Daily Archives: May 12, 2015

ಆತಂಕವಾಗುತ್ತಿರುವುದು ದುಡಿಯುತ್ತಿದ್ದವರು ಸೋಮಾರಿಗಳಾಗುತ್ತಿದ್ದಾರೆಂದೋ? ಸೋಮಾರಿಗಳಾಗಿದ್ದವರು ದುಡಿಯಬೇಕಾಗಿದೆಯೆಂದೋ?!

– ಸರ್ಜಾಶಂಕರ್ ಹರಳಿಮಠ

ಈಗ ಎಲ್ಲ ಕಡೆ ಒಂದೇ ದೂರು ಕೆಲಸಗಾರರು ಸಿಗುತ್ತಿಲ್ಲ ಎಂಬುದು. ಈ ಮಾತಿನೊಂದಿಗೆ ಅವರು ಇನ್ನೊಂದು ಮಾತನ್ನೂ ಸೇರಿಸುವುದನ್ನು ಮರೆಯುವುದಿಲ್ಲ. ಅದೆಂದರೆ “ದಿನಕ್ಕೆ ೫೦೦ ರೂಪಾಯಿ ಕೊಟ್ಟರೂ..”

ಸರ್ಕಾರ ಅನ್ನಭಾಗ್ಯ ಯೋಜನೆಯಡಿ ರೂಪಾಯಿಗೊಂದರಂತೆ ೩೦ ಕೆ.ಜಿ ಅಕ್ಕಿ ಕೊಡುತ್ತಿರುವುದೂ ಟೀಕೆಗೆ ಒಳಗಾಗಿದೆ. (ಈಗ ಒಬ್ಬರಿಗೆ ೫ ಕೆಜಿ ಅಕ್ಕಿ ಉಚಿತ ಯೋಜನೆ) ಕೆಲವು ಸಾಹಿತಿಗಳೂ ಇದಕ್ಕೆ ದನಿಗೂಡಿಸಿದ್ದಾರೆ. ಸರ್ಕಾರ ಜನರನ್ನು ಪುಕ್ಕಟೆ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ india-poverty-hungerಮಾಡುತ್ತಿದೆ ಎನ್ನುವುದು ಇವರೆಲ್ಲರ ಆಕ್ಷೇಪ.

ಕೆಲಸಗಾರರು ಸಿಗುತ್ತಿಲ್ಲ, ಸರ್ಕಾರ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂಬ ಈ ಟೀಕೆಗಳಲ್ಲಿ ಸತ್ಯದ ಅಂಶಗಳಿವೆ. ಆದರೆ ಇದಕ್ಕೆ ಬೇರೆ ಆಯಾಮಗಳೂ ಇವೆ ಎಂಬುದು ಚಿಂತಿಸಬೇಕಾದ ಸಂಗತಿ.

ನಮ್ಮ ಶಿಕ್ಷಣವೇ ದೈಹಿಕ ದುಡಿಮೆಯಿಂದ ನಮ್ಮನ್ನು ವಿಮುಖರನ್ನಾಗಿ ಮಾಡಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಉನ್ನತ ಶಿಕ್ಷಣ ಪಡೆದ ರೈತರ ಮಕ್ಕಳು ಹಳ್ಳಿಯಲ್ಲಿ ಉಳಿದರೂ ತಮ್ಮ ತಂದೆ ತಾಯಿಗಳಂತೆ ಗದ್ದೆ ತೋಟಗಳಲ್ಲಿ ದುಡಿಯಲಾರದವರಾಗಿದ್ದಾರೆ. ಹಿಂದೆ ಈ ರೈತರ ಮನೆಗಳಲ್ಲಿ ದುಡಿಯುತ್ತಿದ್ದ ಕೂಲಿಕಾರರ ಮಕ್ಕಳು ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ನಗರದತ್ತ ತೆರಳಿದ್ದಾರೆ. ಇವರು ನಗರದತ್ತ ಉದ್ಯೋಗಕ್ಕೆ ತೆರಳಿರುವುದು ಕೇವಲ ದುಡಿಮೆಗೆ ಮಾತ್ರವಲ್ಲ ಎಂಬುದು ಮುಖ್ಯವಾದ ಸಂಗತಿ.

ಒಂದು ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುವುದಕ್ಕೂ, ಹಳ್ಳಿಯಲ್ಲಿ ದೊಡ್ಡ ಭೂಮಾಲೀಕರ ಬಳಿ ಕೂಲಿ ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಾರ್ಖಾನೆಯಲ್ಲಿ ಕೆಲಸಗಾರ ಮತ್ತು ಮಾಲೀಕನ ನಡುವಿನ ಸಂಬಂಧ ಕೆಲಸಗಾರ ಮತ್ತು ಮಾಲೀಕನ ಸಂಬಂಧಷ್ಟಕ್ಕೆ ಸೀಮಿತವಾಗಿರುತ್ತದೆ. ಆದರೆ ಹಳ್ಳಿಯಲ್ಲಿ ಕೂಲಿ ಕೆಲಸದೊಂದಿಗೆ ಜಾತಿಯ ಅವಮಾನ, ಅಸ್ಪೃಶ್ಯತೆ ಎಲ್ಲವೂ ಬಿಡಿಸಲಾಗದಂತೆ ತಳುಕು ಹಾಕಿಕೊಂಡಿರುತ್ತವೆ. Gadag Farmersಶಿಕ್ಷಣ ಇದನ್ನೆಲ್ಲ ಯುವ ತಲೆಮಾರಿನ ಅರಿವಿಗೆ ತರುತ್ತಿರುತ್ತದೆ. ಇದರಿಂದ ಬಿಡುಗಡೆ ಪಡೆಯಲೂ ಕೃಷಿಕೆಲಸ ಬಿಟ್ಟು ನಗರದತ್ತ ಹೋಗುವವವರ ಸಂಖ್ಯೆ ಅಧಿಕ. ಇದನ್ನು ಅರಿತಿರುವ ಹಳ್ಳಿಯ ಭೂಮಾಲೀಕರು ಇತ್ತೀಚೆಗೆ ಕೂಲಿ ದರವನ್ನು ಏರಿಸಿದ್ದಾರೆ. ಜಾತಿಯನ್ನು ಮೀರಿ ವ್ಯಕ್ತಿಗೌರವವನ್ನು ಕೊಡುವ ಅನಿವಾರ್ಯತೆಗೂ ಒಳಗಾಗಿದ್ದಾರೆ. ಹಾಗೆಂದು ಲಗಾಯ್ತಿನಿಂದ ಉತ್ತಮ ಸಂಬಳವನ್ನು ಕೊಟ್ಟು ಕೆಲಸಗಾರರನ್ನು ತಮ್ಮ ಮನೆಯ ಸದಸ್ಯರಂತೆ ಪ್ರೀತಿಯಿಂದ ಕಾಣುವ ಭೂಮಾಲೀಕರು ಇಲ್ಲವೆಂದಲ್ಲ. ಆದರೆ ಅಂಥಹವರು ತುಂಬ ವಿರಳ.

ಜೀವನಕ್ಕೆ ಅಕ್ಕಿ ಒಂದು ಸಿಕ್ಕರೆ ಸಾಕೆ? ನಾವೆಲ್ಲರೂ ಕೇವಲ ಅಕ್ಕಿಗಾಗಿ ದುಡಿಯುತ್ತಿದ್ದೇವೆಯೇ? ಒಂದು ವೇಳೆ ನಮಗೂ ೩೦ ಕೆಜಿ ಅಕ್ಕಿ ಉಚಿತವಾಗಿ ಸಿಕ್ಕರೆ ನಾವೂ ಬೇರೆ ಕೆಲಸ ಮಾಡದೆ ಸೋಮಾರಿಗಳಾಗಿ ಮನೆಯಲ್ಲೇ ಕುಳಿತುಕೊಳ್ಳುತ್ತೇವೆಯೇ? ಅನ್ನ ಮಾತ್ರ ನಮ್ಮ ಅಗತ್ಯವಾದರೆ ೧ ರಿಂದ ೩ ದಿನದ ದುಡಿಮೆಯ ಆದಾಯದಲ್ಲಿಯೇ ತಿಂಗಳಿಗಾಗುವಷ್ಟು ನಾವು ಗಳಿಸಬಲ್ಲೆವು? ಮತ್ಯಾಕೆ ನಾವು ತಿಂಗಳು ಪೂರ್ತಿ ದುಡಿಯುತ್ತಿದ್ದೇವೆ?

ಮೂರೋತ್ತಿನ ಊಟ ಮಾತ್ರ ಜನರ ಅಗತ್ಯವಲ್ಲ. ನಮ್ಮದೇ ಒಂದು ಚಿಕ್ಕ ಮನೆ ಕಟ್ಟಿಕೊಳ್ಳಬೇಕು. ಮನೆ ಕಟ್ಟಿಕೊಳ್ಳಲು ಒಂದು ನಿವೇಶನ ಬೇಕು. ಮಕ್ಕಳಿಗೆ ಒಂದು ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು. ಮಕ್ಕಳಿಗೆ ಮದುವೆ ಮಾಡಬೇಕು.. ನಮಗೆಲ್ಲ ಗೊತ್ತು, ಇವೆಲ್ಲಾ ನಮ್ಮ ನಮ್ಮ ಸಣ್ಣ ಕನಸುಗಳಾದರೂ ಇದನ್ನು ಸಾಕಾರಗೊಳಿಸಿಕೊಳ್ಳಲು ಜೀವನಪರ್ಯಂತ ದುಡಿಯಬೇಕು ಎಂಬುದು. ಮಧ್ಯಮವರ್ಗದ ಬಹುತೇಕರಿಗೆ ಸೈಟು ಕೊಳ್ಳುವುದು, ಮನೆ ಕಟ್ಟುವುದು ಅವರ ಜೀವನಪರ್ಯಂತ ಸಾಕಾರವಾಗದ ಕನಸು.

ಮಧ್ಯಮವರ್ಗದ ನಮ್ಮೆಲ್ಲರ ಕನಸುಗಳು ಕೂಲಿಕಾರ್ಮಿಕರಿಗೆ ಇರುವುದಿಲ್ಲವೆಂದೂ, ಅವರು ೩೦ ಕೆ.ಜಿ ಪುಕ್ಕಟೆ ಅಕ್ಕಿ ಪಡೆದು ಸೋಮಾರಿಗಳಾಗಿ ಇರುತ್ತಾರೆ ಎಂದು ಹೇಗೆ ಭಾವಿಸುವುದು?

ಸಮಾಜ ದುಡಿಯುವ ಜನರನ್ನು ಸದಾ ದುಡಿಯುವವರನ್ನಾಗಿಯೇ ನೋಡುತ್ತದೆ. ಆ ವರ್ಗ ದುಡಿಯುವುದರಲ್ಲಿ ಏರುಪೇರಾದಲ್ಲಿ ನಮಗೆ ತಳಮಳ ಶುರುವಾಗುತ್ತದೆ. ಅವರು ಸೋಮಾರಿಗಳಾಗುತ್ತಿದ್ದಾರೆ ಎಂದು ದೂರುತ್ತೇವೆ. ಸರ್ಕಾರ ಅವರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದು ಟೀಕಿಸುತ್ತೇವೆ. ಅದು ಸರಿ, ಆದರೆ ಅವರು ಹತ್ತಾರು ತಲೆಮಾರುಗಳಿಂದ ದುಡಿಯುತ್ತಲೇ ಇದ್ದಾರೆ, ಇದರಿಂದ ಅವರಿಗೆ ಸಿಕ್ಕ ಲಾಭವೇನು? ಇನ್ನೂ ಏಕೆ ಅವರು ಗುಡಿಸಲುಗಳಲ್ಲಿಯೇ ಇದ್ದಾರೆ? ಈ ಬಗ್ಗೆ ಎಂದೂ ಚಿಂತಿಸದ ನಾವು ಈಗ ಅವರು ಸೋಮಾರಿಗಳಾಗುತ್ತಿದ್ದಾರೆ ಎಂದು ಆತಂಕ ಪಡುತ್ತಿದ್ದೇವೆ. ‘ಮನುಷ್ಯ ಸೋಮಾರಿಯಾದರೆ ಆತನ ಕುಟುಂಬ ನಾಶವಾಗುತ್ತದೆ’ ಇತ್ಯಾದಿಯಾಗಿ ದುಡಿಯುವ ಕುಟುಂಬಗಳ ಬಗ್ಗೆ ನಾವು ಕಾಳಜಿ ತೋರುತ್ತಿದ್ದೇವೆ. ಇದು ದುಡಿಸಿಕೊಳ್ಳುವವರ ಅಷಾಢಭೂತಿತನ. ನಿಜವಾಗಿ ನಮ್ಮ ಆತಂಕವಿರುವುದು ಈವರೆಗೂ ಬಿಡುವಿಲ್ಲದೆ ದುಡಿಯುತ್ತಿದ್ದವರು ಸೋಮಾರಿಗಳಾಗುತ್ತಿದ್ದಾರೆ ಎಂಬುದಲ್ಲ, ದುಡಿಯುವವರಿಲ್ಲದೆ ನಾವೀಗ ಮೈಬಗ್ಗಿಸಿ ದುಡಿಯಬೇಕಾಗಿದೆಯಲ್ಲ ಎಂಬುದು!

‘ಸರ್ಕಾರ ಜನರನ್ನು ಪುಕ್ಕಟೆ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ ಮಾಡುತ್ತಿದೆ’ ಎಂಬ ಟೀಕೆ ದುಡಿಸಿಕೊಳ್ಳುವವರಿಂದ Siddaramaiah-annyabhagyaಬರುವುದು ಅಚ್ಚರಿಯ ಸಂಗತಿಯಲ್ಲ. ಆದರೆ ಇಂತಹ ಟೀಕೆಗಳನ್ನು ಸಮರ್ಥಿಸುವ ಸಾಹಿತಿಗಳಿಗಾದರೂ ಕ್ಷಣಕಾಲ ಇದರ ಇನ್ನಿತರ ಆಯಾಮಗಳನ್ನು ಅರಿಯುವಂತಾಗಬೇಕು. ಏಕೆಂದರೆ ಹೊರನೋಟಕ್ಕೆ ಇದು ಸರ್ಕಾರದ ಬಗೆಗಿನ ಟೀಕೆಯಂತೆ ಕಂಡರೂ ಇದು ದುಡಿಯುವ ವರ್ಗದ ಸ್ವಾಭಿಮಾನ ಮತ್ತು ಘನತೆಯನ್ನೇ ಪ್ರಶ್ನಿಸುತ್ತಿದೆ.