Daily Archives: February 5, 2015

ಯಾರು ಕಳೆ..ಯಾವುದು ಬೆಳೆ..?

– ಭಾರತೀ ದೇವಿ.ಪಿ

ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ?

ಆಗ್ರಾದಲ್ಲಿ ಹಿಂದೂ ಸಂಘಟನೆ ‘ಘರ್ ವಾಪಸಿ’ ಎನ್ನುವ ಹೆಸರಿನಲ್ಲಿ ಬಡಜನರ ಅಸಹಾಯಕತೆಯನ್ನು ತಮ್ಮ ಧರ್ಮದ ಬೇಳೆ Agra Conversionಬೇಯಿಸಿಕೊಳ್ಳಲು ಬಳಸಿದ್ದು ದೊಡ್ಡ ಸುದ್ದಿಯಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ, ರೇಷನ್ ಕಾರ್ಡ್ ಗಾಗಿ ಅಥವಾ ಜೀವನೋಪಾಯಕ್ಕಾಗಿ ಮತವನ್ನೇ ಬದಲಾಯಿಸಲು ಒಂದುವೇಳೆ ಜನ ಸಿದ್ಧರಿರುವುದೇ ಆದಲ್ಲಿ, ಆ ಜನ ಅದರ ಮೂಲಕ ಮೌನವಾಗಿ ಸಾರುತ್ತಿರುವ ಸತ್ಯಕ್ಕೆ ನಮ್ಮ ಒಳಗಿವಿಗಳನ್ನು ತೆರೆದುಕೊಳ್ಳಬೇಕಾಗಿದೆ. ಇಲ್ಲಿ ಇವರು ಸಾರುತ್ತಿರುವ ಮಹತ್ವದ ವಿಚಾರ “ಮತಕ್ಕಿಂತ ಬದುಕು ಮುಖ್ಯ”. ಆದರೆ ಹೊಟ್ಟೆಬಟ್ಟೆಯ ಅಗತ್ಯಗಳನ್ನು ಮೀರಿ ದುರ್ವರ್ತನೆಗಳಿಗೆ ಇಳಿದ ಜನಕ್ಕೆ ತಮ್ಮ ಸೋದರರ ಬದುಕಿನ ಅಸಹಾಯಕತೆ ರಾಜಕೀಯವಾಗಿ, ಧಾರ್ಮಿಕವಾಗಿ ದಾಳದಂತೆ ಕಂಡದ್ದು ಮನುಕುಲದ ವಿಕೃತತೆಗೆ ಸಾಕ್ಷಿ.

ಇಂಥದ್ದೇ ಇನ್ನೊಂದು ಸಂಗತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. (ವಿ.ಕ. 01-02-2015) ಭಾರತೀಯ ಕ್ರೈಸ್ತರ ಒಕ್ಕೂಟ ವೇದಿಕೆಯ ಅಧ್ಯಕ್ಷ ಟಿ.ಜೆ.ಅಬ್ರಹಾಂ ಅವರು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಘರ್ ವಾಪಸಿಯನ್ನು ಸ್ವಾಗತಿಸುತ್ತಾ ಇದರಿಂದ ಕ್ರೈಸ್ತ ಧರ್ಮದ ಕಳೆ ನಿರ್ಮೂಲನೆ ಆಗಲಿ ಎಂದಿದ್ದಾರೆ. ಇವರು ‘ಕಳೆ’ ಎಂದಿರುವುದು ಬಡತನ,ಅಸ್ಪೃಶ್ಯತೆ ಒಡ್ಡಿದ ಅಸಹಾಯಕತೆಯಿಂದ ಕ್ರೈಸ್ತ ಧರ್ಮಕ್ಕೆ ಬಂದ ಜನರನ್ನು. vijaykarnataka-feb0115“ಯಾರು ಪಡಿತರ ಚೀಟಿ, ಆಧಾರ್ ಕಾರ್ಡ್, ಬೇಳೆ, ಹಾಲಿನ ಪುಡಿಗಾಗಿ ಧರ್ಮಗಳನ್ನು ಬದಲಿಸುತ್ತಾರೋ ಅಂಥವರ ಅಗತ್ಯತೆ ಕ್ರೈಸ್ತ ಧರ್ಮಕ್ಕೆ ಇಲ್ಲ. ಅವರು ಬೆಳೆಯಲ್ಲ, ಕಳೆ ಇದ್ದಂತೆ. ಅಂತಹ ಕಳೆಗಳನ್ನು ಕೀಳಬೇಕು ಎನ್ನುವಾಗಲೇ ಘರ್ ವಾಪಸಿ ಹೆಸರಿನಲ್ಲಿ ಕ್ರೈಸ್ತ ಧರ್ಮವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ” ಎಂದು ಪತ್ರಿಕಾಗೋಷ್ಟಿಯಲ್ಲಿ ನುಡಿದ ಇವರ ಮಾತುಗಳು ದಿಗಿಲು ಹುಟ್ಟಿಸುತ್ತವೆ. ದಯಾಮೂಲವಾಗಿ ಪಸರಿಸಿದ ಕ್ರೈಸ್ತಧರ್ಮದ ಧಾರ್ಮಿಕ ನಾಯಕ ಆಡಿರುವ ಈ ಮಾತುಗಳು ಧರ್ಮದ ಮೂಲ ಉದ್ದೇಶ ಉಳ್ಳವರನ್ನು ಪೋಷಿಸುವುದೇ ಆಗಿದೆ ಎಂಬುದನ್ನು ಶ್ರುತಪಡಿಸುವಂತಿವೆ.

ಧರ್ಮ ಮತ್ತು ಪ್ರಭುತ್ವ ಈ ಎರಡಕ್ಕೂ ಬಡವರು ‘ಕಳೆ’ಗಳಂತೆ ಕಾಣುತ್ತಿದ್ದಾರೆ ಎಂಬುದು ಕಳೆದ ಕೆಲವು ತಿಂಗಳುಗಳಿಂದ ತುಂಬಾ ಸ್ಪಷ್ಟವಾಗುತ್ತಿದೆ. ಇವರನ್ನು ಆಳಕ್ಕೆ ತಳ್ಳುವ ಈ ಧರ್ಮದ ಕೂಪಗಳು ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನ ಮುಖಗಳಲ್ಲಿ ಕಾಣುತ್ತಿದ್ದರೂ ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ? ಎಂಬ ಪ್ರಶ್ನೆ ಎಲ್ಲರೂ ಮತ್ತೆ ಮತ್ತೆ ತಮ್ಮ ಸಾಮಾನ್ಯ ಜ್ಞಾನವನ್ನು ಅರಳಿಸಿಕೊಂಡು ಕೇಳಿಕೊಳ್ಳಬೇಕಾಗಿದೆ. ಕುವೆಂಪು ಹೇಳಿದSakshi Maharaj ‘ನೂರು ಮತದ ಹೊಟ್ಟತೂರಿ’ ಮನುಷ್ಯನಾಗಿ ಬದುಕುವ ಸಹಜತೆಗೆ ಮರಳಬೇಕಿದೆ. ಆಗ ಆಗ್ರಾದ ಬಡಜನ ತಮ್ಮ ಒಡಲ ಉರಿಯೊಳಗೆ ಹೊಳೆಯಿಸಿ ತೋರುತ್ತಿರುವ ದೊಡ್ಡ ಸತ್ಯ ಖಂಡಿತಾ ಎಲ್ಲರ ಅರಿವಿಗೆ ಬರುತ್ತದೆ.

ಶ್ರಮಕ್ಕೆ ತಕ್ಕ ದುಡಿಮೆ: ದಿಲ್ಲಿ ರಿಕ್ಷಾವಾಲಗಳಿಗೆ ಸಿಗಲಿ ಮನ್ನಣೆ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

‘ಹಿಂದಿನ ಸರಕಾರ ಮೆಟ್ರೊ ತಂದಿದೆ. ಹೀಗಾಗಿ ನನ್ನ ನಗರ ಅಭಿವೃದ್ಧಿಯಾಗಿದೆ. ಇದಕ್ಕಿಂತ ಹೆಚ್ಚಿನ ಅಭಿವೃದ್ಧಿಯನ್ನು ನೋಡಲು ನಾನು ಕಾಂಗ್ರೆಸ್‍ಗೆ ಮತ ನೀಡುತ್ತಿದ್ದೇನೆ’ ಎಂಬರ್ಥದ ಜಾಹೀರಾತನ್ನು ಕಾಂಗ್ರೆಸ್‍ ಪಕ್ಷ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ದಿಲ್ಲಿ ಮತ್ತು ಇಲ್ಲಿನ ವಾಹನ ಜಂಗುಳಿಯ ರಸ್ತೆಗಳನ್ನು ನೋಡುತ್ತಿದ್ದರೆ ಮೆಟ್ರೊ ಯೋಜನೆಯನ್ನುದೃಢ ನಿಲುವಿನೊಂದಿಗೆ ಕಾರ್ಯರೂಪಕ್ಕೆ ಇಳಿಸಿದ ಶೀಲಾ ದೀಕ್ಷಿತ್‍ ನೇತೃತ್ವದ ಮಾಜಿ congress_ad_20150126ಸರಕಾರವನ್ನು ಬೆಂಬಲಿಸುವುದರಲ್ಲಿ ಯಾವುದೇ ರಾಜಕೀಯ ಕಾಣಿಸುವುದಿಲ್ಲ. ಬೃಹತ್‍ ಪ್ರಮಾಣದಲ್ಲಿ ಬೆಳೆದು ನಿಂತಿರುವ ದಿಲ್ಲಿಯ ಸಂಚಾರ ವ್ಯವಸ್ಥೆಯನ್ನು ಇಂದು ಮೆಟ್ರೊ ರೈಲು ಹೊರತುಪಡಿಸಿ ಕಲ್ಪಿಸಿಕೊಳ್ಳುವುದು ಅಸಾಧ್ಯ. ಅಷ್ಟರ ಮಟ್ಟಿಗೆ ಮೆಟ್ರೊ ರೈಲು ಇಲ್ಲಿನ ಜನರ ನಿತ್ಯ ಬದುಕಿನ ಭಾಗವಾಗಿ ಹೋಗಿದೆ. 2003ರಲ್ಲಿ ಯೋಜನೆ ತಯಾರಿಸಿ, 2006ರಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಿ, 2014 ಆದರೂ ಇನ್ನೂ ಬೆಂಗಳೂರು ಜನರಿಗೆ ಮೆಟ್ರೊ ರೈಲನ್ನು ನೀಡಲಾಗದ ನಮ್ಮ ಸರಕಾರಗಳಿಗೆ ಇಲ್ಲಿ ಸಾಕಷ್ಟು ಪಾಠಗಳು ಸಿಗುತ್ತವೆ. ಹಾಗಂತ ದಿಲ್ಲಿ ಕೇವಲ ಮೆಟ್ರೊ ರೈಲಿನ ಮೇಲೆ ಮಾತ್ರವೇ ಅವಲಂಬಿಸಿದ್ದರೆ ಇವತ್ತು ಶೀಲಾ ದೀಕ್ಷತ್‍ ಮತ್ತವರ ಕಾಂಗ್ರೆಸ್‍ ಪಕ್ಷವನ್ನು ಇಲ್ಲಿನ ಜನ ಇಷ್ಟರ ಮಟ್ಟಿಗೆ ದೂರ ಇಡಲು ಸಾಧ್ಯವೇ ಇರಲಿಲ್ಲ. “ಅವತ್ತಿಗೆ ಶೀಲಾ ದೀಕ್ಷಿತ್‍ ದಿಲ್ಲಿ ಮೆಟ್ರೊ ನಿಗಮಕ್ಕೆ ಭಾರಿ ಬೆಂಬಲ ನೀಡಿದರು. ಈ ಮೂಲಕ ಇಷ್ಟು ದೊಡ್ಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದರು, ಆದರೆ, ಮೆಟ್ರೊ ರೈಲಿನ ಆಚೆಗೂ ದಿಲ್ಲಿ ಜನರ ಸಂಚಾರ ಸಮಸ್ಯೆಗಳಿರುವುದನ್ನು ಅವರು ಗಮನಿಸದೇ ಹೋದರು,’’ ಎಂಬ ಅಭಿಪ್ರಾಯವನ್ನು ದಿಲ್ಲಿ ಮೆಟ್ರೊ ನಿಗಮದ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದರು.

ಹಳೆ ದಿಲ್ಲಿಯ ಇಕ್ಕಟ್ಟಾದ ರಸ್ತೆಗಳು, ಸಂಚಾರ ನಿಯಮಗಳನ್ನು ಗಮನಿಸಲೂ ಹೋಗದ ಸವಾರರ ಮನಸ್ಥಿತಿ, ಸಿಕ್ಕ ಸಿಕ್ಕಲ್ಲಿ ನಿಂತು ದಂಡ ಹಾಕುವ ಟ್ರಾಫಿಕ್‍ ಪೊಲೀಸರು ಮತ್ತು ರಿಕ್ಷಾ ತುಳಿಯುವ ಜನರ ಸಂಕಷ್ಟಗಳನ್ನು ನೋಡುತ್ತಿದ್ದರೆ ಮೆಟ್ರೊ ಅಧಿಕಾರಿಯವರ ಅಭಿಪ್ರಾಯ ವಾಸ್ತವಕ್ಕೆ cyclerickshaw-delhiಹತ್ತಿರವಾಗಿರುವಂತೆ ಕಾಣಿಸುತ್ತದೆ. ದಿಲ್ಲಿಯಲ್ಲಿ ಮೆಟ್ರೊ ರೈಲನ್ನು ಹೊರತುಪಡಿಸಿದರೆ, ಸಂಚಾರ ವ್ಯವಸ್ಥೆಗೆ ತಮ್ಮ ಬೆವರಿನ ಪಾಲವನ್ನು ನೀಡುತ್ತಿರುವವರು ಇಲ್ಲಿನ ರಿಕ್ಷಾ ಚಾಲಕರು. ಸಾಮಾನ್ಯ ಸೈಕಲ್‍ಗೆ ಹಿಂದೆ ಇಬ್ಬರು ಕೂರುವ ಆಸನ ವ್ಯವಸ್ಥೆ ಇರುವ ಈ ರಿಕ್ಷಾಗಳನ್ನು ತುಳಿಯುವುದನ್ನು ನೋಡುತ್ತಿದ್ದರೆ, ಹೊಸದಿಲ್ಲಿಯ ಒಡಲು ತುಂಬಿಕೊಂಡಿರುವ ಬಡತನ ಮತ್ತು ವರ್ಗ ತಾರತಮ್ಯವನ್ನು ನೆನಪಿಸುತ್ತವೆ. ಇಂತಹ ರಿಕ್ಷಾವಾಲಗಳಲ್ಲಿ ಬಹುತೇಕರು ಬಿಹಾರ ಮತ್ತು ಛತ್ತೀಸ್‍ಘಡದಂತಹ ರಾಜ್ಯದಿಂದ ಬಂದವರು. ಬಹುಶಃ ತಲೆಯ ಮೇಲೊಂದು ಸೂರಿಲ್ಲದ ದಿಲ್ಲಿಯ ಭಿಕ್ಷುಕರನ್ನು ಹೊರತು ಪಡಿಸಿದರೆ, ಬಡತನ ಕೃಪಾಂಕದ ನಂತರದ ಸ್ಥಾನದಲ್ಲಿ ಇರುವವರು ರಿಕ್ಷಾವಾಲಾಗಳು. ದಿನಕ್ಕೆ 50 ರಿಂದ 80 ರೂಪಾಯಿ ಬಾಡಿಗೆ ನೀಡಿ ರಿಕ್ಷಾವನ್ನು ಓಡಿಸುವ ಜನರ ಸಂಖ್ಯೆಯೇ ಸುಮಾರು 2 ಲಕ್ಷಕ್ಕೂ ಹೆಚ್ಚಿದೆ. “ದಿನಕ್ಕೆ ಮುನ್ನೂರರಿಂದ ಐನೂರು ರೂಪಾಯಿ ದುಡಿಮೆ ಆಗುತ್ತದೆ. ಇದರಲ್ಲಿ ರೂಮಿನ ಬಾಡಿಗೆ ಐನೂರು, ಊಟಕ್ಕೆ ಒಂದು ಸಾವಿರ ಕಳೆದರೆ ಉಳಿದ ಹಣವನ್ನು ನಮ್ಮ ಹಳ್ಳಿಗೆ ಕಳುಹಿಸಬೇಕು,” ಎಂದು ತಮ್ಮ ದುಡಿಮೆಯ ಲೆಕ್ಕಾಚಾರವನ್ನು ನೀಡಿದ್ದು ಯುವ ರಿಕ್ಷಾವಾಲ ಗೌರವ್‍ ಗುಪ್ತಾ. ಆತ ಕರೋಲ್‍ಭಾಗ್‍ನ ಗಲ್ಲಿಯೊಂದರ ಚಿಕ್ಕ ಕೋಟೆಯಲ್ಲಿ ವಾಸವಾಗಿದ್ದಾನೆ. ಒಟ್ಟು ಆರು ಜನರು ಹಂಚಿಕೊಂಡಿರುವ ಆ ಸೂರಿನ ಬಾಡಿಗೆ ಮೂರು ಸಾವಿರ ರೂಪಾಯಿ. “ತಿಂಗಳಿಗೆ ಒಂದರಿಂದ ಒಂದೂವರೆ ಸಾವಿರದವರೆಗೆ ವಿದ್ಯುತ್‍ ಬಿಲ್‍ ಬರುತ್ತಿತ್ತು. ನೀರಿಗಾಗಿ ಆರು ನೂರು ಖರ್ಚು ಮಾಡುತ್ತಿದ್ದೆವು. ಜಾಡೂವಾಲಾ ಪಕ್ಷ ಬಂದ ನಂತರ ನಮಗೆ ಸಾವಿರ ರೂಪಾಯಿ ಉಳಿತಾಯವಾಗುತ್ತಿತ್ತು. ಹೀಗಾಗಿ ಈ ಬಾರಿ ಜಾಡುಗೆ ನಮ್ಮ ಮತ,” ಎಂದರು. ಜತೆಗೆ ಅವರ ಕುತ್ತಿಗೆಗೆ ಸುತ್ತಿಕೊಂಡಿದ್ದ ಬಿಜೆಪಿಯ ಪ್ರಚಾರ ಸಾಮಾಗ್ರಿಯನ್ನು ಸುತ್ತಿ ತಮ್ಮ ಜೇಬಿಗೆ ಹಾಕಿಕೊಂಡು ನಕ್ಕರು.

ಇತ್ತೀಚೆಗೆ ತುಳಿಯುವ ರಿಕ್ಷಾಗಳ ಜಾಗದಲ್ಲಿ ಮೋಟರ್‍ ಜೋಡಿಸಿಕೊಂಡಿರುವ ಇ-ರಿಕ್ಷಾಗಳು ಬಂದಿವೆ. e-rickshaw-delhiಯುಪಿ ಗಡಿಭಾಗದ ಗ್ಯಾರೇಜುಗಳಲ್ಲಿ ಹಳೆಯದಾದ ಕೃಷಿಗೆ ಬಳಸುವ ಮೋಟರ್‍ಗಳನ್ನು ಜೋಡಿಸಿ ತಯಾರಿಸುವ ಇ- ರಿಕ್ಷಾಗಳನ್ನು ಇನ್ನೂ ಸಾರಿಗೆ ಇಲಾಖೆ ಕಾಯ್ದೆ ಅಡಿಗೆ ತಂದಿಲ್ಲ. ದಿನಕ್ಕೆ 400 ರೂಪಾಯಿ ಬಾಡಿಗೆಗೆ ಸಿಗುವ ಇ- ರಿಕ್ಷಾಗಳ ದುಬಾರಿ ಬಾಡಿಗೆಯಿಂದಾಗಿ ಲಾಭದಾಯಕ ಅಲ್ಲ ಎಂಬುದು ಕೆಲವು ರಿಕ್ಷಾವಾಲಾಗಳ ಅಭಿಪ್ರಾಯ. “ಇ- ರಿಕ್ಷಾಗಳ ಬಾಡಿಗೆ ದುಬಾರಿ. ಹೀಗಾಗಿ ಅದರ ಸಹವಾಸಕ್ಕೆ ನಾನು ಹೋಗಿಲ್ಲ. ಜತೆಗೆ, ಅವುಗಳಿಗೆ ಜೋಡಿಸಿದ ಮೋಟರ್‍ ಶಕ್ತಿ ಹೆಚ್ಚಿರುವುದರಿಂದ ಮೊದಲು ಪೊಲೀಸರು ಅವುಗಳ ಮೇಲೆ ಕೇಸು ಹಾಕುತ್ತಿದ್ದರು. ಆಪ್‍ ಸರಕಾರ ಬಂದ ನಂತರ ಅದು ನಿಂತಿಹೋಗಿತ್ತು,” ಎಂದರು ಭರತ್‍ ಶಾಹಿ. ಬಿಹಾರ ಮೂಲಕ ಇವರು ಕಳೆದ ಇಪ್ಪತ್ತು ವರ್ಷಗಳಿಂದ ದಿಲ್ಲಿಯಲ್ಲಿ ರಿಕ್ಷಾ ತುಳಿಯುತ್ತಿದ್ದಾರೆ. ಐವತ್ತರ ಆಸುಪಾಸಿನ, ಕೃಷ ಶರೀರದ ಅವರ ಮೈಕಟ್ಟು ಯಾವ ಜಿಮ್‍ಬಾಡಿಗೂ ಕಡಿಮೆ ಇದ್ದಂತೆ ಕಾಣುವುದಿಲ್ಲ. “ಬಹುಶಃ ನಮ್ಮದೇ ಸರಕಾರ ಬಂದರೂ ಇ- ರಿಕ್ಷಾಗಳಿಗೆ ಅನುಮತಿ ನೀಡುವ ಕುರಿತು ಮಧ್ಯದ ಹಾದಿಯನ್ನು ಅನುಸರಿಸಬೇಕಿದೆ,’’ ಎಂದರು ಆಪ್‍ನ ದಿಲ್ಲಿ ನಾಯಕರೊಬ್ಬರು.

ಅಚ್ಚರಿಯ ವಿಚಾರ ಏನೆಂದರೆ ಭಾರಿ ಸಂಖ್ಯೆಯಲ್ಲಿರುವ ದಿಲ್ಲಿಯ ನಿಜವಾದ ಸಾಮಾನ್ಯ ಪ್ರಜೆಗಳಾದ ರಿಕ್ಷಾವಾಲಾಗಳ ಕುರಿತು ಕಾಂಗ್ರೆಸ್‍ ಆಗಲಿ, ಬಿಜೆಪಿ ಆಗಲಿ ಗಮನ ಸೆಳೆಯುವಂತಹ ಮಾತುಗಳನ್ನು ಆಡುತ್ತಿಲ್ಲ. ಇವರಿಗೂ ಕೂಡ, ಎರಡೂ Kiran-Bedi-vs-Arvind-Kejriwal-rickshaw-ad-2015ಪ್ರಮುಖ ರಾಷ್ಟ್ರೀಯ ಪಕ್ಷಗಳ ಬಗ್ಗೆ ಅಪ್ಪುಗೆಯ ಭಾವವೂ ಇಲ್ಲ. ಕೇಜ್ರಿವಾಲ್‍ ನೇತೃತ್ವದ ಸರಕಾರ ಬಂದರೆ ತಮ್ಮ ಬದುಕು ಬದಲಾಗುತ್ತದೆ ಎಂಬ ಬಹುದೊಡ್ಡ ಆಶಯ ಇವರಲ್ಲಿ ಎದ್ದು ಕಾಣುತ್ತಿದೆ. ಚುನಾವಣೆ, ಅಧಿಕಾರದ ರಾಜಕಾರಣ, ಆರೋಪ-ಪ್ರತ್ಯಾರೋಪ ಮತ್ತು ಟಿವಿಗಳಲ್ಲಿನ ಚರ್ಚೆಗಳ ಅಬ್ಬರಗಳಿಂದ ಈ ರಿಕ್ಷಾವಾಲಗಳು ದೂರವೇ ಉಳಿದಿದ್ದಾರೆ. ದೇಶದ ರಾಜಧಾನಿಯ ತಣ್ಣನೆಯ ರಸ್ತೆಗಳಲ್ಲಿ ಅಕ್ಷರಶಃ ಬೆವರು ಸುರಿಸುವ ರಿಕ್ಷಾವಾಲಗಳ ಆಶಯವನ್ನು ಯಾವುದೇ ಭಾವಿ ಸರಕಾರ ಒಂದು ದಿನದಲ್ಲಿ ಪೂರೈಸುವುದು ಕಷ್ಟ ಕೂಡ. ಏನೇ ಆಗಲಿ, ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಸುಂದರವಾಗಿಸಬೇಕು ಎಂದರೆ ಇಂಥ ರಿಕ್ಷಾವಾಲಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ನೋಡಿಕೊಳ್ಳುವುದು ದಿಲ್ಲಿಯನ್ನು ಆಳುವ ಸರಕಾರದ ಹೊಣೆಗಾರಿಕೆ. ಚುನಾವಣೆ ಭವಿಷ್ಯ ಏನೇ ಆಗಲಿ, ದಿಲ್ಲಿಯ ರಿಕ್ಷಾವಾಲಗಳ ಬದುಕು ಬದಲಾಗಲಿ ಎಂದು ಈ ಸಮಯದಲ್ಲಿ ನಾವು ತುಂಬು ಮನಸ್ಸಿನಿಂದ ಹಾರೈಸಬಹುದು ಅಷ್ಟೆ…