ಆಮ್ ಆದ್ಮಿ ಪಕ್ಷ ಹಾದಿ ತಪ್ಪುತ್ತಿದೆಯೇ?

– ಆನಂದ ಪ್ರಸಾದ್

ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನ್ಮ ತಳೆದ ಆಮ್ ಆದ್ಮಿ ಪಕ್ಷ ರಾಜಕೀಯವನ್ನು ಬದಲಿಸುವ ಹಾಗೂ ಶುದ್ಧೀಕರಿಸುವ ಮುಖ್ಯ ಗುರಿಯೊಂದಿಗೆ ಜನ್ಮ ತಳೆದು ಚುನಾವಣಾ ಹೋರಾಟಕ್ಕೆ ಇಳಿದು ದೆಹಲಿಯಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ನಂತರ ಆಂತರಿಕ ಸಂಘರ್ಷದ ಕಾರಣ ಸುದ್ದಿಯಲ್ಲಿದೆ.  ಮಾಮೂಲಿ ರಾಜಕಾರಣಿಗಳಂತಲ್ಲದೆ ವಿವಿಧ ಕ್ಷೇತ್ರಗಳ ಅತ್ಯಂತ ಪ್ರತಿಭಾವಂತರಿಂದ ಕಟ್ಟಲ್ಪಟ್ಟ ಆಮ್ ಆದಿ ಪಕ್ಷ ಭಿನ್ನ ಹಾದಿಯಲ್ಲಿ ನಡೆದು ದೇಶದ ರಾಜಕೀಯವನ್ನು ಶುದ್ಧೀಕರಿಸುವ ಪ್ರಧಾನ ಗುರಿಯನ್ನು ಯಾವತ್ತೂ ಮರೆಯಬಾರದು. kejriwal-aap-launch-delhiಇದನ್ನು ಮರೆತರೆ ಪಕ್ಷದ ಬೆಳವಣಿಗೆಗೆ ತೊಂದರೆ ಖಂಡಿತ ಮಾತ್ರವಲ್ಲ ಪಕ್ಷವು ಜನತೆಯಿಂದ ನಗೆಪಾಟಲಿಗೆ ತುತ್ತಾಗುವುದರಲ್ಲಿ ಸಂಶಯವಿಲ್ಲ. ಪಕ್ಷವು ಚುನಾವಣೆಗಳಲ್ಲಿ ಗೆಲ್ಲುವ ಆತುರದಲ್ಲಿ ಅಥವಾ ಅಧಿಕಾರ ಹಿಡಿಯುವ ಹಂಬಲದಲ್ಲಿ ನೈತಿಕತೆಯನ್ನು ಬಿಟ್ಟರೆ ಉಳಿದ ಪಕ್ಷಗಳಿಗಿಂಥ ತಾನು ಭಿನ್ನ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಶ್ನೆ ಈಗ ಏಕೆ ಎದ್ದಿದೆ ಅರವಿಂದ ಕೇಜ್ರಿವಾಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಲೋಕಸಭಾ ಸ್ಥಾನಗಳಲ್ಲಿಯೂ ಸೋತ ನಂತರ ದೆಹಲಿಯಲ್ಲಿ ಕಾಂಗ್ರೆಸ್ಸಿನ ಶಾಸಕರ ಬೆಂಬಲದಿಂದ ಸರ್ಕಾರ ರಚಿಸುವ ಸಂಬಂಧ ನಡೆಸಿದ ದೂರವಾಣಿ ಸಂಭಾಷಣೆ ಬೆಳಕಿಗೆ ಬಂದ ಕಾರಣದಿಂದ. ಅಧಿಕಾರಕ್ಕೋಸ್ಕರ ಈ ರೀತಿ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಎಂದಿಗೂ ಒಳ್ಳೆಯದಲ್ಲ. ಹಾಗೆ ಮಾಡಿದರೆ ಉಳಿದ ಪಕ್ಷಗಳಿಗೂ ಆಮ್ ಆದ್ಮಿ ಪಕ್ಷಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಗುರಿ ಮಾತ್ರ ಮುಖ್ಯವಲ್ಲ ಗುರಿಯನ್ನು ತಲುಪುವ ರೀತಿಯೂ ಮುಖ್ಯ ಹಾಗೂ ನೈತಿಕತೆಯಿಂದ ಕೂಡಿರಬೇಕು ಎಂದು ಗಾಂಧೀಜಿಯವರು ಹೇಳಿದ್ದಾರೆ. ಪ್ರತಿಭಾವಂತರಾದ ಆಮ್ ಆದ್ಮಿ ಪಕ್ಷದ ನಾಯಕರು ಇದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂಬುದು ಜನತೆಯ ಅಪೇಕ್ಷೆಯಾಗಿದೆ.

ಈಗ ಆಮ್ ಆದ್ಮಿ ಪಕ್ಷದಲ್ಲಿ ಕಂಡುಬರುತ್ತಿರುವ ಆಂತರಿಕ ಸಂಘರ್ಷದ ಮೂಲ ಯಾವುದು ಎಂದು ನೋಡಿದಾಗ ಅದು ಹೋಗಿ ನಿಲ್ಲುವುದು ಕೇಜ್ರಿವಾಲ್ ಅವರ ಸ್ವಭಾವದ ಮೇಲೆಯೇ. ಪ್ರಜಾಪ್ರಭುತ್ವದ ನೈಜ ಮೌಲ್ಯಗಳ ಅನುಸಾರ ಪಕ್ಷವನ್ನು ಬೆಳೆಸುವಲ್ಲಿ ಕೇಜ್ರಿವಾಲ್ ಎಡವುತ್ತಿದ್ದಾರೆ.  ಇದನ್ನು ಅವರು ಈಗಲೇ ತಿದ್ದಿಕೊಳ್ಳದಿದ್ದರೆ ಪಕ್ಷದ ಬೆಳವಣಿಗೆ ಸಾಧ್ಯವಿಲ್ಲ. ಮೌಲ್ಯಗಳೊಂದಿಗೆ ರಾಜಿಮಾಡಿಕೊಳ್ಳುವ ಕೇಜ್ರಿವಾಲ್ ಅವರ ಧೋರಣೆಯೇ ಪಕ್ಷದಲ್ಲಿ ಬಿರುಕು ಉಂಟಾಗಲು ಕಾರಣವಾಗುತ್ತಿದೆ ಎಂಬುದು ಸದ್ಯಕ್ಕೆ ಕಂಡುಬರುತ್ತಿರುವ ವಿಷಯವಾಗಿದೆ. ಪಕ್ಷವು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಮರ್ಪಕವಾಗಿ ನಡೆದುಕೊಂಡಿಲ್ಲ ಎಂದು ಪ್ರಶಾಂತ್ ಭೂಷಣ್ ಎತ್ತಿರುವ ವಿಚಾರ ಕಡೆಗಣಿಸುವಂಥದ್ದಲ್ಲ.  ಇದು ಸುಗಮ ಆಡಳಿತ ನಡೆಸಲು ಇರುವ ಪ್ರಧಾನ ಅಡಿಗಲ್ಲಿಗೆ ಸಂಬಂಧಿಸಿರುವ ವಿಚಾರವಾಗಿದೆ. ನೈತಿಕವಾಗಿ ದೃಢವಾದ ನಿಲುವು ಇರುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವುದರಿಂದ ಮುಂದೆ ಗೆದ್ದರೆ ಉತ್ತಮ ಆಡಳಿತ ನಡೆಸಲು ಅನುಕೂಲವಾಗುತ್ತದೆ.  aap-kejriwal-yogendra-yadavಅದರ ಬದಲು ಹಣವಂತರಿಗೆ ಪಕ್ಷದ ಟಿಕೆಟ್ ನೀಡಿದರೆ ಮುಂದೆ ಇಂಥವರೇ ಉತ್ತಮ ಆಡಳಿತ ನೀಡುವಲ್ಲಿ ಅಡ್ಡಗಾಲಾಗುತ್ತಾರೆ. ತಮಗೆ ಸೂಕ್ತ ಸ್ಥಾನ ಸರ್ಕಾರದಲ್ಲಿ ಸಿಗದಿದ್ದರೆ ಇಂಥವರೇ ಭಿನ್ನಮತೀಯರಾಗಿ ಸರ್ಕಾರ ನಡೆಸುವಲ್ಲಿ ದೊಡ್ಡ ಅಡ್ಡಿಯಾಗುತ್ತಾರೆ. ಹೀಗಾಗಿ ಪಕ್ಷದಿಂದ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ಆರಿಸುವಾಗ ನೈತಿಕತೆಗೆ ಒತ್ತು ಕೊಡುವುದು ಬಹಳ ಮುಖ್ಯ. ಇಂಥ ಪ್ರಮುಖ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ತರವಲ್ಲ ಎಂಬುದು ಪ್ರಶಾಂತ್ ಭೂಷಣ್ ಅವರ ನಿಲುವು ಹಾಗೂ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಅವರು ಹೆಚ್ಚಿನ ಉತ್ಸಾಹ ತೋರಿಸದೆ ಇರಲೂ ಇದು ಕಾರಣವಾಗಿ ಕಂಡುಬರುತ್ತದೆ. ಪಕ್ಷದ ಮೂಲ ನೈತಿಕ ಹಾಗೂ ಪ್ರಜಾಸತ್ತಾತ್ಮಕ ನಿಲುವುಗಳನ್ನು ಕಾಯ್ದುಕೊಳ್ಳಲು ಒತ್ತಾಯಿಸಿದ ಹಿರಿಯ ಸ್ಥಾಪಕ ಸದಸ್ಯರನ್ನು ಪ್ರಮುಖ ಸ್ಥಾನಗಳಿಂದ ಹೊರಹಾಕಲು ಪ್ರಯತ್ನಿಸುವ ಕೇಜ್ರಿವಾಲ್ ಬೆಂಬಲಿಗರ ಕ್ರಮ ಪಕ್ಷ ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಕೇಜ್ರಿವಾಲ್ ಇದನ್ನು ತಿದ್ದಿಕೊಳ್ಳದೆ ಇದ್ದರೆ ಪಕ್ಷ ಅಡ್ಡಹಾದಿಗೆ ಇಳಿಯುವುದು ಖಚಿತ.  ಕೇಜ್ರಿವಾಲ್ ಬೆಂಬಲಿಗರು ಪಕ್ಷವು ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂದು ಪ್ರತಿರೋಧ ತೋರಿದವರನ್ನೇ ಪಕ್ಷದಿಂದ ಹೊರಹಾಕಲು ನೋಡುತ್ತಿರುವುದು ಪಕ್ಷಕ್ಕೆ ಶೋಭೆಯಲ್ಲ. ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಪಕ್ಷದಲ್ಲಿ ಅಧಿಕಾರದ ಸ್ಥಾನಕ್ಕಾಗಿ ಭಿನ್ನಮತ ತಳೆದಿದ್ದರೆ ಅವರನ್ನು ಹೊರಹಾಕುವುದು ನ್ಯಾಯೋಚಿತ ಆಗಿರುತ್ತಿತ್ತು ಆದರೆ ಪಕ್ಷದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರು ಅಧಿಕಾರದ ಸ್ಥಾನಗಳಿಗಾಗಿ ಭಿನ್ನಮತ ಹಾಗೂ ಗುಂಪುಗಾರಿಕೆ ಮಾಡಿರುವುದು ಕಂಡುಬರುವುದಿಲ್ಲ.  ಹೀಗಾಗಿ ಕೇಜ್ರಿವಾಲ್ ಬೆಂಬಲಿಗರು ತಮ್ಮ ತಪ್ಪನ್ನು ತಿದ್ದಿಕೊಂಡು ಪಕ್ಷವನ್ನು ಒಂದಾಗಿ ಮುನ್ನಡೆಸಿಕೊಂಡು ಹೋಗುವುದು ಕಾಲದ ಅಗತ್ಯವಾಗಿದೆ.

ಆಮ್ ಆದ್ಮಿ ಪಕ್ಷ ದೆಹಲಿಗೆ ಮಾತ್ರ ಸೀಮಿತ ಆಗಿರಬೇಕೋ ಅಥವಾ ಇನ್ನೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಹಾಗೂ ಮಹಾನಗರಸಭೆ ಚುನಾವಣೆಗೆ ಸ್ಪರ್ಧಿಸಬೇಕೋ ಎಂಬ ಬಗ್ಗೆ ಪಕ್ಷದಲ್ಲಿ ಗೊಂದಲಗಳಿವೆ. ಇದರಲ್ಲಿ ಗೊಂದಲ ಮಾಡಿಕೊಳ್ಳಬೇಕಾದ ಅಗತ್ಯ ಇಲ್ಲ.  aam-admi-party-aapಈ ವಿಷಯವನ್ನು ಆಯಾ ರಾಜ್ಯ ಘಟಕಗಳ ತೀರ್ಮಾನಕ್ಕೆ ಬಿಡುವುದು ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣವಾಗಿದೆ ಎಂಬುದು ಗೊಂದಲಕ್ಕೆ ಎಡೆಯಿಲ್ಲದೆ ಸ್ಪಷ್ಟವಾಗುವ ವಿಚಾರ.  ಚುನಾವಣೆಗೆ ಸ್ಪರ್ಧಿಸಲು ಬೇಕಾದ ಸಂಪನ್ಮೂಲವನ್ನು ಆಯಾ ರಾಜ್ಯ ಘಟಕಗಳು ಸ್ವಚ್ಛ ಮೂಲಗಳಿಂದ ಸಂಗ್ರಹಿಸಲು ಸಮರ್ಥವಾಗಿದ್ದರೆ ಅವರು ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಣಯ ಕೈಗೊಳ್ಳಬಹುದು.  ಇದಕ್ಕೆ ಕೇಂದ್ರದ ಹೈಕಮಾಂಡಿನ ಒಪ್ಪಿಗೆ ಅಗತ್ಯವಿಲ್ಲ. ಇಂಥ ಹೈಕಮಾಂಡ್ ಸಂಸ್ಕೃತಿ ತಮ್ಮಲ್ಲಿ ಇಲ್ಲವೆಂದು ಆಮ್ ಆದ್ಮಿ ಪಕ್ಷ ಹೇಳಿಕೊಳ್ಳುತ್ತಿರುವುದರಿಂದ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅದರಂತೆ ನಡೆದುಕೊಳ್ಳಬೇಕು. ಇಲ್ಲದೆ ಹೋದರೆ ಉಳಿದ ಪಕ್ಷಗಳಿಗೂ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಸೇರಿ ಕಟ್ಟಿದ ಆಮ್ ಆದ್ಮಿ ಪಕ್ಷಕ್ಕೂ ವ್ಯತ್ಯಾಸವೇ ಇರುವುದಿಲ್ಲ.

ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಆಡಳಿತಕ್ಕೆ ಬಂದು ಒಂದು ತಿಂಗಳು ಕಳೆದರೂ ಭ್ರಷ್ಟಾಚಾರದ ವಿರುದ್ಧ ಬಲಿಷ್ಠ ಲೋಕಪಾಲ್ ಅಥವಾ ಲೋಕಾಯುಕ್ತ ವ್ಯವಸ್ಥೆ ರೂಪಿಸುವ ಕುರಿತು ದೆಹಲಿಯ ನೂತನ ಸರಕಾರ ಶೀಘ್ರ ಕ್ರಮ ಕೈಗೊಳ್ಳದೆ ಇರುವುದು ಸೂಕ್ತವಲ್ಲ. ಇದು ಪ್ರಧಾನವಾಗಿ ಹಾಗೂ ಶೀಘ್ರವಾಗಿ ಆಗಲೇಬೇಕಾದ ಕೆಲಸ. ಈ ಬಗ್ಗೆ ಉದಾಸೀನ ಸಲ್ಲದು.  ಅದೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನ್ಮ ತಳೆದ ಆಮ್ ಆದ್ಮಿ ಪಕ್ಷಕ್ಕೆ ಇದು ಪ್ರಧಾನ ಆದ್ಯತೆಯಾಗಬೇಕಾಗಿದೆ.  ಭಾರತದ ಪ್ರಧಾನ ಸಮಸ್ಯೆ ಭ್ರಷ್ಟಾಚಾರವೇ ಆಗಿದೆ.  ರಾಜಕಾರಣಿಗಳನ್ನು ಹಾಗೂ ಅಧಿಕಾರಿ ವರ್ಗವನ್ನು ಅವ್ಯವಹಾರ ಮಾಡದಂತೆ ತಡೆಯಲು ಮತ್ತು ಹೆದರಿಕೆ ಹುಟ್ಟಿಸಲು ಇದು ಅತೀ ಅಗತ್ಯವಾಗಿದೆ. ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ಗುಮ್ಮನನ್ನು ತೋರಿಸಿ ಕೇವಲ ಪಕ್ಷ ಬೆಳೆಸುವ ಹಾಗೂ ಅಧಿಕಾರಕ್ಕೆ ಏರುವ ಸಾಧನವಾಗಿ ಅದನ್ನು ಬಳಸಿಕೊಂಡರೆ ಉಳಿದ ಪಕ್ಷಗಳಿಗೂ ಅದಕ್ಕೂ ವ್ಯತ್ಯಾಸ ಇರುವುದಿಲ್ಲ.  ಬಿಜೆಪಿ ಪಕ್ಷವು ರಾಮ ಮಂದಿರ ವಿಷಯವನ್ನು ಪಕ್ಷ ಬೆಳೆಸಲು ಬೆಳೆಸಿಕೊಂಡಂತೆ ಮತ್ತು ನಂತರ ಅದನ್ನು ಮೂಲೆಗೆ ತಳ್ಳಿದಂತೆ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ವಿಷಯದಲ್ಲಿ ಮಾಡಬಾರದು.

ದೇಶದಲ್ಲಿ ರಾಜಕೀಯ ಶುದ್ಧೀಕರಣದ ಹಾಗೂ ರಾಜಕೀಯ ಮೌಲ್ಯಗಳ, ನೈತಿಕತೆಯ ಪುನರುತ್ಥಾನ ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ಜನ ಎದುರು ನೋಡುತ್ತಿದ್ದಾರೆ ಹಾಗೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬುದು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿ ತೋರಿಸಿದೆ.  ಕಾಂಗ್ರೆಸ್ ಪಕ್ಷವು ದೃಢವಾದ ಹಾಗೂ ಮೌಲ್ಯಯುತ ರಾಜಕೀಯದ ಪರ ಹೋರಾಡುವ ನಾಯಕತ್ವ ಹೊಂದದೆ ಇರುವುದರಿಂದಾಗಿ ಅವಸಾನದತ್ತ ಸಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ಸಿನ ಸ್ಥಾನವನ್ನು ತುಂಬುವ ಪಕ್ಷವಾಗಿ ಆಮ್ ಆದ್ಮಿ ಪಕ್ಷಕ್ಕೆ ಅವಕಾಶಗಳು ಇವೆ.  kejriwal_aap_pti_rallyಇದಕ್ಕೆ ಪಕ್ಷವು ಸ್ಪಷ್ಟವಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಢತೆ ತೋರಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ನಾಯಕತ್ವದ ಗುಣಗಳುಳ್ಳ ಹಲವು ವ್ಯಕ್ತಿಗಳು, ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಇದ್ದಾರೆ.  ಇವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಅಗತ್ಯ ಇದೆ. ಯಾವುದೇ ರೀತಿಯ ಬಣ ರಾಜಕೀಯಕ್ಕೆ ಆಮ್ ಆದ್ಮಿ ಪಕ್ಷ ಅವಕಾಶ ನೀಡಬಾರದು. ಈಗ ಕೇಜ್ರಿವಾಲ್ ಜೊತೆಗೆ ನಿಂತಿರುವ ವ್ಯಕ್ತಿಗಳು ಬಣ ರಾಜಕೀಯಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದ್ದು ಇದನ್ನು ನಿವಾರಿಸುವ ಕುರಿತು ಸ್ವತಃ ಕೇಜ್ರಿವಾಲ್ ಗಮನ ಹರಿಸಬೇಕು.

ಆಮ್ ಆದ್ಮಿ ಪಕ್ಷವು ಕೇವಲ ಕೇಜ್ರಿವಾಲ್ ಕಟ್ಟಿದ ಪಕ್ಷವಲ್ಲ. ಇದು ರಾಜಕೀಯದಲ್ಲಿ ಬದಲಾವಣೆ ಹಾಗೂ ಶುದ್ಧೀಕರಣವನ್ನು ಬಯಸುವ ಸಾವಿರಾರು ಜನರ ಬೆಂಬಲ ಹಾಗೂ ಅರ್ಥಿಕ ನೆರವಿನಿಂದ ರೂಪುಗೊಂಡ ಪಕ್ಷ ಆಗಿರುವ ಕಾರಣ ಈ ಪಕ್ಷವು ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ರಾಜಕೀಯದಲ್ಲಿ ಬದಲಾವಣೆ ಹಾಗೂ ಒಳಿತನ್ನು ಬಯಸುವ ಎಲ್ಲರ ಮೇಲೆಯೂ ಇದೆ. ಹೀಗಾಗಿ ವಿಶ್ವದಾದ್ಯಂತ ಇರುವ ಆಮ್ ಆದ್ಮಿ ಪಕ್ಷದ ಹಿತೈಷಿಗಳು ಹಾಗೂ ಬದಲಾವಣೆ ಬಯಸುವ ಜನ ಪಕ್ಷದ ಉನ್ನತ ನಾಯಕತ್ವವು ಹಾದಿ ತಪ್ಪಿದಾಗ ಅವರನ್ನು ಎಚ್ಚರಿಸುವ ಕೆಲಸವನ್ನು ಇಂದಿನ ಲಭ್ಯ ಅಂತರ್ಜಾಲ ಮೂಲಕ ಮಾಡುತ್ತಿರಬೇಕು. ನಾಯಕರಿಗೆ ಆಗಾಗ ಚಾಟಿ ಏಟು ನೀಡಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಸುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ.

Leave a Reply

Your email address will not be published. Required fields are marked *