Daily Archives: April 20, 2015

ಅಂಬೇಡ್ಕರ್ ನಮ್ಮ ಭಾವವಲಯವನ್ನು ಪ್ರವೇಶಿಸಿದ್ದು…

– ಪ್ರಸಾದ್ ರಕ್ಷಿದಿ

[೧೪/೪/೨೦೧೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ತಾಲ್ಲೂಕು ಆಡಳಿತ ಆಚರಿಸಿದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಮಾಡಿದ ಭಾಷಣ.]

ವೇದಿಕೆಯ ಮೇಲಿರುವ ಮತ್ತು ಇಲ್ಲಿ ಸೇರಿರುವ ಎಲ್ಲ ಸಹ ಚಿಂತಕರೆ, ನಾವೆಲ್ಲ ಇಂದು ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಚಿಂತಿಸಲು ಮತ್ತು ಚಿಂತನೆ ನಡೆಸಲು ಇಲ್ಲಿ ಸೇರಿದ್ದೇವೆ ಅಂದುಕೊಂಡಿದ್ದೇನೆ. ಚಿಂತೆ ಯಾಕೆಂದರೆ ಇಂದು ನಾವು ಪ್ರತಿನಿತ್ಯದ ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಕಂಡಾಗ ನಮ್ಮ ಇದುವರೆಗಿನ ಎಲ್ಲ ಜನಪರ ಹೋರಾಟಗಳೂ ವ್ಯರ್ಥವಾದುವೇ ಎಂಬ ಚಿಂತೆಯಾಗುತ್ತದೆ. ಇದೇ ನಮಗೆ ಚಿಂತನೆಗೂ ಕಾರಣವಾಗಬೇಕಾದ್ದರಿಂದ ನಾವಿಂದು nehru_ambedkarಈ ದಿನವನ್ನು ಅಂಬೇಡ್ಕರ್ ಅವರ ಗುಣಗಾನ ಮಾಡುತ್ತ ಕಾಲಕಳೆಯುವುದನ್ನು ಬಿಟ್ಟು, ಅಂಬೇಡ್ಕರ್ ಜೀವನ ಮತ್ತು ತತ್ವಗಳ ಬೆಳಕಿನಲ್ಲಿ ಅರಿವನ್ನು ತಂದುಕೊಳ್ಳುವ ಕೆಲಸವನ್ನು ಮಾಡಬೇಕಾಗಿದೆ.

ಸಾಮಾನ್ಯವಾಗಿ ನಾವು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವಾಗ, ಬರೆಯುವಾಗ, ಆಹ್ವಾನ ಪತ್ರಿಕೆಗಳಲಿ, ಪ್ರಚಾರ ಪತ್ರಿಕೆ-ಫಲಕಗಳಲ್ಲಿ ‘ಸಂವಿಧಾನ ಶಿಲ್ಪಿ’ ಎಂಬ ಪದವನ್ನು ಒಂದು ಸಂಪ್ರದಾಯವೆಂಬಂತೆ ಬಳಸುತ್ತಿದ್ದೇವೆ. ನಾನಿಂದು ನಿಮ್ಮ ಗಮನ ಸೆಳೆಯಬಯಸುವುದು ಸಂವಿಧಾನ ರಚನೆಗಿಂತ ಹೆಚ್ಚು ಪ್ರಮುಖವಾದ ವಿಷಯಗಳಲ್ಲಿ  ಅಂಬೇಡ್ಕರ್ ಅವರು ನೀಡಿರುವ ಕೊಡುಗೆಗಳ ಬಗ್ಗೆ.

ನಮ್ಮ ಸಂವಿಧಾನದಲ್ಲಿ ಅದರ ಅಡಕವಾಗಿರುವ ವಿಷಯಗಳ ಬಗ್ಗೆ ಹಾಗೂ ಅವರು ಬಯಸಿದ್ದ ಅನೇಕ ಸಂಗತಿಗಳನ್ನು ಅದರಿಂದ ಹೊರಗಿಟ್ಟ ಬಗ್ಗೆ ಅಂಬೇಡ್ಕರ್ ಅವರಿಗೆ ಸಂಪೂರ್ಣ ಒಪ್ಪಿಗೆ ಇರಲಿಲ್ಲ. ಸಂವಿಧಾನ ರಚನೆಗೆ ತನ್ನನ್ನು ಹೊಣೆಗಾರನನ್ನಾಗಿಸಿ ಮಾತನಾಡುವುದರ ಬಗ್ಗೆ ಅವರು ಯಾವಾಗಲೂ ವಿರೋಧಿಯಾಗಿದ್ದರು, ಹಿಂದೆ ರೈತ ಚಳುವಳಿ ಪ್ರಬಲವಾಗಿದ್ದ ಕಾಲದಲ್ಲಿ ಪ್ರೊಫೆಸರ್ ನಂಜುಡಸ್ವಾಮಿಯವರು ಕೂಡಾ ‘ಈ ಸಂವಿಧಾನ ರೈತರದ್ದಲ್ಲ ಅದು ನಮಗೆ ಬೇಕಿಲ್ಲ, ಕಿತ್ತೆಸೆಯಿರಿ’ ಎಂದಾಗ ಅನೇಕ ದಲಿತ ನಾಯಕರು ನಂಜಂಡಸ್ವಾಮಿಯವರನ್ನು ವಿರೋಧಿಸಿ ಟೀಕಿಸಿದರೂ periyar-ambedkarನಂತರದ ದಿನಗಳಲ್ಲಿ ನಂಜಂಡಸ್ವಾಮಿಯವರ ನಿಲುವನ್ನು ಅರ್ಥಮಾಡಿಕೊಂಡರು. ಈಎಲ್ಲ ಕಾರಣಗಳಿಂದ ನಾವಿಂದು ಅಂಬೇಡ್ಕರ್ ಅವರನ್ನು ಕುರಿತು ಹೇಳುತ್ತಿರುವ ‘ಸಂವಿಧಾನ ಶಿಲ್ಪಿ’ ಎಂಬ ಪದ ಸರಿಯಾದದ್ದಲ್ಲ ಮಾತ್ರವಲ್ಲ ಅವರ ಇತರ ಅನೇಕ ಪ್ರಮುಖ ಸಾಧನೆಗಳನ್ನು ಮರೆಮಾಚುವಂತಹ ಪದ ಪ್ರಯೋಗವೂ ಆಗಿದೆ.

ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯು “ಅಂಬೇಡ್ಕರ್ ಅವರು ನಮ್ಮ ಭಾವವಲಯವನ್ನು ಪ್ರವೇಶಿದ ಬಗ್ಗೆ ಮತ್ತು ಈಗ ನಾವು ಅವರನ್ನು ಪರಿಭಾವಿಸುವ ಬಗ್ಗೆ” ಹಲವರ ಅಭಿಪ್ರಾಯಗಳನ್ನು ಪ್ರಕಟಿಸಿತ್ತು. ನಾನಿಲ್ಲಿ ಇದೇ ವಿಚಾರದಲ್ಲಿ ನನ್ನ ಅನುಭವದ ಉದಾಹರಣೆಗಳೊಂದಿಗೆ ಮಾತನಾಡಬಯಸುತ್ತೇನೆ. ನಾನು ಪ್ರಾಥಮಿಕ ಶಾಲಾವಿದ್ಯಾಭ್ಯಾಸ ಮಾಡುತ್ತಿದ್ದ ಸಮಯ. ಹಾಸನ ಜಿಲ್ಲೆಯ ಕಾಫಿ ತೋಟವೊಂದರಲ್ಲಿ ನನ್ನ ತಂದೆ ಉದ್ಯೋಗಿಯಾಗಿದ್ದರು, ನಾವು ತೋಟದಲ್ಲೇ ವಾಸವಿದ್ದೆವು. ಅದೃಷ್ಟವಶಾತ್ ತೋಟದಲ್ಲಿ ಕೆಲಸಮಾಡುತಿದ್ದ ಎಲ್ಲ ಜಾತಿಯ ಕೂಲಿಕಾರ್ಮಿಕರ ಮಕ್ಕಳೊಂದಿಗೆ ಆಟವಾಡುತ್ತ, ಅವರ ಮನೆಗಳಲ್ಲಿ ಕೊಟ್ಟದ್ದನ್ನು ತಿನ್ನುತ್ತ ಬೆಳೆದಿದ್ದ ನನಗೆ ಅಸ್ಪೃಶ್ಯತೆ ಅನ್ನುವುದೊಂದು ಇದೆ ಎಂದೇ ತಿಳಿದಿರಲಿಲ್ಲ. ನನ್ನ ತಂದೆತಾಯಿಯರೂ ಇದೇ ರೀತಿಯಲ್ಲಿ ನನ್ನನ್ನು ಬೆಳೆಸಿದ್ದರು. (ಇದ್ದನ್ನೇ ನಾನು ಅದೃಷ್ಟ ಎಂದು ಕರೆದದ್ದು ಅನೇಕ ಮೇಲ್ಜಾತಿಯವರ ಮಕ್ಕಳಿಗೆ ಈ ಸೌಭಾಗ್ಯ ದೊರೆಯದೆ ಅವರ ಅವರು ಜಾತಿಯ ಕೂಪದಲ್ಲೇ ಬೆಳೆದುಬಿಡುತ್ತಾರೆ) ಸಾಮಾನ್ಯವಾಗಿ ಆ ಕಾಲದಲ್ಲಿ ಶಾಲೆಗೆ ಮಧ್ಯಾಹ್ನದ ಊಟವನ್ನು ತರುತ್ತಿದ್ದವರ ಸಂಖ್ಯೆಯೇ ಕಡಿಮೆ. ಕೆಲವರು ಅನುಕೂಲಸ್ತರ ಮಕ್ಕಳು, ಅದೂ ಕೂಡಾ ಮನಸ್ಸಿಗೆ ಬಂದಾಗ ಮಾತ್ರ ಊಟ ತರುತ್ತಿದ್ದರು. ಮನೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿ ನಮ್ಮ ಶಾಲೆಯಿತ್ತು. ನಾನು ಒಣಕಲಾಗಿ ಪೀಚಾಗಿ ಇದ್ದುದರಿಂದ ನನ್ನಮ್ಮ ನನಗೆ ಊಟ ಒಯ್ಯುವುದನ್ನ ಕಡ್ಡಾಯ ಮಾಡಿದ್ದಳು. ನಾನು ಪ್ರೈಮೆರಿ ಮುಗಿಸಿ ಮಿಡ್ಲ್ ಸ್ಕೂಲ್‌ಗೆ ಬಂದ ಮೊದಲನೇ ದಿನವೇ (ಆಗೆಲ್ಲ ಪ್ರೈಮೆರಿ ಮತ್ತು ಮಿಡ್ಲ್ ಸ್ಕೂಲ್ ಎಂದು ಬೇರೆ ಬೇರೆ ಶಾಲೆಗಳು ಇದ್ದವು) ಮಧ್ಯಾಹ್ನ ಊಟದ ವೇಳೆಗೆ ಕೆಲವರು ಹುಡುಗರು ‘ನೀನು ನಮ್ಮ ಜೊತೆ ಊಟಮಾಡುವಂತಿಲ್ಲ ಹೊರಗೆ ಅಂಗಳದಲ್ಲಿ ಕುಳಿತು ಊಟ ಮಾಡು’ ಎಂದು ಕ್ಲಾಸ್‌ರೂಮಿನಿಂದ ಹೊರಕ್ಕೆ ಕಳುಹಿಸಿದರು. ನಾನು ಆಳುತ್ತ ಅಂಗಳಕ್ಕೆ ಬಂದು ಕುಳಿತಿದ್ದೆ, ಇತರ ಮಕ್ಕಳಿಂದ ವಿಷಯ ತಿಳಿದ ಮುಖ್ಯೋಪಾಧ್ಯಾಯರು, ಆ ಹುಡುಗರಲ್ಲಿ ಯಾಕೆಂದು ವಿಚಾರಿಸಿದಾಗ, ‘ಅವ್ನು ಮಾಂಸ ತರ್‍ತಾನೆ ಸಾರ್’ ಎಂದರು. ಮುಖ್ಯೋಪಾಧ್ಯಾಯರು ನನ್ನನ್ನು ಆಫೀಸ್ ರೂಮಿನಲ್ಲಿ ಕುಳಿತು ಊಟಮಾಡುವಂತೆ ತಿಳಿಸಿದರು. (ಆ ಕಾಲದಲ್ಲಿ ಮಾಂಸಹಾರಿಗಳೂ ಕೂಡಾ ಶಾಲೆಗೆ ಮಾಂಸಾಹಾರ ತರುತ್ತಿರಲಿಲ್ಲ) ಮುಂದಿನ ದಿನಗಳಲ್ಲಿ, ನಾನು ಮಾಂಸ ತರುವುದಿಲ್ಲ ಎಂದು ಖಾತ್ರಿಯಾದ ಬಳಿಕ ಇತರ ಹುಡುಗರು ನನ್ನೊಂದಿಗೆ ಕುಳಿತು ಊಟಮಾಡಲು ಒಪ್ಪಿದರು. ಆ ಹುಡುಗರಲ್ಲಿ ಕೆಲವರು ಇಂದಿಗೂ ನನ್ನ ಗೆಳೆಯರಾಗಿ ಇದ್ದಾರೆ. ಮತ್ತು ಈ ಘಟನೆಯನ್ನು ನೆನಪಿಸಿಕೊಂಡು ಇಂದಿಗೂ ನಾವು ನಗುತ್ತೇವೆ. ಆದರೆ ನನಗೆ ಅಸ್ಪೃಶ್ಯತೆಯ ಪ್ರಥಮ ಪರಿಚಯವಾದದ್ದು ಆ ಮೂಲಕವೇ. ಮತ್ತು ಮುಂದೆ ಅಂಬೇಡ್ಕರ್ ಅವರ ಬಗ್ಗೆ ನಾನು ಅವರಿವರಿಂದ ಕೇಳುತ್ತ, ಓದುತ್ತ ಹೋದಂತೆ ಅಂಬೇಡ್ಕರ್ ಚಿಂತನೆಗಳು ನನ್ನೊಳಗೆ ಪ್ರವೇಶಿಸಲು ಕಾರಣವಾಯಿತು. ಹಾಗೇ ನಾನು ಕಾರ್ಮಿಕ ಸಂಘಟನೆ, ದಲಿತ-ರೈತ ಚಳುವಳಿಗಳು, ಸಾಕ್ಷರತಾ ಆಂದೋಲನ, ರಂಗಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಾರಣವಾಯಿತು.

ಇನ್ನೊಂದು ಘಟನೆ ನಾನು ವಿದ್ಯಾಭ್ಯಾಸವನ್ನು ಮುಗಿಸಿ ನನ್ನೂರಿನಲ್ಲೇ ಅದೇ ಕಾಫಿ ತೋಟದಲ್ಲಿ ಉದ್ಯೋಗಿಯಾಗಿ ಸೇರಿದ ನಂತರದ್ದು.

ನಾನು ಕೆಲಸ ಮಾಡುತ್ತಿದ್ದ ಹಾರ್ಲೆ ತೋಟಗಳ ಮಾಲೀಕರಾದ ಎನ್.ಕೆ.ಗಣಪಯ್ಯ ಹಲವಾರು ದಲಿತ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿಸಿ, ತಾವೇ ನಿಂತು ತೋಟ ಮಾಡಿಸಿಕೊಟ್ಟಿದ್ದರು. ಅವರೆಲ್ಲ ಇಂದಿಗೂ ಅಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಇದಲ್ಲದೆ ಇನ್ನೂ ನೂರಾರು ಜನರಿಗೆ ಜನತಾ ಮನೆಗಳನ್ನು ಮಂಜೂರು ಮಾಡಿಸಿ ಕೊಟ್ಟಿದ್ದರು. ಈಮನೆಗಳ ನಿರ್ಮಾಣ ಇತ್ಯಾದಿಗಳ ಉಸ್ತುವಾರಿ ನನ್ನ ಮೇಲೆ ಬಿದ್ದಿತ್ತು. ನಾನು ಮನೆ ಕೆಲಸದ ಸ್ಥಳಗಳು, ತಾಲ್ಲೂಕು ಕಛೇರಿ, ಬಿಡಿಓ ಕಛೇರಿ ಇತ್ಯಾದಿ ಕಡೆಗಳಿಗೆ ಹೋಗಬೇಕಾಗುತ್ತಿತ್ತು.

ಈ ಮನೆಗಳನ್ನು ಕಟ್ಟಿಕೊಂಡವರಿಗೆ ಗಣಪಯ್ಯನವರ ಮಗ ಎನ್. ಜಿ. ರವೀಂದ್ರನಾಥ್ ಬ್ಯಾಂಕಿನಿಂದ ಸಾಲ ಕೊಡಿಸಿದ್ದರು. Young_Ambedkarಆದರೆ ಬ್ಯಾಂಕಿನಿಂದ ಸಾಲ ತೆಗೆದುಕೊಂಡವರಲ್ಲಿ ಅನೇಕರು ವಾಪಸ್ ಕಟ್ಟಲೇ ಇಲ್ಲ. ಹಾಗಾಗಿ ರವೀಂದ್ರನಾಥ್ ಆ ಕಡೆ ಬಂದಾಗಲೆಲ್ಲ ಈ ಸಾಲಗಾರರಲ್ಲಿಗೆ ಹೋಗಿ ಬ್ಯಾಂಕ್ ಸಾಲ ತೀರಿಸಿ ಎಂದು ಹೇಳುತ್ತಿದ್ದರು. ಅನೇಕ ಸಾರಿ ನಾನು ಅವರೊಂದಿಗೆ ಇರುತ್ತಿದ್ದೆ.

ಒಂದು ಸಾರಿ ಪಕ್ಕದ ಅಗಲಟ್ಟಿ ಗ್ರಾಮದ ಪಕ್ಕದಲ್ಲೇ ಇರುವ ಮಾವಿನಹಳ್ಳಿ ಕಾಲೊನಿಗೆ ಹೋದೆವು. ಅಲ್ಲಿ ಸುಮಾರು ನಲವತ್ತು ಮನೆಗಳನ್ನು ನಾವು ಕಟ್ಟಿಸಿದ್ದೆವು. ಅಲ್ಲಿನ ದಲಿತರಲ್ಲಿ ಸ್ವಲ್ಪ ಮುಂದಾಳತ್ವ ವಹಿಸುತ್ತಿದ್ದ ಕಾಳೀಪ್ರಸಾದ್ (ಇವರು ಮುಂದೆ ಜಿಲ್ಲಾ ಪರಿಷತ್ ಸದಸ್ಯರೂ ಆದರು.) ಮತ್ತಿತರರನ್ನು ಒಂದೆಡೆ ಸೇರಿಸಿ ರವೀಂದ್ರನಾಥರು, “ನೋಡಿ ನೀವೆಲ್ಲ ತೆಗೆದುಕೊಂಡಿರುವುದು ಬ್ಯಾಂಕ್ ಸಾಲ-ಇದು ಸಾರ್ವಜನಿಕ ಹಣ. ನೀವು ಇದನ್ನು ತೀರಿಸಿದರೆ, ನಿಮಗೆ ಇನ್ನೊಮ್ಮೆ ಸಾಲ ಬೇಕಾದರೆ ಸಿಗುತ್ತದೆ. ನೀವು ಸಾಲ ತೀರಿಸದಿದ್ದರೆ- ನಿಮ್ಮಲ್ಲೇ ಯಾರಿಗಾದರೂ ಅಗತ್ಯ ಬಿದ್ದರೂ ಸಾಲ ಸಿಕ್ಕುವುದಿಲ್ಲ. ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಲು ಯಾರಿಗೂ ಅಧಿಕಾರ ಇಲ್ಲ” ಎಂದೆಲ್ಲ ತಿಳಿವಳಿಕೆ ಹೇಳಿ, “ನೀವೆಲ್ಲ ತಪ್ಪು ಮಾಡುತ್ತಿದ್ದೀರಿ, ಯೋಚನೆ ಮಾಡಿ, ನಿಮಗೆ ಕೆಲವು ದಿನ ಸಮಯ ಕೊಡುತ್ತೇನೆ. ಆಗಲೂ ನೀವು ಸಾಲ ವಾಪಸ್ ಕಟ್ಟದಿದ್ದರೆ ನಾನು ಇಲ್ಲಿ ಬಂದು ಧರಣಿ ಕೂರುತ್ತೇನೆ” ಎಂದರು.

ಆಗಲೇ ಸಂಜೆ ಆರು ಗಂಟೆ ಕಳೆದಿತ್ತು. ಕೆಲವರಾಗಲೇ ಕುಡಿದು ತೇಲಾಡುತ್ತಿದ್ದರು. ಇನ್ನು ಕೆಲವರು ಜಗಳ ಪ್ರಾರಂಭಿಸಿದರು. ಕಾಳೀಪ್ರಸಾದ್ ಮತ್ತಿತರರು ಅವರನ್ನು ಬೇರೆಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದರು. ಉಳಿದವರು “ಇವರು ಈ ಹೊತ್ತಿಗೆ ಇಲ್ಲಿಗ್ಯಾಕೆ ಬಂದರು? ಇವರ ಜೀಪಿಗೆ ಬೆಂಕಿ ಕೊಟ್ಟರೇನು? ಬೇಕಾದರೆ ಸಾಲವನ್ನು ಇವರೇ ಕಟ್ಟಲಿ” ಎಂದೆಲ್ಲಾ ತಲೆಗೊಂದು ಮಾತಾಡಿದರು!

ನಾವು ಹೇಗೋ ಅಲ್ಲಿಂದ ಹೊರಟು ಬಂದೆವು. ಇವರ ಹುಚ್ಚಾಟಗಳನ್ನು ನೋಡಿ ನನಗೆ ರೇಗಿಹೋಗಿತ್ತು. ದಾರಿಯಲ್ಲಿ ಬರುವಾಗ ನಾನು ರವೀಂದ್ರನಾಥರೊಡನೆ ಜಗಳ ಪ್ರಾರಂಭಿಸಿದೆ.

“ನಿಮಗೆ ಬೇರೆ ಕೆಲಸ ಇಲ್ಲ ಇಂಥವರಿಗೆಲ್ಲಾ ಸಹಾಯ ಮಾಡ್ತೀರಿ, ಇವರಿಗೆ ಅದರ ನೆನಪೇ ಇಲ್ಲ. ಯಾರಾದರೂ ನಮ್ಮಂಥವರಿಗೆ ಸಹಾಯ ಮಾಡಿ, ನೋಡಿದಿರಲ್ಲ ಇವರ ಬುದ್ಧಿ” ಎಂದೆ.

ಅವರು ಸ್ವಲ್ಪ ಹೊತ್ತು ಮಾತಾಡಲಿಲ್ಲ. ಆಮೇಲೆ,
“ನೋಡು ನಿನ್ನಂಥವರಿಗೆ ಯಾರ ಸಹಾಯವೂ ಅಗತ್ಯ ಇಲ್ಲ: ಆದರೆ ಅವರಿಗೆ ಸಹಾಯದ ಅಗತ್ಯ ಇದೆ”, ಎಂದರು.

“ಹೌದು ಅವರಿಗೆ ಅಗತ್ಯ ಇರಬಹುದು, ಆದರೆ ಅರ್ಹತೆ ಇಲ್ಲ.” ಅಸಹನೆಯಿಂದ ಜೋರಾಗಿ ಹೇಳಿದೆ. ನನಗೆ ಸಮಾಧಾನವಾಗಿರಲಿಲ್ಲ.

“ಅದು ಬೇರೇ ಮಾತು. ಅರ್ಹತೆ ಇದೆಯೋ ಇಲ್ಲವೋ ಗೊತ್ತಾಗುವುದು ತುಂಬ ನಿಧಾನ. ಆದರೆ ಅವರು ಸಾವಿರ ವರ್ಷಗಳಿಂದ ಮೋಸ ಹೋಗಿದ್ದಾರೆ. ಈಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಅವರಿಲ್ಲ.”

“ಯಾರೋ ಮೋಸ ಮಾಡಿದ್ದರೆ ಅದಕ್ಕೆ ನಾವೇನು ಮಾಡಬೇಕು. ಅವರು ಹೀಗೆ ಮಾಡಿದರೆ ಅವರಿಗೆ ಯಾರು ಸಹಾಯ ಮಾಡುತ್ತಾರೆ. ಅಯೋಗ್ಯರು.” ನನ್ನ ಸಿಟ್ಟು ಇಳಿದಿರಲಿಲ್ಲ.

ರವೀಂದ್ರನಾಥ್ ಮತ್ತೆ ಮೌನವಾದರು. ಕೆಲವು ಕ್ಷಣಗಳ ನಂತರ, “ನೋಡು ಅವರು ಏನು ಹೇಳಿದರು ಎನ್ನುವುದು ಮುಖ್ಯ ಅಲ್ಲ. ನಮ್ಮೆಲ್ಲರಿಗೆ ಅವರ ಸಾವಿರ ವರ್ಷಗಳ ಋಣ ಇದೆ. ಅದರಲ್ಲಿ ಸ್ವಲ್ಪ ತೀರಿತು ಅಂದುಕೊಂಡರಾಯಿತು” ಎಂದರು. ಆಗ ನನ್ನ ಸಿಟ್ಟೇನು ತಣಿಯಲಿಲ್ಲ. ಆದರೆ ಅವರು ಹೇಳಿದ ಮಾತು ನನಗೆ ಅರ್ಥವಾಗಲು ಅನೇಕ ವರ್ಷಗಳು ಬೇಕಾದವು.

ರವೀಂದ್ರನಾಥ್ ವೈದ್ಯಕೀಯ ಕಲಿತವರು. ಒಳ್ಳೆಯ ಸಂಸ್ಕೃತಾಭ್ಯಾಸಿ ಕೂಡಾ. ಅಥರ್ವವೇದವನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಬಗ್ಗೆಯೂ ಆಳವಾಗಿ ಆಧ್ಯಯನ ಮಾಡಿದವರು.

ನಾನು ಇದನೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ, ಈಗ ಶಾ ಬಾಲುರಾವ್ ಅವರ ಸೂರ್ಯ ಇವನೊಬ್ಬನೇ ಕವನಸಂಗ್ರಹದ ಒಂದು ಪದ್ಯ ನೆನಪಾಗುತ್ತದೆ.

“ಇವ (ಸೂರ್ಯ) ಸಮಾಜವಾದಿ
ಉಳ್ಳಪ್ಪ ಇಲ್ಲಪ್ಪ ಇಬ್ಬರಿಗೂ ಇವನ ಬೆಳ್ಳಿ ತಟ್ಟೆಯಲಿ ಊಟ”

ಹಾಗೇ ನಾವು ‘ದಲಿತ ಸೂರ್ಯ’ನೆಂದು ಕರೆಯುವ ಅಂಬೇಡ್ಕರ್, ಶೋಷಿತರಿಗೆ ಮತ್ತು ಶೋಷಕರಿಗೆ ಇಬ್ಬರಿಗೂ ಬೆಳಕನ್ನು ನೀಡಿದ ಮಹಾನುಭಾವರೆನ್ನುವದಕ್ಕೆ ಈ ಮೇಲಿನ ಘಟನೆಗಳ ಉದಾಹರಣೆ ಸಾಕೆನಿಸುತ್ತದೆ.

ಇಲ್ಲಿ ಅನೇಕರು ಕಾಲೇಜು ವಿದ್ಯಾರ್ಥಿಗಳು ಮತ್ತು ತರುಣರು ಸೇರಿರುವುದರಿಂದ ಅನೇಕ ಕಡೆಗಳಲ್ಲಿ ಪ್ರಸ್ತಾಪಿತವಾಗಿರುವ ಈ ವಿಷಯವನ್ನು ಮತ್ತೊಮ್ಮೆ ನಿಮ್ಮ ಮುಂದಿಡುತ್ತೇನೆ. ಸಾಮಾನ್ಯವಾಗಿ ಗಾಂಧಿ ಮತ್ತು ಅಂಬೇಡ್ಕರ್ ಇವರಿಬ್ಬರ ಭಾವಚಿತ್ರವನ್ನು ನೋಡಿ, ಅಂಬೇಡ್ಕರ್ ಅವರು ಸೂಟು-ಬೂಟುಧಾರಿಯಾಗಿ ಪೂರ್ಣ ಉಡುಗೆಯಲ್ಲಿದ್ದರೆ, ಗಾಂಧಿ ಅರೆ ಉಡುಪಿನ ಫಕೀರನಾಗಿ ಕಾಣಿಸುತ್ತಾರೆ. ಇದು ಇವರಿಬ್ಬರ ಮಾತ್ರವಲ್ಲ ಅವರು ಪ್ರತಿನಿಧಿಸಿದ ಜನ ಸಮುದಾಯಗಳ ಮುನ್ನಡೆಯ ಸಂಕೇತ-ರೂಪಕಗಳೂ ಹೌದು. ಎಲ್ಲ ಉಳ್ಳವನಾಗಿ ಜನಿಸಿದ ಗಾಂಧಿಗೆ ಅಂತಸ್ತು, ಅಧಿಕಾರ, ಶ್ರೀಮಂತಿಕೆ, ಅಹಂಕಾರ ಎಲ್ಲವನ್ನೂ ತ್ಯಜಿಸುತ್ತಾ ಹೋದರೆ ಮಾತ್ರ ಮನುಷ್ಯನಾಗಲು ಸಾಧ್ಯವಿತ್ತು. ಅದೇ ಏನೂ ಇಲ್ಲದ ಅಂಬೇಡ್ಕರವರ ಜನ ಸಮುದಾಯ ಎಲ್ಲವನ್ನೂ ಗಳಿಸುತ್ತ ಮನುಷ್ಯರಾಗಬೇಕಿತ್ತು. ಈಗ ಇವರಿಬ್ಬರ ಉಡುಪನ್ನು ನಿಮ್ಮ ಕಲ್ಪನೆಯಲ್ಲಿ ಬದಲಿಸಿ ನೋಡಿ, ಸೂಟುಬೂಟು ತೊಟ್ಟ ಗಾಂಧಿ ಭಾರತದ ಸಾವಿರಾರು ವಕೀಲರಲ್ಲಿ ಒಬ್ಬರಾಗಿ ಬಿಡುತ್ತಾರೆ. ಗಾಂಧಿಯ ಉಡುಪಿನ ಅಂಬೇಡ್ಕರ್ ಇಲ್ಲ ಲಕ್ಷಾಂತರ ದಲಿತರಲ್ಲಿ ಒಬ್ಬರಾಗಿ ಕಳೆದುಹೋಗುತ್ತಾರೆ. ಗಾಂಧಿ ಎಲ್ಲವನ್ನೂ ತ್ಯಜಿಸಿ ಮನುಷ್ಯರಾಗಬೇಕಾದ ಮೇಲ್ವರ್ಗಕ್ಕೆ ಸಂಕೇತವಾದರೆ, ಅಂಬೇಡ್ಕರ್ ಎಲ್ಲವನ್ನೂ ಗಳಿಸಿ ಸಮಾನತೆಯತ್ತ ಸಾಗಬೇಕಾದ ಕೆಳವರ್ಗಕ್ಕೆ ದಾರಿದೀಪವಾಗಿದ್ದಾರೆ.

ಇನ್ನು ಅಂಬೇಡ್ಕರ್ ಅವರ ಅತಿ ಮುಖ್ಯವಾದ ಕೊಡುಗೆಗಳತ್ತ ಗಮನ ಹರಿಸಿದರೆ, ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಬಗ್ಗೆಯಾಗಲೀ ಅವರ ಕೃತಿಗಳನ್ನಾಗಲೀ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ರಸ್ತಾಪಿಸುವುದೇ ಕಡಿಮೆ. ಭಾರತೀಯ ರಿಸರ್ವಬ್ಯಾಂಕ್‌ನ ಸ್ಥಾಪನೆ, ರೂಪಾಯಿಯ ಸಮಸ್ಯೆಗಳಬಗ್ಗೆ ಅವರು ಬರೆದ-ನೀಡಿದ ಸಲಹೆಗಳು. ಇವುಗಳಿರಲಿ ಕೃಷಿಯಲ್ಲಿ ಹೂಡಬೇಕಾದ ಭಂಡವಾಳ ಮತು ಅದರ ಪೂರೈಕೆ, ಕೈಗಾರಿಕಾ ಸಂಬಂಧಗಳು, ಕುಟುಂಬ ಯೋಜನೆ, ಆಹಾರ ಭದ್ರತಾ ಕಾನೂನು, ಮಹಿಳಾ ಸಬಲೀಕರಣ, ಭೂಸುಧಾರಣೆ, ಭೂಮಿ ಮತ್ತು ಕೈಗಾರಿಕೆಗಳ ರಾಷ್ಟ್ರೀಕರಣ ಇವೆಲ್ಲಕ್ಕಾಗಿ ಅವರು ನಡೆಸಿ ಹೋರಾಟಗಳು, ಅವರ ದುಡಿಮೆ-ಕೊಡುಗೆಗಳ ಬಗ್ಗೆಯೂ, ಅದರ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಅಪಾರವಾದ ಜ್ಞಾನ ಮತ್ತು ಅನುಭವಗಳ ಬಗ್ಗೆಯೂ ನಮ್ಮ ಯುವ ಪೀಳಿಗೆಗೆ ಸಾಕಷ್ಟು ತಿಳುವಳಿಕೆ ಇಲ್ಲ. ಆದರೆ ನಾವು ಪದೇಪದೇ ವೇದಿಕೆಗಳಲ್ಲಿ, ಬರಹಗಳಲ್ಲಿ ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’, ‘ದಲಿತ ಹೋರಾಟಗಾರ’ ಇತ್ಯಾದಿಯಾಗಿ ವರ್ಣಿಸುತ್ತ, ಅವರ ನಿಜ ವ್ಯಕ್ತಿತ್ವವನ್ನು ಹಾಗೂ ಇತರ ಅನೇಕ ಪ್ರಮುಖ ಸಾಧನೆಗಳನ್ನು ಮರೆಮಾಚುತ್ತಿದ್ದೇವೆ, ಆದರೆ ಇವೆಲ್ಲವನ್ನೂ ನಾವು ಮತ್ತೆ ಅಂಬೇಡ್ಕರ್ ಬರಹಗಳನ್ನು ಓದುವ ಮೂಲಕ ತಿಳಿದುಕೊಳ್ಳಲು ಸಾಧ್ಯವಿರುವುದರಿಂದ, ನಾನು ಬೇರೆ ವಿಷಯಗಳತ್ತ ಗಮನಹರಿಸುತ್ತೇನೆ.

೧೯೩೦ರಲ್ಲೇ ಅಂಬೇಡ್ಕರ್ ಅವರು ಜಾತಿಗಣತಿಗಾಗಿ ಬ್ರಿಟಿಷ್‌ಸರ್ಕಾರವನ್ನು ಒತ್ತಾಯಿಸಿದ್ದರು. ಅದರಿಂದ ದಲಿತರ ನಿಜವಾದ ಸಂಖ್ಯೆ ದೊರೆತು ಅವರ ನ್ಯಾಯಬದ್ಧ ಹಕ್ಕು ಮಂಡಿಸಲು ಸಾಧ್ಯವಾಗುತ್ತದೆಂದು ಅವರು ವಾದಿಸಿದ್ದರು. ಇದೀಗ ಮತ್ತೊಮ್ಮೆ ಜಾತಿಗಣತಿ ನಡೆಯತ್ತಿದೆ, ಇದರೊಂದಿಗೆ ಇನ್ನೂ ಒಂದು ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಜಾತಿಗಣತಿಯೊಂದಿಗೆ ಭೂಮಿ ಮತ್ತು ಸಂಪತ್ತಿನ ಗಣತಿಯೂ ವೈಜ್ಞಾನಿಕವಾಗಿ ನಡೆಸಲು ಒತ್ತಾಯಿಸಬೇಕು. ಈಗ ಜಾತಿಯೊಂದಿಗೆ ಭೂಮಿಯ ಒಡೆತನದ ವಿವರವನ್ನೇನೋ ಕೇಳಿದ್ದಾರೆ. ಅದರಲ್ಲಿ ಕಾರ್ಪೋರೇಟ್ ವಲಯದ ಕಂಪೆನಿಗಳ ಹಾಗೂ ಸಹಕಾರಿ ಸಂಸ್ಥೆಗಳ ಮಠ ಮಾನ್ಯಗಳ ಹೆಸರಿನಲ್ಲಿ ಹೊಂದಿರುವ ಭೂಮಿಯ ಲೆಕ್ಕ ಸಿಗುವುದಿಲ್ಲ ಹಾಗೇ ಚಿನ್ನ ನಗದು ಷೇರುಗಳಂತಹ ಚರಾಸ್ತಿಗಳ ವಿವರವೂ ಸಿಗುವುದಿಲ್ಲ. ಇದೆಲ್ಲದರ ಗಣತಿಯೂ ನಡೆದರೆ ಯಾವ ಯಾವ ಜಾತಿಗಳಲ್ಲೇ ಸಂಪತ್ತು ಕೇಂದ್ರೀಕೃತವಾಗಿದೆ ಯಾವ ಅನುಪಾತದಲ್ಲಿ ಕೇಂದ್ರೀಕೃತವಾಗಿದೆ, ಹಾಗೂ ಜಾತಿಗಳೊಗೇ ಉಳ್ಳವರ ಇಲ್ಲದವರ ಅನುಪಾತ ಏನು ಎಂಬ ವಿವರಗಳೂ ಸಿಗುತ್ತಿತ್ತು, ಈಗ ಈ ಯಾವ ವಿವರಗಳೂ ನಮ್ಮಲ್ಲಿ ಸ್ಪಷ್ಟವಾಗಿ ಇಲ್ಲ.

ನನ್ನ ಗೆಳೆಯರೊಬ್ಬರು ಇದೀಗ ಮಾತನಾಡುತ್ತ, ನಾವು ದಿನದಿಂದ ದಿನಕ್ಕೆ ಅಸಹನೆ ಸಮಾಜವಾಗಿ ಪರಿವರ್ತನೆಯಾಗುತ್ತಿದ್ದೇವೆ. ಎಲ್ಲದರಲ್ಲೂ ಪರ ಮತ್ತು ವಿರೋಧ ಎಂಬ ಎರಡೇ ಗುಂಪುಗಳಾಗುತ್ತಿವೆ. ಎರಡೂ ಅಲ್ಲದೆ ಇರಬಹುದಾದ ಮೂರನೆಯ ಸಾಧ್ಯತೆಯನ್ನೇ ನಿರಾಕರಿಸಲಾಗುತ್ತಿದೆ ಎಂದರು. ಇದು ಇಂದು ಬಹುಷಃ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿರುವ ಸಮಸ್ಯೆ. ಅವರು ಮುಂದುವರಿದು ಕೆಲವು ವ್ಯಕ್ತಿಗಳನ್ನು ಟೀಕೆಮಾಡುವುದಿರಲಿ ವಿಮರ್ಶಿಸಲೂ ಬಾರದೆಂಬ ಅಲಿಖಿತ ನಿಯಮವೊಂದು ಜಾರಿಗೆ ಬರುತ್ತಿದೆ ಎಂದರು. ಇದೂ ಕೂಡಾ ನಮ್ಮೆಲ್ಲರ ಅನುಭವವೇ ಆಗಿದೆ. ಇದಕ್ಕೆ ಕಾರಣ ನಮ್ಮ ಅನೇಕ ನಾಯಕರನ್ನು, ಮಹಾನ್ ಚೇತನರನ್ನು ಕೆಲವು ವರ್ಗ-ಜಾತಿಗಳು ತಮ್ಮ ಸ್ವತ್ತನ್ನಾಗಿ ಕಾಣುವುದು. ಇನ್ನು ಕೆಲವರನ್ನು ಉಳಿದವರೇ ಒಂದು ವರ್ಗಕ್ಕೆ ಸೀಮಿತಗೊಳಿಸಿ ನೋಡುವುದು. ಅಂಬೇಡ್ಕರ್ ಅವರ ವಿಚಾರ ಬಂದಾಗ ಅವರನ್ನು ಇತರರೇ ದಲಿತರಿಗೆ ಸೀಮಿತಗೊಳಿಸಿ ನೋಡುತ್ತಿರುವುದನ್ನು ಹೆಚ್ಚಾಗಿ ಕಾಣಬಹುದು.

ಆದರೆ ಮೇಲಿನ ಈ ಸಂಗತಿಗೆ ಇದಿಷ್ಟೇ ಕಾರಣವೆಂದು ನನಗನಿಸುತ್ತಿಲ್ಲ. ಇದರೊಂದಿಗೆ ನಾವು ಬದುಕಿನ ಎಲ್ಲ ವಿಭಾಗಗಳಲ್ಲೂ ಸಹ ಯಾವುದನ್ನೇ ಆಗಲಿ ಸಮಗ್ರವಾಗಿ ನೋಡದೆ ಬಿಡಿಬಿಡಿಯಾಗಿ ನೋಡುವದು ಕೂಡಾ ಕಾರಣವೆನ್ನಿಸುತ್ತದೆ. (ಇರಲಿ ಇದೊಂದು ಬೇರೆಯೇ ವಿದ್ಯಮಾನವಾಗಿದ್ದು ಈ ಸಂದರ್ಭದಲ್ಲಿ ಪ್ರಸ್ತುತವಲ್ಲ) ಎಲ್ಲ ಮಹಾನ್ ವ್ಯಕ್ತಿಗಳ ಜೀವನವನ್ನು (ಪ್ರಪಂಚದಾದ್ಯಂತ) ಗಮನಿಸಿದರೆ ಅವರೆಲ್ಲರೂ ತಮ್ಮ ಜೀವಿತಾವಧಿಯಲ್ಲಿ ಬೆಳೆಯುತ್ತ ಸ್ವವಿಮರ್ಶೆಗೊಳಪಡುತ್ತ ಅನೇಕಬಾರಿ ತಾವು ಹಿಂದೆ ಹೇಳಿದ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿ ತೀರ್ಮಾನಿಸಿರುವುದನ್ನು ಕಾಣುತ್ತೇವೆ. ಆದರೆ ಇಂದು ಈ ಪರ ವಿರೋಧಿ ಗುಂಪುಗಳು ಅವರು ನಡೆದುಬಂದ ದಾರಿ ಮತ್ತು ನಂತರದ ತೀರ್ಮಾನಗಳನ್ನು ಸಮಗ್ರವಾಗಿ ಗ್ರಹಿಸದೆ, ಯಾವುದೋ ಕಾಲಘಟ್ಟದಲ್ಲಿನ ಅವರ ನಡೆಯನ್ನು ಉಲ್ಲೇಖಿಸುತ್ತಿರುತ್ತಾರೆ. ಇದರಿಂದ ಸಾಕಷ್ಟು ಗೊಂದಲ ಮತ್ತು ತಪ್ಪು ಗ್ರಹಿಕೆಗಳಾಗುತ್ತಿರುತ್ತದೆ. ಗಾಂಧಿ ಅಂಬೇಡ್ಕರ್, ಕುವೆಂಪು, ವಿವೇಕಾನಂದ, ರವಿಂದ್ರನಾಥ ಟಾಗೋರ್, ಹೀಗೆ ಅನೇಕರ ಬಗ್ಗೆ ನಡೆಯುತ್ತಿರುವ. ಹಾಗೇ ಅನೇಕ ಸಾಹಿತ್ಯ-ಕಾವ್ಯ ಕೃತಿಗಳಬಗ್ಗೆ ಆಗುತ್ತಿರುವ ವಾಗ್ವಾದಗಳಲ್ಲೂ ನಾವಿದನ್ನು ಕಾಣಬಹುದು.

ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರ ಭಿನ್ನಾಭಿಪ್ರಾಯಗಳ ಬಗ್ಗೆ ನಾವು ಸಾಕಷ್ಟು ತಿಳಿದಿದ್ದೇವೆ. gandhi-art2ಅಂಬೇಡ್ಕರ್ ಅವರಷ್ಟು ತೀಕ್ಷ್ಣವಾಗಿ ಗಾಂಧಿಯನ್ನು ವಿಮರ್ಶೆಗೊಳಪಡಿಸಿದವರು- ಟೀಕಿಸಿದವರು, ಇರಲಾರರು, ಆದರೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಲ್ಲೂ ಕೆಲವು ಸಾಮಾನ್ಯ ಅಂಶಗಳಿದ್ದವು. ಇಬ್ಬರೂ ಅಹಿಂಸೆಯ ಪ್ರಬಲ ಪ್ರತಿಪಾದಕರಾಗಿದ್ದರು. ಗಾಂಧಿ ಹೊರಗಿನಿಂದ ಅಂದರೆ ಹಿಂಸೆಯನ್ನು ನೋಡಿ ಅಹಿಂಸಾವಾದಿಯಾದರೆ, ಅಂಬೇಡ್ಕರ್ ಒಳಗಿನಿಂದಲೇ ಹಿಂಸೆಯನ್ನು ಅನುಭವಿಸುತ್ತ ಅಹಿಂಸಾವಾದಿಯಾಗಿದ್ದರು. ಇದರಿಂದಾಗಿಯೇ ಅವರು ಕೆಲವುಸಾರಿ ಒಲ್ಲದ ಮನಸ್ಸಿನಿಂದಲೇ ತಮ್ಮ ತೀರ್ಮಾನಗಳನ್ನು ಬಿಟ್ಟುಕೊಟ್ಟಿದ್ದಾರೆ. (ಈ ಬಗ್ಗೆ ಸಾಧ್ಯವಿದ್ದವರು ಸಿ.ಬಸವಲಿಂಗಯ್ಯ ನಿರ್ದೇಶನದ ಗಾಂಧಿ ಅಂಬೇಡ್ಕರ್ ನಾಟಕವನ್ನು ನೋಡಬೇಕಾಗಿ ಕೇಳಿಕೊಳ್ಳುತ್ತೇನೆ). ಈ ಇಬ್ಬರು ವ್ಯಕ್ತಿಗಳ ಸಂಗಮದಂತಿರುವ ವ್ಯಕ್ತಿಯೋರ್ವರಿಂದ ಮುಂದೆ ಹೋರಾಟ ನಡೆಸಿದ್ದು ಭಾರತದಲ್ಲಲ್ಲ ಬದಲಿಗೆ ಗಾಂಧಿ ತನ್ನ ಹೋರಾಟವನ್ನು ಪ್ರಾರಂಭಿಸಿದ ದಕ್ಷಿಣ ಆಫ್ರಿಕಾದಲ್ಲಿ-ನೆಲ್ಸನ್ ಮಂಡೇಲಾರಿಂದ

ಈ ವಿಚಾರಗಳನ್ನು ಮಾತಾನಾಡುವಾಗ ನನ್ನ ಅನೇಕ ಗೆಳೆಯರು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಿಗೂ ನೊಬೆಲ್ ಪ್ರಶಸ್ತಿ ಬರಬೇಕಿತ್ತು ಅನ್ನುತ್ತಾರೆ. ಅವರ ಅಭಿಪ್ರಾಯ ಸರಿಯೇ ಆದರೆ ನನ್ನ ಅಭಿಪ್ರಾಯದಲ್ಲಿ ಇವರಿಬ್ಬರೂ ನೊಬೆಲ್ ಪ್ರಶಸ್ತಿಗಿಂತಲೂ ದೊಡ್ಡವರು. ಹಾಗೇನಾದರೂ ಕೊಡಬೇಕೆನ್ನಿಸಿದರೆ, ಸುಡುಮದ್ದಿನ ವ್ಯಾಪಾರಿಯಾಗಿ ಕೊನೆಗೊಂದು ಒಳ್ಳೆಯ ಕೆಲಸ ಮಾಡಿದ ನೊಬೆಲ್‌ಗೆ ಇವರ ಹೆಸರಿನ ಪ್ರಶಸ್ತಿಯನ್ನು ಕೊಡಬಹುದು!

ಗೆಳೆಯರೆ ನಾನೀಗ ನನ್ನ ನಂಬಿಕೆಯ ಪ್ರಕಾರ ಅಂಬೇಡ್ಕರ್ ಅವರ ಎರಡು ಮಹೋನ್ನತ ಕೊಡುಗೆಗಳ ಬಗ್ಗೆ ಹೇಳುತ್ತೇನೆ

ಮೊದಲನೆಯದಾಗಿ ನಮ್ಮ ಎಲ್ಲ ಮೇಲ್‌ವರ್ಗದ ಜನರೂ ಅಂಬೇಡ್ಕರ್ ಅವರ ಬಗ್ಗೆ ನೆನಪಿಡಬೇಕಾದ ಹಾಗೂ ಕೃತಜ್ಞರಾಗಿಬೇಕಾದ ಸಂಗತಿಯೆಂದರೆ. ಒಂದು ವೇಳೆ ಅಂಬೇಡ್ಕರ್ ಅವರು ತಮ್ಮ ಹಿಂದಿರುವ ಬಲುದೊಡ್ಡ ಶೋಷಿತ ಸಮುದಾಯಕ್ಕೆ ಅಹಿಂಸೆಯ ದೀಕ್ಷೆ ನೀಡದಿದ್ದರೆ ಭಾರತದೇಶ ಇಂದು ಒಂದಾಗಿ ಇರುತ್ತಿರಲಿಲ್ಲ. ಮೇಲ್ವರ್ಗದ ನೆಮ್ಮದಿಯೂ ಕನಸಾಗಿರುತ್ತಿತ್ತು. ಶತಮಾನಗಳಿಂದ ನೋವು ಅವಮಾನಗಳನ್ನು ಅನುಭವಿಸಿದ ಜನಾಂಗಗಳು ಎಲ್ಲವನ್ನೂ ಭೂಮಿತಾಯಿಯಂತೆ ಸಹಿಸಿಕೊಂಡು ಇಂದೂ ಅಹಿಂಸಾತ್ಮಕವಾಗಿಯೇ ಇದ್ದರೆ, ಇದರ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಸಹಿಷ್ಣುತೆ, ಮಾನವೀಯತೆ, ದೂರದೃಷ್ಟಿ ಇದೆ. ಆ ಕಾರಣಕ್ಕಾಗಿಯಾದರೂ ನಾವಿಂದು ಅಂಬೇಡ್ಕರ್ ಅವರಿಗೆ ಕೃತಜ್ಞತಾರೂಪವಾಗಿ ಸಮಾನತೆಯ ಸಮಾಜದ ಅಗತ್ಯದ ಮನಗಾಣಬೇಕು.

ಎರಡನೆದಾಗಿ, ಅಂಬೇಡ್ಕರ್ ಅವರಿಗೆ ಕೊನೆಗೆ ಏನೇ ಆದರೂ ಭಾರತದ ಈ ಹಿಂದೂ ಸಮಾಜ ತಮ್ಮ ಸಮುದಾಯವನ್ನು ಮನುಷ್ಯರನ್ನಾಗಿ ಕಾಣಲಾರರು ಅನ್ನಿಸತೊಡಗಿತ್ತು. ತಮ್ಮ ಹಿಂದಿದ್ದ ದೊಡ್ಡ ಜನ ಸಮುದಾಯದ ಅಸ್ಮಿತೆಯನ್ನು ಕಾಪಾಡುತ್ತ ಅವರನ್ನು ಮಾನವರನ್ನಾಗಿ ಪರಿಗಣಿಸುವಂತ ಸಮಾಜದ- ಧರ್ಮದ ಅವರ ಹುಡುಕಾಟ ನಿರಂತರವಾಗಿತ್ತು, ಅಂತಿಮವಾಗಿ ಅವರು ತೀರ್ಮಾನಿಸಿದ್ದು ಬೌಧ್ಧದರ್ಮದತ್ತ ಪಯಣ. ಆದರೆ ಗೆಳೆಯರೆ ನನಗೆ ಅನ್ನಿಸುತ್ತಿರುವುದು ಅಂಬೇಡ್ಕರ್ ಅವರ ಎರಡು ಮಹೋನ್ನತ ಕೆಲಸಗಳಲ್ಲಿ ಅತಿ ಮುಖ್ಯವಾದದ್ದೆಂದು ನಾನು ಭಾವಿಸುವ ಈ ನಡೆಯಲ್ಲಿ ಅವರು ಬುದ್ಧಧಮ್ಮದತ್ತ ಸಾಗಲಿಲ್ಲ ಬದಲಿಗೆ ನಾವು ನಮ್ಮೊಳಗಿನಿಂದ ಓಡಿಸಿದ-ಕಳೆದುಕೊಂಡ ಬುದ್ಧನನ್ನು ಮರಳಿ ಕರೆತಂದುಕೊಟ್ಟರು. ಎಲ್ಲ ಅರಿವಿನಿಂದ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದ, ಪ್ರಬುದ್ಧರಾಗುವ ಅವಕಾಶವನ್ನು ಎಲ್ಲರಿಗೂ ಸಮಾನವಾಗಿ ನೀಡುವ ಬುದ್ಧನನ್ನು ದೊರಕಿಸಿಕೊಟ್ಟರು.

ಇಂದು ಬುದ್ಧದಮ್ಮವೂ ಕೂಡಾ ಇತರ ಧರ್ಮಗಳಂತೆ ಹಲವು ರೀತಿಯಲ್ಲಿ ಕಲುಷಿತವಾಗಿ ಹೋಮ ಹವನ ಮಾಡುವ, ಮೂಢ ನಂಬಿಕೆಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಪಂಥಗಳಾಗಿ ಒಡೆದಿವೆ. ಬುದ್ಧನ ಕಾಲಾನಂತರ ಹಲವು ಶತಮಾನಗಳ ಕಾಲ ಬುಧ್ಧನ ಮೂರ್ತಿಯೇ ಇರಲಿಲ್ಲ ಬುದ್ಧನನ್ನು ಸಂಕೇತಗಳಲ್ಲಿ ಪೂಜಿಸಲಾಗುತ್ತಿತ್ತು, ನಿಧಾನವಾಗಿ ಬುದ್ಧನನ್ನೂ ಆಲಯಗಳಲ್ಲಿ ಬಂಧಿಸಲಾಯಿತು. ಇಂದು ಈಗಾಗಲೇ ನಾವು ಅಂಬೇಡ್ಕರ್ ದೇವಾಲಯವನ್ನು ಕಟ್ಟಿ ಅರ್ಚಕನ್ನು ನೇಮಿಸಿದ್ದೇವೆ. ಆದ್ದರಿಂದ ಗೆಳೆಯರೆ ನಮಗೆ ಬೇಕಾಗಿರುವದು, ಅವೆಲ್ಲದರಿಂದ ಬೇರೆಯಾದ, ಅಂಬೇಡ್ಕರ್ ನಮಗೆ ದೊರಕಿಸಿಕೊಟ್ಟಿರುವ ಪ್ರಖರ ವಿಚಾರವಾದಿ ಬುದ್ಧ, ಬಯಲಿನಲ್ಲಿರುವ ಬುದ್ಧ. ಸ್ಥಾವರನಲ್ಲ- ನಮ್ಮನ್ನು ಬೆಳಕಿನತ್ತ ಕರೆದೊಯ್ಯಬಲ್ಲ ಜಂಗಮ ಬುಧ್ಧ.

ಬುದ್ಧನ ಬೆಳಕಿನಲ್ಲಿ ನಾವೆಲ್ಲ ಪ್ರಬುದ್ಧರಾಗಲು ಪ್ರಯತ್ನಿಸುವುದೇ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ಅತಿ ದೊಡ್ಡ ಗೌರವ. ನಾವೆಲ್ಲ ಆ ದಿಕ್ಕಿನಲ್ಲಿ ಸಾಗೋಣ ಎಂದು ಹಾರೈಸುತ್ತಾ, ಅಂಬೇಡ್ಕರ್ ಜನ್ಮದಿನಾಚರಣೆಯ ದಿನದಂದು ನನ್ನನ್ನಿಲ್ಲಿಗೆ ಆಹ್ವಾನಿಸಿ, ಇಷ್ಟುಹೊತ್ತು ಆಲಿಸಿದ ನಿಮಗೆಲ್ಲರಿಗೂ ಕೃತಜ್ಞತೆಗಳು.