ಅಡ್ವಾಣಿಯವರ “ತುರ್ತು ಪರಿಸ್ಥಿತಿ”


– ಶ್ರೀಧರ್ ಪ್ರಭು


ಕೆಲ ದಿನಗಳ ಹಿಂದೆ ಒಂದು ಪುಟ್ಟ ಕಥಾನಕವನ್ನು ಓದುತ್ತಿದ್ದೆ.

ಇಬ್ಬರು ಭಿಕ್ಷುಕರು ವ್ಯಾಟಿಕನ್ ನಗರದ ದೊಡ್ಡ ಚರ್ಚೊಂದರ ಬಳಿ ಭಿಕ್ಷೆಗೆ ಕುಳಿತಿದ್ದರಂತೆ. ಒಬ್ಬನ ಹಿಂದೆ ಕ್ರಿಸ್ತನನ್ನು ಶಿಲುಬೆಗೆ ಏರಿಸಿ ಮೊಳೆ ಹೊಡೆಯುತ್ತಿದ್ದ ಕರುಣಾಮಯ ಚಿತ್ರ, ಇನ್ನೊಬ್ಬನ ಹಿಂದೆ ಒಂದು ಹಿಂದೂ ದೇವರ ಪಟ. ಇಗರ್ಜಿಗೆ ಬಂದ ಭಕ್ತರೆಲ್ಲ ಸಹಜವಾಗಿ ಕ್ರಿಸ್ತನ ಚಿತ್ರವಿರುವ ಭಿಕ್ಷುಕನಿಗೇ ಹಣ ನೀಡುತ್ತಿದ್ದರು. ಇನ್ನೊಬ್ಬ ಭಿಕ್ಷುಕನ ಪಾತ್ರೆಯಲ್ಲಿ ಅಷ್ಟಿಷ್ಟು ಚಿಲ್ಲರೆ ಕಾಸು ಮಾತ್ರ. ಇದನ್ನು ನೋಡಿದ ಭಾರತೀಯ ಪ್ರವಾಸಿ ಒಬ್ಬರು ಹಿಂದೂ ದೇವರ ಪಟ ಹೊಂದಿದ ಭಿಕ್ಷುಕನನ್ನು ಕೇಳಿದರಂತೆ “ಅಲ್ಲಯ್ಯ, ನಿನ್ನನ್ನು ನೋಡಿದರೆ ತೀರ ಮೂರ್ಖನಂತೆ ಕಾಣಿಸುತ್ತಿಲ್ಲ. ನೀನು ಈ ಕ್ರೈಸ್ತ ಧರ್ಮದ ಮುಖ್ಯ ಸ್ಥಾನದಲ್ಲಿ ಕುಳಿತು ಹಿಂದೂ ದೇವರ ಚಿತ್ರ ಹಾಕಿಕೊಂಡು ಕೂತರೆ ಏನು ಸಂಪಾದನೆಯಾದೀತು?” ಭಿಕ್ಷುಕ ನಕ್ಕು ಸುಮ್ಮನಾದನಂತೆ. ನಂತರದಲ್ಲಿ, ಸ್ಥಳೀಯ ಪ್ರವಾಸಿ ಗೈಡ್ ಒಬ್ಬ ಭಾರತೀಯ ಪ್ರವಾಸಿಯನ್ನು ಕಂಡು ನಸು ನಕ್ಕು ಹೇಳಿದನಂತೆ “ಸ್ವಾಮಿ, ಅವರಿಬ್ಬರೂ ಅಣ್ಣ ತಮ್ಮಂದಿರು; ಅವರ ವ್ಯಾಪಾರೀ ತಂತ್ರ ನಿಮಗೆ ಅರ್ಥವಾಗಲಿಲ್ಲ ಎಂದುಕೊಳ್ಳುತ್ತೇನೆ.”

ಅಡ್ವಾಣಿಯವರು ತುರ್ತು ಪರಿಸ್ಥಿತಿ ಮತ್ತೊಮ್ಮೆ ಬಂದೆರಗಲಿರುವ ಬಗ್ಗೆ ಭವಿಷ್ಯ ನುಡಿದಾಗ ಈ ಅಣ್ಣ ತಮ್ಮಂದಿರು ಯಾಕೋ ನೆನಪಾದರು.

ಅಂದ ಹಾಗೆ, ಈ ಭವಿಷ್ಯ ಹೇಳಿದ ಕೆಲವೇ ಗಂಟೆಗಳಲ್ಲಿ ಅಡ್ವಾಣಿಯವರಿಗೆ ಅವರು ಕಲ್ಪಿಸಿಕೊಳ್ಳಲೂ advani-sushma-jaitleyಸಾಧ್ಯವಾಗದ ಕಡೆಗಳಿಂದ ಹೂಗುಚ್ಛಗಳು ಬರತೊಡಗಿವೆ. ಬಹುತೇಕ ಪ್ರಮುಖ ಪತ್ರಿಕೆಗಳ ಸಂಪಾದಕೀಯಗಳು ಅಡ್ವಾಣಿಯವರು ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದ ದಯನೀಯ ಹದಿನೆಂಟು ತಿಂಗಳುಗಳ ತುರಂಗವಾಸದ ನೆನಪು ಮಾಡಿ ಕೊಟ್ಟಿವೆ. ಅನೇಕ ಬುದ್ಧಿಜೀವಿಗಳು, ಹೇಗೆ ಮೂಲಭೂತವಾಗಿ ಅಡ್ವಾಣಿಯವರು ಒಬ್ಬ ಪ್ರಜಾಪ್ರಭುತ್ವವಾದಿ ಮತ್ತು ಸಂವಿಧಾನದ ಮೂಲಭೂತ ಮೌಲ್ಯಗಳ ಬಗ್ಗೆ ಅತೀವ ಕಾಳಜಿ ಹೊಂದಿದವರು ಎಂಬ ಬಗ್ಗೆ ಅಧಾರ ಸಮೇತವಾಗಿ ತೆರೆದಿಟ್ಟಿದ್ದಾರೆ.

ಮೋದಿಯವರಂಥಯ ಒಬ್ಬ ಮೂಲಭೂತವಾದಿ ಕಟ್ಟರ್ ನಾಯಕನ ಮುಂದೆ ಅಡ್ವಾಣಿಯವರು ಶಿಲುಬೆಗೇರಿದ ದೈವ ಮಾನವನಂತೆ ಕಾಣಿಸತೊಡಗಿದ್ದಾರೆ.

ಅದೇನೇ ಇರಲಿ, ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಅಡ್ವಾಣಿಯವರ ಪಾತ್ರದ ಬಗ್ಗೆ ಚರ್ಚೆಯಾಗಬೇಕಾದ ಸಂದರ್ಭವಂತೂ ಒದಗಿ ಬಂದಿದೆ.

ನವೆಂಬರ್ ೮, ೧೯೨೭ ರಲ್ಲಿ ಕರಾಚಿಯಲ್ಲಿ ಜನಿಸಿದ ಅದ್ವಾನಿಯಯರು ಓದಿದ್ದು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ಸಂತ ಪ್ಯಾಟ್ರಿಕ್ ಶಾಲೆಯಲ್ಲಿ. ೧೯೪೨ ರಲ್ಲಿ ದೇಶದಾದ್ಯಂತ “ಕ್ವಿಟ್ ಇಂಡಿಯ” ಚಳುವಳಿಯ ಸಂದರ್ಭವಿದ್ದಾಗ ಅಡ್ವಾಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸೇರಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಅವರು ಜೈಲು ಸೇರಿದ ಅಥಾವ ಯಾವುದೇ ತೀವ್ರತಮ ಹೋರಾಟ ನಡೆಸಿದ ದಾಖಲೆಗಳೇನೂ ಇದ್ದಂತಿಲ್ಲ. ೧೯೪೩ ರಲ್ಲಿ ಅಹ್ಮದಾಬಾದ್ ಮತ್ತು ನಾಗಪುರಗಳಲ್ಲಿ RSS ನ ಆಫೀಸರ್ಸ್ ಟ್ರೇನಿಂಗ ಕ್ಯಾಂಪ್ (OTC) ತರಬೇತಿ ಮುಗಿಸಿ ಪ್ರಚಾರಕರಾಗಿ ತಮ್ಮ ಸಾರ್ವಜನಿಕ ಜೀವನ ಪ್ರಾರಂಭಿಸಿದರು. ೧೯೪೭ ರ ದೇಶ ವಿಭಜನೆಯ ಸಂದರ್ಭದಲ್ಲಿ ಅಡ್ವಾಣಿ RSS ನ ಕರಾಚಿಯ ನಗರ ಕಾರ್ಯದರ್ಶಿಯಾಗಿದ್ದರು.

ನಂತರದಲ್ಲಿ ೧೯೫೧ ರಲ್ಲಿ ಜನಸಂಘವನ್ನು ಸೇರಿದ ಅಡ್ವಾಣಿ ೧೯೭೩ ರಲ್ಲಿ ಕಾನಪುರದಲ್ಲಿ ನಡೆದ ಜನ ಸಂಘದ ರಾಷ್ಟ್ರೀಯ Advani-Rath-Yatraಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಅಧ್ಯಕ್ಷರಾಗಿ ನೇಮಕಗೊಂಡ ಹೊಸ್ತಿಲಲ್ಲಿ ಅಡ್ವಾಣಿ ಮಾಡಿದ ಮೊಟ್ಟ ಮೊದಲ ಕೆಲಸ ಪಾರ್ಟಿಯ ಆಗ್ರ ನೇತಾರರಾದ ಬಲರಾಜ್ ಮಧೋಕ್ ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದು. ಈ ಬಲರಾಜ್ ಮಧೋಕ್ ೧೯೬೬ ರಲ್ಲಿ ಜನ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು.ಅಷ್ಟೇ ಅಲ್ಲ, ೧೯೫೧ ರಲ್ಲಿ ಜನ ಸಂಘ ಸ್ಥಾಪನೆಯಾದಾಗ ಅದರ ಮೊದಲ ಸಂವಿಧಾನವನ್ನು ಬರೆದದ್ದೇ ಈ ಮಧೋಕ್. ಅಲ್ಲೊಂದು ಇಲ್ಲೊಂದು ಸೀಟು ಗೆಲ್ಲುತ್ತಿದ್ದ ಜನಸಂಘವನ್ನು ಕಟ್ಟಿ ಬೆಳೆಸಿ ೧೯೬೭ರ ಚುನಾವಣೆಯಲ್ಲಿ (ಕಾಂಗ್ರೆಸ್ ಉಚ್ಹ್ರಾಯ ಸ್ಥಿತಿಯಲ್ಲಿದ್ದಾಗ) ೩೫ ಲೋಕಸಭಾ ಸ್ಥಾನ ಗಳಿಸಿ ಕೊಟ್ಟವರು ಮಧೊಕ್. ಅಂದಿನ ಜನ ಸಂಘದ ಉನ್ನತ ನಾಯಕತ್ವ,ಅದರಲ್ಲೂ ವಾಜಪೇಯಿಯವರು, ಇಂದಿರಾ ಗಾಂಧಿಯವರ ಬಗ್ಗೆ ತೋರುತ್ತಿದ್ದ ಮೃದು ಧೋರಣೆ (ಬಾಂಗ್ಲಾದೇಶದ ಯುದ್ಧದ ಸಂದರ್ಭದಲ್ಲಿ ಇಂದಿರಾರನ್ನು ವಾಜಪೇಯಿ ಯವರು ದುರ್ಗೆ ಎಂದು ಸ್ತುತಿಸಿದ್ದು ನೆನಪಿಸಿಕೊಳ್ಳಿ) ಯನ್ನು ಕಟುವಾಗಿ ಟೀಕಿಸಿದ್ದ ಮಧೋಕ್ ರನ್ನು ಹೊರಹಾಕಲು ಅತೀ ಕಾತುರವಾಗಿದ್ದ ಅಡ್ವಾಣಿ – ವಾಜಪೇಯಿ ಬಣ ಅದನ್ನು ಸಮರ್ಥವಾಗಿ ಸಾಧಿಸಿತು. ಸುಮಾರು ತೊಂಬತ್ತೈದರ ಪ್ರಾಯದ ಬಲರಾಜ್ ಮಧೋಕ್ ಇಂದಿಗೂ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇಂದು ಅಡ್ವಾಣಿಯವರಿಗೆ ಒದಗಿ ಬಂದ ಪರಿಸ್ಥಿತಿಯನ್ನು ನೋಡಿ ಮಧೋಕ್ ಏನೆಂದು ಕೊಳ್ಳುತ್ತಿದ್ದಾರೋ ನೀವೇ ಊಹಿಸಿ.

೧೯೭೫ ರಲ್ಲಿ ತುರ್ತು ಪರಿಸ್ಥಿತಿಯ ಘೋಷಿತವಾದಾಗ ಜೈಲು ಸೇರಿದ ಅಗ್ರ ನಾಯಕರಲ್ಲಿ ಅಡ್ವಾಣಿ ಒಬ್ಬರು. ನಂತರದಲ್ಲಿ, ೧೯೭೭ರಲ್ಲಿ ಜನತಾ ಪಾರ್ಟಿ ಪ್ರಾರಂಭವಾದಾಗ ಅದರ ಸ್ಥಾಪಕ ಸದಸ್ಯರಷ್ಟೇ ಅಲ್ಲ, ಅದರ ಮೊದಲ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾದವರು ಅಡ್ವಾಣಿ. ಜನತಾ ಪಾರ್ಟಿ ಸರಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವರಾದ ಅಡ್ವಾಣಿಯವರಿಗೆ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಳ್ಳುವ ಬಹು ದೊಡ್ಡ ಸಂದರ್ಭ ಬಂದಿತ್ತು. “ದ್ವಿ ಸದಸ್ಯತ್ವದ” ಪ್ರಶ್ನೆ ಎದುರಾದಾಗ. ಚೀಟಿ ಬರೆದು ಪ್ರಮುಖರನ್ನು ಆಯ್ಕೆಯ ಮಾಡುವ advani-kanchi-seerವಿಧಾನ ಹೊಂದಿದ್ದ RSS ಸದಸ್ಯತ್ವ ಒಂದು ಕಡೆ, ಪ್ರಜಾತಂತ್ರ ವಿಧಾನದಿಂದ ಜನರ ಮುಖೇನ ಆಯ್ಕೆಯಾದ ಜನತಾ ಪಾರ್ಟಿಯ ನಾಯಕನ ಜವಾಬ್ದಾರಿ ಇನ್ನೊಂದೆಡೆ, ಎಂದಾದಾಗ, ಅಡ್ವಾಣಿ ಅಯ್ದುಕೊಂಡಿದ್ದು RSS ನ್ನು. ಅರ್ ಎಸ್ ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಎಂಬ ವಾದ ಮಂಡಿಸುವವರು ಈ ರಾಜಕೀಯ ಬೆಳವಣಿಗೆಗಳನ್ನು ಮರೆತು ಬಿಟ್ಟಿರಬೇಕು.

ಅಡ್ವಾಣಿ ಸ್ಪಷ್ಟವಾಗಿ ಪ್ರಜಾಪ್ರಭುತ್ವದ ಹಾದಿಯನ್ನು ಅರಿಸಿಕೊಂಡಿದ್ದರೆ ಪ್ರಜಾಪ್ರಭುತ್ವ ಗೆಲ್ಲುತ್ತಿತ್ತು. ತುರ್ತು ಪರಿಸ್ಥಿತಿ ಹೇರಿ ಜನರ ಹಕ್ಕನ್ನು ಕಸಿದುಕೊಂಡ ಇಂದಿರಾ ಸರಕಾರ ಅಥವಾ ಇನ್ಯಾವುದೇ ಜನತಂತ್ರ ವಿರೋಧಿ ಸರಕಾರ ದೇಶದಲ್ಲಿ ಜನತಂತ್ರವನ್ನು ಕೊಲ್ಲುವ ಭವಿಷ್ಯದಲ್ಲಿ ಯೋಚನೆ ಕೂಡ ಮಾಡುತ್ತಿರಲಿಲ್ಲ. ಆದರೆ, ವಾಜಪೇಯಿ ಮತ್ತು ಅಡ್ವಾಣಿ ಜನತಾ ಸರಕಾರಕ್ಕೆ ರಾಜಿನಾಮೆ ಕೊಟ್ಟು ‘ಚೀಟಿ’ ರಾಜಕೀಯಕ್ಕೆ ಜೈ ಎಂದರು. ಕಾಂಗ್ರೆಸ್ ನ ಹೈ ಕಮಾಂಡ್ ರಾಜಕಾರಣ ಮತ್ತು RSS ನ ರಿಮೋಟ್ ಕಂಟ್ರೋಲ್ ರಾಜಕಾರಣ ಎರಡೂ ಒಂದೇ ಎಂದು ಜನ ಅಂದೇ ತೀರ್ಮಾನಿಸಿದರು. ಈ ರೀತಿ, ತುರ್ತು ಪರಿಸ್ಥಿತಿಯನ್ನು ಕಂಡು ನೊಂದ ಜನತೆ ಕಟ್ಟಿದ ಪ್ರಜಾತಂತ್ರದ ಕೋಟೆಯನ್ನು ಒಳಗಿನಿಂದಲೇ ಒಡೆಯುವ ಕೆಲಸ ಶುರು ಮಾಡಿದ್ದು ಅಡ್ವಾಣಿ ಯವರು.

೧೯೮೦ ದಶಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮೂರು ಮಹಾ ಕೋಮುಪಾತಕ ಗಳಿಗೆ ಸಾಕ್ಷಿಯಾಯಿತು. indira-gandhiಮೊದಲು, ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಅಸ್ಸಾಂನ “ನೆಲ್ಲಿ ಕಗ್ಗೊಲೆಗಳು”, ಇಂದಿರಾ ಹತ್ಯೆಯ ನಂತರದ “ಸಿಖ್ ದೌರ್ಜನ್ಯ” ಮತ್ತು ೧೯೮೯ ರ ಭಾಗಲ್ಪುರ್ ಕೋಮು ದುರಂತ. ಇದಕ್ಕೆ ಸಾಥ್ ಕೊಡುವಂತೆ ರಾಜೀವ್ ಸರಕಾರ ಶಾಹ್ ಬಾನೋ ಪ್ರಕರಣದಲ್ಲಿ ಮುಸ್ಲಿಂ ಮೂಲಭೂತವಾದದ ಪರ ನಿಂತಿತು; ಅಲ್ಲದೆ ರಕ್ತವನ್ನು ರಕ್ತದಿಂದ ತೊಳೆಯಲು ಬಾಬರಿ ಮಸೀದಿಯ ಬೀಗದ ಕೈ ತೆಗೆಸಿತು.

ಹಿಂದೆ ೭೦ರ ದಶಕದಲ್ಲಿ ಪ್ರಜಾಪ್ರಭುತ್ವವನ್ನು ಆಯ್ದು ಕೊಂಡಿದ್ದಿದ್ದರೆ, ಈ ಕೋಮು ದ್ವೇಷದ ಸಂದರ್ಭದಲ್ಲಿ, ಅಡ್ವಾಣಿಯವರು ನೈಜ ಧರ್ಮ ನಿರಪೇಕ್ಷತೆಯನ್ನು ಉದ್ದೀಪಿಸುವ ಹೊಸ ರಾಜಕೀಯ ಕ್ರಾಂತಿಯ ಪ್ರವರ್ತಕರಾಗಬಹುದಿತ್ತು . ಆದರೆ, ರಾಜಕೀಯದಲ್ಲಿ ಧರ್ಮ ಬೆರೆಸಿ ಚೀಟಿ ರಾಜಕಾರಣ ಮಾಡುವ ಕಡೆ ಅವರು ಬಹು ಹಿಂದೆಯೇ ವಾಲಿದ್ದರಿಂದ, ದೇಶ ಒಂದು ಕಣ್ಣು ಕಳೆದುಕೊಂಡ ಸಂದರ್ಭದಲ್ಲಿ ಅಡ್ವಾಣಿ ರಥಯಾತ್ರೆ ಹೊರಟು ಇನ್ನೊಂದು ಕಣ್ಣು ಕಿತ್ತುವ ಕೆಲಸಕ್ಕೆ ಕೈ ಹಾಕಿದರು. ರಾಜೀವ್ ಬರಿ ಬೀಗ ತೆಗೆಸಿದರೆ ಅಡ್ವಾಣಿ ಮಸೀದಿಯನ್ನೇ ನೆಲಸಮ ಮಾಡಿದರು. ಅಂದು ಧ್ವಂಸಗೊಂಡಿದ್ದು ಮಸೀದಿ ಅಥವಾ ಮಂದಿರವಲ್ಲ, ನಮ್ಮ ದೇಶದ ಸಂವಿಧಾನ.

ಗುಜರಾತ್ ಗಲಭೆಯ ಸಂದರ್ಭದಲಿ ವಾಜಪೇಯಿಯವರು ರಾಜಧರ್ಮವನ್ನು ನೆನಪಿಸಿದ್ದು ಕೇವಲ ಮೊದಿಯವರಿಗಲ್ಲ; Bush_Vajpayee_Oval_Officeಅಡ್ವಾಣಿಯವರಿಗೆ ಕೂಡ. ಅಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಳ್ಳುವ ಕೊನೆಯ ಅವಕಾಶ ಅಡ್ವಾಣಿಯವರಿಗೆ ಒದಗಿ ಬಂದಿತ್ತು. ಅಡ್ವಾಣಿ ರಾಜಧರ್ಮವನ್ನು ರಕ್ಷಿಸುವ ಬದಲು ರಾಜನನ್ನು ರಕ್ಷಿಸುವುದೇ ಧರ್ಮವನ್ನಾಗಿ ಮಾಡಿ ಕೊಂಡರು.

ತುರ್ತು ಪರಿಸ್ಥಿತಿ ನಮ್ಮ ದೇಶದಲ್ಲಿ ಮತ್ತೆ ಬರುವ ಬಗ್ಗೆ ಭವಿಷ್ಯ ಹೇಳುವ ಅಡ್ವಾಣಿಯವರು, ಅಯೋಧ್ಯ ಮಾದರಿಯ ಅಥವಾ ಗುಜರಾತ್ ಮಾಡೆಲ್ ನ ಇನ್ನೊಂದು ದೊಡ್ಡ ಕೋಮು ದಳ್ಳುರಿ ನಡೆಯಬಹುದೇ ಎಂಬ ಬಗ್ಗೆಯೂ ಶಕುನ ಹೇಳಬಹುದಿತ್ತು.

ಭಾರತದಲ್ಲಿ ಕೆಲವೇ ವರ್ಷವಿದ್ದ ತುರ್ತು ಪರಿಸ್ಥಿತಿ ಮತ್ತು ಕೋಮು ದಳ್ಳುರಿಯ ವಾತಾವರಣ ಪಾಕಿಸ್ತಾನದಲ್ಲಿ ಇಂದು ಎಲ್ಲ ದಿನವೂ ಇರುತ್ತದೆ. ಈ ಮೂಲ (ಭೂತ) ವ್ಯಾಧಿಗೆ ಕಾರಣವಾದ ಭಾರತ ಉಪಖಂಡ ಕಂಡ ಅತ್ಯಂತ ಹೇಯ ಕೋಮುವಾದಿ, ಸಮಯ ಸಾಧಕ ಜಿನ್ನಾ ಅಡ್ವಾಣಿಯವರ ಆದರ್ಶ. ದಶಕಗಳ ಸ್ವಾತಂತ್ರ್ಯ ಹೋರಾಟದ ಕಾವಿನ ಫಲವಾಗಿ ಪ್ರಜಾಪ್ರಭುತ್ವದ ನೆಲೆಗೆ ಮೆಲ್ಲನೆ ಹೊರಳುತ್ತಿದ್ದ ಮುಸ್ಲಿಂ ಜನಮಾನಸದಲ್ಲಿ ವಿಷ ಬೀಜ ಬಿತ್ತಿದ್ದು ಜಿನ್ನಾ. ಇಂದು ಮೂಲಭೂತವಾದಿಗಳ ಕಪಿ ಮುಷ್ಠಿಯಲ್ಲಿ ಸಿಕ್ಕು ನರಳುತ್ತಿರುವ ಪಾಕಿಸ್ತಾನದಲ್ಲೇ, ಪ್ರತಿ ಜಾಗೃತ ಪ್ರಜೆಯೂ ಶಪಿಸುವ ಜಿನ್ನಾರಂಥಹವರನ್ನು ಹಾಡಿ ಹೊಗಳಿದ ಅಡ್ವಾಣಿ ಮನಸ್ಥಿತಿ ಎಂಥಹದ್ದು? ಜಿನ್ನಾ ಹೊಗಳಿಕೆಯಿಂದ ಪಾಕಿಸ್ತಾನ ರಚನೆಯ ಉದ್ದೇಶಕ್ಕೆ ಪಾವಿತ್ರ್ಯ ತಂದು ಕೊಟ್ಟಂತೆ ಆಗಲಿಲ್ಲವೇ?

ಈ ಘಟನೆಯಾದ ನಂತರ ಅಡ್ವಾಣಿಯವರ ಪಟ್ಟ ಶಿಷ್ಯ ಜಸ್ವಂತ್ ಸಿಂಗ್ ಪಾಕಿಸ್ತಾನದ ನಿರ್ಮಾಣಕ್ಕೆ ನಮ್ಮ ಜನರೇ ಕಾರಣ, Advaniಜಿನ್ನಾ ಏನೂ ತಪ್ಪು ಮಾಡಲಿಲ್ಲ ಎಂಬಂತೆ ಪುಸ್ತಕ ಬರೆದರು. ಈ ಪುಸ್ತಕದ ಮುನ್ನುಡಿಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಗ್ರಂಥಾಲಯದ ಮುಖ್ಯಸ್ಥರನ್ನು ಮನಸೋ ಇಚ್ಛೆ ಸ್ಮರಿಸಿ ಜಿನ್ನಾ ಬಗೆಗಿನ ಪಾಕಿಸ್ತಾನದಲ್ಲಿರುವ ‘ಆಕರ ಸಾಮಗ್ರಿ’ ಕೊಟ್ಟು ಉಪಕರಿಸಿದ ಬಗ್ಗೆ ವಂದನೆ ಬೇರೆ ಸಲ್ಲಿಸುತ್ತಾರೆ! ಈ ಪುಸ್ತಕ ಬರೆದದ್ದಕ್ಕೆ ಭಾರತೀಯ ಜನತಾ ಪಾರ್ಟಿಯಿಂದ ಹೊರದೂಡಲ್ಪಟ್ಟ ಜಸ್ವಂತ್ ರನ್ನು ಪ್ರೀತಿಯಿಂದ ಆಲಂಗಿಸಿ ಮತ್ತೆ ಕರೆ ತಂದದ್ದು ಅಡ್ವಾಣಿ ಯವರು.

೨೦೧೩ ರಲ್ಲಿ ತಮ್ಮ ರಥಯಾತ್ರೆಯ ಸಂಪೂರ್ಣ ಸಂಯೋಜಕ ಮತ್ತು ಪ್ರೀತಿಯ ಶಿಷ್ಯ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜಿನಾಮೆ ಕೊಟ್ಟಿದ್ದು ಪ್ರಜಾತಂತ್ರದ ರಕ್ಷಣೆಗೋ ಅಥವಾ ತಮ್ಮ ಸ್ವಾರ್ಥ ಸಾಧನೆಗೋ ಎಂಬುದು ಎಲ್ಲರಿಗಿಂತ ಹೆಚ್ಚು ಅಡ್ವಾಣಿಯವರಿಗೇ ಗೊತ್ತಿದೆ. ಇಂದು ಕೂಡ, ತಮ್ಮ ಹಲವು ಶಿಷ್ಯೋತ್ತಮರನ್ನು ಲಲಿತ್ ಮೋದಿ ಹಗರಣದಲ್ಲಿ ಸಿಲುಕಿಸಲು ಸರಕಾರ ಮತ್ತು ಪಕ್ಷದ ಒಳಗಿನಿಂದಲೇ ಪ್ರಯತ್ನ ನಡೆಯುತ್ತಿರುವ ಬಗ್ಗೆ ಹತಾಶರಾಗಿರುವ ಅಡ್ವಾಣಿಯವರಿಗೆ ಏಕಾ ಏಕಿ ತುರ್ತು ಪರಿಸ್ಥಿತಿ ನೆನಪಾಗುತ್ತಿವೆ.

ಇಂದು ಸಂಘ ಪರಿವಾರಕ್ಕೆ ಅಡ್ವಾಣಿ “ನಮ್ಮವರಲ್ಲ” ಮತ್ತು ಒಂದು ರೀತಿಯಲ್ಲಿ “ತಟಸ್ಥ ಮುತ್ಸದ್ದಿ” ಎಂದು ಬಿಂಬಿಸಿ, ನಾಳೆಗೆ ರಾಷ್ಟ್ರಪತಿ ಹುದ್ದೆಗೇರಿಸುವ ಹಾದಿಯನ್ನು ಸುಗಮಗೊಳಿಸುವ ಅಗತ್ಯತೆ ಇದೆ. ಹೇಗೆ ವಾಜಪೇಯಿಯವರನ್ನು “ಸರ್ವ ಸಂಗ ಪರಿತ್ಯಾಗಿ – ತಟಸ್ಥ” ಇತ್ಯಾದಿ ಯಾಗಿ ಬಿಂಬಿಸಿ, ಹೊಂದಾಣಿಕೆ ರಾಜಕಾರಣದಲ್ಲಿ ಜಾರ್ಜ್, ಮಮತಾ, ಫಾರೂಕ್ ಅಬ್ದುಲ್ಲಾ ಮತ್ತು ನಿತೀಶ್ ರನ್ನು ಸೆಳೆಯಲಾಯಿತೋ, ಹಾಗೆಯೇ ಇಂದು ಅಡ್ವಾಣಿಯವರಿಗೆ ಒಂದು ಮುತ್ಸದ್ದಿ ಪಟ್ಟ ಕಟ್ಟಿ ಸರ್ವಾನುಮತ ಕೊಡಿಸುವ ಅನಿವಾರ್ಯತೆ ಸಂಘ ಪರಿವಾರಕ್ಕಿದೆ.

ಒಂದು ನಾಟಕ ಕಂಪನಿಯವರು ದರ್ಮರಾಜ, ಕೃಷ್ಣ, ಮತ್ತು ವಿರೋಧಿ ಪಾಳಯದ ದುರ್ಯೋಧನ ಭೀಷ್ಮ ಮತ್ತು ದ್ರೋಣ ಮತ್ತಿತರನ್ನೂ ತಮ್ಮ ಕಂಪನಿಯ ಪಾತ್ರಧಾರಿ ವರ್ಗದಿಂದಲೇ ಅರಿಸುತ್ತಾರೆಯೇ ವಿನಃ ತಮ್ಮ ಪ್ರತಿ ಸ್ಪರ್ಧಿ ನಾಟಕ ಮಂಡಳಿಗಳ ಬಳಿ ಹೋಗುವುದಿಲ್ಲ. ಭಾರತೀಯ ಜನತಾ ಪಾರ್ಟಿ ಈ ಪಾಠವನ್ನು ಕಲಿತದ್ದು ಕಾಂಗ್ರೆಸ್ ನಿಂದ. ಒಂದು ಕಡೆ ಕರಣ್ ಸಿಂಗ್ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ರಾಗಿದ್ದು ಕೊಂಡೆ ಕಾಂಗ್ರೆಸ್ ನಲ್ಲೂ ಇದ್ದರೋ ಹಾಗೆ ಮಣಿಶಂಕರ್ ಅಯ್ಯರ್, ಏ. ಕೆ. ಅಂತೋನಿ ತರಹದ ‘ಎಡ’ ಗಡೆ ವಾಲುವವರೂ ಜತೆಯಲ್ಲೇ ಇದ್ದರು. ಸಾಕ್ಷಿ ಮಹಾರಾಜ್, ಯೋಗಿ ಅಡಿತ್ಯನಾಥ್ ರಂಥವರ ಕಟ್ಟರ್ ಹಿಂದುತ್ವವನ್ನು ಮರೆಮಾಚಲು ತಮ್ಮದೇ ನಾಯಕರು ಭಿನ್ನ ರಾಗ ಹಾಡಿ ತಮ್ಮ ಪಕ್ಷದ ಸಮರ್ಥಕರ ಇನ್ನೊಂದು ವಿಭಾಗದವನ್ನು ರಂಜಿಸುವುದೂ ಒಂದು ರೀತಿಯಲ್ಲಿ ಅನಿವಾರ್ಯ. ಸಹಕರಿಸ ಬೇಕಾಗಿರುವುದು ಅಡ್ವಾಣಿ ಯವರ ‘ತುರ್ತು ಪರಿಸ್ಥಿತಿ’ ಕೂಡ.

ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ಕೇವಲ ಭಾರತದ ಮಟ್ಟಿಗೆ ಮಾತ್ರವಲ್ಲ ಇಡೀ ಪ್ರಪಂಚದ ಪ್ರಜಾತಂತ್ರದ ಅಳಿವು-ಅಳಿವುಗಳ ಮಧ್ಯದ ಹೋರಾಟವಾಗಿತ್ತು. ನಲವತ್ತು ವರ್ಷಗಳ ನಂತರವಷ್ಟೇ ಅಲ್ಲ ಶತಮಾನಗಳ ನಂತರವೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ನಡೆದ ಈ ಜನಪರ ಹೋರಾಟದ ನೆನಪು ನಮ್ಮಲ್ಲಿ ಹಸಿರಾಗಿ ಉಳಿಯುತ್ತದೆ. ಹಾಗೆಯೇ, ನಂತರದ ದಿನಗಳಲ್ಲಿ, narender_modi_rssನಮ್ಮ ದೇಶದ ಸಾಮಾನ್ಯ ಜನತೆ ಒಟ್ಟಾಗಿ ಮತ್ತು ಪರ್ಯಾಯವಾಗಿ ಕಟ್ಟಿದ ಜನತಾ ಕೋಟೆ ಯನ್ನು ಒಳಗಿಂದಲೇ ಯಾರು ಕೆಡವಿದರು, ಯಾರು ಯಾವ ರಾಜಕಾರಣವನ್ನು ಆಯ್ಕೆ ಮಾಡಿಕೊಂಡರು ಎಂಬುದು ಕೂಡ ಸುಲಭಕ್ಕೆ ಮರೆಯುವಂತಹದ್ದಲ್ಲ.

ಎಲ್ಲಿಯ ತನಕ ಈ ದೇಶದಲ್ಲಿ ಸಿದ್ಧಾಂತ ಆಧಾರಿತ ರಾಜಕಾರಣದ ಬದಲು ವ್ಯಕ್ತಿ ಪೂಜೆ ಇರುತ್ತದೋ, ಧರ್ಮವನ್ನು ಅಸ್ತ್ರವಾಗಿ ಬಳಸಿ ಒಡೆದು ಆಳುವ ರಾಜಕಾರಣ ಇರುತ್ತದೋ, ನಮ್ಮದೇ ಜನರ ನೆರಳು ಬಿದ್ದರೇ ಸಾಕು ಕೊಂದು ಬಿಡುವ ಮನಸ್ಥಿತಿ ಇರುತ್ತದೋ, ಅಲ್ಲಿಯವರೆಗೆ ತುರ್ತು ಪರಿಸ್ಥಿತಿಯ ಭೀತಿ ತಪ್ಪಿದ್ದಲ್ಲ.

ಈ ಸತ್ಯ ಎಲ್ಲರಿಗಿಂತ ಚೆನ್ನಾಗಿ ಅಡ್ವಾಣಿಯವರಿ ಗೇ ಅನುಭವ ವೇದ್ಯ.

2 thoughts on “ಅಡ್ವಾಣಿಯವರ “ತುರ್ತು ಪರಿಸ್ಥಿತಿ”

  1. mallikarjun

    ದೇಶದಲ್ಲಿ ಮತ್ತೆ ತುತು‍್ ಪರಿಸ್ಥಿತಿ ಬಂದರೂ ಬರಬಹುದು ಎಂದು ಅಡ್ವಾಣಿ ಅವರು ಹೇಳಿದ್ದು, ಕನಾ‍್ಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಎಲ್ಲ ಕೋಸ‍್ಗಗಳ ಮಾನ್ಯತೆ ರದ್ದಾಗಿದ್ದು ಒಂದೇ ದಿನ ಹೊರ ಬಿದ್ದ ತಾಜಾ ಸುದ್ದಿಗಳಾದರೂ ಯಾವ ಮಾಧ್ಯಮಗಳು, ವಿಮಶ‍್ಕರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅಡ್ವಾಣಿ ಅವರ ಸುದ್ದಿಯನ್ನೆ ಗಂಭೀರವಾಗಿ ತೆಗೆದುಕೊಂಡರು. ಈ ವಿಚಾರದಿಂದ ಯಾರಿಗೂ ಏನೂ ಲಾಭವಿಲ್ಲ. ಆದರೆ ಕೋಸ್‍‍್ಗಳ ಮಾನ್ಯತೆ ರದ್ದಾದ್ದರಿಂದ 2 ಲಕ್ಷ ವಿದ್ಯಾಥಿ‍್ಗಳ ಭವಿಷ್ಯ ಅತಂತ್ರವಾಗಿದೆ. ಅದ‍ನ್ನು ಯಾಕೆ ವಿಚಾರಿಸಬಾರು. ಬೇಡದಿರೋದನ್ನೆ ಇಷ್ಟ ಪಡೋದದು ಯಾಕೆ?

    Reply
  2. Anonymous

    “ಇಂದು ಸಂಘ ಪರಿವಾರಕ್ಕೆ ಅಡ್ವಾಣಿ “ನಮ್ಮವರಲ್ಲ” ಮತ್ತು ಒಂದು ರೀತಿಯಲ್ಲಿ “ತಟಸ್ಥ ಮುತ್ಸದ್ದಿ” ಎಂದು ಬಿಂಬಿಸಿ, ನಾಳೆಗೆ ರಾಷ್ಟ್ರಪತಿ ಹುದ್ದೆಗೇರಿಸುವ ಹಾದಿಯನ್ನು ಸುಗಮಗೊಳಿಸುವ ಅಗತ್ಯತೆ ಇದೆ.”, I liked this!!!

    Reply

Leave a Reply

Your email address will not be published. Required fields are marked *