ಯಾರು ಕಳೆ..ಯಾವುದು ಬೆಳೆ..?

– ಭಾರತೀ ದೇವಿ.ಪಿ

ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ?

ಆಗ್ರಾದಲ್ಲಿ ಹಿಂದೂ ಸಂಘಟನೆ ‘ಘರ್ ವಾಪಸಿ’ ಎನ್ನುವ ಹೆಸರಿನಲ್ಲಿ ಬಡಜನರ ಅಸಹಾಯಕತೆಯನ್ನು ತಮ್ಮ ಧರ್ಮದ ಬೇಳೆ Agra Conversionಬೇಯಿಸಿಕೊಳ್ಳಲು ಬಳಸಿದ್ದು ದೊಡ್ಡ ಸುದ್ದಿಯಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ, ರೇಷನ್ ಕಾರ್ಡ್ ಗಾಗಿ ಅಥವಾ ಜೀವನೋಪಾಯಕ್ಕಾಗಿ ಮತವನ್ನೇ ಬದಲಾಯಿಸಲು ಒಂದುವೇಳೆ ಜನ ಸಿದ್ಧರಿರುವುದೇ ಆದಲ್ಲಿ, ಆ ಜನ ಅದರ ಮೂಲಕ ಮೌನವಾಗಿ ಸಾರುತ್ತಿರುವ ಸತ್ಯಕ್ಕೆ ನಮ್ಮ ಒಳಗಿವಿಗಳನ್ನು ತೆರೆದುಕೊಳ್ಳಬೇಕಾಗಿದೆ. ಇಲ್ಲಿ ಇವರು ಸಾರುತ್ತಿರುವ ಮಹತ್ವದ ವಿಚಾರ “ಮತಕ್ಕಿಂತ ಬದುಕು ಮುಖ್ಯ”. ಆದರೆ ಹೊಟ್ಟೆಬಟ್ಟೆಯ ಅಗತ್ಯಗಳನ್ನು ಮೀರಿ ದುರ್ವರ್ತನೆಗಳಿಗೆ ಇಳಿದ ಜನಕ್ಕೆ ತಮ್ಮ ಸೋದರರ ಬದುಕಿನ ಅಸಹಾಯಕತೆ ರಾಜಕೀಯವಾಗಿ, ಧಾರ್ಮಿಕವಾಗಿ ದಾಳದಂತೆ ಕಂಡದ್ದು ಮನುಕುಲದ ವಿಕೃತತೆಗೆ ಸಾಕ್ಷಿ.

ಇಂಥದ್ದೇ ಇನ್ನೊಂದು ಸಂಗತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. (ವಿ.ಕ. 01-02-2015) ಭಾರತೀಯ ಕ್ರೈಸ್ತರ ಒಕ್ಕೂಟ ವೇದಿಕೆಯ ಅಧ್ಯಕ್ಷ ಟಿ.ಜೆ.ಅಬ್ರಹಾಂ ಅವರು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಘರ್ ವಾಪಸಿಯನ್ನು ಸ್ವಾಗತಿಸುತ್ತಾ ಇದರಿಂದ ಕ್ರೈಸ್ತ ಧರ್ಮದ ಕಳೆ ನಿರ್ಮೂಲನೆ ಆಗಲಿ ಎಂದಿದ್ದಾರೆ. ಇವರು ‘ಕಳೆ’ ಎಂದಿರುವುದು ಬಡತನ,ಅಸ್ಪೃಶ್ಯತೆ ಒಡ್ಡಿದ ಅಸಹಾಯಕತೆಯಿಂದ ಕ್ರೈಸ್ತ ಧರ್ಮಕ್ಕೆ ಬಂದ ಜನರನ್ನು. vijaykarnataka-feb0115“ಯಾರು ಪಡಿತರ ಚೀಟಿ, ಆಧಾರ್ ಕಾರ್ಡ್, ಬೇಳೆ, ಹಾಲಿನ ಪುಡಿಗಾಗಿ ಧರ್ಮಗಳನ್ನು ಬದಲಿಸುತ್ತಾರೋ ಅಂಥವರ ಅಗತ್ಯತೆ ಕ್ರೈಸ್ತ ಧರ್ಮಕ್ಕೆ ಇಲ್ಲ. ಅವರು ಬೆಳೆಯಲ್ಲ, ಕಳೆ ಇದ್ದಂತೆ. ಅಂತಹ ಕಳೆಗಳನ್ನು ಕೀಳಬೇಕು ಎನ್ನುವಾಗಲೇ ಘರ್ ವಾಪಸಿ ಹೆಸರಿನಲ್ಲಿ ಕ್ರೈಸ್ತ ಧರ್ಮವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ” ಎಂದು ಪತ್ರಿಕಾಗೋಷ್ಟಿಯಲ್ಲಿ ನುಡಿದ ಇವರ ಮಾತುಗಳು ದಿಗಿಲು ಹುಟ್ಟಿಸುತ್ತವೆ. ದಯಾಮೂಲವಾಗಿ ಪಸರಿಸಿದ ಕ್ರೈಸ್ತಧರ್ಮದ ಧಾರ್ಮಿಕ ನಾಯಕ ಆಡಿರುವ ಈ ಮಾತುಗಳು ಧರ್ಮದ ಮೂಲ ಉದ್ದೇಶ ಉಳ್ಳವರನ್ನು ಪೋಷಿಸುವುದೇ ಆಗಿದೆ ಎಂಬುದನ್ನು ಶ್ರುತಪಡಿಸುವಂತಿವೆ.

ಧರ್ಮ ಮತ್ತು ಪ್ರಭುತ್ವ ಈ ಎರಡಕ್ಕೂ ಬಡವರು ‘ಕಳೆ’ಗಳಂತೆ ಕಾಣುತ್ತಿದ್ದಾರೆ ಎಂಬುದು ಕಳೆದ ಕೆಲವು ತಿಂಗಳುಗಳಿಂದ ತುಂಬಾ ಸ್ಪಷ್ಟವಾಗುತ್ತಿದೆ. ಇವರನ್ನು ಆಳಕ್ಕೆ ತಳ್ಳುವ ಈ ಧರ್ಮದ ಕೂಪಗಳು ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನ ಮುಖಗಳಲ್ಲಿ ಕಾಣುತ್ತಿದ್ದರೂ ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ? ಎಂಬ ಪ್ರಶ್ನೆ ಎಲ್ಲರೂ ಮತ್ತೆ ಮತ್ತೆ ತಮ್ಮ ಸಾಮಾನ್ಯ ಜ್ಞಾನವನ್ನು ಅರಳಿಸಿಕೊಂಡು ಕೇಳಿಕೊಳ್ಳಬೇಕಾಗಿದೆ. ಕುವೆಂಪು ಹೇಳಿದSakshi Maharaj ‘ನೂರು ಮತದ ಹೊಟ್ಟತೂರಿ’ ಮನುಷ್ಯನಾಗಿ ಬದುಕುವ ಸಹಜತೆಗೆ ಮರಳಬೇಕಿದೆ. ಆಗ ಆಗ್ರಾದ ಬಡಜನ ತಮ್ಮ ಒಡಲ ಉರಿಯೊಳಗೆ ಹೊಳೆಯಿಸಿ ತೋರುತ್ತಿರುವ ದೊಡ್ಡ ಸತ್ಯ ಖಂಡಿತಾ ಎಲ್ಲರ ಅರಿವಿಗೆ ಬರುತ್ತದೆ.

One thought on “ಯಾರು ಕಳೆ..ಯಾವುದು ಬೆಳೆ..?

  1. ಜೆ.ವಿ.ಕಾರ್ಲೊ, ಹಾಸನ

    ಘರ್ ವಾಪಸ್ ಆಗಿ ಅನ್ನುವವರಿಗೂ, ನೀವು ಬೆಳೆಯಲ್ಲ ಕಳೆ ಹೊರಟೋಗಿ ಎನ್ನುವ ಇಂತವರಿಗೂ ಏನು ವ್ಯತ್ಯಾಸ?

    Reply

Leave a Reply

Your email address will not be published. Required fields are marked *