ಶಿಕ್ಷಣ ಕ್ಷೇತ್ರದ ಪಂಕ್ತಿಭೇದ ವಿರುದ್ಧದ ಕೂಗು: ಸಮ್ಮೇಳನದ ಯಶಸ್ಸು

– ಸದಾನಂದ ಲಕ್ಷ್ಮೀಪುರ

ಸಮ್ಮೇಳನದ ಸಂಘಟನೆ ಬಗ್ಗೆ, ಖರ್ಚಾದ ಹಣದ ಬಗ್ಗೆ ಏನೇ ಅಸಮಾಧಾನಗಳಿದ್ದರೂ, ಒಂದಂತೂ ಸತ್ಯ. ಇತ್ತೀಚಿನ ವರ್ಷಗಳಲ್ಲಿ ನಡೆದ ಅನೇಕ ಸಮ್ಮೇಳನಗಳ ಪೈಕಿ ಕನ್ನಡ ಪ್ರಜ್ಞೆಗೆ ಕಿಡಿಹೊತ್ತಿಸುವಂತಹ ಕೆಲಸ ಆಗಿದ್ದು ಇಲ್ಲಿಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಕೆಲ ಬೆಳವಣಿಗೆಗಳಿಂದ ಮಾತ್ರ. ಅದು ಆರಂಭವಾಗಿದ್ದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದೇವನೂರು ಮಹದೇವ ಅವರನ್ನು ಅಧ್ಯಕ್ಷತೆಗೆ ಒಪ್ಪಿಸಲು ಮಾಡಿದ ಪ್ರಯತ್ನದಿಂದ.

ಈ ಬಗ್ಗೆ ಕೇಂದ್ರ deva ಕನ್ನಡ ಸಾಹಿತ್ಯ ಪರಿಷತ್ ಗೆ ಅಷ್ಟಾಗಿ ಉತ್ಸಾಹ ಇದ್ದಂತಿರಲಿಲ್ಲ. ಕಾರಣ, ಈ ಮೊದಲು ಅನೇಕ ಬಾರಿ ಪರಿಷತ್ ಮಹದೇವ ಅವರನ್ನು ಈ ಬಗ್ಗೆ ಸಂಪರ್ಕಿಸಿದ್ದಾಗ ಅವರು ಉತ್ಸಾಹ ತೋರಿಸಿರಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸವೂ ಅವರಿಗಿರಲಿಲ್ಲ. “ಆದರೂ..ನೀವು ಒಮ್ಮೆ ಪ್ರಯತ್ನ ಮಾಡುವುದಾದರೆ, ಮಾಡಿ. ನಮ್ಮ ಅಭ್ಯಂತರವಿಲ್ಲ. ಒಪ್ಪಿದರೆ, ನಮಗೂ ಸಂತೋಷ’ ಎಂಬ ಸಂದೇಶ ಜಿಲ್ಲಾ ಸಾಹಿತ್ಯ ಪರಿಷತ್ ಗೆ ರವಾನೆಯಾಗಿತ್ತು. ಅದರಂತೆ, ಜಿಲ್ಲಾ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ತಮ್ಮ ಗೆಳೆಯರೊಂದಿಗೆ ದೇವನೂರು ಅವರನ್ನು ಭೇಟಿಯಾದರು. ಅದು ಅವರು ಹೇಳುವಂತೆ ಅನೌಪಚಾರಿಕ ಭೇಟಿ.

ಮಹದೇವ ಅವರು ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಕನ್ನಡ ಶಾಲೆಗಳು, ಕನ್ನಡ ಕಲಿಕೆ ಹಾಗೂ ಸಮಾನ ಶಿಕ್ಷಣದ ಕೂಗಿಗೆ ಒದಗಿರುವ ದು:ಸ್ಥಿತಿಗೆ ಈ ಸಂದರ್ಭದಲ್ಲಿ ಆಗಬೇಕಿರುವ ಕೆಲಸ ಬೇಕಾದಷ್ಟಿದೆ ಎಂದರು. ಈ ಉದ್ದೇಶಗಳಿಗಾಗಿ ಒಂದು ಪರ್ಯಾಯ ಸಮ್ಮೇಳನ ನಡೆಯುವುದಾದರೆ, ಬರಲು ಸಿದ್ಧ ಎಂದರು. ಹಾಗೂ ಹಿಂದೆ ಇಂತಹದೇ ಕಾರಣಕ್ಕೆ ಪರಿಷತ್ ನೀಡುವ ನೃಪತುಂಗ ಪ್ರಶಸ್ತಿಯನ್ನು ಅವರು ನಿರಾಕರಿಸಿದ್ದರು. ಆದರೆ ಈ ಭೇಟಿಯ ಸುದ್ದಿ ರಹಸ್ಯವಾಗಿ ಉಳಿಯಲಿಲ್ಲ. ಸುದ್ದಿ ಮಾಧ್ಯಮಗಳಲ್ಲಿ ವರದಿಯಾಯಿತು. ಪರಿಷತ್ ಗೆ ಒಂದಿಷ್ಟು ಮುಜುಗರವಾದರೂ, ನಾಡಿನಾದ್ಯಂತ ಮಹದೇವ ಅವರು ಎತ್ತಿರುವ ಪ್ರಶ್ನೆಗಳು ಚರ್ಚೆಯಾದವು. ಹಲವು ಲೇಖನಗಳು ಪ್ರಕಟವಾದವು. ದೇವನೂರು ಅವರು ಇದೇ ವಿಚಾರವಾಗಿ ಸಾಹಿತ್ಯ ಪರಿಷತ್ ಗೆ ಒಂದು ವಿವರವಾದ ಪತ್ರ ಬರೆದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಆ ಪತ್ರವೂ (ವರ್ತಮಾನವೂ ಸೇರಿದಂತೆ) ಹಲವೆಡೆ ಪ್ರಕಟವಾಯಿತು.

ಈ ಎಲ್ಲಾ ಬೆಳವಣಿಗೆಗಳು ಸಾಗುತ್ತಿರುವ ದಿಕ್ಕು ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿ ಭೇದದ ವಿರುದ್ಧದ ಸಮರಕ್ಕೆ. siddalingaiahಈ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುವುದು ಸಮಾನ ಶಿಕ್ಷಣ ಜಾರಿಯಾದಾಗ. ‘ಮುಖ್ಯಮಂತ್ರಿಯ ಮಗ, ಮಂತ್ರಿಯ ಮಗ, ಜಮೀನ್ದಾರನ ಮಗ, ಕೂಲಿಕಾರ್ಮಿಕನ ಮಗ, ಪೌರಕಾರ್ಮಿಕನ ಮಗ..ಒಂದೆಡೆ ಕೂತು ಶಿಕ್ಷಣ ಪಡೆಯುವಂತಾಗಬೇಕು..” – ಹೀಗೆಂದು ಸಮ್ಮೇಳನದ ಅಧ್ಯಕ್ಷಗಾದಿಯಿಂದ ಸಾರಿದವರು ಕವಿ ಸಿದ್ದಲಿಂಗಯ್ಯ.

ಕರ್ನಾಟಕ ಜನಶಕ್ತಿ ಹಾಗೂ ಸಮಾನ ಶಿಕ್ಷಣಕ್ಕಾಗಿ ಆಂದೋಲನದಲ್ಲಿ ತೊಡಗಿಸಿಕೊಂಡ karnataka-janashakti-protests-at-sammelanaಪ್ರಗತಿಪರ ಹೋರಾಟಕಾರರು ಸಮ್ಮೇಳನವನ್ನು ತಮ್ಮ ವಿಚಾರಗಳಿಗೆ ವೇದಿಕೆಯನ್ನಾಗಿ ಯಶಸ್ವಿಯಾಗಿ ಬಳಸಿಕೊಂಡರು. ಧಾರವಾಡದ ಜನಸಾಹಿತ್ಯ ಬಳಗದವರು ಇದೇ ಉದ್ದೇಶದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಕರಪತ್ರ ಹಂಚಿದರು. ಸಮ್ಮೇಳನದ ಕೊನೆ ದಿನವಂತೂ ಕೆ.ಆರ್.ಪೇಟೆಯ ಸರಕಾರಿ ಶಾಲೆಯೊಂದರ ಮಕ್ಕಳು ಸ್ಥಳಕ್ಕೆ ಬಂದು ಸಮಾನ ಶಿಕ್ಷಣಕ್ಕಾಗಿ ಘೋಷಣೆ ಕೂಗಿದರು. ಪುಂಡಲೀಕ ಹಾಲಂಬಿಯವರು ಈ ಹೋರಾಟದಲ್ಲಿ ತಮ್ಮದೂ ಪಾತ್ರವಿದೆ ಎಂದು ಅವರೂ ಮಕ್ಕಳ ಜೊತೆ ಸೇರಿ ಘೋಷಣೆ ಹಾಕಿದರು. ಸಂವಿಧಾನ ಮತ್ತು ರಾಜ್ಯಭಾಷೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರೊ.ನಿರಂಜನಾರಾಧ್ಯ ಮತ್ತಿತರರು ತಮ್ಮ ಮಾತುಗಳಲ್ಲಿ ಸಮಾನ ಶಿಕ್ಷಣದ ಅಗತ್ಯತೆಯನ್ನು ಹಾಜರಿದ್ದ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಸರಕಾರ ಅಂದಾಜು ಮಾಡಿತ್ತು ಎನಿಸುತ್ತದೆ. ಭಾಷೆ ಶಿಕ್ಷಣದ ವಿಚಾರವಾಗಿ ಏನನ್ನಾದರೂ ಮಾಡಬೇಕಾದ ಒತ್ತಡಕ್ಕೆ ಬಿದ್ದ ರಾಜ್ಯ ಸರಕಾರ ತನ್ನ ಇತಿಮಿತಿಯೊಳಗೆ ಕಾಯ್ದೆಗೆ ತಿದ್ದುಪಡಿ ತಂದು, ಮಾತೃಭಾಷೆಯ ವ್ಯಾಖ್ಯಾನವನ್ನು ಬದಲಿಸಲು ತೀರ್ಮಾನಿಸಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿಭೇದದ ವಿಚಾರವಾಗಿ ಇದುವರೆಗೆ ಗಟ್ಟಿಯಾದ ದನಿ ಸಮ್ಮೇಳನವೊಂದ ಹಿನ್ನೆಲೆಯಲ್ಲಿ ಮೂಡಿಬಂದಿದ್ದು ಇದೇ ಮೊದಲಿರಬೇಕು. ಆ ಕಾರಣಕ್ಕೆ ಇದು ಯಶಸ್ವಿ. ಆದರೆ ಈ ಯಶಸ್ಸಿಗಾಗಿ, ಏಳೆಂಟು ಕೋಟಿ ಖರ್ಚು ಮಾಡುವ ಅಗತ್ಯವಿರಲಿಲ್ಲ.

Leave a Reply

Your email address will not be published. Required fields are marked *