Daily Archives: March 8, 2015

ಲಿಂಗಾನುಪಾತ ಮತ್ತು ಹೆಚ್ಚುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ


– ರೂಪ ಹಾಸನ


ಇಂದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಿತರಾಗುತ್ತಿದ್ದಾರೆ, ಔದ್ಯೋಗಿಕ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ, ಆರ್ಥಿಕವಾಗಿ ಒಂದಿಷ್ಟು ಸಬಲರಾಗುತ್ತಿದ್ದಾರೆ ಎಂಬುದು ತಕ್ಷಣಕ್ಕೆ ಕಣ್ಣಿಗೆ ಕಾಣಿಸುವ ಸತ್ಯಗಳಾದರೂ ಇದರ ಒಳ ಹೊಕ್ಕು ವಿಶ್ಲೇಷಿಸುತ್ತಾ ಹೋದರೆ ನಿಗೂಢ ಕರಾಳತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅದರ ಒಟ್ಟು ಚಿತ್ರಣವನ್ನು ನೋಡಿದಾಗ ನಮಗೆ ಮನದಟ್ಟಾಗುವುದು ಇಷ್ಟೆಲ್ಲಾ ೩-೪ ದಶಕಗಳ ಹೋರಾಟ, ಜಾಗೃತಿ, ಪ್ರತಿಭಟನೆಗಳ ನಂತರವೂ ಹೆಣ್ಣಿನ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚಾಗುತ್ತಾ ಅವುಗಳ ಸ್ವರೂಪದಲ್ಲಿ ಮಾತ್ರ ಬದಲಾಗುತ್ತಿದೆ ಎಂಬುದು.

ಹೆಣ್ಣು ಜೀವ ಹಿಂದೆಂದಿಗಿಂತಲೂ ಇಂದು ಅತ್ಯಂತ ಆತಂಕದ ಸ್ಥಿತಿಯಲ್ಲಿದೆ. ನಮ್ಮ ಭಾರತದ ಪುರೋಹಿತಶಾಹಿ ಪುರುಷ ಕೇಂದ್ರಿತ ವ್ಯವಸ್ಥೆಯ ಕಬಂಧಬಾಹುಗಳ ಹಿಡಿತಕ್ಕೆ ಸಿಕ್ಕು ತಲೆತಲಾಂತರದಿಂದ ತಾರತಮ್ಯ, ಅಸಮಾನತೆ, ಶೋಷಣೆಯನ್ನು ಅನುಭವಿಸುತ್ತಲೇ ಬಂದಿರುವ woman-unchainedಹೆಣ್ಣು ೯೦ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಜಾಗತೀಕರಣ, ಉದಾರಿಕರಣ, ಖಾಸಗೀಕರಣದ ಮುಕ್ತ ಆರ್ಥಿಕ ನೀತಿಗಳಿಂದಾಗಿ, ಆಧುನಿಕತೆ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ನಾವು ಊಹಿಸಲೇ ಸಾಧ್ಯವಿಲ್ಲದಂತಹ ರೀತಿಗಳಲ್ಲಿ, ರೂಪಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ನಮ್ಮ ಕಳವಳವನ್ನು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ನಮಗೆ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಅವರ ಮಾತು ಮುಖ್ಯವೆನಿಸುತ್ತದೆ. ’ಬದುಕಿನ ಎಲ್ಲಾ ಮುಖಗಳಲ್ಲೂ ಮಹಿಳೆಯರು ಒಂದೋ ಕಾಣೆಯಾಗಿದ್ದಾರೆ, ಕಳೆದು ಹೋಗುತ್ತಿದ್ದಾರೆ, ಇಲ್ಲವಾಗುತ್ತಿದ್ದಾರೆ ಇಲ್ಲವೇ ದೈನೇಸಿ ಬದುಕು ಸಾಗಿಸುತ್ತಿದ್ದಾರೆ. ಹೆಣ್ಣು ಭ್ರೂಣವಾಗಿ ತಾಯಿಯ ಗರ್ಭ ಸೇರಿದಾಗಿನಿಂದ ಅಂತಿಮವಾಗಿ ಭೂಮಿಯ ಗರ್ಭ ಸೇರುವವರೆಗೆ ತಾರತಮ್ಯ, ಪಕ್ಷಪಾತ, ದೌರ್ಜನ್ಯ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾಳೆ. ಪುರುಷಶಾಹಿಯು ವಿಜೃಂಭಿಸುವ ಈ ಸಮಾಜದಲ್ಲಿ ಅಭಿವೃದ್ಧಿಯು ಕೇವಲ ಏಕಲಿಂಗಿ ಪ್ರಕ್ರಿಯೆಯಾಗಿ ಚಿತ್ರಿಸಲ್ಪಡುತ್ತಿದೆ.ಇದನ್ನು ವಿವರಿಸಿಕೊಳ್ಳುವ ವಿವೇಕ ಸಮಾಜಕ್ಕೆ ಬರದಿದ್ದರೆ ಹೆಣ್ಣಿನ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ.’ ಈ ಮಾತುಗಳನ್ನು ಕೇಂದ್ರದಲ್ಲಿರಿಸಿಕೊಂಡೇ ಮಹಿಳೆಯ ಸಮಸ್ಯೆಗಳನ್ನು ವಿವರಿಸಿಕೊಂಡಾಗ ಮಾತ್ರ ನಮಗೆ ಸತ್ಯ ಗೋಚರಿಸಬಹುದೆನಿಸುತ್ತದೆ.

ಕಣ್ಣಿಗೆ ಕಾಣುವ ದೌರ್ಜನ್ಯವನ್ನು ಪ್ರತಿಭಟಿಸಬಹುದು, ಪ್ರಶ್ನಿಸಬಹುದು, ನ್ಯಾಯ ಕೇಳಬಹುದು. ಆದರೆ ಕಣ್ಣಿಗೇ ಕಾಣದಂತೆ, ಸದ್ದೇ ಆಗದ ರೀತಿಯಲ್ಲಿ ನಡೆಯುವ ದೌರ್ಜನ್ಯಗಳನ್ನು ಗುರುತಿಸುವುದು, ಇಂತಹ ದೌರ್ಜನ್ಯಗಳನ್ನು ಎಸಗುತ್ತಿರುವ ನಿಜವಾದ ಶತ್ರು ಯಾರೆಂದು woman-insightಕಂಡು ಹಿಡಿಯುವುದೇ ದುಸ್ತರವಾದರೆ ಯಾರ ವಿರುದ್ಧ ಹೋರಾಡುವುದು? ಈ ಹಿನ್ನೆಲೆಯಲ್ಲಿ ನಾವಿಂದು ಅತ್ಯಂತ ತುರ್ತಾಗಿ ಜಾಗೃತರಾಗಬೇಕಿರುವುದು, ಬೆಚ್ಚಿಬೀಳಿಸುವ ರೀತಿಯಲ್ಲಿ ಕುಸಿಯುತ್ತಿರುವ ಲಿಂಗಾನುಪಾತ ಮತ್ತು ಗರ್ಭದಲ್ಲೇ ಹೆಣ್ಣುಜೀವ ನಾಶವಾಗುತ್ತಿರುವ ವೇಗದ ಜೊತೆಗೆ ಈ ಕಾರಣದಿಂದಲೇ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತು.

ಹೆಣ್ಣಿನ ಕುರಿತ ನಮ್ಮ ಒಟ್ಟು ಸಮಾಜ ಮತ್ತು ವಿಶ್ವದ ನಿಲುವೇ ಇತಿಹಾಸದ ಕಾಲಾನುಕ್ರಮಣಿಕೆಯಲ್ಲಿ ನಿಕೃಷ್ಟವಾಗುತ್ತಾ ಬಂದಿರುವುದಕ್ಕೆ ಅನೇಕ ದಾಖಲೆಗಳನ್ನು ನಾವು ಕಾಣುತ್ತಾ ಹೋಗಬಹುದು. ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಹೆಣ್ಣೆಂದರೆ ಕೀಳು ಎಂಬ ಭಾವನೆ ಬೇರೆ ಬೇರೆ ಕಾರಣಗಳಿಗಾಗಿ ಆಳವಾಗಿ ಬೇರೂರುತ್ತಾ ಬಂದಿರುವುದರ ಪರಿಣಾಮವಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲೂ ಹೆಣ್ಣಿನ ಪರಿಸ್ಥಿತಿ ಪುರುಷನಿಗೆ ಹೋಲಿಸಿದರೆ ಹೀನಾಯವಾಗುತ್ತಾ ಹೋದುದಕ್ಕೆ ನಿದರ್ಶನಗಳಿವೆ. ಈ ಕಾರಣಕ್ಕೇ ಹೆಣ್ಣುಮಗು ಹುಟ್ಟಿದೊಡನೆ ಅದಕ್ಕೆ ವಿಷವುಣ್ಣಿಸಿ, ಬಾಯಿಗೆ ಭತ್ತ, ಜೊಂಡುಹುಲ್ಲು ತುಂಬಿ ಬೇರೆ ಬೇರೆ ಕ್ರೂರ ವಿಧಾನಗಳಿಂದ ಕೊಲ್ಲುತ್ತಿದ್ದುದು ಚರಿತ್ರೆಯಲ್ಲಿ ದಾಖಲಾಗಿದೆ. ಗರ್ಭದಲ್ಲಿರುವ ಶಿಶು ಹೆಣ್ಣೋ-ಗಂಡೋ ಎಂದು ಗುರುತಿಸಲು ಅನೇಕ ಅನಾಗರಿಕ ವಿಧಾನಗಳನ್ನು ಆ ಕಾಲಕ್ಕೇ ಪ್ರಯತ್ನಿಸಲಾಗಿದ್ದಕ್ಕೆ ನಿದರ್ಶನಗಳಿವೆ. ಆದರೆ ಇಂದು ಯಾವ ಕಷ್ಟವೂ ಇಲ್ಲದಂತೆ, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಾದ ಅಲ್ಟ್ರಾ ಸೋನೋಗ್ರಫಿ, ಸ್ಕ್ಯಾನಿಂಗ್ ಯಂತ್ರಗಳಿಂದ ಹೆಣ್ಣುಭ್ರೂಣ ಪತ್ತೆ ಮತ್ತು ಅದರಿಂದಾಗಿ ಹತ್ಯೆಯ ವಿಧಾನಗಳು ಸುಲಭವಾಗಿ ಅತ್ಯಂತ ಸೂಕ್ಷ್ಮವಾಗಿ, ಕಣ್ಣಿಗೆ ಕಾಣದ ರೀತಿಯಲ್ಲಿ ಹೆಣ್ಣನ್ನು ನಾಶ ಮಾಡಲು ಪಣ ತೊಟ್ಟಂತೆ ನಿಂತಿರುವಾಗ ಯಾವ ಆಯುಧದಿಂದ ಈ ಶತ್ರುವನ್ನು ನಿವಾರಿಸಿಕೊಳ್ಳುವುದು?

ಹೆಣ್ಣಿನ ಸಂತತಿಯೇ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಹಿನ್ನೆಲೆಯಲಿ ಜಗತ್ತಿನಲ್ಲೇ ಚೀನಾ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಭಾರತ, ಮುಂದಿನ ಸ್ಥಾನಗಳಲ್ಲಿ ಶ್ರೀಲಂಕಾ, ನೇಪಾಳ, ಕೊರಿಯಾ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ ಮುಂತಾದ ರಾಷ್ಟ್ರಗಳಲ್ಲಿ woman-abstractಹೆಣ್ಣಿನ ಸಂಖ್ಯೆಯಲ್ಲಿ ಅಗಾಧ ಪ್ರಮಾಣದ ಕುಸಿತವುಂಟಾಗುತ್ತಿರುವುದು ಗೋಚರಿಸುತ್ತಿದೆ. ಈ ಪ್ರಮಾಣದ ಲಿಂಗಾನುಪಾತವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆ ಪ್ರತಿ ವರ್ಷ ಸೆಪ್ಟೆಂಬರ್ ೨೪ನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ಎಂದು ಘೋಷಿಸಿ ಜನರಲ್ಲಿ ಹೆಣ್ಣು ಭ್ರೂಣಹತ್ಯೆಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ.

ನಮ್ಮ ದೇಶದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತಿದೆ. ಆರು ದಶಕಗಳ ಜನಗಣತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹೆಣ್ಣುಮಕ್ಕಳ ಸಂಖ್ಯೆ ದೇಶದಲ್ಲಿ ಕುಸಿಯುತ್ತಿರುವ ಪ್ರಮಾಣವನ್ನು ಗುರುತಿಸಬಹುದು. ಪ್ರತಿ ೧೦೦೦ ಪುರುಷರಿಗೆ ಉಳಿದಿರುವ ಹೆಣ್ಣುಮಕ್ಕಳು ೧೯೬೧ರಲ್ಲಿ ೯೭೬, ೧೯೭೧ರಲ್ಲಿ ೯೬೪, ೧೯೮೧ರಲ್ಲಿ ೯೬೨, ೧೯೯೧ರಲ್ಲಿ ೯೪೫, ೨೦೦೧ರಲ್ಲಿ ೯೨೭ ಮತ್ತು ೨೦೧೧ರಲ್ಲಿ ೯೧೪. ಇದೇ ಜನಗಣತಿಯಲ್ಲಿ ೩೦ ವರ್ಷದೊಳಗಿನ ಪುರುಷ-ಮಹಿಳೆ ಅನುಪಾತವು ೧೦೦೦ಕ್ಕೆ ೮೯೭ ಆಗಿದೆ.೩೧-೫೦ ವರ್ಷದೊಳಗಿನವರ ಲೆಕ್ಕಾಚಾರದಲ್ಲಿ ೯೫೫ ಇದ್ದರೆ, ೫೦ ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ೯೯೬ರಷ್ಟಿದೆ. ಆರು ವರ್ಷದೊಳಗಿನ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದ್ದು ಕಳೆದ ಮೂರು ದಶಕಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಹೆಣ್ಣುಮಕ್ಕಳ ಬದುಕನ್ನು ಹುಟ್ಟುವ ಮೊದಲೇ ಕಿತ್ತುಕೊಳ್ಳಲಾಗಿದೆ. ಕಾಕತಾಳೀಯವೆಂಬಂತೆ ಲಿಂಗಪತ್ತೆ ಹಚ್ಚುವ ಸ್ಕ್ಯಾನಿಂಗ್ ಯಂತ್ರ ದೇಶವನ್ನು ಪ್ರವೇಶಿಸಿಯೂ ಮೂರು ದಶಕವಾಯ್ತು! ಈ ಯಂತ್ರ ಮತ್ತು ಅದರಿಂದ ಭ್ರೂಣದ ಲಿಂಗ ಪತ್ತೆ ಮಾಡಿ ಕೊಲ್ಲುತ್ತಿರುವ ವೈದ್ಯರು ಹೆಣ್ಣು ಸಂತತಿಯ ಪಾಲಿಗೆ ಯಮದೂತರಾಗಿದ್ದಾರೆ.

ಕರ್ನಾಟಕದ ವಿಷಯಕ್ಕೆ ಬಂದರೆ ೧೯೯೧ರಲ್ಲಿ ೯೬೦ಇದ್ದ ಅನುಪಾತವು ೨೦೦೧ರಲ್ಲಿ ೯೪೫ಕ್ಕಿಳಿದಿತ್ತು, ಈ ೨೦೧೧ರ ಜನಗಣತಿಯಲ್ಲಿ ಅದು ೯೪೩ಕ್ಕೆ ಕುಸಿದಿರುವುದು ದಾಖಲಾಗಿದೆ. ಈ ಅಂಕಿಅಂಶಗಳು ದಶಕದಿಂದ ದಶಕಕ್ಕೆ ಹೆಣ್ಣಿನ ಪ್ರಮಾಣ ಯಾವ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂಬುದರ ದ್ಯೋತಕವಾಗಿದೆ. ಹಾಗೇ ರಾಜ್ಯದ ಐದು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರುಗಳಲ್ಲಿ ಪ್ರತಿ ೧೦೦೦ ಪುರುಷರಿಗೆ ಕ್ರಮವಾಗಿ ೧೦೯೪, ೧೦೨೦, ೧೦೧೯, ೧೦೧೦ ಮತ್ತು ೧೦೦೮ರಷ್ಟು ಮಹಿಳೆಯರು ಕಳೆದ ೨೦೧೧ರ ಜನಗಣತಿಯಲ್ಲಿ ದಾಖಲಾಗಿದೆ. ಆದರೆ ೨೦೦೧ ಮತ್ತು ೨೦೧೧ರ ಜನಗಣತಿಯಲ್ಲಿ ೦-೬ವರ್ಷದ ಮಕ್ಕಳ ಅನುಪಾತವನ್ನು ಗಮನಿಸಿದರೆ ಹೆಣ್ಣುಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಈ ಜಿಲ್ಲೆಗಳಲ್ಲಿ ಕೂಡ ಹೆಣ್ಣುಮಕ್ಕಳ ಸಂಖ್ಯೆ ಸರಾಸರಿ ೯೬೦-೯೭೦ಕ್ಕೆ ಇಳಿದಿರುವುದು ಗಾಬರಿ ಹುಟ್ಟಿಸುವಂತಿದೆ. ಹಾಗಿದ್ದರೆ ಉಳಿದ ಹೆಚ್ಚು ಕಡಿಮೆ ೪೦ಕ್ಕೂ ಅಧಿಕ ಹೆಣ್ಣುಕಂದಮ್ಮಗಳು ಏನಾದವು? ಕಳೆದ ೧೦-೧೫ ವರ್ಷಗಳಲ್ಲಿ ಈ ಪ್ರಮಾಣದ ಏರುಪೇರಿಗೆ ಕಾರಣವೇನು? ಇದು ಈ ಜಿಲ್ಲೆಗಳಲ್ಲೂ ಹೆಣ್ಣುಭ್ರೂಣಹತ್ಯೆ ನಿರಾತಂಕವಾಗಿ ನಡೆಯುತ್ತಿರುವ ಸೂಚನೆಯಲ್ಲದೇ ಬೇರಿನ್ನೇನು? ಹಾಸನದಂತಾ ಕೇವಲ ೧೭ಲಕ್ಷ ಚಿಲ್ಲರೆ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ೫೩ ಸ್ಕ್ಯಾನಿಂಗ್ ಸೆಂಟರ್‌ಗಳು ತಲೆ ಎತ್ತಿ ನಿಂತಿವೆ. ಇಲ್ಲಿ ಹೇಗೂ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಾಗಿಯೇ ಇದೆ ಎಂಬ ನಿರಾಳತೆಯಲ್ಲಿರುವ child-rapeಜಿಲ್ಲಾಡಳಿತ ಈ ಕೇಂದ್ರಗಳ ಬಗೆಗೆ ಯಾವ ವಿಶೇಷ ಎಚ್ಚರಿಕೆಯನ್ನಾಗಲೀ, ಗಮನವನ್ನಾಗಲೀ ಹರಿಸಿಲ್ಲ. ಹೀಗಾಗಿ ಜಿಲ್ಲೆಯ ಗರ್ಭಿಣಿಯರ ಜೊತೆಗೆ ಅಕ್ಕಪಕ್ಕದ ಜಿಲ್ಲೆಯ ಗರ್ಭಿಣಿಯರೂ ಇಲ್ಲಿಗೆ ಬಂದು ನಿರಾತಂಕವಾಗಿ ಭ್ರೂಣ ಪತ್ತೆ ಮಾಡಿಸಿಕೊಂಡು ಹೋಗುತ್ತಿರುವ ಸುದ್ದಿ ಅಕ್ಕಪಕ್ಕದ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಿಂದ ಸಿಕ್ಕುತ್ತಲೇ ಇದೆ. ನಾವು ಪ್ರಶ್ನಿಸುತ್ತಲೇ ಇದ್ದೇವೆ. ಆದರೆ ಅಧಿಕಾರಿಗಳು ಕಿವುಡಾಗಿ ಕುಳಿತಿದ್ದಾರೆ.

ಸಾಮಾಜಿಕವಾಗಿ ನೋಡಿದಾಗ ಹೆಣ್ಣು ಮತ್ತು ಗಂಡುಗಳಿಬ್ಬರೂ ಸಮಾನವಾಗಿರಬೇಕು ಮತ್ತು ಸಂತತಿಗಳೆರಡೂ ಸಮಸಂಖ್ಯೆಯಲ್ಲಿರಬೇಕೆಂಬುದು ನಮ್ಮ ನಿರೀಕ್ಷೆ. ಆದರೆ ಜೈವಿಕ ಹಾಗೂ ಪ್ರಾಕೃತಿಕವಾಗಿ ನೋಡಿದಾಗ ಪ್ರಾಣಿ, ಪಕ್ಷಿ, ಕೀಟಗಳ ಬದುಕನ್ನು ಅಧ್ಯಯನ ಮಾಡಿರುವ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಹೆಣ್ಣು ಸಂತತಿ ಪುರುಷ ಸಂತತಿಗಿಂತಾ ಹೆಚ್ಚಾಗಿಯೇ ಇರುತ್ತದೆ. ಸಂತಾನಾಭಿವೃದ್ಧಿಯ ಜವಾಬ್ದಾರಿ ಹೆಣ್ಣಿನ ಮೇಲೆಯೇ ಹೆಚ್ಚಾಗಿರುವುದರಿಂದ ಸಹಜವಾಗಿ ಹೆಣ್ಣು ಸಂತತಿ ಹೆಚ್ಚಿನ ಪ್ರಮಾಣದಲ್ಲಿರಬೇಕೆಂಬ ಲೆಕ್ಕಾಚಾರ ಪ್ರಕೃತಿಗಿರಬಹುದು. ಯಾವುದೇ ರೀತಿಯ ಪೂರ್ವಗ್ರಹಗಳಿಲ್ಲದೇ, ಎಲ್ಲಾ ರೀತಿಯಲ್ಲೂ ಸಮಾನವಾದ ಅವಕಾಶಗಳಿದ್ದಾಗ ಪ್ರಕೃತಿಯಲ್ಲಿ ೧೦೦೦ ಗಂಡಿಗೆ ಪ್ರತಿಯಾಗಿ ಅಂದಾಜು ೧೦೩೩ ಹೆಣ್ಣುಮಕ್ಕಳು ಹುಟ್ಟಬೇಕೆಂದು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಗರ್ಭಧರಿಸಿದ ನಂತರ ಆರೋಗ್ಯದಲ್ಲಿ ನೈಸರ್ಗಿಕ ಏರುಪೇರಾಗುವ ಸಂದರ್ಭದಲ್ಲಿ ಕೂಡ ಗಂಡು ಭ್ರೂಣಕ್ಕೇ ಬದುಕುವ ಸಾಧ್ಯತೆ ಹೆಣ್ಣಿಗಿಂತಾ ಕಡಿಮೆ. ನೈಸರ್ಗಿಕ ಗರ್ಭಪಾತ, ಶಿಶು ಮರಣಗಳಲ್ಲಿ ಗಂಡಿನ ಪ್ರಮಾಣವೇ ಹೆಚ್ಚು. ಹೆಣ್ಣಿನ ದೈಹಿಕ ಸಬಲತೆ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ ಜನಿಸಲು ಪೂರಕವಾಗಿದೆ. ಹೀಗಿರುವಾಗ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯಲ್ಲೇ ಈ ಪ್ರಮಾಣದ ಕುಸಿತಕ್ಕೆ ಕಾರಣವೇನೆಂದು ಹುಡುಕಬೇಕಲ್ಲವೇ? ಹೆಣ್ಣಿನ ಪರವಾದ ಪ್ರಕೃತಿಯ ನಿಯಮವನ್ನು ಮುರಿದು ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಅತ್ಯಂತ ಕ್ರೂರವಾದ, ಅಮಾನವೀಯವಾದ ರೀತಿಯಲ್ಲಿ ಹೆಣ್ಣನ್ನು ಗರ್ಭದಲ್ಲಿಯೇ ಕೊಲ್ಲುತ್ತಿರುವುದು ಮತ್ತು ಅಸಮಾನತೆಯನ್ನು ಬಿತ್ತುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳೇನು ಎಂದು ನಾವೀಗ ತುರ್ತಾಗಿ ಯೋಚಿಸಿ ಕಾರ್ಯಪ್ರವರ್ತರಾಗದಿದ್ದರೆ ಮುಂದೆ ಹೆಣ್ಣು ಸಂತತಿಗೆ ಭೂಮಿ ಮೇಲೆ ಉಳಿಗಾಲವೇ ಇಲ್ಲವೆನಿಸುತ್ತದೆ. ಹೆಣ್ಣು ನಾಶದೊಂದಿಗೇ ಮನುಷ್ಯ ಸಂತತಿಯೇ ಅವನತಿಯೆಡೆಗೆ ಸಾಗಲಿದೆಯೆಂಬ ವಾಸ್ತವದೆಡೆಗೆ ಇನ್ನಾದರೂ ಸಮಾಜ ಕಣ್ಣು ತೆರೆಯುವಂತಾಗಬೇಕು.

ಮನುಷ್ಯ ಶಿಕ್ಷಿತನೂ ನಾಗರಿಕನೂ ವಿಚಾರವಂತನೂ ಆಗುತ್ತಾ ಹೋದಷ್ಟೂ ತನ್ನ ಸಹಜೀವಿಯೊಂದಿಗೆ ಸಹೃದಯತೆ ಹೆಚ್ಚಾಗಬೇಕು……ಹಾಗೆಂದು ನಮ್ಮ ನಿರೀಕ್ಷೆ. ಪ್ರಕೃತಿಯ ಹೆಣ್ಣಿನ ಪರವಾದ ಆಶಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಆಗುತ್ತಿರುವುದೇನು? ’ಹೆಣ್ಣು ಸಂಗಾತಿಯಾಗಿ ಬೇಕು ಆದರೆ ಮಗಳಾಗಿ ಬೇಡ’ ಎಂಬ ಮನೋಭಾವ ಸಮಾಜದಲ್ಲಿ ಹೆಚ್ಚುತ್ತಾ ಸಾಗಿದಂತೆ ಹೆಣ್ಣಾಗಿ ಈ ಭೂಮಿ ಮೇಲೆ ಹುಟ್ಟಿದ ನಂತರ ಇದ್ದ ಅಸಮಾನತೆ ದೌರ್ಜನ್ಯದ ಕತ್ತಿ ಗರ್ಭಕ್ಕೇ ಚಾಚಿ ಕೊಂಡು ಭ್ರೂಣವನ್ನೇ ತುಂಡರಿಸಿ ಬಿಸುಟುವ ಹಂತವನ್ನು ಇಂದು ತಲುಪಿದೆ. ಹೀಗಾಗೇ ಪ್ರತಿ ವರ್ಷ ೬ ಲಕ್ಷಕ್ಕೂ ಅಧಿಕ ಹೆಣ್ಣು ಭ್ರೂಣಗಳು ಜೀವ ತಳೆಯದೇ ಮಣ್ಣಾಗಿ ಹೋಗುತ್ತಿವೆ.

ಈ ಅಗಾಧ ಪ್ರಮಾಣದ ಗಂಡು-ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ ಈಗಾಗಲೇ ರಾಜಾಸ್ಥಾನ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳು ಹೆಣ್ಣುವಧುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಇನ್ನೊಂದು ಕ್ರೂರ ಪದ್ಧತಿ ’ವಧು ಮಾರಾಟ’! ’ಗುಜ್ಜರ್ ಮದುವೆ’ ಹೆಸರಿನ ಈ ಹಣದ ಒಪ್ಪಂದದ ಮದುವೆ ಕಳೆದ ೧೦-೧೨ ವರ್ಷಗಳಿಂದ ಧಾರವಾಡ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ರೋಗದಂತೆ ಹರಡುತ್ತಿದೆ. ಬಡ ಹೆಣ್ಣು ಇಲ್ಲಿ ಕೇವಲ ಮಾರಾಟದ ಸರಕು. rape-illustrationವಿವಾಹದ ಸೋಗಿನಲ್ಲಿ ಇಂತಹ ಅಮಾನವೀಯ ಕೃತ್ಯಗಳು ಹೆಣ್ಣಿನ ಪೋಷಕರು, ಮದುವೆ ದಲ್ಲಾಳಿಗಳು, ವಧು ಮಾರಾಟದ ಏಜೆಂಟರ ಸಂಘಟಿತ ಪ್ರಯತ್ನದಿಂದ ನಡೆಯುತ್ತಿದೆ. ಹೀಗೆ ಮದುವೆ ಮಾಡಿ ಕೊಂಡು ಹೋದ ಒಂದೇ ಹೆಣ್ಣು ಆ ಕುಟುಂಬದ ಹಲವು ಪುರುಷರ ಕಾಮನೆಗಳನ್ನು ತಣಿಸುವ ’ವಸ್ತು’ವಾಗಿ ಬಳಸುವಂತಾ ಸ್ಥಿತಿ ಅಲ್ಲಿದೆ. ಅಲ್ಲಿ ಹಗಲು ಹೊಲಗಳಲ್ಲಿ ದುಡಿತ, ರಾತ್ರಿ ಲೈಂಗಿಕ ಜೀತದಾಳಾಗಿ ಬಳಕೆ. ಇದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಮತ್ತೆ ಮಾರಾಟ. ಇಲ್ಲಿ ತಮ್ಮ ಅಸ್ತಿತ್ವದ ಅರಿವಿಲ್ಲದ, ಹೆಸರೇ ಇಲ್ಲದ ಹೆಣ್ಣುಗಳ ಕೊಂಡುಕೊಳ್ಳುವಿಕೆ, ಮಾರಾಟ, ಮರು ಮಾರಾಟವನ್ನು ಯಾವುದೇ ಎಗ್ಗಿಲ್ಲದೇ, ತರಕಾರಿ ವ್ಯಾಪಾರದಂತೆ ನಡೆಸಲಾಗುತ್ತಿದೆ ಎಂದರೆ, ನಾವು ನಾಗರೀಕ ಜಗತ್ತಿನಲ್ಲಿ ಬದುಕುತ್ತಿದ್ದೇವೆಯೇ?-ಕರುಳು ಚೀರಿ ಕೇಳುತ್ತದೆ.

ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಹೆಣ್ಣಿನ ಹೊರ ದೇಹದ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಈಗ ಗರ್ಭಕ್ಕೇ ಇಳಿದು, ಅನೈಸರ್ಗಿಕವಾಗಿ ಅವಳ ಸಂತತಿಯನ್ನು ಹೊಸಕಿ ಸಾಯಿಸುತ್ತಿದೆ. ಜೊತೆಗೆ ಬಹುಸಂಖ್ಯಾತ ಪುರುಷರಿಗೆ ಸಂಗಾತಿಯಾಗಿ ಹೆಣ್ಣು ದೊರಕದಿದ್ದಾಗ ವ್ಯಗ್ರಗೊಳುವ ಕೆಲ ಪುರುಷರು ಕಾನೂನುಬಾಹಿರ ಹಿಂಸೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ ಎಂದೂ ಮನೊವಿಜ್ಞಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ಒತ್ತು ನೀಡುವಂತೆ ಇತ್ತಿಚೆಗಿನ ಕೆಲವರ್ಷಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಮಾಣ ಆತಂಕ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚಾಗಿದೆ. ಪ್ರಾಪ್ತ ಹೆಣ್ಣುಗಳ ಮೇಲೆ ಎಲ್ಲೋ ಒಮ್ಮೊಮ್ಮೆ ಮಾತ್ರ ಘಟಿಸುತ್ತಿದ್ದ ಅತ್ಯಾಚಾರ ಪ್ರಕರಣಗಳು ಈಗ ಪ್ರತೀ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ ೫೦-೬೦ ಮಹಿಳೆಯರ ಮೇಲೆ ಅದರಲ್ಲೂ ಅರ್ಧದಷ್ಟು ಅಪ್ರಾಪ್ತ ಹೆಣ್ಣುಮಕ್ಕಳ ಮೇಲಾಗುತ್ತಿದೆ ಎಂದರೆ ಮುಂದಿನ ದಿನಗಳನ್ನು ನೆನೆದು ಎದೆ ನಡುಗುತ್ತದೆ. ಇದು ದಾಖಲಾಗುತ್ತಿರುವ ಪ್ರಮಾಣ ಮಾತ್ರ. ಮರ್ಯಾದೆಗಂಜಿ ದಾಖಲಾಗದೇ ಉಳಿಯುವ ಪ್ರಮಾಣ ಅದಿನ್ನೆಷ್ಟಿದೆಯೋ. ಹೆಣ್ಣು ಮಕ್ಕಳು ಇನ್ನೆಂತಹ ಭೀಕರ ಸಂಕಷ್ಟಕ್ಕೀಡಾಗುತ್ತಾ ಮುರುಟಿಹೋಗುತ್ತಿದ್ದಾರೋ?

ವಧುಗಳ ಕೊರತೆ ಉಂಟಾದರೆ ಸಹಜವಾಗಿ ವರದಕ್ಷಿಣೆ ಪಿಡುಗು ಕಡಿಮೆಯಾಗಿ, ವಧುದಕ್ಷಿಣೆಯ ಕಾಲ ಬರುತ್ತದೆ. ಹೆಣ್ಣಿಗೆ ಡಿಮ್ಯಾಂಡ್ ಹೆಚ್ಚಾಗುತ್ತದೆಂಬುದು ಸಾಮಾನ್ಯ ಜನರ ಅನಿಸಿಕೆ. ಆದರೆ ವರದಕ್ಷಿಣೆಯ ಪಿಡುಗು ಬೇರೆ ಬೇರೆ ರೂಪಗಳಲ್ಲಿ ಮೈತೆರೆದುಕೊಂಡು ನಮಗೆ ಎದುರಾಗುತ್ತಿದೆ. ಭಾವನಾತ್ಮಕವಾಗಿ ಹೆಣ್ಣನ್ನು ಬ್ಲ್ಯಾಕ್‌ಮೇಲ್ ಮಾಡಿ ಆಸ್ತಿಯ ಹಕ್ಕನ್ನು ಕೇಳದಂತೆ ತಡೆಯುವ ಹುನ್ನಾರ ಒಂದು ವಿಧಾನವಾದರೆ, ಉನ್ನತ ಶಿಕ್ಷಣಕ್ಕಾಗಿ ಮಾಡಿದ ಖರ್ಚಿನ ಹೆಸರಿನಲಿ, ಅಷ್ಟೋ ಇಷ್ಟೋ ಹಣದ ರೂಪದ ನೀಡಿಕೆಯಲ್ಲಿ, ಅದ್ಧೂರಿ ಮದುವೆಯ ನೆಪದಲ್ಲಿ, ವರದಕ್ಷಿಣೆ ಕೊಟ್ಟಂತೆ ಮಾಡಿ ಅವಳನ್ನು ಸ್ಥಿರ ಆಸ್ತಿಯಿಂದ ದೂರವಿರಿಸಿ ಗಂಡುಮಕ್ಕಳೇ ಹಂಚಿಕೊಳ್ಳುವುದು ಬಹಳಷ್ಟು ಸಂದರ್ಭದಲ್ಲಿ ಕಾಣಬರುತ್ತಿದೆ. ಆಸ್ತಿ ತಮ್ಮ ಕುಟುಂಬಕ್ಕೇ ಉಳಿಸಿಕೊಳ್ಳುವ ಧೂರ್ತತನದಿಂದಾಗಿ ಹೆಣ್ಣೇ ಬೇಡವೆಂದು ನಿರ್ಧರಿಸುವ, ತಮ್ಮ ವ್ಯಾಪಾರ, ವಹಿವಾಟುಗಳನ್ನು ನೋಡಿಕೊಳ್ಳಲು ಗಂಡೇ ಸಮರ್ಥ, ಹೆಣ್ಣಾದರೆ ಅವಳೊಂದಿಗೆ ಆಸ್ತಿಯೂ ಬೇರೆ ಕುಟುಂಬಕ್ಕೆ ಸೇರಿ ಬಿಡುತ್ತದೆಂಬ ಪೂರ್ವಗ್ರಹದಿಂದ ಹೆಣ್ಣು ಬೇಡವೆಂದು ನಿರ್ಧರಿಸುವ ಪೋಷಕರು ಹೆಚ್ಚಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯವಾದ ಕಾರಣ ಅಸಮಾನತೆಯ ಆಧಾರದಲ್ಲಿ ನಿಂತಿರುವ ನಮ್ಮ ಕೌಟುಂಬಿಕ ವ್ಯವಸ್ಥೆಯೇ ಆಗಿದೆ ಎಂಬುದು ನಿರ್ವಿವಾದವಾಗಿದೆ.

ಹೆಣ್ಣಿನ ಗುರುತಿಸುವಿಕೆಯ ಮಾನದಂಡಗಳೇ ಮುಕ್ಕಾಗಿರುವ ಭಾರತೀಯ ಸಂದರ್ಭದಲ್ಲಿ ನಾವು ಹೆಣ್ಣಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹೇಗೆಂದು ಚಿಂತಿಸಬೇಕಾಗಿದೆ. ಏಕೆಂದರೆ ಹೆಣ್ಣು ಮಕ್ಕಳು ಕಡಿಮೆಯಾಗುತ್ತಿರುವುದರಿಂದ ಎಲ್ಲ ಧರ್ಮಗಳಲ್ಲೂ ಈಗ ವಧುವಿಗೆ ಬೇಡಿಕೆ ಹೆಚ್ಚಾಗಿದೆ! ೨೦೦೧ರ ಜನಗಣತಿಯಂತೆ ಧರ್ಮಾಧಾರಿತವಾಗಿ ಪ್ರತಿ ೧೦೦೦ ಗಂಡುಮಕ್ಕಳಿಗೆ ಉಳಿದಿರುವ ಹೆಣ್ಣುಮಕ್ಕಳ ಸಂಖ್ಯೆ ಹೀಗಿದೆ….. ಸಿಖ್-೭೮೬, ಜೈನ-೮೭೦, ಹಿಂದೂ-೯೨೫, ಬೌದ್ಧ-೯೪೨, ಮುಸ್ಲಿಂ-೯೫೦, ಕ್ರೈಸ್ತ-೯೬೪. ಈ ಕಾರಣಕ್ಕೇ ಉತ್ತರಭಾರತದ ಧಾರ್ಮಿಕ ಸಂಘಟನೆಯೊಂದು ಭೇಟಿ ಬಚಾವೋ, ಬಹೂ ಲಾವೋ ಆಂದೋಲನವನ್ನು ಪ್ರಾರಂಭಿಸಿದೆಯಂತೆ! ಅಂದರೆ ತಮ್ಮ ಧರ್ಮದಲ್ಲಿ ಹುಟ್ಟಿರುವ ಹೆಣ್ಣುಮಗಳನ್ನು ತಮ್ಮ ಧರ್ಮದಲ್ಲೇ Indian Women Paintingsಉಳಿಸಿ ಬೇರೆ ಧರ್ಮದ ಹೆಣ್ಣನ್ನು ಮದುವೆಯಾಗಿ ತಮ್ಮ ಧರ್ಮಕ್ಕೆ ಕರೆತನ್ನಿ ಎಂಬ ಕ್ರೂರ ಸಂದೇಶವನ್ನು ನೀಡಲಾಗುತ್ತಿದೆ! ಈಗಾಗಲೇ ಇಲ್ಲಿ ಹೆಣ್ಣನ್ನು ಮದುವೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ತರಕಾರಿಯಂತೆ ಭಾವಿಸಲಾಗುತ್ತಿದೆ. ಈ ರೀತಿಯ ಅಸಮಾನ ಲಿಂಗಾನುಪಾತ ಮುಂದೆ ಹೆಣ್ಣಿಗಾಗಿ ಜಾತಿ-ಧರ್ಮಗಳ ನಡುವೆ ಭೀಕರ ಕಾಳಗವನ್ನೇ ಸೃಷ್ಟಿಸುವ ಮುನ್ಸೂಚನೆಯಂತೆ ಇದು ತೋರುತ್ತಿದೆ. ಹೆಣ್ಣಿನ ಆಯ್ಕೆಯ ಹಕ್ಕನ್ನು ಎಲ್ಲ ರೀತಿಯಿಂದಲೂ ದಮನಿಸುವ ಕ್ರೌರ್ಯ ಸಮಾಜದಲ್ಲಿ ಹೆಚ್ಚಳವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈಗಾಗಲೇ ಇದು ಮರ್ಯಾದಾ ಹತ್ಯೆಯ ಹೆಸರಿನಲ್ಲಿ ದೌರ್ಜನ್ಯದ ಕರಾಳ ರೂಪವನ್ನು ಪಡೆದು ಕೊಂಡಿದೆ.

ತಲೆತಲಾಂತರದಿಂದ ನಡೆದುಕೊಂಡು ಬಂದ ವೇಶ್ಯಾವಾಟಿಕೆಯೆಂಬ ಹೆಣ್ಣಿನ ಮೈಮಾರಾಟದ ದಂಧೆ ಇಂದು ಕರಾಳ ರೂಪವನ್ನು ಪಡೆದು ಬೃಹತ್ ಮಾಫಿಯಾ ಆಗಿ ಬೆಳೆದು ನಿಂತಿದೆ. ಹೆಣ್ಣುಮಕ್ಕಳ ನಾಪತ್ತೆಯೆಂಬ ಜಾಣಕುರುಡಿನ ಹುಡುಕಾಟದ ನಾಟಕ, ಮಹಿಳೆಯರ ಕಳ್ಳಸಾಗಾಣಿಕೆ ಮತ್ತು ಅಕ್ರಮ ಮಾರಾಟ ದಂಧೆ ಇದಕ್ಕೆ ಪೂರಕಾಗಿ ಹುಟ್ಟಿಕೊಂಡಿದ್ದು ಪ್ರತಿನಿತ್ಯ ಈ ವಿಷ ಜಾಲಕ್ಕೆ ನೂರಾರು ಹೆಣ್ಣುಮಕ್ಕಳು ಬಡತನದ ಅನಿವಾರ್ಯತೆ, ಅಜ್ಞಾನ, ಅನಕ್ಷರತೆ, ಪ್ರೀತಿ-ಕೆಲಸಗಳ ಆಮಿಷ, ಮೋಸ-ವಂಚನೆಗಳಿಂದಾಗಿ ನೂಕಲ್ಪಡುತ್ತಿದ್ದಾರೆ. [ಇಷ್ಟಪಟ್ಟು ಮೈಮಾರಿಕೊಳ್ಳುವ ಒಂದು ಸಮೂಹವೂ ನಮ್ಮ ಮಧ್ಯೆ ಇದ್ದು, ಅವರ ಕುರಿತು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ] ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. ಹ್ಯೂಮನ್ ರೈಟ್ಸ್ ವಾಚ್‌ನ ವರದಿಯಂತೆ ಇದುವರೆಗೆ ಅಂದಾಜು ೧೫೦ ಲಕ್ಷ ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ. ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತರ್‌ರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ.

ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ೨೦೧೨ರಲ್ಲಿ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ ೨೦೦-೩೦೦ ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ ೭೦ರಷ್ಟು ಬಾಲ್ಯವನ್ನು ದಾಟದವರು ಎಂಬುದು ಅತ್ಯಂತ ಆತಂಕಕಾರಿಯಾಗಿದೆ. ನಾಪತ್ತೆಯಾಗುವ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಅಡ್ಡಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಣಿಕಾ ಜಾಲವನ್ನು ಬೇಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲದಲ್ಲಿ ಬೀಳಿಸುವ, ಅವರನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿರುವುದು ನಿರ್ವಿವಾದ. ಹೆಣ್ಣಿನ ದೇಹವನ್ನು ವಸ್ತುವಾಗಿ ಬಳಸಿಕೊಂಡು ವ್ಯಾಪಾರದ ಆಟ ಆಡುತ್ತಿರುವ ವ್ಯವಸ್ಥೆಗೆ ವೇಶ್ಯಾವಾಟಿಕೆ ಲಾಭದಾಯಕ ಉದ್ದಿಮೆಯಾಗಿದೆ. ಅಸಮತೋಲನದ ಲಿಂಗಾನುಪಾತದಿಂದ ವೇಶ್ಯಾವಾಟಿಕೆಯ ದಂಧೆ ಈಗಾಗಲೇ ವ್ಯಾಪಕವಾಗಿದ್ದು, ಇನ್ನಷ್ಟು ತೀವ್ರವಾಗಿ ಹಬ್ಬುವ, ಎಳೆಯ ಹೆಣ್ಣುಮಕ್ಕಳು ಇದರ ಕರಾಳ ಬಾಹುಗಳಲ್ಲಿ ಬಂಧಿಯಾಗುವ ಸಾಧ್ಯತೆಗಳು ಅತೀ ಹೆಚ್ಚಾಗುತ್ತಿದೆ. ಹೀಗೆಂದೇ ಇದರ ನಿಯಂತ್ರಣಕ್ಕೆ ಮತ್ತು ಅನಿವಾರ್ಯವಾಗಿ ಈ ಕೂಪದಲ್ಲಿ ಬಿದ್ದ ಹೆಣ್ಣುಜೀವಗಳ ಪುನರ್‌ವಸತಿ ಹಾಗೂ ಪುನರ್‌ಜೀವನಕ್ಕೆ ತುರ್ತಾಗಿ ಗಮನ ನೀಡಬೇಕಾಗಿದೆ.

ಇದರ ಜೊತೆಗೇ ಈಗ ವ್ಯಾಪಕವಾಗಿ ಹಬ್ಬುತ್ತಿರುವ ಹೆಚ್‌ಐವಿ, ಏಡ್ಸ್‌ನಂತಾ ಮಾರಕ ರೋಗಗಳು ವಾಣಿಜ್ಯೀಕೃತ ವೇಶ್ಯಾವಾಟಿಕೆಯ ಬಹು ದೊಡ್ಡ ಬಳುವಳಿ ಎಂಬುದನ್ನು ನಾವು ಮರೆಯುವಂತಿಲ್ಲ. ಹೆಣ್ಣುಮಕ್ಕಳ ಕೊರತೆಯಿಂದಾಗಿಯೋ, ನೈಸರ್ಗಿಕ ಅಪೇಕ್ಷೆಯಿಂದಲೋ ವೇಶ್ಯಾವಾಟಿಕೆಯಲ್ಲಿ ತೊಡಗುವ ಪುರುಷ ಸಲಿಂಗಕಾಮಿಗಳೂ ಹೆಚ್ಚಾಗುತ್ತಿದ್ದಾರೆ. ಕರ್ನಾಟಕದಲ್ಲಿ ಸದ್ಯ ೨.೫೦ಲಕ್ಷಕ್ಕೂ ಅಧಿಕ ಹೆಚ್‌ಐವಿ ಪೀಡಿತರಿದ್ದಾರೆ. ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ೨೦೧೨ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ತೀವ್ರ ಅಪಾಯದ ಗುಂಪಿನಲ್ಲಿ ನೋಂದಣಿಯಾದ ವೇಶ್ಯೆಯರು ೭೯,೧೬೯ ಇದ್ದರೆ, ವೇಶ್ಯಾವಾಟಿಕೆಯಲ್ಲಿ ತೊಡಗಿರುವ ತೀವ್ರ ಅಪಾಯದ ಹಂತದಲ್ಲಿರುವ ಸಲಿಂಗಕಾಮಿ ಪುರುಷರು ೨೫೨೪೪. ಇದಲ್ಲದೇ ಲಕ್ಷಾಂತರ ಮಂದಿ ರೋಗವಾಹಕರೂ ಇದ್ದು ಪ್ರತೀ ಕ್ಷಣ ಈ ರೋಗ ಹಬ್ಬುತ್ತಿರುವುದು ದಾಖಲಾಗುತ್ತಿದೆ. ರೋಗ ನಿಯಂತ್ರಣಕ್ಕೆಂದೇ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಜೊತೆಗೆ, ರೋಗ ನಿಯಂತ್ರಣದ ಹೆಸರಿನಲ್ಲಿ ಪ್ರತಿ ಜಿಲ್ಲೆ-ತಾಲ್ಲೂಕುಗಳಲ್ಲೂ ಹಬ್ಬಿರುವ ೧೪೩ ಎನ್‌ಜಿಓಗಳು ತನ್ನ ವಿಸ್ತ್ರತಜಾಲದ ಮೂಲಕ ಸಮುದಾಯ ಆಧಾರಿತ ಸಂಘಟನೆ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರ ಸಹಭಾಗಿತ್ವದಲ್ಲಿ ಯಥಾಸ್ಥಿತಿಯನ್ನು ಕಾಯ್ದಿರಿಸುತಾ, ಬೇಡಿಕೆ ಮತ್ತು ಪೂರೈಕೆಯನ್ನು ಸದ್ದಿಲ್ಲದೇ ನಿರ್ವಹಿಸುತ್ತಾ ಈ ದಂಧೆಯ ವ್ಯಾಪಕತೆಗೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಾಣದಿದ್ದರೂ ಆಳಕ್ಕಿಳಿದು ಅಧ್ಯಯನ ಮಾಡುತ್ತಾ ಹೋದರೆ ಕರಾಳತೆ ಗೋಚರಿಸುತ್ತಾ ದಿಗ್ಭ್ರಾಂತಗೊಳಿಸುತ್ತದೆ. ಎಲ್ಲಕ್ಕಿಂಥಾ ಆತಂಕಕಾರಿಯೆಂದರೆ ಈ ಎರಡೂ ರೀತಿಯ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ಗಂಡು ಮತ್ತು ಹೆಣ್ಣು ಮಕ್ಕಳು ಗಾಬರಿ ಹುಟ್ಟಿಸುವಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು. ಮತ್ತು ಲಕ್ಷಕ್ಕೂ ಅಧಿಕ ಜನರು ಈ ರೋಗದಿಂದ ಸಾವನ್ನಪ್ಪಿರುವುದು. ಪ್ರತಿ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ನೋಂದಣಿಯಾಗಿ ದಾಖಲಾಗಿರುವ ಈ ಕುರಿತ ಮಾಹಿತಿಯನ್ನು ಅಧ್ಯಯನ ಮಾಡಿದರೆ ಸಾಕು ಅಸಹಾಯಕ ಅಪ್ರಾಪ್ತರು ಯಾವ ಪ್ರಮಾಣದಲ್ಲಿ ಈ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂಬುದು ಅರಿವಾಗುತ್ತದೆ. ವ್ಯವಸ್ಥೆ ಜಾಣ ಕುರುಡನ್ನು ನಟಿಸುತ್ತಾ ಮೌನವಾಗಿದೆ.

ಹೆಣ್ಣಿನ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಿಂದಾಗಿ ಹೆಣ್ಣೆಂದರೆ ಸಮಸ್ಯೆ, ಹೆಣ್ಣು ಹುಟ್ಟಿದರೆ ’ಸುರಕ್ಷತೆ’ಯೇkarnataka_women ದೊಡ್ಡ ತಲೆಬಿಸಿ ಎಂದು ಭಾವಿಸುತ್ತಿರುವ ಪೋಷಕರು ಇತ್ತೀಚೆಗೆ ಹೆಣ್ಣು ಮಗು ಹುಟ್ಟುವುದೇ ಬೇಡವೆಂದು ನಿರ್ಧರಿಸುತ್ತಿದ್ದಾರೆ. ಇದು ನಗರ-ಗ್ರಾಮೀಣ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಬೇಧವಿಲ್ಲದೆ ಹೆಣ್ಣನ್ನು ಭ್ರೂಣದಲ್ಲೇ ಕಾಣದಂತೆ ಕೊಲ್ಲುವ ಆಲೋಚನೆಗೆ ದಾರಿ ಮಾಡಿ ಕೊಟ್ಟಿದೆ. ಲಿಂಗಪತ್ತೆಯ ಸ್ಕ್ಯಾನಿಂಗ್ ಯಂತ್ರ ಬರುವ ಮೊದಲು ಹೆಣ್ಣಿನ ಬಗೆಗೆ ವಿಭಿನ್ನ ಕಾರಣಗಳಿಂದಾಗಿ ಅಸಡ್ಡೆ ಇದ್ದರೂ ಅದನ್ನು ಕೊಂದು ಬಿಸುಟುವ ನಿರ್ಧಾರಕ್ಕೆ ಈಗಿನಂತೆ ಬಹುಸಂಖ್ಯಾತರು ಬರುತ್ತಿರಲಿಲ್ಲ. ಈಗ ಅದು ಇಂತಹ ಯಂತ್ರಗಳಿಂದ ಮತ್ತು ವೈದ್ಯರ ಸಹಕಾರದಿಂದ ಸುಲಭವಾಗುವ ಜೊತೆಗೆ ಕ್ರೌರ್ಯವನ್ನೂ ನಾಜೂಕಾಗಿ ನಡೆಸಬಹುದಾದ ನಾಗರೀಕ[!] ವಿಧಾನಗಳಿಗೆ ಕೆಂಪು ಹಾಸು ಹಾಸಿದೆ.

ಭಾರತದಲ್ಲಿ ಅತಿ ದೊಡ್ಡ ಪಿಡುಗಾಗಿ ವ್ಯಾಪಿಸಿದ್ದ ಬಾಲ್ಯವಿವಾಹ ಈಗ ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿಯನ್ನು ಬೇಗನೆ ಕಳೆದುಕೊಳ್ಳುವ ನೆವದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಬಾಲ್ಯವಿವಾಹದಿಂದ ಅಪ್ರಾಪ್ತ ಹೆಣ್ಣು ತನ್ನ ಎಲ್ಲಾ ರೀತಿಯ ಹಕ್ಕುಗಳಿಂದ ವಂಚಿತಳಾಗುವ ಜೊತೆಗೆ ಅನಪೇಕ್ಷಿತ ಬದುಕು, ಆಯ್ಕೆಯಲ್ಲದ ಸಂಗಾತಿಯ ಜೊತೆಗೆ ಹೊಂದಿಕೊಳ್ಳುತ್ತಾ ಅಕ್ಷರಶಃ ಲೈಂಗಿಕಜೀತದಾಳಾಗಿ ಮತ್ತು ದುಡಿಯುವ ಯಂತ್ರದಂತೆ ಬದುಕಬೇಕಿರುತ್ತದೆ. ಇದು ದೌರ್ಜನ್ಯದ ಪರಮಾವಧಿಯೇ ಸೈ.

ಇಂತಹ ಮಗುವೇ ಬೇಕು ಎಂಬ ಕಾರಣಕ್ಕೆ ಅಧಿಕ ಪ್ರಮಾಣದಲ್ಲಿ ನಡೆಯುವ ಗರ್ಭಪಾತಗಳು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ತೆರನಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿರುವುದನ್ನೂ ವೈದ್ಯರು ಖಚಿತಪಡಿಸುತ್ತಾರೆ. ಮನಸ್ಸಿನ ಏರುಪೇರುಗಳಿಂದಾಗಿ ಮಹಿಳೆಯರಲ್ಲಿ ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯ ಹೆಚ್ಚಳಕ್ಕೂ ಇದು ಕಾರಣವಾಗಿದೆ. ಮುಕ್ತ ಲೈಂಗಿಕ ಚಟುವಟಿಕೆಗಳ ಹೆಚ್ಚಳ ಮತ್ತು ವಿಪರೀತದ ಹೆಣ್ಣಿನ ಸೌಂದರ್ಯದ ಕುರಿತಾದ ಕಲ್ಪನೆಗಳಿಂದಾಗಿ ಅವಳ ಬಣ್ಣ, ರೂಪ, ಎತ್ತರಗಳನ್ನು ಮಾರುಕಟ್ಟೆ ಕೇಂದ್ರಿತ ಹಿತಾಸಕ್ತಿಗಳು ನಿರ್ಧರಿಸುವ, ನಿರ್ವಹಿಸುವ ವಿಧಾನಗಳಿಂದಾಗಿ ತನಗೇ ಅರಿವಿಲ್ಲದೇ ಹೆಣ್ಣು ದೌರ್ಜನ್ಯಗಳಿಗೆ ಒಳಗಾಗುತ್ತಾಳೆ. ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಂದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಭದ್ರತೆಯ ಕೊರತೆ ಹೆಚ್ಚಾಗಿದ್ದು ’ಇಲ್ಲಿಗೆ ಹೋಗಬೇಡ, ಇಲ್ಲಿಗೆ ಬರಬೇಡ, ಇಷ್ಟೊತ್ತಿನ ಒಳಗೆ ಮನೆ ಸೇರು, ಹೀಗೇ ಇರು, ಹೀಗೇ ಮಾಡು….’ ಎಂಬ ನಿರ್ದೇಶನಗಳು ಅವಳ ಬದುಕು ವ್ಯಕ್ತಿತ್ವಗಳನ್ನೇ ಕುಬ್ಜಗೊಳಿಸುತ್ತಿದೆ. ’ಹೊಸ್ತಿಲಿನೊಳಗೇ ಹೆಣ್ಣು ಇರಬೇಕು’ ’ಸೀಮಿತ ಚೌಕಟ್ಟುಗಳೊಳಗೇ ಬದುಕಬೇಕು’ ಎಂಬ ಹಿಂದಿನ ಸಂಪ್ರದಾಯ ಕಟ್ಟುಕಟ್ಟಲೆಗೇ ಮತ್ತೆ ನಮ್ಮ ಸಮಾಜ ಹಿಂದಿರುಗುತ್ತಿದೆಯೇ ಎನ್ನುವ ಅನುಮಾನ ಹುಟ್ಟುತ್ತಿದೆ. ನಮ್ಮ ಹೆಣ್ಣುಮಕ್ಕಳು ದಶಕಗಳಿಂದ ಹೋರಾಡಿ ಪಡೆದ ತಮ್ಮ ಕೆಲವಷ್ಟಾದರೂ ಹಕ್ಕು, ಸ್ವಾತಂತ್ರ್ಯಗಳನ್ನು ಅಮಾನವೀಯವಾದ ರೀತಿಗಳಲ್ಲಿ ಕಳೆದುಕೊಂಡು ಮೂಗುಬ್ಬಸ ಪಡುವ ಸ್ಥಿತಿಯನ್ನು ತಲುಪುತ್ತಿದ್ದಾರೆ.

ಬದಲಾಗುತ್ತಿರುವ ಸಂಸ್ಕೃತಿಯ ಪರಿಕಲ್ಪನೆಗಳು, ಸುಲಭವಾಗಿ ಕೈಗೆಟುಕುತ್ತಿರುವ ತಂತ್ರಜ್ಞಾನ, ಆಧುನಿಕತೆ ತಂದೊಡ್ಡುತ್ತಿರುವ ಸವಾಲುಗಳಿಂದಾಗಿ ಅಸಮಾನ ಲಿಂಗಾನುಪಾತವು ನಾವು ಊಹಿಸಲೇ ಸಾಧ್ಯವಿಲ್ಲದಂತಾ ಸಮಸ್ಯೆಗಳನ್ನು ಮಹಿಳೆಗೆ ಮತ್ತು ಸಮಾಜಕ್ಕೆ ತಂದೊಡ್ಡಬಹುದೆಂದು ಸಮಾಜವಿಜ್ಞಾನಿಗಳು ಆತಂಕಿಸುತ್ತಿದ್ದಾರೆ. ಸ್ತ್ರೀಯರಿಗೆ ಸಾಮಾಜಿಕ ಭದ್ರತೆಯ ಕುಸಿತದಿಂದ, ಸಮಾಜದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳ ಹೆಚ್ಚಳ ಮಾತ್ರವಲ್ಲ, ಇದು ಜೀವವಿರೋಧಿಯಾದ ವೈಜ್ಞಾನಿಕ ಬೆಳವಣಿಗೆಗೂ ಕಾರಣವಾಗುತ್ತಿದೆ. ಹೆಣ್ಣನ್ನು ಭ್ರೂಣದಲ್ಲೇ ಕೊಂದು ಬಿಸುಟುವುದು ಮಹಿಳೆಯ ಬದುಕಿನ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪರಮೋಚ್ಚ ಘಟ್ಟ ಎಂದು ವ್ಯವಸ್ಥೆಗೆ ತಿಳಿಹೇಳುವವರಾದರೂ ಯಾರು? ಹೆಣ್ಣು ಹುಟ್ಟುವ ಹಕ್ಕನ್ನೇ ಕಿತ್ತುಕೊಳ್ಳುತ್ತಿರುವುದಕ್ಕೆ ತಾಂತ್ರಿಕತೆಯ ಪರವಾದ ಲಾಭ-ಲೋಭ ಸಂಸ್ಕೃತಿಯ ಪ್ರತೀಕವಾದ ಧನದಾಹಿ ಬಂಡವಾಳಶಾಹಿಯ ಧೋರಣೆಯೇ ಕಾರಣವೆಂದು ಸಮಾಜಕ್ಕೆ ಮನದಟ್ಟು ಮಾಡುವುದಾದರೂ ಹೇಗೆ? ಇದು ನಮ್ಮ ಮುಂದಿರುವ ಮುಖ್ಯ ಸವಾಲು.

ನಮ್ಮ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳು ಮತ್ತೆ ಮತ್ತೆ ಕಟುವಾಗಿ ಹೆಣ್ಣುಭ್ರೂಣಹತ್ಯೆಯ ಹೆಚ್ಚಳ ಮತ್ತು ಅಸಮಾನ ಲಿಂಗಾನುಪಾತದ ಕುರಿತು ಎಚ್ಚರಿಸುತ್ತಲೇ ಇವೆ. ’ಹೆಣ್ಣು ಭ್ರೂಣಹತ್ಯೆ ಮಾನವ ಜನಾಂಗದ ಅತಿ ಕೆಟ್ಟ ಪದ್ಧತಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ. ಕಾನೂನು ರಚನೆಯಾಗಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನವೇಕಾಗಿಲ್ಲ ಎಂದು ಪ್ರಶ್ನಿಸುತ್ತಿವೆ. ’ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಭ್ರೂಣಹತ್ಯೆ ನಿಷೇಧ ಕಾನೂನು’ ೧೯೯೪ರಲ್ಲಿಯೇ ಜಾರಿಯಾಯ್ತು. ಆದರೆ ಲಿಂಗಪತ್ತೆ ಮತ್ತು ಹೆಣ್ಣುಭ್ರೂಣಹತ್ಯೆ ಕಾರ್ಯ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದೆ. ದೇಶದಲ್ಲೇ ಈ ಕಾಯ್ದೆಯಡಿ ೧೮೦೦ ಕೇಸುಗಳು ದಾಖಲಾಗಿದ್ದರೂ ೧೪೩ ಜನರಿಗೆ ಮಾತ್ರ ಶಿಕ್ಷೆಯ ತೀರ್ಪು ಬಂದಿದೆ. ಅವರಲ್ಲಿ ಹೆಚ್ಚಿನವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ಕೇಸುಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

ನ್ಯಾಯಾಲಯದ ಆದೇಶದಂತೆ ಬಹುತೇಕ ರಾಜ್ಯಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಹೆಣ್ಣುಭ್ರೂಣಹತ್ಯೆ ತಡೆ ಸಮಿತಿಗಳು ಜಾರಿಯಲ್ಲಿವೆ. ಆದರೆ ಬಹಳಷ್ಟು ಕಡೆ ಅವು ನಿಷ್ಕ್ರಿಯವಾಗಿವೆ. ಅನೇಕ ಸಂದರ್ಭದಲ್ಲಿ ಸಮಿತಿಯಲ್ಲಿರುವವರಿಗೇ ತಾವು ಸದಸ್ಯರೆಂದು ತಿಳಿದಿರುವುದಿಲ್ಲ. ಸದಸ್ಯರಲ್ಲೂ ಹೆಚ್ಚಿನವರು ವೈದ್ಯರೇ ಇರುತ್ತಾರೆ. ಇನ್ನುಳಿದ ಬಹುತೇಕರನ್ನು ನಿಷ್ಕ್ರಿಯರಾಗಿರುವವರನ್ನೇ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿರುತ್ತದೆ. ಸಮಿತಿಗೆ ಪ್ರಶ್ನೆ ಮಾಡುವವರು, ವಿವರಗಳಿಗೆ ಹೋಗುವವರು ಬೇಕಿರುವುದಿಲ್ಲ. ಕಾಟಾಚಾರಕ್ಕೆ ಸಮಿತಿಗಳಿರುತ್ತವಷ್ಟೇ. ಈ ಸಮಿತಿಗಳಲ್ಲೂ ಮುಖ್ಯವಾಗಿ ಲಿಂಗಪತ್ತೆ ತಡೆಯನ್ನು ಮುಖ್ಯ ಕಾರ್ಯ ಮಾಡಿಕೊಳ್ಳಬೇಕಿತ್ತು. ಆದರೆ ಅಲ್ಲಿ ಸ್ಕ್ಯಾನಿಂಗ್ ಮಿಶಿನ್ ನೋಂದಣಿ ಆಗಿವೆಯೆ ಎಂಬುದನ್ನು ಮಾತ್ರ ಮುಖ್ಯ ಪ್ರಶ್ನೆಯಾಗಿಸಿಕೊಂಡು ಕೆಲಸ ಮಾಡಲಾಗುತ್ತದೆ. ನಮ್ಮ ರಾಜ್ಯಾದ್ಯಂತ ಸುಮಾರು ೫೦೦೦ ಸ್ಕ್ಯಾನಿಂಗ್ ಮಿಷಿನ್‌ಗಳು ಸದ್ಯ ಕೆಲಸ ಮಾಡುತ್ತಿವೆ. ಬೆಂಗಳೂರು ನಗರದಲ್ಲೇ ೧೫೦೦ ಮಿಷಿನ್‌ಗಳಿವೆ. ಈಗ ಹಳ್ಳಿಗಳಲ್ಲಿಯೂ ಹೆಣ್ಣು ಭ್ರೂಣ ಪತ್ತೆ ಮಾಡುವ ಮೊಬೈಲ್ ಮಿಷಿನ್‌ಗಳು ಸಂಚರಿಸಲಾರಂಭಿಸಿವೆ. ಒಂದು ಸ್ಕ್ಯಾನಿಂಗ್ ಮಿಷಿನ್ ನೋಂದಣಿ ಮಾಡಿಸಲಿಕ್ಕೆ ಮೊದಲು ೪೦೦೦ ಶುಲ್ಕವಿತ್ತು. ಈಗ ಅದು ೩೫೦೦೦ ಆಗಿದೆ. ಐದು ವರ್ಷಕ್ಕೆ ನವೀಕರಣಕ್ಕೆ ೩೦೦೦ ಇದ್ದಿದ್ದು ಈಗ ೨೫೦೦೦ ಆಗಿದೆ. ನವೀಕರಣ ಮಾಡದಿದ್ದರೆ ದಂಡ ೨೦೦೦೦. ಹೀಗೆ ಜಿಲ್ಲಾ ಸಮಿತಿಗೆ ಪ್ರತಿ ಮಿಷಿನಿನಿಂದಲೂ ಆದಾಯ ಇದೆ! ಹೀಗಾಗಿ ಇದರೆಡೆಗೇ ಗಮನ ಕೇಂದ್ರೀಕರಿಸಿ ಮುಖ್ಯವಾದ ಉದ್ದೇಶವೇ ಪಕ್ಕಕ್ಕೆ ಸರಿದಿದೆ. ಎಲ್ಲಕ್ಕಿಂಥಾ ಮುಖ್ಯವಾಗಿ ಇದರ ವಿರುದ್ಧ ದೂರು ಕೊಡುವವರಾರು? ಕುಟುಂಬವೇ ಸ್ವ ಇಚ್ಛೆಯಿಂದ ಭ್ರೂಣಪತ್ತೆ ಮತ್ತು ಹತ್ಯೆಗೆ ಮುಂದಾಗಿರುತ್ತದೆ. ಸೋನೋಗ್ರಾಫಿಸ್ಟ್ ಮತ್ತು ವೈದ್ಯ ತಪ್ಪೆಂದು ಗೊತ್ತಿದ್ದೇ ಇದರಲ್ಲಿ ಭಾಗಿಗಳಾಗಿರುತ್ತಾರೆ. ಈ ನಿರ್ಧಾರಗಳು ಮತ್ತು ಕೆಲಸಗಳು ಅತ್ಯಂತ ಖಾಸಗಿಯಾಗಿ ಮತ್ತು ಗೌಪ್ಯವಾಗಿ ಜರುಗುವುದರಿಂದ ಸಾಕ್ಷಿಗಳನ್ನು ಯಾರು ಹೇಳುತ್ತಾರೆ? ದೂರು ಕೊಡಬೇಕಿರುವ, ಸಾಕ್ಷಿ ಹೇಳಬೇಕಿರುವ ಹೆಣ್ಣು ಕಂದಮ್ಮ ಅಸಹಾಯಕ ಸ್ಥಿತಿಯಲ್ಲಿ ಸಾವಿಗೆ ಕೊರಳೊಡ್ಡಲು ಗರ್ಭದೊಳಗೇ ರೋದಿಸುತ್ತಿರುತ್ತದೆ……ಹೀಗೆಂದೇ ಇದರ ಪರವಾಗಿ ದನಿಯೆತ್ತಬೇಕಾದವರು ಹೆಣ್ಣಿನ ಪರವಾದ ಕಾಳಜಿ ಇರುವ ಪ್ರಜ್ಞಾವಂತರು ಮಾತ್ರ.

ಹೆಣ್ಣುಭ್ರೂಣಹತ್ಯೆ ತಡೆ ವಿರುದ್ಧವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆರೋಗ್ಯ ಇಲಾಖೆಯಿಂದ ಮುಖ್ಯವಾಗಿ ಮತ್ತು ನಿರಂತರವಾಗಿ ಆಗಬೇಕಿತ್ತು. ಆದರೆ ಅಂತಹವು ನಡೆಯುತ್ತಲೇ ಇಲ್ಲ. ಆಗಿದ್ದರೂ ಅವು ಕಾಟಾಚಾರಕ್ಕೆ ಮಾತ್ರ. ಅನುಮಾನಾಸ್ಪದ ಮತ್ತು ದೂರು ಬಂದ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿಗಳನ್ನು ನಡೆಸಬೇಕಿರುವುದು ಸಮಿತಿಯ ಮುಖ್ಯ ಕೆಲಸ. ಆದರೆ ಅಂಥಹ ಒಂದಾದರೂ ಪ್ರಕರಣ ನಡೆದ ಸುದ್ದಿಯಿಲ್ಲ. ಇಷ್ಟಕ್ಕೂ ದಾಳಿಗಳನ್ನು ಯಾರು ನಡೆಸಬೇಕು? ಜಿಲ್ಲಾ ಆರೋಗ್ಯಾಧಿಕಾರಿಯೇ ಈ ಸಮಿತಿಗೆ ಅಧ್ಯಕ್ಷ. ಅವನು ತನ್ನ ಸಹೋದ್ಯೋಗಿಗಳ ಮೇಲೆ ಹೇಗೆ ಕ್ರಮ ಕೈಗೊಂಡಾನು? ಹೀಗಾಗಿ ಇದಕ್ಕೆ ಸಾರ್ವಜನಿಕ ಸಹಭಾಗಿತ್ವವೇ ಹೆಚ್ಚಾಗಿರುವ ಸದಸ್ಯರನ್ನೊಳಗೊಂಡ ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಬೇಕಿರುವುದು ಮುಖ್ಯವಾಗಿ ಆಗಬೇಕಿದೆ. ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗಿಕೊಂಡಿರುವವರು ಸಮಾಜದ ಅತ್ಯಂತ ಸುಶಿಕ್ಷಿತ, ಪ್ರತಿಷ್ಠಿತ ವೈದ್ಯವರ್ಗ. ತಪ್ಪು ಮಾಡುತ್ತಿರುವವರನ್ನು ಹುಡುಕಿ ಕೇಸು ಹಾಕಿ, ದಾಳಿ ಮಾಡಬೇಕಾದವರೂ ವೈದ್ಯರು, ಕೇಸಿನಿಂದ ಬಿಡಿಸಿಕೊಳ್ಳಲು ಇರುವುದು ಇನ್ನೊಂದು ಪ್ರತಿಷ್ಠಿತ ವಕೀಲ ವರ್ಗ, ಸ್ಕ್ಯಾನಿಂಗ್ ಮಿಷಿನುಗಳನ್ನು ಉತ್ಪಾದಿಸಿ ಮಾರುತ್ತಿರುವುದು ಬಂಡವಾಳಶಾಹಿ ಉದ್ಯಮವರ್ಗ. ಇವರನ್ನೆಲ್ಲಾ ಎದುರು ಹಾಕಿಕೊಳ್ಳಲು ಇಚ್ಛಿಸದ ಸರ್ಕಾರ ಜಾಣಕುರುಡಾಗಿ ತೆಪ್ಪಗಿದ್ದುಬಿಟ್ಟಿದೆ. ಹೀಗಾಗಿಯೇ ರಾಷ್ಟ್ರ ಮತ್ತು ರಾಜ್ಯದಲ್ಲಿ ಕಳೆದ ೨-೩ ದಶಕದಿಂದ ಅವ್ಯಾಹತವಾಗಿ ಸಾಗಿರುವ ಈ ಭ್ರೂಣಹತ್ಯೆಯ ‘ಸಾಂಸ್ಕೃತಿಕ ಅತ್ಯಾಚಾರ’ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೆಲ್ಲಾ ವಿಫಲವಾಗಿವೆ.

ಎಲ್ಲಿಯವರೆಗೆ ನಮ್ಮ ಪುರುಷ ಪ್ರಧಾನ ಸಮಾಜಕೆ, ಸ್ವಸ್ಥ ಸಮಾಜ ನಿರ್ಮಾಣಕ್ಕೆ, ಹೆಣ್ಣೂ ಪುರುಷನಷ್ಟೇ ಮುಖ್ಯವೆಂಬುದು ಮನವರಿಕೆಯಾಗುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣು ಸಂತತಿಗೆ ಉಳಿಗಾಲವಿಲ್ಲವೆನಿಸುತ್ತಿದೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಗರ್ಭದಲ್ಲೇ ಹಲ್ಲೆಗೊಳಗಾಗುತ್ತಿರುವ ಕಂದಮ್ಮಗಳ ಆರ್ತನಾದ ನಮ್ಮ ಕರುಳನ್ನೇಕೆ ಕಲಕುತ್ತಿಲ್ಲ? ತಾಯಿಯೇ ನಿರ್ದಯವಾಗಿ ತನ್ನದೇ ಹೆಣ್ಣುಕುಲವನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಬಿಸುಟುವಷ್ಟು ಅವಳ ಬ್ರೈನ್‌ವಾಷ್ ಮಾಡುತ್ತಿರುವ ನೀಚತನಕ್ಕೆ ಯಾರಿಗೆ ಶಿಕ್ಷೆ ಕೊಡೋಣ? ಪರಿಣಾಮಗಳ ಕುರಿತು ಅರಿತೋ ಅರಿಯದೆಯೋ ಇಂತಹ ಅಮಾನುಷ ಕ್ರೌರ್ಯದಲ್ಲಿ ಭಾಗಿಯಾಗುತ್ತಿರುವ ಕುಟುಂಬಕ್ಕೇ? ಒತ್ತಡ ಹೇರುತ್ತಿರುವ ಕುಬ್ಜ ಮನಸುಗಳಿಗೇ? ಇಂತಹದೊಂದು ಅಮಾನುಷ ಮನಸ್ಥಿತಿಯನ್ನು ನಿರ್ಮಾಣ ಮಾಡಿರುವ ಸಮಾಜಕ್ಕೇ? ಹೆಣ್ಣುಭ್ರೂಣವನ್ನು ಪತ್ತೆ ಮಾಡಿ, ಜನರ ಬುದ್ಧಿಗೋ, ಅರಿವಿಗೋ ಕುರುಡಿದ್ದರೂ, ಯಾವುದೇ ಪೂರ್ವಗ್ರಹವಿದ್ದರೂ ಅದನ್ನು ತೊಡೆದು ಹಾಕಿ ಹೆಣ್ಣಿನ ಕುರಿತು ಅವರಿಗೆ ಜಾಗೃತಿ ಮೂಡಿಸದೇ, ವರ್ಷಕ್ಕೆ ಅಂದಾಜು ೬ ಲಕ್ಷದಷ್ಟು ಹೆಣ್ಣುಭ್ರೂಣಗಳನ್ನು ಅಂತಃಕರಣವಿಲ್ಲದೇ ಹೊಸಕಿ ಹಾಕುತ್ತಿರುವ, ನಾವು ದೈವಸ್ವರೂಪಿಗಳೆಂದು ನಂಬುವ ವೈದ್ಯರಿಗೇ? ಇಂತಹ ಅಗಾಧ ಪ್ರಮಾಣದ ಕ್ರೌರ್ಯ ಹೆಣ್ಣು ಕಂದಮ್ಮಗಳ ಮೇಲೆ ಹುಟ್ಟುವ ಮೊದಲೇ ಮತ್ತು ಹೆಣ್ಣಿನ ಕೊರತೆಯ ಕಾರಣಕ್ಕೆ ಆನಂತರದಲ್ಲಿ ದೌರ್ಜನ್ಯವನ್ನು ಎದುರಿಸಬೇಕಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೇ, ಎಚ್ಚೆತ್ತುಕೊಂಡಿಲ್ಲದ ಸರ್ಕಾರಕ್ಕೇ? ಯಾರಿಗೆ ಶಿಕ್ಷೆ ಕೊಡುವುದು? ಶಿಕ್ಷೆ ಕೊಡುವವರಾರು?

ಈಗ ಉಳಿದಿರುವ ದಾರಿಯೊಂದೇ- ಅದು ಜನಜಾಗೃತಿ. ಇದು ಮಹಿಳಾ ಸಂಘಟನೆಗಳ ಕೆಲಸ ಮಾತ್ರವಲ್ಲ. ಎಲ್ಲಾ ಪ್ರಗತಿಪರ, ಲಿಂಗಸೂಕ್ಷ್ಮತೆಯುಳ್ಳ, ಸ್ತ್ರೀಪರ ಕಾಳಜಿಯುಳ್ಳ ಸಂಘಟನೆಗಳು ತುರ್ತಾಗಿ ಈ ವಿಷಯದ ಕಡೆಗೆ ಗಮನಹರಿಸಿ ಕಾರ್ಯಪ್ರವರ್ತವಾಗಬೇಕಿದೆ. ಮಾಧ್ಯಮಗಳ ಮೂಲಕ, ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳ ಮೂಲಕ, ಜಾಹಿರಾತುಗಳ ಮೂಲಕ ಲಿಂಗಸೂಕ್ಷ್ಮತೆಯ ಅರಿವು, ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆಯ ವಿರುದ್ಧದ ಜಾಗೃತಿ ಮೂಡಿಸಬೇಕಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಮಿತಿಗಳು ರಚನೆಯಾಗುವಂತೆ, ಅದರಲ್ಲಿ ಜಾಗೃತ ನಾಗರೀಕರೂ, ಪ್ರಜ್ಞಾವಂತ ಸಾಮಾಜಿಕ ಕಾರ್ಯಕರ್ತರೂ ಇರುವಂತೆ ನೋಡಿಕೊಳ್ಳಬೇಕಿದೆ. ಹೆಣ್ಣುಭ್ರೂಣಪತ್ತೆ ಕಾರ್ಯವನ್ನು ಅನಿವಾರ್ಯವಾದ ಅನಾರೋಗ್ಯದ ಕಾರಣಕ್ಕಲ್ಲದೇ ಬೇರಾವ ಕಾರಣಕ್ಕೂ ಮಾಡದಂತೆ, ಅದರ ವಿವರಗಳನ್ನು ಗ್ರಾಹಕರಿಗೆ ತಿಳಿಸದಂತೆ ಹೆಚ್ಚಿನಂಶ ಜನರ ತೆರಿಗೆ ದುಡ್ಡಿನಲ್ಲಿ ಓದಿ ವೈದ್ಯರಾದವರ ಮನವೊಲಿಸಬೇಕಿದೆ. ಹೆಣ್ಣೆಂಬ ಕಾರಣಕ್ಕೇ ಗರ್ಭಪಾತ ಮಾಡದಂತೆ ವೈದ್ಯರಿಗೆ ತಿಳಿವು, ಕಾನೂನಿನ ಬಿಗಿ ಮತ್ತು ಎಚ್ಚರಿಕೆಗಳನ್ನೂ ನೀಡಬೇಕಿದೆ.

ಇದೆಲ್ಲದರ ಜೊತೆಗೆ, ಬಹುಶಃ ಎಲ್ಲಕ್ಕೂ ಮುಖ್ಯವಾಗಿ ಹೆಣ್ಣುಮಕ್ಕಳೇ ಎಚ್ಚೆತ್ತು ತಮ್ಮ ಸಂತತಿಯನ್ನು ಉಳಿಸಿಕೊಳ್ಳಲು ದೃಢ ಸಂಕಲ್ಪ ಮಾಡದಿದ್ದರೆ, ’ಅವಳ’ನ್ನು ಉಳಿಸಲು ಯಾವ ದೇವರಿಗೂ ಸಾಧ್ಯವಿಲ್ಲವೇನೋ? ಎಂದೆನಿಸುತ್ತಿದೆ.