ದಿಲ್ಲಿ ಫಲಿತಾಂಶ: ಎಎಪಿ ಭರ್ಜರಿ ವಿಜಯದ ಹಿಂದಿರುವ 10 ಪ್ರಮುಖ ಕಾರಣಗಳು!

ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ]

ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಸಾಮಾನ್ಯ ಜನರ ಒತ್ತಾಸೆ ಏನಿತ್ತು ಎಂಬುದು ಗೊತ್ತಾಗಿದೆ. ಎಲ್ಲಾ ಪಕ್ಷಗಳ ಆಂತರಿಕ ಸಮೀಕ್ಷೆಗಳು, ಹೊರಗಿನ ಸರ್ವೆಗಳು ಹಾಗೂ ಚುನಾವಣಾ ಪೂರ್ವ ವಿಶ್ಲೇಷಣೆಗಳನ್ನು ತಲೆಕೆಳಗಾಗುವಂತಹ ಫಲಿತಾಂಶವನ್ನು ಮತದಾರರು ನೀಡಿದ್ದಾರೆ. ಇರುವ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ರಲ್ಲಿ ಆಮ್‍ ಆದ್ಮಿ ಪಕ್ಷ ಜಯಗಳಿಸಿದೆ. ಬಿಜೆಪಿ ಮೂರು ಸ್ಥಾನಗಳಿಸಿದೆ. ಪುರಾತನ ಪಕ್ಷ ಕಾಂಗ್ರೆಸ್‍ಗೆ ಖಾತೆ ತೆರೆಯುವ ಅವಕಾಶವನ್ನೂ ನೀಡಿಲ್ಲ. ಖುದ್ದು ಆಮ್‍ ಆದ್ಮಿ ಪಕ್ಷದ ಒಳಗಿರುವವರಿಗೇ ಅಚ್ಚರಿ ಮೂಡಿವಂತಹ ಈ ಫಲಿತಾಂಶದ ಹಿಂದೆ ಇರುವ ಪ್ರಮುಖ ಕಾರಣಗಳನ್ನು ‘ವರ್ತಮಾನ’ ಇಲ್ಲಿ ಪಟ್ಟಿ ಮಾಡುತ್ತಿದೆ. ಈ ಚುನಾವಣೆಯ ಫಲಿತಾಂಶದ ಕುರಿತು ಇನ್ನಷ್ಟು ಆಳಕ್ಕಿಳಿದರೆ ಸಾಕಷ್ಟು ಅಚ್ಚರಿಯ ವಿಚಾರಗಳಿವೆ. ಆದರೆ, ಈ ಭಾಗದಲ್ಲಿ ನಾವು ಆಪ್‍ ವಿಜಯದ ಹಿಂದಿರುವ ಪ್ರಮುಖ ಕಾರಣಗಳನ್ನಷ್ಟೆ ಹುಡುಕಿದ್ದೇವೆ. ಕಳೆದ ಕೆಲವು ದಿನಗಳಿಂದ ದಿಲ್ಲಿಯ ಚುನಾವಣಾ ಕಣದಲ್ಲಿ ಕಂಡು ಬಂದ ಅಂಶಗಳಿವು. ಸಧ್ಯಕ್ಕೆ, ದಿಲ್ಲಿ ಚುನಾವಣೆ ಫಲಿತಾಂಶದ ಕುರಿತು ಅಚ್ಚರಿಗೊಂಡಿರುವವರಿಗೆ, ಹೇಗೀ ಫಲಿತಾಂಶ ಹೊರಬಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಇವು ನೆರವಾಗಬಹುದು ಎಂಬುದು ನಮ್ಮ ಆಶಯ.

 

  1. ಕ್ರೀಯಾಶೀಲ ಸ್ವಯಂ ಸೇವಕರ ಪಡೆ: ದಿಲ್ಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣಗಳ ಪೈಕಿ aap-buzz-team-delhiಮೊದಲನೆಯದು ಅದರ ಸ್ವಯಂ ಸೇವಕರ ಶ್ರಮ ಮತ್ತು ಅವರ ಕ್ರೀಯಾಶೀಲತೆ. ದೇಶದ ನಾನಾ ಭಾಗಗಳಿಂದ ಬಂದ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ವಂಯ ಸೇವಕರ ತಂಡಗಳು ದಿಲ್ಲಿಯ ಬೀದಿ ಬೀದಿ, ಗಲ್ಲಿ ಗಲ್ಲಿಗಳಲ್ಲಿ ನಡೆಸಿದ ಚುನಾವಣಾ ಪ್ರಚಾರ ಪಕ್ಷಕ್ಕೆ ನೆರವಾಯಿತು. ದಿಲ್ಲಿ ತುಂಬ ತೆಲೆಯ ಮೇಲೆ ಪಕ್ಷದ ಟೋಪಿ ಹಾಕಿಕೊಂಡು ಸಾವಿರಾರು ಜನ ಓಡಾಡುತ್ತಿದ್ದರೆ, ಜನ ಮನಸ್ಸಿನ ಮೇಲೆ ಬೀರಿರಬಹುದಾದ ಪರಿಣಾಮ ದೊಡ್ಡದಿತ್ತು.
  2. ವಿನೂತನ ಪ್ರಚಾರ ತಂತ್ರ: ಮತದಾನಕ್ಕೆ ತಿಂಗಳಿದೆ ಎನ್ನುವಾಗಲೇ ವಿನೂತನ ಪ್ರಚಾರಕ್ಕೆ ತಂಡಗಳನ್ನು ರಚಿಸಿತ್ತು ಆಪ್‍. ಅವರನ್ನು ‘ಬಝ್‍ ಸ್ವಯಂ ಸೇವಕರು ಎಂದು ಪಕ್ಷದ ಅಂತರಂಗದಲ್ಲಿ ಗುರುತಿಸಲಾಗುತ್ತಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಇವರು ದಿಲ್ಲಿಯ ಪ್ರಮುಖ ಸ್ಥಳಗಳಲ್ಲಿ ಪಕ್ಷದ ಉದ್ದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಹಿಡಿದು ನಿಂತಿರುತ್ತಿದ್ದರು. ಜನ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೂ ವಿನಮೃತೆಯಿಂದ ಕೈ ಮುಗಿದು ಕಳಿಸುತ್ತಿದ್ದ ಇವರು ಭಾರಿ ಗಮನ ಸೆಳೆದಿದ್ದರು. ಜತೆಗೆ ಪಕ್ಷದ ‘ಪಾಸಿಟಿವ್ ಅಜೆಂಡಾ’ವನ್ನು ದಿಲ್ಲಿ ಜನರಿಗೆ ತಲುಪಿಸಿದ್ದು ಕೂಡ ಪಕ್ಷಕ್ಕೆ ನೆರವಾಯಿತು.
  3. ಮಾತನಾಡು ದಿಲ್ಲಿ ಮಾತನಾಡು: ಇನ್ನು ಆಪ್‍ಗೆ ದಿಲ್ಲಿಯ ಜನರ ನಾಡಿ ಮಿಡಿತವನ್ನು ಅರ್ಥಮಾಡಿಸಿದ್ದು ಪಕ್ಷ ನಡೆಸಿದ ‘ದಿಲ್ಲಿ ಡೈಲಾಗ್‍’ ಎಂಬ ಅಭಿಯಾನ. ನಗರದ ಪ್ರತಿ ಗಲ್ಲಿಗಳಲ್ಲಿ ಸಮಸ್ಯೆಗಳ ಹಾಗೂ ಪರಿಹಾರಗಳ ಕುರಿತು ಸಭೆಗಳನ್ನು ನಡೆಸಲಾಯಿತು. ಅಲ್ಲಿ ಸಿಕ್ಕ ಅಂಶಗಳನ್ನೇ ಮುಂದೆ ಪಕ್ಷ ಪ್ರಣಾಳಿಕೆ ರೂಪದಲ್ಲಿ ಮುಂದಿಟ್ಟಿದ್ದು ಪಕ್ಷದ ಪ್ರಣಾಳಿಕೆ ಜನರಿಗೆ ಹತ್ತಿರಾಗುವಂತೆ ಮಾಡಿತು.
  4. ಸಾಮಾಜಿಕ ಜಾಲತಾಣಗಳಲ್ಲಿ ಉಪಸ್ಥಿತಿ: ಇವತ್ತಿನ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಆಪ್‍ ಸಾಕ್ಷಿಯಾಯಿತು. ಟ್ವಿಟರ್‍, ಫೇಸ್‍ಬುಕ್‍, ಇನ್ಟಾಗ್ರಾಮ್ ಮತ್ತಿತರ ತಾಣಗಳಲ್ಲಿ ತನ್ನನ್ನು ಸಕ್ರಿಯವಾಗಿಟ್ಟುಕೊಂಡಿತು. ಈ ಮೂಲಕ ಇಂಟರ್‍ನೆಟ್‍ ಬಳಸುವ ವರ್ಗದಲ್ಲಿ ತನ್ನ ಅಭಿಪ್ರಾಯವನ್ನು ಮೂಡಿಸುತ್ತ ಬಂತು.AAP manifesto release
  5. ಟಿಕೆಟ್‍ ಹಂಚಿಕೆಯಲ್ಲಿ ಜಾಣತನ: ಆಪ್‍ ಕುರಿತು ಮೊದಲು ಕೇಳಿಬಂದ ಟೀಕೆಗಳಲ್ಲಿ ಟಿಕೆಟ್ ಹಂಚಿಕೆಯೂ ಒಂದಾಗಿತ್ತು. ಆದರೆ, ಪಕ್ಷ ಕೆಲವರಿಗೆ ಟಿಕೆಟ್‍ ನೀಡುವಾಗ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಇದೀಗ ನೆರವಾದಂತೆ ಕಾಣಿಸುತ್ತಿದೆ.
  6. 49 ದಿನಗಳ ವರ್ಚುವಲ್ ಕ್ರಾಂತಿ: ದಿಲ್ಲಿಯ ಸಾಮಾನ್ಯ ವರ್ಗದಲ್ಲಿ ಪಕ್ಷದ ಕುರಿತು ಸದಾಭಿಪ್ರಾಯ ಮೂಡಲು ಕಾರಣ ಕೇಜ್ರಿವಾಲ್‍ ನೇತೃತ್ವದ 49 ದಿನಗಳ ಆಡಳಿತಾವಧಿ. ಈ ಸಮಯದಲ್ಲಿ ವಿದ್ಯುತ್‍ ದರ ಇಳಿಕೆ ಹಾಗೂ ಉಚಿತ ನೀರು ಸರಬರಾಜಿಗೆ ಕ್ರಮ ಕೈಗೊಂಡಿದ್ದು ದಿಲ್ಲಿಯ ಬಹುಸಂಖ್ಯಾತ ಕೆಳವರ್ಗವನ್ನು ಪಕ್ಷಕ್ಕೆ ನಿಷ್ಟರಾಗುವಂತೆ ನೋಡಿಕೊಂಡಿತು.
  7. ಬಿಜೆಪಿಯ ಅವಹೇಳನಕಾರಿ ಪ್ರಚಾರ: ಕೊಂಚ ಅಚ್ಚರಿ ಅನ್ನಿಸಿದರೂ ಇದು ಸತ್ಯ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜನಸಭೆಗಳನ್ನು ನಡೆಸುತ್ತಿದ್ದ ಆಪ್‍ ಕುರಿತು ಕೊನೆಯ ಹಂತದಲ್ಲಿ ವೈಯುಕ್ತಿಕ ಟೀಕೆ ಹಾಗೂ ಅವಹೇಳನಕ್ಕೆ ಬಿಜೆಪಿ ಮುಂದಾಯಿತು. ಆದರೆ ಆಪ್‍ ನಾಯಕತ್ವ ಇವೆಲ್ಲಕ್ಕೂ ವಿನೀತರಾಗಿ ಉತ್ತರ ನೀಡುತ್ತಾ ಹೋದರು. ಸಹಜವಾಗಿಯೇ ಬಿಜೆಪಿಯ ಪ್ರಚಾರ ವೈಖರಿ ದುರಹಂಕಾರದ ನಡತೆಯಂತೆ ಜನರಿಗೆ ಭಾಸವಾಯಿತು. ಇದು ಕೊನೆಯ ಕ್ಷಣದಲ್ಲಿ ಆಪ್‍ ಪರ ಮಧ್ಯಮ ವರ್ಗ ಗಟ್ಟಿಯಾಗಿ ನಿಲ್ಲಲು ನೆರವಾಯಿತು.
  8. ಕಿರಣ್‍ ಬೇಡಿ ಟ್ರಂಪ್‍ ಕಾರ್ಡು: ಆಪ್‍ಗೆ ನೆರವಾದ ಮತ್ತೊಂದು ಪ್ರಮುಖ ಅಂಶ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‍ ಬೇಡಿ. ಬಿಜೆಪಿ ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್‍ ಬೇಡಿಯನ್ನು ಮುಂದಿಟ್ಟಿತು. ಇದು ಬಿಜೆಪಿಯ ದಿಲ್ಲಿ ಕಮಿಟಿಯಲ್ಲಿ ಅಸಮಾಧಾನ ಮೂಡಿಸಿತು. ಅದೇ ವೇಳೆ ಕಿರಣ್‍ ಬೇಡಿ ಪ್ರತಿಕ್ರಿಯೆಗಳು ನಗೆಪಾಟಲಿಗೆ ಈಡಾದವು ಸಹಜವಾಗಿಯೇ ದಿಲ್ಲಿ ಜನರಿಗೆ ಆಪ್‍ ಮುಖ್ಯಮಂತ್ರಿ ಅಭ್ಯರ್ಥಿ ಕೇಜ್ರಿವಾಲ್‍ ಪರ ಅಭಿಪ್ರಾಯ ಇನ್ನಷ್ಟು ಗಟ್ಟಿಯಾಯಿತು.KIRAN_BEDI_on-top
  9. ಸಿದ್ಧತೆಗೆ ಸಿಕ್ಕ ಸಮಯ: ಲೋಕಸಭೆ ಚುನಾವಣೆ ಸಮಯದಲ್ಲೇ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿದ್ದರೆ ಆಪ್‍ ಈ ಪ್ರಮಾಣದ ಜಯ ಗಳಿಸುವುದು ಕಷ್ಟ ಇತ್ತು. ದಿಲ್ಲಿ ವಿಧಾನ ಸಭೆಗೆ ಅಂತಿಮವಾಗಿ ದಿನಾಂಕ ನಿಗಧಿಯಾದ ಸಮಯದಲ್ಲಿ ಆಪ್‍ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ಎದ್ದು ನಿಂತಿತ್ತು. ಇದನ್ನು ನಿರೀಕ್ಷಿಸದಿದ್ದ ಬಿಜೆಪಿ ತುಸು ಹೆಚ್ಚೇ ಭರವಸೆ ಹೊಂದಿತ್ತು.
  10. ಮಾಧ್ಯಮಗಳನ್ನು ನಿಭಾಯಿಸಿದ ಬಗೆ: ಒಂದು ಕಡೆ ಬಿಜೆಪಿ ಅಭ್ಯರ್ಥಿ ಕಿರಣ್‍ ಬೇಡಿ ಮಾಧ್ಯಮಗಳಲ್ಲಿ ನಗೆಪಾಟಲಿಗೆ ಈಡಾಡುತ್ತಿದ್ದರೆ, ಮತ್ತೊಂದಡೆ ಆಪ್‍ನ ನಾಯಕರು ಮಾಧ್ಯಮಗಳ ಎಲ್ಲಾ ಟೀಕೆಗಳಿಗೆ ಉತ್ತರ ರೆಡಿ ಮಾಡಿಟ್ಟುಕೊಂಡಿದ್ದರು. ಕೇಳುವ ಪ್ರತಿ ಪ್ರಶ್ನೆಗೆ ಒಂದೇ ರೀತಿಯ ಉತ್ತರ ಪಕ್ಷದ ಎಲ್ಲಾ ಸ್ಥರಗಳಿಂದ ಬರುವಂತೆ ನೋಡಿಕೊಳ್ಳಲಾಯಿತು. ಹೀಗಾಗಿ, ಬಿಜೆಪಿ ನಡೆಸಿದ ಅಷ್ಟೂ ಅಪಪ್ರಚಾರ ಆಪ್‍ಗೆ ಸಕಾರಾತ್ಮಕವಾಗಿ ಬದಲಾಯಿತು. ಒಂದು ಅರ್ಥದಲ್ಲಿ ಮೊದಲಿನಿಂದ ಕೊನೆಯವರೆಗೂ ಆಪ್‍ ಚುನಾವಣೆಯ ಅಜೆಂಡಾವನ್ನು ಸೆಟ್‍ಮಾಡಿತು ಮತ್ತು ಮಾಧ್ಯಮಗಳು ಸೇರಿದಂತೆ ಎಲ್ಲರೂ ಅದನ್ನು ಫಾಲೋ ಮಾಡುವಂತೆ ನೋಡಿಕೊಂಡಿತು.

5 thoughts on “ದಿಲ್ಲಿ ಫಲಿತಾಂಶ: ಎಎಪಿ ಭರ್ಜರಿ ವಿಜಯದ ಹಿಂದಿರುವ 10 ಪ್ರಮುಖ ಕಾರಣಗಳು!

  1. ಮಹೇಶ

    ಇಲ್ಲಿ ಬಿಜೆಪಿಯ ವೋಟ್ ಶೇರ್ ಹೆಚ್ಚು ಕಡಿಮೆ ಇದ್ಧಷ್ಟೇ ಇದೆ, ಕೇವಲ 1 ವರ್ಷಗಳ ಹಿಂದೆ ಹದಿನೈದು ವರ್ಷಗಳ ದಿಲ್ಲಿಯನ್ನು ಆಳಿದ ಕಾಂಗ್ರೆಸ್ ಪಕ್ಷವನ್ನು ಆಪ್ ಪಕ್ಷ ನಿರ್ನಾಮ ಮಾಡಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ ನ ವೋಟ್ ಪರ್ಸಂಟೇಜ್ 8 ಪ್ರತಿಶತಕ್ಕೆ ಕುಸಿದಿದೆ. ಕಾಂಗ್ರೆಸ್ ಈ ಪ್ರಮಾಣದಲ್ಲಿ ನಿರ್ನಾಮವಾಗಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಸೂಚನೆಯಲ್ಲ.
    ಕಾಂಗ್ರೆಸ್ ಬಿಟ್ಟು ಈ ಎಲ್ಲಾ ಬೇರೆ ಪಕ್ಷಗಳು ಎಲ್ಲಾ ವರ್ಗಗಳನ್ನು ಒಟ್ಟುಗೂಡಿಸಿಕೊಂಡು, ಸರಿದೂಗಿಸಿಕೊಂಡು ಆಡಳಿತ ಮಾಡುತ್ತಾರೆ ಎಂಬ ನಂಬಿಕೆ ಅಷ್ಟಾಗಿ ಇಲ್ಲ. ಕಾದು ನೋಡಬೇಕಾಗಿದೆ. ದೇಶದಲ್ಲಿ ಅರಾಜಕತೆ , ಅಶಾಂತಿ ಮೂಡಿಸದೇ ಹೋದರೆ ಸಾಕು. ದೇಶದ ಸಮಗ್ರತೆಯ ದೃಷ್ಟಿಯಿಂದ ಮೂಲ ಕಾಂಗ್ರೆಸಿಗರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.

    Reply
  2. Ananda Prasad

    ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ – ನನ್ನ ಅನಿಸಿಕೆ ಈ ರೀತಿ ಇದೆ. ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲ್ಲುವುದು ಖಚಿತವಿತ್ತು. ಕಳೆದ ವರ್ಷ ಲೋಕಸಭಾ ಚುನಾವಣೆಯ ಜೊತೆ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಸಿದ್ದರೂ ಆಪ್ ಪಕ್ಷವೇ ಗೆಲ್ಲುತ್ತಿತ್ತು. ಕಾರಣ ಏನೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲೆ ಆಪ್ ಪರವಾಗಿ ಇತ್ತು ಆದರೆ ಚುನಾವಣೆಗೆ ಮೊದಲು ನಡೆದ ವಿರೋಧಿ ಪಕ್ಷಗಳ ಅಪಪ್ರಚಾರ, ಮಾಧ್ಯಮಗಳ ಅಪಪ್ರಚಾರ/ಅಸಹಕಾರ ಹಾಗೂ ಅಣ್ಣಾ ಹಜಾರೆಯವರ ಹಾಗೂ ಕೆಲವು ಸಂಗಡಿಗ ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ನಿಲುವುಗಳು ಕೊನೆಯ ಕ್ಷಣದಲ್ಲಿ ಆಪ್ ಪಕ್ಷದ ವಿರೋಧವಾಗಿ ಕೆಲಸ ಮಾಡಿದ ಕಾರಣ ಅತಂತ್ರ ವಿಧಾನಸಭೆ ಸೃಷ್ಟಿಯಾಯಿತು. ಆಪ್ ಪರವಾಗಿ ಅಲೆ ಇರುವ ಕಾರಣವೇ ದೆಹಲಿಯಲ್ಲಿ ವಿಧಾನಸಭೆ ವಿಸರ್ಜಿಸಿ ಹೊಸ ಚುನಾವಣೆ ನಡೆಸಲು ಕಾಂಗ್ರೆಸ್ ಹಾಗೂ ಬಿಜೆಪಿ ಹಿಂಜರಿದವು. ಹೀಗಾಗಿ ದೆಹಲಿ ವಿಧಾನಸಭೆ ಚುನಾವಣೆಯ ಖರ್ಚಿನ ಹೆಚ್ಚುವರಿ ಹೊರೆಯನ್ನು ಜನತೆಯ ಮೇಲೆ ಹೊರಿಸಿದ್ದು ಕಾಂಗ್ರೆಸ್ ಪಕ್ಷ. ಇದನ್ನು ಲೋಕಸಭಾ ಚುನಾವಣೆಯ ಜೊತೆ ನಡೆಸಿದ್ದರೆ ಹೆಚ್ಚಿನ ಖರ್ಚು ಉಳಿಯುತ್ತಿತ್ತು. ಕೇಂದ್ರದಲ್ಲಿ ಹೊಸತಾಗಿ ಬಂದ ಬಿಜೆಪಿ ಕೂಡ ಶೀಘ್ರವಾಗಿ ದೆಹಲಿ ವಿಧಾನಸಭೆ ಚುನಾವಣೆ ನಡೆಸದೆ ಆಪ್ ಪಕ್ಷದ ಅಲೆ ಕಾಲಕ್ರಮೇಣ ತಣ್ಣಗಾಗಲಿ ಎಂದು ಕಾಯುತ್ತಾ ಕೂತಿತು ಮತ್ತು ಅದರ ನಡುವೆ ಅನೈತಿಕ ಹಾದಿಯಿಂದ ಅಧಿಕಾರಕ್ಕೇರುವ ಪ್ರಯತ್ನವನ್ನೂ ನಡೆಸಿತು. ಇದು ಬಿಜೆಪಿಯ ಬಗ್ಗೆಯೂ ಜನ ಭ್ರಮನಿರಸನಗೊಳ್ಳುವಂತೆ ಮಾಡಿತು. ದೆಹಲಿಗೆ ಕಳೆದ ಒಂದು ವರ್ಷದಿಂದ ಚುನಾಯಿತ ಸರಕಾರ ಇಲ್ಲದಂತೆ ಮಾಡಿದ್ದು ಆಪ್ ಪಕ್ಷವಲ್ಲ, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಇದಕ್ಕೆ ಹೆಗಲು ಕೊಟ್ಟಿವೆ. ಇದರ ಪರಿಣಾಮ ಜನರ ಸಿಟ್ಟು ಯಾವ ರೀತಿ ಇದೆ ಎಂಬುದು ಈಗಿನ ಚುನಾವಣೆಯಲ್ಲಿ ವ್ಯಕ್ತವಾಗಿದೆ.

    ಈ ಫಲಿತಾಂಶ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಾಭಿಪ್ರಾಯ ಅಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದು ಒಂದು ರೀತಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧದ ಜನರ ಅಸಮಾಧಾನದ ಅಭಿವ್ಯಕ್ತಿಯೂ ಹೌದು ಏಕೆಂದರೆ ಕಳೆದ ಚುನಾವಣೆಯಲ್ಲಿ ೩೧ ಸೇತು ಗಳಿಸಿದ್ದ ಬಿಜೆಪಿಯನ್ನು ಕೇವಲ ೩ ಸೀಟಿಗೆ ಜನ ತಂದು ನಿಲ್ಲಿಸಿದ್ದಾರೆ. ಆಪ್ ಪಕ್ಷಕ್ಕೆ ಸುಗಮ ಆಡಳಿತ ನಡೆಸಲು ೪೮ ಸೀಟುಗಳನ್ನು (ಮೂರನೇ ಎರಡು ಬಹುಮತ) ಕೊಟ್ಟಿದ್ದರೆ ಸಾಕಿತ್ತು ಆದರೆ ಜನ ಅದನ್ನೂ ಮೀರಿ ಹೆಚ್ಚುವರಿಯಾಗಿ ೧೯ ಸೀಟುಗಳನ್ನು ನೀಡಿದ್ದಾರೆ. ಹೀಗೆ ಜನ ವರ್ತಿಸಬೇಕಾದರೆ ಜನರಿಗೆ ಅಧಿಕಾರದಲ್ಲಿರುವ ಪಕ್ಷದ ಬಗ್ಗೆ ತೀವ್ರ ಅಸಮಾಧಾನ ಇರಬೇಕು, ಇಲ್ಲದೆ ಹೋದ ಪಕ್ಷದಲ್ಲಿ ಇಂಥ ಜನಾಭಿಪ್ರಾಯ ವ್ಯಕ್ತವಾಗುವುದಿಲ್ಲ. ಮೋದಿ ನೇತೃತ್ವದ ಬಿಜೆಪಿ ಅಭಿವೃದ್ಧಿ ಹಾಗೂ ಒಳ್ಳೆಯ ದಿನಗಳ ಆಮಿಷ ತೋರಿಸಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತು ಆದರೆ ಮೋದಿ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳು ಕಳೆದರೂ ಯಾವುದೇ ಒಳ್ಳೆಯ ದಿನಗಳ ಸೂಚನೆ ದೇಶದ ಜನಸಾಮಾನ್ಯರಿಗೆ ಸಿಕ್ಕಿಲ್ಲ ಇದರ ಬದಲು ಕೇಸರಿ ಪಡೆಯ ಹಿಡಿತದಲ್ಲಿ ಮೋದಿ ಸರ್ಕಾರ ಸಿಕ್ಕಿಹಾಕಿಕೊಂಡಿತು. ಒಂದೆಡೆ ಮೋದಿಯವರಿಗೆ ಚುನಾವಣೆಗೆ ಭಾರೀ ಹಣದ ಹೊಳೆ ಹರಿಸಿ ಸಹಾಯ ಮಾಡಿದ ಬಂಡವಾಳಶಾಹಿಗಳ ಹಾಗೂ ಕಪ್ಪು ಹಣದ ಖದೀಮರ ಕಾಟ ಇನ್ನೊಂದೆಡೆ ಚುನಾವಣೆಗೆ ತನ್ನ ಸದಸ್ಯರ ಬೆಂಬಲ ಒದಗಿಸಿದ ಸಂಘ ಪರಿವಾರದ ಕಾಟ ಇವುಗಳ ನಡುವೆ ಜನಪರ ಕೆಲಸ ಹಾಗೂ ಅಭಿವೃದ್ಧಿ ಕೆಲಸಗಳು ಮೂಲೆಗುಂಪಾಗಿವೆ. ಮೋದಿ ಕೇವಲ ಮಾತಿನ ಅರಮನೆ ಕಟ್ಟಿ ಜನರನ್ನು ಮರುಳುಮಾಡುವ ಕಾಯಕದಲ್ಲಿಯೇ ನಿರತರಾಗಿದ್ದಾರೆ ಹೊರತು ಯಾವುದೇ ಮಹತ್ತರ ಅಭಿವೃದ್ಧಿ ಕಾರ್ಯಗಳು ಜನರ ಅನುಭವಕ್ಕೆ ಬಂದಿಲ್ಲ. ಇದು ಕೂಡ ದೆಹಲಿ ಚುನಾವಣೆ ಫಲಿತಾಂಶದಲ್ಲಿ ಪ್ರತಿಧ್ವನಿತವಾಗಿದೆ. ಹಿಂದಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೂ ಈಗಿನ ಮೋದಿ ಸರ್ಕಾರಕ್ಕೂ ಹೆಚ್ಚಿನ ವ್ಯತ್ಯಾಸ ಇದುವರೆಗೂ ಕಂಡುಬಂದಿಲ್ಲ. ವಾಸ್ತವದಲ್ಲಿ ಹಿಂದಿನ ಸರ್ಕಾರಕ್ಕಿಂತ ಕೆಲವು ವಿಷಯಗಳಲ್ಲಿ ಆಡಳಿತ ಹದಗೆಟ್ಟಿದೆ. ಜನಸಾಮಾನ್ಯರ ಹಿತ ಅದರಲ್ಲೂ ಕೆಳ ಮಧ್ಯಮ ವರ್ಗ, ರೈತವರ್ಗ ಹಾಗೂ ಬಡವರ ಹಿತ ಅಪಾಯಕ್ಕೆ ಸಿಲುಕಿದೆ.

    ಈ ಚುನಾವಣೆಯ ಎಲ್ಲಕ್ಕಿಂಥ ದೊಡ್ಡ ವ್ಯಂಗ್ಯವೆಂದರೆ ಕೇಜರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಟದ ಮುಂದಿನ ರೂಪವಾಗಿ ರಾಜಕೀಯ ಪಕ್ಷ ಕಟ್ಟಿದಾಗ ಬಲವಾಗಿ ವಿರೋಧಿಸಿದ ಕಿರಣ್ ಬೇಡಿಯನ್ನು ದೆಹಲಿ ಮುಖ್ಯಮಂತ್ರಿ ಪಟ್ಟದ ಆಮಿಷ ತೋರಿಸಿ ನೈತಿಕ ಭ್ರಷ್ಟನನ್ನಾಗಿ ಮಾಡಿದ್ದು. ಇದು ಕಿರಣ್ ಬೇಡಿಯ ನೈತಿಕತೆ ಎಷ್ಟು ಗಟ್ಟಿ ಎಂದು ಇಡೀ ದೇಶದ ಮುಂದೆ ಅನಾವರಣ ಮಾಡಿತು. ಬಿಜೆಪಿ ಅನುಸರಿಸುತ್ತಿರುವ ರಾಜಕೀಯ ನೀತಿಗಳು, ಚುನಾವಣಾ ಹಾಗೂ ಪಕ್ಷದ ನಿಧಿ ಸಂಗ್ರಹದಲ್ಲಿ ಭ್ರಷ್ಟತೆ ಇವುಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ವ್ಯತ್ಯಾಸವೇನೂ ಇಲ್ಲದಿರುವಾಗ ಕಿರಣ್ ಬೇಡಿ ಬಿಜೆಪಿ ಸೇರಿದ್ದು ಬಹಳ ದೊಡ್ಡ ನೈತಿಕ ಪತನ.

    ಕೇಜರಿವಾಲ್ ಹಾಗೂ ಆಪ್ ಪಕ್ಷದ ಮುಂದೆ ಬಹಳ ದೊಡ್ಡ ಜವಾಬ್ದಾರಿ ಇದೆ ಆದರೆ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಈ ಜವಾಬ್ದಾರಿಯನ್ನು ನಿಭಾಯಿಸುವುದು ಕೇಜರಿವಾಲ್ ಅವರಿಗೆ ಹಾಗೂ ಆಪ್ ಪಕ್ಷಕ್ಕೆ ಅಸಾಧ್ಯವೇನೂ ಅಲ್ಲ ಏಕೆಂದರೆ ಕೇಜರಿವಾಲ್ ಹಾಗೂ ಆಪ್ ಪಕ್ಷಕ್ಕೆ ಮೋದಿ ಗೆ ಇರುವಂತೆ ಹೈಕಮಾಂಡ್ ಕಾಟ ಇಲ್ಲ (ಮೋದಿಗೆ ಚುನಾವಣೆ ಖರ್ಚಿಗೆ ಹಣ ನೀಡಿದ ಬಂಡವಾಳಶಾಹಿಗಳ ಹೈಕಮಾಂಡ್ ಒಂದು ಕಡೆಯಾದರೆ ಚುನಾವಣೆ ಪ್ರಚಾರಕ್ಕೆ ತನ್ನ ಸೈನ್ಯವನ್ನು ನೀಡಿದ ಸಂಘ ಪರಿವಾರ ಎಂಬ ಹೈಕಮಾಂಡಿನ ಕಾಟ ಇನ್ನೊಂದು ಕಡೆ ಇದೆ, ಇವರ ಋಣ ತೀರಿಸುವುದು ಮೋದಿಯವರಿಗೆ ಅನಿವಾರ್ಯ). ಅದೇ ರೀತಿ ಯಾವುದೇ ಜಾತಿಯ, ಧರ್ಮದ ಗುಂಪುಗಳ ಕಾಟವೂ ಆಪ್ ಪಕ್ಷಕ್ಕೆ ಇಲ್ಲ. ಇದು ಸುಗಮ ಹಾಗೂ ಜನಪರ ಆಡಳಿತ ನಡೆಸಲು ಆಪ್ ಪಕ್ಷಕ್ಕೆ ಸಹಾಯಕವಾಗಲಿದೆ.

    ದೇಶದಲ್ಲಿ ಉತ್ತಮ ಪ್ರಜಾಪ್ರಭುತ್ವ ನೆಲೆಗೊಳ್ಳಬೇಕಾದರೆ ಚುನಾವಣ ಖರ್ಚಿಗೆ ಹಾಗೂ ಪಕ್ಷದ ಖರ್ಚಿಗೆ ಕಪ್ಪುಹಣ ಹಾಗೂ ಬಂಡವಾಳಗಾರರ ಅನೈತಿಕ ಹಣ ಬಳಕೆಯಾಗುವುದು ನಿಲ್ಲಬೇಕು. ಈ ನಿಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರೇ ಇಲ್ಲದಿರುವಾಗ ಕೇಜರಿವಾಲರು ಗಂಟೆ ಕಟ್ಟುವ ಧೈರ್ಯ ತೋರಿಸಿದ್ದಾರೆ. ಇದನ್ನು ಮುಂದುವರಿಸಲು ದೇಶದ ಜನತೆ ಕೇಜರಿವಾಲ್ ಹಾಗೂ ಆಪ್ ಪಕ್ಷಕ್ಕೆ ಬಲ ತುಂಬಬೇಕು. ದೇಶದಲ್ಲಿ ಉತ್ತಮ ಆಡಳಿತ ನೆಲೆಗೊಳ್ಳಬೇಕಾದರೆ ಧನವಂತರಿಗೆ, ಅನೈತಿಕ ಕೆಲಸ ಮಾಡುವ ಬಂಡವಾಳಶಾಹಿಗಳಿಗೆ, ಧರ್ಮದ ಹೆಸರಿನಲ್ಲಿ ನೀಚ ಕೆಲಸ ಮಾಡುತ್ತಿರುವ ಸನ್ಯಾಸಿಗಳಿಗೆ ಹಾಗೂ ತಾವು ಸಂವಿಧಾನಕ್ಕಿಂತಲೂ ಮೇಲೆ ಎಂಬ ಅಹಂಕಾರದಿಂದ ಮೆರೆಯುತ್ತಿರುವ ಧಾರ್ಮಿಕ ಮುಖಂಡರಿಗೆ ದಂಡದ ಬಿಸಿಯನ್ನು ತೋರಿಸಬೇಕಾದ ಅಗತ್ಯ ಇದೆ. ಇದು ಭಾರತದಲ್ಲಿ ನಡೆಯುತ್ತಿಲ್ಲ. ಇದಕ್ಕಾಗಿ ಸ್ವತಂತ್ರವಾದ ಒಂದು ತನಿಖಾ ಸಂಸ್ಥೆ ಅಗತ್ಯ ಇದೆ. ಇದನ್ನು ರೂಪಿಸಲು ಬಿಜೆಪಿಯಾಗಲಿ, ಸಂಘ ಪರಿವಾರವಾಗಲಿ, ಕಾಂಗ್ರೆಸ್ ಆಗಲಿ ಎಂದಿಗೂ ಮುಂದೆ ಬರಲಾರವು. ಇದನ್ನು ಸಾಧ್ಯ ಮಾಡುವ ಕೆಚ್ಚು ಇರುವುದು ಕೇಜರಿವಾಲರಂಥ ಜನರಿಗೆ ಮಾತ್ರ. ಇದನ್ನು ದೇಶದ ಜನ ಅರಿತರೆ ಉತ್ತಮ.

    Reply
  3. Anonymous

    All these reasons you have listed are secondary. The primary reason for AAP’s victory is this: the traditional voters of the Congress party, ie Muslims, shifted their allegiance from the Congress party to AAP.

    Reply
  4. M A Sriranga

    ಆನಂದಪ್ರಸಾದ್ ಮತ್ತು ಈ ಲೇಖನದ ಲೇಖಕರಿಗೆ—ನಿಮ್ಮಿಬ್ಬರ ವಿಶ್ಲೇಷಣೆಯ ಬಗ್ಗೆ ನಾನು ಹೇಳುವುದೆನಿಲ್ಲ. ಆದರೆ ಈ ಲೇಖನದಲ್ಲಿ ಸೇರ್ಪಡೆಯಾಗಿರುವ ಒಂದು ಛಾಯಾಚಿತ್ರ(photo)ದಲ್ಲಿ ಒಬ್ಬ ಕಾರ್ಯಕರ್ತ ತನ್ನ ಕೈಯಲ್ಲಿ ಹಿಡಿದುಕೊಂಡಿರುವ ಎರಡು ಪೋಸ್ಟರ್ ಗಳ ಬಗ್ಗೆ ನನ್ನ ಎರಡು ಅಭಿಪ್ರಾಯಗಳನ್ನಷ್ಟೇ ಹೇಳಬಯಸುತ್ತೇನೆ. . ಅದರಲ್ಲಿ ಒಂದು ಅರ್ಧ ವಿದ್ಯುಚ್ಚಕ್ತಿಯ ಬಿಲ್ ಮತ್ತು ಇನ್ನೊಂದು ಉಚಿತ ನೀರಿನ ಸರಬರಾಜಿನ ಆಶ್ವಾಸನೆಯಿದೆ. ಪ್ರತಿ ಚುನಾವಣೆಯಲ್ಲಿ ಮತದಾರರಿಗೆ/ಜನಸಾಮಾನ್ಯರಿಗೆ ಮುಂದಿನ ಚುನಾವಣೆಯಲ್ಲಿ ಗೆದ್ದ ಪಕ್ಷದ ಸರ್ಕಾರ ತಮ್ಮ ಜೀವನಮಟ್ಟವನ್ನು ಸ್ವಲ್ಪವಾದರೂ ಸುಧಾರಿಸಬಹುದೇನೋ ಎಂಬ ಆಸೆಯಿರುತ್ತದೆ. ಇದು ಸಹಜ. ಈ ಒಂದು ಅಂಶವನ್ನೂ ನಾವು ಗಮನಿಸಬೇಕಾಗುತ್ತದೆ. ಮಹಾನಗರ,ನಗರ ಪಟ್ಟಣ ಅಥವಾ ಹಳ್ಳಿಗಳಲ್ಲಾಗಲೀ ಮತದಾರರ ಮನಸ್ಥಿತಿ ಆ ಅಂಶದ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಕೂದಲನ್ನು ಸೀಳುವ ಮಾಧ್ಯಮಗಳ ವಿಶ್ಲೇಷಣೆಯ ಮೇಲಲ್ಲ. ಆ ಛಾಯಾಚಿತ್ರ ಹೋದಸಲದ ಚುನಾವಣೆಯದ್ದಾಗಿರಲಿ ಅಥವಾ ಈ ಸಲದ್ದೆ ಆಗಿರಲಿ ದಿಲ್ಲಿಯ ಮತದಾರರು ಅದನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಾರೆ. ಹಿಂದಿನ ಸಲದ ನಲವತ್ತೊಂಬತ್ತು ದಿನಗಳ ಆಡಳಿತದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಐದು ವರ್ಷಗಳಕಾಲ ಸಾಧಿಸಿ ತೋರಿಸಬೇಕಾದ ಬಹು ದೊಡ್ಡ ಜವಾಬ್ದಾರಿ AAP ಮೇಲೆ ಇದೆ. ಅದನ್ನು ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.

    Reply

Leave a Reply to Anonymous Cancel reply

Your email address will not be published. Required fields are marked *