Daily Archives: July 10, 2015

ಒಕ್ಕಲು ಮಗ ಬಿಕ್ಕದಂತೆ ಕಾಯಬೇಕು


– ಡಾ.ಎಸ್.ಬಿ. ಜೋಗುರ


ಭಾರತದ ಕೃಷಿಯಲ್ಲಿ 1990 ರ ದಶಕದ ನಂತರ ಸಾಕಷ್ಟು ಸ್ಥಿತ್ಯಂತರಗಳು ಉಂಟಾದವು. ಮುಖ್ಯವಾಗಿ ಆರ್ಥಿಕ ಉದಾರೀಕರಣದ ಹಿನ್ನೆಲೆಯಲ್ಲಿ ಆರಂಭವಾದ ಬದಲಾವಣೆಗಳು ನಮ್ಮ ಕೃಷಿಯ ಮೇಲೂ ಪ್ರಭಾವ ಬೀರಿದವು. ತೊಡಗಿಸಿರುವ ಹಣಕ್ಕಿಂತಲೂ ಕಡಿಮೆ ಆದಾಯ, ಸಾಲ, ಒಕ್ಕಲುತನ ಮಾಡಲು ತಗಲುವ ಖರ್ಚು ವೆಚ್ಚ, ಕೃಷಿ ಸಾಲ ಸೌಲಭ್ಯಗಳ ಅಸಮರ್ಪಕ ವಿತರಣೆ, ಮಾರುಕಟ್ಟೆಯ ಅಹಿತಕರ ವಾತಾವರಣ, ದುರ್ಬರವಾದ ಖಾಸಗಿ ಬದುಕು ಮುಂತಾವುಗಳು ಸಂಯುಕ್ತವಾಗಿ ರೈತನ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಸೂಕ್ತ ಸಮಯಕ್ಕೆ ಸಿಗಬೇಕಾಗದ ನೆರವು ಕೂಡಾ ಆತನಿಗೆ ಒದಗದ ಕಾರಣ ಆತ್ಮಹತ್ಯೆಯಂಥಾ ತೀರ್ಮಾನವನ್ನು farmers-suicideಆತ ತೆಗೆದುಕೊಳ್ಳುತ್ತಿದ್ದಾನೆ. ಆತ್ಮಹತ್ಯೆ ಯಾವುದೇ ಸಮಸ್ಯೆಗಾಗಲೀ, ಯಾರಿಗೇ ಆಗಲೀ ಪರಿಹಾರವಂತೂ ಆಗುವದಿಲ್ಲ. ಕರ್ನಾಟಕದಲ್ಲಿ ಕಳೆದ ಕೆಲ ವರ್ಷಗಳಿಂದ ಈ ಕಬ್ಬು ಬೆಳೆದ ರೈತರ ಸ್ಥಿತಿ ಮಾತ್ರ ಮತ್ತೆ ಮತ್ತೆ ಅನೇಕ ಬಗೆಯ ಸಂದಿಗ್ಧಗಳನ್ನು ಸೃಷ್ಟಿ ಮಾಡುತ್ತಿದೆ. ಸರಕಾರ ಯಾವುದೇ ಇರಲಿ ರೈತರ ಸಮಸ್ಯೆಗಳು ಮಾತ್ರ ನಿರಂತರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವದಂತೂ ಹೌದು. ಒಕ್ಕಲುತನದಲ್ಲಿ ಯಾವ ಸುಖವೂ ಇಲ್ಲ ಎನ್ನುವ ಮತು ನಾನು ಹುಟ್ಟಿದಾಗಿನಿಂದಲೂ ಕೇಳುತ್ತಲೇ ಬೆಳೆದಿರುವೆ. ಬರುವ ಇಳುವರಿ ಬರೀ ಲಾಗೋಡಿಗೂ [ಕೃಷಿ ಖರ್ಚು ವೆಚ್ಚ] ಸಾಲುವದಿಲ್ಲ ಎನ್ನುವ ಮಾತು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆಲ್ಲರಿಗೂ ತಿಳಿದಿದೆ. ಒಂದು ಕ್ವಿಂಟಲ್ ಹತ್ತಿ ಬೆಳೆಯಲು ಒಬ್ಬ ರೈತ 6000 ರೂಪಾಯಿ ಖರ್ಚು ಮಾಡಿದರೆ, ಅವನಿಗೆ ಇಳುವರಿ ಬಂದ ಮೇಲೆ ಒಂದು ಕ್ವಿಂಟಲ್ ಗೆ 4000 ರೂಪಾಯಿ ದರ ನಿಗದಿ ಮಾಡಿದರೆ ಆತನ ಮನಸ್ಥಿತಿ ಏನಾಗಬೇಡ..? ಬೇರೆ ಬೇರೆ ಮೂಲಗಳಿಲ್ಲದೇ ಕೇವಲ ಕೃಷಿ ಇಳುವರಿಯನ್ನೇ ಅವಲಂಬಿಸಿರುವ ರೈತ ಸಹಜವಾಗಿ ತನ್ನ ಕುಟುಂಬದ ಇತರೆ ಖರ್ಚು ವೆಚ್ಚಗಳಿಗಾಗಿ ಸಾಲ ಮಾಡುವುದು ಸಾಮಾನ್ಯ ಸ್ಥಿತಿ. ಇದ್ದಕ್ಕಿದ್ದಂತೆ ಬಂದೆರಗುವ ಬರಗಾಲ, ಇಳುವರಿ ಬಂದಾಗ ಉಂಟಾಗುವ ಬೆಲೆ ಕುಸಿತ, ಅವೈಜ್ಞಾನಿಕವಾದ ಬೆಂಬಲ ಬೆಲೆ, ಸಾಲಗಾರರ ಕಿರಕಿರಿ ಈ ಮುಂತಾದ ಕಾರಣಗಳಿಂದಾಗಿ ರೈತ ಆತ್ಮಹತ್ಯೆಯಂಥಾ ತೀರ್ಮಾನ ತೆಗೆದುಕೊಳ್ಳುವದಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ಮಹಾರಾಷ್ಟ್ರದಲ್ಲಿ ಜರುಗುವದಿದೆ. ಅದಕ್ಕಿರುವ ಕಾರಣಗಳು ಮಾತ್ರ ಸಾರ್ವತ್ರಿಕ. 2014 ರಲ್ಲಿ ಜರುಗಿದ ಒಟ್ಟು 1109 ರೈತರ ಆತ್ಮಹತ್ಯೆಗಳಲ್ಲಿ ಸುಮಾರು 986 ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲಿಯೆ ಜರುಗಿರುವದಿತ್ತು. ಅದರ ನಂತರದ ಸ್ಥಾನವನ್ನು ಆಂಧ್ರಪ್ರದೇಶ ಮತ್ತು ಜಾರ್ಖಂಡ ರಾಜ್ಯಗಳು ಪ್ರತಿನಿಧಿಸುವದಿತ್ತು. ಈ ಬಗೆಯ ಸಂಗತಿಗಳ ಪಟ್ಟಿಯಲ್ಲಿ ರಾಜ್ಯವೊಂದರ ಹೆಸರು ಇಲ್ಲದಿರುವದೇ ಉಚಿತ. ಆದರೆ ಈಗೀಗ ಕರ್ನಾಟÀಕದಲ್ಲಿ ರೈತರ ಆತ್ಮಹತ್ಯೆಗಳು ಸುದ್ಧಿಯಾಗುತ್ತಿವೆ. farmer-land-acquisition-2ಈ ವರ್ಷದ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಅನೇಕ ರೈತರು ಸರಣಿ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದು ಹೀಗೇ ಮುಂದುವರೆದರೆ ಕರ್ನಾಟಕ ಮಹಾರಾಷ್ಟ್ರವನ್ನು ಈ ವಿಷಯವಾಗಿ ಹಿಂದಿಕ್ಕಬಹುದು. ರೈತರಲ್ಲಿ ಈ ಆತ್ಮಹತ್ಯೆ ಎನ್ನುವುದು ಸಮೂಹಸನ್ನಿಯಾಗಿ ಮಾರ್ಪಡುವಂತೆ ತೋರುತ್ತಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಕಾಲಿಕ ನೆರವಿನ ಅಗತ್ಯವಿದೆ. ನಮ್ಮ ದೇಶದಲ್ಲಿ 2012 ರಲ್ಲಿ ಒಟ್ಟು 1246 ರೈತರ ಆತ್ಮಹತ್ಯೆಯ ಪ್ರಕರಣಗಳು ವರದಿಯಾದರೆ, 2013 ರಲ್ಲಿ 879 ಆತ್ಮಹತ್ಯೆಗಳು ವರದಿಯಾಗಿದ್ದವು. ನೆರೆಯ ರಾಜ್ಯಗಳೊಂದಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ಹಿಂದೆಂದಿಗಿಂತಲೂ ಕಡಿಮೆಯೇ.. ಆದರೆ ಈಗಿನ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ರಾಜ್ಯ ಸರಕಾರ ಎಚ್ಚರ ವಹಿಸುವ ಅಗತ್ಯವಿದೆ.

1990 ರ ದಶಕದ ನಂತರ ಆರಂಭವಾದ ಆರ್ಥಿಕ ಸುಧಾರಣೆಯ ನೀತಿಗಳು ಮತ್ತು ಜಾಗತೀಕರಣದ ಹಾವಳಿಯೂ ತೀವ್ರವಾಗಿ ಕೃಷಿ ಮತ್ತು ಅದರ ಉತ್ಪಾದನೆಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದವು. ಮುಕ್ತ ಮಾರುಕಟ್ಟೆಯ ಹೆಸರಲ್ಲಿ ರೈತರ ಬೆಳೆಗೆ ಯೋಗ್ಯ ದರ ದೊರೆಯದ ಸ್ಥಿತಿ ನಿರ್ಮಾಣವಾಯಿತು. ಆಂಧ್ರಪ್ರದೇಶದಲ್ಲಂತೂ ಈ ಮಾತು ಬಹುತೇಕ ಸತ್ಯ. ಆಂದ್ರದ ನೆಲ್ಲೂರು ಭಾಗದಲ್ಲಿ ಬಹುತೇಕ ಕೃಷಿಕರು ವಾಣಿಜ್ಯ ಬೆಳೆಯನ್ನು ಬೆಳೆಯುವ ಭರಾಟೆಗೆ ಇಳಿದರು ಆ ಬೆಳೆಗೆ ಪೂರಕವಾಗಿ ನಿಲ್ಲಬಹುದಾದ ದುಬಾರಿ ಬೆಲೆಯ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಅವರ ನಿರೀಕ್ಷೆಗೆ ತಕ್ಕಂತೆ ಇಳುವರಿ ಬಂತಾದರೂ ಸೂಕ್ತವಾದ ಬೆಲೆ ಬಾರದ ಸ್ಥಿತಿ ನಿರ್ಮಾಣವಾಯಿತು. ಆರ್ಥಿಕ ಸುಧಾರೀಕರಣ ಎನ್ನುವುದು ರೈತರ ಪಾಲಿಗೆ ವರವಾಗದೇ ಶಾಪವಾಗಿ ಪರಿಣಮಿಸಿತು. ಪಂಜಾಬ, ಮಹಾರಾಷ್ಟ್ರ, ಆಂದ್ರಪ್ರದೇಶ,ಕರ್ನಾಟಕ ಮುಂತಾದ ಕಡೆಗಳಲ್ಲಿ ಕೇಳಿ ಬರುವ ರೈತರ ಆತ್ಮಹತ್ಯೆಯ ಹಿಂದಿನ ಕಾರಣ ಹೆಚ್ಚು ಖರ್ಚು, ಹೆಚ್ಚು ಇಳುವರಿ ಆದರೆ ಕಡಿಮೆ ಆದಾಯವೇ ಆಗಿದೆ. ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳ ಮಾಲಿಕರು ಬಾಕಿ ಹಣವನ್ನು ನೀಡದೇ ಸತಾಯಿಸುತ್ತಿರುವದು ರೈತರು ಅನುಭವಿಸುತ್ತಿರುವ ಇತರೆ ಸಮಸ್ಯೆಗಳ ಜೊತೆಯಲ್ಲಿ ಒಂದು ವಿಶಿಷ್ಟ ಸಮಸ್ಯೆ.ಉಳ್ಳವರ ಬಳಿ ಯಪ್ಪಾ farmersಯಣ್ಣಾ ಅಂದು ಸಾಲ ಪಡೆದು ಕಬ್ಬು ಬೆಳೆದು ಅದನ್ನು ಜ್ವಾಕಿ ಜತ್ತನ ಮಾಡಿ ಬೆಳೆದ ಇಳುವರಿಯನ್ನು ಸಕ್ಕರೆ ಕಾರ್ಖಾನೆಗಳಿಗೆ ಸುರುಹಿದರೆ ಹಣವೇ ಕೊಡದ ಸ್ಥಿತಿ ಇರುವಾಗ ಮಾಡಿದ ಖರ್ಚಿಗೆ ಎಲ್ಲಿಂದ ಸುರಿಯುವದು..? ಆ ರೈತನನ್ನು ಅವಲಂಬಿಸಿ ಒಂದು ಕುಟುಂಬವೇ ಇದೆ ಅವರ ಖರ್ಚು ವೆಚ್ಚಗಳಿಗೆ ಆತ ಮತ್ತೆ ಸಾಲ ಮಾಡಬೇಕು. ಒಟ್ಟಿನಲ್ಲಿ ಸಾಲದ ಸಹವಾಸದಲ್ಲಿ ಅವನನ್ನು ಇಟ್ಟು ವೇದಿಕೆಗಳಲ್ಲಿ ‘ಉಳುವಾ ಯೋಗಿಯ ನೋಡಲ್ಲಿ’ ಎಂದು ಹಾಡುವುದೇ ದೊಡ್ಡ ಮುಜುಗರ ಎನಿಸುವದಿಲ್ಲವೆ..? ಒಬ್ಬ ರೈತ ತಾನೇ ಕಷ್ಟ ಪಟ್ಟು ಬೆಳೆದ ಕಬ್ಬಿನ ಪಡಕ್ಕೆ ಬೆಂಕಿ ಇಡುವ ಮಟ್ಟದ ಕಠೋರ ಮನ:ಸ್ಥಿತಿಯನ್ನು ತಲುಪುತ್ತಾನೆ ಎಂದರೆ ಅವನ ಪಡಪಾಟಲು ಹೇಗಿರಬಹುದು..? ರೈತರಿಗೆ ಕೃಷಿ ಸಾಂಸ್ಥಿಕ ಮೂಲಗಳಿಂದ ಹಣÀಕಾಸಿನ ನೆರವನ್ನು ಸಕಾಲದಲ್ಲಿ ಒದಗಿಸುವದು ಮಾತ್ರ ಸಾಲದು ಅದರ ಜೊತೆಯಲ್ಲಿಯೇ ಕೃಷಿ ಎನ್ನುವುದು ಒಂದು ಲಾಭದಾಯಕ ಉದ್ಯೋಗ ಎನ್ನುವ ಖಾತ್ರಿ ಮನ:ಸ್ಥಿತಿಯನ್ನು ರೂಪಿಸುವಂತಾಗಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಯುವದಿದೆ ಎನ್ನುವದನ್ನು ಗಮನದಲ್ಲಿರಿಸಿಕೊಂಡು ಆಳುವ ಪಕ್ಷಗಳು ಮತ್ತು ವಿರೋಧಿ ಪಕ್ಷಗಳು ಒಂದು ತಾತ್ಕಾಲಿಕ ತಾಲೀಮು ಮಾಡಿಕೊಂಡು ರೈತರ ಸಂಕಷ್ಟಗಳ ಬಗ್ಗೆ ಯೋಚಿಸದೇ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಶಾಶ್ವತವಾದ ಯೋಜನೆಯನ್ನು ರೂಪಿಸಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ರೈತನನ್ನು, rural-karnataka-2ಅವನ ಬದುಕು ಮತ್ತು ವೃತ್ತಿಯನ್ನು ರಾಜಕೀಯ ಸಂಗತಿಗಳಿಗೆ ಸಿಲುಕಿಸಿದೇ ಒಂದು ಪ್ರಾಮಾಣಿಕವಾದ ಕಳಕಳಿಯಿಂದ ರೈತನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಒಂದು ನೈತಿಕ ಇಚ್ಛಾ ಶಕ್ತಿಯನ್ನು ಮೆರೆಯುವ ಅವಶ್ಯಕತೆಯಿದೆ.

ಕೃಷಿಯನ್ನು ಸಾಧ್ಯವಾದಷ್ಟು ನೈಸರ್ಗಿಕ ಅವಲಂಬನೆಯಿಂದ ವಿಚಲಿತಗೊಳಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯಗಳು ತಮ್ಮಲ್ಲಿಯ ನೀರನ್ನು ಅತ್ಯಂತ ವೈಜ್ಞಾನಿಕವಾಗಿ ಬಳಸಿಕೊಳ್ಳುವ, ಕೃಷಿಗೆ ಪೂರಕವಾಗಿ ವಿನಿಯೋಗವಾಗುವ ಹಾಗೆ ಕ್ರಮ ಕೈಗೊಳ್ಳಬೇಕು. ಇನ್ನು ಕೃಷಿಗೆ ಕೆಲ ಸಾಂಸ್ಥಿಕ ಮೂಲಗಳಿಂದ ಸಾಲವನ್ನು ಒದಗಿಸುವಾಗ ದೊಡ್ಡ ರೈತರು ಮತ್ತು ಸಣ್ಣ ರೈತರ ನಡುವೆ ತಾರತಮ್ಯ ಎಸಗದೇ ಎಲ್ಲ ಬಡ ರೈತರಿಗೂ ಸಾಂಸ್ಥಿಕ ಮೂಲಗಳ ಸಾಲವನ್ನು ಸಮನಾಗಿ ಒದಗಿಸುವಲ್ಲಿ ನೆರವಾಗÀಬೇಕು. ಜೊತೆಗೆ ಸಾಲ ನೀಡಿದ ಕಾರಣಕ್ಕೆ ಸರಿಯಗಿ ಬಳಕೆ ಯಾಗುವಂತೆ ನಿಗಾ ವಹಿಸಬೇಕು. ಬೆಳೆ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಕೃಷಿ ಇಲಾಖೆಯ ಮೂಲಕ ಇಲ್ಲವೇ ಸಂಬಂಧಿಸಿದ ಇಲಾಖೆಯ ಮೂಲಕ ತಿಳುವಳಿಕೆಯನ್ನು ನೀಡಬೇಕು. rural-indiaಸಣ್ಣ ಹಿಡುವಳಿದಾರರು ಕೂಡಾ ಲಾಭದಾಯಕ ಕೃಷಿಯಲ್ಲಿ ತೊಡಗಲು ಅನುಕೂಲವಾಗುವ ಹಾಗೆ ನೆರವು ನೀಡಬೇಕು. ರೈತರಿಗೆ ಕೃಷಿಗೆ ಪೂರಕವಾಗಿರುವ ಇತರೆ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಕೌಶಲ್ಯಗಳನ್ನು ಕಲಿಸಬೇಕು. ಬರಗಾಲದ ಸಂದರ್ಭದಲ್ಲಿ ಆ ಬಗೆಯ ವಿದ್ಯೆ ಅವರ ಕುಟುಂಬವನ್ನು ಸಲಹುವಂತಾಗಬೇಕು. ತೊಂದರೆಗೆ ಸಿಲುಕಿದ ರೈತರನ್ನು ಗುರುತಿಸಿ ಅವರು ಆತ್ಮ ಹತ್ಯೆ ಮಾಡಿಕೊಂಡ ನಂತರ ಪರಿಹಾರ ಕೊಡುವ ಬದಲಾಗಿ ಆತ ಇನ್ನೂ ಬದುಕಿರುವಾಗಲೇ ಆತ ಸಮಸ್ಯೆಯ ಸುಳಿಯಿಂದ ಹೊರಬರುವಲ್ಲಿ ನೆರವಾಗಬೇಕು. ಈ ಸಂಗತಿಗಳ ಜೊತೆಯಲ್ಲಿ ಕೆಲವು ಸಂಘ-ಸಂಸ್ಥೆಗಳು ಬರಗಾಲದ ಸಂದರ್ಭದಲ್ಲಿ ಆ ಭಾಗದ ರೈತರ ಕುಟುಂಬಗಳಿಗೆ ನೆರವಾಗುವ ಮೂಲಕ ಅವರ ಮನೋಸ್ಥೈರ್ಯವನ್ನು ವೃದ್ಧಿಸಬೇಕು. ಹೀಗೆ ರೈತರ ಬಗೆಗಿನ ಒಂದಷ್ಟು ಪ್ರಾಮಾಣಿಕ ಕಳಕಳಿಯಿಂದ ಈ ಬಗೆಯ ಆತ್ಮಹತ್ಯೆಗಳನ್ನು ನಾವು ತಡೆಯಬಹುದಾಗಿದೆ. ಒಕ್ಕಲು ಮಗ ಬಿಕ್ಕದಂತೆ ಕಾಯುವ ಹೊಣೆಗಾರಿಕೆ ಸರಕಾರದ ಮೇಲಿರುವಂತೆ ಸಮಾಜದ ಪ್ರತಿಯೊಂದು ಸಂಘ-ಸಂಸ್ಥೆಯ ಮೇಲೂ ಇದೆ.