“ಕಳ್ಳ” ಪೊಲೀಸರು!

– ಸದಾನಂದ

ಅವರೊಬ್ಬ ಎಸ್.ಪಿ ದರ್ಜೆ ಅಧಿಕಾರಿ. ಒಂದು ಲಕ್ಷದ ಲಂಚ ಬರುವುದಿದೆ ಎಂದಾಕ್ಷಣ ಖುದ್ದು ಅಧಿಕೃತ ಕಾರಿನಲ್ಲಿ, ಯೂನಿಫಾರಂ ನಲ್ಲಿಯೇ ಬಂದು ವ್ಯವಹಾರ ಕುದುರಿಸುತ್ತಾರೆ. ಅವರಿಗೆ ಸಹಚರರಾಗಿ ಇಬ್ಬರು ಪೇದೆಗಳು. ಇದು ಇತ್ತೀಚೆಗೆ ಸುವರ್ಣ ನ್ಯೂಸ್ ವಾಹಿನಿ ಪ್ರಸಾರ ಮಾಡಿದ ಕುಟುಕು ಕಾರ್ಯಾಚರಣೆ. ಪರಿಣಾಮ ಆ policeಮೂರೂ ಮಂದಿ ಅಮಾನತ್ತಾಗಿದ್ದಾರೆ. ಸತ್ಯವೆಂದರೆ, ಅವರು ಕೆಮರಾ ಕಣ್ಣಿಗೆ ಬಿದ್ದು ಅಮಾನತ್ತಾದರು. ಇಂತಹ ದಂಧೆ ಮಾಡುತ್ತಿರುವವರ ಸಂಖ್ಯೆ ಈ ಪೊಲೀಸ್ ಇಲಾಖೆಯಲ್ಲಿ ಬಹಳ ದೊಡ್ಡದೇ ಇದೆ. ಅವರೆಲ್ಲರೂ ಕೆಮರಾದಲ್ಲಿ ಸಿಕ್ಕಿಬಿದ್ದಿಲ್ಲ ಅಷ್ಟೆ.

ಕೆಲ ತಿಂಗಳುಗಳ ಹಿಂದೆ, ಮೈಸೂರಿನ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಇಳಿಸಿ ಬರೋಬ್ಬರಿ 20 ಕೋಟಿ ರೂಗಳನ್ನು ವಶಪಡಿಸಿಕೊಂಡು, ಎರಡು ಕೋಟಿಗಳ ಲೆಕ್ಕ ಕೊಟ್ಟವರು ಇದೇ ಪೊಲೀಸರು. ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಐಜಿಪಿ ದರ್ಜೆ ಅಧಿಕಾರಿಯ ಗನ್ ಮ್ಯಾನ್. ಒಂದು ಮೂಲದ ಪ್ರಕಾರ, ಅಷ್ಟು ದೊಡ್ಡ ಮೊತ್ತದ ಹಣ ಬಸ್ ನಲ್ಲಿ ರವಾನೆಯಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದೇ ಆ ಹಿರಿಯ ಅಧಿಕಾರಿಗೆ. ಅವರು ತಮ್ಮ ಸಹಚರರನ್ನು ಕಾರ್ಯಾಚರಣೆಗೆ ನಿಲ್ಲಿಸಿದರು. ಅಪರಾತ್ರಿಯಲ್ಲಿ ಮಲಗಿದ್ದ ಮತ್ತೊಬ್ಬ ಅಧಿಕಾರಿಯನ್ನು ಎಬ್ಬಿಸಿಕೊಂಡು ರಸ್ತೆಗೆ ಹೋಗಿ ನಿಂತು ಬಸ್ ಗೆ ಕೈ ಅಡ್ಡ ಹಾಕಿದರು. ಪ್ರಕರಣದಲ್ಲಿ ಸಣ್ಣವರು ಮಾತ್ರ ಅಮಾನತ್ತಾಗಿದ್ದಾರೆ.

ಇದೇ ಸಂದರ್ಭದಲ್ಲಿ ಇನ್ನೊಂದು ಘಟನೆ ಹೇಳಬೇಕು. ಅದು ಎಲ್ಲಿಯೂ ವರದಿಯಾದಂತಿಲ್ಲ. ಎಸ್.ಪಿ ದರ್ಜೆಯ ಅಧಿಕಾರಿಯೊಬ್ಬರು ತಮ್ಮ ಹಿಂದಿನ ಹುದ್ದೆಯಲ್ಲಿ ಪೆಟ್ರೋಲ್ ಕಳ್ಳರ ಜೊತೆ ವ್ಯವಹಾರ ಹೊಂದಿದ್ದರು ಎಂಬ ಆರೋಪ ಇತ್ತು. ತನಿಖೆಯನ್ನು ಸಿಐಡಿಗೆ ನಡೆಸಿತು. ಅಧಿಕಾರಿಯ ವಿರುದ್ಧ ಸಾಕ್ಷ್ಯಗಳಿದ್ದವು. ನಿವೃತ್ತಿ ಅಂಚಿನಲ್ಲಿರುವ ಅವರನ್ನು ಇದೇ ಸರಕಾರ ರಕ್ಷಿಸಿತು. ಅಧಿಕಾರಿ ಸಂಕಟದಿಂದ ಹೊರಬಂದಿದ್ದು ಒಂದು ವಿಶೇಷ. ಪೆಟ್ರೋಲ್ ಕಂಪನಿಗಾದ ನಷ್ಟ ತುಂಬಿಕೊಟ್ಟರೆ, ಕಂಪನಿಯವರು ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂಬ ಪ್ರಸ್ತಾಪ ಮುಂದಿಟ್ಟರು. ಅಧಿಕಾರಿ ತನ್ನ ಒಡೆತನದಲ್ಲಿದ್ದ ಜಮೀನಲ್ಲಿ ಒಂದಿಷ್ಟನ್ನು ಮಾರಿ, ಕಂಪನಿಗೆ ಕಟ್ಟಿ ಬಚಾವಾದರಂತೆ!! ದುಡ್ಡಿದ್ದವರಿಗೆ ಜೈಲು ವಾಸ ತಪ್ಪಿಸಿಕೊಳ್ಳಲು ನಾpolice-mainನಾ ದಾರಿಗಳಿವೆ.

ಇಂತಹ ಪೊಲೀಸರು ಅನೇಕ ಮಂದಿ ಇದ್ದಾರೆ. ಎಲ್ಲರೂ ಹೀಗೆ ಎಂದು ಯಾವ ಕ್ಷೇತ್ರದ ಬಗ್ಗೆಯೂ ಹೇಳಲಾಗುವುದಿಲ್ಲ. ಮೊನ್ನೆ ಮೊನ್ನೆ ಒಂದು ಜಿಲ್ಲೆಯ ಎಸ್.ಪಿ ಒಬ್ಬರು ಒಂದಂಕಿ ಲಾಟರಿ ಅಡ್ಡಾ ಒಂದಕ್ಕೆ ದಾಳಿ ಮಾಡಿದಾಗ, ದಂಧೆ ನಡೆಸುತ್ತಿದ್ದವರು ಪೊಲೀಸರಿಗೆ ಆಫರ್ ಮಾಡಿದ್ದು ಬರೋಬ್ಬರಿ ಒಂದು ಕೋಟಿ ರೂ. ಆ ಅಧಿಕಾರಿ ನಿಯತ್ತಿನವರಾಗಿದ್ದ ಕಾರಣ, ದುಡ್ಡು ಮುಟ್ಟದೆ ಬಂಧಿಸಿ ಕರೆದು ಕೊಂಡು ಬಂದರು.

ಆದರೆ, ಸರಕಾರ, ಗೃಹ ಇಲಾಖೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಏನನ್ನೂ ಮಾಡಿದಂತಿಲ್ಲ. ಅಲೋಕ್ ಕುಮಾರ್, ಡಿಸಿಪಿ ಹನುಮಂತರಾಯಪ್ಪ ಅಮಾನತ್ತಾದರೆ, ಇಲಾಖೆ ಸುಧಾರಿಸುವುದಿಲ್ಲ. ಎಲ್ಲಿಯವರೆಗೆ ಪಿ.ಎಸ್.ಐ, ಸಿ.ಪಿ.ಐ. ಡಿವೈಎಸ್ಪಿ ಹಾಗೂ ಮೇಲಿನ ಹುದ್ದೆಗಳಿಗೆ ರಾಜಕಾರಣಿಗಳು ಲಾಬಿ ಮಾಡುವುದನ್ನು ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೆ ಭ್ರಷ್ಟಾಚಾರ ನಿಲ್ಲುವುದಿಲ್ಲ. ಬೇರೆ ಯಾವ ಇಲಾಖೆಯಲ್ಲೂ ಇಲ್ಲದ ಕೆಲ ವಿಚಿತ್ರ ಸಂಪ್ರದಾಯಗಳು ಈ ಇಲಾಖೆಯಲ್ಲಿವೆ. ಮೇಲಿನ ಅಧಿಕಾರಿಯ ಕುಟುಂಬದವರು ಶಾಪಿಂಗ್ ಗೆಂದು ಮಾರ್ಕೆಟ್ ಗೆ ಹೊರಟರೆ, ಆ ಏರಿಯಾದ ಪಿ.ಎಸ್.ಐ ಅಥವಾ ಸಿಪಿಐ ಶಾಪಿಂಗ್ ಬಿಲ್ ಕ್ಲಿಯರ್ ಮಾಡಿದ ಉದಾಹರಣೆಗಳಿವೆ. ಹಿರಿಯ ಅಧಿಕಾರಿಯೊಬ್ಬರು ಖಾಸಗಿ ಭೇಟಿಗೆಂದು ಬಂದು ಪಂಚತಾರಾ ಹೊಟೇಲ್ ನಲ್ಲಿ ಉಳಿದರೆ, ಅದರ ಖರ್ಚು ಸ್ಥಳೀಯ ಅಧಿಕಾರಿಯ ಜವಾಬ್ದಾರಿ. ಇಂತಹ ಕೆಲ ನಡವಳಿಕೆಗಳಿಂದಾಗಿ, ಪೊಲೀಸ್ ಇಲಾಖೆಯಲ್ಲಿ ನಿಯತ್ತಿನಿಂದ ಇರುವುದು ಕೇವಲ ಮಿಥ್ ಎಂಬಂತಾಗಿದೆ.

ಅಲ್ಲಲ್ಲಿ ಜನಸ್ನೇಹಿ ಪೊಲೀಸ್ ಎಂಬ ಬರಹಗಳಿರುವ ಬೋರ್ಡ್ ಗಳನ್ನು ಕಾಣುತ್ತೇವೆ. ಆದರೆ ಜನಸ್ನೇಹಿ ಪೊಲೀಸ್ ಎನ್ನುವುದು ವಾಸ್ತವವಾಗಿ ಎಲ್ಲಿ ಎಂಬುದು ಹುಡುಕಬೇಕಿದೆ. ದೂರು ಕೊಡಲು ಬಂದವರನ್ನು ಸೌಜನ್ಯದಿಂದ ಮಾತನಾಡಿಸುವ ಗುಣವಾಗಲಿ, ಅವರ ದೂರನ್ನು ಮೊದಲು ಕೇಳಿಸಿಕೊಳ್ಳುವ ಸಂಯಮವಾಗಲಿ ಇಲ್ಲ. ಮೈತುಂಬ ಭ್ರಷ್ಟಾಚಾರದ ಆರೋಪ ಹೊತ್ತು ಪಿಕ್ ಪಾಕೆಟ್ ಮಾಡಿ ಸಿಕ್ಕಿಬಿದ್ದವನ ಮೇಲೆ ಲಾಟಿ ಎತ್ತಲು ಅದ್ಹೇಗೆ ಮನಸ್ಸು ಬರುತ್ತೋ..? ಗೃಹ ಸಚಿವರು, ತಮ್ಮ ಬಿಡುವಿಲ್ಲದ ವ್ಯವಹಾರಗಳ ಮಧ್ಯೆಯೂ, ಇತ್ತ ಕಡೆ ಗಮನ ಹರಿಸುತ್ತಾರ?

One thought on ““ಕಳ್ಳ” ಪೊಲೀಸರು!

  1. ಸೀತಾ

    ಪ್ರಗತಿಪರ ರಾಜಕಾರಣಿ ಎಂದೇ ಜನಪ್ರಿಯರಾಗಿರುವ ನಮ್ಮ ನಾಡಿನ ಮುಖ್ಯಮಂತ್ರಿಗಳೇಕೆ ಕೊಳೆತು ನಾರುತ್ತಿರುವ ಪೋಲೀಸ್ ಇಲಾಖೆಯನ್ನು ತಮ್ಮ ಸರಕಾರದ ಗೃಹ ಖಾತೆಯ ಮೂಲಕ ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ? ಬೇಲಿಯೇ ಎದ್ದು ಹೊಲ ಮೇಯುತ್ತಿರುವುದನ್ನು ನೋಡಿಯೂ ಸುಮ್ಮನಿರುವುದು ಸರಿಯೇ?

    Reply

Leave a Reply

Your email address will not be published. Required fields are marked *