Daily Archives: March 24, 2015

ಹುತಾತ್ಮ ಭಗತ್‌ಸಿಂಗ್‌ನ ಆದರ್ಶಗಳು

– ಎಚ್.ಆರ್.ನವೀನ್‌ಕುಮಾರ್

1919 ಏಪ್ರಿಲ್ 13 ರಂದು ಪಂಜಾಬಿನ ಅಮೃತಸರದಲ್ಲಿ ಸುಗ್ಗಿ ಹಬ್ಬ ಬೈಶಾಕಿ, “ಆಳುವವರು ಯಾರನ್ನು ಬೇಕಾದರೂ ವಿಚಾರಣೆಯಿಲ್ಲದೆ ಬಂಧಿಸಿಡುವ ಅಧಿಕಾರ”ವನ್ನು ನೀಡುವ ರೌಲಟ್ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಲು ಅಂದು ಪಂಜಾಬಿನ ಅಮೃತ್‌ಸರದ ಉಧ್ಯಾನವನದಲ್ಲಿ ಸುಮಾರು 20 ಸಾವಿರ ಮಂದಿ ಜಮಾಯಿಸಿದ್ದರು. ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ಕರಾಳತೆಯನ್ನು ಸಾಬೀತುಪಿಡಿಸುವಂತೆ ಬ್ರಿಗೇಡಿಯರ್ ಜನರಲ್ ರೇಜಿನಾಲ್ಡ್ ಡಯರ್ ತನ್ನ ಸೈನ್ಯದೊಂದಿಗೆ ಶಸ್ತ್ರ ಸಜ್ಜಿತನಾಗಿ ಉಧ್ಯಾನವನವನ್ನು ಸುತ್ತುವರೆದು ಯಾವುದೇ ಸೂಚನೆ ನೀಡದೆ ಗುಂಡಿನ ಮಳೆಗರೆದ. Bhagat-Singhಸುಮಾರು 1950 ಬಾರಿ ಗುಂಡು ಹಾರಿಸಿ ಅಲ್ಲಿ ನೆರದಿದ್ದವರ ಮಾರಣ ಹೋಮಮಾಡಿ ರಕ್ತದ ಹೊಳೆಯನ್ನೇ ಹರಿಸಿದ್ದ. ಈ ಸುದ್ದಿ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿತು.

ಈ ಘಟನೆಯಿಂದ ಮನಸ್ಸು ತುಂಬ ಶೋಭೆಗೊಂಡಿದ್ದ ಹನ್ನೆರಡು ವರ್ಷದ ಬಾಲಕನೊಬ್ಬ ಹತ್ಯಾಕಾಂಡ ನಡೆದ ಮಾರನೇ ದಿನ ಅವನು ಶಾಲೆಮುಗಿದ ಮೇಲೆ ಮನೆಗೆ ಹೋಗಲಿಲ್ಲ. ಮನೆಯವರು ಅವನಿಗಾಗಿ ಕಾದರು, ಆತಂಕಗೊಂಡರು. ಅವತ್ತು ಶಾಲೆಗೆ ಹೋಗುವುದಕ್ಕೆ ಬದಲಾಗಿ ಅವನು ನೇರವಾಗಿ ಹೋದದ್ದು ಜಲಿಯನ್‌ವಾಲಾಭಾಗ್‌ಗೆ. ಅದು ಹೇಗೋ ಅವನು ಅಲ್ಲಿ ಕಾವಲಿದ್ದ ಸೆಂಟ್ರಿಗಳ ಕಣ್ಣು ತಪ್ಪಿಸಿ ಉಧ್ಯಾನದೊಳಕ್ಕೆ ನುಗ್ಗಿ ಒಂದು ಸಣ್ಣ ಪಾತ್ರೆಯ ತುಂಬ ಭಾರತೀಯರ ರಕ್ತದಿಂದ ಇನ್ನೂ ಒದ್ದೆ ಒದ್ದೆಯಾಗಿದ್ದ ಒಂದಿಷ್ಟು ಮಣ್ಣನ್ನು ತುಂಬಿಕೊಂಡ. ಕಡೆಗೆ ಮನೆಗೆ ಹೋದಾಗ ಅವನ ತಂಗಿ ಇದುವರೆಗು ಎಲ್ಲಿದ್ದೆ? ಅಮ್ಮ ನಿಂಗೆ ತಿಂಡಿ ಕೊಡಬೇಕೆಂದು ಕಾದಿದ್ದಾಳೆ ಎಂದಳು. ಆದರೆ ಆ ಭಾಲಕ ತಿಂಡಿ ತಿನ್ನುವುದರ ಬಗ್ಗೆ ಯೋಚಿಸುತ್ತಿರಲಿಲ್ಲ. ರಕ್ತಸಿಕ್ತವಾದ ಮಣ್ಣನ್ನು ತುಂಬಿದ್ದ ಆ ಪಾತ್ರೆಯನ್ನು ತೋರಿಸುತ್ತಾ, ‘ನೋಡಿಲ್ಲಿ, ಇದು ಬ್ರಿಟೀಷರು ಕೊಂದುಹಾಕಿದ ನಮ್ಮ ಜನರ ರಕ್ತ. ಇದಕ್ಕೆ ನಮಸ್ಕಾರ ಮಾಡು’ ಎಂದ. ಆಮೇಲೆ ಆ ಪಾತ್ರೆಯನ್ನು ಒಂದು ಗೂಡಿನೊಳಗಿಟ್ಟು ಹೂವುಗಳಿಂದ ಪೂಜಿಸಿದ.

ಇಂತಹ ಅಪ್ರತಿಮ ದೇಶಪೇಮವನ್ನು ಮೆರೆದ ಆ ಬಾಲಕ ಮತ್ತಾರು ಅಲ್ಲ, ಬ್ರಿಟೀಷ್ ಸಾಮ್ರಾಜ್ಯಶಾಹಿಗಳಿಗೆ ಸಿಂಹ ಸ್ವಪ್ನವಾಗಿ, ದೇಶದ ಸ್ವಾಸಂತ್ರಕ್ಕಾಗಿ ತನ್ನ 23 ನೇ ವಯಸ್ಸಿನಲ್ಲೇ ನಗುನಗುತ್ತ ನೇಳುಗಂಬವನ್ನೇರಿದ ಭಗತ್‌ಸಿಂಗ್. ಹೌದು ಈ ಹೆಸರನ್ನು ಕೇಳಿದಾಕ್ಷಣ ಯುವಜನರಲ್ಲಿ ಏನೋ ಒಂದು ರೀತಿಯ ಮಿಂಚಿನ ಸಂಚಲನವಾಗುತ್ತದೆ.
23 ಮಾರ್ಚ್ 1931 ಅಂದರೆ ಇಲ್ಲಿಗೆ ಸರಿಯಾಗಿ 84 ವರ್ಷಗಳ ಹಿಂದೆ ಲಾಹೋರ್‌ನ ಜೈಲಿನೊಳಗೆ ನೀರವ ಮೌನ ಆವರಿಸಿದ್ದರೆ, ಜೈಲಿನ ಹೊರಗೆ ಮತ್ತು ದೇಶದ ತುಂಬೆಲ್ಲ ಆತಂಕ ಮತ್ತು ಆಕ್ರೋಶ ಮಡುಗಟ್ಟಿತ್ತು. ಅಂದು ಕ್ರಾಂತಿಕಾರಿ ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳಾಗಿದ್ದ ಸುಖದೇವ್ ಮತ್ತು ರಾಜ್‌ಗುರುರವರನ್ನು ಬ್ರಟೀಷರು ನೇಣಿಕೇರಿಸಿದ ದಿನ.

ದೇಶದ ಸ್ವಾತಂತ್ರಕ್ಕಾಗಿ ಹುತಾತ್ಮನಾದಾಗ ಭಗತ್‌ಸಿಂಗ್‌ಗೆ ಕೇವಲ 23 ವರ್ಷ, ಇವತ್ತಿನ ಕಾಲಘಟ್ಟದಲ್ಲಿ ಈ ವಯಸ್ಸಿನಲ್ಲಿ ಜೀವನದ ಯಾವುದೇ ಜವಾಬ್ದಾರಿಗಳಿಲ್ಲದೆ, ಸಮಾಜದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ, ತಾವು ಮತ್ತು ತಮ್ಮ ಬದುಕು ಎಂದು ಯೋಜಿಸಿವ ಯುವಜನರು ಹೆಚ್ಚಾಗುತ್ತಿರುವ ಇಂದಿನ ಫ್ಯಾಷನ್ ಯುಗದ ಸಂದರ್ಭದಲ್ಲಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ ಹೋರಾಟಗಾರನಾಗಿ, ಸ್ಪಷ್ಟ ರಾಜಕೀಯ ಕಣ್ಣೋಟವನ್ನು ಬೆಳೆಸಿಕೊಂಡಿದ್ದ ಭಗತ್‌ಸಿಂಗ್ ನಿಜವಾದ ಅರ್ಥದಲ್ಲಿ ಯುವಕರಿಗೆ ಆದರ್ಶವಾಗಲೇಬೇಕಾಗಿದೆ.

ಭಗತ್‌ಸಿಂಗ್ ಇಷ್ಟು ದೃಡವಾಗಿ ಬೆಳೆಯಲು ಮುಖ್ಯವಾಗಿ ಎರಡು ಕಾರಣಗಳಿವೆ ಒಂದನೆಯದು ಅವನ ಕುಟುಂಬ ಮೂಲತಹ ಸ್ವತಂತ್ರ ಹೋರಾಟಗಾರರ ಕುಟುಂಬವಾಗಿದ್ದದ್ದು, ತಂದೆ ಕಿಷನ್‌ಸಿಂಗ್ ಮತ್ತು ತಾಯಿ ವಿದ್ಯಾವತಿ ಕೌರ್ ರವರಿಗೆ 1907 ಸೆಪ್ಟೆಂಬರ್ 28 ರಂದು ಜನಿಸಿದ. Rajguru with Bhagat Singh and Sukhdevಸಕ್ರೀಯ ಹೋರಾಟಗಾರರಾಗಿದ್ದ ಅವರ ಚಿಕ್ಕಪ್ಪನ ಮಾತುಗಳು ಮತ್ತು ಹೋರಾಟಗಳೇ ಭಗತ್‌ಗೆ ಸ್ಪೂರ್ತಿಯಾಗಿದ್ದವು. ಹಾಗಾಗಿಯೇ ಭಗತ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾಂಧಿಯ ಅಸಹಕಾರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ, ನಂತರ ಗಾಂಧಿ ಈ ಹೋರಾಟವನ್ನು ಹಿಂಪಡೆದಾಗ ಅತ್ಯಂತ ಅಸಮಧಾನಗೊಂಡಿದ್ದ. ಭಗತ್ ಒಂದು ಸ್ಪಷ್ಟ ರಾಜಕೀಯ ಕಣ್ಣೋಟವನ್ನು ಬೆಳಸಿಕೊಳ್ಳಲು ಕಾರಣವಾಗಿದ್ದು ಅವನ ಓದು. ಈತ ಜಗತ್ತಿನಲ್ಲಿ ನಡೆದ, ನಡೆಯುತ್ತಿದ್ದ ಎಲ್ಲ ಕ್ರಾಂತಿಗಳ ಬಗ್ಗೆ ಹೋದಲು ಪ್ರಾರಂಬಿಸಿದ ಇದರಲ್ಲಿ ಅವನಿಗೆ ಮಾರ್ಕ್ಸ್‌ವಾದ ಮತ್ತು ಲೆನಿನ್‌ರವರ ಸಾಹಿತ್ಯ, ಕಮ್ಯೂನಿಸಂ ಮತ್ತು ಕ್ರಾಂತಿಕಾರಿ ದರ್ಶನಗಳು ಅತ್ಯಂತ ಘಾಡವಾದ ಪ್ರಭಾವವನ್ನು ಬೀರಿದ್ದವು ಎಂಬುದಕ್ಕೆ ಅವನ ಮಾತುಗಳೇ ಪುಷ್ಟಿಕೊಡುತ್ತವೆ. ಇದೇ ಅವನಿಗೆ ಶಕ್ತಿಯನ್ನು, ನಂಬಿಕೆಯ ಸ್ತೈರ್ಯವನ್ನು ನೀಡಿತು.

ಭಗತ್‌ಸಿಂಗ್ ದೃಷ್ಟಿಯಲ್ಲಿ ‘ಬಡತನವನ್ನು ನಿರ್ಮೂಲನೆಗೊಳಿಸದ ಸ್ವತಂತ್ರ ಭಾರತ ಕೇವಲ ಹೆಸರಿಗಷ್ಟೇ ಸ್ವತಂತ್ರ. ಒಂದು ಯಥಾಸ್ಥಿತಿ ಇನ್ನೊಂದು ಯಥಾಸ್ಥಿತಿಗೆ ಪರ್ಯಾಯವಲ್ಲ. ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರಕ್ಕೆ ಏನು ಅರ್ಥ? ಬಡವರು ಬಡವರಾಗಿಯೇ ಉಳಿಯುವಂತಾದರೆ ಅಂಥ ಸ್ವಾತಂತ್ರದಿಂದ ಏನು ಪ್ರಯೋಜನ?’. ಆತ ಜೈಲಿನಿಂದ ತನ್ನ ತಾಯಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ. ‘ಅಮ್ಮಾ, ನನ್ನ ದೇಶ ಒಂದಲ್ಲಾ ಒಂದು ದಿನ ಸ್ರತಂತ್ರವಾಗುವುದೆಂಬ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಬಿಳಿಯ ಸಾಹೇಬರು ಖಾಲಿ ಮಾಡಿದ ಕುರ್ಚಿಗಳಲ್ಲಿ ಕರಿಯ ಸಾಹೇಬರು ಕುಳಿತುಕೊಳ್ಳುತ್ತಾರೆಂಬ ಭಯ ನನಗೆ.’ ಹೌದು ಸುಮಾರು 80 ವರ್ಷಗಳ ಹಿಂದೆ ಭಗತ್ ಸಿಂಗ್ ತನ್ನ ತಾಯಿಗೆ ಹೇಳಿದ ಮಾತುಗಳು ಇಂದು ಅಕ್ಷರಶ: ಸತ್ಯವಾಗಿದೆ. ಅಂದು ಭಗತ್‌ನ ಆತಂಕ ಇಂದು ದೇಶದ ಎಲ್ಲ ಬಡವರ ಆತಂಕವಾಗಿ ಮಾರ್ಪಾಟಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆಯುತ್ತಿದ್ದರೂ ಸ್ವತಂತ್ರ ಹೋರಾಟಗಾರರ ಕನಸಾಗಿದ್ದ ಬಡತನ ನಿರ್ಮೂಲನೆ, ಸಾಕ್ಷರತೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಇಂದಿಗೂ ಸಾಧ್ಯವಾಗಿಲ್ಲ. ಬದಲಾಗಿ ಬಡವ ಮತ್ತು ಸಿರಿವಂತರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಭಗತ್‌ಸಿಂಗ್‌ಗೆ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಾಗಿಸಬೇಕೆಂಬ ಲಜಪತ್‌ರಾಯ್ ಅವರ ವಿಚಾರವೇನಾದರು ಕಾರ್ಯಗತವಾದರೆ ಅದು ವಿನಾಶಕಾರಿಯಾಗುವುದೆಂಬ ಭಯ. ಅದರಿಂದ ರಕ್ತಪಾತವಾಗಬಹುದು. ಹಿಂದೂ ಮತ್ತು ಮುಸ್ಲಿಂ ದೇಶಗಳು ಸದಾ ಯುದ್ಧದಲ್ಲಿ ತೊಡಗುವಂತಾಗಬಹುದು. ಹಾಗಾದಲ್ಲಿ ಅವರ ಗಮನ ಹಾಗೂ ಸಂಪನ್ಮೂಲ ಪರಸ್ಪರ ಹೊಡೆದಾಡಲು ಆಯುಧಗಳನ್ನು ಕೊಳ್ಳುವುದಕ್ಕೇ ಮೀಸಲಾಗಬಹುದು Statues_of_Bhagat_Singh,_Rajguru_and_Sukhdevಎನ್ನುವ ಭಯ ಭಗತ್‌ನನ್ನು ಯಾವಾಗಲೂ ಕಾಡುತ್ತಿತ್ತು. ಅವರ ಅನುಮಾನಗಳಿಗೆ ನಾವುಗಳೇ ಇಂದು ಸಾಕ್ಷಿಗಳಾಗಿದ್ದೇವೆ. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ತಮ್ಮ ದೇಶಗಳ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದೇ ಪರಸ್ಪರ ದೇಶಗಳ ನಡುವಣ ಯುದ್ದಕ್ಕೆ ಹಾತೊರೆದು ನಿರಂತರ ಸಜ್ಜುಗೊಳ್ಳುತ್ತಿವೆ.

ಭಗತ್ ಧರ್ಮದ ಕುರಿತಾಗಿಯೂ ಒಂದು ಸ್ಪಷ್ಟ ಕಣ್ಣೋಟವನ್ನು ಬೆಳೆಸಿಕೊಂಡಿದ್ದ. ಅವನೇ ಹೇಳುವ ಪ್ರಕಾರ “ಧರ್ಮವೆನ್ನುವುದು ಇನ್ನೂ ಪರಿಪೂರ್ಣನಾಗಿರದ ಮನುಷ್ಯನಿಗೊಂದು ಆಸರೆ ಇದ್ದಂತೆ”. ಇಂದು ಭಾತರದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಗಲಭೆಗಳು ಮತ್ತು ಮಾರಣಹೋಮಗಳನ್ನು ನೋಡಿದರೆ ಭಗತ್‌ನ ಈ ಮುಂದಿನ ಮಾತುಗಳು ನೆನಪಿಗೆ ಬರುತ್ತವೆ. ಭಗತ್ ಮತ್ತು ಆತನ ಸಂಗಡಿಗರು 1925 ಏಪ್ರಿಲ್‌ನಲ್ಲಿ ಸ್ಥಾಪಿಸಿದ್ದ ನೌಜವಾನ್ ಭಾರತ್ ಸಭಾ ಸಂಘಟನೆಯ ಪ್ರಣಾಳಿಕೆಯಲ್ಲಿ ಒಂದು ಮಾತು ಇದೆ ಅದೇನೆಂದರೆ. ಮನುಷ್ಯನಿಗೆ ಪ್ರಾಣಿಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಇರಬೇಕು. ಆದರೂ ಈ ಭಾರತದಲ್ಲಿ ಜನರು ಪವಿತ್ರ ಪ್ರಾಣಿಗಳ ಹೆಸರಿನಲ್ಲಿ ಪರಸ್ಪರ ರುಂಡ ಚಂಡಾಡುತ್ತಾರೆ. ನೌಜವಾನ್ ಭಾರತ್ ಸಭಾದ ಪ್ರತಿಯೊಬ್ಬ ಸದಸ್ಯನೂ ಸದಸ್ಯತ್ವ ಹೊಂದುವ ಮುಂಚೆ ಸಮುದಾಯದ ಹಿತಕ್ಕಿಂತ ದೇಶದ ಹಿತವೇ ಮಿಗಿಲಾದದ್ದು ಎಂಬ ಪ್ರತಿಜ್ಞೆಗೆ ಸಹಿ ಹಾಕಬೇಕಿತ್ತು. ಹಲಾಲ್ ಮತ್ತು ಝಟ್ಕ ಮಾಂಸವನ್ನು ಒಟ್ಟಿಗೆ ಬೇಯಿಸಿ ಹಿಂದೂಗಳು, ಮುಸ್ಲಿಮರು, ಸಿಕ್ಕರು ತಿನ್ನುತ್ತಿದ್ದರು. ಇದರಿಂದ ಸ್ಪಷ್ಟವಾಗುವ ಒಂದು ಅಂಶವೆಂದರೆ ಭಗತ್ ಮತ್ತು ಸಂಗಡಿಗರು ಕೋಮು ಸೌಹಾರ್ಧತೆ ಮತ್ತು ಸಾಮರಸ್ಯಕ್ಕೆ ಕೊಡುತ್ತಿದ್ದ ಮಹತ್ವ ಮತ್ತು ಅದನ್ನು ಸ್ವತಃ ಕಾರ್ಯಗತಗೊಳಿಸಿದ ವಿಧಾನ ಇವೆಲ್ಲವುಗಳು ಇಂದು ಧರ್ಮದ ಅಮಲಿನಲ್ಲಿರುವ ಎಲ್ಲ ಧರ್ಮದ ಯುವಜನತೆಗು ಮಾದರಿಯಾಗಬೇಕಾದದ್ದು.

ಭಗತ್ ಸಿಂಗ್ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದ ಅವನ ಪ್ರಕಾರ ಕ್ರಾಂತಿಕಾರಿಯಾದವನಿಗೆ ಮಾನವೀಯ ಭಾವನೆಗಳೇ ಇರಬಾರದೆಂದಿಲ್ಲ. ಹಾಗೆ ನೋಡಿದರೆ ಆ ಭಾವನೆಗಳಿಂದಲೇ ಅವನು ಭಯೋತ್ಪಾದಕನಿಂದ ಬೇರೆಯಾಗುವುದು. ಅಂಥವನ ದೃಷ್ಟಿಯಲ್ಲಿ ಸಂವೇಧನೆಯ, ಅನುಕಂಪದ ಸ್ವಭಾವವೇ ಪ್ರತಿಗಾಮಿಗಳನ್ನು ತಡೆಹಿಡಿದು ಅವರು ಅನರ್ಥಕಾರಿ ಹಿಂಸೆಯಲ್ಲಿ ತೊಡಗದಂತೆ ಮಾಡಬಲ್ಲದು. ಅವನ ಈ ಮಾತುಗಳು ಪ್ರಸ್ತುತ ಸಮಾಜದಲ್ಲಿ ಕ್ರಾಂತಿಕಾರಿಗಳನ್ನು ಮಾನವೀಯತೆಯಿಲ್ಲದವರು ಮತ್ತು ಭಯೋತ್ಪಾದಕರು ಎಂದು ಬಿಂಬಿಸುತ್ತಿರುವ ವ್ಯವಸ್ಥಿತ ಅಪಪ್ರಚಾರಕ್ಕೆ ಉತ್ತರವಾಗಬಲ್ಲದು.

ಭಗತ್ ಸ್ವಾಮಿ ವಿವೇಕಾನಂದ ಮತ್ತು ರಾಮತೀರ್ಥರಿಂದಲೂ ಸ್ಪೂರ್ಥಿ ಪಡೆದಿದ್ದನು. ಅವನ ಪ್ರಕಾರ ’ರಾಮತೀರ್ಥ ಮತ್ತು ವಿವೇಕಾನಂದ ಇಬ್ಬರಿಗೂ ಮನುಷ್ಯ ನಿರ್ಧಾರದಲ್ಲಿ ನಂಬಿಕೆಯಿತ್ತೇ ಹೊರತು ಅವನ ಸ್ವಾರ್ಥದಲ್ಲಲ್ಲ. ನಿಜವಾದ ಪ್ರಗತಿಯಾಗುವುದು ನಿಜಕ್ಕೂ ಪ್ರತಿಯೊಬ್ಬ ವ್ಯಕ್ತಿಗೂ ಇಡೀ ಸಮುದಾಯದ ಒಳಿತಿಗಾಗಿ ವಿಕಾಸಗೊಳ್ಳಲು ಒಂದು ಅವಕಾಶ ದೊರೆತಾಗ ಮಾತ್ರ. ಎಂದು ತಿಳಿದಿದ್ದವನು ಭಗತ್‌ಸಿಂಗ್. ವ್ಯಕ್ತಿಯೊಬ್ಬ ತನ್ನ ಕ್ಷುಲ್ಲಕ ಆಸೆಗಳನ್ನು ಬದಿಗೊತ್ತಿ ಎಲ್ಲರ ಒಳಿತನ್ನು ಯೋಚಿಸುವುದಕ್ಕೆ ಯಾವ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಸಿದ್ದಾಂತ ಅವನಿಗೆ ನೆರವಾಗುತ್ತದೆ ಎಂಬುದೇ ನಿಜವಾದ ಒರೆಗಲ್ಲು.’ ಭಗತ್‌ನ ಈ ಆಲೋಜನೆ ಜಾಗತೀಕರಣ ಮತ್ತು ಉಧಾರೀಕರಣದ ಘಾಡ ಪ್ರಭಾವಕ್ಕೆ ಒಳಗಾಗಿ ಸ್ವಾರ್ಥವನ್ನೇ ತಮ್ಮ ಜೀವನದ ಪರಮಗುರಿಯನ್ನಾಗಿಸಿಕೊಳ್ಳುತ್ತಿರುವ, ಕೊಳ್ಳುಬಾಕ ಸಂಸ್ಕೃತಿಯನ್ನು ಮೈಗೋಡಿಸಿಕೊಳ್ಳುತ್ತಿರುವ, ಸಮಾಜದ ಬಗ್ಗೆ ಕಿಂಚಿತ್ತು ಆಲೋಚನೆ ಮಾಡದಂತಹ ಸ್ಥಿತಿಗೆ ತಲುಪುತ್ತಿರುವ ಇಂದಿನ ಯುವಜನತೆ ಕಲಿಯ ಬೇಕಾದ ಪಾಠ ಇದು.

“ನಾವು ದೇಶದ ಸ್ವಾತಂತ್ರಕ್ಕಾಗಿ ಹೋರಾಡ ಬಯಸಿದರೆ ಕಾರ್ಮಿಕರನ್ನು ರೈತರನ್ನು, ಸಾಮಾನ್ಯ ಜನರನ್ನು ಅಗ್ರಪಂಕ್ತಿಗೆ ತರಬೇಕು ಮತ್ತು ಈಗ ವಿದೇಶಿ ಆಳ್ವಿಕೆಯ ನೊಗದಿಂದ ಅಷ್ಟೇ ಅಲ್ಲ, ಆಸೆಬುರುಕ ಮಾಲೀಕರಿಂದ ಹಾಗೂ ನಿರುದ್ವಿಗ್ನ ಜಮೀನ್ದಾರರಿಂದ ಕೂಡಾ ಕಾರ್ಮಿಕರನ್ನು ಮತ್ತು ರೈತರನ್ನು ಬಿಡುಗಡೆಗೊಳಿಸುವ ಹೊಣೆ ಕ್ರಾಂತಿಕಾರಿಗಳ ಹೆಗಲ ಮೇಲಿದೆ” ಎಂದು ಭಗತ್‌ಸಿಂಗ್ ಯಾವಾಗಲೂ ಪ್ರತಿಪಾದಿಸುತ್ತಿದ್ದ.

“ಪ್ರಜಾಪ್ರಭುತ್ವವೆನ್ನುವುದು ಸೈದ್ದಾಂತಿಕವಾಗಿ ರಾಜಕೀಯ ಹಾಗೂ ಕಾನೂನುಗಳ ಸಮಾನತೆಗೆ ಸಂಬಂಧಿಸಿದ ಒಂದು ವ್ಯವಸ್ಥೆ. Bhagat_Singh_1922ಆದರೆ ಕಾರ್ಯ ಸಾಧನೆಯ ದೃಷ್ಟಿಯಿಂದ ನೋಡಿದಾಗ ಅದು ಅಸಮರ್ಪಕವೇ. ಎಲ್ಲಿಯವರೆಗೆ ಎದ್ದುಕಾಣುವ ಆರ್ಥಿಕ ಅಸಮಾನತೆ ಇರುವುದೋ ಅಲ್ಲಿಯವರೆಗೆ ರಾಜಕೀಯದಲ್ಲಾಗಲೀ ಕಾನೂನಿನ ಇದಿರಿನಲ್ಲಾಗಲಿ ಸಮಾನತೆಯಿರುವುದು ಸಾಧ್ಯವಿಲ್ಲ. ಎಲ್ಲಿಯವರೆಗೆ ಆಳುವ ವರ್ಗ ದೇಶದ ನೌಕರಿಗಳನ್ನು, ಪತ್ರಿಕಾರಂಗವನ್ನು, ಶಾಲೆಗಳನ್ನು ಮತ್ತು ಸಾರ್ವಜನಿಕ ಅಭಿಪ್ರಾಯದ ಅಂಗಗಳನ್ನು ನಿಯಂತ್ರಿಸುತ್ತದೋ, ಎಲ್ಲಿಯವರೆಗೆ ಅದು ತರಬೇತಿ ಪಡೆದ ಸಾರ್ವಜನಿಕ ಅಧಿಕಾರಿಗಳನ್ನು ಜಮಾಯಿಸಿಕೊಂಡು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಅಪಾರ ಹಣ ಖರ್ಚುಮಾಡುತ್ತದೋ, ಎಲ್ಲಿಯವರೆಗೆ ಖಾಸಗಿಯಾಗಿ ಪ್ರಾಕ್ಟೀಸು ಮಾಡುವ ಲಾಯರುಗಳು ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ತಮ್ಮ ಪರಿಣಿತಿಯನ್ನು ಮಾರಿಕೊಳ್ಳುತ್ತಾರೋ, ತತ್ಪರಿಣಾಮವಾಗಿ ಮೊಕದ್ದಮೆಗಳು ಪ್ರತ್ತೇಕವಾಗಿ ದುಬಾರಿಯಾಗುತ್ತವೆಯೋ ಅಲ್ಲಿಯವರೆಗೆ ಕಾನೂನಿನ ಮುಂದೆ ಕೇವಲ ಕನಿಷ್ಠ ಪ್ರಮಾಣದ ಸಮಾನತೆಯಷ್ಟೆ ಇರಲಿಕ್ಕೆ ಸಾಕು.” ಹೀಗೆಂದು ಭಗತ್‌ಸಿಂಗ್ ಮತ್ತು ಅವನ ಸಂಗಡಿಗರು, ಕ್ರಾಂತಿಕಾರಿಗಳು ನಂಬಿದ್ದರು ಮತ್ತು ಮಾತನಾಡುತ್ತಿದ್ದರು.

ಭಗತ್‌ಸಿಂಗ್ ಮತ್ತು ಆತನ ಸಂಗಡಿಗರ ಜೀವನ ವಿಧಾನ ಮತ್ತು ವಿಚಾರಗಳು ಇಂದಿನ ಯುವಜನತೆಗೆ ಸ್ಪೂರ್ತಿದಾಯಕವಾಗಿವೆ. ಅವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದರೆ, ಭಗತ್‌ಸಿಂಗ್ ಕಂಡ ಸಮಾನತೆಯ ಕನಸನ್ನು ನನಸು ಮಾಡಲು ದುಡಿದರೆ ಇದೇ ದೇಶಕ್ಕಾಗಿ ಹೋರಾಡಿ ನಗುನಗುತ್ತಲೇ ನೇಣುಗಂಬಕೆ ಪ್ರಾಣವ ನೀಡಿದ ಭಗತ್‌ಸಿಂಗ್, ಸುಖದೇವ್ ಮತ್ತು ರಾಜ್‌ಗುರುರವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಮತ್ತು ಶ್ರದ್ದಾಂಜಲಿ.