ಅನ್ನ ಹಾಕಿದ ‘ತಪ್ಪಿ’ಗೆ ದಂಡ ಕಟ್ಟಿದವರು!

– ಜೀವಿ

ಅದೊಂದು ಪುಟ್ಟ ಗ್ರಾಮ. 350 ಕುಟುಂಬ ವಾಸವಿರುವ ಹಳ್ಳಿ. ಅದರಲ್ಲಿ 25 ಕುಟುಂಬ ದಲಿತರದ್ದು, ಉಳಿದವರು ಮೇಲ್ಜಾತಿಯವರು. ದಲಿತರಿಗೆ ಊರಿನ ದೇಗುಲ ಮತ್ತು ಮೇಲ್ಜಾತಿಯವರ ಮನೆಗಳಿಗೆ ಪ್ರವೇಶ ನಿಷೇಧ ಇದ್ದೇ ಇತ್ತು. ಪಾತ್ರೆ-ಪಗಡೆ ಮುಟ್ಟುವಂತಿರಲಿಲ್ಲ. ಮೇಲ್ಜಾತಿಯವರು ಬಳಸುತ್ತಿದ್ದ ಬಾವಿ ನೀರು ಕೂಡ ದಲಿತರ ಬಾಯಾರಿಕೆ ನೀಗಿಸುತ್ತಿರಲಿಲ್ಲ. ದಲಿತ ಕೇರಿಯ ದೇವರಾಜ ಎಸ್‌ಎಸ್‌ಎಲ್‌ಸಿಯನ್ನು ಎರಡು-ಮೂರು ಕಂತಿನಲ್ಲಿ ಪಾಸು ಮಾಡಿದ್ದ. ಕೇರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ಏರಿದ್ದ ಕೀರ್ತಿ ಅವನದಾಗಿತ್ತು. ಪಟ್ಟಣಕ್ಕೆ ಒಟ್ಟಾಗಿ ಕಾಲೇಜಿಗೆ ಹೋಗುತ್ತಿದ್ದ ಕಾರಣ ಅದೇ dalit_pantherಊರಿನ ಮೇಲ್ವರ್ಗದ ಪುಟ್ಟನಂಜ, ದೊರೆ ಮತ್ತು ಶನೇಶ ಜೊತೆ ಸ್ನೇಹ ಬೆಳೆದಿತ್ತು. ಊರಿನಲ್ಲಿ ಅಸ್ಪಶ್ಯತೆ ಆಚರಣೆ ಇದ್ದರೂ ಅದನ್ನೂ ಮೀರಿ ಈ ಮೂವರ ಸ್ನೇಹ ಬೆಳೆದಿತ್ತು. ಪುಟ್ಟನಂಜ, ದೊರೆ ಮತ್ತು ಶನೇಶ ದಲಿತ ಯುವಕ ದೇವರಾಜನ ಮನೆಗೆ ಆಗಾಗ ಬಂದು ಹೋಗುವುದು ಸಾಮಾನ್ಯವಾಗಿತ್ತು.

ಅದೊಂದು ದಿನ ದಲಿತ ಕೇರಿಯಲ್ಲ್ಲಿ ಸಂಭ್ರಮ ಮನೆ ಮಾಡಿತ್ತು. ಗುಂಡಯ್ಯನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಸಂಭ್ರಮ ದಲಿತ ಕೇರಿಯ 25 ಮನೆಯಲ್ಲೂ ಪಾಲು ಪಡೆದಿತ್ತು. ಮಗು ಹುಟ್ಟಿದ ಜಾತಕ ಫಲ ತಿಳಿದು ಅದಕ್ಕೊಂದು ಹೆಸರಿಡಲು ನಿರ್ಧರಿಸಿದ ಗುಂಡಯ್ಯ, ಮರುದಿನ ಹೊತ್ತು ಮೂಡುವ ಮುನ್ನ ಪಕ್ಕದೂರಿನ ಅಯ್ನರ್ ಮನೆ ಬಾಗಿಲಲ್ಲಿ ಕುಳಿತ. ಮಗು ಹುಟ್ಟಿದ ದಿನ, ಗಳಿಗೆ ಎಲ್ಲವನ್ನು ನೋಡಿದ ಅಯ್ನರು ಶನಿವಾರ ದಿನದಂದು ಮಗುವಿಗೆ ರೂಪ ಅಂತ ಹೆಸರಿಡಲು ಆಜ್ಞೆ ಮಾಡಿದರು.

ಮುಂದಿನ ಶನಿವಾರ ಬಂದೇ ಬಿಟ್ಟಿತು, ಹೊತ್ತು ಇಳಿಯಲು ಆರಂಭಿಸುತ್ತಿದ್ದಂತೆ ಮನೆಯ ಮುಂದೆ ಒಲೆ ಹಾಕಿ ಅಡುಗೆ ತಯಾರಿಯಲ್ಲಿ ಗಂಡಸರು ತೊಡಗಿದರು. ಮಹಿಳೆಯರು ಮಕ್ಕಳು ಗುಂಡಯ್ಯನ ಮನೆ ಸೇರಿದರು. ಸೋಬಾನೆ ಪದಗಳು ಸಾಲು ಕಟ್ಟಿ ಬಂದವು. ಕಂಚಿನ ತಟ್ಟೆಯಲ್ಲಿದ್ದ ಸೇರು ಬೆಣ್ಣೆ ಉಂಡೆ ಮಗುವಿನ ಮೂತಿ ಸೇರುತ್ತಿತ್ತು. ಅದು ಖಾಲಿ ಆಗುವ ಹೊತ್ತಿಗೆ ಮಗುವಿನ ಮುಖದ ರೂಪ ಬದಲಾಗಿತ್ತು. ಆದರೆ ರೂಪ ಎಂಬ ಹೆಸರು ನಾಮಕರಣಗೊಂಡಿತ್ತು. ಕೇರಿಯಲ್ಲಿ ಸ್ವಲ್ಪ ದೊಡ್ಡದು ಎನ್ನುವಂತಿದ್ದ ದೇವರಾಜನ ಮನೆಯಲ್ಲಿ ಎಲ್ಲರು ಊಟಕ್ಕೆ ಕುಳಿತರು. ಹೆಂಗಸು-ಮಕ್ಕಳ ಊಟ ಮುಗಿದು ಕೊನೆಯದಾಗಿ ಊರಿನ ಹಿರಿಯರು, ಯುವಕರು ಊಟಕ್ಕೆ ಕುಳಿತರು.

ಅಷ್ಟೊತ್ತಿಗೆ ಅಲ್ಲಿಗೆ ಪುಟ್ಟನಂಜ, ದೊರೆ ಮತ್ತು ಶನೇಶ ಬಂದರು. ಆಗಾಗ ದೇವರಾಜನ ಮನೆಗೆ ಮೂವರು ಸ್ನೇಹಿತರು ಬಂದು ಹೋಗುತ್ತಿದ್ದರಿಂದ ಅದರಲ್ಲಿ ವಿಶೇಷ ಏನು ಇರಲಿಲ್ಲ. ಊಟದ ಸಮಯಕ್ಕೆ ಬಂದ ಕಾರಣಕ್ಕೆ ಬನ್ನಿ ಗೌಡ್ರೆ ಊಟ ಮಾಡಿ ಎಂದು ಸೌಜನ್ಯಕ್ಕೆ ಕೆಲವರು ಯುವಕರು ಕರೆದರು. ಹೊಲೆರ ಮನೆಲಿ ಅವರು ಊಟ ಮಾಡಕಿಲ್ಲ, ಸುಮ್ನೆ ಊಟ ಮಾಡಿ ಎಂದು ಹಿರಿಯರು ಗಧರಿಸಿದರು.

ಮೇಲ್ಜಾತಿಯ ಮೂವರು ಕಾಲೇಜು ಮೆಟ್ಟಿಲೇರಿದ್ದರಿಂದ ಒಂದಿಷ್ಟು ತಿಳುವಳಿಕೆ ಉಳ್ಳವರಂತೆ ಮಾತನಾಡಿ, ಊಟ ಮಾಡಿದರೆ ತಪ್ಪೇನು ಇಲ್ಲ, ನೀವು ಬಡಿಸಿದರೆ ಊಟ ಮಾಡಲು ನಾವು ಸಿದ್ದ ಎಂದರು. ಅವರೇ ಊಟ ಮಾಡ್ತೀವಿ ಅಂದ್ಮೇಲೆ ನಮ್ದೇನು ತಕರಾರು ಎಂದುಕೊಂಡು ಬನ್ನಿ ಸ್ವಾಮಿ ಎಂದು ಕೈನೀರು ಕೊಟ್ಟು ಊಟ ಬಡಿಸೇ ಬಿಟ್ಟರು. ದೇವರಾಜನನ್ನು ನೋಡಲು ಬಂದ ಮೂವರು ಮೇಲ್ಜಾತಿ ದಲಿತ ಕೇರಿಯ ಮನೇಲಿ ಮೊದಲ ಬಾರಿಗೆ ಊಟ ಮಾಡಿ ತಮ್ಮ ಮನೆ ಸೇರಿಕೊಂಡರು. ಈ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದ ದಲಿತರು ತಮ್ಮಷ್ಟಕ್ಕೆ ತಾವು ಸುಮ್ಮನಾದರು.

ದಲಿತ ಕೇರಿಯ ಲಕ್ಕಜ್ಜನ ಮಗ ಸ್ವಾಮಿಗೆ ಆಗಿನ್ನು ಮೀಸೆ ಚಿಗುರುತ್ತಿದ್ದ ಕಾಲ. ಅಂಗನವಾಡಿಯಲ್ಲೆ ಓದು ನಿಲ್ಲಿಸಿದ್ದ ಸ್ವಾಮಿ, ಗೌಡರ ಮನೆ dalit_panther2ಜೀತಕ್ಕೆ ಸೇರಿ ಸದ್ಯ ಮುಕ್ತಿ ಹೊಂದಿ ಕೂಲಿ ಕೆಲಸ ಮಾಡಿಕೊಂಡಿದ್ದ. ಏತ ನೀರಾವರಿ ಯೋಜನೆಯ ಕಾಲುವೆ ತೆಗೆಯುವ ಕೆಲಸ ಊರಿನ ಜನರ ಕೂಲಿಗೆ ಆಧಾರವಾಗಿತ್ತು. ಕೆಲಸಕ್ಕೆ ರಜೆ ಇದ್ದ ವೇಳೆ ಮೇಲ್ಜಾತಿಯ ಡೊಳ್ಳಪ್ಪನ ಜೊತೆ ಕುರಿ ಮೇಯಿಸಲು ಬೆಟ್ಟಕ್ಕೆ ಹೋಗುತ್ತಿದ್ದ. ನಾಮಕರಣ ಕಾರ್ಯ ಮುಗಿದು ಮೂರ‌್ನಾಲ್ಕು ದಿನ ಕಳೆದಿತ್ತು. ಬೆಟ್ಟದಲ್ಲಿ ಕುರಿಗಳ ಜೊತೆ ಸುತ್ತಾಡಿ ಬಳಲಿದ್ದ ಸ್ವಾಮಿ, ಡೊಳ್ಳಪ್ಪನ ಟಿಫನ್ ಬಾಕ್ಸ್‌ನಲ್ಲಿ ತಂದಿದ್ದ ನೀರು ಕೇಳಿದ.

ಟಿಫನ್ ಬಾಕ್ಸ್‌ನಲ್ಲಿ ಮೊದಲೇ ನೀರು ಕಡಿಮೆ ಇತ್ತು. ಬಾಕ್ಸ್ ಓಪನ್ ಮಾಡಿದ ಡೊಳ್ಳಪ್ಪ ಎರಡೂ ಕೈ ಹಿಡಿ ಎಂದ, ಬಾಕ್ಸ್ ಸ್ವಾಮಿ ದೇಹಕ್ಕೆ ಸೋಕದಂತೆ ಮೇಲಿಂದಲೇ ನೀರನ್ನು ಕೈಗೆ ಹನಿಕಿಸಿದ. ಅದರಲ್ಲಿ ಸ್ವಲ್ಪ ಕೆಳಕ್ಕೆ ಬಿದ್ದು ಒಂದೆರಡು ತೊಟ್ಟನ್ನು ಮಾತ್ರ ಸ್ವಾಮಿ ನಾಲಿಗೆ ಹೀರಿ ಕೊಂಡಿತು. ಬಾಯಾರಿ ಬೆಂಡಾಗಿದ್ದ ಸ್ವಾಮಿ, ನನ್ನ ಕೈಗೆ ಬಾಕ್ಸ್ ಕೊಟ್ಟಿದ್ದರೆ ಒಂದೆರಡು ಗುಟುಕು ನೀರಾದರೂ ಕುಡಿಯುತ್ತಿದ್ದೆ ಎಂದ. ಡೊಳ್ಳಪ್ಪನ ಕೋಪ ನೆತ್ತಿಗೇರಿತು ಓ..ಹೋ.. ನಿಮ್ದು ಜಾಸ್ತಿ ಆಯ್ತು, ಯಾಕೆ,,,? ಮನೆಗೆ ಬಂದ್ಬಿಡು, ಒಳಗ್ ಕರೆದು ಹಿಟ್ ಇಕ್ತೀನಿ. ನನ್ನ ಮಕ್ಳಾ ಜಾಸ್ತಿ ಆಯ್ತು ನಿಮ್ದು ಎಂದು ಸಿಡಿಮಿಡಿಗೊಂಡ.

ಅಯ್ಯ ಶಿವನೆ ನೀರ್ ಕೇಳಿದ್ದಕ್ಕೆ ಇಷ್ಟ್ಯಾಕ್ ಸಿಟ್ಟಾಗ್ತಿ ರಾಜಣ್ಣ, ಬಾಕ್ಸ್ ಮುಟ್ಟಿದ್ರೆ ಏನಾಪ್ಪ ಆಯ್ತದೆ. ಮೊನ್ನ ನಮ್ ಗುಂಡಯ್ಯನ ಮನೆ ನಾಮಕರಣದಲ್ಲಿ ಪುಟ್ನಂಜ, ಶನೇಶ ಊಟನೇ ಮಾಡಿದ್ರು. ಅವರಿಗೇನಾಗಿದೆ? ಚೆನ್ನಾಗೇ ಅವ್ರೆ ಎಂದ ಸ್ವಾಮಿ.

ಎಲ್ಲೋ ಕುರಿಮಂದೆ ಕಡೆ ಗಮನ ಇಟ್ಟಿದ್ದ ಡೊಳ್ಳಪ್ಪ, ಒಮ್ಮೆಲೆ ತಿರುಗಿ ಏನು!? ಪುಟ್ನಂಜ ಗುಂಡನ ಮನೆ ಕಾರ್ಯದಲ್ಲಿ ಊಟ ಮಾಡಿದ್ನಾ? ಎಂದು ಗಂಭೀರವಾಗಿ ಕೇಳಿದ. ಪಿಸುಮಾತಿನಲ್ಲಿ ಸ್ವಾಮಿಯನ್ನು ಹತ್ತಿರಕ್ಕೆ ಕರೆದು ಅಂದು ನಡೆದ ಊಟದ ಪ್ರಸಂಗವನ್ನು ಕೇಳಿಕೊಂಡ. ಇದರಿಂದಾಗುವ ಅನಾಹುತ ಅರಿಯದ ಸ್ವಾಮಿ ಎಲ್ಲವನ್ನು ಕಡ್ಡಿಲಿ ಬರೆದಂತೆ ಹೇಳಿಬಿಟ್ಟ.

ಸಂಜೆ ಕುರಿಗಳನ್ನು ಕೊಟ್ಟಿಗೆಗೆ ಮುಟ್ಟಿಸಿ ಊರ ಮುಂದಿನ ಬಸವಣ್ಣನ ಗುಡಿ ಮುಂದೆ ಡೊಳ್ಳಪ್ಪ ಬಂದು ಕುಳಿತ. ಅಲ್ಲಿ ಕುಳಿತಿದ್ದ ಊರಿನ ಒಂದಿಬ್ಬರು ಹಿರಿಯರ ಕಿವಿಗೆ ಹೊಲೆರ ಮನೆಲಿ ಮೇಲ್ಜಾತಿಯ ಹುಡುಗರು ಊಟ ಮಾಡಿದ ವಿಷಯವನ್ನು ಊದಿದ. ನಾಳೆ ಬೆಳಕು ಹರಿದು ಸೂರ್ಯ ಮುಳುಗುವ ಹೊತ್ತಿಗೆ ಊರಿನ ಎಲ್ಲ ಮೇಲ್ಜಾತಿಯವರ ಕಿವಿಗೂ ವಿಷಯ ಬಿತ್ತು.

ಮರುದಿನ ರಾತ್ರಿ ಬಸವಣ್ಣನ ಗುಡಿ ಮುಂದೆ ಪಂಚಾಯ್ತಿ ಸೇರಿಕೊಂಡಿತು. ಕರೀರ‌್ಲಾ ಹೊಲಿ ನನ್ನ ಮಕ್ಕಳ್ನಾ ಎಂದು ಹುಕ್ಕುಂ ಕೂಡ ಆಯಿತು. ಅಷ್ಟೊತ್ತಿಗಾಗಲೇ ಊಟದ ವಿಷಯ ಎಲ್ಲರಿಗೂ ಗೊತ್ತಾಗಿ ಕೆಂಡ ಕಾರುತ್ತಿರುವ ವಿಷಯ ದಲಿತರಿಗೂ ತಿಳಿದಿತ್ತು. ರಾತ್ರಿ ಪಂಚಾಯ್ತಿ ಇರುವ ವಿಷಯ ತಿಳಿದು ಕೆಲವರು ಊರು ಖಾಲಿ ಮಾಡುವ ಮಾತನಾಡಿದ್ದರು. ಆದರೆ ಎಲ್ಲೇ ಹೋದರೂ ನಾಳೆ ಊರಿಗೆ ಬರಲೇಬೇಕು. ಬಂದ ನಂತರವೂ ಇವರು ಬಿಡುವ ಜನ ಅಲ್ಲ ಎಂದು ಧೈರ್ಯ ಮಾಡಿ ಪಂಚಾಯ್ತಿ ಮುಂದೆ ಹಾಜರಾದರು.

ಪಂಚಾಯ್ತಿ ಹಿರಿಯ ಕರಿಗೌಡ, ರಂಗಪ್ಪಣ್ಣ ಸೇರಿದಂತೆ ಎಲ್ಲರೂ ಜಮಾಯಿಸಿದ್ದರು. ಅಪರಾಧಿ ಸ್ಥಾನದಲ್ಲಿ ದಲಿತರು ಕೂಡ ಕೈಕಟ್ಟಿ ನಿಂತಿದ್ದರು. ಕರೀರ‌್ಲಾ ಆ ಗುಂಡನ್ನ ಎಂದು ಕರೀಗೌಡ ಆಜ್ಞೆ ಮಾಡಿದ. ಎಲ್ಲೋ ಮರೆಯಲ್ಲಿ ನಿಂತಿದ್ದ ಗುಂಡಯ್ಯ ನಿಂತಲ್ಲೇ ಗೌಡ್ರೇ ಇಲ್ಲೇ ಇದ್ದೀನಿ ಎಂದು ಮೆಲು ಧ್ವನಿಯಲ್ಲಿ ಹೇಳಿದ. ಅಲ್ಲೇನ್ಲಾ ಮಾಡ್ತಿದ್ದೀಯಾ ಸಂಪ್ಲಲ್ಲಿ, ಬಾರ‌್ಲಾ ಮುಂದ್ಕೆ ಎಂದು ಕರೀಗೌಡ ಗದರಿಸಿದ ಕೂಡಲೇ ಒಂದು ಹೆಜ್ಜೆ ಮುಂದೆ ಬಂದು ನಿಂತ ಗುಂಡಯ್ಯ, ಹೇಳಿ ಗೌಡ್ರೆ? ಎಂದು ಮತ್ತದೆ ಮೆಲುಧ್ವನಿಯಲ್ಲೇ ಕೇಳಿದ.

ಯಾಕ್ಲಾ ಉಸ್ರು ನಿಂತೋಯ್ತ? ನಮ್ ಹುಡುಗ್ರಗೆ ಊಟ ಇಕ್ಕಾಬೇಕಾದ್ರೆ ಬುದ್ದಿ ಸತ್ತೋಗಿತ್ತಾ?, ಎಂದು ಕೂತಲ್ಲೇ ಕೂಗಾಡಿದ. ಮುಂದೆ ಕುಳಿತಿದ್ದ ಕೆಲ ಮೇಲ್ಜಾತಿ ಯುವಕರು ಹಿಡಿದು ಕಂಬಕ್ಕೆ ಕಟ್ಟಿ ನಾಲ್ಕು ಕೊಟ್ರೆ ಸರಿ ಹೊಯ್ತರೆ, ಬಾಲ ಈಗ್ಲೇ ಕತ್ತರಿಸ್ಬೇಕು, ಇಲ್ದಿದ್ರೆ ಜಾತಿ ಕೆಡಿಸೊ ಕೆಲ್ಸ ಮಾಡ್ತಲೇ ಇರ‌್ತಾರೆ ಎಂದು ಸಲಹೆ ಕೊಟ್ಟರು.

ಮಾಡಬಾರದ ತಪ್ಪು ಮಾಡಿದವರ ರೀತಿಯಲ್ಲಿ ಕೈಕಟ್ಟಿ ತಲೆ ಬಗ್ಗಿಸಿ ನಿಂತಿದ್ದ ದಲಿತರು, ಇಂದು ವಾಪಸ್ ಮನೆಗೆ ಹೋಗುವುದು ಸಾಧ್ಯವಿಲ್ಲ ಎಂದು ಮನದಲ್ಲೇ ಅಂದುಕೊಂಡರು. ಮೇಲ್ಜಾತಿ ಹುಡುಗರನ್ನ ಹೊಲಗೇರಿಗೆ ಕರ‌್ಕೊಂಡ್ ಹೋಗಿದ್ಯಾರು?, ಊಟಕ್ಕೆ ಕರದಿದ್ಯಾರು?, ಎಲೆ ಕೊಟ್ಟಿದ್ಯಾರು? ಕೈನೀರು ಕೊಟ್ಟಿದ್ಯಾರು?, ಮುದ್ದೆ ಇಕ್ಕಿದ್ಯಾರು?, ಸಾರು ಬಿಟ್ಟಿದ್ಯಾರು?, ಎಲೆ ಎತ್ತಿದ್ಯಾರು? ಎಲ್ಲರು ಮುಂದೆ ಬಂದು ನಿಲ್ಲಬೇಕು ಎಂದು ಕರೀಗೌಡ ಆಜ್ಞೆ ಮಾಡಿದ. ಸಾಲಾಗಿ ಬಂದು ನಿಂತ ದಲಿತರು, ಎನ್ ಮಾಡ್ಬೇಕು ಎಂಬುದು ತಿಳಿಯದೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಮೇಲ್ಜಾತಿ ಹುಡುಗರ ಸ್ನೇಹ ಮಾಡಿದ್ದ ದೇವರಾಜನ ಮೇಲೆ ಎಲ್ಲರು ಕೆಂಗಣ್ಣು ಬೀರಿದರು.

ನೋಡು ಹೆಂಗ್ ನಿಂತವ್ರೆ, ನಮ್ ಹುಡುಗ್ರಿಗೆ ಉಣ್ಣಕ್ ಇಕ್ಕಿ, ಜಾತಿ ಕೆಡ್ಸಿ, ಈಗ ಏನು ಗೊತ್ತಿಲ್ಲದ ಮಳ್ ನನ್ ಮಕ್ಳು ತರ ನಿಂತವ್ರೆ ಎಂದ ಕರೀಗೌಡ, ಈ ಸಂದರ್ಭದಲ್ಲಿ ’ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎಂಬಂತೆ ಇದ್ದವರೆಲ್ಲಾ ಹೀನಾಮಾನವಾಗಿ ನಿಂದಿಸಿದರು.

ದಲಿತರ ಮನೆಯ ಮಹಿಳೆಯರು, ಮಕ್ಕಳು, ಮುದುಕರು-ಮೋಟರು ಎಲ್ಲರೂ ಗುಡಿಯ ಹಿಂಭಾಗದ ಮೂಲೆಯ ಮರೆಯಲ್ಲೇ ಅಸಹಾಯಕರಾಗಿ ನಿಂತಿದ್ದರು. ಮಹಿಳೆಯರು ಸೀರೆ ಸೆರಗು ಬಾಯಿಗೆ ಕೊಟ್ಟು ಗಳಗಳನೆ ಕಣ್ಣೀರು ಸುರಿಸುತ್ತಿದ್ದರು. ನಮ್ಮದು ತಪ್ಪಾಯ್ತು ಗೌಡ್ರೆ, ಇನ್ಮುಂದೆ ಜಲ್ಮ ಕೂಯ್ದ್ರು ಇಂತಾ ಕೆಲಸ ಮಾಡಕಿಲ್ಲ. ಮಾಡಿರೊ ತಪ್ಪಿಗೆ ನೀವ್ ಕೊಟ್ಟಿದ್ ಶಿಕ್ಷೆ ಅನುಭವಿಸ್ತೀವಿ, ಇದೊಂದ್ ಸರಿ ಕ್ಷಮಿಸಿಬಿಡಿ ಗೌಡ್ರೆ ಎಂದು ಗುಂಡಯ್ಯ ಬೇಡಿಕೊಂಡ.

ನಮ್ ಮನೆ ಹುಡುಗ್ರಗೆ ಊಟ ಇಕ್ಕಿ ಊರು-ಹೊಲಗೇರಿ ಒಂದ್ ಮಾಡೋಕ್ ಹೊಂಟವ್ರೆ, ಈ ನನ್ ಮಕ್ಳಾ ಹಿಂಗೆ ಬಿಟ್ರೆ ನಾಳೆ ನಮ್ ಮನೆ ಹೆಣ್ ಕೇಳ್ತರೆ. ದಂಡ ಹಾಕಿ ಊರಿಂದ ಹೊರಿಕಾಕ್ಬೇಕು ಎಂದು ಜನರ ನಡುವಿಂದ ಒಬ್ಬ ಸಲಹೆ ಕೊಟ್ಟ. ದಂಡ ಹಾಕ್ದೆ ಬಿಡಾಕ್ ಆಯ್ತದ್, ಎಂದು ಪಂಚಾಯ್ತಿದಾರರೇ ಗುಟ್ಟಾಗಿ ಮಾತನಾಡಿಕೊಂಡು ತೀರ್ಪು ಪ್ರಕಟಿಸಿದರು. ಜಾತಿ ಕೆಡಿಸುವ ಕೆಲಸ ಮಾಡಿರುವ ಪ್ರತಿಯೊಬ್ಬರೂ ತಲಾ 1000 ದಂಡ ಕಟ್ಟಬೇಕು. ಅದು ನಿಂತ ಸ್ಥಳದಲ್ಲೇ, ಎಂದು ಆದೇಶ ನೀಡಿದರು. ಅಲ್ಲದೇ ಊರಿನ ಯಾವುದೇ ಅಂಗಡಿಯಲ್ಲಿ ಬೀಡಿ-ಬೆಂಕಿಪಟ್ಟಣದ ಆದಿಯಾಗಿ ಏನನ್ನೂ ಕೊಡಬಾರದು ಎಂದು ಫಾರ್ಮಾನು ಹೊರಡಿಸಿದರು.

ದಲಿತರ ಎದೆ ದಸಕ್ ಎಂದಂತಾಯ್ತು. 1000 ರೂ. ದಂಡ ಕಟ್ಟಲು ಭೂಮಾಲೀಕನ ಮನೇಲಿ ಕನಿಷ್ಠ 2 ವರ್ಷ ಜೀತ ಮಾಡ್ಬೇಕು. ಹೊತ್ತಿನ ಊಟಕ್ಕೇ ಗತಿ ಇಲ್ಲದ ಸ್ಥಿತಿಯಲ್ಲಿ ನಿಂತ ಸ್ಥಳದಲ್ಲೆ 1000 ರೂ. ದಂಡ ಪಾವತಿಸುವುದು dalit_panther1ಅಸಾಧ್ಯದ ಮಾತು.

ಅದಗಲೇ ಜೀತಕ್ಕೆ ಸೇರಿಕೊಂಡಿದ್ದ ದಲಿತರ ಮಾಲೀಕರು ಕೂಡ ಅಲ್ಲೇ ಇದ್ದರು. ಅವರ ಕಾಲಿಗೆ ಬಿದ್ದು ನನ್ನನ್ನು ಕಾಪಾಡಿ ಎಂದು ಕೆಲವರು ಬೇಡಿಕೊಂಡರು. ಮತ್ತೆ ಕೆಲವರು ತಮ್ಮ ಮನೆಯ ದನಕರುಗಳನ್ನು ಹಿಡಿದು ತಂದು ಅಲ್ಲೇ ಮೇರ್ಲ್ವದವರಿಗೆ ಒಪ್ಪಿಸಿದರು. ದಲಿತ ಮಹಿಳೆಯರ ಕಿವಿ-ಮೂಗಿನಲ್ಲಿದ್ದ ಒಡವೆಗಳನ್ನು ಬಿಚ್ಚಿಕೊಟ್ಟರು. ಹೀಗೆ ಒಬ್ಬರು ಒಂದೊಂದು ರೀತಿಯಲ್ಲಿ ನಿಂತಲ್ಲೇ ದಂಡ ಕಟ್ಟಿದರು. ದನ-ಕರುಗಳು, ಒಡವೆ ಏನೇನು ಇಲ್ಲದ ಇನ್ನೂ ಕೆಲವರು ನಾನು ಮತ್ತು ನನ್ನ ಮಗ ಜೀತಕ್ಕೆ ಸೇರ‌್ತೀವಿ ಎಂದು ಕೆಲ ಭೂ ಮಾಲೀಕರ ಬಳಿ ಹಲುಬಿದರು. ಆದರೆ ಮೇಲ್ವರ್ಗದ ಯುವಕರಿಗೆ ಊಟ ಹಾಕಿದ ತಪ್ಪಿಗೆ ಊರಿನಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಕಾರಣಕ್ಕೆ ಜೀತಕ್ಕೆ ಸೇರಿಸಿಕೊಳ್ಳಲು ಸಹ ಒಪ್ಪಲಿಲ್ಲ. ಅಪರಾಧಿ ಸ್ಥಾನದಲ್ಲಿ ಇಲ್ಲದ ದಲಿತರು ಕೂಡ ದನಕರುಗಳನ್ನು ಮೇಲ್ವರ್ಗದವರಿಗೆ ಒಪ್ಪಿಸಿ ದಂಡದ ಹಣ ಪಾವತಿ ಮಾಡಿ ಸದ್ಯದ ಸೆರೆ ಬಿಡಿಸಿಕೊಂಡರು.

ದಂಡದ ಹಣದಲ್ಲೇ ದಲಿತ ಕೇರಿಯಲ್ಲಿ ಊಟ ಮಾಡಿ ಜಾತಿ ಕೆಡಿಸಿಕೊಂಡಿದ್ದ ಹುಡುಗರಿಗೆ ಹಣ ಕೊಡಲಾಯಿತು. ಧರ್ಮಸ್ಥಳಕ್ಕೆ ಹೋಗಿ ಹೊಳೇಲಿ ಸ್ನಾನ ಮಾಡಿ ಪೂಜೆ ಮಾಡಿಸಿ ಮೈಲಿಗೆ ತೊಳೆದುಕೊಂಡು ಬನ್ನಿ ಎಂದು ಪಂಚಾಯ್ತಿ ಪ್ರಮುಖರು ಆದೇಶ ನೀಡಿದರು.

ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ ಹೊಲೇರಿಗೆ ಬುದ್ದಿ ಕಲಿಸಿದ್ವಿ ಎಂದು ಮೇಲ್ವರ್ಗದವರು ಬೀಗಿಕೊಂಡು ಮನೆ ಸೇರಿಕೊಂಡರೆ, ಊಟ ಹಾಕಿದ ತಪ್ಪಿಗೆ ಶಿಕ್ಷೆ ಪಡೆದು ಕಣ್ಣಲ್ಲಿ ನೀರು, ಎದೆಯಲ್ಲಿ ದುಃಖ ತುಂಬಿಕೊಂಡ ದಲಿತರು ತಮ್ಮ ಕೇರಿಯತ್ತ ಹೆಜ್ಜೆ ಹಾಕಿದರು.

(ದಂಡ ಮತ್ತು ಬಹಿಷ್ಕಾರದ ನಂತರ ಏನಾಯಿತು? ಅಂದಿನ ಪ್ರಭಾವಿ ಸಚಿವರು ಮಾಡಿದ್ದೇನು? ಮುಂದಿನ ಭಾಗದಲ್ಲಿ.)

Leave a Reply

Your email address will not be published. Required fields are marked *