Daily Archives: March 10, 2015

‘ಆಮ ಆದ್ಮಿ’ಯ ಗೆಲುವಿನ ಗುಟ್ಟೆನು..?


– ಡಾ.ಎಸ್.ಬಿ. ಜೋಗುರ


ಈಚೆಗೆ ನಡೆದ ದೆಹಲಿಯ ಚುನಾವಣೆ ಮತ್ತು ಫ಼ಲಿತಾಂಶದ ಸಂದರ್ಭದಲ್ಲಿ ನಾನು ದೆಹಲಿಯಲ್ಲಿದ್ದೆ. ದೆಹಲಿ ಸಿಟಿಯಲ್ಲಿ ಸಂಚರಿಸುವಾಗ ನನಗೆ ಅಲ್ಲಲ್ಲಿ ಸಿಗುವ ರಿಕ್ಷಾವಾಲಾಗಳು, ಡಬ್ಬಾ ಅಂಗಡಿಗಳ ಮುಂದಿರುವ ಜನರೊಂದಿಗೆ ಹಾಗೇ ಹರಟುತ್ತಾ ‘ಕ್ಯಾ ಹೈ ದಿಲ್ಲಿ ಇಲೆಕ್ಷನ್ ಕಾ ಹಾಲ್’ ಅಂತಿದ್ದೆ. ಅದಕ್ಕವರು ‘ಪೂಛನಾ ಕ್ಯಾ ಹೈಜೀ ಕೇಜ್ರಿವಾಲಾ ಹೀ ಆಯೇಗಾ’ ಎಂದು ತುಂಬಾ ಕಾನ್ಫಿಡಂಟ್ ಆಗಿ ಹೇಳುವವರು. ಚುನಾವಣೆ ಹತ್ತಿರವಾಗುತ್ತಿರುವಂತೆ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಇನ್ನಷ್ಟು ಹೆಚ್ಚಾಗುತ್ತಾ ನಡೆಯಿತು. cyclerickshaw-delhiಕೇವಲ ನಮ್ಮ ದೇಶ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಜನಸಮಾನ್ಯರದೇ ಬಹುದೊಡ್ಡ ಪಾಲು ಅವರು ಬಯಸಿದರೆ ಇಷ್ಟಪಡುವ ವ್ಯಕ್ತಿಯನ್ನು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಂಶಯವೇ ಇಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ನಗರಗಳ ಚುನಾವಣಾ ಫ಼ಲಿತಾಂಶ ಜನಸಾಮಾನ್ಯ ನಿರೀಕ್ಷಿಸುವಂತೆ ಸಾಧ್ಯವಾಗುತ್ತಿದೆ. ಜಾಗತೀಕರಣದ ಸಂದರ್ಭದಲ್ಲಿ ರಾಜಕೀಯ ಸ್ಥಿತ್ಯಂತರಗಳು ಮಧ್ಯಮ ವರ್ಗದವರ, ಜನಸಾಮಾನ್ಯನ ಮೂಲಕ ನಿರ್ಧರಿತವಾಗುತ್ತಿರುವದು ವಿಶ್ವದ ಅನೇಕ ಕಡೆಗಳಲ್ಲಿ ಎದ್ದು ತೋರುತ್ತಿದೆ. ಯಾವುದೇ ಒಂದು ರಾಜಕೀಯ ಪಕ್ಷ ಕೆಲವೇ ಕೆಲವು ಶ್ರೀಮಂತ ದೊರೆಗಳ ಖುಷಿಗಾಗಿ ಅಧಿಕಾರ ಚಲಾಯಿಸುತ್ತವೆ ಎನ್ನುವದಾದರೆ ಅದರ ಆಯುಷ್ಯ ದೀರ್ಘವಾಗಿರುವದಿಲ್ಲ ಎಂದರ್ಥ. ದೆಹಲಿಯಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಪಕ್ಷ ಜನಸಾಮಾನ್ಯನ ಮಾನಸಿಕ ಸ್ತರಗಳನ್ನು ಅರಿಯದೇ ಬರೀ ಭಾಷಣದ ಮೂಲಕವೇ ಎಲ್ಲವನ್ನು ಸಾಧ್ಯಮಾಡಬಹುದೆನ್ನುವ ಭ್ರಮೆಯನ್ನು ದೆಹಲಿಯ ಮತದಾರ ಛಿದ್ರಛಿದ್ರವಾಗಿ ಒಡೆದಿರುವದಿದೆ. ಯಾವ ಪಕ್ಷವೂ ನಿರೀಕ್ಷಿಸದ ರೀತಿಯಲ್ಲಿ ಫ಼ಲಿತಾಂಶವನ್ನು ಗಳಿಸಿದ ಆಮ ಆದ್ಮಿ ಪಕ್ಷ ಜನಸಾಮಾನ್ಯನಂತೆಯೇ ಯೋಚಿಸುವ, ಮಾತನಾಡುವ, ಕನಸು ಕಾಣುವ ಮೂಲಕವೇ ಅಧಿಕಾರದ ಗದ್ದುಗೆಯೇರಿದ್ದು ಮಾತ್ರವಲ್ಲದೇ ದೈನಂದಿನ ಅಗತ್ಯಗಳಾದ ವಿದ್ಯುತ್, ಕುಡಿಯುವ ನೀರು ಮುಂತಾದವುಗಳನ್ನು ಮಾತು ತಪ್ಪದ ಮಕ್ಕಳಂತೆ ಈಡೇರಿಸಿದ್ದಾರೆ. ವಿಶ್ವದ ಬಹುತೇಕ ಕಡೆಗಳಲ್ಲಿ ಈ ನಗರ ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ತಮ್ಮ ಜನನಾಯಕರಿಂದ ಅರಮನೆ, ಮೃಷ್ಟಾನ್ನ ಭೋಜನವನ್ನು ಕೇಳುವದಿಲ್ಲ. ತೀರಾ ಸಾಮಾನ್ಯ ದೈನಂದಿನ ಜೀವನ ನಿರ್ವಹಣೆಗೆ ಅಗತ್ಯವಿರುವ ಉದ್ಯೋಗ, ವಸತಿ, ಕುಡಿಯುವ ನೀರು ಮುಂತಾದವುಗಳನ್ನೇ ಕೇಳುತ್ತಾರೆ. ಜೊತೆಗೆ ವರ್ಷದಿಂದ feb142015kejriwalವರ್ಷಕ್ಕೆ ತೀವ್ರ ಪ್ರಮಾಣದಲ್ಲಿ ಹೊರನೋಟಕ್ಕೆ ನಿಚ್ಚಳವಾಗಿ ತೋರುವ ನಗರ ಜೀವನದಲ್ಲಿಯ ಅಸಮಾನತೆಗಳಿಂದ ಉಧ್ಬವವಾಗಬಹುದಾದ ಅತೃಪ್ತಿಯ ಪರಿಣಾಮವೂ ಈ ಬಗೆಯ ಫ಼ಲಿತಾಂಶವನ್ನು ಕೊಡಬಲ್ಲದು.

ಕಳೆದ ಎರಡೂವರೆ ದಶಕಗಳಿಂದಲೂ ಜಾಗತೀಕರಣದ ಪ್ರಭಾವ ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಸಂಗತಿಗಳ ಮೇಲೆ ಉಂಟಾಗುತ್ತಿರುವ ಹಾಗೆಯೇ ರಾಜಕೀಯ ವಿದ್ಯಮಾನಗಳ ಮೇಲೆಯೂ ಅದು ತನ್ನ ಪ್ರಭಾವವನ್ನು ಬೀರುತ್ತಿದೆ. ಈಚೆಗೆ ಬ್ರಾಝಿಲ್ ಲ್ಲಿ ನಡೆದ ಚುನಾವಣೆ, ಗ್ರೀಸ್ ನಲ್ಲಿ ನಡೆದ ರಾಜಕೀಯ ವಿದ್ಯಮಾನ, ಹಾಂಗ್ ಕಾಂಗ್ ನಲ್ಲಿ ನಡೆದ ರಾಜಕೀಯ ಪ್ರತಿಭಟನೆ ಹುಸಿ ಭರವಸೆಗಳನ್ನು ನೀಡಿದ ರಾಜಕೀಯ ನೇತಾರರು ಕೇವಲ ಶ್ರೀಮಂತರ ಪ್ರೀತಿ ಪಾತ್ರರಾಗುವದನ್ನು ಸಹಿಸದೇ ಜನ ವಿಶ್ವದಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡತೊಡಗಿದ್ದಾರೆ ಇಲ್ಲವೇ ರಾಜಕೀಯ ಅಧಿಕಾರವನ್ನೇ ಬದಲಾಯಿಸಿದ್ದಾರೆ. ನ್ಯುಯಾರ್ಕ್ ಮತ್ತು ಲಾಸ್ ಎಂಜೆಲ್ಸ್ ನಂಥಾ ಪಟ್ಟಣಗಳೂ ಇದಕ್ಕೆ ಹೊರತಾಗಿಲ್ಲ. ಎರಡು ದಶಕಗಳ ಮೊದಲಿನ ಜನಸಾಮಾನ್ಯ ಅಮೇರಿಕೆಯ ಮಾತ್ರವಲ್ಲ ಯಾವುದೇ ರಾಷ್ಟ್ರದ ಅಧ್ಯಕ್ಷ, ಪ್ರಧಾನಿ ಬಂದು ಹೋದರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಮೇರಿಕೆಯ ಅಧ್ಯಕ್ಷ ಓಬಾಮಾ ಬರೀ ಬಂದ ವಿಷಯ ಮಾತ್ರವಲ್ಲ, ಆತ ಮಾತನಾಡಿದ್ದು, ಪ್ರಧಾನಿಯ ಜೊತೆಗಿನ ಸಂಭಾಷಣೆ ಎಲ್ಲವನ್ನು ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ನೋಡುವುದು, ಕೇಳುವುದು, ಓದುವುದು ಮಾತ್ರವಲ್ಲದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತನ್ನ ಹಕ್ಕುಗಳು, ಅಧಿಕಾರಗಳೇನು..? ಎನ್ನುವದನ್ನು ಯೋಚಿಸುವಷ್ಟು ಸಮರ್ಥತೆಯನ್ನು ಈ ಜಾಗತೀಕರಣದ ವಿದ್ಯಮಾನಗಳೇ ಅವರಿಗೆ ತಂದು ಕೊಟ್ಟಿರುವದಿದೆ. ಹೀಗಾಗಿ ಈಗಾಗಲೇ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಸುಮ್ ಸುಮ್ನೆ ಪಾರಿಜಾತ ಪುಷ್ಪವನ್ನೇ ಮತದಾರನ ಕೈಗಿಡುವ ಮಾತಾಡದಿರುವದೇ ಕ್ಷೇಮ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಅತಿ ಮುಖ್ಯ ಕಾರಣ ಆ ಪಕ್ಷದ ನೇತಾರನ ಗ್ರಹಿಕೆಗಳು, ಮಾತುಗಳು, ಭರವಸೆಗಳು. ಪಕ್ಕಾ ಸಾಮಾನ್ಯ ಮನುಷ್ಯನಾಗಿಯೇ ಚುನಾವಣೆ ಎದುರಿಸಿದ ಕೇಜ್ರಿವಾಲ್ ಸಮೂಹ ಅಪಾರ ಪ್ರಮಾಣದ ಗೆಲುವನ್ನು ಪಡೆಯುವಲ್ಲಿ ಜನಮಾನಸವನ್ನು ಅರಿಯುವಲ್ಲಿ ಸಫ಼ಲರಾದದ್ದೇ ಕಾರಣ. ಬಣ್ಣದ ಮಾತು ಮತ್ತು ಹುಸಿ ಭರವಸೆಗಳನ್ನು ಹೇಗೆ ಜನಸಾಮಾನ್ಯ ಇಷ್ಟಪಡುವದಿಲ್ಲವೋ ಅದೇ ರೀತಿಯಲ್ಲಿ ತೀರಾ ಸಣ್ಣ ಕಾರಣಗಳನ್ನು ಮುಂದೆ ಮಾಡಿ ಒಳಜಗಳಗಳನ್ನು ಹುಟ್ಟು ಹಾಕಿಕೊಳ್ಳುವ ಪಕ್ಷಗಳನ್ನು ಕೂಡಾ ಸಹಿಸುವದಿಲ್ಲ. ಯಾಕೆಂದರೆ ಅಧಿಕಾರವನ್ನು ಕೊಟ್ಟಾಗಲೂ ಮಾಡಲಾಗದವರು ಮತ್ತೊಮ್ಮೆ ತಮ್ಮನ್ನು ಆರಿಸುವರೆಂಬ ಕನಸನ್ನು ಮರೆತುಬಿಡುವದೇ ಕ್ಷೇಮ. ಅದರಲ್ಲೂ ನಗರ ಪ್ರದೇಶಗಳಲ್ಲಿಯ ಮತದಾರ ತೀರಾ ಜಾಗೃತ ಹೀಗಾಗಿ ರಾಜಕೀಯ ಎನ್ನುವುದು ಮುಂಚಿನಂತೆ ದುಡ್ಡಿದ್ದವರ ಅಖಾಡಾ ಎನ್ನುವ ಮಾತು ತುಸು ಮಂಕಾಗುತ್ತಿದೆ. ಭಾರತದ ನಗರಗಳಲ್ಲಿ ಇಂದು ಸುಮಾರು ೩೨ ಪ್ರತಿಶತ ಜನರು ವಾಸವಾಗಿದ್ದಾರೆ. ಇವರಲ್ಲಿ ಕೆಲವೇ ಕೆಲವರು ಮಾತ್ರ ಎಲ್ಲ ಬಗೆಯ ಸೌಲಭ್ಯಗಳನ್ನು ಹೊಂದಿದವರಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಕೆಲವೇ ಕೆಲವರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ದಿಮೆದಾರರು. ಮಿಕ್ಕವರು ಅನೇಕ ಬಗೆಯ ಸೌಲಭ್ಯವಂಚಿತರಾಗಿ ಬದುಕುವ ಜೊತೆ ಜೊತೆಗೆ ಅಸ್ಥಿತ್ವದಲ್ಲಿರುವ ಅಸಮಾನತೆಗಳ ಬಗ್ಗೆ ಒಂದು ಬಗೆಯ ಸಿಟ್ಟನ್ನು ಕಾಪಾಡಿಕೊಂಡು ಬರುವುದು ಮಾತ್ರವಲ್ಲದೇ ಅದನ್ನು ಕೇವಲ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಹಾಗೆ ಮಾಡದೇ ಈ ಬಗೆಯ ಚುನಾವಣೆಗಳಲ್ಲಿ ಪ್ರದರ್ಶಿಸುತ್ತಾರೆ ಅದರ ಪರಿಣಾಮವಾಗಿಯೇ ಆಮ್ ಆದ್ಮಿ ಪಕ್ಷದಂತಹ ರಾಜಕೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ಸಾಧ್ಯವಾಗುತ್ತದೆ. ದೇಶದ ಬಹುದೊಡ್ಡ ಪ್ರಮಾಣದಲ್ಲಿರುವ ಜನಸಾಮಾನ್ಯನನ್ನು ಮರೆತು ರಾಜಕೀಯ ಮಾಡಲಾಗದು ಹಾಗೆ ಮಾಡ ಹೋದರೆ ವೈಫ಼ಲ್ಯ ಖಾತ್ರಿ. ಮೊನ್ನೆಯಷ್ಟೆ ಮಂಡನೆಯಾದ ಕೇಂದ್ರ ರೈಲು ಬಜೆಟ್ ಸಂದರ್ಭದಲ್ಲಿ ಆಮ ಆದ್ಮಿ ಪಕ್ಷ ಬಜೆಟ್ ಗೆ ಪ್ರತಿಕ್ರಿಯಿಸುವಾಗಲೂ ಜನಸಾಮಾನ್ಯನನ್ನು ಮರೆಯಲಿಲ್ಲ. ಆಗ ಅದು ‘ಈ ಬಜೆಟ್ ಸಾಮಾನ್ಯನ ಪಾಲಿಗೆ ಖಾಲಿ ಚೀಲವಿದ್ದಂತೆ’ ಎಂದಿತು. ಈ ಬಗೆಯ ತಾತ್ವಿಕ ಆಲೋಚನೆ ದೆಹಲಿ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಕೆಲಸ ಮಾಡಿದೆ. ಸದ್ಯದ ಮಟ್ಟಿಗೆ ಆಮ್ ಆದ್ಮಿ ಮಾತು ಕೊಟ್ಟಂತೆ ವಿದ್ಯುತ್ ದರ ಇಳಿಸಿದೆ, ಉಚಿತ ಕುಡಿಯುವ ನೀರನ್ನೂ ಒದಗಿಸಿದೆ. ಸುಂದರವಾಗಿ ಮಣ ಮಾತಾಡುವವರಿಗಿಂತಲೂ ಹೀಗೆ ದೈನಂದಿನ ಅಗತ್ಯತೆಗಳನ್ನು ಗಮನಹರಿಸುವ ಜನನಾಯಕರೇ ಮೇಲು ಎಂದೆನಿಸುತ್ತದೆ.