Daily Archives: March 9, 2015

ವಿನೋದ್ ಮೆಹ್ತ : ಲಿಬರಲ್, ಸ್ಯೂಡೋ ಸೆಕ್ಯುಲರ್ ಸಂಪಾದಕನ ಕಣ್ಮರೆ

– ಬಿ.ಶ್ರೀಪಾದ ಭಟ್

To deny that I shall miss being an editor would be a towering lie, if the fairy godmother granted me the luxury of choosing a profession for my next janam,I would say without hesitation, editor. – ವಿನೋದ್ ಮೆಹ್ತ

ಪತ್ರಕರ್ತ, ಮಾಜಿ ಸಂಪಾದಕ ವಿನೋದ್ ಮೆಹ್ತ ತೀರಿಕೊಂಡಿದ್ದಾರೆ. Editor plugged forever!!. 72 ರ ವಯಸ್ಸಿನ ವಿನೋದ್ ಮೆಹ್ತ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆಯಷ್ಟೆ ಅವರ ಪತ್ರ್ರಿಕೋದ್ಯಮದ ಅನುಭವಗಳ ನೆನಪಿನ vinod-mehta-editor-unpluggedಪುಸ್ತಕ ‘Editor Unplugged’ ಬಿಡುಗಡೆಯಾಗಿತ್ತು. ಅದರ ಕೆಲವು ಪುಟಗಳಲ್ಲಿ ‘ಇನ್ನೂ ಎಲ್ಲಾ ಮುಗಿದಂತಿದೆ, ನನಗಿನ್ನೇನು ಕೆಲಸವಿದ್ದಂತಿಲ್ಲ’ ಎನ್ನುವ ಸಂಪೂರ್ಣ ಸೋತುಹೋದ, ವಿಷಾದದ ಛಾಯೆ ಧ್ವನಿಸುತ್ತಿತ್ತು. ಅದು ನಿಜವಾಗಿದೆ. ಇಂದಿನ ಬಲಪಂಥೀಯ ಫೆನಟಿಸಂ ಮತ್ತು ಕಾರ್ಪೋರೇಟ್ ಶಾಹಿಗಳ ದೌರ್ಜನ್ಯ, ಅಸಹನೆ, ದೌಲತ್ತಿನ ದಿನಗಳಲ್ಲಿ ಮಾನವೀಯ, ಆಳವಾದ ನೈತಿಕ ಪ್ರಜ್ಞೆಯ ಮತ್ತು ಯೆಸ್ ಮಿನಿಸ್ಟರ್ ಮಾದರಿ ಪತ್ರಿಕೋದ್ಯಮವನ್ನು ತಿರಸ್ಕರಿಸಿದ್ದ ಪತ್ರಕರ್ತ ವಿನೋದ್ ಮೆಹ್ತ ಜೀವಪರ ವ್ಯವಸ್ಥೆಯ ಸಾಕ್ಷೀ ಪ್ರಜ್ಞೆಯಂತಿದ್ದರು. ಮಾರ್ಕ್ವೇಜ್ ಬಯಸಿದ್ದ ದುಂಬಿಯೊಂದಿಗಿರುವ ಝೇಂಕಾರದಂತೆ ನೈತಿಕತೆ ಪತ್ರಕರ್ತನೊಂದಿಗೆ ಇರಬೇಕು ಎನ್ನುವ ಆಶಯಕ್ಕೆ ಹತ್ತಿರವಾಗಿದ್ದರು ಪತ್ರಕರ್ತ ವಿನೋದ್ ಮೆಹ್ತ. ‘ತನಗೆ ಮುಖ್ಯ ಅನಿಸಿದ ಸಂಗತಿಗಳೆಲ್ಲಾ ಓದುಗನಿಗೂ ಮುಖ್ಯ ಅನಿಸದಿದ್ದರೆ ಅದು ಪತ್ರಕರ್ತನ ಪತನ’ ಎಂದು ಲಂಕೇಶ್ ಬರೆದಿದ್ದರು. ಇದು ವಿನೋದ್ ಮೆಹ್ತ ಅವರ ವಿಷಯಕ್ಕೂ ನಿಜ. ಜಾಹಿರಾತು ವಲಯದಿಂದ ಪತ್ರಿಕೋದ್ಯಮ ರಂಗವನ್ನು ಪ್ರವೇಶಿಸಿದ ವಿನೋದ್ ಮೆಹ್ತ ಅವರು ಡೆಬೋನೈರ್ ಮಾಸಪತ್ರಿಕೆಯ ಸಂಪಾದಕರಾಗುವದರೊಂದಿಗೆ ಪತ್ರಕರ್ತನ ವೃತ್ತಿ ಬದುಕು ಪ್ರಾರಂಬಿಸಿದರು. ಇಂಡಿಯಾದ ಮೊಟ್ಟ ಮೊದಲ ವಾರ ಪತ್ರಿಕೆ ಸಂಡೇ ಅಬ್ಸರ್‌ರ್ವರ್ ಪ್ರಾರಂಬಿಸಿದ ವಿನೋದ್ ಮೆಹ್ತ ನಂತರ ಇಂಡಿಪೆಂಡೆಂಟ್ ಮತ್ತು ಪಯೋನೀರ್ ಪತ್ರಿಕೆಗಳ ಸಂಪಾದಕರಾಗಿದ್ದರು. ನಂತರ ಹಲವಾರು ಕಡೆ ಸುತ್ತಾಡಿದ ಬಳಿಕ ತೊಂಬತ್ತರ ದಶಕದಲ್ಲಿ “ಔಟ್‌ಲುಕ್” ವಾರಪತ್ರಿಕೆಯನ್ನು ಸ್ಥಾಪಿಸಿ ಅದರೊಂದಿಗೆ 17 ವರ್ಷಗಳ ಕಾಲ ಮುಖ್ಯ ಸಂಪಾದಕರಾಗಿ ದುಡಿದಿದ್ದರು. ಈ ಕಾಲಘಟ್ಟದಲ್ಲಿ ತಮ್ಮ ಸೆಕ್ಯುಲರಿಸಂ, ಸಾರ್ವಜನಿಕ ಬದುಕಿನ ಸೂಕ್ಷ್ಮತೆ ಮತ್ತು ವರ್ಣರಂಜಿತ ವ್ಯಕ್ತಿತ್ವದ ಮೂಲಕ ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಪ್ರಗತಿಪರ ಜರ್ನಲಿಸಂಗೆ ಒಂದು ವಿಭಿನ್ನವಾದ, ದಿಟ್ಟತೆಯ ದಾರಿಯನ್ನೇ ರೂಪಿಸಿದರು. ತಮ್ಮನ್ನು ಸರ್ವಾಂತರಯಾಮಿ, ಬುದ್ಧಿಜೀವಿ (ಸೋ ಕಾಲ್ಡ್ ಜನಪ್ರಿಯ ಪತ್ರಕರ್ತರ ಒಂದು ಸ್ವಘೋಷಿತ ಐಡೆಂಟಿಟಿ !!) ಎಂದು ಕರೆದುಕೊಳ್ಳಲು ನಿರಾಕರಿಸುವ ವಿನೋದ್ ಮೆಹ್ತ ಗೀತಾ ಪಾಂಡೆ, ತೇಜ್‌ಪಾಲ್, ಅನಿರುದ್ಧ್, ಮನು ಜೋಸೆಫ್, ಸಾಗರಿಕಾ ಘೋಷ್, ಅಜಿತ್ ಪಿಳ್ಳೈ, ಸಾಬಾ ನಕ್ವಿ ರಂತಹ ಸೂಕ್ಷ್ಮ ಸಂವೇದನೆಯ ಪತ್ರಕರ್ತರನ್ನು ಸಹ ತಮ್ಮ ಜೊತೆ ಜೊತೆಗೆ ಬೆಳೆಸಿದರು.

ಸಂದರ್ಶನವೊಂದರಲ್ಲಿ “ಸಂಪಾದಕನೊಬ್ಬ ಸಂಪೂರ್ಣ ಸ್ವಾತಂತ್ರ ಗಳಿಸಬೇಕಾದರೆ ಅವನು commercially viable ಆಗಿರಬೇಕು. ಹಣಕಾಸಿನ ಸಂದರ್ಭದಲ್ಲಿ ದುರ್ಬಲವಾಗಿರುವ ಪ್ರಕಾಶನ ಸಂಸ್ಥೆಗಳ ಸಂಪಾದಕ ಬಳಗವೂ ಸದಾ ಅಸ್ಥಿರತೆಯನ್ನು ಎದುರಿಸುತ್ತಿರುತ್ತದೆ. ನಿಮ್ಮ ಪ್ರಕಾಶನವು ಕಮರ್ಷಿಯಲ್ ಆಗಿ ದುರ್ಬಲವಾಗಿದ್ದರೆ ಜಾಹೀರಾತುದಾರರು ಮತ್ತು ರಾಜಕಾರಣಿಗಳು ‘ನೋಡು ನೀನು ನಮ್ಮೊಂದಿಗೆ ಕೈ ಜೋಡಿಸು ಇಲ್ಲವಾದಲ್ಲಿ vinod-mehta-2ಮುಂದಿನ ದಾರಿ ನಿನಗೆ ಬಿಟ್ಟಿದ್ದು’ ಎಂದು ದಬಾಯಿಸುವುದು ಗ್ಯಾರಂಟಿ” ಎಂದು ಸ್ಪಷ್ಟವಾಗಿ ಹೇಳಿದ್ದರು. Paid News ಎನ್ನುವ ಪೆಡಂಭೂತ ಮತ್ತು ಅದರ ರೂವಾರಿ ಕಾರ್ಪೋರೇಟ್ ಕುಟುಂಬಗಳ ದುಷ್ಟ ಹಿಡಿತಕ್ಕೆ ಸಿಲುಕಿಕೊಂಡಿರುವ ಇಂದಿನ ಪತ್ರಿಕೋದ್ಯಮದ ದಿನಗಳಲ್ಲಿ ವಿನೋದ್ ಮೆಹ್ತ ಅವರ ನಿಲುವು ತುಂಬಾ ಮಹತ್ವದ್ದು. ಆದರೆ ಈ ಹಣಕಾಸಿನ ಸ್ವಾತಂತ್ರ ಸಂಪಾದಕನಿಗೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ, ಮೌಲ್ಯಧಾರಿತ ಆಶಯಗಳಿಗೆ ಅನುಗುಣವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎನ್ನುವುದು ನಿಜ. ಆದರೆ ಇಂದಿನ ನವ ಉದಾರೀಕರಣದ ದಿನಗಳಲ್ಲಿ ಹಣಕಾಸಿನ ಸ್ವಾತಂತ್ರಕ್ಕೆ ಅನೇಕ ಅರ್ಥಗಳಿವೆ. ವಿವಿಧ ಮಗ್ಗಲುಗಳಿವೆ. ಅದನ್ನು ನೆಚ್ಚಿಕೊಂಡ ಸಂಪಾದಕ ಎಲ್ಲಿ ಹೋಗಿ ತಲುಪುತ್ತಾನೆ ಎನ್ನುವುದಕ್ಕೆ ನಿಖರವಾದ ಗುಣಗಳು ಮತ್ತು ಮಿತಿಗಳ ಜಾಡೇ ದೊರಕವುದಿಲ್ಲ. ಆದರ ಮೂಲದ ಕುರಿತಾಗಿಯೂ ಪ್ರಶ್ನಾರ್ಹವಾದಂತಹ ಸಂಗತಿಗಳಿರುತ್ತವೆ. ಸಂಪಾದಕನಿಗೆ ಹಣಕಾಸಿನ ಸ್ವಾತಂತ್ರವನ್ನು ದಯಪಾಲಿಸುವ ಕಾರ್ಪೋರೇಟ್ ಕುಟುಂಬ ಆತನಿಗೆ ಸ್ವಾಯುತತ್ತೆ ದಯಪಾಲಿಸುವ ಸಾಧ್ಯತೆಗಳು ತುಂಬಾ ಕಡಿಮೆ.

ಮಾರ್ಕೆಟಿಂಗ್ ವಿಭಾಗವು ಸುದ್ದಿ ಮತ್ತು ರಾಜಕೀಯ ಸಂಪಾದಕರ ಮೇಲೆ ಹಿಡಿತ ಸಾದಿಸುವ ಇಂದಿನ ಪತ್ರಿಕೋದ್ಯಮದ ದಿನಗಳಲ್ಲಿ ಸಂಪಾದಕ ತನ್ನ ನೈತಿಕತೆ ಮತ್ತು ಮೌಲ್ಯಗಳನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳ ಕುರಿತಾಗಿ ವಿನೋದ್ ಮೆಹ್ತ ರಂತಹ ಪತ್ರಕರ್ತರಲ್ಲಿಯೂ ಹಲವು ಗೊಂದಲಗಳಿದ್ದವು. ಪತ್ರಿಕೋದ್ಯಮವು ಕಾರ್ಪೋರೇಟ್ ಕುಟುಂಬಗಳಿಗೆ ವಶವಾಗಿರುವುದನ್ನು ಮೇಲಿನ ಹಣಕಾಸಿನ ಹಿನ್ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ವಿನೋದ್ ಮೆಹ್ತ ಅದೇ ಸಮಯಕ್ಕೆ ಈ ಮಾದರಿಯ ಪತ್ರಿಕೋದ್ಯಮವು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು ಸರಕನ್ನು ಉತ್ಪಾದಿಸುವ ಕಾರ್ಖಾನೆಯಾಗುವ ಅಪಾಯದ ಕುರಿತು vinod-mehta-and-editorಎಚ್ಚರಿಸುತ್ತಾರೆ. ಯಾವುದೇ ಸಿದ್ಧಾಂತವಾದಿಯಲ್ಲದ ವಿನೋದ್ ಮೆಹ್ತರಂತಹ ಪತ್ರಕರ್ತರಿಗೆ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಕೆಲವು ಮಾನವೀಯ ಅಂಶಗಳಿರುತ್ತವೆ ಎನ್ನುವ ಮುಗ್ಧವಾದ ಆದರೆ ಅಪಾಯಕಾರಿಯಾದ ನಂಬಿಕೆಗಳಿತ್ತು. ಅದಕ್ಕೆ ಅವರು ಸ್ವತಃ ತಾವೇ ಔಟ್‌ಲುಕ್ ಸಂಪಾದಕನಾಗಿ ರಾಜನ್ ರಹೇಜ ಎನ್ನುವ ಮಾರ್ವಾಡಿ ಮಾಲೀಕನ ಕೆಳಗೆ 17 ವರ್ಷ ಕೆಲಸ ಮಾಡಿದ ನನ್ನ ಉದಾಹರಣೆಯನ್ನು ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರೂ ಈ ಉದಾರವಾದಿ ಮಾರ್ಗವೇ ಅವರ ದೊಡ್ಡ ಮಿತಿಯಾಗಿತ್ತು. ಕಡೆಗೆ ನೀರಾ ರಾಡಿಯಾ ಟೇಪ್ ಹಗರಣಕ್ಕೆ ಸಂಭಂದಿಸಿದಂತೆ ಕಾರ್ಪೋರೇಟ್ ಕುಟುಂಬಗಳಾದ ಟಾಟಾ, ಅಂಬಾನಿಯವರ ಮತ್ತು ರಾಜಕಾರಣಿಗಳ ರಾಜಕೀಯ ಹಸ್ತಕ್ಷೇಪ, ಸಾರ್ವಜನಿಕ ವರ್ತನೆಗಳು, ಪೇವರಿಟಿಸಂ ನೀತಿಗಳು ಮತ್ತು ಆರ್ಥಿಕ ಭ್ರಷ್ಟಾಚಾರವನ್ನು ಔಟ್‌ಲುಕ್ ಪತ್ರಿಕೆಯ ಮೂಲಕ ಬಯಲಿಗೆಳಿದಿದ್ದ ವಿನೋದ್ ಮೆಹ್ತ ಸ್ವತಃ ಈ ಪತ್ರಿಕೋದ್ಯಮದ ಒಳಸುಳಿಗಳಿಗೆ, ನೆಕ್ಸಸ್‌ನ ಅವಾಂತಕಾರಿ ಲೋಕದ ಒಳಸಂಚಿಗೆ ಬಲಿಯಾಗಿ ಔಟ್‌ಲುಕ್ ಸಂಪಾದಕತ್ವಕ್ಕೆ ರಾಜೀನಾಮೆ ನೀಡಬೇಕಾಯ್ತು. ಇದರ ಕುರಿತು ತಮ್ಮ ‘Editor Unplugged’ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. ಆಲ್ಲಿ ತಮ್ಮ ಸಂಪಾದಕನ ಕರ್ತವ್ಯ, ಪತ್ರಿಕೋದ್ಯಮದ ಮೂಲ ಆಶಯವಾದ ಎಲ್ಲಾ ಬಗೆಯ ಒತ್ತಡ, ಲಾಭಗಳನ್ನು ಧಿಕ್ಕರಿಸಿ ಸತ್ಯದ ವಸ್ತುನಿಷ್ಠ ಮಂಡನೆ, ನ್ಯಾಯಪರವಾದ ನಿರ್ಣಯಗಳನ್ನು ತೆಗೆದುಕೊಳ್ಳಲೇಬೇಕಾದಂತಹ ಸಂದರ್ಭಗಳು ಮತ್ತು ಅನಿವಾರ್ಯತೆಯನ್ನು ಕುರಿತು ಮನೋಜ್ಞವಾಗಿ ವಿವರಿಸಿದ್ದಾರೆ.

ಪುಸ್ತಕದ ಈ ಭಾಗವು ಕಾರ್ಪೋರೇಟ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಇಂದಿನ ಪತ್ರಿಕೋದ್ಯಮದ ವ್ಯಾಪಾರಿ ಮನೋಧರ್ಮವನ್ನು ಸಹ ದಾಖಲಿಸುತ್ತದೆ. ಆದರೆ ಈ ಬಂಡವಾಳಶಾಹಿಗಳನ್ನು ಎದುರಿಸಲಾಗದೆ ಸೋತುಹೋಗುವ ವಿನೋದ್ ಮೆಹ್ತ ಕೊನೆ ಕೊನೆಗೆ ತಮ್ಮಲ್ಲಿ ಅಪರಾಧಿ ಪ್ರಜ್ಞೆಯನ್ನು ಬೆಳೆಸಿಕೊಂಡಂತೆ ಬರೆಯುತ್ತಾ ಹೋಗುತ್ತಾರೆ. 17 ವರ್ಷಗಳ ಕಾಲ ತಮಗೆ ಸಂಪಾದಕನಾಗಿ ಸ್ವಾತಂತ್ರ ನೀಡಿದ ತಮ್ಮ “ಕಾರ್ಪೋರೇಟ್” ಮಾಲೀಕನ ಹಿತಾಸಕ್ತಿಗಾಗಿ ಸಂಧಾನ ಮಾರ್ಗಕ್ಕೆ ಮುಂದಾಗುವಂತಹ ಬಿಕ್ಕಟ್ಟಿಗೆ ಸಿಲುಕುತ್ತಾರೆ. ಬಹುಶ ಈ ಇಡೀ ಘಟನೆ ಮತ್ತು ನಂತರದ ತಿಕ್ಕಾಟಗಳು ವಿನೋದ್ ಮೆಹ್ತರವರನ್ನು ಕಂಗೆಡಸಿ ಹತಾಶರಾಗಿ ಕೈಚೆಲ್ಲುತ್ತಾರೆ. ಪತ್ರಿಕೋದ್ಯಮದ ಆಳವಾದ ಸಂಕೀರ್ಣತೆ, vinod-mehtaಮಾಲೀಕ- ರಾಜಕಾರಣಿ -ಮಾರುಕಟ್ಟೆ ರಾಜಕಾರಣದ ನಡುವಿನ ಪರಸ್ಪರ ಹೊಂದಾಣಿಕೆಗಳ ಅರಿವಿಲ್ಲದೇ ನಾನು ಸತ್ಯದ ಪ್ರತಿಪಾದಕ, ವಸ್ತುನಿಷ್ಠವಾಗಿ, ಪೂರ್ವಗ್ರಹಪೀಡಿತನಾಗದೆ, ನ್ಯಾಯದ ಪರವಾಗಿ ವರದಿ ನೀಡುತ್ತೇನೆ ಎಂದು ಮುನ್ನುಗ್ಗುವ ಯುವ ಪತ್ರಕರ್ತರಿಗೆ ಇದು ಒಂದು ಪ್ರಾಥಮಿಕ ಪಾಠದಂತಿದೆ. ಇಲ್ಲವೆಂದರೆ ಅಸಹಾಯಕ ಪ್ಯಾದೆಗಳಂತೆ ಬೀದಿ ಬೀದಿ ಅಲೆಯುವ ಪರಿಸ್ಥಿತಿಗೆ ಗುರಿಯಾಗುತ್ತಾರೆ. ಆದರೆ ಕಡೆಗೆ ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ದಾರಿ ಯಾವುದಯ್ಯ ಎನ್ನುವ ಪ್ರಶ್ನೆಗೆ ವಿನೋದ್ ಮೆಹ್ತ ಬಳಿ ಉತ್ತರವಿರಲಿಲ್ಲ.

“ನೀವು ಭ್ರಮಾಜೀವಿಗಳಾದರೆ ಮುಗಿದ ಕತೆ, ವಾಸ್ತವವಾದಿಗಳಾಗಿ ವರ್ತಿಸಿ. ಪತ್ರಿಕೆಗಳಲ್ಲಿ ಕೆಲಸ ಮಾಡುವ ನಾವೆಲ್ಲ ನಮ್ಮ ಉತ್ಪನ್ನಗಳನ್ನು ಕಾಲಕಾಲಕ್ಕೆ ನವೀಕರಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಒಂದು ದಿನಪತ್ರಿಕೆಯನ್ನು ಓದುತ್ತಾರೆ, ಪ್ರತಿಯೊಬ್ಬರೂ ದೃಶ್ಯ ಮಾಧ್ಯಮವನ್ನು ವೀಕ್ಷಿಸುತ್ತಾರೆ. ವಾರಪತ್ರಿಕೆ,ಮಾಸಪತ್ರಿಕೆಗಳು ಐಚ್ಛಿಕ ಆಯ್ಕೆಗಳಾತೊಡಗಿವೆ. ಸುದ್ದಿಗಳನ್ನು ಮಂಡಿಸುವ ನಮ್ಮ ಹಳೇ ಕಾಲದ ಮಾದರಿಗಳನ್ನು ಇಂದು ಪರಿಶೀಲಿಸಬೇಕಾಗುತ್ತದೆ. ನಮ್ಮ ಉತ್ಪನ್ನಗಳು ಓದುಗನನ್ನು ಆಲೋಚನೆಗೆ, ಜಿಜ್ಞಾಸೆಗೆ ಒಳಗಾಗುವಂತೆ ಮಾಡಬೇಕಾಗುತ್ತದೆ. ಮೇಜರ್ ಸರ್ಜರಿಯ ಅವಶ್ಯಕತೆ ಇದೆ. ವಾರ ಮತ್ತು ಮಾಸ ಪತ್ರಿಕೆಗಳು ನಿಧಾನವಾಗಿ ಅಂಚಿಗೆ ತಳ್ಳಲ್ಪಡುತ್ತಿವೆ. ಸಮಕಾಲೀನ ಸಂದರ್ಭಕ್ಕೆ ತಕ್ಕಹಾಗೆ vinod_vajpayee_20111121ಪ್ರಸ್ತುತಗೊಳಿಸಿಕೊಳ್ಳಬೇಕು. ಸಂಪಾದಕೀಯ ಬಳಗದ ಮೇಲೆ ಇದರ ಭವಿಷ್ಯ ನಿಂತಿದೆ. ಒಮ್ಮೆ ವಾಜಪೇಯಿ ನಮ್ಮ ಪತ್ರಿಕೆಗೆ ( ಔಟ್‌ಲುಕ್) ಸಂದರ್ಶನ ನೀಡಿದ್ದರು. ನಂತರ ಅವರನ್ನು ಭೇಟಿಯಾದ ನಾನು ಅವರಿಗೆ ಧನ್ಯವಾದಗಳನ್ನು ಹೇಳಿದೆ. ಅದಕ್ಕೆ ಪ್ರತಿಕ್ರ್ರಯಿಸುತ್ತಾ ವಾಜಪೇಯಿ ನಿಮ್ಮ ಪತ್ರಿಕೆಯನ್ನು ನಾನು ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು ಎಂದಾಗ ಆ ದಿನವೇ (2004) ನಾನು ಪತ್ರಿಕೋದ್ಯಮವನ್ನು ತೊರೆಯಲು ನಿರ್ಧರಿಸಿದೆ. ಆದರೆ ನಂತರದ ಏಳು ವರ್ಷಗಳನ್ನು ಮುಂದುವರೆಸಿದಾಗ ಈ ವಾರಪತ್ರಿಕೆಯನ್ನು ನಾನು ಬಯಸಿದ ಹಾಗೆ ರೂಪಿಸಲು ಸಾಧ್ಯವಾಗಲಿಲ್ಲ. ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ” ಎಂದು ಹೇಳಿದ ವಿನೋದ್ ಮೆಹ್ತ ತಮ್ಮ ‘Editor Unplugged’ ಪುಸ್ತಕದಲ್ಲಿ ಪತ್ರಕರ್ತನ ಪತ್ರಿಕೋದ್ಯಮದ ಬದುಕನ್ನು ಅತ್ಯಂತ ನಿಷ್ಠುರವಾಗಿ, ಪ್ರಾಮಾಣಿಕವಾಗಿ ವಿವರಿಸಿದ್ದಾರೆ. “ಪತ್ರಕರ್ತನ ನಿಜವಾದ ಚೇತನ ಆತನ ಬದ್ಧತೆಯಲ್ಲಿದೆ ಅದನ್ನು ಜೀವನ್ಮರಣದ ಪ್ರಶ್ನೆಯನ್ನಾಗಿಸಿಕೊಳ್ಳುವುದರಲ್ಲಿದೆ” ಎಂದು ಹೇಳುತ್ತಾರೆ. ದೆಹಲಿಯ ಪ್ರಭಾವಶಾಲಿ ರಾಜಕೀಯ ಕಾರಿಡಾರ್‌ಗಳ ಜೊತೆಗೆ ನಿಕಟ ಪರಿಚಯವನ್ನು ಹೊಂದಿದ್ದ ವಿನೋದ್ ಮೆಹ್ತ ಅದರ ಸಲಿಗೆಯನ್ನು ವೈಯುಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ. ಈ ಬಗೆಯ ಗಾಂಧಿ ಮಾದರಿಯ ಆದರ್ಶಗಳನ್ನು ಕಡೆವರೆಗೂ ತಮ್ಮೊಳಗೆ ಉಳಿಸಿಕೊಂಡರು.

1942 ರಲ್ಲಿ ರಾವಲ್ಪಿಂಡಿಯಲ್ಲಿ ಹುಟ್ಟಿದ ವಿನೋದ್ ಮೆಹ್ತ ಬೆಳೆದದ್ದು ಉತ್ತರಪ್ರದೇಶದ ಲಖ್ನೋದಲ್ಲಿ. ಕಡೆವರೆಗೂ ತನ್ನನ್ನು centre leftist ಪತ್ರಕರ್ತ ಎಂದು ಗುರುತಿಸಿಕೊಂಡರೂ ಆ ಟಿಪಿಕಲ್ ಎಡಪಂಥೀಯ ಚಿಂತನೆಗಳಿಂದ ಗಾವುದ ದೂರವಿದ್ದರು. ಆದರೆ ಅರುಂದತಿ ರಾಯ್ ಅವರಂತಹ ಎಡಪಂಥೀಯ ಲೇಖಕಿಯರಿಗೆ ತಮ್ಮ ಔಟ್‌ಲುಕ್ ಪತ್ರಿಕೆಯಲ್ಲಿ ಮುಕ್ತವಾದ ಸ್ಪೇಸ್ ಕೊಟ್ಟಿದ್ದು ವಿನೋದ್ ಮೆಹ್ತ ಅವರ ಲಿಬರಲ್ ಆದ ಜೀವಪರ ಮನೋಧರ್ಮಕ್ಕೆ ಸಾಕ್ಷಿ.ಬಹುಶಃ ಜಾಗತೀಕರಣದ, ಮಾರುಕಟ್ಟೆ ವ್ಯವಸ್ಥೆಗೆ ಬಲಿಯಾದ ಇಂಡಿಯಾದಲ್ಲಿ ವಿನೋದ್ ಮೆಹ್ತರಂತಹವರು ಸಂಪಾದಕರಾಗದಿದ್ದರೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅರಂದತಿ ರಾಯ್ ಅವರ ನಿರ್ಭಿಡೆಯಾದ, ಅನೇಕ ವೇಳೆ ಚರ್ಚಾರ್ಹವಾದ ಲೇಖನಗಳು ಬೆಳಕು ಕಾಣುವ, ಪ್ರಕಟಗೊಳ್ಳುವ ಸಾಧ್ಯತೆಗಳು ಕಡಿಮೆ ಇತ್ತು. ಆದರೆ ಎಲ್ಲಾ ಒತ್ತಡಗಳನ್ನು ಮೀರಿ ವಿನೋದ್ ಮೆಹ್ತ ಪತ್ರಕರ್ತನ ದಿಟ್ಟತೆ ಪ್ರದರ್ಶಿಸಿದರು. ಇದು ಅತಿಶಯೋಕ್ತಿ ಅಲ್ಲ. 15 ವರ್ಷಗಳ ಕಾಲ ಔಟ್‌ಲುಕ್ ಪತ್ರಿಕೆಯನ್ನು ಒಂದು ನಿಜದ ಸೆಕ್ಯುಲರ್ ಪತ್ರಿಕೆಯನ್ನಾಗಿ ಬೆಳಿಸಿದ ಹೆಗ್ಗಳಿಕೆ ವಿನೋದ್ ಮೆಹ್ತ ಅವರದು. ಲಿಬರಲ್, ಪ್ರಗತಿಪರ ಚಿಂತಕರಿಗೆ, ಲೇಖಕರಿಗೆ, vinod-mehta-arundhati-royಪತ್ರಕರ್ತರಿಗೆ ದೊಡ್ಡ ವೇದಿಕೆಯಾಗಿತ್ತು ಔಟ್‌ಲುಕ್ ಪತ್ರಿಕೆ. ಆದರೆ ಸಿದ್ಧಾಂತವಾದಿಯಲ್ಲದ ವಿನೋದ್ ಮೆಹ್ತ ಅದರ ಮಿತಿಗೂ ಕೆಲವೊಮ್ಮೆ ಬಲಿಯಾದದ್ದುಂಟು. ಸೂಡೋ ಸೆಕ್ಯುಲರ್, ಕಾಂಗ್ರೆಸ್ ಚೇಲಾ ಎಂದು ಸಂಘ ಪರಿವಾರದಿಂದ ಟೀಕೆಗೊಳಗಾಗುತ್ತಿದ್ದ ವಿನೋದ್ ಮೆಹ್ತ ಅದನ್ನು ಮೀರಲು ಪ್ರಯತ್ನಿಸುತ್ತಿದ್ದರು. ಆದರೆ ಮೀರುವ ಆ ಸಂದರ್ಭಗಳಲ್ಲಿ ಅವರು ನೆಚ್ಚುತ್ತಿದ್ದದ್ದು ಸುಧಾರಣವಾದಿ ಚಿಂತನೆಗಳನ್ನು. ಇದರ ಫಲವಾಗಿಯೇ ಮೋದಿಯ ಸಾಮ್ರಾಜ್ಯವನ್ನು ಅನುಮಾನದಿಂದ, ಆದಷ್ಟು ಸಂಯಮದಿಂದ, ಕ್ರಿಟಿಕಲ್ ಆಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ವಿಫಲರಾದರೇನೋ ಎಂದೆನಿಸುತ್ತದೆ. ನಾನು ಪೂರ್ವಗ್ರಹಪೀಡಿತನಾಗಲಾರೆ ಎಂದು ಹೊರಟ ವಿನೋದ್ ಮೆಹ್ತ ನರೇಂದ್ರ ಮೋದಿಯ ಸರ್ಕಾರಕ್ಕೆ ಕಡೆಯವರೆಗೂ ಉತ್ತಮ ಅಂಕಗಳನ್ನು ಕೊಡುವಷ್ಟು ಉದಾರವಾದಿಯಾಗಿದ್ದರು!!!

ಇಂಡಿಯಾ ತನ್ನ ಲಿಬರಲ್, ಪ್ರಗತಿಪರ ಪತ್ರಕರ್ತನನ್ನು ಕಳೆದುಕೊಂಡಿದೆ. ಇನ್ನು ಈ ಮಾದರಿಯ ಲಿಬರಲ್, ಸೂಡೋ ಸೆಕ್ಯುಲರ್ ಪತ್ರಕರ್ತ ದೊರಕುವ ಸಾಧ್ಯತೆಗಳು ಕಡಿಮೆಯೇನೋ ( ಇದು ಸುಳ್ಳಾಗಲಿ). ಐವರಿ ಟವರ್ ಸಂಪಾದಕರನ್ನು ಗೇಲಿಗೊಳಪಡಿಸಿ ಸಂಪಾದಕೀಯ ಹುದ್ದೆಯನ್ನು ಬೇರುಮಟ್ಟಕ್ಕೆ, ಈ ನೆಲದ ಮಣ್ಣಿಗೆ ಬಗ್ಗಿಸಿದ ವಿನೋದ್ ಮೆಹ್ತ ಅವರ ಪತ್ರಕರ್ತನ ಜೀವನ ಉದಯೋನ್ನುಖ ಪತ್ರಕರ್ತರಿಗೆ ಒಂದು ಪಠ್ಯವೇ ನಿಜ.