Daily Archives: April 2, 2015

ಸಂಘ ಪರಿವಾರ – ಹಿಂದೂ, ಹಿಂದುತ್ವ, ಹಿಂದೂಯಿಸಂ: ಮತೀಯವಾದಿ ಕುಟುಂಬ

ಟಿ ಬಿ.ಶ್ರೀಪಾದ ಭಟ್

ಹಿಂದುಸ್ತಾನದ ಈ ಮಾತೃಭೂಮಿಯನ್ನು ಯಾರು ಪಿತೃಭೂಮಿ ಮತ್ತು ಪವಿತ್ರಭೂಮಿಯನ್ನಾಗಿ ಮಾಡಿಕೊಂಡಿರುತ್ತಾರೋ ಅವರು ಮಾತ್ರ ಹಿಂದೂಗಳು.ಈ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳದ ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರು ಹಿಂದುಸ್ತಾನಕ್ಕೆ ಸೇರಿದವರಲ್ಲ– ವಿ.ಡಿ.ಸಾವರ್ಕರ್

ಹಿಂದುಸ್ತಾನದಲ್ಲಿರುವ ವಿದೇಶಿ ಜನಾಂಗಗಳು ( ಮುಸ್ಲಿಂರು,ಕ್ರೈಸ್ತರು) ಇಲ್ಲಿನ ಹಿಂದೂ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಹಿಂದೂ ಧರ್ಮಕ್ಕೆ ಗೌರವ ತೋರಿಸಬೇಕು. ಒಂದು ಧ್ವಜ,ಒಬ್ಬನೇ ನಾಯಕ,ಒಂದೇ ಸಿದ್ಧಾಂತ ಇದು ಆರೆಸೆಸ್ ಮೂಲಮಂತ್ರ. ಇದು ದೇಶದ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ– ಗೋಲ್ವರ್ಕರ್.

ಇಂಗ್ಲೆಂಡ್ ನ ನಿವಾಸಿಗಳು ಇಂಗ್ಲೀಷರು, ಜರ್ಮನಿಯ ನಿವಾಸಿಗಳು ಜರ್ಮನ್ನರು, ಅಮೇರಿಕಾದ ನಿವಾಸಿಗಳು ಅಮೇರಿಕನ್ನರು ಎಂದು ಒಪ್ಪಿಕೊಳ್ಳಬಹುದಾದರೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು…ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲದಿದ್ದರೆ ಭಾರತೀಯರೆಲ್ಲರೂ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜದ ನಿರ್ಮಾಣ ಅತ್ಯಗತ್ಯ — ಮೋಹನ್ ಭಾಗವತ್.

ಬಜರಂಗದಳವು ಹಿಂದೂಗಳನ್ನು ರಕ್ಷಿಸುವ ಸಂದರ್ಭದಲ್ಲಿ ಅವಶ್ಯಕತೆ ಉಂಟಾದಗಲೆಲ್ಲ ಹಿಂಸೆಯನ್ನು ಬಳಸಿಕೊಳ್ಳುತ್ತದೆ. ಹಾವು ನಮ್ಮನ್ನು ಕಚ್ಚಿದಾಗ ನಾವು ಅದನ್ನು ಸಾಯಿಸುವುದಿಲ್ಲವೇ? –ಸುಭಾಷ್ ಚೌಹಾಣ್, ಬಜರಂಗದಳದ ನಾಯಕ.

ಯುಪಿಎ ಸರ್ಕಾರವು ಬೀಫ್ ರಫ್ತಿನ ಮೂಲಕ ಪಿಂಕ್ ರೆವಲ್ಯೂಷನ್ ಅನ್ನು ಜಾರಿಗೊಳಿಸುತ್ತಿದೆ – ನರೇಂದ್ರ ಮೋದಿ.

ಒಂದು ವೇಳೆ ಹಿಂದೂ ರಾಜ್ ಎನ್ನುವ ಸಿದ್ಧಾಂತ ಅನುಷ್ಠಾನಗೊಂಡರೆ ಇದು ಈ ದೇಶದ ಬಲು ದೊಡ್ಡ ದುರ್ಘಟನೆ. ಹಿಂದೂಗಳು ಏನಾದರೂ ಹೇಳಿಕೊಳ್ಳಲಿ ಹಿಂದೂಯಿಸಂ ಸ್ವಾತಂತ್ರಕ್ಕೆ, ಸಮಾನತೆಗೆ, ಸಹೋದರತ್ವಕ್ಕೆ ಬಲು ದೊಡ್ಡ ಅಪಾಯ. ಹಿಂದೂ ರಾಜ್ ಅನ್ನು ಯಾವುದೇ ಬೆಲೆ ತೆತ್ತಾದರೂ ತಡೆಗಟ್ಟಬೇಕು– ಡಾ.ಬಿ.ಆರ್.ಅಂಬೇಡ್ಕರ್

ಮೇ 6, 1945ರಂದು ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಷನ್ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡುತ್ತಾ ಅಂಬೇಡ್ಕರ್ ಅವರು ಹೇಳುತ್ತಾರೆ “ಇಂಡಿಯಾದಲ್ಲಿ ಬಹುಸಂಖ್ಯಾತರೆಂದರೆ ರಾಜಕೀಯ ಬಹುಸಂಖ್ಯಾತರಲ್ಲ. ಇಂಡಿಯಾದಲ್ಲಿ ಬಹುಸಂಖ್ಯಾತ ತತ್ವವನ್ನು ವ್ಯಕ್ತಿಯ ಹುಟ್ಟಿನ ನೆಲೆಯಿಂದ ನಿರ್ಧರಿಸಲಾಗುತ್ತದೆ. ಇದು ರಾಜಕೀಯ ಬಹುಸಂಖ್ಯಾತರು ಮತ್ತು ಮತೀಯ ಬಹುಸಂಖ್ಯಾತರು ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ರಾಜಕೀಯ ಬಹುಸಂಖ್ಯಾತ ತತ್ವವು ಶಾಶ್ವತವಲ್ಲ. ಅದು ತಾತ್ಕಾಲಿಕವಾಗಿರುತ್ತದೆ. ಈ ಮಾದರಿಯ ಬಹುಸಂಖ್ಯಾತ ತತ್ವವು ಕಟ್ಟಲ್ಪಡುತ್ತದೆ, ಮುರಿಯಲ್ಲಡುತ್ತದೆ, ಮರಳಿ ಕಟ್ಟಲ್ಪಡುತ್ತದೆ. ಆದರೆ ಮತೀಯ ಬಹುಸಂಖ್ಯಾತ ತತ್ವವು ಒಂದು ನಿರ್ದಿಷ್ಟ ಗ್ರಹಿಕೆಯ ನೆಲೆಯಲ್ಲಿ ರೂಪಿಸಲಾಗುತ್ತದೆ ಮತ್ತು ಇದು ಶಾಶ್ವತವಾಗಿರುತ್ತದೆ. ಇದನ್ನು ನಾಶಪಡಿಸಬಹುದು. ಆದರೆ ಪರಿವರ್ತಿಸಲಾಗುವುದಿಲ್ಲ. ನಿರಂಕುಶ (absolute) ಮಾದರಿಯ ಬಹುಸಂಖ್ಯಾತ ತತ್ವವನ್ನು ತಿರಸ್ಕರಿಸಿ ಸಾಪೇಕ್ಷತೆಯ (relative) ಆಧಾರದ ಬಹುಸಂಖ್ಯಾತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ನಾನು ಹಿಂದೂಗಳನ್ನು ಕೇಳಿಕೊಳ್ಳುತ್ತೇನೆ. ಇದನ್ನು ಒಪ್ಪಿಕೊಳ್ಳದೆ ಹೋದರೆ ಅಲ್ಪಸಂಖ್ಯಾತರು ಇಂಡಿಯಾದ ಸ್ವಾತಂತ್ರವನ್ನು ತಡೆಹಿಡಿದಿದ್ದಾರೆ ಎನ್ನುವ ವಾದಕ್ಕೆ ಸಮರ್ಥನೆ ದೊರಕುವುದಿಲ್ಲ. ಈ ಮಾದರಿಯ ತಪ್ಪಾದ ಪ್ರಚಾರವು ಫಲ ಕೊಡಲಾರದು.”

ಸಂಘ ಪರಿವಾರ

ಆರೆಸ್ಸಸ್ – ಹಿಂದುತ್ವ ಐಡಿಯಾಜಿಯ ಮಾತೃ ಸಂಘಟನೆ. ( ಹೈಕಮಾಂಡ್)

ಬಿಜೆಪಿ – ರಾಜಕೀಯ ಪಕ್ಷ, ವಿ ಎಚ್ ಪಿ – ಧಾರ್ಮಿಕ ಘಟಕ, ಬಜರಂಗದಳ – ಮಿಲಿಟೆಂಟ್ ಘಟಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ – ವಿದ್ಯಾರ್ಥಿ ಸಂಘಟನೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್- ಸಾಹಿತ್ಯ ಕ್ಷೇತ್ರ, ದೀನ ದಯಾಳ್ ಸಂಶೋಧನ ಸಂಸ್ಥೆ, ಸೇವಾ ಭಾರತಿ, ವಿದ್ಯಾ ಭಾರತಿ, ಶಿಕ್ಷ ಭಾರತಿ, ಸರಸ್ವತಿ ವಿದ್ಯಾಮಂದಿರ, ಸರಸ್ವತಿ ಶಿಶುಮಂದಿರ, ವನವಾಸಿ ಕಲ್ಯಾಣ ಆಶ್ರಮ – ಬುಡಕಟ್ಟು ಜನರಿಗಾಗಿ, ಏಕಲ ವಿದ್ಯಾಲಯ, ವಿಕಾಸ ಭಾರತಿ, ಸಂಸ್ಕೃತ ಭಾರತಿ, ಜನಸೇವಾ ವಿದ್ಯಾಕೇಂದ್ರ, ಭಾರತೀಯ ಇತಿಹಾಸ ಸಂಕಲನಾ ಯೋಜನೆ, ರಾಷ್ಟ್ರೋತ್ಥಾನ ಸಾಹಿತ್ಯ, ವಿವೇಕಾನಂದ ಕೇಂದ್ರ, ಸ್ವದೇಶಿ ಜಾಗರಣ ಮಂಚ್, ಹಿಂದೂ ಜಾಗರಣ ಮಂಚ್, ಭಾರತ ವಿಕಾಸ್ ಪರಿಷತ್, ಭಾರತೀಯ ಮಜ್ದೂರ ಸಂಘ, ಭಾರತೀಯ ಕಿಸಾನ ಸಂಘ, ರಾಷ್ಟ್ರೀಯ ಸೇವಿಕಾ ಸಮಿತಿ.

ಅನಿವಾಸಿ ಭಾರತೀಯರಿಗಾಗಿ

ಭಾರತೀಯ ಸ್ವಯಂ ಸೇವಕ ಸಂಘ, ಹಿಂದೂ ಸ್ವಯಂ ಸೇವಕ ಸಂಘ, Overseas Friends of the BJP, ವಿ ಎಚ್ ಪಿ ಅಮೇರಿಕ, IDR

ಮೇಲ್ನೋಟಕ್ಕೆ ಅಬ್ಬರದಿಂದ ಸದಾ ದ್ವೇಷದ ಧ್ವನಿಯಲ್ಲಿ ಮಾತನಾಡುವ ಆರೆಸ್ಸಸ್ ಗೆ ಯಾವುದೇ ರೀತಿಯ ಜನ ಬೆಂಬಲವಿಲ್ಲ. RSS_meeting_1939ಆರೆಸ್ಸಸ್ ನಲ್ಲಿ ಜನನಾಯಕರಿಲ್ಲ. ಇತಿಹಾಸದ ಅನ್ಯಾಯಗಳಿಗೆ ಪ್ರತೀಕಾರವನ್ನು ತೀರಿಸಿಕೊಳ್ಳಬೇಕು ಎಂದು ದ್ವೇಷದ ಚಿಂತನೆಯನ್ನು ಬೋಧಿಸುವ ಆರೆಸ್ಸಸ್ ಹೊಸತನ್ನು ಚಿಂತಿಸಲು ನಿರಾಕರಿಸುತ್ತದೆ. ಜೀವಪರ ಆಧುನಿಕ ಚಿಂತನೆಗಳನ್ನು, ಅರ್ಥಪೂರ್ಣ ಬದಲಾವಣೆಗಳನ್ನು ತಿರಸ್ಕರಿಸುವ ಆರೆಸ್ಸಸ್ ಸ್ವತಃ ತನ್ನ ದೇಶದಲ್ಲಿಯೇ ಯಾವುದೇ ನೆಲೆಯಿಲ್ಲದ ಒಂದು ಮತೀಯವಾದಿ ಸಂಘಟನೆ. ಜನಸಾಮಾನ್ಯರ ಪಾಲಿಗೆ ಎಂದೋ ತಿರಸ್ಕೃತಗೊಂಡ ಗೋಳ್ವಲ್ಕರ್, ಸಾವರ್ಕರ್ರಂತಹವರ ಫ್ಯಾಸಿಸ್ಟ್ ಚಿಂತನೆಯನ್ನು ಎಂಬತ್ತು ವರ್ಷಗಳಿಂದ ಆರಾಧಿಸುತ್ತಿರುವ ಆರೆಸ್ಸಸ್ ತನ್ನೊಳಗೆ ಸಂಪೂರ್ಣವಾಗಿ ಟೊಳ್ಳಾದ, ದಿವಾಳಿಯಾದ, ಕೇವಲ ಕರ್ಮಠ ನೀತಿಗಳನ್ನು ನಂಬುವ ಬೌದ್ಧಿಕ ವಲಯವನ್ನು ಬೆಳೆಸಿಕೊಂಡಿದೆ. ವ್ಯಕ್ತಿ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯಾತೀತತೆ, ಧರ್ಮನಿರಪೇಕ್ಷತೆ ಎನ್ನುವ ಪದಗಳು ಮತ್ತು ಜೀವನ ಕ್ರಮವನ್ನು ಆರೆಸ್ಸಸ್ ತಿರಸ್ಕರಿಸುತ್ತದೆ ಮತ್ತು ಸಂಪೂರ್ಣವಾಗಿ ನಿಷೇದಿಸುತ್ತದೆ. ಮಾತೃಭೂಮಿಯ ಕುರಿತಾಗಿ ಭಾವೋದ್ರೇಕದಿಂದ ಮಾತನಾಡುವ ಆರೆಸ್ಸಸ್ ಮಾತೃಭೂಮಿಯನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಲು ನಡೆದ ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೇ ಇಲ್ಲ. ಆ ಸಂದರ್ಭದಲ್ಲಿ ವಿತಂಡವಾದದಿಂದ ವರ್ತಿಸಿದ ಆರೆಸ್ಸಸ್ ಹಿಟ್ಲರ್ ನ ನಾಜಿ ಪಕ್ಷವನ್ನು ಬೆಂಬಲಿಸಿತು.

ಆರೆಸ್ಸಸ್ ಸಂಘಟನೆಯು ‘ಭಗವದ್ವಜ’ವನ್ನು ತನ್ನ ಅಧಿಕೃತ ಧ್ವಜವನ್ನಾಗಿ ಆರಿಸಿಕೊಂಡಿದೆ. ಓಂ, ಸ್ವಸ್ತಿಕ್, ಖಡ್ಗದ ಚಿತ್ರವಿರುವ ಕೇಸರಿ ಧ್ವಜವೇ ಹಿಂದೂ ರಾಷ್ಟ್ರದ ಧ್ವಜವಾಗಲಿದೆ. ಅದು ವೇದ ಕಾಲಗಳ ಸನಾತನ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ಸಾವರ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದರು. ಬೇರೆ ಸಮುದಾಯಗಳಿಗೆ, ಅನ್ಯಧರ್ಮೀಯರಿಗೆ ವಂದೇ ಮಾತರಂ ಹಾಡಬೇಕೆಂದು ಆಗ್ರಹಿಸುವ ಆರೆಸ್ಸಸ್ ತನ್ನ ಬೈಠಕ್ ಗಳಲ್ಲಿ, ಪ್ರತಿಯೊಂದು ಸಭೆಗಳಲ್ಲಿ, ಚಿಂತನಮಂಥನಗಳಲ್ಲಿ ಹಾಡುವುದು ಹೆಡ್ಗೇವಾರ್, ಗೋಳ್ವಲ್ಕರ್ ಮಾರ್ಗದರ್ಶನದಲ್ಲಿ ನಾರಾಯಣ ಭಿಡೆ ಸಂಸ್ಕೃತದಲ್ಲಿ ರಚಿಸಿದ ನಮಸ್ತೆ ಸದಾ ವತ್ಸಲೆ, ಮಾತೃಭೂಮಿ, ತ್ವಯಾ ಹಿಂದೂಭೂಮಿ ಎಂದು ಪ್ರಾರಂಭವಾಗುವ ಮತೀಯವಾದಿ ಪ್ರಾರ್ಥನಾ ಗೀತೆಯನ್ನು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರೆಸ್ಸಸ್ ಮೂರು ಬಾರಿ ನಿಷೇಧಕ್ಕೆ ಒಳಗಾಗಿತ್ತು.

1948ರಲ್ಲಿ ಮಹಾತ್ಮ ಗಾಂಧಿಯನ್ನು ಇದರ ಸಹಯೋಗಿ ಸಂಘಟನೆ ‘ಹಿಂದೂ ಮಹಾ ಸಭಾ’ದ ಸದಸ್ಯ ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದಾಗ 1948 ಇದರ ಚಟುವಟಿಕೆಗಳನ್ನು ನಿಷೇಧಿಸಲಾಯಿತು.

1975-1977 ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆರೆಸ್ಸಸ್ ನಿಷೇಧಕ್ಕೆ ಒಳಗಾಗಿತ್ತು.

1993ರ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ನಿಷೇಧಕ್ಕೆ ಒಳಗಾಗಿತ್ತು.

2006ರಲ್ಲಿ ಮಾಲೆಗಾವ್ ನಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ( 30 ಜನರ ಸಾವು), 2007ರಲ್ಲಿ ಸಂಜೋತ ಎಕ್ಸಪ್ರೆಸ್ ಸ್ಪೋಟ ( 60 ಜನರ ಸಾವು), 2007ರಲ್ಲಿ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಪೋಟ (24 ಜನರ ಸಾವು), 2007ರಲ್ಲಿ ಅಜ್ಮೀರ ದರ್ಗಾ ಸ್ಪೋಟ( 3 ಜನರ ಸಾವು) ಈ ಎಲ್ಲಾ ಭಯೋತ್ಪಾದನೆಯ ದುಷ್ಕೃತ್ಯಗಳ ಹಿಂದೆ ಆರೆಸ್ಸಸ್ ನ ಕೈವಾಡವಿದೆ, ಇದರೊಂದಿಗೆ ಇತರೆ ಹಿಂದುತ್ವ ಗುಂಪುಗಳು ಕೈಜೋಡಿಸಿವೆ ಎಂದು ಆರೆಸ್ಸಸ್ನ ಹಿರಿಯ ಸದಸ್ಯ ಸ್ವಾಮಿ ಅಸ್ಸೀಮಾನಂದ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೆಯ ಹೇಳಿಕೆ ಕೊಟ್ಟಿದ್ದ. ಈ ದುಷ್ಕೃತ್ಯಗಳ ತನಿಖೆ ನಡೆಸುತ್ತಿರುವ ತನಿಖಾ ತಂಡ ಈ ಭಯೋತ್ಪಾದನೆಯ ಆರೋಪಕ್ಕೆ ಗುರಿಯಾಗಿರುವ ಅಸ್ಸೀಮಾನಂದ, ಸಾಧ್ವಿ ಪ್ರಜ್ಞಾಸಿಂಗ್, ಲೆ.ಕರ್ನಲ್ ಪುರೋಹಿತ್, ಚಂದ್ರಪ್ರತಾಪ್ ಸಿಂಗ್ ಠಾಕೂರ್ ಇನ್ನೂ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದೆ. ವಿಚಾರಣೆ ಮುಂದುವರೆಯುತ್ತಿದೆ.

ಇನ್ನು ಕಳೆದ ಐವತ್ತು ವರ್ಷಗಳಲ್ಲಿ ಆರೆಸಸ್ ನ ಬಲಿಷ್ಠ ಅಂಗ ಪಕ್ಷಗಳಾದ ಬಿಜೆಪಿ, ಬಜರಂಗದಳ, ವಿ ಎಚ್ ಪಿಗಳು ನಡೆಸಿದ ಹಿಂಸಾಚಾರ, ಮತೀಯ ಗಲಭೆಗಳು, ಹತ್ಯಾಕಾಂಡಗಳ ಕುರಿತಾಗಿ ತನಿಖೆ ನಡೆಸಿದ, ನಡೆಸುತ್ತಿರುವ ಕೆಲವು ಆಯೋಗಗಳ ವಿವರ ಈ ರೀತಿ ಇದೆ

1969ರಲ್ಲಿ ಅಹಮದಾಬಾದ್ನಲ್ಲಿ ನಡೆದ ಗಲಭೆೆಗಳ ತನಿಖೆಗಾಗಿ ಜಗಮೋಹನ್ ರೆಡ್ಡಿ ಕಮಿಷನ್, 1970ರಲ್ಲಿ ಭಿವಂಡಿಯಲ್ಲಿ ನಡೆದ ಕೋಮು ಗಲಭೆಗಳ ತನಿಖೆಗಾಗಿ ಮದನ್ ಕಮಿಷನ್, 1971ರಲ್ಲಿ ತೆಲ್ಲಿಚೆರಿ ಕೋಮು ಗಲಭೆಗಳ ತನಿಖೆಗಾಗಿ ವಿಠ್ಯಾತಿಲ್ ಕಮಿಷನ್, 1979ರಲ್ಲಿ ಜೆಮ್ಶೆಡ್ಪುರನಲ್ಲಿ ನಡೆದ ಗಲಭೆಗಳ ತನಿಖೆಗಾಗಿ ಜಿತೇಂದ್ರ ನಾರಾಯಣ ಕಮಿಷನ್, 1982ರಲ್ಲಿ ಕನ್ಯಾಕುಮಾರಿಯಲ್ಲಿ ನಡೆದ ಕೋಮು ಗಲಬೆಗಳ ತನಿಖೆಗಾಗಿ ಪ.ವೇಣುಗೋಪಾಲ್ ಕಮಿಷನ್, ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಹತ್ಯಾಕಾಂಡದ ಸಂಬಂಧ ಲಿಬರ್ ಹಾನ್ ಕಮಿಷನ್ ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನು ಮತ್ತು 2002ರ ಗುಜರಾತ್ ಹತ್ಯಾಕಾಂಡದ ಸಂಬಂಧದ ತನಿಖೆಗಳು ಇಂದಿಗೂ ಪ್ರಗತಿಯಲ್ಲಿವೆ.

ಈ ಆರೆಸ್ಸಸ್ ಸಂಘಟನೆಯನ್ನು ಒಂದು ಸೀಕ್ರಟ್ ಸೊಸೈಟಿ ಎಂದು ಹೇಳಿದ ನೆಹರೂ ಅವರು ಮುಂದುವರೆದು ಆರೆಸ್ಸಸ್ ಮೂಲಭೂತವಾಗಿ ಸಾರ್ವಜನಿಕ ಮುಖವಾಡವನ್ನು ಹೊಂದಿದ ಒಂದು ಸೀಕ್ರೆಟ್ ಸಂಸ್ಥೆ. ಈ ಆರೆಸ್ಸಸ್ ಸಂಸ್ಥೆಯಲ್ಲಿ ಸದಸ್ಯರಿಲ್ಲ, ನೊಂದಣಿ ಇಲ್ಲ, ಅಸಂಖ್ಯಾತ ದೇಣಿಗೆಯನ್ನು ಪಡೆಯುತ್ತಿದ್ದರೂ ಅಲ್ಲಿ ಲೆಕ್ಕಪತ್ರಗಳಿಲ್ಲ, ಆರೆಸ್ಸಸ್ ಸಂಘಟನೆಗೆ ಶಾಂತಿಯುತ ವಿಧಾನಗಳಲ್ಲಿ ನಂಬಿಕೆ ಇಲ್ಲ ಇದು ಸತ್ಯಾಗ್ರಹ ನೀತಿಗೆ ವಿರೋಧಿ. ಸಾರ್ವಜನಿಕವಾಗಿ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗಿ ಖಾಸಗಿಯಾಗಿ ನಡೆದುಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ನಿಜಕ್ಕೂ ಆರೆಸ್ಸಸ್ ಒಂದು ಸೀಕ್ರೆಟ್ ಸೊಸೈಟಿ. ಹಿಂದೂ ರಾಷ್ಟ್ರ ನಿರ್ಮಾಣ ಎನ್ನುವುದು ಆರೆಸ್ಸಸ್ ನ ಸಾರ್ವಜನಿಕ ಅಜೆಂಡವಾದರೆ ಅದರ ಗುಪ್ತ ಅಜೆಂಡ ಇಂದಿಗೂ ರಹಸ್ಯಮಯವಾಗಿದೆ. ವರ್ಣಾಶ್ರಮದ ಶ್ರೇಣೀಕೃತ ಸಮಾಜದ ಕನಸನ್ನು ಕಾಣುತ್ತಿರುವ ಆರೆಸ್ಸಸ್ ಅದರ ಅನುಷ್ಠಾನಕ್ಕಾಗಿ ಕಳೆದ ಎಂಬತ್ತು ವರ್ಷಗಳ ಕಾಲ ತನ್ನ ಇಡೀ ಸಂಘಟನೆಯನ್ನು ಒಂದು ಸೀಕ್ರೆಟ್ ಸೊಸೈಟಿ ಮಾದರಿಯಲ್ಲಿ ರೂಪಿಸಿತು. ಇಂದಿಗೂ ಆರೆಸ್ಸಸ್ ನ ಪ್ರಮುಖ ಸಂಚಾಲಕರು, ಮುಖ್ಯಸ್ಥರು ತಮ್ಮ ವ್ಯಕ್ತಿತ್ವದ ಆಳದಲ್ಲಿ ಅತ್ಯಂತ ನಿಗೂಢವಾಗಿ ವರ್ತಿಸುತ್ತಾರೆ. ಇಂಡಿಯಾದ ಸಂವಿಧಾನವನ್ನು ತಿರಸ್ಕರಿಸುವುದು ಸಹ ಇವರ ಸೀಕ್ರೆಟ್ ಅಜೆಂಡಾಗಳಲ್ಲೊಂದು.

ಇದಕ್ಕೆ ಇತಿಹಾಸವಿದೆ.

ಮಾನವೀಯತೆಯನ್ನು, ಜನಪರ ತತ್ವಗಳನ್ನು, ಅಹಿಂಸೆಯನ್ನು ಬೋಧಿಸಿದ ಬೌದ್ಧ ಧರ್ಮವನ್ನು ನಂತರ ಬಂದ ಭ್ರಾಹ್ಮಣ್ಯದ, ಸನಾತನವಾದಿ ಶಂಕರಾಚಾರ್ಯ ಬೇರು ಸಮೇತ ಕಿತ್ತು ಹಾಕಲು ನಿರ್ಧರಿಸಿ ಇದಕ್ಕೆ ಮುನ್ನುಡಿಯಾಗಿ ಶೂದ್ರರಿಗೆ ಶಿಕ್ಷಣವನ್ನು ನಿರಾಕರಿಸಿದ (ಆಗ ಈ ಹಿಂದೂ ಧರ್ಮ ಎನ್ನುವುದು ಇರಲಿಲ್ಲ.RSS ವರ್ಣಾಶ್ರಮ ಪದ್ಧತಿ ಆಚರಣೆಯಲ್ಲಿತ್ತು). ದಕ್ಷಿಣದಲ್ಲಿ ಪಲ್ಲವರು ಮತ್ತು ಉತ್ತರದಲ್ಲಿ ಚಾಲುಕ್ಯ ರಾಜಮನೆತನವನ್ನು ಬಳಸಿಕೊಂಡು ಬೌದ್ಧ ಧರ್ಮವನ್ನು ನಿರ್ಣಾಮ ಮಾಡಿದ್ದು ಈ ಶಂಕರಾಚಾರ್ಯ. ಬೌಧ್ಧರ ನಾಗಾರ್ಜುನಕೊಂಡವನ್ನು ತನ್ನ ಅನುಯಾಯಿಗಳ ಮತ್ತು ಮೇಲ್ಕಾಣಿಸಿದ ರಾಜಮನೆತನಗಳ ಬೆಂಬಲದಿಂದ ಧ್ವಂಸಗೊಳಿಸಿದ. ಅಲ್ಲಿನ ಸ್ತೂಪಗಳು, ಬೌದ್ಧ ವಿಗ್ರಹಗಳನ್ನು ಧ್ವಂಸ ಮಾಡಿದ ಕೀರ್ತಿ ಈ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಇದು ಮುಂದುವರೆದು ಉತ್ತರ ಭಾರದಾದ್ಯಾಂತ ಬೌದ್ಧ ಧರ್ಮದ ಎಲ್ಲಾ ಸ್ತೂಪಗಳು, ಸ್ಮಾರಕ, ಗ್ರಂಥಗಳನ್ನು ನಾಶಪಡಿಸಲಾಯಿತು. ಈ ಶಂಕರಾಚಾರ್ಯರಿಂದ ಪ್ರಾರಂಭಗೊಂಡ ಅನ್ಯ ಧರ್ಮೀಯರ ವಿರುದ್ಧದ ದಾಳಿ ಮತ್ತು ಹಲ್ಲೆ ಇಪ್ಪತ್ತನೇ ಶತಮಾನದ ಚರ್ಚ ಮತ್ತು ಮಸೀದಿಗಳ ಧ್ವಂಸದವರೆಗೂ ಮುಂದುವರೆದು ಡಿಸೆಂಬರ್ 3, 2014ರಲ್ಲಿ ದೆಹಲಿಯ ಸೇಂಟ್ ಸೆಬಾಸ್ಟಿಯನ್ ಚರ್ಚ ಅನ್ನು ಧ್ವಂಸಗೊಳಿಸಲಾಗಿದೆ. ಡಿಸೆಂಬರ್ 11 2014ರಂದು ಲೂಧಿಯಾನದ ಕಲವರಿ ಚರ್ಚನ ಮೇಲೆ ದಾಳಿ ಮಾಡಲಾಗಿದೆ. ಕಂಧಮಾಲ್ ನಲ್ಲಿ ಹಿಂದೂ ಸ್ವಾಮಿಯೊಬ್ಬರನ್ನು ಭೂಗತ ಹೋರಾಟಗಾರರು ಹತ್ಯೆ ಮಾಡಿದರೆ ಸಂಘ ಪರಿವಾರ ಪ್ರತೀಕಾರವಾಗಿ ಅಲ್ಲಿನ ಚರ್ಚಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿತು. ಕ್ರಿಶ್ಚಿಯನ್ನರ ಮೇಲೆ ಪ್ರಾಣಾಂತಿಕ ಹಲ್ಲೆ ನಡೆಸಿತು. ಮೂಲಭೂತವಾಗಿ ‘ಭ್ರಾಹ್ಮಣ್ಯ’ದ ಧರ್ಮವನ್ನು ಹಿಂದೂಯಿಸಂನ ಐಡೆಂಟಿಟಿಯಾಗಿ ರೂಪಿಸಿದ್ದು ಆರೆಸ್ಸಸ್. ಈ ಭ್ರಾಹ್ಮಣ್ಯದ ಐಡೆಂಟಿಟಿಯನ್ನು ತೊಬತ್ತರ ದಶಕದವರೆಗೂ ಕಾಯ್ದುಕೊಂಡು ಬರಲಾಯಿತು. ಆದರೆ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಶೂದ್ರ ಸಮುದಾಯದ ಶಕ್ತಿ ರಾಜಕಾರಣವನ್ನು ಸಂಪೂರ್ಣವಾಗಿ ಬಳಸಿಕೊಂಡ ಆರೆಸ್ಸಸ್ ಇಂದು ಅನುಕೂಲಸಿಂಧು ರಾಜಕಾರಣದ ನೆಲೆಯಲ್ಲಿ ಒಳಗೊಳ್ಳುವಿಕೆಯ ಮಾತನಾಡುತ್ತಿದೆ.

ಆರೆಸ್ಸಸ್ ರಾಜಕೀಯ ಪಕ್ಷವಾದ ಬಿಜೆಪಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಕೊಡುವುದಿಲ್ಲ. ಆರೆಸ್ಸಸ್ ಬಯಸುವುದು ತನ್ನ ಐಡಿಯಾಜಿಯನ್ನು ರಾಜಕೀಯ ನೆಲೆಯಲ್ಲಿ ವಿಸ್ತರಿಸುವುದಕ್ಕಾಗಿ ಬಿಜೆಪಿ ಪಕ್ಷ ಕಾನೂನುಗಳನ್ನು ರೂಪಿಸಬೇಕು. ತಾನು ಸ್ವತಃ ರಾಜಕೀಯವನ್ನು ಪ್ರವೇಶಿಸಲು ನಿರಾಕರಿಸುವ ಆರೆಸ್ಸಸ್ ‘ನಮ್ಮ ಸಾಂಸ್ಕೃತಿಕ ನೀತಿಗಳೇ ನಮ್ಮ ರಾಜಕೀಯ’ ಎಂದು ಹೇಳುತ್ತದೆ. ತನ್ನ ಐಡಿಯಾಲಜಿಯನ್ನು ಪ್ರಶ್ನಿಸುವುದಿರಲಿ, ಚರ್ಚೆಗೆ ಎಳೆದುತಂದವರನ್ನು ನಿರ್ದಾಕ್ಷೀಣ್ಯವಾಗಿ ಹೊರ ತಳ್ಳುತ್ತದೆ ಆರೆಸ್ಸಸ್. ಉದಾಹರಣೆಗೆ ಜನಸಂಘ ರಾಜಕೀಯ ಪಕ್ಷವಾಗಿದ್ದ ಎಪ್ಪತ್ತರ ದಶಕದಲ್ಲಿ ಆಗಿನ ಅಧ್ಯಕ್ಷ ಬಲರಾಜ್ ಮಾಧೋಕ್ ಅವರು ಜನಸಂಘದ ಪಧಾದಿಕಾರಿಗಳನ್ನು ಆರೆಸ್ಸಸ್ ಸಂಘಟನೆಯಿಂದ ಹೇರುವುದನ್ನು ನಿಲ್ಲಿಸಿ ಜನಸಂಘದ ಒಳಗಡೆಯಿಂದಲೇ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದರು. ಆ ಕೂಡಲೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಡ್ವಾನಿ ಜಿನ್ನಾ ಅವರನ್ನು ಪ್ರಶಂಸಿದ ಕಾರಣಕ್ಕೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಪದಚ್ಯುತಿಗೊಳಿಸಲಾಯಿತು. ತೀರಾ ಇತ್ತೀಚೆಗೆ ಆರೆಸ್ಸಸ್ ವಿರುದ್ಧ ಭಿನ್ನ ರಾಗ ಹಾಡಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಯಿತು.

ಇತಿಹಾಸಕಾರ ಡಿ.ಆರ್.ಗೋಯಲ್ ಅವರು ‘ಒಂದು ಕಾಲದ ಜನಸಂಘ ಅಥವಾ ಇಂದಿನ ಬಿಜೆಪಿ ಅದು ಬೆಳವಣಿಗೆ ಕಂಡುಕೊಳ್ಳುವುದು ರಾಜಕೀಯವಾಗಿ ಅಲ್ಲ, ಆರೆಸ್ಸಸ್ ಸಂಘಟನೆಯಲ್ಲಿ ಮಾತ್ರ. ಏಕೆಂದರೆ ಆರೆಸ್ಸಸ್ ಅದಕ್ಕೆ ಜನ್ಮ ನೀಡಿದ್ದು, ಹೀಗಾಗಿ ಆರೆಸ್ಸಸ್ ಗೆ ಶರಣಾಗಲೇಬೇಕು. ಬಿಜೆಪಿ ಪಕ್ಷವು ನಾವು ವಿಭಿನ್ನ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಹೇಳಿದರೂ ವಾಸ್ತವದಲ್ಲಿ ಆರೆಸ್ಸಸ್ ಅನ್ಯ ಸಂಸ್ಕೃತಿಯನ್ನು ಮಾನ್ಯ ಮಾಡಿರುವುದೇ ಇಲ್ಲ. ಸಾರ್ವಜನಿಕ ಹೇಳಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗುತ್ತದೆ, ಆಚರಣೆಗೆ ಆಲ್ಲ. ಉದಾಹರಣೆಗೆ ಗುಜರಾತ್ ಹತ್ಯಾಕಾಂಡ ನಡೆದ 2002ರ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಾರ್ವಜನಿಕವಾಗಿ ರಾಜಧರ್ಮ ಪಾಲಿಸುವಂತೆ ಹೇಳಿಕೆ ಇತ್ತರು. ಆದರೆ ಆಚರಣೆಯಲ್ಲಿ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿಲ್ಲ. ತನ್ನ ಐಡಿಯಾಲಜಿಯನ್ನು ಸಹಿಸಿಕೊಳ್ಳುವ ನಾಯಕ ಇರುವವರೆಗೂ ಆರಸ್ಸಸ್ ಸಂತುಷ್ಟದಿಂದಿರುತ್ತದೆ’ ಎಂದು ಹೇಳುತ್ತಾರೆ. ಇದು ನಿಜ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಸರ್ಕಾರವು ಯಾವುದೇ ಬಗೆಯ ಅಸಹನೆ, ಹಲ್ಲೆಗಳನ್ನು ಸಹಿಸುವುದಿಲ್ಲ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ’ ಎಂದು ಹೇಳಿಕೆ ಇತ್ತರು. ಆರೆಸ್ಸಸ್ ಅದನ್ನು ಹೇಳಿಕೆ ಮಟ್ಟದಲ್ಲಿಯೇ ಇರಲು ಬಯಸುತ್ತದೆ. ಆಚರಣೆಯಲ್ಲಿ ಅಲ್ಲ.ಇದು 56 ಇಂಚಿನ ಎದೆಯ ಮೋದಿಗೂ ಸಹ ಗೊತ್ತು. ಇದು ಕೋಮುವಾದದ ಮನಸ್ಥಿತಿ, ಚಹರೆ, ಸ್ವರೂಪ.

ಕೋಮುವಾದವೆಂದರೆ ಅದು ಒಂದು ಐಡೆಂಟಿಟಿ ರಾಜಕೀಯ. ದ್ವೇಷದ,ಹಗೆತನದ ರಾಜಕೀಯ. ಇಲ್ಲಿ ಈ ಐಡೆಂಟಿಟಿಯು ಸ್ಪಷ್ಟವಾಗಿ ಧಾರ್ಮಿಕ ನೆಲೆಯನ್ನು ಅವಲಂಬಿಸುತ್ತದೆ. ಈ ಕೋಮುವಾದವು ‘ನಾವು’ ಮತ್ತು ‘ಅವರು’ ಎಂದು ಎರಡು ಧರ್ಮಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಕೋಮುವಾದ ಶಕ್ತಿಗಳು ಬಲಿಷ್ಠಗೊಂಡಂತೆ ಈ ಗೆರೆಯು ಒಂದು ಗೋಡೆಯಾಗಿ ಬೆಳೆಯುತ್ತ ಹೋಗುತ್ತದೆ. ಈ ಕೋಮುವಾದವು ತನ್ನ ಧಾರ್ಮಿಕ ಶ್ರೇಷ್ಠತೆಯನ್ನು ವೈಭವೀಕರಿಸುತ್ತಲೇ ಅನ್ಯ ಧರ್ಮ ಮತ್ತು ಅನ್ಯ ಧರ್ಮೀಯರನ್ನು ದ್ವೇಷಿಸುತ್ತಾ ಬಹುಸಂಖ್ಯಾತ ತತ್ವವನ್ನು ಸಾರ್ವಜನಿಕವಾಗಿ ಬಿತ್ತುತ್ತಿರುತ್ತದೆ. ಸಮಾಜದಲ್ಲಿ ಕೋಮುಗಲಭೆಗಳನ್ನು ಹುಟ್ಟು ಹಾಕುವುದರ ಮೂಲಕ ಅಧಿಕಾರವನ್ನು ಪಡೆದುಕೊಳ್ಳುವುದು ಈ ಕೋಮುವಾದದ ಮತ್ತೊಂದು ಮಾದರಿಗಳಲ್ಲೊಂದು. ಚಿಂತಕರು ಇಂಡಿಯಾದಲ್ಲಿ ಹಿಂದೂ ಕೋಮುವಾದವನ್ನು ಫ್ಯಾಸಿಸ್ಟ್ ನ ಮತ್ತೊಂದು ಮುಖವೆಂದೇ ಬಣ್ಣಿಸುತ್ತಾರೆ. ತನ್ನ ಧರ್ಮವನ್ನು ಶ್ರೇಷ್ಠವೆಂದು ಪರಿಗಣಿಸುವ ಈ ಧಾರ್ಮಿಕ ಐಡೆಂಟಿಟಿಯನ್ನು ಒಂದು ಫ್ಯಾಸಿಸ್ಟ್ ಶಕ್ತಿಯಾಗಿ ಕ್ರೋಢೀಕರಿಸಿದ್ದು ಸಾವರ್ಕರ್. ಸಾವರ್ಕರ್ರ ಹಿಂದುತ್ವದ ಕೋಮುವಾದವನ್ನೊಳಗೊಂಡ ಫ್ಯಾಸಿಸ್ಟ್ ಚಿಂತನೆಗಳನ್ನು ತನ್ನ ಸೀಕ್ರೆಟ್ ಕಾರ್ಯಸೂಚಿಯನ್ನಾಗಿಸಿಕೊಂಡ ಆರೆಸ್ಸಸ್ ದಶಕಗಳ ಕಾಲ ಸಾರ್ವಜನಿಕವಾಗಿ ಕೇವಲ ಹಿಂದುತ್ವವನ್ನು ಪ್ರಚಾರ ಮಾಡಿತು. ಇಂದು ಕೇಂದ್ರದಲ್ಲಿ ಅಧಿಕಾರ ಗಳಿಸಿದ ನಂತರ ತನ್ನೊಳಗೆ ಮಡುಗಟ್ಟಿಕೊಂಡ ಫ್ಯಾಸಿಸಂನ ಮುಖಗಳನ್ನು ಸಹ ಬಹಿರಂಗಗೊಳಿಸತೊಡಗಿದೆ.

ಆರಂಭದಲ್ಲಿ ಇಟಲಿಯ ಮುಸಲೋನಿಯ ಆಡಳಿತವನ್ನು ತನ್ನ ಸ್ವಯಂಸೇವಕರಿಗೆ ತರಬೇತಿ ಕೊಡಬೇಕೆಂದು ಕೊಂಡಾಡಿದ್ದ ಆರೆಸ್ಸಸ್ ನಂತರ ಹಿಟ್ಲರ್ ನನ್ನೂ ಪ್ರಶಂಸಿತ್ತು. ಇಂದಿಗೂ ರಾಷ್ಟ್ರ ಮತ್ತು ಅದರ ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯ ವ್ಯವಸ್ಥೆಯ ಕುರಿತಾಗಿ ಅಸಹನೆಯಿಂದಿರುವ ಆರೆಸ್ಸಸ್ ಅದಕ್ಕೆ ಪರ್ಯಾಯವಾಗಿ ಹಿಂದೂರಾಷ್ಟ್ರವೆಂದು ಹೇಳುತ್ತಿದೆಯಾದರೂ ಅದರ ಸ್ವರೂಪದ ಕುರಿತಾಗಿ ಅವರಲ್ಲೇ ಗೊಂದಲಗಳಿವೆ. ಆದರೆ 2014ರ ಚುನಾವಣೆಯ ಸಂದರ್ಭದಿಂದ ಇಡೀ ಸಂಘ ಪರಿವಾರದ ನಾಯಕರು ಬಳಸಿದ ಫೆನಟಿಸಂನ, ಹಿಂಸಾಚಾರದ ಭಾಷೆಗಳು ಹಿಟ್ಲರ್ ನ ನಾಜಿ ಪಾರ್ಟಿಯ ಫ್ಯಾಸಿಸಂ ಅನ್ನು ಹೋಲುತ್ತವೆ. ಚುನಾವಣೆಯ ಸಂದರ್ಭದಲ್ಲಿ ಕೋಮುವಾದವನ್ನು ಹುಟ್ಟು ಹಾಕುವುದು, ಜಾತಿಗಳ ಧೃವೀಕರಣ ಸಾಧಿಸುವುದು, ದೇಶ ವಿಭಜನೆಯ ಸಂದರ್ಭದ ಹಿಂಸಾಚಾರವನ್ನು ನೆನಪಿಸುತ್ತ ಸಿಖ್ಖರನ್ನು ಮುಸ್ಲಿಂರ ವಿರುದ್ಧ ಸಂಘಟಿಸುವುದು, ಮತಾಂತರದ ವಿರುದ್ಧ ಸಂಘಟಿತರಾಗುತ್ತಲೇ ಮರು ಮತಾಂತರ ಪ್ರಕ್ರಿಯೆ ಜಾರಿಗೊಳಿಸುವುದು, ಅನ್ಯ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸುವುದು, ಇವೆಲ್ಲವೂ ಕೋಮುವಾದದ ಫ್ಯಾಸಿಸಂ ಅಜೆಂಡಾಗಳು. ತನ್ನ ಪ್ರಣಾಳಿಕೆಯಲ್ಲಿ ಹಿಂದೂಯಿಸಂನ ಕುರಿತಾಗಿ ಸಮರ್ಥಿಸಿಕೊಂಡರೆ ಆಚರಣೆಯಲ್ಲಿ ಕೇವಲ ಎಲೈಟ್ ವರ್ಗಗಳ ಹಿತಾಸಕ್ತಿಯನ್ನು ಮತ್ತು ಭ್ರಾಹ್ಮಣ ಜಾತಿಯ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ.

ಮೇಲ್ಜಾತಿಗಳ ಅಧಿಪತ್ಯದಲ್ಲಿ ವರ್ಣಾಶ್ರಮ ಸಮಾಜವನ್ನು ಸ್ಥಾಪಿಸಲು ಹಿಂದೂ ಧರ್ಮದ ಇತರೇ ಜಾತಿಗಳನ್ನು ಬಳಸಿಕೊಳ್ಳುತ್ತದೆ. ಇದು ಕೋಮುವಾದದ ಫ್ಯಾಸಿಸಂ ಮುಖ. ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಬೋಧಿಸುತ್ತ ಮುಸ್ಲಿಂರ ದೇಶ ಇದಲ್ಲ ಎಂದು ಮತೀಯವಾದಿ ನುಡಿಕಟ್ಟಿನಲ್ಲಿ ಮಾತನಾಡುವುದು, ಮುಸ್ಲಿಂರ ಏಜೆಂಟ್ ಎಂದು ಗಾಂಧೀಜಿಯನ್ನು ಹತ್ಯೆಗೈಯುವುದು ಕೋಮುವಾದ, ಫ್ಯಾಸಿಸಂ ಒಂದಕ್ಕೊಂದು ಬೆರೆತುಕೊಂಡ ಮುಖ. ರಾಮ ಜನ್ಮ ಭೂಮಿ ನಿರ್ಮಾಣಕ್ಕಾಗಿ ಹಿಂದೂ ಧರ್ಮದ ವಿವಿಧ ಜಾತಿಗಳನ್ನು ಒಗ್ಗೂಡಿಸಿ, ಶಿಲಾನ್ಯಾಸಕ್ಕಾಗಿ ಇಟ್ಟಿಗೆಗಳನ್ನು ಸಾಗಿಸುವುದು, ಅಯೋಧ್ಯೆಗೆ ರಥಯಾತ್ರೆ ಮತ್ತು ಇದೆಲ್ಲದರ ಮೂಲಕ ದೇಶಾದ್ಯಾಂತ ಗಲಭೆ,ಹಿಂಸಾಚಾರವನ್ನು ಸೃಷ್ಟಿಸುವುದು, ಇದೆಲ್ಲದರ ತಾರ್ಕಿಕ ಅಂತ್ಯವೆನ್ನುವಂತೆ ಹಿಂಸಾತ್ಮಕವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕೋಮುವಾದ ಮತ್ತು ಫ್ಯಾಸಿಸಂನ ಬೆರೆತುಕೊಂಡ ಮುಖ.

ಗುಜರಾತ್ ನ ಗೋಧ್ರಾ ದುರಂತದ ನಂತರ ನಡೆದ ಮುಸ್ಲಿಂ ಸಮುದಾಯದ ಹತ್ಯಾಕಾಂಡದಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳುnarender_modi_rss ಸಮಾನವಾಗಿರುತ್ತವೆ ಎಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಕೋಮುವಾದವಾದರೆ ನಂತರ ಹೆಣ್ಣುಮಕ್ಕಳು, ಮಕ್ಕಳನ್ನು ಇರಿದು ಹಲ್ಲೆ ಮಾಡಿ, ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದು ಫ್ಯಾಸಿಸಂನ ಮುಖ. ಹಿಂದೂ ಧರ್ಮದ ಜಾತೀಯತೆ ಮತ್ತು ಅಸಮಾನತೆಯ ದೌರ್ಜನ್ಯಕ್ಕೆ ಬಲಿಯಾದ ತಳಸಮುದಾಯಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡಿದ್ದನ್ನು ಕಟುವಾಗಿ ಟೀಕಿಸುವ ಆರೆಸ್ಸಸ್ ಈ ರೀತಿ ಮತಾಂತರಗೊಂಡವರನ್ನು ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಸ್ಲೋಗನ್ ಅಡಿಯಲ್ಲಿ ಮರು ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ಆದರೆ ಪೂರ್ವ ಮತ್ತು ಈಶಾನ್ಯ ಭಾರತದ ಆದಿವಾಸಿ ಸಮುದಾಯ ಸುಮಾರು ಮೂರು ತಲೆಮಾರುಗಳ ಹಿಂದಿನ ಕಾಲದಿಂದಲೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿವೆ. ಅವರ ಧಾರ್ಮಿಕ ನಂಬಿಕೆ, ಅವೈದಿಕ ಆಚರಣೆಗಳು ಈ ಹಿಂದೂ ಧಾರ್ಮಿಕತೆಗಿಂತಲೂ ಸಂಪೂರ್ಣ ಭಿನ್ನವಾಗಿದೆ. ಆದರೆ ಮತೀಯವಾದಿ ಸಂಘ ಪರಿವಾರ ‘ಘರ್ ವಾಪಸಿ’ ಹೆಸರಿನಲ್ಲಿ ಅವರಿಗೆ ಪರಕೀಯವಾದ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುತ್ತಿದೆ. ‘ಘರ್ ವಾಪಸಿ (ಮರಳಿ ಮನೆಗೆ)’ ಎನ್ನುವ ಇಡೀ ಪ್ರಕ್ರಿಯೆಯೇ ಹಿಂಸಾಚಾರದಿಂದ ರೂಪುಗೊಂಡಿದೆ. ಎಂಬತ್ತರ ದಶಕದಲ್ಲಿ ತಮಿಳುನಾಡಿನ ಮೀನಾಕ್ಷಿಪುರಂ ಮತಾಂತರದ ಹಿಂಸೆಯಿಂದ ಮೊದಲುಗೊಂಡು ಇತ್ತೀಚಿನ ಅಗ್ರಾದಲ್ಲಿ ನಡೆದ ಮರು ಮತಾಂತರದ ಪ್ರಹಸನದವರೆಗೂ ಸಂಘ ಪರಿವಾರದ ಹಿಂಸೆ ವಿಜೃಂಭಿಸಿದೆ. ಹೀಗೆ ಕೋಮುವಾದ ಮತ್ತು ಫ್ಯಾಸಿಸಂ ಎರಡನ್ನೂ ಒಂದುಗೂಡಿಸಿದ ಆರೆಸ್ಸಸ್ ತನ್ನ ಸಂಘಟನೆಗೆ ವಿ ಎಚ್ ಪಿ ಮತ್ತು ಬಜರಂಗದಳ ಗುಂಪುಗಳ ಮೂಲಕ ಮಿಲಿಟೆಂಟ್ ಸ್ವರೂಪವನ್ನು ಪಡೆದುಕೊಂಡಿದೆ.

ಸಂಘಪರಿವಾರದ ಫ್ಯಾಸಿಸಂ ಮತ್ತು ಕೋಮುವಾದ ಒಟ್ಟಿಗೆ ಮೇಳೈಸಿದ ತೀರಾ ಇತ್ತೀಚಿನ ಉದಾಹರಣೆ ಎಂದರೆ ಗೋಹತ್ಯೆ ನಿಷೇಧ ಕಾನೂನು. 2015ರಲ್ಲಿ ದನ, ಎಮ್ಮೆ, ಗೋವುಗಳ ಹತ್ಯೆ ನಿಷೇಧ ಮಸೂದೆಯನ್ನು ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದುಕೊಂಡ ನಂತರ ಮಹರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಇನ್ನು ಮುಂದೆ ಆ ರಾಜ್ಯದಲ್ಲಿ ಬೀಫ್ ಮಾರಾಟ ಮಾಡಿದರೆ, ಸೇವಿಸಿದರೆ, ಅದರ ತುಂಡನ್ನು ಕೈಯಲ್ಲಿ ಹಿಡಿದರೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಗೋ ಹತ್ಯೆ ನಿಷೇಧವನ್ನು ಜಾರಿಗೊಳಿಸಲು ತುದಿಗಾಲಲ್ಲಿರುವ ಮಧ್ಯಪ್ರದೇಶ ಸರ್ಕಾರವು ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳಿಗೆ ನಿಗದಿಪಡಿಸಲು ನಿರ್ಧರಿಸಿದೆ. ಹರ್ಯಾಣ ರಾಜ್ಯವು 9 ವರ್ಷಗಳ ಶಿಕ್ಷೆಯನ್ನು ಜಾರಿಗೊಳಿಸಲು ಚಿಂತಿಸುತ್ತಿದೆ. 2004ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿ ಗೋಹತ್ಯಾ ನಿಷೇಧಕ್ಕೆ ಸಂಬಂಧಪಟ್ಟಂತೆ ಮಸೂದೆಯನ್ನು ಜಾರಿಗೊಳಿಸಿದ್ದರು.

ಆ ಮಸೂದೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಕಾರಣ ಕೊಡುತ್ತ ‘ಮನುಸ್ಮುತಿಯಲ್ಲಿ ಗೋ ಹತ್ಯೆಯನ್ನು ಅಕ್ಷಮ್ಯ ಅಪರಾಧವೆಂದು ಅದನ್ನು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಬರೆಯಲಾಗಿದೆ’ ಅದಕ್ಕೇ ಈ ಮಸೂದೆ ಎಂದು ಸಮರ್ಥಿಸಿಕೊಳ್ಳಲಾಗಿದೆ. ಬಿಜೆಪಿ ಪಕ್ಷವು ಸಂವಿಧಾನಿಕ ಮಸೂದೆಯೊಂದನ್ನು ಜಾರಿಗೊಳಿಸಲು ಮನುಸ್ಮುತಿಯನ್ನು ಬಳಸಿಕೊಂಡಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೆಯದಾಗಿತ್ತು. ಆರೆಸ್ಸಸ್ ಮತ್ತು ಅದರ ಎಲ್ಲಾ ಪರಿವಾರ ಸಂಘಟನೆಗಳು ಈ ಗೋಹತ್ಯೆ ನಿಷೇಧಗೊಂಡ ಭಾರತವನ್ನು ನೆನಪಿಸಿಕೊಂಡು, ಸನಾತನ ಹಿಂದೂ ಧರ್ಮದ ಭಾರತವನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತಾ ಈ ಸನಾತನ ಭಾರತದಲ್ಲಿ ಮನುಷ್ಯರಿಗಿಂತ ಗೋವುಗಳು ಮುಖ್ಯ ಎಂದು ಎಚ್ಚರಿಸುತ್ತಿದ್ದಾರೆ. ಹೌದು ಇದು ನಿಜ. ಅಕ್ಟೋಬರ್ 12,2002 ರಂದು ಹರ್ಯಾಣ ರಾಜ್ಯದ ಜಾಜ್ಜರ್ ಪಟ್ಟಣದ ದುಲಿನಾ ಪೋಲಿಸ್ ಚೌಕಿಯ ಬಳಿ ದನಗಳನ್ನು ಸಾಗಿಸುತ್ತಿದ್ದಾರೆ ಎನ್ನುವ ಆಪಾದನೆಯ ಮೇಲೆ ಬಂಧಿತರಾಗಿದ್ದ 5 ದಲಿತರನ್ನು ಸುಮಾರು ಐನೂರು ಜನರ ಲುಂಪೆನ್ ಗುಂಪು ಕೊಚ್ಚಿ ಕೊಂದು ಹಾಕಿತು.

ಕೆಲವು ತಿಂಗಳುಗಳ ಹಿಂದೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗಾಂಧೀಜಿ ಹಂತಕ, ಚಿತ್ಪಾವನ್ ಭ್ರಾಹ್ಮಣ, ಹಿಂದೂ ಮಹಾಸಭಾದ ಸದಸ್ಯ ಗೋಡ್ಸೆಯನ್ನು ಒಬ್ಬ ದೇಶಭಕ್ತ ಎಂದು ಬಣ್ಣಿಸಿದ್ದರು. ಹಿಂದೂ ಮಹಾಸಭಾದ ಅಧ್ಯಕ್ಷ ಚಂದ್ರ ಪ್ರಸಾದ್ ಕೌಶಿಕ್ ‘ ಗಾಂಧಿ ಹತ್ಯೆಗೆ ಸಂಬಂಧಪಟ್ಟಂತೆ ನಡೆದ ಘಟನೆಗಳನ್ನು ಕೂಲಂಕುಶ ತನಿಖೆ ಆಗಬೇಕಿದೆ. ಗೋಡ್ಸೆಯವರು ನಿಜಕ್ಕೂ ಹಂತಕನಲ್ಲ, ಆದರೆ ಗಾಂಧಿಯನ್ನು ಕೊಲ್ಲುವಂತೆ ಪ್ರೇರೇಪಿಸಲಾಗಿತ್ತು’ ಎಂದು ಹೇಳುತ್ತಾರೆ. ಈ ಹಿಂದೂ ಮಹಾ ಸಭಾ ದೇಶದ ಹದಿಮೂರು ಜಿಲ್ಲೆಗಳಲ್ಲಿ ಈ ಹಂತಕ ಗೋಡ್ಸೆ ಮೂರ್ತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈಗಾಗಲೇ ಗಾಂಧಿ ಲೆಗಸಿಯನ್ನು ಮಣ್ಣುಗೂಡಿಸಿ ಸ್ವಚ್ಛ ಭಾರತ ಎನ್ನುವ ಸವಕಲು ಸ್ಲೋಗನ್ನಿನ ಮೂಲಕ ಗಾಂಧಿಯನ್ನು ಹಿಂದೂಯಿಸಂನ ಜಠರದೊಳಗೆ ಜೀರ್ಣಿಸಿಕೊಳ್ಳಲಾಗಿದೆ.ಮುಂದುವರೆದ ಭಾಗವಾಗಿ ತಪ್ಪುದಾರಿಗೆಳೆಯಲ್ಪಟ್ಟ ದೇಶಭಕ್ತ ಎಂದು ಈ ಗೋಡ್ಸೆಯ ವೈಭವೀಕರಣದ ಮೂಲಕ ಸೆಕ್ಯುಲರಿಸಂ, ಮಾನವತವಾದದ ತತ್ವಗಳನ್ನು ಮಣ್ಣುಗೂಡಿಸಿ ನವಫ್ಯಾಸಿಸಂ ಮಾದರಿಯ ‘ಗೋಡ್ಸೆ ಸಿದ್ಧಾಂತ’ವನ್ನು ತೇಲಿ ಬಿಡುತ್ತಾ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಬಿತ್ತಲಾಗುತ್ತಿದೆ.

ಈ ಮತೀಯವಾದಿ ಆರೆಸ್ಸಸ್ ನ ಸೀಕ್ರೆಟ್ ಸೊಸೈಟಿಯ ಗುಪ್ತ ಅಜೆಂಡಾದ ಮತ್ತೊಂದು ಸಾರ್ವಜನಿಕ ಅವತಾರ ‘ಹಿಂದೂ ರಾಷ್ಟ್ರೀಯತೆ’. 1909ರಲ್ಲಿ ‘ಹಿಂದೂ ಸಾಯುತ್ತಿರುವ ಧರ್ಮ’ ಹೆಸರಿನ ಕರಪತ್ರದಲ್ಲಿ ‘ಮುಂದಿನ ಕೆಲವು ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ, ಮುಸ್ಲಿಂರು ಬಹುಸಂಖ್ಯಾರಾಗುತ್ತಾರೆ’ ಎಂದು ಪ್ರಚೋದನಾತ್ಮಕವಾಗಿ ಬರೆಯಲಾಗಿತ್ತು. 1923ರಲ್ಲಿ ‘ಹಿಂದೂ ಎಂದರೆ ಏನು’ ಎನ್ನುವ ಲೇಖನದಲ್ಲಿ ಸಾವರ್ಕರ್ ಅವರು ‘ಹಿಮಾಲಯದ ತಪ್ಪಲಿನಿಂದ ಹಿಂದೂ ಮಹಾಸಾಗರದವರೆಗಿನ ಭೂಖಂಡವನ್ನು ಪಿತೃಭೂಮಿ, ಪವಿತ್ರ ಭೂಮಿ ಎಂದು ಪೂಜಿಸುವ ಹಿಂದೂ, ಜೈನ ಧರ್ಮಗಳ ಅನುಯಾಯಿಗಳು ಇಲ್ಲಿನ ನಾಗರಿಕರು. ಇತರೇ ಧರ್ಮೀಯರು ಬೇರೆ ಭೂಖಂಡವನ್ನು ಹುಡುಕಿಕೊಳ್ಳಬೇಕು’ ಎಂದು ಬರೆಯುತ್ತಾರೆ. ಅದೇ ಕಾಲದಲ್ಲಿ ‘ಮುಸ್ಲಿಂರು, ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ನಾಗರಿಕರೆಂದು ಕರೆದ ಗೋಲ್ವಲ್ಕರ್ ಮುಂದುವರೆದು ಇವರನ್ನು ದೇಶದ ಅಂತರಿಕ ಶತೃಗಳೆಂದು ಜರೆದರು. ಗೋಳ್ವಲ್ಕರ್, ಸಾವರ್ಕರರಿಂದ ಮೊದಲುಗೊಂಡು ಇಂದಿನ ಮೋಹನ್ ಭಾಗವತ್ವರೆಗೂ ಎಲ್ಲರೂ ಭಾರತವನ್ನು ಅದರ ಧಾರ್ಮಿಕತೆಯನ್ನು ‘ಹಿಂದೂ ರಾಷ್ಟ್ರೀಯತೆ’ಯೊಂದಿಗೆ ನಂಟು ಹಾಕುತ್ತ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯದ ಮಾಡೆಲ್ ಅನ್ನು ತಿರಸ್ಕರಿಸುತ್ತಾರೆ.

ಕಲೋನಿಯಲ್ ಆಡಳಿತ ವಿರೋಧಿಸಿದ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಇಪ್ಪತ್ತು ಮತ್ತು ಮೂವತ್ತರ ದಶಕಗಳಲ್ಲಿRSS-mohanbhagwat ‘ಸೆಕ್ಯುಲರಿಸಂ’ ಅನ್ನು ‘ರಾಷ್ಟ್ರೀಯತೆ’ಯೊಂದಿಗೆ ಸಮೀಕರಿಸಿದರೆ ಈ ಸಮೀಕರಣವನ್ನೇ ಹೈಜಾಕ್ ಮಾಡಿದ ಆರೆಸ್ಸಸ್ ರಾಷ್ಟ್ರೀಯತೆಯನ್ನು ಕೋಮುವಾದದೊಂದಿಗೆ ಸಮೀಕರಿಸಿಬಿಟ್ಟಿತು. ನೆಹರೂ ಯುಗ ಪ್ರಾರಂಭಗೊಂಡು ಇಂದಿರಾಗಾಂಧಿ ತೀರಿಕೊಳ್ಳುವುವರೆಗೂ ಆರೆಸ್ಸಸ್ ನ ಈ ‘ಹಿಂದೂ ರಾಷ್ಟ್ರೀಯತೆ’ ತನ್ನ ಹೆಡೆ ಬಿಚ್ಚಲಿಕ್ಕೆ ಸಾಧ್ಯವಾಗಲಿಲ್ಲ. ತೊಂಬತ್ತರ ದಶಕದ ಜಾಗತೀಕರಣ ಈ ‘ಹಿಂದೂ ರಾಷ್ಟ್ರೀಯತೆ’ ಮರಳಿ ಮುಖ್ಯಧಾರೆಯಲ್ಲಿ ಚರ್ಚೆಗೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಮೂಲಭೂತವಾಗಿ ತಮ್ಮ ಚಹರೆಗಳಲ್ಲಿ, ನಡುವಳಿಕೆಗಳಲ್ಲಿ, ವ್ಯಕ್ತಿತ್ವದಲ್ಲಿ ಧಾರ್ಮಿಕ ನಂಬಿಕೆಯನ್ನು ಶ್ರದ್ಧಾಪೂರ್ವಕವಾಗಿ ವ್ಯಕ್ತಪಡಿಸುತ್ತಿದ್ದ ಇಂಡಿಯಾದ ಮಧ್ಯಮವರ್ಗ ಕಳೆದ ಎರಡು ದಶಕಗಳಲ್ಲಿ ‘ಮುಸ್ಲಿಂ ಭಯೋತ್ಪಾದನೆ’ ಎನ್ನುವ ಫೋಬಿಯಾಗೆ ಬಲಿಯಾಗಿ ಅದನ್ನು ವಿರೋಧಿಸಲು ಈ ಹಿಂದೂ ರಾಷ್ಟ್ರೀಯತೆಯ ಕಡೆಗೆ ಚಲಿಸತೊಡಗಿದರು. ಇಂದು ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಆರೆಸ್ಸಸ್ ನ ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆ ಎಲ್ಲೆಲ್ಲೂ ಪ್ರತ್ಯಕ್ಷಗೊಳ್ಳತೊಡಗಿದೆ. ಮೊಟ್ಟ ಮೊದಲ ಬಾರಿಗೆ ಇಂದಿನ ದಿನಗಳಲ್ಲಿ ದಸರಾ, ಗಣೇಶನ ಹಬ್ಬ, ದೀಪಾವಳಿಗಳಂತಹ ಹಿಂದೂ ಹಬ್ಬಗಳು ರಾಷ್ಟ್ರೀಯ ಹಬ್ಬಗಳಾಗಿ ಆಚರಿಸಲಾಗುತ್ತಿದೆ. ಮಧ್ಯಮವರ್ಗಗಳೂ ಸಹ ಈ ಸೋಕಾಲ್ಡ್ ರಾಷ್ಟ್ರೀಯ ಹಬ್ಬಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಹಿಂದೂ ರಾಷ್ಟ್ರೀಯತೆಯಲ್ಲಿ ಹಿಂದುತ್ವದ ಹೊರತಾಗಿ ಬೇರೆ ಪರ್ಯಾಯ ಪಠ್ಯಗಳು, ಧರ್ಮಗಳು, ಸಂಸ್ಕೃತಿಗಳಿಗೆ ಸ್ಥಾನ ಇರುವುದೇ ಇಲ್ಲ.

ಈ ಸೀಕ್ರೆಟ್ ಸೊಸೈಟಿ ಆರೆಸ್ಸಸ್ ನ ಬಿಜೆಪಿ ಪಕ್ಷ ಇಂದು ರಾಜಕೀಯವಾಗಿ ಅಧಿಕಾರದಲ್ಲಿದೆ. ಸಧ್ಯದ ಪರಿಸ್ಥಿಯಲ್ಲಿ ಏಕಾಏಕಿ ಸಂವಿಧಾನವನ್ನು ಧಿಕ್ಕರಿಸಿ ಮರಳಿ ವರ್ಣಾಶ್ರಮಕ್ಕೆ ಮರಳಲು ಸಾಧ್ಯವಿಲ್ಲ ಎಂದು ಅರಿತಿರುವ ಆರೆಸ್ಸಸ್ ಇದಕ್ಕಾಗಿ ದೂರಗಾಮಿ ಯೋಜನೆಗಳನ್ನು ಹಾಕಿಕೊಂಡಿದೆ. 56 ಇಂಚಿನ ಎದೆಯ ನರೇಂದ್ರ ಮೋದಿ ಎಲ್ಲರ ವಿಕಾಸ, ಆಡಳಿತ ಮತ್ತು ಅಭಿವೃದ್ಧಿಯ ಸ್ಲೋಗನ್ ಅನ್ನು ತಮ್ಮ ಸರ್ಕಾರದ ಆದ್ಯತೆ ಎನ್ನುತ್ತಿರುವಾಗಲೇ ಮತ್ತೊಂದೆಡೆ ಆರೆಸ್ಸಸ್ ತನ್ನ ಸೀಕ್ರೆಟ್ ಅಜೆಂಡಾಗಳನ್ನು ಕ್ಷಣವೂ ವ್ಯರ್ಥ ಮಾಡದೆ ಏಕಕಾಲಕ್ಕೆ ಕಾರ್ಯರೂಪಕ್ಕೆ ತರುತ್ತಿದೆ. ಈ ಹಿಂದೆ ಧಾರ್ಮಿಕ ವ್ಯಕ್ತಿಗಳನ್ನು ಮಾಡಿಕೊಂಡಂತೆ ರಾಜಕೀಯ, ಸಾಮಾಜಿಕ ನಾಯಕರನ್ನು (ವಿವೇಕಾನಂದ, ವಲ್ಲಭಾಯಿ ಪಟೇಲ್, ಗಾಂಧಿ, ಅಂಬೇಡ್ಕರ್, ಪುಲೆ ದಂಪತಿಗಳು) ತನ್ನ ಹಿಂದುತ್ವಕ್ಕೆ appropriation ಮಾಡಿಕೊಳ್ಳುವುದು ಆರೆಸ್ಸೆಸ್ ನ ಪ್ರಮುಖ ಕಾರ್ಯಸೂಚಿ. ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರದ ಹಿಂದೂ ಮಹಾ ಸಭಾ ಇಂದು ಅಕ್ಟೋಬರ್ 2 ಗಾಂಧಿ ಹುಟ್ಟಿದ ದಿನವನ್ನು appropriation ಮಾಡಿಕೊಂಡು ಗೋಡ್ಸೆ ಗಾಂಧಿಯನ್ನು ಕೊಂದ ಜನವರಿ 30 ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿತ್ತು. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿತ್ತು. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.

ತೊಂಬತ್ತರ ದಶಕದಲ್ಲಿ ಬಿಎಸ್ಪಿ ಪಕ್ಷವು ಮೇಲ್ಮುಖ ಚಲನೆಯಾಗಿ ‘ಬಹುಜನ’ರಿಂದ ‘ ಸರ್ವಜನ’ ಎನ್ನುವ ಘೋಷಣೆಯೊಂದಿಗೆ ರಾಜಕೀಯ ರೂಪಿಸಿದ್ದರೆ ಇಂದು ಅದನ್ನು ಬುಡಮೇಲು ಮಾಡಿರುವ ಆರೆಸ್ಸಸ್ ‘ಸರ್ವಜನ’ ರಿಂದ ‘ಬಹುಜನ’ರ ಕಡೆಗೆ ಎನ್ನುವ ಸಿದ್ಧಾಂತವನ್ನು ರೂಪಿಸುತ್ತಿದೆ. ತಳಸಮುದಾಯಗಳನ್ನು, ಆದಿವಾಸಿಗಳನ್ನು ಬಹುಸಂಖ್ಯಾತ ಎನ್ನುವ ತತ್ವದಲ್ಲಿ appropriation ಮಾಡಿಕೊಳ್ಳುವುದು ಈ ಆರೆಸ್ಸಸ್ ನ ಬಲು ಮುಖ್ಯ ಅಜೆಂಡಾಗಳಲ್ಲೊಂದು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ನಿರಂತರವಾಗಿ ನಡೆದ ಅಭಿವ್ಯಕ್ತಿ ಸ್ವಾತಂತ್ರದ ದಮನ, ಕೋಮು ಗಲಭೆಗಳು, ಅನ್ಯ ಧರ್ಮೀಯರ ಮೇಲಿನ ಹಲ್ಲೆಗಳು, ಪಠ್ಯ ಪುಸ್ತಕಗಳ ಮತೀಯವಾದಿಕರಣ, ಇತಿಹಾಸವನ್ನು ಪುನ ರಚನೆಗಳಂತಹ ಸಂಗತಿಗಳನ್ನು ಅವಲೋಕಿಸಿದಾಗ ಸಂವಿಧಾನದ ಕಲಮು 15(1) ಅನುಸಾರ ಜಾತಿ, ಧರ್ಮ, ಬಣ್ಣ, ಲಿಂಗ ಆಧಾರದ ಮೇಲೆ ತಾರತಮ್ಯ ನೀತಿಯನ್ನು ನಿಷೇಧಿಸಲಾಗಿದೆ ಎನ್ನುವ ತತ್ವವು ಇನ್ನು ಮುಂದಿನ ದಿನಗಳಲ್ಲಿ ಅಪ್ರಸ್ತುತಗೊಳ್ಳುತ್ತದೆ.

ಇದು ಆರೆಸಸ್ ಮತ್ತು ಅದರ ಕುಟುಂಬದ ಮತೀಯವಾದದ ಶೈಲಿ. ಅಪ್ಪಟ ಫ್ಯಾಸಿಸ್ಟ್ ಶೈಲಿ.