ಸತ್ತದ್ದು ಅಂತಃಸಾಕ್ಷಿ: ಕೊಲ್ಲಲ್ಪಟ್ಟದ್ದು ಲೇಖಕ

                                                                                                             ಪಿ.ಭಾರತೀ ದೇವಿ

ತಮಿಳು ಲೇಖಕ ಪೆರುಮಾಳ್ ಮುರುಗನ್ ತಮ್ಮೊಳಗಿನ ಲೇಖಕ ಸತ್ತಿದ್ದಾನೆ ಎಂದು ಘೋಷಿಸಿಕೊಂಡರು. ಅವರು 2010ರಲ್ಲಿ ಬರೆದ ಕೃತಿ ‘ಮಾದೋರುಬಾಗನ್’ ಗೆ ಎದುರಾದ ವಿರೋಧ ಅವರೊಳಗಿನ ಬರಹಗಾರನ ಚೈತನ್ಯವನ್ನು ಉಡುಗಿಸಿತು. ಈ ಬಗೆಯಲ್ಲಿ ಆಕ್ಷೇಪಾರ್ಹವಾದ ಸಂಗತಿ ಈ ಕೃತಿಯಲ್ಲಿ ಏನಿದೆ ಎಂಬ ಕುತೂಹಲದಿಂದ ಓದಿದರೆ ಅಲ್ಲಿ ವಿಮರ್ಶೆಗೊಳಗಾಗುವುದು ಕಟ್ಟುಪಾಡುಗಳಿಂದ ವ್ಯಕ್ತಿಯ ಜೀವಚೈತನ್ಯವನ್ನು ಉಡುಗಿಸುವ ವ್ಯವಸ್ಥೆ. ಹೀಗೆ ಸಹಜ, ಸ್ವತಂತ್ರ ಬದುಕಿಗೆ ಕೋಳ ತೊಡಿಸುವ ಕಟ್ಟಳೆಗಳು ಅದರಿಂದಾದ ಗಾಯಕ್ಕೆ ತಾವೇ ಮುಲಾಮು ಕೂಡಾ ಸವರುತ್ತವೆ. ಆದರೆ ಈ ಮುಲಾಮು ಗಾಯವನ್ನು ಗುಣಪಡಿಸುವ ಬದಲು ಹುಣ್ಣಾಗಿಸುತ್ತದೆ. ಈ ಬಗೆಯ ಹುಣ್ಣಿಗೆ ಕನ್ನಡಿ ಹಿಡಿದದ್ದಕ್ಕೇ ಎನಿಸುತ್ತದೆ ಇಂತಹ ಕೃತಿ ನಿಷೇಧಾರ್ಹ ಎನಿಸುವುದು.

ಈ ಕೃತಿ ಮತ್ತು ಅದರ ಹೆಸರಿನಲ್ಲಿ ನಡೆದ ವಿವಾದ ಆಧುನಿಕ ಎನ್ನುವ ಸಂದರ್ಭದಲ್ಲೂ ನಮ್ಮ ಕುರೂಪವನ್ನು ನೋಡುವ ಕನ್ನಡಿ ಇಟ್ಟಾಗ ಅದನ್ನು ಮುಖಾಮುಖಿಯಾಗಲು ಸಿperumalದ್ಧರಿಲ್ಲದ ನಾವು ಎಂತಹ ನಾಗರಿಕರು? ಎನ್ನುವ ಪ್ರಶ್ನೆಯನ್ನು ಎಲ್ಲರ ಮುಂದಿಡುತ್ತದೆ. ಕೆಲವು ದಿನಗಳ ಹಿಂದೆ ‘ಇಂಡಿಯಾಸ್ ಡಾಟರ್’ ಡಾಕ್ಯುಮೆಂಟರಿಗೆ ವ್ಯಕ್ತವಾದ ಅಭಿಪ್ರಾಯವೂ ನಮ್ಮನ್ನು ಆವರಿಸಿರುವ ಕೇಡನ್ನು ಒಪ್ಪಿಕೊಳ್ಳಲು, ಅದಕ್ಕೆ ಎದುರಾಗಲು ಸಿದ್ಧವಿರದ ಮನಸ್ಥಿತಿಯನ್ನು ತೋರಿಸುತ್ತದೆ. ಯಥಾಸ್ಥಿತಿಯನ್ನು ಸುಂದರ ಮಾತುಗಳಲ್ಲಿ ಬಣ್ಣಿಸಿ ಮುಂದುವರೆಸಿಕೊಂಡು ಹೋಗುವವರಿಗೆ, ಸಂಸ್ಕೃತಿಯ ಹಿರಿಮೆಯನ್ನು ಕೊಂಡಾಡಲು ಹಿಂದಿನದನ್ನು ತಿರುಚುವ ಜನರಿಗೆ ಅಪಥ್ಯವಾಗುವ ಕಹಿ ಇದು.

*************

ಮಾದೋರುಬಾಗನ್ ಎತ್ತುವ ಪ್ರಶ್ನೆ ವ್ಯಕ್ತಿಯ ಬದುಕಿನ ಖಾಸಗಿ ವಲಯದಲ್ಲೂ ಅನಪೇಕ್ಷಿತವಾಗಿ ಮೂಗು ತೂರಿಸಿ ಬದುಕನ್ನು ಅಸಹನೀಯಗೊಳಿಸುವ ಸಾಮಾಜಿಕ ವಿಷಮತೆಯನ್ನು ಎಳೆಯಾಗಿ ಹೊಂದಿದೆ. ಈ ಕೃತಿಯನ್ನು ಜಾತಿ, ವರ್ಗ, ಲಿಂಗಗಳ ಹಿನ್ನೆಲೆಗಳಲ್ಲಿ ಅಭ್ಯಸಿಸಬಹುದಾದರೂ ಸದ್ಯಕ್ಕೆ ನಾನು ಇದನ್ನು ವ್ಯಕ್ತಿಯ ಖಾಸಗಿ ಬದುಕಿನ ಜೀವಂತಿಕೆಯನ್ನು ಕಸಿಯುವ ವ್ಯವಸ್ಥೆಯ ಮಧ್ಯಪ್ರವೇಶ ಎಂಬ ನೆಲೆಯಲ್ಲಿ ಗಮನಿಸುತ್ತಿದ್ದೇನೆ.

ತಮಿಳುನಾಡಿನಲ್ಲಿ ವ್ಯವಸಾಯದ ಕೆಲಸ ಮಾಡುತ್ತಾ ಬಂದಿರುವ ಗೌಂಡರ್ ಸಮುದಾಯದ ಪೊನ್ನ ಮತ್ತು ಕಾಳಿ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಿಲ್ಲದೆ ಬಳಲುವ ಕತೆ ಇದು. ಇವರಿಗೆ ಮಕ್ಕಳಿಲ್ಲ ಎನ್ನುವ ಸಣ್ಣ ಕೊರಗು ಇದ್ದರೂ ಅದು ಅವರ ನಡುವಣ ಪ್ರೀತಿಗೆ ಅಡ್ಡಿಯಾಗಿರುವುದಿಲ್ಲ. ಆದರೆ ಅವರ ದಿನನಿತ್ಯದ ಸನ್ನಿವೇಶಗಳಲ್ಲೆಲ್ಲ ಇದನ್ನು ಎತ್ತಿ ಆಡುವ ಸಮಾಜ ಅವರು ಬದುಕಿನ ಸಣ್ಣ ಸಂತೋಷಗಳಿಗೂ ಎರವಾಗುವ ಹಾಗೆ ಮಾಡುತ್ತದೆ. ಮದುವೆಯಾಗಿ ತಮ್ಮ ಬದುಕು ಹೇಗೆ ಸಾಗುತ್ತದೆ ಎಂದು ಅರಿವಾಗುವ ಮೊದಲೇ ಮಕ್ಕಳನ್ನು ಹೊತ್ತು, ಗೊತ್ತು ಗುರಿಯೇ ಇಲ್ಲದಂತೆ ಒಂದಾದ ಮೇಲೆ ಒಂದರಂತೆ ಹುಟ್ಟಿಸಿ, ಸಾಕಲು ಪಡಿಪಾಟಲು ಪಡುವವರೂ ಒಂದಿಷ್ಟೂ ಸ್ವ ಅವಲೋಕನ ಮಾಡಿಕೊಳ್ಳದಂತೆ ಇದೇ ಪರಮಸತ್ಯ ಎಂಬಂತೆ ಬದುಕುತ್ತಿರುತ್ತಾರೆ. ಇಂಥ ಎಲ್ಲರೂ ಕಾಳಿ ಮತ್ತು ಪೊನ್ನನ ಬದುಕು ಮಕ್ಕಳಿಲ್ಲದೇ ಅರ್ಥಹೀನ ಎಂದು ನಿರ್ಧರಿಸಿಬಿಡುತ್ತಾರೆ.

ಕೃಷಿಯ ಸಂದರ್ಭದಲ್ಲಿ ಬೀಜ ಬಿತ್ತಲು ನೆರವಾಗಲು ಹೋದ ಪೊನ್ನ, ಬಂಜೆ ಬಿತ್ತಿದರೆ ಇಳುವರಿ ಹೇಗೆ ಬರಲು ಸಾಧ್ಯ ಎಂಬ ಮಾತಿನಿಂದ ನೋಯುತ್ತಾಳೆ. ಯಾರ ಮಕ್ಕಳೇ ಆಗಲಿ ಮನೆಗೆ ಬಂದಾಗ ಪೊನ್ನಳಿಗೆ ಸಂಭ್ರಮ. ಅದೇ ಅವರು ಆಡುವಾಗ ತುಸು ಗಾಯ ಮಾಡಿಕೊಂಡರೂ ಮಕ್ಕಳೇ ಇಲ್ಲದ ಪೊನ್ನಳಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಗೊತ್ತಿದ್ದರೆ ತಾನೇ? ಎಂಬ ಚುಚ್ಚುಮಾತು ಅವಳನ್ನು ಘಾಸಿಗೊಳಿಸುತ್ತದೆ. ಶುಭಸಮಾರಂಭಗಳಿಗೆ ಹೋದರೂ ಅವಳ ಬಗ್ಗೆ ತಿರಸ್ಕಾರ ಅಥವಾ ಅನುಕಂಪ. ಹತ್ತು ವರ್ಷಗಳಿಂದಲೂ ಇವನ್ನೆಲ್ಲ ಅನುಭವಿಸಿ ಅನುಭವಿಸಿ ಪೊನ್ನ ಕುಗ್ಗುತ್ತಾ ಹೋಗುತ್ತಾಳೆ. ದಿನದಿಂದ ದಿನಕ್ಕೆ ಜನರೊಂದಿಗೆ ಬೆರೆಯುವುದನ್ನು ಕಡಿಮೆ ಮಾಡುತ್ತಾ ಒಂಟಿಯಾಗುತ್ತಾಳೆ.

ಆಕೆಯ ಗಂಡ ಕಾಳಿ ತನ್ನ ಗೆಳೆಯರ ಮಧ್ಯೆ ಕೈಲಾಗದವನು ಎಂಬ ಮಾತುಗಳಿಗೆ ಈಡಾಗಬೇಕಾಗುತ್ತದೆ. ಅವನಿಗೆ ಮಕ್ಕಳಿಲ್ಲದಿರುವುದರಿಂದ ಅವನ ನಂತರ ಆಸ್ತಿ ನಮ್ಮದಾಗಬೇಕು ಎಂದು ಹುಸಿ ಕಾಳಜಿ ತೋರಿಸುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಮಕ್ಕಳಿಲ್ಲದಿರುವುದರಿಂದ ನಿಮಗೇನು ಚಿಂತೆ, ಇರುವುದನ್ನು ಖರ್ಚು ಮಾಡಿ ಹಾಯಾಗಿದ್ದೀರಿ ಎನ್ನುವ ಭರ್ತ್ಸನೆಯ ಮಾತುಗಳು ನಿರಂತರ ಅವನನ್ನು ತಾಕುತ್ತಿರುತ್ತವೆ.

ಮಕ್ಕಳನ್ನು ಪಡೆಯುವುದಕ್ಕೆ ಇವರಿಬ್ಬರೂ ಯಾವ್ಯಾವ ಪೂಜೆ ಸಾಧ್ಯವೋ, ಯಾವ್ಯಾವ ಹರಕೆ ಸಾಧ್ಯವೋ ಎಲ್ಲವನ್ನೂ ಮಾಡುತ್ತಾರೆ. ತಮ್ಮ ಜೀವವನ್ನು ಪಣಕ್ಕೊಡ್ಡಿ ಕಷ್ಟಕರವಾದ ಹರಕೆಗಳನ್ನು ಪೂರೈಸುತ್ತಾರೆ. ಆದರೆ ಯಾವುದೂ ಪೊನ್ನಳ ಮಡಿಲನ್ನು ತುಂಬುವುದಿಲ್ಲ. ಪ್ರತಿತಿಂಗಳೂ ತಪ್ಪದೆ ಬರುವ ಸ್ರಾವ ಅವಳನ್ನು ಖಿನ್ನತೆಗೆ ದೂಡುತ್ತದೆ.

ಮನೆಯಲ್ಲಿ, ಮನೆಯ ಹೊರಗೆ ಎಲ್ಲ ಕಡೆಯಲ್ಲೂ ನಿರಂತರವಾದ ಇವೇ ಮಾತುಗಳಿಂದ ಇವರಿಬ್ಬರೂ ರೋಸಿ ಹೋಗುತ್ತಾರೆ. ಅದರಲ್ಲೂ ಹೆಚ್ಚು ಮಾತಿಗೆ ಆಹಾರವಾಗುವವಳು ಪೊನ್ನ. ಮಕ್ಕಳಿಲ್ಲದಿದ್ದರೆ ಅದಕ್ಕೆ ಹೆಣ್ಣೇ ಕಾರಣ ಎಂದು ದೂಷಿಸುವವರೇ ಜಾಸ್ತಿ. ಕೃಷಿ ಇಳುವರಿ ಚೆನ್ನಾಗೇ ಬರುತ್ತಿದ್ದರೂ ಕುರಿ ಕೋಳಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಮನೆಯಲ್ಲಿ ಮಾತ್ರ ಮಗುವಿನ ಕೇಕೆ ಇಲ್ಲವಲ್ಲ ಎಂಬ ಕೊರಗು ಎಲ್ಲ ಸಂದರ್ಭಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಇಣುಕಿ ಬದುಕಿಗೇ ಗ್ರಹಣ ಬಡಿದಂತಾಗುತ್ತದೆ.

ಆದರೆ ವೈಯಕ್ತಿಕವಾಗಿ ನೋಡಿದರೆ ಪೊನ್ನ-ಕಾಳಿಯರ ದಾಂಪತ್ಯದ ಬಿಸುಪು ಅಂದಿನಿಂದಲೂ ಕಾವು ಕಳೆದುಕೊಂಡಿಲ್ಲ. ಇಂದಿಗೂ ಪೊನ್ನಳ ನೆನಪೇ ಕಾಳಿಯಲ್ಲಿ ಹೊಸ ಹುರುಪು ತುಂಬುತ್ತದೆ. ಕಾಳಿಯ ಪ್ರತಿಯೊಂದು ಚಲನೆಯನ್ನೂ ಪೊನ್ನ ಬಲ್ಲಳು. ಅವರಿಗೆ ತಮ್ಮ ಸಂಬಂಧದಲ್ಲಿ ಯಾವ ಕೊರತೆಯೂ ಇಲ್ಲ, ಸುಖವಾಗಿಯೇ ಇದ್ದೇವೆ, ಯಾಕೆ ಅವರಿವರ ಮಾತಿಗೆ ಕಟ್ಟುಬಿದ್ದು ಮಕ್ಕಳಿಲ್ಲ ಎಂದು ಕೊರಗುವುದು ಎನಿಸುತ್ತದೆ. ಆದರೆ ಸುತ್ತಣ ಸಮಾಜ ಅವರು ಅವರ ಪಾಡಿಗೆ ಸುಖವಾಗಿ ಇರುವುದಕ್ಕೂ ಬಿಡುವುದಿಲ್ಲ.

ತಿರುಚಂಗೋಡಿನ ಅರ್ಧನಾರೀಶ್ವರ ದೇವಸ್ಥಾನದ ಜಾತ್ರೆಯ 14ನೇ ದಿನ ಮಕ್ಕಳಿಲ್ಲದವರಿಗೆ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಅಲ್ಲೆಲ್ಲ ಹಬ್ಬಿತ್ತು. ಮಕ್ಕಳಿಲ್ಲದ ಮಹಿಳೆಯರು ಆ ದಿನ ಮಟ್ಟಿಗೆ ಮಕ್ಕಳನ್ನು ಪಡೆಯುವ ಸಲುವಾಗಿ ದೇವರ ರೂಪವೇ ಎಂಬಂತೆ ಕಾಣುವ ಪುರುಷರ ಜೊತೆಗಿದ್ದು ಮಕ್ಕಳನ್ನು ಪಡೆಯುವ ಅವಕಾಶ ಅದು. ಅನೇಕ ಜನ ಮಕ್ಕಳಿಲ್ಲದವರು ಆ ದಿನ ಮಕ್ಕಳನ್ನು ಪಡೆದು ಆ ಮಕ್ಕಳು ದೇವರ ಮಕ್ಕಳೆನಿಸಿಕೊಂಡಿದ್ದರು.

ಕಾಳಿಯ ತಾಯಿ ಮತ್ತು ಪೊನ್ನಳ ಅತ್ತೆ ಸೇರಿ ಪೊನ್ನಳನ್ನು ಈ ಬಾರಿ ಜಾತ್ರೆಯ 14ನೇ ದಿನ ಕಳುಹಿಸಬೇಕು ಎಂದು ಅಂದುಕೊಳ್ಳುತ್ತಾರೆ. ಕಾಳಿಯ ತಾಯಿ ಅದನ್ನು ಮಗನ ಜೊತೆ ಯಾಚನೆಯ ರೀತಿಯಲ್ಲಿ ಹೇಳಿಕೊಳ್ಳುತ್ತಾಳೆ. ಆದರೆ ಆ ಯೋಚನೆಯೇ ಕಾಳಿಯ ನಿದ್ದೆ ಕೆಡಿಸುತ್ತದೆ. ಕೊರತೆಯಿಲ್ಲದ ತಮ್ಮ ಸಾಂಗತ್ಯಕ್ಕೆ ಬಿರುಕಾಗಬಹುದಾದ ಅದು ಕಾಳಿಗೆ ಸಹ್ಯವಾಗುವುದಿಲ್ಲ. ಕೊನೆಯಲ್ಲಿ ಕಾಳಿ ಒಪ್ಪಿದ್ದಾನೆ ಎಂದು ಪೊನ್ನಳನ್ನು ನಂಬಿಸಿ, ಕಾಳಿಯನ್ನು ಉಪಾಯದಿಂದ ಬೇರೆಡೆಗೆ ಕರೆದೊಯ್ದು ಅವಳನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ.

ನಿದ್ದೆ ತಿಳಿದು ಪೊನ್ನಳನ್ನು ಜ್ಞಾಪಿಸಿಕೊಂಡು ಮನೆಗೆ ಬಂದ ಕಾಳಿ ಮನೆಯ ಮುಂದೆ ಇರುವ ಗಾಡಿ ಕಾಣದಿರುವುದನ್ನು ಕಂಡು ತಾನು ಇವರೆಲ್ಲರ ಮೋಸಕ್ಕೆ ಬಲಿಯಾದೆ ಎಂದು ರೋದಿಸುತ್ತಾನೆ. ತಮ್ಮ ಪ್ರೀತಿಯ ಬದುಕು ಒಡೆಯಿತು ಎಂದು ಆಕ್ರೋಶದಿಂದ ‘ಕೊನೆಗೂ ಮೋಸ ಮಾಡಿದ್ಯಲ್ಲೆ, ಹಾದರಗಿತ್ತಿ…’ ಎಂದು ಹತಾಶನಾಗಿ ಕಿರುಚುತ್ತಾನೆ. ಈ ಸಂಚಿಗೆ ಪೊನ್ನ-ಕಾಳಿಯರ ಬೆಚ್ಚನೆಯ ಬದುಕು ಛಿದ್ರವಾಗುತ್ತದೆ.

************

ಮಾದೋರುಬಾಗನ್ ಕೃತಿಯನ್ನು ವಿರೋಧಿಸುವವರಲ್ಲಿ ಬಹಳ ಜನ ಅವರೇ ಒಪ್ಪಿಕೊಳ್ಳುವ ಹಾಗೆ ಅದನ್ನು ಸರಿಯಾಗಿ ಓದಿಕೊಂಡಿಲ್ಲ. ಕೃತಿಯ ಕೊನೆಯಲ್ಲಿ ತಿರುಚಂಗೋಡ್ ದೇವಸ್ಥಾನದ ಜಾone partತ್ರೆಯ ಹದಿನಾಲ್ಕನೇ ದಿನ ಮಕ್ಕಳಿಲ್ಲದ ಹೆಂಗಸರು ಆ ದಿನದ ಮಟ್ಟಿಗೆ ಮಕ್ಕಳನ್ನು ಪಡೆಯುವ ಸಲುವಾಗಿ ಪರಪುರುಷನ ಜೊತೆಗೆ ಸೇರಬಹುದಾದ ಸಡಿಲಿಕೆ ಇತ್ತು ಎನ್ನುವ ಸಂಗತಿಯನ್ನು ಮುಂದಿಟ್ಟುಕೊಂಡು ಒಂದಷ್ಟು ಜನ ಇದನ್ನು ವಿರೋಧಿಸಿದರು. ಮಾನವಶಾಸ್ತ್ರೀಯ ಅಧ್ಯಯನ ದೃಷ್ಟಿಯಿಂದ ಮಹತ್ವವಾದ ಈ ವಿಚಾರವನ್ನು ತಮ್ಮ ಅಧ್ಯಯನ ಮೂಲಕ ಕಂಡುಕೊಂಡ ಸೃಜನಶೀಲ ಲೇಖಕ ಪೆರುಮಾಳ್ ಮುರುಗನ್ ಅದನ್ನು ಸಮಾಜದ ವಿಷಮತೆಯೊಂದಿಗೆ ಸೂಕ್ಷ್ಮವಾಗಿ ಹೆಣೆದಿದ್ದಾರೆ. ಆದಿಮ ಸಂಸ್ಕೃತಿ ಎಂದು ಗುರುತಿಸಲಾಗುವ ಬುಡಕಟ್ಟು ಜನರ ಆಚರಣೆಗಳನ್ನು ಗಮನಿಸಿದಾಗ ವರ್ಷದ ನಿರ್ದಿಷ್ಟ ದಿನದಲ್ಲಿ ಗಂಡು-ಹೆಣ್ಣುಗಳ ಮುಕ್ತ ಸಮಾಗಮದ ಕುರುಹುಗಳು ಸಿಗುತ್ತವೆ. ಅಲ್ಲದೆ, ಫಲವಂತಿಕೆಯ ಆಶಯವೇ ಪ್ರಮುಖವಾಗಿರುವ ಕಡೆಗಳಲ್ಲಿ ಹೇಗಾದರೂ ಸರಿ, ವಂಶವನ್ನು ಮುಂದುವರಿಸಲು ಉತ್ತರಾಧಿಕಾರಿಯನ್ನು ಪಡೆಯುವುದು ಮುಖ್ಯವಾಗುತ್ತದೆ. ಮಹಾಭಾರತದ ನಿಯೋಗ ಪದ್ಧತಿ, ಮಲೆಮಾದೇಶ್ವರ ಕಾವ್ಯದಲ್ಲಿ ಬರುವ ಸಂಕವ್ವ ಮಗುವನ್ನು ಪಡೆಯುವ ಪ್ರಸಂಗ ಮುಂತಾದ ಹಲವು ಉದಾಹರಣೆಗಳು ಸಿಗುತ್ತವೆ.

ಮದುವೆ ಎನ್ನುವುದು ಪರಿಪೂರ್ಣವಾಗುವುದು ವರ್ಷದೊಳಗೆ ಮಗುವನ್ನು ಹೆರುವ ಮೂಲಕ ಎಂದು ಇಂದಿಗೂ ಬಹುತೇಕರು ನಂಬಿಕೊಂಡಿರುವ ಸಮಾಜ ನಮ್ಮದು. ಹೆಣ್ಣಿನ ಹೆಣ್ತನ ಪರಿಪೂರ್ಣವಾಗುವುದೇ ಗರ್ಭಾಶಯದ ಮೂಲಕ; ಗಂಡಿನ ಗಂಡಸುತನ ಸಾಬೀತು ಮಾಡುವುದಕ್ಕೆ ಅವನು ಹೇಗೆ ಹೆಣ್ಣನ್ನು ಆಳುತ್ತಾನೆ ಎಂಬುದೇ ಮಾನದಂಡ; ಅವನು ಎಷ್ಟು ಮಕ್ಕಳನ್ನು ಹುಟ್ಟಿಸುತ್ತಾನೆ ಎಂಬುದೇ ಅವನ ಪೌರುಷದ ದ್ಯೋತಕ ಎಂದಾದಾಗ ರೂಪುಗೊಳ್ಳುವ ಹೆಣ್ಣು-ಗಂಡಿನ ಮಾದರಿಗಳು ಎಂಥವಾಗಿರುತ್ತವೆ? ಅವು ಎಷ್ಟು ಅಪಾಯಕಾರಿ?

ಫಲವಂತಿಕೆಯ ಆಶಯವೇನೇ ಇರಲಿ, ಆದರೆ ವ್ಯಕ್ತಿತ್ವದ ಪರಿಪೂರ್ಣತೆಯನ್ನು ಕೇವಲ ವಂಶಾಭಿವೃದ್ಧಿ ಮಾಡುವ ಶಕ್ತಿಯಿಂದಲೇ ನಿರ್ಧರಿಸುವುದು ಲೈಂಗಿಕತೆ ಮತ್ತು ವ್ಯಕ್ತಿತ್ವದ ಸಮಗ್ರತೆಯ ಸಾಧ್ಯತೆಗಳನ್ನೇ ಕುಗ್ಗಿಸುವುದಿಲ್ಲವೇ? ಈ ದೃಷ್ಟಿಕೋನ ಮಹಿಳೆಯನ್ನು ಭೋಗಿಸಲು ಮತ್ತು ವಂಶೋದ್ಧಾರಕನನ್ನು ಹೆತ್ತುಕೊಡಲು ಇರುವ ಉಪಕರಣ ಎಂಬಂತೆ ಮಾತ್ರ ನೋಡುತ್ತದೆ. ತನ್ನೆಲ್ಲ ಶಕ್ತಿಯ ಆಚೆಗೆ ಹೆಣ್ಣನ್ನು ಬಸಿರು ಮಾಡದ ಗಂಡನ್ನು ನಿಷ್ಪ್ರಯೋಜಕನೆಂಬಂತೆ ನೋಡುತ್ತದೆ. ಈ ಮನೋವೃತ್ತಿ ತನ್ನ ಅತಿಯಲ್ಲಿ ಹೆಣ್ಣಿನ ದೇಹದ ಮೇಲೆ ಆಕ್ರಮಣ ಮಾಡುತ್ತದೆ. ಆಕ್ರಮಣ ಮಾಡಲಾಗದವನನ್ನು ಹೇಡಿ ಎಂದು ಝಂಕಿಸುತ್ತದೆ. ಇದು ಅತ್ಯಾಚಾರಕ್ಕೆ ಪ್ರೇರೇಪಿಸುವ ಮನೋವೃತ್ತಿಯತ್ತ ಒಯ್ಯುತ್ತದೆ.

ಇಂತಹ ಅನಾರೋಗ್ಯಕರ ಸ್ಥಿತಿಯನ್ನು ಮಾದೋರುಭಾಗನ್ ತೀವ್ರತೆಯೊಂದಿಗೆ ಚಿತ್ರಿಸುತ್ತದೆ ಅಷ್ಟೆ, ತೀರ್ಮಾನ ಕೊಡುವುದಿಲ್ಲ. ಆದರೆ ಸೂಕ್ಷ್ಮ ಓದುಗನಿಗೆ ಪೊನ್ನ-ಕಾಳಿಯರ ಬದುಕಿನ ಸಹಜ ಲಯ ತಪ್ಪಿ ಅವರು ಬದುಕಿನ ಎಲ್ಲ ಸಂಗತಿಗಳಲ್ಲೂ ಉತ್ಕಟತೆಯಿಂದ ತೊಡಗಿಕೊಳ್ಳುವ ಶಕ್ತಿ ಇದ್ದೂ ಎಲ್ಲವನ್ನೂ ಕಳಕೊಂಡವರಂತೆ ನಿಸ್ತೇಜರಾಗುವುದು ಕಾಡುತ್ತಾ ಹೋಗುತ್ತದೆ. ಕೊನೆಗೂ ಇಂತಹ ವಿಷವರ್ತುಲದಲ್ಲಿ ಅವರನ್ನು ಎಳೆದ ಸಮಾಜ ಅದಕ್ಕೆ ಪರಿಹಾರವಾಗಿ ಒದಗಿಸುವ ಸಂದರ್ಭ ಇವರ ಬದುಕಿನ ಮೂಲಸೆಲೆಯನ್ನೇ ಬತ್ತಿಸಿಬಿಡುತ್ತದೆ. ತಿರುಚಂಗೋಡಿಗೆ ಹೋದ ಪೊನ್ನ, ಮೋಸ ಹೋದ ಕಾಳಿ ಇಬ್ಬರೂ ಮಗುವನ್ನು ಪಡೆದರೂ ಬದುಕನ್ನು ಮುನ್ನಡೆಸುವ ಪ್ರೀತಿಯ ಸೆಲೆಯನ್ನೇ ಕಳೆದುಕೊಂಡಿರುತ್ತಾರೆ. ತಾನೇ ಸೃಷ್ಟಿಸಿದ ಸಮಸ್ಯೆಗೆ ತಾನೇ ನೀಡುವ ಪರಿಹಾರ ಸಮಸ್ಯೆಯನ್ನು ಆಳವಾಗಿಸಿ ಜೀವನಪ್ರೀತಿಯ ಎರಡು ಜೀವಗಳ ಉಲ್ಲಾಸವನ್ನು ಕಸಿಯುವಲ್ಲಿ ಕೊನೆಗೊಳ್ಳುತ್ತದೆ.

ಈ ಕೃತಿ 2010ರಲ್ಲೇ ಬಂದಿದ್ದರೂ ಯಾಕೆ 2015ರಲ್ಲಿ ಈ ಮಟ್ಟಿಗಿನ ವಿರೋಧಕ್ಕೆ ಈಡಾಯಿತು ಎಂದು ನೋಡಲು ಹೋದರೆ ಬಿಜೆಪಿ ನೇತೃತ್ವದ ಎನ್.ಡಿ.ಎ ಬಹುಮತ ಪಡೆದು ಸರ್ಕಾರ ರೂಪಿಸಿದ ಹಿನ್ನೆಲೆಯಲ್ಲಿಯೇ ದೇಶದ ಎಲ್ಲೆಡೆ ಮತೀಯ ಶಕ್ತಿಗಳು ಬಲಪಡೆದುಕೊಂಡವು. ತಮಿಳು ನಾಡಿನಲ್ಲಿಯೂ ಬಲಪಡೆದುಕೊಂಡ ಇಂತಹುದೇ ಶಕ್ತಿಗಳು ಲೇಖಕ ಪೆರುಮಾಳ್ ಮುರುಗನ್ ಅವರನ್ನು ಗುರಿಯಾಗಿಸಿಕೊಂಡವು. ಅವರು ಈ ಕೃತಿಗೆ ತೋರಿದ ವಿರೋಧವನ್ನು ತಾರ್ಕಿಕವಾಗಿಯೇ ವಿವರಿಸಬಹುದು. ದೇಶದ ಉದ್ಧಾರಕ್ಕಾಗಿ ನಾಲ್ಕು ಮಕ್ಕಳನ್ನು ಹೆರಬೇಕು ಎನ್ನುವವರಿಗೆ, ಮಹಿಳೆಯ ಲೈಂಗಿಕತೆಯ ಮೇಲೆ ಮಾತ್ರ ಕಡಿವಾಣ ಹಾಕುವವರಿಗೆ, ಪೌರುಷವನ್ನು ವಿಜೃಂಭಿಸುವವರಿಗೆ ಈ ಕೃತಿ ಎತ್ತುವ ಪ್ರಶ್ನೆ ತಮ್ಮನ್ನೇ ಪ್ರಶ್ನಿಸಿದಂತೆ ಅನಿಸಿದರೆ ಅಚ್ಚರಿಯೇನಿಲ್ಲ್ಲ. ಸಮಾಜವೇ ಎತ್ತಿ ತೋರಿಸಿ, ವಿಜೃಂಭಿಸಿದ ಕೊರತೆಗೆ ಅದೇ ಸೂಚಿಸುವ ಪರಿಹಾರ ವಿಕೃತ ಎನಿಸಿದರೆ, ಚರಿತ್ರೆಯ ಕೊಳಕು ಎನಿಸಿದರೆ ಅವರನ್ನೇ ಕೇಳಬೇಕು, ಹೆಣ್ಣು ಗರ್ಭಪಾತ್ರೆ ಎನ್ನುವಂತೆ ಇಂದಿಗೂ ನೀವು ಮಾತಾಡುತ್ತಿರುವುದು ಏಕೆ? ಅವಳನ್ನು ಆಡಿ ಆಡಿ ಹಿಂಸಿಸುವ ಸಮಾಜ ಅವಳು ಒಮ್ಮೆ ಇವರ ಬಾಯಿಯಿಂದ ಪಾರಾದರೆ ಸಾಕು ಎಂಬಂತೆ ಲಭ್ಯವಿರುವ ಆಸರೆಗಳ ಮೊರೆ ಹೋದರೆ ಅನೈತಿಕ ಏಕಾಗುತ್ತದೆ? ಫಲವಂತಿಕೆಯ ಅಶಯವೇ ಪ್ರಧಾನವಾಗುಳ್ಳ ಪ್ರಾಚೀನ ಸಮುದಾಯಗಳು ಮಕ್ಕಳನ್ನು ಪಡೆಯಲು ಇದ್ದ ಅವಕಾಶಗಳನ್ನು ಮಾನವಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಬೇಕೇ ಹೊರತು ಅದರ ಚಿತ್ರಣ ಪರಂಪರೆಗೆ ಮಾಡಿದ ಅಪಚಾರ ಎನ್ನುವುದು ಚರಿತ್ರೆಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಒತ್ತಾಯದಿಂದ ಹೊರಟಿದೆ.

ಬದುಕಿನಲ್ಲಿ ಯಾರಿಗೂ ಇರಬಹುದಾದ ಹಲವು ಕೊರತೆಗಳಂತೆ ಇದೂ ಒಂದು ಕೊರತೆ ಎನ್ನುವಷ್ಟಕ್ಕೇ ಬಿಡದೆ ವ್ಯಕ್ತಿಗಳನ್ನು ಬೆಂಬಿಡದೆ ಕಾಡುವ ಸಮಾಜದ ಹುಳುಕಿಗೆ ಕನ್ನಡಿ ಹಿಡಿದ ಲೇಖಕ ಪೆನ್ನನ್ನೇ ಕೆಳಗಿಡುವ ಸಂದರ್ಭ ಬಂದಿದೆ ಎಂದರೆ ಇಲ್ಲಿ ಸತ್ತಿರುವುದು ಸ್ವವಿಮರ್ಶೆ ಮಾಡಿಕೊಳ್ಳಬೇಕಾದ ಸಮಾಜದ ಅಂತಃಸಾಕ್ಷಿ, ಕೊಲ್ಲಲ್ಪಟ್ಟಿರುವುದು ಲೇಖಕ.

Leave a Reply

Your email address will not be published. Required fields are marked *