Daily Archives: February 9, 2015

ಸಮ್ಮೇಳನ – ಭೈರಪ್ಪರನ್ನು ಸಭೆಯಲ್ಲಿ ಟೀಕೆ ಮಾಡುತ್ತಿದ್ದರೆ, ಜನ ಚಪ್ಪಾಳೆ ಹೊಡೆದರು!

– ಸದಾನಂದ ಲಕ್ಷ್ಮೀಪುರ

“ಈ ಭೂಮಿಯಲ್ಲಿ ಶೇ.50 ರಷ್ಟಿರುವ ಮಹಿಳೆಯರನ್ನು ತನ್ನಂತೆಯೇ ಮನುಷ್ಯರು ಎಂದು ಕಾಣದ ಭೈರಪ್ಪ, ಬರಹಗಾರ ಇರಲಿ, ಒಬ್ಬ ನಾಗರಿಕ ಎಂದು ನನಗನ್ನಿಸುವುದಿಲ್ಲ.” – ಡಾ.ಎಂ.ಎಸ್.ಆಶಾದೇವಿ.

“ಭೈರಪ್ಪನ ಕಾದಂಬರಿಗಳಲ್ಲಿ ಕೆಳ ಸಮುದಾಯಗಳ ಹೆಣ್ಣು ಮಕ್ಕಳು ನಡತೆಗೆಟ್ಟವರಂತೆ ಚಿತ್ರತರಾಗುತ್ತಾರೆ. ಮೇಲ್ವರ್ಗದ ಹೆಣ್ಣು ಮಕ್ಕಳ ವಿಚಾರದಲ್ಲಿ ಹಾಗಿಲ್ಲ.”- ಕೆ. ಷರೀಫಾ.

“ಹೆಣ್ಣು ಮಕ್ಕಳು ಅತ್ಯಾಚಾರ ಆಗಲಿ ಎಂದು ಬಯಸುತ್ತಾರೆ..ಎಂದು ಭೈರಪ್ಪನ ಮನಸ್ಥಿತಿ ಎಂತಹದು? ಎಲ್ಲಾ ಮಹಿಳೆಯರು ಆತನ ವಿರುದ್ಧ ಕೂಗು ಹಾಕಬೇಕಿದೆ.” – ಕೆ.ಎಸ್. ವಿಮಲಾ.

“ವೃತ್ತಿಯಲ್ಲಿ ಇಂಜಿನಿಯರ್ ಆದ ವ್ಯಕ್ತಿ, ದಿನವಿಡೀ ತನ್ನ ಕೆಲಸದಲ್ಲಿ ಮುಳುಗಿದ್ದಾಗ kannada-sammelana-hassan-kavigoshtiತನ್ನ ಪತ್ನಿಯ ಆಕಾಂಕ್ಷೆಗಳಿಗೆ ಗಮನ ಕೊಡಲು ಆಗಿರುವುದಿಲ್ಲ. ಆಗ ಆ ಪತ್ನಿ ಮತ್ತೊಬ್ಬರ ಸನಿಹ ಬಯಸುತ್ತಾಳೆ. ಇದು ಸಹಜ. ವೃತ್ತಿಯಲ್ಲಿ ತಾನೂ ಒಬ್ಬ ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದು ಅರ್ಥವಾಗುತ್ತದೆ. ಆದರೆ ಭೈರಪ್ಪನಿಗೆ ಇದು ವಿಕೃತಿಯಾಗಿ ಕಾಣುತ್ತದೆ. ಈ ದೇಶಕ್ಕೆ ಅಂಟಿದ ಶಾಪ ಬ್ರಾಹ್ಮಣ್ಯ. ಅದನ್ನು ಪ್ರತಿಪಾದಿಸುವ ಭೈರಪ್ಪನಿಗೆ ರಾಷ್ಟ್ರೀಯ ಪ್ರಾಧ್ಯಾಪಕ ಪುರಸ್ಕಾರ ದಕ್ಕಿದೆ.” – ಗೌರಿ ಲಂಕೇಶ್.

ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನಕ್ಕೆ ಮಹತ್ವ ತಂದುಕೊಟ್ಟವರು ಈ ನಾಲ್ವರು. ತನ್ನ ಬರಹಗಳ ಮೂಲಕ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ ಹಾಗೂ ಮಹಿಳೆಯರನ್ನು ತುಚ್ಚವಾಗಿ ಕಾಣುವ ಮನೋಭಾವದ ಕಾರಣಗಳಿಗಾಗಿ ಜನಪ್ರಿಯರಾಗಿರುವ ಭೈರಪ್ಪನವರನ್ನು ಇವರು ಟೀಕಿಸುತ್ತಿದ್ದರೆ, ಸಭೆಯಲ್ಲಿ ಹಾಜರಿದ್ದವರು ಚಪ್ಪಾಳೆಯಿಂದ ಸ್ವಾಗತಿಸಿದರು. ಈ ಕಾರ್ಯಕ್ರಮ ನಡೆದದ್ದು, bhyrappaಭೈರಪ್ಪನವರ ತವರು ತಾಲೂಕಿನಲ್ಲಿ ಎನ್ನುವುದು ವಿಶೇಷ.

ಭೈರಪ್ಪನವರನ್ನು ಹೊಗಳಿ, ತಲೆ ಮೇಲೆ ಹೊತ್ತು ತಿರುಗುವ ಅನೇಕರು ಅವರ ಪರವಾಗಿ ಹೇಳುವ ಮಾತೆಂದರೆ, ಅವರು ಭಾರೀ ಬೇಡಿಕೆಯ ಲೇಖಕ. ಬೇರೆ ಬೇರೆ ಭಾಷೆಗಳಿಗೆ ಅವರ ಕೃತಿಗಳು ಅನುವಾದವಾಗಿವೆ. ಮಹಾರಾಷ್ಟ್ರದಲ್ಲೂ ಅವರ ಅಭಿಮಾನಿಗಳಿದ್ದಾರೆ..ಎಂದೆಲ್ಲಾ ಮಾತನಾಡುತ್ತಾರೆ. ಅವರು ಬರೆದ ಕಾದಂಬರಿಗಳಲ್ಲಿ ಒಂದೆರಡು ಮಹತ್ವದ್ದು ಎಂದು ವಿಮರ್ಶಾ ವಲಯ ಒಪ್ಪಿಕೊಂಡರೂ, ಅವರ ಒಟ್ಟಾರೆ ಕೃತಿಗಳು ಧ್ವನಿಸುವ ಸಿದ್ಧಾಂತದ ಕಾರಣಕ್ಕೆ ಅವರು ಜೀವಪರ ಚಿಂತಕರ ಟೀಕೆಗೆ ಗುರಿಯಾಗಿದ್ದಾರೆ. ಭೈರಪ್ಪ ಜನಪ್ರಿಯ ಇರಬಹುದು, ಜನಪರ ಅಲ್ಲ. ಇತ್ತೀಚೆಗೆ ಪ್ರಕಟವಾದ ’ಆವರಣ’, ’ಕವಲು’, ’ಯಾನ’ ಕೃತಿಗಳು ನಿಜವಾದ ಭೈರಪ್ಪನವರನ್ನು ಇನ್ನಷ್ಟು ಸ್ಪಷ್ಟವಾಗಿ ಅನಾವರಣಗೊಳಿಸಿದವು. ಇದುವೆರೆಗೆ ಅವರನ್ನು ಮೆಚ್ಚಿಕೊಂಡಿದ್ದ ಅನೇಕ ಓದುಗರು, ಮುಖ್ಯವಾಗಿ ಮಹಿಳೆಯರು, bhyrappa-Kavalu’ಕವಲು’ ಓದಿ ಕಂಗಾಲಾದರು. ’ಆವರಣ’ವಂತೂ ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ಒಡೆಯುವ ಕೃತಿ. ಹೀಗಿರುವಾಗ ಅವರು ಜನಪರ ಹೇಗಾದಾರು?

ಸಮ್ಮೇಳನದಲ್ಲಿ ಭೈರಪ್ಪ ವಿರುದ್ಧ ಮಾತನಾಡಿದ ಲೇಖಕಿಯರ ವಿರುದ್ಧ ಹಲವರು ಅಲ್ಲಲ್ಲಿ ಕೆಂಡಕಾರುತ್ತಿದ್ದಾರೆ. ಅವರಲ್ಲಿ ಕೆಲ ಬೃಹಸ್ಪತಿಗಳು, ಸಮ್ಮೇಳನದಲ್ಲಿ ಅವರಿಗೆ ಕೊಟ್ಟ ವಿಚಾರ ಬೇರೆ, ಆದರೂ ಅವರು ಸುಮ್ಮನೇ ತಮ್ಮ ಬಾಯಿ ಚಪಲಕ್ಕಾಗಿ ಭೈರಪ್ಪನನ್ನು ಎಳೆತಂದು ಟೀಕೆ ಮಾಡಿದರು ಎಂದು ಬರೆಯುತ್ತಿದ್ದಾರೆ. ಸಮ್ಮೇಳನದಲ್ಲಿ ಸಾಹಿತ್ಯ ಕೃತಿ, ಕೃತಿಕಾರನ ಧೋರಣೆಗಳನ್ನು ಮಾತನಾಡದಿದ್ದರೆ, ಇನ್ನೆಲ್ಲಿ ಮಾತನಾಡಬೇಕು? ರೈತರ, ದಮನಿತರ ಪರವಾಗಿ ಮಾತನಾಡಿ ಎಂದು ಜನ ಸಂಸತ್ತಿಗೆ ಕಳುಹಿಸಿದರೆ, ರೈತ ಸಮುದಾಯಕ್ಕೆ ಗಂಡಾಂತರ ಸೃಷ್ಟಿಸಲಿರುವ ತಿದ್ದುಪಡಿಗಳ ಬಗ್ಗೆ ಮಾತನಾಡದೆ, ಭೈರಪ್ಪನವರ ಸಮರ್ಥನೆಗೆ ಕೆಟ್ಟಾ ಕೊಳಕು ಭಾಷೆಯಲ್ಲಿ ಮಾತನಾಡುವರರಿಗೆ ಏನು ಹೇಳಬೇಕು?