Daily Archives: May 23, 2015

ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

– ಬಿ. ಶ್ರೀಪಾದ ಭಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ಮತ್ತು ಅವರ ಸರ್ಕಾರ ಒಂದು ವರ್ಷ ತುಂಬಿದ್ದರ ಕುರಿತಾಗಿ ವಿವರಿಸುತ್ತಾ ಪತ್ರಕರ್ತ ನೀಲಂಜನ್ ಮುಖ್ಯೋಪಾಧ್ಯಾಯ್ ಅವರು “ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಗಳೊಂದಿಗೆ ಕಾರ್ಯ ನಿರ್ವಹಿಸಲು ಮೋದಿ ಅಸಮರ್ಥರೆಂಬುದನ್ನು ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತವು ಸಾಕ್ಷೀಕರಿಸುತ್ತದೆ. ಮೋದಿಯು ಏಕವ್ಯಕ್ತಿ ಪ್ರದರ್ಶನದ ಮಾದರಿಗೆ ಹೊಂದಿಕೊಳ್ಳುತ್ತಾರೆ. Modiಒಬ್ಬ ವ್ಯಕ್ತಿ, ಏಕ ನಿಷ್ಠೆ, ಒಂದು ಸಂಸ್ಥೆ, ಏಕ ಸದನದ ಸಂಸತ್ತು; ಹೀಗೆ ಒಂದು ರೀತಿ ಏಕಮುಖಿ ಸಂಚಾರದಂತೆ. ಅಂದರೆ ಪರಸ್ಪರ ಸಂಭಾಷಣೆಯ ರೀತಿಯದಲ್ಲ, ಬದಲಾಗಿ ಸ್ವಗತ, ಆತ್ಮಗತ ಭಾಷಣದಂತೆ, ಮತ್ತು ನಿಜ, ಕಡ್ಡಾಯವಾಗಿ ಯಾವುದೇ ಪ್ರಶ್ನೆಗಳಿರುವುದಿಲ್ಲ” ಎಂದು ಬರೆಯುತ್ತಾರೆ.

ಸಮಾಜ ಶಾಸ್ತ್ರಜ್ಞ ನಿಸ್ಸಿಮ್ ಮನ್ನತುಕ್ಕರೆನ್ ಅವರು ಬರೆಯುತ್ತಾ, “ಒಂದು ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಮೋದಿಯು ಇಂಡಿಯಾವನ್ನು ಬದಲಿಸುತ್ತಾರ? ಮನಮೋಹನ್ ಸಿಂಗ್ ಮಾಡಲಾಗದ್ದು ಇವರು ಮಾಡುತ್ತಾರ?ಮೋದಿಯು ಇಂಡಿಯಾವನ್ನು ಸೂಪೆರ್‌ಪವರ್ ಘಟ್ಟಕ್ಕೆ ಕೊಂಡೊಯ್ಯುತ್ತಾರ? ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಅತ್ಯಂತ ಮುಖ್ಯವಾದ ಮತ್ತು ಸೂಕ್ಷ್ಮವಾದ ವಿಚಾರವೇನೆಂದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಮೇಲಿನ ಪ್ರಶ್ನೆಗಳು ಸಂಪೂರ್ಣವಾಗಿ ವಿರೋಧಾತ್ಮಕವಾಗಿವೆ. ಆದರೆ ಈ ವಿರೋಧಾತ್ಮಕ ಮನಸ್ಥಿತಿಯಿಂದ ಹೊರಬರಲು ಅಸಮರ್ಥವಾಗಿರುವುದೇ ಇಂಡಿಯಾ ರಾಜಕೀಯದ ಒಂದು ದೊಡ್ಡ ಬಿಕ್ಕಟ್ಟು. ಪ್ರಜೆಗಳ ಹಕ್ಕು ಮತ್ತು ಶಕ್ತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತ ಅವರನ್ನು ಪ್ರಭುತ್ವಕ್ಕೆ, ಆಡಳಿತಗಾರರಿಗೆ ಶರಣಾಗಿಸಲಾಗುತ್ತಿದೆ. ಇಲ್ಲಿ ಮೋದಿಯು ತನಗೆ ಅಧಿಕಾರವನ್ನು ತಂದುಕೊಟ್ಟ ವ್ಯವಸ್ಥೆಯಿಂದಲೇ ಬೇರ್ಪಟ್ಟ ಒಂದು ನೀರ್ಗುಳ್ಳೆಯಂತೆ. ನಾವು ನಾಯಕನನ್ನು ಈ ರೀತಿಯಾಗಿ ಉದ್ಧಾರಕನೆಂದು ಪರಿಭಾವಿಸುವುದು ಸರಿಯೆ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಾ ಹೋದಂತೆ ಪಾರ್ಲಿಮೆಂಟರಿ ವ್ಯವಸ್ಥೆಯನ್ನೇ ತಿರಸ್ಕರಿಸುವ ಮತ್ತು ಪ್ರಧಾನ ಮಂತ್ರಿಯು ತನ್ನ ಸಹೋದ್ಯೋಗಿಗಳಿಗಿಂತ ಮೊದಲಿಗ ಎನ್ನುವ ಧೋರಣೆಯನ್ನು ನಾವು ಎದುರಿಸಬೇಕಾಗುತ್ತದೆ. modi_bjp_conclaveಪ್ರಧಾನ ಮಂತ್ರಿಯೊಬ್ಬರನ್ನು ಶಕ್ತಿಶಾಲಿ ಸರ್ವಜ್ಞನೆಂಬುವ ತರ್ಕಕ್ಕೆ ಬಲಿಯಾಗಿಸುವ ಕೈಮೀರಿದ ಕ್ಯಾಬಿನೆಟ್ ಅನ್ನು ನಾವು ಮತ್ತೆಲ್ಲಿ ಕಾಣಲು ಸಾಧ್ಯ? ಪ್ರಧಾನ ಮಂತ್ರಿ ಮೋದಿಯ ಎದುರು ಶಾಲಾ ಮಕ್ಕಳಂತೆ ಕೈಕಟ್ಟಿ ನಿಂತುಕೊಂಡ ಅವರ ಕ್ಯಾಬಿನೆಟ್ ಮಂತ್ರಿಗಳ ಪ್ರಾರಂಭದ ದುರದೃಷ್ಟಕರ ದಿನಗಳಿಂದ ಮೊದಲುಗೊಂಡು ವಿದೇಶಾಂಗ ಸಚಿವೆಯ ಎಲ್ಲಾ ಅಧಿಕಾರ ಮತ್ತು ಜವಬ್ದಾರಿಗಳನ್ನು ಕತ್ತರಿಸಿ ಅವರ ರೆಕ್ಕೆಗಳನ್ನೇ ತುಂಡರಿಸುವ ಅತಿಕ್ರೌರ್ಯದ ಅಧಿಕಾರದ ಇಂದಿನ ದಿನಗಳವರೆಗಿನ ಒಂದು ವರ್ಷದ ಆಡಳಿತ ಇಂಡಿಯಾದ ಜಾಗತಿಕ ಶಕ್ತಿಯನ್ನು ಕೀಳುದರ್ಜೆಗೆ ಇಳಿಸಿದೆ. ಹಳೆಯ ಯುಪಿಎ ಸರ್ಕಾರದಲ್ಲಿ ಅದರ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಮೌನಿಯಾಗಿದ್ದರೆ ಇಂದಿನ ಮೋದಿ ಸರ್ಕಾರದಲ್ಲಿ ಇಡೀ ಕ್ಯಾಬಿನೆಟ್ ಮೌನಿಯಾಗಿದೆ. ಈ ಮೌನಗೊಂಡ ಕ್ಯಾಬಿನೆಟ್ ದೇಶವನ್ನು ’ಮನ್ ಕಿ ಬಾತ್’ ಎನ್ನುವ ಆತ್ಮರತಿಯ ಮೂಲಕ ಗಣರಾಜ್ಯವನ್ನು ಕಟ್ಟಬಹುದೆಂದು ಅಹಂಕಾರದಿಂದ ವರ್ತಿಸುತ್ತಿದೆ. ೧೩೦ ಕೋಟಿ ಜನರ ಭವಿಷ್ಯವನ್ನು ಕೇವಲ ಒಂದು ವ್ಯಕ್ತಿಯ ಕೈಗೆ ಕೊಡಲಾಗುವುದಿಲ್ಲ” ಎಂದು ವಿವರಿಸುತ್ತಾರೆ. ( ದ ಹಿಂದೂ,೨೨,೨೩, ೨೦೧೫)

ಪ್ರಧಾನ ಮಂತ್ರಿ ಮೋದಿಯ ಒಂದು ವರ್ಷದ ಆಡಳಿತದ ಸಾಧನೆಯೆಂದರೆ ಅದು ಸ್ವತಃ ‘ಮೋದಿಯ ಪುನಃಸೃಷ್ಟಿ, ಶೋಧನೆ ಮತ್ತು ಮಾರಾಟ’ ಎಂದು ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಹೇಳಿದ್ದಾರೆ.

೫೬ ಇಂಚಿನ ಎದೆಯ ಸರ್ಕಾರ್ ಅವರ ಆಡಳಿತಕ್ಕೆ ಒಂದು ವರ್ಷ ತುಂಬಿದೆಯಂತೆ. ಅರುಣ್ ಜೇಟ್ಲಿ ಮನೆಯಲ್ಲಿ ದೇಶದ ಪ್ರಮುಖ ಪತ್ರಕರ್ತರು, ಸಂಪಾದಕರ ಜೊತೆ ಏರ್ಪಡಿಸಿದ್ದ ಮಧ್ಯರಾತ್ರಿಯ ಔತಣಕೂಟದಲ್ಲಿ ೫೬ ಇಂಚಿನ ಎದೆಯ ಸರ್ಕಾರ್ ಭಾಗವಹಿಸಿದ್ದರು. modi_ambani_tata_kamathಈ ಸರ್ಕಾರ್ ಅವರ ಋಣ ತೀರಿಸಲೋ ಎಂಬಂತೆ ಇಂಡಿಯಾದ ಮಾಧ್ಯಮಗಳು ಪುಂಖಾನುಪುಂಖವಾಗಿ ಸಮೀಕ್ಷೆಗಳು, ಚರ್ಚೆಗಳನ್ನು ಮಾಡುತ್ತಿವೆ. ದೇಶದ ಪ್ರತಿಯೊಂದು ಸ್ಟುಡಿಯೋಗಳಲ್ಲಿ ಬಿಜೆಪಿ ವಕ್ತಾರರು, ಕೇಂದ್ರ ಮಂತ್ರಿಗಳ ದಂಡೇ ನೆರೆದಿರುವಂತೆ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಗೋಬೆಲ್ಸ್ ತಂತ್ರವನ್ನು ಬಳಸಿಕೊಂಡು ಸುಳ್ಳುಗಳನ್ನು ದಿನವಿಡೀ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಾಧ್ಯಮಗಳೂ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿವೆ. ಸುಳ್ಳುಗಳ ಭಾರವನ್ನು ಹೊತ್ತುಕೊಂಡ, ಅತಿರಂಜಿತ ಅಂಕಿಅಂಶಗಳನ್ನು ಉತ್ಪಾದಿಸಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ೫೬ ಇಂಚಿನ ಎದೆಯ ಸರ್ಕಾರ್ ’ಖುಷ್ ಹೋನೇ ಕೆ ಲಿಯೆ’ ಸಂಘ ಪರಿವಾರ ಮತ್ತು ಬಹುಪಾಲು ಮಾಧ್ಯಮಗಳು ಹಗಲಿರುಳು ಶ್ರಮಪಡುತ್ತಿದ್ದಾರೆ. ಈ ೫೬ ಇಂಚಿನ ಎದೆಯ ಸರ್ಕಾರ್ ಅವರ ವರ್ಣರಂಜಿತ ಫೋಟೋಗಳು, ಅಸದೃಶ್ಯವಾದ ಡ್ರೆಸ್‌ಗಳು, ಫ್ಲೆಕ್ಸ್ ಬೋರ್ಡಗಳು ಕೇವಲ ಇಂಡಿಯಾದಲ್ಲಿ ಮಾತ್ರವಲ್ಲ, ವಿಶ್ವದಾದ್ಯಾಂತ ರಾರಾಜಿಸಲಿವೆ. ಆಕಾಶ ಮತ್ತು ಭೂಮಿಯನ್ನು ಒಳಗೊಂಡಂತೆ ಎಲ್ಲವೂ ಮೋದಿಯ ಆಡಳಿತ ಫಲವಾಗಿ ಸೃಷ್ಟಿಯಾಗಿವೆ ಎನ್ನುವ ಜಾಹೀರಾತುಗಳು ದೇಶದಾದ್ಯಾಂತ ಕಂಗೊಳಿಸಲಿವೆ

ಕಳೆದ ೬೫ ವರ್ಷಗಳಿಂದ ಬೆಸೆದುಕೊಂಡಿದ್ದ ಇಂಡಿಯಾದ ಗಣರಾಜ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಎಳೆಗಳನ್ನು, ಬಂಧಗಳನ್ನು ಕಳೆದ ಒಂದು ವರ್ಷದಲ್ಲಿ ನಾಶಗೊಳಿಸಿ, ಕ್ಯಾಬಿನೆಟ್ ಅರ್ಥಾತ್ ಕೇಂದ್ರ ಮಂತ್ರಿಮಂಡಲವನ್ನೇ ಅದೃಶ್ಯಗೊಳಿಸಿ ಅಧಿಕಾರವನ್ನು ತನ್ನ ಬಳಿ ಕೇಂದ್ರೀಕರಿಸಿಕೊಂಡ ಈ ಮೋದಿ ಅವರ ಸರ್ವಾಧಿಕಾರಿಯ ವ್ಯಕ್ತಿತ್ವವನ್ನು ’ಮನ್ ಕಿ ಬಾತ್’ ಎಂದು ವೈಭವೀಕರಿಸಿ ದೇಶದೆಲ್ಲಡೆ ಹಂಚಲಾಗುತ್ತಿದೆ. ಮೊಟ್ಟ ಮೊದಲು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭಾವೋದ್ರೇಕದಿಂದ ಭಾಷಣ ಮಾಡಿದ ಮೋದಿಯವರ ನಂತರದ ಒಂದು ವರ್ಷದ ಆಡಳಿತದಲ್ಲಿ ರೈತರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟು ಅವರ ಭವಿಷ್ಯವನ್ನು ಮಾರಕ ಭೂ ಸ್ವಾಧೀನ ಮಸೂದೆ ೨೦೧೪ರಲ್ಲ್ಲಿ ಮಣ್ಣು ಮಾಡಲಾಗಿದೆ. ambani-modiಮೋದಿಯ ಕಾರ್ಪೋರೇಟ್ ಪರವಾದ ಆರ್ಥಿಕ ನೀತಿಗಳ ಅನುಸಾರ ಕೃಷಿ ಸಾಗುವಳಿಯೇ ಹಂತಹಂತವಾಗಿ ಕಣ್ಮರೆಯಾಗಲಿದೆ. ದೇಶದ ತೆರಿಗೆದಾರರ ಹಣವನ್ನು ಬಳಸಿಕೊಂಡು (ಕಳೆದ ೯ ತಿಂಗಳ ಪ್ರವಾಸದ ಖರ್ಚು ೩೧೭ ಕೋಟಿ) ದೂರ ಜಿಗಿತದ ಹರ್ಡಲ್ಸ್ ಓಟಗಾರನ ಹಾಗೆ ಒಂದು ವರ್ಷದಲ್ಲಿ ೧೮ ವಿದೇಶಗಳನ್ನು ಸುತ್ತಿದ ಈ ಮೋದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳ ಕಡೆ ಕಾಲಿಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ನರೇಗಾದಿಂದ ಮೊದಲುಗೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಒಳಗೊಂಡಂತೆ ಅನೇಕ ಜನಕಲ್ಯಾಣ ಯೋಜನೆಗಳಿಗೆ (Social Welfare Schemes) ಸಂಬಂದಿಸಿದ ಅನುದಾನವನ್ನು ಕ್ರಮೇಣ ಕಡಿತಗೊಳಿಸಿರುವುದು ಮೋದಿ ಸರ್ಕಾರದ ಮತ್ತೊಂದು ಕೊಡುಗೆ. ಬಂಡವಾಳಶಾಹಿಗಳಿಗಾಗಿಯೇ ಸರ್ಕಾರವನ್ನು ಸಜ್ಜುಗೊಳಿಸಿರುವ ಮುಕ್ತ ಮಾರುಕಟ್ಟೆಯ, ನವ ಉದಾರೀಕರಣದ ವ್ಯಾಮೋಹಿಯಾದ ಮೋದಿ ಯಾವುದೇ ಮಾದರಿಯ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ. ಎಲ್ಲಾ ಬಡಜನರ ಪರವಾದ ಯೋಜನೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ರದ್ದಾದರೆ ಆಶ್ಚರ್ಯವಿಲ್ಲ.

ವಿದೇಶದಿಂದ ಕಪ್ಪುಹಣವನ್ನು ಮರಳಿ ತರುವ, ತಪ್ಪಿತಸ್ಥರನ್ನು ಶಿಕ್ಷಿಸುವ ಛಾತಿ ಬೇಕೆಂದರೆ ನನ್ನಂತೆ ೫೬ ಇಂಚಿನ ಎದೆ ಬೇಕು ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದ ಈ ಮೋದಿ ಕನಿಷ್ಠ ಒಂದಂಕಿಯ ಮೊತ್ತವನ್ನೂ ಭಾರತೀಯರಿಗೆ ತಂದು ತೋರಿಸದೆ, ಈ ಕಪ್ಪು ಹಣವನ್ನು ಮರಳಿ ತರುವ ಆಶಯಗಳನ್ನು “Money Laundering Bill” ನಲ್ಲಿ ಮಣ್ಣು ಮಾಡಲಾಗಿದೆ. ಸದರಿ ಮೋದಿ ಸರ್ಕಾರದ ಯಶಸ್ವೀ ಮಸೂದೆ ಎಂದೇ ಬಣ್ಣಿಸಲಾಗುವ ಕಲ್ಲಿದ್ದಲು ಮತ್ತು ಸ್ಪೆಕ್ಟ್ರಮ್ ಹರಾಜು ನೀತಿಗಳು ಮುಂದಿನ ದಿನಗಳಲ್ಲಿ ನೇರವಾಗಿಯೇ ಕಾರ್ಪೋರೇಟ್ ಕುಟುಂಬಗಳಿಗೆ Autonomous ನ ಮುಕ್ತ ಸ್ವಾತಂತ್ರವನ್ನು ತಂದುಕೊಡುತ್ತವೆ. ಒಮ್ಮೆ ಈ ಕಾರ್ಪೋರೇಟ್ ಶಕ್ತಿಗಳಿಗೆ ಯಾವುದೇ ಕಾನೂನಿನ ಕಟ್ಟುಪಾಡುಗಳಿಲ್ಲದ ಮುಕ್ತ ಸ್ವಾತಂತ್ರ ದೊರೆತರೆ ಕಲ್ಲಿದ್ದಲಿನ, ಸೇವಾ ವಲಯದ, ಸರಕುಗಳ ಬೆಲೆಗಳು ಊಹೆಗೆ ನಿಲುಕದಷ್ಟು ಏರಿಕೆಯಾಗುತ್ತವೆ. ಜನಸಾಮಾನ್ಯರ ಬದುಕು ದುರ್ಭರಗೊಳ್ಳತೊಡಗುತ್ತದೆ. ಅವರು ಅಂಚಿಗೆ ತಳ್ಳಲ್ಪಡುತ್ತಾರೆ. ಇದು ಈ ಮೋದಿಯ ಒಂದು ವರ್ಷದ ಆಡಳಿತದ ಫಲ.

ಸ್ವಾತಂತ್ರದ ನಂತರದ ಮೊದಲ ಸಂಸತ್ತಿನ ಅಧಿವೇಶನದಲ್ಲಿ (೧೯೪೯-೫೦) ಮಕ್ಕಳ ಶಿಕ್ಷಣ ಹಕ್ಕಿನ ಕುರಿತಾಗಿ ಚರ್ಚೆchild-labour ನಡೆದಾಗ ಅನೇಕ ಸಂಸದರು ಮಕ್ಕಳೆಲ್ಲಾ ಶಾಲೆಗೆ ಸೇರಿಕೊಂಡರೆ ನಮ್ಮ ಹೊಲ ಗದ್ದೆಗಳಲ್ಲಿ ಕೂಲಿ ಮಾಡುವವರು ಯಾರು ಎಂದು ಪ್ರಶ್ನಿಸಿದ್ದರು. ಅಗ ಇದನ್ನು ಬಹುಪಾಲು ಸಂಸದರು ವಿರೋಧಿಸಿ ೧೧ ವಯಸ್ಸಿನವರೆಗೂ ಶಿಕ್ಷಣವನ್ನು ಕಡ್ಡಾಯ ಮಾಡಬೇಕು ಎಂದು ಗೊತ್ತುವಳಿ ಮಂಡಿಸಿದರು. ಇದನ್ನು ಮಾರ್ಪಡಿಸಿದ ಅಂಬೇಡ್ಕರ್ ಅವರು ಮಕ್ಕಳು ಬಾಲಕಾರ್ಮಿಕರಾಗುವುದೇ ೧೧ನೇ ವಯಸ್ಸಿನ ಸಂದರ್ಭದಲ್ಲಿ. ಬದಲಿಗೆ ೧೪ನೇ ವಯಸ್ಸಿನವರೆಗೂ ಮಕ್ಕಳ ಶಿಕ್ಷಣ ಕಡ್ಡಾಯ ಮತ್ತು ಹಕ್ಕು ಎಂದು ಪ್ರತಿಪಾದಿಸಿದರು. ನಂತರ ಅದು ಅನುಮೋದನೆಗೊಂಡು ೧೪ನೇ ವಯಸ್ಸಿನವರೆಗೂ ಶಿಕ್ಷಣ ಕಡ್ಡಾಯ ಮತ್ತು ಮಕ್ಕಳ ಹಕ್ಕಾಗಿ ಪರಿಗಣಿತವಾಯಿತು. ಆದರೆ ೧೩ ಮೇ, ೨೦೧೫ ರಂದು ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ೨೦೧೨ರ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳನ್ನು ಅನುಮೋದಿಸಿದೆ. ಈ ಮೊದಲಿನ ಬಾಲ ಕಾರ್ಮಿಕ ಪದ್ಧತಿಗೆ ಇರುವ ನಿಷೇಧಕ್ಕೆ ತಿದ್ದುಪಡಿಗಳನ್ನು ಮಾಡಿ ಕೌಟುಂಬಿಕ ಕೆಲಸಗಳು, ಕೌಟುಂಬಿಕ ಉದ್ಯಮದಲ್ಲಿ, ಅಪಾಯಕಾರಿಯಲ್ಲದ ಹೊರಗುತ್ತಿಗೆ ಕೆಲಸಗಳಲ್ಲಿ ಬಾಲಕರನ್ನು ಕಾರ್ಮಿಕರಾಗಿ ಬಳಸಿಕೊಳ್ಳಬಹುದೆಂದು ವಿವರಿಸಿದೆ. ಇದಕ್ಕೆ ಈ ಮೋದಿ ಸಚಿವ ಸಂಪುಟ ಸಭೆ ಕೊಟ್ಟ ವಿವರಣೆ ’ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವುದು!’ ಅಂದರೆ ಈ ಸದರಿ ಮೋದಿ ಸರ್ಕಾರಕ್ಕೆ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಿಂತಲೂ ಕೌಟುಂಬಿಕ, ಕುಶಲ ಕೆಲಸಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಅಂದರೆ ಭಾರತದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿನ ಕೌಟುಂಬಿಕದ ಹಿನ್ನೆಲೆಯಲ್ಲಿ ಬಾಲಕಿಯರಿಗೆ ದಿನವಿಡೀ ಕೆಲಸಕ್ಕೆ ಕೊರತೆ ಇರುವುದಿಲ್ಲ. ಈ ಮೋದಿ ಸರ್ಕಾರದ ಮಸೂದೆ ಜಾರಿಗೊಂಡರೆ ಮುಖ್ಯವಾಗಿ ಬಾಲಕಿಯರು child-marriage-indiaಕೌಟುಂಬಿಕ ಕೆಲಸಗಳಿಗೆ ಸೀಮಿತಗೊಂಡು ಅವರ ಶಿಕ್ಷಣ ಮೊಟಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು ಗ್ರಾಮೀಣ ಭಾಗದ ಬಾಲಕರಿಗೂ ಅನ್ವಯಿಸುತ್ತದೆ. ಇಂಡಿಯಾದಂತಹ ಸಾಮಾಜಿಕ-ಆರ್ಥಿಕ ಸಂರಚನೆಯೇ ದುರ್ಬಲವಾಗಿರುವ ದೇಶದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಹೆಚ್ಚಾಗುತ್ತದೆ. ಇದು ಭಾರತದ ಮಕ್ಕಳಿಗೆ ತನ್ನ ಒಂದು ವರ್ಷದ ಆಡಳಿತ ಪೂರೈಸಿದ ಮೋದಿ ಸರ್ಕಾರದ ಪ್ರತಿಗಾಮಿ ನೀತಿಯ ಕೊಡುಗೆ

ಬಹುಸಂಖ್ಯಾತರ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತ ತತ್ವದ (Majoritarianism) ಪರವಾದ ಗುಣಗಳನ್ನು ಗೌಣಗೊಳಿಸಿಕೊಂಡು ಬಹುತ್ವದ, ಎಲ್ಲರನ್ನೂ ಒಳಗೊಳ್ಳುವಿಕೆಯ ಸಿದ್ಧಾಂತವನ್ನು ರೂಪಿಸಬೇಕಾದ ಅಗತ್ಯವಿರುತ್ತದೆ. ಆದರೆ ಮೋದಿ ಸ್ವತಃ ಒಬ್ಬ Authoritarian ವ್ಯಕ್ತಿತ್ವದ, Majoritarianism ತತ್ವದ ಪರವಾಗಿ ಅಪಾರವಾದ ಒಲವಿರುವ, ತನ್ನನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಬಣ್ಣಿಸಿಕೊಂಡ ಪ್ರಧಾನಿ. ಆರೆಸ್ಸಸ್‌ನ ಕೇಂದ್ರ ಕಛೇರಿಯಲ್ಲಿ ರಾಜಕೀಯ ಫಿಲಾಸಫಿಯನ್ನು ನಿರ್ಧರಿಸುವ ಅಧಿಕಾರವನ್ನು ರೂಪಿಸಲಾಗಿದೆ. ಇದಕ್ಕೆ ಮೋದಿಯವರ ಅನುಮೋದನೆ ಇದೆ. ಆರೆಸ್ಸಸ್ ಹೆಡ್ ಕ್ವಾಟ್ರಸ್‌ನಲ್ಲಿ ರಾಜಕೀಯ, ಸಾಮಾಜಿಕ ತತ್ವ ಸಿದ್ದಾಂತಗಳು ರೆಕ್ಕೆ ಪಡೆದುಕೊಳ್ಳತೊಡಗಿದರೆ ಅಲ್ಲಿಗೆ ಈ ದೇಶದ ಜನರ ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಆಶಯಗಳು ಮುಣ್ಣುಗೂಡಿದಂತೆ. ಕಳೆದ ಒಂದು ವರ್ಷದಲ್ಲಿ ಅಲ್ಪಸಂಖ್ಯಾತರ ದನಿಯನ್ನೇ ಒತ್ತಿ ಹಿಡಿಯಲಾಗಿದೆ. ಸಂಘ ಪರಿವಾರದ ಸದಸ್ಯರು, ಮೋದಿ ಮಂತ್ರಿಮಂಡಲದ ಮಂತ್ರಿಗಳು ಅಲ್ಪಸಂಖ್ಯಾತರ ವಿರುದ್ಧ ಕಳೆದ ವರ್ಷವಿಡೀ ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ಕೊಡುತ್ತ,ಬೆದರಿಸುತ್ತಾ ಅವರಿಗೆ ’ಹಿಂದೂ’ಸ್ತಾನದ ಮಹತ್ವವನ್ನು ಪ್ರತಿ ಕ್ಷಣಕ್ಕೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಮೋದಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದ ವಿಜಯೋತ್ಸವಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರು ದೆಹಲಿಯ ರಸ್ತೆಗಳಿಗೆ ಮುಸ್ಲಿಂ ರಾಜರು, ನಾಯಕರುಗಳ ಹೆಸರಿರುವ ಸಫ್ದರ್ ಹಶ್ಮಿ ಮಾರ್ಗ, ಫಿರೋಜ್ ಶಾ ರಸ್ತೆ, ಔರಂಗಜೇಬ್ ರಸ್ತೆ, ಅಕ್ಬರ್ ರಸ್ತೆಗಳ ನಾಮಫಲಕಗಳಿಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ ಮತ್ತು ಇಂಡಿಯಾದಲ್ಲಿ ಇಸ್ಲಾಮೀಕರಣವನ್ನು ಸಹಿಸುವುದಿಲ್ಲ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ

ಕಳೆದ ಒಂದು ವರ್ಷದಲ್ಲಿ ಗಾಂಧಿ ಹಂತಕ ನಾತುರಾಮ್ ಗೋಡ್ಸೆಯ ವೈಭವೀಕರಣ, ಕೇಂದ್ರ ಶಿಕ್ಷಣ ಇಲಾಖೆಯ ಕೇಸರೀಕರಣ, narender_modi_rssಚರ್ಚುಗಳ ಮೇಲೆ ದಾಳಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ‘ಘರ್ ವಾಪಸಿ’ ಎನ್ನುವ ಮೂಲಭೂತವಾದಿ ಕಾರ್ಯಚಟುವಟಿಕೆಗಳು, ಲವ್ ಜಿಹಾದಿಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ (ಮುಸ್ಲಿಂರನ್ನು ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ) ಗಳಂತಹ ಫ್ಯಾಸಿಸ್ಟ್ ಪ್ರವೃತ್ತಿಯ ವರ್ತನೆಗಳು, ಹಲ್ಲೆಗಳಿಂದಾಗಿ ಇಂಡಿಯಾದ ಸಾರ್ವಜನಿಕ ಬದುಕಿನ ಜೀವಪರವಾದ ಎಲ್ಲಾ ಸೆಲೆಗಳು ಮತ್ತು ಬಹುಸಂಸ್ಕೃತಿಯ ಜೀವನ ಶೈಲಿ ನಾಶಗೊಂಡಿದೆ.

ಕಡೆಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸದರಿ ನರೇಂದ್ರ ಮೋದಿಯ ಚುನಾವಣಾ ಪ್ರಚಾರಕ್ಕೆ ದಾಖಲೆ ಹಣವನ್ನು ಖರ್ಚು ಮಾಡಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಇಂಡಿಯಾದ ಪ್ರಮುಖ ಕಾರ್ಪೋರೇಟ್ ಕುಟುಂಬಗಳು ವಹಿಸಿಕೊಂಡಿದ್ದವು. ಈ ಕಾರ್ಪೋರೇಟ್ ಹಣದಿಂದ ಚುನಾವಣೆಯನ್ನು ಜಯಿಸಿದ ಮೋದಿ ಇಂದು ಅದರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಕಾರ್ಪೋರೇಟ್ ಕುಟುಂಬಗಳಿಗೆ ಋಣ ತೀರಿಸಲು “ಭೂಸ್ವಾಧೀನ ಮಸೂದೆ ೨೦೧೪” ನ್ನು ಹಠದಿಂದ ಸಂಸತ್ತಿನಲ್ಲಿ ಅಥವಾ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮೋದಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಆರೆಸ್ಸಸ್ ತನ್ನ ಹಿಂದೂ ರಾಷ್ಟ್ರೀಯತೆಯ ತತ್ವಗಳನ್ನು ಜಾರಿಗೊಳಿಸುವ ತವಕದಲ್ಲಿದೆ. ಈ ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಪೋರೇಟ್ ಶಕ್ತಿಗಳ ದೌರ್ಜನ್ಯದ ನಡುವೆ ಇಂದು ಇಂಡಿಯಾದ ಜನ ಸಾಮಾನ್ಯರು ಧ್ವಂಸವಾಗುತ್ತಿದ್ದಾರೆ. ಇದು ಯಾವ ಬಗೆಯ “ಅಚ್ಚೇ ದಿನ್”?