ಮೋದಿ ಸರ್ಕಾರ ಬಂದು ಒಂದು ವರ್ಷ, ಬದಲಾವಣೆ ನಾಸ್ತಿ


-ಆನಂದ ಪ್ರಸಾದ್


ಅಬ್ಬರದ ಕಾರ್ಪೋರೇಟ್ ಬೆಂಬಲದ ಚುನಾವಣಾ ಪ್ರಚಾರದ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದೆ. ಮೋದಿ ಬಂದು ಏನಾದರೂ ಬದಲಾವಣೆ ಆಗಿದೆಯಾ ಎಂದು ನೋಡಿದರೆ ಗಮನಾರ್ಹ ಬದಲಾವಣೆ ಕಂಡುಬರುವುದಿಲ್ಲ. ಪರಿಸ್ಥಿತಿ ಹಿಂದಿನ ಸರ್ಕಾರದ ಅವಧಿಗೂ ಇಂದಿನ ಸರ್ಕಾರದ ವ್ಯತ್ಯಾಸವೇನೂ ಇಲ್ಲ. ಲಂಚ ಕೊಡದೆ ಕೆಲಸ ಮೊದಲೂ ಆಗುತ್ತಿರಲಿಲ್ಲ, Modi-selfieಈಗಲೂ ಆಗುವುದಿಲ್ಲ ಎಂಬುದು ಶ್ರೀಸಾಮಾನ್ಯನ ಅನುಭವ. ಅತ್ಯಾಚಾರಗಳು ಹಿಂದೆ ನಡೆಯುತ್ತಿದ್ದಂತೆ ಈಗಲೂ ನಡೆಯುತ್ತಿವೆ. ಬಿಜೆಪಿ ಸರ್ಕಾರ ಬಂದರೆ ಅತ್ಯಾಚಾರ ನಡೆಯದೆ ದೇಶ ರಾಮರಾಜ್ಯವಾಗುತ್ತದೆ ಎಂದು ಪ್ರಚಾರ ಮಾಡಿದರೂ ಇಂದು ಕೂಡ ಹಿಂದಿನಂತೆಯೇ ಅತ್ಯಾಚಾರಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರ ಬಂದರೆ ಕಪ್ಪು ಹಣ ವಿದೇಶಗಳಿಂದ ತಂದು ದೇಶದಲ್ಲಿ ಸುಭಿಕ್ಷ ಉಂಟುಮಾಡುತ್ತೇವೆ ಎಂದು ಹೇಳಿದವರು ಈಗ ಆ ಬಗ್ಗೆ ಚಕಾರ ಕೂಡ ಎತ್ತುವುದಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ತಪ್ಪು ಅರ್ಥಿಕ ನೀತಿಗಳಿಂದ ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚಳ ಆಗಿ ದೇಶ ಸಂಕಷ್ಟ ಎದುರಿಸಿದೆ ಎಂದು ಪ್ರಚಾರ ಮಾಡಿದವರು ಈಗ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಈಗಲೂ ರೂಪಾಯಿ ವಿರುದ್ಧ ಡಾಲರ್ ವಿನಿಮಯ ದರ ಹಿಂದಿದ್ದ ಮಟ್ಟಕ್ಕಿಂತ ಈ ಒಂದು ವರ್ಷದ ಅವಧಿಯಲ್ಲಿ ಕಡಿಮೆಯೇನೂ ಆಗಲಿಲ್ಲ. ಹಾಗಾದರೆ ಸರ್ಕಾರ ಬದಲಿ ಜನಸಾಮಾನ್ಯನಿಗೆ ಏನು ಪ್ರಯೋಜನ ಆಗಿದೆ ಎಂದರೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದೇ ಉತ್ತರ.

ಹಿಂದಿನ ಸರ್ಕಾರಗಳು ಗ್ರಾಮೀಣ ಪ್ರದೇಶಗಳನ್ನು ತೀರ ನಿರ್ಲಕ್ಷಿಸಿರಲಿಲ್ಲ. ಈಗಿನ ಬಿಜೆಪಿ ಸರ್ಕಾರ ಗ್ರಾಮೀಣ ಮೂಲಭೂತ ಸೌಕರ್ಯ ಹೆಚ್ಚಿಸುವತ್ತ ಯಾವುದೇ ಗಮನ ಹರಿಸಿಲ್ಲ. ಅದು ಕೇವಲ ಭಾರತ ಎಂದರೆ ನಗರದಲ್ಲಿ ಮಾತ್ರ ಇದೆ ಎಂದು ಭಾವಿಸಿದೆ. ಸ್ಮಾರ್ಟ್ ಸಿಟಿಗಳನ್ನು ಕಟ್ಟುವ ಮಾತನ್ನು ಆಡುತ್ತಿದೆಯೇ ಹೊರತು ಗ್ರಾಮೀಣ ಭಾರತದ ಮೂಲಭೂತ ಸೌಕರ್ಯಗಳ ವೃದ್ಧಿಗೆ ಯಾವುದೇ ಗಮನ ನೀಡುತ್ತಿಲ್ಲ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂಥ ಗ್ರಾಮೀಣ ಅಂತರ್ಜಾಲ ಲಭ್ಯತೆಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಭಾರತದ ಹಳ್ಳಿಗಳಲ್ಲಿ 3ಜಿ ಮೊಬೈಲ್ ಅಂತರ್ಜಾಲ ಇಂದಿಗೂ ಲಭ್ಯವಿಲ್ಲ. 2010ರಲ್ಲಿಯೇ 3ಜಿ ತರಂಗಾಂತರ ಹರಾಜು ನಡೆದು ನಾಲ್ಕೈದು ವರ್ಷಗಳಾದರೂ ಭಾರತದ ಹಳ್ಳಿಗಳಿಗೆ 3ಜಿ ಮೊಬೈಲ್ ಅಂತರ್ಜಾಲ ತಲುಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದು ಎಂಥ ನಾಚಿಕೆಗೇಡು. ಅಂತರ್ಜಾಲ ಎಂಬುದು ಇಂದು ಮಾಹಿತಿ ಹಾಗೂ ಪ್ರಗತಿಯ ವಾಹಕವಾಗಿದೆ. ಹೀಗಾಗಿ ಅಂತರ್ಜಾಲ ಲಭ್ಯವಿಲ್ಲದ ಹಳ್ಳಿಗಳು ಪ್ರಗತಿಯಲ್ಲಿ ಹಿಂದೆ ಬೀಳುತ್ತಿವೆ. ಹಲವು ದೇಶಗಳು ಉಪಗ್ರಹ ಆಧಾರಿತ ಬ್ರಾಡ್ ಬ್ಯಾಂಡ್ ಅಂತರ್ಜಾಲವನ್ನು ಡಿಟಿಎಚ್ ಮಾದರಿಯಲ್ಲಿಯೇ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯನ್ನು ಮಾಡಿವೆ. ಆದರೆ ನಮ್ಮ ದೇಶವು ಮಂಗಳನ ಅಂಗಳಕ್ಕೆ ಉಪಗ್ರಹಗಳನ್ನು ಹಾರಿಬಿಡುತ್ತಿದೆ. ಅದೇ ವೇಳೆಗೆ ಶೇಕಡಾ 50ಕ್ಕಿಂತಲೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಬ್ರಾಡ್ ಬ್ಯಾಂಡ್ ಅಂತರ್ಜಾಲ ವ್ಯವಸ್ಥೆ ಲಭ್ಯವಾಗಿಸುವಲ್ಲಿ ಸೋತಿದೆ. ನಮ್ಮ ನೀತಿ ನಿರೂಪಕರಿಗೆ, ವಿಜ್ಞಾನಿಗಳಿಗೆ, ಆಡಳಿತಗಾರರಿಗೆ ಹಾಗೂ ಪ್ರಧಾನ ವಾಹಿನಿಯ ಮಾಧ್ಯಮಗಳಿಗೆ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಮೂಲಭೂತ ಜ್ಞಾನವೂ ಇಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಇದು ನಾಚಿಕೆಗೇಡು. ಡಿಜಿಟಲ್ ಇಂಡಿಯಾ ಎಂದು ಮಾತಿನಲ್ಲಿ ಅರಮನೆ ಕಟ್ಟುವ ಮೋದಿ ನೇತೃತ್ವದ ಸರ್ಕಾರ ಬಂದರೂ ಈ ದಿಶೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆದ ಪ್ರಗತಿ ಒಂದು ದೊಡ್ಡ ಶೂನ್ಯ ಬಿಟ್ಟರೆ ಮತ್ತೇನೂ ಇಲ್ಲ.

ಮೋದಿ ಅಧಿಕಾರಕ್ಕೆ ಬರುವ ಮುನ್ನ ಪಾಕಿಸ್ತಾನದ ಜೊತೆಗೆ ಸಂಘರ್ಷದ ಮಾತನ್ನು ಆಡುತ್ತಿದ್ದರು ಹಾಗೂ ಸಂಘ ಪರಿವಾರದವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪಾಕಿಸ್ತಾನದ ಜೊತೆ ಮಾತುಕತೆ ಆಡುವುದನ್ನು ವಿರೋಧಿಸುತ್ತಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಇವರೆಲ್ಲರ ಬಾಯಿ ಬಂದಾಗಿದೆ.SwachhBharath_Modi ಈಗ ಪಾಕಿಸ್ತಾನ ಏನೇ ತಂಟೆ ಮಾಡಿದರೂ ಯುದ್ಧದ ಮಾತನ್ನು ಆಡುತ್ತಿಲ್ಲ. ಇದು ಇವರಲ್ಲಿ ಸಮಚಿತ್ತದ ಮನೋಭಾವ ಇಲ್ಲ ಎಂಬುದನ್ನು ತೋರಿಸುತ್ತದೆ. ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವಿದೇಶಗಳಲ್ಲಿ ಮೋದಿಭಜನೆ ಅವ್ಯಾಹತವಾಗಿ ಸಾಗಿದೆ. ಮೋದಿಯವರ ಸ್ವಚ್ಛಭಾರತ ಅಭಿಯಾನ ನಡೆಯುತ್ತಿದ್ದರೂ ದೇಶವು ಹಿಂದಿದ್ದಕ್ಕಿಂಥ ಇಂದು ಹೆಚ್ಚು ಸ್ವಚ್ಛವಾಗಿರುವುದು ಕಂಡುಬರುವುದಿಲ್ಲ. ಸ್ವಚ್ಛಭಾರತದ ತಿಳುವಳಿಕೆ ಮೂಡಿಸುವಲ್ಲಿ ಸರ್ಕಾರ ಭಾರೀ ಪ್ರಚಾರ ನಡೆಸುತ್ತಿದ್ದರೂ ಅದರ ಪ್ರಯೋಜನ ಮಾತ್ರ ಕಾಣುತ್ತಿಲ್ಲ. ಏಕೆಂದರೆ ಸ್ವಚ್ಛ ಭಾರತಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸುವಲ್ಲಿ ಸರ್ಕಾರ ಗಮನ ಹರಿಸಿಲ್ಲ. ಉದಾಹರಣೆಗೆ ಇಂದು ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಹೀಗಾಗಿ ಪ್ಲಾಸ್ಟಿಕ್ ಕಸದ ಉತ್ಪತ್ತಿ ಹಳ್ಳಿ, ಪಟ್ಟಣ, ನಗರ ಎನ್ನದೆ ಎಲ್ಲೆಡೆ ನಡೆಯುತ್ತಿದೆ. ಇಂಥ ಪ್ಲಾಸ್ಟಿಕ್ ಅನ್ನು ಬಳಸಿ ಇದನ್ನೇ ಇಂಧನವನ್ನಾಗಿ ರೂಪಿಸುವ ತಂತ್ರಜ್ಞಾನ ಕೈಗೆಟಕುವ ದರದಲ್ಲಿ ದೇಶೀಯವಾಗಿ ಅಭಿವೃದ್ಧಿಗೊಳಿಸುವಲ್ಲಿ ಸರ್ಕಾರವಾಗಲಿ, ಮಾಧ್ಯಮಗಳಾಗಲಿ, ಇಂಜಿನಿಯರಿಂಗ್ ಕಾಲೇಜುಗಳಾಗಲಿ ಗಮನ ಹರಿಸಿಲ್ಲ. ಕೆಲವು ಇಂಜಿನಿಯರಿಂಗ್ ಕಾಲೇಜುಗಳು ಇಂಥ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೂ ಸರ್ಕಾರ ಅದನ್ನು ಜನಪ್ರಿಯಗೊಳಿಸುವಲ್ಲಿ ಗಮನವನ್ನೇ ಹರಿಸಿಲ್ಲ ಹಾಗೂ ಅದು ಜನರಿಗೆ ತಲುಪುವಂತೆ ನೋಡಿಕೊಂಡಿಲ್ಲ. ಪ್ರತಿ ಗ್ರಾಮಪಂಚಾಯತುಗಳಲ್ಲಿ ಪ್ಲಾಸ್ಟಿಕ್ ಕಸವನ್ನು ಬಳಸಿ ಇಂಧನ ತಯಾರಿಸುವ ಯಂತ್ರಗಳನ್ನು ಸ್ಥಾಪಿಸಿದರೆ ದೇಶದ ಬಹುತೇಕ ಪ್ಲಾಸ್ಟಿಕ್ ಕಸದ ನಿರ್ಮೂಲನೆ ಸಾಧ್ಯ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೇ. ಅದು ಕೇಂದ್ರದ ಅಬ್ಬರದ ಪ್ರಚಾರದ ಮೋದಿ ಸರ್ಕಾರದಲ್ಲೂ ಕಾಣಿಸುತ್ತಿಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿಯೂ ಕಾಣಿಸುತ್ತಿಲ್ಲ. ಕಸವನ್ನು ಎಲ್ಲೆಂದರಲ್ಲಿ ಹಾಕುವುದು ಭಾರತೀಯರ ಮೂಲಭೂತ ಗುಣವೂ ಆಗಿದೆ. ಇದು ಭಾರತೀಯರ ರಕ್ತದಲ್ಲೇ ಬಂದ ಮೂಢನಂಬಿಕೆಗಳಂತೆ ಒಂದು ನಿವಾರಿಸಲಾರದ ರೋಗವಾಗಿರುವಂತೆ ಕಂಡುಬರುತ್ತದೆ. ಇಂದು ಕೊಳ್ಳುಬಾಕ ಸಂಸ್ಕೃತಿಯನ್ನು ಕೈಗಾರೀಕರಣ ಹಾಗೂ ನಗರೀಕರಣ, ಮಾಧ್ಯಮಗಳ ಅಬ್ಬರದ ಜಾಹೀರಾತುಗಳು ಹೆಚ್ಚಿಸುತ್ತಿರುವ ಕಾರಣ ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ಆವರಿಸಿದೆ. ಪ್ಲಾಸ್ಟಿಕ್ ನಿಷೇಧಿಸುವುದು ಇದಕ್ಕೆ ಪರಿಹಾರ ಅಲ್ಲವೇ ಅಲ್ಲ.

ಮೋದಿ ಸರ್ಕಾರ ಬಂದ ನಂತರ ಕಾಕತಾಳೀಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಇಂಧನ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂತು. ಹೀಗಾಗಿ ಹಣದುಬ್ಬರ ಸ್ವಲ್ಪ ನಿಯಂತ್ರಣಕ್ಕೆ ಬಂದದ್ದೇ ಹೊರತು ಇದರಲ್ಲಿ ಮೋದಿ ಸರ್ಕಾರದ ಸಾಧನೆ ಏನೂ ಇಲ್ಲ. ಒಂದು ವೇಳೆ ಪೆಟ್ರೋಲಿಯಂ ಇಂಧನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗದೇ ಇದ್ದಿದ್ದರೆ ದೇಶದಲ್ಲಿ ನಾಗರಕ ಅತೃಪ್ತಿ ಹೆಚ್ಚುತ್ತಿತ್ತು ಹಾಗೂ ಹಣದುಬ್ಬರವೂ ನಿಯಂತ್ರಣಕ್ಕೆ ಸಿಗದೇ ಜನರ ಬದುಕು ಇನ್ನಷ್ಟು ದುಸ್ತರವಾಗುತ್ತಿತ್ತು. ಮೋದಿ ಸರ್ಕಾರ ಗ್ರಾಮೀಣ ಭಾರತದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನೂ ರೂಪಿಸಿಲ್ಲ. ಅದರ ಗಮನ ನಗರ ಭಾರತದ ಅಭಿವೃದ್ಧಿ ಮಾತ್ರ.  ಇದೊಂದು ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯೇ ಹೊರತು ಮತ್ತೇನೂ ಅಲ್ಲ.  ಹಿಂದೆ ನೆಹರೂರವರನ್ನು ಪಾಶ್ಚಾತ್ಯ ನಾಗರಿಕತೆಯ ಆರಾಧಕ ಹಾಗೂ ಪಾಶ್ಚಾತ್ಯ ಕೈಗಾರಿಕೀಕರಣದ ಅಂಧಾನುಯಾಯಿ ಎಂದು ಹಂಗಿಸುತ್ತಿದ್ದ ಸಂಘ ಪರಿವಾರವು ಈಗ ಮೋದಿ ಅದೇ ಪಾಶ್ಚಾತ್ಯ ಕೈಗಾರಿಕೀಕರಣ, ನಗರೀಕರಣವನ್ನು ಸರ್ವಶ್ರೇಷ್ಠ ಮಾದರಿ ಎಂದು ಅಂಧಾನುಕರಣೆ ಮಾಡುತ್ತಿರುವಾಗ ಬಾಯಿ ಮುಚ್ಚಿ ಕುಳಿತಿರುವುದು ವಿಪರ್ಯಾಸ. ಹಳ್ಳಿಗಳಿಂದ ನಗರದತ್ತ ಜನರ ವಲಸೆ ತಡೆಯಲು ಮೋದಿ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಜನ ಹಳ್ಳಿಗಳಲ್ಲಿ ಆರೋಗ್ಯಕರ ಪರಿಸರದಲ್ಲಿ ಬದುಕುವ ಸಾಧ್ಯತೆ ಇರುವಾಗಲೂ ನಗರಗಳೆಡೆಗೆ ವಲಸೆ ಬರುತ್ತಿದ್ದಾರೆ. ಉದ್ಯೋಗ ಇಲ್ಲದೆ ಮಾತ್ರ ಜನ ವಲಸೆ ಬರುತ್ತಿರುವುದು ಅಲ್ಲ. ಇಂದು ಗ್ರಾಮೀಣ ಭಾಗದಲ್ಲಿ ಬೇಕಾದಷ್ಟು ಜಮೀನು ಇರುವವರೂ ನಗರ ಜೀವನದ ಮೋಹಕ್ಕೆ ಒಳಗಾಗಿ ವಲಸೆ ಹೋಗುತ್ತಿದ್ದಾರೆ. ಜನರ ಮಾನಸಿಕತೆ ಇದಕ್ಕೆ ಕಾರಣ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಸ್ವದೇಶೀ ಸಂಸ್ಕೃತಿಯ ಬಗ್ಗೆ ಬೊಬ್ಬೆ ಹೊಡೆಯುವ ಸಂಘ ಪರಿವಾರದ ಗರಡಿಯಲ್ಲಿ ಬೆಳೆದಿರುವ ಮೋದಿ ಯಾವುದೇ ಕ್ರಮಗಳನ್ನೂ ಕೈಗೊಳ್ಳದೆ ಇರುವುದು ಶೋಚನೀಯವಲ್ಲದೆ ಮತ್ತೇನು?

ಭ್ರಷ್ಟಾಚಾರದ ಬಗ್ಗೆ ಲೋಕಸಭಾ ಚುನಾವಣೆಗೂ ಮೊದಲು ಭಾರೀ ಬೊಬ್ಬೆ ಹಾಕುತ್ತಿದ್ದ ಮೋದಿ ಈಗ ಅಧಿಕಾರಕ್ಕೆ ಬಂಡ ನಂತರ ಸಿಬಿಐ ಎಂಬ ತನಿಖಾ ಸಂಸ್ಥೆಯನ್ನು ರಾಜಕೀಯಮುಕ್ತ ಗೊಳಿಸಿ ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಲು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಚಿತ್ರವಾಗಿದೆ. ಸಿಬಿಐ modi-kejriwalಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಗರು ಈಗ ಅವರದೇ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವಾಗ ಏಕೆ ಅದನ್ನು ರಾಜಕೀಯಮುಕ್ತಗೊಳಿಸಿ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವುದಿಲ್ಲ?  ಚುನಾವಣೆಗೂ ಮೊದಲು ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಮೋದಿ ಈಗ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ್ ವ್ಯವಸ್ಥೆಯನ್ನು ಏಕೆ ಶೀಘ್ರವಾಗಿ ತರುತ್ತಿಲ್ಲ? ಭಾರತದಲ್ಲಿ ಏಕೆ ಎಲ್ಲ ಪಕ್ಷಗಳೂ ಅಧಿಕಾರಕ್ಕೆ ಬಂದ ನಂತರ ಮೊದಲು ತಾವೇ ಬೊಬ್ಬೆ ಹೊಡೆಯುತ್ತಿದ್ದ ವಿಷಯದ ಬಗ್ಗೆ ಮೌನವಾಗುತ್ತಿವೆ? ದೆಹಲಿಯಲ್ಲಿ ಭಾರೀ ಭ್ರಷ್ಟಾಚಾರ ವಿರೋಧಿ ಹೋರಾಟದ ಫೋಸು ನೀಡಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವೂ ಈಗ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆ ತರುವ ಬಗ್ಗೆ ಮಾತೇ ಆಡುತ್ತಿಲ್ಲ. ಹಾಗಾದರೆ ಇವರ ಹೋರಾಟ ಎಲ್ಲ ಅಧಿಕಾರದ ಗದ್ದುಗೆ ಏರಲು ಮಾತ್ರ ಎಂದಾಯಿತೇ? ಪ್ರತಿಭಾವಂತರಿಂದ ಹಾಗೂ ಸಾಂಪ್ರದಾಯಿಕ ರಾಜಕೀಯಕ್ಕೆ ಹೊರತಾದ ಹಿನ್ನೆಲೆಯಿಂದ ಬಂದ ಕೇಜ್ರಿವಾಲ್ ಹಾಗೂ ಸಂಗಡಿಗರೂ ಉಳಿದ ರಾಜಕಾರಣಿಗಳಂತೆ ಆದರೆ ಜನ ಯಾರನ್ನು ನಂಬಬೇಕು? ಪ್ರತಿಭಾವಂತರೂ, ಯೋಚಿಸಬಲ್ಲ ಸಾಮರ್ಥ್ಯ ಉಳ್ಳವರೂ ಹೀಗೆ ಮಾಡಿದರೆ ಬದಲಾವಣೆ ತರುವುದು ಹೇಗೆ ಸಾಧ್ಯ? ಭಾರತದಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂಬುದು ಯೋಚಿಸಬೇಕಾದ ವಿಚಾರ.
ಭಾರತದಲ್ಲಿ ಇಂದು ಪ್ರತಿಭಾವಂತರು ಹಣ ಮಾಡಿ ಐಶಾರಾಮದ ಜೀವನ ಕಳೆಯುವುದರಲ್ಲಿಯೇ ಜೀವನದ ಸಾರ್ಥಕ್ಯ ಕಾಣುತ್ತಿದ್ದಾರೆ. ಒಟ್ಟೂ ಸಮಾಜವೂ ಇದೇ ದಿಕ್ಕಿನಲ್ಲಿಯೇ ಯೋಚಿಸುತ್ತಿದೆ. ನಾಯಕತ್ವದ ಗುಣ ಉಳ್ಳವರು ಇನ್ನಷ್ಟು ಮತ್ತಷ್ಟು ಹಣ ಮಾಡುವುದರಲ್ಲಿ, ಭೌತಿಕ ಸಂಪತ್ತು ಕೂಡಿಹಾಕುವುದರಲ್ಲಿ ಮೈಮರೆತಿದ್ದಾರೆ. ದೇಶದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಸಂಸ್ಥೆಗಳನ್ನು ಕಟ್ಟಿದಂತೆ ರಾಜಕೀಯ ನಾಯಕತ್ವ ರೂಪಿಸುವ ಸಂಸ್ಥೆಗಳನ್ನು ಕಟ್ಟಬೇಕಾದ ಅಗತ್ಯ ಇದೆ. ನಮ್ಮ ದೇಶದಲ್ಲಿ ಇಂಥ ಸಂಸ್ಥೆಗಳೇ ಇಲ್ಲ. ಇದರ ಪರಿಣಾಮವೇ ನಮ್ಮಲ್ಲಿ ಪ್ರತಿಭಾವಂತ ಹಾಗೂ ಸಮತೂಕದ, ಸಮಚಿತ್ತದ, ಮುಂದಾಲೋಚನೆ ಇರುವ ನಾಯಕರ ಕೊರತೆ ಇಂದು ಕಂಡುಬರುತ್ತಿರುವುದು. ದೇಶದ ಪ್ರತಿಭಾವಂತರು, ಮಾಧ್ಯಮಗಳು ಇಂದು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ.

6 thoughts on “ಮೋದಿ ಸರ್ಕಾರ ಬಂದು ಒಂದು ವರ್ಷ, ಬದಲಾವಣೆ ನಾಸ್ತಿ

  1. raghavendra1980

    ಲೇಖಕರು ಪಾಪ ಇದನ್ನು ಬರೆಯುವಾಗ ಚಿಲ್ಲಿ ಚಿಕನ್ ಜಾಸ್ತಿ ತಿಂದರೇನೋ! ತ್ಚು ತ್ಚು ತ್ಚು

    Reply
  2. Anonymous

    “ಭಾರತದಲ್ಲಿ ಇಂದು ಪ್ರತಿಭಾವಂತರು ಹಣ ಮಾಡಿ ಐಶಾರಾಮದ ಜೀವನ ಕಳೆಯುವುದರಲ್ಲಿಯೇ ಜೀವನದ ಸಾರ್ಥಕ್ಯ ಕಾಣುತ್ತಿದ್ದಾರೆ. “”

    100% truth.

    Reply
  3. Salam Bava

    ತ್ಯ ಕಹಿ ಹೌದು,ಆದರೆ ಖಾರ ಆದರೆ ನೀರು ತುಂಬಾ ಕುಡಿಯ ಬೇಕಾಗುತ್ತುದೆ !ಆನಂದ್ ಪ್ರಸಾದರ ಲೇಖನ ಪೂರ್ಣ ಸತ್ಯ,ಆದುದರಿಂದ ಎಲೈಟ್ ಗೆ ಪಥ್ಯವಾಗಲಿಕ್ಕಿಲ್ಲ

    Reply
  4. Salam Bava

    ಸತ್ಯ ಕಹಿ ಹೌದು,ಆದರೆ ಖಾರ ಆದರೆ ನೀರು ತುಂಬಾ ಕುಡಿಯ ಬೇಕಾಗುತ್ತುದೆ !ಆನಂದ್ ಪ್ರಸಾದರ ಲೇಖನ ಪೂರ್ಣ ಸತ್ಯ,ಆದುದರಿಂದ ಎಲೈಟ್ ಗೆ ಪಥ್ಯವಾಗಲಿಕ್ಕಿಲ್ಲ

    Reply
  5. mallikarjun

    ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಈಗ ಕೇವಲ 1 ವರುಷ ಮಾತ್ರ ಪೂರೈಸಿದೆ. ಅದನ್ನು ಲೇಖಕರು ಅರಿಯಲಿಲ್ಲವೇಕೆ? 60 ವಷ‍್ ಕಾಂಗ್ರೆಸ್‍ಗೆ ಅಧಿಕಾರ ನೀಡಲಾಗಿತ್ತು. ಈಗ ಬಿಜೆಪಿಗೆ ನೀಡಿದೆ. ಆದರೂ ಬದಲಾವಣೆ ಸಾಧ್ಯವಾಗಿಲ್ಲ. ಅದು ಒಂದು ವಸಂತದಲ್ಲಿ ಆಗಬೇಕು ಎಂಬುದು ತಪ್ಪು. ಕಾದು ನೋಡಿ ಲೇಖಕರೇ?

    Reply

Leave a Reply to raghavendra1980 Cancel reply

Your email address will not be published. Required fields are marked *