Daily Archives: March 23, 2015

ಡಿ.ಕೆ.ರವಿ ಪ್ರಕರಣ: ಅಂತರಂಗ, ಆತ್ಮಶುದ್ಧಿ ಇಲ್ಲದ ಮಾಧ್ಯಮದವರು?

– ಬಿ. ಶ್ರೀಪಾದ ಭಟ್

ಡಿಸೆಂಬರ್, 2012 ರಲ್ಲಿ ಪ್ರಕಟಗೊಂಡ ಅಂಕಿಅಂಶಗಳ ಅನುಸಾರ ಇಂಡಿಯಾದಲ್ಲಿ ಸುಮಾರು 93,985 ಮುದ್ರಣ ಮಾಧ್ಯಮದ ಪತ್ರಿಕೆಗಳು ಮತ್ತು 850 ದೃಶ್ಯ ಮಾಧ್ಯಮದ ಛಾನಲ್‌ಗಳು ನೊಂದಣಿಯಾಗಿವೆ. ಈ ದೃಶ್ಯ ಮಾಧ್ಯಮಗಳಲ್ಲಿ 413 ಸುದ್ದಿ ವಿಭಾಗದ ಛಾನಲ್‌ಗಳು. ಸರ್ಕಾರದ ದೂರದರ್ಶನವು 37 ಛಾನಲ್‌ಗಳ ಒಡೆತನ ಹೊಂದಿದೆ.ಆಗ ಮುಂದಿನ ವರ್ಷಗಳಲ್ಲಿ ಶೇಕಡಾ 12 ರ ಪ್ರಮಾಣದಲ್ಲಿ ಮಾಧ್ಯಮಗಳtv-media ಬೆಳವಣಿಗೆಯನ್ನು ಅಂದಾಜು ಮಾಡಲಾಗಿತ್ತು. ಎರಡು ವರ್ಷಗಳ ನಂತರ ಇಂದು ಸಂಖ್ಯೆಯ ಆಧಾರದಲ್ಲಿ ಮತ್ತಷ್ಟು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ.

ಸರಿ, ನೇರವಾಗಿ ವಿಷಯಕ್ಕೆ ಬರೋಣ.

ಇಂದು ಪ್ರಜ್ಞಾವಂತರು ಈ ಮಾಧ್ಯಮಗಳ ಕುರಿತಾಗಿ ತೀವ್ರವಾದ ನಿರಾಸೆ, ಆತಂಕ, ಅಸಹ್ಯ ಪಡುವಂತಾಗಿದೆ. ಸುದ್ದಿ ಸಂಪಾದಕ ಮತ್ತು ರಾಜಕೀಯ ಸಂಪಾದಕರನ್ನು ಮಾರ್ಕೆಟಿಂಗ್ ವಿಭಾಗ ನಿಯಂತ್ರಿಸುವಂತಹ ಪರಿಸ್ಥಿತಿಗೆ ಇಂದಿನ ಪತ್ರಿಕೋದ್ಯಮ ತಲುಪಿದೆ. ಸಂಪಾದಕರ ಹೆಸರನ್ನು ಬದಲಿಸಿ ’ಮ್ಯಾನೇಜರ್’ ಎಂದು ಕರೆದರೂ ಯಾವುದೇ ವ್ಯತ್ಯಾಸ ಉಂಟಾಗದಂತಹ ಸ್ಥಿತಿಯಲ್ಲಿ ಸಂಪಾದಕೀಯ ಬಳಗ ಕಾರ್ಯ ನಿರ್ವಹಿಸುತ್ತಿವೆ. ವಿನೋದ್ ಮೆಹ್ತ ಅವರು “ಎಪ್ಪತ್ತರ ದಶಕದ ಪತ್ರಿಕೋದ್ಯಮಕ್ಕೂ ಈಗಿನ ಮಾಧ್ಯಮಗಳ ಸ್ಥಿತಿಗತಿಯಲ್ಲಿನ ಪ್ರಮುಖ ವ್ಯತ್ಯಾಸವೆಂದರೆ ಸ್ಪರ್ಧೆ, ಅತ್ಯಂತ ಅಸಹ್ಯವಾದ ಸ್ಪರ್ಧೆ. ಒಂದು ವೇಳೆ ದಿನಪತ್ರಿಕೆಯೊಂದು ಸೋತರೆ ಅದಕ್ಕೆ ಸಂಪಾದಕ ಹೊಣೆಗಾರನಾಗುತ್ತಾನೆ. ಗೆದ್ದರೆ ಅದು ಮಾರ್ಕೆಟಿಂಗ್ ವಿಭಾಗದ ಹೆಗ್ಗಳಿಕೆ ಎಂದೇ ಬಿಂಬಿಸಲಾಗುತ್ತದೆ. ಇದು ಇಂದಿನ ಪತ್ರಿಕೋದ್ಯಮದ ಸ್ವರೂಪ. ಈ ಕಾಲದ ಸಂಪಾದಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸೇಲ್ಸ್‌ಮನ್ ಆಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪತ್ರಿಕೋದ್ಯಮವನ್ನು ಪ್ರವೇಶಿಸುವಾಗ ಬದ್ಧತೆ, ಪ್ರಾಮಾಣಿಕತೆ, ಉತ್ಸಾಹವನ್ನು ಪ್ರದರ್ಶಿಸುವ ಯುವ ಪತ್ರಕರ್ತರು ಮಾಧ್ಯಮದ ಏಣಿಯನ್ನು ಮೇಲೇರುತ್ತಾ ಹಂತಹಂತವಾಗಿ ಭ್ರಷ್ಟತನ, ಸಿನಿಕತನವನ್ನು ಮೈಗೂಡಿಸಿಕೊಳ್ಳಲಾರಂಭಿಸುತ್ತಾರೆ. Corruption-in-News-Mediaಇದಕ್ಕೆ ಇವರನ್ನು ದೂಷಿಸಲು ಸಾಧ್ಯವಿಲ್ಲ. ತಮ್ಮ ಸೀನಿಯರ್ ಸಹೋದ್ಯೋಗಿಗಳು, ಸಂಪಾದಕರು ರಾಜಕಾರಣದ, ವ್ಯಾಪಾರದ ಪ್ರಭಾವಿ ಕಾರಿಡಾರ್‌ಗಳಲ್ಲಿ ಮಧ್ಯವರ್ತಿಗಳಂತೆ ಅಲೆದಾಡುವುದನ್ನು, ಫಾರ್ಮಹೌಸ್‌ಗಳನ್ನು ಕೊಳ್ಳುವುದನ್ನು ಹತ್ತಿರದಿಂದ ಗಮನಿಸುವ ಈ ಉದಯೋನ್ಮುಖ ಪತ್ರಕರ್ತರು ಕ್ರಮೇಣ ಸಿನಿಕರಾಗುತ್ತಾ ತೆವಳತೊಡಗಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಕುಟಿಲ ವ್ಯಕ್ತಿತ್ವದ ಮುಖ್ಯ ಸಂಪಾದಕ ತನ್ನ ಸಿಬ್ಬಂದಿ ವರ್ಗವನ್ನು ಭ್ರಷ್ಟಗೊಳಿಸುತ್ತಾನೆ. ಇಂಡಿಯಾದ ಪತ್ರಿಕಾರಂಗವು ಸ್ವಯಂನಾಶದ ಕಡೆಗಿನ ಮಾರ್ಗದಲ್ಲಿದೆ” ಎಂದು ಬರೆಯುತ್ತಾರೆ.

ಇಂದಿನ ಬಹುಪಾಲು ಪತ್ರಕರ್ತರ ನೈತಿಕ ಪೋಲೀಸ್‌ಗಿರಿ ಇಂದು ಯಾವ ಮಟ್ಟದಲ್ಲಿ ಬೆಳೆಯುತ್ತಿದೆ ಎಂದರೆ ಹೀಗಾದ್ರೆ ಮುಂದೇನು ಗತಿ ಎಂದು ಕಳವಳಪಡುವಂತಾಗಿದೆ. 1968 -1991ರವರೆಗೆ ಅಮೇರಿಕಾದ ವಾಶಿಂಗ್ಟನ್ ಪೋಸ್ಟ್‌ನ ಸಂಪಾದಕರಾಗಿದ್ದ ಬೆನ್ ಬ್ರಾಡ್ಲಿ ಅವರು ಪತ್ರಕರ್ತರಾದ ಬಾಬ್ ವುಡ್‌ವರ್ಡ ಮತ್ತು ಕಾರ್ಲ ಬರ್ನಸ್ಟೇನ್ ಅವರು ತನಿಖೆ ನಡೆಸಿ ಸಿದ್ಧಪಡೆಸಿದ “ವಾಟರ್ ಗೇಟ್” ಹಗರಣದ ವರದಿಗಳನ್ನು ಪೋಸ್ಟ್‌ನಲ್ಲಿ ಪ್ರಕಟಿಸಿದ್ದರು. ಈ ವರದಿಗಳನ್ನು ಪ್ರಕಟಿಸುವುದು ಸಂಪಾದಕನಾಗಿ ನನ್ನ ಹಕ್ಕು ಎಂದು ಹಗರಣದ ರೂವಾರಿ, ಅಮೇರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್ ವಿರುದ್ಧ ದಂಗೆಯನ್ನೇ ನಡೆಸಿದ್ದರು. ಈ ಬ್ರಾಡ್ಲೀ ಅವರು ಈ ದಶಕದ ಪತ್ರಿಕೋದ್ಯಮದ ಈ ಅನೈತಿಕತೆಯನ್ನು ಕಂಡು 2006ರ ಸಂದರ್ಶನವೊಂದರಲ್ಲಿ ಪತ್ರಕರ್ತರನ್ನು ಕುರಿತು “The danger is that these guys begin to look more important than they are and they think they’re more important than they are…” ಎಂದು ಹೇಳಿದ್ದರು.

ಅದು ಇರಲಿ, 2009ರ ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚಿಸುವುದರ ಕುರಿತು ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಮಾತುಕತೆ ನಡೆಯುತ್ತಿದ್ದಾಗ ಎನ್‌ಡಿಟಿವಿ ಮುಖ್ಯಸ್ಥೆ ಬರ್ಕಾ ದತ್ ಡಿಎಂಕೆ ಸಂಸದೆ ಕನಿಮೋಳಿ ಅವರೊಂದಿಗೆ ಮಾತನಾಡುತ್ತ “ಅಯ್ಯೋ ದೇವರೆ ! ಈಗ ಏನ್ಮಾಡೋದು? ಅವರಿಗೆ ( ಕಾಂಗ್ರೆಸ್) ನಾನು ಏನು ಹೇಳಲಿ? ಹೇಳಿ ನಾನು ಅವರಿಗೆ ಏನು ಹೇಳಲಿ?” ಎಂದು ಪ್ರಶ್ನಿಸುತ್ತಿದ್ದ ಸಂಭಾಷಣೆಯ ತುಣುಕುಗಳು ನೀರಾ ರಾಡಿಯಾ ಟೇಪ್ ಹಗರಣದ ಸಂದರ್ಭದಲ್ಲಿ ಬಹಿರಂಗಗೊಂಡಿದ್ದವು. ಆದರೆ ನಂತರ ಬರ್ಕಾ ದತ್ ಇದನ್ನು ನಿರಾಕರಿಸುತ್ತ ಇದು “stringing the source” ನಂತಹ ಸಂಭಾಷಣೆ ಮತ್ತು ಸುದ್ದಿ ಮೂಲವನ್ನು ಹೊರಗೆಳೆಯಲು ತಾನು ಈ ರೀತಿ ಮಾಡಿದ್ದು ಎಂದು ಸ್ಪಷ್ಟೀಕರಣ ನೀಡಿದ್ದರು. ಆದರೆ ಯಾರು ನಂಬುತ್ತಾರೆ? ಈ ಬರ್ಕಾ ದತ್ ಅವರನ್ನು ಆಕ್ಟಿವ್ ಪತ್ರಕರ್ತೆಯಾಗಿ ನೋಡಿದ ಮೇಲೂ?

ಹಳೆಯ ವರ್ತನೆಗಳನ್ನ, ಘಟನೆಗಳನ್ನು ಹಿಂದಿಕ್ಕಿ ಈಗ ನೇರವಾಗಿ ವಿಷಯಕ್ಕೆ ಬಂದರೆ ಮೊನ್ನೆ ಐಎಎಸ್ ಅಧಿಕಾರಿ dkravi-cm-siddharamaiahಡಿ.ಕೆ.ರವಿ ಅವರ ಅಸಹಜ ಸಾವಿನ ದಿನದಿಂದ ಇಂದಿನವರೆಗೂ ಬಹುಪಾಲು ಮಾಧ್ಯಮಗಳು ಪತ್ರಿಕೋದ್ಯಮದ ಎಲ್ಲಾ ಘನತೆ, ನೈತಿಕತೆಯನ್ನು ಗಾಳಿಗೆ ತೂರಿ ಶಾಸಕಾಂಗದ ವಿರುದ್ಧ ಅತ್ಯಂತ ಕೆಟ್ಟದಾಗಿ ವರ್ತಿಸಿದವು. ಬಹುಪಾಲು ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಪತ್ರಿಕೋದ್ಯಮದ ಮೂಲ ಪಾಠಗಳಾದ ಸೂಕ್ಷ್ಮತೆ, ಖಚಿತತೆ ಮತ್ತು ನಿಷ್ಟಕ್ಷಪಾತಗಳಂತಹ ಗುಣಗಳನ್ನು ತುಂಬಾ ಎಚ್ಚರಿಕೆಯಿಂದ ಸಮತೋಲನಗೊಳಿಸಿ ವರದಿಯನ್ನು ಮಂಡನೆ ಮಾಡಿ, ಸಂವಾದ ಮತ್ತು ಚರ್ಚೆ ನಡೆಸುವುದನ್ನು ಮಾಡಲೇ ಇಲ್ಲ. ಬದಲಾಗಿ ತಮಗೆ ದೊರೆತ ಯಾವುದೇ ಸಾಕ್ಷಾಧಾರಗಳಿಲ್ಲದ, ಊಹಾಪೋಹದ ಕತೆಗಳನ್ನು ಕರಾರುವಕ್ಕಾದ ಸುದ್ದಿಗಳೆಂದು ಏರು ದನಿಯಲ್ಲಿ ವಾದಿಸುತ್ತಾ ಸೂಕ್ಷ್ಮತೆಯನ್ನು ಕೈ ಬಿಟ್ಟು ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ ಏಕರೂಪದ ದಾಳಿಗಳು ನೀತಿಸಂಹಿತೆಯನ್ನು ಮೀರಿವೆ ಎಂದೇ ಹೇಳಬೇಕು. ಜನಪ್ರಿಯ ಐಎಎಸ್ ಅಧಿಕಾರಿಯೊಬ್ಬರ ಅಸಹಜ ಸಾವಿನ ಕಾರಣದಿಂದ ಸಹಜವಾಗಿಯೇ ಜನರ ಆಕ್ರೋಶವು ವ್ಯವಸ್ಥೆಯ ಕೇಂದ್ರದಲ್ಲಿರುವ ಆಡಳಿತ ಪಕ್ಷದ ವಿರುದ್ಧ ತಿರುಗುತ್ತದೆ.

ಡಿ.ಕೆ ರವಿಯವರ ಸಾವಿನ ಸಂದರ್ಭದಲ್ಲಿ ವಿವೇಚನೆಯಿಂದ, ಸಂಯಮದಿಂದ ಮತ್ತು ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫವಾಗಿರುವ ಕಾಂಗ್ರೆಸ್ ಸರ್ಕಾರ ಇಡೀ ಅತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ಹತೋಟಿಯನ್ನು ಕಳೆದುಕೊಂಡಿದೆ. ಸಮಯಕ್ಕೆ ಸೂಕ್ತವಾದ ನಿರ್ಣಯಗಳನ್ನು ತೆಗೆದಕೊಳ್ಳದ, ಸಂಶಯಾತೀತವಾಗಿ ಮತ್ತು ಪ್ರಬುದ್ಧತೆಯಿಂದ ವರ್ತಿಸುವುದನ್ನು ತನ್ನ ಸಹೋದ್ಯೋಗಿಗಳಿಗೆ, ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಲು ವಿಫಲರಾದ, ಇಡೀ ಪ್ರಕರಣವನ್ನು ನುರಿತ ಮುತ್ಸದ್ದಿಯಂತೆ ನಿಭಾಯಿಸದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು dkravi-parents-siddharamaiahಪ್ರತಿ ಹೆಜ್ಜೆಯಲ್ಲಿಯೂ ಎಡವಿದ್ದಾರೆ. ವಿರೋಧ ಪಕ್ಷಗಳ ಕೈಯಲ್ಲಿ ದಾಳವಾಗಿರುವುದಂತೂ ನಿಜ. ಆದರೆ ಈ ಎಲ್ಲಾ ಘಟನೆಗಳನ್ನು ಮಾಧ್ಯಮವು ವರದಿ ಮಾಡಿದ ರೀತಿ ತುಂಬಾ ಏಕಪಕ್ಷೀಯವಾಗಿತ್ತು ಮತ್ತು ಪೂರ್ವಗ್ರಹಪೀಡಿತವಾಗಿತ್ತು. ಕಡೆಗೆ ಇಡೀ ಅಸಹಜ ಸಾವಿನ ಕೇಂದ್ರ ಬಿಂದುವಾಗುವಂತೆ ಒಬ್ಬ ಐಎಎಸ್ ಮಹಿಳಾ ಅಧಿಕಾರಿ ಕುರಿತಾಗಿ ಸುದ್ದಿಗಳನ್ನು ಬಿತ್ತುತ್ತಿದ್ದ ನಿಗೂಢ ಕೈಗಳು ಒಂದೆಡೆಯಿದ್ದರೆ ತಮ್ಮ ಪತ್ರಿಕೋದ್ಯಮದ ನೀತಿಸಂಹಿತೆಯನ್ನು ನಿರ್ಲಕ್ಷಿಸಿ ಮಹಿಳಾ ಐಎಎಸ್ ಅಧಿಕಾರಿಯ ಹೆಸರು, ಅವರ ಕಾರ್ಯ ಕ್ಷೇತ್ರ ಮುಂತಾದ ವಿವರಗಳನ್ನು ಬಹಿರಂಗಪಡೆಸಿದ್ದು ಮಾಧ್ಯಮಗಳು ಕೆಳಮಟ್ಟಕ್ಕೆ ತಲುಪಿದ್ದರ ಸಾಕ್ಷಿಯಾಗಿತ್ತು. ತಮ್ಮ ಇಂತಹ ವರ್ತನೆಗಳಿಂದ ಆ ಮಹಿಳಾ ಐಎಎಸ್ ಅಧಿಕಾರಿಯ ಘನತೆ ಮತ್ತು ಆತ್ಮಗೌರವಕ್ಕೆ ಧಕ್ಕೆ ತಂದಿಟ್ಟ ಮಾಧ್ಯಮಗಳು ಮುಂದುವರೆದು ಅವರ ಹಿನ್ನೆಲೆಗಳನ್ನು ಕೆದಕುತ್ತಾ ಏಕಪಕ್ಷೀಯವಾಗಿ ಆಡಳಿತ ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸಲು ಮುಂದಾಗಿರುವುದನ್ನು ಕಂಡಾಗ ವಿಚಾರಶೀಲವಾದ, ನೈತಿಕ ಪತ್ರಿಕೋದ್ಯಮವು ನೆಲಕಚ್ಚುತ್ತಿರುವುದು ಸ್ಪಷ್ಟವಾಗುತ್ತದೆ.

ನಿಜ. ಬಿಜೆಪಿ ಮತ್ತು ಎಚ್.ಡಿ.ಕುಮಾರಸ್ವಾಮಿಯವರ ರಾಜಕಾರಣದ ಎಲ್ಲಾ ಒಳಹೊರಗುಗಳು, ಕುತಂತ್ರಗಳು, ಅವಕಾಶವಾದಿತನ, ಜಾತೀಯತೆ ಜನರಿಗೆ ಚೆನ್ನಾಗಿ ಗೊತ್ತು. ಈ ಜನರಿಗೆ ಎಲ್ಲಾ ಗೊತ್ತೆಂದು ಬಿಜೆಪಿ ಮತ್ತು ಕುಮಾರಸ್ವಾಮಿಯವರಿಗೆ ಗೊತ್ತು. ತಮ್ಮ ರಾಜಕೀಯ ಲಾಭದ ಲೆಕ್ಕಾಚಾರವು, ಭವಿಷ್ಯದ ವಿಧಾನಸಭೆಯ ಚುನಾವಣೆಯ ಮತಗಳಿಕೆ, ಇತ್ಯಾದಿ, ಇತ್ಯಾದಿ ವರಪ್ರಸಾದಗಳು ಈ ಸಿಐಡಿ ಮತ್ತು ಸಿಬಿಐ ಎನ್ನುವ ಪ್ರಶ್ನೆಯನ್ನು ಎತ್ತಿಕೊಳ್ಳುವುದರಲ್ಲಿದೆ, ಅದನ್ನು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಇರಿಸುಮುರಿಸಾಗುವಂತೆ ಅದರ ವಿರುದ್ಧ ಸಾರ್ವಜನಿಕವಾಗಿ ಪ್ರಚಾರ ಮಾಡುವುದರಲ್ಲಿದೆ ಎನ್ನುವುದಂತೂ ಬಿಜೆಪಿ ಮತ್ತು ಕುಮಾರಸ್ವಾಮಿಯವರಿಗೆ ಬಲು ಬೇಗ ಅರಿವಾಗಿತ್ತು. ಹಿಂದಿನ ವಿಷಯಗಳನ್ನು ಬಿಡಿ, ಮುಖ್ಯಮಂತ್ರಿಯಾಗಿದ್ದ ಈ ಕುಮಾರಸ್ವಾಮಿಯವರ DKRavi_Kolar_PGವಿರುದ್ಧ ಜನಾರ್ಧನ ರೆಡ್ಡಿ ಪಟಾಲಂ 150 ಕೋಟಿ ಲಂಚದ ಆರೋಪ ಮಾಡಿದಾಗ, ಬಿಜೆಪಿ ಅಧಿಕಾರದಲ್ಲಿದ್ದಾಗ ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಅವರು ದೆಹಲಿಯಲ್ಲಿ ಅಸಹಜವಾಗಿ ಸಾವಿಗೀಡಾದಾಗ, ಸೌಜನ್ಯ ಕೊಲೆ ಪ್ರಕರಣದ ಸಂದರ್ಭದಲ್ಲಿ, ಅದಕ್ಕೂ ಸ್ವಲ್ಪ ಹಿಂದೆ ಯೆಡೆಯೂರಪ್ಪನವರ ಪತ್ನಿಯವರು ನೀರಿನ ತೊಟ್ಟಿಯಲ್ಲಿ ಕಾಲು ಜಾರಿ ಅಸಹಜ ಸಾವಿಗೀಡಾದಾಗ ಸಿಬಿಐ ತನಿಖೆ ನಡೆಸಬೇಕೆಂದು ಪ್ರಜ್ಞಾವಂತರು ಮತ್ತು ಆಗಿನ ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯ ಮಾಡಿದ್ದರು. ಆದರೆ ಬಿಜೆಪಿ ಇದಕ್ಕೆ ಕ್ಯಾರೆ ಎನ್ನಲಿಲ್ಲ. ಸಿಬಿಐ ಅನ್ನು “ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್” ಎಂದು ಕೀಳು ಮಟ್ಟದಲ್ಲಿ ಇದೇ ಬಿಜೆಪಿ ನಾಯಕರು ಟೀಕೆ ಮಾಡಿದ್ದರು. ಇದು ಸಹ ಮಿಕ್ಕೆಲ್ಲರಿಗಿಂತಲೂ ಮಾಧ್ಯಮದವರಿಗೆ ಚೆನ್ನಾಗಿ ಗೊತ್ತು. ಇಂದು ಕೇಂದ್ರದಲ್ಲಿ ಯುಪಿಎ ಅಧಿಕಾರ ಕಳೆದುಕೊಂಡು ಬೆಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಎಲ್ಲವೂ ಅದಲುಬದಲಾಗುವುದು ಇಂಡಿಯಾದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ತೀರಾ ಸಹಜ. ಆದರೆ ಆಳದಲ್ಲಿ ತುಂಬಾ ಸಂಕೀರ್ಣ. ಈ ಸರಳ ಮತ್ತು ಸಂಕೀರ್ಣಗಳ ವಿವಿಧ ಮುಖಗಳೂ ಸಹ ನಮ್ಮ ಮಾಧ್ಯಮಗಳಿಗೆ ಚಿರಪರಿಚಯ.

ಇಂತಹ ನೇರವಾದ ಆದರೆ ಕಗ್ಗಂಟಾದಂತಹ ಸಂಗತಿಗಳ, ಸರಳ ಆದರೆ ಸಂಕೀರ್ಣ ಎನ್ನುವ ವಿಭಿನ್ನ ಮುಖಗಳ ಎಳೆ ಹಿಡಿದು ಐಎಸ್ ಅಧಿಕಾರಿ ಡಿ.ಕೆ.ರವಿ ಅವರ ಅಸಹಜ ಸಾವಿನ ಸಂದರ್ಭದಲ್ಲಿ ಈ ಸಿ.ಐ.ಡಿ. ಬೇಡ, ಸಿಬಿಐ ಬೇಕು ಎನ್ನುವ ಬೇಡಿಕೆಯ ಹಿಂದಿನ ರಾಜಕೀಯ ಒಳಸುಳಿಗಳನ್ನು ಎಳೆ ಎಳೆಯಾಗಿ ಬಿಡಿಸಿ ಈ ನಾಡಿನ ಜನತೆಯ ಮುಂದಿಡಬೇಕಾಗಿದ್ದ ನಮ್ಮ ಪತ್ರಿಕೋದ್ಯಮದ ಮಿತ್ರರು ಈ ಸಂದರ್ಭದಲ್ಲಿ ದಯನೀಯವಾಗಿ ಸೋತಿದ್ದಾರೆ. ಇದು ನನಗೆ 1989ರಲ್ಲಿ ವಿ.ಪಿ.ಸಿಂಗ್ ಸರ್ಕಾರ ಜಾರಿಗೊಳಿಸಿದ ಮಂಡಲ್ ವರದಿಯ ಸಂದರ್ಭದ ಘಟನೆಗಳನ್ನು ನೆನಪಿಗೆ ತರುತ್ತಿದೆ. ಆಗ ಮೀಸಲಾತಿ ವಿರೋಧಿಸಿ ದೇಶಾದ್ಯಾಂತ ಈ ಮೇಲ್ಜಾತಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹಿಂಸಾತ್ಮಕ ಚಳುವಳಿಗೆ ಬೆಂಕಿ ಎರೆದು ಮತ್ತಷ್ಟು ಉರಿಯುವಂತೆ ಮಾಡಿದ್ದು ಇದೇ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ. ಈ ಎಬಿವಿಪಿ ಆಗ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತ ಮೀಸಲಾತಿ ವಿರುದ್ಧದ ಗಲಾಟೆಯನ್ನು ಅನಾಮತ್ತಾಗಿ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದ ವಿರುದ್ಧದ ಹೋರಾಟಕ್ಕೆ ಹೊರಳಿಸಿತು. ಈ ಕಾರ್ಯತಂತ್ರಕ್ಕೆ ಬಿಜೆಪಿ ಸಂಪೂರ್ಣ ಬೆಂಬಲಿಸಿತು ಮತ್ತು ಈ ಮೀಸಲಾತಿಯನ್ನು ವಿರೋಧಿಸಿ ವಿ.ಪಿ.ಸಿಂಗ್ ಪಕ್ಷಕ್ಕೆ ನೀಡಿದ ಬೆಂಬಲವನ್ನು ಹಿಂದಕ್ಕೆ ಪಡೆದು ಸರ್ಕಾರವನ್ನೇ ಉರುಳಿಸಿದ್ದು ಇದೇ ಬಿಜೆಪಿ ಪಕ್ಷ, ಆಗಲೂ ಬಹುಪಾಲು ಮಾಧ್ಯಮಗಳು ಇಡೀ ಮೀಸಲಾತಿ ವಿರೋಧಿ ಚಳುವಳಿಯನ್ನು ಬೆಂಬಲಿಸಿ ವರದಿಗಳನ್ನು ಪ್ರಟಿಸುತ್ತಿದ್ದವು. ಯಾವುದೇ ನಿರ್ಧಾರಗಳ ಕಡೆಗೆ ವಾಲದೆ ನಿಷ್ಪಕ್ಷಪಾತವಾಗಿ ಚರ್ಚೆ, ಸಂವಾದಗಳ ಮೂಲಕ ಇಡೀ ಮೀಸಲಾತಿ ವಿರೋಧಿ ಚಳುವಳಿಯ ಮಾನವೀಯ ವಿರೋಧಿ ಗುಣಲಕ್ಷಣಗಳನ್ನು ಸಾರ್ವಜನಿಕವಾಗಿ ವಿಶ್ಲೇಷಿಸಿ ದಿಕ್ಕುತಪ್ಪಿದ ಆ ಚಳುವಳಿಗೆ ಸಂವಿಧಾನದ ಆಶಯಗಳಿಗೆ ಅನುಗುಣವಾಗುವಂತೆ ಮತ್ತೊಂದು ನಿಖರವಾದ ದಿಕ್ಕನ್ನು ತೋರಿಸಬೇಕಾಗಿದ್ದ ಮಾಧ್ಯಮಗಳು ಬದಲಾಗಿ ಕೇವಲ ಮೇಲ್ಜಾತಿ ಹುಡುಗರ ಅತ್ಮಹತ್ಯಾತ್ಮಕ ವರ್ತನೆಗಳನ್ನು ಇಡೀ ದೇಶದ ಜನತೆಯ ಅಭಿಪ್ರಾಯ ಎನ್ನುವಂತೆ ಪ್ರಚೋದನಕಾರಿ ವರದಿಗಳನ್ನು ನಿರಂತರವಾಗಿ ಪ್ರಕಟಿಸಿ ಆ ಮೂಲಕ ನಾಗರಿಕ ಸಮಾಜವನ್ನು ದಿಕ್ಕುತಪ್ಪಿಸಿದವು. ತಮ್ಮದೇ ಆದ ಮೀಸಲಾತಿ ವಿರೋಧಿ ಸಿದ್ಧಾಂತಗಳ ಆಧಾರದ ಮೇಲೆ ರಾಜಕೀಯ ವಿಶ್ಲೇಷಣೆ ನಡೆಸಿದ ಮಾಧ್ಯಮಗಳು ಜನತೆಯ ಮೇಲೆ influence ಮಾಡಲು ವಿಫಲ ಯತ್ನವನ್ನೂ ನಡೆಸಿದವು. ಇಂದು ಇದೇ ಮಾಧ್ಯಮಗಳು ಡಿ.ಕೆ.ರವಿಯವರ ಅಸಹಜ ಸಾವಿನ ಸಂದರ್ಭದಲ್ಲಿ ಅದೇ ಮಾದರಿಯಲ್ಲಿ ವರ್ತಿಸುತ್ತಿವೆ.

ಮಾಧ್ಯಮಗಳು ನಿಷ್ಪಕ್ಷಪಾತವಾದ ಸಂವಾದಗಳ ಮೂಲಕ ಸಿಐಡಿ ಅಥವಾ ಸಿಬಿಐ ಎನ್ನುವ ರಾಜ್ಯ ಮತ್ತು ಕೇಂದ್ರದ ಗೃಹ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ರಬ್ಬರ್ ಸ್ಟಾಂಪ್ ಸಂಸ್ಥೆಗಳ ಕುರಿತಾಗಿ ಆಳವಾದ, ಸೈದ್ಧಾಂತಿಕವಾದ ಚರ್ಚೆಗಳನ್ನು ನಡೆಸಬೇಕಿತ್ತು. ಎರಡೂ ಸಂಸ್ಥೆಗಳು ರಾಜಕೀಯ ಕಟ್ಟುಪಾಡಿಗೆ ಒಳಗಾದ ನಂತರ ಅವುಗಳನ್ನು ಸ್ವತಂತ್ರ ತನಿಖಾ ಸಂಸ್ಥೆಗಳಾಗಿ ಗ್ರಹಿಸುವುದೇ ದೋಷಪೂರಿತ ಎನ್ನುವುದನ್ನು tv-mediaವಿಶ್ಲೇಷಿಸಬೇಕಿದ್ದ ಮಾಧ್ಯಮಗಳು ಮೀಸಲಾತಿ ವಿರೋಧಿ ಚಳುವಳಿಯ ಸಂದರ್ಭದಲ್ಲಿ ವರ್ತಿಸಿದಂತೆ ಡಿ.ಕೆ.ರವಿ ಸಾವಿನ ಸಂದರ್ಭದಲ್ಲಿ ಸಿಬಿಐ ಪರವಾಗಿ ನಿರಂತರವಾಗಿ ಒತ್ತಡವನ್ನು ಹೇರುವುದರ ಮೂಲಕ ಅದು ಇಡೀ ರಾಜ್ಯದ ಜನತೆಯ ಒಕ್ಕೊರಲಿನ ಬೇಡಿಕೆ ಎನ್ನುವಂತೆಯೇ ರೂಪಿಸಿಬಿಟ್ಟವು. ಅವಶ್ಯಕವಾದ ದಾಖಲೆಗಳು, ಸಾಕ್ಷಾಧಾರಗಳು ಇಲ್ಲದಂತಹ ಸಂದರ್ಭದಲ್ಲಿ, ಇನ್ನೂ ತನಿಖೆಯು ಪ್ರಾರಂಭದ ಹಂತದಲ್ಲಿರುವಂತಹ ಸಂದರ್ಭದಲ್ಲಿ ಇಡೀ ಘಟನೆಯನ್ನು ಎಲ್ಲಾ ಮಗ್ಗಲುಗಳ ಮೂಲಕ ಅವಲೋಕಿಸಲು ನಿರಾಕರಿಸಿದ ಮಾಧ್ಯಮಗಳು ಪ್ರಶ್ನಾತೀತ ನ್ಯಾಯಾಧೀಶರಂತೆ ವರ್ತಿಸುತ್ತಿರುವ ದೃಶ್ಯಗಳಂತೂ ಮಾನವಂತ, ಬದ್ಧತೆಯುಳ್ಳ ಪತ್ರಕರ್ತರು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿತು. ಇದೇ ಸಂದರ್ಭದಲ್ಲಿ ಬಹುಪಾಲು ದೃಶ್ಯ ಮಾಧ್ಯಮಗಳು ಕಾಂಗ್ರೆಸ್ ಪಕ್ಷದ ಶಾಸಕರನ್ನು, ಮಂತ್ರಿಗಳನ್ನು ಸಾರ್ವಜನಿಕವಾಗಿ ಅಗೌರವಸೂಚಕವಾಗಿ ಸಂಭೋದಿಸುತ್ತಿದ್ದ ರೀತಿಯಂತೂ ಅವಮಾನಕರವಾಗಿತ್ತು.

ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾದ ಶಾಸಕಾಂಗಕ್ಕೆ ಸೇರಿದ ಕಾಂಗ್ರೆಸ್ ಪಕ್ಷ ಒಂದು ಅನುಭವವಿಲ್ಲದ, ದಿಕ್ಕುತಪ್ಪಿದ ರಾಜಕೀಯ ಪಕ್ಷದಂತೆ ಇಡೀ ಪ್ರಕರಣವನ್ನು ನಿಭಾಯಿಸಿದ್ದು, ಫಲವಾಗಿ ಇಂದು ತನ್ನ ಮೈ ತುಂಬಾ ಗಾಯಗಳನ್ನು ಮಾಡಿಕೊಂಡು ನೆಲಕ್ಕುರುಳಿದರೆ,ಎಚ್.ಡಿ.ಕುಮಾರ ಸ್ವಾಮಿ ಮತ್ತು ಬಿಜೆಪಿ ಪಕ್ಷಗಳು ಉರಿವ ಮನೆಯ ಗಳ ಹಿಡಿಯುವ ಪಿತೂರಿಗಾರರಂತೆ ವರ್ತಿಸಿ ಡಿ,ಕೆ,ರವಿಯವರ ಅಸಹಜ ಸಾವಿನಲ್ಲಿ ಸಹಜವಾಗಿ ತಮಗೆ ದೊರಕಬಹುದಾದ ಮತಗಳಿಕೆಯ ಪ್ರಮಾಣದ ಏರಿಕೆಯನ್ನು ಊಹಿಸಿ ರೋಮಾಂಚನಗೊಳ್ಳುತ್ತಿರುವಂತಹ ಅಮಾನವೀಯ ದೃಶ್ಯಗಳು ಇಡೀ ಶಾಸಕಾಂಗ ವ್ಯವಸ್ಥೆಯ ಸೋಲನ್ನು ಧೃಢಪಡಿಸುತ್ತದೆ. ಆದರೆ ತನ್ನನ್ನು ತಾನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆದುಕೊಳ್ಳುವ ಪತ್ರಿಕಾರಂಗ ಇಂದು ಮಾರ್ಕೆಟ್ ಏಜೆನ್ಸಿಯ ಮಟ್ಟಕ್ಕೆ ಕುಸಿದಿದೆ.ಇದು ಮಾಧ್ಯಮವು ಸೇಲ್ಸ್‌ಮನ್‌ಗಳನ್ನು ತಯಾರಿಸುವ ಕಾರ್ಖಾನೆಯಾಗುವ ಪ್ರಕ್ರಿಯೆಗೆ ಮುನ್ನುಡಿ ಬರೆದಂತಿದೆ.