ಭಗ್ನಗೊಂಡ ಮೌಲ್ಯಾಧಾರಿತ ರಾಜಕೀಯದ ಕನಸು

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷದಲ್ಲಿ ತಾರಕಕ್ಕೇರಿದ ಭಿನ್ನಮತ ಹಾಗೂ ಸ್ಥಾಪಕ ಹಿರಿಯ ಸದಸ್ಯರೀರ್ವರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪ್ರಮುಖ ಸ್ಥಾನಗಳಿಂದ ಹೊರದಬ್ಬುವ ಮೂಲಕ ದೇಶದ ಪ್ರಜ್ಞಾವಂತ ಜನತೆಯಲ್ಲಿ ಮೂಡಿದ್ದ ಮೌಲ್ಯಾಧಾರಿತ ರಾಜಕೀಯದ ಕನಸಿನ ನಿರೀಕ್ಷೆ ಭಗ್ನಗೊಂಡಿದೆ. ಪಕ್ಷವು ತನ್ನ ಮೂಲಭೂತ ಆಶಯಗಳಿಂದ ಹೊರಗೆ ಸರಿದು ಅಧಿಕಾರದ ರಾಜಕೀಯಕ್ಕಾಗಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡಿರುವುದು ಇದಕ್ಕೆ ಮೂಲಭೂತ ಕಾರಣವಾಗಿದೆ. ವೃತ್ತಿಪರ ರಾಜಕಾರಣಿಯಲ್ಲದ ಪ್ರತಿಭಾವಂತ ವ್ಯಕ್ತಿಯಾದ ಕೇಜ್ರಿವಾಲ್ ಅಧಿಕಾರ ಸಿಕ್ಕಿದ ಕೂಡಲೇ ತಾನು ಏರಲು ಬಳಸಿದ ಎಣಿಯನ್ನೇ ಒದೆದು ದೂರ ತಳ್ಳುವ ಅವಿವೇಕ ತೋರುತ್ತಿರುವುದು ನಿಜಕ್ಕೂಅನಪೇಕ್ಷಿತ. ರಾಜಕೀಯದಲ್ಲಿ ಬದಲಾವಣೆ ತರಲು ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ ಕೇಜ್ರಿವಾಲ್ ಹಾಗೂ ಸಂಗಡಿಗರು ರಾಜಕೀಯದಲ್ಲಿ ಬದಲಾವಣೆ ತರುವುದರ ಬದಲು ಅಧಿಕಾರ ಸಿಕ್ಕಿದ kejriwal-aap-launch-delhiಕೂಡಲೇ ತಾವೇ ಬದಲಾಗಿಹೋಗಿರುವುದು ಹಾಗೂ ಅಹಂಕಾರವನ್ನು ಮೆಟ್ಟಿನಿಲ್ಲಲಾರದೆ ಹೋಗಿರುವುದು ನಂಬಲಸಾಧ್ಯವಾದರೂ ಸತ್ಯ. ಕಾಂಗ್ರೆಸ್ ಪಕ್ಷವನ್ನು ವಂಶಪಾರಂಪರ್ಯ ಹಾಗೂ ಏಕವ್ಯಕ್ತಿಕೇಂದ್ರಿತ ಪಕ್ಷ ಎಂದು ಟೀಕಿಸುತ್ತಿದ್ದ ಕೇಜ್ರಿವಾಲ್ ಹಾಗೂ ಸಂಗಡಿಗರು ಈಗ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಏಕವ್ಯಕ್ತಿಕೇಂದ್ರಿತ ರಾಜಕೀಯಕ್ಕಿಂಥ ಭಿನ್ನವೇನೂ ಅಲ್ಲ. ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಎರಡು ಹುದ್ದೆ ಹೊಂದಿರುವುದು ಸೂಕ್ತವಲ್ಲ. ನಿಜವಾದ ಬದಲಾವಣೆಯನ್ನು ತರುವ ಇಚ್ಛಾಶಕ್ತಿ ಇದ್ದಿದ್ದರೆ ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆ ವಹಿಸಿದ ಕೂಡಲೇ ಆಮ್ ಆದ್ಮಿ ಪಕ್ಷದ ಸಂಚಾಲಕ ಹುದ್ದೆಯನ್ನು ತೊರೆಯಬೇಕಾಗಿತ್ತು ಮತ್ತು ಯಾವುದೇ ಕಾರಣಕ್ಕೂ ಎರಡು ಹುದ್ದೆಗಳಲ್ಲಿ ಮುಂದುವರಿಯುದನ್ನು ಒಪ್ಪಬಾರದಾಗಿತ್ತು. ಹೀಗೆ ಮಾಡುವುದು ನೈತಿಕ ರಾಜಕೀಯ. ಪಕ್ಷದ ಹೆಚ್ಚಿನ ಸಂಖ್ಯೆಯ ಹಿಂಬಾಲಕರು ಒಪ್ಪಿದ್ದಾರೆ ಎಂದು ಎರಡು ಹುದ್ದೆಗಳಲ್ಲಿ ಮುಂದುವರಿಯುವುದು ಅನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ವಿರೋಧವಾದ ನಡವಳಿಕೆ ಎಂಬುದು ಸ್ಪಷ್ಟ. ಈಗ ಕಾಂಗ್ರೆಸ್ ಪಕ್ಷದ ಏಕಕೇಂದ್ರಿತ ರಾಜಕೀಯವನ್ನು ಟೀಕಿಸುವ ನೈತಿಕ ಧೈರ್ಯವನ್ನು ಆಮ್ ಆದ್ಮಿ ಪಕ್ಷವು ಕಳೆದುಕೊಂಡಿದೆ.

ಈಗ ಆಮ್ ಆದ್ಮಿ ಪಕ್ಷದಲ್ಲಿ ಉಂಟಾಗಿರುವ ಬಿರುಕಿಗೆ ಮೂಲಕಾರಣ ಏನು ಎಂದು ನೋಡಿದರೆ ಅದು ಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವ ಹಾಗೂ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡು ಅಧಿಕಾರಕ್ಕೇರುವ ಹಪಾಹಪಿ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮೌಲ್ಯಾಧಾರಿತ ರಾಜಕೀಯಕ್ಕೆ ವಿರುದ್ಧವಾಗಿ ಹಾಗೂ ಪಕ್ಷದ ಮೂಲಭೂತ ನಿಯಮಗಳಿಗೆ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕೇಜ್ರಿವಾಲ್ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರೆಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಇಲ್ಲಿಯೇ ಪಕ್ಷದ ಮೂಲಭೂತ aap-kejriwal-yogendra-yadavಮೌಲ್ಯಾಧಾರಿತ ನಿಯಮಗಳಿಗೆ ಎಳ್ಳುನೀರು ಬಿಡಲಾಗಿದೆ ಎಂಬುದು ತಿಳಿಯುತ್ತದೆ ಹಾಗೂ ಕೇಜ್ರಿವಾಲ್ ಅವರ ಅಧಿಕಾರದ ಮಹತ್ವಾಕಾಂಕ್ಷೆ ಇದಕ್ಕೆ ಕಾರಣ ಎಂಬುದು ಕಂಡುಬರುತ್ತದೆ. ಭ್ರಷ್ಟಾಚಾರದ ವಿರುದ್ಧದ ಅಣ್ಣಾ ಹಜಾರೆ ಹೋರಾಟದಲ್ಲಿ ಪ್ರಮುಖ ಅಡಿಗಲ್ಲಾಗಿದ್ದ ಕೇಜ್ರಿವಾಲ್ ಆ ಹೋರಾಟವನ್ನು ಮುನ್ನಡೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದು ನಿಜವಾದರೂ ರಾಜಕೀಯದಲ್ಲಿ ಮೌಲ್ಯಗಳನ್ನು ಪಾಲಿಸದೆ ಅವುಗಳೊಂದಿಗೆ ರಾಜಿ ಮಾಡಿಕೊಂಡಿರುವುದು ಮೌಲ್ಯಾಧಾರಿತ ರಾಜಕೀಯದ ಬೆಳವಣಿಗೆಗೆ ಬಹಳ ದೊಡ್ಡ ಹಿನ್ನಡೆ ಎಂದೇ ಹೇಳಬೇಕು. ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಹಾಗೂ ಮೌಲ್ಯಗಳ ಪರ ಹೋರಾಟ ಬಹಳ ವ್ಯವಸ್ಥಿತವಾಗಿ ನಡೆಯುವುದು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲವೆಂದರೂ ನಡೆದೀತು. ಯಾವಾಗಲೋ ಒಮ್ಮೆ ಜನಸಮೂಹ ಸಮೂಹಸನ್ನಿ ಹಿಡಿದವರಂತೆ ಸ್ಪಷ್ಟ ವಿವೇಚನೆ, ಯೋಜನೆ ಇಲ್ಲದೆ ಉದ್ರೇಕಗೊಳ್ಳುವುದು ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಒಮ್ಮೆ ರಾಜಕೀಯ ಬದಲಾವಣೆಗೆ ಅವಕಾಶವಾಗುತ್ತದೆ. ಇಂಥ ಒಂದು ಅಮೂಲ್ಯ ಅವಕಾಶ ಕೇಜ್ರಿವಾಲ್ ಅವರು ಮೌಲ್ಯಗಳೊಂದಿಗೆ ರಾಜಿಮಾಡಿಕೊಂಡು ತನ್ನ ಸಂಗಡಿಗರನ್ನೇ ಹೊರದಬ್ಬುವ ವಿಪರೀತಕ್ಕೆ ಹೋದದ್ದು ದೇಶಕ್ಕೆ ಆದ ನಷ್ಟ. ಇನ್ನು ಇಂಥ ಒಂದು ಜನಸಮೂಹದ ಎಚ್ಚರಗೊಳ್ಳುವಿಕೆ ರೂಪುಗೊಳ್ಳಲು ಎಷ್ಟು ಸಮಯ ಬೇಕಾದೀತು ಎಂದು ಹೇಳಲಾಗದು. ಕೇಜ್ರಿವಾಲ್ ರಾಜಕೀಯದಲ್ಲಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ಜೊತೆಗೂಡಿ ಮುನ್ನಡೆಸುವ ವಿವೇಕ ತೋರಿದ್ದರೆ ಹಾಗೂ ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದರೆ ನಿಧಾನವಾಗಿ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಎಲ್ಲ ಅವಕಾಶಗಳೂ ಇದ್ದವು. ಇದೀಗ ಪಕ್ಷದ ಒಡಕಿನಿಂದ ಹಾಗೂ ಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವದಿಂದ ಅಂಥ ಅಪೂರ್ವ ಅವಕಾಶ ತಪ್ಪಿಹೋಗುತ್ತಿದೆ.

ರಾಜಕೀಯ ಪಕ್ಷಗಳಲ್ಲಿ ಒಡಕು ಉಂಟಾದಾಗಲೆಲ್ಲ ಅವುಗಳನ್ನು ಜನರು ತಿರಸ್ಕರಿಸುತ್ತಾರೆ ಹಾಗೂ ಮತ್ತೆ ಹಳೆಯ ಗಂಡನ ಪಾದವೇ ಗತಿ ಎಂದು ಮೊದಲಿನ ರಾಜಕೀಯ ಪಕ್ಷಗಳಿಗೆ ಮಣೆ ಹಾಕುತ್ತಾರೆ. ಅಂತರ್ಜಾಲದಲ್ಲಿ ಈಗ ವ್ಯಕ್ತವಾಗುತ್ತಿರುವ ಬಹುತೇಕ ಪ್ರತಿಕ್ರಿಯೆಗಳು aam-admi-party-aapಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವ ಹಾಗೂ ತಿಕ್ಕಲು ಸ್ವಭಾವದ ವಿರುದ್ಧ ಕಂಡುಬರುತ್ತಿವೆ. ಇವುಗಳ ಕಡೆಗೆ ಗಮನಹರಿಸಿದ್ದಿದ್ದರೆ ಪಕ್ಷದ ಒಡಕಿಗೆ ಯಾರು ಕಾರಣ ಹಾಗೂ ಇದನ್ನು ಹೇಗೆ ತಿದ್ದಿಕೊಳ್ಳಬಹುದು ಎಂಬುದು ಕೇಜ್ರಿವಾಲ್ ಅವರಿಗೆ ಅರಿವಿಗೆ ಬರುತ್ತಿತ್ತು. ಕೇಜ್ರಿವಾಲ್ ಟೀಕೆಗಳಿಗೆ ಉಳಿದ ರಾಜಕಾರಣಿಗಳಂತೆ ದಪ್ಪ ಚರ್ಮವನ್ನು ಬೆಳೆಸಿಕೊಂಡಿರುವ ಕಾರಣ ಜನತೆಯ ಅಭಿಪ್ರಾಯವನ್ನು ಕಡೆಗಣಿಸುತ್ತಿದ್ದಾರೆ. ಇದು ದೇಶದಲ್ಲಿ ಪಕ್ಷವನ್ನು ಬೆಳೆಸುವಲ್ಲಿ ಹಿನ್ನಡೆಯಾಗಲಿದೆ ಹಾಗೂ ಕಾರ್ಯಕರ್ತರು ತಲೆತಗ್ಗಿಸುವಂತೆ ಮಾಡಲಿದೆ ಹಾಗೂ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಬಹುತೇಕ ಕುಂದಿಸಲಿದೆ.

ಹೊಸ ರಾಜಕೀಯ ಪಕ್ಷವೊಂದು ಈಗಾಗಲೇ ಇರುವ ಬಲಿಷ್ಠ ರಾಜಕೀಯ ಪಕ್ಷಗಳ ನಡುವೆ ಸ್ಪರ್ಧಿಸಿ ಚುನಾವಣೆ ಗೆಲ್ಲುವುದು ಕಷ್ಟ ಹಾಗೂ ಬಹುತೇಕ ಸಂದರ್ಭಗಳಲ್ಲಿ ಅಸಂಭವಾಗಿರುತ್ತದೆ. ಹೀಗೆ ಒಂದು ಪಕ್ಷ ಗೆಲ್ಲಬೇಕಾದರೆ ಅದು ಒಂದು ವ್ಯಾಪಕ ಚಳುವಳಿಯ ಹಿನ್ನೆಲೆಯಲ್ಲಿ ರೂಪುಗೊಂಡಿದ್ದರೆ ಮಾತ್ರ ಸಾಧ್ಯ. ಲೋಕಸತ್ತಾ ಪಕ್ಷವು ಮೌಲ್ಯಾಧಾರಿತ ರಾಜಕೀಯವನ್ನು ಬೆಳೆಸುವ ಕನಸಿನೊಂದಿಗೆ ರೂಪುಗೊಂಡರೂ ಅದಕ್ಕೆ ಯಾವುದೇ ಚಳುವಳಿಯ ಹಿನ್ನೆಲೆ ಇಲ್ಲದ ಕಾರಣ ಅದು ಎಷ್ಟೇ ಮೌಲ್ಯಯುತ ರಾಜಕೀಯದ ಗುಣಗಳನ್ನು ಹೊಂದಿದ್ದರೂ ಬೆಳವಣಿಗೆ ಹೊಂದುವಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಒಂದು ಜನಸಮೂಹದ ಚಳುವಳಿಯ ಹಿನ್ನೆಲೆಯಲ್ಲಿ ಅದು ರೂಪುಗೊಂಡಾಗ ಅದು ಹೊಸಪಕ್ಷದ ಬೆಳವಣಿಗೆಗೆ ವೇಗವರ್ಧಕವಾಗಿ ಕೆಲಸಮಾಡುತ್ತದೆ. ಹೊಸ ರಾಜಕೀಯ ಪಕ್ಷದ ಬೆಳವಣಿಗೆಯೂ ಮಾರ್ಕೆಟಿಂಗ್ ತಂತ್ರದ ರೀತಿಯಲ್ಲಿಯೇ ಇರುತ್ತದೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ವಿವಿಧ ಕಂಪನಿಗಳು ಉತ್ಪಾದಿಸುವ ಒಂದು ವಸ್ತುವನ್ನೇ ಅದೇ ರೀತಿ ಉತ್ಪಾದಿಸಿ ಮಾರಾಟ ಮಾಡಲು ಹೊರಟರೆ ಅದು ಯಶಸ್ವಿಯಾಗುವುದಿಲ್ಲ. ಅದರ ಬದಲು ಬೇರೆ ಕಂಪನಿಗಳ ಉತ್ಪನ್ನದಲ್ಲಿ ಇರದ ಕೆಲವು ವಿಶೇಷ ಗುಣಗಳನ್ನು ಸೇರಿಸಿ ಅದನ್ನು ವ್ಯಾಪಕ ಪ್ರಚಾರ ಮಾಡಿದರೆ ಆ ಉತ್ಪನ್ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಹಾಗೂ ಜನರ ಮನಗೆಲ್ಲುವಲ್ಲಿ ಮುಂಚೂಣಿಗೆ ಬರುತ್ತದೆ. ಇದೇ ರೀತಿ ರಾಜಕೀಯದಲ್ಲಿಯೂ AAP-manifesto-PTIಇತರ ರಾಜಕೀಯ ಪಕ್ಷಗಳಲ್ಲಿ ಇರದ ಮೌಲ್ಯಾಧಾರಿತ ರಾಜಕೀಯದ ಹಾಗೂ ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಕನಸನ್ನು ಹೊತ್ತು ರೂಪುಗೊಂಡ ಆಮ್ ಆದ್ಮಿ ಪಕ್ಷ ಜನರ ಕುತೂಹಲದ ಕೇಂದ್ರಬಿಂದು ಆಗುವಲ್ಲಿ ಯಶಸ್ವಿಯಾಯಿತು. ಇದೇ ಮೌಲ್ಯಾಧಾರಿತ ರಾಜಕೀಯವನ್ನು ಕಾಯ್ದುಕೊಂಡು ಬಂದಿದ್ದರೆ ಇದು ದೇಶದಾದ್ಯಂತ ಬೆಳವಣಿಗೆ ಆಗುವ ಎಲ್ಲ ಲಕ್ಷಣಗಳೂ ಇದ್ದವು. ಕೇಜ್ರಿವಾಲ್ ಅಧಿಕಾರ ಗಳಿಸುವ ಹಪಾಹಪಿಯಲ್ಲಿ ಯಾವಾಗ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡರೋ ಆಗಲೇ ಇದರ ಬಗ್ಗೆ ಜನರಿಗೆ ಇದ್ದ ಕುತೂಹಲ ಹಾಗೂ ಕನಸು ಭಗ್ನವಾಗಿದೆ. ಯಾವಾಗ ಉಳಿದ ಏಕವ್ಯಕ್ತಿಕೇಂದ್ರಿತ ಹಾಗೂ ವಂಶಪಾರಂಪರ್ಯ ರಾಜಕೀಯ ಪಕ್ಷಗಳಂತೆ ಆಮ್ ಆದ್ಮಿ ಪಕ್ಷ ಕೇಜ್ರಿವಾಲ್ ಕೇಂದ್ರಿತ ಪಕ್ಷ ಆಯಿತೋ ಆಗಲೇ ಇದರ ವಿಶಿಷ್ಟ ಗುಣಗಳು ಲಯವಾಗಿ ಉಳಿದ ಪಕ್ಷಗಳಂತೆ ಇದೂ ಒಂದು ಪಕ್ಷ ಎಂಬ ಭಾವನೆ ಜನತೆಯಲ್ಲಿ ಬೇರೂರುತ್ತಿದೆ. ಹೀಗಾಗಿ ಇನ್ನು ಆಮ್ ಆದ್ಮಿ ಪಕ್ಷವನ್ನು ದೇಶದಲ್ಲಿ ಬೆಳೆಸುವುದು ಬಹಳ ಕಠಿಣ ಹಾಗೂ ಬಹುತೇಕ ಅಸಂಭವವಾಗುವ ಸಾಧ್ಯತೆ ಕಂಡುಬರುತ್ತಿದೆ. ಬೇರೆ ರಾಜಕೀಯ ಪರ್ಯಾಯ ಇಲ್ಲದೆ ಇರುವ ನಿರ್ವಾತ ಪರಿಸ್ಥಿತಿಯಲ್ಲಿ ಮಾತ್ರ ಕೇಜ್ರಿವಾಲ್ ಕೇಂದ್ರಿತ ಆಮ್ ಆದ್ಮಿ ಪಕ್ಷ ಬೆಳೆದರೂ ಬೆಳೆಯಬಹುದು ಆದರೆ ಅದು ಉಳಿದ ಪಕ್ಷಗಳಿಗಿಂಥ ಭಿನ್ನ ಎಂಬ ವಿಶೇಷಣ ಮಾತ್ರ ಅದಕ್ಕೆ ದಕ್ಕಲಾರದು.

ಮೌಲ್ಯಾಧಾರಿತ ರಾಜಕೀಯದಲ್ಲಿ ಈಡೇರಿಸಲಾಗದ ಆಶ್ವಾಸನೆಗಳನ್ನು ನೀಡುವುದು ಸೂಕ್ತವಲ್ಲ. ಆಮ್ ಆದ್ಮಿ ಪಕ್ಷವು ಈಡೇರಿಸಲು ಅಸಂಭವವಾದ ಹಲವು ಆಶ್ವಾಸನೆಗಳನ್ನು ನೀಡಲು ಹೊರಟದ್ದು ಕೂಡ ಮುಂದೆ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟುಮಾಡುವ ಸಂಭವ ಇದೆ. kejriwal_aap_pti_rallyಜನರಿಗೆ ಬೇಕಾಗಿರುವುದು ಸ್ವಚ್ಛ, ದಕ್ಷ, ಪಾರದರ್ಶಕ ಆಡಳಿತ ಹಾಗೂ ನುಡಿದಂತೆ ನಡೆಯುವ ನಾಯಕರು. ತನ್ನ ನುಡಿಗೆ ವಿರುದ್ಧವಾಗಿ ನಡೆಯಲು ಹೊರಡುತ್ತಿರುವ ಆಮ್ ಆದ್ಮಿ ಪಕ್ಷದ ಬಗ್ಗೆ ಈಗಾಗಲೇ ಜನರಿಗೆ ಭ್ರಮನಿರಸನದ ಅನುಭವ ಆಗುತ್ತಿರುವುದು ಅಂತರ್ಜಾಲದಲ್ಲಿ ಆ ಪಕ್ಷದ ಬಗ್ಗೆ ಹಾಗೂ ಕೇಜ್ರಿವಾಲ್ ಬಗ್ಗೆ ವ್ಯಕ್ತವಾಗುತ್ತಿರುವ ಜನತೆಯ ಅನಿಸಿಕೆಗಳಿಂದ ಕಂಡುಬರುತ್ತಿದೆ. ಅಂತಿಮವಾಗಿ ಇದರ ಪ್ರಯೋಜನ ಕಾಂಗ್ರೆಸ್ ಪಕ್ಷದ ಪುನಶ್ಚೇತನದ ರೂಪದಲ್ಲಿ ಕಂಡುಬರುವ ಸಂಭವ ಇದೆ. ಜನತಾ ಪರಿವಾರದ ಒಳಜಗಳದ ಪರಿಣಾಮ ಮುಂದೆ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷ ಪುನಶ್ಚೇತನ ಹೊಂದಿದ್ದು ಗಮನಾರ್ಹ. ಇದು ಆಮ್ ಆದ್ಮಿ ಪಕ್ಷಕ್ಕೆ ಏನಾದರೂ ಸಂದೇಶವನ್ನು, ಎಚ್ಚರಿಕೆಯನ್ನು, ವಿವೇಕವನ್ನು ಮೂಡಿಸೀತೇ? ಕೇಜ್ರಿವಾಲ್ ಅವರ ಹಠಮಾರಿ ಧೋರಣೆಯನ್ನು ನೋಡಿದರೆ ಆಮ್ ಆದ್ಮಿ ಪಕ್ಷ ಸುಧಾರಣೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಗೆಲುವಿನ ಅಹಂಕಾರದಲ್ಲಿ ಇನ್ನು ವಿವೇಕ ಮೂಡಬೇಕಾದರೆ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಹಿನ್ನಡೆ ಕಾಣಬೇಕೆನೋ?

2 thoughts on “ಭಗ್ನಗೊಂಡ ಮೌಲ್ಯಾಧಾರಿತ ರಾಜಕೀಯದ ಕನಸು

  1. Johnsheen

    All these says only one thing that Political parties require EXPERIENCE like every other field demands. When we look at from close range only the Congress party has that experience. Others are experimenting with our money causing a loss to time and economy.

    Reply
  2. ಅಭಿನವ ಚನ್ನಬಸವಣ್ಣ

    ಅರವಿಂದ್ ಕೆಜ್ರಿವಾಲ್ ಒಬ್ಬ ಬನಿಯಾ. ಆತನ ಬಲಗೈ ಬಂಟ ಶಿಷೋಡಿಯ ಒಬ್ಬ ಕ್ಷತ್ರಿಯ. ಇಬ್ಬರೂ ಸೇರಿ ಶೂದ್ರ ಪ್ರತಿಭೆ ಯೋಗೇಂದ್ರ ಯಾದವ್ ಅವರನ್ನು ಅಧಿಕಾರದಿಂದ ದೂರವಿಡಲು ಸಂಚು ನಡೆಸಿ ಪಕ್ಷದಿಂದ ಹೊರಗೆ ಹಾಕಿದ್ದಾರೆ. ನಮ್ಮ ನಾಡು ಇನ್ನೂ ಮನುವಾದಿಗಳ ಭದ್ರನೆಲೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮನುವಾದಿಗಳಿಗೆ ಪಾರ್ಟಿ ಬೇಧವಿಲ್ಲ. ಯಾವ ಪಾರ್ಟಿಯಲ್ಲಿದ್ದರೂ ಅಧಿಕಾರ ಮಾತ್ರ ಶೂದ್ರರ ದಲಿತರ ಕೈಗೆ ಸಿಗದಂತೆ ಮಾಡುತಾರೆ. ಆಂ ಆದಮೀ ಪಕ್ಷ ಕೂಡ ಇದಕ್ಕೆ ಹೊರತಾಗಿಲ್ಲ. ಯೋಗೇಂದ್ರ ಯಾದವ್ ಅವರ ಪ್ರಾಮಾಣಿಕತೆ, ತತ್ವನಿಷ್ಠೆ, ಯೋಗ್ಯತೆ, ಅರ್ಹತೆಗಳಿಗೆ ಬಿಡಿ ಕಾಸೂ ಬೆಲೆ ಕೊಡದೆ ಅವರನ್ನು ಅತ್ಯಂತ ಹೀನಾಯಮಾನವಾಗಿ ನಡೆಸಿಕೊಂಡಿದೆ ಆಂ ಆದಮೀ ಪಕ್ಷ. ಮನುವಾದಕ್ಕೆ ಕೊಡಲಿ ಪೆಟ್ಟು ಕೊಡುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯವಾಗಿದೆ.

    Reply

Leave a Reply to Johnsheen Cancel reply

Your email address will not be published. Required fields are marked *