ಅರುಣ್ ಶೌರಿಯವರ ಸುಳ್ಳು ದೇವರುಗಳು ಮತ್ತವರ ನೈಜ ನಿಂದಾ ಭಕ್ತಿ


– ಶ್ರೀಧರ್ ಪ್ರಭು


ರಾಮ ರಾಮ…

ವರ್ಷ ೨೦೦೨. ಸಿಪಿಎಂನ ವಕೀಲರ ಸಂಘಟನೆ AILU ಕೇರಳದ ಕೊಚ್ಚಿಯಲ್ಲಿ ಅಖಿಲ ಭಾರತ ವಕೀಲರ ಸಮಾವೇಶವನ್ನು ಆಯೋಜಿಸಿತ್ತು. ವೇದಿಕೆಯ ಮೇಲಿದ್ದ ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಹಶಿಮ್ ಅಬ್ದುಲ್ ಹಲಿಂ, ಕಲ್ಕತ್ತಾ ಮುಖ್ಯ ನ್ಯಾಯಾಲಯದ ಅಡ್ವೋಕೇಟ್ ಜನರಲ್ ನರೋ ನಾರಾಯಣ ಗೂಪ್ತು ಮತ್ತು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವಕೀಲರೆಲ್ಲ ಒಬ್ಬ ವ್ಯಕ್ತಿಯ ಆಗಮನವನ್ನು ಕಾತರದಿಂದ ಎದುರು ನೋಡುತ್ತಿದ್ದರು. ಯಾರು ಗೊತ್ತೇ ಆ ವ್ಯಕ್ತಿ? ರಾಮ ಜೇಠ್ಮಲಾನಿ!

ಆ ದಿನಗಳಲ್ಲಿ, ವಾಜಪೇಯಿ ಸರಕಾರ, ಅದಕ್ಕಿಂತ ಜಾಸ್ತಿ, ವಾಜಪೇಯಿಯವರನ್ನು ಕಂಡರೆ ಉರಿದು ಬೀಳುತ್ತಿದ್ದ ಜೇಠ್ಮಲಾನಿಯನ್ನು ಕರೆಸಿ ಅಂದಿನ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಿಸುವ ಆಲೋಚನೆ ಇರಬೇಕು ಸಂಘಟಕರಿಗೆ. ಸಭಾ ಮರ್ಯಾದೆ, ಔಪಚಾರಿಕತೆ, ಸ್ವಾಗತ, ಪರಿಚಯ ಇದ್ಯಾವುದರ ಗೋಜಿಲ್ಲದೆ ಸೀದಾ ಮೈಕಾಸುರನೆಡೆ ನುಗ್ಗಿದ ಈ ಜೇಠ್ಮಲಾನಿ ಉಸಿರೂ ತೆಗೆದುಕೊಳ್ಳದೆ ಸುಮಾರು ಸುಮಾರು ನಲವತ್ತೈದು ನಿಮಿಷ ಮಾತನಾಡಿದರು. ಇದರಲ್ಲಿ ನಲವತ್ತುನಾಲ್ಕು ನಿಮಿಷ ಕೇರಳ ಮತ್ತು ಪಶ್ಚಿಮ ಬಂಗಾಳದ ಎಡ ಸರಕಾರಗಳನ್ನು ಬೈದದ್ದು. mod-shourieಇನ್ನೊಂದು ನಿಮಿಷ ಭಾರತ-ಚೈನಾ ಯುದ್ಧ ಯುದ್ಧ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಕಮ್ಯುನಿಸ್ಟರ ಪಾತ್ರ ಇತ್ಯಾದಿ ಮಾತಾಡಿದ್ದು. ವಕೀಲರ ಸಮಸ್ಯೆಗಳು, ಸಂಘಟನೆ ಇತ್ಯಾದಿಗಳ ಪ್ರಸ್ತಾಪವೇ ಇಲ್ಲ. ಸಂಘಟಕರಿಗೆ ‘ಕೈ ತೋರಿಸಿ ಅವಲಕ್ಷಣ’… ಅಷ್ಟೇಕೆ, ಇರಲಾರದೆ ಇರುವೆ ಬಿಟ್ಟುಕೊಂಡ ಅನುಭವ!

ಇತ್ತೀಚಿಗೆ ಈ ಅರುಣ್ ಶೌರಿ ಮೋದಿ ಸರಕಾರವನ್ನು ಮೂದಲಿಸಿದಾಗ ಇದೆಲ್ಲ ನೆನಪಾಯಿತು. ಶೌರಿಯವರ ‘ಉರಿ’ ನೋಡಿ ಕೆಲವರಿಗೆ ಇವರನ್ನು ಮುಖ್ಯ ಅತಿಥಿಯಾಗಿ ಯಾವುದಾದರು ಪ್ರಗತಿಪರರ ಕಾರ್ಯಕ್ರಮಗಳಿಗೆ ಕರೆಯಿಸುವ ಖಯಾಲಿ ಏನಾದರು ಬಂದಿದ್ದರೆ ಈ ಮೇಲಿನ “ರಾಮಾಯಣ” ದ ಪ್ರಸಂಗ ಗಮನಿಸುವುದೊಳಿತು.

ಜಾನಾಮಿ ಧರ್ಮಂ…

ಒಂದು ಪಕ್ಷ ಈ ಉಮಾ ಭಾರತಿ, ಸಾಕ್ಷಿ ಮಹಾರಾಜನಂಥವರು ಬದಲಾಗಬಹುದು ಆದರೆ ಶೌರಿಯಂಥವರು ಎಂದಿಗೂ ಬದಲಾಗುವುದಿಲ್ಲ. ಶೌರಿ ತರಹದವರು “ಜಾನಾಮಿ ಧರ್ಮಂ ನಚಮೆ ಪ್ರವೃತ್ತ:” (ಸರಿಯಾದ ಮಾರ್ಗ ಯಾವುದೆಂದು ಗೊತ್ತು – ಅದರಲ್ಲಿ ಪ್ರವೃತ್ತನಾಗಲಾರೆ) ಎನ್ನುವ ಸಿದ್ಧಾಂತದವರು.

ಶೌರಿ ನೈಜ ಅರ್ಥದಲ್ಲಿ ಬಲಪಂಥೀಯ. ಸಂಘ ಪರಿವಾರದಲ್ಲಿ ಹಲವರು ಬಲಪಂಥದ ರಾಜಕೀಯ ಅಥವಾ ಧಾರ್ಮಿಕ ಆಯಾಮವನ್ನು ಸೀಮಿತವಾಗಿ ಅನುಸರಿಸುತ್ತಾರೆ; ಅರ್ಥಿಕ ವಿಚಾರಗಳಲ್ಲಿ ಸ್ವಲ್ಪ ಮಟ್ಟಿಗೆ (ಅವರದ್ದೇ ಢೊಂಗಿ ಮಾದರಿಯದ್ದೆ ಇರಲಿ) ಸಮಾಜವಾದವನ್ನು ಒಪ್ಪುತ್ತಾರೆ. ಆದರೆ ಶೌರಿ ಹಾಗಲ್ಲ. ಆತ ಎಲ್ಲ ಸ್ವರೂಪ ಆಯಾಮಗಳಲ್ಲಿ ಬಲಪಂಥವನ್ನು ತಬ್ಬುವ ಸಿದ್ಧಾಂತದ ಪ್ರತಿಪಾದಕ. ಸಂವಿಧಾನದ ಎಲ್ಲ ಆಶಯಗಳಿಗೂ ಸಂಪೂರ್ಣವಾಗಿ ವಿರೋಧಿಸುವವನನ್ನು ನೀವು ನೋಡಬೇಕಿದ್ದರೆ ಅದು ಶೌರಿಯೇ. ಅಂಬೇಡ್ಕರ್ ರಿಂದ ಮೊದಲ್ಗೊಂಡು ಎಡಪಂಥೀಯ ಇತಿಹಾಸಕಾರರು, ಕ್ರೈಸ್ತರು, ಮುಸಲ್ಮಾನರು, ಎಲ್ಲ ಬಹುಜನರನ್ನೂ ತುಳಿಯಲು ಸೈದ್ಧಾಂತಿಕ ತಳಹದಿ ತಯಾರಾಗುವುದು ಈ ಶೌರಿಯ ಫ್ಯಾಕ್ಟರಿಯಲ್ಲಿ. ಅಮೇರಿಕ ಪ್ರೇರಿತ ಅರ್ಥಿಕ ಮುಕ್ತ ಮಾರುಕಟ್ಟೆ ವಿಚಾರಧಾರೆಯನ್ನು ನಮ್ಮ ದೇಶದಲ್ಲಿ ಅತ್ಯಂತ ಪ್ರಭಲವಾಗಿ ಪ್ರತಿಪಾದಿಸಿದ್ದು ಶೌರಿ. ಎಲ್ಲವನ್ನೂ ಮಾರುಕಟ್ಟೆಯೇ ನಿರ್ಧರಿಸಬೇಕು ಎಂಬ ಸಿದ್ಧಾಂತ ಪ್ರತಿಪಾದನೆಯ ಭಾಗವಾಗಿಯೇ ಶೌರಿ ಎಡ ಮತ್ತು ಸಮಾಜವಾದಿ ಸಿದ್ಧಾಂತಗಳನ್ನು ವಿರೋಧಿಸುವುದು. ಅಂಬೇಡ್ಕರ್ ರನ್ನು ವಿರೋಧಿಸದಿದ್ದರೆ ಸಾಮಾಜಿಕ ಸಮಾನತೆ ಯನ್ನು ಹೇಗೆ ತುಳಿಯುವುದು? ಭಾರತದಲ್ಲಿ ನೈಜ ಅರ್ಥದಲ್ಲಿ ಬಲಪಂಥದ ಮಗ್ಗುಲು ಮುರಿದದ್ದು ಅಂಬೇಡ್ಕರ್. ಬೇರೆ ಯಾರನ್ನು ಎದುರಿಸಬೇಕಿದ್ದರೂ ಸೈ ಎನ್ನುವ ಸಂಘಿ ಪಡೆ ಅಂಬೇಡ್ಕರ್ ಮುಂದೆ ಮೊಣಕಾಲೂರುತ್ತದೆ. ಆದ್ದರಿಂದ ಅಂಬೇಡ್ಕರರ ಚಾರಿತ್ರ್ಯ ವಧೆ ಮಾಡುವ ಉದ್ದೇಶದಿಂದ ಶೌರಿ “Worshiping False Gods” ಬರೆದದ್ದು. ಹೀಗೆ ಶೌರಿ ತುಂಬಾ ಆಸಕ್ತಿ, ಪರಿಶ್ರಮ, ಅಧ್ಯಯನ ಪೂರ್ಣವಾಗಿ ಬಲಪಂಥದ ಸರ್ವ ಆಯಾಮ ಮತ್ತು ಮಜಲುಗಳ ಬೆನ್ನಿಗೆ ನಿಲ್ಲುವವರು.

ಅಯೋಧ್ಯ ಕಾಂಡ

೧೯೯೦ರ ಸುಮಾರಿಗೆ ಬಿಜೆಪಿ ಮೇಲ್ಜಾತಿಯ ಮಧ್ಯಮ ಮತ್ತು ಮೇಲ್ವರ್ಗದ ಜನಮಾನಸದೊಳಗೆ ಸಂಪೂರ್ಣವಾಗಿ ಹೊಕ್ಕು ಆಗಿತ್ತು. ಆದರೆ ಅಲ್ಲಲ್ಲಿ ಅಪಸ್ವರಗಳು ಇದ್ದೇ ಇದ್ದವು. ರಾಮ ಮಂದಿರ ಬೇಕು, ಸರಿ; ಆದರೆ, ಮಸೀದಿ ಕೆಡವುವುದು, ಜನರನ್ನು ಕೊಲ್ಲುವುದು ಇತ್ಯಾದಿ ಬೇಡ ಎನ್ನುವ ಒಂದು ವರ್ಗವಿತ್ತು. ಹಾಗೆಯೇ ದೇಶದ ಬಹುದೊಡ್ಡ ಬುದ್ಧಿಜೀವಿ ವರ್ಗ ಸಂಘ ಪರಿವಾರದ ಕೋಮುವಾದವನ್ನು ವಿರೋಧಿಸುತ್ತಿತ್ತು. ಆ ಸಮಯದಲ್ಲಿ ಸಂಘ ಪರಿವಾರಕ್ಕೆ ನೆನಪಾಗಿದ್ದು ಅರುಣ ಶೌರಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ಮುಖಾಂತರ ದೇಶದಾದ್ಯಂತ “Arun Shourie Speaks on Ayodhya” ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಶೌರಿ, ಜಗದೀಶ ಕಾರಂತ, ಅನಂತ ಕುಮಾರ ಹೆಗಡೆಯವರಂತೆ ಬೆಂಕಿ ಕಾರಲಿಲ್ಲ; ತುಂಬಾ ವ್ಯವಧಾನದಿಂದ ಯಾರಿಗೂ ಗೊತ್ತಾಗದಂತೆ ಊಟದಲ್ಲಿ ನುಣ್ಣನೆ ಗಾಜಿನ ಪುಡಿ ಬೆರೆಸಿ ಬಿಟ್ಟರು. ಇಂದು ಜಗದೀಶ ಕಾರಂತ, ಅನಂತ ಕುಮಾರರ ಭಾಷಣಗಳನ್ನ ಜನ ಮರೆತಿದ್ದಾರೆ; ಆದರೆ ಅಂದು ಶೌರಿ ಬೆರೆಸಿದ ‘ನುಣ್ಣನೆ ಗಾಜಿನ ಪುಡಿ’ ಸಮಾಜದ ಸಣ್ಣ ಕರುಳನ್ನೇ ಕತ್ತರಿಸಿ ಹಾಕಿದೆ. ಹೀಗಾಗಿ ‘ಅನ್ಯ’ ಕೋಮಿನೊಂದಿಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಜೀರ್ಣಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿ ಉಳಿದಿಲ್ಲ.

ಸುಳ್ಳು ದೇವರುಗಳ ಸತ್ಯ

ನಿಜ ಹೇಳಬೇಕೆಂದರೆ, ಶೌರಿಗೆ ಮೋದಿಯವರ ನೀತಿಗಳ ಬಗ್ಗೆ ಯಾವ ಘನಂದಾರಿ ಭಿನ್ನಾಭಿಪ್ರಾಯಗಳೂ ಇದ್ದಂತೆ ಇಲ್ಲ. ಹಾಗೆಂದು ಕೇವಲ ಮಿನಿಸ್ಟರ್ ಗಿರಿಗಾಗಿ, ಈ ಶೌರಿ ಹುಚ್ಚೆದ್ದು ಕುಣಿಯುವ ಜನವೂ ಅಲ್ಲ. ಇಂದು ಶೌರಿಗೆ ಬೇಕಾಗಿರುವುದು ಮನ್ನಣೆ; ಸಾಂಕೇತಿಕ ವಾಗಿಯಾದರೂ ಸರಿ, ಬೇಕಿರುವುದು ಅಧಿಕಾರ ಕೇಂದ್ರದ ಒಳಗಿನ ಒಂದು ವೇದಿಕೆ. ಜತೆಗೆ ತಮ್ಮನ್ನು ಬಳಸಿ ಬಿಸಾಡಿದ ವೇದನೆ ಶೌರಿಯಂಥವರಲ್ಲಿದೆ.

ಆದರೆ, ಇಂದು ಮೋದಿಯವರಿಗೆ ವಿಚಾರವಾದಿಗಳು ಎಂದರೆ ತುಂಬಾ ಅಲರ್ಜಿ. ಯೋಚಿಸಿ ರಾಜಕಾರಣ ಮಾಡುವ ಯಾರೇ ಆಗಲಿ, shourie-modiಕೆಲವೊಮ್ಮೆ ಪರಿಣಾಮ ಲೆಕ್ಕಿಸದೆ ಮನಸ್ಸಿನಲ್ಲಿದ್ದದ್ದು ಹೇಳಿ ಬಿಡುತ್ತಾರೆ. ವ್ಯಕ್ತಿ ಪೂಜೆ ಮಾಡುವುದಿಲ್ಲ; ಹೀಗಾಗಿ, ವಿಚಾರವಾದಿಗಳನ್ನು ಪಳಗಿಸುವುದು ಸುಲಭವಲ್ಲ. ಇನ್ನು ಇವರ ಮೀಡಿಯಾ ಸಖ್ಯದಿಂದಾಗಿ ಇವರ ವಿಚಾರಗಳು ಬೇಗ ಜನರನ್ನು ತಲುಪುತ್ತವೆ. ಇವೆಲ್ಲವೂ ಮೋದಿಯವರ ಬೃಹತ್ ಉದ್ಯಮ ಪ್ರೇರಿತ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ದೊಡ್ಡ ಅಡ್ಡಿ. ಹೀಗೆಂದೇ, ಶೌರಿ ತರಹದವರನ್ನು ಕೇವಲ ಬಳಸಿಕೊಳ್ಳಲಾಗುತ್ತದೆಯೇ ಹೊರತು ಅಧಿಕಾರ ಕೊಟ್ಟು ಶಕ್ತಿ ಕೇಂದ್ರದ ಒಳಗೆ ಬಿಟ್ಟುಕೊಳ್ಳಲಾಗುವುದಿಲ್ಲ.

ಅದೇನೇ ಆದರೂ ಶೌರಿಯೇ ತಮ್ಮ ವರ್ಗ ಮತ್ತು ಜಾತಿಯ ಹಿತಾಸಕ್ತಿ ಗಳನ್ನು ಕಾಪಾಡುವ ನೈಜ ಸಾಮರ್ಥ್ಯ ಉಳ್ಳವರು ಎಂಬುದು ಖಂಡಿತವಾಗಿ ಬಲಪಂಥೀಯರಿಗೆ ಗೊತ್ತಿದೆ. ಇನ್ನು ಶೌರಿಯ ಭಿನ್ನಾಭಿಪ್ರಾಯಗಳು ಕೂಡ ಕ್ಷಣಿಕ. ಒಟ್ಟಾರೆ, ಶೌರಿಯವರ ಭಕ್ತಿ ಎಂಥದ್ದೆಂದರೆ, ಅವರು ಪೂಜಿಸುವ ದೇವರುಗಳೇ ಸುಳ್ಳಾದರೂ ಅವರ ಭಕ್ತಿ ಸುಳ್ಳಾಗದು. ಇನ್ನು ಈ ಸುಳ್ಳು ದೇವರುಗಳ ಮಹಿಮೆ ಎಂಥಹದ್ದೆಂದರೆ ಈ ಭಕ್ತನ ನಿಂದಾ ಭಕ್ತಿಯ ಮುಂದೆ ಎಂತೆಂತಹ ನೈಜ ಭಕ್ತರ ದಾಸ್ಯ ಭಕ್ತಿಯೂ ಲೆಕ್ಕಕ್ಕಿಲ್ಲ.

6 thoughts on “ಅರುಣ್ ಶೌರಿಯವರ ಸುಳ್ಳು ದೇವರುಗಳು ಮತ್ತವರ ನೈಜ ನಿಂದಾ ಭಕ್ತಿ

  1. M A Sriranga

    ಶ್ರೀಧರ ಪ್ರಭು ಅವರಿಗೆ—- ವಿಚಾರವಾದಿಗಳ ‘ನಿಜಬಣ್ಣ’ವನ್ನು ಕರ್ನಾಟಕ ಸಾಕಷ್ಟು ನೋಡಿದೆ;ನೋಡುತ್ತಲಿದೆ. ಇದರ ದೊಡ್ದರೂಪ ಭಾರತದ ವಿಚಾರವಾದಿಗಳದ್ದು. ಸರ್ಕಾರ ಮತ್ತು ಜನಜೀವನ ನಡೆಯುವುದು ರಾಜಕೀಯ ಇಚ್ಚಾಶಕ್ತಿ ಮತ್ತು ನಿರ್ಧಾರಗಳಿಂದಲೇ ಹೊರತು ‘ಸಂಡೆ/ಹಾಲಿಡೆ’ ವಿಚಾರವಾದಿಗಳ ವಿತಂಡವಾದಗಳಿಂದ ಅಲ್ಲ. ಹಲವಾರು ಜನ ಕಲಿತ ಮಂದಿ ಆರ್ ಎಸ್ ಎಸ್ ಅನ್ನು ಟೀಕಿಸುವುದೊಂದನ್ನೇ ತಮ್ಮ primary agenda ಮಾಡಿಕೊಂಡಿರುವುದು ಗುಟ್ಟಿನ ವಿಷಯವೇನಲ್ಲ. ಆದರೆ ನೇಪಾಳದಲ್ಲಿ ನಡೆದ ಭೂಕಂಪ ಅಲ್ಲಿನ ಜನ ಜೀವನವನ್ನು ಮೂರಾಬಟ್ಟೆ ಮಾಡಿರುವ ಈ ಸಮಯದಲ್ಲಿ ಬಲ ಪಂಥೀಯರೆಂದು ವಿಚಾರವಾದಿಗಳು ಹಣೆಪಟ್ಟಿ ಕಟ್ಟಿರುವ ಇಪ್ಪತ್ತು ಸಾವಿರ ಮಂದಿ ಆರ್ ಎಸ್ ಎಸ್ ನವರು ಅಲ್ಲಿಗೆ ಹೋಗಿ ಸಹಾಯ ಮಾಡುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವಿದೆ. ಹಾಗೆಂದು ಮೊಸರಿನಲ್ಲಿ ಕಲ್ಲು ಹುಡುಕುವ, ‘ಗಾಜಿನಪುಡಿ’ ಬೆರೆಸುವ ಕೆಲಸ ವಿಚಾರವಾದವಲ್ಲ.

    Reply
    1. Shridhar Prabhu

      ಶ್ರೀರಂಗರೇ ಸ್ವತಃ RSS ಈ ಸಮಾಚಾರವನ್ನು ಅಲ್ಲಗಳೆದಿದೆ. ಸುಳ್ಳು ದೇವರನ್ನು ಪೂಜಿಸುವ ನೈಜ ಭಕ್ತಿಗೆ ಒಳ್ಳೆ ಉದಾಹರಣೆ 🙂

      http://www.hindustantimes.com/india-news/that-s-not-us-rss-steps-in-to-deny-nepal-rescue-act-tweet/article1-1341417.aspx

      ಇನ್ನು ಉತ್ತರ ಖಂಡದ Innova ಗಳ ಕಥೆ ಎಲ್ಲರಿಗೂ ಗೊತ್ತಿದ್ದದ್ದೇ. ಇಂದು ನೇಪಾಳದಲ್ಲಿ ಕ್ರೈಸ್ತ ಮತ್ತು ಇಸ್ಲಾಮಿಕ್ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಬಹುತೇಕ ಜಾತ್ಯತೀತ ರಾಷ್ಟ್ರಗಳು ತಮ್ಮ ಧನಸಹಾಯ, ಸೇನೆ ಮತ್ತು ಸಾಮಗ್ರಿಗಳ ಸಮೇತವಾಗಿ ನೀಡಿವೆ. ಅಮೇರಿಕ ಹೆಚ್ಚು ಸಹಾಯ ನೀಡಿದರೆ ನಿಮ್ಮ ತರ್ಕದ ಪ್ರಕಾರ ಅಮೆರಿಕವೇ ಹೆಚ್ಚು ಸತ್ಯಸಂಧ ರಾಷ್ಟ್ರ ಎಂದುಕೊಳ್ಳಬೇಕೆ?

      RSS ಸಮರ್ಥಿಸಿಕೊಳ್ಳಲು ಸೈದ್ಧಾಂತಿಕ ಸ್ವರೂಪದ ಸಮರ್ಥನೆ ನೀಡಿ. ಭೂಕಂಪ ಸಹಾಯ ಹಸ್ತದ ಉದ್ದದ ಮೇಲೆ ಏಕೆ ಸತ್ಯಸಂಧತೆ ಅಳೆಯುತ್ತೀರ?

      Reply
  2. Anonymous

    20,000 rss ನವರು ಹೋಗಿಲ್ಲ ಅಂಥ ಆರ್.ಎಸ್.ಎಸ್ ಸಂಘಟನೆಯೇ ಹೇಳಿದೆ.

    Reply
  3. aleem

    ಶೌರಿಯವರ ನಿಜ ಬಣ್ಣ ಚೆನ್ನಾಗಿ ಬಯಲು ಮಾಡಿದ್ದೀರಿ, ಬೇಷ್ ….. ಇನ್ನು ಕಿರುಚಾಡುವವರು, ಮೈಪರಚಿಕೊಳ್ಳುವವರು ಇದ್ದೇ ಇರ್ತಾರೆ ಬಿಡಿ… ಕಿರುಚಾಡಿಕೊಳ್ಳಲಿ….

    Reply
  4. ಜೆ.ವಿ.ಕಾರ್ಲೊ

    ನಿಮ್ಮ ಸಹಾಯ ಸಾಕು. ದಯವಿಟ್ಟು ವಾಪಸ್ಸು ಹೊರಟು ಹೋಗಿ ಎಂದು ನೇಪಾಳದವರು ಹೇಳುತ್ತಿರಬೇಕಾದರೆ ಅವರದು ದುರಭಿಮಾನವೋ, ಆಹಂಕಾರವೋ, ಪೊಗರೋ ಅಥವಾ ನಮ್ಮದು ಪಟೇಲುಗಾರಿಕೆಯೋ ಅರ್ಥವಾಗುತ್ತಿಲ್ಲ! ಬಾಂಗ್ಲಾ ದೇಶದಲ್ಲೂ ಹೀಗೆ ಆಯಿತಲ್ಲವೇ?

    Reply
  5. T.A.Ramakrishnappa

    I have read Arun shouri’s book on Ambedkar tittled ” worshipping false gods”.These are the self proclaimed intellectuals without social concern.They don’t understand the Manu-perpetuated and driven by Manu sanathana dharma protagonists. They believe that the Manu is still relevant to them. The gamut of shudra-society can’t expect anything from them. They don’t recognise our social stigma, heritage, suppression and oppression and suffering. Suppose, we are backward and poor, they attributes it to our bad habits and indolence. Suppose, we are a class intellectuals like Ambedkar, they call us false gods and coerce the society not to respect and worship false gods. They don’t recognise our struggles and tribulations. They fault our education and approach to the problems confronting the society and the nation. Ambedkar said ” educate, organise and agitate” ,as Ambedkar believed that it is difficult to convince the society of our idealogy and conviction to life and philosophy. Arun shouri, the rank and file of RSS / BJP and protagonists of sanathana Manu dharma are primarily enemies of shudras, and oppressed classes and they never tolerate our progress and education and never compromise with Ambedkarian philosophy of anhilation of caste, albeit the fact that they know it very well that the caste – system has no philosophical and scientific basis. The Hindu – religion without caste, has to draw ideological inspiration from Buddha, Basava and Ambedkar, which they consistently opposed.

    Reply

Leave a Reply

Your email address will not be published. Required fields are marked *