ಪೇಡ್ ನ್ಯೂಸ್ ಎಂಬ ಭೂತ: ಕೆ.ಎನ್.ಶಾಂತಕುಮಾರ್

(“ಪ್ರಜಾವಾಣಿ” ಪತ್ರಿಕೆಯ ಸಂಪಾದಕ ಹಾಗೂ ಮಾಲೀಕರಲ್ಲಿ ಒಬ್ಬರಾದ ಕೆ.ಎನ್.ಶಾಂತಕುಮಾರ್‌ರು ಇತ್ತೀಚೆಗೆ ಹಾಸನದ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ಪತ್ರಿಕೋದ್ಯಮದ ಕುರಿತು ಮಾತನಾಡಿದರು, ಸಂವಾದ ಮಾಡಿದರು ಹಾಗೂ ಅವರು ತೆಗೆದ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಿದರು. ಅವರ ಮಾತುಗಳಿಂದ ಆಯ್ದ ಭಾಗಗಳು ಇಲ್ಲಿವೆ.)

ನಾನು ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆಯಲು ಕಾರಣ – ನನ್ನ ಹುಟ್ಟು.. KN-Shanthakumar-prajavani-Hasana-1ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕಾ ಕಚೇರಿಗೆ ಹೋಗುತ್ತಿದ್ದೆ. ನನ್ನ ತಾತ, ನನ್ನ ಅಣ್ಣಂದಿರು, ಹಾಗೂ ಬಹು ಮುಖ್ಯವಾಗಿ ನನ್ನ ಸಹೋದ್ಯೋಗಿಗಳಿಂದ ತುಂಬಾ ಕಲಿತೆ. ನಿಮ್ಮಂತೆ ನನಗೆ ಪತ್ರಿಕೋದ್ಯಮದ ಯಾವುದೇ ಪದವಿ ನಾನು ಪಡೆದಿಲ್ಲ.

1.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು ಹಿಂದೆ ಅಷ್ಟು ಸುಲಭವಾಗಿರಲಿಲ್ಲ. ತಂತ್ರಜ್ಞಾನ ಸುಧಾರಿಸಿರಲಿಲ್ಲ. ಹಾಗೂ ಭಾರೀ ಹೂಡಿಕೆ ಅಗತ್ಯವಿತ್ತು. ಕ್ರಮೇಣ ತಂತ್ರಜ್ಞಾನ ಬೆಳೆಯಿತು. ಇಂದು ಹೊಸ ಹೊಸ ಮಾಧ್ಯಮಗಳು ಬಂದಿವೆ. ಸ್ಪರ್ಧೆ ಹೆಚ್ಚಿದೆ. ರೇಡಿಯೊ ಬಂದಾಗ ಅಥವಾ ಟಿವಿ ಬಂದಾಗ ಮುದ್ರಣ ಮಾಧ್ಯಮ ಇಲ್ಲವಾಗುತ್ತೆ ಎಂಬ ಮಾತಿತ್ತು. ಹಾಗೆ ಆಗಲಿಲ್ಲ. ಇತ್ತೀಚೆಗೆ ಕೆಲವೆಡೆ ಮುದ್ರಣ ಮಾಧ್ಯಮ ಭಾರೀ ಬೆಲೆ ತೆತ್ತಿದೆ. ಪ್ರಮುಖ ಪತ್ರಿಕೆಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ದೇಶದ ಅತಿ ಹೆಚ್ಚು ಪ್ರಸರಣ ಹೊಂದಿರುವ ಪತ್ರಿಕೆಯ ವೆಬ್‌ಸೈಟ್ ಗೆ ಕಳೆದ ಎರಡು ವರ್ಷಗಳಲ್ಲಿ ಭೇಟಿ ಕೊಟ್ಟವರಲ್ಲಿ ಶೇಕಡ 50 ಕ್ಕೂ ಹೆಚ್ಚು ಮಂದಿ ಮೊಬೈಲ್ ಮೂಲಕ ವೆಬ್‌ಸೈಟ್ ಗೆ ವಿಸಿಟ್ ಮಾಡಿದ್ದರು. ಮೊಬೈಲ್ ಮೂಲಕ ಸುದ್ದಿ ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

2.
ನಮ್ಮ ದೇಶದ ಒಂದು ವಿಶೇಷ ಎಂದರೆ – ನಮ್ಮ ಪತ್ರಿಕೆಗಳ ಮುಖಬೆಲೆ ಅತೀ ಕಡಿಮೆ. ಈ ಬೆಲೆಗೆ ಬೇರೆಲ್ಲೂ ಪತ್ರಿಕೆಗಳು ದೊರೆಯುವುದಿಲ್ಲ. ಇದಕ್ಕೆ ಕಾರಣ ಪೈಪೋಟಿ. ಈ ಬೆಳವಣಿಗೆಯಿಂದ ಒಳ್ಳೆಯದೂ ಆಗಿದೆ, ಕೆಟ್ಟದೂ ಆಗಿದೆ. ಒಳ್ಳೆಯದು ಎಂದರೆ, ಓದುಗರ ಸಂಖ್ಯೆ ಹೆಚ್ಚಾಗಿದೆ. KannadaPapersCollageಆದರೆ ಹತ್ತು-15 ವರ್ಷಗಳ ಹಿಂದೆ ಪ್ರಸರಣದಿಂದ ಪತ್ರಿಕೆಗೆ ಬರುತ್ತಿದ್ದ ಒಟ್ಟು ಆದಾಯದ ಶೇಕಡ 50 ರಷ್ಟಿತ್ತು. ಅದರರ್ಥ ಜಾಹಿರಾತು ಮತ್ತು ಪತ್ರಿಕೆಯ ಮಾರಾಟದಿಂದ ಸಮನಾದ ಆದಾಯ ಬರುತ್ತಿತ್ತು. ಈಗ ಶೇಕಡ 70 ರಷ್ಟು ಆದಾಯ ಕೇವಲ ಜಾಹೀರಾತುಗಳಿಂದ ಬರುತ್ತಿದೆ. ಆ ಕಾರಣಕ್ಕೆ ಪತ್ರಿಕೆ ಸಂಸ್ಥೆಗಳು ಜಾಹಿರಾತುದಾರರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

3.
ಜಾಹೀರಾತುಗಳಿಂದ ಬರುವ ಆದಾಯ ಪತ್ರಿಕಾ ಸಂಸ್ಥೆಗೆ ಬಹುಮುಖ್ಯ ಎಂದಾದುದರ ಪರಿಣಾಮವಾಗಿ ಜಾಹಿರಾತುದಾರರು, ಅದು ಸರಕಾರ ಅಥವಾ ಖಾಸಗಿ ಕಂಪನಿಗಳಿರಬಹುದು – ಪತ್ರಿಕೆಯ ಮೇಲೆ ಪ್ರಭಾವ ಬೀರಲು ಆರಂಭಿಸಿದರು. ಜಾಹಿರಾತುದಾರರು ಅವರಿಗೆ ಅಪಥ್ಯವಾಗುವಂತಹ ಸುದ್ದಿಗಳು ಬರಬಾರದು ಎಂದು ಬಯಸುತ್ತಾರೆ. ಪತ್ರಿಕಾಲಯಗಳು ಕೂಡ ಜಾಹಿರಾತು ವಿಚಾರವಾಗಿ ತುಂಬಾ ಸೂಕ್ಷ್ಮ ವಾಗಿರುತ್ತವೆ. ಒಂದು ಜಾಹಿರಾತು ಮಿಸ್ ಆದರೆ, ಪತ್ರಿಕಾ ಸಂಸ್ಥೆಯವರು ತಲೆ ಕೆಡಿಸಿಕೊಳ್ಳುತ್ತಾರೆ. ಏಕೆಂದರೆ ಅದರಿಂದ ಆದಾಯದ ಮೇಲೆ ಪರಿಣಾಮಗಳಿರುತ್ತವೆ.

ಸರಕಾರದ ವಿರುದ್ಧ ಒಂದು ಲೇಖನ ಬಂದರೆ, ಅಂತಹ ಲೇಖನ ಪ್ರಕಟಿಸಿದ ಪತ್ರಿಕೆಗೆ ಸರಕಾರ ಜಾಹೀರಾತುಗಳನ್ನು ನಿಲ್ಲಿಸಿದ ಉದಾಹರಣೆಗಳು ನಮ್ಮ ದೇಶದಲ್ಲಿಯೇ ಬೇಕಾದಷ್ಟಿವೆ. ಖಾಸಗಿ ಕಂಪನಿಗಳೂ ಹೀಗೆ ಮಾಡಿರುವ ಅನೇಕ ಉದಾರಹಣೆಗಳಿವೆ. ಇದು ಬೆಲೆ ಸಮರದಿಂದಾದ ದುಷ್ಪರಿಣಾಮ.

4.
ಜೊತೆಗೆ ಇತ್ತೀಚೆಗೆ ಪತ್ರಿಕಾ ಸಂಸ್ಥೆಗಳು ಸುದ್ದಿ ಸಂಗ್ರಹಣೆಗಾಗಿ ತೊಡಗಿಸುವ ವೆಚ್ಚವನ್ನು ಗಣನೀಯವಾಗಿ ಕಡಿತ ಮಾಡಿವೆ. ಆ ಕಾರಣಕ್ಕಾಗಿ ಆರಾಮ್ ಚೇರ್ ಗಳಲ್ಲಿ ಕೂತು, ಎಂತಹದೇ ಸುದ್ದಿಯನ್ನು ಹೆಣೆಯುವ ಪ್ರವೃತ್ತಿ ಇದೆ. ಮೇಲಾಗಿ ಈಗ ಸಂಪರ್ಕ ತುಂಬಾ ಸುಲಭ. ಮೊದಲೆಲ್ಲಾ, ಪತ್ರಕರ್ತರಿಗೆ ಫೋನ್ ಸಂಪರ್ಕ ಸಿಗುತ್ತಿದ್ದುದು ಕಚೇರಿಗೆ ಬಂದರಷ್ಟೆ. ಇಲ್ಲವಾದರೆ ಅವರು ಪಬ್ಲಿಕ್ ಬೂತ್ ಮುಂದೆ ನಿಂತು ಕಾಯಬೇಕಿರುತ್ತಿತ್ತು. ಆದರೆ ಈಗ ಹಾಗಿಲ್ಲ, ಬಹುತೇಕರ ಹತ್ತಿರ ಮೊಬೈಲ್ ಇದೆ. ಕೆಲವರ ಹತ್ತಿರ ಎರಡೆರಸು ಮೊಬೈಲ್ ಗಳಿವೆ. ಅಷ್ಟಲ್ಲದೆ ಇಂಟರ್ ನೆಟ್ ಲಭ್ಯವಿದೆ. ಗೂಗಲ್ ಮಾಡಿ ಸಿಕ್ಕಿದ ಮಾಹಿತಿಯನ್ನೇ ಸತ್ಯ ಎಂದು ತಿಳಿದು ಸುದ್ದಿಯ ಮರುಪರಿಶೀಲನೆ ಮಾಡದೆ, ಅದನ್ನೇ ಸುದ್ದಿ ರೂಪಕ್ಕಿಳಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ.

ನಾನು ನಮ್ಮ ಪತ್ರಿಕೆಯನ್ನು ಹೊಗಳಿಕೊಳ್ಳಲು ಹೇಳುತ್ತಿಲ್ಲ. ಕಳೆದ ವಾರ ನಮ್ಮ ’ಕರ್ನಾಟಕ ದರ್ಶನ’ ಪುರವಣಿಯಲ್ಲಿ ಭಟ್ಕಳ ಪಟ್ಟಣದ ಬಗ್ಗೆ ವಿಸ್ತೃತವಾದ ವರದಿ ಪ್ರಕಟವಾಯಿತು. ನಿಮ್ಮಲ್ಲಿ ಯಾರಾದರೂ ಓದದೇ ಇದ್ದರೆ, ಅದನ್ನು ಓದಬೇಕು ಅಂತ ಬಯಸುತ್ತೇನೆ. ಅಂತಹ ಪ್ರಯೋಗಗಳನ್ನು ಬೇರೆಯವರೂ ಮಾಡುತ್ತಿರಬಹುದು. ಆದರೆ, ಅಂತಹವು ಹೆಚ್ಚಾಗಬೇಕು ಎನ್ನುವುದಷ್ಟೇ ನನ್ನ ಅಭಿಪ್ರಾಯ.

ಆಮೇಲೆ ಇದನ್ನು ಮಾಡಬೇಕು ಅಂದರೆ ಇದಕ್ಕೆ ಅಡ್ಡದಾರಿ ಇಲ್ಲ. ಒಬ್ಬ ವರದಿಗಾರ್ತಿ ಅಲ್ಲಿಗೆ ಹೋಗಿ, ಮೂರ್ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಸುದ್ದಿ ಬರೆದರು. ನಂತರ ಹಲವರೊಂದಿಗೆ ಮಾತನಾಡಿ, ವಿಷಯ ಸಂಗ್ರಹಿಸಿ ಸುದ್ದಿ ಬರೆದರು. paidmedia2ಒಂದು-ಎರಡು ದಿನಗಳಲ್ಲಿ ಆಗುವ ಕೆಲಸವಲ್ಲ

5.
ಹೊಸ ದೆವ್ವ: ಪೇಡ್ ನ್ಯೂಸ್
ಆದಾಯದ ಏರುಪೇರು (ಜಾಹಿರಾತುಗಳ ಮೇಲೆ ಅತಿಯಾದ ಅವಲಂಬನೆ) ಪರಿಣಾಮವಾಗಿ ದೇಶಾದ್ಯಂತ ಹುಟ್ಟಿಕೊಂಡಿರುವ ಹೊಸ ದೆವ್ವ ಪೇಡ್ ನ್ಯೂಸ್. ಇದೊಂದು ಅರ್ಥಹೀನ ಪದ-ಪ್ರಯೋಗ ಅನ್ನಿಸುತ್ತೆ. ಆದರೆ ಅದು ಸೃಷ್ಟಿಯಾಗಿದೆ. ನ್ಯೂಸ್ ಗೂ ದುಡ್ಡಿಗೂ ಸಂಬಂಧವಿರಬಾರದು. ನ್ಯೂಸ್ ಅಂದರೆ, ಯಾವುದೋ ಒಂದು ಘಟನೆ, ಬೆಳವಣಿಗೆ..ಹೀಗೆ ಘಟಿಸುವಂತಹದ್ದು ಸುದ್ದಿ. ಅದು ಪೇಡ್ ಆಗುವುದೆಂದರೆ!!

ಇತ್ತೀಚೆಗೆ ಮಾಧ್ಯಮ ಸಂಸ್ಥೆಗಳೇ ಪೇಡ್ ನ್ಯೂಸ್ ಗೆ ಅಧಿಕೃತತೆಯ ಮುದ್ರೆ ಒತ್ತುತ್ತಿದ್ದಾರೆ. ಇದು ಹೆಚ್ಚಾಗಿ ನಡೆಯುವುದು ಚುನಾವಣಾ ಸಮಯದಲ್ಲಿ. ಭ್ರಷ್ಟ ರಾಜಕಾರಣಿಗಳು, ಪತ್ರಕರ್ತರನ್ನೂ ಭ್ರಷ್ಟರನ್ನಾಗಿಸ ಬಯಸುತ್ತಾರೆ. ಇದು ಪತ್ರಿಕೋದ್ಯಮವನ್ನು ಮೀರಿ, ಪ್ರಜಾಪ್ರಭುತ್ವಕ್ಕೆ ಮಾರಕ. ಚುನಾವಣೆ ಸಂದರ್ಭದಲ್ಲಿ ಪ್ರಕಟವಾಗುವ ’ಪೇಡ್ ನ್ಯೂಸ್’ ಅನ್ನೇ ’ನಿಜವಾದ ಸುದ್ದಿ’ ಎಂದು ಮತದಾರ ತಿಳಿದುಬಿಟ್ಟರೆ ಪ್ರಜಾಪ್ರಭುತ್ವ ವ್ಯವಸ್ಥೆಗೇ ಪೆಟ್ಟು. ಇಂತಹವು, ದುರ್ದೈವ ಅಂದ್ರೆ, ನಮ್ಮಲ್ಲೂ ಆಗಿವೆ. ಇದಕ್ಕೆ ಕಡಿವಾಣ ಹಾಕೋದು ಹೇಗೆ ಅಂತ ಚಿಂತನೆಗಳು ನಡೆಯುತ್ತಿವೆ.

KN-Shanthakumar-prajavani-Hasana-2ಈ ಬೆಳವಣಿಗೆಗಳಿಗೆ ಇನ್ನೊಂದು ಮುಖ ಇದೆ. ಸಮಾಜ ಹೇಗಿರುತ್ತೋ. ಹಾಗೆಯೇ ಸಮಾಜದ ಭಾಗವಾಗಿರುವ ಪತ್ರಕರ್ತರೂ. ಪತ್ರಕರ್ತರಲ್ಲೂ ಭ್ರಷ್ಟರಿದ್ದಾರೆ.

6.
ಇದು ಮಹಿಳೆಯರ ಕಾಲೇಜು. ಹಾಗಾಗಿ ಮಹಿಳೆಯರು ಮತ್ತು ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟಂತೆ ಮಾತನಾಡಿ ನನ್ನ ಮಾತು ಮುಗಿಸುತ್ತೇನೆ. 70 ರ ದಶಕದಲ್ಲಿ, ನಮ್ಮಣ್ಣ ಹರಿಕುಮಾರ್ ಸಂಪಾದಕರಾಗಿದ್ದಾಗ ಮಹಿಳೆಯರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಆರಂಭವಾಯಿತು. ಆ ಹೊತ್ತಿಗೆ ಕನ್ನಡದ ಪತ್ರಿಕೋದ್ಯಮದಲ್ಲಿ ಅದೇ ಮೊದಲು. ಅದೇ ಪರಂಪರೆ ಇಂದಿಗೂ ಮುಂದುವರೆದಿದೆ. ಸಮಾಜದಲ್ಲಿ ಮಹಿಳೆಯರು ಶೇಕಡ 50 ರಷ್ಟು ಇದ್ದಾರೆ. ಆದರೆ, ಪತ್ರಿಕೋದ್ಯಮದಂತಹ ಗಂಭೀರ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು.

2 thoughts on “ಪೇಡ್ ನ್ಯೂಸ್ ಎಂಬ ಭೂತ: ಕೆ.ಎನ್.ಶಾಂತಕುಮಾರ್

  1. Ananda Prasad

    ಚುನಾವಣಾ ವ್ಯವಸ್ಥೆ ಹಾಗೂ ರಾಜಕೀಯ ವ್ಯವಸ್ಥೆಯನ್ನು ಬಂಡವಾಳಶಾಹಿಗಳ ಕಪ್ಪು ಹಣ ಹಾಗೂ ಅನೈತಿಕ ಮೂಲಗಳಿಂದ ಗಳಿಸಿದ ಹಣ ಹಾಳುಗೆಡವಿದ್ದರೆ ಪತ್ರಿಕೋದ್ಯಮವನ್ನು ಜಾಹೀರಾತು ಲಾಬಿ ಹಾಳುಗೆಡವಿದೆ. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಶಿಥಿಲವಾಗುತ್ತಿದೆ. ೭೦% ಪತ್ರಿಕೋದ್ಯಮದ ಹಣ ಜಾಹೀರಾತು ಲಾಬಿಯಿಂದ ಬರುತ್ತದೆ ಎಂದಾದರೆ ಅದು ಜನಪರ ನಿಲುವು ತಳೆಯುವುದು ಕಷ್ಟ. ಹೀಗಾಗಿಯೇ ಇಂದಿನ ಪತ್ರಿಕೋದ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಜನಪರವಾಗಿರದೆ ಬಂಡವಾಳಶಾಹಿಗಳ ಪರವಾಗಿರುವುದು. ಜಾಹೀರಾತುಗಳಿಲ್ಲದೆ ಜನರ ಹಣದಿಂದಲೇ ನಡೆಯುವ ಪತ್ರಿಕೆಗಳು ಮಾತ್ರ ಜನಪರ ನಿಲುವು ತಳೆಯುವ ದಿಟ್ಟತನ ತೋರಿಸಬಲ್ಲವು. ಉದಾಹರಣೆಗೆ ಲಂಕೇಶ್ ಪತ್ರಿಕೆಯಂಥ ಪತ್ರಿಕೆಗಳು.

    ರಾಜಕೀಯ ವ್ಯವಸ್ಥೆ ಶುದ್ಧವಾಗಬೇಕಾದರೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಬೇಕಾದರೆ ಜನರ ಹಣದಿಂದ ರಾಜಕೀಯ ಪಕ್ಷಗಳು ನಡೆಯುವ ವ್ಯವಸ್ಥೆ ಆಗಬೇಕು. ಇಲ್ಲದಿದ್ದರೆ ಮೋದಿಯವರು ಚುನಾವಣೆಗೆ ಬಂಡವಾಳಶಾಹಿಗಳಿಂದ ಅಪಾರ ಹಣ ಪಡೆದು ಅಬ್ಬರದ ಪ್ರಚಾರ ಮಾಡಿ ಗೆದ್ದ ನಂತರ ಅವರ ಪರವಾದ ನಿಲುವುಗಳನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಬರುತ್ತದೆ. ಈಗ ಮೋದಿಯವರು ರೈತರ ಜಮೀನು ಕಸಿದುಕೊಳ್ಳುವ ತಿದ್ದುಪಡಿಯ ಸುಗ್ರೀವಾಜ್ಞೆ ತರುವಂತೆ ಚುನಾವಣೆಗೆ ಹಣ ಕೊಟ್ಟ ಬಂಡವಾಳಶಾಹಿಗಳು ಮೋದಿಯವರ ಕುತ್ತಿಗೆ ಹಿಡಿದಿದ್ದಾರೆ. ಹೀಗಾಗಿ ಅಂಥ ತಿದ್ದುಪಡಿ ರೈತರ ಹಿತ ಬಲಿ ಕೊಟ್ಟಾದರೂ ಮೋದಿಯವರು ತರಲೇಬೇಕಾದ ಅನಿವಾರ್ಯತೆ ಬಂದಿದೆ. ಇಂದು ಮೋದಿಯವರ ಸ್ಥಿತಿ ಲೇವಾದೇವಿಗಾರರಿಂದ ಸಾಲ ಪಡೆದ ರೈತನ ಸ್ಥಿತಿಯೇ ಆಗಿದೆ. ಚುನಾವಣೆಗೆ ಅಬ್ಬರದ ಪ್ರಚಾರಕ್ಕೆ ಹಣ ಕೊಟ್ಟ ಬಂಡವಾಳಶಾಹಿಗಳು ಈಗ ತಮಗೆ ಬೇಕಾದ ಕಾನೂನು ತರಲು ಮೋದಿಯವರ ಕುತ್ತಿಗೆ ಹಿಡಿಯುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೈಪಾಸ್ ಮಾಡಿ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡುವಂತೆ ಎಲ್ಲರೂ ಒತ್ತಾಯ ತರುತ್ತಿದ್ದಾರೆ. ಬಡವರ ಭಾರತದ ಮೇಲೆ ಉಳ್ಳವರ ಭಾರತ ತನ್ನ ಸುಗ್ರೀವಾಜ್ಞೆಗಳನ್ನು ಹೇರಲು ಮುಂದಾಗುತ್ತಿದೆ. ಇದನ್ನೆಲ್ಲಾ ಜನರಿಗೆ ತಲುಪಿಸಿ ಜನಜಾಗೃತಿ ಮಾಡಬೇಕಾಗಿದ್ದ ಮಾಧ್ಯಮಗಳು ಜಾಹೀರಾತುದಾರರ ಲಾಬಿಯಲ್ಲಿ ಸಿಲುಕಿ ಅಸಹಾಯಕವಾಗಿವೆ. ಭಾರತದ ರೈತರ ಹಾಗೂ ಬಡವರ ಹಿತ ಕಾಯುವುದು ಯಾರು ಎಂಬುದು ದೊಡ್ಡ ಪ್ರಶ್ನಾರ್ಥಕ ಚಿನ್ಹೆಯಾಗಿ ಕಂಡುಬರುತ್ತಿದೆ.

    Reply
  2. ಥುತ್ತೆರಿಕೆ

    ಏನೋಪ್ಪ.. ಪ್ರಜಾವಾಣಿಯೇ ಈಗ ಸುದ್ದಿಗಳಿಗೆ ಹಣ ತೆಗೆದುಕೊಳ್ಳುತ್ತದೆಯಂತೆ. ಒಂದು ಕಾರ್ಯಕ್ರಮಕ್ಕೆ ಇಷ್ಟು ಎಂದು ನಿಗದಿ ಮಾಡಿದೆಯಂತೆ. ವಿಸ್ತೃತ ವರದಿ ಮಾಡುವುದಕ್ಕೆ ಹಣ ಪಡೆಯುತ್ತದೆ ಎಂದು ಯಾವುದೋ ಜಿಲ್ಲಾ ವರದಿಗಾರರು ಹೇಳಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಕಿವಿಗೆ ಬಿತ್ತು. ಶಾಂತಕುಮಾರ್ ಅವರ ಸಿಟ್ಟು ನಿಜವಾ?

    Reply

Leave a Reply

Your email address will not be published. Required fields are marked *