ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ


– ಶ್ರೀಧರ್ ಪ್ರಭು


ಕಲ್ಕತ್ತೆಯ ಬೇಲೂರು ಮಠದ ನಿರ್ಮಾಣ ಕೊನೆಯ ಹಂತದಲ್ಲಿತ್ತು. ಅಲ್ಲಿ ಹೆಚ್ಚಿನ ಕಟ್ಟಡ ಕಾರ್ಮಿಕರೆಲ್ಲರೂ ಬಂಗಾಳ ಬಿಹಾರ ಗಡಿ ಭಾಗದ ಸಂಥಾಲ್ ಆದಿವಾಸಿಗಳು. ಎರಡು ತುತ್ತು ಅನ್ನ ಕೊಟ್ಟರೆ ಸಾಕು ಬಂಗಾಳದ ಹಳ್ಳಿಗಳಲ್ಲಿ ಕೃಷಿ ಕೂಲಿ ಕೆಲಸ ಮತ್ತು ನಗರ ಭಾಗಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಕೊಂಡು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದ ಈ ಕಷ್ಟ ಜೀವಿಗಳ ಮಧ್ಯೆ ತುಂಬು ಆತ್ಮೀಯತೆಯಿಂದ ಬೆರೆತು ಹೋಗುತ್ತಿದ್ದ ವಿವೇಕಾನಂದರಿಗೆ ಬಹು ಬೇಗ ಕ್ಷೀಣಿಸುತ್ತಿದ್ದ ತಮ್ಮ ಅರೋಗ್ಯದ ಪರಿವೆ ಎಲ್ಲವೂ ಮರೆಯುತ್ತಿತ್ತು. ಒಂದು ದಿನ ವಿವೇಕಾನಂದರು ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಒಬ್ಬ ಶಿಷ್ಯರಿಗೆ ಹೇಳುತ್ತಾರೆ ” ನನ್ನ ಕೊನೆಯ ಆಸೆ ಏನು ಗೊತ್ತೇ? Vivekanandaಯುರೋಪ್ ಮತ್ತು ಅಮೇರಿಕೆಯಲ್ಲಿ ಜರುಗುವ ನಮ್ಮ ವೇದಾಂತ ಕಾರ್ಯಕ್ರಮಗಳ ಸಂಪಾದನೆಯನ್ನು ಸಂಪೂರ್ಣವಾಗಿ ವ್ಯಯಿಸಿದರೂ ಚಿಂತೆಯಿಲ್ಲ, ಈ ನನ್ನ ಜನಕ್ಕೆ ದಿನವೂ ಹೊಟ್ಟೆ ತುಂಬಾ ಅನ್ನ ಬಡಿಸಬೇಕು. ಎಷ್ಟೊಂದು ಅನ್ನ ಗೊತ್ತೇ? ಈ ಅನ್ನಕ್ಕೆ ಬೇಕಿರುವ ಅಕ್ಕಿಯನ್ನು ಬಸಿದು ಚೆಲ್ಲಿದ ನೀರಿನಿಂದ ಗಂಗೆಯ ಮಡಿಲೆಲ್ಲವೂ ಬೆಳ್ಳಗಾಗಿ ಬಿಡಬೇಕು!”

ಇದೆಲ್ಲ ಕಳೆದು ಸುಮಾರು ನೂರಾ ಹದಿನೈದು ವರ್ಷಗಳು ಸಂದರೂ ಗಂಗೆ, ಯಮುನೆ, ತುಂಗೆ, ಭಾಗೀರತಿಗಳ ನೀರು ಇನ್ನೂ ಬೆಳ್ಳಗಾಗಿಲ್ಲ.

ಮೇ ೨೦೧೫ ರಲ್ಲಿ ವಿಶ್ವ ಸಂಸ್ಥೆಯ “ಆಹಾರ ಮತ್ತು ಕೃಷಿ ಸಂಘಟನೆ” (FAO) ಪ್ರಕಟಿಸಿದ “ವಿಶ್ವ ಆಹಾರ ಸುರಕ್ಷತಾ “ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ೧೯೪.೬ ಮಿಲಿಯನ್ (ಹತ್ತೊಂಬತ್ತುವರೆ ಕೋಟಿ) ಜನ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲೂ ಸಾಕಷ್ಟಿದೆ.

೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿನ “ವಿಮೋಚನಾ” ಸಂಘಟನೆಯ ಅಧ್ಯಕ್ಷರು ಅಂದಿನ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಕರ್ನಾಟಕದಲ್ಲಿ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳ ಬಗ್ಗೆ india-poverty-hungerಒಂದು ಸವಿಸ್ತಾರವಾದ ಪತ್ರ ಬರೆದು ಕರ್ನಾಟಕದ ನ್ಯಾಯಾಂಗ ಈ ಬಗ್ಗೆ ಗಮನ ಹರಿಸಲು ಕೋರುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯವು ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಯೆಂದು (W. P. No. 381571 / 2011) ದಾಖಲಿಸಿಕೊಂಡು, ಅಕ್ಟೋಬರ್ ೨೦೧೧ ರಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಒಂದು ವಿವರವಾದ ವರದಿ ನೀಡಲು ನಿರ್ದೇಶನ ನೀಡುತ್ತಾರೆ. ಆಗಸ್ಟ್ ೨೦೧೨ ರಲ್ಲಿ ಸೇವಾ ಪ್ರಾಧಿಕಾರ, ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎನ್. ಕೆ. ಪಾಟೀಲ್ ನೇತೃತ್ವದ ಸಮಿತಿ ರಚಿಸಿ ತನ್ನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವರದಿಯಲ್ಲಿನ ಕೆಲವು ವಿವರಗಳನ್ನು ಗಮನಿಸಿ:

  1. ಪ್ರತಿ ಸಾವಿರ ಶಿಶುಗಳಲ್ಲಿ ಕರ್ನಾಟಕದಲ್ಲಿ ಆಹಾರ ಕೊರತೆಯಿಂದಾಗಿ ಒಂದು ವರ್ಷಕ್ಕೂ ಮಿಕ್ಕದ ೪೩ ಶಿಶುಗಳು ಅಸು ನೀಗುತ್ತವೆ.
  2. ಐದು ವರ್ಷಗಳ ಒಳಗಿನ ಪ್ರತಿ ಸಾವಿರ ಶಿಶುಗಳಲ್ಲಿ ಸುಮಾರು ೫೫ ಶಿಶುಗಳು ಆಹಾರ ಕೊರತೆಯಿಂದ ಸಾವನ್ನಪ್ಪುತ್ತವೆ.
  3. ೨೦೧೨ ರ ಅಂಕಿ ಅಂಶ ಗಳ ಪ್ರಕಾರ ICDS ಯೋಜನೆಯಲ್ಲಿ ಕರ್ನಾಟಕದಲ್ಲಿ ದಾಖಲಾದ ೩೫,೯೯, ೪೮೪ ಮಕ್ಕಳಲ್ಲಿ ಸುಮಾರು ೧೧,೩೯,೪೫೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ, ಸುಮಾರು ೬೩,೨೭೩ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.
  4. ೨೦೧೨ ರಲ್ಲಿ ಸುಮಾರು ೧೬,೧೨,೧೬೩ ಮಕ್ಕಳಿಗೆ ICDS ಯೋಜನೆಯ ಲಾಭವೇ ದಕ್ಕುತ್ತಿಲ್ಲ. ಇವರಲ್ಲಿ ೨,೧೭,೮೮೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದರೆ, ೨೧,೧೫೧ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.

ಇದೆಲ್ಲ ನಾಲ್ಕು ವರ್ಷಗಳ ಹಿಂದಿನ ಕಥೆ. ಮತ್ತು ಇವೆಲ್ಲವೂ ಸರಕಾರಿ ಅಂಕಿ ಅಂಶಗಳಲ್ಲಿ ಹಿಡಿದಿಟ್ಟ ವಿವರಗಳು; ಇನ್ನು ಇಂದಿನ ಸತ್ಯಾಂಶ ಇನ್ನೆಷ್ಟು ಭೀಕರವೋ?

ನಮ್ಮ ಸಂವಿಧಾನದ ೩೯ (ಎಫ್ ) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಂತರಾಗಿ ಬದುಕಲು ಬೇಕಾದ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರಭುತ್ವಕ್ಕಿದೆ. ವಿಪರ್ಯಾಸವೆಂದರೆ, ನಲವತ್ತೇಳರ ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಏಳು ದಶಕಗಳು ಸಂದ ನಂತರ ಸ್ವತಂತ್ರ ಭಾರತದಲ್ಲಿ ಜನಿಸಿದ ಒಂದು ಶಿಶುವಿಗೆ ಕನಿಷ್ಠ ಬದುಕಲು ಬೇಕಿರುವಷ್ಟು ಆಹಾರ ಕೊಡದಷ್ಟು ದಾರಿದ್ರ್ಯವಿರುವ ಸಮಾಜದಲ್ಲಿ ನಾವಿದ್ದೇವೆ. ೨೦೦೫ ಮತ್ತು ೨೦೧೩ ರ ಮಧ್ಯೆ FCI ಗೋದಾಮುಗಳಲ್ಲಿ ಸುಮಾರು 1.94 ಲಕ್ಷ ಮೆಟ್ರಿಕ್ ಟನ್ ಗಳಷ್ಟು (೧೯೪೦೦೦೦೦೦೦೦೦೦೦ ಕಿಲೊ) ಆಹಾರ ಸಾಮಗ್ರಿ ಮಣ್ಣು ಪಾಲಾಗಿದೆ. ಇದರ ಸಾವಿರದ ಒಂದು ಅಂಶ ಆಹಾರ ಶಿಶುಗಳ ಹಸಿದ ಹೊಟ್ಟೆ ಸೇರಿದ್ದರೆ ಎಷ್ಟು ಲಕ್ಷ ಮಕ್ಕಳನ್ನು ಬದುಕಿಸಬಹುದಿತ್ತೋ?

ಪ್ರಸಕ್ತದಲ್ಲಿ ಅನ್ನವನ್ನು ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಡವರಿಗೆ ಅಕ್ಕಿಕೊಡುವದರಿಂದ ಮೊದಲ್ಗೊಂಡು, Siddaramaiah-annyabhagyaಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವದನ್ನು ಕೂಡ ವಿರೋಧಿಸಲಾಗುತ್ತಿದೆ. ಒಂದು ಕಡೆ, ಭಾರತವನ್ನೇ ತಮ್ಮ ಮನೆ ಮಾಡಿಕೊಂಡು ಬಡವರ ಮಧ್ಯೆ ಗುಡಿಸಲು ಕಟ್ಟಿಕೊಂಡು ಬಡಜನರನ್ನು ಸಂಘಟಿಸುತ್ತಿರುವ ವಿಶ್ವ ಮಾನ್ಯ ಅರ್ಥ ಶಾಸ್ತ್ರಜ್ಞ್ಯ ಜೀನ್ ಡ್ರೀಜ್ ರಂಥವರು ಬಡವರ ಆಹಾರದ ಹಕ್ಕಿನ ಪರ ಧ್ವನಿ ಎತ್ತಿದ್ದಾರೆ. ಆದರೆ ಭಾರತವನ್ನು ‘ಮಾತೃಭೂಮಿ’ ಎನ್ನುವ “ಬುದ್ಧಿವಂತ” ಜಾತಿಗಳ ಸಾಹಿತಿಗಳು ಇದನ್ನು ವಿರೋಧಿಸಿದ್ದಾರೆ. ಮಾತು ಮಾತಿಗೆ ವೇದ ಉಪನಿಷತ್ತು ಉಲ್ಲೇಖಿಸಿ ಮಾತನಾಡುವವರು “ಅನ್ನಂ ಬ್ರಹ್ಮೇತಿ ವ್ಯಜಾನತ್” ಎಂಬ ತೈತ್ತಿರೀಯ ಉಪನಿಷತ್ತಿನ ವಾಕ್ಯವನ್ನು ಕೇವಲ ತಮ್ಮ ಚಿತ್ತ ಭಿತ್ತಿಯಲ್ಲಿ ಮೂಡಿಸಿಕೊಳ್ಳದೆ ಭಾವಕೋಶದಲ್ಲಿಳಿಸಿಕೊಂಡು ನೋಡಿದರೆ ಹಸಿವಿನ ಭೀಕರತೆ ಕಾಣಿಸೀತು. ಶಾಸ್ತ್ರಗಳನ್ನೇ ಶಸ್ತ್ರ ಮಾಡಿಕೊಂಡು ಸಮಾಜದ ಬಹುಜನರನ್ನು ಅಕ್ಷರದಿಂದ ವಂಚಿಸಿದ ಶಕ್ತಿಗಳೇ ಇಂದು ಬಡವರಿಗೆ ಅನ್ನದಿಂದ ವಂಚಿಸುವ ಹುನ್ನಾರದಲ್ಲಿ ಒಂದಾಗಿದ್ದಾರೆ.

ಮಧ್ಯಮವರ್ಗಕ್ಕೂ ಸಾಕಷ್ಟು ಗೊಂದಲಗಳಿವೆ. ಇಂದು ಸರಕಾರ ಸಬ್ಸಿಡಿ ಹಣ ನೀಡದಿದ್ದರೆ ಇಂದು ಪ್ರತಿ ಮನೆಗೂ ಒಂದೂವರೆ ಪಟ್ಟು ವಿದ್ಯುತ್ ಮತ್ತು ಅಡುಗೆ ಗ್ಯಾಸ್ ದರ ತೆರಬೇಕು. ಒಂದೇ ಒಂದು ವರ್ಷ ಸಬ್ಸಿಡಿ ನೀಡದಿದ್ದರೆ ದೇಶದ ಅರವತ್ತು ಶೇಕಡಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸತ್ತು ಹೋಗುತ್ತವೆ. IITಯ ವಿವೇಕಾನಂದ ಅಧ್ಯಯನ ಕೇಂದ್ರದಲ್ಲಿ ದೇಶಭಕ್ತಿ ಪ್ರದರ್ಶಿಸಿ ಬೇಜಾರಾದ ನಂತರ ನಂತರ ಅಮೇರಿಕ ಕೈ ಬೀಸಿ ಕರೆಯುತ್ತದೆ. ಮಧ್ಯಮ ವರ್ಗಕ್ಕೆ ಇವೆಲ್ಲವೂ ಪ್ರಕೃತಿ ಸಹಜ; ಆದರೆ ಬಡವರಿಗೆ ಅಕ್ಕಿ ಕೊಟ್ಟರೆ ಅದು ದೇಶ ದ್ರೋಹ!

ಹತ್ತಾರು ಸಾವಿರ ಕೋಟಿ ಕೈಗಾರಿಗಾ ಸಹಾಯ ಧನ ಮತ್ತು ಪುಗಸಟ್ಟೆ ಸರಕಾರಿ ಜಮೀನು ಪಡೆದು ಕೊಂಡು ಹತ್ತೂವರೆ ಸಾವಿರ ಕಾರ್ಮಿಕರನ್ನು ದುಡಿಸಿಕೊಂಡು ಕೇವಲ ಎರಡೂವರೆ ದಶಕಗಳಲ್ಲಿ ಹದಿನೇಳು ಸಾವಿರದ ಐನೂರು ಬಿಲಿಯನ್ ಡಾಲರ್ (ರೂಪಾಯಿ ಅಲ್ಲ ಅಮೆರಿಕನ್ ಡಾಲರ್, ಗಮನಿಸಿ) ಸಂಪತ್ತು ಸಂಗ್ರಹಿಸಿರುವ ಗೌತಮ್ ಅದಾನಿಯವರಿಗೇ ಸುಸ್ತಾಗಿಲ್ಲ, ಇನ್ನು ಸಾಕು ಎನಿಸಿಲ್ಲ; ಇನ್ನು ತಿಂಗಳಿಗೆ ಹತ್ತು-ಹದಿನೈದು ಕೆಜಿ ಅಕ್ಕಿ ಪಡೆದುಕೊಂಡ ಬಡವನಿಗೆ ಸೋಮಾರಿತನ ಬರುತ್ತದೆಯೇ?

ಇಂದು ಬಡವರ ಜೀವನಕ್ಕೆ ಅಕ್ಕಿ ಬಂದು ಅವರ ಪ್ರಾಥಮಿಕ ಅಗತ್ಯತೆಗಳಿಗೆ ಹರಸಾಹಸ ಮಾಡುವ ಪ್ರಮೇಯ ಕೊಂಚ ಮಟ್ಟಿಗೆ ತಗ್ಗಿದೆ. ಎರಡು ಮುಷ್ಟಿ ಅಕ್ಕಿಗೆ ಜೀತದಂತೆ ದುಡಿಸಿಕೊಳ್ಳುವವರ ಸೊಲ್ಲು ಸ್ವಲ್ಪ ಅಡಗಿದೆ. ಮನೆ ಕೆಲಸದವರಿಂದ ಮೊದಲ್ಗೊಂಡು ಕಟ್ಟಡ ಕಾರ್ಮಿಕರ ತನಕ ಅಸಂಖ್ಯ ಅಸಂಘಟಿತರಿಗೆ ಮಾನವ ಘನತೆಗೆ ಸಲ್ಲಬೇಕಾದ ವೇತನ ಕೊಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೊಲದಲ್ಲಿ ದುಡಿಯುವ ಕೃಷಿ ಕಾರ್ಮಿಕ, ನಮ್ಮ ಕೊಳೆ ತೊಳೆಯುವ ಪೌರ ಕಾರ್ಮಿಕರಿಗೆ ಚಿಲ್ಲರೆ ಕಾಸು ಕೊಟ್ಟು ದುಡಿಸಿಕೊಳ್ಳುವ ಕಾಲ ಮರೆಯಾಗುತ್ತಿದೆ.

ಇಂದು ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬುದ್ಧಿಶಕ್ತಿಯಿಂದ ಮತ್ತು ಶ್ರಮಶಕ್ತಿಯಿಂದ ಕೆಲಸ ಮಾಡುವ ಕಾರ್ಮಿಕರ ವೇತನಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅದು ಇರಲೂ ಕೂಡದು. ನಿಜವಾಗಿ ನೋಡಿದರೆ ಶ್ರಮ ಶಕ್ತಿಯ ಕಾರ್ಮಿಕರಿಗೆ ಹೆಚ್ಚಿನ ಆಹಾರ ಮತ್ತು ಅರ್ಥಿಕ ಸುರಕ್ಷತೆಯ ಅಗತ್ಯವಿದೆ.

ನಿಮಗೆ ಗೊತ್ತಿರಲಿ, ಸಬ್ಸಿಡಿಯನ್ನು ಹಿಗ್ಗಾ ಮುಗ್ಗಾ ವಿರೋಧಿಸುವ ಅಮೇರಿಕ ವರ್ಷವೊಂದಕ್ಕೆ ತನ್ನ ಕೃಷಿ ಕ್ಷೇತ್ರಕ್ಕೆ ೨೦ ಬಿಲಿಯನ್ ಡಾಲರ್ ಗಳಷ್ಟು “ಸಹಾಯ ಧನ” ನೀಡುತ್ತದೆ. ಯೋಚಿಸಿ ನೋಡಿ, ಎಲ್ಲವನ್ನು ಮಾರುಕಟ್ಟೆಯೇ ನಿರ್ಧರಿಸಲಿ ಎಂದು ಬಗ್ಗೆ ಜಗತ್ತಿಗೆಲ್ಲ ಪಾಠ ಹೇಳುವ ಅಮೇರಿಕ ಯಾಕೆ ಸಹಾಯ ಧನ ಕೊಡಬೇಕು? ಯಾಕೆಂದರೆ ಜಾಗತಿಕ ಕೃಷಿ ಬಿಕ್ಕಟ್ಟು ಎಷ್ಟು ಭೀಕರವಾಗಿದೆಯೆಂದು ಎಲ್ಲರಿಗಿಂತ ಚೆನ್ನಾಗಿ ಅಮೆರಿಕೆಗೇ ಗೊತ್ತಿದೆ. ಬಂಡವಾಳ ಆಕರ್ಷಿಸುವ ನೆಪದಲ್ಲಿ ಇದ್ದ ಅರಣ್ಯ ಮತ್ತು ಕೃಷಿ ಭೂಮಿಯನ್ನು ಕಸಿಯುತ್ತಿರುವ ಸರಕಾರಗಳು ಕೃಷಿಯನ್ನು ಅಷ್ಟಿಷ್ಟು ಕೂಡ ಪೋಷಿಸದಿದ್ದರೆ ಇನ್ನು ಒಂದೆರಡು ದಶಕಗಳಲ್ಲೇ ಹೊಟ್ಟೆಗೆ ಸಿಮೆಂಟ್ ತಿನ್ನುವ ಪ್ರಮೇಯ ಬಂದೀತು. ಅಕ್ಕಿ ದವಸ ಧಾನ್ಯಗಳನ್ನು ವಿತರಿಸುವ ಅನಿವಾರ್ಯತೆ ಇದ್ದ ಕಡೆ ಅವುಗಳನ್ನು ಖರೀದಿಸುವ ಅನಿವಾರ್ಯತೆ ಕೂಡ ಇರುತ್ತದೆ. ಹಾಗೆಂದೇ, ರೈತರ ಬೆಳೆಗಳಿಗೆ ತಕ್ಕ ಬೆಲೆಯೂ ದಕ್ಕುತ್ತದೆ.

ಕಾಲೇಜ್ ಮತ್ತು ವಿಶ್ವ ವಿದ್ಯಾಲಯ ಪ್ರಾಧ್ಯಾಪಕರೂ ಸೇರಿದಂತೆ, ಇಂದು ಸಂಘಟಿತವಲಯದಲ್ಲಿರುವ ಕಾರ್ಮಿಕ ವರ್ಗ (ಮಧ್ಯಮ ವರ್ಗ), ಬ್ಯಾಂಕ್, ಸರಕಾರಿ ವಲಯ, ವಿಮಾ ನೌಕರರು ಇತ್ಯಾದಿ ESI, PF, PPF, ಪೆನ್ಷನ್ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. india-middle-classಆದಾಯ ತೆರಿಗೆ ಕಟ್ಟುವ ಈ ದೇಶದ ತೆರಿಗೆದಾರ ಈ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ಯಾಕೆ ಹಣ ಕೊಡಬೇಕು? ಈ ಹಣವನ್ನು ಬಂಡವಾಳವಾಗಿ ವಿನಿಯೋಗಿಸಿದರೆ ಇನ್ನಷ್ಟು ಲಾಭ ಬರುವದಿಲ್ಲವೆ? ಈ ಪ್ರಶ್ನೆಗೆ ಮಧ್ಯಮ ವರ್ಗ ಉತ್ತರಿಸುವುದೇ?

ಅದು ಹೋಗಲಿ, ನಮ್ಮ ಖಾತೆಯ ಮಂತ್ರಿಗಳಿಗೆ ವಯಸ್ಸು ಜಾಸ್ತಿಯಾಯಿತು, ಅವರು ಸೂಟು ಬೂಟು ಧರಿಸಿ ಇಂಗ್ಲೀಷ್ ಮಾತಾಡುವುದಿಲ್ಲ ಹಾಗಾಗಿ ಅವರನ್ನು ಬದಲಾಯಿಸಿ ಎಂದು ಪಟ್ಟು ಹಿಡಿದ IT, ITES, BT, BPO ವಲಯ, ಸರಕಾರದ ಸಹಾಯಧನ ಪಡೆದು ಸಾಮಾನ್ಯ ವಾಣಿಜ್ಯ ಬಳಕೆಯ ವಿದ್ಯುತ್ ದರಕ್ಕಿಂತ ಶೇಕಡಾ ೨೫ ರಷ್ಟು ಕಡಿಮೆ ವಿದ್ಯುತ್ ದರ ಪಾವತಿ ಮಾಡುತ್ತಿದೆ ಎಂಬುದು ಎಷ್ಟು ಜನಕ್ಕೆ ಗೊತ್ತಿದೆ? ಈ ವಿನಾಯತಿ ಸುಮಾರು ಹದಿನೈದು ವರ್ಷಗಳಿಂದ ಜಾರಿಯಲ್ಲಿದೆ. ಈ ವಿನಾಯತಿ ಹಣವನ್ನು ವಿನಿಯೋಗಿಸಿದ್ದರೆ ಇಂದು ಕರ್ನಾಟಕದಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತಿರಲಿಲ್ಲವೇ? ಇದು ಪರವಾಗಿಲ್ಲ; ಆದರೆ ಅಕ್ಕಿ ಕೊಟ್ಟರೆ ಅದು ಅರ್ಥಿಕ ವಿಕೃತಿ? ಅಲ್ಲವೇ?

ಅನ್ನಭಾಗ್ಯವನ್ನು ವಿರೋಧಿಸುವವರಲ್ಲಿ ಬಹುತೇಕರು ಹೇಳುವುದು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದು. ಇಂದು ಕೈಗಾರಿಕಾ ಶೆಡ್ ಗಳು, ಸರಕಾರೀ ಬಂಗಲೆಗಳು, BDA ನಿವೇಶನಗಳು, ಬಿಟ್ಟರೆ, ಪ್ರಶಸ್ತಿ, ಬಿರುದು ಬಾವಲಿಗಳನ್ನೂ ಮಾರಿಕೊಂಡವರಿದ್ದಾರೆ. ಸರಕಾರಿ ಉದ್ಯೋಗದಲ್ಲಿದ್ದು ಕೊಂಡೇ ಖಾಸಗಿ ಕೆಲಸ ಮಾಡುವ ವೈದ್ಯರು, ಶಿಕ್ಷಕರು, ಯಾವುದಕ್ಕೂ ಬರವಿಲ್ಲ. ಅಸಮತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಮಾಜದಲ್ಲಿ ಅಂತಹ ವಿಕೃತಿಗಳು ಎಲ್ಲಾ ಹಂತಗಳಲ್ಲೂ, ಎಲ್ಲಾ ವರ್ಗ ವಿಭಾಗಗಳಲ್ಲೂ ಸಹಜವಾಗಿ ನುಸುಳಿವೆ. ಈ ವಿಕೃತಿಗಳನ್ನು ಖಂಡಿತ ತಡೆಯಬೇಕು; ಅಂತೆಯೇ, ಮೇಲಿನ ಸ್ಥರದಿಂದ ಮೊದಲ್ಗೊಂಡು ಈ ಪ್ರಯತ್ನವಾಗಬೇಕೇ ವಿನಃ ನಿರ್ಗತಿಕರಿಂದ ಅನ್ನ ಕಸಿಯುವ ಮೂಲಕ ಅಲ್ಲ. ಸರಕಾರೀ ಆಸ್ಪತ್ರೆಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪತ್ರೆಯನ್ನೇ ಮುಚ್ಚುವುದು ಹೇಗೆ ಮದ್ದಲ್ಲವೋ ಹಾಗೆಯೇ ಅನ್ನಭಾಗ್ಯದ ದುರುಪಯೋಗಕ್ಕೆ ಅನ್ನವನ್ನೇ ಕಸಿಯುವುದೂ ಮದ್ದಲ್ಲ.

ಇಂದು ಎಲ್ಲೆಂದರಲ್ಲಿ ತಲೆ ಎತ್ತಿರುವ ವಿಶೇಷ ವಿತ್ತ ವಲಯಗಳನ್ನು (SEZ) ನೋಡಿ. ಈ ವಲಯಗಳಿಗೆ ಭಾರತದ ಯಾವ ಕಾನೂನು ಕೂಡ ಅನ್ವಯಿಸುವುದಿಲ್ಲ. ನಿಜವಾಗಿ ನೋಡಿದರೆ ಕಾನೂನಿನ ಪ್ರಕಾರ SEZಗಳು ಭಾರತದ ಸ್ವಾಧೀನತೆಗೆ ಒಳಪಡುವುದಿಲ್ಲ. ಕರ್ನಾಟಕ ಒಂದರಲ್ಲೇ ಸುಮಾರು ಒಂದು ನೂರರಷ್ಟು SEZ ಗಳು ತಲೆ ಎತ್ತಿವೆ. ಇಂದು ಒಬ್ಬ ಸಾಮಾನ್ಯ ವಲಯದ ದೊಡ್ಡ ಕೈಗಾರಿಕೊದ್ಯಮಿಗೆ ಕನಸಲ್ಲೂ ದಕ್ಕದ ಸವಲತ್ತುಗಳು SEZ ವಲಯಕ್ಕೆ ದಕ್ಕಿವೆ. ತೆರಿಗೆ ವಿನಾಯತಿ, ಸ್ಟ್ಯಾಂಪ್ ಮೊತ್ತದ ವಿನಾಯತಿ, ವಿದ್ಯುತ್ ದರದಲ್ಲಿ ಕಡಿತ ಇತ್ಯಾದಿ ಸವಲತ್ತುಗಳು ದೊರೆಯುವ ಈ SEZ ಗಳ Streetchildrenಬಗ್ಗೆ ಯಾವ ಕೈಗಾರಿಕಾ ದಿಗ್ಗಜನೂ ಸೊಲ್ಲೆತ್ತುವುದಿಲ್ಲ. ಅವರ ಸಿಟ್ಟು ಏನಿದ್ದರೂ ಅಕ್ಕಿಯ ಮೇಲೆ.

ಅದು ಹೋಗಲಿ ನಿಮ್ಮ ಮನೆಯಲ್ಲಿ ಮೇಲೆ ಸೌರ ಶಕ್ತಿ ಚಾಲಿತ ಹೀಟರ್ ಅಳವಡಿಸಿದರೆ ಒಂದು ವಿದ್ಯುತ್ ಯೂನಿಟ್ ಗೆ ಐವತ್ತು ಪೈಸೆ ವಿನಾಯತಿಯಿದೆ. ಇದಕ್ಕೆ ಕೊಡುವ ಸಮರ್ಥನೆ ಏನು ಗೊತ್ತೇ ಅಷ್ಟರ ಮಟ್ಟಿಗೆ ಉಷ್ಣ ಸ್ಥಾವರದ ಕಲ್ಲಿದ್ದಲು ಉಳಿತಾಯ ಮತ್ತು ಇದು ಪರಸರ ಸ್ನೇಹಿ. ಅದೇ ಒಬ್ಬ ಬಡವ ತನ್ನ ಮನೆಯ ಭೂಸ ಇಲ್ಲವೇ ಸೆಗಣಿ ಶೇಖರಿಸಿ ನೀರು ಬಿಸಿ ಮಾಡಿದರೆ, ಇಲ್ಲಾ ತಣ್ಣೀರು ಸ್ನಾನ ಮಾಡಿದರೆ ಯಾವ ವಿದ್ಯುತ್ ವಿನಾಯತಿ ಇದೆ?

ಸಮಾಜದ ಹೆಚ್ಚಿನ ಸವಲತ್ತು ಸಹಾಯ ಧನಗಳು ಯಾವತ್ತೂ ಅಪಾತ್ರರಿಗೇ ಮೀಸಲು. ತಳವರ್ಗ ಸ್ವಲ್ಪ ಮಟ್ಟಿನ ತುಂಡು ತುಣುಕು ಏನಾದರೂ ಕೇಳಲು ಬಂದರೆ ಗದರಿ ಕಳಿಸುವ ವ್ಯವಸ್ಥೆ ನಮ್ಮದು.

ಒಂದು ಹಿಡಿ ಅಕ್ಕಿ, ಒಂದು ಮೊಟ್ಟೆ ತಿಂದು ಯಾವ ಬಡವನೂ ಕೈಗಾರಿಕಾ ಸಾಮ್ರಾಜ್ಯ ಕಟ್ಟುವುದಿಲ್ಲ. ಹಾಗೆಯೇ, ಸರಕಾರದ ಸೌಕರ್ಯ, ವಿನಾಯತಿ, ಸವಲತ್ತು ಪಡೆದು ನಡೆಸುವ ಯಾವ ಕೈಗಾರಿಕೆಗಳೂ ಬಡವರು ಒಂದು ಹೊತ್ತಿನ ಅನ್ನ ತಿಂದ ಮಾತ್ರಕ್ಕೆ ಸತ್ತು ಹೋಗುವುದಿಲ್ಲ. ಯಾರಿಗೆ ಏನೇ ಆಗಲಿ, ಯಾವ (ರಾಷ್ಟ್ರೀಯ) ಪ್ರಾಧ್ಯಾಪಕರ ಸಂಬಳ ಸವಲತ್ತಿಗೂ ಬಡವನ ಅಕ್ಕಿಯಿಂದ ಕತ್ತರಿ ಬೀಳುವುದಿಲ್ಲ.

ಒಂದು ಕೊನೆಯ ಮಾತು. ಕೈಗಾರಿಕೆಗಳು, ಉದ್ದಿಮೆದಾರರು, ರಾಜಕಾರಣಿಗಳು, ಅರ್ಥ ಶಾಸ್ತ್ರಜ್ಞರು ವ್ಯಕ್ತಪಡಿಸುತ್ತಿರುವ ವಿರೋಧವನ್ನು ಅರ್ಥೈಸಿಕೊಳ್ಳಬಹುದು. ಆದರೆ ಜೀವನದ ದಯನೀಯ ಮಜಲುಗಳನ್ನು ಕಂಡಿರುವ ಒಬ್ಬ ಸಾಹಿತಿBhyrappa ಅನ್ನ ವಿರೋಧಿಯಾದರೆ ತುಂಬಾ ಸಂಕಟವೆನಿಸುತ್ತದೆ. ಭೈರಪ್ಪನವರನ್ನು ಸೈದ್ಧಾಂತಿಕ ಕಾರಣಗಳಿಗಾಗಿ ವಿರೋಧಿಸುವವರೂ ಕೂಡ ಅವರ ಸಂಘರ್ಷಮಯ ಜೀವನವನ್ನು ಗೌರವಿಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ, ಹಸಿವಿನ ಸಂಕಟವನ್ನು ಇನ್ನಿಲ್ಲದಂತೆ ಅನುಭವಿಸಿ, ಅವಿರ್ಭಾವಿಸಿ ಪಕ್ವವಾಗಬೇಕಿದ್ದ, ಹಸಿವಿನ ಕುರಿತು ಜಾಗೃತಿ ಮೂಡಿಸಿ ಹೋರಾಟ ನಿರೂಪಿಸುವದರಲ್ಲಿ ಮುಂಚೂಣಿಯಲ್ಲಿರ ಬೇಕಿದ್ದ ನಾಡಿನ ಹಿರಿಯ ಜೀವವೊಂದು ಅನ್ನವನ್ನು ವಿರೋಧಿಸುತ್ತಿರುವುದು ಅತ್ಯಂತ ಕ್ರೂರ ವಿಪರ್ಯಾಸ.

ಮಾರುಕಟ್ಟೆಯ ಮಂತ್ರವಾದಿಗಳ ಅಕ್ಷಮ್ಯ ಅನಾಚಾರಗಳ ಬಗ್ಗೆ ಸೊಲ್ಲೇ ಎತ್ತದ ಭೈರಪ್ಪನವರು, ತಮ್ಮ ಎಲ್ಲ ಬಾಣ ಬಿರುಸು ಗಳನ್ನೂ ಒಂದು ತುತ್ತು ಅನ್ನದ ಮೇಲೆ ಹೂಡುತ್ತಿದ್ದಾರೆ. ಶಾಸಕರ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯ, ಗಣಿ ಅಟ್ಟಹಾಸಗಳಿಂದ ತುಂಬಿದ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಕರ್ನಾಟಕದ ಜನ ಸಮುದಾಯ ಒಟ್ಟು ಗೂಡಿ ತಿರಸ್ಕರಿಸಿದಾಗ ಜನ ಸಮುದಾಯಕ್ಕೆ ನೇತೃತ್ವ ಕೊಡಲು ಬಾರದ ಈ ಜಾಗೃತಿ ಅನ್ನವನ್ನು ಹಂಚಲು ಹೊರಟಾಗ ಹೇಗೆ ಜಾಗೃತವಾಯಿತೋ ಅವರೇ ಹೇಳಬೇಕು.

5 thoughts on “ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ

    1. Anonymous

      “hasidavnige matra gottu annada bele”

      ಇದೊಳ್ಳೆ ತಮಾಷೆ ಹೇಳಿಕೆ! ಭೈರಪ್ಪನವರಿಗೆ ಹಸಿವೆ ಯಾವತ್ತೂ ಆಗಿಲ್ಲ ಅಂತ ನಿಮಗೆ ಹೇಗೆ ಗೊತ್ತು?

      Reply
  1. ಈಶ್ವರ ಭಟ್

    ನಿಮಗ್ಯಾಕೆ ಕುಂವೀ, ದೇಜಗೌ ಕಾಣಿಸಲಿಲ್ಲ? ಮತ್ತೆ ನೀವು ಹೇಳಿದ್ದಷ್ಟೂ ಬಾಲಿಶವೇ ಆಗಿದೆ; ಅದರ ಚರ್ಚೆಗೆ ನೀವು ಕಂಡಿತಾ ಇರುವವರಲ್ಲ ಎನ್ನುವುದೂ ಗೊತ್ತಿರುವುದರಿಂದ ಅದನ್ನು ಬಿಡೋಣ.

    Reply
  2. Ananda Prasad

    “ಇಂದು ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬುದ್ಧಿಶಕ್ತಿಯಿಂದ ಮತ್ತು ಶ್ರಮಶಕ್ತಿಯಿಂದ ಕೆಲಸ ಮಾಡುವ ಕಾರ್ಮಿಕರ ವೇತನಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.” ಇದು ನಿಜ. ಇಂಗ್ಲೆಂಡಿನ ಪ್ರಖ್ಯಾತ ಹೋಟೆಲ್ ಸಮೂಹವಾದ ಲಂಡನ್ ಮ್ಯಾರಿಯಟ್ ಹೋಟೆಲ್ನಲ್ಲಿ ಕೆಲಸಕ್ಕೆ ಜನ ಬೇಕೆಂದು ಮತ್ತು ಅಲ್ಲಿನ ಹುದ್ದೆಗಳ ಸಂಬಳವನ್ನು ಸೂಚಿಸುವ ಮಿಂಚಂಚೆಯೊಂದು ನನಗೆ ಬಂದಿದೆ. ಅದರಲ್ಲಿ ದೈಹಿಕ ಶ್ರಮದ ಕೆಲಸ ಹಾಗೂ ಬುದ್ಧಿಶಕ್ತಿಯಿಂದ ಮಾಡುವ ಕೆಲಸಗಳ ನಡುವೆ ಬಹಳ ವ್ಯತ್ಯಾಸವೇನೂ ಇಲ್ಲ. ಆ ಪಟ್ಟಿ ಹೀಗಿದೆ. ಇಲ್ಲಿ ಬಳಸಿದ ಜಿಬಿಪಿ ಎಂಬುದು ಗ್ರೇಟ್ ಬ್ರಿಟನ್ ಪೌಂಡ್ ಕರೆನ್ಸಿಯನ್ನು ಪ್ರತಿನಿಧಿಸುತ್ತದೆ. ನಾಗರಿಕ ಹಾಗೂ ಆರೋಗ್ಯಕರ ಸಮಾಜವೊಂದು ಇರಬೇಕಾದುದು ಹೀಗೆಯೇ. ನಮ್ಮ ದೇಶದಲ್ಲಿ ಇಂಥ ಸ್ಥಿತಿ ಎಂದಾದರೂ ಬಂದೀತೆ?
    1 ACCOUNT DEPARTMENT £6,000 GBP 2 CHEFS £5,500 GBP
    3 CLEANER £5,000 GBP 4 DRIVERS £4,900 GBP
    5 COMPUTER OPERATORS £5,500 GBP 6 SECRETARY £6,800 GBP
    7 RESERVATION DESK £5,000 GBP 8 SERVICE IN BAR £5,000 GBP
    9 MEDICAL ATTENDANT £5,900 GBP 10 HOTEL SECURITY £7,200 GBP
    11 ELECTRICAL/MECH. ENGR. £7,650 GBP 12 RECEPTIONIST £5,100 GBP
    13 WAREHOUSE COORDINATOR £6,300 GBP 14 ADMINISTRATOR MANAGER £7,000 GBP
    15 SALES EXECUTIVE £5,600 GBP 16 COMPUTER ENGINEER £6,000 GBP
    17 STORE MANAGER £6,800 GBP 18 WAITER £5,900 GBP
    19 RESTAURANT MANAGER £7,500 GBP 20 FRONT OFFICE £5,900 GBP
    21 HARDWARE/NETWORKING £5,900 GBP 22 COOK £6,500 GBP
    23 GARDEN WORK £4,300 GBP 24 HOUSEKEEPING £5,300 GBP
    25 FOOD AND BEVERAGE £6,000 GBP 26 CUSTOMER SERVICE £5,000 GBP
    27 SAFETY OFFICER £5,900 GBP 28 FOOD/FISH PACKAGING £6,500 GBP
    29 FISH CUTTING £4,000 GBP 30 STORE KEEPER £6,200 GBP
    31 OFFICE ASSISTANT £6,700 GBP 32 ASSISTANT MANAGER £7.800 GBP

    Reply
  3. Girish

    ಯಾರೋ ಶ್ರೀಮಂತರು ಏನೋ ಮಾಡುತ್ತಿದ್ದಾರೆ ಅನ್ನುವ ಕಾರಣಕ್ಕೆ ಯಾರೂ ಅನ್ನಭಾಗ್ಯವನ್ನು ವಿರೋಧಿಸುವುದಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇನ್ನೂ ಉಚಿತವಾಗಿ ಅಕ್ಕಿ ಹಂಚ ಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ ಎಂದರೆ ಇದಕ್ಕೆ ಯಾರು ಹೊಣೆ? ಒಂದು ಕಾಲಕ್ಕೆ ಬಡಜನರೆಂದು ಕೊಂಡಿದ್ದ ಹಲವಾರು ಮಂದಿ ಇಂದು ಶ್ರಮ ಪಟ್ಟು ಶ್ರೀಮಂತರಾದ ಅನೇಕ ಉದಾಹರಣೆಗಳಿವೆ. ಸರಕಾರಗಳ ಅನೇಕ ಯೋಜನೆಗಳಂತೆ ಇಲ್ಲೂ ಕೂಡಾ ಮಧ್ಯವರ್ತಿಗಳು ಲಾಭ ಪಡೆಯಬಹುದಲ್ಲವೇ? ಸ್ವಾಭಿಮಾನಿಗಳು ಯಾರೂ ಉಚಿತ ಅಕ್ಕಿಗಾಗಿ ಕಾಯಲಾರರು. ಬಡವರಿಗೆ ಈಗ ಅವಶ್ಯಕತೆ ಇರುವುದು ಉಚಿತ ಔಷಧ, ಹಾಗೂ ಉಚಿತ ಅಥವಾ ರಿಯಾಯತಿ ದರದಲ್ಲಿ ದುಬಾರಿ ಚಿಕಿತ್ಸೆ.

    ಗಿರೀಶ್, ಬಜಪೆ

    Reply

Leave a Reply

Your email address will not be published. Required fields are marked *