ಪುಸ್ತಕ ವಿಮರ್ಶೆ: “ಭಾರತ ಭಾಗ್ಯವಿಧಾತ”

– ಸುಭಾಷ್ ರಾಜಮಾನೆ

’ಭಾರತ ಭಾಗ್ಯವಿಧಾತ’ ಮಹಾಂತೇಶ ನವಲಕಲ್ ಅವರ ಎರಡನೆಯ ಕಥಾ ಸಂಕಲನ. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನವರಾದ ಮಹಾಂತೇಶ ಅವರು ತಮ್ಮ ಮೊದಲನೆಯ ಸಂಕಲನ ’ನೀರಿನ ನೆರಳು’ ಮೂಲಕವೇ ತಾನೊಬ್ಬ ಸೂಕ್ಷ್ಮ ಪ್ರಜ್ಞೆಯ ಕತೆಗಾರರೆಂದು ಗುರುತಿಸಿಕೊಂಡಿದ್ದಾರೆ. ಸಣ್ಣಕತೆಯ ಪ್ರಭೇದದ ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಿರುವ ಹೊಸ ತಲೆಮಾರಿನ ಕತೆಗಾರರಲ್ಲಿ ನವಲಕಲ್ ಮುಖ್ಯರಾಗಿದ್ದಾರೆ. ಸಣ್ಣಕತೆಯ ಪ್ರಭೇದಕ್ಕೆ ಪ್ರಧಾನವಾಗಿ ಬೇಕಿರುವ ಖಚಿತವಾದ ತಾತ್ವಿಕತೆ, ಚುರುಕಾದ ಭಾಷೆ, ಪಾತ್ರ ಪೋಷಣೆ, ನಾಟಕೀಯತೆ, ಅನಿರೀಕ್ಷಿತ ತಿರುವು- ಎಲ್ಲ ಗುಣಲಕ್ಷಣಗಳು ಅವರ ಕತೆಗಳಲ್ಲಿವೆ.

ನಮ್ಮ ಸಮಾಜವನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳೇ ಇಲ್ಲಿಯ ಕತೆಗಳ ವಸ್ತುಗಳಾಗಿವೆ. bharata Bhagyavidhata Mukaputaಅದರಲ್ಲೂ ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅನಾವರಣ ಮಾಡುತ್ತವೆ. ಬಹುತೇಕ ಕತೆಗಳು ಬದಲಾಗುತ್ತಿರುವ ಸಮಕಾಲೀನ ಸನ್ನಿವೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಸೆರೆಹಿಡಿಯುತ್ತವೆ. ಜಾಗತೀಕರಣದ ಆಕ್ರಮಣದಿಂದ ಗ್ರಾಮೀಣ ಸಮುದಾಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಶೋಧಿಸುವುದೇ ಕೆಲವು ಕತೆಗಳ ಕೇಂದ್ರ ಕಾಳಜಿಯಾಗಿದೆ ಎಂದು ಹೇಳಬಹುದು.

’ನಾನು ಚಂದ್ರಗುಪ್ತನೆಂಬ ಮೌರ್ಯ’ ಸಂಕಲನದ ಪ್ರಾತಿನಿಧಿಕ ಮತ್ತು ಒಂದು ಅತ್ಯುತ್ತಮ ಕತೆಯಾಗಿದೆ. ಚರಿತ್ರೆಯಲ್ಲಿ ಸಾಮಾಜಿಕ ಅಸಮಾನತೆಯ ಮೂಲಗಳು ಹೇಗೆ ಸಾಂಸ್ಥಿಕ ರೂಪವನ್ನು ಪಡೆದುಕೊಂಡಿವೆ ಎಂಬುದನ್ನು ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಹಲವು ರೀತಿಯ ಆಕರಗಳನ್ನು ಬಳಸಿಕೊಂಡಿರುವ ಕತೆಗಾರರು ಚಂದ್ರಗುಪ್ತನ ಮೂಲಕ ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ಸ್ವರೂಪಕ್ಕೂ ಕನ್ನಡಿ ಹಿಡಿಯುತ್ತಾರೆ. ನವ್ಯ ಕಾಲಘಟ್ಟದ ಕತೆ-ಕಾದಂಬರಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಪ್ರಜ್ಞಾಪ್ರವಾಹ ತಂತ್ರವನ್ನು ನವಲಕಲ್ ಅವರು ಸದರಿ ಕತೆಯಲ್ಲಿ ಪರಿಣಾಮಕಾರಿಯಾಗಿ ಬಳಸಿದ್ದಾರೆ. ಚಂದ್ರಗುಪ್ತ ಮೌರ್ಯ ತನ್ನ ಕೊನೆಯ ದಿನಗಳಲ್ಲಿ ಜಾತಿ, ಅಸ್ಪೃಶ್ಯತೆ, ಧರ್ಮ, ದೇವರು, ಅಧಿಕಾರ, ವ್ಯವಸ್ಥೆ, ಮಾನವೀಯತೆಗಳ ಕುರಿತು ತೀವ್ರವಾಗಿ ಪರಿತಪಿಸುವ ಹಾಗೂ ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳುವಂತೆ ಮಾಡಲಾಗಿದೆ. ಕತೆಯ ಈ ತಂತ್ರವೇ ಭಾರತದ ಪ್ರಾಚೀನ ಚರಿತ್ರೆಯನ್ನು ಏಕರೂಪಾತ್ಮಕ ನೆಲೆಯಲ್ಲಿಯೇ ನೋಡುವ ವಿಧಾನವನ್ನು ಭಂಜನ ಮಾಡುತ್ತದೆ; ಚಾರಿತ್ರಿಕ ಘಟನೆಗಳನ್ನು ಹತ್ತು ಹಲವು ದಿಕ್ಕುಗಳಿಂದ ಯೋಚಿಸುವಂತೆ ಮಾಡುತ್ತದೆ; ಚರಿತ್ರೆಯನ್ನು ಹೊಸ ಬೆಳಕಿನಲ್ಲಿ ಪುನಾರಚಿಸಲು ಯತ್ನಿಸುತ್ತದೆ; ಭೂತ-ವರ್ತಮಾನ-ಭವಿಷತ್‌ಗಳನ್ನು ಏಕತ್ರಗೊಳಿಸಿ ನೋಡುತ್ತದೆ.

ಬಹುರಾಷ್ಟ್ರೀಯ ಕಂಪನಿಗಳು ಅಗೋಚರವಾಗಿಯೇ ಗ್ರಾಮೀಣ ಪ್ರದೇಶದ ಬಡ ರೈತರನ್ನು ದಿವಾಳಿಯಾಗಿಸಿವೆ. ರೈತರು ತಮ್ಮ ಜೀವನಾಧಾರದ ನೆಲೆಯಾಗಿರುವ ಭೂಮಿಯನ್ನೆ ಕಳೆದುಕೊಳ್ಳುವ ದುಸ್ಥಿತಿಗೆ ತಲುಪಿರುವುದನ್ನು ’ಭಾರತ ಭಾಗ್ಯವಿಧಾತ’ ಕತೆ ನವಿರಾಗಿ ತೆರೆದಿಡುತ್ತದೆ. ಆದರೆ ವೈರುಧ್ಯದ ಸಂಗತಿಯೆಂದರೆ ತನ್ನ ಅಪ್ಪನನ್ನು ಬಲಿ ತೆಗೆದುಕೊಂಡ ಬಹುರಾಷ್ಟ್ರೀಯ ಕಂಪನಿಯೊಂದರಲ್ಲೇ ರಮೇಶ ಉದ್ಯೋಗ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಕಾರ್ಪೊರೇಟ್ ಜಗತ್ತು ಪರೋಕ್ಷವಾಗಿ ರೈತರ ವಿನಾಶಕ್ಕೆ ಮಾತ್ರ ಕಾರಣವಾಗಿಲ್ಲ; ಅದು ಶಿಕ್ಷಣ ಪಡೆದ ನಿರುದ್ಯೋಗಿ ತರುಣ ಪೀಳಿಗೆಯನ್ನು ತನ್ನ ಸೇವೆಗಾಗಿ ಅವಲಂಬಿಸುವಂತೆ ಮಾಡುವುದರಲ್ಲಿ ಸಫಲವಾಗಿದೆ ಎಂಬುದನ್ನು ಕತೆ ಮಾರ್ಮಿಕವಾಗಿ ವಿವರಿಸುತ್ತದೆ. ಆದ್ದರಿಂದ ರಮೇಶನಂತಹ ನವ ತರುಣರ ಪ್ರತಿರೋಧದ ಶಕ್ತಿಯನ್ನು ಕಾರ್ಪೊರೇಟ್ ಜಗತ್ತು ದಮನ ಮಾಡಿದೆ. ಇದರಿಂದ ನವ ವಸಾಹತುಶಾಹಿ ವ್ಯವಸ್ಥೆಯು ಭದ್ರವಾಗಿ ಕಾಲೂರಿ ತನ್ನ ಯಜಮಾನಿಕೆಯನ್ನು ನಿರಾಯಾಸವಾಗಿ ನಡೆಸುತ್ತಿದೆ.

ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಂದ ಅನುದಾನ ಪಡೆಯುವ ಸರ್ಕಾರೇತರ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ’ಎಲುಬಿನ ವ್ಯಾಪಾರ’ ಕತೆಯು ಶಿವಕುಮಾರ್‌ನೆಂಬ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಅಧಿಕಾರಶಾಹಿ ವರ್ಗದವರ ಅಮಾನವೀಯ ನಡತೆ ಮತ್ತು ಸುಳ್ಳು ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುವಿಕೆಯು ಶಿವಕುಮಾರ್‌ನನ್ನು ದಿಗ್ಭ್ರಾಂತನನ್ನಾಗಿಸುತ್ತದೆ. ಶಿವಕುಮಾರನಿಗೆ ಬೀಳುವ ಕನಸುಗಳು ತನ್ನ ಸುತ್ತಲಿನ ಜನರ ಅಮಾನುಷತೆಯನ್ನು ಕಂಡು ಕಂಗಾಲಾಗಿರುವುದನ್ನೇ ಧ್ವನಿಸುತ್ತವೆ. ಶಿವಕುಮಾರ್ ಮತ್ತು ’ಭಾರತ ಭಾಗ್ಯವಿಧಾತ’ ಕತೆಯ ರಮೇಶನಿಗೂ ಅನೇಕ ಬಗೆಗಳಲ್ಲಿ ಸಾಮ್ಯತೆಗಳಿವೆ. ಇಬ್ಬರು ಸಹ ಬುದ್ಧಿ ಮತ್ತು ಹೃದಯಗಳ ನಡುವಿನ ಸಂಘರ್ಷದಲ್ಲಿ ಹೃದಯವಂತಿಕೆಯ ದಾರಿಯಲ್ಲೆ ನಡೆದವರು. ಆದರೆ ಕತೆಯಲ್ಲಿನ ಒಳಿತು ಮತ್ತು ಕೇಡಿನ ಮಧ್ಯೆ ನಡೆಯುವ ಘರ್ಷಣೆಯಲ್ಲಿ ಕೇಡುಗಳ ಅಟ್ಟಹಾಸವೇ ವಿಜೃಂಭಿಸುವಂತಿದೆ. ಶಿವಕುಮಾರ್ ಮತ್ತು ರಮೇಶ- ಅನ್ಯಾಯ ಹಾಗೂ ಅವ್ಯವಸ್ಥೆಗೆ ಎಷ್ಟೇ ಪ್ರತಿರೋಧ ತೋರಿದರೂ ಕೊನೆಯಲ್ಲಿ ಅಸಹಾಯಕರಾಗಿಯೇ ಉಳಿಯುತ್ತಾರೆ.

ಹಿಂದೂ ಕರ್ಮ ಸಿದ್ಧಾಂತದ ವಿಡಂಬನಾತ್ಮಕ ಕತೆಯಾಗಿ ’ಶ್ವಾನ ಪರಿಣಯ ಪ್ರಸಂಗ’ ಗಮನಾರ್ಹವಾಗಿದೆ. ನಿರುದ್ವಿಗ್ನವಾದ ನಿರೂಪಣೆಯ ಧಾಟಿಯೇ ಓದುಗರನ್ನು ಸೆಳೆಯುತ್ತದೆ. ಶಾಂಭವಿ ಎನ್ನುವ ಮಹಿಳೆ ತನ್ನ ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಳೆಂದು ಗಾಢವಾಗಿ ನಂಬುವುದು ಮತ್ತು ಅದರ ಪ್ರಾಯಶ್ಚಿತ್ತ ನಿವಾರಣೆಗಾಗಿ ನಡೆಯುವ ಅವಾಂತರಗಳು ತಮಾಷೆಯಾಗಿವೆ. ಈ ತಮಾಷೆ ಮತ್ತು ವೈನೋದಿಕ ದೃಷ್ಟಿಯ ಹಿಂದೆ ಸಾಮಾಜಿಕ ಮೌಢ್ಯತೆಗಳು ದುರ್ಬಲ ಮನಸ್ಸನ್ನು ಆಕ್ರಮಿಸಿಕೊಂಡಿರುವ ಸ್ವರೂಪವನ್ನು ತೋರಿಸುತ್ತವೆ. ನಾಯಿಗಳ ಮದುವೆಯ ಸನ್ನಿವೇಶವು ವೈದಿಕ ಮೌಲ್ಯಗಳನ್ನು ಒಂದು ಅತಿರೇಕಕ್ಕೆ ಒಯ್ದು ನೋಡುವ ವಿನ್ಯಾಸವನ್ನು ಹೊಂದಿದೆ.

ಸರ್ಕಾರದ ಅಭಿವೃದ್ಧಿಯ ಯೋಜನೆಗಳು ನೂರಾರು ವರ್ಷಗಳಿಂದ ಕಾಡುಗಳಲ್ಲಿ ವಾಸಿಸುತ್ತ ಬಂದಿರುವ ಒಂದು ನಿರ್ದಿಷ್ಟ ಸಮುದಾಯದ ಬದುಕನ್ನು ಹೇಗೆಲ್ಲ ಅಸ್ತವ್ಯಸ್ತಗೊಳಿಸಿವೆ ಎಂಬುದನ್ನು ’ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ’ ಎಂಬ ಕತೆ ನಿರೂಪಿಸುತ್ತದೆ. ಆದರೆ ಕತೆಯ ವಸ್ತು ಮತ್ತು ಧೋರಣೆಗೆ ತಕ್ಕ ಭಾಷಾ ಶೈಲಿ ಇಲ್ಲದಿರುವುದರಿಂದ ಅದರ ಬಂಧವೂ ಸಡಿಲವಾಗಿರುವಂತೆ ಕಾಣುತ್ತದೆ.

ಪ್ರಗತಿಶೀಲ ಲೇಖಕರು ತಮ್ಮ ಕತೆ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಮಠದ ಸ್ವಾಮಿಗಳ ಅನಾಚಾರ, ಢಾಂಬಿಕತೆ, ಹಾದರ, ಭ್ರಷ್ಟತೆಗಳನ್ನು ರೊಚ್ಚಿನಿಂದ ಬರೆದವರು. ’ಬೇರಿಲ್ಲದ ಬೇವಿನ ಮರದ ಮೇಲೆ ರೆಕ್ಕೆ ಇಲ್ಲದ ಹಕ್ಕಿ’ ಕತೆಯಲ್ಲಿ ಪ್ರಗತಿಶೀಲ ಲೇಖಕರು ಬಳಸುವ ಆವೇಷದ ಧಾಟಿಯಿಲ್ಲ. ಕತೆಯಲ್ಲಿ ಬರುವ ಮಠದ ಸ್ವಾಮಿಗಳು ಆಗಾಗ ಉಸುರುವ ಬಸವಣ್ಣ, ಅಂಬಿಗರ ಚೌಡಯ್ಯ, ಕಡಕೋಳ ಮಡಿವಾಳರ ವಚನಗಳ ತಾತ್ವಿಕತೆಯು ಅನ್ಯರ ಉಪದೇಶಕ್ಕೆ ಸೀಮಿತವಾಗದೆ ಅವರು ತಮ್ಮ ಅಂತರಂಗವನ್ನೇ ಪರೀಕ್ಷಿಸಿಕೊಳ್ಳುವಂತೆ ಮಾಡಿವೆ. ಇಂತಹ ಸ್ವವಿಮರ್ಶೆಯ ವಿಧಾನವು ಪಾತ್ರದ ಮಾನಸಿಕ ಪಾತಳಿಯನ್ನು ತೆರೆದು ತೋರುವಂತೆ ಮಾಡುವಲ್ಲಿ ಸಫಲವಾಗುತ್ತದೆ. ಆಶಯದ ದೃಷ್ಟಿಯಿಂದ ಗ್ರಹಿಸುವುದಾದರೆ ಕತೆಯು ಜಾತಿ ಹಾಗೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಉದಾರವಾದಿ ನೆಲೆಯಲ್ಲಿಯೇ ನೋಡುತ್ತದೆ.

ನವಲಕಲ್ ಅವರ ಬಹುತೇಕ ಕತೆಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳ ಗೈರುಹಾಜರಿ ಎದ್ದು ಕಾಣುತ್ತದೆ. ಇಲ್ಲಿಯ ಕತೆಗಳಲ್ಲಿ ಪುರುಷ ಪಾತ್ರಗಳೇ ಕತೆಯ ತುಂಬ ಆವರಿಸಿಕೊಂಡು ಪ್ರಭಾವಿಯಾಗಿವೆ. ಇದರಿಂದ ಸ್ತ್ರೀ ಪಾತ್ರಗಳಿಗೆ ಸಿಗಬೇಕಾದಷ್ಟು ಸ್ಪೇಸ್ ಸಿಗುವುದಿಲ್ಲ. ಆದ್ದರಿಂದ ಪುರುಷ ಪಾತ್ರಗಳಂತೆ ಸ್ತ್ರೀ ಪಾತ್ರಗಳ ಮನೋಜಗತ್ತು ಸೂಕ್ಷ್ಮವಾಗಿ ಬಿಚ್ಚಿಕೊಳ್ಳುವುದಿಲ್ಲವೆನೋ ಅನ್ನಿಸುತ್ತದೆ. ಅಷ್ಟೆ ಅಲ್ಲದೆ ಹೆಣ್ಣು ಪಾತ್ರಗಳು ತುಂಬ ಸಂಪ್ರದಾಯಸ್ಥವಾದ ಮನೋಧರ್ಮವನ್ನು ಹೊಂದಿವೆ ಹಾಗೂ ಅಷ್ಟೇ ದುರ್ಬಲವಾಗಿವೆ; ಇಂತಹ ಕೆಲವು ಮಿತಿಗಳ ನಡುವೆಯೂ ನವಲಕಲ್ ಅವರ ಕತೆಗಳು ನಮ್ಮ ಕಾಲದ ಸಾಮಾಜಿಕ ಸಮಸ್ಯೆಗಳನ್ನು ಮುಖಾಮುಖಿ ಮಾಡುವುದರಿಂದ ಓದಲು ಪ್ರೇರಿಸುತ್ತವೆ.

“ಭಾರತ ಭಾಗ್ಯವಿಧಾತ”
ಲೇ: ಮಹಾಂತೇಶ್ ನವಲಕಲ್
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಹೊಸಪೇಟೆ
ಪುಟ: ೧೨೪, ಬೆಲೆ: ೧೦೦/-

Leave a Reply

Your email address will not be published. Required fields are marked *