗೇ ( ನಾವು ಹುಡುಕಿ ಹುಡುಕಿ ಪಾಠ ಕಲಿಸುತ್ತೇವೆ)” ಎಂದು ಹೇಳಿದ್ದರು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮುಸ್ಲಿಂ ಮಹಿಳೆಯರನ್ನು, ಗರ್ಭಿಣಿಯರನ್ನು ಹುಡುಕಿ, ಹುಡಕಿ ಸಾಯಿಸಲಾಯಿತು. ಮೋದಿ ಆಡಳಿತದ ಹತ್ತು ವರ್ಷಗಳ ಗುಜರಾತ್‌ನಲ್ಲಿ ಪೋಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಹುಡುಕಿ ಹುಡುಕಿ ಹದಿಮೂರು ನಕಲಿ ಎನ್‌ಕೌಂಟರ್‌ಗಳನ್ನು ನಡೆಸಲಾಗಿದೆ. ಇಂದಿಗೂ ತನಿಖೆಗಳು ಜಾರಿಯಲ್ಲಿವೆ.

ಇನ್ನು ಬಿಹಾರನ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮೋದಿಯನ್ನು ವಿರೋಧಿಸುವವರೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದ್ದರು. ಇನ್ನು ಪ್ರವೀಣ್ ತೊಗಾಡಿಯಾ ಮುಸ್ಲಿಂ ಮೊಹಲ್ಲಗಳನ್ನು ವರ್ಗೀಕರಿಸಿ ನಂತರ ಅವನ್ನು ಶುದ್ಧೀಕರಿಸಿ ಅದರಿಂದ ಮುಸ್ಲಿಂರನ್ನು ಪ್ರತ್ಯೇಕಿಸಿ ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಬಿಜೆಪಿಯನ್ನು ಬೆಂಬಲಿಸಿದ ರಾಮದೇವ್ ಎನ್ನುವ ಸನ್ಯಾಸಿ ದಲಿತರ ಕುರಿತಾಗಿ ಅವಹೇಳನಕರವಾಗಿ ಮಾತನಾಡಿದ್ದರು.ಇವರ ಈ ಮಾತುಗಳನ್ನು ಸಂಘರಿವಾರ ಸಮರ್ಥಿಸಿಕೊಂಡಿತ್ತು.

ಮೋದಿಯ ಬಲಗೈ ಬಂಟ ಅಮಿತ್ ಷಾ ಉತ್ತರ ಪ್ರದೇಶದಲ್ಲಿ ಜಾಟ್ ಪಂಗಡದವರನ್ನು ಉದ್ದೇಶಿಸಿ ಮಾತನಾಡುತ್ತಾ “ಮುಜಫರ್ ನಗರದ ಗಲಭೆಗಳಿಗೆ ಪ್ರತೀಕಾರವಾಗಿ ಈ 2014ರ ಚುನಾವಣೆಗಳನ್ನು ಬಳಸಿಕೊಳ್ಳಿ” ಎಂದು ಕರೆ ನೀಡಿದರು. ಇದು ಸಹ ಮೋದಿ ಶೈಲಿಯ ನೆತ್ತರ ದಾಹದ ಭಾಷೆ. ಇದನ್ನು ಅಮಿತ್ ಷಾ ನಿರಾಕರಿಸಲೂ ಇಲ್ಲ. ಬದಲಾಗಿ ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದು ಕಡೆ “ಇನ್ನು ಮುಂದೆ ನಾನು ಪ್ರತೀಕಾರದ ನಡಾವಳಿಗಳಿಂದ ಆಡಳಿತ ನಡೆಸುವುದಿಲ್ಲ” ಎಂದು ಸ್ವತಃ ಸ್ವಯೋಪ್ರೇರಿತನಾಗಿ ಹೇಳಿಕೆ ನೀಡಿದ್ದ ಮೋದಿ ತಮ್ಮ ಬಲಗೈ ಬಂಟನ ಈ ನೆತ್ತರ ದಾಹದ ಹೇಳಿಕೆಗಳನ್ನು ಮಾತ್ರ ಇದುವರೆಗೂ ಖಂಡಿಸಿಲ್ಲ ಅಥವಾ ನಿರಾಕರಿಸಿಲ್ಲ.

ಇನ್ನೂ ಹಿಂದಕ್ಕೆ 2002ರ ಗುಜರಾತ್‌ನ ಹತ್ಯಾಕಾಂಡದ ಸಂದರ್ಭದಲ್ಲಿ ಗೋಧ್ರಾ ದುರಂತ ನಡೆದ 27, ಫೆಬ್ರವರಿ 2002ರಂದು ಪೋಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯು “ಕೋಮು ಗಲಭೆಗಳಲ್ಲಿ ಹಿಂದೂ ಮತ್ತು ಮುಸ್ಲಿಂರನ್ನು ಪ್ರತ್ಯೇಕಿಸದೆ ಶಿಕ್ಷಿಸಬೇಕಾಗುತ್ತದೆ. ಆದರೆ ಈಗ ಹಾಗೆ ಮಾಡಬೇಡಿ. ಹಿಂದೂಗಳಿಗೆ ಅವರ ಸಿಟ್ಟನ್ನು ವ್ಯಕ್ತಪಡಿಸಲು ಅವಕಾಶ ಕೊಡಿ” ಎಂದು ಆದೇಶಿಸಿದ್ದರೆಂದು ಆಗಿನ ಗುಪ್ತಚರ ವಿಭಾಗದ ಡೆಪ್ಯುಟಿ ಕಮಿಷನರ್ ಸಂಜೀವ್ ಭಟ್ ಮತ್ತು ಮಂತ್ರಿ ಹರೇನ್ ಪಾಂಡ್ಯ ತನಿಖಾ ಆಯೋಗದ ಮುಂದೆ ಸಾಕ್ಷಿ ನುಡಿದಿದ್ದರು. ಆದರೆ 26 ಮಾರ್ಚ್, 2003ರಲ್ಲಿ ಹರೇನ್ ಪಾಂಡ್ಯ ಅವರನ್ನು ಕೊಲೆಯಾಗುತ್ತದೆ.

ವರ್ತಮಾನ : 2014-15

ಕೇಂದ್ರದಲ್ಲಿ ಆರೆಸ್ಸಸ್ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಕಬ್ಜಾ ಮಾಡಿಕೊಂಡಿತು. ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತವನ್ನು ತಿರಸ್ಕರಿಸಿದ ಇಂಡಿಯಾದ ಮತದಾರ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿದ್ದ.

“ಚಿಕ್ಕದಾದ ಸರ್ಕಾರ, ವಿಶಾಲವಾದ, ಪರಮಾವಧಿಯ ಆಡಳಿತ” (minimum government, maximum governance) ಎನ್ನುವುದು ನರೇಂದ್ರ ಮೋದಿಯ ಸ್ಲೋಗನ್. ಈ ನಾಲ್ಕು ಶಬ್ದಗಳ ಈ ಸ್ಲೋಗನ್ ದೇಶವೊಂದರಿಂದ ನಾವು ಬಯಸುವಂತಹ, ನಮ್ಮ ಕಿವಿಗೆ ಸುಶ್ರಾವ್ಯವಾಗುವಂತಹದ್ದನ್ನೇ ಅರಹುತ್ತಿರುತ್ತದೆ. ಇದು ನರೇಂದ್ರ ಮೋದಿಯ ಜನಪ್ರಿಯ ಸ್ಲೋಗನ್‌ಗಳಲ್ಲೊಂದು. ಇದನ್ನೆಲ್ಲಾ ಗುಜರಾತ್ ಮಾಡೆಲ್ ಎನ್ನುವ ಸಂಘ ಪರಿವಾರದ, ಮಧ್ಯಮವರ್ಗದ ಬೈಬಲ್‌ನಿಂದ ಹೆಕ್ಕಿಕೊಳ್ಳಲಾಗಿದೆ. 2014ರ ತಮ್ಮ ಚುನಾವಣಾ ಪ್ರಚಾರದ ಭಾಷಣ ಉದ್ದಕ್ಕೂ ಈ ನರೇಂದ್ರ ಮೋದಿ ಮತ್ತು ಅಮಿತ್ ಷಾ “ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ” ಎಂದು ಪ್ರಚಾರ ಮಾಡಿದ್ದರು. ಯುಪಿಎ ಸರ್ಕಾರದ ಹತ್ತು ವರ್ಷಗಳ ಭ್ರಷ್ಟ ಆಡಳಿತವನ್ನು ಕೊನೆಗೊಳಿಸಿ ಎಂದು ದೇಶಾದ್ಯಾಂತ ಕಾಂಗ್ರೆಸ್ ವಿರುದ್ಧ ತೀವ್ರವಾದ ವಾಗ್ದಾಳಿ Modi-roadshow-varanasiನಡೆಸಿದ ನರೇಂದ್ರ ಮೋದಿ ಮತ್ತು ಸಂಘ ಪರಿವಾರ ಅತ್ಯಂತ ವ್ಯವಸ್ಥಿತವಾದ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದರು. ಬಿಜೆಪಿ ಪಕ್ಷವು ಮಾಧ್ಯಮಗಳು ಸೃಷ್ಟಿಸಿದ ಮೋದಿಯ ಅಭಿವೃದ್ಧಿಯ ಜನಪ್ರಿಯತೆಯನ್ನು ಬಳಸಿಕೊಂಡು ದೇಶದ ಮಧ್ಯಮ ಹಾಗೂ ಮೇಲ್ವರ್ಗಗಳ ಮತಗಳನ್ನು ಬೇಟೆಯಾಡಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸಿತ್ತು. ಕಳೆದ ಎರಡು ದಶಕಗಳಿಂದ ಜಾಗತೀಕರಣದ ಫಲವಾದ ಕನ್ಸೂಮರಿಸಂನ ಸೆಳೆತಕ್ಕೆ ಒಳಗಾಗಿ ಕೊಳ್ಳುಬಾಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ ಇಲ್ಲಿನ ಮಧ್ಯಮವರ್ಗ ಈ ಕೊಳ್ಳುಬಾಕ ಸಂಸ್ಕೃತಿಯನ್ನೇ ಅಭಿವೃದ್ಧಿಯೆಂದು ಭ್ರಮಿಸಿ ನರೇಂದ್ರ ಮೋದಿಯನ್ನು ತಮಗೆ ಬೇಕಾದ್ದನ್ನೆಲ್ಲ ದಯಪಾಲಿಸುವ ಹರಿಕಾರ ಎಂದು ನಂಬಿದರು. ಮೊನ್ನೆಯವರೆಗೂ ಈ ಮಧ್ಯಮ ವರ್ಗ ಮತ್ತು ಕಾರ್ಪೋರೇಟ್ ವರ್ಗಗಳಿಗೆ ಈ ಜಾಗತೀಕರಣದ ಹರಿಕಾರ ಮನಮೋಹನ್ ಸಿಂಗ್ ಡಾರ್ಲಿಂಗ್ ಆಗಿದ್ದರು. ಆದರೆ ಇಂದು ಇವರ ಪಾಲಿಗೆ ಮನಮೋಹನ್ ಸಿಂಗ್ ಖಳನಾಯಕ. ಏಕೆಂದರೆ ಇವರ ಹತ್ತು ವರ್ಷಗಳ ಆಡಳಿತದಲ್ಲಿ ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಕಷ್ಟವಾಗುತ್ತಿದೆ. ನಮ್ಮ ಮಾಧ್ಯಮಗಳ ಮತ್ತು ಮಧ್ಯಮ ವರ್ಗಗಳ ಈ ಬೌದ್ಧಿಕ ದಿವಾಳಿತನದ ಫಲವಾಗಿ ಇಂದು ಮತೀಯವಾದಿ, ಫ್ಯಾಸಿಸ್ಟ್ ಸಂಘಟನೆ ಆರೆಸ್ಸಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. “ಅಚ್ಛೇ ದಿನ್” ಎನ್ನುವ ತನ್ನ ಆವೇಶದ, ಪ್ರಚೋದನಕಾರಿ ಭಾಷಣದ ಮೂಲಕ ಇಂಡಿಯಾದ ಯುವ ಸಮೂಹವನ್ನು ಬುಟ್ಟಿಗೆ ಹಾಕಿಕೊಂಡಿದ್ದ ನರೇಂದ್ರ ಮೋದಿ ವಿದೇಶದಿಂದ ಕಪ್ಪು ಹಣವನ್ನು ಜಪ್ತಿ ಮಾಡಿ ಮರಳಿ ಇಂಡಿಯಾಗೆ ತರಬೇಕೆಂದರೆ, ತಂಟೆ ಮಾಡುವ ನೆರೆಹೊರೆ ಮುಸ್ಲಿಂ ರಾಷ್ಟ್ರಗಳಿಗೆ ಪಾಠ ಕಲಿಸಬೇಕೆಂದರೆ ಈ ದೇಶಕ್ಕೆ ನನ್ನಂತಹ 56 ಇಂಚಿನ ಎದೆಯುಳ್ಳ ನಾಯಕನ ಅವಶ್ಯಕತೆ ಇದೆ ಎಂದು ಬಹು ಸಂಖ್ಯಾತ ಹಿಂದೂಗಳಿಗೆ ಸಂದೇಶವನ್ನು ರವಾನಿಸಿದ್ದರು. ಈ ಸಂದೇಶ ತನ್ನ ಗುರಿಯನ್ನು ಸಾಧಿಸಿದರ ಫಲವಾಗಿ ಆರೆಸ್ಸಸ್ ನೇತೃತ್ವದ ಬಿಜೆಪಿ ಪಕ್ಷ ಬಹುಮತವನ್ನು ಪಡೆದು ಕೇಂದ್ರದಲ್ಲಿ ಅಧಿಕಾರವನ್ನು ಪಡೆದುಕೊಂಡಿತು. “ಎಲ್ಲರಿಗೂ ನ್ಯಾಯ, ಯಾರನ್ನೂ ಓಲೈಸುವುದಿಲ್ಲ” ಎಂದು ಜನತೆಯ ಮುಂದೆ ಪ್ರಮಾಣ ಮಾಡಿದ್ದ ಸಂಘ ಪರಿವಾರ ಇಂದು ಅಧಿಕಾರಕ್ಕೆ ಬಂದ ನಂತರ ಅಸಮಾನತೆಯ ತತ್ವಗಳನ್ನು ಜಪಿಸುತ್ತಿದೆ. ಪ್ರತ್ಯೇಕತೆಯ, ಶ್ರೇಣೀಕೃತ, ತಾರತಮ್ಯ ನೀತಿಯ ಸನಾತನ ಹಿಂದೂ ಧರ್ಮದ ಸಂಸ್ಥಾಪನೆ ತನ್ನ ಮುಖ್ಯ ಅಜೆಂಡಾಗಳಲ್ಲಿ ಒಂದು ಎಂದು ಸಂಘ ಪರಿವಾರ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಿದೆ ಮತ್ತು ಅದಕ್ಕೆ ಪೂರಕವಾಗಿ ವರ್ತಿಸುತ್ತಿದೆ. ಅಭಿವೃದ್ಧಿಯೊಂದೇ ನಮ್ಮ ಮೊದಲ ಧ್ಯೇಯ, “ಸಂಪೂರ್ಣ ಆಡಳಿತ, ಎಲ್ಲರ ವಿಕಾಸ” ಎಂದು ಭಾಷಣದ ಮೂಲಕ ಅಧಿಕಾರವನ್ನು ಗಳಿಸಿದ್ದ ಮೋದಿ ಇಂದು ಸಂಘ ಪರಿವಾರದ ಧಾರ್ಮಿಕ ಫೆನಟಿಸಂ ಅನ್ನು ಕುರಿತು ಯಾವುದೇmodi-GIM ಹೇಳಿಕೆಗಳನ್ನು ಕೊಡುತ್ತಿಲ್ಲ. ಈ ಸಂಘ ಪರಿವಾರದ ಸದಸ್ಯರಾದ ಪತ್ರಕರ್ತ ಅರಣ್ ಶೌರಿ ಕಳೆದ ಆರು ತಿಂಗಳ ಆರೆಸ್ಸ್‌ಸ್, ನರೇಂದ್ರ ಮೋದಿಯ ಜಂಟಿ ನೇತೃತ್ವದ ಈ ಬೆಜೆಪಿ ಸರ್ಕಾರದ ಆಡಳಿತದ ಕಾರ್ಯ ವೈಖರಿಯನ್ನು ವಿಶ್ಲೇಷಿಸುತ್ತ “ನೀವು ದೆಹಲಿಯಲ್ಲಿ ಅಭಿವೃದ್ಧಿಯ ಕುರಿತಾಗಿ ಮತ್ತು ಮುಜಫ್ಫರ್ ನಗರದಲ್ಲಿ ಲವ್ ಜಿಹಾದ್ ಕುರಿತು ಏಕಕಾಲದಲ್ಲಿ ಮಾತನಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಚಿಂತಕ ಪ್ರಣಬ್ ಬರ್ಧನ್ ಅವರು “ಸಂಘ ಪರಿವಾರ ಮತ್ತು ಮೋದಿಯ ಆಡಳಿತದ ಈ ಮಾದರಿ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಮಾದರಿಗೆ ಹತ್ತಿರವಾಗಿದೆ. ವಾಷಿಂಗ್ಟನ್‌ನಲ್ಲಿ ತೆರಿಗೆ ಕಡಿತದ ಕುರಿತಾಗಿ, ಕಾರ್ಪೋರೇಟ್ ಸುಧಾರಣೆಗಳ ಕುರಿತಾಗಿ ಮಾತನಾಡಿ ಕಾರ್ಪೋರೇಟ್ ಗುಂಪುಗಳನ್ನು ಸಂತೃಪ್ತಿಗೊಳಿಸಿದರೆ, ಉಳಿದ ಭಾಗಗಳಲ್ಲಿ ಬೈಬಲ್ ಅನ್ನು ಬಳಸಿಕೊಂಡು ಗೇ ಹಕ್ಕುಗಳನ್ನು ನಿರಾಕರಿಸುವುದು, ಗರ್ಭಪಾತವು ಬೈಬಲ್‌ನ ನೀತಿಗಳಿಗೆ ವಿರೋಧ ಎನ್ನುವ ಧಾರ್ಮಿಕ ಮೂಲಭೂತವಾದವನ್ನು ಪ್ರದರ್ಶಿಸುತ್ತದೆ. ಇಂದು ನರೇಂದ್ರ ಮೋದಿಯು ಜಾಗತೀಕರಣದ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ತನ್ನ ಕಟ್ಟಾ ಬೆಂಬಲಿಗ ಆರ್ಥಿಕ ತಜ್ಞ ’ಭಗವತಿ’ ಮತ್ತು ಮತೀಯವಾದಿ, ಆಧುನಿಕತೆಯ ವಿರೋಧಿ ಆರೆಸ್ಸಸ್‌ನ ’ಭಾಗವತ್’ ಇವರಿಬ್ಬರನ್ನೂ ಒಳಗೊಳ್ಳುವಂತಹ ದ್ವಿಮುಖ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಹಿಂದೂ ಫೆನಟಿಸಂ ಎನ್ನುವ ದೇಹಕ್ಕೆ ಆಡಳಿತ ಮತ್ತು ಅಭಿವೃದ್ಧಿ ಎನ್ನುವ ತಲೆಯನ್ನು ಕಸಿ ಮಾಡಿರುವ ನರೇಂದ್ರ ಮೋದಿ ಗಣೇಶನಂತೆ ಪ್ರಾಚೀನ ಭಾರತದ ಸರ್ಜರಿ ಕೌಶಲ್ಯವನ್ನು ಇದನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ವಿವರಿಸುತ್ತಾರೆ.

ಪತ್ರಕರ್ತ ವಿನೋದ ಮೆಹ್ತ ಬರೆದಂತೆ ಮೋದಿಯ ಶೈಲಿಯ ಆಡಳಿತವೆಂದರೆ ಗುರಿ ಮುಟ್ಟುವುದು ಮುಖ್ಯವಾಗುತ್ತದೆಯೇ ಹೊರತು ಅದನ್ನು ತಲಪಲು ಬಳಸುವ ವಾಮಮಾರ್ಗದ, ಹಿಂಸಾಚಾರದ, ಮೂಲಭೂತವಾದದ ದಾರಿಗಳು ಅಕ್ಷೇಪಾರ್ಹವಲ್ಲವೇ ಅಲ್ಲ.

ಆರೆಸ್ಸಸ್ ಮತ್ತು ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂಘ ಪರಿವಾರದ ಮುಖಂಡ ಮೋಹನ್ ಭಾಗವತ್ ಮತ್ತು ಅದರ ಲುಂಪೆನ್ ಗುಂಪು ಮಾತನಾಡಿದ ಮತೀಯವಾದಿ, ಪ್ರಚೋದನಾತ್ಮಕ ಭಾಷಣಗಳು, ಹೇಳಿಕೆಗಳು:

ಇಂಗ್ಲೆಂಡ್‌ನ ನಿವಾಸಿಗಳು ಇಂಗ್ಲೀಷರು, ಜರ್ಮನಿಯ ನಿವಾಸಿಗಳು ಜರ್ಮನ್ನರು, ಅಮೇರಿಕಾದ ನಿವಾಸಿಗಳು ಅಮೇರಿಕನ್ನರು ಎಂದು ಒಪ್ಪಿಕೊಳ್ಳಬಹುದಾದರೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು.

ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲದಿದ್ದರೆ ಭಾರತೀಯರೆಲ್ಲರೂ ಅಪಾಯಕ್ಕೆ ಸಿಲುಕಬೇಕಾಗುತ್ತದೆ.ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜದ ನಿರ್ಮಾಣ ಅತ್ಯಗತ್ಯ.

– ಮೋಹನ್ ಭಾಗವತ್

***

ಮದರಾಸಗಳಲ್ಲಿ ಭಯೋತ್ಪಾದನೆಯ ಕುರಿತಾಗಿ ತರಬೇತಿ ನೀಡಲಾಗುತ್ತಿದೆ. ಮದರಾಸಾಗಳು ಅವರನ್ನು ಜೆಹಾದಿಗಳನ್ನಾಗಿ, ಭಯೋತ್ಪಾದಕರನ್ನಾಗಿ ತಯಾರಿಸುತ್ತಿವೆ.

ನಾಥುರಾಮ್ ಗೋಡ್ಸೆ ಸಹ ರಾಷ್ಟ್ರೀಯವಾದಿ ಮತ್ತು ಮಹಾತ್ಮ ಗಾಂಧಿ ಸಹ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಗೋಡ್ಸೆ ತುಂಬಾ ಉದ್ರೇಕಕಾರಿ ವ್ಯಕ್ತಿಯಾಗಿದ್ದ. ಅವನು ತಪ್ಪನ್ನು ಮಾಡಿರಬಹುದು. ಆದರೆ ದೇಶ ದ್ರೋಹಿ ಅಲ್ಲ. ಅವನು ದೇಶಪ್ರೇಮಿ

ಹಿಂದೂಯಿಸಂ ಅನ್ನು ರಕ್ಷಿಸಲು ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು.

– ಉತ್ತರ ಪ್ರದೇಶದ ಉನ್ನೋ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹರಾಜ್

***

ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಳೆದ ಎರಡೂವರೆ ವರ್ಷಗಳ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಸುಮಾರು 450 ಗಲಭೆಗಳಾಗಿವೆ. ಏಕೆಂದರೆ ಒಂದು ನಿರ್ದಿಷ್ಟ ಧರ್ಮದವರ ಪ್ರಭಾವ ಹೆಚ್ಚುತ್ತಿದೆ. ಆದರೆ ಪೂರ್ವ ಉತ್ತರ ಪ್ರದೇಶದಲ್ಲಿ ಗಲಭೆಗಳು ಯಾಕಿಲ್ಲ? ನಿಮಗೆ ಸುಲುಭವಾಗಿ ಅರ್ಥವಾಗುತ್ತದೆ. ಶೇಕಡ 10-20% ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ಸಣ್ಣ ಪುಟ್ಟ ಗಲಭೆಗಳು ನಡೆಯುತ್ತವೆ. ಶೇಕಡಾ 35% ರಷ್ಟು ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ತೀವ್ರವಾದ ಗಲಭೆಗಳು ಜರಗುತ್ತವೆ. ಶೇಕಡಾ35% ಕ್ಕಿಂತಲೂ ಅಧಿಕ ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲಿ ಹಿಂದೂಗಳಿಗೆ ಜಾಗವೇ ಇಲ್ಲ

ಅವರು ನಮ್ಮ ಒಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿದರೆ ನಾವು 100 ಹಿಂದೂ ಹುಡುಗಿಯರನ್ನು ಅಪಹರಿಸುತ್ತೇವೆ. ಹಿಂದೂ ಹುಡುಗರು ಮುಸ್ಲಿಂ ಮಹಿಳೆಯರನ್ನು ಮದುವೆಯಾಗಿ ನಂತರ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಬೇಕು

(ಪಾರ್ಲಿಮೆಂಟಿನಲ್ಲಿ ಮಾತನಾಡುತ್ತ) ಹಿಂದೂಗಳನ್ನು ಹೆದರಿಸಿದರೆ, ಅವರು ಪ್ರತೀಕಾರ ತಿರಿಸಿಕೊಳ್ಳಲು ಸಿದ್ಧರಿರಬೇಕು.

– ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

***

(ಪಶ್ಚಿಮ ದೆಹಲಿಯ ಶ್ಯಾಮನಗರ ಏರಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತ) ನಿಮಗೆ ರಾಮಜಾದೆ ಧರ್ಮದ ಆಡಳಿತ ಬೇಕೋ, ಹರಾಮಜಾದೆ ಧರ್ಮದ ಆಡಳಿತ ಬೇಕೋ ಎಂದು ನೀವೇ ನಿರ್ಧರಿಸಿ.

– ಬಿಜೆಪಿ ಸರ್ಕಾರದ ಮಂತ್ರಿ ನಿರಂಜನ ಜ್ಯೋತಿ

***

ನಿಮಗೆ ಹನುಮಂತ ಗೊತ್ತಲ್ಲವೇ? ನಾವೆಲ್ಲರೂ ಹನುಮಂತರು. ಮೋದಿಯ ಭಕ್ತರು. ಹನುಮಂತನು ರಾಮನಿಗೆ ನನಗೆ ಪ್ರತ್ಯೇಕ ಐಡೆಂಟಿಟಿ ಇಲ್ಲ. ನಿನ್ನ ಭಕ್ತ ಅಷ್ಟೆ ಎಂದು ಹೇಳುತ್ತಾನೆ. ಹಾಗೆ ಮೋದಿ ನಮಗೆಲ್ಲ ರಾಮನಂತೆ. ಕೇಜ್ರೀವಾಲ್ ಮಾರೀಚನಂತೆ.

– ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್

***

ಭಗವದ್ಗೀತೆಯನ್ನು ಭಾರತದ ಧರ್ಮಗ್ರಂಥವೆಂದು ಅಧಿಕೃತವಾಗಿ ಘೋಷಿಸಿ.

– ಬಿಜೆಪಿ ಸರ್ಕಾರದ ಮಂತ್ರಿ ಸುಷ್ಮಾ ಸ್ವರಾಜ್

***

ಮಹಾಭಾರತದ ಕಾಲದಲ್ಲಿ ಕರ್ಣನು ಕುಂತಿಯ ಗರ್ಭದಿಂದ ಜನಿಸಿಲ್ಲ. ಗರ್ಭದ ಹೊರಗೆ ಜನಿಸಿದ್ದಾನೆ ಎಂದು ನಾವೆಲ್ಲಾ ಓದಿದ್ದೇವೆ. ಅಂದರೆ ಇದರ ಅರ್ಥ ಪುರಾತನ ಕಾಲದಲ್ಲಿಯೇ ಭಾರತವು ಜೆನಟಿಕ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿತ್ತು ಎಂಬುದು ಸಾಬೀತಾಗಿದೆ. ಮತ್ತೊಂದು ಉದಾಹರಣೆ ಕೊಡುವುದಾದರೆ ನಾವು ಆನೆ ಮುಖದ ಗಣೇಶನನ್ನು ಪೂಜಿಸುತ್ತೇವೆ. ಮನುಷ್ಯನ ದೇಹಕ್ಕೆ ಆನೆಯ ಮುಖವನ್ನು ಜೋಡಿಸಿದ್ದಾರೆಂದರೆ ಆ ಕಾಲದಲ್ಲಿಯೇ ಪ್ಲಾಸ್ಟಿಕ್ ಸರ್ಜರಿಯಲ್ಲಿ ನಾವು ಪಳಗಿದ್ದೆವು ಎಂದು ಸಹ ಸಾಬೀತಾಗುತ್ತದೆ

– ಪ್ರಧಾನಿ ನರೇಂದ್ರ ಮೋದಿ

***

ಮೋದಿಯು ದೇವರ ಅವತಾರ. ಮೋದಿಯು ಗಾಂಧಿಯನ್ನು ಮೀರಿದ್ದಾರೆ. ಏಷ್ಯಾದ ಪೂರ್ವ-ದಕ್ಷಿಣ ರಾಷ್ಟ್ರಗಳನ್ನು ಮಹಾಭಾರತ ಮತ್ತು ರಾಮಾಯಣದ ಮೂಲಕ ಸಾಂಸ್ಕೃತಿಕವಾಗಿ ಬೆಸೆಯಬೇಕಾಗಿದೆ.

– ಲೋಕೇಶ ಚಂದ್ರ, Indian Council for Cultural Relations (ICCR) ನ ಮುಖ್ಯಸ್ಥ

***

“ತೀರಾ ಇತ್ತೀಚೆಗೆ ಆರೆಸಸ್ ತನ್ನ ಹಿಂದೂ ರಾಷ್ಟ್ರೀಯತೆಯನ್ನು ನವೀಕರಿಸಲು ಮತ್ತು ಈ ಸಿದ್ಧಾಂತಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿದೆ. ತನ್ನ ಎಂಬತ್ತು ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಪದ್ಧತಿಯ ಕುರಿತಾಗಿ ಮಾತನಾಡುತ್ತಿದೆ. ಈ ಜಾತಿ ಪದ್ಧತಿಯ ಹುಟ್ಟಿಗೆ ಸಂಪೂರ್ಣ ಮತೀಯವಾದದ ಚಿಂತನೆಗಳನ್ನು ಲೇಪಿಸಲು ಪೂರ್ವ ತಯಾರಿಗಳನ್ನು ನಡೆಸುತ್ತಿರುವ ಆರೆಸಸ್ ಅದಕ್ಕಾಗಿ ಮೊಟ್ಟ ಮೊದಲ ಬಾರಿಗೆ ದಲಿತರ ಇತಿಹಾಸದ ಕುರಿತಾಗಿ ಪುಸ್ತಕಗಳನ್ನು ಬರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಮೂರು ಪುಸ್ತಕಗಳಲ್ಲಿ ವಿದೇಶಿ ದಾಳಿಕೋರರು ಇಲ್ಲಿನ ಜಾತಿ ಪದ್ಧತಿಯನ್ನು ಹುಟ್ಟು ಹಾಕಿದರು ಎಂದು ಹೇಳಿದೆ. ಬಿಜೆಪಿಯ ವಕ್ತಾರರಾದ ಸೋನಂಕರ್ ಶಾಸ್ಟ್ರಿ ಬರೆದಿರುವ ’ಹಿಂದೂ ಚರ್ಮಕಾರ ಜಾತಿ, ಹಿಂದೂ ವಾಲ್ಮೀಕಿ ಜಾತಿ, ಹಿಂದೂ ಖಾತಿಕ್ ಜಾತಿ’ ಎನ್ನುವ ಮೂರು ಪುಸ್ತಕಗಳಲ್ಲಿ ದಲಿತರನ್ನು ಮತ್ತು ಹಿಂದುಳಿದ ವರ್ಗಗಳನ್ನು ಸೆಳೆಯಲು ಇಡೀ ಶ್ರೇಣೀಕೃತ ವ್ಯವಸ್ಥೆಗೆ ಮುಸ್ಲಿಂ ದಾಳೀಕೋರರೇ ಕಾರಣ ಎಂದು ಬರೆಯಲಾಗಿದೆ. ಈ ಪುಸ್ತಕಗಳನ್ನು ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಡುಗಡೆಗೊಳಿಸಿದ್ದಾರೆ. ಈ ಮೂರು ಪುಸ್ತಕಗಳಿಗೂ ಆರೆಸಸ್ ಸಂಚಾಲಕರು ಮುನ್ನುಡಿಗಳನ್ನು ಬರೆದಿದ್ದಾರೆ. ಇಲ್ಲಿನ ಒಂದು ಪುಸ್ತಕದಲ್ಲಿ ಆರೆಸಸ್ ನಾಯಕ ಭೈಯ್ಯಾಜಿ ಜೋಶಿ ಬರೆದ ಮುನ್ನುಡಿಯ ಕೆಲವು ಸಾಲುಗಳು ಹೀಗಿವೆ: “ಕ್ಷತ್ರಿಯ ಹಿಂದೂಗಳ ಸ್ವಾಭಿಮಾನವನ್ನು ನಾಶಪಡಿಸಲು ವಿದೇಶದ ಅರಬರು, ದನ ತಿನ್ನುವವರು, ಮುಸ್ಲಿಂ ನಾಯಕರು ಆ ಕ್ಷತ್ರಿಯರನ್ನು ಗೋವುಗಳನ್ನು ಕೊಲ್ಲಲು ಬಲಾತ್ಕರಿಸಿದರು, ಚರ್ಮವನ್ನು ಸುಲಿದು ಅದರ ಅಸ್ಥಿಪಂಜರವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡುವಂತೆ ಒತ್ತಾಯಿಸಿದರು. ಈ ಮೂಲಕ ಈ ವಿದೇಶಿ ದಾಳಿಕೋರರು ಚರ್ಮ-ಕರ್ಮ ಎನ್ನುವ ಜಾತಿಯನ್ನು ಸೃಷ್ಟಿಸಿದರು. ವರ್ಣಾಶ್ರಮದಲ್ಲಿ ಶೂದ್ರರು ಎಲ್ಲಿಯೂ ಅಸ್ಪಶ್ಯರಾಗಿರಲಿಲ್ಲ. ವಿದೇಶಿ ದಾಳಿಕೋರರು ಅವರನ್ನು ಅಸ್ಪಶ್ಯರನ್ನಾಗಿಸಿದರು.” ಮತ್ತೊಬ್ಬ ಆರೆಸಸ್ ಮುಖಂಡ ಸುರೇಶ್ ಸೋನಿ ಅವರು “ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲೆ ಮಧ್ಯಯುಗೀನ ಕಾಲದಲ್ಲಿ ಮುಸ್ಲಿಂ ದಾಳಿಕೋರರು ನಡೆಸಿದ ದೌರ್ಜನ್ಯದ ಫಲವಾಗಿ ಇಂದಿನ ಜಾತಿಗಳಾದ ವಾಲ್ಮೀಕಿ, ಸುದರ್ಶನ್, ಮೆಹಜಾಬಿ ಸಿಖ್ ಮತ್ತು ಇತರೆ 624 ಉಪಜಾತಿಗಳು ಹುಟ್ಟಿಕೊಂಡವು” ಎಂದು ಹೇಳಿದ್ದಾರೆ. ಮತ್ತೊಬ್ಬ ಆರೆಸಸ್ ಮುಖಂಡ ಕ್ರಿಷ್ಣ ಗೋಪಾಲ್ “ವೇದಗಳ ಕಾಲದಲ್ಲಿ ಖಾತಿಕ್ ಕ್ಷತ್ರಿಯರನ್ನು ಬ್ರಾಹ್ಮಣರೆಂದು ಗುರುತಿಸುತ್ತಿದ್ದರು. ದಾಳಿಕೋರರ ನಂತರ ಅವರನ್ನು ಅಸ್ಪಶ್ಯರೆಂದು ಕರೆಯತೊಡಗಿದರು” ಎಂದು ಬರೆಯುತ್ತಾರೆ.
– ಹಿಂದುಸ್ತಾನ್ ಟೈಮ್ಸ್, 22 ಸೆಪ್ಟೆಂಬರ್, 2014

CBSE ಜೂನ್30, 2014 ರಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಆ ಸುತ್ತೋಲೆಯ ವಿವರ ಈ ರೀತಿ ಇದೆ: “CBSE ಗೆ ಸೇರಿದ ಎಲ್ಲಾ ಶಾಲೆಗಳು ಸಂಸ್ಕೃತ ವಾರವನ್ನು ಆಚರಿಸಬೇಕು. ಸಂಸ್ಕೃತ ಮತ್ತು ಭಾರತದ ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿವೆ. ನಮ್ಮ ಸ್ವದೇಶಿ ಜ್ಞಾನವು ಈ ಸಂಸ್ಕೃತ ಭಾಷೆಯಲ್ಲಿ ಮಾತ್ರ ಲಭ್ಯವಿದೆ.”

ಇಂಡಿಯಾದ ಶಿಕ್ಷಣ ವ್ಯವಸ್ಥೆಯನ್ನು “ಭಾರತೀಕರಣ”ಗೊಳಿಸಲು ಹೊಸ ರಾಷ್ಟ್ರೀಯ ಸ್ಕೂಲ್ ಬೋರ್ಡಗಳನ್ನು ಸ್ಥಾಪಿಸಬೇಕೆಂದು ಬಾಬಾ ರಾಮದೇವ್ ಹೇಳಿದ್ದಾರೆ. ಭಾರತದ ಸನಾತನ ಪರಂಪರೆಯನ್ನು ಹೇಳಿಕೊಡುವ muzaffarnagar-riots-tentsಈ ಶಾಲೆಗಳನ್ನು “ಸೆಕೆಂಡರಿ ಶಿಕ್ಷಣದ ಭಾರತೀಯ ಬೋರ್ಡ್” ಎಂದು ನಾಮಕರಣ ಮಾಡಬೇಕೆಂದು ಹೇಳಿದ್ದಾರೆ.

ಕಳೆದ ಆರು ತಿಂಗಳಲ್ಲಿ ಸಂಘ ಪರಿವಾರದ ವಿಎಚ್‌ಪಿ ಸಂಘಟನೆಯ ನೇತೃತ್ವದಲ್ಲಿ “ಘರ್ ವಾಪಸಿ” ಎನ್ನುವ ಅಮಾನವೀಯ ಚಿಂತನೆಯ ಅನುಸಾರ ನಡೆದ ಅನ್ಯಧರ್ಮೀಯರನ್ನು ಹಿಂದೂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸುವ ಚಟುವಟಿಕೆಗಳು :

8, ಡಿಸೆಂಬರ್, 2014ರಂದು ಆರೆಸ್ಸಸ್ ಸೇರಿದ ಹಿಂದೂ ಸಂಘಟನೆಗಳು ಸುಮಾರು 250 ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿದರು.

ಅಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು 8000 ಅಲ್ಪಸಂಖ್ಯಾತರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ. ಹೈದರಬಾದ್ ಒಂದರಲ್ಲೇ ಸುಮಾರು 1200 ಕುಟುಂಬಗಳನ್ನು ಮತಾಂತರಿಸಲಾಗಿದೆ. ಇದನ್ನು ಮತಾಂತರ ಎಂದು ನಾವು ಕರೆಯುವುದಿಲ್ಲ. ಘರ್ ವಾಪಸಿ ಎಂದು ಕರೆಯಬೇಕು ಎಂದು ವಿಎಚ್‌ಪಿ ಮುಖಂಡ ವೆಂಕಟೇಶ್ ಹೇಳಿದ್ದಾರೆ.

ಗೋವಾದಲ್ಲಿ ಪೋರ್ಚುಗೀಸರ ಸಂದರ್ಭದಲ್ಲಿ ಬಲವಂತವಾಗಿ ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರಗೊಂಡವರನ್ನು ಘರ್ ವಾಪಸಿ ಕಾರ್ಯಕ್ರಮದ ಅಡಿಯಲ್ಲಿ ಮರಳಿ ಹಿಂದೂ ಧರ್ಮಕ್ಕೆ ಕರೆತರುತ್ತೇವೆ ಎಂದು ಆರೆಸ್ಸಸ್‌ನ ಶರದ್ ಕುಂಟೆ ಹೇಳಿದ್ದಾರೆ

ಪ್ರತಿ ವರ್ಷವು 25,000-30,000 ಮುಸ್ಲಿಂರು ಹಿಂದೂಯಿಸಂಗೆ ಮರಳಿ ಬರುತ್ತಿದ್ದಾರೆ. ಪಟೇಲ್, ದೇಸಾಯಿ, ಭಟ್ ಎಲ್ಲ ಹಿಂದೂ ಹೆಸರುಗಳು. ಮುಸ್ಲಿಮರು ತಮ್ಮ ಹೆಸರಿನ ಮುಂದೆ ಈ ಹಿಂದು ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಇಲ್ಲಿ ನೂರ್ ಮಹಮದ್ ದೇಸಾಯಿ, ಅಹ್ಮದ್ ಪಟೇಲ್, ಮಕ್ಬೂಲ್ ಭಟ್ ಎನ್ನುವ ಹೆಸರುಗಳನ್ನು ಕಾಣುತ್ತೇವೆ. ಅವರ ಹಿಂದಿನವರು ಹಿಂದೂಗಳು ಎಂದು ಗುಜರಾತ್‌ನ ವಿಎಚ್‌ಪಿ ಸೆಕ್ರೆಟರಿ ರಾನಚೋಡ್ ಭಾರವಾದ್ ಹೇಳಿದ್ದಾರೆ.

ಕೇರಳದ ಅಲಪ್ಪುಜಾದಲ್ಲಿ ಸುಮಾರು 30 ದಲಿತ ಕ್ರಶ್ಚಿಯನ್ ಕುಟುಂಬಗಳ್ನ್ನು ಘರ್ ವಾಪಸಿ ಕಾರ್ಯಕ್ರಮದ ಅಡಿಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ. ಇನ್ನೂ 150 ಕುಟುಂಬಗಳು ಹಿಂದೂ ಧರ್ಮಕ್ಕೆ ಬರಲು ಇಚ್ಛೆ ವ್ಯಕ್ತಪಡಿಸಿವೆ ಎಂದು ವಿಎಚ್‌ಪಿ ಮುಖಂಡ ಪ್ರತಾಪ್.ವಿ.ಪಡಿಕ್ಕಲ್ ಹೇಳಿದ್ದಾರೆ.ಬಲ್ಲ ಮೂಲಗಳ ಪ್ರಕಾರ ಆರೆಸ್ಸಸ್ ಸುಮಾರು 58 ಪ್ರಚಾರಕರನ್ನು ಈ ಕಾರ್ಯಕ್ರಮಕ್ಕಾಗಿಯೇ ನಿಯೋಜಿಸಲಾಗಿದೆ

ಗುಜರಾತ್‌ನ ವಲ್ಸದ್‌ನಲ್ಲಿ ಸುಮಾರು 200 ಆದಿವಾಸಿ ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ.

ಉತ್ತರ ಪ್ರದೇಶದ ಜಾನುಪುರದಲ್ಲಿ 310 ಕ್ರಿಶ್ಷಿಯನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ.

11, ಡಿಸೆಂಬರ್ 2014 ರಂದು ಲೂಧಿಯಾನದ ಕಲವರಿ ಚರ್ಚಿನ ಮೇಳೆ ದಾಳಿ.

3 ಡಿಸೆಂಬರ್, 2014ರಲ್ಲಿ ದೆಹಲಿ ಚರ್ಚನ ಮೇಲೆ ದಾಳಿ.

ಭಿಲಾಯಿ, ಚಿತ್ರದುರ್ಗ, ದುರ್ಗ, ತ್ರಿಶ್ಯೂರ್ ಚರ್ಚಗಳ ಮೇಲೆ ದಾಳಿ.

ಮೇಲಿನ ಘಟನೆಗಳು ಸಂಘಪರಿವಾರದ ಮತೀಯವಾದಿ ಫೆನಟಿಸಂನ ಮುಖವನ್ನು ಬಯಲುಗೊಳಿಸುತ್ತವೆ. ಇನ್ನು ಇವರ ಆಡಳಿತದ, ಅಭಿವೃದ್ಧಿಯ ಮುಖದ ಲಕ್ಷಣಗಳೇನಿವೆ?

ಉದಾಹರಣೆಗೆ ಸಂಸತ್ತಿನ ಅಧಿವೇಶನದಲ್ಲೂ ಭಾಗವಹಿಸದೆ, ಭಾಗವಹಿಸಿದ ಕೆಲವೇ ದಿನಗಳಲ್ಲಿಯೂ ಒಂದೆರೆಡು ವಿವರಣೆಗಳನ್ನು ಕೊಟ್ಟಿದ್ದನ್ನು ಬಿಟ್ಟಲ್ಲಿ ಸಂಸತ್ತಿನ ಪ್ರಮುಖವಾದ ಚರ್ಚೆಗಳಲ್ಲಿ ಕಿಂಚಿತ್ತೂ ಭಾಗವಹಿಸಲಿಲ್ಲ ಪ್ರಧಾನಿ ನರೇಂದ್ರ ಮೋದಿ. ಏಕೆಂದರೆ ನರೇಂದ್ರ ಮೋದಿಗೆ ದೇಶವೆಂದರೆ ಒಂದು ಕಾರ್ಪೋರೇಟ್ ಸಂಸ್ಥೆ. ಅದರ ಪ್ರಧಾನ ಮಂತ್ರಿ ಎಂದರೆ ಕಾರ್ಪೋರೇಟ್ ಸಂಸ್ಥೆಯ ಸಿಇಓ. ಸಾಮಾನ್ಯವಾಗಿ ಈ ಸಿಇಓಗಳು ನೌಕರರೊಂದಿಗೆ ದಿನನಿತ್ಯ ಬೆರೆಯುವುದಿಲ್ಲ. ಮಾತನಾಡುವುದಿಲ್ಲ. ಈ ಸಿಇಓಗಳು ಏನಿದ್ದರೂ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಾರೆ. ಹಾಗೆಯೇ ನರೇಂದ್ರ ಮೋದಿಯೂ ಸಹ. ಸಂಸತ್ತಿಗೆ ಬರುವುದಿಲ್ಲ, ಕಲಾಪಗಳಲ್ಲಿ ಭಾಗವಹಿಸುದಿಲ್ಲ. ಎಲ್ಲವನ್ನೂ ಪ್ರಧಾನ ಮಂತ್ರಿ ಕಾರ್ಯಾಲಯದ ಮೂಲಕ ಆಡಳಿತ ನಡೆಸಲಾಗುತ್ತದೆ. ಇದು ಪರೋಕ್ಷವಾಗಿ ತುರ್ತುಪರಿಸ್ಥಿತಿಯ ಅಂಶಗಳು. ಕೇಂದ್ರೀಕೃತ ವ್ಯವಸ್ಥೆಯ ಲಕ್ಷಣಗಳು.

ತಾನು ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಲ್ಲೇ ನರೇಂದ್ರ ಮೋದಿ ಸರ್ಕಾರ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸದೆ, ಸಂಸತ್ತಿನ ಪ್ರಾಮುಖ್ಯತೆಯನ್ನು ಕಡೆಗಣಿಸಿ ಸುಗ್ರೀವಾಜ್ಞೆಗಳ ಮೂಲಕ 8 ಮಸೂದೆಗಳನ್ನು ಅಂಗೀಕರಿಸಿಕೊಂಡಿದ್ದಾರೆ. ಕನಿಷ್ಠ ಎಲ್ಲಾ ಸಂಸದರ ಅನುಮೋದನೆ ಮತ್ತು ಆಕ್ಷೇಪಣೆಗಳನ್ನು ಪರಿಗಣನೆಗೆ ತಂದುಕೊಂಡು ಆ ಮೂಲಕ ಒಂದು ಒಮ್ಮತದ ನಿರ್ಣಯದ ಮೂಲಕ ಅಥವಾ ಅದಾಗದಿದ್ದ ಪಕ್ಷದಲ್ಲಿ ಬಹುಮತದ ಮೂಲಕವಾದರೂ ಮಸೂದೆಗಳನ್ನು ಅಂಗೀಕರಿಸಬೇಕಾಗಿತ್ತು. ಆದರೆ ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ, ಸಂವಿಧಾನದ ಆಶಯಗಳಲ್ಲಿ ಕೊಂಚಿತ್ತೂ ಗೌರವವಿಲ್ಲದ ಆರೆಸ್ಸಸ್ ಮತ್ತು ನರೇಂದ್ರ ಮೋದಿ ಹಿಂದಿನ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸುಗ್ರೀವಾಜ್ಞೆಗಳನ್ನು ಬಳಸಿ ಅಂದರೆ ಸರಾಸರಿ 28 ದಿನಗಳಿಗೆ 1 ಸುಗ್ರೀವಾಜ್ಞೆಯನ್ನು ಬಳಸಿ ಮಸೂದೆಯನ್ನು ಅಂಗೀಕರಿಸಿಕೊಂಡಿದ್ದಾರೆ. ಇದು ಆರೆಸ್ಸಸ್ ಮತ್ತು ನರೇಂದ್ರ ಮೋದಿಯ ಸರ್ವಾಧಿಕಾರದ ಆಡಳಿತದ ಶೈಲಿ.

ನರೇಂದ್ರ ಮೋದಿಯ ;ಮೋಹನ್ ಭಾಗವತ್; ಎನ್ನುವ ಮತೀಯವಾದದ, ಫ್ಯಾಸಿಸಂನ ಮುಖದ, ಹಿಂದೂಯಿಸಂವಾದಿಯ ವ್ಯಾಖ್ಯಾನ ಮೇಲಿನಂತಿದ್ದರೆ ನರೇಂದ್ರ ಮೋದಿಗೆ ಬಹುಮತ ಗಳಿಸಲು ಕಾರಣವಾದ, ಇಡೀ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವಲಯಗಳು ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸಲು ಕಾರಣವಾದ ಅಭಿವೃದ್ಧಿ, ಎಲ್ಲರ ವಿಕಾಸ, ಮುಕ್ತ ಮಾರುಕಟ್ಟೆ ಎನ್ನುವ ಮತ್ತೊಂದು ಮುಖದ ಕತೆ ಏನು ?

ಇದಕ್ಕೆ ಪುರಾವೆಗಳು ಈ ಕೆಳಗಿನಂತಿವೆ:

ಕತೆ 1 : ಯೋಜನಾ ಆಯೋಗ
65 ವರ್ಷಗಳಷ್ಟು ಹಳೆಯದಾದ ಹಣಕಾಸು ಇಲಾಖೆ,ರಿಸರ್ವ ಬ್ಯಾಂಕ್ ಆಫ್ ಇಂಡಿಯಾಗಳ ಸಹಯೋಗತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಇತರೇ ಇಲಾಖೆಗಳ ಅಭಿವೃದ್ಧಿ ಮಾನದಂಡಗಳನ್ನು ನಿರ್ಧರಿಸುತ್ತಿದ್ದ ಅತ್ಯಂತ ಪ್ರಮುಖ ಸಂಸ್ಥೆಯಾದ ಯೋಜನಾ ಆಯೋಗವನ್ನು ಈ ಮೋದಿ ತಾನು ಅಧಿಕಾರ ವಹಿಸಿಕೊಂಡು ಕೇವಲ ಆರು ತಿಂಗಳೊಳಗೆ ಅದರ ಸ್ವರೂಪವನ್ನು ಬದಲಾಯಿಸಿ ಹೊಸದಾಹಿ “ನೀತಿ ಆಯೋಗ” ಎಂದು ಮರು ನೇಮಕ ಮಾಡಲು ಇದ್ದ ಪ್ರಚೋದನೆಗಳೇನು? ಹಿತಾಸಕ್ತಿಗಳೇನು?

ಈ ಹೊಸ ಆಯೋಗಕ್ಕೆ ಬಲಪಂಥೀಯ ಆರ್ಥಿಕ ತಜ್ಞ ಅರವಿಂದ ಪನಗರಿಯಾ ಅದರ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 19 ಜನವರಿ, 2015ರ ಔಟ್‌ಲುಕ್‌ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಈ ಪನಗರಿಯ ತಮ್ಮ ಗುರುಗಳಾದ ಮತ್ತೊಬ್ಬ ಆರ್ಥಿಕ ತಜ್ಞ ಜಗದೀಶ್ ಭಗವತಿಯವರೊಂದಿಗೆ ಜೊತೆಗೂಡಿ 2013ರಲ್ಲಿ ಎಕನಾಮಿಸ್ಟ್ ಪತ್ರಿಕೆಯಲ್ಲಿ ಗೋಧ್ರಾ ದುರಂತದ ನಂತರ ನಡೆದ ಗುಜರಾತ್ ಹತ್ಯಕಾಂಡವನ್ನು ಕೋಮು ಗಲಭೆಗಳೆಂದು ಮತ್ತು ಗಲಭೆಗಳಲ್ಲಿ ಕಾಲು ಭಾಗದಷ್ಟು ಹಿಂದೂಗಳೂ ಸಾವನ್ನಪ್ಪಿದ್ದಾರೆ ಎಂದು ಬರೆದಿದ್ದರು. ಈ ಪನಗರಿಯ ರಾಜಸ್ಥಾನದ ಹಣಕಾಸು ಸಮಿತಿಯ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಆ ರಾಜ್ಯದ ಸಾಮಾಜಿಕ-ಆರ್ಥಿಕ ಹಕ್ಕುಗಳ ಮಟ್ಟ ಸಂಪೂರ್ಣ ಕುಸಿದು ಹೋಗಿತ್ತು, ಪಡಿತರ ವ್ಯವಸ್ಥೆ ದುರ್ಬಲಗೊಂಡಿತ್ತು, ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಕಡಿತಗೊಳಿಸಲಾಗಿತ್ತು, 17000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಯಿತು, ಹಸಿವಿನಿಂದ ಆದಿವಾಸಿಗಳ ಸಾವಿನ ಪ್ರಮಾಣ ಹೆಚ್ಚಾಗಿತ್ತು ಎಂದು ಅಭಿವೃದ್ಧಿ ಆರ್ಥಿಕ ತಜ್ಞೆ ರೀತಿಕಾ ಖೇರ ಹೇಳುತ್ತಾರೆ. ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಕಿಲ್ ಡೇ ಅವರು “ಈ ಪನಗೇರಿಯಾ ಅವರು ಉದ್ಯೋಗ ಖಾತ್ರಿ ಯೋಜನೆ ನರೇಗಾವನ್ನು ಗೇಲಿ ಮಾಡುತ್ತಿದ್ದರು, ಅದನ್ನು ನಿಲ್ಲಿಸಬೇಕೆಂದು ಶಿಫಾರಸ್ಸು ಮಾಡಿದ್ದರು” ಎಂದು ಹೇಳಿದ್ದಾರೆ.

ಬಹುತೇಕ ಆಕ್ಟಿವಿಸ್ಟ್‌ಗಳಿಗೆ, ಆರ್ಥಿಕ ತಜ್ಞರಿಗೆ ಈ ಪನಗರಿಯಾ ಅವರ ಹೊಣೆಗಾರಿಕೆ ಏನು ಎನ್ನುವುದು ಅರ್ಥವಾಗುತ್ತಿಲ್ಲ. ಒಂದು ವೇಳೆ ಯೋಜನಾ ಆಯೋಗದ ಉಪಾಧ್ಯಕ್ಷನ ಹೊಣೆಗಾರಿಕೆಗಳೇ ಆಗಿದ್ದಲ್ಲಿ ಇದು ಕೇವಲ ಹೆಸರು ಬದಲಾವಣೆ ಎನ್ನಬಹುದೇ? ಒಂದು ವೇಳೆ ಹಾಗಿದ್ದ ಪಕ್ಷದಲ್ಲಿ ಈ ನೀತಿ ಆಯೋಗದ ಕುರಿತು ಇಷ್ಟೊಂದು ಸಂಭ್ರಮಗಳೇಕೆ? ಒಂದು ವೇಳೆ ಈ ನೀತಿ ಆಯೋಗಕ್ಕೆ ಸಂವಿಧಾನಾತ್ಮಕ ಅಧಿಕಾರವನ್ನು ಕೊಡದೇ ಇದ್ದಲ್ಲಿ ಈ ಆಯೋಗವು ನಿವೃತ್ತ ಅಧಿಕಾರಿಗಳ, ಸೋತ ರಾಜಕಾರಣಿಗಳ ಗೂಡಾಗುತ್ತದೆ ಎಂದು ಆರ್ಥಿಕ ತಜ್ಞರು ಕಳವಳಪಡುತ್ತಾರೆ.

19 ಜನವರಿ, 2015ರ ಔಟ್‌ಲುಕ್ ಪತ್ರಿಕೆಯಲ್ಲಿ ಇದರ ಕುರಿತಾದ ಪ್ರಕಟವಾದ ವರದಿಯಲ್ಲಿ ನೀತಿ ಆಯೋಗದ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.
1. ಪಂಚ ವಾರ್ಷಿಕ ಯೋಜನೆಯ ಭವಿಷ್ಯವೇನು? ರಾಜ್ಯಗಳು ತಮ್ಮ ಭವಿಷ್ಯದ ಯೋಜನೆಗಳನ್ನು ಚರ್ಚಿಸಲು ಸರ್ಕಾರಿ ಸಂಸ್ಥೆಗಳೇ ಇಲ್ಲದಂತಾಗುತ್ತದೆಯೇ?
2. ಕೇಂದ್ರವು ಬಿಡುಗಡೆ ಮಾಡುವ ಸ್ಕೀಮುಗಳಿಗೆ ಹಣಕಾಸಿನ ವಿತರಣೆಯ ಸ್ವರೂಪವನ್ನು ನಿರ್ಧರಿಸುವವರಾರು?
3. ಗಣರಾಜ್ಯ ವ್ಯವಸ್ಥೆಗೆ ತದ್ವಿರುದ್ಧವಾಗಿ,ಪ್ರಜಾಪ್ರಭುತ್ವದ ಆಶಯಗಳನ್ನೇ ನಿಶ್ಯಕ್ತಿಗೊಳಿಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಹಣಕಾಸು ಇಲಾಖೆಗಳು ಅಧಿಕಾರದ ಶಕ್ತಿಕೇಂದ್ರಗಳಾಗಿ ರೂಪಗೊಳ್ಳುತ್ತವೆಯೇ?
4. ಪಡಿತರ ವ್ಯವಸ್ಥೆ ಮತ್ತು ಜನಕಲ್ಯಾಣ ಯೋಜನೆಗಳನ್ನು ವಿರೋಧಿಸುತ್ತಿದ್ದ ಈ ಪನಗೆರಿಯ ಮತ್ತಿತರ ಬಲಪಂಥೀಯ ಆರ್ಥಿಕ ತಜ್ಞರನ್ನು ಒಳಗೊಂಡ ಈ ನೀತಿ ಆಯೋಗದ ಮುಂದೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು, ಜನ ಕಲ್ಯಾಣ ಯೋಜನೆಗಳನ್ನು ಹೇಗೆ ನಿಭಾಯಿಸುತ್ತದೆ?

ಯೋಜನಾ ಆಯೋಗದ ಕುರಿತಾಗಿ ಹಲವು ಟೀಕೆಗಳಿರಬಹುದು ಆದರೆ ಪ್ರತಿ ರಾಜ್ಯಕ್ಕೂ ಅದರ ಅಭಿವೃದ್ಧಿ ಯೋಜನೆಗಳಿಗೆ ಅವಶ್ಯಕವಾದ ಸಂಪನ್ಮೂಲಗಳನ್ನು ಕುರಿತು ನಿರ್ಧರಿಸುತ್ತಿದ್ದ ಈ ಆಯೋಗ ಆ ನಿಟ್ಟಿನಲ್ಲಿ ಅತ್ಯಂತ ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದೆ.ದೇಶವನ್ನು ಕಟ್ಟುವ ನೆಹರೂ ಅವರ ಕನಸಿಗೆ ಹೆಗಲಾಗಿ ಕಾರ್ಯ ನಿರ್ವಹಿಸಿದೆ. ಆದರೆ ಹಠಾತ್ತಾಗಿ ಅದರ ಕಾರ್ಯ ಸ್ವರೂಪವನ್ನು, ಚಹರೆಯನ್ನು ಬದಲಾಯಿಸಿ ಖಾಸಗೀಕರಣದ ಪರವಾದ, ಕಾರ್ಪೋರೇಟ್ ಶೈಲಿಗೆ ಹತ್ತಿರವಾದ ನೀತಿ ಆಯೋಗವನ್ನು ರಚಿಸುವ ಕಾರಣಗಳೇನು?

ಚುನಾವಣೆಯಲ್ಲಿ ಈ ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲುವಿಗೆ ಕಾರ್ಪೋರೇಟ್ ಗುಂಪಗಳ ಪಾತ್ರ ಗುರುತರವಾಗಿದೆ. ಇಡೀ ಚುನಾವಣ ವೆಚ್ಚವನ್ನು ಭರಿಸಿದ್ದು ಕೆಲವು ಕಾರ್ಪೋರೇಟ್ ಶಕ್ತಿಗಳು. ನರೇಂದ್ರ ಮೋದಿಯೂ ಸಹ ಸಂಪೂರ್ಣ ಖಾಸಗೀಕರಣದ ಪರವಾಗಿರುವಂತಹ, ಕಾರ್ಪೋರೇಟ್ ಗುಂಪುಗಳ ವಕ್ತಾರರಾದ ರಾಜಕಾರಣಿ. ಸಾರ್ವಜನಿಕ ವ್ಯವಸ್ಥೆ, ಸರ್ಕಾರ ಆಡಳಿತ, ವಿಕೇಂದ್ರೀಕರಣ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು, ವೈವಿಧ್ಯ ಸಂಸ್ಕೃತಿ ಎನ್ನುವ ಆದರ್ಶಗಳ ಗ್ರಹಿಕೆ ಈ ನರೇಂದ್ರ ಮೋದಿಯ ವ್ಯಕ್ತಿತ್ವದಲ್ಲಿಯೂ ಇಲ್ಲ ಅವರಿಗೆ ಇದು ಬೇಕಾಗಿಯೂ ಇಲ್ಲ. ಇದನ್ನು ಇಲ್ಲಿನ ಪ್ರಜ್ಞಾವಂತರು ಮೋದಿಯ ಗುಜರಾತ್ ಆಡಳಿತದ ಶೈಲಿಯನ್ನು ಅಧ್ಯಯನ ಮಾಡಿ ವಿವರಿಸಿದ್ದರು. ಆದರೆ ಮೋದಿ ಫೋಬಿಯಾ ತಲೆಗೇರಿಸಿಕೊಂಡ ಮಂದಿಗೆ ಹಾಗಿದ್ದಲ್ಲಿ ಸಂವಿಧಾನದ ಆಶಯಗಳಾದ ವಿಕೇಂದ್ರೀಕರಣ, ರಾಷ್ಟ್ರೀಕರಣ ಮತ್ತು ಸಾರ್ವಜನಿಕ ಸಂಸ್ಥೆಗಳ ಸಬಲೀಕರಣದ ಎಲ್ಲಾ ಪ್ರಕ್ರಿಯೆಗಳು ಕ್ರಮೇಣ ಕುಂಠಿತಗೊಳ್ಳುತ್ತ ಮುಂದೊಂದು ದಿನ ಸಂಪೂರ್ಣ ಸ್ಥಗಿತಗೊಳ್ಳುತ್ತವೆ.

ಕತೆ 2 : ಆರು ತಿಂಗಳಲ್ಲಿ ಸಂಸತ್ತನ್ನು ಕಡೆಗಣಿಸಿ ಸುಗ್ರೀವಾಜ್ಞೆಗಳನ್ನು ಬಳಸಿಕೊಂಡು 8 ಮಸೂದೆಗಳನ್ನು ಅಂಗೀಕಾರ

1954ರಲ್ಲಿ ಲೋಕಸಭಾದ ಮೊದಲನೇ ಸ್ಪೀಕರ್ ಜಿ.ವಿ.ಮಾವಲಂಕರ್ ಪ್ರಧಾನಿಯ ಆಗಿದ್ದ ನೆಹರೂ ಅವರಿಗೆ ವಿಶೇಷ ಸಂದರ್ಭಗಳಲ್ಲಿ ಮತ್ತು ಜಟಿಲ ಪರಿಸ್ಥಿತಿ ಉದ್ಭವವಾಗದಂತಹ ವಿರಳ ಸಂದರ್ಭಗಳಿಗೆ, ತುರ್ತುಪರಿಸ್ಥಿಗಳಲ್ಲಿ ಮಾತ್ರ ಸುಗ್ರೀವಾಜ್ಞೆಗಳನ್ನು ಬಳಸಿಕೊಂಡು ಕಾಯಿದೆಯ ಅನುಷ್ಠಾನವನ್ನು ಸೀಮಿತಗೊಳಿಸಬೇಕು. ಸಾಮಾನ್ಯ ಸಂದರ್ಭಗಳಲ್ಲಿಯೂ ವಿವೇಚನೆ ಇಲ್ಲದೆ ವಿಶೇಷ ಶಾಸನಗಳನ್ನು ಬಳಸತೊಡಗಿದರೆ ಲೋಕಸಭೆಯು ರಬ್ಬರ್ ಸ್ಟಾಂಪ್‌ನಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ ನೆಹರೂ ಅವರನ್ನು ಒಳಗೊಂಡಂತೆ ನಂತರದ ಪ್ರಧಾನ ಮಂತ್ರಿಗಳು ಮಾವಲಂಕರ್ ಅವರ ಕಿವಿಮಾತನ್ನು ನಿರ್ಲಕ್ಷಿಸಿ ಈ ಸುಗ್ರೀವಾಜ್ಞೆಗಳನ್ನು ಸಂಸತ್ತನ್ನು ಒಳಗೊಳ್ಳದಯೇ ಶಾಸನಗಳನ್ನು ಜಾರಿಗೊಳಿಸುವ ಒಂದು ಸಮಾನಾಂತರ ಪ್ರಕ್ರಿಯೆಯನ್ನಾಗಿಯೇ ಬಳಸಿಕೊಂಡರು

ಸಂಸತ್ತಿನ ಅನುಮೋದನೆ ಪಡೆದುಕೊಳ್ಳದೆ ಸುಗ್ರೀವಾಜ್ಞೆಗಳನ್ನು ಬಳಸಿ ಅನುಮೋದನೆ ಪಡೆದುಕೊಂಡ ಪ್ರಮುಖ ಮಸೂದೆಗಳು :

ಇನ್ಸೂರೆನ್ಸ್ ಕಾಯಿದೆಗಳ (ತಿದ್ದುಪಡಿ) ಶಾಸನ 2014, ಕಲ್ಲಿದ್ದಲು ಗಣಿಗಳ (ವಿಶೇಷ ಹಂಚಿಕೆಗಳು) ಎರಡನೇ ಶಾಸನ 2014, ಭೂ ಸ್ವಾಧೀನ ಕಾಯಿದೆ ಮತ್ತು ಪುನರ್ವಸತಿ ಹಾಗೂ ಪುನಹ ಒಪ್ಪಂದ ಆಕ್ಟ್ 2013, ಮೋಟಾರು ವಾಹನ ಶಾಸನ 2015, ಹಿರಿಯ ನಾಗರಿಕರ ಶಾಸನ 2015.

ಚಳಿಗಾಲದ ಅಧಿವೇಶನ ಒಂದು ತಿಂಗಳ ಕಾಲ ನಡೆದರೂ ಸರ್ಕಾರವು ಪ್ರಮುಖ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸದೆ ಇದ್ದದ್ದು ಯಾತಕ್ಕೆ? ಈ ಚಳಿಗಾಲದ ಅಧಿವೇಶನದಲ್ಲಿ 12 ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಸಾಧ್ಯವಾಗಬಹುದಾದರೆ ಭೂಸ್ವಾಧೀನ, ಕಲ್ಲಿದ್ದಲು ಗಣಿಗಳು, ಇನ್ಸೂರೆನ್ಸ್ ಕಾಯಿದೆಗಳನ್ನು ಸಹ ಪ್ರಮುಖ ಮಸೂದೆಗಳೆಂದು ಸರ್ಕಾರವು ಪರಿಗಣಿಸಲಿಲ್ಲವೇಕೆ? ಮಾವಲಂಕರ್ ಹೇಳಿದ ಹಾಗೆ ನರೇಂದ್ರ ಮೋದಿ ಸರ್ಕಾರ ಸಂಸತ್ತನ್ನು ಒಂದು ರಬ್ಬರ್ ಸ್ಟಾಂಪ್ ಆಗಿ ಬಳಸಿಕೊಳ್ಳುತ್ತಿದೆ.

ಕತೆ 3 : ಭೂ ಸ್ವಾಧೀನ ಕಾಯಿದೆ ಮತ್ತು ಪುನರ್ವಸತಿ ಹಾಗೂ ಪುನಹ ಒಪ್ಪಂದ ಆಕ್ಟ್ 2013, ಸಂಪೂರ್ಣ ಖಾಸಗೀಕರಣ, ಕಾರ್ಪೋರೇಟ್ ಶಕ್ತಿಗಳ ಮೇಲುಗೈ, ಸಂವಿಧಾನಕ್ಕೆ ಅಪಚಾರ

ತಿದ್ದುಪಡಿಗೆ ಮೊದಲು :
ಕೇವಲ ಸೆಕ್ಷನ್ 101 ಅನ್ನು ತಿದ್ದುಪಡಿ ಮಾಡಿ ಭೂಸ್ವಾಧೀನ ಪಡಿಸಿಕೊಂಡ ಜಮೀನನ್ನು 5 ವರ್ಷಗಳೊಳಗೆ ಉದ್ದೇಶಿತ ಕಾರ್ಯಕ್ಕಾಗಿ ಬಳಸದೇ ಇದ್ದರೆ ಆ ಜಮೀನನ್ನು ಮರಳಿ ಅದರ ಮಾಲೀಕರಿಗೆ ಹಿಂದುರಿಗಿಸಬೇಕು.
ತಿದ್ದುಪಡಿಯ ನಂತರ :
ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಲು ನಿಗದಿಪಡಿಸಿದ ಕಾಲಾವಧಿ ಅಥವಾ 5 ವರ್ಷಗಳ ಅವಧಿ ಇವೆರಡರಲ್ಲಿ ಯಾವುದು ದೀರ್ಘವಾಗಿರುವುದೋ ಅದನ್ನು ಪರಿಗಣಿಸಲಾಗುವುದು. ಅಂದರೆ ಪ್ರಾಜೆಕ್ಟ್ ಅನ್ನು ಪಡೆದುಕೊಂಡ ಸಂಸ್ಥೆಯು ತನ್ನ ಉದ್ದೇಶಿತ ಯೋಜನೆಯನ್ನು 5 ವರ್ಷಗಳ ನಂತರವೂ ಪ್ರಾರಂಬಿಸದೇ ಇದ್ದರೂ ತಾನು ಕರಾರು ಪತ್ರದಲ್ಲಿ ಹೇಳಿದ ಕಾಲಾವಧಿಯವರೆಗೂ ಆ ಜಮೀನನ್ನು ತನ್ನ ಬಳಿ ಇಟ್ಟುಕೊಳ್ಳಬಹುದು

ತಿದ್ದುಪಡಿಗೆ ಮೊದಲು :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾಯಿದೆಯ ನೀತಿಯನ್ನು ಉಲ್ಲಂಘಿಸಿದಲ್ಲಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ಸಂಸ್ಥೆಯ ಮುಖ್ಯಸ್ಥರು ಹೊಣೆಗಾರರಾಗಿರುತ್ತಾರೆ.
ತಿದ್ದುಪಡಿಯ ನಂತರ :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ಸರ್ಕಾರದ ಅನುಮತಿಯನ್ನು ಪಡೆದ ನಂತರವಷ್ಟೇ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಅಧಿನಿಯಮ 197 ಅಡಿಯಲ್ಲಿ ಅವರಿಗೆ ರಿಯಾಯಿತಿ ನೀಡಲಾಗಿದೆ. ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರು ಸಹ ಈ ಹೊಣೆಗಾರಿಕೆಗೆ ಒಳಪಡುವುದಿಲ್ಲ. ಅವರೂ ಸಹ ತನಿಖೆಗೆ ಒಳಪಡುವುದಿಲ್ಲ

ತಿದ್ದುಪಡಿಗೆ ಮೊದಲು :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ನ್ಯಾಯಾಂಗವು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರವಿದೆ.
ತಿದ್ದುಪಡಿಯ ನಂತರ :
ಈ ಕೆಳಗೆ ಸೂಚಿಸಿದ ಪ್ರಾಜೆಕ್ಟ್‌ಗಳನ್ನು ಪ್ರಾರಂಭಿಸಲು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅದರ ಮಾಲೀಕರ, ರೈತರ ಅನುಮತಿ ಪಡೆಯುವ ಅಗತ್ಯವಿಲ್ಲ. ಸಾಮಾಜಿಕ ಹಕ್ಕುಗಳು, ಸಾಮಾಜಿಕ ನ್ಯಾಯಗಳನ್ನು ಪರಿಗಣಿಸುವ ಅಗತ್ಯವಿಲ್ಲ. ಈ ಪ್ರಾಜೆಕ್ಟ್‌ಗಳನ್ನು ಸರ್ಕಾರ, ಖಾಸಗಿ ಸಂಸ್ಥೆಗಳು, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಜಾರಿಗೊಳಿಸಲು ಅನುಮತಿ ಕೊಡಲಾಗಿದೆ.

  • ಸಾರಿಗೆ
  • ರಸ್ತೆ ಮತ್ತು ಸೇತುವೆಗಳು
  • ಬಂದರುಗಳು
  • ಒಳನಾಡು waterways
  • ವಿಮಾನ ನಿಲ್ದಾಣಗಳು
  • ರೇಲ್ವೇ ಇಲಾಖೆಯ ಯೋಜನೆಗಳು
  • ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ
  • ಇಂಧನ
  • ವಿದ್ಯುತ್ ಉತ್ಪಾದನೆ, ಪ್ರಸರಣೆ, ವಿತರಣೆ
  • Oll Pipelines
    • ತೈಲ /ಅನಿಲ/ LPG ಸಂಗ್ರಹಣ ಸೌಲಭ್ಯಗಳು
    • ಅನಿಲ ಪೈಪ್ ಲೈನ್
  • ಜಲ ಮತ್ತು ಒಳಚರಂಡಿ
  • ಘನ ತ್ಯಾಜ್ಯ ನಿರ್ವಹಣೆ
    • ಜಲ ಸರಬರಾಜು pipelines
    • Water treatment plants
    • Sewage collection, treatment system
    • Irrigation (dams, channels, embankments)
    • Storm water drainage system
    • Water harvesting and conservation
  • ದೂರ ಸಂಪರ್ಕ ಇಲಾಖೆಯ ನೆಟ್‌ವರ್ಕ ಮತ್ತು ಟವರ್
  • ಸಾಮಾಜಿಕ ಮತ್ತು ವಾಣಿಜ್ಯ ಮೂಲಭೂತ ಸೌಕರ್ಯ
  • ಶಿಕ್ಷಣ ಸಂಸ್ಥೆಗಳು
  • ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ರೋಗ ಪರೀಕ್ಷಣ ಕೇಂದ್ರಗಳು, ಕೈಗಾರಿಕ ಪಾರ್ಕ, ಎಸ್‌ಇಜಢ್, ಪ್ರವಾಸೋದ್ಯಮ, ವ್ಯವಸಾಯ ಮಾರುಕಟ್ಟೆ
  • ರಸಗೊಬ್ಬರಗಳು
  • ಟರ್ಮಿನಲ್ ಮಾರುಕಟ್ಟೆಗಳು
  • ಮಣ್ಣು ಪರೀಕ್ಷಣ ಪ್ರಯೋಗಾಲಯಗಳು
  • ಶೈತ್ಯಾಗಾರಗಳು
  • ವ್ಯವಸಾಯ, ಡೈರಿ, ಮತ್ಸೋದ್ಯಮ, ಮಾಂಸದ ಪ್ರೊಸಸ್ ಗೆ ಮಾರುಕಟ್ಟೆ ಇನಫ್ರಾಸ್ಟ್ರಕ್ಚರ್
  • ಗಣಿಗಾರಿಕೆ ಚಟುವಟಿಕೆಗಳು, ಕೈಗಾರಿಕಾ ಕಾರಿಡಾರ್‌ಗಳು, ಕ್ರೀಡೆ, ಆರೋಗ್ಯ ವಲಯ, ಪ್ರವಾಸೋದ್ಯಮ, ಸಾರಿಗೆ, ಸ್ಪೇಸ್ ಯೋಜನೆಗಳು
  • ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಯೋಜನೆಗಳು

ನಮ್ಮಲ್ಲಿನ ಭ್ರಷ್ಟ ವ್ಯವಸ್ಥೆ, ಭ್ರಷ್ಟ ರಾಜಕೀಯ, ರಾಜಕಾರಣಿ-ಅಧಿಕಾರಿ-ಉದ್ಯಮಿ ಎನ್ನುವ ಒಂದು ನೆಕ್ಸಸ್ ಇವೆಲ್ಲವೂ ಮೇಲ್ಕಾಣಿಸಿದ ಎಲ್ಲಾ ವಲಯಗಳಲ್ಲಿ, ವರ್ಗಗಳಲ್ಲಿ ಅರ್ಹತೆ ಪಡೆದುಕೊಳ್ಳುತ್ತಾರೆ. ಪ್ರತಿಯೊಂದನ್ನೂ ಸುರಕ್ಷತೆಗೆ ಸಂಬಂಧಪಟ್ಟಿದ್ದು, ದೇಶದ ಹಿತಾಸಕ್ತಿಗೆ ಸಂಬಂಧಪಟ್ಟಿದ್ದು ಎನ್ನುವ ಹಣೆಪಟ್ಟಿಯ ಅಡಿಯಲ್ಲಿ ಅರ್ಹತೆ ಪಡೆದುಕೊಳ್ಳುತ್ತಾರೆ. ಅಡಾನಿಗಳು, ಅಂಬಾನಿಗಳು, ವೇದಾಂತಗಳು, ಮುಂತಾದ ಬಂಡವಾಳಶಾಹಿಗಳ ಒಕ್ಕೂಟ ಇಡೀ ದೇಶದ ಬಹುಪಾಲು ಯೋಜನೆಗಳನ್ನು ಪಡೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಮುಂದಿನ ವರ್ಷಗಳಲ್ಲಿ ಕ್ರಮೇಣವಾಗಿ ಇಂಡಿಯಾ ದೇಶ ಬಂಡವಾಳಶಾಹಿಗಳ ದೇಶವಾಗುತ್ತದೆ. ಇದರಲ್ಲಿ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಈ ಕರಾಳ ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಾಗಿದೆ.

ತೆ 4 : ಇನ್ಸೂರೆನ್ಸ್ ಕಾಯಿದೆಗಳ (ತಿದ್ದುಪಡಿ) ಶಾಸನ 2014, ಕಲ್ಲಿದ್ದಲು ಗಣಿಗಳ (ವಿಶೇಷ ಹಂಚಿಕೆಗಳು) ಎರಡನೇ ಶಾಸನ 2014
ಇನ್ಸೂರೆನ್ಸ್ ಕಂಪನಿಗಳಲ್ಲಿ ( ಸರ್ಕಾರಿ ಮತ್ತು ಖಾಸಗಿ) ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇಕಡಾ 26 % ರಿಂದ ಶೇಕಡಾ 49 % ಏರಿಸಲಾಗಿದೆ.

ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಚಿಲ್ಲರೆ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ತೀವ್ರವಾಗಿ ಪ್ರತಿಭಟಿಸಿದ್ದ ಬಿಜೆಪಿ ಪಕ್ಷ ಆಗ ಸಂಸತ್ತಿನಲ್ಲಿ ಪದೇ ಪದೇ ಗದ್ದಲವನ್ನೆಬ್ಬಿಸುತ್ತಾ ಕಾರ್ಯ ಕಲಾಪಗಳಿಗೆ ಭಂಗವನ್ನು ಉಂಟು ಮಾಡಿತ್ತು. ಆರೆಸ್ಸಸ್ ಸದಾ ಸ್ವದೇಶಿ ಮಂತ್ರವನ್ನು ಜಪಿಸುತ್ತಾ ವಿದೇಶಿ ಬಂಡವಾಳ ಹೂಡಿಕೆಯನ್ನು ದೇಶವನ್ನು ಹಾಳು ಮಾಡುತ್ತದೆ ಹಿಂದೂ ರಾಷ್ಟ್ರದ ಪಾವಿತ್ರತೆ ನಾಶವಾಗುತ್ತದೆ ಎಂದು ಪ್ರಚೋದಿಸುತ್ತಾ ವಿದೇಶಿ ಬಂಡವಾಳ ಹೂಡಿಕೆಯನ್ನು ವೀರೋಧಿಸಿತ್ತು. ಇಂದು ಇದೇ ಸಂಘ ಪರಿವಾರ ಇನ್ಸೂರೆನ್ಸ್ ವಲಯದಲ್ಲಿ ಶೇಕಡ 49% ರಷ್ಟು ವಿದೇಶ ಬಂಡವಾಶ ಹೂಡಿಕೆಗೆ ಅನುಮೋದನೆ ನೀಡಿದೆ.

ಕತೆ 5 : ಕಾರ್ಮಿಕ ಕಾನೂನು ಮತ್ತು ರಿಲೇಷನ ಸುಧಾರಣೆಗಳು ಮತ್ತು ತಿದ್ದುಪಡಿಗಳು : ಕೇಂದ್ರದ ಕ್ಯಾಬಿನೆಟ್ ಅನುಮೋದಿಸಿದ ಶಿಫಾರಸುಗಳು

ಕೈಗಾರಿಕಾ ವ್ಯಾಜ್ಯ ಅಕ್ಟ್ 1947 :

ವರ್ತಮಾನದ ಕಾಯಿದೆ :
ಗರಿಷ್ಠ 100 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಯಾವುದೇ ಮುನ್ಸೂಚನೆ ಇಲ್ಲದೆಯೇ ತನ್ನ ಉತ್ಪಾದನೆಯನ್ನು ಅಥವಾ ಸಂಪೂರ್ಣ ಕಾರ್ಖಾನೆ/ಉದ್ಯಮವನ್ನು ಮುಚ್ಚಬಹುದು

ಸುಧಾರಣೆ / ಬದಲಾವಣೆಯ ಶಿಫಾರಸು:
ಗರಿಷ್ಠ 3000 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಯಾವುದೇ ಮುನ್ಸೂಚನೆ ಇಲ್ಲದೆಯೇ ತನ್ನ ಉತ್ಪಾದನೆಯನ್ನು ಅಥವಾ ಸಂಪೂರ್ಣ ಕಾರ್ಖಾನೆ/ಉದ್ಯಮವನ್ನು ಮುಚ್ಚಬಹುದು

ಕಾರ್ಖಾನೆ ಅಕ್ಟ್ 1948 :
ವರ್ತಮಾನದ ಕಾಯಿದೆ :
ವಿದ್ಯುತ್ ಬಳಕೆ ಇಲ್ಲದ ಗರಿಷ್ಠ 20 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಮತ್ತು ವಿದ್ಯುತ್ ಬಳಸುತ್ತಿರುವ ಗರಿಷ್ಠ 10 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಮಾತ್ರ ಫಾಕ್ಟರೀಸ್ ಆಕ್ಟ್ 1948 ಅನ್ವಯವಾಗುತ್ತದೆ

ಸುಧಾರಣೆ / ಬದಲಾವಣೆಯ ಶಿಫಾರಸು:
ವಿದ್ಯುತ್ ಬಳಕೆ ಇಲ್ಲದ ಗರಿಷ್ಠ 40 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳು ಮತ್ತು ವಿದ್ಯುತ್ ಬಳಸುತ್ತಿರುವ ಗರಿಷ್ಠ 20 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಮಾತ್ರ ಫಾಕ್ಟರೀಸ್ ಆಕ್ಟ್ 1948 ಅನ್ವಯವಾಗುತ್ತದೆ

(ಇದರ ಅನುಸಾರ 40/20 ಕ್ಕಿಂತ ಕಡಿಮೆ ನೌಕರರನ್ನು ಹೊಂದಿದ್ದ ಕಾರ್ಖಾನೆ/ಉದ್ಯಮಗಳಿಗೆ ಕಾರ್ಖಾನೆ ಅಕ್ಟ್ 1948 ಅನ್ವಯವಾಗುವುದಿಲ್ಲ. ಹೀಗಾಗಿ ಮಾಲೀಕರು ಯಾವುದೇ ಮೂಲ ಭೂತ ಸೌಕರ್ಯ, ಕನಿಷ್ಠ ಸೌಲಭ್ಯಗಳು, ವೇತನಗಳು, ಸೌಹಾರ್ದಯುತ ವಾತಾವರಣಗಳನ್ನು ಕಲ್ಪಿಸಬೇಕಾಗಿಲ್ಲ. ನೌಕರರನ್ನು ಜೀತದಾಳುಗಳಂತೆ ಬಳಸಿಕೊಳ್ಳಬಹುದು )

ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 :
ವರ್ತಮಾನದ ಕಾಯಿದೆ :
20 ಕ್ಕಿಂತಲೂ ಮೇಲ್ಪಟ್ಟ ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 ಅನ್ವಯವಾಗುತ್ತದೆ

ಸುಧಾರಣೆ / ಬದಲಾವಣೆಯ ಶಿಫಾರಸು:
50 ಕ್ಕಿಂತಲೂ ಮೇಲ್ಪಟ್ಟ ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 ಅನ್ವಯವಾಗುತ್ತದೆ.

(ಈ ಕಾಯಿದೆಯ ಅನ್ವಯ 50ಕ್ಕಿಂತಲೂ ಕಡಿಮೆ ನೌಕರರನ್ನು ಹೊಂದಿದ ಕಾರ್ಖಾನೆ/ಉದ್ಯಮಗಳ ಮಾಲೀಕರು ಕಾಂಟ್ರಾಕ್ಟ್ ಕಾರ್ಮಿಕರಿಗೆ ವೇತನವನ್ನು ತಮ್ಮ ಹಿತಾಸಕ್ತಿಗೆ ಅನುಸಾರ ನಿರ್ಧರಿಸಬಹುದು. ಕನಿಷ್ಠ ವೇತನದ ನೀತಿ ಅನ್ವವಾಗುವುದಿಲ್ಲ. ಕೆಲಸದ ಅವಧಿಯನ್ನು ಮಾಲೀಕನೇ ನಿರ್ಧರಿಸುತ್ತಾನೆ. ಹೆಚ್ಚುವರಿಯಾದ ಮಾಡಿದ ಕೆಲಸಕ್ಕೆ ವೇತನವನ್ನು ನಿರ್ಧರಿಸುವುದು ಮಾಲೀಕನೇ. ವೈದ್ಯಕೀಯ ಸೌಲಭ್ಯಗಳು, ಸುರಕ್ಷಿತ ಸೌಲಭ್ಯಗಳನ್ನು ನಿರಾಕರಿಸಲು ಮಾಲೀಕನಿಗೆ ಸ್ವಾತಂತ್ರವಿದೆ. ಒಟ್ಟಿನಲ್ಲಿ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲು ಮಾಲೀಕರಿಗೆ ಸ್ವಾತಂತ್ರ ದೊರೆತಂತಾಗುತ್ತದೆ.)

ಟ್ರೇಡ್ ಯೂನಿಯನ್ ಆಕ್ಟ್ 1926:
ವರ್ತಮಾನದ ಕಾಯಿದೆ :
ಕಾರ್ಖಾನೆಯೊಂದರ ಎಲ್ಲಾ ನೌಕರರ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 15% ನೌಕರರು ಸದಸ್ಯರಾಗಿದ್ದರೆ ಮಾತ್ರ ಅಲ್ಲಿ ಯೂನಿಯನ್ ಪ್ರಾರಂಬಿಸಲು ಅನುಮತಿ ದೊರಕುತ್ತದೆ.

ಸುಧಾರಣೆ / ಬದಲಾವಣೆಯ ಶಿಫಾರಸು:
ಕಾರ್ಖಾನೆಯೊಂದರ ಎಲ್ಲಾ ನೌಕರರ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30% ನೌಕರರು ಸದಸ್ಯರಾಗಿದ್ದರೆ ಮಾತ್ರ ಅಲ್ಲಿ ಯೂನಿಯನ್ ಪ್ರಾರಂಭಿಸಲು ಅನುಮತಿ ದೊರಕುತ್ತದೆ.

ಕಾರ್ಮಿಕರ ಬದುಕಿನ ಸುಧಾರಣೆಯೆಂದರೆ ನರೇಂದ್ರ ಮೋದಿ ಚಿಂತನೆಯ ಅನುಸಾರ ಅವರ ಬದುಕನ್ನು modi_ambani_tata_kamathಮತ್ತಷ್ಟು ದಯನೀಯವಾಗಿಸುವುದು. ಈಗ ದೊರಕುತ್ತಿರುವ ಅಲ್ಪಸ್ವಲ್ಪ ಸೌಲಭ್ಯಗಳನ್ನು ಕಡಿತಗೊಳಿಸಿ ಮರಳಿ ಪಾಳೇಗಾರಿಕೆ ಸಂಸ್ಕೃತಿಯನ್ನು ಜಾರಿಗೊಳಿಸುವುದು. ಕಾರ್ಮಿಕರನ್ನು ಜೀತಗಾರರನ್ನಾಗಿಸುವುದು. ಇದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಮೇಲಿನ ಹೊಸ ಆಕ್ಟ್‌ಗಳೇ ಮಾತನಾಡುತ್ತವೆ. ಕಾರ್ಮಿಕ ಸುಧಾರಣೆ ಶಿಫಾರಸ್ಸುಗಳನ್ನು ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ರಾಜಸ್ತಾನದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಏಕೆಂದರೆ ಅಲ್ಲಿ ಬಿಜೆಪಿ ಆಡಳಿತವಿದೆ. ಏಕೆಂದರೆ ಅಲ್ಲಿ ಫ್ಯೂಡಲ್ ಸಮಾಜದ ಪ್ರಭಾವ ದಟ್ಟವಾಗಿದೆ. ಏಕೆಂದರೆ ಅಲ್ಲಿ ಪ್ರಬಲ ಜಾತಿಗಳ ಕೈಗೆ ಅಧಿಕಾರವನ್ನು ಹಸ್ತಾಂತರಿಸಲು ಈ ಆಕ್ಟ್‌ಗಳನ್ನು ಬಳಸಿಕೊಳ್ಳಬಹುದು.

ಹಾಗಿದ್ದಲ್ಲಿ ಸಾಮಾಜಿಕ ನ್ಯಾಯ, ವಿಕೇಂದ್ರೀಕರಣ, ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಎಲ್ಲವನ್ನೂ ಸಂಪೂರ್ಣವಾಗಿ, ನಿಶ್ಯಕ್ತಗೊಳಿಸಲಾಗುತ್ತಿದೆ. ಸಂಘ ಪರಿವಾರಕ್ಕೆ ಬೇಕಾಗಿರುವುದೂ ಇದೇ ಮಾದರಿಯ ಯಜಮಾನ್ಯ- ಬ್ರಾಹ್ಮಣ್ಯ ವ್ಯವಸ್ಥೆಯ, ತಾರತಮ್ಯ, ಪ್ರತ್ಯೇಕತೆಯ ಹಿಂದುತ್ವದ ಇಂಡಿಯಾ. ನರೇಂದ್ರ ಮೋದಿಯ ಉದ್ದೇಶವು ಇದೇ ಮಾದರಿಯ ಇಂಡಿಯಾ.

ಹಾಗಿದ್ದಲ್ಲಿ ಸಂಪೂರ್ಣ ಅಭಿವೃದ್ಧಿ ಮತ್ತು ಎಲ್ಲರ ವಿಕಾಸ ಎನ್ನುವ ತತ್ವದ ಹಿಂದಿನ ಕುತಂತ್ರವೇನು? ಅದರ ಮುಂದಿನ ಹಣೆಬರಹವೇನು? ಏಕೆಂದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಾ ಹೋಗುವುದಂತೂ ಖಾತರಿಯಾಗಿದೆ. ಅಭಿವೃದ್ಧಿಯ ಮಾದರಿಯೆಂದೇ ಬಿಂಬಿಸಲ್ಪಟ್ಟ ನರೇಂದ್ರ ಮೋದಿಯ ನೇತೃತ್ವದಲ್ಲಿ ದೇಶದ ಭವಿಷ್ಯ ನಿಜಕ್ಕೂ ಸುರಕ್ಷಿತವೇ? ಆವರನ್ನು ಬಹುಮತದಿಂದ ಗೆಲ್ಲಿಸಿದ ಅವರ ಅಭಿಮಾನಿಗಳೇ ಉತ್ತರಿಸಬೇಕು.

(ಮುಂದುವರೆಯುತ್ತದೆ…)