ಸಾಹಿತ್ಯ ಸಮ್ಮೇಳನ = ಊಟ + ವಸತಿ!!

– ಸದಾನಂದ ಲಕ್ಷ್ಮೀಪುರ

ಶ್ರವಣಬೆಳಗೊಳದಲ್ಲಿ ನಡೆದದ್ದು ಅದ್ಧೂರಿ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಪರಿಷತ್, ಜೈನ ಮಠದ ಸ್ವಾಮೀಜಿ ಹಾಗೂ ಸಮ್ಮೇಳನದ ವ್ಯವಸ್ಥೆಗೆ ಓಡಾಡಿದ ಎಲ್ಲರಿಗೂ ಅನ್ನಿಸಿದೆ – ಇದೊಂದು ಯಶಸ್ವಿ ಸಮ್ಮೇಳನ. hassan-sahitya-sammelana-2ಹಾಗಾದರೆ, ಅವರು ಕಂಡ ಯಶಸ್ಸು ಯಾವುದು..? ಅವರ ಮಾತುಗಳಿಂದ ಗ್ರಹಿಸಬಹುದಾದ್ದೆಂದರೆ, ಊಟಕ್ಕಾಗಿ ಗದ್ದಲವಾಗಲಿಲ್ಲ. ಸರಕಾರಿ ನೌಕರರು ಓಓಡಿಗಾಗಿ ಬಟ್ಟೆ ಹರಿದುಕೊಳ್ಳಲಿಲ್ಲ. ವಸತಿ ಸಮಸ್ಯೆ ಸರಿಯಿಲ್ಲ ಎಂಬ ಕೂಗಾಟಗಳಿರಲಿಲ್ಲ. ಮುಖ್ಯವಾಗಿ ಈ ತೆರೆನ ಸುದ್ದಿಗಳಾವುವೂ ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ ಎಂಬ ಕಾರಣಕ್ಕೆ, ಅವರು ‘ಯಶಸ್ವಿ’ ಪದ ಪ್ರಯೋಗ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದೆಂದರೆ, ‘ವ್ಯವಸ್ಥೆ’ ಮಾಡುವುದು ಎಂಬ ಅರ್ಥಕ್ಕೆ ಸೀಮಿತವಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ. ಸಮ್ಮೇಳನಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿ ನಡೆದ ಬಹುತೇಕ ಸಭೆಗಳಲ್ಲಿ ವ್ಯಕ್ತವಾಗಿದ್ದು ಊಟ, ವಸತಿ, ವೇದಿಕೆ ವಿಚಾರಗಳು. ಬಂದವರಿಗೆಲ್ಲಾ ಇರಲು ವ್ಯವಸ್ಥೆ ಮಾಡಿ, ಹೊತ್ತಿಗೆ ಸರಿಯಾಗಿ ಊಟ ಹಾಕಿದರೆ ಸಮ್ಮೇಳನ ಖಂಡಿತ ‘ಯಶಸ್ವಿ’ ಎಂದೇ ಅನೇಕರ ಅಭಿಪ್ರಾಯ. ಈ ಬಾರಿ ವೇದಿಕೆಗೆ ಆದ ಖರ್ಚು ಬರೋಬ್ಬರಿ 1.88 ಕೋಟಿ ರೂ. ಅದರಲ್ಲಿ ರಾಜ್ ಎಂಟರ್ ಪ್ರೈಸಸ್ ನವರಿಗೆ 1.70 ಕೋಟಿ ರೂ. ಉಳಿದ ಹದಿನೆಂಟು ಲಕ್ಷ ಖರ್ಚಾದದ್ದು, ಆಯ್ಕೆ ಮಾಡಿಕೊಂಡಿದ್ದ ಜಾಗೆಯ ಸಮತಟ್ಟು ಮಾಡಲು. ವಿಚಿತ್ರ ಎಂದರೆ, ಸಮತಟ್ಟು ಮಾಡುವ ಕಾಮಗಾರಿಗೆ ಮೊದಲು ಲೋಕೋಪಯೋಗಿ ಇಲಾಖೆ 42 ಲಕ್ಷ ರೂಗಳ ಅಂದಾಜು ಸಿದ್ಧಪಡಿಸುತ್ತದೆ. ನಂತರ ಭೂ ಸೇನಾ ನಿಗಮದವರಿಗೆ ಆ ಕೆಲಸ ಒಪ್ಪಿಸಿ 18 ಲಕ್ಷ ರೂಗಳಿಗೆ ಮಾಡಲು ಒಪ್ಪಿಸಲಾಗುತ್ತದೆ. ನಿಜಕ್ಕೂ 42 ಲಕ್ಷ ರೂ ಮೌಲ್ಯದ ಕೆಲಸವನ್ನು 18 ಲಕ್ಷಕ್ಕೆ ಮಾಡಲು ಸಾಧ್ಯವೇ..? ಅಥವಾ 42 ಲಕ್ಷದ ಅಂದಾಜು ಸಿದ್ಧಪಡಿಸಿದವರು, ಎಂಜಿನಿಯರಿಂಗ್ ಓದದವರೇ?

ವೇದಿಕೆ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿತ್ತು. ರಾಜ್ ಎಂಟರ್ ಪ್ರೈಸಸ್ ನವರು 2.28 ಕೋಟಿರೂಗಳನ್ನು ನಮೂದಿಸಿದ್ದರು. ಅದುವೇ ಅತೀ ಕಡಿಮೆ. ನಂತರ ಜಿಲ್ಲಾಡಳಿತ, ಹಣಕಾಸು ಸಮಿತಿ, ಸಾಹಿತ್ಯ ಪರಿಷತ್ತು ರಾಜ್ ಎಂಟರ್ ಪ್ರೈಸಸ್ ನವರೊಂದಿಗೆ ಮಾತುಕತೆ ಮಾಡಿ, ಆ ಕೆಲಸವನ್ನು 1.70 ಕೋಟಿಗೆ ಒಪ್ಪಿಸಿದರು! ಆ ಮೂಲಕ 58 ಲಕ್ಷರೂಗಳಷ್ಟು ವೆಚ್ಚ ಕಡಿಮೆಯಾಯಿತು. ವೇದಿಕೆ ನಿರ್ಮಾಣ ವೆಂದರೆ, ಅದರಲ್ಲಿ ಪುಸ್ತಕ ಮಳಿಗೆಗಳು, hassana-sahitya-sammelana-1ಊಟದ ಹಾಲ್ ಗಳು, ಮೀಡಿಯಾ ಸೆಂಟರ್, ಏಳೆಂಟು ಸಾವಿರ ಹಾಸಿಗೆ ಒದಗಿಸುವುದು, 200 ರಷ್ಟು ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುವುದು..ಹೀಗೆ ಸಮ್ಮೇಳನಕ್ಕೆ ಬೇಕಾಗುವ ಎಲ್ಲಾ ತಾತ್ಕಾಲಿಕ ಕಟ್ಟಡಗಳ ನಿರ್ಮಾಣ ಸೇರಿಕೊಳ್ಳುತ್ತದೆ. ಮೂರು ದಿನದ ಸಂಭ್ರಮಕ್ಕಾಗಿ ನೂರಾರು ಕಾರ್ಮಿಕರು 20 ದಿನಗಳಿಗೂ ಹೆಚ್ಚುಕಾಲ ಶ್ರಮಪಟ್ಟು ವೇದಿಕೆ ನಿರ್ಮಿಸಿದ್ದಾರೆ.

ಈ ದುಬಾರಿ ವೆಚ್ಚದ ಅದ್ಧೂರಿತನ ಬೇಕಿತ್ತೆ? ಇದುವರೆಗೆ ನಡೆದ ಯಾವುದೇ ಸಮ್ಮೇಳನದಲ್ಲಿ ವೇದಿಕೆಗಾಗಿ ಈ ಪಾಟಿ ಖರ್ಚಾಗಿರಲಿಲ್ಲ. ಹಿಂದಿನ ವರ್ಷ ಮಡಿಕೇರಿಯಲ್ಲಿ ನಡೆದಾಗ ವೇದಿಕೆ ನಿರ್ಮಾಣಕ್ಕೆ ಆದ ಖರ್ಚು 1.31 ಕೋಟಿ ರೂ. ಅಲ್ಲಿ ಊಟ, ವಸತಿ, ಗೋಷ್ಟಿಗಳು ಎಲ್ಲದರ ಒಟ್ಟು ವೆಚ್ಚ 3.31 ಕೋಟಿ ರೂ. ಆದರೆ ಈ ಬಾರಿ ಒಟ್ಟು ವೆಚ್ಚ ಹಿಂದಿನದ್ದಕ್ಕಿಂತ ಎರಡು ಪಟ್ಟು ಹೆಚ್ಚಾದರೂ ಅಚ್ಚರಿ ಇಲ್ಲ. ಸಾಹಿತ್ಯ ಪರಿಷತ್ ಲೆಕ್ಕ ಹಾಕಿರುವಂತೆ ಒಟ್ಟು ಅಗತ್ಯವಾದ ಹಣ 4.8 ಕೋಟಿ ರೂ. ಅದರಲ್ಲಿ ಶ್ರವಣಬೆಳಗೊಳ ಮಠ ವಹಿಸಿಕೊಂಡಿರುವ ಊಟದ ಖರ್ಚು ಸೇರಿಕೊಂಡಿಲ್ಲ.

ಸಮ್ಮೇಳನವನ್ನು ‘ಯಶಸ್ವಿ’ ಎಂದು ಘೋಷಿಸುವವರ ಮನಸ್ಸಿನಲ್ಲಿ ಈ ಪಾಟಿ ದುಡ್ಡು ಮಹತ್ವವಾದ ಕಾರ್ಯವೊಂದಕ್ಕೆ ಖರ್ಚಾಗಿದೆ ಎಂಬ ಭಾವನೆ ಇದ್ದಂತಿದೆ. ಊಟ ಮಾಡಿದವರು ವ್ಯವಸ್ಥೆ ಚೆನ್ನಾಗಿತ್ತು ಎಂದಿದ್ದಾರೆ. ಉಳಿದುಕೊಂಡವರು ವಸತಿ ವ್ಯವಸ್ಥೆ ಪರವಾಗಿಲ್ಲ ಎಂದರು. ಹಲವರು ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆಸೆಳೆದವು ಎಂದು ಹೇಳುವವರು ಅನೇಕರಿದ್ದಾರೆ. ಹಾಗಾದರೆ ಸಮ್ಮೇಳನ ನಡೆಸುವುದು ಈ ಕಾರಣಗಳಿಗಾಗಿ ಮಾತ್ರವಾ..?

One thought on “ಸಾಹಿತ್ಯ ಸಮ್ಮೇಳನ = ಊಟ + ವಸತಿ!!

  1. Ananda Prasad

    ಸಾಹಿತ್ಯ ಎಂಬುದು ಹೊಟ್ಟೆತುಂಬಿದವರ ಹಾಗೂ ಉಳ್ಳವರ ಮನೋರಂಜನೆಯ ಸಾಧನವಾದಾಗ ಸಮ್ಮೇಳನದ ಯಶಸ್ಸು ಅಂದರೆ ಊಟ+ವಸತಿ+ಮನೋರಂಜನೆ ಎಂಬುದು ನಿಜ. ಸಾಹಿತ್ಯ ಎಂಬುದು ಇಂದು ಮನುಷ್ಯನಲ್ಲಿ ಸೂಕ್ಷ್ಮ ಸಂವೇದನೆಗಳನ್ನು ಬೆಳೆಸುವಲ್ಲಿ ವಿಫಲವಾಗಿ ಸಮಯ ಕಳೆಯುವ ಮಧ್ಯಮವರ್ಗದವರ ಮನೋರಂಜನೆಯ ಸಾಧವಾಗಿರುವಾಗ ಸಾಹಿತ್ಯ ಹಾಗೂ ಸಾಹಿತ್ಯ ಸಮ್ಮೇಳನಗಳಿಂದ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೆ ಶ್ರೀಮಂತ ವರ್ಗದಲ್ಲಿದ್ದ ಮಾತ್ರ ಕಂಡುಬರುತ್ತಿದ್ದ ಅಹಂಕಾರ, ಪ್ರತಿಷ್ಠೆ, ಬಡವರ ಬಗೆಗಿನ ತಾತ್ಸಾರ ಇಂದು ಮಧ್ಯಮವರ್ಗ ಹಾಗೂ ಮೇಲ್ಮಧ್ಯಮ ವರ್ಗದ ಜನರಲ್ಲೂ ಇಂದು ಕಂಡುಬರುತ್ತಿದ್ದು ಸಾಹಿತ್ಯ ಇಂಥ ಹೀನ ಮನೋಭಾವವನ್ನು ಕಡಿಮೆ ಮಾಡುವಲ್ಲಿ ವಿಫಲವಾಗುತ್ತಿದೆ. ಮನುಷ್ಯನ ಸಂವೇದನೆಗಳನ್ನೇ ಕೊಲ್ಲುತ್ತಿರುವ ಹಣದ ಕಾರುಬಾರನ್ನು ತಡೆದು ಮಾನವನ ಮನೋವಿಕಾಸ ಮಾಡುವಲ್ಲಿ ಸಾಹಿತ್ಯ ವಿಫಲವಾಗುತ್ತಿದೆ. ಇಂಥ ಸಂದರ್ಭದಲ್ಲಿ ಯಾರಿಗೂ ಆತ್ಮಾವಲೋಕನ ಬೇಕಾಗಿಲ್ಲ ಎಂಬಷ್ಟು ಧನಮದ ಸಮಾಜದಲ್ಲಿ ಆವರಿಸಿದೆ.

    Reply

Leave a Reply to Ananda Prasad Cancel reply

Your email address will not be published. Required fields are marked *