ಇಂಡಿಯಾದ ರಾಜಕಾರಣ, ರಾಜಕಾರಣಿಗಳು ಮತ್ತು ದಲಿತರು (೧೯೫೬ -೧೯೯೮)

ಮೂಲ : Oliver Mendelsohn & Marika Vicziany
ಅನುವಾದ : ಬಿ.ಶ್ರೀಪಾದ ಭಟ್

ಕಾಂಗ್ರೆಸ್‌ನ ಅಧಿಕಾರದ ಸಂದರ್ಭದಲ್ಲಿನ ದಲಿತ ರಾಜಕಾರಣ

ಸ್ವಾತಂತ್ರ ನಂತರ ಇಲ್ಲಿಯವರೆಗೆ (೧೯೯೮) ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಐದು ಪ್ರಧಾನ ಮಂತ್ರಿಗಳು ಬ್ರಾಹ್ಮಣರಾಗಿದ್ದರು. ಕಾಂಗ್ರೆಸ್ಸೇತರ ಪಕ್ಷಗಳ ಅಧಿಕಾರವಿದ್ದಾಗ ಇಬ್ಬರು ಬ್ರಾಹ್ಮಣ ಮತ್ತು ಇಬ್ಬರು ರಜಪೂತ ಪ್ರಧಾನ ಮಂತ್ರಿಗಳಾಗಿದ್ದರು. ಇಬ್ಬರು ಪ್ರಧಾನ ಮಂತ್ರಿಗಳು ಶೂದ್ರರಾಗಿದ್ದರು.

೧೯೩೦, ೧೯೪೦ರ ದಶಕಗಳಲ್ಲಿ ಆಗಿನ ಕಾಂಗ್ರೆಸ್‌ನೊಂದಿಗೆ ದಲಿತ ಸಮುದಾಯದ ಬಾಂಧವ್ಯ ಸೌಹಾರ್ದಯುತವಾಗೇನು ಇರಲಿಲ್ಲ. ಆದರೆ ಸ್ವಾತಂತ್ರ ನಂತರದ ಭಾರತದಲ್ಲಿ ಅಂದರೆ ೧೯೫೨ರಿಂದ ೧೯೮೯ರವರೆಗೆ ದಲಿತರು ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯ ಗಟ್ಟಿಗೊಳ್ಳತೊಡಗಿತು ಮತ್ತು ೧೯೭೭ರ ಸಾರ್ವತ್ರಿಕ ಚುನಾವಣೆಯನ್ನು ಹೊರತುಪಡಿಸಿದರೆ ದಲಿತರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದರು. ಆಗ ಅವರ ಕಾಂಗ್ರೆಸ್ ಪರವಾಗಿ ನೀಡಿದ ಮತ ಪಾರ್ಟಿ ಮತ್ತು ಸರ್ಕಾರದ ಪರವಾಗಿ ನೀಡಿದ ಮತವಾಗಿತ್ತು. ಆದರೆ ಒಂದುವೇಳೆ ಕಮ್ಯ್ಠುನಿಷ್ಟರ ಪಶ್ಚಿಮ ಬಂಗಾಲ ಮತ್ತು ಕೇರಳವನ್ನು ಹೊರತುಪಡಸಿ ದೇಶದ ಇನ್ನಿತರ ರಾಜ್ಯಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಸಿಕೊಂಡಿದ್ದರೆ ದಲಿತರು ಮತ್ತು ಕಾಂಗ್ರಸ್ ಪಕ್ಷದ ನಡುವಣ ಸಂಬಂಧ ಈಗಿನಂತಿರುತಿರಲಿಲ್ಲ ಬದಲಾಗಿ ಕುಂಠಿತಗೊಳ್ಳುತ್ತಿತ್ತು. ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸೋಷಿಯಲಿಷ್ಟರು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಮತಗಳನ್ನು ಗಳಿಸಿದ್ದರು. periyar-ambedkarಇಂದಿಗೂ ಇಂಡಿಯಾದ ಬಹುತೇಕ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಕಾಂಗ್ರೆಸ್ ಪಕ್ಷದ ಪ್ರಮುಖ ಓಟ್ ಬ್ಯಾಂಕ್ ಆಗಿದ್ದರೂ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರವಿರುವ ರಾಜ್ಯಗಳಲ್ಲಿನ ವಸ್ತುಸ್ತಿತಿ ಬೇರೆಯದೇ ಇದೆ. ಉದಾಹರಣೆಗೆ ಮತ್ತೊಂದು ರಾಜಕೀಯ ಪಕ್ಷ ಅಥವಾ ಕಾಂಗ್ರೆಸ್ ವಿರೋಧಿ ಹೋರಾಟಗಳನ್ನು ನಡೆಸಿದ ಪ್ರಾದೇಶಿಕ ಪಕ್ಷಗಳನ್ನು ಹೊಂದಿದಂತಹ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳನ್ನೇ ಅವಲೋಕಿಸಿದರೆ ಪಶ್ಚಿಮ ಬಂಗಾಳ, ಕೇರಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ರಾಜಕೀಯವಾಗಿ ಕಮ್ಯುನಿಷ್ಟರೊಂದಿಗೆ ಗುರುತಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಪ್ಪತ್ತರ ದಶಕದ ನಂತರ ದಲಿತರ ರಾಜಕೀಯ ಐಡೆಂಟಿಟಿ ಜಾತಿಗಳು ಮತ್ತು ವರ್ಗಗಳಾಗಿ ಕಾಂಗ್ರೆಸ್ ಮತ್ತು ಕಮ್ಯುನಿಷ್ಟರ ನಡುವೆ ಹಂಚಿ ಹೋದರೆ ಕೇರಳದಲ್ಲಿ ಪರಿಶಿಷ್ಟ ಜಾತಿಗಳು ವರ್ಗಗಳಾಗಿ ಕಮ್ಯುನಿಷ್ಟರ ಕೌನ್ಸಿಲ್‌ಗಳಲ್ಲಿ ಪ್ರತಿನಿಧಿಸಿದ್ದು ಕಡಿಮೆಯಾದರೂ ಪಶ್ಚಿಮ ಬಂಗಾಳಕ್ಕಿಂತಲೂ ಹತ್ತು ವರ್ಷಗಳ ಮುಂಚೆಯೇ ಅಧಿಕಾರದ ಮೆಟ್ಟಿಲನ್ನು ತುಳಿದಿದ್ದರು. ಅಂದರೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ದಲಿತರು ಆಗಿನ ಆ ಎರಡು ರಾಜ್ಯಗಳಲ್ಲಿ ಬಹುಮತವಿರುವಂತಹ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರೇ ಹೊರತಾಗಿ ರಾಜಕೀಯವಾಗಿ ತಮ್ಮದೇ ಆದ ಹೊಸ ಐಡೆಂಟಿಟಿಗಾಗಿ ಹುಡುಕಾಟ ನಡೆಸಿದ್ದು ಇಲ. ಏಕೆಂದರೆ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಧಿಯೊಳಗಿನ ತಮ್ಮ ಸ್ಥಾನಮಾನಗಳ ಮಿತಿಗಳನ್ನು ಆಧರಿಸಿಯೇ ಐಡೆಂಟಿಯನ್ನು ಕಂಡುಕೊಂಡಿದ್ದರೇ ವಿನಹಃ ಮಾರ್ಕ್ಸಿಸಂ ಕುರಿತಾದ ವ್ಯಾಮೋಹದಿಂದಂತೂ ಖಂಡಿತ ಅಲ್ಲ.

ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿದವು. ತಮಿಳು ನಾಡಿನಲ್ಲಿ ಬ್ರಾಹ್ಮಣ ವಿರೋಧಿ ಚಳುವಳಿಯು ಮೊದಲು ಜಸ್ಟೀಸ್ ಪಾರ್ಟಿ ನಂತರ ದ್ರಾವಿಡ ಮುನ್ನೇತ್ರ ಕಳಗಂದಂತಹ ಪ್ರಾದೇಶಿಕ ಪಕ್ಞಗಳಿಗೆ ಜನ್ಮ ನೀಡಿತು. ಬ್ರಾಹ್ಮಣ ವಿರೋಧಿ ಚಳುವಳಿಯು ಈ ಡಿಎಂಕೆ ಪಕ್ಷದೊಂದಿಗೆ ಬೆರೆತು ಹೋಗಿ ಹೊಸ ಬಗೆಯ ಸಾಂಸ್ಕೃತಿಕ ಹುಟ್ಟಿಗೆ ಕಾರಣವಾಯ್ತು. ನಂತರ ಡಿಎಂಕೆ ಒಡೆದು ಎಐಡಿಎಂಕೆ ಪಕ್ಷವಾಗಿ ಇಬ್ಭಾಗವಾದಾಗಲೂ ಸಹ ಈ ಬ್ರಾಹ್ಮಣ ವಿರೋಧಿ ಚಳುವಳಿ ಸ್ಥಗಿತಗೊಳ್ಳದೆ ಇವೆರೆಡೂ ಪಕ್ಷಗಳ ನಡುವೆ ಹಂಚಿಹೋಯಿತು. ಹೀಗಾಗಿ ಡಿಎಂಕೆ ಮತ್ತು ಎಐಡಿಎಂಕೆ ನಡುವೆ ರಾಜಕೀಯ ವೈರತ್ವವಿದ್ದರೂ ಅವರ ಅಜೆಂಡಗಳು ಮಾತ್ರ ಸಮಾನ ನೆಲೆಯಲ್ಲಿಯೇ ಹುದುಗಿದ್ದವು. ಏಕೆಂದರೆ ೧೯೨೦ರ ದಶಕದಲ್ಲಿಯೇ ಈ ಬ್ರಾಹ್ಮಣ ವಿರೋಧಿ ಚಳುವಳಿಯಿಂದ ಹೊರಬಂದು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ದಲಿತರು ೧೯೬೦ರವರೆಗೂ ತಮ್ಮ ಈ ರಾಜಕೀಯ ನಿಲುವನ್ನು ಬದಲಿಸಿರಲಿಲ್ಲ. ೧೯೬೦ರ ದಶಕದ ನಂತರ ಡಿಎಂಕೆ ಒಂದು ರಾಜಕೀಯ ಪಕ್ಷವಾಗಿ ಚುನಾವಣಾ ಕಣಕ್ಕೆ ಧುಮುಕಿದ ನಂತರವಷ್ಟೇ ಅದರ ಕಡೆಗೆ ವಾಲತೊಡಗಿದರು. ಆದರೂ ಎಂಭತ್ತರ ದಶಕದವರೆಗೂ ರಾಜ್ಯ ಚುನಾವಣೆಗಳಲ್ಲಿ ದ್ರಾವಿಡ ಮುನ್ನೇತ್ರ ಪಕ್ಷಗಳಿಗೂ ಕೇಂದ್ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಓಟ್ ಹಾಕುತಿದ್ದರು. ತೊಂಬತ್ತರ ದಶಕದಲ್ಲಿ ಈ ಸಂಪ್ರದಾಯವನ್ನು ಮುರಿದರು.

ಪಕ್ಕದ ಆಂದ್ರ ಪ್ರದೇಶದಲ್ಲಿ ಎನ್.ಟಿ.ರಾಮರಾವ್ ನೇತೃತ್ವದ ಟಿಡಿಪಿ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಮೂಲಭೂತ ಅಜೆಂಡ ತೆಲುಗು ಜನರ ಆತ್ಮಾಭಿಮಾನದ ಪ್ರಶ್ನೆಯಾಗಿತ್ತು. ಎನ್.ಟಿ.ರಾಮರಾವ್ ಅವರ ಸಿನಿಮಾ ನಟನ ಆಕರ್ಷಣೆ ಮತ್ತು ಜನಪ್ರಿಯತೆಯ ಮೇಲೆಯೇ ಆ ಪಕ್ಷಕ್ಕೆ ದಲಿತರ ಮತಗಳು ದೊರಕಿದ್ದು. ಆದರೆ ಪಕ್ಕದ ತಮಿಳುನಾಡಿಗೆ ಹೋಲಿಸಿದರೆ ಚುನಾವಣಾ ರಾಜಕೀಯದಲ್ಲಿ ಕ್ರಮೇಣ ತೆಲುಗುದೇಶಂ ಪಕ್ಷದ ಪ್ರಭಾವವು ಕುಂಠಿತಗೊಂಡಿದೆ. (ಇದು ೯೦ರ ದಶಕದ ಅವಲೋಕನ : ಅನುವಾದಕ)

ತಳಸಮುದಾಯಗಳ ಪ್ರಾಮುಖ್ಯತೆ ಮತ್ತು ಓಟ್ ಬ್ಯಾಂಕ್ ಸಾಮರ್ಥ್ಯ ಕಾಂಗ್ರೆಸ್‌ನ ಪಕ್ಷದೊಳಗೆ ಮತ್ತು ಮಂತ್ರಿಮಂಡಲದಲ್ಲಿ ದಲಿತ ರಾಜಕಾರಣಿಗಳಿಗೆ ವೈಯುಕ್ತಿಕವಾಗಿ ಪ್ರಭಾವವನ್ನು ಹೆಚ್ಚಿಸಲಿಲ್ಲ ಮತ್ತು ಬಲು ದೊಡ್ಡ ಪರಿವರ್ತನೆಯನ್ನು ತಂದು ಕೊಡಲಿಲ್ಲ. ದಲಿತ ಸಮುದಾಯದ ಸಂಸದರು ಅಥವಾ ಮಂತ್ರಿಗಳ ವೈಯುಕ್ತಿಕ ಸಾಧನೆಗಳು ಮತ್ತು ವರ್ಚಸ್ಸಿಗಿಂತಲೂ ಆ ಪಕ್ಷದಲ್ಲಿ ಓಟ್ ಬ್ಯಾಂಕ್‌ನ ಚುನಾವಣಾ ರಾಜಕೀಯದ ಲೆಕ್ಕಾಚಾರಗಳೇ ಮೇಲುಗೈ ಸಾಧಿಸಿ ದಲಿತ ರಾಜಕಾರಣಿಗಳ ಪ್ರಾಮುಖ್ಯತೆಯೇ ಗೌಣಗೊಂಡಿತು. ಉದಾಹರಣೆಗೆ ಐವತ್ರರ ದಶಕದಲ್ಲಿ ಮೂರು ಬಾರಿ ಸೀಮಿತ ಅವಧಿಗೆ ಬಿಹಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಲಿತ ನಾಯಕ ಭೋಲೆ ಪಾಸ್ವಾನ್ ಶಾಸ್ತ್ರಿ ಅವರು ತಮ್ಮ ಪರಿಶುದ್ಧ ರಾಜಕಾರಣ, ಸರಳತೆ, ಘನತೆವೆತ್ತ ವ್ಯಕ್ತಿತ್ವದಿಂದ ಪಕ್ಷದಲ್ಲಿ ಮತ್ತು ರಾಜ್ಯದಲ್ಲಿ ಮನ್ನಣೆ ಗಳಿಸಿದ್ದರು. ಆದರೆ ರಾಜ್ಯದ ದಲಿತ ರಾಜಕಾರಣದ ಸಂಬಂಧದಲ್ಲಿ ಅವರು ತಳಮಟ್ಟದಲ್ಲಿ, ಪಕ್ಷದ ಕಾರ್ಯಕರ್ತರ ನೆಲೆಯಲ್ಲಿ ಪ್ರಭಾವ ಬೀರಲಿಲ್ಲ. ಅಥವಾ ಪ್ರಭಾವಶಾಲಿಯಾಗಲು ಅವಕಾಶವೇ ಇರಲಿಲ್ಲ. ಇದೇ ರೀತಿ ಇತರೇ ಕೆಲವು ದಲಿತ ಮಂತ್ರಿಗಳು ರಾಜಕೀಯವಾಗಿ ಮುಂಚೂಣಿಗೆ ಬರಲಿಲ್ಲ.

ದಲಿತ ರಾಜಕಾರಣಿಗಳು ತಮ್ಮ ಸಬಲ್ಟ್ರಾನ್ ನೆಲೆಯನ್ನು ಮೀರಿ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ಶ್ರೇಣೀಕೃತ ವ್ಯವಸ್ಥೆಯೊಳಗೆ ಮೇಲ್ಜಾತಿಯವರೊಂದಿಗೆ ಸರಿಸಮನಾಗಿ ಸ್ಪರ್ಧಿಸತೊಡಗಿದಾಗಲೂ ರಾಜಕೀಯವಾಗಿ ಸವರ್ಣೀಯರ ಮತ್ತು ದಲಿತರ ನಡುವಿನ ಕಂದಕವನ್ನು ಮಾತ್ರ ಮುಚ್ಚಲಾಗಲಿಲ್ಲ. ಉನ್ನತ ಸ್ಥಾನಗಳಲ್ಲಿ ಇಂದಿಗೂ ಮೇಲ್ಜಾತಿಗಳ ಪ್ರಮಾಣ, ಪ್ರಭಾವ ಮೇಲುಗೈ ಸಾಧಿಸಿದೆ. ಒಂದು ವೇಳೆ ಪಕ್ಷದ ಚೌಕಟ್ಟಿನೊಳಗೆ ತನ್ನ ಸಮುದಾಯದ ಹಿತಾಸಕ್ತಿಗಳಿಗಾಗಿ, ಅವರ ಒಳಿತಿಗಾಗಿ ವಕಾಲತ್ತು ವಹಿಸುತ್ತ ದಲಿತ ರಾಜಕಾರಣಿ ನಿರಂತರವಾಗಿ ಕಾರ್ಯಪ್ರವೃತ್ತನಾಗಿದ್ದರೆ, ಅವರ ಪರವಾಗಿ ಸದಾ ಧ್ಯಾನಿಸುತ್ತಿದ್ದರೆ ಪಕ್ಷದೊಳಗೆ ಆತನ ರಾಜಕೀಯ ಬೆಳವಣಿಗೆ ಹೆಚ್ಚೂ ಕಡಿಮೆ ಮುಗಿದ ಕಥೆಯಾಗುತಿತ್ತು. ಉದಾಹರಣೆಯಾಗಿ ಯೋಗೇಂದ್ರ ಮಕ್ವಾನ ಅವರ ರಾಜಕೀಯ ಜೀವನವನ್ನೇ ವಿಶ್ಲೇಷಣೆ ಮಾಡಬಹುದು. ಪ್ರತಿಭಾವಂತ ಮತ್ತು ಚೈತನ್ಯಶೀಲ ದಲಿತ ರಾಜಕಾರಣಿಯಾಗಿದ್ದ ಯೋಗೇಂದ್ರ ಮಕ್ವಾನ ಅವರು ತಳಸಮುದಾಯಗಳ ಬದುಕನ್ನು ಕಾಂಗ್ರೆಸ್ ರಾಜಕಾರಣದೊಂದಿಗೆ ಹೇಗೆ ಬೆಸೆಯಬೇಕೆಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕಾರಣಕ್ಕಾಗಿಯೇ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರೂ ರಾಜಕೀಯವಾಗಿ ಪ್ರಾಮುಖ್ಯತೆ ದಕ್ಕಲೇ ಇಲ್ಲ. ಆದರೆ ಇವರ ಸಮಕಾಲೀನರಾದ ಬೂಟಾಸಿಂಗ್ ಅವರು a Mazhabi Sikh (converted from a Sweeper caste) ಇದೇ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಗೃಹಮಂತ್ರಿಗಳಾಗಿ ನಂ ೨ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದರು. ಬೂಟಾಸಿಂಗ್ ಅವರು ತಳ ಸಮುದಾಯಗಳ ಒಳಿತಿಗಾಗಿ ಒಂದು ಪದವನ್ನೂ ಉದ್ಗರಿಸಲಿಲ್ಲ, ಬದಲಾಗಿ ನೆಹರೂ-ಗಾಂಧಿ ವಂಶಕ್ಕಾಗಿ ತೋರಿದ ಅಚಲ ನಿಷ್ಠೆ ಮತ್ತು ನಿರಂತರ ಭಟ್ಟಂಗಿತನಕ್ಕಾಗಿ ಎಲ್ಲ ಬಗೆಯ ರಾಜಕೀಯ ಸವಲತ್ತುಗಳನ್ನು ಗೃಹ ಮಂತ್ರಿಯಂತಹ ಅತ್ಯನ್ನತ ಸ್ಥಾನವನ್ನು ಸಹ ಅಲಂಕರಿಸಿದರು. ಅಷ್ಟೇಕೆ ಈ ನೆಹರೂ-ಗಾಂಧಿ ವಂಶದವರೂ ಸಹ ರಾಜಕಾರಣಿಯೊಬ್ಬ ವೈಯುಕ್ತಿಕ ವರ್ಚಸ್ಸಿನಿಂದ, ತನ್ನ ಜನಪ್ರಿಯತೆಯ ಆಧಾರದಿಂದ ಪಕ್ಷದೊಳಗೆ ಬೆಳೆಯುತ್ತಿದ್ದರೆ ಆತನ ಭವಿಷ್ಯವನ್ನು ಮೊಟಕುಗೊಳಿಸುವಂತಹ ಷಡ್ಯಂತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಕಾಂಗ್ರಸ್ ಪಕ್ಷದ ಈ ಅನಧಿಕೃತ ಪ್ರಣಾಳಿಕೆಗಳು ಮತ್ತು ಜಮೀನ್ದಾರಿ ಐಡಿಯಾಲಜಿಗಳು ತಳ ಸಮುದಾಯದವರಿಗೆ ಪಕ್ಷದೊಳಗೆ ಅಂತರಿಕವಾಗಿ ಮೇಲ್ಮುಖ ಚಲನೆಗೆ ಇರುವ ವಿವಿದ ಅವಕಾಶಗಳನ್ನು ನಿರಾಕರಿಸಿದ್ದವು. ಇದರಿಂದಾಗಿಯೇ ದಲಿತ ರಾಜಕಾರಣಿಗಳು ಪಕ್ಷದೊಳಗಿನ ಮೇಲ್ಜಾತಿ ರಾಜಕಾರಿಣಿಗಳ ಅಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ ಅವರ ಪರ ಮತ್ತು ವಿರೋಧದ ಗುಂಪಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಟ್ಟಿಕೊಂಡರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ದಲಿತ ರಾಜಕಾರಣಿಯನ್ನಾಗಲಿ, ಗುಂಪನ್ನಾಗಲೀ ಕಾಣಲೇ ಇಲ್ಲ. ಇದನ್ನು ಊಹಿಸಲೂ ಸಾಧ್ಯವಿಲ್ಲ

ಆದರೆ ಜಗಜೀವನ ರಾಂ ಅವರು ಇದಕ್ಕೆ ಅಪವಾದ. ಅವರು ದಲಿತ ನಾಯಕರಾಗಿ ಮತ್ತು ಸಮರ್ಥ ಕೇಂದ್ರ ಮಂತ್ರಿಯಾಗಿ ವೈಯುಕ್ತಿಕ ನೆಲೆಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದರು. ನೆಹರೂ ಮಂತ್ರಿಮಂಡಲದಲ್ಲಿ ರಕ್ಷಣಾ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ೧೯೭೯ರ ಚರಣಸಿಂಗ್ ಸರ್ಕಾರದಲ್ಲಿ ಉಪಪ್ರಧಾನ ಮಂತ್ರಿಗಳಾಗಿದ್ದರು. ಜಗಜೀವನ್ ರಾಂ ಅವರು ಕಾಂಗ್ರೆಸ್ ಪಕ್ಷದೊಳಗೆ ಸುಮಾರು ಮೂವತ್ತು ವರ್ಷಗಳ ಕಾಲ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ರಾಜಕಾರಣಿಗಳಾಗಿದ್ದರು. ಇದಕ್ಕೆ ಅವರ ವೈಯುಕ್ತಿಕ ಪರಿಶ್ರಮ ಮತ್ತು ಪ್ರತಿಭೆಯ ಮತ್ತು ನಿರಂತರ ಜನಸಂಪರ್ಕದ ಚಟುವಟಿಕಗಳು ಒಂದು ಕಾರಣವಾಗಿದ್ದರೆ ಕಾಂಗ್ರೆಸ್‌ನೊಂದಿಗಿನ ಆ ಸುಧೀರ್ಘ ಒಡನಾಟದಲ್ಲಿ ಪಕ್ಷದೊಳಗೆ ಯಾವುದೇ ಬಗೆಯ ಭಿನ್ನಮತೀಯ ರಾಜಕಾರಣಕ್ಕೆ ಕೈ ಹಾಕಲಿಲ್ಲ ಮತ್ತು ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ ಮತ್ತು ಮಹಾತ್ವಾಕಾಂಕ್ಷೆ ರಾಜಕಾರಣಕ್ಕೆ ಕಡಿವಾಣ ಹಾಕಿದ್ದರು ಎನ್ನುವ ಅಂಶಗಳೂ ಸಹ ಪ್ರಮುಖ ಕಾರಣಗಳು. ಇವೆರಡೂ ಗುಣಗಳು ಮತ್ತು ಜಗಜೀವನ್ ರಾಂ ಅವರ ದಕ್ಷ ಮಂತ್ರಿಯಾಗಿ ಅವರ ಸಾಧನೆಗಳು ಕಾಂಗ್ರೆಸ್ ಪಕ್ಷವು ಅವರನ್ನು ತಮ್ಮ ಪಕ್ಷದ ದಲಿತ ಮುಖವಾಡವನ್ನಾಗಿ ಬಿಂಬಿಸಲು ಪ್ರೇರೇಪಿಸಿತ್ತು

ಸ್ವಾತಂತ್ರಪೂರ್ವ ಕಾಲದಲ್ಲಿ ೩೦ರ ದಶಕದಲ್ಲಿ ಜಗಜೀವನ ರಾಂ ಅವರು ಗಾಂಧಿಯವರ ಹರಿಜನ ಚಳುವಳಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ೧೯೩೫ರಲ್ಲಿ The All-India Depressed Classes League ನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಜಗಜೀವನರಾಂ ಅವರು ೧೯೩೭ರಲ್ಲಿ ಬಿಹಾರ್‌ನ ವಿಧಾನಸಭೆಗೆ ಶಾಸಕರಾಗಿ ಚುನಾಯಿತರಾದರು. ೧೯೪೬ರಲ್ಲಿ Viceroy’s Executive Council ನಲ್ಲಿ ಕಾರ್ಮಿಕ ಮಂತ್ರಿಯಾಗಿದ್ದರು. ಅಂದಿನಿಂದ ೧೯೮೦ರಲ್ಲಿ ಜನತಾ ಪಕ್ಷ ಪತನದವರೆಗೂ ಸುಮಾರು ನಲವತ್ತು ವರ್ಷಗಳ ಕ್ಯಾಬಿನೆಟ್ ಮಂತ್ರಿಯಾಗಿದ್ದರು. ಒಮ್ಮೆ ಮಂತ್ರಿಯಾದ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಜೆಂಡಾವನ್ನು ಒಂದು ಅಸ್ಮಿತೆಯನ್ನಾಗಿ, ಒಂದು ಅಗತ್ಯವಾದ ಚರ್ಚೆಯನ್ನಾಗಿ ಜಗಜೀವನರಾಂ ತೀವ್ರವಾಗಿ ಮಾಡಲಿಲ್ಲ. ಇವರ ಈ ಜಾತಿ ಸಂಕೀರ್ಣತೆ ಮತ್ತು ಶೋಷಣೆಯ ಕುರಿತಾಗಿ ತಮ್ಮ ಪುಸ್ತಕ Caste Challenge in India ದಲ್ಲಿ ಹೀಗೆ ಬರೆಯುತ್ತಾರೆ: “Not to hurt any class or caste but to provide a brief historical account of the Hindu social system… and the miserable condition of the Scheduled Castes and Tribes” (Ram 1980: 5-6).

ಬಾಬು ಜಗಜೀವನ ರಾಂ ಅವರು ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರವನ್ನು ತಮ್ಮ ಬಳಿ ಕೋಢೀಕರೆಸಿಕೊಂಡಿದ್ದರೆಂಬುದಕ್ಕೆ, ಅವರೊಬ್ಬ ಪ್ರಭಾವಿಶಾಲಿ ರಾಜಕೀಯ ನಾಯಕರಾಗಿದ್ದರೆಂಬುದಕ್ಕೆ ಮಹತ್ವದ ವಿಶ್ಲೇಷಣೆಗಳು ದೊರಕುತ್ತಿಲ್ಲ. ಆದರೆ ನೆಹರೂ ನಂತರದ ವರ್ಷಗಳಲ್ಲಿ ಜಗಜೀವನ ರಾಂ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಸಂಧಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸುತ್ತಾರೆ. ೧೯೬೬ರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಿದ ಇಂದಿರಾ ಗಾಂಧಿಯವರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ೧೯೬೯ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಗೊಂಡಾಗ ಇಂದಿರಾ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಬಾಬುರವರ ಇಂದಿರಾ ಕಾಂಗ್ರೆಸ್‌ನೊಂದಿಗಿನ ವಿಶ್ವಾಸ ೧೯೭೭ರವೆರೆಗೂ ಮುಂದುವರೆಯುತ್ತದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಬಿಹಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಾಬುರವರು ಸಂಪೂರ್ಣ ಅಧಿಕಾರವನ್ನು ಪಡೆದಿದ್ದರು. ಅವರ ಈ ಅಧಿಕಾರ ಪಕ್ಕದ ಉತ್ತರ ಪ್ರದೇಶಕ್ಕೂ ವ್ಯಾಪಿಸಿತ್ತು ಎಂದೇ ವ್ಯಾಖ್ಯಾನಿಸುತ್ತಾರೆ. ಅವರ ಚಮ್ಮಾರ ಸಮುದಾಯವು ಉತ್ತರ ಭಾರತದಲ್ಲಿ ಬಹುಸಂಖ್ಯಾತ ಪರಿಶಿಷ್ಟ ಜಾತಿಗಳಲ್ಲೊಂದಾಗಿತ್ತು. ಇದರ ಫಲವಾಗಿ ಅನೇಕ ಸಂದರ್ಭಗಳಲ್ಲಿ ಉತ್ತರ ಭಾರತದ ಬಹುಪಾಲು ದಲಿತ ಸಂಸದರು ರಾಜಕೀಯವಾಗಿ ಬಾಬುರವರು ಅನುಯಾಯಿಗಳಾಗಿದ್ದರು ಮತ್ತು ಅನೇಕ ಕ್ಲಿಷ್ಟ ಪರಿಸ್ಥತಿಗಳಲ್ಲಿ ಬಾಬುರವರ ಸಮರ್ಥಕರಾಗಿ ಅವರನ್ನು ಬೆಂಬಲಿಸುತ್ತಿದ್ದರು. ಬಾಬು ಜಗಜೀವನ ರಾಂ ಅವರು ತಮ್ಮ ಈ ಪ್ರಭಾವವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದೊಳಗಿನ ಅನೇಕ ಆತಂಕದ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಮತ್ತು ಇಂದಿರಾ ಗಾಂಧಿಯವರನ್ನು ಕೂಡ ಈ ಕ್ಲಿಷ್ಟ ಸಂದರ್ಭಗಳಿಂದ ಹೊರ ಬರಲು ನೆರವಾಗಿದ್ದರು. ರೇಲ್ವೆ ಮಂತ್ರಿಗಳಾಗಿದ್ದಾಗ ರೈಲ್ವೇ ಕಾರ್ಮಿಕರ ಮಟ್ಟದಲ್ಲಿ ದಲಿತರ workforce ಅನ್ನು ಕಟ್ಟಿದ್ದರು. ಇತರೇ ಖಾತೆಗಳ ಮಂತ್ರಿಗಳಾಗಿದ್ದಾಗಲೂ ಮೀಸಲಾತಿ ಕೋಟಾದ ಅಡಿಯಲ್ಲಿ ಬರುವ ಕಾನೂನಿಗೆ ಅನುಗುಣವಾದ ನೇಮಕಾತಿಗಳನ್ನು ನ್ಯಾಯಬದ್ಧವಾದ ನಡೆಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ೧೯೭೭ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಒಬ್ಬನೇ ಒಬ್ಬ ದಲಿತ ಸಂಸದ ಕೂಡ ಬಾಬುರವರನ್ನು ಹಿಂಬಾಲಿಸಲಿಲ್ಲ. ನಂತರ ಜನತಾ ಪಕ್ಷವನ್ನು ಸೇರಿಕೊಂಡರು. ಆದರೆ ಮರಳಿ ೧೯೮೦ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಧಿಕ ದಲಿತರ ಮತಗಳನ್ನು ಗಳಿಸುವುದನ್ನು ತಡೆಯುವಲ್ಲಿ ಸೋತರು. ಇದಕ್ಕೆ ಉತ್ತರ ಹುಡುಕುವುದು ಕಷ್ಟ. ಬಹುಶಃ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಬಾಬುರವರು ದಲಿತ ಸಂಸದರನ್ನೊಳಗೊಂಡ ತಮ್ಮದೇ ಆದ ಒಂದು ಪ್ರಭಾಶಾಲಿ ತಂಡವನ್ನು ಕಟ್ಟಿಕೊಳ್ಳದೇ ಹೋದದ್ದು ಇದಕ್ಕೆ ಮೂಲಭೂತ ಕಾರಣವಿರಬಹುದು.

ಅಂಬೇಡ್ಕರ್ ನಂತರದ ದಲಿತರು ಮತ್ತು ಅಂಬೇಡ್ಕರ್‌ವಾದ

ಬಹುಜನ ಸಮಾಜ ಪಕ್ಷವು ಇಂಡಿಯಾದಲ್ಲಿ ರಾಜಕೀಯ ಪಕ್ಷವಾಗಿ ಪ್ರವೇಶ ಪಡೆಯುವವರೆಗೂ “ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ” ( ಆರ್‌ಪಿಐ) ಪಕ್ಷವೊಂದೇ ದಲಿತರ ಹಿತಾಸಕ್ತಿಯನ್ನೇ ಪ್ರಮುಖವಾದ ಅಜೆಂಡವಾಗುಳ್ಳ ರಾಜಕೀಯ ಪಕ್ಷವಾಗಿತ್ತು. ಕಾಂಗ್ರೆಸ್ ತೊರೆದ ನಂತರ ಅಂಬೇಡ್ಕರ್ ಅವರು ತಮ್ಮ ಕಡೆಯ ರಾಜಕೀಯ ಚಳುವಳಿಯನ್ನು ರೂಪಿಸಿದ್ದು ಈ ಆರ್‌ಪಿಐ ಪಕ್ಷವನ್ನು ಸ್ಥಾಪಿಸುವುದರ ಮೂಲಕ. ಆದರೆ ಅಂಬೇಡ್ಕರ್ Young_Ambedkarಅವರ ನಿಧನದ ನಂತರವಷ್ಟೇ ಈ ಆರ್‌ಪಿಐ ಪಕ್ಷದ ಗಮನಾರ್ಹ ಬೆಳವಣಿಗೆಯನ್ನು ಸಾಧಿಸತೊಡಗಿತು. “ಪರಿಶಿಷ್ಟ ಜಾತಿಗಳ ಒಕ್ಕೂಟ”ವೇ ರೂಪಾಂತರಗೊಂಡು “ಆರ್‌ಪಿಐ” ಪಕ್ಷವಾಗಿ ಹುಟ್ಟು ಪಡೆಯಿತು. ಆದರೆ ತನ್ನ ಪ್ರಾರಂಭದ ದಿನಗಳಿಂದಲೆ ಆರ್‌ಪಿಐ ಪಕ್ಷವು ಐಡಿಯಾಲಜಿ, ಭಿನ್ನಮತೀಯತೆಗಳಂತಹ ಆರ್ಗನೈಸೇಷನ್ ಬಿಕ್ಕಟ್ಟಿಗೆ ತುತ್ತಾಯಿತು. ಬಹುಪಾಲು ಮಹರ್ ಸಮುದಾಯಕ್ಕೆ ಸೇರಿದ ವಿಶಾಲ ವ್ಯಾಪ್ತಿಯ ಆರ್ಥಿಕ ಮತ್ತು ವರ್ಗ ಸಂಘರ್ಷವನ್ನು ಆಧರಿಸಿ ಸಂಘಟನೆ ಕಟ್ಟಲು ಮುಂದಾಗಿದ್ದ ಹಳ್ಳಿಗಳಲ್ಲಿ ವಾಸಿಸುವ ಹಳೆ ತಲೆಮಾರಿನ ಕಾರ್ಯಕರ್ತರಿಗೂ ಮತ್ತು ಹಳ್ಳಿಗಳನ್ನು ತೊರೆದು ನಗರ ಕೇಂದ್ರಿತ ದಲಿತ ಚಳುವಳಿಯನ್ನು ಕಟ್ಟಲು ಉತ್ಸುಕರಾದಂತಹ ಶಿಕ್ಷಿತ ಹೊಸ ತಲೆಮಾರಿನ ಕಾರ್ಯಕರ್ತರ ನಡುವೆಯೂ ಮೊದಲ ಒಡಕು ಉಂಟಾಯಿತು. ೧೯೫೯ರ ವೇಳೆಗೆ ಆರ್‌ಪಿಐ ಪಕ್ಷವು ಇಬ್ಭಾಗವಾಗಿ ಎರಡು ವಿಭಿನ್ನ ಬಣಗಳು ದಲಿತ ಸಮಾವೇಶಗಳನ್ನು ಹಮ್ಮಿಕೊಂಡವು. ಆರ್‌ಪಿಐ ಪಕ್ಷದ ಈ ಒಡಕಿನಿಂದಾಗಿ ೧೯೬೨ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕೀಕರಣಗೊಂಡ ಮಹಾರಾಷ್ಟ್ರದಲ್ಲಿ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಯಿತು. ನಂತರದ ವರ್ಷಗಳಲ್ಲಿ ಬೆರೆಳೆಣಿಕೆಯಷ್ಟು ವಿಧಾನಸಭೆ ಸ್ಥಾನಗಳನ್ನು ಗೆಲ್ಲುವಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ನಂತರ ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ, ಹರ್‍ಯಾಣ ರಾಜ್ಯಗಳಲ್ಲೂ ತನ್ನ ಪಕ್ಷವನ್ನು ಸಂಘಟಿಸಿತು. ಉತ್ತರ ಪ್ರದೇಶದಲ್ಲಿ ಚಮ್ಮಾರ್ ಸಮುದಾಯಕ್ಕೆ ಸೇರಿದ ಬೌದ್ಧ ಮತದ ಅನುಯಾಯಿ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ಸಂಘಟಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಲಿತರ ಮತ್ತು ಮುಸ್ಲಿಂ ಮತಗಳನ್ನು ಆರ್‌ಪಿಐ ಪಕ್ಷದ ಪರವಾಗಿ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ ೧೯೬೯ರ ಕಾಂಗ್ರಸ್ ಪಕ್ಷದ ವಿಭಜನೆ ರಾಜಕೀಯ ಲೆಕ್ಕಚಾರಗಳನ್ನೇ ಬುಡಮೇಲು ಮಾಡಿತು. ೧೯೭೧ರ ವೇಳೆಗೆ ಆರ್‌ಪಿಐ ಪಕ್ಷದಲ್ಲಿ ತನ್ನ ಎದುರಾಳಿಯಾಗಿದ್ದ ರಾಮಜಿ ರಾಮ್ ಅವರೊಂದಿಗೆ ಬಿ.ಪಿ.ಮೌರ್ಯ ಅವರು ಆರ್‌ಪಿಐ ಪಕ್ಷವನ್ನು ತ್ಯಜಿಸಿ ಇಂದಿರಾ ಕಾಂಗ್ರಸ್ ಪಕ್ಷಕ್ಕೆ ಸೇರಿಕೊಂಡು ಮರಳಿ ಕಾಂಗ್ರೆಸ್ ಪಕ್ಷದಡಿಯಲ್ಲಿ ಲೋಕಸಬೆಗೆ ಆಯ್ಕೆಗೊಂಡರು.ಅಲ್ಲಿಗೆ ಉತ್ತರ ಪ್ರದೇಶದಲ್ಲಿ ಆರ್‌ಪಿಐ ಪಕ್ಷದ ರಾಜಕೀಯ ಆಸ್ತಿತ್ವ ಹೆಚ್ಚೂ ಕಡಿಮೆ ಅಂತ್ಯಗೊಂಡಿತು.

RPI ಪಕ್ಷದ ಸೀಮಿತ ಪ್ರಭಾವಕ್ಕೆ ಉತ್ತರವೇನೋ ಎಂಬಂತೆ ಅಮೇರಿಕಾದ ಬ್ಲಾಕ್ ಪ್ಯಾಂಥರ್‍ಸನ ಸ್ಪೂರ್ತಿಯಿಂದಾಗಿ ೧೯೭೦ರಲ್ಲಿ ಮಹಾರಾಷ್ಟದಲ್ಲಿ ದಲಿತ ಪ್ಯಾಂಥರ್‍ಸ ಸಂಘಟನೆ ಹುಟ್ಟಿಕೊಂಡಿತು.ಆಗ ಜೆ.ಪಿ. ಚಳುವಳಿ ತನ್ನ ಬಿರುಸನ್ನು, ವ್ಯಾಪ್ತಿಯನ್ನು ದೇದಾದ್ಯಾಂತ ವ್ಯಾಪಿಸಿಕೊಳ್ಳುತ್ತಿದ್ದಂತಹ ಕಾಲ.ಭ್ರಷ್ಟಾಚಾರದ ವಿರುದ್ದ ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟಿದ್ದ ಜೆ.ಪಿ.ಯವರು ಆ ಕಾಲಕ್ಕೆ ಅತ್ಯಂತ ಪ್ರಭಾವಿಶಾಲಿ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಪ್ರಬಲ ಸವಾಲನ್ನು ಒಡ್ಡಿದ್ದರು. ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದ, ಬಹುಪಾಲು ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗಗಳನ್ನ ಆಕರ್ಷಿಸಿದ್ದ ಈ ಜೆ.ಪಿ ಯವರ ನವನಿರ್ಮಾಣ ಚಳುವಳಿಗೆ ನವ ಅಂಬೇಡ್ಕರವಾದಿಗಳ ತರುಣರ ಗುಂಪಾದ ದಲಿತ ಪ್ಯಾಂಥರ್‍ಸ ತಮ್ಮ ಸಹಯೋಗದ ಕೊಂಡಿಯನ್ನು ಜೋಡಿಸಿಕೊಳ್ಳಲು ವಿಫಲವಾಯಿತು. ಈ ಜಾತ್ಯಾತೀತ ಪ್ರಗತಿಪರ ಗುಂಪು ಅತ್ತ ಎಡಪಂಥೀಯರೊಂದಿಗೂ ಗುರುತಿಸಿಕೊಳ್ಳದೆ, ಇತ್ತ ನವನಿರ್ಮಾಣದ ಜೆ.ಪಿ. ಚಳುವಳಿಯೊಂದಿಗೂ ಗುರುತಿಸಿಕೊಳ್ಳದೆ ತಠಸ್ಥವಾಗುಳಿದಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಅತ್ಯಂತ ಪ್ರಖರ ವೈಚಾರಿಕ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್‍ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್‍ಸ ಸಂಘಟನೆಯನ್ನೂ ಬಿಡಲಿಲ್ಲ. ರಾಜಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ನೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾರ್ಕ್ಸವಾದದ ನೆಲೆಗಟ್ಟಿನಲ್ಲಿ, ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ. ಇಲ್ಲಿ ಢಸಾಳರು ಮಾರ್ಕ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು.ಇದು ಅಂಬೇಡ್ಕರವಾದದ ಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು. ಕಡೆಗೆ ಢಸಾಳರು ೧೯೭೭ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್‍ಸ ಇಬ್ಭಾಗವಾಯಿತು. ನಂತರ ಮಹಾರಾಷ್ಟ್ರದಲ್ಲಿನ ದಲಿತ ಚಳುವಳಿಗಳು ಮತ್ತು ಸಂಘಟನೆಗಳು ಸೂಕ್ತವಾದ ರಾಜಕೀಯ ನೆಲೆ ದೊರಕದೆ ಅತಂತ್ರರಾಗಿ ಹೋರಾಟ ನಡೆಸಬೇಕಾಯಿತು. ಇವರ ಹೋರಾಟಕ್ಕೆ ಅಪಾರ ಜನಬೆಂಬಲ ಹಾಗೂ ಜನಪ್ರಿಯತೆ ದೊರಕಿದ್ದರೂ ಒಂದು ಗಟ್ಟಿಯಾದ ಕೇಂದ್ರ, ಸೂಕ್ತವಾದ ರಣನೀತಿ ದೊರೆಯದೆ ಒಂದು ಬಿಡಿಯಾದ ಸಂಘಟನೆಗಳಾಗಿ ಉಳಿದುಕೊಂಡವು. ಆದರೆ ೭೦ರ ದಕದ ಈ ತಲ್ಲಣಗಳು ಹಾಗೂ ದಲಿತ ಸಂಘಟನೆಗಳ ವಿಘಟನೆಗಳ ನಡುವೆಯೇ ಮರಾಠಿ ದಲಿತ ಲೇಖಕರು ಅತ್ಯಂತ ದಿಟ್ಟವಾಗಿ, ಸ್ಪಷ್ಟವಾಗಿ ಬರೆಯತೊಡಗಿದರು. ಅಂಬೇಡ್ಕರವಾದವನ್ನು ತಮ್ಮೊಳಗೆ ಬೇರು ಮಟ್ಟದಲ್ಲಿ ಬಿಟ್ಟುಕೊಂಡು ಇದರ ಸ್ಪೂರ್ತಿಯಿಂದ ೭೦ ಹಾಗು ೮೦ರ ದಶಕಗಳಲ್ಲಿ ಶ್ರೇಷ್ಟ ದಲಿತ ಸಾಹಿತ್ಯವನ್ನು ಬರೆದರು.ಹೊಸ ಚಿಂತನೆಯನ್ನೇ ರೂಪಿಸಿದರು. ಇದು ಅತ್ಯಂತ ಸೃಜನಶೀಲ ಸಾಹಿತ್ಯದ, ಜೀವಪರ ಸಾಹಿತ್ಯದ ಕಾಲಘಟ್ಟವಾಗಿತ್ತು. ದಲಿತ ಅಕ್ಷರಸ್ಥರಲ್ಲಿ ಹೊಸ ಚಿಂತನೆಗಳನ್ನು, ಬರವಣಿಗೆಯ, ಭಾಷೆಯ ಹೊಸ ನುಡಿಕಟ್ಟನ್ನೂ ಕಟ್ಟಿಕೊಟ್ಟಿತು.

ಈ ದಲಿತ ಸಾಹಿತ್ಯ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ಕರ್ನಾಟಕದಲ್ಲಿಯೂ ದಲಿತ ಲೇಖಕರ ಒಕ್ಕೂಟ ಸಂಘಟಿತಗೊಳ್ಳತೊಡಗಿತು. ಅದೇ ಸಂದರ್ಭದಲ್ಲಿ ೧೯೭೪ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪನವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ ತಳಸಮುದಾಯಗಳ ನೋವಿಗೆ, ಬಡತನಕ್ಕೆ ಸ್ಪಂದಿಸಲಾರದ ಸಾಹಿತ್ಯಕ್ಕೆ ಅರ್ಥವೇ ಇಲ್ಲ, ಈ ಹಿನ್ನೆಲೆಯಲ್ಲಿ ಒಂದು ವೇಳೆ ಕನ್ನಡದಲ್ಲಿ ಸಾಹಿತ್ಯ ರಚನೆಗೊಂಡಿದ್ದರೆ ಆಗ ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬೂಸಾ ಎಂದು ಟೀಕಿಸಿದರು. ಆಗ ಕರ್ನಾಟಕದಲ್ಲಿ ಬಲು ದೊಡ್ಡ ವಿವಾದವೇ ಸೃಷ್ಟಿಯಾಯಿತು. ದಲಿತ ಲೇಖಕರು ಮತ್ತು ಇತರೇ ಪ್ರಗತಿಪರ ಚಿಂತಕರು ಬಸವಲಿಂಗಪ್ಪನವರನ್ನು ಸಂಪೂರ್ಣವಾಗಿ ಬೆಂಬಲಿಸಿದರು. ೧೯೭೪ರಲ್ಲಿ ದಲಿತ ಲೇಖಕರ ಸಮ್ಮೇಳನ ನಡೆಯಿತು. ಮುಂದಿನ ವರ್ಷಗಳಲ್ಲಿ ಲೇಖಕ ಇಂದೂಧರ ಹೊನ್ನಾಪುರ ಸಂಪಾದಕತ್ವದಲ್ಲಿ “ಸುದ್ದಿ ಸಂಗಾತಿ” ಪತ್ರಿಕೆ ಪ್ರಕಟಣೆಗೊಳ್ಳತೊಡಗಿತು. ಇದೇ ಸಂದರ್ಭದಲ್ಲಿ ವಿವಿಧ ದಲಿತ ಗುಂಪುಗಳು ಮತ್ತು ಸಂಘಟಣೆಗಳೆಲ್ಲ ಒಗ್ಗೂಡಿ “ದಲಿತ ಸಂಘರ್ಷ ಸಮಿತಿ” ಎನ್ನುವ ಪ್ರಗತಿಪರ ಸಂಘಟನೆಯನ್ನು ಕಟ್ಟಿದರು. ನಂತರ ೨೦ ವರ್ಷಗಳ ಕಾಲ ೮೦ರ ದಶಕದುದ್ದಕ್ಕೂ ಒಂದು ದೊಡ್ಡ ಪ್ರಗತಿಪರ, ಜಾತ್ಯಾತೀತ ಸಂಘಟನೆಯಾಗಿ ಬೆಳೆಯಿತು. ಅನೇಕ ದಲಿತ ಲೇಖಕರಲ್ಲಿ ಅನಾಥ ಪ್ರಜ್ನೆಯನ್ನು ತೊಡೆದು ಹಾಕಿತು.ಆ ಕಾಲಘಟ್ಟದ ಈ ದಲಿತ ಚಳುವಳಿಗೆ ದಕ್ಕಿದ ವೈಚಾರಿಕತೆಯ ಆಯಾಮ, ಸಿದ್ಧಾಂತದ ಹಿರಿಮೆ ನಿಜಕ್ಕೂ ಬೆರಗುಗೊಳಿಸುತ್ತದೆ. ತೊಂಬತ್ತರ ದಶಕದ ವೇಳೆಗೆ ಸಾವಿರಾರು ದಲಿತ ಕಾರ್ಯಕರ್ತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕನಾಟಕದ ದಲಿತ ಚಳುವಳಿ ನಗರಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿತ್ತು. ಗ್ರಾಮಗಳಲ್ಲಿನ ದಲಿತರು ಹೆಚ್ಚಾಗಿ ದಲಿತ ಸಂಘರ್ಷ ಸಮಿತಿಯ ಮೂವ್‌ಮೆಂಟನಲ್ಲಿ ಒಳಗೊಳ್ಳಲಿಲ್ಲ. ಅವರ ಪಾಲ್ಗೊಳ್ಳುವಿಕೆ ಸೀಮಿತವಾಗಿತ್ತು. ಆದರೆ ಬಿಹಾರ್ ರಾಜ್ಯದಲ್ಲಿ ಮಾರ್ಕ್ಸಿಸಂನಿಂದ ಪ್ರೇರಣೆ ಪಡೆದ ದಲಿತ ಸಂಘಟನೆಗಳು ಗ್ರಾಮಗಳಲ್ಲಿ ಪ್ರಭಾವಶಾಲಿಯಾಗಿದ್ದವು. ಅಂದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ದಲಿತ ಸಂಘಟನೆಗಳು ಮಾರ್ಕ್ಸಿಸಂ ಅನ್ನು ತಮ್ಮ ಚಳುವಳಿಗೆ ಸ್ಪೂರ್ತಿಯಾಗಲಿಲ್ಲವೆಂದರ್ಥವಲ್ಲ ಅಥವಾ ಅಂಬೇಡ್ಕರ್‌ವಾದ ಕೇವಲ ನಗರಕ್ಕೆ ಸೀಮಿತವಾಗಿತ್ತು ಎನ್ನುವುದೂ ಸತ್ಯವಲ್ಲ. ಏಕೆಂದರೆ ಕಾನ್ಸೀರಾಂ ಅವರು ಉತ್ತರಪ್ರದೇಶದಲ್ಲಿ ಅಂಬೇಡ್ಕರ್ ಅವರ ತತ್ವಗಳನ್ನು, ಚಿಂತನೆಗಳನ್ನು ಬಳಸಿಕೊಂಡು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬಿಎಸ್‌ಪಿ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿದರು.

ಚುನಾವಣಾ ರಾಜಕೀಯದ ಹಿನ್ನೆಲೆಯಲ್ಲಿ ಉತ್ತರ ಭಾರತ ಮತ್ತು ಪಶ್ಚಿಮ ಭಾರತಗಳಲ್ಲಿ ಅಂಬೇಡ್ಕರ್‌ವಾದದ ಚಳುವಳಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದಿದ್ದರೂ ಅಂಬೇಡ್ಕರ್ ಅವರ ಚಿಂತನೆಗಳು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಹೊಸ ತಲೆಮಾರಿನ ದಲಿತರು ಅಂಬೇಡ್ಕರ್‌ವಾದದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ( ೯೦ರ ದಶಕ) ಅಂಬೇಡ್ಕರ್ ಅವರು ಬರೆದ ಪುಸ್ತಕ “Riddles in Hinduism” ಅತಿ ಹೆಚ್ಚು ಮುದ್ರಣಗಳನ್ನು ಮತ್ತು ಮರುಮುದ್ರಣಗಳನ್ನು ಕಂಡಿತು. ಇದನ್ನು ಸರ್ಕಾರವೇ ದಲಿತ ಚಿಂತಕರ ನೇತೃತ್ವದಲ್ಲಿ ಪ್ರಕಟಿಸಿದರು. ಅಂಬೇಡ್ಕರ್ ಅವರ ಕಾಲಘಟ್ಟದಲ್ಲಿ ಇದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಏಕೆಂದರೆ ಆ ಕಾಲದಲ್ಲಿ ಇದು ತುಂಬಾ inflammatory ಎಂದೇ ವಿವಾದಕ್ಕೀಡಾಗಿತ್ತು.

ಮಹಾರಾಷ್ಟ್ರ ಮತ್ತು ಕರ್ನಾಟಕ ಅಂಬೇಡ್ಕರ್ legacy ಯ ಕೇಂದ್ರ ಸ್ಥಾನಗಳಾಗಿವೆ. ಅಂಬೇಡ್ಕರ್ ಅವರ ಮೂರ್ತಿಗಳು ದೇಶಾದ್ಯಾಂತ ಸ್ಥಾಪಿತಗೊಂಡಿವೆ. ಅಂಬೇಡ್ಕರ್‌ವಾದ ಇಂದು (೯೦ರ ದಶಕ) ತಳಸಮುದಾಯಗಳ ನಾಯಕರಿಗೆ, ಚಿಂತಕರಿಗೆ ತಮ್ಮನ್ನು ತಮ್ಮ ಸಮುದಾಯಗಳ ಹಕ್ಕದಾರರು ಮತ್ತು ನೇತಾರರನ್ನಾಗಿ ಬಿಂಬಿಸಿಕೊಳ್ಳಲು ಸಹಾಯಕಾರಿಯಾಗಿದೆ. ಅಂಬೇಡ್ಕರ್‌ವಾದದ ಈ ಹೊಸ ಹುಟ್ಟು ಮತ್ತು ಯಶಸ್ವೀ ಸಂಘಟನೆಯ ತೀವ್ರತೆಯಲ್ಲಿ ನಿಜಕ್ಕೂ ಘಾಸಿಗೊಂಡಿದ್ದು ಗಾಂಧಿ. ಒಂದು ಕಾಲದಲ್ಲಿ ಹರಿಜನರ ನೇತಾರ ಎಂದು ಕರೆಯಲ್ಪಡುತ್ತಿದ್ದ ಗಾಂಧೀಜಿಗೆ ಇಂದಿನ ಸಬಲ್ಟ್ರಾನ್ ನೆಲೆಯಲ್ಲಿ ಒಂದಿಂಚೂ ಜಾಗವಿಲ್ಲ.

ಕಾನ್ಸೀರಾಂ : BAMCEF ನಿಂದ ಬಹುಜನ ಸಮಾಜ್ ಪಾರ್ಟಿಯವರೆಗೆ

೧೯೩೪ರಲ್ಲಿ ಪಂಜಾಬಿ ಚಮಾರ್ ಸಮುದಾಯದಲ್ಲಿ ಜನಿಸಿದ ಕಾನ್ಸೀರಾಂ ಅವರು ತಮ್ಮ ಬಾಲ್ಯದ ವರ್ಷಗಳಲ್ಲಿ ಅಸ್ಪೃಶ್ಯತೆಯ ದೌರ್ಜ್ಯನ್ಯವನ್ನು ಹೆಚ್ಚಾಗಿ ಎದುರಿಸಲಿಲ್ಲ. ಅವರ ತಾರುಣ್ಯದ ದಿನಗಳಲ್ಲಿಯೂ ಅಸಮಾನತೆ ಮತ್ತು ತಾರತಮ್ಯ ಅವರ ಪಂಜಾಬಿನ ವ್ಯವಸ್ಥೆಯಲ್ಲಿ ತೀವ್ರವಾಗಿ ಭಾದಿಸುತ್ತಿರಲಿಲ್ಲ. ಬಿಎಸ್.ಸಿ ಪದವಿಯನ್ನು ಮುಗಿಸಿದ ನಂತರ ಸರ್ವೇ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಕಾನ್ಸೀರಾಂ ನಂತರ ಡಿಫೆನ್ಸ್ ಇಲಾಖೆಯ ಪ್ರೊಡಕ್ಷನ್ ವಿಭಾಗದಲ್ಲಿ ವರ್ಗಾವಣೆಗೊಂಡರು. ನೇರವಾಗಿ ಅಸ್ಪೃಶ್ಯತೆಯ ದೌರ್ಜ್ಯನ್ಯಕ್ಕೆ ಒಳಗಾಗದಿದ್ದರೂ ೧೯೬೫ರಲ್ಲಿ ಅಂಬೇಡ್ಕರ್ ಜನ್ಮದಿನದಂದು ಅಂಗೀಕಾರವಾಗಿದ್ದ ಸರ್ಕಾರಿ ರಜವನ್ನು ರದ್ದು ಮಾಡುವ ಆದೇಶದ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾಗ maya[1]ಈ ಹೋರಾಟಕ್ಕೆ ಪ್ರತ್ಯಕ್ಷವಾಗಿ ಸಾಕ್ಷಿಯಾಗಿದ್ದ ಕಾನ್ಸೀರಾಂ ಮೊಟ್ಟ ಮೊದಲ ಬಾರಿಗೆ ಪರಿಶಿಷ್ಟ ಜಾತಿಗಳ ಶೋಷಣೆಯ ಅನುಭವಕ್ಕೆ ಒಳಗಾದರು. ನಂತರ ಅಂಬೇಡ್ಕರ್ ಅವರ “Annihilation of Caste” ಪುಸ್ತಕವನ್ನು ಓದಿದಾಗ ಅವರಿಗೆ ಇಂಡಿಯಾದ ಜಾತಿಪದ್ಧತಿಯ ಕ್ರೂರತೆ ಆಳವಾಗಿ ಕಲುಕಿತು. ಈ ಪುಸ್ತಕವನ್ನು ಒಂದು ರಾತ್ರಿಯಲ್ಲಿ ಮೂರು ಬಾರಿ ಓದಿದ ಕಾನ್ಸೀರಾಂ ನಂತರ ಮೂರು ದಿನಗಳ ಕಾಲ ನಿದ್ರಿಸಲಿಲ್ಲ. ಅಂಬೇಡ್ಕರ್ ಅವರ ರಾಜಕೀಯ ಆಕ್ಟಿವಿಸಂಗೆ ಕಾಲಿಟ್ಟ ಕಾನ್ಸೀರಾಂ ಅವರಿಗೆ ಬುದ್ಧಿಸಂ ಕಡೆಗೆ ಆಕರ್ಷಿತರಾಗಲಿಲ್ಲ. ಆದರೆ ಆರಂಭದಲ್ಲಿ ಕಾನ್ಸೀರಾಂ ಅವರೊಂದಿಗೆ ಕೈಜೋಡಿಸಿದ್ದು ಮಹರ್ ಜಾತಿಗೆ ಸೇರಿದ ನಂತರ ಬೌದ್ಧ ಮತಕ್ಕೆ ಮತಾಂತರಗೊಂಡ ಡಿ.ಕೆ.ಖಾರ್ಪಡೆ ಅವರು. ಇವರಿಬ್ಬರೂ ಮೇಲ್ಜಾತಿ ಅಧಿಕಾರಿಗಳು ಪರಿಶಿಷ್ಟ ಜಾತಿಯ ನೌಕರರ ಮೇಲೆ ಕೆಲಸದ ವೇಳೆಯಲ್ಲಿ ನಡೆಸುವ ಶೋಷಣೆಗಳ ವಿರುದ್ಧ ದಲಿತ ಮತ್ತು ಹಿಂದುಳಿದ ಜಾತಿಯ ನೌಕರರ ಸಂಘಟನೆಗೆ ಮುಂದಾದರು. ೧೯೭೧ರ ವರೆಗೂ ಸರ್ಕಾರಿ ಸೇವೆಯಲ್ಲಿ ಮುಂದುವರೆದ ಕಾನ್ಸೀರಾಂ ಅವರು ಪರಿಶಿಷ್ಟ ಸಮುದಾಯದಕ್ಕೆ ಸೇರಿದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಅನ್ಯಾಯವಾಗಿರುವುದನ್ನು ಪ್ರತಿಭಟಿಸಿದರು. ಈ ಪ್ರತಿಭಟನೆ ಮುಂದುವರೆದು ಕಾನ್ಸೀರಾಂ ಅವರು ಸೀನಿಯರ್ ಅಧಿಕಾರಿಯೊಬ್ಬರಿಗೆ ಕೆನ್ನೆಗೆ ಬಾರಿಸುವವರೆಗೂ ಮುಂದುವರೆಯಿತು. ನಂತರ ಶಿಸ್ತು ಸಮಿತಿಯ ಸಭೆಗಳಿಗೂ ಹಾಜರಾಗದೆ ಪ್ರತಿಭಟಿಸಿದ ಕಾನ್ಸೀರಾಂ ತಮ್ಮ ಸರ್ಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ಸಂಪೂರ್ಣ ಹೋರಾಟದ ಹಾದಿಗೆ ಧುಮುಕಿದರು.

೧೯೭೧ರಲ್ಲಿ ಕಾನ್ಸೀರಾಂ ಮತ್ತು ಅವರ ಸಂಗಡಿಗರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರರೇ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಒಕ್ಕೂಟವನ್ನು ಹುಟ್ಟುಹಾಕಿದರು. ಈ ಫೆಡರೇಶನ್ ಅನ್ನು ಪೂನಾ ಚಾರಿಟಿ ಕಮಿಷನರ್ ಅಡಿಯಲ್ಲಿ ನೊಂದಾಯಿಸಿದರು. ಇದು ಸ್ಥಾಪಿತಗೊಂಡ ಒಂದು ವರ್ಷದೊಳಗೆ ಒಂದು ಸಾವಿರ ಸದಸ್ಯರು ಈ ಒಕ್ಕೂಟಕ್ಕೆ ನೊಂದಾಯಿತರಾದರು. ಬಹುಪಾಲು ಸದಸ್ಯರು ಡಿಫೆನ್ಸ್, ಅಂಚೆ ಮತ್ತು ತಂತಿ ಇಲಾಖೆಗೆ ಸೇರಿದ ನೌಕರರು. ಈ ಒಕ್ಕೂಟದ ಮೊದಲ ವಾರ್ಷಿಕ ಸಮಾವೇಶವನ್ನು ಅಂದಿನ ಡಿಫೆನ್ಸ್ ಮಂತ್ರಿಗಳಾಗಿದ್ದ ಜಗಜೀವನ ರಾಮ್ ಅವರು ಉದ್ಘಾಟಿಸಿ ಮಾತನಾಡಿದರು.

೧೯೭೩ ರಲ್ಲಿ ಕಾನ್ಸೀರಾಂ ಮತ್ತು ಸಂಗಡಿಗರು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರ ಫೆಡರೇಶನ್ (BAMCEF) ಸ್ಥಾಪಿಸಿದರು. ಇದರ ಮುಖ್ಯ ಕಛೇರಿಯನ್ನು ದೆಹಲಿಯಲ್ಲಿ ತೆರೆಯಲಾಯಿತು. ೧೯೭೮ರಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸೆಂಬರ್ ೬ರಂದು ಸುಮಾರು ೨೦೦೦ ಸದಸ್ಯರ ದೆಹಲಿಯ ಬೋಟ್ ಕ್ಲಬ್‌ನಲ್ಲಿ ಬೃಹತ್ ಸಮಾವೇಶವನ್ನು ಸಂಘಟಿಸಲಾಯಿತು. ಇದರ ಅಜೆಂಡಾಗಳು ಮತ್ತು ಪ್ರಣಾಳಿಕೆಗಳು ಮಾತೃ ಸಂಸ್ಥೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರೇ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಒಕ್ಕೂಟದ ಸ್ವರೂಪದಲ್ಲಿ ಇದ್ದರೂ ಇದರ rhetoric ತೀವ್ರವಾಗಿತ್ತು. ಇವರ ಹೋರಾಟ ಕೇವಲ ಮೇಲ್ಜಾತಿ ಶೋಷಕರ ವಿರುದ್ಧ ಮಾತ್ರವಲ್ಲದೆ ದೌರ್ಜ್ಯನ್ಯ ನಡೆಸುವ ದಲಿತ ಅಧಿಕಾರಿಗಳ ವಿರುದ್ಧವೂ ಕೇಂದ್ರಿತವಾಗಿತ್ತು.

ಎಪ್ಪತ್ತರ ದಶಕದ ಮಧ್ಯದ ವೇಳೆಗೆ ಕಾನ್ಸೀರಾಂ ಮತ್ತು ಅವರ ಸಂಘಟನೆಗಳು ಮತ್ತು ಚಳುವಳಿಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ರರ ಪ್ರದೇಶ, ಪಂಜಾಬ್, ಹರ್‍ಯಾಣ, ದೆಹಲಿಯವರೆಗೂ ವ್ಯಾಪಿಸಿತ್ತು. ಆಗಿನ ದಿನಗಳಲ್ಲಿ ಕಾನ್ಸೀರಾಂ ಅವರು ಪೂನಾ ಮತ್ತು ದೆಹಲಿಯ ನಡುವೆ ರೈಲ್ವೆ ಮಾರ್ಗದಲ್ಲಿ ನಿರಂತರವಾಗಿ ಪಯಣಿಸುತ್ತಿದ್ದರು. ತಮ್ಮ ಬಿಎಸ್‌ಪಿ ಪಕ್ಷದ ಪರವಾಗಿ ಒಲವಿರುವಂತಹ ಕಾರ್ಯಕರ್ತರನ್ನು ಆಯ್ಕೆ ಮಾಡಿಕೊಳ್ಳಲು ತಮ್ಮ ಈ ಪಯಣದ ಮಧ್ಯೆ ಬರುವಂತಹ ನಾಗಪುರ್, ಜಬಲ್‌ಪುರ್, ಭೂಪಾಲ್ ನಗರಗಳಲ್ಲಿ ಇಳಿದು ಅಂತಹ ಉತ್ಸಾಹಿ ಯುವಕರನ್ನು ಬೇಟಿ ಮಾಡುತ್ತಿದ್ದರು. ನಂತರ ತಮ್ಮ ವಾಸ್ತವ್ಯವನ್ನು ದೆಹಲಿಗೆ ಬದಲಾಯಿಸಿದ ನಂತರ ಮಧ್ಯಪ್ರದೇಶ, ಪಂಜಾಬ್, ಹರ್‍ಯಾಣ, ಉತ್ತರ ಪ್ರದೇಶಗಳಲ್ಲಿ ಬಿಎಸ್‌ಪಿ ಪಕ್ಷವನ್ನು ಸಂಘಟಿಸಲು ಕಾರ್ಯತಂತ್ರಗಳಲನ್ನು ರೂಪಿಸಿದರು. ತಮ್ಮ ಈ ಸಂಘಟನೆ ಮತ್ತು ಚಳುವಳಿಗಳ ಜೊತೆಜೊತೆಗೆ ಅಂಬೇಡ್ಕರ್ ಅವರ ವಿಚಾರಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಳ್ಳುತ್ತಿದ್ದರು. ಎಂಬತ್ತರ ದಶಕದಲ್ಲಿ ’Ambedkar Mela on Wheels’ ಎನ್ನುವ ಜಾಥಾವನ್ನು ಪ್ರಾರಂಬಿಸಿದರು. ಈ ಜಾಥಾದಲ್ಲಿ ಅಂಬೇಡ್ಕರ್ ಅವರ ಜೀವನ, ಚಿಂತನೆಗಳು, ಲೇಖನಗಳನ್ನು ದೃಶ್ಯರೂಪದಲ್ಲಿ, ಭಾಷಣಗಳ ರೂಪದಲ್ಲಿ ನಿರಂತರವಾಗಿ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಅವರು ತಳಸಮುದಾಯಗಳ ಪರವಾಗಿ ಹೇಗೆ ನಿರಂತರ ಹೋರಾಡುತ್ತಿದ್ದರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ತಮ್ಮೊಂದಿಗೆ ಕೈಜೋಡಿಸಿದರೆ ಮುಂದೊಂದು ದಿನ ಆಳುವವರಾಗಿ ರೂಪಿಸುತ್ತೇನೆ ಎಂದು ಉತ್ಸಾಹ ತುಂಬುತ್ತಿದ್ದರು.

ಮಹತ್ವಾಕಾಂಕ್ಷಿಯಾಗಿದ್ದ ಕಾನ್ಸೀರಾಮ್ BAMCEF ಫೆಡರೇಶನ್‌ನ ಕೇವಲ ಸರ್ಕಾರಿ ನೌಕರರ ಸಂಘಟನೆಯನ್ನು ಮೀರಿ ಹೊಸ ರಾಜಕೀಯ ಅವಕಾಶಗಳನ್ನು ತೆರೆಯಲು ಉತ್ಸುಕರಾಗಿದ್ದರು. ಇದರ ಮೊದಲ ಹೆಜ್ಜೆಯಾಗಿ ೧೯೮೧ರಲ್ಲಿ “ಶೋಷಿತ ಸಮಾಜ ಸಂಘರ್ಷ ಸಮಿತಿ” (DS-4) ಯನ್ನು ಸ್ಥಾಪಿಸಿದರು. ಈ ಸಂಘಟನೆಯನ್ನು BAMCEF ನ ರಾಜಕೀಯ ಘಟಕವೆಂದು ಘೋಷಿಲಾಯಿತು. ಆದರೆ ಸರ್ಕಾರಿ ನೌಕರರು ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರಿಂದ ಈ “ಶೋಷಿತ ಸಮಾಜ ಸಂಘರ್ಷ ಸಮಿತಿ”ಯು ಸಂಪೂರ್ಣ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಹೀಗಾಗಿ BAMCEF ನ ಸದಸ್ಯರು ಶೋಷಿತ ಸಮಾಜ ಸಂಘರ್ಷ ಸಮಿತಿಯೊಂದಿಗೆ ಗುರುತಿಸಿಕೊಳ್ಳಲು ನಿರಾಕರಿಸತೊಡಗಿದರು. ಕಡೆಗೆ ಇದರ ಇಬ್ಭಾಗ ಅನಿವಾರ್ಯವಾಯ್ತು. ಆದರೆ ಕಾನ್ಸೀರಾಮ್ ಅವರು ರಾಜಕೀಯವೇ ತಮ್ಮ ಮುಂದಿನ ಗುರಿ ಎಂದು ನಿರ್ಧರಿಸಿಬಿಟ್ಟಿದ್ದರು. ೧೯೮೬ರ ವೇಳೆಗೆ ಬಹುಜನ ಸಮಾಜ ಪಕ್ಷಕ್ಕಾಗಿ ತನ್ನ ಜೀವನವನ್ನು ಮೀಸಲಿಡುತ್ತೇನೆ ಎಂದು ಘೋಷಿಸಿದರು. ಸಮಾಜ ಕಾರ್ಯಕರ್ತನ ಹೊಣೆಯಿಂದ ರಾಜಕಾರಣಿಯಾಗಿ ತಮ್ಮ ಕ್ಷೇತ್ರವನ್ನೇ ಬದಲಾಯಿಸಿಕೊಂಡರು. ಅತ್ಯತ್ತಮ ಸಂಘಟಕ ಮತ್ತು ಪರಿಣಿತ ರಾಜಕಾರಣಿಯಾಗಿದ್ದ ಕಾನ್ಸೀರಾಮ್ ಬುದ್ಧಿಜೀವಿಯಾಗಿರಲಿಲ್ಲ, ಆಕರ್ಷಕ ಮಾತುಗಾರರಾಗಿರಲಿಲ್ಲ. ೧೯೯೩ರ ಚುನಾವಣೆಯ ವೇಳೆಗೆ ಉತ್ತರ ಪ್ರದೇಶದಲ್ಲಿ “ಬ್ರಾಹ್ಮಿನ್, ಬನಿಯಾ, ಠಾಕೂರ್ ಚೊರ್, ಬಾಕಿ ಸಬ್ DS-4”, “ತಿಲಕ್, ತರಾಜು, ತಲ್ವಾರ್ ಮಾರೋ ಉನ್ಕೋ ಜೂತೆ ಚಾರ್” ಎನ್ನವ ಘೋಷಣೆಗಳು ಜನಪ್ರಿಯವಾಗಿದ್ದವು. ಇದನ್ನು ತಾವು ಹುಟ್ಟು ಹಾಕಿದ್ದಲ್ಲವೆಂದು ಕಾನ್ಸೀರಾಮ್ ಮತ್ತು ಮಾಯಾವತಿ ನಿರಾಕರಿಸಿದ್ದರೂ ಸಹ ಈ ಸ್ಲೋಗನ್‌ಗಳು ಬಿಎಸ್‌ಪಿ ಪಕ್ಷದ ಅತ್ಯಂತ ಜನಪ್ರಿಯ ಘೋಷಣೆಗಳಾಗಿದ್ದವು. ಆ ಪಕ್ಷದ ಐಡಿಯಾಲಜಿಯನ್ನೇ ಬಿಂಬಿಸುವಂತೆ ಈ ಸ್ಲೋಗನ್‌ಗಳು ಜನಪ್ರಿಯತೆ ಪಡೆದುಕೊಂಡಿದ್ದವು.

ಕಾನ್ಸೀರಾಮ್ ಅವರಿಗೆ ಸಮಾಜ ಸುಧಾರಣೆಯಲ್ಲಿ ನಂಬಿಕೆ ಇರಲಿಲ್ಲ. ರಾಜಕೀಯ ಅಧಿಕಾರವನ್ನು ಪಡೆದರೆ ಈ ಎಲ್ಲ ಸುಧಾರಣೆಗಳು ತಂತಾನೆ ಜಾರಿಗೊಳ್ಳುತ್ತವೆ ಎಂದು ಬಲವಾಗಿ ನಂಬಿದ್ದರು. ದಲಿತರಿಗೆ ಮೀಸಲಾತಿಯನ್ನು ಕೊಡುವುದನ್ನು ಭಿಕ್ಷೆ ಎಂದೇ ಟೀಕಿಸುತ್ತಿದ್ದ ಕಾನ್ಸೀರಾಮ್ ಒಮ್ಮೆ ಬಹುಜನ್ ಸಮಾಜ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಿಸಲಾಗುತ್ತದೆ ಮತ್ತು ಬ್ರಾಹ್ಮಣರಿಗೆ ಮೀಸಲಾತಿಯನ್ನು ನೀಡುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ ಎಂದು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.

೧೯೮೫ರ ಉಪಚುನಾವಣೆಯಲ್ಲಿ ಉತ್ತರಪ್ರದೇಶದ ಬಿಜಿನಾರ್ ಲೋಕಸಭಾ ಕ್ಷೇತ್ರದಿಂದ ಚಮ್ಮಾರ್ ಸಮುದಾಯಕ್ಕೆ ಸೇರಿದ ಬಿ.ಎ.ಎಲ್.ಎಲ್.ಎಲ್.ಬಿ ವ್ಯಾಸಂಗ ಮಾಡಿದ ಯುವ ಮಹಿಳೆಯನ್ನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರು. ಆಕೆಯ ಹೆಸರು ಮಾಯಾವತಿ. ೨೫ರ ಹರೆಯದ ಮಾಯಾವತಿಯ ವಿರುದ್ಧ ಕಣದಲ್ಲಿದ್ದವರು ರಾಮ್ ವಿಲಾಸ್ ಪಾಸ್ವಾನ್ ಮತ್ತು ಕಾಂಗ್ರೆಸ್ ಪಕ್ಷದಿಂದ ಜಗಜೀವನ್ ರಾಂ ಅವರ ಪುತ್ರಿ ಮೀರಾ ಕುಮಾರ್. ಆಗ ರಾಜೀವ್ ಗಾಂಧಿಯ ಜನಪ್ರಿಯತೆಯ ಅಲೆಯಲ್ಲಿ ಮೀರಾ ಕುಮಾರ್ ಆಯ್ಕೆಯಾದರು. ೧೯೮೫ ರಿಂದ ೧೯೯೧ರ ಕಾಲಘಟ್ಟ ಬಹುಜನ್ ಸಮಾಜ ಪಕ್ಷದ ಅತ್ಯಂತ ನಿರ್ಣಾಯಕ ಘಟ್ಟವಾಗಿತ್ತು. ರಾಜೀವ್ ಗಾಂಧಿಯ ಜನಪ್ರಿಯತೆ ಕ್ರಮೇಣ ಕುಸಿಯಲಾರಂಬಿಸಿದಂತೆ ಅದರ ಪ್ರಯೋಜನ ಪಡೆದುಕೊಂಡ ಕಾನ್ಸೀರಾಮ್ ಅಭೂತಪೂರ್ವವಾಗಿ ಪಕ್ಷವನ್ನು ಸಂಘಟಿಸಿದರು. ಅವರೊಂದಿಗೆ ಅಲಿಘರ್ ಯೂನಿವರ್ಸಿಟಿಯ ಲೆಕ್ಚರರ್ ಡಾ. ಮಸೂದ್ ಅಹ್ಮದ್‌ರಂತಹ ಪರಿಣಿತ ನಾಯಕರಿದ್ದರು. ೧೯೮೯-೧೯೯೧ ರ ಚುನಾವಣೆಗಳಲ್ಲಿ ಬಹುಜನ ಸಮಾಜದ ಮತಗಳಿಕೆಯ ಸರಾಸರಿ ಶೇಕಡ ೯.೪ರಷ್ಟಿತ್ತು. ಆದರೆ ೧೯೮೯ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷವು ೪೨೫ ಸೀಟುಗಳ ಪೈಕಿ ಕೇವಲ ೧೪ ಸೀಟುಗಳಲ್ಲಿ ಮಾತ್ರ ಜಯ ಗಳಿಸಿತ್ತು, ೧೯೯೧ರಲ್ಲಿ ಕೇವಲ ೧೧ ಸೀಟುಗಳನ್ನು ಗಳಿಸುವಲ್ಲಿ ತೃಪ್ತಿ ಹೊಂದಬೇಕಾಯಿತು. ಅಂದರೆ ಮತಗಳಿಕೆಯ ಸರಾಸರಿ ಪ್ರಮಾಣ ಅಧಿಕವಾಗಿದ್ದರೂ ಅದಕ್ಕೆ ಪೂರಕವಾಗಿ ಕ್ಷೇತ್ರಗಳನ್ನು ಗೆಲ್ಲಲು ಬಿಎಸ್‌ಪಿ ವಿಫಲವಾಯಿತು. ಅತ್ಯತ್ತಮ ಮಟ್ಟದ ಸಂಘಟನೆಯನ್ನು ಕಟ್ಟಿದ್ದರೂ ದಲಿತರ ಸಂಪೂರ್ಣ ಮತಗಳನ್ನು ಕೂಡಿ ಹಾಕಲು ಬಿಎಸ್ಪಿ ಪಕ್ಷ ವಿಫಲಗೊಂಡಿತ್ತು. ಪಶ್ಚಿಮ ಉತ್ತರ ಪ್ರದೇಶದ ಬಹುಪಾಲು ಚಮ್ಮಾರ್ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿದ್ದರು. ಇದಕ್ಕೆ ಮಯಾವತಿಯವರ ದುರ್ಬಲ ಸಂಘಟನೆಯೇ ಕಾರಣವೆಂದು ಆಗ ದೂರಲಾಗಿತ್ತು.

೧೯೯೨ರ ಬಾಬ್ರಿ ಮಸೀದಿಯ ಧ್ವಂಸದಿಂದ ಉಂಟಾದ ರಾಜಕೀಯ ಅನಿಶ್ಚಿತಿಯ ಸಂದರ್ಭದಲ್ಲಿ ಬಿಎಸ್ಪಿ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿತು. ಈ ಚುನಾವಣೆಯಲ್ಲಿ ಶೇಕಡಾ ೧೧ರಷ್ಟು ಪ್ರಮಾಣದಲ್ಲಿ ಮತಗಳಿಸಿದ ಬಿಎಸ್‌ಪಿ ೬೭ ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಶೇಕಡಾ ೨೫.೮೩ರಷ್ಟು ಪ್ರಮಾಣದಲ್ಲಿ ಮತ ಗಳಿಸಿದ ಸಮಾಜವಾದಿ ಪಕ್ಷವು ೧೦೯ ಸೀಟುಗಳಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಪಕ್ಷವು ೧೭೭ ಸೀಟುಗಳಲ್ಲಿ (ಶೇಕಡಾ ೩೩.೩ ಪ್ರಮಾಣ) ಗೆಲುವನ್ನು ಪಡೆದುಕೊಂಡಿತ್ತು. ಬಾಬರಿ ಮಸೀದಿಯ ಧ್ವಂಸದ ಅಪಖ್ಯಾತಿಯನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿತ್ತು. ಸಮಾಜವಾದಿ ಮತ್ತು ಬಿಎಸ್‌ಪಿಗಳ ಸಮ್ಮಿಶ್ರ ಸರ್ಕಾರದಲ್ಲಿ ಮುಲಾಯಂ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಇವರಿಬ್ಬರ ಮೈತ್ರಿ ಬಹಳ ವರ್ಷಗಳ ಕಾಲ ನಿಲ್ಲಲಿಲ್ಲ. ೧೯೯೫ರ ವೇಳೆಗೆ ಈ ಸಮ್ಮಿಶ್ರ ಸರ್ಕಾರ ತನ್ನ ಬಹುಮತ ಕಳೆದುಕೊಂಡಿತು.

ಒಂದು ಕಾಲದಲ್ಲಿ ಮನುವಾದಿಗಳೆಂದು ಜರಿದಿದ್ದ ಬಿಜೆಪಿಯೊಂದಿಗೆ ಕೈಜೋಡಿಸಿದ ಕಾನ್ಸೀರಾಮ್ ೧೯೯೫ರ ಎಪ್ರಿಲ್‌ನಲ್ಲಿ ಬಿಎಸ್‌ಪಿ ಮತ್ತು ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮಾಯಾವತಿ ಪ್ರಥಮ ದಲಿತ ಮಹಿಳಾ ಮುಖ್ಯಮತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಅಕ್ಟೋಬರ್ ೧೯೯೫ರ ವೇಳೆಗೆ ಬಿಜೆಪಿ ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಮಾಯಾವತಿ ನೇತೃತ್ವದ ಸರ್ಕಾರ ಆರು ತಿಂಗಳ ನಂತರ ಅಧಿಕಾರ ಕಳದುಕೊಂಡು ರಾಜ್ಯದಲ್ಲಿ ರಾಷ್ಟ್ರಪತಿ ಶಾಸನ ಜಾರಿಗೊಳಿಸಲಾಯಿತು.

ಕಡೆಗೆ ಬಿಎಎಸ್‌ಪಿ ಪಕ್ಷದ ಆತುರದ ನಡೆಗಳು, ಆತ್ಮಹತ್ಯಾತ್ಮಕ ಮತ್ತು ವಿವೇಚನಾ ಶೂನ್ಯ ನಡೆಗಳು ಆ ಪಕ್ಷವು ಅಧಿಕಾರ ಕಳೆದುಕೊಳ್ಳಲು ಕಾರಣವಾಯಿತು. ಉದಾಹರಣೆಗೆ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನೇ ಬಂಡವಾಳ ಮಾಡಿಕೊಂಡು ಗಾಂಧಿಯನ್ನು ಮನುವಾದಿ ಎಂದು ಹೀಯಾಳಿಸತೊಡಗಿದ್ದು ಬಿಎಸ್‌ಪಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ದೊಡ್ಡ ಮಿತಿಯನ್ನೇ ಸೃಷ್ಟಿಸಿತು. ಮತ್ತೊಂದು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು.

ಇಂದು ಭಾರತದಾದ್ಯಂತ (೧೯೯೮) ದಲಿತರಿಗೆ ಒಂದೇ ಮಾದರಿಯ ರಾಜಕೀಯ ರಣನೀತಿ ಎನ್ನುವುದು ಸಾಧ್ಯವಿಲ್ಲ. ಇಲ್ಲಿನ ವರ್ಗ ಮತ್ತು ಸಾಪೇಕ್ಷವಾದ ಪ್ರತಿಕೂಲದ ಆಧಾರದ ಮೇಲೆ ರಾಜಕಾರಣವನ್ನು ಅಭಿವೃದ್ಧಿಪಡಿಸಿದ್ದರೆ ಅದು ಬೇರೆ ಮಾತಾಗುತ್ತಿತ್ತು. ಆದರೆ ಈ ಮಾದರಿಯ ರಾಜಕಾರಣವು ದಲಿತರಿಗೆ ಪೂರಕವಾಗುತ್ತಿತ್ತು ಎಂದು ಸಾರಾಸಗಟಾಗಿ ನಂಬುವುದೂ ಸಹ ತಪ್ಪು ಗ್ರಹಿಕೆಯಾಗುತ್ತದೆ. ಇಂದಿನ ಸಂದರ್ಭದಲ್ಲಿ (೧೯೯೮) ಅಪೂರ್ಣವಾದ ಪಕ್ಷ ರಾಜಕಾರಣದ ಅರ್ಥವೇನೆಂದರೆ ಯಾವುದೇ ಪಕ್ಷವು ದಲಿತ ಸಮುದಾಯದ ಓಟನ್ನು ತಮ್ಮ ಪರವಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಅದರ ಆಧಾರದ ಮೇಲೆ ರಾಷ್ಟ್ರ ರಾಜಕೀಯದಲ್ಲಿ ಬಹುಮತವನ್ನು ಗಳಿಸಲು ಸಾಧ್ಯವಿಲ್ಲ. ಆದರೆ ಈ ತರ್ಕವೂ ಸಹ ದಲಿತರಿಗೆ ಪ್ರತಿಕೂಲವಾಗುತ್ತದೆ ಎಂದೂ ಅರ್ಥೈಸಬೇಕಿಲ್ಲ. ಒಂದು ಕಾಲದಲ್ಲಿ ದಲಿತರು ಕಾಂಗ್ರೆಸ್‌ನ ಪರವಾಗಿ ರಾಷ್ಟ್ರಾದ್ಯಾಂತ ಮತ ಚಲಾಯಿಸಿದಾಗ ಆಗ ಅವರ ಸಾಮಾಜಿಕ-ರಾಜಕೀಯ ಪರಿಸ್ಥಿತಿ ಮತ್ತು ಶಕ್ತಿ ಈಗಿನ ಸಂದರ್ಭಕ್ಕಿಂತಲೂ ತುಂಬಾ ಕಡಿಮೆಯಿತ್ತು. ಆದರೆ ದಲಿತರ ಹಕ್ಕುಗಳಿಗೆ ನ್ಯಾಯ ಒದಗಿಸಬಲ್ಲಂತಹ,ಹೊಸ ದಿಕ್ಕನ್ನು ತೋರಿಸುವಂತಹ ಒಂದು ಕಾರ್ಯತಂತ್ರ ಸಹ ಇಂದು ( ೧೯೯೮) ನಮ್ಮ ಬಳಿ ಇಲ್ಲ.

(ಕೃಪೆ: THE UNTOUCHABLES Subordination, Poverty And The State In Modern India ಪುಸ್ತಕದಿಂದ ಆಯ್ದ ಭಾಗ)

Leave a Reply

Your email address will not be published. Required fields are marked *