ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?


– ರೂಪ ಹಾಸನ


ಈ ದೇಶದ ಮಕ್ಕಳು ಅತ್ಯಂತ ದುರದೃಷ್ಟವಂತರೆಂದು ಅನಿಸತೊಡಗಿದೆ. ಮಕ್ಕಳು ಅಸಹಾಯಕರು, ಮುಗ್ಧರು ಆಗಿರುವುದರಿಂದ, ಅವರು ತಮ್ಮ ಭವಿಷ್ಯವನ್ನು ತಾವೇ ಸ್ವತಃ ರೂಪಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಸರ್ಕಾರ, ಸಮಾಜಗಳು ಮಕ್ಕಳ ಒಳಿತು-ಕೆಡುಕುಗಳ ಕುರಿತು ಅತ್ಯಂತ ಎಚ್ಚರಿಕೆಯಿಂದ ಕಾನೂನು-ನೀತಿಗಳನ್ನು ರೂಪಿಸಬೇಕು. ಆದರೆ…. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಬಾಲ ಕಾರ್ಮಿಕ [ನಿಷೇಧ ಹಾಗೂ ನಿಯಂತ್ರಣ] ತಿದ್ದುಪಡಿ ಮಸೂದೆ ೨೦೧೨ಕ್ಕೆ ಮತ್ತಷ್ಟು ತಿದ್ದುಪಡಿ ತರುವ ಮೂಲಕ ಮಕ್ಕಳನ್ನು ಶೋಷಿಸಲು ಕೆಂಪುಹಾಸು ಹಾಸಿಕೊಟ್ಟಂತಾಗಿದೆ. ಪ್ರತಿ ಜೂನ್ ೧೨ರಂದು “ಬಾಲ ಕಾರ್ಮಿಕ ಪದ್ಧತಿ ವಿರೋಧಿ” ದಿನಾಚರಣೆ ಆಚರಿಸುತ್ತಾ ಬರಲಾಗಿದೆ. ಮಸೂದೆಯ ತಿದ್ದುಪಡಿ ಈ ದಿನಾಚರಣೆಗಾಗಿ ಸರ್ಕಾರ ಮುಂಗಡವಾಗಿ ಕೊಟ್ಟ ಉಡುಗೊರೆಯೇchild-labour ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.

ಈಗಾಗಲೇ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಬಾಲಕಾರ್ಮಿಕರನ್ನು ಹೊಂದಿರುವ ದೇಶವೆಂಬ ಕುಖ್ಯಾತಿಗೊಳಗಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಪ್ರಕಾರ ದೇಶದಲ್ಲಿ sಸದ್ಯ ಒಟ್ಟು ೮.೨೨ ದಶಲಕ್ಷ ಬಾಲಕಾರ್ಮಿಕರಿದ್ದಾರೆ. ಇದರಿಂದ ಹೊರಬರಲು ಬಾಲಕಾರ್ಮಿಕ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು ಮತ್ತು ಅನುಷ್ಠಾನದ ಕ್ರಮಗಳನ್ನು ತೀವ್ರಗೊಳಿಸಬೇಕಲ್ಲವೇ? ಅದು ಬಿಟ್ಟು ೧೪ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟ ನಂತರ ಮತ್ತು ರಜೆಯಲ್ಲಿ ಶ್ರಮದಾಯಕವಲ್ಲದ, ಕಠಿಣವಲ್ಲದ ‘ಕೆಲವು’ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು ಎಂಬ ತಿದ್ದುಪಡಿಯೇ ಮಕ್ಕಳ ಆರೋಗ್ಯಕರ ಬದುಕಿನ ಹಿತದೃಷ್ಟಿಯಿಂದ ಅಮಾನವೀಯವಾದುದಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರಲ್ಲಿ ಅಂಗೀಕಾರವಾಯ್ತು. ಅದಕ್ಕೀಗ ೨೫ ವರ್ಷ! ಅದರಂತೆ ಪ್ರತಿ ಮಗುವಿಗೆ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕತೆ, ಆರೋಗ್ಯ, ಉತ್ತಮ ಜೀವನ ಶೈಲಿ, ಶಿಕ್ಷಣ, ಆರೈಕೆ ಒದಗಿಸುವುದು, ಎಲ್ಲಾ ರೀತಿಯ ಶೋಷಣೆ, ದುರ್ಬಳಕೆ, ಅಪಮಾನಕಾರಿಯಾಗಿ ನಡೆಸಿಕೊಳ್ಳುವುದರಿಂದ ಮತ್ತು ಲೈಂಗಿಕ ದೌರ್ಜನ್ಯದಿಂದ ರಕ್ಷಣೆಗಳ ಹಕ್ಕು ನೀಡುವುದು ಪ್ರತಿ ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ. ಇದರೊಂದಿಗೆ ಮಕ್ಕಳಿಗೆ ಅವಶ್ಯಕ ವಿಶ್ರಾಂತಿ, ಬಿಡುವು, ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಹಕ್ಕೂ ಇರಬೇಕೆಂದು ಅಂಗೀಕಾರವಾಗಿದೆ. ಹೀಗಿರುವಾಗ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ದುಡಿಯುವಂತೆ ಮಾಡುವುದು ಮಕ್ಕಳ ಹಕ್ಕಿನ ಉಲ್ಲಂಘನೆಯಲ್ಲವೇ? ಮಕ್ಕಳಿಗೆ ಅವರ ಹಕ್ಕನ್ನೂ ಸಮರ್ಪಕವಾಗಿ ನೀಡದೇ ಈಗ ಮಸೂದೆಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡ ಮಕ್ಕಳ ಬದುಕನ್ನು ಇನ್ನಷ್ಟು ಶೋಚನೀಯಗೊಳಿಸುತ್ತಿರುವುದು ದುರಂತ.

ಕೆಲಸ ಮಾಡಲು ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದಾಗ್ಯೂ ಮಕ್ಕಳನ್ನೇ ದುಡಿಮೆಗೆ ಬಳಸಿಕೊಳ್ಳುತ್ತಿರುವುದರ ಹಿಂದೆ ಅನೇಕ ಹುನ್ನಾರಗಳು ಕೆಲಸ ಮಾಡುತ್ತವೆ. ಮಕ್ಕಳಿಂದ ಅತ್ಯಂತ ಕಡಿಮೆ ಕೂಲಿಗೆ ಹೆಚ್ಚು ಕೆಲಸ ಪಡೆಯಬಹುದು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಮಕ್ಕಳು ಅಸಹಾಯಕರು ಮತ್ತು ಮುಗ್ಧರು ಆಗಿರುವುದರಿಂದ ಪ್ರಶ್ನಿಸುವುದಿಲ್ಲ, ಸಂಘಟಿತರಾಗುವುದಿಲ್ಲ, ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸುವುದಿಲ್ಲ, ಮುಷ್ಕರ ಹೂಡುವುದಿಲ್ಲ, ತಕರಾರು, ಚೌಕಾಶಿ ಮಾಡುವುದಿಲ್ಲ ಹೀಗಾಗಿ ಮಕ್ಕಳಿಂದ ದುಡಿಸಿಕೊಳ್ಳುವುದು ಉದ್ದಿಮೆದಾರರಿಗೆ ಎಲ್ಲ ರೀತಿಯಲ್ಲೂ ಲಾಭದಾಯಕ. ಎಲ್ಲಕ್ಕಿಂಥಾ ಕ್ರೌರ್ಯವೆಂದರೆ ಮಕ್ಕಳನ್ನು ವೇಶ್ಯಾವಾಟಿಕೆಗಾಗಿ ದುಡಿಸಿಕೊಳ್ಳುವುದು. ಮಕ್ಕಳು ಮಾರಕ ಲೈಂಗಿಕ ರೋಗರಹಿತರು ಮತ್ತು ಸುಲಭವಾಗಿ ಈ ದಂಧೆಗೆ ಪಳಗಿಸಬಹುದೆಂಬ ಕಾರಣಕ್ಕೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಮತ್ತು ಸಮಾಜಘಾತುಕ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿರುವುದುchildlabours ಮಕ್ಕಳ ಪಾಲಿನ ದುರದೃಷ್ಟವಲ್ಲದೇ ಬೇರಿನ್ನೇನು?

ಮಾರುಕಟ್ಟೆ ಕೇಂದ್ರಿತ ಜಾಗತೀಕರಣ ಇಂದು ಹೆಚ್ಚು ಕೆಲಸಗಳನ್ನು ಸೃಷ್ಟಿಸುತ್ತಿದೆ. ಅದಕ್ಕೆ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡುವ ಮಕ್ಕಳು ವರದಾನವಾಗಿ ಕಾಣುತ್ತಿದ್ದಾರೆ. ಮಾಲ್‌ಗಳಲ್ಲಿ, ಡಾಬಾ-ಹೋಟೆಲ್‌ಗಳಲ್ಲಿ, ಸಿದ್ಧ ಆಹಾರ ಪ್ಯಾಕಿಂಗ್ ಕೆಲಸಗಳಲ್ಲಿ, ಅಂಗಡಿಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚುತ್ತಿದೆ. ಮನರಂಜನಾ ಕ್ಷೇತ್ರ ದೇಶದ ಪ್ರಮುಖ ಆದಾಯ ಸೃಷ್ಟಿಸುವ ಘಟಕವಾಗಿರುವುದರಿಂದ ಅಲ್ಲಿಯೂ ಸರಕಾಗಿ ಮಕ್ಕಳನ್ನು ಬಳಸಿಕೊಳ್ಳುವ ಉದ್ದೇಶವೂ ಈ ತಿದ್ದುಪಡಿಗಿದೆ. ಚೈನಾ ದೇಶದ ಮಾದರಿಯೂ ಕೇಂದ್ರ ಸರ್ಕಾರಕ್ಕೆ ಪ್ರಭಾವ ಬೀರಿರಬಹುದು. ಅಲ್ಲಿ “ಎಜುಕೇಷನಲ್ ಲೇಬರ್” ಎಂಬ ನೀತಿ ಜಾರಿಯಲ್ಲಿದೆ. ಶಾಲೆಯಲ್ಲಿ ಪಾರಂಪರಿಕ ವೃತ್ತಿ ಮತ್ತು ಕೃಷಿ ಚಟುವಟಿಕೆಯ ಶಾಲಾ ಅವಧಿಗಳಿರುತ್ತವೆ. ಆದರೆ ಈ ಮೂಲಕ ಅಲ್ಲಿ ಶಾಲೆಗಳು ಮಕ್ಕಳನ್ನು ಹೆಚ್ಚಿನ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಮಕ್ಕಳನ್ನು ಮಾಲ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿರುವುದು ಮತ್ತು ಕ್ರೀಡೆಯ ಹೆಸರಿನಲ್ಲಿ ಅಲ್ಲಿ ಮಕ್ಕಳಿಗೆ ವಿಪರೀತದ ಒತ್ತಡಗಳನ್ನು ಹೇರುತ್ತಿರುವುದೂ ದಾಖಲಾಗಿದೆ. ಕಡಿಮೆ ಆದಾಯದ ಬಡ ಕುಟುಂಬಗಳು ಮಾತ್ರ ಮಕ್ಕಳನ್ನು ದುಡಿಯಲು ಕಳಿಸುತ್ತವೆ ಎಂಬುದು ನಮಗೆ ನೆನಪಿರಬೇಕು. ಈ ರಿಯಾಯಿತಿಯನ್ನು ನೀಡುವ ಮೂಲಕ ಬಡ ಕುಟುಂಬಗಳಿಗೆ ಹೆಚ್ಚಿನ ದುಡಿಮೆಗೆ ಅವಕಾಶ ಕಲ್ಪಿಸುವ ನೆವದಲ್ಲಿ ಆ ಕುಟುಂಬಗಳ ಮಕ್ಕಳನ್ನು ಶಾಶ್ವತವಾಗಿ ಶ್ರಮದ ಕೆಲಸ ಮಾಡುವ ಜೀತದಾಳುಗಳಾಗಿ ಪರಿವರ್ತಿಸುವ ಹುನ್ನಾರವಷ್ಟೇ ಕಾಣುತ್ತಿದೆ. ಅದಕ್ಕೆಂದೇ ದಿಢೀರನೆ ಮಸೂದೆಯಲ್ಲಿ ತಿದ್ದುಪಡಿಗೆ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಮಕ್ಕಳ ಕೆಲಸಕ್ಕೂ, ಶಾಲೆಯಿಂದ ಮಕ್ಕಳು ಹೊರಗುಳಿಯುವ ಪ್ರಮಾಣದ ಹೆಚ್ಚಳಕ್ಕೂ ಅವಿನಾಭಾವ ಸಂಬಂಧವಿದೆ. ಶಿಕ್ಷಣ ಹಕ್ಕು ಕಾಯ್ದೆ ೨೦೦೯ರನ್ವಯ ೬-೧೪ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಆದರೆ ರಾಷ್ಟ್ರೀಯ ಮಾದರಿ ಸಮೀಕ್ಷೆ ೨೦೧೪ರ ವರದಿಯಂತೆ children-of-Indiaರಾಜ್ಯದ ಗ್ರಾಮೀಣ ಭಾಗದಲ್ಲಿ ೫-೧೪ವರ್ಷದೊಳಗಿನ ಪ್ರತಿ ೧೦೦೦ ಮಕ್ಕಳಿಗೆ ೩೦ ಮಕ್ಕಳು ಹಾಗೂ ನಗರಪ್ರದೇಶದಲ್ಲಿ ೧೦೦೦ಕ್ಕೆ ೬ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿಯೋ? ನಾಚಿಕೆಗೇಡಿನದೋ? ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ. ಮಕ್ಕಳ ದೇಹ ಭರಿಸುವುದಕ್ಕಿಂತಾ ಹೆಚ್ಚಿನ ಶ್ರಮ, ದುಡಿಮೆಯನ್ನು ಅವರ ಮೇಲೆ ಹೇರುವ ಮೂಲಕ ಅವರ ದೇಹ ಮತ್ತು ಬುದ್ಧಿಯ ಮೇಲೆ ಒತ್ತಡ ಹೇರಿದಂತಾಗಿ ಶಾಶ್ವತ ಮಾನಸಿಕ ಕ್ಷೆಭೆಗೆ ಅವರು ಒಳಗಾಗುತ್ತಾರೆ. ದುಡಿಯುವ ಮಕ್ಕಳು ತಮ್ಮ ಅಮೂಲ್ಯ ಬಾಲ್ಯ ಕಳೆದುಕೊಳ್ಳುವುದರೊಂದಿಗೆ, ಅನಾರೋಗ್ಯಕ್ಕೆ ಒಳಗಾಗುವುದು, ಪಠ್ಯದ ಕಡೆಗೆ ಗಮನಹರಿಸಲಾಗದಿರುವುದು, ಕ್ರಮೇಣ ಕೆಲಸದ ಸಮಯ ಮತ್ತು ಒತ್ತಡ ಹೆಚ್ಚಾಗಿ ಶಾಲೆ ಬಿಡುವ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಬಾಲ್ಯಾವಸ್ಥೆಯ ಪ್ರತಿಯೊಂದು ಕೊರತೆ ಮಕ್ಕಳ ವ್ಯಕ್ತಿತ್ವವನ್ನು ಮುಕ್ಕಾಗಿಸುತ್ತದೆ ಎನ್ನುತ್ತಾರೆ ಮನೋವೈದ್ಯರು. ಬಡ ಪೋಷಕರೇ ಮಕ್ಕಳು ಶಾಲೆ ಬಿಟ್ಟು ದುಡಿಯುವುದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರಿಗೆ ಯಾವ ಶಿಕ್ಷೆಯ ಭಯವೂ ಇಲ್ಲವೆಂದಾದರೆ ಈ ದೇಶದಲ್ಲಿ ಮಕ್ಕಳನ್ನು ಇನ್ನು ದೇವರೇ ಕಾಪಾಡಬೇಕು!

ಭಾರತದಂತಹಾ ಸಂಕೀರ್ಣ ಆರ್ಥಿಕ -ಸಾಮಾಜಿಕ ಪರಿಸ್ಥಿತಿ ಇರುವ ದೇಶದಲ್ಲಿ ಕೃಷಿ, ಸೂಕ್ಷ್ಮ ಗುಡಿಕೈಗಾರಿಕೆ ಇತ್ಯಾದಿ ಕೆಲಸಗಳನ್ನು ಬಾಲ್ಯದಿಂದಲೇ ಕಲಿಯುವುದು ಅನಿವಾರ್ಯವೆಂಬ ಸಬೂಬನ್ನು ಸರ್ಕಾರ ಹೇಳುತ್ತಿದೆ. ಆದರೆ ಇಂತಹಾ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಕೆಳವರ್ಗಗಳ ಮಕ್ಕಳೇ ಎಂಬುದು ಗಮನಾರ್ಹವಾದುದು. ಈ ನೆವದಲ್ಲಿ ಶಿಕ್ಷಣದ ಕಡೆಗೆ ಅವರಿಗೆ ಸರಿಯಾಗಿ ಗಮನಹರಿಸಲಾಗದೇ ಪರಂಪರಾಗತ ವೃತ್ತಿಯಲ್ಲೇ ತಮ್ಮ government_schoolಬದುಕು ಕಂಡು ಕೊಳ್ಳಲು ಹೆಣಗುತ್ತಾರೆ. ಇಂತಹಾ ಮತ್ತು ಬಿಳಿಕಾಲರಿನ ವೃತ್ತಿಯ ಮಧ್ಯೆ ಇರುವ ಆದಾಯದ ಅಗಾಧ ಕಂದರದಿಂದಾಗಿ ಬಡವರು ಬಡವರಾಗಿಯೇ ಉಳಿಯಬೇಕಾದ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ವೃತ್ತಿ ನೈಪುಣ್ಯತೆ ಕಲಿಸುವ ನೆವದಲ್ಲಿ ಬಾಲ ದುಡಿಮೆಯನ್ನು ಪ್ರೋತ್ಸಾಹಿಸುವ ಸರ್ಕಾರದ ಈ ನೀತಿ, ಸನಾತನ ಸಂಸ್ಕೃತಿಯ ಪರವಾದ ಸರ್ಕಾರದ ಕುಸಂಸ್ಕೃತಿಯ ದ್ಯೋತಕವಷ್ಟೇ ಆಗಿದೆ.

ಅನಕ್ಷರತೆ, ಬಡತನ, ದುಶ್ಚಟಗಳು, ಜಾತಿ-ವರ್ಗ ತಾರತಮ್ಯ, ಗ್ರಾಮಗಳಲ್ಲಿ ಕೆಲಸವಿಲ್ಲದೇ ಪೋಷಕರ ವಲಸೆ ಬಾಲಕಾರ್ಮಿಕತೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ರೋಗ ಲಕ್ಷಣಕ್ಕೆ ಮದ್ದು ನೀಡುವುದಕ್ಕಿಂತಾ ಈ ಮೂಲ ರೋಗಕ್ಕೆ ಮದ್ದು ನೀಡಬೇಕು. ಈ ಸಮಸ್ಯೆಗಳಿಂದ ಬಡ ಜನರನ್ನು ಬಿಡಿಸಲು ಆಡಳಿತ ಯಂತ್ರ ಒಗ್ಗೂಡಿ ಶ್ರಮಿಸಬೇಕು. ಜೊತೆಗೆ ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮೊದಲಿಗೆ ಮಗು ಕೇಂದ್ರಿತ ಚಿಂತನೆಯಿಂದ ದೇಶದ ಅಭಿವೃದ್ಧಿ ಮಾನದಂಡಗಳನ್ನೂ ಕಾನೂನನ್ನೂ ನೀತಿಗಳನ್ನೂ ನಮ್ಮ ಸರ್ಕಾರಗಳು ಪುನರ್ ರೂಪಿಸಿಕೊಳ್ಳಬೇಕು. ಸಮಾಜ ತನ್ನ ಅವಶ್ಯಕತೆಗೆ ಬಾಲ ದುಡಿಮೆಯನ್ನು ಮುಂದುವರೆಸದಂತೆ ಜಾಗೃತಿ ಮತ್ತು ಕಟ್ಟುನಿಟ್ಟಿನ ಕಾನೂನು ಅನುಷ್ಠಾನವಾಗಬೇಕಿದೆ. ಕನಿಷ್ಠ ೧೪ ವರ್ಷದವರೆಗಾದರೂ ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಬಿಡದಂತಹಾ ಯಾವುದೇ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆ ಅಮಾನವೀಯವಾದಂತದ್ದು.

Leave a Reply

Your email address will not be published. Required fields are marked *