ದಿಲ್ಲಿಯ ಅಂತರಾಳದಲ್ಲಿ ಪರ್ಯಾಯ ರಾಜಕಾರಣದ ಹುಡುಕಾಟ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ಬೆಂಗಳೂರಿನ ಜನಜಂಗುಳಿಯ ಚಿಕ್ಕಪೇಟೆಯಂತಹ ಬೀದಿ ಇದು; ಪಹಾರ್‍ಗಂಜ್. Pahar_Ganj_Streetಸಂಜೆಯಾಗುತ್ತಲೇ ಬೀದಿ ಬದಿಯ ವ್ಯಾಪಾರ ಇಲ್ಲಿ ರಂಗುಪಡೆದುಕೊಳ್ಳುತ್ತದೆ. ದೇಶ ವಿದೇಶಗಳ ಪ್ರವಾಸಿಗರು ತಮ್ಮ ದಿನದ ಸುತ್ತಾಟವನ್ನು ಮುಗಿಸಿ ವಾಪಾಸ್‍ ಬರುವ ಸಮಯವದು. ಮೊಟ್ಟೆ, ಕೋಳಿ, ಕುರಿ ಮಾಂಸದ ಅದ್ಭುತ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಬೇಯಿಸಿದ ಮೊಟ್ಟೆಗೂ ವಿಭಿನ್ನ ರುಚಿ ಇರುತ್ತದೆ ಎಂಬುದನ್ನು ಇಲ್ಲಿನ ವ್ಯಾಪಾರಿಗಳು ಪರಿಚಯಿಸುತ್ತಾರೆ. ಹಾಗೆ ಕೊಂಚ ಮುಂದೆ ಬಂದರೆ ರಸ್ತೆಯ ಬದಿಯಲ್ಲಿ ಕೊಂಚ ಆಳದ ತಳಹೊಂದಿರುವ, ದೊಡ್ಡ ದೋಸೆ ಕಾವಲಿಯಂತಹ ಪಾತ್ರೆಯಲ್ಲಿ ಕೆನೆಭರಿತ ಹಾಲು ಕುದಿಯುವುದು ಕಾಣಿಸುತ್ತದೆ. ಕಾಲು ಲೀಟರ್‍ ಗಟ್ಟಿ ಹಾಲಿಗೆ 20 ರೂಪಾಯಿ. ಎರಡು ಜಗ್ಗುಗಳಲ್ಲಿ ಆ ಕಡೆಯಿಂದ ಈ ಕಡೆಗೆ ಎತ್ತಿ ಸುರಿದು, ಅದಕ್ಕೆ ಸಕ್ಕರೆ ಬೆರೆಸಿ ಮತ್ತೊಂದು ಲೋಟಕ್ಕೆ ಸುರಿದು ನಿಮ್ಮ ಕೈಗಿಡುತ್ತಾರೆ. delhi-paharganj-milkಬಾಯಿಗಿಟ್ಟರೆ ಹಾಲಿಗೆ ಯಾಕೆ ಅಮೃತ ಎನ್ನುತ್ತಾರೆ ಎಂಬುದನ್ನು ನಾಲಿಗೆ ಸವಿಯೇ ಅರ್ಥಪಡಿಸುತ್ತದೆ. ದಿಲ್ಲಿಯ ಆಹಾರ ಉದ್ಯಮದ ಮನಸ್ಥಿತಿಗೆ ಪ್ರತಿಬಿಂಬಗಳು ಇವು.

ಒಂದು ಕಡೆ ಹೊಸದಿಲ್ಲಿಯಂತಹ ದುಬಾರಿ ಪ್ರದೇಶದಲ್ಲಿ ಪಂಚತಾರ ಹೋಟೆಲ್‍ಗಳು ಹೇರಳವಾಗಿ ಸಿಗುತ್ತವೆ. ಇಲ್ಲಿನ ವೆಚ್ಚವನ್ನು ಭರಿಸಲಾಗದವರಿಗೆ ಹಳೆಯ ದಿಲ್ಲಿಯ, ಪಹಾರ್‍ಗಂಜ್‍ನಂತಹ ಇಕ್ಕಟ್ಟಾದ ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ರುಚಿಕಟ್ಟಾದ ತಿಂಡಿ ತಿನಿಸುಗಳು ಸಿಗುತ್ತವೆ. ಕೊಟ್ಟ ಹಣಕ್ಕೆ ಮೋಸವಿಲ್ಲದ ಗುಣಮಟ್ಟದ ಆಹಾರಗಳವು. ನಮ್ಮಲ್ಲಿ ಹದಿನೈದು ರೂಪಾಯಿಯ ಪಾನಿಪೂರಿ ನೀಡುವ ವ್ಯಾಪಾರಿ ಹಿಂಡಿ ಹಿಂಡಿ ಚಪ್ಪಟೆಯಾಗಿ ಹೋದ ಲಿಂಬೆಹಣ್ಣನ್ನೇ ಮತ್ತೊಮ್ಮೆ ಹಿಂಡಿ ಶಾಸ್ತ್ರ ಪೂರೈಸುತ್ತಾನೆ. ಆದರೆ ದಿಲ್ಲಿಯ ಬೀದಿ ಬದಿಯಲ್ಲಿ ಹತ್ತು ರೂಪಾಯಿ ಒಂದು ಗೆಣಸಿನ ಪೀಸನ್ನು ಕಟ್‍ ಮಾಡಿಕೊಡುವ ವ್ಯಾಪಾರಿ, ನಗುಮುಖದಿಂದಲೇ ಅರ್ಧ ಲಿಂಬೆ ಹಣ್ಣನ್ನು ಹಿಂಡಿ ಬಾಯಲ್ಲಿ ನೀರೂರಿಸುತ್ತಾರೆ. ಇಲ್ಲಿನ ದುಡಿಮೆಗೂ ಒಂದು ಉದ್ದೇಶ ಇರುವಂತೆ ಜನ ಬದುಕುತ್ತಾರೆ. ಪಡೆಯುವ ಹಣಕ್ಕೆ ತಕ್ಕ ಗುಣಮಟ್ಟವನ್ನು ನೀಡಬೇಕು ಎಂಬ ಕಾಮನ್‍ಸೆನ್ಸ್ ಇಲ್ಲಿನ ಅಂತರಾಳದಲ್ಲಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ನಮ್ಮ ದರ್ಶಿನಿಗಳನ್ನು ನಡೆಸುತ್ತಿರುವ ವರ್ಗದವರನ್ನು ಇಲ್ಲಿನ ಬೀದಿ ವ್ಯಾಪಾರಿಗಳ ಜತೆ ಸಮೀಕರಿಸಿ ನೋಡಿದರೆ, ದಿಲ್ಲಿಯಲ್ಲಿ ಯಾಕೆ ಆಮ್‍ ಆದ್ಮಿಯಂತಹ delhi food stallಬದಲಾವಣೆ ಬಯಸುವ ಪಕ್ಷ ತನ್ನೆಲ್ಲಾ ಮಿತಿಗಳ ಆಚೆಗೂ ಅಧಿಕಾರ ಕೇಂದ್ರದ ಹತ್ತಿರಕ್ಕೆ ಬಂದು ನಿಂತಿದೆ ಎಂಬುದು ಅರ್ಥವಾಗುತ್ತದೆ.

ಮೊನ್ನೆ ವೈಶಾಲಿ ಮಾರ್ಗದ ಮೆಟ್ರೊದಲ್ಲಿ ಸಿಕ್ಕ ದಿಲ್ಲಿ ಯೂನಿವರ್ಸಿಟಿಯ ರಾಜಕೀಯ ಶಾಸ್ತ್ರದ ವಿದ್ಯಾರ್ಥಿ ಸಂಹಿತಾ ಸೇಟ್‍ ಜತೆ ಈ ಕುರಿತು ಅಭಿಪ್ರಾಯವನ್ನು ಹಂಚಿಕೊಂಡೆ. “ಹೌದಾ, ನಾವು ಈ ಬಗ್ಗೆ ಗಮನಿಸಿಯೇ ಇರಲಿಲ್ಲ ನೋಡಿ,’’ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು, “ದಿಲ್ಲಿ ಎಂದರೆ ಖುಷವಂತ್‍ ಸಿಂಗ್‍ ಬರೆದ ದಿಲ್ಲಿ ಕಾದಂಬರಿ ಎನ್ನೋ ಕಲ್ಪನೆ ಕಳೆದ ದಶಕದಲ್ಲಿ ಗಟ್ಟಿಯಾಗಿ ಬೇರೂರಿತ್ತು. ಸುಮಾರು ದಿನನೈದು ವರ್ಷ ದಿಲ್ಲಿಯನ್ನು ಆಳಿದ ಕಾಂಗ್ರೆಸ್‍ ಕೂಡ ಅಭಿವೃದ್ಧಿ ಹೆಸರಿನಲ್ಲಿ ಹಳೆಯ ದಿಲ್ಲಿಯ ಜನರನ್ನು ಮರೆತೇ ಬಿಟ್ಟಿತ್ತು. ಚುನಾವಣೆ ಸಮಯದಲ್ಲಿ ಮಾತ್ರ ಇವರು ನೆನಪಾಗುತ್ತಿದ್ದರು. ಬಿಜೆಪಿ ಕೂಡ ಹಳೆಯ ದಿಲ್ಲಿಯ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸೋತಿತು ಅನ್ನಿಸುತ್ತದೆ. ಲೋಕಸಭೆ ಚುನಾವಣೆ ನಂತರ ಪೂರ್ವ ದಿಲ್ಲಿಯಲ್ಲಿ ಕೋಮುಸಂಘರ್ಷ ನಡೆಯಿತಾದರೂ, ಅದೂ ಕೂಡ ಚುನಾವಣೆಯ ಅಸ್ತ್ರವಾಗಲಿಲ್ಲ. ಯಾಕೆಂದರೆ ದಿಲ್ಲಿಯ ಕೆಳವರ್ಗದಲ್ಲಿ ಯೂನಿಕ್‍ ಆದ ಪ್ರಾಮಾಣಿಕತೆ ಮತ್ತು ರಾಜಕೀಯ ಅರಿವು ಇರುವುದು ಕಾರಣ ಅನ್ನಿಸುತ್ತದೆ,’’ ಎಂದರು. ಪೂರ್ವ ದಿಲ್ಲಿಯ ತ್ರಿಲೋಕ್‍ಪುರಿಯಲ್ಲಿ ಕಳೆದ ಅಕ್ಟೋಬರ್‍ನಲ್ಲಿ ಕೋಮುಗಲಭೆ ನಡೆದಿತ್ತು. ಈ ಕುರಿತು ಆಟೋ ಚಾಲಕರೊಬ್ಬರು ಪ್ರಸ್ತಾಪಿಸಿದ ಕೆಲವು ಮಾತುಗಳು ಈ ಸಮಯದಲ್ಲಿ ನೆನಪಾಯಿತು. trilokpuri-clashesಅವರ ಹೆಸರು ಮರೆತುಹೋಗಿದೆ. “ನಾನು ಗಲಭೆ ನಡೆದ ಸಂದರ್ಭದಲ್ಲಿ ತ್ರಿಲೋಕ್‍ಪುರಿಯಲ್ಲೇ ಇದ್ದೆ. ಸುಖಾಸುಮ್ಮನೆ ಗಲಾಟೆ ಮಾಡಲಾಯಿತು. ಆದರೆ, ಅಲ್ಲಿರುವಷ್ಟು ಬಡತನ ಮತ್ತು ಸಮಸ್ಯೆಗಳು ಇಡೀ ದಿಲ್ಲಿಯಲ್ಲಿ ಇಲ್ಲ,’’ ಎಂದಿದ್ದರು. ಸ್ವಾತಂತ್ರ್ಯ ನಂತರ ಬಂಗಾಳದಲ್ಲಿ ನಡೆದ ಕೋಮು ಗಲಭೆಗಳನ್ನು ಪ್ರಸ್ತಾಪಿಸುತ್ತ, ‘ಕೋಮು ಸಂಘರ್ಷದ ಮೂಲ ಇರುವುದು ನಮ್ಮ ಆರ್ಥಿಕ ಸ್ಥರಗಳಲ್ಲಿನ ಭಿನ್ನತೆಯಲ್ಲಿ’ ಎಂದು ಜಯಪ್ರಕಾಶ್‍ ನಾರಾಯಣ್‍ ವ್ಯಾಖ್ಯಾನಿಸಿದ್ದರು ಎಂದು ಹಿರಿಯರೊಬ್ಬರು ಹೇಳಿದ ನೆನಪು. ಅದು ನಿಜವೇ ಆಗಿದ್ದರೆ ತ್ರಿಲೋಕ್‍ಪುರಿಯಲ್ಲಿ ಹತ್ತಿದ ಕಿಡಿ ಇಂದು ಇಡೀ ದಿಲ್ಲಿಯನ್ನೇ ವ್ಯಾಪಿಸಬೇಕಿತ್ತು. ಆದರೆ, ಇಲ್ಲಿ ಜಾತಿ ಮತ್ತು ಧರ್ಮದ ವಿಚಾರಗಳಿಗಿಂತ ಬಡತನ ಮತ್ತು ಶ್ರೀಮಂತಿಕೆ (ಬಡವ ಮತ್ತು ಶ್ರೀಮಂತ ಅಲ್ಲ)ಯಂತಹ ವರ್ಗ ತಾರತಮ್ಯದ ಅಂಶ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ತ್ರಿಲೋಕ್‍ಪುರಿಯಲ್ಲಿ ಕೋಮು ಗಲಭೆ ನಡೆಯುತ್ತಲೇ ಆಪ್‍ನ ಸಕಾಲಿಕ ಮಧ್ಯಪ್ರವೇಶ ಧರ್ಮಾಧಾರಿತ ರಾಜಕಾರಣದತ್ತ ಜನ ಹೋಗುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಿತು. ಗಲಭೆ ನಡೆದ ಮಾರನೇ ದಿನವೇ ನಡೆಸಿದ ಸೌಹಾರ್ಧ ನಡಿಗೆ ಮತ್ತು ಕೋಮು ಸಾಮರಸ್ಯ ಮೂಡಿಸಲು ನಡೆಸಿದ ವಿಶಿಷ್ಟ ಪ್ರಯತ್ನಕ್ಕೆ ಇಲ್ಲಿ ಬೆಲೆ ಸಿಕ್ಕಿದೆ.

ಇಲ್ಲೀಗ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಪೆ. 7ರ ಮುಂಜಾನೆಯಿಂದ ಸಂಜೆವರೆಗೆ ದಿಲ್ಲಿಯ ಸುಮಾರು 13 ಸಾವಿರ ಮತಗಟ್ಟೆಗಳಲ್ಲಿ ದಿಲ್ಲಿಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ‘ದಿಲ್ಲಿ ಕೆ ದಿಲ್‍ ಮೆ ಕ್ಯಾ ಹೇ?’ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆದರೆ, dandi_yatra_delhiಅದು ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ ಎಂಬ ಎಚ್ಚರಿಕೆ ಎಲ್ಲರಲ್ಲೂ ಇದೆ. ಅದಕ್ಕಾಗಿ ರಾತ್ರಿ ಕಾರ್ಯಾಚರಣೆಗಳನ್ನು ತಡೆಯುವ ಕೊನೆಯ ಪ್ರಯತ್ನಗಳು ಜಾರಿಯಲ್ಲಿವೆ. ಎಲ್ಲವೂ ಸುಸೂತ್ರವಾಗಿ ನಡೆದರೆ, ನಮ್ಮೀ ಚುನಾವಣೆ ವ್ಯವಸ್ಥೆಯ ಮಿತಿಗಳ ಒಳಗಡೆಯೇ ಬದಲಾವಣೆ ಬಯಸುವ ಸಾಧ್ಯತೆಯೊಂದನ್ನು ಅನ್ವೇಷಣೆ ಮಾಡಿದಂತಾಗುತ್ತದೆ. ಹಾಗೂ ದೇಶದ ಇತರೆ ಕಡೆಗಳಲ್ಲಿ ಹೇಗೆ ರಾಜಕೀಯ ಪರ್ಯಾಯೊಂದನ್ನು ನಿರ್ಮಿಸಬಹುದು ಎಂಬುದಕ್ಕೆ ಈ ಕಾಲದ ಮಾದರಿಯೊಂದು ಸಿಕ್ಕಂತಾಗುತ್ತದೆ.

3 comments

  1. “ಇಲ್ಲಿನ ದುಡಿಮೆಗೂ ಒಂದು ಉದ್ದೇಶ ಇರುವಂತೆ ಜನ ಬದುಕುತ್ತಾರೆ.”………….. I like this……… 🙂

  2. ಆಮ್ ಆದ್ಮಿ ಪಕ್ಷವು ಇಮಾಮ್ ಬುಖಾರಿಯ ಫತ್ವಾ ಬೆಂಬಲವನ್ನು ತಿರಸ್ಕರಿಸಿ ಎಲ್ಲ ಧರ್ಮಗಳ ಮೂಲಭೂತವಾದವನ್ನು ವಿರೋಧಿಸುವುದಾಗಿ ಹೇಳಿ ದಿಟ್ಟತನ ಮೆರೆದಿದೆ. ಅದೇ ವೇಳೆ ಡೇರಾ ಸಚ್ಚಾ ಸೌದಾ ಎಂಬ ಪಂಗಡವು ಬಿಜೆಪಿಯ ಪರವಾಗಿ ಬೆಂಬಲಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದೆ. ಇದನ್ನು ತಿರಸ್ಕರಿಸುವ ದಿಟ್ಟತನವನ್ನು ಬಿಜೆಪಿ ತೋರಿಸಿಲ್ಲ. ಧಾರ್ಮಿಕ ಗುಂಪು ಹಾಗೂ ಪಂಗಡಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಒಂದು ಪಕ್ಷವನ್ನು ಬೆಂಬಲಿಸಲು ಕರೆ ಕೊಡುವ ಹೇಳಿಕೆಗಳನ್ನು ನೀಡುವುದು ಅಪಾಯಕಾರಿ. ಇಂಥ ಧಾರ್ಮಿಕ ಗುಂಪು, ಪಂಗಡ, ಜಾತಿಗಳ ಸಗಟು ವೋಟುಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೀವ್ರ ಮಾರಕ. ಇದನ್ನು ಧಿಕ್ಕರಿಸುವ ಧೈರ್ಯವನ್ನು ತೋರಿಸಿದ ಆಮ್ ಆದ್ಮಿ ಪಕ್ಷ ತೋರಿಸಿರುವುದು ಉತ್ತಮ ಬೆಳವಣಿಗೆ.

    ಚುನಾವಣೆಗೂ ಮೊದಲೇ ಆಮ್ ಆದ್ಮಿ ಪಕ್ಷದ ಪರವಾಗಿ ದೆಹಲಿಯಲ್ಲಿ ಅಲೆ ರೂಪುಗೊಂಡಿರುವುದು ಸ್ಪಷ್ಟ. ಇದನ್ನು ಗುರುತಿಸಲಾರದಷ್ಟು ಮಾಧ್ಯಮಗಳ ಕಣ್ಣು ಮಂಜಾಗಿದೆ ಅಥವಾ ಹಾಗೆ ವರ್ತಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ಒತ್ತಡ ಇರುವಂತೆ ಕಾಣುತ್ತದೆ. ಚುನಾವಣೆಯ ಬಹಳ ದಿನಗಳ ಮೊದಲೇ ಇಂಥ ಅಲೆ ರೂಪುಗೊಂಡಿರುತ್ತದೆ. ಇಂಥ ಅಲೆಯನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಲು ಯಾವುದೇ ಧನಬಲದ ಪ್ರಚಾರದಿಂದ ಅಥವಾ ಮುಖಪುಟದ ಜಾಹೀರಾತಿನಿಂದ ಅಸಾಧ್ಯ. ದೆಹಲಿಯಲ್ಲಿ ರೂಪುಗೊಂಡಿರುವ ಅಲೆಯ ಪ್ರಭಾವದಿಂದ ಆಮ್ ಆದ್ಮಿ ಪಕ್ಷ ಗೆಲ್ಲುವ ಎಲ್ಲ ಲಕ್ಷಣಗಳೂ ಕಂಡುಬಂದಿವೆ.

Leave a Reply to Muralidhara. g.s Cancel reply

Your email address will not be published.