Daily Archives: April 11, 2015

“ ಮೈ ಚಾಯ್ಸ್ ” ಹಾಗೂ ಪುರುಷ ಪ್ರಧಾನ ಸಮಾಜದ ಮನಸ್ಥಿತಿ


-ಇರ್ಷಾದ್ ಉಪ್ಪಿನಂಗಡಿ


ಮಹಿಳೆಯರು ಹಾಗೂ ಅವರ ಆಯ್ಕೆಯನ್ನು ಗೌರವಿಸಬೇಕು ಎಂಬ ಸಂದೇಶವನ್ನು ಹೊಂದಿದೆ ಎನ್ನಲಾಗುತ್ತಿರುವ ಹೋಮಿ ಅದ್ಜಾನಿಯಾ ನಿರ್ಮಿಸಿರುವ ಮೈ ಚಾಯ್ಸ್ ಕಿರು ಚಿತ್ರ ದೇಶದಾಧ್ಯಂತ ಬಾರೀ ಸುದ್ದಿಗೆ ಕಾರಣವಾಗುತ್ತಿದೆ. ’ಹೆಣ್ಣು ಮನೆಯ ಆವರಣ ದಾಟಿ ಹೋಗಬಾರದು, ಮನೆ ದಾಟಿ Deepika_MyChoice_Feminism_3ಹೋದರೂ ಲಜ್ಜೆಯಿಂದ ವರ್ತಿಸಿ ತನ್ನ ಧರ್ಮ ಹಾಗೂ ಸಂಸ್ಕೃತಿಯ ಚೌಕಟ್ಟಿನಲ್ಲಿರಬೇಕು. ಮನೆ, ಕುಟುಂಬ, ಸಮಾಜದ ಮರ್ಯಾದೆಗೆ ಧಕ್ಕೆ ತರುವಂತೆ ವರ್ತಿಸಬಾರದ’ ಎಂಬ ಪುರುಷ ಪ್ರಧಾನ ವ್ಯವಸ್ಥೆಯ ಕಟ್ಟುಪಾಡುಗಳನ್ನು ಮೀರಿ ಸ್ವಾತಂತ್ರ ಬಯಸುವ ಎಜುಕೇಟೆಡ್ ಮಾಡರ್ನ್ ಆಗಿ ರೂಪುಗೊಳ್ಳುತ್ತಿರುವ ಹೊಸ ತಲೆಮಾರಿನ, ಹೊಸ ಚಿಂತನೆಯ ಯುವಜನಾಂಗದ ವಲಯದಲ್ಲಿ “ಮೈ ಚಾಯ್ಸ್”  ವೈರಲ್ ಆಗಿ ಹರಡುತ್ತಿದೆ. ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ಕುರಿತಾಗಿ ಇತ್ತೀಚೆಗೆ ಬಿಡುಗಡೆಗೊಂಡು ಇಂಡಿಯಾದಲ್ಲಿ ಪ್ರಸಾರಕ್ಕೆ ನಿಷೇಧ ಹೇರಲ್ಪಟ್ಟ “ಇಂಡಿಯಾಸ್ ಡಾಟರ್” ಎಂಬ ಸಾಕ್ಷ್ಯ ಚಿತ್ರದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಆತನ ಪರ ವಕೀಲ ಹೆಣ್ಣನ್ನು ಅತೀ ಬೆಳೆಬಾಳುವ ಆಭರಣ ವಜ್ರಕ್ಕೆ ಹೋಲಿಕೆ ಮಾಡುವ ಮೂಲಕ ಆಕೆಯನ್ನು ಹೇಗೆ ತನ್ನ ಅಂಕೆಯಲ್ಲಿಟ್ಟು ನಿಯಂತ್ರಿಸಬೇಕು ಎಂಬ ವಿತಂಡವಾದ ಹಾಗೂ ಭಾರತದ ಅಧಿಕ ಸಂಖ್ಯೆಯ ಪುರುಷರು ಬಹುತೇಕ ಅದೇ ಮನಸ್ಥಿತಿಯವರಾಗಿದ್ದಾರೆ ಎಂಬ ವಾದ ವಿವಾದಗಳ ಬೆನ್ನಲ್ಲೇ ಹೆಣ್ಣಿನ ಸ್ವಾತಂತ್ರ ಹಾಗೂ ಆಯ್ಕೆಯಯನ್ನು ಗೌರವಿಸಿ ಎಂದು ಸಾರುವ “ಮೈ ಚಾಯ್ಸ್” ಕಿರು ಚಿತ್ರ ಹೆಣ್ಣಿನ ಸಬಲೀಕರಣದ ಕುರಿತಾಗಿ ಬೆಳಕು ಚೆಲ್ಲುವ ಆಳವಾದ ಯಾವುದೇ ಸಂದೇಶ ಅದರಲ್ಲಿ ಇಲ್ಲದಿದ್ದರೂ ಪುರುಷ ಪ್ರಧಾನ ಸಮಾಜದ ಅಡಿಯಾಳುತನಕ್ಕೆ ಒಳಗೊಳ್ಳದೆ ತನ್ನ ಅಸ್ಥಿತ್ವ ಹಾಗೂ ತನ್ನ ಆಯ್ಕೆ, ಅಭಿವ್ಯಕ್ತಿಯನ್ನು ಹೆಚ್ಚು ಒತ್ತನ್ನು ನೀಡುವ ಹೊಸ ತಲೆಮಾರಿನ, ಹೊಸ ಚಿಂತನೆ ಸ್ತ್ರೀ ಸಮಾಜಕ್ಕೆ ಕೇಳುವ ಪ್ರೆಶ್ನೆಯಾಗುತ್ತದೆ “ಮೈ ಚಾಯ್ಸ್”.  ಈ ನಿಟ್ಟಿನಲ್ಲಿ ಹೊಸ ತಲೆಮಾರಿನ ಚಿಂತನೆಯನ್ನಿಟ್ಟುಕೊಂಡು ಹೆಣ್ಣಿನ ಸ್ವಾತಂತ್ರದ  ಕುರಿತಾಗಿ ಚರ್ಚೆ ನಡೆಯಬೇಕಾಗಿದೆ.

ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಒಂದಿಷ್ಟು ಹೊಸ ತಲೆಮಾರಿನ ಯುವಕ-ಯುವತಿಯರು “ ಕಿಸ್  ಆಫ್ ಲವ್” ಪ್ರತಿಭಟನೆಯನ್ನುMy-Choice-Deepika-Padukone_2  ಹಮ್ಮಿಕೊಂಡಾಗ ಸಂಪ್ರದಾಯಿಕ ಸಮಾಜದಲ್ಲಿ ಭಾರೀ ವಿರೋಧ ಎದುರಾಗಿತ್ತು. ಅನೇಕ ಜನರು “ಏನಪ್ಪಾ ಆ ಗಂಡು ಮಕ್ಕಳಿಗೆ ಬುದ್ದಿ ಇಲ್ಲ ಬಿಡಿ. ಆದ್ರೆ ಈ ಹೆಣ್ಣುಮಕ್ಕಳಿಗೆ ಬುದ್ದಿ ಬೇಡ್ವಾ? ಪಬ್ಲಿಕ್ ಆಗಿ ಹೀಗಾ ನಡೆದುಕೊಳ್ಳುವುದು ? ಇವತ್ತಿನ ಈ ಹೆಣ್ಣು ಮಕ್ಕಳಿಗೆ ಹಿಂದಿನ ಹೆಣ್ಣುಮಕ್ಕಳಿಗಿದ್ದ ಮಾನ ಮರ್ಯಾದೆ ಏನೂ ಇಲ್ಲಪ್ಪಾ.. “ಎನ್ನುತ್ತಿದ್ದರು. ಹೌದು ಹೆಣ್ಣೆಂದರೆ ಹೀಗೆ ಇರಬೇಕು ಎಂಬ ಕಲ್ಪನೆ ನಮ್ಮ ಸಮಾಜದಲ್ಲಿದೆ. ಹೆಣ್ಣು ಹುಟ್ಟಿ ಆಕೆಗೆ 10 ವರ್ಷ ವಯಸ್ಸಾಗುತ್ತಿರುವಾಗಲೇ ಆಕೆಯ ಮೇಲೆ ಮನೆ, ಕುಟುಂಬ, ಸಮಾಜ ಒಂದೊಂದೇ ನಿಯಂತ್ರಣಗಳನ್ನು ಹೇರಲು ಆರಂಭಿಸುತ್ತದೆ. ಯಾವ ಆಟಿಕೆಗಳಲ್ಲಿ ಹೆಣ್ಣು ಮಗು ಆಟವಾಡಬೇಕೆಂಬ ಆಯ್ಕೆಯನ್ನು ಪೋಷಕರು ನಿರ್ಧರಿಸುವುದರಿಂದ ಆರಂಭವಾಗಿ, ಮನೆಯಿಂದ ಹೊರ ಕಾಲಿಡಬೇಕಾದರೆ ಹೇಗಿರಬೇಕು, ತನ್ನ ವಸ್ತ್ರ ಧಾರಣೆಯಲ್ಲಿ ಹೇಗೆ ಮಾರ್ಪಾಡು ಮಾಡಿಕೊಳ್ಳಬೇಕು, ನಡವಳಿಕೆಯ ರೀತಿ ನೀತಿ ಹೇಗಿರಬೇಕು, ಮನೆಯಲ್ಲಿ ಹೇಗಿರಬೇಕು, ಶಾಲಾ ಕಾಲೇಜುಗಳಲ್ಲಿ ಹೇಗಿರಬೇಕು, ಯಾವಾಗ ಮದುವೆಯಾಗಬೇಕು, ಮದುವೆಯಾದ ನಂತರ ಗಂಡನ ಮನೆಯಲ್ಲಿ ಹೇಗಿರಬೇಕು ಈ ಎಲ್ಲದರ ಕುರಿತಾದ ಆಕೆಯ ಆಯ್ಕೆಯನ್ನು ನಿರ್ಧರಿಸುತ್ತಿರುವುದು ಆಕೆಯ ಮನೆಮಂದಿ, ಆಕೆಯ ಧರ್ಮ ಹಾಗೂ ಸಂಸ್ಕೃತಿಯ ವಕ್ತಾರರಾಗಿರುವ ಪುರುಷ ಪ್ರಧಾನ ವ್ಯವಸ್ಥೆ. ಹೀಗೆ ತಾನು ಹೇಗೆ ಜೀವಿಸಬೇಕೆಂಬ ಆಕೆಯ ಆಯ್ಕೆ ಮಾಡುವ ಸ್ವಾತಂತ್ರವನ್ನು ಹೆಣ್ಣು ತನ್ನ ಎಳೆ ವಯಸ್ಸಿನಿಂದಲೇ ಕಳೆದುಕೊಂಡಿರುತ್ತಾಳೆ.

ಪ್ರಸ್ತುತ ಸಮಾಜದಲ್ಲಿ ಹೆಣ್ಣೆದಂರೆ ಕಣ್ಣಮುಂದೆ ಬರುವುದು ಪುರುಷನ ದಾಹ ತೀರಿಸುವ ಸೌಂದರ್ಯದ ಪ್ರತೀಕವಾದವಳು. ಕನ್ನಡಿ ಮುಂದೆ ನಿಂತು ತನ್ನ ಸೌಂದರ್ಯಕ್ಕೆ ಅಧಿಕ ಸಮಯ ವ್ಯರ್ಥ ಮಾಡುವಾಕೆ. ಗಂಡನ ಬೇಕು ಬೇಡ, ಮನೆ ಮಂದಿಗೆ ಅಡುಗೆ ಮಾಡಿ ಬಡಿಸಿ ಆವರ ಹಸಿವಿನ ದಾಹ ತೀರಿಸುವಾಕೆ. ನೆರೆ ಮನೆಯವರ ಜೊತೆ ಜಾಡಿ ತರಲೆಗಳನ್ನು ಮಾಡಿ, ಪರ ಸ್ತ್ರೀಯ ಜೀವನ ನೋಡಿ ಅಸೂಯೆ ಪಟ್ಟು, ಗಂಡನನ್ನು ನಿತ್ಯ ಪೀಡಿಸುವ, ಪುರುಷರ ನಡುವೆ ಪರಸ್ಪರ ಕಾಳಗಕ್ಕೆ ಕಾರಣವಾಗುವವಳು. ಪುರುಷನಾದವನ ದಬ್ಬಾಳಿಕೆಗೆ ಎದುರುತ್ತರ ನೀಡದೆ ಗಂಡ, ಮಕ್ಕಳು ಸಂಸಾರವೇ ನನ್ನ ಜೀವನ ಎಂದು ಬದುಕುವಾಕೆ. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದಕ್ಕೆ ಗಂಡ ದುಡಿದ ಸಂಬಳವನ್ನು ಬೇಕಾಬಿಟ್ಟಿ ಶಾಪಿಂಗ್ ಮಾಡಿ, ಉತ್ತಮ ವಸ್ತ್ರಗಳನ್ನು ಧರಿಸಿ ಚಿನ್ನಾಭರಣವನ್ನು ತೊಟ್ಟು ಇತರರಿಗೆ ತನ್ನ ಅಂದ ಚೆಂದವನ್ನು ಪ್ರದರ್ಶಿಸಿ ಇದುವೇ ನನ್ನ ಪಾಲಿನ ಜೀವನ ಎಂದು ತಿಳಿದಿರುವಾಕೆ. ಇಂದಿಗೂ ನಮ್ಮ ಸಮಾಜದ ಸಾಕಷ್ಟು ಪುರುಷರು ಹೆಣ್ಣು ಅಂದರೆ ಇಷ್ಟೇ ಹಾಗೂ ಹೀಗೆ ಇದ್ದರೆ ಚೆಂದ ಎಂದು ಬಯಸುತ್ತಾರೆ ಎಂಬುವುದಂತೂ ಸತ್ಯ. ಇದಕ್ಕೆ ಪೂರಕವಾಗಿ ಹೆಣ್ಣು ಕೂಡಾ ತಾನು ಹೀಗೆ ಇದ್ದರೆ ಚೆಂದ ಎಂಬ ಭಾವನೆಯನ್ನು ಮೈಗೂಡಿಸಿಕೊಂಡಿರುವುದು ಹೆಣ್ಣಿನ ಈ ಪರಿಸ್ಥಿತಿಗೆ ಕಾರಣ.

ಹೆಣ್ಣಿನ ಕುರಿತಾಗಿ ವ್ಯವಸ್ಥೆಯ ಈ ಮನಸ್ಥಿತಿಗೆ ಮೂಲ ಕಾರಣ ಪುರುಷಪ್ರಧಾನ ವ್ಯವಸ್ಥೆಯ ಹಿಡಿತದಲ್ಲಿರುವ ಧರ್ಮ ಹಾಗೂ ಅದು Ancient_Womenಹುಟ್ಟು ಹಾಕಿದ ಸಂಸ್ಕೃತಿಯೂ ಕಾರಣವಾಗುತ್ತದೆ. ಆಧುನಿಕ ಹೆಣ್ಣು ಸ್ವಾತಂತ್ರವನ್ನು ಬಯಸುವಾಗ ಸಂಪ್ರದಾಯವಾದಿಗಳು ಹೆಣ್ಣನ್ನು ಮಣಿಸಲು ಅಸ್ತ್ರವನ್ನಾಗಿ ಧರ್ಮವನ್ನೇ ಬಳಸುತ್ತಿದ್ದಾರೆ. ಧರ್ಮ , ಪುರಾಣಗಳಲ್ಲಿ ಬರುವ ಸನ್ನಿವೇಶಗಳಲ್ಲಿ ಸ್ತ್ರೀಯರ ಬಗ್ಗೆ ಅಂದಿನ ಸಮಾಜಕ್ಕಿದ್ದ ಕಲ್ಪನೆಗಳು ಸ್ಪಷ್ಟಗೊಳ್ಳುತ್ತದೆ. ರಾಮಾಯಣದಲ್ಲಿ ಹೆಣ್ಣಿನ ಕುರಿತಾಗಿ ರಾಮರಾಜ್ಯದ ನೀತಿಯ ಪ್ರಕಾರ  “ಸ್ತ್ರೀಯರ ವಿಷಯದಲ್ಲಿ ಜಾಗರೂಕನಾಗಿರಬೇಕು, ಅವರನ್ನೆಂದೂ ನಂಬಬಾರದು, ರಹಸ್ಯ ಹೇಳಬಾರದು. ಪರಪುರುಷನನ್ನು ನೋಡುವುದಕ್ಕೆ, ಮಾತನಾಡುವುದಕ್ಕೆ ಅವಕಾಶವಿಲ್ಲದಂತೆ ಅಂತಃಪುರದಲ್ಲಿ ಕಟ್ಟುನಿಟ್ಟಿನ ಏರ್ಪಾಡು  ಮಾಡಬೇಕು. ( ಅ.100 ಶ್ಲೊ: 58 ) . “ಭಾಗ್ಯಶಾಲಿನಿ ತಾಯಿ ನೀನು. ಗಂಡನೊಂದಿಗೆ ಅರಣ್ಯಕ್ಕೆ ಬಂದಿದ್ದೀಯ. ನಿನ್ನ ಪತಿ ಭಕ್ತಿ ಮೆಚ್ಚತಕ್ಕದ್ದು. ಗಂಡ ಬಡವನಾದರೂ ಶ್ರೀಮಂತನಾದರೂ, ಸ್ತ್ರೀ ಲೋಲನಾದರೂ, ಅವನೇ ಹೆಣ್ಣಿಗೆ ದೈವ. ಕಾಮುಕರಾದ ಸ್ತ್ರೀಯರಿಗೆ ಧರ್ಮ ತಿಳಿಯುವುದಿಲ್ಲ. ಅವರಿಗೆ ಇಹದಲ್ಲಿ ಅಪಕೀರ್ತಿಯಷ್ಟೇ ಅಲ್ಲ ಪರದಲ್ಲಿ ನರಕವೂ ಪ್ರಾಪ್ತಿಯಾಗುತ್ತದೆ. ರಾಮ ಪರಿವಾರ ಅತ್ರಿ ಮುನಿ ಆಶ್ರಮದಲ್ಲಿ ಸತಿ ಅನಸೂಯಳನ್ನು ದರ್ಶನ ಮಾಡುವಾಗ ಸೀತೆಯನ್ನು ಉದ್ದೇಶಿಸಿ ಅನಸೂಯ ಹೇಳುವ ಮಾತಿದು  (ಆಯೋಧ್ಯಾ ಕಾಂಡ ಅ.116, ಶ್ಲೊ: 10.14 )

ಇನ್ನು ಇಸ್ಲಾಮ್ ಧರ್ಮ ಸ್ತ್ರೀಯ ಕುರಿತಾದ ನಿಲುವುಗಳು ಕೂಡಾ ಇದನ್ನೇ ಸ್ಪಷ್ಟಪಡಿಸುತ್ತದೆ  “ನಿಮ್ಮಮನೆಗಳಲ್ಲೇ ಇದ್ದುಕೊಳ್ಳಿರಿ. ಗತಕಾಲದ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ” ( ಪವಿತ್ರ ಕುರ್ ಆನ್ 33:33 ),“ಮಹಿಳೆ ಬುದ್ದಿ ಮತ್ತು ಧರ್ಮ ಎರಡೂ ವಿಧದಲ್ಲಿburkha sielence ದುರ್ಬಲರಾಗಿರುತ್ತಾರೆ” ( ಬುಖಾರಿ ) “ನಿಮ್ಮ ಸ್ರೀಯರಿಂದ ಆಜ್ಞೋಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ.” ಪವಿತ್ರ ಕುರ್ ಆನ್ ( 4:34 ). ಹೀಗೆ ಪುರುಷಪ್ರಧಾನ ಸಮಾಜ ಹೆಣ್ಣನ್ನು ಹೇಗೆ ನಿಯಂತ್ರಿಸಬೇಕೆಂಬುವುದನ್ನು ಧರ್ಮಗಳು ಭೋಧಿಸುತ್ತವೆ. ಇದನ್ನು ಮೀರಿ ಆಕೆ ತನ್ನ ಆಯ್ಕೆ, ಅಭಿವ್ಯಕ್ತಿ, ಸ್ವಾತಂತ್ರದ ಕುರಿತು ಧ್ವನಿ ಎತ್ತಿದರೆ ಆಕೆ ಧರ್ಮ ವಿರೋಧಿ ಅಥವಾ ಸಂಪ್ರದಾಯ ಮುರಿದ ಹೆಣ್ಣಾಗಿ ಮಾರ್ಪಡುತ್ತಾಳೆ. ಸಮಾಜ ವಿಧಿಸಿದ ಈ ಕಟ್ಟಲೆಗಳನ್ನು ಮೀರಿ ಹೆಣ್ಣು ಹೊಸಿಲ ದಾಟಿದಾಗ ಸಂಪ್ರದಾಯವಾದಿಗಳಿಂದ ಹಲ್ಲೆ, ಹೋಂ ಸ್ಟೇ ದಾಳಿ, ಪಬ್ ದಾಳಿಗಳಂತಹಾ ನೈತಿಕ ಪೊಲೀಸ್ ಗಿರಿಗಳು, ಮಲಾಲ, ಗೀತಾ ಪ್ರಲ್ಹಾದ್ ಗೆ ಎದುರಾದ ದುಸ್ಥಿತಿ ಇನ್ನೂ ಮಿತಿಮೀರಿದರೆ ಸಾಮೂಹಿಕ ಅತ್ಯಾಚಾರ ಎಸಗಿ ಸಂಸ್ಕೃತಿಯ ಎಲ್ಲೆಯನ್ನು ಮೀರಿದ ಹೆಣ್ಣನ್ನು ನಿಯಂತ್ರಿಸುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಆದರೆ ಇದನೆನಲ್ಲಾ ಮೀರಿ ಮಹಿಳೆ ಬೆಳೆಯುತ್ತಿದ್ದಾಳೆ, ಪುರುಷನಿಗೆ ಸಮಾನ ಎಂದು ಸಾಧಿಸಿ ತೋರಿಸುತ್ತಿದ್ದಾಳೆ, ಪುರುಷ ಕಾರ್ಯ ನಿರ್ವಹಿಸುವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಇರುವಿಕೆಯನ್ನು ತೋರಿಸಿದ್ದಾಳೆ. ಗಂಡ ಹೊಡೆದರೆ ನಾನೇಕೆ ಕಟ್ಟಿಕೊಂಡಿರಬೇಕು? ನನ್ನನ್ನು ಮದುವೆಯಾದ ಪುರುಷ ಪರ ಸ್ತ್ರೀಯೊಂದಿಗೆ ಮಲಗಿದರೆ ಅದನ್ನು ನಾನ್ಯಾಕೆ ಸಹಿಸಿಕೊಳ್ಳಬೇಕು?  ಪುರುಷ ಮದುವೆಯಾದರೂ ಅನ್ಯ ಸ್ತ್ರೀಯೊಂದಿಗೆ ಸಂದಂಧವಿಡುವುದು ಸಮಾಜಕ್ಕೆ ದೊಡ್ಡ ಅಪರಾದ ಅಲ್ಲವೆಂದಾದರೆ ಹೆಣ್ಣು ಏಕೆ ವಿವಾಹಬಾಹಿರ ಸಂಬಂಧವಿಟ್ಟುಕೊಳ್ಳಬಾರದು?  ಗಂಡ ನಾಲ್ಕು ಮದುವೆಯಾಗುವುದಾದರೆ ನಾನ್ಯಾಕೆ ಆತನನ್ನು  ಒಪ್ಪಿಕೊಳ್ಳಬೇಕು? ಪುರುಷ ಮಧ್ಯ ಸೇವಿಸಬಹುದಾದರೆ ನಾನ್ಯಾಕೆ ಸೇವಿಸಬಾರದು?rape-illustration  ಮನೆ ಕೆಲಸ ಸ್ತ್ರೀಗೆ ಮಾತ್ರ ಯಾಕೆ ಮೀಸಲು ಪುರುಷನೇಕೆ ಮಾಡಬಾರದು? ನಾನು ಯಾವ ವಸ್ತ್ರವನ್ನು ಧರಿಸಬೇಕು, ನನ್ನ ನಡವಳಿಕೆ ಹೇಗಿರಬೇಕು? ಯಾಕೆ ನಾನು ಪರ್ದಾದೊಳಗೆ ಬಂಧಿಯಾಗಿರಬೇಕು? ಇವೆಲ್ಲವನ್ನು ತೀರ್ಮಾನಿಸಲು ಪುರುಷ ಯಾರು?  ಇಂಥಹಾ ಪ್ರಶ್ನೆಗಳನ್ನು ಕೇಳುವ ಹೊಸ ಪೀಳಿಗೆ ಹೆಚ್ಚಾಗುತ್ತಿದೆ. ಧರ್ಮ, ಸಂಪ್ರದಾಯದ ಹೆಸರಲ್ಲಿ ತನ್ನ ಮೇಲೆ ನಡೆಯುವ ಶೋಷಣೆಗಳನ್ನು ಆಧುನಿಕ ಸ್ತ್ರೀ ಪ್ರಶ್ನಿಸಲು ಆರಂಭಿಸಿದ್ದಾಳೆ. ಇದನ್ನು ಒಪ್ಪುವ ಹೊಸ ಚಿಂತನೆಯ ಪುರುಷ ಸಮಾಜವೂ ಸೃಷ್ಟಿಯಾಗುತ್ತಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಹಿಳೆ ಆಧುನಿಕ ಸ್ತ್ರೀ ಬಹಿರಂಗವಾಗಿ ಕೇಳುವ ಪ್ರೆಶ್ನೆಗಳನ್ನು ಪುರುಷ ಪ್ರಧಾನ ಸಮಾಜಕ್ಕೆ ಕೇಳುವ ವಾತಾವರಣ ನಿರ್ಮಾಣವಾಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಮನೆಯಲ್ಲಿ ಹೆಂಡತಿಗೆ ಗಂಡ ಏನಾದರೂ ಅಡುಗೆ ಹಾಗೂ ಮನೆ ಕೆಲಸದಲ್ಲಿ ಸಹಕಾರ ನೀಡಿದರೆ ಆತ ನೆರಮನೆಯ ಮಹಿಳೆಯರಿಗೆ ತಮಾಷೆಯ ವಸ್ತುವಾಗುತ್ತಾನೆ. ಯಾಕೆಂದರೆ ಗಂಡ ಮಕ್ಕಳ ಸೇವೆ ಮಾಡೋದೇ ನನ್ನ ಜೀವನ ಎಂಬ ಮನೋಭಾವ ಆಕೆಯಲ್ಲಿ ಬಲವಾಗಿ ಬೇರೂರಿದೆ. ಇಂಥಹಾ ಮನಸ್ಥಿತಿ ಹೆಣ್ಣಿನಲ್ಲಿ ಬದಲಾಗದೆ ಇದ್ದಲ್ಲಿ ಆಕೆ ಈ ಪುರುಷ ಪ್ರಧಾನ ಸಮಾಜದಿಂದ ಇನ್ನಷ್ಟು ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ. ಇನ್ನು ಸಮೂಹ ಮಾಧ್ಯಮಗಳಲ್ಲೂ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಿನಿಮಾ, ಧಾರವಾಹಿಗಳಲ್ಲಿ ಹೆಣ್ಣನ್ನು ಬಿಂಬಿಸುವ ರೀತಿಯಲ್ಲೂ ಬದಲಾವಣೆಯಾಗಬೇಕು. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ಪ್ರಸಿದ್ದ ಧಾರವಾಹಿಯೊಂದರ ನಟನ ಕುರಿತಾಗಿ ಪತ್ರಿಕೆಯೊಂದರಲ್ಲಿ ವರದಿ ಪ್ರಸಾರವಾಗಿತ್ತು. ಧಾರವಾಹಿಯಲ್ಲಿ ನಟ ಹೆಣ್ಣನ್ನು ಪೀಡಿಸುವ ಪಾತ್ರವನ್ನು ನಟನ ಮಹಿಳಾ ಅಭಿಮಾನಿಗಳು ಇಷ್ಟಪಡುತ್ತಾರೆ ಹಾಗೂ ಮೆಚ್ಚುಗೆಯನ್ನು ಸೂಚಿಸುತ್ತಾರೆ ಎಂದು ನಟನೇ ಪತ್ರಿಕಾ ಸಂದರ್ಶನದಲ್ಲಿ ಆಶ್ವರ್ಯಪಡುತ್ತಾನೆ. ಕೆಲ ಮಹಿಳೆಯರ ಇಂಥಹಾ ಮನಸ್ಥಿತಿಯೇ ಇಂದು ಮಾಧ್ಯಮಗಳಿಗೆ ಬಂಡವಾಳವಾಗುತ್ತಿವೆ.

ಸ್ವಾಮಿ ವಿವೇಕಾನಂದ ಒಂದು ಮಾತು ಹೇಳುತ್ತಾರೆ “ಅದೇಕೆ ಈ ದೇಶದಲ್ಲಿ ಸ್ತ್ರೀಪುರುಷರಲ್ಲಿ ಇಷ್ಟೊಂದು ಭೇಧವಿದೆಯೋ ಆ ದೇವನೇ ಬಲ್ಲ. ಸ್ಮೃತಿ ಮುಂತಾದವುಗಳನ್ನು ಬರೆಯುವುದು, ಕಠಿಣವಾದ ನಿಯಮಗಳಿಂದ ಅವರನ್ನು ಬಂಧಕ್ಕೀಡು ಮಾಡುವುದು, ಗಂಡಸರು ಹೆಂಗಸರನ್ನು ಕೇವಲ ಮಕ್ಕಳನ್ನು ಹೆರುವ ಯಂತ್ರವನ್ನಾಗಿ ಮಾರ್ಪಡಿಸಿದ್ದಾರೆ. ಯಾವ ದೇಶ , ಯಾವ ಜನಾಂಗ ಸ್ತ್ರೀಯರಿಗೆ ಗೌರವ ಕೊಟ್ಟಿಲ್ಲವೋ ಅದು ಖಂಡಿತವಾಗಿಯೂ ಕೀರ್ತಿ ಪಡೆದಿಲ್ಲ; ಮುಂದೆ ಪಡೆಯುವುದೂ ಇಲ್ಲ.”