ನನ್ನ ನೆನಪಿನಲ್ಲಿ ನೀನು ಕಣ್ಣೀರು ಹಾಕಬೇಡ, ಮನಸ್ಸು ನೋಯಿಸಿಕೊಳ್ಳಬೇಡ

– ಬಿ. ಶ್ರೀಪಾದ ಭಟ್

ಆತ ಲಖ್ನೋ ಬಾಯ್. ಹೆಸರು ತಲಾತ್ ಮಹಮೂದ್. ತನ್ನ ೧೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಸಾಧಿಸಿದ್ಧ ಈ ಲಖ್ನೋ ಬಾಯ್ ಗಝಲ್ ಹಾಡುವುದರಲ್ಲಿ ಜನಪ್ರಿಯನಾಗಿದ್ದ. ಆತನ ೧೭ನೇ ವಯಸ್ಸಿನಲ್ಲಿಯೇ ಎಚ್‌ಎಂವಿ ಮೂಲಕ ಗಝಲ್ talat_mahmoodಹಾಡುಗಳ ಡಿಸ್ಕ್ ಬಿಡುಗಡೆಯಾಗಿತ್ತು. ಆ ೪೦ರ ದಶಕದ ಪ್ರಖ್ಯಾತ ಗಝಲ್ ಹಾಡುಗಾರ ಉಸ್ತಾದ್ ಬರ್ಖಾತ್ ಅಲಿ ಖಾನ್ ನೊಂದಿಗೆ ಈ ಲಖ್ನೋ ಬಾಯ್ “ತಲಾತ್ ಮಹಮೂದ್”ನ ಹಾಡುಗಳನ್ನು ಗುನುಗುನಿಸುತ್ತಿದ್ದರು. ೪೦ರ ದಶಕದ ಮಧ್ಯ ಭಾಗದಲ್ಲಿ ಬಾಂಬೆಗೆ ಬಂದ ತಲಾತ್‌ಗೆ ಆಗಿನ ಹಿಂದಿ ಸಿನಿಮಾದ ಸಂಗೀತ ನಿರ್ದೇಶಕರು ತೀರಾ ತೆಳುವಾದ ಧ್ವನಿ, ಹಾಡುವಾಗ ಕಂಪಿಸುತ್ತದೆ ಎಂದು ಮೂದಲಿಸಿ ಅವಕಾಶಗಳನ್ನು ನಿರಾಕರಿಸಿದ್ದರು. ಕಡೆಗೆ ೧೯೪೯ರಲ್ಲಿ ಅನಿಲ್ ಬಿಶ್ವಾಸ್ ಸಂಗೀತ ನಿರ್ದೇಶನದ, ದಿಲೀಪ್ ಕುಮಾರ್ ಅಭಿನಯದ ’ಆರ್ಜೂ’ ಸಿನಿಮಾಗೆ ’ಐ ದಿಲ್ ಮುಜೆ ಐಸೆ ಜಗಾ ಲೇ ಚಲ್’ ಎನ್ನುವ ಹಾಡನ್ನು ಹಾಡುವ ಅವಕಾಶ ದೊರಕಿತು. ಮುಂದೆ ಸುಮಾರು ಮೂರು ದಶಕಗಳ ಕಾಲ ಹಾಡಿದ ತಲಾತ್ ಮಹಮೂದ್ ತುಂಬಾ ಸರಳ ಮತ್ತು ಸಹಜ ಗಾಯಕರಾಗಿದ್ದರು. ಇವರ ಧ್ವನಿ ಮತ್ತು ಮೃದು ವ್ಯಕ್ತಿತ್ವ ಶಾಸ್ತ್ರೀಯ ಸಂಗೀತಕ್ಕೆ ಸರಿ ಎಂದು ಟೀಕಿಸುವವರಿಗೆ ಅತ್ಯುತ್ತಮ ಹಿಂದಿ ಹಾಡುಗಳನ್ನು ಹಾಡಿ ಬಾಯಿ ಮುಚ್ಚಿಸಿದ್ದರು. ತಲಾತ್ ಮಹಮೂದ್ ಅವರು ಪದಗಳನ್ನು ಬಳಸಿಕೊಳ್ಳುವ ಶೈಲಿ, ಸ್ವರ ಪ್ರಯೋಗದ ಶೈಲಿ, ಧ್ವನಿಯ ಏರಿಳಿದ ಶೈಲಿ ೪೦, ೫೦ ರ ದಶಕದ ಹಿಂದಿ ಹಾಡುಗಳಿಗೆ ನಾವೀನ್ಯತೆಯನ್ನು ತಂದು ಕೊಟ್ಟವು.

೫೦ರ ದಶಕದ ಆರಂಭದಲ್ಲಿ ಬಿಡುಗಡೆಯಾದ ದಿಲೀಪ್ ಕುಮಾರ್ ಅಭಿನಯದ ’ದಾಗ್’ ಸಿನಿಮಾಗೆ ’ಐ ಮೇರಿ ದಿಲ್ ಕಹೀ ಔರ್ ಚಲ್, ಗಮ್ ದುನಿಯಾ ಸೆ ದಿಲ್ ಭರ್ ಗಯಾ’ ಎನ್ನುವ ಹಾಡನ್ನು ಭೈರವಿ ರಾಗದಲ್ಲಿ ಹಾಡಿದರೆ, ಅದೇ ಸಮಯದಲ್ಲಿ ದೇವ್ ಆನಂದ್ ಅಭಿನಯದ ’ಟಾಕ್ಸಿ ಡ್ರೈವರ್’ ಸಿನಿಮಾಗೆ ಹಾಡಿದ ’ಜಾಯೆತೊ ಜಾಯೆ ಕಹಾ, ಸಮ್ಜೇಗಾ ಕೌನ್ ಯಹಾ’ ಎನ್ನುವ ಹಾಡನ್ನು ಜಾನ್‌ಪುರಿ ರಾಗದಲ್ಲಿ ಹಾಡಿದ್ದರು. dilip-kumar-and-dev-anandಆದರೆ ಎರಡೂ ಹಾಡುಗಳನ್ನು ತಲಾತ್ ಮಹಮೂದ್ ಎಷ್ಟು ಆಳದಲ್ಲಿ ಮತ್ತು ಮಾಧುರ್‍ಯದಲ್ಲಿ ಹಾಡಿದರೆಂದರೆ ಎರಡೂ ಹಾಡುಗಳು ವಿಭಿನ್ನ ನಾಯಕರ ಉದಾಸ, ಆಲಸ್ಯದ ಮನಸ್ಥಿತಿಯನ್ನು ಒಂದೇ ಸ್ತರದಲ್ಲಿ ಕೇಳುಗರಿಗೆ ತಲುಪಿಸುತ್ತಿದ್ದವು. ದಿಲೀಪ್ ಕುಮಾರ್ ಮತ್ತು ದೇವ್ ಆನಂದ್ ಸಮಾನ ದುಖಿಗಳಾಗಿಯೇ ನಮಗೆ ಕಂಡು ಬರುತ್ತಿದ್ದರು. ತಲಾತ್‌ರ ಪ್ರತಿಭೆ ಮತ್ತು ಪರಿಪೂರ್ಣತೆ ಇದನ್ನು ಸಾಧ್ಯವಾಗಿಸಿತ್ತು. ೧೯೫೩ರಲ್ಲಿ ಬಿಡುಗಡೆಗೊಂಡ ’ಫುಟ್‌ಪಾತ್’ ಸಿನಿಮಾಗೆ ದಿಲೀಪ್ ಕುಮಾರ್ ಅಭಿನಯದ ಖಯ್ಯಾಮ್ ಸಂಗೀತ ನೀಡಿದ ’ಶಾಮ್ ಎ ಗಮ್ ಕಿ ಕಸಮ್, ಆಜ್ ಗಮ್‌ಗೀ ಹೈ ಹಮ್’ ಎನ್ನುವ ಹಾಡನ್ನು ತಲಾತ್ ಮಹಮೂದ್ ತಮ್ಮೊಳಗಿನ ಜೀವವನ್ನೇ ಬಳಸಿ ಹಾಡಿದ್ದರು. ಅದಕ್ಕೆ ದಿಲೀಪ್ ಕುಮಾರ್ ಅಭಿನಯವೂ ಸಹ ಅಷ್ಟೇ ಸರಿಸಾಟಿಯಾಗಿತ್ತು. ಇಂದಿಗೂ ಆ ಹಾಡು ಅತ್ಯುತ್ತಮ ಹಿಂದಿ ಸಿನಿಮಾ ಗಝಲ್‌ಗಳಲ್ಲಿ ಒಂದು. ಇಂದಿಗೂ ಶಾಮ್ ಎ ಗಮ್ ಕಿ ಕಸಮ್ ಹಾಡು, ತಲಾತ್ ದ್ವನಿ ನಮ್ಮನ್ನು ಕಾಡುತ್ತದೆ, ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಅದೇ ಕಾಲದ ರಾಜೇಂದ್ರ ಕ್ರಿಷ್ಣನ್ ಸಂಗೀತ ನೀಡಿದ ’ದೇಖ್ ಕಬೀರಾ ರೋಯಾ’ ಸಿನಿಮಾದಲ್ಲಿ ಹಾಡಿದ ’ಹಮ್‌ಸೆ ಆಯಾ ನ ಗಯಾ, ತುಮ್‌ಸೆ ಬುಲಾಯಾ ನ ಗಯಾ’ ಎನ್ನುವ ಹಾಡು ಹಗುರವಾದ ಮನಸ್ಥಿತಿಯಲ್ಲಿ, ನಿರುಮ್ಮಳ ಭಾವದಲ್ಲಿ ಪ್ರಾರಂಭವಾಗುತ್ತಾ ಕಡೆಗೆ ’ದಾಗ್ ಜೊ ತುಮ್ನೆ ದಿಯಾ, ದಿಲ್ ಸೆ ಮಿಠಾಯ ನ ಗಯಾ’ ಎಂದು ಭಾರವಾಗುತ್ತ ಕಳೆದುಕೊಂಡ, ಪಡೆದುಕೊಂಡಿದ್ದಾದರೂ ಏನು ಎನ್ನುವ ಮನಸ್ಥಿತಿಯೊಂದಿಗೆ ಮುಗಿಯುತ್ತದೆ. ಈ ಎರಡೂ ಭಾವಗಳನ್ನು ಪಡೆದುಕೊಂಡ, ಕಳೆದುಕೊಂಡ ಮನಸ್ಥಿತಿಯನ್ನು ತಲಾತ್ ಮಹಮೂದ್ ತನ್ನ ಧ್ವನಿಯಲ್ಲಿ, ಅದ್ಭುತವಾದ ಏರಿಳಿತಗಳ ಮೂಲಕ ನಮಗೆ ದಾಟಿಸುತ್ತಾ ಹೋಗುತ್ತಾರೆ. ಹೌದು ತಲಾತ್ ಧ್ವನಿ ನಮಗೆ ಎಲ್ಲಾ ಭಾವಗಳನ್ನು ದಾಟಿಸುತ್ತಾ ಹೋಗುತ್ತದೆ. ಅದೂ ಹೇಗೆ, ನಾವೂ ಅವರೊಂದಿಗೆ ಕಂಪಿಸುವ ಹಾಗೆ.

೧೯೫೫ ರಲ್ಲಿ ಬಿಡುಗಡೆಗೊಂಡ ’ಬಾರಾದರಿ’ ಸಿನಿಮಾದ ನಾಶಾದ್ ( ನೌಶಾದ್ ಅಲ್ಲ) ಸಂಗೀತ ನೀಡಿದ ’ತಸವೀರ್ ಬನಾತಾ ಹೂ, talat_mahmood_audio_cdತಸವೀರ್ ನಹೀ ಬನತೀ, ಎಕ್ ಖ್ವಾಬ್ ಸೆ ದೇಖಾ ಹೈ, ತಾಬೀರ್ ನಹೀ ಬನತೀ’ ಎನ್ನುವ ಹಾಡು ತಲಾತ್ ಮಹಮೂದ್ ಧ್ವನಿಯ ಒಂದು ಕ್ಲಾಸಿಕ್. ಅದನ್ನು ರೇಶ್ಮೆಯಂತಹ ನುಣುಪಿನ ಧ್ವನಿಯಲ್ಲಿ ಹಾಡಿದ ತಲಾತ್ ’ದಮ್ ಭರ್ ಕೆ ಲಿಯೆ ಮೇರಿ, ದುನಿಯಾ ಮೆ ಚಲೇ ಆವೋ’ ಎಂದು ಹಗುರ ಅಂದರೆ ಹಗುರ ಧ್ವನಿಯಲ್ಲಿ ಕರೆಯುವಾಗ ನಾವು ಆಗಲೇ ಆ ದುನಿಯಾದಲ್ಲಿ ಸೇರಿ ಹೋಗಿರುತ್ತೇವೆ.

ಛಾಯಾ ಸಿನಿಮಾದ ’ಇತನಾನ ಮುಜೆಸೆ ತು ಪ್ಯಾರ್ ಬಧಾ, ತೊ ಮೈ ಎಕ್ ಬಾದಲ್ ಆವಾರ’, ಸುಜಾತಾ ಸಿನಿಮಾದ ’ಜಲ್ತೇ ಹೈ ಜಿಸ್ಕೆ ಲಿಯೇ’, ಉಸ್ನೆ ಕಹಾ ಥಾ ಸಿನಿಮಾದ ’ಆಹಾ ರಿಮ್ ಜಿಮ್ ಕೆ ಯೆ ಪ್ಯಾರೆ ಪ್ಯಾರೆ ಗೀತ್ ಲಿಯೆ’, ಮಧೋಶ್ ಸಿನಿಮಾದ ’ಮೇರೆ ಯಾದ್ ಮೆ ತುಮ್ನಾ ಆಸೂ ಬಹಾ ನ, ನ ದಿಲ್ ಕೋ ಜಲಾನ, ಮುಜೇ ಭೂಲ್ ಜಾನಾ’, ಬಾಬುಲ್ ಸಿನಿಮಾದ ’ಮಿಲ್ತೆ ಹಿ ಆಂಖೇ, ದಿಲ್ ಹುವಾ ದೀವಾನಾ ಕಿಸಿ ಕಾ’ ಮತ್ತು ಮುಂತಾದ ಹಾಡುಗಳು ತಲಾತ್ ಮಹಮೂದ್ ಅವರ ಕ್ಲಾಸಿಕ್ ಹಾಡುಗಳು. ತಮ್ಮ ರೇಶ್ಮೆಯಂತಹಾ ನುಣುಪಾದ ಧ್ವನಿಯಲ್ಲಿ ಹತಾಶಗೊಂಡ ಮನಸ್ಸಿನ, ಮುರಿದ ಹೃದಯದ ಭಾವನೆಗಳನ್ನು ನಮ್ಮೊಳಗೆ ಆಳವಾಗಿ ತೇಲಿ ಬಿಡುವ ತಲಾತ್ ಒಬ್ಬ ಕ್ಲಾಸಿಕ್ ಹಾಡುಗಾರ. ಅವರ ಎಲ್ಲಾ ಹಾಡುಗಳಲ್ಲಿ ಉರ್ದು ಭಾಷೆಯನ್ನು ಬಳಸಿಕೊಂಡು,ಹೊರಹೊಮ್ಮಿಸುವ ಶೈಲಿ ಅನನ್ಯವಾದದ್ದು. ಉರ್ದು ಭಾಷೆ ತಲಾತ್ ಧ್ವನಿಯಲ್ಲಿ ತನ್ನ ಎಲ್ಲಾ ಗುಣಗಳೊಂದಿಗೆ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ.

ಐವತ್ತರ ಆ ದಶಕದಲ್ಲಿ ಸಾಹಿರ್, ಕೈಫೀ ಅಜ್ಮಿ, ಖಯ್ಯಾಮ್, ನೌಶಾದ್, ಮಜರೂಹ್ ಸುಲ್ತಾನ್ ಪುರಿ, ಶೈಲೇಂದ್ರ, ಹಸರತ್ ಜೈಪುರಿ, ಮಹಮದ್ ರಫಿ, ಮುಖೇಶ್, ಶಕೀಲ್ ಬದಾಯೆ, ಸಿ.ರಾಮಚಂದ್ರ, ಮದನ್ ಮೋಹನ್, ಗುಲಾಮ್ ಮಹಮದ್, ಶಂಕರ್ ಜೈಕಿಶನ್, ಲತಾ ಮಂಗೇಶ್ಕರ್, talatmahmood1ಮನ್ನಾಡೆ ರಂತಹ ಮಹಾನ್ ಸಂಗೀತ ನಿರ್ದೇಶಕರು, ಕವಿಗಳೊಂದಿಗೆ ಹಾಡಿದ ತಲಾತ್ ಮಹಮೂದ್ ಮರೆಯಲಾಗದ ಹಾಡುಗಾರ. ಮನುಷ್ಯನ ಮನಸ್ಸು ಜೀವಂತಿಕೆಯಾಗಿರುವವರೆಗೂ ತಲಾತ್‌ರ velvety ಧ್ವನಿಗೆ ಮಾರು ಹೋಗುತ್ತಲೇ ಇರುತ್ತದೆ. ಲಿರಿಕ್ಸ್ ಅನ್ನು ಮತ್ತೊಂದು ಸ್ತರಕ್ಕೆ ಎತ್ತರಿಸುವ ತಲಾತ್ ಮಹಮೂದ್‌ರವರ ಧ್ವನಿ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಈ ಲಖ್ನೋ ಬಾಯ್ ನಮ್ಮನ್ನು ಅಗಲಿ ೧೭ ವರ್ಷಗಳಾದವು. ಆದರೆ ತಲಾತ್ ಹಾಡಿದ “ಮನಸ್ಸಿನೊಳಗೆ ಆಸೆಗಳು ಬೇಯುತ್ತಿವೆ, ಕಣ್ಣಿನೊಳಗಡೆ ಕಣ್ಣೀರು ಬಾಕಿ ಇದೆ, ನಾನು ಮತ್ತು ನನ್ನ ಒಂಟಿತನ ಮಾತ್ರ ಇಲ್ಲಿದೆ” ಸಾಲುಗಳು ಸದಾ ನಮ್ಮೊಂದಿಗೆ…

Leave a Reply

Your email address will not be published. Required fields are marked *