Daily Archives: February 11, 2015

ದಿಲ್ಲಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು ಆಮ್ ಆದ್ಮಿ ಪಾರ್ಟಿ 2.0!

ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ]

ಸರಿಯಾಗಿ ಒಂದು ವರ್ಷದ ನಂತರ, ಫೆ. 14ರಂದು ದಿಲ್ಲಿಯ ವಿಧಾನಸಭೆಗೆ ಆಡಳಿತ ಪಕ್ಷವಾಗಿ ಪ್ರವೇಶಿಸುತ್ತಿರುವ ಆಮ್‍ ಆದ್ಮಿ ಪಾರ್ಟಿಗೂ, 2013ರಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಎಎಪಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿಯೇ, ಈ ಬಾರಿಯ ಚುನಾವಣೆ ಗೆದ್ದದ್ದು ಆಮ್‍ ಆದ್ಮಿ ಪಾರ್ಟಿanna_jantar-mantar-delhi 2.0 ಅನ್ನೋ ಮಾತು ದಿಲ್ಲಿಯ ರಾಜಕೀಯ ತಜ್ಞರ ವಲಯದಲ್ಲಿ ಚಾಲ್ತಿಗೆ ಬಂದಿದೆ. ದಿಲ್ಲಿ ವಿಧಾನಸಭೆಗೆ ನಡೆದ 2013ರ ಚುನಾವಣೆಯಲ್ಲಿ ಮುಖ್ಯವಾಹಿನಿಗೆ ಬಂದು, ಕಾಂಗ್ರೆಸ್‍ ಬೆಂಬಲ ಪಡೆದು, ಸರಕಾರವನ್ನು ರಚಿಸಿ, 49 ದಿನಗಳಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದ ಎಎಪಿ ಈಗ ಬದಲಾಗಿದೆ ಅಥವಾ ಸುಧಾರಣೆಗೊಂಡಿದೆ. ಪಕ್ಷದ ಗುಣಲಕ್ಷಣಗಳು, ತಿಳಿವಳಿಕೆ, ಮೆಚ್ಯುರಿಟಿ ಹಾಗೂ ನಡೆಯಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸಲಾಗುತ್ತಿದೆ.

2011 ರ ಏಪ್ರಿಲ್‍ನಲ್ಲಿ ಮಹಾರಾಷ್ಟ್ರದ ರಳೇಗಣ ಸಿದ್ಧಿಯಲ್ಲಿದ್ದ ಅಣ್ಣಾ ಹಜಾರೆಯವರನ್ನು ದಿಲ್ಲಿಯ ಜಂತರ್‍ ಮಂತರ್‍ಗೆ ಪರಿಚಯಿಸಲಾಯಿತು. ದೇಶಾದ್ಯಂತ ‘ಭ್ರಷ್ಟಚಾರ ವಿರೋಧಿ’ ಅಭಿಯಾನವನ್ನು ನಡೆಸಲಾಯಿತು. ಅದನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಮೀಕರಿಸುವ ಪ್ರಯತ್ನವೂ ನಡೆಯಿತು. ಸಹಜವಾಗಿಯೇ ದೇಶ ಎಂದರೆ ಗಡಿ, ಧರ್ಮ ಮಾತ್ರವಲ್ಲ, ಇಲ್ಲಿ ಬದುಕುತ್ತಿರುವ ಬಡ ಜನರು ಮತ್ತವರ ಸಂಕಷ್ಟಗಳು ಎಂದು ನಂಬುವವರು ಈ ಅಭಿಯಾನವನ್ನು ಒಪ್ಪಿಕೊಳ್ಳಲಿಲ್ಲ. ಆದರೂ, ಜಂತರ್‍ ಮಂತರ್‍ ಯುವ ಜನರಿಂದ ತುಂಬಿ ತುಳುತ್ತಿದ್ದಾಗಲೇ, ಕೇಂದ್ರ ಸರಕಾರ ಜನಲೋಕಪಾಲವನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವ ಭರವಸೆ ನೀಡಿತು. ಅಣ್ಣಾ ತಮ್ಮ ಊರಿಗೆ ವಾಪಾಸಾದರು. ಆ ವರ್ಷದ ಆಗಸ್ಟ್ ನಲ್ಲಿ ಅಧಿವೇಶನಕ್ಕೆ ಸಿದ್ಧತೆ ಶುರುವಾಯಿತು. ಆದರೆ, ಜನಲೋಕಪಾಲದ ಚಕಾರ ಎತ್ತಲಿಲ್ಲ. ಹೀಗಾಗಿ, ಮತ್ತೆ ಅಣ್ಣಾ ನೇತೃತ್ವದಲ್ಲಿ ಅಭಿಯಾನ ಭಾಗ ಎರಡಕ್ಕೆ ಕಾಲ ಕೂಡಿಬಂತು. ಕೇಜ್ರಿವಾಲ್‍ ಹುಟ್ಟಿದ ದಿನ ಆಗಸ್ಟ್ 16ರಂದೇ ಜನಲೋಕಪಾಲಕ್ಕಾಗಿ ಎರಡನೇ ಹಂತದ ಹೋರಾಟ ಶುರುವಾಯಿತು. ಈ ಸಮಯದಲ್ಲಿ ಕೇಂದ್ರದ ಯುಪಿಎ ಸರಕಾರ ಅಣ್ಣಾ ಮತ್ತವರ ಜತೆಗಾರರನ್ನು ಬಂಧಿಸುವ ಮೂಲಕ ಅಭಿಯಾನಕ್ಕೊಂದು ಚಳವಳಿಯ ರೂಪ ನೀಡಿತು. ಆ ಸಮಯದಲ್ಲಿ ಸುಮಾರು ಹನ್ನೆರಡು ದಿನ ನಡೆದ ಹೋರಾಟಕ್ಕೆ ಡಿಸೆಂಬರ್‍ ಅಧಿವೇಶನದಲ್ಲಿ ಬಿಲ್‍ ಜಾರಿಗೆ ಬರುವ ಭರವಸೆ ಸಿಕ್ಕಿತು.

ಮುಂದೆ ಡಿಸೆಂಬರ್‍ ಸಮಯದಲ್ಲಿ ಮತ್ತೆ ಅಣ್ಣಾ ತಂಡ ಹೋರಾಟಕ್ಕೆ ಇಳಿತಾದರೂ ಹಿಂದಿನ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ಸಮಯದಲ್ಲಿ ಜನಲೋಕಪಾಲದ ಜತೆಗೆ ಸಿಬಿಐಗೆ ಸ್ವಾಯತ್ತತೆ ನೀಡುವ ಇನ್ನಿತರೆ ಬೇಡಿಕೆಗಳು ಸೇರಿಕೊಂಡಿದ್ದವು. 2012ರಲ್ಲಿ ಮತ್ತೆ ಅಣ್ಣಾ ಉಪವಾಸ ಶುರುವಾಯಿತು. ಹೋರಾಟ ನಿಧಾನವಾಗಿ ಭ್ರಷ್ಟರನ್ನು ಗುರುತಿಸುವ ಗಟ್ಟಿತನ ಬೆಳೆಸಿಕೊಂಡಿತ್ತು. ಜನರಲ್‍ ಆಗಿರುವ ಬೇಡಿಕೆಗಳನ್ನು ಮೀರಿ, ನಿರ್ಧಿಷ್ಟವಾಗಿ ಇಂತವರಿಂದಲೇ ಜನಲೋಕಪಾಲಕ್ಕೆ ಅಡ್ಡಿಯಾಗುತ್ತಿದೆ ಎಂದು ಹೋರಾಟದ ಮುಂಚೂಣಿಯಲ್ಲಿದ್ದವರು ಆರೋಪಿಸಿದರು. ಜತೆಗೆ, ಕೇಜ್ರಿವಾಲ್‍ ಮತ್ತು ಕೆಲವರು ಕಾಂಗ್ರೆಸ್‍ ನೀಡಿದ ರಾಜಕೀಯ ಅಹ್ವಾನವನ್ನು ಸ್ವೀಕರಿಸಿದರು. ಈ ಮೂಲಕ ಇದು ಅಧಿಕಾರಕ್ಕೆ ಹಾತೊರೆಯಲು ಹೋಗಿ ಮು‍ಗ್ಗರಿಸಿದವರ ಮತ್ತೊಂದು ತಂಡವಾಗುತ್ತದೆ ಎಂಬ kejriwal-aap-launch-delhiಭಾವನೆ ಬೆಳೆಯಿತು. ನವೆಂಬರ್‍ನಲ್ಲಿ ಅಧಿಕೃತವಾಗಿ ‘ಅಮ್‍ ಆದ್ಮಿ ಪಕ್ಷ’ ಘೋಷಣೆಯಾಯಿತಾದರೂ ಅದನ್ನು ಗಂಭೀರವಾಗಿ ತೆಗೆದುಕೊಂಡವರ ಸಂಖ್ಯೆ ಕಡಿಮೆ ಇತ್ತು.

ಹೀಗಿರುವಾಗಲೇ, ಆ ವರ್ಷದ ಡಿಸೆಂಬರ್‍ ಬಂತು. ಅದೊಂದು ಕರಾಳ ರಾತ್ರಿ ‘ನಿರ್ಭಯಾ ಪ್ರಕರಣ’ ನಡೆದುಹೋಯಿತು. ದಿಲ್ಲಿಯ ಯುವ ಜನತೆ ಬೀದಿಗೆ ಇಳಿಯಿತು. ಮೇಲ್ನೋಟಕ್ಕೆ ತಣ್ಣಗಾದಂತೆ ಕಾಣಿಸುತ್ತಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ನಿರ್ಭಯಾ ಪರವಾಗಿ ಹೋರಾಟ ಆರಂಭಿಸಿದರು. ಮುಂದೆ ಬೆಲೆ ಏರಿಕೆ ವಿಚಾರವನ್ನು ಇಟ್ಟುಕೊಂಡು ಜನಜಾಗೃತಿ ಕೈಗೊಂಡರು. ನಿಧಾನವಾಗಿ ತಮ್ಮ ಬೇಡಿಕೆ ಆಧಾರಿತ ಚಳವಳಿಗೆ ಸರಕಾರದ ವಿರೋಧಿ ಆಯಾಮ ಸಿಗುವಂತೆ ನೋಡಿಕೊಂಡರು. 2011ರಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರ ವಿರೋಧ ಅನ್ನೋ ಸಮಾನ ಆಶಯವನ್ನು ಇಟ್ಟುಕೊಂಡು ಹೋರಾಟದ ಭೂಮಿಕೆಗೆ ಹೊಸತಾಗಿ ಪರಿಚಯಗೊಂಡಿದ್ದ ವರ್ಗ, ಸಹಜವಾಗಿಯೇ ಶೀಲಾ ದೀಕ್ಷಿತ್‍ ನೇತೃತ್ವದ ಕಾಂಗ್ರೆಸ್‍ ಸರಕಾರದ ವಿರುದ್ಧ ತೊಡೆತಟ್ಟಿದ್ದ ಎಎಪಿ ಜತೆಯಾದರು. ಈ ಸಮಯದಲ್ಲಿ ಪಕ್ಷದೊಳಗೆ ಎಲ್ಲಾ ರೀತಿಯ ಆಲೋಚನೆಗಳನ್ನು ಇಟ್ಟುಕೊಂಡ ಜನ ಬಂದಿದ್ದರಿಂದ ಒಂದು ರೀತಿಯ ಅಸ್ಪಷ್ಟತೆ ಹೊರನೋಟಕ್ಕೆ ಭಾಸವಾಗುತ್ತಿತ್ತು. ಈ ಸಮಯದಲ್ಲಿ ಬಂದಿದ್ದು ದಿಲ್ಲಿ ವಿಧಾನಸಭಾ ಚುನಾವಣೆ- 2013.

ಹೊಸ ಪಕ್ಷ, ಅನನುಭವಿಗಳ ತಂಡ ಚುನಾವಣೆಗೆ ಇಳಿದಾಗ ಹೀಗಳೆದವರ ಸಂಖ್ಯೆಯೇ ದೊಡ್ಡದಿತ್ತು. ಆದರೆ, ಯಾವಾಗ 28 ಸ್ಥಾನಗಳನ್ನು ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಎಎಪಿ ಹೊರಹೊಮ್ಮಿತೋ, ಪರ್ಯಾಯದ ಆಲೋಚನೆ ಮಾಡುವವರಲ್ಲಿ ಒಂದಷ್ಟು ಭರವಸೆ, ಉಳಿದವರಲ್ಲಿ ಕುತೂಹಲ ಮೂಡಿತು. ಅಷ್ಟೆ, ಮುಂದೆ 49 ದಿನಗಳ ಅಧಿಕಾರ, ರಾಜೀನಾಮೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ, ದೇಶಾದ್ಯಂತ ಪಕ್ಷವನ್ನು ವಿಸ್ತರಿಸುವ ಕಸರತ್ತುಗಳ ನಡುವೆ ಆಮ್‍ ಆದ್ಮಿshajiya-delhi-ilmi-2015 ಪಕ್ಷದ ಕತೆ ಮುಗಿದು ಹೋಯಿತು ಎಂದು ಎಲ್ಲರೂ ಅಂದುಕೊಂಡರು. ಆ ಸಮಯದಲ್ಲೇ ಪಕ್ಷದೊಳಗೆ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದ್ದವು. ಗೆಲುವಿನಲ್ಲಿ ಪಾಲು ಕೇಳುತ್ತಾರೆ, ಅದೇ ಸೋತರೆ ಕಲ್ಲು ಬೀಸಿ ಓಡುವವರ ಸಂಖ್ಯೆ ದೊಡ್ಡದಿರುತ್ತದೆ. ಎರಡು ವರ್ಷಗಳ ಹಸಗೂಸು ಎಎಪಿಯ ಆಂತರಾಳದ ಕತೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಾಕಷ್ಟು ಜನ ಪಕ್ಷ ತೊರೆದರು. ಭಿನ್ನ ಆಲೋಚನೆ ಇಟ್ಟುಕೊಂಡವರು, ಇನ್ನೂ ರೂಪ ಪಡೆದುಕೊಳ್ಳುವ ಹಂತದಲ್ಲಿದ್ದ ಪಕ್ಷದ ಸಿದ್ಧಾಂತವನ್ನೇ ಖಂಡಿಸಿ ದೂರವಾದರು. ಕೊನೆಗೆ ಉಳಿದದ್ದು ಕೆಲವೇ ಗಟ್ಟಿಕಾಳುಗಳು ಮತ್ತು ಎದುರಿಗೆ ಇದ್ದದ್ದು ಒಂದೇ ದಿಲ್ಲಿಯ ವಿಧಾನ ಸಭೆ ಚುನಾವಣೆ. ಮಾಡು ಇಲ್ಲವೇ ಮಡಿ ಪಂದ್ಯ. ಈ ಸಮಯದಲ್ಲಿ ಉಳಿದೆಲ್ಲಾ ಟೀಕೆ ಟಿಪ್ಪಣಿಗಳನ್ನು ಬದಿಗೆ ಸರಿಸಿ, ಇದ್ದ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿ, ‘ಎಎಪಿ 2.0’ ತಂಡ ಕಣಕ್ಕಿಳಿಯಿತು. ಮುಂದೇನಾಯಿತು ಎಂಬುದು ನಿಮ್ಮೆದುರಿಗೆ ಇದೆ.

ಬಿಜೆಪಿ ಮತಗಳೇ ನಿರ್ಣಾಯಕ

ಹೀಗಂತ ಚುನಾವಣೆ ಮತ್ತದರ ಫಲಿತಾಂಶವನ್ನು ಇಟ್ಟುಕೊಂಡು ನೋಡಿದರೆ ಇವತ್ತು ದಿಲ್ಲಿಯ ಮಟ್ಟಿಗೆ ಆಮ್‍ ಆದ್ಮಿ ಪಕ್ಷ ನಿಚ್ಚಳವಾಗಿ ಕಾಂಗ್ರೆಸ್‍ ಮತ್ತು delhi-election-vote-share-2015ಬಿಜೆಪಿಯ ಮತದಾರರನ್ನು ತನ್ನತ್ತ ಸೆಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 2008ರಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಶೇ. 61. 4ರಷ್ಟು ಮತ ಗಳಿಕೆಯ ಮೂಲಕ 40 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಈ ಸಮಯದಲ್ಲಿ ಬಿಜೆಪಿ ಶೇ. 32. 4 (23 ಸೀಟುಗಳು) ಮತ್ತು ಬಿಎಸ್‍ಪಿ ಶೇ. 2.9 (2 ಸೀಟಿಗಳು)ರಷ್ಟು ಮತ ಗಳಿಸಿದ್ದವು. ಐದು ವರ್ಷಗಳ ಅಂತರದಲ್ಲಿ ನಡೆದ 2013ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಶೇಖಡವಾರು ಮತಗಳಿಗೆ 11. 4ಕ್ಕೆ ಇಳಿದಿತ್ತು. ಆದರೆ, ಬಿಜೆಪಿಯ ಮತಗಳಿಗೆ ಶೇ. 45. 7ರಷ್ಟು ಮತ ಗಳಿಸಿತ್ತು. ಹೊಸ ಪಕ್ಷ ಎಎಪಿಯ ಮತ ಗಳಿಗೆ ಶೇ. 40ರಷ್ಟಿತ್ತು. ಈ ಬಾರಿ ಅಂಕಿಅಂಶಗಳನ್ನು ಗಮನಿಸಿದರೆ ಎಎಪಿ ಪಡೆದುಕೊಂಡಿರುವ ಶೇ. 54. 3ರಷ್ಟು ಮತಗಳಲ್ಲಿ ಬಿಜೆಪಿಯ ಪಾಲೇ ದೊಡ್ಡದಿದೆ. ಕಾಂಗ್ರೆಸ್‍ನಿಂದ ಎಎಪಿ ಶೇ. 1.3ರಷ್ಟು ಮತಗಳನ್ನು ಕಿತ್ತುಕೊಂಡಿದ್ದರೆ, ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕಿನಿಂದ ಶೇ. 13. 5ರಷ್ಟು ಮತಗಳನ್ನು ಪಡೆದುಕೊಂಡಿದೆ. ಇದು ಬಹುತೇಕ ಕಡೆಗಳಲ್ಲಿ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಇನ್ನು, ಮುಸ್ಲಿಂ ಧರ್ಮಗುರುವಿನ ಬೆಂಬಲ ಮತ್ತು ಮುಸ್ಲಿಂ ಮತಗಳು ಎಎಪಿಗೆ ಬಂದಿವೆ ಎಂಬ ವಾದವೂ ಇದೆ. ಆದರೆ, ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಮುಸ್ತಫಾಬಾದ್‍ ಎಂಬ ಕ್ಷೇತ್ರದ ಫಲಿತಾಂಶ ಇದಕ್ಕೆ ತದ್ವಿರುದ್ಧವಾಗಿದೆ. ಇಲ್ಲಿ ಸುಮಾರು ಆರು ಸಾವಿರ ಮತಗಳಿಂದ ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದರೆ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‍ ಇದೆ. ಇನ್ನು, ಜಾತ್ಯತೀತ ಶಕ್ತಿಗಳು ಆಪ್‍ ಬೆಂಬಲಕ್ಕೆನಿಂತವು ಎಂಬ ವಾದವೂ ಇದೆ. ಆದರೆ, ಕಳೆದ ಮೂರೂ ಚುನಾವಣೆಗಳ ಶೇಕಡವಾರು ಮತ ಗಳಿಕೆಯಲ್ಲಿ ಬಿಎಸ್‍ಪಿ ಸಮಾನ ಅಂತರವನ್ನು ಕಾಯ್ದುಕೊಂಡು ಬರುತ್ತಿದೆ ಮತ್ತು ಅದು ಯಾವ ಕ್ಷೇತ್ರದಲ್ಲೂ ನಿರ್ಣಾಯಕ ಹಂತದಲ್ಲಿ ಇಲ್ಲ.

ಒಟ್ಟಾರೆ, ಇದು ಆಲೋಚನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತಂದುಕೊಂಡ ಎಎಪಿ 2.0 ತಂಡಕ್ಕೆ ಸಲ್ಲಬೇಕಾದ ಗೆಲುವು ಅಷ್ಟೆ. ಜನರ ಸಮಸ್ಯೆಗಳನ್ನು ಅವರ ಮಾತುಗಳಲ್ಲೇ ಅರ್ಥಮಾಡಿಕೊಂಡು, ಅದಕ್ಕೆ ಅವರು ಬಯಸುವ ಪರಿಹಾರವನ್ನು ನೀಡುವ ಭರವಸೆ ನೀಡಿದ್ದೇ ಟ್ರಂಪ್‍ಕಾರ್ಡ್‍. ಇದನ್ನು ಒಪ್ಪಿಕೊಳ್ಳದ ಒಂದು ವರ್ಗ ದಿಲ್ಲಿಯ ಆಪ್‍ ಗೆಲುವಿಗೆ ನಾನಾ ಅರ್ಥಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಅದರಲ್ಲಿ ಒಂದು, ದಿಲ್ಲಿಯಲ್ಲಿ ಯಾರೂ ಸೋಲಲಿಲ್ಲ ಎಂಬ ತಮಾಷೆ. ಇದೆಲ್ಲಾ ಏನೇ ಇರಲಿ, ದಿಲ್ಲಿಯ ಜನ ಪ್ರಜಾಪ್ರಭುತ್ವದ ಸಾಧ್ಯತೆಯೊಂದನ್ನು ಸೋಲಿಸಲಿಲ್ಲ ಅಷ್ಟೆ…