Daily Archives: March 21, 2015

ಡಿಕೆ ರವಿ ಪ್ರಕರಣ : ಕಾಲಿಗೆ ಗುಂಡು ಕಟ್ಟಿಕೊಂಡು ನೀರಿಗಿಳಿದವರ ಪ್ರಲಾಪಗಳು…


– ರವಿ 


ಒಂದು ಅಸಹಜ ಸಾವಾಗಿದೆ. ಅದು ಆತ್ಮಹತ್ಯೆಯೊ ಕೊಲೆಯೋ? ಸತ್ಯ ಕೆಲವರಿಗಷ್ಟೇ ಗೊತ್ತು. ಜನಸಾಮಾನ್ಯರು ಕೊಲೆ ಎಂದು ಸಂಶಯ ಪಡುತ್ತಿದ್ದಾರೆ, ಯಾಕೆಂದರೆ ಸತ್ತ ವ್ಯಕ್ತಿ ದಕ್ಷನಾಗಿದ್ದ, ಪ್ರಾಮಾಣಿಕನಾಗಿದ್ದ, ಮತ್ತು ಪಟ್ಟಭದ್ರರನ್ನು ಎದುರು ಹಾಕಿಕೊಂಡಿದ್ದ. ಇದೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿತ್ತು, ಮತ್ತು ಮಾಧ್ಯಮಗಳುDKRavi_Kolar_PG ಹಾಗೆಯೇ ಜನಾಭಿಪ್ರಾಯ ರೂಪಿಸಿದ್ದವು. ಆತ್ಮಹತ್ಯೆ ಆಗಿದ್ದರೂ ಆತ ಕೇವಲ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿರಲಾರ, ಯಾರೋ ಆತನನ್ನು ಅಂತಹ ಒಂದು ಪರಿಸ್ಥಿತಿಗೆ ದೂಡಿರಬಹುದು. ಹಾಗಿದ್ದರೆ ಅವರು ಯಾರು? ಇನ್ನು ಅದು ಕೇವಲ ವೈಯಕ್ತಿಕ ಕಾರಣಗಳಿಗೆ ಆಗಿರುವ ಆತ್ಮಹತ್ಯೆ ಆದರೆ ಏನದು ವೈಯಕ್ತಿಕ ವಿಚಾರ? ಕೊಲೆಯೋ, ಪ್ರಚೋದಿತ ಅತ್ಮಹತ್ಯೆಯೋ, ಸರಳ ಆತ್ಮಹತ್ಯೆಯೋ? ಮೂರನೆಯ ಕಾರಣದಿಂದ ಆಗಿದ್ದರೆ ಜನ ಬೇಸರ ವ್ಯಕ್ತಪಡಿಸಿ ಸುಮ್ಮನಾಗುತ್ತಾರೆ. ಮೊದಲೆರಡು ಕಾರಣದಿಂದ ಅಗಿದ್ದಾದಲ್ಲಿ ಅದು ಅವರಿಗೆ ವ್ಯವಸ್ಥೆಯ ಮೇಲೆ ಸಿಟ್ಟು ತರಿಸುತ್ತದೆ, ಅವಿಶ್ವಾಸ ಮೂಡಿಸುತ್ತದೆ, ಭ್ರಷ್ಟರ ಕಬಂಧ ಬಾಹುಗಳು ಎಲ್ಲಿಯವರೆಗೂ ಚಾಚಿರುವ ಪರಿ ನೋಡಿ ಬೆಚ್ಚಿ ಬೀಳುತ್ತಾರೆ.

ಇಂತಹ ಸಂಶಯದ ಸಮಯದಲ್ಲಿ ಸರ್ಕಾರಗಳು ತಮ್ಮ ಮೇಲೆ ಜನರ ವಿಶ್ವಾಸ ಬೆಳೆಯುವ ರೀತಿಯಲ್ಲಿ ನಡೆದುಕೊಳ್ಳಬೇಕು.

ಆದರೆ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೊದಲ ದಿನದಿಂದಲೂ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಹಾಳುಮಾಡಿಕೊಳ್ಳುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಬಂತು. ಅದನ್ನು ಸರಿಪಡಿಸಲು ಅಧಿಕಾರವಾಗಲಿ, ಶಕ್ತಿಯಾಗಲಿ ಇಲ್ಲದ ಕೆಲವು ಸರ್ಕಾದ ಪರ ವಕ್ತಾರರು ಈಗ ತಮ್ಮ ಸರ್ಕಾರದ ಮತ್ತು ಪಕ್ಷದ ತಪ್ಪಿಗೆ ಬೇರೆಯವರ ಮೇಲೆ ಆರೋಪ, ಅವಿಶ್ವಾಸ, ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅಯೋಗ್ಯತೆಗೆ, ತಪ್ಪಿಗೆ ಇನ್ನೊಬ್ಬರು ಊರುಗೋಲಾಗಬೇಕೆಂದು ಬಯಸುತ್ತಿದ್ದಾರೆ. ದೇಶದಲ್ಲಿ ಉಳಿದಿರುವ ಕಾಂಗ್ರೆಸ್ ಆಡಳಿತದ ದೊಡ್ಡ ರಾಜ್ಯ ಇದೊಂದೇ, ಇದನ್ನು ದುರ್ಬಲಗೊಳಿಸಬೇಡಿ ಎಂದು ಬೇಡುತ್ತಿದ್ದಾರೆ. ರಾಷ್ಟ್ರದಲ್ಲಿ ಅಮಿತ್ ಶಾ ಮತ್ತು ಮೋದಿಯನ್ನು ಎದುರುಗೊಳ್ಳುವುದು ಎಂದರೆ ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳುವುದು ಎನ್ನುವ “ಅಂತಿಮ ಸತ್ಯ”ಕ್ಕೆ ಇವರು ಶರಣಾಗಿಬಿಟ್ಟಿದ್ದಾರೆ. ನಿಜವೇ?

ವೈಯಕ್ತಿಕವಾಗಿ ನನಗೆ ಸಿದ್ಧರಾಮಯ್ಯನವರ ಬಗ್ಗೆ ಗೌರವವಿದೆ. ಅದನ್ನು ಹಲವು ವೇದಿಕೆಗಳಲ್ಲಿ ಬಹಿರಂಗವಾಗಿ ಹೇಳಿದ್ದೇನೆ. dkravi-kolar-dalitsಅದೇ ರೀತಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಲೇ ಬಂದಿದ್ದೇನೆ. (ಅವರಿಗೆ ನನ್ನ ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಂಡೂರಿನ ವಿಚಾರಕ್ಕೊಮ್ಮೆ ಮತ್ತು ಹಾರೋಹಳ್ಳಿಯ ವಿಚಾರಕ್ಕೊಮ್ಮೆ ಅವರ ಬಳಿ ಮಾತನಾದಲು ಎಚ್.ಎಸ್.ದೊರೆಸ್ವಾಮಿಯವರು ನನ್ನನ್ನೂ ಕರೆದೊಯ್ದಿದ್ದರು. ಆದರೆ, ಅವರಿಗೆ ನನ್ನನ್ನು ಪರಿಚಯಿಸಿದ ನೆನಪಿಲ್ಲ. ಈ ಮನುಷ್ಯನಿಗೆ ಕಾಳಜಿಗಳಿರುವುದು ನಿಜ.) ಅದರೆ ಅವರು ನಾನು ನಿರೀಕ್ಷಿಸಿದಷ್ಟು ಮತ್ತು ನಿರೀಕ್ಷಿಸಿದ್ದನ್ನು ಮಾಡುತ್ತಿದ್ದಾರೆ ಎಂದು ಹೇಳಲಾರೆ. ಹಲವು ಒಳ್ಳೆಯ ತೀರ್ಮಾನಗಳನ್ನು (ಕೆಪಿಎಸ್‌ಸಿ, ಮಂಡೂರು, ಹಲವು ಜನಪರ ಯೋಜನೆಗಳು ಮತ್ತು ಭಾಗ್ಯಗಳು, ಇತ್ಯಾದಿ) ಕೈಗೊಂಡಿದ್ದಾರೆ. ಹಾಗೆಯೆ ಹಲವು ಕೆಟ್ಟ (ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಮಹದೇವಪ್ಪ, ರೋಷನ್ ಬೇಗ್, ದೇಶಪಾಂಡೆ ಯಂತಹ ಭ್ರಷ್ಟ ಮಂತ್ರಿಗಳ ರಕ್ಷಣೆ, ಕೆಪಿಎಸ್‌ಸಿ ಹಗರಣವನ್ನು ನಿಭಾಯಿಸಿದ ರೀತಿ, ಅರ್ಕಾವತಿ ಪ್ರಕರಣ ಮತ್ತು ಗಣಿ ಲೈಸನ್ಸ್ ನೀಡಿಕೆಯಲ್ಲಿಯ ಸಂಶಯಗಳು, ಲೋಕಾಯುಕ್ತವನ್ನು ಬಲಹೀನ ಮಾಡಲು ಹೋಗಿದ್ದು, ಅಧಿಕಾರಿಗಳ ನೇಮಕಾತಿಯಲ್ಲಿ ಲೋಪಗಳು, ಸರ್ಕಾರದಲ್ಲಿ ಮುಂದುವರಿದ ಮತ್ತು ಹೆಚ್ಚಿದ ಭ್ರಷ್ಟತೆ, ಇತ್ಯಾದಿ) ತೀರ್ಮಾನಗಳನ್ನೂ ತೆಗೆದುಕೊಂಡಿದ್ದಾರೆ. ಆದರೆ, ಇವರು ತಾವು ಮಾಡುತ್ತಿರುವ ತಪ್ಪಿಗಿಂತ ಹೆಚ್ಚಾಗಿ ತಮ್ಮ ಆಪ್ತರ ತಪ್ಪುಗಳನ್ನು ಪೋಷಿಸುತ್ತಿದ್ದಾರೆ. ಹಾಗೆಂದು ಜನರೂ ಭಾವಿಸುತ್ತಿದ್ದಾರೆ. ಇದಕ್ಕೆ ಸಿದ್ಧರಾಮಯ್ಯನವರೇ ಹೊಣೆಯೇ ಹೊರತು ಬೇರೆಯವರಲ್ಲ.

ಡಿಕೆ ರವಿ ಪ್ರಕರಣಕ್ಕೆ ವಾಪಸು ಬರುವುದಾದರೆ, ಈಗಾಗಲೆ ಈ ತನಿಖೆಯನ್ನು ಸಿಐಡಿ ಯವರು ನಡೆಸುತ್ತಿದ್ದಾರೆ. ಅದರೆ ರಾಜ್ಯದ ಬಹುತೇಕ ಜನ ಸಿಬಿಐ ಬೇಕು ಎಂದರು. ಯಾಕೆಂದರೆ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ಮಾಫಿಯಾಗಳ, ಸರ್ಕಾರದ ಕೆಲವು ಮಂತ್ರಿಗಳ, ಆಡಳಿತ ಪಕ್ಷದ ಕೆಲವು ಶಾಸಕರ ಪಾತ್ರ ಇರಬಹುದು ಎಂಬ ಗುಮಾನಿ ಜನರಿಗೆ ಬಂತು. ಅದರಲ್ಲಿ ಕೆಲವು ಗುಮಾನಿಗಳನ್ನು ಮಾಧ್ಯಮದ ಒಂದು ವರ್ಗ ಹಬ್ಬಿಸಿದ್ದೇ ಆಗಿರಬಹುದು. ಅದನ್ನು ಎಂದಿನಂತೆ ಈ ಸರ್ಕಾರ ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಿಭಾಯಿಸಲು ಸೋತೂ ಹೋಯಿತು. (ರಾಜ್ಯದ ಆಡಳಿತ ನಡೆಸುವವರು ಕೇವಲ ಸರ್ಕಾರವನ್ನು ಭ್ರಷ್ಟತೆಯಿಂದ ಮುಕ್ತವಾಗಿಡುವ ಕೆಲಸ ಮಾಡಿದರಷ್ಟೇ ಸಾಲದು; ಸಮಾಜವನ್ನು ಕೆಲವು ಭ್ರಷ್ಟತೆಗಳಿಂದ ಮುಕ್ತ ಮಾಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅದಕ್ಕೆ ತೊಡರುಗಾಲುಗಳು ಸಹಜ. ಸರ್ಕಾರದ ಮೌಲ್ಯಗಳು ಜನರ ಮೌಲ್ಯಗಳಾಗದಿದ್ದಲ್ಲಿ ಸರ್ಕಾರಕ್ಕೆ ಜನಬೆಂಬಲ ಕ್ಷೀಣಿಸುತ್ತದೆ. ತನ್ನ ಮೌಲ್ಯಗಳನ್ನು ಅಪಮೌಲ್ಯಗಳನ್ನಾಗಿ ತಿರುಚಿ ವರದಿ ಮಾಡುವ ಮಾಧ್ಯಮಗಳ ಕೆಲವು ಭ್ರಷ್ಟರನ್ನು ಗೊತ್ತಿದ್ದೂ ಈ ಸರ್ಕಾರ ಪೋಷಿಸುತ್ತಾ ಬಂದಿದೆ. ಅವರ ಅಕ್ರಮಗಳಲ್ಲಿ ತಾನೂ ಪಾಲು ಪಡೆದುಕೊಂಡಿದೆ. ಅಂತಹವರನ್ನೇ ಆರಿಸಿ ತನ್ನ ಸಲಹೆಗಾರರನ್ನಾಗಿಯೂ ಮಾಡಿಕೊಳ್ಳುತ್ತದೆ. dkravi-cm-siddharamaiahತಾನೇ ನೈತಿಕವಾಗಿ ಶುದ್ಧವಾಗಿರದ ಮನುಷ್ಯ ಬೇರೆಯವರನ್ನು ಶುದ್ಧ ಮಾಡುವುದು ಕಠಿಣ ಸವಾಲು.)

ಎಂದಿನಂತೆ ಜನಾಭಿಪ್ರಾಯದ ವಾಸನೆ ಹಿಡಿದ ವಿರೋಧ ಪಕ್ಷಗಳು, ಈ ಸಾವಿನಲ್ಲಿಯ ಸಂಶಯಗಳು ಸರ್ಕಾರದ ಮಂತ್ರಿಗಳ ತನಕವೂ ಹೋಗಬಹುದು ಎಂದು ಗೊತ್ತಾದಾಗ ಸರ್ಕಾರವನ್ನು ಮುಜುಗರಪಡಿಸುವ ಕಾರಣಕ್ಕೆ ಸಿಬಿಐ ತನಿಖೆ ಆಗಲೇಬೇಕು ಎಂದು ಧರಣಿ ಕೂತವು. ಆದರೆ ಸರ್ಕಾರ ಸಿಬಿಐ ಸಾಧ್ಯವೇ ಇಲ್ಲ ಎಂದಿತು. ಅದು ಸಹಜ. ಆದರೆ ಅದು ಪಟ್ಟು ಹಿಡಿದ ರೀತಿ, ಕೊಟ್ಟ ಕಾರಣಗಳು, ತೇಲಿಬಿಟ್ಟ ಮಾತುಗಳು, ಸಾಕ್ಷ್ಯಗಳನ್ನು ಕಳ್ಳತನದಲ್ಲಿ ಸೋರಿಕೆ ಮಾಡಿದ ರೀತಿ, ಕೆಲವು ಮಾಧ್ಯಮಗಳಲ್ಲಿ ನೆಟ್ಟಿಸಿದ ಸುದ್ದಿಗಳು, ಇವೆಲ್ಲವೂ ಸರ್ಕಾರದ ಬಗ್ಗೆ ಅವಿಶ್ವಾಸವನ್ನು ಬೆಳೆಸುತ್ತಲೇ ಹೋದವು. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಬಳಸಬೇಕಾಗಿ ಬಂದಿದೆ.

ಈ ಸರ್ಕಾರದ ಅತಿ ಅದಕ್ಷ ಮಂತ್ರಿಗಳಲ್ಲಿ ಗೃಹಮಂತ್ರಿ ಕೆ.ಜೆ. ಜಾರ್ಜ್ ಸಹ ಒಬ್ಬರು. ಅವರ ಮೇಲೆ ಭ್ರಷ್ಟಾಚಾರದ ನೇರ ಅರೋಪಗಳಿಲ್ಲದಿದ್ದರೂ ದಕ್ಷತೆಯಿಂದ ಕೆಲಸ ಮಾಡಿ ತೋರಿಸಿದ್ದನ್ನು ಈ ರಾಜ್ಯದ ಜನತೆ ಕಂಡಿಲ್ಲ. ಹಾಗೆಯೇ ಅವರೊಬ್ಬ ರಾಜಕೀಯಕ್ಕೆ ಬಂದನಂತರ ಹೆಚ್ಚು ಶ್ರೀಮಂತರಾಗಿರುವವರು ಎಂಬ ಭಾವನೆಯೂ ಇದೆ. ಅವರ ಖಾತೆಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಗಂಭೀರವಾಗಿ ಎಡವಿ ಜನರ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಜನತೆಯ ವಿಶ್ವಾಸ ಕಳೆದುಕೊಂಡ ಮಂತ್ರಿಯನ್ನು ತನ್ನ ಸಂಪುಟದಲ್ಲಿಟ್ಟುಕೊಳ್ಳುವ ಮುಖ್ಯಮಂತ್ರಿ ಸಹಜವಾಗಿ ತಾವೂ ಆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಾರೆ. ಇನ್ನು ಡಿಕೆ ಶಿವಕುಮಾರ್ ಎನ್ನುವ ಇನ್ನೊಬ್ಬ ಮಂತ್ರಿಯ ಬಗ್ಗೆ ಹೇಳುವುದೇ ಬೇಡ. ಸುಮಾರು ಒಂದು ದಶಕದ ಅವಧಿಯಲ್ಲಿ ಸಹಸ್ರಾರು ಕೋಟಿ ರೂಗಳ ಒಡೆಯರಾಗಿದ್ದಾರೆ ಅವರು. ಬಹುಶಃ ಇಪ್ಪತ್ತೈದರ ವಯಸ್ಸಿಗೆಲ್ಲ ಜನಪ್ರತಿನಿಧಿಯಾಗಿ ಆಯ್ಕೆಯಾದ ಇವರು ಅಲ್ಲಿಂದ ಇಲ್ಲಿಯತನಕ ಜನಪ್ರತಿನಿಧಿಯಾಗಿಯೇ ಮುಂದುವರೆದಿದ್ದಾರೆ. ಎಲ್ಲಿಯೂ ಬ್ರೇಕ್ ಇಲ್ಲ. ಆದರೂ ಹೇಳಿಕೊಳ್ಳುವುದು “ತಾನೊಬ್ಬ ಬ್ಯುಸಿನೆಸ್ ಮ್ಯಾನ್” ಎಂದು. ಧಂಧೆ ಮಾಡುವ ಜನ ಧಂಧೆ ಮಾಡಬೇಕೆ ಹೊರತು ಸಂಪುಟದಲ್ಲಿರಬಾರದು. ಇಟ್ಟುಕೊಂಡವರ್ಯಾರು, ಸಹಿಸಿಕೊಂಡವರ್ಯಾರು? ಡಿಕೆ ರವಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಜನರ ರೊಚ್ಚು ಡಿಕೆ ಶಿವಕುಮಾರರ ಮೇಲೆ ತಿರುಗಿತ್ತು ಮತ್ತು ಅವರನ್ನು ಅಲ್ಲಿ ಸೇರಿದ್ದ ಜನ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಮಾಧ್ಯಮ ಮಿತ್ರರು ಹೇಳುತ್ತಾರೆ. ಆ ಉಗಿತದ ಅಂತಿಮ ನಿಲ್ದಾಣ ಮುಖ್ಯಮಂತ್ರಿಯ ಹೆಗಲು. ಹೀಗೆ ಇನ್ನೂ ಹಲವು ಭ್ರಷ್ಟ-ಕಳಂಕಿತ ಮಂತ್ರಿಗಳ ಪಟ್ಟಿ ಕೊಡಬಹುದು. ಇನ್ನು ಅದಕ್ಷ ಮಂತ್ರಿಗಳ ಪಟ್ಟಿಯಂತೂ ಬಹಳ ದೊಡ್ಡದಿದೆ. ತನ್ನ ಸಂಪುಟದಲ್ಲಿರುವ ಒಳ್ಳೆಯ ಸಚಿವರ ಕೆಲಸದ ಕ್ರೆಡಿಟ್ ಮುಖ್ಯಮಂತ್ರಿಗಳಿಗೆ ಸಲ್ಲುವುದು ಅಪರೂಪ. ಅದರೆ ಅದಕ್ಷ ಮತ್ತು ಭ್ರಷ್ಟ ಸಚಿವರ ಕಳಂಕಗಳು ಅವರು ಸಂಪುಟದಲ್ಲಿರುವ ತನಕ ಮುಖ್ಯಮಂತ್ರಿಗಳಿಗೇ ಅಂಟಿಕೊಳ್ಳುತ್ತಿರುತ್ತದೆ. ಈ ಮುಖ್ಯಮಂತ್ರಿ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಆಳದ ಹೊಳೆಯಲ್ಲಿ ಈಜಲು ಇಳಿದಿದ್ದಾರೆ. ಬಹುತೇಕ ಸಂದರ್ಭದಲ್ಲಿ ಅದು ಅವರದೇ ಆಯ್ಕೆ ಅಗಿದೆ. ಅದು ಅವರ ಆಯ್ಕೆ ಅಲ್ಲ, ಅದು ಹೇರಿಕೆ ಎಂದು ಹೇಳುವವರು ಆತ್ಮದ್ರೋಹ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರದಲ್ಲಿರುವ ಕೆಲವರು ಮತ್ತವರ ಬೆಂಬಲಿಗರು ಕಳೆದ ಎರಡು ಮೂರು ದಿನಗಳಿಂದ ಡಿಕೆ ರವಿಯ ಸಾವು ಸಂಪೂರ್ಣವಾಗಿ ವೈಯಕ್ತಿಕ ನೆಲೆಯದ್ದು ಎಂದು ಹೇಳುತ್ತಿದ್ದಾರೆ ಮತ್ತು ಸಿಬಿಐ ತನಿಖೆ ಬೇಡ ಎನ್ನುತ್ತಿದ್ದಾರೆ. ಸಿಬಿಐಗೆ ಕೊಟ್ಟರೆ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತೂ ಅಡುತ್ತಿದ್ದಾರೆ. ಮತ್ತು ಅದೇ ಸಂದರ್ಭದಲ್ಲಿ ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಂಚಕಾರ ತರುತ್ತಾರೆ ಎನ್ನುವ ಭಯಾತಂಕಗಳನ್ನೂ ತೋಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತಂತೂ ದುರ್ಬಲ ವಾದ. ಎಷ್ಟು ನಿಷ್ಪಕ್ಷಪಾತ ಸಿಐಡಿ ತನಿಖಾ ವರದಿಗಳನ್ನು ಈ ಸರ್ಕಾರ ಒಪ್ಪಿಕೊಂಡಿದೆ ಮತ್ತು ಎಷ್ಟು ತನಿಖೆಗಳಲ್ಲಿ ಮಂತ್ರಿ-ಮುಖ್ಯಮಂತ್ರಿಗಳು ಪ್ರಭಾವ ಬೀರದೆ ಅವರ ಸ್ಥೈರ್ಯ ಮತ್ತು ಪ್ರಾಮಾಣಿಕತೆ ಹೆಚ್ಚಿಸಿದ್ದಾರೆ? ಎಷ್ಟು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಈ ಸರ್ಕಾರ ಉತ್ತೇಜಿಸಿದೆ ಮತ್ತು ಎಷ್ಟು ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳನ್ನು ಈ ಸರ್ಕಾರ ಶಿಕ್ಷಿಸಿದೆ ಅಥವ ಸರಿದಾರಿಗೆ ತಂದಿದೆ?

ಇವರ ಏಕೈಕ ಭಯ ಇರುವುದು ಸಿಬಿಐ ತನಿಖೆಗೆ ಕೊಟ್ಟರೆ ಬಿಜೆಪಿಯವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದು. dkravi-parents-siddharamaiahಮೊಟ್ಟಮೊದಲಿಗೆ ಅಂತಹ ಭಯಕ್ಕೆ ಕಾರಣಕರ್ತರು ಯಾರು? ಕೇಂದ್ರದಲ್ಲಿ ಇತ್ತೀಚೆಗೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನವರೇ ತಾನೆ? ಕೇಂದ್ರ ಸರ್ಕಾರದ ಆಡಳಿತ ಪಕ್ಷ ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳದಂತೆ ಕಾನೂನು ತನ್ನಿ ಎಂದು ಕಾಂಗ್ರೆಸ್ ಮೇಲೆ ಇಡೀ ದೇಶದಲ್ಲಿ ಎಷ್ಟು ಒತ್ತಡ ಇರಲಿಲ್ಲ? ಆ ಬೇಡಿಕೆ ಕೆಟ್ಟ ಬೇಡಿಕೆ ಆಗಿತ್ತೆ? ಜನವಿರೋಧಿ ಆಗಿತ್ತೆ? ಅಪ್ರಜಾಸತ್ತಾತ್ಮಕ ಆಗಿತ್ತೇ? ಅನೈತಿಕವಾದದ್ದಾಗಿತ್ತೆ? ಆಗಿಲ್ಲದಿದ್ದಲ್ಲಿ ಯಾಕೆ ಮಾಡಲಿಲ್ಲ? ನೀವು ಮಾತ್ರ ಅದರ ದುರುಪಯೋಗದ ಉಪಯೋಗ ಪಡೆಯಬೇಕು. ಬೇರೆಯವರು ಅದನ್ನೇ ಪಡೆಯಲು ಹೋದಾಗ ಅಗ ನಿಮಗೆ ಭೂತಕಾಲದ ನಿಮ್ಮ ಅಕೃತ್ಯಗಳು ಮತ್ತು ಜವಾಬ್ದಾರಿಹೀನತೆ ಮರೆತುಹೋದವೇ? ಹೋಗಲಿ, ನಿಮ್ಮ ಪಕ್ಷದ ಕೇಂದ್ರದ ನಾಯಕರ ವಿಚಾರ ಬೇಡ. ಇಲ್ಲಿ ರಾಜ್ಯದಲ್ಲಿ ನೀವು ಸ್ವತಂತ್ರ ತನಿಖಾ ಸಂಸ್ಥೆಯನ್ನೇನಾದರೂ ಕಟ್ಟಲು ಮುಂದಾಗಿದ್ದೀರಾ? ಇದೇ ಸಿದ್ಧರಾಮಯ್ಯನವರು ಈಗ ಅಷ್ಟಿಷ್ಟು ಸ್ವತಂತ್ರವಾಗಿರುವ ಲೋಕಾಯುಕ್ತ ಸಂಸ್ಥೆಯನ್ನೇ ಬಲಹೀನ ಮಾಡುವ ನೀಚಕೃತ್ಯಕ್ಕೆ ಮುಂದಾಗಿದ್ದರು. ನೀವೆಂದಾದರೂ ಪ್ರಬಲ, ಬಲಿಷ್ಟ, ಸ್ವತಂತ್ರ, ಪ್ರಜಾಸತ್ತಾತ್ಮಕ, ಸಂವಿಧಾನಾತ್ಮಕ ಸಂಸ್ಥೆಗಳನ್ನು ಕಟ್ಟಲಾಗಲಿ, ಬಲಗೊಳಿಸಲಾಗಲಿ ಮುಂದಾಗಿದ್ದೀರಾ? ನೀವು ದಾರಿ ತೋರಿಸಿದ್ದರೆ, ಇನ್ನೊಬ್ಬರ ಅನೈತಿಕತೆ ಮತ್ತು ಅಕ್ರಮಗಳನ್ನು ಎತ್ತಿ ತೋರಿಸುವ ನೈತಿಕತೆ ಇರುತ್ತಿತ್ತು. ಜನ ನಿಮ್ಮ ಮಾತುಗಳನ್ನು ವಿನಾಕಾರಣ ಸಂಶಯಪಡದೆ ನಂಬುತ್ತಿದ್ದರು. ನಿಮ್ಮ ವಿಶ್ವಾಸಾರ್ಹತೆ ಕುಗ್ಗಲು ಕಾರಣ ಯಾರು?

ಇನ್ನು ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂತಲೇ ಇಟ್ಟುಕೊಳ್ಳೋಣ. ಹೇಗೆ? ನೀವು ತಪ್ಪೇ ಮಾಡಿಲ್ಲ ಎನ್ನುತ್ತಿದ್ದೀರಿ. ಹಾಗಿದ್ದಲ್ಲಿ ಯಾವ ರೀತಿಯ ದುರುಪಯೋಗ ಆಗಬಹುದು? ಕೆಜೆ ಜಾರ್ಜ್‌ರನ್ನು, ಡಿಕೆ ಶಿವಕುಮಾರರನ್ನು, ಕೊನೆಗೆ ಮುಖ್ಯಮಂತ್ರಿಯನ್ನೂ ಸಮನ್ ಮಾಡಬಹುದು ಎನ್ನುವುದಲ್ಲವೇ ನಿಮ್ಮ ಭಯ? ಹಾಗಿದ್ದಲ್ಲಿ, ಡಿಕೆ ರವಿ ತಾನು ಮುಖ್ಯಮಂತ್ರಿಯ ಅಧೀನದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಕಮಿಷನರ್ ಅಗಿದ್ದಾಗ ಕೆಜೆ ಜಾರ್ಚ್‌ರಿಗೆ ಸಂಬಂಧಿಸಿದ ಕಂಪನಿಯ ಮೇಲೆ ದಾಳಿ ಮಾಡಿದ್ದು ನಿಜ ತಾನೆ? ಆ ದಾಳಿಯ ಮೊದಲು ಅಥವ ನಂತರ ಜಾರ್ಜ್‌ರವರು ರವಿಯ ಮೇಲೆ ಅಕ್ರಮ ಒತ್ತಡಗಳನ್ನು ತರದೇ ಇದ್ದಲ್ಲಿ ಭಯ ಏಕೆ? ಅವರು ಹಾಗೆ ಮಾಡಿದ್ದೇ ಆದಲ್ಲಿ ಅವರಿಗೆ ಶಿಕ್ಷೆಯಾಗಬೇಕೆ ಬೇಡವೆ? ಇದೇ ಪ್ರಶ್ನೆಯನ್ನು ನಾವು ಡಿಕೆ ಶಿವಕುಮಾರರ ವಿಚಾರಕ್ಕೂ ಕೇಳಬಹುದು. ಇನ್ನು ತನ್ನ ಅಧೀನ ಅಧಿಕಾರಿಯಾಗಿದ್ದ ಮನುಷ್ಯ ಅಸಹಜ ಸಾವು ಅಪ್ಪಿದಾಗ ಮೇಲಧಿಕಾರಿಗಳನ್ನೂ ವಿಚಾರಣೆ ಮಾಡುವುದು ಸಹಜ ಪ್ರಕ್ರಿಯೆ. ಹಾಗಾಗಿ ಮುಖ್ಯಮಂತ್ರಿಯನ್ನೂ ಈ ಕಾರಣಕ್ಕೆ ಕರೆದು ವಿಚಾರಣೆ ಮಾಡಿದರೆ ಅದನ್ನು ತಪ್ಪೆಂದು ಭಾವಿಸಬಾರದು. ಸಿಐಡಿ ಸಂಸ್ಥೆಯು ಸ್ವತಂತ್ರವಾಗಿದ್ದ ಪಕ್ಷದಲ್ಲಿ ಅದು ಈಗಾಗಲೆ ಮುಖ್ಯಮಂತ್ರಿಯವರ ಹೇಳಿಕೆಯನ್ನೂ ಪಡೆಯುತ್ತಿತ್ತು. ಪಡೆಯದೇ ಇದ್ದರೆ, ನೀವು ನ್ಯಾಯಪಕ್ಷಪಾತಿಯಾಗಿದ್ದಲ್ಲಿ ಅದನ್ನು ಒತ್ತಾಯಿಸುತ್ತೀರಿ ಸಹ. ನಮ್ಮ ಫ್ಯೂಡಲ್ ವ್ಯವಸ್ಥೆಯ ಅಧಿಕಾರದ ಮದದಿಂದಲೋ, ಅಥವ ದುರುಪಯೋಗದಿಂದಲೋ, ಅಥವ ತನಿಖಾಧಿಕಾರಿಗಳಿಗೇ ಸ್ವತಃ ಧೈರ್ಯ ಇರದೇ ಇರುವುದರಿಂದಲೋ ಇಲ್ಲಿ ಆ ಸಹಜ ಪ್ರಕ್ರಿಯೆ ಸಾಧ್ಯವಾಗಿಲ್ಲ. ಮಾಡಬೇಕಾದ ಕೆಲಸವನ್ನು ಸಿಬಿಐ ಮಾಡಿದರೆ ಅದನ್ನು ದುರುಪಯೋಗ ಎಂದೇಕೆ ಹೇಳಬೇಕು? (ಇನ್ನು ಡಿಕೆ ರವಿಯವರನ್ನು ಕೋಲಾರದಿಂದ ಬೆಂಗಳೂರಿಗೆ ಅವಧಿಗೆ ಮುಂಚೆಯೇ ವರ್ಗ ಮಾಡಲು ಇದ್ದ ಕಾರಣಗಳೇನು, ಆಯಾಮಗಳೇನು ಎನ್ನುವುದೂ ಬಯಲಾಗಬೇಕು. ಅವರು ವರ್ಗಾವಣೆ ಅಗುವುದಕ್ಕೆ ಮೊದಲು ಮತ್ತು ಸಾಯುವ ಮೊದಲು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅವರು ಕೈಗೆ ತೆಗೆದುಕೊಂಡಿದ್ದ ಕೆಲಸಗಳೇನು ಎನ್ನುವುದೂ ಅ ವಿಚಾರಣೆಯಲ್ಲಿ ದಾಖಲಾಗಬೇಕು. ಇವೆಲ್ಲವೂ ಸೋಮವಾರ ಬಹಿರಂಗವಾಗಲಿರುವ ಸಿಐಡಿಯ ಪ್ರಾಥಮಿಕ ತನಿಖಾವರದಿಯಲ್ಲಿ ಇರುತ್ತದೆಯೇ? ಇಲ್ಲವೇ ಇಲ್ಲ. ಅದರೆ ಸಿಬಿಐ ಇದನ್ನು ಮಾಡುತ್ತದೆ ಎನ್ನುವ ವಿಶ್ವಾಸ ನನಗಿದೆ.)

ಇನ್ನು ಇದೇ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ಉಸ್ತುವಾರಿಯಲ್ಲಿ ಬಹಳ ನೀಚವೂ, ಅನೈತಿಕವೂ, ಅಕ್ರಮವೂ, ಗಂಭೀರವೂ ಆದ ಲೋಪವೊಂದನ್ನು ಎಸಗಲಾಗಿದೆ. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಸತ್ತ ವ್ಯಕ್ತಿಯ ಫೋನ್ ಕರೆಗಳ ವಿವರಗಳನ್ನು ಮತ್ತು ಫೋನ್ ಹಾಗೂ ವಾಟ್ಸ್ಯಾಪ್ ಸಂದೇಶಗಳ ಪ್ರತಿಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ತಲುಪಿಸಲಾಗಿದೆ ಎಂಬ ಮಾಹಿತಿ ಇದೆ. ಕೆಲವು ಪತ್ರಕರ್ತರು ಅದರಲ್ಲಿಯ ಕೆಲವು ಭಾಗಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಕೆಲವು ಪತ್ರಿಕೆಗಳೂ ಪ್ರಕಟಿಸಿವೆ. ಇವೆಲ್ಲಾ ಯಾಕಾಗಿ? ಯಾಕಾಗಿ ಇದನ್ನು ಬಹಿರಂಗ ಪಡಿಸುತ್ತಿದ್ದೀರಾ? ಸತ್ತಿರುವ ಮನುಷ್ಯ ನೀವೆಂದುಕೊಂಡಷ್ಟು ದೊಡ್ಡ ಮನುಷ್ಯ ಅಲ್ಲ, ಹಾಗಾಗಿ ಸಿಐಡಿ ತನಿಖೆ ಸಾಕು, ಸಿಬಿಐ ಬೇಕಾಗಿಲ್ಲ ಎಂದಲ್ಲವೇ ನಿಮ್ಮ ವಾದ? ಆ ಮನುಷ್ಯ ಸತ್ತಿದ್ದು ವೈಯಕ್ತಿಕ ಕಾರಣಕ್ಕೆ ಎಂದು ಕೆಲವರು ಈಗಾಗಲೆ ಷರಾ ಬರೆದುಬಿಟಿದ್ದಾರೆ. ಅದನ್ನು ಹೇಳುವುದಕ್ಕೆ ಮೊದಲು ನೀವು ಫೋರೆನ್ಸಿಕ್ ರಿಪೋರ್ಟ್ ನೋಡಿರುತ್ತೀರಿ ಎಂದು ಭಾವಿಸುತ್ತೇನೆ. ಯಾಕೆಂದರೆ ಎಲ್ಲಕ್ಕಿಂತ ಮೊದಲು ನಾವು ಪ್ರಾಥಮಿಕವಾಗಿ ಪರಿಗಣಿಸಬೇಕಾದ ವಿವರಗಳು ಅದರಲ್ಲಿರುತ್ತವೆ. ಹಾಗಿದ್ದಲ್ಲಿ ಅದು ನಿಮಗೆ ಸಿಕ್ಕಿದೆಯೇ? ಹೇಗೆ ಸಿಕ್ಕಿತು? ಅಥವ ಅದರಲ್ಲಿ ಇದೇ ಇರುತ್ತದೆ ಎಂದು ನಿಮಗೆ ಹೇಗೆ ಗೊತ್ತು? ನೀವೇ ಬರೆಸಿದ್ದೀರಾ? ಇಂತಹ ಪ್ರಶ್ನೆಗಳು ಎದ್ದಾಗ ನಿಮ್ಮ ವಿಶ್ವಾಸಾರ್ಹತೆ ಕುಗ್ಗುತ್ತದೆ ಎನ್ನುವ ಕಲ್ಪನೆಯಾದರೂ ಈ ಪತ್ರಕರ್ತ ಮಿತ್ರರಿಗೆ ಇದೆಯೇ? ಯಾರಿಗಾಗಿ ಇವರು ತಮ್ಮ ವೈಯಕ್ತಿಕ ಗೌರವ ಮತ್ತು ನಂಬಿಕೆಯನ್ನು ಪಣಕ್ಕೊಡ್ಡುತ್ತಿದ್ದಾರೆ? ಜಾರ್ಜ್, ಡಿಕೆ ಶಿವಕುಮಾರ್, ಸಿದ್ಧರಾಮಯ್ಯ,??? (ಇನ್ನು ಮುಖ್ಯಮಂತ್ರಿಗಳು ಪೊಸ್ಟ್‌ಮಾರ್ಟಮ್ ವರದಿಯನ್ನು ಮಾರ್ಪಡಿಸಲು ಹೆಣವನ್ನು ನೋಡುವ ನೆಪದಲ್ಲಿ ವಿಕ್ಟೋರಿಯ ಆಸ್ಪತೆಗೆ ಹೋಗಿದ್ದರು ಎನ್ನುವ ಮಾತನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಅತ್ಯಂತ ಬಾಲಿಶ, ಬೇಜವಬ್ದಾರಿಯ, ಕೀಳು ಅಭಿರುಚಿಯ ಮಾತು. ಎಂತೆಂತಹ ಅನರ್ಹರು, ಅಪ್ರಬುದ್ಧರು, ಅಯೋಗ್ಯರು, ಭ್ರಷ್ಟರು, ಕ್ರಿಮಿನಲ್‌ಗಳು ನಮ್ಮ ಮುಖ್ಯಮಂತ್ರಿಗಳಾಗಿದ್ದರು ಎಂದರೆ, ಈಗ ಕರ್ನಾಟದಲ್ಲಿ ಜೀವಂತ ಇರುವ ಎಂಟು ಮಾಜಿ ಮುಖ್ಯಮಂತ್ರಿಗಳ ಪಟ್ಟಿ ನೋಡಿದರೆ ಸಾಕು; ಗಾಬರಿಯಾಗುತ್ತದೆ, ದುಸ್ವಪ್ನದಂತೆ ಕಾಣಿಸುತ್ತದೆ.)

ಇದೇ ಸಂದರ್ಭದಲ್ಲಿ ಕೆಲವರು ಈ ಇಡೀ ಪ್ರಕರಣವನ್ನು ಆರೆಸ್ಸೆಸ್ ಮತ್ತು ಬಿಜೆಪಿಯವರು ಅಂತರ್ಜಾಲದಲ್ಲಿ ಮತ್ತು ಎಸ್ಸೆಮ್ಮೆಸ್‌ಗಳಲ್ಲಿ ಸುಳ್ಳು ಸುದ್ಧಿಗಳನ್ನು ಹಬ್ಬಿಸುವ ಮೂಲಕ ಉದ್ಧೀಪಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವವರಲ್ಲಿ ಬಹುತೇಕರು ಕಾಂಗ್ರೆಸ್ಸಿಗರು ಮತ್ತವರ ಬೆಂಬಲಿಗರು. ಅವರಿಗೆ ನನ್ನ ಒಂದು ಪ್ರಶ್ನೆ, ಇಂತಹ ಒಂದು ದಾಳಿಯನ್ನು ಎದುರಿಸಲು ನಿಮ್ಮ ಸಿದ್ಧತೆಗಳೇನು? ನಿಮ್ಮ ಹೋರಾಟವನ್ನು ಅನ್ಯರು ಬಂದು ನಿಮಗಾಗಿ ಏಕೆ ಮಾಡಬೇಕು? ಇಂತಹ ದೈನೇಸಿ ಸ್ಥಿತಿಗೆ ಕಾರಣಗಳೇನು? ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಕನಿಷ್ಟ ಎಂದರೂ ಹತ್ತಾರು ಸಾವಿರ ರೂಪಾಯಿ ಜಾಹಿರಾತು ಕೊಟ್ಟು ನಿಮ್ಮದೇ ಪಕ್ಷದ ಈ ರಾಜ್ಯದ ಪರಮಭ್ರಷ್ಟ ಸಚಿವರೊಬ್ಬರು ಕ್ರಿಯಾಶೀಲರಾಗಿರುವುದು ನಿಮಗೆ ಗೊತ್ತಿಲ್ಲವೇ? ಅವರು ಅಲ್ಲಿ ಎಂದಾದರೂ ಪಕ್ಷವನ್ನಾಗಲಿ ಸರ್ಕಾರವನ್ನಾಗಲಿ ಸಮರ್ಥಿಸಿದ್ದನ್ನು ನೋಡಿದ್ದೀರಾ? ನಿಮ್ಮ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗದೇ ಇರುವುದಕ್ಕೆ ಕಾರಣಗಳೇನು? ನಿಮ್ಮ ಸರ್ಕಾರದ ಎಡವಟ್ಟು ಕೆಲಸಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವುದು ಎಷ್ಟೊಂದು ಹಿಂಸೆಯ ಕೆಲಸ ಎಂದು ನಿಮಗೆ ಗೊತ್ತಿದೆಯೆ? (ಇದು ಕೆಲವರಿಗೆ ಗೊತ್ತಿದೆ. ಗೊತ್ತಿರಬೇಕಾದವರಿಗೆ ಗೊತ್ತಿಲ್ಲ.)

ಹೀಗೆ ಇಲ್ಲಿಯ ಕಾಂಗ್ರೆಸ್‍ನವರು ಮತ್ತು ಅವರ ಸರ್ಕಾರ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಹೊಳೆ ದಾಟುವ ಧೈರ್ಯದಲ್ಲಿ ತುಂಬಿದ ಹೊಳೆಗೆ ಹಾರಿದ್ದಾರೆ. ಉಸಿರುಕಟ್ಟುವ ಮುನ್ನ ಅವರು ಅವುಗಳಿಂದ ಕಳಚಿಕೊಂಡು ಮೇಲೆ ಬಂದರೆ ಉಳಿಯುತ್ತಾರೆ. ಇಲ್ಲದಿದ್ದಲ್ಲಿ ಅವರನ್ನು ಯಾರೂ ಕಾಪಾಡಲಾರರು. ಮತ್ತು ಇಂತಹ ಮೂರ್ಖರ ಅಗತ್ಯ ಈ ರಾಜ್ಯದ ಜನತೆಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮೂರ್ಖರನ್ನು, ಭ್ರಷ್ಟರನ್ನು, ಅದಕ್ಷರನ್ನು, ಕ್ರಿಮಿನಲ್‌ಗಳನ್ನು ಜನ ಹೊಳೆಗೆ ಎಸೆಯುತ್ತಾರೆ, ಇಲ್ಲವೆ ಕಲ್ಲುಕಟ್ಟಿಕೊಂಡು ಹೊಳೆಗೆ ಇಳಿದವರನ್ನು ಅಲ್ಲಿಯೇ ಸಾಯಲು ಬಿಡುತ್ತಾರೆ. ಅಂತಹವರ ಬಗ್ಗೆ ಕನಿಕರದ ಅಗತ್ಯ ಇಲ್ಲ.

ಆದರೆ, ಈಗಲೂ ನಾನು ಸಿದ್ಧರಾಮಯ್ಯನವರ ಪರ ಆಶಾವಾದಿಯಾಗಿದ್ದೇನೆ. ಅವರಿಗೆ ಮತ್ತು ಅವರ ಪಕ್ಷಕ್ಕೆ ಇನ್ನೂ ಮೂರು ವರ್ಷಗಳ ಅವಧಿ ಇದೆ. ಸಿದ್ಧರಾಮಯ್ಯನವರು ಆ ಮೂರು ವರ್ಷದ ಅವಧಿ ಪೂರೈಸುತ್ತಾರೋ ಇಲ್ಲವೋ ಎನ್ನುವುದು ಕಾಂಗ್ರೆಸ್‌ಗೆ ಬಿಟ್ಟದ್ದು. ಆದರೆ ಮೂರು ವರ್ಷಗಳ ಒಳಗೆಯೇ ಇಲ್ಲಿ ಕಾಂಗ್ರೆಸ್ ಸರ್ಕಾರ ಹೋದರ ಅದು ಖಡಾಖಂಡಿತವಾಗಿ ಸ್ವಯಂಕೃತಾಪರಾಧ. ಆ ಪಕ್ಷದ ಬಗ್ಗೆ ನನಗೆ ನಂಬಿಕೆಯಿಲ್ಲ. ಸಿದ್ಧರಾಮಯ್ಯನವರು ಇನ್ನು ಬಹುಶಃ ಇದಕ್ಕಿಂತ ದೊಡ್ಡ ಹುದ್ದೆಗೆ ಏರಲಾರರು. ಹಾಗಾಗಿ ಇರುವಷ್ಟು ದಿನಗಳ ಕಾಲವಾದರೂ ನಾವು ಅವರ ಪರ ಸದ್ಭಾವನೆ ಉಳಿಸಿಕೊಳ್ಳುವಂತೆ ನಡೆದುಕೊಳ್ಳುವುದು ಸಿದ್ಧರಾಮಯ್ಯನವರಿಗೆ ಬಿಟ್ಟದ್ದು. ಇದನ್ನು ಅವರ ಹಿತೈಷಿಗಳು ಮತ್ತು ಸಲಹೆಕಾರರು ಅವರಿಗೆ ಮುಟ್ಟಿಸುತ್ತಾರೆ ಎನ್ನುವ ಕ್ಷೀಣ ವಿಶ್ವಾಸ ನನ್ನದು.