Daily Archives: May 28, 2015

ಆಮ್ ಆದ್ಮಿಗೆ ನೂರು ದಿನ ತುಂಬಿತು


– ಡಾ.ಎಸ್.ಬಿ. ಜೋಗುರ


ಅನೇಕ ಬಗೆಯ ಗುದಮುರಗೆಗಳ ನಡುವೆಯೇ ಆಮ್ ಆದ್ಮಿ ಪಾರ್ಟಿ ನೂರು ದಿನಗಳನ್ನು ಪೂರ್ಣಗೊಳಿಸಿತು. ದೆಹಲಿಯ ಚುನಾವಣೆಯ ಸಂದರ್ಭದಲ್ಲಿ ನಾನು ದೆಹಲಿಯಲ್ಲಿಯೇ ಇದ್ದೆ. ಯಾರನ್ನು ಕೇಳಿದರೂ ‘ಇಸ್ ಬಾರ್ ಕೇಜ್ರಿವಾಲಾ’ ಅನ್ನುವವರು. ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನ ಯುವಕರು ಕೂಡಾ ಸಮೂಹ ಸನ್ನಿಗೊಳಗಾದವರಂತೆ ಕೇಜ್ರಿವಾಲಾ ಬಗ್ಗೆ ಮಾತನಾಡುವದಿತ್ತು. ನಾನು ಹತ್ತಿಳಿದ ಹತ್ತಾರು ರಿಕ್ಷಾವಾಲಗಳನ್ನು ಹೀಗೇ ಇಲೆಕ್ಷನ್ ಬಗ್ಗೆ ಕೇಳಿದರೆ ಅವರೂ ಕೂಡಾ ಬಹುತೇಕವಾಗಿ ‘ಕೇಜ್ರಿವಾಲಾ ಹೀ ಆಯೇಗಾ’ ಎನ್ನುತ್ತಿದ್ದರು. ಫ಼ಲಿತಾಂಶ ಹೊರಬಂದ ಸಂದರ್ಭದಲ್ಲಿಯೂ ನಾನು ಅಲ್ಲಿಯೇ ಇದ್ದೆ. feb142015kejriwalಎಲ್ಲವೂ ಜನರಾಡಿಕೊಂಡಂತೆಯೇ ಆಗಿತ್ತು. ಅಪಾರ ಪ್ರಮಾಣದ ಜನಮನ್ನಣೆಯ ನಡುವೆ ಕೇಜ್ರಿವಾಲಾ ಮತ್ತೊಮ್ಮೆ ದೆಹಲಿಯ ಮುಖ್ಯ ಮಂತ್ರಿಯಾಗಿದ್ದರು. ನಂತರದ ದಿನಗಳನ್ನು ಕೂಡಾ ನಾನು ಗಮನಿಸಿದ್ದೇನೆ. ಕೇಜ್ರಿವಾಲಾ ಆಗಾಗ ಪ್ರಜಸತ್ತಾತ್ಮಕ ವ್ಯವಸ್ಥೆಯೊಳಗಣ ಸರ್ವಾಧಿಕಾರಿಯಂತೆ ಭಾಸವಾಗುವುರ ಜೊತೆಗೆ ತುಸು ಆತುರವಾದಿಯೂ ಎನಿಸುವದಿದೆ. ಪಕ್ಷದ ಗೆಲುವಿನಲ್ಲಿ ಅವನಷ್ಟೇ ಶ್ರಮ ಮತ್ತು ಪ್ರಯತ್ನವನ್ನು ಹಾಕಿದ್ದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ ಭೂಷಣ ಮತ್ತು ತನ್ನ ಪಕ್ಷದ ಇಅತರರೊಂದಿಗಿನ ನಡುವಳಿಕೆ ಮತ್ತು ತೀರ್ಮಾನಗಳು ದೆಹಲಿಯ ಜನತೆ ಮುಖ್ಯಮಂತ್ರಿ ಕೇಜ್ರಿವಾಲಾ ಸ್ವಭಾವದ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದವು.

ಕೇಜ್ರಿವಾಲಾ ರಾಜಕಾರಣಕ್ಕೆ ಹಾಗೇ ಸುಮ್ಮನೆ ಎಂಟ್ರಿ ಹೊಡೆದವರಲ್ಲ. ಅದರ ಹಿಂದೆ ಸಾಕಷ್ಟು ತಾಲೀಮಿದೆ. ೧೯೫೯ ರಲ್ಲಿ ತೆರೆಗೆ ಬಂದ ಪೈಗಾಮ್ ಸಿನೇಮಾದ ’ಇನ್ಸಾನ್ ಕಾ ಇನ್ಸಾನ್ ಸೆ ಹೋ ಬೈಚಾರಾ’ ಎನ್ನುವ ಹಾಡನ್ನು ಹೇಳುವ ಮೂಲಕ ಮೊದಲ ಬಾರಿ ಮುಖ್ಯಮಂತ್ರಿಯ ಹುದ್ದೆಯ ಶಪಥವನ್ನು ಸ್ವೀಕರಿಸಿರುವದಿತ್ತು. ಮುಂಚಿನಿಂದಲೂ ಭ್ರಷ್ಟಾಚಾರದ ಬಗ್ಗೆ ಚಳುವಳಿಯನ್ನು ರೂಪಿಸಿ, ಸಂಘಟನೆಯನ್ನು ಹುಟ್ಟು ಹಾಕಿ ಸದಾ ಚಟುವಟಿಕೆಯಲ್ಲಿರುತ್ತಿದ್ದ ಕೇಜ್ರಿವಾಲಾ ಖುದ್ದಾಗಿ ಗಿಡ ಹತ್ತಿ ಬ್ಯಾನರ್ ಬಿಗಿಯುವ, ಗೋಡೆಗೆ ಪೋಸ್ಟರ್ ಹಚ್ಚುತಾ ಸಾಗುವ ಕೆಲಸಗಳನ್ನು ಕೂಡಾ ಪಕ್ಷ ಕಟ್ಟುವಷ್ಟೇ ಖುಷಿಯಿಂದ ಮಾಡಿರುವದಿದೆ. ೨೦೦೬ ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಅರ್ಥವತ್ತಾಗಿ ಜಾರಿಗೊಳಿಸುವಲ್ಲಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಅವನಿಗೆ ಸುಮಾರು ೫೦ ಸಾವಿರ ಡಾಲರ್ ಮೊತ್ತದ ರಾಮನ್ ಮ್ಯಾಗ್ಸಸ್ಸೇ ಪ್ರಶಸ್ತಿ ಲಭಿಸಿತು. ಅಲ್ಲಿಂದ ಜೋರಾಗಿ ಶುರುವಾದ ಕೇಜ್ರಿವಾಲಾ ಸಂಘಟನೆ ಆ ಬಹುಮಾನದ ಮೊತ್ತವನ್ನು ಸಂಘಟನೆಯ ಕಾರ್ಯ ಚಟುವಟಿಕೆಗಾಗಿಯೇ ಬಳಸಿಕೊಂಡಿರುವದಿದೆ. ೨೦೧೦ ರ ಸಂದರ್ಭದಲ್ಲಿ ಕಾಮನವೆಲ್ತ್ ಕ್ರೀಡೆಗಳನ್ನು ಸಂಘಟಿಸುವಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಹೋರಾಟ ಆರಂಭಿಸಿದ ಕೇಜ್ರಿವಾಲ್ ಸುಮಾರು ೭೦ ಸಾವಿರ ಕೋಟಿ ರೂಪಾಯಿ ಅಪರಾತಪರಾ ಆಗಿದೆ ಎನ್ನುವ ಆರೋಪದ ಮೇಲೆ ಅದಕ್ಕೆ ಕಾರಣರಾದ ಪ್ರಮುಖರ ಮೇಲೆ ಎಫ಼್.ಆಯ್.ಆರ್. ದಾಖಲಿಸುವವರೆಗೂ ಬಿಟ್ಟಿರಲಿಲ್ಲ. ಅಲ್ಲಿಂದ ಆರಂಭವಾದ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಹಾಗೇ ಮುಂದುವರೆಯಿತು. ಜನಲೋಕಪಾಲ್ ಮಸೂದೆಯನ್ನು ಮಂಡಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆ ಜೊತೆಗೆ ಉಪವಾಸ ಚಳುವಳಿಯನ್ನು ಕೈಗೊಂಡ ಕೇಜ್ರಿವಾಲಾ ಒಂದು ಸರಿಯಾದ ರಾಜಕೀಯ ಅಖಾಡಾ ರೂಪಿಸಿಕೊಳ್ಳುವ ಮೂಲಕ, ನವಂಬರ್ ೨೦೧೨ ರಲ್ಲಿ ಆಮ್ ಆದ್ಮಿ ಎನ್ನುವ ಪಕ್ಷದ ಹುಟ್ಟಿಗೆ ಕಾರಣನಾಗಿ ಅದರ ಜನುಮದಾತನೆನಿಸಿಕೊಂಡ. ಪ್ರಥಮ ಬಾರಿಗೆ ಆತ ದೆಹಲಿಯ ಮುಖ್ಯಮಂತ್ರಿಯಾಗಿ arvind-kejriwalಅಧಿಕಾರ ಸ್ವೀಕರಿಸುವ ವೇಳೆ ಹಾಡಿದ ಆ ಹಾಡು ದೆಹಲಿಯ ಅನೇಕ ಮುಸ್ಲಿಂ ಸಮುದಾಯಗಳ ಹೃದಯವನ್ನು ಗೆಲ್ಲುವಲ್ಲಿ ಸಾಕಾಗಿತ್ತು. ಅವರ ಬಗೆಗಿನ ಪೂರ್ವಾಗ್ರಹಗಳ ನಡುವೆ ಹಾಗೆ ಮೂಡಿಬಂದ ಪೈಗಾಮ್ ಚಿತ್ರದ ಹಾಡು ಮುಸ್ಲಿಂ ರ ಪಾಲಿಗೆ ಒಂದು ಆಶಾಕಿರಣವಾಗಿ ತೋರಿದ್ದರಲ್ಲಿ ತಪ್ಪಿಲ್ಲ.ಸಬಾ ನಖ್ವಿ ಎನ್ನುವವರು ಬರೆದ ’ಕ್ಯಾಪಿಟಲ್ ಕಾಂಕ್ವೆಸ್ಟ್’ ಎನ್ನುವದರಲಿ ಈ ಸಂಗತಿಯನ್ನು ಪ್ರಸ್ತಾಪಿಸಿರುವದೂ ಇದೆ. ಸಬಾ ಆ ಕೃತಿಯನ್ನು ರಚಿಸುವಾಗ ದೆಹಲಿಯ ಸ್ಲಮ್ ಒಂದರಲ್ಲಿ ವಾಸವಾಗಿರುವ ಮೊಹ್ಮದ್ ಇನ್ಸಾಫ಼್ ಎನ್ನುವವರನ್ನು ಭೇಟಿಯಾಗಿ ಮಾತನಾಡಿಸಿದಾಗ ಆತ ತುಂಬಾ ಭರವಸೆಯನ್ನು ಈ ಆಮ್ ಆದ್ಮಿ ಪಕ್ಷದ ಬಗ್ಗೆ ಇಟ್ಟುಕೊಂಡದ್ದು ತಿಳಿದು ಬಂತು. ಮೊದಲ ಬಾರಿ ಕೇವಲ ೨೮ ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಬೆಂಬಲದಿಂದ ಸರಕಾರ ರಚಿಸಿದ್ದ ಆಮ್ ಆದ್ಮಿ ಪಕ್ಷ ಆಗಲೇ ಜನತೆಯ ಮುಂದೆ ಸಾಕಷ್ಟು ಆಶ್ವಾಸನೆಗಳನ್ನು ಇಟ್ಟಿರುವದಿತ್ತು. ಮುಖ್ಯವಾಗಿ ದೆಹಲಿಯ ಜನತೆ ಅನುಭವಿಸುತ್ತಿದ್ದ ನೀರು ಮತ್ತು ವಿದ್ಯುತ್ ವಲಯಕ್ಕೆ ಸಂಬಂಧಿಸಿದವುಗಳು. ನಂತರದ ದಿನಗಳಲ್ಲಿ ಗ್ಯಾಸ್ ಹಗರಣಕ್ಕೆ ಸಂಬಂಧಿಸಿ ಕಾರ್ಪೋರೇಟ್ ವಲಯದ ದಿಗ್ಗಜರಾದ ಮುಖೇಶ ಅಂಬಾನಿ ಮತ್ತು ಆಗಿನ ಪೆಟ್ರೊಲಿಯಂ ಖಾತೆ ಸಚಿವ ವೀರಪ್ಪ ಮೋಯ್ಲಿ ಯವರ ಮೇಲೆ ಎಫ಼್.ಆಯ್.ಆರ್. ದಾಖಲಿಸಿದ್ದೇ ಕೇಜ್ರಿವಾಲಾ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಯಿತು. ಕೇವಲ ೪೯ ದಿನಗಳಲ್ಲಿ ಅಧಿಕಾರವನ್ನು ಬಿಟ್ಟು ತೆರಳಿದ ಕೇಜ್ರಿವಾಲಾ ನಿರ್ಧಾರ ಆಗಲೂ ತರಾತುರಿಯ ನಿರ್ಧಾರ ಎಂದು ಕೆಲ ಮಾಧ್ಯಮಗಳು ವರ್ಣಿಸಿದ್ದವು. ಕೇಜ್ರಿವಾಲಾರನ್ನು ಕೆಲವು ಮಾಧ್ಯಮಗಳು ಮುಂಗೋಪಿ ಎಂದೂ, ಅರಾಜಕತೆಯನ್ನು ಮೈಗೂಡಿಸಿಕೊಂಡವನೆಂದೂ ಟೀಕಿಸಿರುವದಿತ್ತು.ಈ ಬಗೆಯ ಟೀಕೆಗಳನ್ನು ಮೀರಿಯೂ ಕೇಜ್ರಿವಾಲಾ ದೆಹಲಿಯ ಬಡಜನರ ಸಲುವಾಗಿ ಕೊರೆಯುವ ಛಳಿಯಲ್ಲೂ ಒಬ್ಬ ಸಾಮಾನ್ಯನಂತೆ ಹೋರಾಟ ಮಾಡಿರುವದಿತ್ತು. ದೆಹಲಿಯಲ್ಲಿ ಮನೆಯಿಲ್ಲದವರಿಗಾಗಿ ಹೋರಾಟ ಮಾಡಿದ ಕೇಜ್ರಿವಾಲಾ ಮುಂದಿನ ಚುನಾವಣೆಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಜಯಭೇರಿ ಭಾರಿಸುವ ಭರವಸೆ ಬಹುಷ: ಕೇಜ್ರಿವಾಲಾಗೂ ಇರಲಿಕ್ಕಿಲ್ಲ.

ಎರಡನೆಯ ಬಾರಿ ದೆಹಲಿಯ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೇ ಮಾತು ಕೊಟ್ಟಂತೆ ದರದಲ್ಲಿ ನೀರು ಮತ್ತು ವಿದ್ಯುತ್ kejriwal_aap_pti_rallyವಿಷಯದಲ್ಲಿ ಆ ಪಕ್ಷ ನಡೆದುಕೊಂಡಿದೆ ಆದರೆ ಮಾಡಬೇಕಾದ ಕೆಲಸಗಳು ಇನ್ನೂ ಬೇಕಾದಷ್ಟಿವೆ. ದೆಹಲಿಯ ಬಡ ಜನತೆ ಮಾತ್ರ ಚುನಾವಣೆಯ ಸಂದರ್ಭದಲ್ಲಿ ತಮ್ಮ ನೆತ್ತಿಗೊಂದು ಸೂರು ಕೊಡುವ ಬಗ್ಗೆ ಮಾತನಾಡಿರುವ ಕೇಜ್ರಿವಾಲಾರ ಮೇಲಿನ ನಂಬುಗೆಯನ್ನು ಇನ್ನೂ ಕಳೆದುಕೊಂಡಿಲ್ಲ. ಪಕ್ಷದೊಳಗಿನ ಆಂತರಿಕ ಕಿತ್ತಾಟ, ಅಧಿಕಾರಶಾಹಿಯ ಜೊತೆಗಿನ ಗುದ್ದಾಟಗಳನ್ನು ನೋಡಿ ಜನಸಾಮಾನ್ಯನಿಗೂ ಆಗಾಗ ಬೇಸರ ಬಂದಿರುವದಿದೆ. ಹಿಂದೆ ಹೀಗೆ ಮಾಡಿಯೇ ರಾಜೀನಾಮೆಯನ್ನು ತೆರುವ ಪ್ರಸಂಗ ತಂದುಕೊಂಡಿರುವ ಕೇಜ್ರಿವಾಲಾ ಮತ್ತೆ ದುಡುಕಿ ಅಂಥಾ ತಪ್ಪುಗಳನ್ನು ಮಾಡದೇ ದೆಹಲಿಯ ಜನತೆ ಮಿಕ್ಕೆಲ್ಲ ರಾಜಕೀಯ ಪಕ್ಷಗಳಿಗಿಂತಲೂ ಆಮ್ ಆದ್ಮಿ ಮಾತ್ರ ತಮ್ಮ ಪಾಲಿಗೆ ಒಳ್ಳೆಯದು ಎನ್ನುವಂತೆ ಭಾರಿ ಬಹುಮತದಿಂದ ಆರಿಸಿ ತಂದಿರುವದಿದೆ ಅವರ ಭರವಸೆಯನ್ನು ಉಳಿಸಿಕೊಳ್ಳುವದು ಮಾತ್ರವಲ್ಲದೇ ಭವಿಷ್ಯದಲ್ಲಿ ಯಾವುದಾದರೂ ಪ್ರಾದೇಶಿಕ ಪಕ್ಷಗಳು ಒಳ್ಳೆಯ ಧೋರಣೆಯೊಂದಿಗೆ ಮುಂದೆ ಬಂದಾಗ ಆಮ್ ಆದ್ಮಿಗೆ ಸಿಕ್ಕ ಪ್ರೋತ್ಸಾಹ ಮತ್ತು ಬೆಂಬಲ ಸಿಗುವಂತಾಗಬೇಕಾದರೆ ಅತ್ಯಂತ ಅರ್ಥಪೂರ್ಣವಾಗಿ ಅಧಿಕಾರವನ್ನು ಚಲಾಯಿಸಿ ತೋರಿಸಬೇಕಿದೆ. ದೇಶದ ಇತರೆ ರಾಜಕೀಯ ಪಕ್ಷಗಳು ಅಲ್ಲಿ ನೋಡಿ ಆಮ್ ಆದ್ಮಿ ಹೇಗೆ ಮಾಡುತ್ತಿದೆ ಎಂದು ಪೊಜಿಟಿವ್ ಕಾರಣಗಳಿಗಾಗಿ ಕೇಜ್ರಿವಾಲಾರನ್ನು ತೋರಿಸುವಂತಾಗಬೇಕು ಅಂದಾಗ ಮಾತ್ರ ಜನರ ವಿಶ್ವಾಸವನ್ನು ಉಳಿಸಿಕೊಂಡಂತಾಗುತ್ತದೆ. ಹೀಗೆ ನೂರು ದಿನಗಳಾಗುವುದು.. ಒಂದು ವರ್ಷ ತುಂಬುವುದು.. ಮುಖ್ಯವಲ್ಲ, ಮುಖ್ಯ ಏನೆಂದರೆ ಆ ಅವಧಿಯಲ್ಲಿ ಆ ಪಕ್ಷ ಮಾಡಿರುವ ಸಾಧನೆಗಳೇನು..? ಎನ್ನುವದಾಗಿರುತ್ತದೆ.